Tag: Labor

  • ಮೆಣಸು ಕೊಯ್ಯುವಾಗ ವಿದ್ಯುತ್ ಶಾಕ್- ಯುವಕ ಸಾವು

    ಮೆಣಸು ಕೊಯ್ಯುವಾಗ ವಿದ್ಯುತ್ ಶಾಕ್- ಯುವಕ ಸಾವು

    ಚಿಕ್ಕಮಗಳೂರು: ಕಾಫಿತೋಟದಲ್ಲಿ ಮೆಣಸು ಕೊಯ್ಯುವಾಗ ವಿದ್ಯುತ್ ಶಾಕ್‍ನಿಂದ ಯುವಕ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ನಿಡುವಾಳೆ ಗ್ರಾಮದ ಸಮೀಪ ಉರ್ವಿನ್ ಖಾನ್ ಎಸ್ಟೇಟ್‍ನಲ್ಲಿ ನಡೆದಿದೆ.

    ಮೃತನನ್ನು ಮಧ್ಯ ಪ್ರದೇಶ ಮೂಲದ 21 ವರ್ಷದ ವಿನೋದ್ ಎಂದು ಗುರುತಿಸಲಾಗಿದೆ. ಒಂದು ಬಳ್ಳಿಯಿಂದ ಮೆಣಸು ಕೊಯ್ದು ಮತ್ತೊಂದು ಮರದ ಬಳಿ ಅಲ್ಯೂಮಿನಿಯಂ ಏಣಿ ಕೊಂಡೊಯ್ಯುವಾಗ ತೋಟದೊಳಗೆ ಹೋಗಿರುವ ವಿದ್ಯುತ್ ತಂತಿಗೆ ಏಣಿ ತಾಗಿ ವಿನೋದ್ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿದೆ.

    ವಿದ್ಯುತ್ ಶಾಕ್‍ಗೆ ಒಳಗಾದ ಯುವಕನನ್ನು ಕೂಡಲೇ ಮೂಡಿಗೆರೆ ತಾಲೂಕು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಿದರೂ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ. ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಜಿಲ್ಲೆಯಲ್ಲಿ ಒಂದೇ ವಾರದಲ್ಲಿ ಈ ರೀತಿ ಮೆಣಸನ್ನ ಕೊಯ್ಯುವಾಗ ವಿದ್ಯುತ್ ಶಾಕ್‍ನಿಂದ ಸಾವನ್ನಪ್ಪಿರುವುದು ಎರಡನೇ ಪ್ರಕರಣವಾಗಿದೆ. ಕಳೆದ ವಾರವಷ್ಟೇ ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಸಮೀಪದ ಕಾಫಿ ತೋಟದಲ್ಲಿ ಸಹ ಮೆಣಸು ಕೊಯ್ಯುವಾಗ ಹೊರರಾಜ್ಯದ ಕಾರ್ಮಿಕನೋರ್ವ ಸಾವನ್ನಪ್ಪಿದ್ದ. ಆತ ಸಹ ಮೆಣಸು ಕೊಯ್ಯಲು ಒಂದು ಮರದಿಂದ ಮತ್ತೊಂದು ಮರಕ್ಕೆ ಅಲ್ಯೂಮಿಲಿಯಂ ಏಣಿಯನ್ನ ಕೊಂಡೊಯ್ಯುವಾಗ ವಿದ್ಯುತ್ ಶಾಕ್‍ನಿಂದ ಸಾವನ್ನಪ್ಪಿದ್ದ.

  • ತಲೆ ಮೇಲೆ ಕಾಲಿಟ್ಟಿತು ಕಾಡಾನೆ- ಕಾರ್ಮಿಕನ ತಲೆ ಛಿದ್ರ

    ತಲೆ ಮೇಲೆ ಕಾಲಿಟ್ಟಿತು ಕಾಡಾನೆ- ಕಾರ್ಮಿಕನ ತಲೆ ಛಿದ್ರ

    ಮಡಿಕೇರಿ: ಕೊಯ್ಲು ಮಾಡಿ ಕಣದಲ್ಲಿ ಒಣಹಾಕಿದ್ದ ಕಾಫಿಯ ರಾತ್ರಿ ಕಾವಲು ಕಾಯುತ್ತಿದ್ದ ಕಾರ್ಮಿಕನ ಮೇಲೆ ಕಾಡಾನೆ ದಾಳಿ ಮಾಡಿದ್ದು, ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

    ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪದ ಬಿಬಿಟಿಸಿ ಎಸ್ಟೇಟ್ ನಲ್ಲಿ ದುರ್ಘಟನೆ ನಡೆದಿದೆ. ಆನಂದಪುರದ ನಿವಾಸಿ ಸಂದೀಪ್ (22) ಮೃತಪಟ್ಟ ಯುವಕ. ಎಂದಿನಂತೆ ರಾತ್ರಿಯೂ ಕಾಫಿ ಕಣದಲ್ಲಿ ಕಾವಲು ಕಾಯುತ್ತಿದ್ದ ಸಂದೀಪನ ಮೇಲೆ ತಡರಾತ್ರಿ ಕಾಡಾನೆ ದಾಳಿ ಮಾಡಿ ತಲೆ ಮೇಲೆ ಕಾಲಿಟ್ಟಿದೆ. ಸಂದೀಪನ ತಲೆ ಛಿದ್ರವಾಗಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

    ಜೊತೆಯಲ್ಲಿದ್ದ ರಾಜು ಎಂಬ ಮತ್ತೊಬ್ಬ ಕಾರ್ಮಿಕ ಅದೃಷ್ಟವಷಾತ್ ಸ್ವಲ್ಪದರಲ್ಲಿಯೇ ಕಾಡಾನೆ ದಾಳಿಯಿಂದ ಬಚಾವ್ ಆಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಘಟನೆ ತಿಳಿಯುತ್ತಿದ್ದಂತೆ ಕಾರ್ಮಿಕ ಮುಖಂಡರು, ತೋಟದ ನೂರಾರು ಕಾರ್ಮಿಕರು ಸ್ಥಳದಲ್ಲಿ ಜಮಾಯಿಸಿದ್ದಾರೆ. ಅಲ್ಲದೆ ಮೃತ ಸಂದೀಪನ ಕುಟುಂಬಕ್ಕೆ ಸೂಕ್ತ ಪರಿಹಾರ ಸಿಗುವವರೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ತೆಗೆಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದರು.

    ವಿಷಯ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳನ್ನು ಸಿಐಟಿಯು ಕಾರ್ಮಿಕ ಸಂಘಟನೆ ಮುಖಂಡ ಮಹದೇವ ಸೇರಿದಂತೆ ಹಲವು ಕಾರ್ಮಿಕರು ತರಾಟೆಗೆ ತೆಗೆದುಕೊಂಡಿದ್ದರು. ಎರಡು ಲಕ್ಷ ರೂ. ಪರಿಹಾರ ಕೊಡುವುದಾಗಿ ತೋಟದ ಸಂಸ್ಥೆಯ ಅಧಿಕಾರಿಗಳು ಒಪ್ಪಿದ್ದಾರೆ. ಆದರೆ ಕನಿಷ್ಠ ಹತ್ತು ಲಕ್ಷ ಪರಿಹಾರ ಸಿಗುವವರೆಗೆ ಮೃತದೇಹವನ್ನು ತೆಗೆಯಲು ಬಿಡುವುದಿಲ್ಲ. ಅರಣ್ಯ ಇಲಾಖೆ ಮತ್ತು ಬಿಬಿಟಿಸಿ ಸಂಸ್ಥೆ ಕಚೇರಿ ಎದುರು ಪ್ರತಿಭಟನೆ ಮಾಡುವುದಾಗಿ ಸಿಐಟಿಯು ಮುಖಂಡರು ನಿರ್ಧರಿಸಿದ್ದಾರೆ. ಬಳಿಕ ಕಾಫಿ ತೋಟದ ಸಂಸ್ಥೆಯಿಂದ 3 ಲಕ್ಷ ಪರಿಹಾರ ಹಾಗೂ ಅರಣ್ಯ ಇಲಾಖೆಯಿಂದ 7.50 ಲಕ್ಷ ಪರಿಹಾರವನ್ನು ಮೃತನ ಕುಟುಂಬಕ್ಕೆ ನೀಡಲಾಯಿತು. ಮಗನ ಸಾವಿನ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸಂದೀಪ್ ಕುಟುಂಬದ ರೋಧನ ಮುಗಿಲು ಮುಟ್ಟಿತ್ತು.

  • ಡ್ಯೂಟಿಗೆ ತೆರಳುವ ಮುನ್ನ ಕಾರ್ಮಿಕರ ಮಕ್ಕಳಿಗೆ ಪಾಠ ಮಾಡ್ತಿರೋ ಪೊಲೀಸ್

    ಡ್ಯೂಟಿಗೆ ತೆರಳುವ ಮುನ್ನ ಕಾರ್ಮಿಕರ ಮಕ್ಕಳಿಗೆ ಪಾಠ ಮಾಡ್ತಿರೋ ಪೊಲೀಸ್

    – ಸಬ್ ಇನ್ಸ್‌ಪೆಕ್ಟರ್ ಕಾರ್ಯಕ್ಕೆ ನೆಟ್ಟಗರು ಪಿಧಾ

    ಬೆಂಗಳೂರು: ಡ್ಯೂಟಿಗೆ ಹೋಗುವ ಮುನ್ನ ಕಾರ್ಮಿಕರ ಮಕ್ಕಳಿಗೆ ಪಾಠ ಹೇಳಿಕೊಡುತ್ತಿರುವ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಕಾರ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

    ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಶಾಂತಪ್ಪ ಜಡೆಮ್ಮನವರ್, ಆನ್‍ಲೈನ್ ತರಗತಿಗಳಿಗೆ ಹಾಜರಾಗಲು ಸ್ಮಾರ್ಟ್‍ಫೋನ್ ಮತ್ತು ಲ್ಯಾಪ್‍ಟಾಪ್‍ಗಳು ಇಲ್ಲದ ಕಾರ್ಮಿಕರ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಇವರ ಈ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ. ಇದನ್ನು ಓದಿ: 3 ಕಿ.ಮೀ ಕಾಲುವೆಯನ್ನು 30 ವರ್ಷ ಅಗೆದು ಗ್ರಾಮಕ್ಕೆ ನೀರು ಹರಿಸಿದ ರೈತ

    ಪ್ರತಿದಿನ ಶಾಂತಪ್ಪ ಅವರು ಬೆಳಗ್ಗೆ 7 ಗಂಟೆಗೆ ಕರ್ತವ್ಯಕ್ಕೆ ತೆರಳುತ್ತಾರೆ. ಆದರೆ ಇದಕ್ಕೂ ಮುಂಚೆ ಅವರು, ಪಶ್ಚಿಮ ಬೆಂಗಳೂರಿನ ನಾಗರಬಾವಿಯಲ್ಲಿ ವಾಸವಿರುವ ಕಾರ್ಮಿಕರ ಮಕ್ಕಳಿಗೆ ಪಾಠ ಮಾಡುತ್ತಾರೆ. ಸುಮಾರು 30 ಮಕ್ಕಳಿಗೆ ಒಂದು ಗಂಟೆ ಪಾಠ ಮಾಡಿ ಕೆಲಸಕ್ಕೆ ಹೋಗುತ್ತಾರೆ. ಶಾಲೆಯ ಪಠ್ಯಕ್ಕೆ ಅನುಗುಣವಾಗಿ ಪಾಠ ಮಾಡಲು ಸಾಧ್ಯವಾಗದೇ ಇರುವ ಕಾರಣ, ಸಾಮಾನ್ಯ ಜ್ಞಾನ ಮತ್ತು ಸಾಮಾನ್ಯ ಗಣಿತದ ಬಗ್ಗೆ ಪಾಠವನ್ನು ಮಾಡುತ್ತಿದ್ದಾರೆ.

    ಈ ವಿಚಾರವಾಗಿ ಮಾತನಾಡಿರುವ ಶಾಂತಪ್ಪ, ನಾನು 20 ದಿನಗಳಿಂದ ಈ ಕೆಲಸವನ್ನು ಮಾಡುತ್ತಿದ್ದೇನೆ. ಇಲ್ಲಿರುವ ಕಾರ್ಮಿಕರ ಮಕ್ಕಳಿಗೆ ಆನ್‍ಲೈನ್ ಶಿಕ್ಷಣ ಪಡೆದುಕೊಳ್ಳುವ ಸೌಲಭ್ಯವಿಲ್ಲ. ಈ ಕಾರಣದಿಂದ ನಾನು ಡ್ಯೂಟಿಗೆ ಹೋಗುವ ಒಂದು ಗಂಟೆ ಮುಂಚಿತವಾಗಿ ಇಲ್ಲಿಗೆ ಬಂದು ಮಕ್ಕಳಿಗೆ ಪಾಠ ಹೇಳಿಕೊಡುತ್ತೇನೆ ಎಂದಿದ್ದಾರೆ. ಶಾಂತಪ್ಪ ಪಾಠ ಮಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದೆ.

    ಬೆಂಗಳೂರಿಗೆ ಹೆಚ್ಚು ಕಾರ್ಮಿಕರು ಬರುವುದು ಉತ್ತರ ಕರ್ನಾಟಕ ಬಳ್ಳಾರಿ, ಗದಗ, ಕೊಪ್ಪಳ ಮತ್ತು ರಾಯಚೂರು ಭಾಗಗಳಿಂದ. ನಾನು ಅದೇ ಭಾಗದವನಾದ ಕಾರಣ ಅಲ್ಲಿನ ಕಾರ್ಮಿಕರ ಮಕ್ಕಳ ಕಷ್ಟಗಳೇನು ಎಂಬುದು ನನಗೆ ಚೆನ್ನಾಗಿ ಗೊತ್ತು. ಈ ಕಾರಣಕ್ಕೆ ನಾನು ಈ ಮಕ್ಕಳಿಗೆ ಪಾಠ ಮಾಡಲೂ ನಿರ್ಧಾರ ಮಾಡಿದ್ದೇನೆ ಎಂದು ಶಾಂತಪ್ಪ ತಿಳಿಸಿದ್ದಾರೆ. ಇವರ ಕಾರ್ಯಕ್ಕೆ ಮೆಚ್ಚಿ ರಾಜ್ಯ ಶಿಕ್ಷಣ ಸಚಿವ ಸುರೇಶ್ ಕುಮಾರ್ ಕೂಡ ಇವರನ್ನು ಭೇಟಿ ಮಾಡಿದ್ದಾರೆ.

  • ಗಣಿ ಕಾರ್ಮಿಕನಿಗೆ ಸಿಕ್ತು 35 ಲಕ್ಷ ಮೌಲ್ಯದ ವಜ್ರ

    ಗಣಿ ಕಾರ್ಮಿಕನಿಗೆ ಸಿಕ್ತು 35 ಲಕ್ಷ ಮೌಲ್ಯದ ವಜ್ರ

    ಭೋಪಾಲ್: ಕಾರ್ಮಿಕರೊಬ್ಬನಿಗೆ 35 ಲಕ್ಷ ಮೌಲ್ಯದ ವಜ್ರಗಳು ಸಿಕ್ಕಿರುವ ಘಟನೆ ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ವಜ್ರ ಗಣಿಯೊಂದರಲ್ಲಿ ನಡೆದಿದೆ.

    ಪನ್ನಾ ವಜ್ರ ಗಣಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಸುಬಲ್ ಎಂಬವರಿಗೆ ಅಂದಾಜು 30 ಲಕ್ಷದಿಂದ 35 ಲಕ್ಷ ಮೌಲ್ಯದ ಮೂರು ವಜ್ರಗಳನ್ನು ಸಿಕ್ಕಿವೆ. 7.5 ಕ್ಯಾರೆಟ್ ನಿವ್ವಳ ತೂಕದ ಮೂರು ವಜ್ರಗಳನ್ನು ಗಣಿಯಲ್ಲಿ ಸಿಕ್ಕಿವೆ ಎಂದು ಪನ್ನಾ ಜಿಲ್ಲೆಯ ವಜ್ರಾಧಿಕಾರಿ ಆರ್.ಕೆ.ಪಾಂಡೆ ತಿಳಿಸಿದ್ದಾರೆ.

    ಈ ವಜ್ರಗಳನ್ನು ಕಾರ್ಮಿಕರ ಸುಬಲ್ ಜಿಲ್ಲಾ ವಜ್ರದ ಕಚೇರಿಗೆ ನೀಡಿದ್ದಾನೆ. ಅವುಗಳನ್ನು ಸರ್ಕಾರದ ನಿಯಮಗಳ ಪ್ರಕಾರ ಹರಾಜು ಮಾಡಲಾಗುತ್ತದೆ ಎಂದು ಶ್ರೀ ಪಾಂಡೆ ಹೇಳಿದ್ದಾರೆ. ಜೊತೆಗೆ ಇದರ ಮಾರಾಟದಿಂದ ಬಂದ ಹಣದಲ್ಲಿ ಶೇಕಡಾ 12 ರಷ್ಟು ತೆರಿಗೆಯನ್ನು ಕಡಿತಗೊಳಿಸಿದ ನಂತರ, ಉಳಿದ 88 ಶೇಕಡಾ ಮಾರಾಟದ ಆದಾಯವನ್ನು ಸುಬಲ್ ಅವರಿಗೆ ನೀಡುತ್ತೇವೆ ಎಂದು ಅಧಿಕಾರಿ ತಿಳಿಸಿದ್ದಾರೆ. ಇತ್ತೀಚೆಗೆ ಮಧ್ಯಪ್ರದೇಶದ ಬುಂದೇಲ್‍ಖಂಡ್ ಪ್ರದೇಶದ ಪನ್ನಾದ ಗಣಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನಿಗೆ 10.69 ಕ್ಯಾರೆಟ್ ವಜ್ರ ಸಿಕ್ಕಿತ್ತು.

  • ಮಲಗಿದ್ದಾಗ ಪ್ಯಾಂಟ್ ಒಳಗೆ ಹೋದ ಹಾವು – 7 ಗಂಟೆ ಕಂಬ ಹಿಡಿದು ನಿಂತ ಯುವಕ

    ಮಲಗಿದ್ದಾಗ ಪ್ಯಾಂಟ್ ಒಳಗೆ ಹೋದ ಹಾವು – 7 ಗಂಟೆ ಕಂಬ ಹಿಡಿದು ನಿಂತ ಯುವಕ

    ಲಕ್ನೋ: ಮಲಗಿದ್ದ ಕಾರ್ಮಿಕನ ಪ್ಯಾಂಟ್ ಒಳಗೆ ನಾಗರಹಾವೊಂದು ಹೋಗಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ನಡೆದಿದೆ.

    ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಇರುವ ಸಿಕಂದರ್ ಪುರ ಎಂಬ ಗ್ರಾಮದಲ್ಲಿ ವಿದ್ಯುತ್ ಇಲಾಖೆಯ ಕಡೆಯಿಂದ ಕಂಬ ಹಾಕಿಸುವ ಕೆಲಸ ನಡೆಯುತಿತ್ತು. ಈ ಕೆಲಸಕ್ಕೆ ಖಾಸಗಿ ಕಾರ್ಮಿಕರನ್ನು ಕರೆದುಕೊಂಡು ಬರಲಾಗಿತ್ತು. ಈ ಕಾರ್ಮಿರಲ್ಲಿ ಒಬ್ಬನಾದ ಲವಕೇಶ್ ಕುಮಾರ್ ಮಲಗಿದ್ದಾಗ ನಾಗರಹಾವೊಂದು ಪ್ಯಾಂಟ್ ಒಳಗೆ ಹೋಗಿ ಸೇರಿಕೊಂಡಿದೆ.

    ಎಂದಿನಂತೆ ಕೆಲಸ ಮುಗಿಸಿದ ಲವಕೇಶ್ ಕುಮಾರ್ ಕಾರ್ಮಿಕರಿಗೆ ಮಲಗಲು ನೀಡಿದ್ದ ಸಿಕಂದರ್ ಪುರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಹೋಗಿ ಮಲಗಿದ್ದಾನೆ. ಈ ವೇಳೆ ಆತನಿಗೆ ತಿಳಿಯದೆ ಹಾವೊಂದು ಆತನ ಪ್ಯಾಂಟ್ ಒಳಗೆ ಬಂದು ಮಲಗಿದೆ. ಮಧ್ಯರಾತ್ರಿ ಪ್ಯಾಂಟ್ ಒಳಗೆ ಏನೋ ಉಸಿರು ಬಿಟ್ಟಂತೆ ಆತನಿಗೆ ಭಾಸವಾಗಿದೆ. ಆಗ ಆತ ಎದ್ದು ನೋಡಿದಾಗ ಪ್ಯಾಂಟ್ ಒಳಗೆ ಹಾವು ಇರುವುದು ಗೊತ್ತಾಗಿದೆ. ನಂತರ ಆತ ಅಲ್ಲಡದೇ ನಿಂತ ಜಾಗದಲ್ಲೇ ಕಂಬ ಹಿಡಿದು 7 ಗಂಟೆ ನಿಂತಿದ್ದಾನೆ.

    ಈ ಸಮಯದಲ್ಲಿ ಆತನ ಜೊತೆಗಿದ್ದ ಕಾರ್ಮಿಕರು ಹಾವು ಹಿಡಿಯುವರನ್ನು ಹುಡುಕಿ ಕರೆದುಕೊಂಡು ಬಂದಿದ್ದಾರೆ. ಆತ ಬಂದು ಹಾವನ್ನು ಪ್ಯಾಂಟ್‍ನಿಂದ ಹೊರತೆಗೆಯುವ ತನಕ ಲವಕೇಶ್ ಅಲ್ಲಡದೇ ಹಾವಿಗೆ ತೊಂದರೆಯಾಗದಂತೆ ನೋಡಿಕೊಂಡಿದ್ದಾನೆ. ನಂತರ ಸ್ಥಳಕ್ಕೆ ಬಂದ ಉರಗ ತಜ್ಞ ಪ್ಯಾಂಟ್ ಅನ್ನು ಹರಿದು ನಿಧಾನವಾಗಿ ಹಾವನ್ನು ಹೊರ ತೆಗೆದಿದ್ದಾರೆ.

    ಈ ಬಗ್ಗೆ ಮಾತನಾಡಿರುವ ಉರಗ ತಜ್ಞ, ಆತನ ಅದೃಷ್ಟ ಚೆನ್ನಾಗಿದೆ. ಏಳು ಗಂಟೆಗಳ ಕಾಲ ಆತನ ಪ್ಯಾಂಟ್‍ನಲ್ಲೇ ಮಲಗಿರುವ ಹಾವು ಆತನಿಗೆ ಕಚ್ಚಿಲ್ಲ. ಆತ ಪಿಲ್ಲರ್ ಹಿಡಿದು ಅಲ್ಲಡದೇ ನಿಂತ ಕಾರಣ ಹಾವಿಗೆ ನಾನು ಮಾನವನ ಪ್ಯಾಂಟ್‍ನಲ್ಲಿದ್ದೇನೆ ಎನ್ನುವುದು ಗೊತ್ತಾಗಿಲ್ಲ ಎಂದು ಹೇಳಿದ್ದಾರೆ. ಕಂಬ ಹಿಡಿದು ನಿಂತಿರುವ ಯುವಕನ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

  • ಔಷಧಿ ಸಿಂಪಡಿಸಲು ತೆರಳುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ ಕಾರ್ಮಿಕ ಸಾವು

    ಔಷಧಿ ಸಿಂಪಡಿಸಲು ತೆರಳುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ ಕಾರ್ಮಿಕ ಸಾವು

    -ಕಾರ್ಮಿಕನಿಗೆ ಇನ್ಶೂರೆನ್ಸ್ ಮಾಡಿಸಿದ್ದ ಮಾಲೀಕ

    ಚಿಕ್ಕಮಗಳೂರು: ಅಡಕೆ ತೋಟಕ್ಕೆ ಔಷಧಿ ಸಿಂಪಡಿಸಲು ಕಬ್ಬಿಣದ ಏಣಿಯನ್ನು ತೋಟದಲ್ಲಿ ಹೊತ್ತುಯ್ಯುವಾಗ ತೋಟದಲ್ಲಿ ಹೋಗಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಕಾರ್ಮಿಕ ಸಾವನಪ್ಪಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಸಮೀಪದ ದುಗ್ಗಲಮಕ್ಕಿ ಗ್ರಾಮದಲ್ಲಿ ನಡೆದಿದೆ.

    ಮೃತ ಕಾರ್ಮಿಕನನ್ನ 28 ವರ್ಷದ ರಮೇಶ್ ಎಂದು ಗುರುತಿಸಲಾಗಿದೆ. ದಶಕಗಳ ಹಿಂದೆ ಕಾಫಿ-ಅಡಕೆ ತೋಟಗಳಲ್ಲಿ ಮರಗಸಿ, ಮೆಣಸು ಕೊಯ್ಯಲು ಹಾಗೂ ಔಷಧಿ ಸಿಂಪಡಿಸಲು ಬಿದಿರಿನ ಏಣಿಗಳನ್ನ ಬಳಸುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಕಬ್ಬಿಣದ ಏಣಿ ಬಂದ ಬಳಿಕ ಬಿದಿರಿನ ಏಣಿಯನ್ನು ಬಳಸುವವರ ಸಂಖ್ಯೆ ತೀರಾ ಕಡಿಮೆಯಾಗಿದೆ.

    ತೋಟಗಳಲ್ಲಿ ಮರಗಸಿ, ಮೆಣಸು ಕೊಯ್ಯಲು ಹಾಗೂ ಔಷಧಿ ಸಿಂಪಡಣೆಗೆ ಕಬ್ಬಿಣದ ಏಣಿಗಳ ಬಳಕೆ ಕಾರ್ಯರೂಪಕ್ಕೆ ಬಂದ ಮೇಲೆ ಈ ರೀತಿಯಾಗಿ ವಿದ್ಯುತ್ ಸ್ಪರ್ಶಿಸಿ ಕಾರ್ಮಿಕರು ಸಾವನ್ನಪ್ಪುವುದು ಸಾಮಾನ್ಯವಾಗಿದೆ. ಈ ರೀತಿ ವಿದ್ಯುತ್ ಸ್ಪರ್ಶದಿಂದ ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. ಇಂತಹ ಪ್ರಕರಣಗಳು ಸಾಮಾನ್ಯವಾಗಿದ್ದರಿಂದ ತೋಟದ ಮಾಲೀಕ ಕೃಷ್ಣೇಗೌಡ ಕಾರ್ಮಿಕರಿಗೆ ವಿಮೆ ಮಾಡಿಸಿದ್ದರು ಎಂದು ತಿಳಿದು ಬಂದಿದೆ. ಇದರಿಂದ ಕಾರ್ಮಿಕನ ಕುಟುಂಬಕ್ಕೂ ಪರಿಹಾರ ದೊರೆಯಲಿದೆ. ಕಳಸ ಪೊಲೀಸ್ ಠಾಣಾ ವ್ಯಾಪ್ತಿ ಪ್ರಕರಣ ನಡೆದಿದ್ದು, ಮೃತ ರಮೇಶ್ ತಾಯಿ ಕಳಸ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

     

  • ಮುಂಬೈನಿಂದ ಬಂದ ಕಾರ್ಮಿಕನಿಗೆ ಕೊರೊನಾ- ಹಾವೇರಿಯಲ್ಲಿ 15ಕ್ಕೇರಿದ ಸೋಂಕಿತರ ಸಂಖ್ಯೆ

    ಮುಂಬೈನಿಂದ ಬಂದ ಕಾರ್ಮಿಕನಿಗೆ ಕೊರೊನಾ- ಹಾವೇರಿಯಲ್ಲಿ 15ಕ್ಕೇರಿದ ಸೋಂಕಿತರ ಸಂಖ್ಯೆ

    ಹಾವೇರಿ: ಜಿಲ್ಲೆಯಲ್ಲಿ ಇಂದು ಮತ್ತೊಂದು ಕೊರೊನಾ ಪ್ರಕರಣ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.

    ಜಿಲ್ಲೆಯ ಶಿಗ್ಗಾಂವಿ ಪಟ್ಟಣದ ನಿವಾಸಿ, ಮುಂಬೈನಿಂದ ಬಂದಿದ್ದ 57 ವರ್ಷದ ಕಾರ್ಮಿಕನಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಸೋಂಕಿತ ಮೇ 19 ರಂದು ಶಿಗ್ಗಾಂವಿಗೆ ಬಂದು ಕ್ವಾರಂಟೈನ್ ಆಗಿದ್ದ. ಸೋಂಕಿತ ಓಲಾ ಕಾರ್ ಬಾಡಿಗೆ ಮಾಡಿಕೊಂಡು ಪತ್ನಿ ಮತ್ತು ಮಗಳೊಂದಿಗೆ ಶಿಗ್ಗಾಂವಿಗೆ ಬಂದಿದ್ದ. ಈ ವೇಳೆ ಶಿಗ್ಗಾಂವಿ ತಾಲೂಕು ಜಕ್ಕಿನಕಟ್ಟಿ ಸರ್ಕಾರಿ ವಸತಿ ನಿಲಯದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ನಂತರ ಮೇ 24ರಂದು ಸೋಂಕಿತನ ಗಂಟಲು ದ್ರವವನ್ನು ಲ್ಯಾಬ್‍ಗೆ ಕಳಿಸಿಕೊಡಲಾಗಿತ್ತು. ಸೋಂಕು ದೃಢಪಡುತ್ತಿದ್ದಂತೆ ಕೋವಿಡ್-19 ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಸೋಂಕಿತ ವಾಸವಾಗಿದ್ದ ಜಕ್ಕಿನಕಟ್ಟಿಯ ರಾಣಿ ಚೆನ್ನಮ್ಮ ವಸತಿ ಶಾಲೆಯ ಸುತ್ತ ನೂರು ಮೀಟರ್ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಲಾಗಿದ್ದು, ಜಕ್ಕಿನಕಟ್ಟಿ ಗ್ರಾಮವನ್ನು ಬಫರ್ ಝೋನ್ ಮಾಡಿ ಜಿಲ್ಲಾಡಳಿತ ಘೋಷಣೆ ಮಾಡಿದೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 15ಕ್ಕೆ ಏರಿದ್ದು, ಜಿಲ್ಲಾ ಕೋವಿಡ್-19 ಆಸ್ಪತ್ರೆಯಿಂದ ಇದುವರೆಗೆ 6 ಜನ ಗುಣಮುಖರಾಗಿದ್ದು, ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂ 9 ಜನರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

  • ಸರ್ಕಾರದಿಂದ 5 ಸಾವಿರ ರೂ. ನೆರವು – ಯಾವ ಕಾಮಿರ್ಕರಿಗೆ ಅನ್ವಯ? ಯಾವ ದಾಖಲೆ? ಎಲ್ಲಿ ಸಲ್ಲಿಸಬೇಕು?

    ಸರ್ಕಾರದಿಂದ 5 ಸಾವಿರ ರೂ. ನೆರವು – ಯಾವ ಕಾಮಿರ್ಕರಿಗೆ ಅನ್ವಯ? ಯಾವ ದಾಖಲೆ? ಎಲ್ಲಿ ಸಲ್ಲಿಸಬೇಕು?

    ಮಡಿಕೇರಿ: ಲಾಕ್‍ಡೌನ್ ಸಮಯದಲ್ಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದು, ರಾಜ್ಯ ಸರ್ಕಾರ ಕಾರ್ಮಿಕರಿಗೆ ಧನ ಸಹಾಯ ಮಾಡಲು ಮುಂದಾಗಿದೆ.

    ಈಗ ಈ ಧನಸಹಾಯವನ್ನು ಪಡೆಯಲು ಕಾರ್ಮಿಕರು ಯಾವ ಮಾರ್ಗವನ್ನು ಅನುಸರಿಸಬೇಕು ಮತ್ತು ಸರ್ಕಾರದ ಈ ಹಣವನ್ನು ಪಡೆಯಲು ಯಾರು ಅರ್ಹರು ಎಂಬ ಮಾಹಿತಿಯನ್ನು ಮಡಿಕೇರಿ ಜಿಲ್ಲಾಧಿಕಾರಿ ಬಿಡುಗಡೆ ಮಾಡಿದ್ದಾರೆ. ಈ ಬಗ್ಗೆ ಮಡಿಕೇರಿ ಜಿಲ್ಲಾಡಳಿತ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕುವ ಮೂಲಕ ತಿಳಿಸಿದೆ.

    ಕರ್ನಾಟಕ ಸರ್ಕಾರದ ಅದೇಶದನ್ವಯ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯವರ ವತಿಯಿಂದ ನೋಂದಾಯಿತ ಕಟ್ಟಡ ಕಾರ್ಮಿಕ ಫಲಾನುಭವಿಗಳ ಖಾತೆಗೆ ಒಂದು ಬಾರಿ ಮಾತ್ರ ಐದು ಸಾವಿರ ಹಣವನ್ನು ಡಿಬಿಟಿ ಮೂಲಕ ಜಮಾ ಮಾಡಲಾಗುತ್ತದೆ.

    ಯಾರು ಅರ್ಹರು?
    ಕಟ್ಟಡ ಮತ್ತು ಇತರೆ ನಿರ್ಮಾಣ ಕೆಲಸಗಳಲ್ಲಿ ತೊಡಗಿರುವ ಎಲ್ಲಾ ನೋಂದಾಯಿತ ಕಾರ್ಮಿಕರು ಈ ಯೋಜನೆಗೆ ಅರ್ಹರಾಗಿದ್ದಾರೆ.

    ಅರ್ಜಿ ಸಲ್ಲಿಕೆ ಹೇಗೆ?
    ಆಯಾ ತಾಲೂಕಿನ ಹಿರಿಯ ನಿರೀಕ್ಷಕರು ಅಥವಾ ಜಿಲ್ಲಾ ಕಾರ್ಮಿಕ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ಜಿಲ್ಲಾಡಳಿತ ತಿಳಿಸಿದೆ.

    ದಾಖಲೆ ಏನು ಬೇಕು?
    1. ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿಸಿರುವ ಬಗ್ಗೆ ಪಡೆದ ನೋಂದಾಯಿತ ಗುರುತಿನ ಚೀಟಿಯ ಪ್ರತಿ
    2. ಆಧಾರ್ ಕಾರ್ಡ್ ಪ್ರತಿ
    3. ಬ್ಯಾಂಕ್ ಅಕೌಂಟ್ ನಂಬರ್, ಐಎಫ್‍ಸಿ ಕೋಡ್, ಹೆಸರು, ವಿಳಾಸ ಇರುವ ಬ್ಯಾಂಕ್ ಪಾಸ್ ಪುಸ್ತಕದ ಸ್ಪಷ್ಟವಾದ ಪ್ರತಿ

  • ಲಾಕ್‍ಡೌನ್: ಕೊಡಗಿನ ಪ್ರವಾಸೋದ್ಯಮಕ್ಕೆ 300 ಕೋಟಿ ರೂ. ನಷ್ಟ!

    ಲಾಕ್‍ಡೌನ್: ಕೊಡಗಿನ ಪ್ರವಾಸೋದ್ಯಮಕ್ಕೆ 300 ಕೋಟಿ ರೂ. ನಷ್ಟ!

    ಮಡಿಕೇರಿ: ಕೊರೊನಾ ಮಹಾಮಾರಿಯನ್ನು ನಿಯಂತ್ರಿಸಲು ದೇಶವೇ ಲಾಕ್‍ಡೌನ್ ಆಗಿದ್ದು, ಪರಿಣಾಮ ಪ್ರವಾಸೋದ್ಯಮ ಸಂಪೂರ್ಣ ಬಂದ್ ಆಗಿದೆ. ಆದರೆ ಪ್ರವಾಸೋದ್ಯಮವನ್ನೇ ನಂಬಿ ನಡೆಯುತ್ತಿದ್ದ ಹೋಟೆಲ್, ರೆಸಾರ್ಟ್ ಮತ್ತು ಹೋಂಸ್ಟೇ ಉದ್ಯಮ ಸಂಪೂರ್ಣ ನಲುಗಿ ಹೋಗಿದೆ.

    ಭಾರತದ ಸ್ಕಾಟ್‍ಲ್ಯಾಂಡ್, ದಕ್ಷಿಣ ಭಾರತದ ಕಾಶ್ಮೀರ ಎಂದೇ ಖ್ಯಾತಿ ಆಗಿರುವ ಕೊಡಗು ಪ್ರವಾಸಿಗರ ನೆಚ್ಚಿನ ಜಿಲ್ಲೆ. ಆದರೆ ಲಾಕ್‍ಡೌನ್ ಪರಿಣಾಮವಾಗಿ ಪ್ರವಾಸೋದ್ಯಮ, ಹೋಟೆಲ್ ರೆಸಾರ್ಟ್, ರೆಸ್ಟೋರೆಂಟ್ ಗಳು ಬಂದ್ ಆಗಿವೆ.

    ಕೊಡಗು ಜಿಲ್ಲೆಯಲ್ಲಿ ಬರೋಬ್ಬರಿ 300 ಕೋಟಿ ರೂಪಾಯಿಗೂ ಹೆಚ್ಚು ನಷ್ಟವಾಗಿದೆ. ಅಲ್ಲದೆ ಇದನ್ನೇ ನಂಬಿದ್ದ 30 ಸಾವಿರಕ್ಕೂ ಹೆಚ್ಚು ಕುಟುಂಬಗಳು ಅತಂತ್ರ ಸ್ಥಿತಿ ತಲುಪಿ ತೀವ್ರ ಸಂಕಷ್ಟ ಎದುರಿಸುತ್ತಿವೆ. ಹೋಟೆಲ್, ರೆಸಾರ್ಟ್ ಮತ್ತು ಹೋಂಸ್ಟೇ ಮಾಲೀಕರು ಕೂಡ ಸಮಸ್ಯೆಗೆ ಸಿಲುಕಿದ್ದಾರೆ. ಹೋಟೆಲ್ ರೆಸಾರ್ಟ್ ಮತ್ತು ಹೋಂಸ್ಟೇಗಳನ್ನು ಪುನಃ ಪ್ರಾರಂಭಿಸುವುದಕ್ಕೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ.

    ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅವರು ದುಡಿಮೆಗಿಂತ ಜನರ ಆರೋಗ್ಯ ಮುಖ್ಯ. ಹೀಗಾಗಿ ಸದ್ಯಕ್ಕೆ ಯಾವುದೇ ಕಾರಣಕ್ಕೂ ಹೋಟೆಲ್, ರೆಸಾರ್ಟ್ ಮತ್ತು ಹೋಂಸ್ಟೇಗಳನ್ನು ತೆರೆಯಲು ಬಿಡುವುದಿಲ್ಲ. ಅದಕ್ಕೆ ಮಾಲೀಕರು ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ. ಹೋಟೆಲ್, ರೆಸಾರ್ಟ್ ಮತ್ತು ಹೋಂಸ್ಟೇಗಳನ್ನು ನಂಬಿದ್ದ ಕಾರ್ಮಿಕರಿಗೆ ಕಿಟ್ ಅಥವಾ ಪರಿಹಾರ ಕೊಡಿಸಲು ಮಾತನಾಡುತ್ತೇನೆ ಎಂಬ ಭರವಸೆಯನ್ನು ನೀಡಿದ್ದಾರೆ.

  • ಮಂಗಳೂರಿನಿಂದ ಜಾರ್ಖಂಡಿಗೆ ಹೊರಟ ಕಾರ್ಮಿಕರಿಗೆ ಬಂಟ್ವಾಳದಲ್ಲಿ ಆಶ್ರಯ

    ಮಂಗಳೂರಿನಿಂದ ಜಾರ್ಖಂಡಿಗೆ ಹೊರಟ ಕಾರ್ಮಿಕರಿಗೆ ಬಂಟ್ವಾಳದಲ್ಲಿ ಆಶ್ರಯ

    – ಕಾಲ್ನಡಿಗೆಯಲ್ಲೇ ತಮ್ಮ ರಾಜ್ಯಕ್ಕೆ ಹೊರಟಿದ್ದ ಕಾಮಿರ್ಕರು
    – ಶಾಸಕರ ಮನವಿಯಂತೆ ಬಂಟ್ವಾಳದಲ್ಲಿ ನೆಲೆ

    ಮಂಗಳೂರು: ಜಿಲ್ಲೆಯಿಂದ ಕಾಲ್ನಡಿಗೆಯಲ್ಲಿ ಜಾರ್ಖಂಡ್‍ಗೆ ಹೊರಟ ಸುಮಾರು 1 ಸಾವಿರಕ್ಕೂ ಮಿಕ್ಕಿ ವಲಸೆ ಕಾರ್ಮಿಕರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಬಂಟರ ಭವನದಲ್ಲಿ ಆಶ್ರಯ ನೀಡಲಾಗಿದೆ. ಸೂಕ್ತ ವೈದ್ಯಕೀಯ ತಪಾಸಣೆಯ ಬಳಿಕ ಎರಡು ದಿನಗಳಲ್ಲಿ ಅವರನ್ನು ರೈಲಿನಲ್ಲಿ ಕಳುಹಿಸುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.

    ಲಾಕ್‍ಡೌನ್‍ನಿಂದ ಮಂಗಳೂರಿನ ವಿವಿಧ ಭಾಗಗಳಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಜಾರ್ಖಂಡ್ ರಾಜ್ಯದ ಸುಮಾರು 1000ಕ್ಕೂ ಅಧಿಕ ಮಂದಿ ಕಾರ್ಮಿಕರು ಮಂಗಳೂರಿನಿಂದ ಕಾಲ್ನಡಿಗೆಯಲ್ಲಿ ತಮ್ಮ ರಾಜ್ಯಕ್ಕೆ ತೆರಲುವುದಾಗಿ ನಿನ್ನೆ ರಾತ್ರಿ 9 ಗಂಟೆಯ ಸುಮಾರಿಗೆ ಹೊರಟಿದ್ದರು. ಈ ಬಗ್ಗೆ ವಿಷಯ ತಿಳಿದ ಅಧಿಕಾರಿಗಳು ಮಾರ್ಗ ಮಧ್ಯೆ ಕಾರ್ಮಿಕರನ್ನು ತಡೆದು ಮನವೊಲಿಸಲು ಶತ ಪ್ರಯತ್ನ ಪಟ್ಟರೂ ಅಧಿಕಾರಿಗಳ ಮಾತುಗಳನ್ನು ಲೆಕ್ಕಿಸದೆ ತಮ್ಮ ಪ್ರಯಾಣವನ್ನು ಮುಂದುವರಿಸಿದ್ದರು.

    ಮಂಗಳೂರು ನಗರದಿಂದ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ತಮ್ಮ ಮಕ್ಕಳು, ಮಹಿಳೆಯರು ಹಾಗೂ ತಮ್ಮ ಬಟ್ಟೆಬರೆಗಳನ್ನು ಗಂಟುಮೂಟೆ ಕಟ್ಟಿ ಹೊರಟ ಕಾರ್ಮಿಕರನ್ನು ಮಾರ್ಗ ಮಧ್ಯೆ ವಿವಿಧೆಡೆ ತಡೆದು ನಿಲ್ಲಿಸಿದ ಅಧಿಕಾರಿಗಳು, ಮೂರು ದಿನ ಇಲ್ಲೇ ಇರಿ. ಬಳಿಕ ನಿಮ್ಮನ್ನು ಊರಿಗೆ ತಲುಪಿಸಲು ರೈಲಿನ ವ್ಯವಸ್ಥೆ ಮಾಡುತ್ತೇವೆ. ಅಲ್ಲಿಯವರೆಗೆ ಊಟ, ತಿಂಡಿಯ ವ್ಯವಸ್ಥೆಯೂ ಮಾಡುತ್ತೇವೆ ಎಂದು ಮನವೊಲಿಸಿದರು. ಆದರೆ ಕಾರ್ಮಿಕರು ಯಾರ ಮಾತನ್ನೂ ಲೆಕ್ಕಿಸದೆ ಹೊರಟಿದ್ದರು.

    ಕೊನೆಗೆ ಮಂಗಳೂರು ಕಮಿಷನರೇಟ್ ವ್ಯಾಪ್ತಿ ಮುಗಿದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ವ್ಯಾಪ್ತಿಯ ಗಡಿಯಾದ ಆರ್ಕುಳದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಪೊಲೀಸರು ಕಾರ್ಮಿಕರ ಮನವೊಲಿಸಲು ಪ್ರಯತ್ನಿಸಿದರು. ಆರಂಭದಲ್ಲಿ ಯಾರ ಮಾತಿಗೂ ಜಗ್ಗದ ಕಾರ್ಮಿಕರು ಕೊನೆಗೆ ಬ್ರಹ್ಮರಕೊಟ್ಲು ಟೋಲ್‍ಗೇಟ್ ಸಮೀಪದಲ್ಲಿರುವ ಬಂಟರ ಭವನದಲ್ಲಿ ಉಳಿದುಕೊಳ್ಳಲು ಅಧಿಕಾರಿಗಳು ಮಾಡಿದ ಮನವಿಗೆ ತಲೆಯಾಡಿಸಿದರು.

    ಸುದ್ದಿ ತಿಳಿದ ಮಂಗಳೂರು ಶಾಸಕ ವೇದವ್ಯಾಸ ಕಾಮತ್, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರನ್ನು ಸಂಪರ್ಕಿಸಿ ಬಂಟ್ವಾಳ ಬಂಟರ ಭವನದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿಕೊಡಲಾಯಿತು. ಸ್ಥಳಕ್ಕೆ ಮಧ್ಯರಾತ್ರಿ ವೇದವ್ಯಾಸ ಕಾಮತ್ ಅವರಿಂದ ಊಟದ ವ್ಯವಸ್ಥೆ ಕಲ್ಪಿಸಿದರೆ, ಬುಧವಾರದಿಂದ ಎಲ್ಲರಿಗೂ ಊಟ, ಉಪಾಹಾರದ ವ್ಯವಸ್ಥೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ವೈಯಕ್ತಿಕ ನೆಲೆಯಲ್ಲಿ ಒದಗಿಸಿದರು.

    ಬಳಿಕ ಸ್ಥಳಕ್ಕೆ ಆಗಮಿಸಿದ ಬಂಟ್ವಾಳ ತಹಶೀಲ್ದಾರ್ ಹಾಗೂ ಅಧಿಕಾರಿಗಳ ತಂಡ ಅವರೊಂದಿಗೆ ಮಾತುಕತೆ ನಡೆಸಿದ ಶಾಸಕ ರಾಜೇಶ್ ನಾಯ್ಕ್ ಆಗಮಿಸಿದ ಅಷ್ಟೂ ಕಾರ್ಮಿಕರಿಗೆ ಅಭಯ ನೀಡಿ, ಅವರಿಗೆ ವೈದ್ಯಕೀಯ ತಪಾಸಣೆ, ದಾಖಲೆ ಪರಿಶೀಲಿಸಿ, ಪ್ರತ್ಯೇಕ ತಂಡಗಳನ್ನಾಗಿ ಬೇರ್ಪಡಿಸಿ, ರೈಲಿನಲ್ಲಿ ಕಳುಹಿಸುವ ವ್ಯವಸ್ಥೆ ಕೈಗೊಂಡಿದ್ದಾರೆ.