Tag: Labor Woman

  • ಅಮ್ಮನನ್ನು ಕಳೆದುಕೊಂಡ ಮಗುವಿನ ನೆರವಿಗೆ ಬಂದ ಕಿಂಗ್ ಖಾನ್

    ಅಮ್ಮನನ್ನು ಕಳೆದುಕೊಂಡ ಮಗುವಿನ ನೆರವಿಗೆ ಬಂದ ಕಿಂಗ್ ಖಾನ್

    – ತಾಯಿಯನ್ನು ಕಳೆದುಕೊಂಡ ನೋವು ನನಗೂ ಗೊತ್ತಿದೆ

    ಮುಂಬೈ: ರೈಲ್ವೇ ನಿಲ್ದಾಣದಲ್ಲಿ ತಾಯಿ ಕಳೆದುಕೊಂಡ ಮಗುವಿನ ನೆರವಿಗೆ ಬಾಲಿವುಡ್‍ನ ಕಿಂಗ್ ಖಾನ್ ಶಾರುಖ್ ಖಾನ್ ಅವರು ಬಂದಿದ್ದಾರೆ.

    ಕೊರೊನಾ ಲಾಕ್‍ಡೌನ್‍ನಿಂದಾಗಿ ಜನ ಸಾಮಾನ್ಯರಿಗೆ ಭಾರೀ ಸಮಸ್ಯೆಯಾಗಿದ್ದು, ಅದರಲ್ಲೂ ಪುಟ್ಟ ಹೊಟ್ಟೆಯನ್ನು ತುಂಬಿಸಿಕೊಳ್ಳಲು ಬೇರೆ ಬೇರೆ ಕಡೆ ಕೂಲಿ ಕೆಲಸಕ್ಕೆ ಹೋಗಿದ್ದ ವಲಸೆ ಕಾರ್ಮಿಕರ ಸ್ಥಿತಿ ಶೋಚನೀಯವಾಗಿದೆ. ತಮ್ಮ ಗ್ರಾಮಗಳನ್ನು ಸೇರುವ ತವಕದಲ್ಲಿ ಊಟ ಬಿಟ್ಟು ಸಾವನ್ನಪ್ಪುತ್ತಿದ್ದಾರೆ. ಹಾಗೆಯೇ ಸಾವನ್ನಪ್ಪಿದ ಕೂಲಿಕಾರ್ಮಿಕ ಮಹಿಳೆಯ ಮಗುವಿನ ನೆರವಿಗೆ ಶಾರುಖ್ ಖಾನ್ ಅವರು ಬಂದಿದ್ದಾರೆ.

    ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಾವನ್ನಪ್ಪಿದ ತಾಯಿಯ ಬಟ್ಟೆಯ ಜೊತೆ ಪುಟ್ಟಮಗುವೊಂದು ಆಟವಾಡುತ್ತಿರುವ, ತಾಯಿಯನ್ನು ಎಬ್ಬಿಸಲು ಪ್ರಯತ್ನಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿತ್ತು. ಬಿಹಾರದ ಮುಜಾಫರ್ ನಗರದ ರೈಲ್ವೇ ನಿಲ್ದಾಣದಲ್ಲಿ ಈ ಘಟನೆ ನಡೆದಿತ್ತು. ಈ ಘಟನೆ ಕಂಡು ಮರುಗಿರುವ ಶಾರುಖ್ ಖಾನ್, ಅವರ ಮೀರ್ ಫೌಂಡೇಶನ್ ಕಡೆಯಿಂದ ಆ ಮಗುವಿಗೆ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ಶಾರುಖ್ ಖಾನ್ ಅವರು, ಪುಟ್ಟ ಮಗುವನ್ನು ಹುಡುಕಲು ನಮಗೆ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದಗಳು. ಇಷ್ಟು ಚಿಕ್ಕ ವಯಸ್ಸಿನಲ್ಲಿ ವಿಧಿಯಾಟದಿಂದ ತನ್ನ ಪೋಷಕರನ್ನು ಕಳೆದುಕೊಂಡ ಆ ಮಗುವಿಗಾಗಿ ನಾವು ಪ್ರಾರ್ಥಿಸೋಣ. ನನಗೂ ತಾಯಿಯನ್ನು ಕಳೆದುಕೊಂಡ ನೋವು ಏನು ಎಂಬುದು ಗೊತ್ತು. ನಿಮ್ಮ ಪ್ರೀತಿ ಮತ್ತು ಬೆಂಬಲ ಆ ಮಗುವಿನ ಮೇಲೆ ಇರಲಿ ಎಂದು ಬರೆದುಕೊಂಡಿದ್ದಾರೆ.

    ಈ ವಿಚಾರವಾಗಿ ಮೀರ್ ಫೌಂಡನೇಶನ್ ಕೂಡ ಟ್ವೀಟ್ ಮಾಡಿದ್ದು, ಈ ಮಗುವನ್ನು ಸೇರಲು ನಮಗೆ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದಗಳು. ಸಾವನ್ನಪ್ಪಿದ ತಾಯಿಯನ್ನು ಪುಟ್ಟಕಂದ ಬಟ್ಟೆ ಎಳೆದು ಎಬ್ಬಿಸಲು ಪ್ರಯತ್ನಿಸುತ್ತಿದ್ದ ಮನಕಲಕುವ ವಿಡಿಯೋವನ್ನು ನೀವು ನೋಡಿದ್ದೀರಾ. ನಾವು ಈಗ ಆ ಮಗುವಿನ ನೆರವಿಗೆ ಬಂದಿದ್ದೇನೆ. ಜೊತೆಗೆ ಆ ಮಗು ಈಗ ಅವರ ತಾತ-ಅಜ್ಜಿಯ ಆರೈಕೆಯಲ್ಲಿ ಬೆಳೆಯುತ್ತಿದ್ದಾನೆ ಎಂದು ತಿಳಿಸಿದ್ದಾರೆ.

    23 ವರ್ಷದ ಬಿಹಾರ ಮೂಲದ ಕಾರ್ಮಿಕರ ಮಹಿಳೆ ಗುಜರಾತ್‍ನ ಅಲಹಾಬಾದ್‍ನಲ್ಲಿ ತನ್ನ ಇಬ್ಬರು ಮಕ್ಕಳೊಂದಿಗೆ ನೆಲೆಸಿದ್ದಳು. ಲಾಕ್‍ಡೌನ್ ಜಾರಿಯಾದ ಹಿನ್ನೆಲೆಯಲ್ಲಿ ಕೆಲಸವಿಲ್ಲದೇ ಒಂದು ಹೊತ್ತಿನ ಊಟಕ್ಕೂ ಸಮಸ್ಯೆ ಎದುರಿಸಿದ್ದ ಮಹಿಳೆ ಅನಾರೋಗ್ಯದ ಸಮಸ್ಯೆಗೆ ಗುರಿಯಾಗಿದ್ದಳು. ಇದೇ ಸಂದರ್ಭದಲ್ಲಿ ಸರ್ಕಾರ ಶ್ರಮಿಕ್ ಎಕ್ಸ್ ಪ್ರೆಸ್ ರೈಲು ಆರಂಭಿಸಿದ್ದ ಕಾರಣ ತನ್ನ ಸ್ವ-ಸ್ಥಳಕ್ಕೆ ತೆರಳಲು ನಿರ್ಧರಿಸಿದ್ದ ಮಹಿಳೆ ಮೇ 24 ರಂದು ರೈಲಿನಲ್ಲಿ ಸಹೋದರಿ ಹಾಗೂ ಇತರರೊಂದಿಗೆ ಮುಜಾಫರ್ ನಗರಕ್ಕೆ ಹೊರಟ್ಟಿದ್ದಳು. ಆದರೆ ರೈಲಿನ ಪ್ರಯಾಣದ ಸಂದರ್ಭದಲ್ಲೂ ಆಹಾರ ಸಿಗದೆ ಮತ್ತಷ್ಟು ಬಳಲಿದ್ದ ಮಹಿಳೆ ಮುಜಾಫರ್ ನಗರಕ್ಕೆ ಆಗಮಿಸುವ ಮುನ್ನವೇ ರೈಲಿನಲ್ಲೇ ಕುಸಿದು ಸಾವನ್ನಪ್ಪಿದ್ದಳು.

  • ನಡೆದು ನಡೆದು ಸಾವನ್ನಪ್ಪಿದ್ದ ಮಹಿಳೆ-ಕುಟುಂಬಕ್ಕೆ 3 ಲಕ್ಷ ರೂ. ಪರಿಹಾರ

    ನಡೆದು ನಡೆದು ಸಾವನ್ನಪ್ಪಿದ್ದ ಮಹಿಳೆ-ಕುಟುಂಬಕ್ಕೆ 3 ಲಕ್ಷ ರೂ. ಪರಿಹಾರ

    ರಾಯಚೂರು: ಕೊರೊನಾ ಲಾಕ್‍ಡೌನ್ ಹಿನ್ನೆಲೆ ಬಳ್ಳಾರಿಯಲ್ಲಿ ಸಾವನ್ನಪ್ಪಿದ್ದ ರಾಯಚೂರಿನ ಸಿಂಧನೂರಿನ ಕಟ್ಟಡ ಕಾರ್ಮಿಕ ಮಹಿಳೆ ಗಂಗಮ್ಮ ಕುಟುಂಬಕ್ಕೆ ಕೊನೆಗೂ ಕಾರ್ಮಿಕ ಕಲ್ಯಾಣ ಮಂಡಳಿ ಪರಿಹಾರ ನೀಡಿದೆ.

    ಗಂಗಮ್ಮನ ಇಬ್ಬರು ಮಕ್ಕಳ ಹೆಸರಲ್ಲಿ ತಲಾ 1 ಲಕ್ಷ 50 ಸಾವಿರದಂತೆ ಮೂರು ಲಕ್ಷ ರೂಪಾಯಿಯ ಎರಡು ಭದ್ರತಾ ಠೇವಣಿಯ ಬಾಂಡ್‍ಗಳನ್ನು ನೀಡಲಾಗಿದೆ. ಎರಡು ವರ್ಷದ ಅವಧಿಯ ಎರಡು ಬಾಂಡ್‍ಗಳನ್ನು ನೀಡುವ ಮೂಲಕ ಮಂಡಳಿ ಮಕ್ಕಳ ಸಹಾಯಕ್ಕೆ ಮುಂದಾಗಿದೆ.

    ಗಂಗಮ್ಮ ಮಂಡಳಿಯ ನೋಂದಾಯಿತ ಕಾರ್ಮಿಕಳಲ್ಲವಾಗಿದ್ದರಿಂದ 5 ಲಕ್ಷ ರೂಪಾಯಿ ಬದಲಾಗಿ ಕೇವಲ 3 ಲಕ್ಷ ಮಾತ್ರ ಪರಿಹಾರ ಬಂದಿದೆ. ವಿಶೇಷ ಪ್ರಕರಣವೆಂದು ಪರಿಗಣಿಸಿ ಗಂಗಮ್ಮಳ ಮಕ್ಕಳಾದ ಪ್ರೀತಿ ಹಾಗೂ ಮಂಜುನಾಥ್‍ಗೆ ಪರಿಹಾರ ನೀಡಲಾಗಿದೆ. ಬೆಂಗಳೂರಿನಲ್ಲಿ ಕಟ್ಟಡ ಕೆಲಸದಲ್ಲಿ ತೊಡಗಿದ್ದ ಗಂಗಮ್ಮ ಲಾಕ್‍ಡೌನ್ ನಿಂದ ವಾಪಸ್ ಬರುತ್ತಿದ್ದರು. ಮರಳಿ ಬರಲು ವಾಹನ ವ್ಯವಸ್ಥೆಯಿಲ್ಲದೆ ಕಾಲ್ನಡಿಗೆಯಲ್ಲಿ ಬಂದು ಬಳ್ಳಾರಿಯಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ವಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.

    ತಾಯಿಯನ್ನೇ ಅವಲಂಬಿಸಿದ್ದ ಇಬ್ಬರು ಮಕ್ಕಳು ತಬ್ಬಲಿಗಳಾಗಿದ್ದಾರೆ. ಕೊನೆಗೂ ಮಂಡಳಿ ಸಹಾಯಕ್ಕೆ ಮುಂದಾಗಿದ್ದು, ಸಿಂಧನೂರು ತಹಶೀಲ್ದಾರ್ ಇಬ್ಬರು ಮಕ್ಕಳಿಗೆ ತಲಾ ಒಂದೂವರೆ ಲಕ್ಷದ ಬಾಂಡ್ ನೀಡಿದ್ದಾರೆ.

  • ಕೊಡಗಿನಲ್ಲಿ ಕಾರ್ಮಿಕ ಮಹಿಳೆ ಮೇಲೆ ಒಂಟಿ ಸಲಗ ದಾಳಿ

    ಕೊಡಗಿನಲ್ಲಿ ಕಾರ್ಮಿಕ ಮಹಿಳೆ ಮೇಲೆ ಒಂಟಿ ಸಲಗ ದಾಳಿ

    ಕೊಡಗು: ಜಿಲ್ಲೆಯಲ್ಲಿ ಪುಂಡಾನೆ ಉಪಟಳ ಮುಂದುವರಿದಿದ್ದು, ಒಂಟಿ ಸಲಗ ದಾಳಿಗೆ ಕಾರ್ಮಿಕ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸೋಮವಾರಪೇಟೆ ತಾಲೂಕಿನ ವಾಲ್ನೂರಿನಲ್ಲಿ ನಡೆದಿದೆ.

    ಕಲಾವತಿ (55) ಕಾಡಾನೆ ದಾಳಿಗೊಳಗಾದ ಕೂಲಿ ಕಾರ್ಮಿಕ ಮಹಿಳೆ. ಕೂಲಿ ಕೆಲಸಕ್ಕೆ ತೆರಳುವಾಗ ಬೆಳಗ್ಗೆ 7:30ರ ಸುಮಾರಿಗೆ ವಾಲ್ನೂರು ಬಸವೇಶ್ವರ ದೇವಾಲಯ ಬಳಿ ಒಂಟಿ ಸಲಗ ಮಹಿಳೆಯ ಮೇಲೆ ದಾಳಿ ನಡೆಸಿದೆ.

    ಕಾಡಾನೆ ದಾಳಿಯಿಂದ ಮಹಿಳೆಯ ತಲೆ, ಕೈ ಕಾಲಿಗೆ ಗಂಭೀರ ಗಾಯವಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಸದ್ಯ ಕಾರ್ಮಿಕ ಮಹಿಳೆಯನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಅಥವಾ ಮಂಗಳೂರಿಗೆ ಶಿಫ್ಟ್ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

    ಕಾಡಾನೆ ಉಪಟಳ ತಡೆಗೆ ಗ್ರಾಮಸ್ಥರ ಆಗ್ರಹಿಸಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಕೂಲಿ ಕೇಳಿದ ಮಹಿಳೆ ಎದುರು 6 ತಿಂಗಳಿಂದ ಸಂಬಳ ಆಗಿಲ್ಲ ಎಂದ ಜಿ.ಪಂ ಸಿಇಓ

    ಕೂಲಿ ಕೇಳಿದ ಮಹಿಳೆ ಎದುರು 6 ತಿಂಗಳಿಂದ ಸಂಬಳ ಆಗಿಲ್ಲ ಎಂದ ಜಿ.ಪಂ ಸಿಇಓ

    ಯಾದಗಿರಿ: ಸರ್ಕಾರದಿಂದ ಸಿಗಬೇಕಾದ ಕೂಲಿ ಹಣ ಸಿಗಲಿಲ್ಲ ಎಂದು ಪ್ರತಿಭಟನೆ ನಡೆಸಿದ ಕಾರ್ಮಿಕ ಮಹಿಳೆಯೊಬ್ಬರು ಜಿ.ಪಂ ಸಿಇಓ ಅವರನ್ನು ಪ್ರಶ್ನೆ ಮಾಡಿದ್ದರು. ಈ ವೇಳೆ ನನಗೆ ಕಳೆದ 6 ತಿಂಗಳಿಂದ ಸಂಬಳ ಬಂದಿಲ್ಲ ಎಂದು ಯಾದಗಿರಿ ಜಿ.ಪಂ ಸಿಇಓ ಕವಿತಾ ಮನ್ನಿಕೇರಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

    ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡಿದ್ದ ಕಾರ್ಮಿಕರಿಗೆ ಎರಡು ತಿಂಗಳ ಕೂಲಿ ಹಣವನ್ನು ಸರ್ಕಾರ ಬಾಕಿ ಉಳಿಸಿಕೊಂಡಿತ್ತು. ತಮ್ಮ ಕೂಲಿ ಹಣ ನೀಡುವಂತೆ ಇಂದು ಕಾರ್ಮಿಕ ಮಹಿಳೆಯರು ಜಿಲ್ಲಾ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪಂಚಾಯಿತಿ ಸಿಇಒ ಅವರು ಕಾರ್ಮಿಕರ ಸಮಸ್ಯೆಗಳನ್ನು ಬಗೆ ಹರಿಸುವ ಭರವಸೆ ನೀಡದರು. ಆದರೆ ಈ ವೇಳೆ ಮಹಿಳೆಯೊಬ್ಬರು ತಮ್ಮ ಕೂಲಿ ಹಣ ಕೂಡಲೇ ಪಾವತಿ ಮಾಡುವಂತೆ ಅಗ್ರಹಿಸಿದ್ದರು. ಕಾರ್ಮಿಕರ ಬೇಡಿಕೆ ಕೇಳಿದ ಸಿಇಒ ಕವಿತಾ ಅವರು ತಮಗೇ ಕಳೆದ 6 ತಿಂಗಳಿಂದ ಸಂಬಳ ಆಗಿಲ್ಲ ಎಂದು ತಿಳಿಸಿದರು.

    ಇತ್ತ ಜಿಲ್ಲಾ ಪಂಚಾಯಿತಿ ಸಿಇಓ ಅವರು ಹೇಳಿದ ಮಾತಿಗೆ ಕೆಲ ಪ್ರತಿಭಟನೆ ನಿಂತ ಮಹಿಳೆಯರು ಕ್ಷಣ ಕಾಲ ಕಂಗಾಲಾದರು. ಪ್ರತಿಭಟನೆ ನಿರತ ಮಹಿಳೆಯ ಮುಂದೇ ನಗುತ್ತಲೇ ನೋವು ಹೊರಹಾಕಿದ ಸಿಇಓ ಕವಿತಾ ಮನ್ನಿಕೇರಿ ಅವರು, ನಿಮ್ಮ ಸಮಸ್ಯೆಗಳು ನನಗೆ ಗೊತ್ತಿದೆ. ನಾನು ಒಬ್ಬ ಹೆಣ್ಣು ಮಗಳು, ನಿಮ್ಮ ಬೇಡಿಕೆಗಳನ್ನು ನಾನು ಸರ್ಕಾರದ ಗಮನ ತರುತ್ತೇನೆ. ಈಗ ಬೆಂಗಳೂರಿನಲ್ಲಿ ಸದನ ನಡೆಯುತ್ತಿದ್ದು, ಆದಷ್ಟು ಶೀಘ್ರ ನಿಮ್ಮ ಸಮಸ್ಯೆಗಳನ್ನು ಬಗೆ ಹರಿಸುತ್ತೇನೆ ಎಂದು ಕಾರ್ಮಿಕ ಮಹಿಳೆಯರಲ್ಲಿ ಆತ್ಮವಿಶ್ವಾಸ ತುಂಬಿದರು.

    ತೀವ್ರ ಬರಗಾಲದಿಂದ ಕಂಗೆಟ್ಟಿರುವ ಜಿಲ್ಲೆಯ ಜನ ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಗೆ ಗುಳೆ ಹೋಗುತ್ತಿದ್ದು, ಬಹುತೇಕ ಹಳ್ಳಿಗಳಲ್ಲಿ ಸ್ಮಶಾನ ಮೌನ ಆವರಿಸಿದೆ. ಸರ್ಕಾರ ಯೋಜನೆಗಳು ಸರಿಯಾದ ಸಮಯಕ್ಕೆ ಅನುಷ್ಠಾನ ಆಗದ ಹಿನ್ನೆಲೆಯಲ್ಲಿ ಬಡ ಜನರ ಹೊತ್ತೊಟ್ಟಿನ ಊಟಕ್ಕಾಗಿ ಪದರಾಡುವ ಸ್ಥಿತಿ ನಿರ್ಮಾಣ ಆಗಿದೆ ಎಂದು ಪ್ರತಿಭಟನಾಕಾರರು ತಮ್ಮ ನೋವನ್ನು ತೋಡಿಕೊಂಡರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv