Tag: Kyasanur Forest Disease

  • ಮಂಗನ ಕಾಯಿಲೆಗೆ ಲಸಿಕೆ: ಐಸಿಎಂಆರ್ ಮಹಾನಿರ್ದೇಶಕರ ಜೊತೆ ದಿನೇಶ್ ಗುಂಡೂರಾವ್ ಚರ್ಚೆ

    ಮಂಗನ ಕಾಯಿಲೆಗೆ ಲಸಿಕೆ: ಐಸಿಎಂಆರ್ ಮಹಾನಿರ್ದೇಶಕರ ಜೊತೆ ದಿನೇಶ್ ಗುಂಡೂರಾವ್ ಚರ್ಚೆ

    ನವದೆಹಲಿ: ಮಂಗನ ಕಾಯಿಲೆಗೆ (KFD) ಲಸಿಕೆ ಹಾಗೂ ಇತರ ವಿಷಯಗಳ ಕುರಿತು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ICMR) ಮಹಾನಿರ್ದೇಶಕ ರಾಜೀವ್ ಬಹ್ಲ್ ಅವರೊಂದಿಗೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ (Dinesh Gundu rao) ಸಮಾಲೋಚನೆ ನಡೆಸಿದರು.ಇದನ್ನೂ ಓದಿ:ಮಾಜಿ ಸಚಿವ ನಾಗೇಂದ್ರ ಪರಪ್ಪನ ಅಗ್ರಹಾರ ಜೈಲಿಂದ ರಿಲೀಸ್‌

    ಈ ನಿಟ್ಟಿನಲ್ಲಿ ಐಸಿಎಂಆರ್ ಮಹಾನಿರ್ದೇಶಕರು ರಾಜ್ಯ ಸರ್ಕಾರ ಸಹಕಾರ ನೀಡಬೇಕು ಎಂದು ಕೋರಿದ್ದು, ಕೆಎಫ್‌ಡಿ ಲಸಿಕೆಯು ಮೊದಲ ಹಂತದಲ್ಲಿ ಭರವಸೆಯ ಫಲಿತಾಂಶ ನೀಡಿದೆ. ಮಂಗಗಳ ಮೇಲಿನ ಪ್ರಾಯೋಗಿಕ ಬಳಕೆ ಎರಡನೇ ಹಂತದಲ್ಲಿದೆ. 2025ರ ಏಪ್ರಿಲ್‌ನಲ್ಲಿ ಮಾನವರ ಮೇಲೆ ಈ ಲಸಿಕೆಯ ಪ್ರಯೋಗ ನಡೆಯಲಿದ್ದು, 2026ಕ್ಕೆ ಲಸಿಕೆ ಲಭ್ಯವಾಗಲಿದೆ ಎಂದು ಮಾಹಿತಿ ನೀಡಿದರು.

    ದಿನೇಶ್ ಗುಂಡೂರಾವ್ ಮಾತನಾಡಿ, ರಾಜ್ಯ ಸರ್ಕಾರ ಎಲ್ಲ ಅಗತ್ಯ ನೆರವು ನೀಡಲಿದೆ ಎಂದು ಭರವಸೆ ನೀಡಿದರು. ಜೊತೆಗೆ ಡೆಂಗ್ಯೂ (Dengue) ನಿಯಂತ್ರಣಕ್ಕೆ ಕರ್ನಾಟಕ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಐಸಿಎಂಆರ್‌ಗೆ ಮಾಹಿತಿ ನೀಡಿದರು. ಈ ಮಾದರಿಯನ್ನು ಇತರ ರಾಜ್ಯಗಳಲ್ಲಿ ಜಾರಿ ಮಾಡಲು ಐಸಿಎಂಆರ್ ಅಧಿಕಾರಿಗಳು ಉತ್ಸುಕತೆ ತೋರಿಸಿದರು. ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಸಾರ್ವಜನಿಕ ಆರೋಗ್ಯ ಸಂಶೋಧನೆಯಲ್ಲಿ ಜೊತೆಗೂಡಿ ಕೆಲಸ ಮಾಡಲು ರಾಜ್ಯ ಸರ್ಕಾರ ಹಾಗೂ ಐಸಿಎಂಆರ್ ಒಪ್ಪಿದವು ಎಂದು ತಿಳಿಸಿದ್ದಾರೆ.ಇದನ್ನೂ ಓದಿ:ಬಾಬಾ ಸಿದ್ದಿಕಿ ಹತ್ಯೆ ಪ್ರಕರಣ – ಯೂಟ್ಯೂಬ್ ನೋಡಿ ಶೂಟಿಂಗ್ ಕಲಿತಿದ್ದ ಹಂತಕರು

  • ಮಂಗನಕಾಯಿಲೆಗೆ 9 ಮಂದಿ ಸಾವು- ಶೀಘ್ರ ಪರಿಹಾರಕ್ಕಾಗಿ ಮಂಕಾಳು ವೈದ್ಯ ತಾಕೀತು

    ಮಂಗನಕಾಯಿಲೆಗೆ 9 ಮಂದಿ ಸಾವು- ಶೀಘ್ರ ಪರಿಹಾರಕ್ಕಾಗಿ ಮಂಕಾಳು ವೈದ್ಯ ತಾಕೀತು

    ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗನ ಕಾಯಿಲೆಯಿಂದ (Kyasanur Forest Disease (KFD) 9 ಜನ ಸಾವನ್ನಪ್ಪಿದ್ದು, ಶೀಘ್ರವೇ ಪರಿಹಾರ ನೀಡುವಂತೆ ಸರ್ಕಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ (Mankala Vaidya) ಆಗ್ರಹಿಸಿದ್ದಾರೆ.

    ಇಂದು ಕಾರವಾರದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಜಿಲ್ಲಾ ಉಸ್ತುವಾರಿ ಸಚಿವರು ಮಂಗನಕಾಯಿಲೆಯಿಂದ ಮೃತರಾದವರಿಗೆ ಅರಣ್ಯ ಇಲಾಖೆ ಪರಿಹಾರ ನೀಡಬೇಕು ಎಂದು ಸೂಚಿಸಿದರು.

    ಒಟ್ಟು 112 ಜನ ಅನಾರೋಗ್ಯಕ್ಕೊಳಗಾಗಿದ್ದರು. ಈ ಹಿಂದೆ ಸಾವು ಕಂಡವರಿಗೆ ಸರ್ಕಾರ ಪರಿಹಾರ ನೀಡಿತ್ತು. ಆದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾವಾದವರಿಗೆ ಯಾವುದೇ ಪರಿಹಾರ ನೀಡಿರಲಿಲ್ಲ. ಈ ಬಾರಿ ಕೂಡ 9 ಮಂದಿ ಬಲಿಯಾಗಿದ್ದಾರೆ. ಹೀಗಿದ್ದರೂ ಪರಿಹಾರ ಮಾತ್ರ ಮರೀಚಿಕೆಯಾಗಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ತೆಪ್ಪ ಮುಳುಗಿ ಮೂವರು ಪ್ರವಾಸಿಗರು ದುರ್ಮರಣ

  • ಮಲೆನಾಡನ್ನು ಬಿಟ್ಟು ಬಿಡದೆ ಕಾಡುತ್ತಿರುವ ಕೆಎಫ್‌ಡಿ – ಪ್ರಕೃತಿಯ ಮಡಿಲ ಮಕ್ಕಳ ಆತಂಕ ತಪ್ಪುವುದೆಂದು?

    ಮಲೆನಾಡನ್ನು ಬಿಟ್ಟು ಬಿಡದೆ ಕಾಡುತ್ತಿರುವ ಕೆಎಫ್‌ಡಿ – ಪ್ರಕೃತಿಯ ಮಡಿಲ ಮಕ್ಕಳ ಆತಂಕ ತಪ್ಪುವುದೆಂದು?

    ಲೆನಾಡಿಗರನ್ನು ಬಿಟ್ಟು ಬಿಡದೇ ಕಾಡುತ್ತಿರುವ ಕೆಎಫ್‌ಡಿ (Kyasanur Forest Diseas) ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಅದೇ ರೀತಿ ಈ ವರ್ಷವೂ ಮಲೆನಾಡಿನ ಜಿಲ್ಲೆಗಳಾದ ಉತ್ತರಕನ್ನಡ, ಶಿವಮೊಗ್ಗ (Shivamogga) ಹಾಗೂ ಚಿಕ್ಕಮಗಳೂರು ಭಾಗಗಳಲ್ಲಿ ಕೆಎಫ್‌ಡಿ ಹೆಚ್ಚಾಗುತ್ತಿದೆ. ಇದೀಗ ಕೆಎಫ್‌ಡಿ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದ್ದು, ಮಲೆನಾಡಿಗರನ್ನು ಮತ್ತೆ ಆತಂಕಕ್ಕೆ ಒಳಪಡಿಸಿದೆ.

    ಕೇವಲ ಆರೋಗ್ಯದ ಮೇಲಷ್ಟೇ ಅಲ್ಲದೇ, ಮಲೆನಾಡಿಗರ ಆರ್ಥಿಕತೆ, ಕೃಷಿ ಸೇರಿದಂತೆ ದಿನನಿತ್ಯದ ಕೆಲಸಗಳ ಮೇಲೆ ಕೆಎಫ್‌ಡಿ ತನ್ನ ಕರಿ ನೆರಳನ್ನು ಚೆಲ್ಲಿದೆ. ಈ ಮೂಲಕ ನೆಮ್ಮದಿಯ ಮಲೆನಾಡಿಗೆ ಆತಂಕದ ಅಲೆಯೊಂದ ಬಂದು ಅಪ್ಪಳಿಸಿದಂತಾಗಿದೆ. ಈ ವರ್ಷ ಜನವರಿಯಿಂದ ಇಲ್ಲಿಯವರೆಗೂ ಶಿವಮೊಗ್ಗದಲ್ಲಿ 39, ಉತ್ತರ ಕನ್ನಡದಲ್ಲಿ 43, ಚಿಕ್ಕಮಗಳೂರಿನಲ್ಲಿ 36 ಹಾಗೂ ಉಡುಪಿಯಲ್ಲಿ 1 ಕೆಎಫ್‌ಡಿ ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. 2019ರ ಬಳಿಕ ಇಳಿಮುಖವಾಗಿದ್ದ ಕೆಎಫ್‌ಡಿ ಸೋಂಕು ಈ ಬಾರಿ ಹಠಾತ್‌ ಏರಿಕೆ ಕಂಡಿದೆ. ಉಡುಪಿ ಜಿಲ್ಲೆಯಲ್ಲಿ ನಾಲ್ಕು ವರ್ಷಗಳ ಬಳಿಕ ಈ ಕಾಯಿಲೆ ಕಾಣಿಸಿಕೊಂಡಿದೆ. ಈ ಹಿಂದೆ 2019ರಲ್ಲಿ ಸಿದ್ದಾಪುರ ಹಾಗೂ ಬೈಂದೂರಲ್ಲಿ ಇಬ್ಬರಿಗೆ ಕಾಣಿಸಿಕೊಂಡಿತ್ತು.

    ರಾಜ್ಯದಲ್ಲಿ 120 ಸಕ್ರಿಯ ಮಂಗನ ಕಾಯಿಲೆ ಪ್ರಕರಣಗಳಿದ್ದು, ಈ ಬಾರಿ ಇದುವರೆಗೆ ನಾಲ್ವರು ಸಾವಿಗೀಡಾಗಿದ್ದಾರೆ.  ಶಿವಮೊಗ್ಗ ಹಾಗೂ ಚಿಕ್ಕಮಗಳೂರಲ್ಲಿ ತಲಾ ಒಂದು ಹಾಗೂ ಉತ್ತರ ಕನ್ನಡದಲ್ಲಿ ಇಬ್ಬರು ರೋಗದಿಂದ ಮೃತಪಟ್ಟಿದ್ದಾರೆ.

    ಏನಿದು ಕೆಎಫ್‌ಡಿ?: ಮಂಗನ ಜ್ವರವನ್ನು ಕ್ಯಾಸನೂರು ಫಾರೆಸ್ಟ್‌ ಡಿಸೀಸಸ್‌ (ಕೆಎಫ್‌ಡಿ) ಎನ್ನಲಾಗುತ್ತದೆ. ಈ ರೋಗವು  ಕೆಎಫ್‌ಡಿ ಸೋಂಕಿತ ಉಣ್ಣೆಗಳ ಕಡಿತದಿಂದ ಮಂಗಗಳಿಗೆ, ವಿಶೇಷವಾಗಿ ಲಾಂಗರ್‌ಗಳು ಮತ್ತು ಬಾನೆಟ್ ಮಕಾಕ್‌ಗಳಿಗೆ ಅರಣ್ಯ ಪ್ರದೇಶಗಳಲ್ಲಿ ಹರಡುತ್ತದೆ. ಸೋಂಕಿತ ಮಂಗಗಳು ಅರಣ್ಯ ಪ್ರದೇಶಗಳ ಮೂಲಕ ಚಲಿಸಿದಾಗ ಅವು ವೈರಸ್ ಇತರ ಉಣ್ಣೆಗಳಿಗೆ ಸಹ ಹರಡುತ್ತವೆ.

    ಈ ಸೋಂಕಿತ ಉಣ್ಣೆ ಕಚ್ಚುವುದರಿಂದ ಹಾಗೂ ಸೋಂಕಿತ ಪ್ರಾಣಿಗಳ ಸಂಪರ್ಕದಿಂದ ಮನುಷ್ಯನಿಗೆ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಕಲುಷಿತ ವಸ್ತುಗಳನ್ನು ಸ್ಪರ್ಶಿಸುವ ಮೂಲಕ ಅಥವಾ ಸೋಂಕಿತ ಪ್ರಾಣಿಗಳಿಂದ ಪಾಶ್ಚರೀಕರಿಸದ ಹಾಲನ್ನು ಸೇವಿಸುವ ಮೂಲಕವೂ ಸೋಂಕು ಸಂಭವಿಸಬಹುದು. ಆದರೆ ಮನುಷ್ಯರಿಂದ ಮನುಷ್ಯರಿಗೆ ರೋಗ ಹರಡುವುದು ಅಪರೂಪ.

    ಮಂಗನ ಕಾಯಿಲೆ ಲಕ್ಷಣಗಳು: ಚಳಿ ಜ್ವರ, ತಲೆನೋವು, ಸ್ನಾಯು ಸೆಳತ, ವಾಂತಿ ಮತ್ತು ರಕ್ತಸ್ರಾವ, ತೀವ್ರತರವಾದ ಪ್ರಕರಣಗಳಲ್ಲಿ, ನರಮಂಡಲದ ಸಮಸ್ಯೆಗಳು ಎದುರಾಗುತ್ತದೆ. ಈ ಹಂತದಲ್ಲಿ ಪ್ಯಾರಾಸಿಟಮಲ್ ಮಾತ್ರೆ ಹೊರತಾಗಿ ಸ್ಟಿರಾಯ್ಡ್, ಡೈಕ್ಲೋಫಿನ್ ಚುಚ್ಚುಮದ್ದು ತೆಗೆದುಕೊಳ್ಳಬಾರದು ಎಂಬುದು ವೈದ್ಯರ ಸಲಹೆ.

    ಮೊದಲ ಹಂತದಲ್ಲಿ ಚೇತರಿಸಿಕೊಳ್ಳದ ರೋಗಿಗಳಿಗೆ ಎರಡನೇ ಹಂತದಲ್ಲಿ ಬಿಳಿರಕ್ತ ಕಣಗಳು ಕಡಿಮೆಯಾಗಿ ತೀವ್ರ ರಕ್ತಸ್ರಾವವಾಗುತ್ತದೆ. ಈ ಹಂತದಲ್ಲಿ ಕಾಯಿಲೆ ಉಲ್ಬಣಗೊಂಡರೆ ಕಿಡ್ನಿ ವೈಫಲ್ಯ ಸೇರಿದಂತೆ ಅಂಗಾಂಗಗಳು ವೈಫಲ್ಯವಾಗಿ ರೋಗಿ ಮರಣ ಹೊಂದುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. 

    ಕೆಎಫ್‌ಡಿ ಕಬಂಧ ಬಾಹು: ಐದು ವರ್ಷಗಳಲ್ಲಿ 24 ಜನ ಕೆಎಫ್‌ಡಿಯಿಂದ ಸಾವಿಗೀಡಾಗಿದ್ದಾರೆ. 2019ರಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ 12 ಮಂದಿ ಕೆಎಫ್‌ಡಿ ಸೋಂಕಿಗೆ ಬಲಿಯಾಗಿದ್ದರು. ಅಲ್ಲದೇ 344 ಜನರಲ್ಲಿ ಸೋಂಕು ದೃಢಪಟ್ಟಿತ್ತು. ಉತ್ತರ ಕನ್ನಡ ಜಿಲ್ಲೆಯ 85 ಜನರಿಗೆ ಸೋಂಕು ಕಾಣಿಸಿಕೊಂಡಿತ್ತು. ಇದರಲ್ಲಿ 3 ಜನ ಸಾವಿಗೀಡಾಗಿದ್ದರು. ಉಡುಪಿಯಲ್ಲಿ ಇಬ್ಬರು, ಮೈಸೂರು, ಬೆಳಗಾವಿ, ಚಿಕ್ಕಮಗಳೂರು ಹಾಗೂ ಹಾವೇರಿಯಲ್ಲಿ ಕ್ರಮವಾಗಿ ಒಬ್ಬರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಇನ್ನೂ 2020ರಲ್ಲಿ ಶಿವಮೊಗ್ಗದಲ್ಲಿ 184 ಪ್ರಕರಣ ಕಾಣಿಸಿಕೊಂಡಿತ್ತು. ನಾಲ್ಕು ಜನ ಸಾವಿಗೀಡಾಗಿದ್ದರು.ಉತ್ತರ ಕನ್ನಡ ಜಿಲ್ಲೆಯಲ್ಲಿ 91 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಈ ಜಿಲ್ಲೆಯಲ್ಲಿ ಒಬ್ಬರು ಮೃತಪಟ್ಟಿದ್ದರು. ಚಿಕ್ಕಮಗಳೂರಿನಲ್ಲಿ 12 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು. 2021ರಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ 13, ಚಿಕ್ಕಮಗಳೂರು ಜಿಲ್ಲೆಯಲ್ಲಿ 2, ಉತ್ತರ ಕನ್ನಡ ಜಿಲ್ಲೆಯಲ್ಲಿ 8 ಪ್ರಕರಣಗಳು ಪತ್ತೆಯಾಗಿದ್ದವು. 2022ರಲ್ಲಿ ಶಿವಮೊಗ್ಗದಲ್ಲಿ 35 ಪಾಸಿಟಿವ್ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ 14 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿತ್ತು. ಎರಡೂ ಜಿಲ್ಲೆಗಳಲ್ಲಿ ಒಬ್ಬೊಬ್ಬರು ಸಾವನ್ನಪ್ಪಿದ್ದರು. 2023ರಲ್ಲಿ ಶಿವಮೊಗ್ಗ 15, ಚಿಕ್ಕಮಗಳೂರು 2 ಜನರಿಗೆ ಸೋಕು ಕಾಣಿಸಿಕೊಂಡಿತ್ತು.

    ಇನ್ನೂ ಇತ್ತೀಚೆಗೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ (Dinesh Gundu Rao) ಅವರು, ಒಂದು ವರ್ಷದೊಳಗೆ ಸೂಕ್ತ ಔಷಧವನ್ನು ಸರ್ಕಾರ ಒದಗಿಸಲಿದೆ ಎಂದು ಭರವಸೆಯನ್ನು ನೀಡಿದ್ದರು.

  • ಶಿವಮೊಗ್ಗದಲ್ಲಿ ಮತ್ತೆ ಕಾಣಿಸಿದ ಮಂಗನ ಜ್ವರ

    ಶಿವಮೊಗ್ಗದಲ್ಲಿ ಮತ್ತೆ ಕಾಣಿಸಿದ ಮಂಗನ ಜ್ವರ

    ಶಿವಮೊಗ್ಗ: ಕಳೆದ ವರ್ಷ ನಿದ್ದೆಗೆಡಿಸಿದ್ದ ಮಂಗನ ಕಾಯಿಲೆ ಇದೀಗ ಮಲೆನಾಡಿಗೆ ಮತ್ತೊಮ್ಮೆ ಕಾಲಿಟ್ಟಿದೆ.

    ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ತೋಟದ ಕೊಪ್ಪ ಗ್ರಾಮದಲ್ಲಿ ಕಳೆದೊಂದು ವಾರದಿಂದ ಜ್ವರದಿಂದ ಬಳಲುತ್ತಿದ್ದ ತಿಮ್ಮಪ್ಪ ಎಂಬ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ರಕ್ತ ಪರೀಕ್ಷಿಸಿದಾಗ ಮಂಗನ ಕಾಯಿಲೆ ಇರೋದು ದೃಢಪಟ್ಟಿದೆ.

    ವಿಷಯ ತಿಳಿಯುತ್ತಿದ್ದಂತೆ ಆರೋಗ್ಯ ಇಲಾಖೆ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ನಂತರ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿರೋ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಜಿಲ್ಲೆಯಲ್ಲಿ ಇದೂವರೆಗೆ ಯಾವುದೇ ಮಂಗನ ಕಾಯಿಲೆ ಪತ್ತೆಯಾಗಿಲ್ಲ. ತೋಟದ ಕೊಪ್ಪದ ವ್ಯಕ್ತಿಯ ರಕ್ತದ ಮಾದರಿಯನ್ನು ಸಂಗ್ರಹಿಸಿ ಮತ್ತೊಮ್ಮೆ ಪರೀಕ್ಷೆಗೆ ಕಳುಹಿಸಲಾಗಿದೆ. ಈಗಾಗಲೇ ಹಲವೆಡೆ ಚುಚ್ಚುಮದ್ದು ಲಸಿಕೆ ಹಾಕುವ ಕಾರ್ಯ ಸಹ ನಡೆಯುತ್ತಿದೆ. ಹೀಗಾಗಿ ಮಂಗನ ಕಾಯಿಲೆ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಏನಿದು ಮಂಗನ ಜ್ವರ? ಕಾಯಿಲೆ ಹೇಗೆ ಬರುತ್ತೆ? ರೋಗ ಲಕ್ಷಣ ಏನು? ಚಿಕಿತ್ಸೆ ಹೇಗೆ- ಇಲ್ಲಿದೆ ಸಂಪೂರ್ಣ ಮಾಹಿತಿ