Tag: Kuvempu University

  • ಮಗಳ ಹುಟ್ಟುಹಬ್ಬಕ್ಕೆ ಸುತ್ತೋಲೆ ಹೊರಡಿಸಿದ ಕುವೆಂಪು ವಿವಿ ಕುಲಪತಿ – ನೆಟ್ಟಿಗರಿಂದ ಕ್ಲಾಸ್‌

    ಮಗಳ ಹುಟ್ಟುಹಬ್ಬಕ್ಕೆ ಸುತ್ತೋಲೆ ಹೊರಡಿಸಿದ ಕುವೆಂಪು ವಿವಿ ಕುಲಪತಿ – ನೆಟ್ಟಿಗರಿಂದ ಕ್ಲಾಸ್‌

    ಶಿವಮೊಗ್ಗ: ಮಗಳ ಹುಟ್ಟುಹಬ್ಬಕ್ಕೆ ಸುತ್ತೋಲೆ ಹೊರಡಿಸಿದ ಮಾದರಿಯಲ್ಲಿ ಅತಿಥಿಗಳಿಗೆ ಆಹ್ವಾನ ನೀಡಿರುವ ಕುವೆಂಪು ವಿಶ್ವವಿದ್ಯಾನಿಲಯದ (Kuvempu University) ಕುಲಪತಿ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ.

    ತಮ್ಮ ಖಾಸಗಿ ಕಾರ್ಯಕ್ರಮಗಳಿಗೆ ಯಾವುದೇ ರಾಜಕಾರಣಿ ಆಗಿರಲಿ, ಸರ್ಕಾರಿ ಉನ್ನತ ಅಧಿಕಾರಿಯೇ ಆಗಿರಲಿ ಖಾಸಗಿಯಾಗಿಯೇ ಆಹ್ವಾನ ನೀಡುತ್ತಾರೆಯೇ ಹೊರತು, ಸರ್ಕಾರದ ಲೆಟರ್‌ಹೆಡ್‌ನ್ನು ದುರ್ಬಳಕೆ ಮಾಡಿಕೊಳ್ಳುವುದಿಲ್ಲ. ಆದರೆ ಕುವೆಂಪು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಬಿ.ಪಿ.ವೀರಭದ್ರಪ್ಪ ತಮ್ಮ ಮಗಳ ಹುಟ್ಟುಹಬ್ಬಕ್ಕೆ ಸರ್ಕಾರದ ಲೆಟರ್‌ಹೆಡ್‌ನಲ್ಲಿ ಸುತ್ತೋಲೆ ಹೊರಡಿಸಿ ಆಹ್ವಾನ ನೀಡಿ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ. ಇದನ್ನೂ ಓದಿ: ಮನೆಯಲ್ಲಿ ಅತ್ತೆ-ಸೊತೆ ಇದ್ರೆ ಯಾರಿಗೆ ದುಡ್ಡು ಹಾಕಬೇಕು, ಮನೆ ಯಜಮಾನಿ ಯಾರು? – ಗ್ಯಾರಂಟಿ ಬಗ್ಗೆ ಡಿಕೆಶಿ ಮಾತು

    ವಿವಿಯ ಕುಲಪತಿ‌ ಹೊರಡಿಸಿರುವ ಸುತ್ತೋಲೆ ಪತ್ರ ಎಲ್ಲೆಡೆ ವೈರಲ್ ಆಗಿದ್ದು, ಪರ-ವಿರೋಧಗಳ ಮಾತು ಕೇಳಿಬರುತ್ತಿದೆ. ಅಲ್ಲದೆ ಈ  ಮೂಲಕ ಕುಲಪತಿಯವರು ಎಡವಟ್ಟು ಮಾಡಿದ್ದಾರೆ ಎಂಬ ದೂರು ಕೇಳಿಬಂದಿದೆ.

    ಕುವೆಂಪು ವಿಶ್ವವಿದ್ಯಾನಿಲಯದ ಲೋಗೋ ಇರುವ ಸರ್ಕಾರಿ ಲೆಟರ್‌ನಲ್ಲಿ ಸುತ್ತೋಲೆ ಹೊರಡಿಸಿರುವ ಅವರು ಎಲ್ಲಾ ಅಧ್ಯಾಪಕರು, ಅಧ್ಯಾಪಕೇತರರು, ಅತಿಥಿ ಉಪನ್ಯಾಸಕರು, ಏಜೆನ್ಸಿ ಸಿಬ್ಬಂದಿ ತಮ್ಮ ಮನೆಯ ಖಾಸಗಿ ಸಮಾರಂಭಕ್ಕೆ ಖುದ್ದಾಗಿ ಹಾಜರಾಗುವಂತೆ ತಿಳಿಸಿದ್ಧಾರೆ. ಇದು ಫರ್ಮಾನು ಹೊರಡಿಸಿದ ರೀತಿಯಲ್ಲಿದೆ ಎಂಬ ಟೀಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಶವಸಂಸ್ಕಾರದ ವೇಳೆ ಕೊಲೆ ಶಂಕೆ ಪ್ರಕರಣಕ್ಕೆ ಟ್ವಿಸ್ಟ್ – ಪತ್ನಿಯೇ ಮಾಸ್ಟರ್‌ಮೈಂಡ್

  • ಜುಲೈ ಅಂತ್ಯದ ವೇಳೆಗೆ ಕುವೆಂಪು ವಿವಿ ಘಟಿಕೋತ್ಸವ

    ಜುಲೈ ಅಂತ್ಯದ ವೇಳೆಗೆ ಕುವೆಂಪು ವಿವಿ ಘಟಿಕೋತ್ಸವ

    – ರಾಜ್ಯಪಾಲರ ಸಮ್ಮತಿ, ಸಿಂಡಿಕೇಟ್ ಅನುಮೋದನೆ

    ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ 30ನೇ ಘಟಿಕೋತ್ಸವ ನಡೆಸಲು ರಾಜ್ಯಪಾಲರು ಸಮ್ಮತಿಸಿದ್ದು, ಜಿಲ್ಲಾಧಿಕಾರಿಗಳು ಅನುಮತಿ ನೀಡಿದರೆ ಜುಲೈ 28 ಅಥವಾ 29 ರಂದು ಆಂತರಿಕವಾಗಿ ಘಟಿಕೋತ್ಸವವನ್ನು ಆಯೋಜಿಸಲು ಸಿಂಡಿಕೇಟ್ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕುಲಪತಿ ಪ್ರೊ.ಬಿ.ಪಿ. ವೀರಭದ್ರಪ್ಪ ತಿಳಿಸಿದ್ದಾರೆ.

    ಜುಲೈ 09 ರಂದು ನಡೆದ ಸಿಂಡಿಕೇಟ್ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿದ್ದು, ಈ ವರ್ಷದ ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ನಡೆಯಬೇಕಿದ್ದ ಘಟಿಕೋತ್ಸವ ಕೋವಿಡ್-19ರ ಕಾರಣದಿಂದ ವಿಳಂಬವಾಗಿದೆ. ಈ ಕುರಿತು ವಿಶ್ವವಿದ್ಯಾಲಯ ಸಲ್ಲಿಸಿದ ಮನವಿಗೆ ಸ್ಪಂದಿಸಿದ ರಾಜ್ಯಪಾಲ ವಜುಭಾಯಿ ವಾಲಾ ಅವರು ಸೂಕ್ತ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಿ ಘಟಿಕೋತ್ಸವ ಆಯೋಜಿಸಲು ಸಮ್ಮತಿ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಿಂಗಳ ಅಂತ್ಯದ ವೇಳೆಗೆ ಘಟಿಕೋತ್ಸವ ಆಯೋಜಿಸಲು ಸಿಂಡಿಕೇಟ್ ಸದಸ್ಯರು ಸಹಮತ ವ್ಯಕ್ತಪಡಿಸಿದ್ದಾರೆ. ಅನುಮತಿಗಾಗಿ ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಪತ್ರ ಬರೆಯಲಾಗಿದೆ ಎಂದರು.

    ಕೋವಿಡ್ ಸೋಂಕು ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಅನುಮತಿಸಿದಲ್ಲಿ ಈ ಬಾರಿಯ ಘಟಿಕೋತ್ಸವವನ್ನು ಇನ್ ಹೌಸ್ ಮಾದರಿಯಲ್ಲಿ (ಆಂತರಿಕವಾಗಿ) ಆಯೋಜಿಸಲಾಗುವುದು. ಸುಮಾರು ಒಂದು ಸಾವಿರ ಸಭಿಕರು ಭಾಗವಹಿಸಬಹುದಾದ ವಿಶ್ವವಿದ್ಯಾಲಯದ ಹೊಸ ಘಟಿಕೋತ್ಸವ ಸಭಾಂಗಣದಲ್ಲಿ ದೈಹಿಕ ಅಂತರವನ್ನು ಕಾಯ್ದುಕೊಂಡು ಸರ್ಕಾರದ ಮಾರ್ಗದರ್ಶಿ ಸೂತ್ರಗಳ ಅನ್ವಯ ಘಟಿಕೋತ್ಸವವನ್ನು ನಡೆಸಲಾಗುವುದು. ರ‌್ಯಾಂಕ್ ವಿಜೇತರು, ಪಿಎಚ್‍ಡಿ ಪದವೀಧರರು, ಗೌರವ ಡಾಕ್ಟರೇಟ್ ಪಡೆದವರು, ಸಿಂಡಿಕೇಟ್ ಸದಸ್ಯರು, ಶೈಕ್ಷಣಿಕ ಮಂಡಳಿ ಸದಸ್ಯರು ಮತ್ತು ವಿಶ್ವವಿದ್ಯಾಲಯದ ಸಿಬ್ಬಂದಿ ಒಳಗೊಂಡಂತೆ ಸುಮಾರು 500 ಮಂದಿ ಮಾತ್ರ ಭಾಗವಹಿಸಬಹುದಾಗಿದ್ದು, ಪೋಷಕರು ಮತ್ತು ಸಾರ್ವಜನಿಕರಿಗೆ ಪ್ರವೇಶವಿರುವುದಿಲ್ಲ ಎಂದು ತಿಳಿಸಿದರು.

  • ಕುವೆಂಪು ವಿವಿ ಪರೀಕ್ಷಾ ಶುಲ್ಕ ಪಾವತಿ ಕೊನೆಯ ದಿನಾಂಕ ಜು.07 ರವರೆಗೆ ವಿಸ್ತರಣೆ

    ಕುವೆಂಪು ವಿವಿ ಪರೀಕ್ಷಾ ಶುಲ್ಕ ಪಾವತಿ ಕೊನೆಯ ದಿನಾಂಕ ಜು.07 ರವರೆಗೆ ವಿಸ್ತರಣೆ

    ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಸೆಮಿಸ್ಟರ್ ಪರೀಕ್ಷಾ ಶುಲ್ಕ ಭರಿಸಲು ನೀಡಲಾಗಿದ್ದ ಕೊನೆಯ ದಿನಾಂಕವನ್ನು ಜುಲೈ 07ರ ವರೆಗೆ ವಿಸ್ತರಿಸಲಾಗಿದೆ.

    ವಿವಿಯ ಎಲ್ಲ ಸ್ನಾತಕೋತ್ತರ ಪದವಿ ಪರೀಕ್ಷೆಗಳಿಗೆ ಶುಲ್ಕ ಭರಿಸಲು ಈ ಹಿಂದೆ ಜೂನ್ 23ರಂದು ಕೊನೆಯ ದಿನಾಂಕ ನಿಗಧಿ ಮಾಡಲಾಗಿತ್ತು. ಕೋವಿಡ್-19ನ ಸಂಕಷ್ಟದ ಸಮಯದಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಎಲ್ಲ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಯಾವುದೇ ವಿಳಂಬ ಶುಲ್ಕವಿಲ್ಲದೆ ಪರೀಕ್ಷಾ ಶುಲ್ಕ ಭರಿಸಲು ಜುಲೈ 07ರ ವರೆಗೆ ಕಾಲಾವಕಾಶ ನೀಡಲಾಗಿದೆ.

    ಇನ್ನುಳಿದಂತೆ ಬಿ.ಎ., ಬಿ.ಎಸ್ಸಿ., ಬಿ.ಕಾಂ., ಬಿ.ಬಿ.ಎಂ., ಬಿ.ಬಿ.ಎ., ಬಿ.ಟಿ.ಎ., ಬಿ.ಸಿ.ಎ., ಬಿ.ಎಸ್.ಡಬ್ಲ್ಯೂ., ಬಿ.ಎಸ್ಸಿ. (ಆನರ್ಸ್), ಬಿ.ಎಡ್., ಹಾಗೂ ಬಿ.ಪಿ.ಎಡ್. ಸ್ನಾತಕ ಪದವಿಗಳ ಪರೀಕ್ಷೆಗೆ ಶುಲ್ಕ ಭರಿಸಲು ಈಗಾಗಲೇ ಅವಧಿ ಮುಕ್ತಾಯವಾಗಿದ್ದು, ಇದುವರೆವಿಗೂ ಶುಲ್ಕ ಪಾವತಿಸದ ವಿದ್ಯಾರ್ಥಿಗಳು ಕೂಡ ಜುಲೈ 07 ರವರೆಗೆ ಪರೀಕ್ಷಾ ಶುಲ್ಕ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಪರೀಕ್ಷಾಂಗ ಕುಲಸಚಿವ ಪ್ರೊ. ಎಂ.ವೆಂಕಟೇಶ್ವರಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯು.ಜಿ.ಸಿ.)ದ ನಿಬಂಧನೆಗಳಿಗೆ ಒಳಪಟ್ಟು ಪರೀಕ್ಷಾ ಶುಲ್ಕ ಪಾವತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಯಾವುದೇ ವಿದ್ಯಾರ್ಥಿಗೆ ಪರೀಕ್ಷಾ ಶುಲ್ಕ ಭರಿಸಲು ತಾಂತ್ರಿಕ ಅಥವಾ ಇನ್ನಿತರೆ ಸಮಸ್ಯೆಗಳಿದ್ದಲ್ಲಿ ವಿವಿಯ ಪರೀಕ್ಷಾಂಗ ಕುಲಸಚಿವರ ಅನುಮತಿಯ ಮೇರೆಗೆ ಪರೀಕ್ಷಾ ಶುಲ್ಕ ಪಾವತಿಸಬಹುದು ಎಂದು ತಿಳಿಸಿದ್ದಾರೆ.

    ಪರೀಕ್ಷೆಗಳನ್ನು ನಡೆಸಲು ವಿಶ್ವವಿದ್ಯಾಲಯ ಸಂಪೂರ್ಣ ಸನ್ನದ್ಧವಾಗಿದೆ. ಸರ್ಕಾರದ ಸೂಚನೆ ಬಂದ ಬಳಿಕ ವಿದ್ಯಾರ್ಥಿಗಳಿಗೆ ಸೂಕ್ತ ಕಾಲಾವಕಾಶ ನೀಡಿ ಪರೀಕ್ಷೆಗಳನ್ನು ನಡೆಸಲಾಗುವುದು. ಆದ್ದರಿಂದ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕವನ್ನು ಎಂದಾದರೂ ಪಾವತಿಸಲೇಬೇಕು. ಈ ವಿಷಯದಲ್ಲಿ ಯಾವುದೇ ರೀತಿಯ ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

  • ಕುವೆಂಪು ವಿವಿ ಜಾಗತಿಕ ಮಟ್ಟದಲ್ಲಿ ಸ್ಥಾನಮಾನ ಪಡೆಯಬೇಕು: ರಾಘವೇಂದ್ರ

    ಕುವೆಂಪು ವಿವಿ ಜಾಗತಿಕ ಮಟ್ಟದಲ್ಲಿ ಸ್ಥಾನಮಾನ ಪಡೆಯಬೇಕು: ರಾಘವೇಂದ್ರ

    – ಕೇಂದ್ರ, ರಾಜ್ಯ ಸರ್ಕಾರಗಳಿಂದ ಅಗತ್ಯ ನೆರವು ಕೊಡಿಸಲು ಸಿದ್ಧ

    ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯ ಜಾಗತಿಕ ಮಟ್ಟದ ಸ್ಥಾನಮಾನ ಹೊಂದಬೇಕು. ಅದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಅಗತ್ಯ ನೆರವು, ಸಹಕಾರ ಕೊಡಿಸುವುದಾಗಿ ಸಂಸದ ಬಿ.ವೈ.ರಾಘವೇಂದ್ರ ಭರವಸೆ ನೀಡಿದ್ದಾರೆ.

    ಕುವೆಂಪು ವಿಶ್ವವಿದ್ಯಾಲಯದ ಮೈದಾನದಲ್ಲಿ ನಡೆದ ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾಲಯಗಳ ಮಟ್ಟದ ಖೋ-ಖೋ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು. ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾಲಯ ಮಟ್ಟದ ಖೋ-ಖೋ ಪಂದ್ಯಾವಳಿಯಲ್ಲಿ ವಿವಿಗಳ 50 ಅಧಿಕಾರಿಗಳೊಂದಿಗೆ 16 ತಂಡಗಳ 200ಕ್ಕೂ ಹೆಚ್ಚಿನ ಕ್ರೀಡಾಪಟುಗಳು ಭಾಗವಹಿಸುತ್ತಿರುವುದು ಸಂತಸದ ಸಂಗತಿಯಾಗಿದೆ. ಖೋ-ಖೋ ಸರಳ, ಬೌದ್ಧಿಕ ಕೌಶಲ್ಯ ಹೆಚ್ಚಿಸುವ ಹಾಗೂ ಮನರಂಜನೆಯ ಆಟವಾಗಿದೆ. ಯಾವುದೇ ಕ್ರೀಡೆ ಮಾನಸಿಕ ಮತ್ತು ಬೌದ್ಧಿಕ ವಿಕಾಸಕ್ಕೆ ಪೂರಕವಾಗಿದೆ. ಯುವ ಸಮೂಹದ ಸದ್ಬಳಕೆಯಾಗಬೇಕಾದರೆ ಸದೃಢ ಮನಸ್ಸುಗಳು ತಯಾರಾಗಬೇಕು. ಆರೋಗ್ಯಕರ ದೇಹದಲ್ಲಿ ಮಾತ್ರ ಸದೃಢ ಮನಸ್ಸು ಕಾಣಲು ಸಾಧ್ಯ ಕಿವಿ ಮಾತು ಹೇಳಿದರು.

    ಅತಿಹೆಚ್ಚು ಯುವಶಕ್ತಿ ಹೊಂದಿದ ರಾಷ್ಟ್ರ ನಮ್ಮದು, ಈ ದೇಶದ ಭವಿಷ್ಯ ಯುವಜನತೆಯನ್ನು ಅವಲಂಬಿಸಿದೆ. ದೇಶದ ಹಲವು ಪ್ರತಿಷ್ಠಿತ ವಿವಿಗಳಲ್ಲಿ ಕುವೆಂಪು ವಿಶ್ವವಿದ್ಯಾಲಯ ಗುರುತಿಸಿಕೊಂಡಿರುವುದು ಹರ್ಷದ ಸಂಗತಿಯಾಗಿದೆ. ವಿವಿ ಪಠ್ಯ ಚಟುವಟಿಕೆಗಳೊಂದಿಗೆ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡಿರುವುದು ವಿಶೇಷವಾಗಿದೆ. ಹೀಗಾಗಿ ದಶಕಗಳ ನಂತರ ದಕ್ಷಿಣ ವಲಯ ಮಟ್ಟದ ಖೋ-ಖೋ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

    ವಿದ್ಯಾರ್ಥಿಗಳು ಕೇವಲ ಪ್ರಮಾಣ ಪತ್ರಕ್ಕಾಗಿ ಓದದೇ ಭವಿಷ್ಯದ ಭವ್ಯ ಬದುಕಿನ ಬಗ್ಗೆಯೂ ಯೋಚಿಸಬೇಕಾದ ಅಗತ್ಯವಿದೆ. ದೇಶದ ಪ್ರಧಾನಿ ಮೋದಿಯವರ ಫಿಟ್ ಇಂಡಿಯಾ ಕಲ್ಪನೆ ವ್ಯಕ್ತಿ ಹಾಗೂ ದೇಶದ ವಿಕಾಸಕ್ಕೆ ಹೊಸ ಭಾಷ್ಯ ಬರೆದಂತಾಗಿದೆ ಎಂದರು.

    ಕಾರ್ಯಕ್ರಮದಲ್ಲಿ ವಿವಿಯ ಕುಲಪತಿ ಡಾ. ಬಿ.ಪಿ.ವೀರಭದ್ರಪ್ಪ, ಕುಲಸಚಿವ ಡಾ.ಎಸ್.ಎಸ್.ಪಾಟೀಲ್, ಅರ್ಜುನ ಪ್ರಶಸ್ತಿ ವಿಜೇತ ಕ್ರೀಡಾಪಟು ಶೋಭಾ ನಾರಾಯಣ್, ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಕೆ.ಪಿ.ಪುರುಷೋತ್ತಮ, ವೆಂಕಟೇಶ್ವರಲು, ಎಸ್.ಎಂ.ಪ್ರಕಾಶ್, ಜ್ಯೋತಿ ಪ್ರಕಾಶ್, ಎನ್.ಡಿ.ವಿರೂಪಾಕ್ಷ, ಪ್ರೊ.ರಮೇಶ್, ಕಾಂತರಾಜು ಇದ್ದರು.

  • ಕುವೆಂಪು ವಿವಿ ವೆಬ್ ಸೈಟ್ ಹ್ಯಾಕ್ – ಪಾಕಿಸ್ತಾನ ಪರ ಘೋಷಣೆ

    ಕುವೆಂಪು ವಿವಿ ವೆಬ್ ಸೈಟ್ ಹ್ಯಾಕ್ – ಪಾಕಿಸ್ತಾನ ಪರ ಘೋಷಣೆ

    ಶಿವಮೊಗ್ಗ: ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಶಿವಮೊಗ್ಗದ ಕುವೆಂಪು ವಿವಿಯ ಅಧಿಕೃತ ವೆಬ್ ಸೈಟ್ ಹ್ಯಾಕ್ ಮಾಡಲಾಗಿದೆ.

    http://www.kuvempu.ac.in ಹೆಸರಿನ ಈ ವೆಬ್ ಪುಟದಲ್ಲಿ ಕುವೆಂಪು ಅವರ ಭಾವಚಿತ್ರ, ವಿಶ್ವಮಾನವ ಸಂದೇಶ ಹಾಗೂ ವಿವಿಯ ಚಟುವಟಿಕೆಗಳ ಮಾಹಿತಿ ಇತ್ತು. ಆದರೆ ಇಂದು ಬೆಳಗ್ಗೆ ವೆಬ್‍ಸೈಟ್ ಪೇಜ್ ನಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆ ಜೊತೆಗೆ ಸೆಕ್ಯುರಿಟಿ ಈಸ್ ಜಸ್ಟ್ ಫ್ಯಾಂಟಸಿ ಎಂಬ ವಾಕ್ಯಗಳು ಕಂಡು ಬಂದಿವೆ.

    ಈ ಕುರಿತು ಹಂಟರ್ ಬುಜ್ವಾ ಎಂಬ ಹ್ಯಾಕರ್ ತಂಡವು ತಮ್ಮ ಕೃತ್ಯ ಎಂದು ಹೇಳಿಕೊಂಡಿದೆ. ಇದನ್ನು ತಮ್ಮ ಫೇಸ್ ಬುಕ್ ನಲ್ಲೂ ಕುವೆಂಪು ವಿವಿ ವೆಬ್ ಸೈಟ್ ಹ್ಯಾಕ್ ಮಾಡಿರುವುದಾಗಿ ಪ್ರಕಟಿಸಿದೆ. ಕಾಲೇಜು ದಾಖಲಾತಿ ನಡೆಯುತ್ತಿರುವುದರಿಂದ ವೆಬ್ ಸೈಟ್ ಹ್ಯಾಕ್ ಆಗಿರುವುದು ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಆತಂಕ ಮೂಡಿಸಿತ್ತು. ವಿವಿಯ ಐಟಿ ತಂಡ ವೆಬ್ ಸೈಟ್ ಡೌನ್ ಮಾಡಿ, ಮಾಹಿತಿಯ ಪುನರ್ ಪರಿಶೀಲನೆ ಮಾಡಿ ಮಧ್ಯಾಹ್ನದ ವೇಳೆಗೆ ಸರಿಪಡಿಸಿದೆ.

    ಈ ಬಗ್ಗೆ ವಿವಿ ಕುಲಪತಿ ಜೋಗರ್ ಶಂಕರ್ ಶಿವಮೊಗ್ಗ ಸೈಬರ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ತನಿಖೆಯ ನಂತರವಷ್ಟೇ ಈ ಹ್ಯಾಕ್ ಮಾಡಿರುವುದು ನಿಜವಾಗಿಯೂ ಪಾಕಿಸ್ತಾನಿ ಹ್ಯಾಕರ್ ಗಳೇ ಅಥವಾ ಸ್ಥಳೀಯರೇ ಎಂಬುದು ತಿಳಿಯಲಿದೆ.

  • ಬುರ್ಕಾ V/S ಕೇಸರಿ ಶಾಲು: ಕ್ಯಾಂಪಸ್‍ನಲ್ಲಿ ಸಂಘಟನೆಗಳಿಂದ ಸುದ್ದಿಗೋಷ್ಠಿ

    ಶಿವಮೊಗ್ಗ: ಮಳೆ ನಿಂತರೂ ಮಳೆ ಹನಿ ನಿಲ್ಲದು ಎಂಬ ಗಾದೆಯಂತೆ ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ವಸ್ತ್ರ ಸಂಹಿತೆ- ಬುರ್ಕಾ ವಿವಾದ ಕ್ಯಾಂಪಸ್‍ನಿಂದ ಹೊರ ಬಂದಿದ್ದು, ದಿನದಿನಕ್ಕೂ ನಾನಾ ರೂಪು ಪಡೆಯುತ್ತಿದೆ. ವಿವಿ ಆಡಳಿತ ಮಂಡಳಿ ಪರಿಸ್ಥಿತಿಯನ್ನು ಗೊಂದಲಕಾರಿ ಮಾಡಿ ಈಗ ಮೌನದ ಮೊರೆಹೋಗಿದೆ. ಕಾಲೇಜಿನ ವಿದ್ಯಾರ್ಥಿಗಳು ಕ್ಯಾಂಪಸ್ ವಿಷಯವಾಗಿ ಪತ್ರಿಕಾಗೋಷ್ಠಿ ಮಾಡಿ ಆರೋಪ- ಪ್ರತ್ಯಾರೋಪ ಮಾಡಿದರೂ ತುಟಿ ಪಿಟಿಕ್ ಎನ್ನದ ಮೌನದಲ್ಲಿ ವಿವಿ ಆಡಳಿತ ಮಂಡಳಿ ಇದೆ.

    ಎಟಿಎನ್‍ಸಿಸಿ, ಬಾಪೂಜಿ ಕಾಲೇಜು, ಎಸ್‍ಆರ್‍ಎನ್‍ಎಂ ಕಾಲೇಜುಗಳಲ್ಲಿ ಬುರ್ಕಾ ಅಥವಾ ಕೇಸರಿ ಶಾಲಿನ ವಿವಾದ, ಆಕ್ಷೇಪಗಳು ತಣ್ಣಗಾಗಿವೆ. ಪರಿಸ್ಥಿತಿ ತಿಳಿಯಾಗುತ್ತಿದೆ ಎಂದು ಭಾವಿಸುವಷ್ಟರಲ್ಲೆ ಕೆಲ ಸಂಘಟನೆಗಳು ವಿದ್ಯಾರ್ಥಿಗಳ ಪರ- ವಿರೋಧ ವಕಾಲತ್ತು ವಹಿಸತೊಡಗಿವೆ.

    ಸಹ್ಯಾದ್ರಿ ಕಾಲೇಜಿನಲ್ಲಿ ಇಂದೂ ಕೂಡಾ ಪೊಲೀಸರ ಬಿಗಿ ಭದ್ರತೆಯಲ್ಲಿ ತರಗತಿಗಳು ನಡೆದವು. ಬುರ್ಕಾ ಧರಿಸಿದ್ದ ವಿದ್ಯಾರ್ಥಿಗಳು ಹಾಗೂ ಕೇಸರಿ ಶಾಲು, ಶರ್ಟ್ ತೊಟ್ಟ ವಿದ್ಯಾರ್ಥಿಗಳೂ ಕಂಡು ಬಂದರು. ಕ್ಯಾಂಪಸ್‍ನಲ್ಲಿ ಕೇಸರಿ ತೊಟ್ಟು ಅಡ್ಡಾಡುತ್ತಿದ್ದ ವಿದ್ಯಾರ್ಥಿಗಳನ್ನು ಪ್ರಾಂಶುಪಾಲ ಪ್ರೊ.ಗೌಡರ ಶಿವಣ್ಣವರೇ ಏಕಾಂಗಿಯಾಗಿ ಗದರಿಸಿ, ತರಗತಿಗೆ ಹೋಗುವಂತೆ ತಾಕೀತು ಮಾಡುತ್ತಿದ್ದರು. ಇವರ ಬೆಂಬಲಕ್ಕೆ ಕಾಲೇಜಿನ ಒಬ್ಬನೇ ಒಬ್ಬ ಉಪನ್ಯಾಸಕ ಬರಲಿಲ್ಲ.

    ಈ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯ ನಡೆದಿದೆ. ಪೊಲೀಸರು ಈ ಬಗ್ಗೆ ಕ್ರಮಕೈಗೊಂಡಿಲ್ಲ ಎಂದು ಕೆಲ ವಿದ್ಯಾರ್ಥಿನಿಯರು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ಮಾಡಿದರು. ಕ್ಯಾಂಪಸ್ ನಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ನಮಗೆ ಕಾಲೇಜಿಗೆ ಹೋಗಲು ಆತಂಕವಾಗುತ್ತಿದೆ ಎಂದರು. ಬುರ್ಕಾ ಧರಿಸಿ ಬರುವುದು ನಮ್ಮ ಹಕ್ಕು. ಇದನ್ನು ಯಾರೂ ಪ್ರಶ್ನಿಸುವಂತಿಲ್ಲ. ಬುರ್ಕಾ ಧರಿಸಿದ ಕಾರಣಕ್ಕೆ ನಮ್ಮ ಮೇಲೆ ಹಲ್ಲೆ ಮಾಡಿದವರ ಮೇಲೆ ಕ್ರಮಕೈಗೊಳ್ಳಿ ಎಂದು ಒತ್ತಾಯಿಸಿದರು.

    ಕ್ಯಾಂಪಸ್ ಫ್ರಂಟ್ ಇಂಡಿಯಾ ಸಂಘಟನೆ ಆರೋಪಗಳಿಗೆ ಪ್ರತಿಯಾಗಿ ಸಹ್ಯಾದ್ರಿ ಕಾಲೇಜು ಕ್ಯಾಂಪಸ್‍ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ವಿದ್ಯಾರ್ಥಿನಿಯರು ತರಗತಿಯೊಳಗೂ ಬುರ್ಕಾ ಧರಿಸಿ ಬರುವುದಕ್ಕೆ ನಮ್ಮ ಆಕ್ಷೇಪವಿದೆ ಎಂದರು. ಕ್ಯಾಂಪಸ್‍ನಲ್ಲಿ ಒಂದು ಶಿಸ್ತು ಕಾಪಾಡಲು ವಸ್ತ್ರಸಂಹಿತೆ ಅಗತ್ಯವಿದೆ. ನಾವು ಯಾರ ಮೇಲೂ ಹಲ್ಲೆ, ದೌರ್ಜನ್ಯ ಮಾಡಿಲ್ಲ. ಮಾಡಿದ್ದು ದೃಢಪಟ್ಟರೆ ಯಾವುದೇ ಶಿಕ್ಷೆಗೂ ನಾವು ಸಿದ್ದ ಎಂದು ತಿಳಿಸಿದರು.

    ಈ ವಿವಾದ ಆರಂಭಗೊಂಡಿದ್ದೇ ಕುವೆಂಪು ವಿವಿ ಹೊಣೆಗೇಡಿತನದಿಂದ. ಆದರೆ, ಯಾವುದೇ ಸಂದರ್ಭದಲ್ಲೂ ಪರಿಸ್ಥಿತಿ ಕೈಮೀರದಂತೆ ಪೊಲೀಸರು ಎಚ್ಚರಿಕೆ ಹಾಗೂ ಸಮಾಧಾನದ ಹೆಜ್ಜೆ ಇಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಕಾಲೇಜು ವಿದ್ಯಾರ್ಥಿಗಳು ಕೆಲ ಸಂಘಟನೆಗಳ ಜೊತೆ ಸೇರಿ ಪತ್ರಿಕಾಗೋಷ್ಠಿ ನಡೆಸಿ ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸುತ್ತಿದ್ದಾರೆ. ಹೀಗೆ ತಮ್ಮ ವಿದ್ಯಾರ್ಥಿಗಳೇ ಹೀಗೆ ಹೊರಗೆ ಪತ್ರಿಕಾಗೋಷ್ಠಿ ನಡೆಸಿದರೂ ತುಟಿಪಿಟಕ್ ಎನ್ನದೆ ಕುವೆಂಪು ವಿವಿ ಆಡಳಿತ ಮಂಡಳಿ ಮಹಾಮೌನ ತಾಳಿದೆ.