Tag: Kurukshetra movie

  • ಕುರುಕ್ಷೇತ್ರದಲ್ಲಿ ಭೀಷ್ಮನಾಗಲು ಅಂಬರೀಶ್‍ರನ್ನು ಒಪ್ಪಿಸಿದ ಸಾಹಸ!

    ಕುರುಕ್ಷೇತ್ರದಲ್ಲಿ ಭೀಷ್ಮನಾಗಲು ಅಂಬರೀಶ್‍ರನ್ನು ಒಪ್ಪಿಸಿದ ಸಾಹಸ!

    ಬೆಂಗಳೂರು: ನಿರ್ಮಾಪಕ ಮುನಿರತ್ನರ ಮಹಾ ಕನಸಿನಂಥಾ ಚಿತ್ರ ಕುರುಕ್ಷೇತ್ರ. ಬಹುಶಃ ಕನ್ನಡದಲ್ಲಿ ಇಷ್ಟು ದೊಡ್ಡ ತಾರಾಗಣದ, ಈ ಪಾಟಿ ಬಜೆಟ್ಟಿನ ಚಿತ್ರವೊಂದು ತೆರೆಗಾಣುತ್ತಿರೋದು ಇದೇ ಮೊದಲು. ಅದರಲ್ಲಿಯೂ ಪರಭಾಷೆಗಳಲ್ಲಿಯೂ ಈ ಸಿನಿಮಾ ಸದ್ದು ಮಾಡುತ್ತಿರೋ ರೀತಿ ಈ ಹಿಂದಿನ ರೆಕಾರ್ಡುಗಳನ್ನೆಲ್ಲ ಬ್ರೇಕ್ ಮಾಡುವಂತಿದೆ. ಕನ್ನಡದ ಪ್ರತೀ ಪ್ರೇಕ್ಷಕರೂ ಕೂಡಾ ಮಲ್ಟಿಸ್ಟಾರ್ ಚಿತ್ರಗಳಿಗಾಗಿ ಸದಾ ಹಂಬಲಿಸುತ್ತಿರುತ್ತಾರೆ. ಅದನ್ನು ದೊಡ್ಡ ಮಟ್ಟದಲ್ಲಿ ಸಾಕಾರಗೊಳಿಸಿರೋ ಕುರುಕ್ಷೇತ್ರ ರೂಪುಗೊಂಡಿದ್ದರ ಹಿಂದೆ ಇನ್ನೊಂದು ಚಿತ್ರಕ್ಕಾಗುವಷ್ಟು ರೋಚಕವಾದ ಕಥೆಗಳಿವೆ. ಅದರಲ್ಲಿ ಅಂಬರೀಶ್ ಅವರನ್ನು ಭೀಷ್ಮನ ಪಾತ್ರಕ್ಕೆ ಒಪ್ಪಿಸಿದ್ದೇ ಒಂದು ಮಜವಾದ ಕಥನ!

    ಆರಂಭದಲ್ಲಿ ಕುರುಕ್ಷೇತ್ರವೆಂಬ ದೊಡ್ಡ ಕ್ಯಾನ್ವಾಸಿನ ನೀಲನಕ್ಷೆ ಸಿದ್ಧಗೊಳಿಸಿಕೊಂಡಿದ್ದ ಮುನಿರತ್ನ ಮುಖ್ಯ ಪಾತ್ರಗಳಿಗೆ ಇಂತಿಂಥಾ ನಟನಟಿಯರೇ ಇರಬೇಕೆಂದು ಅಂದುಕೊಂಡಿದ್ದರಂತೆ. ಅದರಲ್ಲಿಯೂ ದುರ್ಯೋಧನನ ಪಾತ್ರಕ್ಕಂತೂ ಎಲ್ಲಕ್ಕಿಂತ ಮೊದಲೇ ದರ್ಶನ್ ಫಿಕ್ಸಾಗಿ ಬಿಟ್ಟಿದ್ದರು. ಆ ನಂತರದಲ್ಲಿ ಉಳಿಕೆ ಪಾತ್ರಗಳಿಗೂ ನಾಯಕರ ಆಯ್ಕೆ ನಡೆದಿತ್ತು. ಕುರುಕ್ಷೇತ್ರ ಚಿತ್ರದಲ್ಲಿ ನಟಿಸೋದೇ ಖುಷಿ ಎಂಬಂತೆ ಎಲ್ಲರೂ ಉತ್ಸುಕರಾಗಿ ಒಪ್ಪಿಕೊಂಡಿದ್ದರು. ಆದರೆ ಅದಾಗಲೇ ಭೀಷ್ಮನ ಪಾತ್ರಕ್ಕೆ ಮುನಿರತ್ನ ನಿಕ್ಕಿ ಮಾಡಿಕೊಂಡಿದ್ದ ಅಂಬರೀಶ್ ಮಾತ್ರ ನಟಿಸಲು ಹಿಂದೇಟು ಹಾಕಿದ್ದರಂತೆ. ಅದಕ್ಕೆ ಕಾರಣವಾಗಿದ್ದದ್ದು ಬೇರೇನೂ ಅಲ್ಲ. ಅದಾಗಲೇ ಅನಾರೋಗ್ಯಕ್ಕೀಡಾಗಿದ್ದ ಅಂಬಿ ಆ ಕಾರಣ ಮುಂದಿಟ್ಟುಕೊಂಡು ಭೀಷ್ಮನಾಗಲು ಕೊಂಚ ಹಿಂದೇಟು ಹಾಕಿದ್ದರಂತೆ.

    ಅಂಬರೀಷ್ ಅವರು ಇಂಥಾ ನಿರ್ಧಾರ ಮಾಡಿದ್ದಾರೆಂದ ಮೇಲೆ ಅವರನ್ನು ಮತ್ತೆ ಒಪ್ಪಿಸೋದು ಬಲು ಕಷ್ಟದ ಸಂಗತಿ. ಈ ಬಗ್ಗೆ ತುಂಬಾ ಸಲ ಪ್ರಯತ್ನಿಸಿ, ವಿವರಿಸಿದ ನಂತರ ಅವರು ಒಪ್ಪಿಕೊಂಡರೆ ಪುಣ್ಯ. ಇಲ್ಲೂ ಕೂಡಾ ಹಾಗೆಯೇ ಆಗಿತ್ತು. ಅನಾರೋಗ್ಯದ ಕಾರಣದಿಂದ ಭೀಷ್ಮನ ಪಾತ್ರ ನಿರ್ವಹಿಸಲು ಒಪ್ಪದಿದ್ದಾಗ ಮುನಿರತ್ನ ಮತ್ತು ದರ್ಶನ್ ಒಪ್ಪಿಸಲು ಹರಸಾಹಸ ಪಟ್ಟಿದ್ದರಂತೆ. ಕಡೆಗೂ ದರ್ಶನ್ ಅವರು ಅಂಬರೀಷ್‍ರನ್ನು ಒಪ್ಪಿಸುವ ಸಾಹಸದಲ್ಲಿ ಗೆದ್ದಿದ್ದರು. ದರ್ಶನ್ ಅಂಬಿಯ ವ್ಯಕ್ತಿತ್ವವನ್ನೇ ಹೊಂದಿದ್ದಾರೆಂಬಂತೆ ಬಿಂಬಿತರಾಗಿರುವವರು. ದರ್ಶನ್ ಅತೀವವಾಗಿ ಗೌರವಿಸುವ ವ್ಯಕ್ತಿಗಳಲ್ಲಿ ಅಂಬಿ ಪ್ರಮುಖರು. ಇನ್ನು ಅಂಬರೀಶ್ ಅವರಿಗೂ ದರ್ಶನ್ ಮೇಲೆ ಮಗನ ಮೇಲಿದ್ದಂಥಾದ್ದೇ ಪ್ರೀತಿಯಿತ್ತು. ಅಂಥಾ ದರ್ಶನ್ ಜೊತೆ ನಟಿಸೋ ಅವಕಾಶವನ್ನು ಒಲ್ಲೆ ಅನ್ನಲಾಗದೇ ಅಂಬಿ ಭೀಷ್ಮನಾಗಲು ಒಪ್ಪಿಕೊಂಡಿದ್ದರಂತೆ.

    ಕುರುಕ್ಷೇತ್ರ ಶುರುವಾಗೋ ಹೊತ್ತಿಗೆಲ್ಲ ಅಂಬರೀಶ್ ಅನಾರೋಗ್ಯದಿಂದ ಕೊಂಚ ಚೇತರಿಸಿಕೊಂಡಿದ್ದರಾದರೂ ಆಯಾಸವಿನ್ನೂ ಹಾಗೇ ಇತ್ತು. ಇಂಥಾ ಬಾಧೆಗಳಿಂದ ಬಳಲುತ್ತಿದ್ದರೂ ಕೂಡಾ ಎಂದಿನ ಉತ್ಸಾಹದಿಂದಲೇ ಅಂಬಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಅದೇ ಲವಲವಿಕೆಯಿಂದ ಓಡಾಡುತ್ತಾ ಆಸುಪಾಸಿನವರನ್ನು ಕಿಚಾಯಿಸುತ್ತಾ ನಿರೀಕ್ಷೆಗೂ ಮೀರಿ ಭೀಷ್ಮ ಪಾತ್ರಕ್ಕವರು ಕಳೆ ತುಂಬಿಸಿದ್ದರು. ಆದರೆ ಈ ಚಿತ್ರ ಬಿಡುಗಡೆಯಾಗೋದನ್ನು ನೋಡಲೀಗ ಅವರೇ ಇಲ್ಲ. ಆದರೆ ಕುರುಕ್ಷೇತ್ರ ರೆಬೆಲ್ ಸ್ಟಾರ್ ನಟಿಸಿರೋ ಕೊನೆಯ ಚಿತ್ರವಾಗಿ, ಅವರೊಂದಿಗಿನ ಅನೇಕ ನೆನಪುಗಳೊಂದಿಗೇ ನಾಳೆ ಬಿಡುಗಡೆಯಾಗಲಿದೆ. ಅಂಬಿಯನ್ನು ವಿಶೇಷ ಪಾತ್ರದಲ್ಲಿ, ಭೀಷ್ಮನಾಗಿ ಕಣ್ತುಂಬಿಕೊಳ್ಳೋ ಸದವಕಾಶವನ್ನು ಯಾವ ಕಾರಣಕ್ಕೂ ಮಿಸ್ ಮಾಡಿಕೊಳ್ಳಬೇಡಿ.

  • ಕುರುಕ್ಷೇತ್ರವನ್ನು ಸ್ವಾಗತಿಸಲು ಎಂಥಾ ತಯಾರಿ ನಡೆದಿದೆ ಗೊತ್ತಾ?

    ಕುರುಕ್ಷೇತ್ರವನ್ನು ಸ್ವಾಗತಿಸಲು ಎಂಥಾ ತಯಾರಿ ನಡೆದಿದೆ ಗೊತ್ತಾ?

    ಬೆಂಗಳೂರು: ನಾಳೆ ಬೆಳಗ್ಗೆ ಹೊತ್ತಿಗೆಲ್ಲ ಹಸ್ತಿನಾಪುರದ ವೈಭವ ಎಲ್ಲರೆದುರು ಅನಾವರಣಗೊಳ್ಳಲಿದೆ. ಕನ್ನಡ ಚಿತ್ರರಂಗದ ಮಟ್ಟಿಗೆ ಇದೊಂದು ಐತಿಹಾಸಿಕ ಕ್ಷಣ. ಇಂಥಾ ಅದ್ಧೂರಿ ಪೌರಾಣಿಕ ಚಿತ್ರವನ್ನು ಬರಮಾಡಿಕೊಳ್ಳಲು ಎಂತೆಂಥಾ ತಯಾರಿಗಳು ನಡೆಯುತ್ತಿವೆ ಅನ್ನೋದೇ ಕುರುಕ್ಷೇತ್ರದ ಬಗ್ಗೆ ಕರ್ನಾಟಕದಲ್ಲಿ ಎಂತಾ ಅಭಿಮಾನ, ಪ್ರೀತಿ ಇದೆ ಅನ್ನೋದಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ. ಅಂತೂ ಈ ಕುರುಕ್ಷೇತ್ರ ವರಮಹಾಲಕ್ಷ್ಮಿ ಹಬ್ಬದಂದೇ ಮತ್ತೊಂದು ಬಗೆಯ ಹಬ್ಬದ ವಾತಾವರಣ ಸೃಷ್ಟಿಸಿದೆ.

    ಸಾಮಾನ್ಯವಾಗಿ ಸ್ಟಾರ್ ನಟರ ಚಿತ್ರಗಳು ಬಿಡುಗಡೆಯಾಗುತ್ತಿವೆಯೆಂದರೆ ಅಭಿಮಾನಿಗಳು ಶಕ್ತಿ ಮೀರಿ ಕಟೌಟು, ಶೃಂಗಾರ ಅಂತೆಲ್ಲ ಶ್ರಮಿಸುತ್ತಾರೆ. ಆದರೆ ಕುರುಕ್ಷೇತ್ರದ ವಿಚಾರದಲ್ಲಿ ಪ್ರೇಕ್ಷಕರ ವಲಯದಲ್ಲಿರೋದು ಭಕ್ತಿ ಮತ್ತು ಅಭಿಮಾನ ಬೆರೆತ ಭಾವ. ಅದು ಅಭಿಮಾನವನ್ನೂ ಮೀರಿದಂಥಾ ಕಲಾಪ್ರೇಮವೆಂದರೂ ತಪ್ಪೇನಿಲ್ಲ. ನಾಳೆ ಕುರುಕ್ಷೇತ್ರ ಬಿಡುಗಡೆಯಾಗಲಿರೋ ಕರ್ನಾಟಕದ ಬಹುತೇಕ ಥೇಟರುಗಳನ್ನು ದೇವಸ್ಥಾನವೆಂಬಂತೆ ಶೃಂಗರಿಸಲಾಗಿದೆ. ಅದರ ಮುಂದೆ ಎಲ್ಲ ಶೃಂಗಾರಕ್ಕೂ ಕಳಶವಿಟ್ಟಂತೆ ದುರ್ಯೋಧನ ಮತ್ತು ಭೀಷ್ಮರ ಕಟೌಟುಗಳು ಮಿರುಗುತ್ತಿವೆ.

    ಅದರಲ್ಲಿಯೂ ವಿಶೇಷವಾಗಿ ಮಂಡ್ಯ ಜಿಲ್ಲೆಯಲ್ಲಂತೂ ಕುರುಕ್ಷೇತ್ರವನ್ನು ಬರಮಾಡಿಕೊಳ್ಳುವ ಸಂಭ್ರಮಕ್ಕೆ ಮೇರೆಯೇ ಇಲ್ಲ. ಇಲ್ಲಿ ಈಗಾಗಲೇ ಐವತ್ತು ಅಡಿ ಎತ್ತರದ ಕಟೌಟ್ ನಿಲ್ಲಿಸಿರೋ ಅಭಿಮಾನಿಗಳು ಭರ್ಜರಿ ಮೆರವಣಿಗೆಗೂ ಸಿದ್ಧತೆ ಮಾಡಿಕೊಂಡಿದ್ದಾರೆ. ಆ ಮೆರವಣಿಗೆಯಲ್ಲಿ ಐವತ್ತು ಜೋಡೆತ್ತುಗಳು, ಐವತ್ತು ಆಟೋಗಳು, ಐವತ್ತು ಬೈಕ್‍ಗಳು ಮತ್ತು ಐವತ್ತು ಬಗೆಯ ಜಾನಪದ ಕಲಾವಿದರು ಈ ಮೆರವಣಿಗೆಯನ್ನು ಮಿರುಗಿಸಲಿದ್ದಾರೆ. ಕುರುಕ್ಷೇತ್ರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಐವತ್ತನೇ ಚಿತ್ರವಾದ್ದರಿಂದಲೇ ಐವತ್ತು ಜೋಡೆತ್ತುಗಳ ಮೂಲಕವೇ ಕುರುಕ್ಷೇತ್ರವನ್ನು ಬರಮಾಡಿಕೊಳ್ಳಲು ಮಂಡ್ಯದ ಮಂದಿ ನಿರ್ಧರಿಸಿದ್ದಾರೆ.

    ಇಂದು ಮಧ್ಯರಾತ್ರಿಯಿಂದಲೇ ಕುರುಕ್ಷೇತ್ರ ಪ್ರದರ್ಶನ ಕಾಣುತ್ತಿದೆ. ಅದಾಗಲೇ ಅಭಿಮಾನಿಗಳು ಮತ್ತೊಂದಷ್ಟು ವಿಶೇಷವಾದ ಕಾರ್ಯಕ್ರಮಗಳ ಮೂಲಕ ಕುರುಕ್ಷೇತ್ರ ಸಂಭ್ರಮಕ್ಕೆ ರೆಡಿಯಾಗುತ್ತಿದ್ದಾರೆ. ನಾಳೆ ಅಭಿಮಾನಿಗಳಿಗೆ ಹಂಚಲು ಬರೋಬ್ಬರಿ ಐವತ್ತು ಸಾವಿರ ಲಡ್ಡು ತಯಾರಾಗುತ್ತಿದೆ. ಇದನ್ನು ಕೂಡಾ ಅಭಿಮಾನಿಗಳು ಸೇರಿಯೇ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ ದರ್ಶನ್ ಅಭಿನಯದ ಐವತ್ತನೇ ಚಿತ್ರವನ್ನು ಹಬ್ಬವಾಗಿಸಲು ಭರ್ಜರಿ ತಯಾರಿ ನಡೆದಿದೆ.

  • ಮುನಿರತ್ನ ರಾಜೀನಾಮೆ ನೀಡಿದ್ರೂ ಕುರುಕ್ಷೇತ್ರ ಸಿನಿಮಾ ಆಡಿಯೋ ರಿಲೀಸ್‍ಗೆ ಡಿಕೆಶಿ

    ಮುನಿರತ್ನ ರಾಜೀನಾಮೆ ನೀಡಿದ್ರೂ ಕುರುಕ್ಷೇತ್ರ ಸಿನಿಮಾ ಆಡಿಯೋ ರಿಲೀಸ್‍ಗೆ ಡಿಕೆಶಿ

    – ಅವ್ರು ನನ್ನ ಜೊತೆಗಿದ್ದಾರೆ, ನಾನು ಅವ್ರ ಜೊತೆ ಇದ್ದೇನೆ

    ಬೆಂಗಳೂರು: ಆರ್.ಆರ್.ನಗರ ಶಾಸಕ ಮುನಿರತ್ನ ರಾಜೀನಾಮೆ ನೀಡಿದರೂ ಅವರ ನಿರ್ಮಾಣದ ಕುರುಕ್ಷೇತ್ರ ಸಿನಿಮಾ ಆಡಿಯೋ ರಿಲೀಸ್‍ಗೆ ಸಚಿವ ಡಿ.ಕೆ.ಶಿವಕುಮಾರ್ ಆಗಮಿಸಿದ್ದಾರೆ.

    ಕೋರಮಂಗಲ ಸ್ಟೇಡಿಯಂನಲ್ಲಿ ಕುರುಕ್ಷೇತ್ರ ಆಡಿಯೋ ಬಿಡುಗಡೆ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಮುಖ್ಯ ಅತಿಥಿಗಳು ಸಿಎಂ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಎಂದು ಮುದ್ರಿಸಲಾಗಿತ್ತು. ಆದರೆ ಸರ್ಕಾರ ಉಳಿಸಿಕೊಳ್ಳುವಲ್ಲಿ ದೋಸ್ತಿಗಳ ಮಧ್ಯೆ ಅಸಲಿ ಕುರುಕ್ಷೇತ್ರ ನಡೆಯುತ್ತಿದೆ. ಹೀಗಾಗಿ ಅವರು ಕಾರ್ಯಕ್ರಮಕ್ಕೆ ಆಗಮಿಸುವ ಸಾಧ್ಯತೆಗಳು ವಿರಳ ಎನ್ನಲಾಗುತ್ತಿದೆ.

    ನಿರ್ಮಾಪಕ ಮುನಿರತ್ನ ಅವರು ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಸಹೋದರರ ಆಪ್ತರಾಗಿದ್ದಾರೆ. ಆಪ್ತರೇ ರಾಜೀನಾಮೆ ರಾಜೀನಾಮೆ ನೀಡಿ ಶಾಕ್ ಕೊಟ್ಟಿದ್ದರೂ ಸಚಿವರು ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ.

    ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಚಿವರು, ಮುನಿರತ್ನ ನನ್ನ ಆತ್ಮೀಯ ಸ್ನೇಹಿತ. ಸಿನಿಮಾ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಸದ್ಯದ ರಾಜಕೀಯ ಬೆಳವಣಿಗೆ ಎಲ್ಲರಿಗೂ ಗೊತ್ತಿದೆ ಎಂದರು. ಶಾಸಕರ ಮನವೊಲಿಸುವ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮುನಿರತ್ನ ನನ್ನ ಜೊತೆಗಿದ್ದಾರೆ. ನಾನು ಅವರ ಜೊತೆ ಇದ್ದೇನೆ ಎಂದು ಹೇಳಿದರು.