Tag: Kurta

  • ನೆಟ್ಟಿಗರ ಹೃದಯ ಕದ್ದ ರಿತೇಶ್ ವಿಭಿನ್ನ ದೀಪಾವಳಿ ಆಚರಣೆ

    ನೆಟ್ಟಿಗರ ಹೃದಯ ಕದ್ದ ರಿತೇಶ್ ವಿಭಿನ್ನ ದೀಪಾವಳಿ ಆಚರಣೆ

    – ರಿತೇಶ್ ಐಡಿಯಾಗೆ ಮೆಚ್ಚುಗೆ
    – ಅಮ್ಮನ ಹಳೆ ಸೀರೆಯಿಂದ ಹೊಸ ಬಟ್ಟೆ

    ಮುಂಬೈ: ಬಾಲಿವುಡ್ ನಟ ರಿತೇಶ್ ದೇಶಮುಖ್ ಅವರ ದೀಪಾವಳಿಯ ಹೊಸ ಬಟ್ಟೆಗೆ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಅಮ್ಮನ ಹಳೆ ಸೀರೆಯಿಂದ ತಾವು ಹಾಗೂ ಇಬ್ಬರು ಮಕ್ಕಳಿಗೂ ರಿತೇಶ್ ಕುರ್ತಾ ಹೊಲಿಸಿಕೊಂಡಿದ್ದಾರೆ.

    ಅಮ್ಮನ ಹಳೆಯ ಸೀರೆಯನ್ನ ಬಳಸಿ ಹೊಸ ಬಟ್ಟೆ ಮಾಡಿಕೊಂಡಿರುವ ವೀಡಿಯೋ ರಿತೇಶ್ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಅಮ್ಮನ ಹಳೆ ಸೀರೆ. ಮಕ್ಕಳು ಮತ್ತು ನನಗೆ ದೀಪಾವಳಿಯ ಹೊಸ ಬಟ್ಟೆ. ಎಲ್ಲರಿಗೂ ದೀಪಾವಳಿಯ ಶುಭಾಶಯಗಳು ಎಂದು ರಿತೀಶ್ ಬರೆದುಕೊಂಡಿದ್ದಾರೆ.

    ಇನ್ನು ರಿತೇಶ್ ಐಡಿಯಾಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ನೆಟ್ಟಿಗರು ತಾವು ಸಹ ಅಮ್ಮನ ಸೀರೆಯಲ್ಲಿ ಕುರ್ತಾ ಹೊಲಿಸಿಕೊಳ್ಳುವುದಾಗಿ ಹೇಳುತ್ತಿದ್ದಾರೆ. ಅಮ್ಮನ ಸೀರೆಯಲ್ಲಿ ಆಕೆಯ ಪ್ರೀತಿ ಮತ್ತು ಆಶೀರ್ವಾದ ಇರುತ್ತೆ. ಇಂತಹ ಪ್ರೀತಿಯ ಕ್ಯೂಟ್ ವೀಡಿಯೋ ಶೇರ್ ಮಾಡಿಕೊಂಡ ನಿಮಗೆ ಧನ್ಯವಾದಗಳು ಎಂದು ನೆಟ್ಟಿಗರೊಬ್ಬರು ರಿಪ್ಲೈ ಮಾಡಿದ್ದಾರೆ.

  • 800 ರೂ. ಕುರ್ತಾ ಖರೀದಿಸಲು ಹೋಗಿ 80 ಸಾವಿರ ಕಳೆದುಕೊಂಡ ಮಹಿಳೆ

    800 ರೂ. ಕುರ್ತಾ ಖರೀದಿಸಲು ಹೋಗಿ 80 ಸಾವಿರ ಕಳೆದುಕೊಂಡ ಮಹಿಳೆ

    ಬೆಂಗಳೂರು: ಆನ್‍ಲೈನ್ ವಂಚಕರ ಜಾಲದಲ್ಲಿ ಸಿಕ್ಕಿಹಾಕಿಕೊಂಡ ಸಿಲಿಕಾನ್ ಸಿಟಿಯ ಮಹಿಳೆಯೊಬ್ಬರು 800 ರೂ. ಬೆಲೆಯ 1 ಕುರ್ತಾ ಆರ್ಡರ್ ಮಾಡಿ, ಬರೋಬ್ಬರಿ 80 ಸಾವಿರ ರೂ. ಕಳೆದುಕೊಂಡಿದ್ದಾರೆ.

    ಗೊಟ್ಟಿಗೆರೆಯ ನಿವಾಸಿ ಶ್ರವಣಾ ಅವರು ಆನ್‍ಲೈನ್ ವಂಚಕರ ಜಾಲಕ್ಕೆ ಬಿದ್ದು ಮೋಸ ಹೋಗಿದ್ದಾರೆ. ನವೆಂಬರ್ 8ರಂದು ಮಹಿಳೆ ಮೊಬೈಲ್‍ನಲ್ಲಿ ಇ-ಕಾಮರ್ಸ್ ಆ್ಯಪ್ ಡೌನ್‍ಲೋಡ್ ಮಾಡಿಕೊಂಡು, ಅದರಲ್ಲಿ ಸುಮಾರು 800 ರೂ. ಬೆಲೆಯ 1 ಕುರ್ತಾ ಆರ್ಡರ್ ಮಾಡಿದ್ದರು. ಆದರೆ ಆರ್ಡರ್ ಡೆಲಿವರಿ ಸಮಯ ಮುಗಿದ ಮೇಲೂ ಕುರ್ತಾಗಳು ಮಹಿಳೆಗೆ ತಲುಪಿರಲಿಲ್ಲ.

    ಆಗ ಆ್ಯಪ್‍ನಲ್ಲಿ ಇದ್ದ ಕಸ್ಟಮರ್ ಕೇರ್ ನಂಬರ್ ಗೆ ಮಹಿಳೆ ಕರೆ ಮಾಡಿ ವಿಚಾರಿಸಿದರು. ಈ ವೇಳೆ ಕರೆಯಲ್ಲಿ ಮಾತನಾಡಿದ ಸಿಬ್ಬಂದಿ, ಈ ಬಗ್ಗೆ ತಿಳಿದು ಕರೆ ಮಾಡುತ್ತೇವೆ. ಆದಷ್ಟು ಬೇಗ ನಿಮ್ಮ ಆರ್ಡರ್ ಡೆಲಿವರಿಯಾಗುತ್ತೆ ಎಂದು ನಂಬಿಸಿದ್ದಾನೆ. ಬಳಿಕ ನಿಮ್ಮ ಬ್ಯಾಂಕ್ ಆಕೌಂಟ್ ಮಾಹಿತಿ ಕೊಡಿ ಎಂದು ಮಹಿಳೆಗೆ ಹೇಳಿದ್ದಾನೆ. ಬಹುಶಃ ನನಗೆ ಸಹಾಯ ಮಾಡಲು ಸಿಬ್ಬಂದಿ ಕೇಳುತ್ತಿದ್ದಾನೆ ಎಂದು ಮಹಿಳೆ ಕೂಡ ಆತ ಕೇಳಿದ ಎಲ್ಲಾ ಮಾಹಿತಿ ನೀಡಿದ್ದಾರೆ.

    ಮಹಿಳೆಯಿಂದ ಬ್ಯಾಂಕ್ ಆಕೌಂಟ್ ಮಾಹಿತಿ ಪಡೆದ ಬಳಿಕ ಅವರ ಫೋನಿಗೆ ಒಂದು ಓಟಿಪಿ ಬಂದಿತ್ತು. ಅದನ್ನೂ ಕೂಡ ಹೇಳಿ ಎಂದು ಸಿಬ್ಬಂದಿ ಕರೆ ಮಾಡಿ ಕೇಳಿದಾಗ ಓಟಿಪಿಯನ್ನು ಮಹಿಳೆ ಹೇಳಿದ್ದರು. ನಂತರ ನಿಮ್ಮ ಕುರ್ತಾ ನಿಮಗೆ ಬಂದು ಸೇರುತ್ತದೆ ಎಂದು ಸಿಬ್ಬಂದಿ ಹೇಳಿ ಕರೆ ಕಟ್ ಮಾಡಿದ್ದಾನೆ.

    ಮಹಿಳೆ ಕೂಡ ಸಿಬ್ಬಂದಿ ಮಾತನ್ನು ನಂಬಿ ಕುರ್ತಾ ಕೆಲ ದಿನಗಳಲ್ಲಿ ಡೆಲಿವರಿಯಾಗುತ್ತದೆ ಎಂದುಕೊಂಡಿದ್ದರು. ಆದರೆ ಓಟಿಪಿ ಕಳುಹಿಸಿದ ಕೆಲವೇ ನಿಮಿಷಗಳಲ್ಲಿ ಮಹಿಳೆ ಅಕೌಂಟ್‍ನಲ್ಲಿದ್ದ 79,600 ರೂ. ಹಣ 4 ಕಂತಿನಲ್ಲಿ ಕಡಿತಗೊಂಡಿದೆ.

    ಹಣ ಕಳೆದುಕೊಂಡ ಬಳಿಕ ತನಗೆ ಮೋಸ ಮಾಡಲಾಗಿದೆ ಎನ್ನುವುದು ಮಹಿಳೆಗೆ ಗೊತ್ತಾಗಿದ್ದು, ಈ ಸಂಬಂಧ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ. ಆನ್‍ಲೈನ್ ಶಾಪಿಂಗ್ ಮೋಹಕ್ಕೆ ಮಹಿಳೆ ಹಣವನ್ನು ಕಳೆದುಕೊಂಡು ಮೋಸಹೋಗಿದ್ದಾರೆ. ಕುರ್ತಾದ ಆಸೆ ತೋರಿಸಿ ಮಹಿಳೆಗೆ ವಂಚಕರು ಪಂಗನಾಮ ಹಾಕಿದ್ದಾರೆ.

    ಈ ಬಗ್ಗೆ ಸೈಬರ್ ಪೀಸ್ ಫೌಂಡೇಷನ್ ಅಧ್ಯಕ್ಷ ವಿನೀತ್ ಕುಮಾರ್ ಮಾತನಾಡಿ, ಯಾವಾಗಲೂ ಗೂಗಲ್ ಪ್ಲೇ ಅಥವಾ ಐಓಎಸ್‍ನಲ್ಲಿ ಇರುವ ಆ್ಯಪ್‍ಗಳನ್ನು ಡೌನ್‍ಲೋಡ್ ಮಾಡುವುದು ಒಳ್ಳೆಯದು. ಕೆಲವೊಮ್ಮೆ ಅದರಲ್ಲೂ ಫೇಕ್ ಆ್ಯಪ್‍ಗಳು ಇರುತ್ತವೆ. ಅದರ ಬಗ್ಗೆ ಎಚ್ಚರವಹಿಸಿ. ನಿಮ್ಮ ಮೊಬೈಲ್‍ನಲ್ಲಿ ಪ್ಲೇ ಪ್ರೊಟೆಕ್ಟ್ ಫೀಚರ್ ಆನ್ ಮಾಡಿದರೆ ಅದು ನಿಮಗೆ ಡೌನ್‍ಲೋಡ್ ಮಾಡುವ ಆ್ಯಪ್‍ಗಳ ಸೆಕ್ಯೂರಿಟಿ ಸ್ಟೇಟಸ್ ಏನು ಎನ್ನುವುದನ್ನು ತೋರಿಸುತ್ತದೆ ಎಂದು ತಿಳಿಸಿದರು.

  • ಕಾಶಿಯಲ್ಲಿ ಪೊಲೀಸರಿಗೆ ಧೋತಿ-ಕುರ್ತಾ ಸಮವಸ್ತ್ರ ಕಡ್ಡಾಯ!

    ಕಾಶಿಯಲ್ಲಿ ಪೊಲೀಸರಿಗೆ ಧೋತಿ-ಕುರ್ತಾ ಸಮವಸ್ತ್ರ ಕಡ್ಡಾಯ!

    ವಾರಾಣಸಿ: ದೇಶದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಉತ್ತರ ಪ್ರದೇಶದ ಕಾಶಿ ವಿಶ್ವನಾಥ ದೇಗುಲದಲ್ಲಿ ಕಾರ್ಯನಿರ್ವಹಿಸುವ ಪೊಲೀಸರಿಗೆ ಹೊಸ ಸಮವಸ್ತ್ರ ನೀತಿಯನ್ನು ಜಾರಿಗೊಳಿಸಲಾಗಿದೆ.

    ಕಾಶಿ ವಿಶ್ವನಾಥ ದೇಗುಲದ ಗರ್ಭಗುಡಿಯ ಸಮೀಪ ಕಾರ್ಯ ನಿರ್ವಹಿಸುವ ಪೊಲೀಸರು ಕಡ್ಡಾಯವಾಗಿ ಧೋತಿ-ಕುರ್ತಾ ಧರಿಸಬೇಕೆಂಬ ನಿಯಮವನ್ನು ಜಾರಿಗೆ ಮಾಡಿ ಪೊಲೀಸ್ ಇಲಾಖೆ ಆದೇಶ ನೀಡಿದೆ.

    ಈ ಕುರಿತು ಮಾಹಿತಿ ನೀಡಿರುವ ವಾರಾಣಾಸಿಯ ಜ್ಞಾನವಾಪಿ ಎಸ್ಪಿ ಶೈಲೇಂದ್ರ ಕುಮಾರ್ ರೈ, ಈ ವಸ್ತ್ರ ಸಂಹಿತೆ ನಿಯಮ ದೇವಾಲಯದ ಗರ್ಭಗುಡಿಯ ಬಳಿ ಕಾರ್ಯನಿರ್ವಹಿಸುವ ಪೊಲೀಸರಿಗೆ ಮಾತ್ರ ಅನ್ವಯವಾಗುತ್ತದೆ. ಇನ್ನುಳಿದ ಪೊಲೀಸರು ತಮ್ಮ ಸಾಮಾನ್ಯ ಸಮವಸ್ತ್ರ ಧರಿಸಿ ಕಾರ್ಯನಿರ್ವಹಿಸುತ್ತಾರೆ ಎಂದು ತಿಳಿಸಿದ್ದಾರೆ.

    ಈ ಹಿಂದೆ ಪೊಲೀಸರು ಬೆಲ್ಟ್ ಧರಿಸಿ, ಇಲಾಖೆ ಸಮವಸ್ತ್ರದಲ್ಲಿಯೇ ಗರ್ಭಗುಡಿ ಬಳಿ ಕರ್ತವ್ಯ ನಿರ್ವಹಿಸುತ್ತಿರುವುದಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು. ಸದ್ಯ ಪೊಲೀಸ್ ಇಲಾಖೆಯ ಈ ಹೊಸ ನಿಯಮವನ್ನು ದೇವಾಲಯದ ಆಡಳಿತ ಮಂಡಳಿ ಸ್ವಾಗತಿಸಿದೆ.

    ಈ ನಿಯಮ ಸೋಮವಾರದಿಂದಲೇ ಜಾರಿಯಾಗಿದ್ದು, ಧೋತಿ-ಕುರ್ತಾ ಧರಿಸಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸರನ್ನು ಕಂಡ ಭಕ್ತರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

  • ಇನ್ಮುಂದೆ ಬ್ರಿಟಿಷ್ ಗೌನ್ ಕ್ಯಾನ್ಸಲ್- ಹೊಸ ಡ್ರೆಸ್ ಸ್ಟೈಲ್‍ನಲ್ಲಿ ವಿಶ್ವವಿದ್ಯಾಲಯದ ಘಟಿಕೋತ್ಸವ

    ಇನ್ಮುಂದೆ ಬ್ರಿಟಿಷ್ ಗೌನ್ ಕ್ಯಾನ್ಸಲ್- ಹೊಸ ಡ್ರೆಸ್ ಸ್ಟೈಲ್‍ನಲ್ಲಿ ವಿಶ್ವವಿದ್ಯಾಲಯದ ಘಟಿಕೋತ್ಸವ

    ನವದೆಹಲಿ: ವಿಶ್ವವಿದ್ಯಾಲಯ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪದವಿ ಸ್ವೀಕರಿಸುವಾಗ ಇಂದಿಗೂ ಬ್ರಿಟಿಷ್ ಗೌನ್ ಹಾಕಲಾಗುತ್ತಿದೆ. ಹೀಗಾಗಿ ಗೌನ್ ಬದಲಾಗಿ ಸ್ವದೇಶಿ ನಿರ್ಮಿತ ಕುರ್ತಾ ಬಳಸಬೇಕು ಅಂತ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯು ಮಹತ್ವದ ನಿರ್ಧಾರ ಕೈಗೊಂಡಿದೆ.

    ಕುರ್ತಾ ಡಿಸೈನ್ ಮಾಡಲು ವಿದ್ಯಾರ್ಥಿಗಳಿಗೆ ಅವಕಾಶ ನೀಡಿದ್ದು, ವಿದ್ಯಾರ್ಥಿಗಳಿಂದ ಡಿಸೈನ್ ಬಂದ ಮೇಲೆ ಉನ್ನತವಾದ ಕುರ್ತಾವನ್ನು ಅಂತಿಮವಾಗಿ ನಿರ್ಧಾರ ಮಾಡಲಾಗುವುದು ಎಂದು ತಿಳಿಸಿರುವುದಾಗಿ ವರದಿಯಾಗಿದೆ.

    ಕಳೆದ ತಿಂಗಳಷ್ಟೇ ದೆಹಲಿಯಲ್ಲಿ ನಡೆದ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಸಭೆಯಲ್ಲಿ ಗೌನ್ ಸಂಸ್ಕೃತಿಯು ಬ್ರಿಟಿಷ್ ವಸಾಹತು ಶಾಹಿಯ ಪ್ರತಿರೂಪವಾಗಿದೆ ಎನ್ನುವ ಒಮ್ಮತ ಅಭಿಪ್ರಾಯ ಮೂಡಿಬಂದ ಹಿನ್ನೆಲೆಯಲ್ಲಿ ಈ ಬದಲಾವಣೆ ಮಾಡಲು ಮುಂದಾಗಿತ್ತು. ಅಲ್ಲದೇ ಶೀಘ್ರದಲ್ಲಿಯೇ ದೇಶದ ಎಲ್ಲಾ ವಿಶ್ವ ವಿದ್ಯಾಲಯಗಳು ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಯಾವ ರೀತಿಯ ಉಡುಪು ಧರಿಸಬೇಕು ಎನ್ನುವುದರ ಬಗ್ಗೆ ಸೂಚನೆಯನ್ನು ನೀಡಲಾಗುವುದು ಎಂದು ತಿಳಿಸಿತ್ತು.

    ದೇಶದಲ್ಲಿ 800 ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು ಇದ್ದು, 40 ಸಾವಿರಕ್ಕೂ ಹೆಚ್ಚು ಶಿಕ್ಷಣದ ಸಂಸ್ಥೆಗಳಲ್ಲಿ 3ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ಉನ್ನತ ಶಿಕ್ಷಣದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕುರ್ತಾ ಬಳಸುವ ಮೂಲಕ ಮೇಕ್ ಇನ್ ಇಂಡಿಯಾಗೆ ಒತ್ತು ನೀಡುತ್ತದೆ. ಈ ಹಿನ್ನೆಲೆಯಲ್ಲಿ ಇಂತಹ ಮಹತ್ವದ ನಿರ್ಧಾರ ಕೈಗೊಂಡಿರುವುದಾಗಿ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ತಿಳಿಸಿದೆ ಎಂದು ತಿಳಿದುಬಂದಿದೆ.

    ಕಳೆದ ವರ್ಷ ಮುಂಬೈಯ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಘಟಿಕೋತ್ಸವದ ವೇಳೆ ವಿದ್ಯಾರ್ಥಿಗಳು ಖಾದಿ ವಸ್ತ್ರಗಳನ್ನು ಧರಿಸಿ ಬಂದಿದ್ದರು.