Tag: kuppalli

  • ಕುವೆಂಪು, ಬಸವಣ್ಣಗೆ ಕುತ್ತು ಬಂದ ಮೇಲೆ ನಾವಿದ್ದು ಏನು ಮಾಡೋದು: ಹಂಸಲೇಖ

    ಕುವೆಂಪು, ಬಸವಣ್ಣಗೆ ಕುತ್ತು ಬಂದ ಮೇಲೆ ನಾವಿದ್ದು ಏನು ಮಾಡೋದು: ಹಂಸಲೇಖ

    ಶಿವಮೊಗ್ಗ: ಕುವೆಂಪು ಅಂದ್ರೆ ಕನ್ನಡ, ಬಸವ ಅಂದ್ರೆ ಕರ್ನಾಟಕ ಎಂದು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ಕಾಂಗ್ರೆಸ್ ಪಾದಯಾತ್ರೆಗೆ ಬೆಂಬಲ ವ್ಯಕ್ತಪಡಿಸಿದರು.

    ಪಠ್ಯಪುಸ್ತಕ ಪರಿಷ್ಕರಣೆ ವೇಳೆ ಕನ್ನಡ ಸಾಹಿತಿಗಳಿಗೆ ಆದ ಅಪಮಾನವನ್ನು ವಿರೋಧಿಸಿ ಕಾಂಗ್ರೆಸ್ ತೀರ್ಥಹಳ್ಳಿ ತಾಲೂಕಿನ ಕವಿಶೈಲದಿಂದ ಪಾದಯಾತ್ರೆ ಪ್ರಾರಂಭಿಸಿದೆ. ಇದರ ನೇತೃತ್ವವನ್ನು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ವಹಿಸಿದ್ದು, ಹಂಸಲೇಖ ಸಹ ಸಾಥ್ ಕೊಟ್ಟಿದ್ದಾರೆ. ಪಾದಯಾತ್ರೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಪ್ಪಳಿಯಿಂದ ಕನ್ನಡದ ಕಹಳೆ ಆರಂಭವಾಗಿದೆ. ಅಂದು ಗೋಕಾಕ್ ಚಳುವಳಿ ನಡೆದಿತ್ತು. ಇಂದು ಕುಪ್ಪಳಿ ಕಹಳೆ ಆರಂಭವಾಗಿದೆ ಎಂದರು.

    ಇದು ನಾಡಿನಾದ್ಯಂತ ಮೊಳಗಬೇಕು. ಕುವೆಂಪು ಅಂದ್ರೆ ಕನ್ನಡ, ಬಸವ ಅಂದ್ರೆ ಕರ್ನಾಟಕ. ಇವರಿಬ್ಬರಿಗೂ ಕುತ್ತು ಬಂದ ಮೇಲೆ ನಾವಿದ್ದು ಏನು ಮಾಡೋದು. ನಮ್ಮದು ನಾಡಗೀತೆ ಅಲ್ಲ, ನಾಡೇ ಒಂದು ಗೀತೆ. ನಾಡೇ ನಮಗೆ ಒಂದು ಧ್ವಜ. ಇವೆರಡಕ್ಕೂ ಅವಮಾನವಾಗಿದೆ. ಕನ್ನಡದ ನಡ ಮುರಿಯುವ ನಡೆ ರಾಜ್ಯದಲ್ಲಿ ಆರಂಭವಾಗಿದೆ. ಇದರ ವಿರುದ್ಧದ ಹೋರಾಟಗಳು ನಿರಂತರ ನಡೆಯಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ಕವಿಶೈಲದಿಂದ ತೀರ್ಥಹಳ್ಳಿವರೆಗೆ ಕಾಂಗ್ರೆಸ್ ಪಾದಯಾತ್ರೆ 

    ಕನ್ನಡಕ್ಕೆ ಮಹಾಮನೆ ಕಲ್ಯಾಣ, ಗುರುಮನೆ ಕವಿಶೈಲ. ಕನ್ನಡಕ್ಕೆ ಕುತ್ತು ಬಂದ ಮೇಲೆ ನಾವಿದ್ದು ಏನು ಮಾಡೋದು. ತಮಿಳಿಗರ ರೀತಿ ಕನ್ನಡಿಗರು ಭಾಷಾಭಿಮಾನ ಬೆಳೆಸಿಕೊಳ್ಳಬೇಕಿದೆ. ನಾವು ಭಾಷಾಂಧರು ಅಂದ್ರೂ ಸರಿ, ಅವರನ್ನು ನಾವು ಅನುಸರಿಸಬೇಕು. ಅಲ್ಲಿ ಭಾಷೆಗೆ ಧಕ್ಕೆಯಾದರೆ ಆಳುವವರು, ವಿಪಕ್ಷದವರು ಎಲ್ಲರೂ ಒಟ್ಟಾಗಿ ಸೇರುತ್ತಾರೆ ಎಂದರು.

  • ರಾಷ್ಟ್ರಕವಿ ಕುವೆಂಪುರವರ ನೆನಪು ಮೆಲುಕು ಹಾಕಿದ ನಟ ಜಗ್ಗೇಶ್

    ರಾಷ್ಟ್ರಕವಿ ಕುವೆಂಪುರವರ ನೆನಪು ಮೆಲುಕು ಹಾಕಿದ ನಟ ಜಗ್ಗೇಶ್

    ಬೆಂಗಳೂರು: ಸಿನಿಮಾ ಚಿತ್ರೀಕರಣದ ಬ್ಯುಸಿ ವೇಳೆಯಲ್ಲೂ ನವರಸ ನಟ ಜಗ್ಗೇಶ್ ಅವರು ಕುವೆಂಪು ಅವರ ಮನೆ ಕುಪ್ಪಳ್ಳಿಗೆ ಭೇಟಿ ನೀಡಿ, ಕುವೆಂಪು ಅವರ ನೆನಪನ್ನು ಮೆಲುಕು ಹಾಕುವ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದಾರೆ.

    ಸದ್ಯ ಜಗ್ಗೇಶ್ ಅವರು ರಾಘವೇಂದ್ರ ಸ್ಟೋರ್ಸ್ ಚಿತ್ರೀಕರಣದ ನಿಮಿತ್ತ ಶಿವಮೊಗ್ಗಕ್ಕೆ ತೆರಳಿದ್ದಾರೆ. ಚಿತ್ರೀಕರಣದಲ್ಲಿ 2 ಗಂಟೆ ವಿರಾಮ ಸಿಕ್ಕಿತು. ಸಮಯ ವ್ಯರ್ಥ ಮಾಡಲು ಮನಸ್ಸು ಬರಲಿಲ್ಲ. 14 ಕಿಮೀ ದೂರದಲ್ಲಿ ನನ್ನ ನೆಚ್ಚಿನ ಕವಿ ಕುವೆಂಪು ಅವರ ಮನೆ ನೆನಪಾಯಿತು ಹೋಗಿಬಿಟ್ಟೆ. ಅವರ ಮನೆಯ ಆವರಣಕ್ಕೆ ಕಾಲಿಟ್ಟಾಗ ನನಗರಿಯದೆ ರೋಮಾಂಚನ ಆಯಿತು. ಕುವೆಂಪು ಅವರ ಮನೆ ಒಂದು ಮೂಲೆಯು ಬಿಡದಂತೆ ತಾಳ್ಮೆಯಿಂದ ಸುತ್ತು ಹಾಕಿದೆ ಎಂದು ಬರೆದುಕೊಂಡು ಕುವೆಂಪು ಅವರ ಮನೆಯ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

    ಅವರ ಬಾಲ್ಯದಿಂದ ಕೊನೆಯವರೆಗೂ ಬಳಸಿದ ವಸ್ತುಗಳು, ಅವರ ಮಗ ಪೂರ್ಣಚಂದ್ರ ತೇಜಸ್ವಿ ಅವರು ಕೂಡಿಟ್ಟ ತನ್ನ ತಂದೆಯ ಅಮೂಲ್ಯ ಚಿತ್ರ ಭಂಡಾರ, ಕುವೆಂಪು ಅವರ ತಾತ, ತಂದೆ-ತಾಯಿ ಬಂಧುಗಳು ಬಳಸಿದ ಪುರಾತನ ವಸ್ತುಗಳನ್ನೆಲ್ಲಾ ನೋಡಿದೆ. ಅವರ ಪ್ರಥಮ ಬರವಣಿಗೆ ಅವರ ಗುರುಗಳಿಗೆ ಅರ್ಪಣೆಯ ನುಡಿಮುತ್ತು. ಅದರಲ್ಲಿ ತಿದ್ದಿ ಬರೆದ ಪದಪುಂಜ ನನ್ನನ್ನು ಅವರ ಕಾಲಕ್ಕೆ ಕರೆದೊಯ್ಯಿತು. ಅವರು ಹುಟ್ಟಿದ ವರ್ಷ 1904 ಎಂದಾಗ ಅಯ್ಯೋ ಸಾಯಿಬಾಬಾ ಬದುಕಿದ್ದರೆ ಆಗ ಎಂದು ಮನಚಿಂತಿಸಿತು ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

    ಕುವೆಂಪು ತಂದೆಯ ಜೊತೆ ಕುಳಿತ ಬಾಲಕನ ಚಿತ್ರ ಹಾಗೂ ಅವರ ತಂದೆಯ ಮುಖ ಲಕ್ಷಣ ಒಬ್ಬ ಪಾಳೆಗಾರನಂತೆ ಭಾಸವಾಯಿತು. ಅವರ ತಾಯಿ ಬಳಸಿದ ಅಡುಗೆ ಸಾಮಗ್ರಿಗಳನ್ನು ನೋಡಿ ನನ್ನ ಅಜ್ಜಿ ಮನೆ ನೆನಪಾಯಿತು. ಅವರದ್ದು ಎಂತಹ ಅದ್ಭುತ ವಂಶ. ಇಂಥ ಪರಿಸರದಲ್ಲಿ ಅವರು ಹುಟ್ಟಿದ ಮನೆ ಇರುವುದನ್ನು ನೋಡಿ ಸಂತೋಷವಾಯಿತು. ಕುವೆಂಪು ಅವರ ಎರಡನೆಯ ಮಗನ ಹೆಂಡತಿ ನೋಡಿ ನನ್ನ ಸೊಸೆ ನೆನಪಾದಳು. ಜಾತಿಗಳ ಲೆಕ್ಕ ತಪ್ಪದೆ ಹೆಜ್ಜೆ ಹಾಕುವ ಆ ಕಾಲದಲ್ಲಿ ಕವಿಗಳಿಗೆ ಎಂತಹ ವಿಶಾಲ ಹೃದಯವಿತ್ತು. ವಿದೇಶಿ ಹೆಣ್ಣನ್ನು ಮನೆ ಸೊಸೆಯಾಗಿ ತುಂಬಿಸಿಕೊಂಡು ವಿಶೇಷ ವ್ಯಕ್ತಿಯಾಗಿ ಕುವೆಂಪುರವರು ಹೃದಯದಲ್ಲಿ ಉಳಿದು ಬಿಟ್ಟರು.

    ನಾನು ನಮ್ಮ ತಂದೆಯನ್ನು ಅಣ್ಣ ಎಂದು ಕರೆಯುತ್ತಿದ್ದೆ. ಕುವೆಂಪು ಅವರ ಮಗನು ಅವರನ್ನು ಅಣ್ಣ ಎಂದು ಕರೆಯುತ್ತಿದ್ದರು ಎಂದಾಗ ನನ್ನ ಮನ ನನ್ನ ಅಪ್ಪನ ಕಡೆ ವಾಲಿತು. ಇದರಿಂದ ಭಾವುಕನಾಗಿ ಬಿಟ್ಟೆ. ಕುವೆಂಪು ಅವರು ತಮ್ಮ ಪತ್ನಿಯನ್ನು ಎಷ್ಟು ಪ್ರೀತಿಸುತ್ತಿದ್ದರು ಎನ್ನಲು ಅವರ ಮಾತು ತಿಳಿಸುತ್ತದೆ. ನನ್ನ ಧರ್ಮ ಪತ್ನಿ ಇದ್ದಿದ್ದರೆ ನಾನು ಶತವರ್ಷ ಬದುಕುತ್ತಿದ್ದೆ ಎಂದು ಹೇಳಿದ್ದು, ಎಂಥ ಅರ್ಥಪೂರ್ಣ ದಾಂಪತ್ಯ ಅವರದ್ದು ಅಲ್ಲವೆ ಎಂದರು.

    ನನಗೆ ಅವರ ನೋಡುವ ಅವಕಾಶ ಸಿಗಲಿಲ್ಲ. ಆದರೆ ಅವರ ಬಿಳಿಮುಡಿ ಕತ್ತರಿಸಿ ಶೇಖರಿಸಿ ಇಟ್ಟದ್ದು, ನೋಡಿ ಅವರನ್ನೇ ನೋಡಿದಷ್ಟು ಆನಂದವಾಯಿತು. ಅವರ ಮನೆಯ ಮುಂದೆ ಕೂತು ಫೋಟೋ ತೆಗೆಸಿಕೊಳ್ಳಲು ಕೂತಾಗ ಮನಸಲ್ಲಿ ಅವರೊಟ್ಟಿಗೆ ನನ್ನ ಹಿಂದಿನ ಜನ್ಮದಲ್ಲಿ ಕೂತಂತೆ ಭ್ರಮಿಸಿದೆ. ರಾಮಕೃಷ್ಣ ಪರಮಹಂಸರ ಶಿಷ್ಯರಲ್ಲಿ ದೀಕ್ಷೆ ಪಡೆದ ವಿಷಯವಂತು ನನ್ನ ಮನಸ್ಸಿಗೆ ಹೇಳಲಾಗದ ಆನಂದವಾಯಿತು. ಕಾರಣ ಆಧ್ಯಾತ್ಮಿಕ ಮಾರ್ಗದಲ್ಲಿ ಸಣ್ಣ ಹೆಜ್ಜೆ ಹಾಕುತ್ತಿರುವುದರಿಂದ ಆ ನಡೆಯ ಆನಂದವಾಗಿದೆ. ಒಟ್ಟಾರೆ ರಾಜ ಮಹಾರಾಜರು ಆಶೀರ್ವಾದ, ದೇಶ ವಿದೇಶದಲ್ಲಿ ಓದುಗ ಅಭಿಮಾನಿಗಳು, ಸತ್ತ ಮೇಲು ಸಾವಿರ ವರ್ಷ ನೆನಪಲ್ಲಿ ಉಳಿಯುವ ಸಾಧನೆ, ಪ್ರಶಸ್ತಿ ಪುರಸ್ಕಾರಕ್ಕೆ ಇವರಿಂದ ಗೌರವ ಬಂದದ್ದೇನು ಅನ್ನಿಸುವಷ್ಟು ಪ್ರಶಸ್ತಿಗಳು ಇವರಿಗೆ ಸಂದಿವೆ. ಇದಕ್ಕೆ ಅಲ್ಲವೆ ಹೇಳೋದು ಬದುಕಿದರೆ ರಾಜನಂತೆ ಬದುಕು ಸತ್ತಮೇಲೆ ದೇವರಾಗು ಎಂದು ಹೇಳುತ್ತಾ ಕುವೆಂಪು ಅವರನ್ನು ನೆನೆಪು ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ರಸ್ತೆ ಅಪಘಾತ – ದಿವ್ಯಾ ಸುರೇಶ್‌ಗೆ ಗಾಯ

    ಕುವೆಂಪು ಬದುಕೆ ಅದ್ಭುತ ಅನುಕರಣೀಯ ಅಮೋಘವಾಗಿದೆ. ಇಂದು ನನ್ನ ಸಮಯ ಸಾರ್ಥಕ ಅನ್ನಿಸಿತು. ಸಮಯ ಸಿಕ್ಕರೆ ರಸ ಋಷಿ ಮನೆಗೆ ನೀವು ಹೋಗಿ ಬನ್ನಿ ಎಂದು ಪೋಸ್ಟ್ ಮಾಡಿದ್ದಾರೆ. ಅಭಿಮಾನಿಗಳು ಜಗ್ಗೇಶ್ ಅವರ ಈ ಪೋಸ್ಟ್ ಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇದನ್ನೂ ಓದಿ: ಇನ್‍ಸ್ಟಾ ಖಾತೆಯಿಂದ ಪತಿಯ ಹೆಸರು ಕೈಬಿಟ್ಟ ನಟ ಚಿರಂಜೀವಿ ಪುತ್ರಿ ಶ್ರೀಜಾ

  • ಕುವೆಂಪು ಮನೆಯಲ್ಲಿ ಕಳ್ಳತನ – ಅಪರಾಧಿಗಳಿಗೆ ಎರಡು ವರ್ಷ ಜೈಲು ಶಿಕ್ಷೆ

    ಕುವೆಂಪು ಮನೆಯಲ್ಲಿ ಕಳ್ಳತನ – ಅಪರಾಧಿಗಳಿಗೆ ಎರಡು ವರ್ಷ ಜೈಲು ಶಿಕ್ಷೆ

    ಶಿವಮೊಗ್ಗ: ರಾಷ್ಟ್ರಕವಿ ಕುವೆಂಪು ಅವರ ಕುಪ್ಪಳ್ಳಿಯ ಕವಿ ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿಗಳಿಗೆ ತೀರ್ಥಹಳ್ಳಿ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

    ಪದ್ಮವಿಭೂಷಣ ಪದಕ ಸೇರಿದಂತೆ ಇತರೆ ಅಮೂಲ್ಯ ವಸ್ತುಗಳನ್ನು ಖದೀಮರು ಕಳ್ಳತನ ಮಾಡಿದ್ದರು. ಈ ಪ್ರಕರಣದ ಅಪರಾಧಿಗಳಿಗೆ ಎರಡು ವರ್ಷ ಜೈಲು ಶಿಕ್ಷೆ ಹಾಗೂ ಐದು ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

    ಪ್ರಕರಣದ ಮೊದಲ ಅಪರಾಧಿ ದಾವಣಗೆರೆ ಜಿಲ್ಲೆಯ ತುರಚಘಟ್ಟದ ಬೆಳಂದೂರಿನ ರೇವಣಸಿದ್ದಪ್ಪ ಈಗಾಗಲೇ ವಿಚಾರಣಾ ಹಂತದಲ್ಲೇ ಮೃತಪಟ್ಟಿದ್ದಾನೆ. ಇನ್ನು ಮೊದಲ ಅಪರಾಧಿ ರೇವಣಸಿದ್ದಪ್ಪಗೆ ಪದಕ ಕಳ್ಳತನಕ್ಕೆ ಪ್ರೇರೇಪಿಸಿದ ಕವಿ ಮನೆಯ ಮಾರ್ಗದರ್ಶಕ ಆಂಜನಪ್ಪ ಎರಡನೇ ಅಪರಾಧಿಯಾಗಿದ್ದು, ಕಳ್ಳತನದ ಮಾಲೆಂದು ಗೊತ್ತಿದ್ದರೂ ಅವುಗಳನ್ನು ಖರೀದಿ ಮಾಡಿದ್ದ ಸವಳಂಗದ ಪ್ರಕಾಶ್ ಮೂರನೇ ಅಪರಾಧಿಯಾಗಿದ್ದಾನೆ.

    ಎರಡು ಮತ್ತು ಮೂರನೇ ಅಪರಾಧಿಗಳಿಗೆ ನ್ಯಾಯಾಲಯವು ತಲಾ ಎರಡು ವರ್ಷ ಜೈಲು ಶಿಕ್ಷೆ ಮತ್ತು ಐದು ಸಾವಿರ ರೂ. ದಂಡ ವಿಧಿಸಿದೆ. ಒಂದು ವೇಳೆ ದಂಡದ ಹಣ ಕಟ್ಟಲು ವಿಫಲವಾದರೆ, ಮತ್ತೆ ಆರು ತಿಂಗಳ ಕಾಲ ಹೆಚ್ಚುವರಿ ಶಿಕ್ಷೆ ಅನುಭವಿಸುವಂತೆ ತೀರ್ಪಿನಲ್ಲಿ ಆದೇಶಿಸಿದೆ.

    ಈ ಪ್ರಕರಣ 2015ರ ನವಂಬರ್ 23ರಂದು ನಡೆದಿತ್ತು. ಕವಿ ಮನೆಗೆ ನುಗ್ಗಿದ ಖದೀಮರು ಕುವೆಂಪು ಅವರಿಗೆ ಮೈಸೂರು ವಿವಿ ನೀಡಿದ್ದ ಎರಡು ಪದಕ, ಕೇಂದ್ರ ಸರ್ಕಾರ ನೀಡಿದ್ದ ಪದ್ಮವಿಭೂಷಣ ಪದಕ, ಒಂದು ಸಾವಿರ ರೂ ನಗದು ಕಳ್ಳತನ ಆಗಿತ್ತು. ಈ ಬಗ್ಗೆ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಖಜಾಂಚಿ ಮನುದೇವ್ ತೀರ್ಥಹಳ್ಳಿ ಠಾಣೆಗೆ ದೂರು ನೀಡಿದ್ದರು.

    ದೂರು ದಾಖಲಿಸಿಕೊಂಡಿದ್ದ ಪೊಲೀಸರು ಅಂದಿನ ಪಿಎಸ್‍ಐ ಭರತ್ ಕುಮಾರ್ ಹಾಗೂ ಸಿಪಿಐ ಎಚ್.ಎಂ ಮಂಜುನಾಥ್ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಿದ್ದರು. ಕಳ್ಳತನ ಮಾಡಿದ್ದ ಎಲ್ಲಾ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ ಪದ್ಮವಿಭೂಷಣ ಪದಕ ಮಾತ್ರ ಪತ್ತೆಯಾಗಿಲ್ಲ. ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಡಿ. ಬಿನು ಅವರು ವಾದ ಮಂಡಿಸಿದ್ದರು.