Tag: kundapura

  • ಕುಂದಾಪುರ | ಪ್ರವಾಸಕ್ಕೆ ಬಂದಿದ್ದ ಬೆಂಗ್ಳೂರಿನ ಮೂವರು ಯುವಕರು ಸಮುದ್ರ ಪಾಲು

    ಕುಂದಾಪುರ | ಪ್ರವಾಸಕ್ಕೆ ಬಂದಿದ್ದ ಬೆಂಗ್ಳೂರಿನ ಮೂವರು ಯುವಕರು ಸಮುದ್ರ ಪಾಲು

    ಕಾರವಾರ: ಬೆಂಗಳೂರಿನಿಂದ (Bengaluru) ಕುಂದಾಪುರಕ್ಕೆ (Kundapura) ಪ್ರವಾಸಕ್ಕೆ ಬಂದಿದ್ದ ಮೂವರು ಯುವಕರು ಸಮುದ್ರದ ಪಾಲಾಗಿದ್ದಾರೆ.

    ಕುಂದಾಪುರ ತಾಲೂಕಿನ ಗೋಪಾಡಿ ಚರ್ಕಿಕಡು ಎಂಬಲ್ಲಿ ಈ ದುರ್ಘಟನೆ ಸಂಭವಿಸಿದೆ. ಬೆಂಗಳೂರಿನಿಂದ ಹತ್ತು ಜನ ಯುವಕರು ಬಂದಿದ್ದರು. ಇದರಲ್ಲಿ 7 ಜನ ಜನ ಯುವಕರು ಸಮುದ್ರದ ತೀರದಲ್ಲಿ ಆಟವಾಡುತ್ತಾ ನೀರಿಗೆ ಇಳಿದಿದ್ದರು. ಅಲೆಗಳ ನಾಲ್ವರು ಕೊಚ್ಚಿಹೋಗಿದ್ದರು. ಓರ್ವನನ್ನು ರಕ್ಷಿಸಲಾಗಿದೆ. ಇದನ್ನೂ ಓದಿ: ಕಾರವಾರ| ಬೆಣ್ಣೆಹೊಳೆಯಲ್ಲಿ ಈಜಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳು ನೀರುಪಾಲು

    ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು, ಓರ್ವ ನಾಪತ್ತೆಯಾಗಿದ್ದು, ಆತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಕುಂದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: 3ನೇ ಪತ್ನಿಯಿಂದ ಬರ್ಬರ ಹತ್ಯೆಗೀಡಾದ ಪತಿ – ಮೃತದೇಹನ ಕಂಬಳಿಯಲ್ಲಿ ಸುತ್ತಿ ಬಾವಿಗೆ ಎಸೆದ್ರು

  • ಶಿವಮೊಗ್ಗ | ನದಿಗೆ ಉರುಳಿದ ಕಾರು – ಮಹಿಳೆ ದುರ್ಮರಣ

    ಶಿವಮೊಗ್ಗ | ನದಿಗೆ ಉರುಳಿದ ಕಾರು – ಮಹಿಳೆ ದುರ್ಮರಣ

    ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿ ಕಾರು ನದಿಗೆ ಉರುಳಿದ ಪರಿಣಾಮ ಓರ್ವ ಮಹಿಳೆ ಸಾವನ್ನಪ್ಪಿರುವ ಘಟನೆ ಮಂಡಗದ್ದೆ (Mandagadde) ಬಳಿ ನಡೆದಿದೆ.

    ಮೃತ ಮಹಿಳೆಯನ್ನು ಕುಂದಾಪುರದ (Kundapura) ತೆಕ್ಕಟ್ಟೆಯ ನಿವಾಸಿ ಸವಿತಾ ದೇವಾಡಿಗ (57) ಎಂದು ಗುರುತಿಸಲಾಗಿದೆ. ತೆಕ್ಕಟ್ಟೆಯ ಶಂಕರ ದೇವಾಡಿಗ ಅವರು ತಮ್ಮ ಮಾರುತಿ ಸ್ವಿಫ್ಟ್‌ ಕಾರಿನಲ್ಲಿ ಕುಟುಂಬದ ಆರು ಮಂದಿ ಸದಸ್ಯರೊಂದಿಗೆ ಶಿವಮೊಗ್ಗದಲ್ಲಿರುವ (Shivamogga) ಮಗಳ ಮನೆಗೆ ತೆರಳುತ್ತಿದ್ದರು. ಬೆಳಿಗ್ಗೆ 11 ಗಂಟೆ ಸುಮಾರಿಗೆ ಮಂಡಗದ್ದೆ ಬಳಿ ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ರಸ್ತೆ ಪಕ್ಕದಲ್ಲಿದ್ದ ನದಿಗೆ ಉರುಳಿದೆ. ಇದನ್ನೂ ಓದಿ: ಲಾರಿ ಓವರ್ ಟೇಕ್ ಮಾಡುವ ಭರದಲ್ಲಿ ನಿಯಂತ್ರಣ ತಪ್ಪಿ ಕಾರು ಪಲ್ಟಿ – ನಾಲ್ವರು ದುರ್ಮರಣ

    ಕಾರು ನೀರಿನಲ್ಲಿ ಮುಳುಗುತ್ತಿದ್ದಂತೆಯೇ ಸ್ಥಳೀಯರು ರಕ್ಣಣೆಗೆ ಮುಂದಾಗಿದ್ದಾರೆ. ಆದರೆ, ಶಂಕರ ದೇವಾಡಿಗ ಅವರ ಪತ್ನಿ ಸವಿತಾ ಅವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಅಪಘಾತದಲ್ಲಿ ಪೆಟ್ಟಾಗಿ ಅವರ ಸಾವು ಸಂಭವಿಸಿರಬಹುದು ಎಂದು ವೈದ್ಯರು ತಿಳಿಸಿದ್ದಾರೆ.

    ಶಂಕರ ದೇವಾಡಿಗ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರ ಪುತ್ರರಾದ ಅರುಣ್‌ ದೇವಾಡಿಗ ಮತ್ತು ಅಶ್ವತ್ಥ ದೇವಾಡಿಗ, ಪುತ್ರಿ ಅಮೃತಾ, ಅಳಿಯ ಸುರೇಶ್‌ ದೇವಾಡಿಗ ಹಾಗೂ ಎರಡೂವರೆ ವರ್ಷದ ಮೊಮ್ಮಗ ಅಭಿಶ್ರೇಯ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಅಪಘಾತದಿಂದ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಕ್ರೇನ್ ಸಹಾಯದಿಂದ ನದಿಯಿಂದ ಹೊರತೆಗೆಯಲಾಯಿತು. ಈ ಸಂಬಂಧ ಮಾಳೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಟ್ರೈನಿ ನರ್ಸ್ ಪ್ರಿಯತಮೆಯನ್ನು ಕತ್ತು ಸೀಳಿ ಕೊಂದ ಪ್ರಿಯಕರ – ಬಳಿಕ ತಾನೂ ಆತ್ಮಹತ್ಯೆಗೆ ಯತ್ನ

  • ರಾಜಕೀಯ ಮಾತಾಡ್ಬಾರದು ಅಂತ ಯಾವಾಗಿನಿಂದ ಜಾರಿಯಾಗಿದೆ? – ನೋಟಿಸ್‌ಗೆ ಚಕ್ರವರ್ತಿ ಸೂಲಿಬೆಲೆ ಕಿಡಿ

    ರಾಜಕೀಯ ಮಾತಾಡ್ಬಾರದು ಅಂತ ಯಾವಾಗಿನಿಂದ ಜಾರಿಯಾಗಿದೆ? – ನೋಟಿಸ್‌ಗೆ ಚಕ್ರವರ್ತಿ ಸೂಲಿಬೆಲೆ ಕಿಡಿ

    ಉಡುಪಿ: ಕರ್ನಾಟಕದಲ್ಲಿ ರಾಜಕೀಯ ಮಾತಾಡಬಾರದು ಎಂಬುದು ಯಾವಾಗಿನಿಂದ ಜಾರಿಯಾಗಿದೆ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ (Chakravarti Sulibele) ಕುಂದಾಪುರ (Kundapura) ಪೊಲೀಸರ (Police) ವಿರುದ್ಧ ಕಿಡಿಕಾರಿದ್ದಾರೆ.

    ಕುಂದಾಪುರದಲ್ಲಿ ಚಕ್ರವರ್ತಿ ಸೂಲಿಬೆಲೆಯವರಿಂದ `ಇನ್ನೀಗ ಅಖಂಡ ಭಾರತ ನಿರ್ಮಿಸಿಯೇ ವಿಶ್ರಾಂತಿ’ ಎಂಬ ವಿಚಾರವಾಗಿ ಜೂ.20, 21 ಮತ್ತು 22 ರಂದು ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಅನುಮತಿ ನೀಡಿರುವ ಪೊಲೀಸರು, ರಾಜಕೀಯ ಮಾತನಾಡಬಾರದು ಹಾಗೂ ಯಾವುದೇ ನಾಯಕರ ತೇಜೋವಧೆ ಮಾಡಬಾರದು ಎಂದು ಆಯೋಜಕರಿಗೆ ಹಾಗೂ ಸುಲಿಬೆಲೆಯವರಿಗೆ ನೋಟಿಸ್ ನೀಡಿದ್ದಾರೆ. ಇದೀಗ ನೋಟಿಸ್ ವಿಚಾರಕ್ಕೆ ಅವರು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಬಿಹಾರದಲ್ಲಿ ಇಂದು 5,000 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿಯಿಂದ ಚಾಲನೆ

    ಇದು ನನ್ನನ್ನು ಅಘೋಷಿತ ಗಡಿಪಾರು ಮಾಡಿಸುವ ಪ್ರಯತ್ನವಾಗಿದೆ. ನನಗೆ ನೋಟಿಸ್ ಹೊಸತಲ್ಲ, ಬಹಳ ಕಡೆಗಳಲ್ಲಿ ನೋಟಿಸ್ ಕೊಟ್ಟಿದ್ದಾರೆ. ಈ ಬಾರಿ ರಾಜಕೀಯ ಮಾತನಾಡಬಾರದು, ಯಾವುದೇ ನಾಯಕರ ತೇಜೋವಧೆ ಮಾಡಬಾರದು ಎಂದಿದ್ದಾರೆ. ನೆಹರು, ಇಂದಿರಾ, ರಾಜೀವ್ ಕುರಿತಂತೆ ಮಾತನಾಡಬಾರದು ಎಂದು ಅರ್ಥವೇ? ಘಜ್ನಿ, ಘೋರಿ, ಔರಂಗಜೇಬ್ ಮುಂತಾದ ಕ್ರೂರಿಗಳ ತೇಜೋವಧೆ ಮಾಡಬಾರದೆಂದು ಅರ್ಥವೇ? ಕರ್ನಾಟಕದಲ್ಲಿ ರಾಜಕೀಯ ಮಾತನಾಡಬಾರದು ಎನ್ನುವುದು ಎಂದಿನಿಂದ ಜಾರಿಯಾಯಿತು? ಕುಂದಾಪುರ ಪೊಲೀಸರೇ ಮಾಹಿತಿ ಕೊಟ್ಟರೆ ಉತ್ತಮ. ನಾನು ಕುಂದಾಪುರಕ್ಕೆ ಬರಬಾರದೆಂದು ಹೇಳುವವರು ದಯವಿಟ್ಟು ಕಾರ್ಯಕ್ರಮಕ್ಕೆ ಬನ್ನಿ ಎಂದಿದ್ದಾರೆ.

    ಕಾರ್ಯಕ್ರಮದ ಆಯೋಜಕ ನಿರಂಜನ್ ಶೆಟ್ಟಿ ಮಾತನಾಡಿ, ಎನ್‍ಎಸ್‍ಯುಐನವರು ಚಕ್ರವರ್ತಿ ಸೂಲಿಬೆಲೆಯವರು ಕುಂದಾಪುರಕ್ಕೆ ಬರಬಾರದು ಎಂದು ಪೊಲೀಸರಿಗೆ ಮನವಿ ಮಾಡಿದ್ದಾರೆ. ಭಾಷಣ ಮಾಡಲು ಅವಕಾಶ ನೀಡಬಾರದು ಎಂದಿದ್ದಾರೆ. ಅಖಂಡ ಭಾರತದ ಬಗ್ಗೆ ಉಪನ್ಯಾಸ ನೀಡುವಾಗ ಕಾಶ್ಮೀರದ ವಿಚಾರ ಬರುತ್ತೆ. ಕಾಶ್ಮೀರ ಕಾಂಗ್ರೆಸ್ ಕಾಲದಲ್ಲಿ ಸಮಸ್ಯೆ ಆಗಿ ಉಳಿದಿತ್ತು. ಈ ವಿಚಾರ ಜನರಿಗೆ ತಿಳಿಯಬಾರದು ಅನ್ನೋದು ಇವರ ಉದ್ದೇಶ ಇರಬಹುದು. ಕಾಂಗ್ರೆಸ್ ಬಣ್ಣ ಬಯಲಾಗುತ್ತೆ ಎನ್ನುವ ಕಾರಣಕ್ಕೆ ತಡೆಯಲು ಮುಂದಾಗಿದ್ದಾರೆ. ತಡೆಯಲು ಎಷ್ಟೇ ಪ್ರಯತ್ನಪಟ್ಟರು ಕಾರ್ಯಕ್ರಮ ಮಾಡಿಯೇ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಗುಂಡಿನ ಚಕಮಕಿಯಲ್ಲಿ ಕುಕಿ ಸಮುದಾಯದ ಮಹಿಳೆ ಸಾವು – ಮಣಿಪುರ ಮತ್ತೆ ಉದ್ವಿಗ್ನ

  • ತಿಮಿಂಗಿಲ ವಾಂತಿ ಮಾರಾಟಕ್ಕೆ ಯತ್ನ ಕೇಸ್‌ – ಮಫ್ತಿಯಲ್ಲಿದ್ದ ಅಧಿಕಾರಿಗಳನ್ನೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು

    ತಿಮಿಂಗಿಲ ವಾಂತಿ ಮಾರಾಟಕ್ಕೆ ಯತ್ನ ಕೇಸ್‌ – ಮಫ್ತಿಯಲ್ಲಿದ್ದ ಅಧಿಕಾರಿಗಳನ್ನೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು

    ಉಡುಪಿ: ಕುಂದಾಪುರ ಕೋಡಿ ಸಮುದ್ರ ತೀರದಲ್ಲಿ ತಿಮಿಂಗಿಲ ವಾಂತಿಯ ಅಕ್ರಮ ಮಾರಾಟದ ಖಚಿತ ಮಾಹಿತಿ ಮೇರೆಗೆ ಶೋಧ ಕಾರ್ಯಾಚರಣೆಗೆ ಮಫ್ತಿಯಲ್ಲಿ ಬಂದ ಸಿಐಡಿ ಅಧಿಕಾರಿಗಳ ಬಗ್ಗೆ ಸ್ಥಳೀಯರು ತಪ್ಪು ಗ್ರಹಿಕೆಯಿಂದ ಅಧಿಕಾರಿಗಳನ್ನೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.

    ಉಡುಪಿ ಜಿಲ್ಲೆಯ ಕುಂದಾಪುರ ಕೋಡಿಯಲ್ಲಿ ಅಂಬರ್ ಗ್ರೀಸ್ ಡೀಲ್ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಯುನಿಫಾರ್ಮ್ ಇಲ್ಲದೆ, ಮೂರು ಕಾರಿನಲ್ಲಿ ಬಂದ ಅರಣ್ಯ ಇಲಾಖೆಯ ಸಿಐಡಿ ವಿಭಾಗದ ಅಧಿಕಾರಿಗಳು ಶೋಧ ಕಾರ್ಯಾಚರಣೆಯಲ್ಲಿ ನಾಲ್ವರನ್ನು ವಶಕ್ಕೆ ಪಡೆದುಕೊಳ್ಳಲು ಮುಂದಾಗಿದ್ದಾರೆ. ಸ್ಥಳೀಯರ ತಪ್ಪು ಗ್ರಹಿಕೆಯಿಂದ ಅಧಿಕಾರಿಗಳನ್ನೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

    ಈ ವೇಳೆ ಸುತ್ತಮುತ್ತಲಿನ ಜನ ಸೇರಿದ್ದರಿಂದ ತಳ್ಳಾಟ ನಡೆದಿದೆ. ಇದರಿಂದಾಗಿ ಅಧಿಕಾರಿಗಳಿಗೆ ಗಾಯಗಳಾಗಿ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆರು ತಿಂಗಳ ಹಿಂದೆ ಕೋಟ ಮಣೂರಿನಲ್ಲಿ ಸಿಐಡಿ ಸೋಗಿನಲ್ಲಿ ದರೋಡೆಕೋರರು ಬಂದು ಮನೆ ದರೋಡೆಗೆ ವಿಫಲ ಪ್ರಯತ್ನ ಮಾಡಿದ್ದರು. ಸಿಸಿಟಿವಿ ಕ್ಯಾಮೆರಾದಲ್ಲಿ ದರೋಡೆ ಯತ್ನದ ದೃಶ್ಯ ಸೆರೆಯಾಗಿತ್ತು. ಈ ಘಟನೆ ನೆನಪಿಸಿಕೊಂಡ ಜನರು ಇದು ಕೂಡ ಅಂತಹದ್ದೇ ಮತ್ತೊಂದು ದರೋಡೆ ಯತ್ನ ಎಂದು ತಪ್ಪು ತಿಳಿದು ಅಧಿಕಾರಿಗಳ ಜೊತೆಗೆ ಘರ್ಷಣೆಗೆ ಇಳಿದಿದ್ದರು ಎನ್ನಲಾಗಿದೆ.

    ಅಂಬರ್ ಗ್ರೀಸ್ ವ್ಯವಹಾರ ನಡೆಯುತ್ತಿದ್ದು, ಸದ್ಯದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. ತಕ್ಷಣ ಕುಂದಾಪುರದ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಡ್ಯಾಂನಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರು ಪಾಲು

    ಡ್ಯಾಂನಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರು ಪಾಲು

    ಉಡುಪಿ: ಡ್ಯಾಂಗೆ ಈಜಲು (Swimming) ಹೋಗಿದ್ದ ಇಬ್ಬರು ಬಾಲಕರು ನೀರು ಪಾಲಾದ ಘಟನೆ ಕುಂದಾಪುರ (Kundapura) ತಾಲೂಕಿನ ಬೆಳ್ವೆಯಲ್ಲಿ ನಡೆದಿದೆ.

    ಮೃತ ಬಾಲಕರನ್ನು ಶ್ರೀಶ (13) ಹಾಗೂ ಜಯಂತ್ (19) ಎಂದು ಗುರುತಿಸಲಾಗಿದೆ. ನಾಲ್ವರು ಬಾಲಕರು ಡ್ಯಾಂಗೆ ಈಜಲು ಹೋಗಿದ್ದರು. ಈ ವೇಳೆ ಶ್ರೀಶ ಮತ್ತು ಜಯಂತ್ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

    ಶಂಕರನಾರಾಯಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು (Police) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಉಡುಪಿ: ಇನ್ನೊಬ್ಬರ ಜೀವ ಉಳಿಸಲು ಹೋಗಿ ತನ್ನ ಪ್ರಾಣವನ್ನೇ ತೆತ್ತ ಶಿಕ್ಷಕಿ ಅರ್ಚನಾ ಕಾಮತ್

    ಉಡುಪಿ: ಇನ್ನೊಬ್ಬರ ಜೀವ ಉಳಿಸಲು ಹೋಗಿ ತನ್ನ ಪ್ರಾಣವನ್ನೇ ತೆತ್ತ ಶಿಕ್ಷಕಿ ಅರ್ಚನಾ ಕಾಮತ್

    ಉಡುಪಿ: ಮಹಿಳೆಯೊಬ್ಬರ ಜೀವ ಉಳಿಸಲು ಹೋಗಿ ಶಿಕ್ಷಕಿ ತನ್ನ ಪ್ರಾಣವನ್ನೇ ಕಳೆದುಕೊಂಡ ಘಟನೆ ಉಡುಪಿಯ (Udupi) ಕುಂದಾಪುರದಲ್ಲಿ ನಡೆದಿದೆ.

    ಕುಂದಾಪುರ (Kundapura) ತಾಲೂಕಿನ ಕೊಟೇಶ್ವರದ ಅರ್ಚನಾ ಕಾಮತ್ (34) (Archana Kamath) ಮೃತಪಟ್ಟ ದುರ್ದೈವಿ. ಇವರು ಮಂಗಳೂರಿನ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದನ್ನೂ ಓದಿ: ಕಾನೂನು ಹೋರಾಟಕ್ಕೆ ತೊಡಕಾಗುವ ಆತಂಕ – ಜೈಲಲ್ಲಿ ಕಿರಿಕ್ ಮಾಡದಂತೆ ದರ್ಶನ್‍ಗೆ ಲಾಯರ್ ಪತ್ರ?

    ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ 69 ವರ್ಷದ ಹಿರಿಯ ಸಂಬಂಧಿಕ ಮಹಿಳೆಗೆ ಯಕೃತ್ತಿನ ಕಸಿಗೆ ದಾನಿಯಾಗಲು ಇವರು ಬಯಸಿದ್ದರು. ಯಕೃತ್ ದಾನ ಮಾಡಲು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ಅರ್ಚನಾ ದಾಖಲಾಗಿದ್ದರು. ಆದರೆ ಸೋಂಕಿಗೆ ತುತ್ತಾಗಿ ಜೀವ ಕಳೆದುಕೊಂಡಿದ್ದಾರೆ.

    ಸದಾ ಸಮಾಜಮುಖಿ ಚಿಂತನೆಯೊಂದಿಗೆ ಅರ್ಚನಾ ಕಾಮತ್ ಸಕ್ರಿಯವಾಗಿದ್ದರು. ಮೃತರು ಪತಿ ಸಿಎ ಚೇತನ ಕಾಮತ್, 4 ವರ್ಷದ ಮಗು ಹಾಗೂ ತಂದೆ-ತಾಯಿಯನ್ನು ಅಗಲಿದ್ದಾರೆ. ಅರ್ಚನಾ ಕುಟುಂಬದಲ್ಲಿ ಶೋಕ ಮಡುಗಟ್ಟಿದೆ. ಇದನ್ನೂ ಓದಿ: Nagamangala Violence | ಪಿಎಫ್‌ಐ ಸಂಘಟನೆಯವರು ಮಾತ್ರವಲ್ಲ, ಅಕ್ರಮ ಬಾಂಗ್ಲಾ ವಲಸಿಗರಿದ್ದಾರೆ – ಸುರೇಶ್‌ಗೌಡ

  • ಹಿಜಬ್ ವಿವಾದ ಎಫೆಕ್ಟ್: ಕುಂದಾಪುರ ಕಾಲೇಜು ಪ್ರಾಂಶುಪಾಲರಿಗೆ ಶಿಕ್ಷಕ ಪ್ರಶಸ್ತಿ ತಡೆಹಿಡಿದ ಸರ್ಕಾರ

    ಹಿಜಬ್ ವಿವಾದ ಎಫೆಕ್ಟ್: ಕುಂದಾಪುರ ಕಾಲೇಜು ಪ್ರಾಂಶುಪಾಲರಿಗೆ ಶಿಕ್ಷಕ ಪ್ರಶಸ್ತಿ ತಡೆಹಿಡಿದ ಸರ್ಕಾರ

    ಉಡುಪಿ: ಉತ್ತಮ ಪ್ರಾಂಶುಪಾಲ ಪ್ರಶಸ್ತಿಗೆ ಆಯ್ಕೆಯಾದ ಪ್ರಾಂಶುಪಾಲನಿಗೆ ಕೊನೆಯ ಕ್ಷಣದಲ್ಲಿ ಪ್ರಶಸ್ತಿಗೆ ಆಕ್ಷೇಪ ವ್ಯಕ್ತವಾಗಿದ್ದು, ಸರ್ಕಾರ ಪ್ರಶಸ್ತಿಯನ್ನು ತಡೆಹಿಡಿದಿದೆ.

    ಇಂದು (ಸೆ.5) ಶಿಕ್ಷಕರ ದಿನಾಚರಣೆ (Teachers Day) ಹಿನ್ನೆಲೆ ವಿವಿಧ ಶಿಕ್ಷಕರಿಗೆ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿಯನ್ನು ನೀಡಲಾಗುತ್ತದೆ. ಇದೇ ಹಿನ್ನೆಲೆಯಲ್ಲಿ ಕುಂದಾಪುರ (Kundapura) ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಪ್ರಶಸ್ತಿ ನೀಡುವ ಕುರಿತು ಸರ್ಕಾರ ತಡೆ ಹಿಡಿದಿದೆ.ಇದನ್ನೂ ಓದಿ: 2023-24ರಲ್ಲಿ ಅತಿಹೆಚ್ಚು ತೆರಿಗೆ ಪಾವತಿಸಿದ ಸೆಲೆಬ್ರಿಟಿಗಳು ಇವರೇ – ಕಿಂಗ್‌ ಕೊಹ್ಲಿ, ಬಾದ್‌ ಶಾಗೆ ಅಗ್ರಸ್ಥಾನ

    ಎರಡು ವರ್ಷಗಳ ಹಿಂದೆ ನಡೆದಿದ್ದ ಹಿಜಬ್ ವಿವಾದದ (Hijab Contraversy) ಪರಿಣಾಮ ರಾಜ್ಯ ಸರ್ಕಾರ ಪ್ರಶಸ್ತಿಯನ್ನು ತಡೆಹಿಡಿದಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿರುವಾಗ ಕುಂದಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಬಿ.ಜಿ ಅವರಿಗೆ ಉತ್ತಮ ಪ್ರಾಂಶುಪಾಲ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಆದರೆ ಇದೀಗ ಕಾಂಗ್ರೆಸ್ (Congress) ಸರ್ಕಾರ ಇದಕ್ಕೆ ತಡೆ ನೀಡಿದೆ.

    ಏನಿದರ ಹಿನ್ನೆಲೆ:
    ಎರಡು ವರ್ಷಗಳ ಹಿಂದೆ ನಡೆದಿದ್ದ ಹಿಜಬ್ ವಿವಾದದ ಪರಿಣಾಮ ರಾಜ್ಯ ಸರ್ಕಾರ ಪ್ರಶಸ್ತಿಯನ್ನು ತಡೆಹಿಡಿದಿದ್ದು, ಹಿಜಬ್ ಧರಿಸಿದ್ದ ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲರು ಕಾಲೇಜು ಗೇಟ್ ಬಳಿ ನಿಲ್ಲಿಸಿದ್ದರು. ಆ ಫೋಟೊ ವೈರಲ್ ಆಗಿತ್ತು. ಪ್ರಾಂಶುಪಾಲರ ಪ್ರಶಸ್ತಿ ಹಿಂಪಡೆಯುವಂತೆ ಕೆಲ ಪ್ರಗತಿಪರರು ಒತ್ತಡ ಹಾಕಿದ್ದರು. ಒತ್ತಡಕ್ಕೆ ಮಣಿದ ಸರ್ಕಾರ ಪ್ರಶಸ್ತಿಯನ್ನು ತಡೆಹಿಡಿದಿದೆ.ಇದನ್ನೂ ಓದಿ: ಅಮೆರಿಕದ ಶಾಲೆಯಲ್ಲಿ ವಿದ್ಯಾರ್ಥಿಯಿಂದ ಗುಂಡಿನ ದಾಳಿ – ಇಬ್ಬರು ಶಿಕ್ಷಕರು ಸೇರಿ ನಾಲ್ವರು ಸಾವು

  • ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ – ಕುಂದಾಪುರ, ಬ್ರಹ್ಮಾವರ ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ

    ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ – ಕುಂದಾಪುರ, ಬ್ರಹ್ಮಾವರ ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ

    ಉಡುಪಿ: ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಆರ್ಭಟ (Heavy Rain) ಹೆಚ್ಚಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣ ಆಗಿದೆ. ಈ ಹಿನ್ನೆಲೆಯಲ್ಲಿ ಉಡುಪಿ (Udupi) ಜಿಲ್ಲೆಯ ಎರಡು ತಾಲೂಕುಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

    ಉಡುಪಿ ಜಿಲ್ಲೆಯ ಕುಂದಾಪುರ (Kundapura), ಬ್ರಹ್ಮಾವರ (Brahmavara) ತಾಲೂಕಿನಲ್ಲಿ ಅಂಗನವಾಡಿ, ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಿ ಪೂರ್ವ ವಿಭಾಗಕ್ಕೆ ರಜೆ (Holiday For School) ಘೋಷಿಸಲಾಗಿದೆ. ಪದವಿ, ಸ್ನಾತಕೊತ್ತರ ಪದವಿ, ಡಿಪ್ಲೊಮಾ, ಎಂಜಿನಿಯರಿಂಗ್, ಐಟಿಐ ವಿದ್ಯಾಸಂಸ್ಥೆಗಳು ಎಂದಿನಂತೆ ನಡೆಯಲಿವೆ. ಅಲ್ಲದೇ ಉಡುಪಿ, ಬೈಂದೂರು, ಕಾಪು, ಕಾರ್ಕಳ, ಹೆಬ್ರಿಯಲ್ಲಿ ಶಾಲಾ, ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ.

    ಪ್ರವಾಹ ಪರಿಸ್ಥಿತಿ ನಿರ್ಮಾಣ:
    ಮಳೆಯ ಆರ್ಭಟ ಹೆಚ್ಚಿದ ಹಿನ್ನೆಲೆಯಲ್ಲಿ ಅಂಕೋಲದ ಸೇರಿ ವಿವಿಧೆಡೆ ಮಳೆಗೆ ಮನೆ, ಸೇತುವೆ, ರಸ್ತೆಗಳು ಜಲಾವೃತವಾಗಿದೆ. ಹೊನ್ನಾವರದ ವರ್ನಕ್ಕೇರಿ ಬಳಿ ಹೆದ್ದಾರಿ ಮೇಲೆ ಗುಡ್ಡ ಕುಸಿದಿದ್ದು, ಸಂಚಾರಕ್ಕೆ ಅಡಚಣೆಯಾಗಿದೆ. ಹೊನ್ನಾವರದ ಗುಂಡಬಾಳ ನದಿ ಉಕ್ಕಿ ಹರಿದು, 50 ಮನೆಗಳಿಗೆ ನೀರು ನುಗ್ಗಿದೆ.

    ಮಳೆ ನೀರಿನೊಂದಿಗೆ ತೇಲಿಬಂತು ಹೆಬ್ಬಾವು:
    ಕದಂಬ ನೌಕಾನೆಲೆಯ ಕಾಂಪೌಂಡ್, ಅವೈಜ್ಞಾನಿಕ ಹೆದ್ದಾರಿ ಕಾಮಗಾರಿ ಕಾರಣ ಆರಗಾ ಗ್ರಾಮ ಜಲಾವೃತದ ಭೀತಿ ಎದುರಿಸ್ತಿದೆ. ಜನರ ರಕ್ಷಣೆಗೆ ಎನ್‌ಡಿಆರ್‌ಎಫ್, ಬೋಟ್ ನಿಯೋಜಿಸಲಾಗಿದೆ. ಈ ನಡುವೆ ಕಾರವಾರದ ಸೋನಾರವಾಡದಲ್ಲಿ ಮಳೆಯ ನೀರಿನೊಂದಿಗೆ 12 ಅಡಿ ಉದ್ದದ ಹೆಬ್ಬಾವು ಮನೆಯೊಳಕ್ಕೆ ತೇಲಿಬಂದ ದೃಶ್ಯವೂ ಕಂಡುಬಂದಿದೆ.

    ಇನ್ನು, ಉಡುಪಿಯಲ್ಲಿ ಸೌಪರ್ಣಿಕಾ ನದಿ ಮೈದುಂಬಿದೆ. ಬೈಂದೂರು ತಾಲೂಕಿನ ನಾವುಂದ ಬಡಾಕೆರೆ ಜಲಾವೃತವಾಗಿದೆ. 100ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ. ಮಂಗಳೂರಿನ ಕೆತ್ತಿಕ್ಕಲ್‌ನಲ್ಲಿ ಗುಡ್ಡ ಕುಸಿಯುತ್ತಿದೆ. ಮಣ್ಣಿನ ದಿಬ್ಬ ರಸ್ತೆ ಮೇಲೆ ಬೀಳುವ ಆತಂಕ ಎದುರಾಗಿದೆ. ಪಶ್ಚಿಮಘಟ್ಟ ಪ್ರದೇಶದಲ್ಲಿಯೂ ಮಳೆ ಅಬ್ಬರಿಸುತ್ತಿದೆ. ಬೆಳಗಾವಿಯ ಸಪ್ತ ನದಿಗಳಿಗೆ ಜೀವ ಕಳೆ ಬಂದಿದೆ. ಗೋಕಾಕ್ ಫಾಲ್ಸ್‌ನಲ್ಲಿ ಜಲವೈಭವ ಕಂಡುಬರುತ್ತಿದೆ. ಬೆಳಗಾವಿ-ಸಾವಗಾಂವ ಜಿಲ್ಲಾ ಮುಖ್ಯರಸ್ತೆ ಬಿರುಕು ಬಿಟ್ಟಿರುವುದು ಕಂಡುಬಂದಿದೆ.

  • ನಮಗೆ ಫ್ರೀ ಬೇಡ, ಹೆಚ್ಚುವರಿ ಬಸ್ ಓಡಿಸಿ: ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ವಿದ್ಯಾರ್ಥಿನಿ ಕ್ಲಾಸ್

    ನಮಗೆ ಫ್ರೀ ಬೇಡ, ಹೆಚ್ಚುವರಿ ಬಸ್ ಓಡಿಸಿ: ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ವಿದ್ಯಾರ್ಥಿನಿ ಕ್ಲಾಸ್

    – ಸರಿಯಾದ ಸಮಯಕ್ಕೆ ಬಸ್ ಬಿಡಿ ಎಂದು ಘರ್ಜನೆ

    ಉಡುಪಿ: ನಮಗೆ ಫ್ರೀ ಬಸ್ ಬೇಡ, ಹೆಚ್ಚುವರಿ ಬಸ್ಸುಗಳನ್ನು ಹಳ್ಳಿಯಲ್ಲಿ ಓಡಿಸಿ ಸಹಾಯ ಮಾಡಿ ಎಂದು ಸರ್ಕಾರದ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ (Student Protest) ಮಾಡಿದ ಘಟನೆ ಉಡುಪಿ (Udupi) ಜಿಲ್ಲೆಯಲ್ಲಿ ನಡೆದಿದೆ.

    ಸರಿಯಾದ ಸಮಯಕ್ಕೆ ಓಡುವ ಹೆಚ್ಚುವರಿ ಬಸ್ಸುಗಳನ್ನು ಕೊಡಿ. ನಾವು ಪಾಸ್ ಮಾಡಿಸುತ್ತೇವೆ. ಹಣಕೊಟ್ಟು ಪ್ರಯಾಣ ಮಾಡುತ್ತೇವೆ ಎಂದು ಏರು ಧ್ವನಿಯಲ್ಲಿ ಉಡುಪಿ ಜಿಲ್ಲೆಯ ಬೈಂದೂರಿನ ವಿದ್ಯಾರ್ಥಿನಿ ಕೆಎಸ್‌ಆರ್‌ಟಿಸಿ ಅಧಿಕಾರಿ (KSRTC Officer) ಮುಂದೆ ಸಮಸ್ಯೆ ತೋಡಿಕೊಂಡಿದ್ದಾಳೆ. ಎಬಿವಿಪಿ (ABVP) ನೇತೃತ್ವದಲ್ಲಿ ಕುಂದಾಪುರದಲ್ಲಿ (Kundapura) ಪ್ರತಿಭಟನೆ ನಡೆದ ಸಂದರ್ಭ ತಮಗಾಗುವ ಬಸ್ ಸಮಸ್ಯೆಗಳ ವಿರುದ್ಧ ಸರ್ಕಾರದ ಇಲಾಖೆಯ ವಿರುದ್ಧ ಧಿಕ್ಕಾರ ಕೂಗಿದರು. ಉಚಿತ ಬಸ್ಸಿನಿಂದಾಗಿ ವಿದ್ಯಾರ್ಥಿಗಳು ಅಲೆದಾಡುವಂತಾಗಿದೆ. ಬೆಳಗ್ಗೆ, ಸಂಜೆ ಬಸ್ಸಿನಲ್ಲಿ ಸೀಟ್ ಸಿಗುವುದಿಲ್ಲ. ಸರಿಯಾದ ಸಮಯಕ್ಕೆ ಮನೆ ತಲುಪುವುದು ಕಷ್ಟವಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಹೆಚ್ಚುವರಿ ಬಸ್ಸುಗಳನ್ನು ಓಡಿಸಿ ಸಹಾಯ ಮಾಡಿ ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಇನ್ನು 5 ದಿನ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಭಾರೀ ಮಳೆ

    ಈ ಕುರಿತು ವಿದ್ಯಾರ್ಥಿನಿಯೊಬ್ಬಳು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವ ವೀಡಿಯೋ ವೈರಲ್ ಆಗಿದೆ. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರ ಕೊಡಿ. ಅವರ ಸಮಸ್ಯೆಯನ್ನು ಕೇಳಿ, ಅದಕ್ಕೆ ಏನು ಪರಿಹಾರ ಕೊಡುತ್ತೀರಿ ಕೊಡಿ. ವಿದ್ಯಾರ್ಥಿಗಳಿಗೆ ಸಮಸ್ಯೆಯಾದರೆ ಅವರೊಂದಿಗೆ ಶಾಸಕನಾಗಿ ನಾನು ಕೂಡ ಮಕ್ಕಳೊಂದಿಗೆ ಪ್ರತಿಭಟನೆಯಲ್ಲಿ ಕುಳಿತುಕೊಳ್ಳುತ್ತೇನೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಎಚ್ಚರಿಸಿದರು. ಇದನ್ನೂ ಓದಿ: ಮೋದಿ 3.0 ಯುಗಾರಂಭಕ್ಕೆ ಕ್ಷಣಗಣನೆ – ರಾಷ್ಟ್ರಪತಿ ಭವನಕ್ಕೆ ಮೂರು ಹಂತದ ಭದ್ರತೆ!

    ಒಂದು ವಾರದ ಒಳಗೆ ಸಮಸ್ಯೆ ಬಗೆಹರಿಸದೆ ಇದ್ದರೆ ರಸ್ತೆ ತಡೆ ಮಾಡಿ ಪ್ರತಿಭಟಿಸುತ್ತೇವೆ ಎಂದು ಎಚ್ಚರಿಸಿದರು. ವಿದ್ಯಾರ್ಥಿಗಳ ಮನವಿಗೆ ಗೌರವಿಸಿ ಮೇಲಧಿಕಾರಿಗಳಿಗೆ ತಾಲೂಕಿನ ಸಮಸ್ಯೆಯನ್ನು ತಲುಪಿಸಿ ಎಂದು ಸೂಚಿಸಿದರು. ಇದನ್ನೂ ಓದಿ: ಮೋದಿ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಖರ್ಗೆ

  • ತಾಯಿಯ ಶವದ ಜೊತೆ 4 ದಿನ ಕಳೆದ ಮಾನಸಿಕ ಅಸ್ವಸ್ಥೆ!

    ತಾಯಿಯ ಶವದ ಜೊತೆ 4 ದಿನ ಕಳೆದ ಮಾನಸಿಕ ಅಸ್ವಸ್ಥೆ!

    – ತೀವ್ರ ಅಸ್ವಸ್ಥಗೊಂಡಿದ್ದ ಪುತ್ರಿಯೂ ಸಾವು

    ಉಡುಪಿ: ಮಾನಸಿಕ ಅಸ್ವಸ್ಥ ಪುತ್ರಿಯೊಬ್ಬಳು ತನ್ನ ತಾಯಿಯ ಶವದ ಜೊತೆ 4 ದಿನ ಕಳೆದು ಬಳಿಕ ತಾನೂ ಸಾವನ್ನಪ್ಪಿದ ಘಟನೆಯೊಂದು ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ (Kundapura) ನಡೆದಿದೆ.

    ತಾಯಿ ಜಯಂತಿ ಶೆಟ್ಟಿ (62), ಮಗಳು ಪ್ರಗತಿ ಶೆಟ್ಟಿ (32) ಮೃತರು. ಇವರು ಕುಂದಾಪುರದ ಮೂಡುಗೋಪಾಡಿಯ ದಾಸನಹಾಡಿ ನಿವಾಸಿಗಳು. ಇದನ್ನೂ ಓದಿ: ನಟಿ ಮಾಳವಿಕಾ ಅವಿನಾಶ್‌ಗೆ ಪಿತೃವಿಯೋಗ

    ಅನಾರೋಗ್ಯದಿಂದ ಬಳಲುತ್ತಿದ್ದ ಜಯಂತಿ ಶೆಟ್ಟಿಯವರು 3-4 ದಿನಗಳ ಹಿಂದೆ ತಮ್ಮ ಮನೆಯಲ್ಲಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ದುರ್ವಾಸನೆ ಬೀರುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳೀಯರು ಬಂದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಜಯಂತಿ ಶೆಟ್ಟಿ ಮೃತಪಟ್ಟಿರುವುದು ಬಯಲಾಗಿದೆ.

    ಇತ್ತ ಮೃತಪಟ್ಟರೂ ಅಸ್ವಸ್ಥ ಮಗಳು ತಾಯಿ ಶವದ ಜೊತೆಯೇ ದಿನ ಕಳೆಯುತ್ತಿದ್ದಳು. ಬಳಿಕ ಕುಂದಾಪುರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಆಕೆಯನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ತೀವ್ರ ಅಸ್ವಸ್ಥಗೊಂಡಿದ್ದ ಪ್ರಗತಿ ಶೆಟ್ಟಿ ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದಾಳೆ.