Tag: Kundapur

  • ಉಡುಪಿಯ ಶ್ರೀ ದುರ್ಗಾಂಬಾ ಬಸ್ ಮಾಲೀಕ ತಮಿಳುನಾಡಿನಲ್ಲಿ ಸಾವು

    ಉಡುಪಿಯ ಶ್ರೀ ದುರ್ಗಾಂಬಾ ಬಸ್ ಮಾಲೀಕ ತಮಿಳುನಾಡಿನಲ್ಲಿ ಸಾವು

    ಉಡುಪಿ: ತಮಿಳುನಾಡಿನ ನಮಕ್ಕಲ್ ಜಿಲ್ಲೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕುಂದಾಪುರದ ಶ್ರೀ ದುರ್ಗಾಂಬಾ ಟ್ರಾವೆಲ್ಸ್ ಮಾಲೀಕ ಸುನೀಲ್ ಚಾತ್ರ ಸಾವನ್ನಪ್ಪಿದ್ದಾರೆ. ವ್ಯವಹಾರ ಸಂಬಂಧಿ ಪ್ರವಾಸದಲ್ಲಿದ್ದ ಸುನೀಲ್ ಈ ಅವಘಡ ಸಂಭವಿಸಿದೆ.

    ತಮಿಳುನಾಡಿಗೆ ಪಜೆರೋ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ, ಮಧ್ಯಾಹ್ನ ಸುಮಾರು ಮೂರು ಗಂಟೆ ವೇಳೆ ಈ ಘಟನೆ ನಡೆದಿದೆ. ಚಾಲಕ ಕೂಡ ಗಾಯಗೊಂಡಿದ್ದಾನೆ. ಸುನಿಲ್ ಛಾತ್ರ ಶ್ರೀ ದುರ್ಗಾಂಬಾ ಟ್ರಾವೆಲ್ಸ್ ಆಡಳಿತ ಪಾಲುದಾರರಾಗಿದ್ದು ತಂದೆಯ ಮಾಲೀಕತ್ವದ ಟ್ರಾವೆಲ್ಸ್ ಅನ್ನು ಸಹೋದರನೊಂದಿಗೆ ನೋಡಿಕೊಳ್ಳುತ್ತಿದ್ದರು.

    ಮೃತ ಸುನೀಲ್ ಛಾತ್ರರು ವಿವಾಹಿತರಾಗಿದ್ದು, ಅವರ ಮೃತದೇಹ ಭಾನುವಾರ ಕುಂದಾಪುರ ತಲುಪಲಿದೆ. ಅಂತಾರಾಜ್ಯ ಮಟ್ಟದಲ್ಲಿಯೂ ಬಸ್ ಸಂಪರ್ಕ ಸೇವೆ ಕಲ್ಪಿಸಿದ್ದ ಛಾತ್ರ ಕುಟುಂಬ, ಕುಂದಾಪುರದ ಕುಗ್ರಾಮಗಳಿಗೂ ನಿತ್ಯ ಬಸ್ ಸಂಪರ್ಕ ವ್ಯವಸ್ಥೆ ಕಲ್ಪಿಸಿತ್ತು.

    ಸಾರ್ವಜನಿಕ ಸೇವೆಯ ವಿಷಯದಲ್ಲಿ ಶ್ರೀ ದುರ್ಗಾಂಬಾ ಜನಮನ್ನಣೆಗೆ ಪಾತ್ರವಾಗಿತ್ತು. ಕೆಎಸ್‍ಆರ್‍ಟಿಸಿ ಬಸ್ ವ್ಯವಸ್ಥೆ ಇಲ್ಲದ ಕಡೆಗಳಲ್ಲಿ ಶ್ರೀ ದುರ್ಗಾಂಬಾ ಬಸ್ಸುಗಳು ಓಡಾಡುತ್ತಿತ್ತು. ಲಾಭಕ್ಕಿಂತ ಹೆಚ್ಚು ಜನಸೇವೆಗೆ ಶ್ರೀ ದುರ್ಗಾಂಬಾ ಒತ್ತುಕೊಡುತ್ತಿತ್ತು ಎಂದು ಪ್ರಯಾಣಿಕ ರಾಘು ಕುಂದಾಪುರ ಹೇಳುತ್ತಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕುಂದಾಪುರದಲ್ಲಿ ಗೋವು ಕಳ್ಳರ ಅಟ್ಟಹಾಸ ಸಿಸಿಟಿವಿಯಲ್ಲಿ ಸೆರೆ

    ಕುಂದಾಪುರದಲ್ಲಿ ಗೋವು ಕಳ್ಳರ ಅಟ್ಟಹಾಸ ಸಿಸಿಟಿವಿಯಲ್ಲಿ ಸೆರೆ

    ಉಡುಪಿ: ಜಿಲ್ಲೆಯಾದ್ಯಂತ ಗೋವು ಕಳ್ಳರ ಅಟ್ಟಹಾಸ ಜಾಸ್ತಿಯಾಗಿದೆ. ರಸ್ತೆ ಬದಿ ಮಲಗುವ ಹಸುಗಳನ್ನೆಲ್ಲ ಕಳ್ಳತನ ಮಾಡುತ್ತಿರುವ ಕಳ್ಳರು ಕೊಟ್ಟಿಗೆಗೂ ನುಗ್ಗಿ ಹಸುಗಳ ಕಳ್ಳತನ ಮಾಡುತ್ತಿದ್ದಾರೆ. ಈ ನಡುವೆ ಕುಂದಾಪುರ ತಾಲೂಕಿನಲ್ಲಿ ನಡೆದ ಗೋವು ಕಳ್ಳತನದ ದೃಶ್ಯವೊಂದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಕುಂದಾಪುರ ತಾಲೂಕಿನ ಸಿದ್ದಾಪುರ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಬಸ್ರೂರು ಮಹಾಲಿಂಗೇಶ್ವರ ಪೆಟ್ರೋಲ್ ಬಂಕ್ ನಲ್ಲಿ ಗೋವು ಕಳ್ಳತನ ನಡೆಸಲು ದುಷ್ಕರ್ಮಿಗಳು ವಿಫಲ ಯತ್ನಿ ನಡೆಸಿದ್ದಾರೆ. ಈ ವೀಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ವಿಡಿಯೋದಲ್ಲೇನಿದೆ?:
    ತಡರಾತ್ರಿ 1 ಗಂಟೆ 45 ಸುಮಾರಿಗೆ ಹೆದ್ದಾರಿಯಲ್ಲಿ ಬಿಳಿಬಣ್ಣದ ರಿಟ್ಜ್ ಕಾರು ಬಂದು ನಿಲ್ಲುತ್ತದೆ. ಕಾರಿನಿಂದ ಒಬ್ಬೊಬ್ಬರಾಗಿ ನಾಲ್ವರು ಮುಸುಕುಧಾರಿಗಳು ಇಳಿದು ಬರುತ್ತಾರೆ. ಪೆಟ್ರೋಲ್ ಬಂಕಿನೊಳಗೆ ಬಂದು ಅಲ್ಲಿದ್ದ ಬಿಡಾಡಿ ಗೋವುಗಳನ್ನು ಹಿಡಿಯಲು ಯತ್ನ ನಡೆಸುತ್ತಾರೆ. ಕೊನೆಗೆ ಕರುವೊಂದು ಕೈಗೆ ಸಿಗಬೇಕೆನ್ನುವ ಹೊತ್ತಲ್ಲಿ ಯಾವುದೋ ವಾಹನದ ಬರುವಿಕೆಗೆ ಬೆದರಿ ನಾಲ್ವರು ದುಷ್ಕರ್ಮಿಗಳು ಅಲ್ಲಿಂದ ಓಡಿ ಹೋಗುತ್ತಾರೆ.

    ಇದೇ ಜಾಗದಿಂದ ಅರ್ಧ ಕಿಲೋಮೀಟರ್ ದೂರದಲ್ಲಿ ಎರಡು ಹಸುಗಳನ್ನು ಕಾರಲ್ಲಿ ತುಂಬಿ ಕದ್ದೊಯ್ದಿದ್ದಾರೆ ಎನ್ನಲಾಗಿದೆ. ಈ ಭಾಗದಲ್ಲಿ ಕಳೆದ 10 ವರ್ಷದಿಂದ ಗೋವು ಕಳ್ಳತನ ನಡೆಯುತ್ತಿದ್ದರೂ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಅಂತ ಸ್ಥಳೀಯರು ದೂರಿದ್ದಾರೆ.

    ವಿಶ್ವ ಹಿಂದೂ ಪರಿಷದ್ ಮುಖಂಡ ಸುನೀಲ್ ಮಾತನಾಡಿ, ಈ ಒಂದು ಪ್ರಕರಣ ಸಿಸಿಟಿವಿಯಲ್ಲಿ ಸೆರೆಯಾಗಿರಬಹುದು. ಇಂತಹ ಸಾವಿರ ಕಳ್ಳತನ ನಡೆಯುತ್ತಿದ್ದರೂ ಕಾನೂನಾತ್ಮಕ ಕ್ರಮ ಆಗುತ್ತಿಲ್ಲ ಎಂದು ಆರೋಪಿಸಿದ್ದಾರೆ. ಹಟ್ಟಿಯಿಂದ ಹಸು ಕಳ್ಳತನ ಆಗುತ್ತಿದೆ. ಕೃಷಿಕರು ಹಸು ಸಾಕಣೆಗೆ ಹಿಂದೇಟು ಹಾಕುವ ಪರಿಸ್ಥಿತಿ ಕರಾವಳಿಯಲ್ಲಿದೆ ಅಂತ ಅಸಮಾಧಾನ ವ್ಯಕ್ತಪಡಿಸಿದರು.

    https://www.youtube.com/watch?v=10DMOxtJCiY

  • ಪ್ರಮೋದ್ ಶೆಟ್ಟಿ ಪಾಲಿಗೆ ಆಕಸ್ಮಿಕವೇ ಆರಂಭ!

    ಪ್ರಮೋದ್ ಶೆಟ್ಟಿ ಪಾಲಿಗೆ ಆಕಸ್ಮಿಕವೇ ಆರಂಭ!

    – ರಂಗಭೂಮಿಯಿಂದಾಗಿ ಶುರುವಾಯ್ತು ಸಿನಿಮಾ ಯಾನ!

    ಶ್ರೀಮನ್ನಾರಾಯಣ ಚಿತ್ರದಲ್ಲಿನ ವಿಶಿಷ್ಟವಾದೊಂದು ವಿಲನ್ ಪಾತ್ರದ ಮೂಲಕ ಪ್ರೇಕ್ಷಕರಿಗೆ ಸರ್‍ಪ್ರೈಸ್ ಕೊಡೋ ಖುಷಿಯಲ್ಲಿರುವವರು ಪ್ರಮೋದ್ ಶೆಟ್ಟಿ. ಉಳಿದವರು ಕಂಡಂತೆ, ರಿಕ್ಕಿ, ಕಿರಿಕ್ ಪಾರ್ಟಿ ಚಿತ್ರಗಳಲ್ಲಿ ಮನಸಲ್ಲುಳಿಯುವಂಥಾ ನಟನೆ ನೀಡಿದ್ದ ಪ್ರಮೋದ್ ಅಪ್ಪಟ ರಂಗಭೂಮಿ ಪ್ರತಿಭೆ. ನಾಟಕಗಳೇ ತನ್ನ ಜಗತ್ತೆಂಬಂತೆ ಫಿಕ್ಸಾಗಿದ್ದ ಅವರು ನಟನೆಯನ್ನು ಆರಿಸಿಕೊಂಡಿದ್ದೇ ಒಂದು ಆಕಸ್ಮಿಕ. ಅಲ್ಲಿ ಬಣ್ಣ ಹಚ್ಚಿ ನಟನಾಗಿ ರೂಪುಗೊಂಡ ಪ್ರಮೋದ್ ಸಿನಿಮಾ ರಂಗದಲ್ಲಿಯೂ ಖ್ಯಾತ ನಟ ಅನ್ನಿಸಿಕೊಂಡಿದ್ದು ಮತ್ತೊಂದು ಆಕಸ್ಮಿಕ!

    ಪ್ರಮೋದ್ ಶೆಟ್ಟಿಯವರ ಒಟ್ಟಾರೆ ಸ್ಟೋರಿಯನ್ನು ಮುಂದಿಟ್ಟುಕೊಂಡು ಹೇಳೋದಾದರೆ ಆಕಸ್ಮಿಕಗಳೇ ಅವರ ಪಾಲಿನ ಅದ್ಭುತ ಆರಂಭ!

    ತಂದೆ ಹೋಟೆಲ್ ಉದ್ಯಮಿ. ಬುದ್ಧಿ ಬಲಿತಾಗಿಂದಲೂ ಯಾವುದಕ್ಕೂ ತತ್ವಾರವಿಲ್ಲದ ಸ್ಥಿತಿವಂತ ಕುಟುಂಬ. ತಂದೆಯ ಬ್ಯುಸಿನೆಸ್ಸಿನ ಕಾರಣದಿಂದ ಬದುಕು ಬೆಂಗಳೂರಿನಲ್ಲಿದ್ದರೂ ತಾಯಿ ದೇವಕಿಯವರ ಕಾರಣದಿಂದ ಕುಂದಾಪುರದ ಕಿರಾಡಿಯ ಮೇಲೆ ಕರುಳಬಳ್ಳಿಯ ಸೆಳೆತ. ಕಾಲೇಜು ತಲುಪಿಕೊಂಡಾದ ಮೇಲೂ ಕೂಡಾ ಪ್ರಮೋದ್ ಅವರದ್ದು ಹೇಳಿಕೊಳ್ಳುವಂಥಾ ಕನಸು, ಉದ್ದೇಶಗಳಿರದ ಬಂದದ್ದನ್ನು ಬಂದ ಹಾಗೆ ಸ್ವೀಕರಿಸಿ ಬದುಕೋ ಮನಸ್ಥಿತಿ. ಒಳಗೊಳಗೇ ಮಗ ತನ್ನ ವಹಿವಾಟುಗಳ ವಾರಸುದಾರನಾಗುತ್ತಾನೆಂಬ ತಂದೆಯ ಒಳ ಆಸೆ. ಇದೆಲ್ಲವನ್ನೂ ಮೀರಿದ ಸಿಲ್ಲಿ ಆಕಸ್ಮಿಕವೊಂದು ಘಟಿಸಿದ್ದು ಪ್ರಮೋದ್ ಪಿಯುಸಿಯಲ್ಲಿದ್ದಾಗ!

    https://www.instagram.com/p/Bl2yZdbA_BH/?taken-by=pramodshettyk

    ಈಗ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಎಂಬ ಚಿತ್ರ ನಿರ್ದೇಶನ ಮಾಡುತ್ತಿದ್ದಾರಲ್ಲಾ ಸುಜಯ್. ಅವರು ಪ್ರಮೋದ್ ಅವರ ಕುಚಿಕು ಗೆಳೆಯ. ಇಬ್ಬರೂ ಒಗ್ಗಟ್ಟಾಗಿ ವರ್ಷ ಪೂರ್ತಿ ಬಂಕ್ ಹೊಡೆದು ಅಲೆದ ಪರಿಣಾಮವಾಗಿ ಹಾಲ್ ಟಿಕೆಟಿಗೇ ಕಂಟಕ ಎದುರಾಗಿತ್ತು. ಅಂಥಾ ಸಂದರ್ಭದಲ್ಲಿಯೇ ಕಾಲೇಜಿನ ನಾಟಕ ತಂಡದ ಕಡೆಯಿಂದ ಆಸಕ್ತಿ ಇರುವವರಿಗಾಗೊಂದು ಮೆಮೋ ಬಂದಿದ್ದೇ ಸುಜಯ್ ಹಿಂದೆ ಮುಂದೆ ನೋಡದೆ ನಾಟಕ ಟೀಮಿಗೆ ಹೊರಟು ನಿಂತಿದ್ದರು. ಅವರು ಒತ್ತಾಯದಿಂದಲೇ ಪ್ರಮೋದ್ ರನ್ನೂ ಕರೆದೊಯ್ದಿದ್ದರು. ನಾಟಕ ಟೀಮಿಗೆ ಸೇರಿದರೆ ಅಟೆಂಡೆನ್ಸ್ ಕೊಡುತ್ತಾರೆಂಬುದೊಂದೇ ಸುಜಯ್ ಗಿದ್ದ ದುರಾಸೆ!

    ಹಾಗೆ ಅಚಾನಕ್ಕಾಗಿ ನಾಟಕ ತಂಡಕ್ಕೆ ಸೇರಿಕೊಂಡು ಬೆರಗಿನಿಂದಲೇ ಅದರ ತೆಕ್ಕೆಗೆ ಬಿದ್ದಿದ್ದ ಪ್ರಮೋದ್ ಡಿಗ್ರಿಗೆ ಬರುವ ಹೊತ್ತಿಗೆಲ್ಲಾ ನಟನಾಗಿ ರೂಪುಗೊಂಡಿದ್ದರು. ಅಲ್ಲೇ ಅವರಿಗೆ ಕೃಷ್ಣಮೂರ್ತಿ ಕವತ್ತಾರ್ ಗುರುವಾಗಿ ಸಿಕ್ಕಿದರು. ಅಲ್ಲಿಂದಾಚೆಗೆ ಕಾಲೇಜು ಬಿಟ್ಟ ಮೇಲೆಯೂ ನಾನಾ ನಾಟಕ ತಂಡಗಳಲ್ಲಿ ಅಭಿನಯಿಸಿದ್ದ ಪ್ರಮೋದ್‍ಗೆ ಲೋಕಿ, ಸೃಜನ್ ಲೋಕೇಶ್, ಮುನಿ ಮುಂತಾದ ಅನೇಕ ಸಿನಿಮಾ ನಟರು ಸಹಪಾಠಿಗಳಾದರು. ಆದರೂ ಕೂಡಾ ಅವರೆಂದೂ ಸಿನಿಮಾದಲ್ಲಿ ನಟಿಸೋ ಆಲೋಚನೆ ಮಾಡಿರಲೇ ಇಲ್ಲ. ಆದರೂ ಗುರುಗಳ ಒತ್ತಾಸೆಯ ಮೇರೆಗೆ ನರಸಿಂಹರಾಜು ಅವರ ಮೊಮ್ಮಗ ಅರವಿಂದ್ ನಿರ್ದೇಶನದ ಜುಗಾರಿ ಚಿತ್ರದಲ್ಲಿ ನಟಿಸಿದ್ದ ಪ್ರಮೋದ್ ಗೆ ಸಿನಿಮಾ ಶೂಟಿಂಗ್ ಎಂಬುದೇ ಬೋರಿಂಗ್ ಅನ್ನಿಸಿತ್ತಂತೆ. ಆದ್ದರಿಂದಲೇ ಅವರು ಮತ್ತೆ ನಾಟಕದ ಲೋಕದಲ್ಲಿ ಲೀನವಾಗಿದ್ದರು.

    ಇಂಥಾ ಪ್ರಮೋದ್ ಶೆಟ್ಟಿಯವರನ್ನು ಸಿನಿಮಾ ನಟನಾಗಿ ರೂಪುಗೊಳ್ಳುವಂತೆ ಮಾಡಿದ್ದ ಕಾಲೇಜು ಗೆಳೆಯ, ಈಗಿನ ನಿರ್ದೇಶಕ ರಿಷಬ್ ಶೆಟ್ಟಿ. ಅವರು ರಕ್ಷಿತ್ ಗೆ ಪರಿಚಯಿಸಿ ಪ್ರಮೋದ್ ಗೆ ಮನಸಿಲ್ಲದಿದ್ದರೂ ಉಳಿದವರು ಕಂಡಂತೆ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸುವಂತೆ ಮಾಡಿದ್ದರು. ಅಲ್ಲಿಂದೀಚೆಗೆ ರಿಕ್ಕಿ, ಕಿರಿಕ್ ಪಾರ್ಟಿ ಚಿತ್ರಗಳ ಮೂಲಕ ಬೇಡಿಕೆ ಗಳಿಸಿಕೊಂಡಿರೋ ಪ್ರಮೋದ್ ಶ್ರೀಮನ್ನಾರಾಯಣ ಚಿತ್ರದಲ್ಲಿ ಅತಿರಥ ಮಹಾರಥ ಖಳ ನಟರನ್ನು ಮನಸಲ್ಲಿಟ್ಟುಕೊಂಡು ರೂಪಿಸಿದ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ.

    ರಂಗಭೂಮಿಯಲ್ಲಿದ್ದಾಗಲೇ ಸುಪ್ರಿಯಾ ಶೆಟ್ಟಿಯವರ ಜೊತೆ ಲವ್ವಲ್ಲಿ ಬಿದ್ದಿದ್ದ ಪ್ರಮೋದ್ ವರ್ಷಾಂತರಗಳ ಕಾಲ ಅದನ್ನು ಕಾಯ್ದುಕೊಂಡು ಅವರನ್ನೇ ಮದುವೆಯೂ ಆಗಿದ್ದಾರೆ. ಮುದ್ದಾದೊಂದು ಹೆಣ್ಣು ಮಗುವೂ ಇದೆ. ಇವರ ಮಡದಿ ಸುಪ್ರಿಯಾ ಇದೀಗ ಕುಲವಧು ಸೀರಿಯಲ್ಲಿನ ಕಾಂಚನಾ ಪಾತ್ರದಿಂದಲೇ ಕಿರುತೆರೆಯಲ್ಲಿಯೂ ಅಲೆ ಸೃಷ್ಟಿಸಿದ್ದಾರೆ.

    ತಂದೆ ರಾಜು ಶೆಟ್ಟರಿಗೆ ಮಗ ನಟನಾಗಿ ಬಣ್ಣ ಹಚ್ಚೋದು ಅದೇಕೋ ಇಷ್ಟವಿರಲಿಲ್ಲ. ಆದರೆ ಹಂತ ಹಂತವಾಗಿ ನಟನಾಗಿ ಬೆಳೆಯುತ್ತಿರೋ ಮಗನ ಬಗ್ಗೆ ಒಳಗೊಳಗೇ ಹೆಮ್ಮೆ ಹೊಂದಿದ್ದ ಅವರು ಅದೆಷ್ಟೋ ನಾಟಕಗಳನ್ನು ಕದ್ದು ನೋಡಿದ್ದರಂತೆ. ಆದರೂ ಮಗ ಎಲ್ಲಿ ಖಾಲಿ ಜೋಳಿಗೆ ಇಳಿಬಿಟ್ಟುಕೊಂಡು ಓಡಾಡ ಬೇಕಾಗುತ್ತದೋ ಎಂಬ ಭಯದಿಂದಿದ್ದ ಪ್ರಮೋದ್ ಅವರ ತಂದೆಗೀಗ ಭರ್ಜರಿ ಖುಷಿ. ಯಾಕೆಂದರೆ ಪ್ರಮೋದ್ ಈಗ ಪ್ರಸಿದ್ಧ ನಟರಾಗಿ ರೂಪುಗೊಂಡಿದ್ದಾರೆ. ಆಕಸ್ಮಿಕವಾಗಿ ಎಂಟ್ರಿ ಕೊಟ್ಟಿದ್ದ ರಂಗಭೂಮಿಯ ಅನುಭವಗಳನ್ನೇ ಶಕ್ತಿಯಾಗಿಸಿಕೊಂಡಿರುವ ಪ್ರಮೋದ್ ನಟನೆಯ ಕಸುವಿನಿಂದಲೇ ಗಮನ ಸೆಳೆದಿದ್ದಾರೆ.

    ಸದ್ಯ ಪ್ರಮೋದ್ ನಟಿಸಿರುವ, ರಿಷಬ್ ಶೆಟ್ಟಿ ನಿರ್ದೇಶನದ ಸರ್ಕಾರಿ ಪ್ರಾಥಮಿಕ ಶಾಲೆ ಕಾಸರಗೋಡು- ಕೊಡುಗೆ ರಾಮಣ್ಣ ರೈ ಚಿತ್ರ ಬಿಡುಗಡೆಗೆ ರೆಡಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ https://www.instagram.com/publictvnews/

    https://www.instagram.com/p/BkpmyRqgUTx/?taken-by=pramodshettyk

  • ಗ್ರಾಮ ಪಂಚಾಯಿತಿಯಲ್ಲೇ ಮಹಿಳಾ ಸಿಬ್ಬಂದಿಯೊಂದಿಗೆ ಪಿಡಿಓ ಕುಚ್..! ಕುಚ್..!

    ಗ್ರಾಮ ಪಂಚಾಯಿತಿಯಲ್ಲೇ ಮಹಿಳಾ ಸಿಬ್ಬಂದಿಯೊಂದಿಗೆ ಪಿಡಿಓ ಕುಚ್..! ಕುಚ್..!

    ಉಡುಪಿ: ಜಿಲ್ಲೆಯ ಕುಂದಾಪುರ ತಾಲೂಕಿನ ನಾಲ್ಕೂರು ಗ್ರಾಮ ಪಂಚಾಯತ್ ಪಿಡಿಓ ಅನಂತ ಪದ್ಮನಾಭ್ ನಾಯಕ್ ಮಹಿಳಾ ಸಿಬ್ಬಂದಿಯ ಜೊತೆ ರಾಸಲೀಲೆ ನಡೆಸಿದ ದೃಶ್ಯಗಳು ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದೆ.

    ಅನಂತ ಪದ್ಮನಾಭ ನಾಯಕ್ ಒಂದು ವರ್ಷದಿಂದ ನಾಲ್ಕೂರು ಗ್ರಾಮ ಪಂಚಾಯತ್ ನಲ್ಲಿ ಪಿಡಿಓ ಆಗಿ ಕಾರ್ಯನಿರ್ವಹಿಸುತ್ತಿದ್ದಾನೆ. ಕರ್ತವ್ಯದ ವೇಳೆ ಸರ್ಕಾರಿ ಕಚೇರಿಯಲ್ಲೆ ಕಾಮದಾಟ ನಡೆಸಿರುವುದು ಬೆಳಕಿಗೆ ಬಂದಿದೆ. ಗ್ರಾಮ ಪಂಚಾಯತ್ ನಲ್ಲಿ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅವಿವಾಹಿತ ಯುವತಿಯನ್ನು ತನ್ನ ಕಾಮತೃಷೆಗೆ ಬಳಸಿಕೊಂಡಿದ್ದಾನೆ.

    ಮಹಿಳಾ ಸಿಬ್ಬಂದಿಯ ಜೊತೆ ಅಸಭ್ಯ ವರ್ತನೆ ನಡೆಸಿರುವುದಲ್ಲದೇ ಕಾನೂನು ಬಾಹಿರ ಚಟುವಟಿಕೆ, ಭ್ರಷ್ಟಚಾರದಲ್ಲಿ ಭಾಗಿಯಾಗಿರುವ ಆರೋಪ ಕೂಡ ಈತನ ಮೇಲಿದೆ. ಮಾಜಿ ಮಿಲಿಟರಿ ಅಫೀಸರ್ ಅಗಿರುವ ಈತ ಸರ್ಕಾರಿ ಕಚೇರಿಯಲ್ಲಿ ಯುವತಿಯನ್ನು ಬಳಸಿಕೊಂಡಿರುವುದನ್ನು ಸಮತಾ ಸೈನಿಕ ದಳ ಖಂಡಿಸಿದೆ.

    ಪಿಡಿಓ ಅನಂತ ಪದ್ಮನಾಭ ನಾಯಕ್ ವಿರುದ್ಧ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ನೀಡಿದೆ. ಯುವತಿಯನ್ನು ಆತ್ಯಾಚಾರ ಹಾಗೂ ಕರ್ತವ್ಯ ಲೋಪ ನಡೆಸಿರುವುದರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು, ಕೂಡಲೇ ಕೆಲಸದಿಂದ ವಜಾ ಮಾಡಬೇಕು ಅಂತ ಕುಂದಾಪುರದ ಸಮತಾ ಸೈನಿಕ ದಳ ಒತ್ತಾಯಿಸಿದೆ.

  • ಜನರೇ ಎಚ್ಚರವಾಗಿರಿ, ಜೇನು ಅಂತ ಬೆಲ್ಲದ ನೀರು ಕೊಡ್ತಾರೆ!

    ಜನರೇ ಎಚ್ಚರವಾಗಿರಿ, ಜೇನು ಅಂತ ಬೆಲ್ಲದ ನೀರು ಕೊಡ್ತಾರೆ!

    ಉಡುಪಿ: ಮೀನು ತಿನ್ನೋ ಕುಂದಾಪುರದ ಮಂದಿ ಫುಲ್ ಬುದ್ಧಿವಂತರು ಅನ್ನೋ ಮಾತಿದೆ. ಆದರೆ ಜನ ಬುದ್ಧಿವಂತರಾದಷ್ಟು ಸಾಮಾನ್ಯ ಜ್ಞಾನ ಕಳೆದುಕೊಳ್ಳುತ್ತಿದ್ದಾರೆ ಅನ್ನಿಸುತ್ತದೆ. ಮೋಸ ಹೋಗುವ ಜನ ಇದ್ದಾರೆ ಅಂತ ಗೊತ್ತಾದಾಗ ಮೇಲೆ ಖದೀಮರು ವೆರೈಟಿ ವೆರೈಟಿಯಾಗಿ ಮೋಸ ಮಾಡುವುದಕ್ಕೆ ಶುರುಮಾಡಿದ್ದಾರೆ.

    ಜಿಲ್ಲೆಯ ಕುಂದಾಪುರದಲ್ಲಿ ನಡೆದ ಹನಿ ದೋಖಾ ಇದು. ಅಪಾರ್ಟ್‍ಮೆಂಟ್‍ನಲ್ಲಿ ಕಟ್ಟಿದ್ದ ಜೇನು ಗೂಡು ತೆಗೆದುಕೊಡುತ್ತೇವೆ. ನಮಗೆ ಒಂದು ರೂಪಾಯಿಯೂ ಕೊಡುವುದು ಬೇಡ ಅಂತ ಹೇಳಿ ಬಂದ ಉತ್ತರ ಭಾರತ ಮೂಲದ ನಾಲ್ಕಾರು ಹುಡುಗರು ಜನಕ್ಕೆ ಮೂರು ಪಂಗನಾಮ ಹಾಕಿ ಪರಾರಿಯಾಗಿದ್ದಾರೆ.

    ತಸ್ಮಯ್ ಅಪಾರ್ಟ್‍ಮೆಂಟ್‍ನಲ್ಲಿ ಜೇನು ಗೂಡು ಕಟ್ಟಿತ್ತು. ಅದನ್ನು ತೆಗೆದುಕೊಡುತ್ತೇವೆ ನಮಗೆ ಸಂಬಳ ಬೇಡ ಬದಲಿಗೆ ಜೇನು ತುಪ್ಪ ಕೊಡಿ ಅಂತ ವ್ಯವಹಾರ ಕುದುರಿಸಿದ್ದರು. ಜೇನನ್ನು ತೆಗೆದ ಮೇಲೆ ಹೊರಡಲು ಸಿದ್ಧತೆ ಮಾಡಿಕೊಂಡರು. ಅಷ್ಟರಲ್ಲಿ ಅಲ್ಲಿದ್ದ ಜನರು ಜೇನು ತುಪ್ಪ ಕೊಡಿ ದುಡ್ಡು ಕೊಡುತ್ತೇವೆ ಎಂದು ವ್ಯವಹಾರ ಶುರುಮಾಡಿದ್ದಾರೆ. ತೋಳ ಹಳ್ಳಕ್ಕೇ ಬಂದು ಬಿತ್ತು ಅಂತ ಅಂದುಕೊಂಡ ಖದೀಮರು ಬಾಟಲಿಗಳಲ್ಲಿ ತುಂಬಿದ್ದ ಜೇನನ್ನು ಮಾರಾಟ ಮಾಡಲು ಶುರು ಮಾಡಿದರು. ಸುಮಾರು 10 ಸಾವಿರ ರೂಪಾಯಿಯ ಜೇನು ತುಂಬಿದ ಬಾಟಲಿಗಳನ್ನು ಮಾರಾಟ ಮಾಡಿ ಕಳ್ಳರು ಅಲ್ಲಿಂದ ಆಟೋ ಹತ್ತಿ ಕಾಲ್ಕಿತ್ತಿದ್ದಾರೆ.

    ಜನರು ಕಮ್ಮಿ ರೇಟಿಗೆ ಜೇನು ತುಪ್ಪ ಸಿಕ್ಕಿತು ಅಂತ ಮನಸ್ಸಿನಲ್ಲೇ ಮಂಡಿಗೆ ತಿಂದು ತಮ್ಮ ತಮ್ಮ ಮನೆಗಳನ್ನು ಸೇರಿಕೊಂಡಿದ್ದಾರೆ. ಮನೆಗೆ ಹೋಗಿ ಬಾಟಲ್ ಓಪನ್ ಮಾಡಿ ನೋಡಿದರೆ ಅದು ಜೇನು ತುಪ್ಪ ಅಲ್ಲ. ಬೆಲ್ಲದ ನೀರು ಅಂತ ನಾಲ್ಕಾರು ಮಂದಿಗೆ ಗೊತ್ತಾಗಿದೆ. ತಕ್ಷಣ ಜನರು ಕಳ್ಳರನ್ನು ಹಿಡಿಯಲು ಓಡೋಡಿ ಬಂದಿದ್ದಾರೆ. ಆದರೆ ಅಷ್ಟರಲ್ಲಿ ಬೇಸ್ ಮೆಂಟಿಗೆ ಬಂದು ಚಳ್ಳೆ ಹಣ್ಣು ತಿನ್ನಿಸಿದ್ದ ನಾಲ್ವರು ಖದೀಮರು ಅಲ್ಲಿಂದ ಪರಾರಿಯಾಗಿದ್ದರು. ಮರ್ಯಾದೆ ಹೋಗೋದು ಬೇಡ ಅಂತ ಪೊಲೀಸರಿಗೆ ದೂರು ಕೊಡುವುದಕ್ಕೂ ಇಲ್ಲಿನ ಜನ ಮುಂದಾಗಲಿಲ್ಲ.

    ಮೋಸ ಹೋದ ಕುಂದಾಪುರದ ಸತೀಶ್ ಪೂಜಾರಿ ಮಾತನಾಡಿ, ನಮ್ಮ ಕಟ್ಟಡದಲ್ಲಿ ಜೇನು ಗೂಡು ಕಟ್ಟಿತ್ತು. ಮಕ್ಕಳಿಗೆ-ಇಲ್ಲಿನ ನಿವಾಸಿಗಳಿಗೆ ಸಮಸ್ಯೆ ಬೇಡ ಅಂತ ಜೇನುಗೂಡು ತೆಗೆಯಲು ಹೇಳಿದೆವು. ಆದರೆ ಅವರು ನಂಬಿಕೆ ದ್ರೋಹ ಮಾಡಿದರು. ಇನ್ನು ಮುಂದೆ ಈ ರೀತಿ ಯಾರಿಗೂ ಮೋಸವಾಗಬಾರದು ಎಂದು ಹೇಳಿದರು.

    ನಾನು ಕೂಡ ಎರಡು ಬಾಟಲಿ ಜೇನು ತುಪ್ಪ ಖರೀದಿ ಮಾಡಿದ್ದೆ. ಮನೆಗೆ ಹೋಗಿ ಟೇಸ್ಟ್ ಹೇಗಿದೆ ಅಂತ ನೋಡಲು ಬಾಟಲ್ ಓಪನ್ ಮಾಡಿದಾಗ ಜೇನುತುಪ್ಪದ ಪರಿಮಳ ಬಂದಿಲ್ಲ. ನಂತರ ಟೇಸ್ಟ್ ಮಾಡಿ ನೋಡಿದಾಗ ಗೊತ್ತಾಯಿತು ಅದು ಜೇನಲ್ಲ ಬೆಲ್ಲದ ಪಾಕ ಅಂತ. ನಾನು ಕೂಡಲೆ ಕೆಳಗೆ ಬಂದು ನೋಡಿದರೆ ಅವರೆಲ್ಲ ಅಲ್ಲಿಂದ ಕಣ್ಮರೆಯಾಗಿದ್ದರು ಎಂದು ಮೋಸ ಹೋದ ಶಶಿಕಲಾ ಹೇಳಿದರು.

  • ಉಡುಪಿಯಲ್ಲಿ ನೈತಿಕ ಪೊಲೀಸ್‍ ಗಿರಿ- ವಿದ್ಯಾರ್ಥಿಗಳನ್ನು ಹಿಡಿದ ಹಿಂದೂ ಸಂಘಟನೆ ಕಾರ್ಯಕರ್ತರು

    ಉಡುಪಿಯಲ್ಲಿ ನೈತಿಕ ಪೊಲೀಸ್‍ ಗಿರಿ- ವಿದ್ಯಾರ್ಥಿಗಳನ್ನು ಹಿಡಿದ ಹಿಂದೂ ಸಂಘಟನೆ ಕಾರ್ಯಕರ್ತರು

    ಉಡುಪಿ: ಕುಂದಾಪುರದಿಂದ ಉಡುಪಿಯತ್ತ ಸಾಗುತ್ತಿದ್ದ ಮೂವರು ಯುವತಿಯರು ಹಾಗೂ ಇಬ್ಬರು ಯುವಕರಿದ್ದ ಕಾರನ್ನು ಹಿಂದೂ ಸಂಘಟನೆ ಕಾರ್ಯಕರ್ತರು ಅಡ್ಡಗಟ್ಟಿ ಪೊಲೀಸರಿಗೊಪ್ಪಿಸಿದ ಘಟನೆ ಕೋಟೇಶ್ವರದಲ್ಲಿ ಸೋಮವಾರ ರಾತ್ರಿ ನಡೆದಿದೆ.

    ಯುವಕ-ಯುವತಿಯರನ್ನು ಉಡುಪಿಯ ಕಾಲೇಜೊಂದರ ವಿದ್ಯಾರ್ಥಿಗಳೆಂದು ಗುರುತಿಸಲಾಗಿದೆ. ಯುವಕ ಯುವತಿಯರು ಕುಂದಾಪುರದ ಮರವಂತೆ ಬೀಚ್ ನಲ್ಲಿ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದರು. ಸಾರ್ವಜನಿಕ ಸ್ಥಳದಲ್ಲಿ ವರ್ತನೆ ಸರಿಯಿಲ್ಲವೆಂದು ಆರೋಪಿಸಿ ಹಿಂದೂಪರ ಸಂಘಟನೆ ಕಾರ್ಯಕರ್ತರು ಯುವಕ ಯುವತಿಯರಿದ್ದ ಕಾರನ್ನು ಹಿಂಬಾಲಿಸಿ ಕೋಟೇಶ್ವರದಲ್ಲಿ ಅಡ್ಡಗಟ್ಟಿ ಕುಂದಾಪುರ ಪೊಲೀಸರಿಗೊಪ್ಪಿಸಿದ್ದರು.

    ಪೊಲೀಸ್ ಠಾಣೆಗೆ ನೂರಾರು ಮಂದಿ ಹಿಂದೂ ಸಂಘಟನೆ ಕಾರ್ಯಕರ್ತರು ಹೋಗಿದ್ದ ಹಿನ್ನೆಲೆ ಠಾಣೆಯಲ್ಲಿ ಕೆಲಕಾಲ ಬಿಗುವಿನ ವಾತಾವರಣ ಸೃಷ್ಟಿಯಾಯ್ತು. ಕಾರಣ ಪೊಲೀಸರು ಗರಂ ಆದ್ರು ಅಲ್ಲದೆ ಹಿಂದೂ ಸಂಘಟನೆ ಕಾರ್ಯಕರ್ತರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಪೊಲೀಸರು ಸಂಘಟನೆ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಯುವಕ ಯುವತಿಯರ ಪೈಕಿ ಹಿಂದೂ ಮತ್ತು ಮುಸ್ಲಿಮ್ ಧರ್ಮಿಯರು ಇದ್ದರೆಂಬೂದೇ ಈ ಎಲ್ಲಾ ಬೆಳವಣಿಗೆಗೆ ಕಾರಣವಾಗಿದೆ ಎಂದು ಹೇಳಲಾಗಿದೆ.

  • ಬೈಂದೂರಿನಲ್ಲಿ ರಸ್ತೆ ಮೇಲೆ ಮತ್ತೆ ಗುಡ್ಡ ಕುಸಿತ- 2 ಕಿ.ಮೀ ವರೆಗೂ ನಿಂತ ವಾಹನಗಳು

    ಬೈಂದೂರಿನಲ್ಲಿ ರಸ್ತೆ ಮೇಲೆ ಮತ್ತೆ ಗುಡ್ಡ ಕುಸಿತ- 2 ಕಿ.ಮೀ ವರೆಗೂ ನಿಂತ ವಾಹನಗಳು

    ಉಡುಪಿ: ಜೆಲ್ಲೆಯ ಕುಂದಾಪುರದಲ್ಲಿ ರಾಷ್ಟ್ರೀಯ ಹೆದ್ದಾರಿ ಮೇಲೆ ಮತ್ತೆ ಗುಡ್ಡ ಕುಸಿತಗೊಂಡಿದ್ದು ವಾಹನ ಸವಾರರು ಪರದಾಡುವಂತಾಯಿತು. ಉಡುಪಿಯ ಬೈಂದೂರಿನ ಒತ್ತಿನೆಣೆ ಎಂಬಲ್ಲಿ ಜೇಡಿ ಮಣ್ಣು ಗುಡ್ಡ ರಸ್ತೆ ಮೇಲೆ ಕುಸಿದಿದೆ.

    ಖಾಸಗಿ ಹಾಗು ಸರ್ಕಾರಿ ವಾಹನಗಳಿಗೆ ಪರ್ಯಾಯ ರಸ್ತೆಯನ್ನು ಮಾಡಿಕೊಡಲಾಗಿದೆ. ಸುಮಾರು 2 ಕಿ.ಮೀ. ವರೆಗೆ ಟ್ರಾಫಿಕ್ ಜಾಮ್ ಉಂಟಾಗಿದೆ. ಶನಿವಾರ ರಾತ್ರಿ ಸುರಿದ ಭಾರೀ ಮಳೆಗೆ ಗುಡ್ಡ ಕುಸಿತವಾಗಿದೆ.

    ಉಡುಪಿ- ಕುಂದಾಪುರ- ಕಾರವಾರ ರಾಷ್ಟ್ರೀಯ ಹೆದ್ದಾರಿ ಅಗಲ ಕಾಮಗಾರಿ ನಡೆಯುತ್ತಿದೆ. ಈ ಮಳೆಗಾಲಕ್ಕೂ ಮುನ್ನ ಹೆದ್ದಾರಿ ಕಾಮಗಾರಿ ಪೂರ್ಣವಾಗಬೇಕಿತ್ತು. ಆದ್ರೆ ಸೇತುವೆಗಳ ಕಾಮಗಾರಿ ವಿಳಂಬವಾಗಿರುವುದರಿಂದ ರಸ್ತೆ ಕಾಮಗಾರಿಯೂ ವಿಳಂಬವಾಗಿದೆ.

    ಜಿಲ್ಲಾಡಳಿತ ಮತ್ತು ಕಾಮಗಾರಿ ವಹಿಸಿಕೊಂಡ ಐ.ಆರ್.ಬಿ ಕಂಪನಿ ಸೂಕ್ತ ಮುನ್ನೆಚ್ಚರಿಕೆ ಕೈಗೊಳ್ಳದಿರುವುದೇ ಈ ಘಟನೆ ಸಂಭವಿಸಲು ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಒತ್ತಿನೆಣೆ ಗುಡ್ಡ ಕುಸಿಯುವ ಸಾಧ್ಯತೆ ಕುರಿತು ಬೈಂದೂರು ಪೊಲೀಸರಿಗೆ ಮಾಹಿತಿ ಬಂದಿತ್ತು. ಜಿಲ್ಲಾಡಳಿತಕ್ಕೆ ಐ.ಆರ್.ಬಿ ಕಂಪೆನಿ ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಕಾಮಗಾರಿ ನಡೆಸುತ್ತೇವೆ ಎಂದು ಭರವಸೆ ನೀಡಿತ್ತು.

    ಸದ್ಯ ತೆರವು ಕಾರ್ಯಾಚರಣೆ ಮಾಡಿ ಒಂದು ಭಾಗದ ರಸ್ತೆ ಕ್ಲಿಯರ್ ಮಾಡಿ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಗುಡ್ಡ ಕುಸಿತದ ಪರಿಣಾಮ ಸುಮಾರು 2 ಕಿಲೋಮೀಟರ್ ಉದ್ದ ಟ್ರಾಫಿಕ್ ಜಾಮ್ ಆಗಿತ್ತು. ವಾರದ ಹಿಂದೆಯೇ ಎರಡು ಬಾರಿ ಗುಡ್ಡ ಕುಸಿತವಾಗಿತ್ತು.

    ಇದನ್ನೂ ಓದಿ: ಬೈಂದೂರಿನಲ್ಲಿ ರಸ್ತೆ ಮೇಲೆ ಗುಡ್ಡ ಕುಸಿದು 5 ಗಂಟೆ ಟ್ರಾಫಿಕ್ ಜಾಮ್!

     

  • ಬೈಂದೂರಿನಲ್ಲಿ ರಸ್ತೆ ಮೇಲೆ ಗುಡ್ಡ ಕುಸಿದು 5 ಗಂಟೆ ಟ್ರಾಫಿಕ್ ಜಾಮ್!

    ಬೈಂದೂರಿನಲ್ಲಿ ರಸ್ತೆ ಮೇಲೆ ಗುಡ್ಡ ಕುಸಿದು 5 ಗಂಟೆ ಟ್ರಾಫಿಕ್ ಜಾಮ್!

    ಉಡುಪಿ: ಉಡುಪಿ ಜೆಲ್ಲೆಯ ಕುಂದಾಪುರದಲ್ಲಿ ರಾಷ್ಟ್ರೀಯ ಹೆದ್ದಾರಿ ಮೇಲೆ ಗುಡ್ಡ ಕುಸಿದು ಸುಮಾರು 5 ಗಂಟೆ ಕಾಲ ಟ್ರಾಫಿಕ್ ಜಾಮ್ ಆಗಿದೆ. ಬೈಂದೂರಿನ ಒತ್ತಿನೆಣೆ ಎಂಬಲ್ಲಿ ಜೇಡಿ ಮಣ್ಣು ಗುಡ್ಡ ರಸ್ತೆ ಮೇಲೆ ಕುಸಿದಿದೆ. ಸುಮಾರು ಮೂರು ಗಂಟೆಗಳ ನಿರಂತರ ಕಾರ್ಯಾಚರಣೆ ನಡೆದ ನಂತರ ಒಂದು ರಸ್ತೆಯ ಮೂಲಕ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

    ಉಡುಪಿ- ಕುಂದಾಪುರ- ಕಾರವಾರ ರಾಷ್ಟ್ರೀಯ ಹೆದ್ದಾರಿ ಅಗಲ ಕಾಮಗಾರಿ ನಡೆಯುತ್ತಿದೆ. ಈ ಮಳೆಗಾಲಕ್ಕೂ ಮುನ್ನ ಹೆದ್ದಾರಿ ಕಾಮಗಾರಿ ಪೂರ್ಣವಾಗಬೇಕಿತ್ತು. ಆದ್ರೆ ಸೇತುವೆಗಳ ಕಾಮಗಾರಿ ವಿಳಂಬವಾಗಿರುವುದರಿಂದ ರಸ್ತೆ ಕಾಮಗಾರಿಯೂ ವಿಳಂಬವಾಗಿದೆ.

    ಕಳೆದೆರಡು ದಿನಗಳಿಂದ ಇಲ್ಲಿ ಮಳೆ ಸುರಿಯುತ್ತಿದೆ. ಮಳೆಯಿಂದ ಮಣ್ಣು ಸಂಪೂರ್ಣ ತೇವಗೊಂಡು ಒತ್ತಿನೆಣೆ ಎಂಬಲ್ಲಿ ಗುಡ್ಡ ರಸ್ತೆಗೆ ಕುಸಿದಿದೆ. ಕಳೆದ ಒಂದು ತಿಂಗಳಿಂದ ಒತ್ತಿನೆಣೆ ಗುಡ್ಡ ಅಪಾಯದ ಮುನ್ಸೂಚನೆ ನೀಡಿತ್ತು. ಒಂದು ವಾರದಿಂದ ಗುಡ್ಡ ಕುಸಿಯುವ ಭೀತಿಯಿತ್ತು. ಇಂದು ಮುಂಜಾನೆ ಗುಡ್ಡ ಕುಸಿತದಿಂದ ಐದು ಗಂಟೆಗೂ ಹೆಚ್ಚು ಕಾಲ ಹೆದ್ದಾರಿ ಸಂಚಾರ ಬಂದ್ ಆಯ್ತು. ಪರಿಣಾಮ ಪ್ರಯಾಣಿಕರು ಮಳೆಯಲ್ಲಿ ಪರದಾಡಿದರು.

    ಜಿಲ್ಲಾಡಳಿತ ಮತ್ತು ಕಾಮಗಾರಿ ವಹಿಸಿಕೊಂಡ ಐ.ಆರ್.ಬಿ ಕಂಪನಿ ಸೂಕ್ತ ಮುನ್ನೆಚ್ಚರಿಕೆ ಕೈಗೊಳ್ಳದಿರುವುದೇ ಈ ಘಟನೆ ಸಂಭವಿಸಲು ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಒತ್ತಿನೆಣೆ ಗುಡ್ಡ ಕುಸಿಯುವ ಸಾಧ್ಯತೆ ಕುರಿತು ಬೈಂದೂರು ಪೊಲೀಸರಿಗೆ ಮಾಹಿತಿ ಬಂದಿತ್ತು. ಜಿಲ್ಲಾಡಳಿತಕ್ಕೆ ಐ.ಆರ್.ಬಿ ಕಂಪೆನಿ ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಕಾಮಗಾರಿ ನಡೆಸುತ್ತೇವೆ ಎಂದು ಭರವಸೆ ನೀಡಿತ್ತು.

    ವಾರದ ಹಿಂದೆ ಇನ್ನೊಂದು ರಸ್ತೆ ನಿರ್ಮಾಣ: ಗುಡ್ಡ ಕುಸಿತ ಸಂಭವಿಸುವ ಆತಂಕವಿದ್ದಾಗ, ಐ.ಆರ್.ಬಿ ಕಂಪನಿ ತರಾತುರಿಯಲ್ಲಿ ಬದಲಿ ರಸ್ತೆಯನ್ನು ನಿರ್ಮಾಣ ಮಾಡಿದೆ. ಆದರೆ ಜೇಡಿ ಮಣ್ಣು ಗುಡ್ಡ ಹೊಸ ರಸ್ತೆಯ ಮೇಲೂ ಕುಸಿದಿದೆ. ಎರಡು ದಿನದ ಹಿಂದೆ ಕರಾವಳಿಯಲ್ಲಿ ಮಳೆ ಶುರುವಾಗಿದೆ. ಮಳೆ ಮುಂದುವರೆದರೆ ಗುಡ್ಡದ ಇನ್ನೊಂದು ಭಾಗ ಕುಸಿಯುವ ಭೀತಿಯಿದೆ. ನಿರಂತರವಾಗಿ ಮಳೆ ಸುರಿದರೆ ಭಾರೀ ಅಪಾಯ ಸಾಧ್ಯತೆಯಿದೆ. ಬೇಸಿಗೆಯಲ್ಲೇ ಒತ್ತಿನೆಣೆ ಗುಡ್ಡದ ಬಗ್ಗೆ ಸ್ಥಳೀಯರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಆದ್ರೆ ಅದನ್ನು ಐ.ಆರ್.ಬಿ ಕಂಪೆನಿ ಕಡೆಗಣಿಸಿತ್ತು. ಈಗ ಜೇಡಿ ಮಣ್ಣು ಗುಡ್ಡದ ಅರಿವಾಗಿರಬೇಕು ಎಂದು ಸ್ಥಳೀಯ ಮಹೇಶ್ ಗಾಣಿಗ ಮಾಹಿತಿ ನೀಡಿದರು.

    ಸಾರ್ವಜನಿಕರಿಗೆ ತೊಂದರೆ ಹಾಗೂ ನಿರ್ಲಕ್ಷ್ಯದಡಿಯಲ್ಲಿ ಕಂಪೆನಿ ವಿರುದ್ಧ ಪ್ರಕರಣ ದಾಖಲಿಸುತ್ತೇವೆ. ಇನ್ನೆರಡು ದಿನದಲ್ಲಿ ಸಮಸ್ಯೆ ಬಗೆಹರಿಸುವಂತೆ ತಾಕೀತು ಮಾಡಿರುವುದಾಗಿ ಕುಂದಾಪುರ ಎ.ಸಿ.ಶಿಲ್ಪಾ ನಾಗ್ ಹೇಳಿದ್ದಾರೆ.

    ಹೆದ್ದಾರಿಗಳಲ್ಲಿ ಸೂಚನಾ ಫಲಕಗಳಿಲ್ಲ, ಚರಂಡಿ ವ್ಯವಸ್ಥೆಯಿಲ್ಲ. ಗುಡ್ಡಕ್ಕೆ ಕಪ್ಪುಕಲ್ಲು ಕೆಳಗಿನಿಂದ ಕಟ್ಟಬೇಕು. ಮೇಲ್ಭಾಗದ ಮಣ್ಣನ್ನು ಗುಡ್ಡದ ಹೊರಭಾಗಕ್ಕೆ ಇಳಿಸಬೇಕು ಎಂದು ಸದ್ಯ ಇಂಜಿನಿಯರ್ ಗಳು ನಿರ್ಧಾರ ಮಾಡಿದ್ದಾರೆ. ಸದ್ಯ ತೆರವು ಕಾರ್ಯಾಚರಣೆ ಮಾಡಿ ಒಂದು ಭಾಗದ ರಸ್ತೆ ಕ್ಲಿಯರ್ ಮಾಡಿ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಯ್ತು. ಗುಡ್ಡ ಕುಸಿತದ ಪರಿಣಾಮ ಸುಮಾರು 5 ಕಿಲೋಮೀಟರ್ ಉದ್ದ ಟ್ರಾಫಿಕ್ ಜಾಮ್ ಆಗಿತ್ತು.

  • ಮೂವರು ಕಾಮುಕರ ಲೈಂಗಿಕ ಕಿರುಕುಳ ತಾಳಲಾರದೇ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಅಪ್ರಾಪ್ತೆ!

    ಮೂವರು ಕಾಮುಕರ ಲೈಂಗಿಕ ಕಿರುಕುಳ ತಾಳಲಾರದೇ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಅಪ್ರಾಪ್ತೆ!

    ಉಡುಪಿ: ಕುಂದಾಪುರ ತಾಲೂಕಿನ ಅಮಾಸೆಬೈಲುವಿನಲ್ಲಿ ಕಾಮುಕರ ಲೈಂಗಿಕ ಕಿರುಕುಳ ತಾಳಲಾರದೇ ಅಪ್ರಾಪ್ತ ಬಾಲಕಿಯೊಬ್ಬಳು ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

    ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುವಂತೆ ಪ್ರಸಾದ್ ಹೆಗ್ಡೆ, ಪ್ರಶಾಂತ್ ಹೆಗ್ಡೆ, ವಿನಯ್ ಶೆಟ್ಟಿ ಒತ್ತಡ ಹೇರುತ್ತಿದ್ದರು. ಮೂರ್ನಾಲ್ಕು ತಿಂಗಳು ಹಿಂದೆ ತೀವ್ರ ಒತ್ತಡ ಇತ್ತು ಎನ್ನಲಾಗಿದೆ. ಒತ್ತಡದಿಂದ ಬೇಸತ್ತ ಬಾಲಕಿ ಜೂನ್ 2ರಂದು ಆತ್ಮಹತ್ಯೆಗೆ ಯತ್ನಿಸಿದ್ದಳು. ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಯ್ತು. ಇಲಿ ಪಾಷಾಣ ಸೇವಿಸಿದ್ದರಿಂದ ಆಕೆಯ ಆರೋಗ್ಯ ಸ್ಥಿತಿಯಲ್ಲಿ ಏರುಪೇರಾಗಿದೆ.

    ಬಾಲಕಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೂವರು ಯುವಕರು ತಾವು ಹೇಳಿದ ಒಂದು ಜಾಗಕ್ಕೆ ಬರುವಂತೆ ಒತ್ತಾಯ ಮಾಡಿದ್ದರು. ಅಲ್ಲಿಗೆ ಬಾರದೇ ಇದ್ದರೆ ತಂದೆ ತಾಯಿಗೆ ತೊಂದರೆ ಮಾಡುತ್ತೇವೆ ಎಂದು ಬೆದರಿಸಿದ್ದರು ಎಂದು ಬಾಲಕಿ ದೂರಿದ್ದಾಳೆ. ಇದರಿಂದ ಹೆದರಿ ಆಕೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎನ್ನಲಾಗಿದೆ.

    ಸಂತ್ರಸ್ಥೆ ಅಮಾಸೆಬೈಲಿನಿಂದ ಹೆಬ್ರಿಗೆ ಟೈಲರಿಂಗ್ ಕ್ಲಾಸಿಗೆ ಹೋಗುತ್ತಿದ್ದಾಗ ಯುವಕರು ಬೆನ್ನಟ್ಟುತ್ತಿದ್ದರು. ಬಸ್ಸಿನಲ್ಲಿ ತೆರಳಿ ಕಿರುಕುಳ ನೀಡುತ್ತಿದ್ದರು. ಫೋನ್ ಮೆಸೇಜ್ ಮಾಡಿ ಲವ್ ಮಾಡುವಂತೆ ಒತ್ತಾಯ ಮಾಡುತ್ತಿದ್ದರು. ಕಿರುಕುಳ ಹೆಚ್ಚಾಗುತ್ತಿದ್ದಂತೆ ಸಂತ್ರಸ್ಥೆ ಪೋಷಕರಲ್ಲಿ ದೂರಿದ್ದಳು. ಸಮಸ್ಯೆ ಸರಿಯಾಗಬಹುದು ಎನ್ನವಷ್ಟರಲ್ಲಿ ಆತ್ಮಹತ್ಯೆಗೆ ಯತ್ನ ಮಾಡಿದ್ದಾಳೆ.

    ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸಂತ್ರಸ್ಥೆಯಿಂದ ಮಾಹಿತಿ ಪಡೆದಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಆರೋಪಿಗಳಿಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಆರೋಪಿಗಳನ್ನು ಬಂಧಿಸಲು ವಿಶೇಷ ತಂಡ ರಚನೆ ಮಾಡಲಾಗಿದೆ. ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

     

  • ಹೆರಿಗೆ ನೋವಿನಲ್ಲಿದ್ದ ಗರ್ಭಿಣಿಯನ್ನ ಆಸ್ಪತ್ರೆಗೆ ದಾಖಲಿಸಿಕೊಳ್ಳದ ಸಿಬ್ಬಂದಿ

    ಹೆರಿಗೆ ನೋವಿನಲ್ಲಿದ್ದ ಗರ್ಭಿಣಿಯನ್ನ ಆಸ್ಪತ್ರೆಗೆ ದಾಖಲಿಸಿಕೊಳ್ಳದ ಸಿಬ್ಬಂದಿ

    ಉಡುಪಿ: ತುಂಬು ಗರ್ಭಿಣಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳದ ಅಮಾನವೀಯ ಘಟನೆ ಉಡುಪಿಯಲ್ಲಿ ನಡೆದಿದೆ.

    ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರ ಗ್ರಾಮದ ಆಶಾ ಎಂಬ ಮಹಿಳೆಗೆ ಭಾನುವಾರ ತಡರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಕೂಡಲೇ ಆಶಾ ಅವರನ್ನು ಆಟೋ ಮೂಲಕ ಸರ್ಕಾರಿ ಆಸ್ಪತ್ರೆಗೆ ಕರೆತರಲಾಗಿತ್ತು. ಆದ್ರೆ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲ ಎಂಬ ಉತ್ತರ ಸಿಬ್ಬಂದಿಯಿಂದ ಬಂದಿದೆ. ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಂತ ಬಿಟ್ಟಿ ಸಲಹೆ ಕೊಟ್ಟಿದ್ದಾರೆ.

    ಕೊನೆಗೆ ಆಶಾ ಅವರನ್ನು ಅದೇ ಆಟೋದಲ್ಲಿ ಕುಂದಾಪುರದ ಶ್ರೀದೇವಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯ್ತು. ಆಸ್ಪತ್ರೆ ಸೇರಿದ 10 ನಿಮಿಷಕ್ಕೆ ಆಶಾ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಸರ್ಕಾರಿ ಆಸ್ಪತ್ರೆಗೆ ದಾಖಲಿಸಿಕೊಳ್ಳದ ಬಗ್ಗೆ ಸೋಮವಾರ ಆಶಾ ಅವರ ಕುಟುಂಬಸ್ಥರು ಮಹಿಳಾ ಸಾಂತ್ವಾನ ಕೇಂದ್ರಕ್ಕೆ ಲಿಖಿತ ದೂರು ನೀಡಿದ್ದಾರೆ. ಸರ್ಕಾರಿ ಆಸ್ಪತ್ರೆಯ ಬೇಜಾವಬ್ದಾರಿ ಮತ್ತು ಅವ್ಯವಸ್ಥೆಯ ಕುರಿತು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. ಸಾಂತ್ವಾನ ಕೇಂದ್ರದ ಸಿಬ್ಬಂದಿ ಆಸ್ಪತ್ರೆಗೆ ಭೇಟಿ ಕೊಟ್ಟು ಆಶಾ ಅವರ ಯೋಗಕ್ಷೇಮ ವಿಚಾರಿಸಿಕೊಂಡಿದ್ದಾರೆ.

    ವೈದ್ಯರು ಆಸ್ಪತ್ರೆಯಲ್ಲಿ 24 ಗಂಟೆ ಇರಬೇಕು. 108 ಗೆ ಕರೆ ಮಾಡಿದರೆ ಅದೂ ಬರಲಿಲ್ಲ. ತುಂಬು ಗರ್ಭಿಣಿಯರನ್ನು ಮೊದಲು ದಾಖಲು ಮಾಡಿಕೊಳ್ಳಬೇಕು. ನಂತರ ಕೂಡಲೇ ವೈದ್ಯರನ್ನು ಕರೆಸಬೇಕು. ಒಬ್ಬ ವೈದ್ಯರು ರಜೆಯಲ್ಲಿದ್ದರೆ, ಇನ್ನೊಬ್ಬರು ವೈದ್ಯರು ಆಸ್ಪತ್ರೆಯಲ್ಲಿ ಇರಲೇಬೇಕು. ಡಾ. ರೋಹಿಣಿ ಮತ್ತು ಡಾ. ಉದಯ ಶಂಕರ್ ಗೆ ದೂರಿನ ಪ್ರತಿಯನ್ನು ರವಾನೆ ಮಾಡಿದ್ದೇನೆ. ನರ್ಸ್‍ಗಳದ್ದೂ ಇದರಲ್ಲಿ ಬೇಜವಾಬ್ದಾರಿಯಿದೆ. ಬಡವರಿಗೆ ಇರುವ ಸರ್ಕಾರಿ ಆಸ್ಪತ್ರೆಯಲ್ಲಿ ಹೀಗೆ ಆದ್ರೆ ಹೇಗೆ ಎಂದು ಕುಂದಾಪುರದ ಮಹಿಳಾ ಸಾಂತ್ವಾನ ಕೇಂದ್ರದ ಮುಖ್ಯಸ್ಥೆ ರಾಧಾ ದಾಸ್ ಪ್ರಶ್ನೆ ಮಾಡಿದ್ದಾರೆ.