ಉಡುಪಿ: ಸೂರ್ಯಾಸ್ತ ಆಗುತ್ತಿದ್ದಂತೆ ಉಡುಪಿ ಜಿಲ್ಲೆಯಾದ್ಯಂತ ಭಾರೀ ಮಳೆ ಶುರುವಾಗಿದೆ. ಕಾರ್ಕಳ ಹೆಬ್ರಿ ತಾಲೂಕಿನಲ್ಲಿ ಸಂಜೆಯೇ ಮಳೆ ಆರಂಭ ಆಗಿತ್ತು. ಸಾಗರ ತೀರದ ತಾಲೂಕುಗಳಲ್ಲಿ ಎರಡು ಗಂಟೆ ವರ್ಷಧಾರೆಯಾಗಿದೆ.
ಅರಬ್ಬಿ ಸಮುದ್ರದ ಸಾಲಿನ ತಾಲೂಕುಗಳಾದ ಉಡುಪಿ, ಕಾಪು, ಕುಂದಾಪುರದಲ್ಲಿ ಜೋರು ವರ್ಷಧಾರೆಯಾಗಿದೆ. ಬೈಂದೂರು ತಾಲೂಕಿನ ಕರಾವಳಿ ಭಾಗದಲ್ಲಿ ಸಾಧಾರಣ ಮಳೆಯಾಗಿದ್ದು, ಪಶ್ಚಿಮ ಘಟ್ಟದ ತಪ್ಪಲಲ್ಲಿ ಗಾಳಿ ಸಹಿತ ಮಳೆಯಾಗಿದೆ. ಇಂದು ದಿನಪೂರ್ತಿ ಉಷ್ಟಾಂಶ ಹೆಚ್ಚಾಗಿತ್ತು.
ಉಡುಪಿ ಜಿಲ್ಲೆಯಲ್ಲಿ ದಿಢೀರ್ ಮಳೆಯಾಗಿದ್ದರಿಂದ ಪೇಟೆಯೊಳಗೆ ಜನಜೀವನ ಅಸ್ತವ್ಯಸ್ಥವಾಗಿತ್ತು. ಮಳೆ ಜೊತೆ ಗುಡುಗು ಮಿಂಚು ಇದೆ. ಜಿಲ್ಲೆಯ ಹಲವೆಡೆ ವಿದ್ಯುತ್ ಸಂಪರ್ಕ ಕಡಿತ ಆಗಿದೆ. ಸುಮಾರು ಎರಡು ಗಂಟೆ ಮಳೆ ಬಿದ್ದ ಕಾರಣ ವಾತಾವರಣ ತಂಪಾಗಿದೆ. ಭತ್ತದ ಎರಡನೇ ಬೆಳೆಗೆ ಈ ಮಳೆ ವರದಾನವಾಗಿದ್ದು, ಅಡಿಕೆಗೆ ಅಡ್ಡಿಯಾಗಿದೆ.
ಉಡುಪಿ: ಜಿಲ್ಲೆಯ ಕುಂದಾಪುರ ತಾಲೂಕು ಕಮಲಶಿಲೆಯ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕುಬ್ಜಾ ನದಿಯ ನೀರು ಹರಿದಿದೆ. ಕುಬ್ಜಾ ನದಿ ತೀರದಲ್ಲಿರುವ ಈ ಕ್ಷೇತ್ರದಲ್ಲಿ ವರ್ಷಕ್ಕೊಮ್ಮೆ ಕುಬ್ಜೆ ದುರ್ಗಾ ದೇವಿಯ ಪಾದ ತೊಳೆಯಲು ಗರ್ಭಗುಡಿಗೆ ಬರುತ್ತಾಳೆ ಎಂಬ ನಂಬಿಕೆ ಇದೆ. ಈ ಬಾರಿಯೂ ಸಂಪ್ರದಾಯ ಮುಂದುವರಿದಿದೆ.
ಈ ರೀತಿ ಪ್ರವಾಹದ ನೀರು ಉಕ್ಕಿ ಗರ್ಭಗುಡಿಗೆ ಪ್ರವೇಶ ಮಾಡಿದಾಗ ದೇವರಿಗೆ ವಿಶೇಷ ಮಂಗಳಾರತಿ ನಡೆಯುತ್ತದೆ. ಪ್ರತಿವರ್ಷ ಈ ರೀತಿ ನದಿಯ ನೀರು ಗರ್ಭಗುಡಿ ಪ್ರವೇಶ ಮಾಡಿದ ಸಮಯದಲ್ಲಿ ಊರಿನ ಭಕ್ತಾದಿಗಳು ದೇವಸ್ಥಾನಕ್ಕೆ ಬಂದು ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ ಈ ಬಾರಿ ಕೊರೊನಾ ಮಹಾಮಾರಿ ಇರುವ ಕಾರಣ ದೇವಾಲಯದ ಆಸುಪಾಸಿನ ಒಂದಷ್ಟು ಕುಟುಂಬಗಳು ಮಾತ್ರ ಈ ವಿಶೇಷ ಸಂದರ್ಭದಲ್ಲಿ ದೇವರ ದರ್ಶನ ಗೈದರು.
ಪಶ್ಚಿಮ ಘಟ್ಟದ ತಪ್ಪಲಲ್ಲಿ ಭಾರೀ ಮಳೆಯಾದರೆ ನದಿನೀರು ಉಡುಪಿಯತ್ತ ಹರಿಯುತ್ತದೆ. ಕುಬ್ಜಾ ತುಂಬಿ ಹರಿಯುತ್ತದೆ. ಈ ಪುಣ್ಯ ಕಾಲದಲ್ಲಿ ಕುಬ್ಜಾ ನದಿ ಸ್ನಾನ ಬಹಳಷ್ಟು ಪರಿಣಾಮಕಾರಿ ಎಂಬ ಪ್ರತೀತಿ ಇದೆ. ಕಮಲಶಿಲೆಯಲ್ಲಿ ದುರ್ಗೆ ಲಿಂಗ ರೂಪದಲ್ಲಿ ನೆಲೆನಿಂತಿದ್ದಾಳೆ ಎಂಬ ನಂಬಿಕೆ ಇದೆ.
ಉಡುಪಿ: ಜಿಲ್ಲೆಯ ಕುಂದಾಪುರದಲ್ಲಿ 163 ಬಾರಿ ಕ್ವಾರಂಟೈನ್ ನಿಯಮ ಉಲ್ಲಂಘಿಸಿದವನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕ್ವಾರಂಟೈನ್ ನಿಯಮ ಉಲ್ಲಂಘಿಸಿ, ಹೊರಗಡೆ ತಿರುಗಾಡುತ್ತಿದ್ದ ವ್ಯಕ್ತಿಯನ್ನು ಸಹಬ್ ಸಿಂಗ್ ಎಂದು ಗುರುತಿಸಲಾಗಿದೆ.
ಮುಂಬೈನಿಂದ ಕೋಟೇಶ್ವರಕ್ಕೆ ಬಂದಿದ್ದ ಸಹಬ್ ಸಿಂಗ್ ಹೋಂ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ್ದಾನೆ. ಈತ ಕುಂದಾಪುರದಲ್ಲಿ ಗ್ಲಾಸ್ ಮತ್ತು ಫ್ಲೈ ವುಡ್ ವ್ಯವಹಾರ ನಡೆಸುತ್ತಿದ್ದ ಎನ್ನಲಾಗಿದೆ. ಜೂನ್ 29 ರಂದು ಕೋಟೇಶ್ವರದ ಬೈಪಾಸ್ ಬಳಿಯ ಬಾಡಿಗೆ ಮನೆಗೆ ಬಂದಿದ್ದು, ಆತನಿಗೆ ಜು.13 ರವರೆಗೆ ಹೋಂ ಕ್ವಾರಂಟೈನ್ ನೀಡಲಾಗಿತ್ತು.
ಕ್ವಾರಂಟೈನ್ ಅವಧಿಯಲ್ಲಿ ಈತ ನಿಯಮ ಉಲ್ಲಂಘಿಸಿ ಉಡುಪಿಯ ಹೋಟೆಲ್‍ಗಳಿಗೆ ತಿರುಗಾಡುತ್ತಿದ್ದ. ಈ ಬಗ್ಗೆ 163 ಬಾರಿ ಹೊರಗೆ ಬಂದ ಬಗ್ಗೆ ಮೊಬೈಲ್ ಜಿಪಿಎಸ್ ಟ್ರ್ಯಾಕರ್‍ನಿಂದ ತಿಳಿದು ಬಂದಿದೆ. ಈ ಬಗ್ಗೆ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಎನ್.ಜಿ. ಭಟ್ ಅವರು ಕುಂದಾಪುರ ಠಾಣೆಗೆ ದೂರು ನೀಡಿದ್ದಾರೆ. ಐಪಿಸಿ ಸೆಕ್ಷನ್ 269 (ಜೀವನಕ್ಕೆ ಅಪಾಯಕಾರಿಯಾದ ರೋಗವನ್ನು ನಿರ್ಲಕ್ಷ್ಯದಿಂದ ಹರಡುವುದು), 270ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ: ಸಿಸಿಟಿವಿ ಲೈವ್ ವೀಕ್ಷಕನಿಂದ ಕಟ್ಕೆರೆ ಶ್ರೀ ನಾಹಾದೇವಿ ಕಾಳಿಕಾಂಬ ಅಮ್ಮನ ದೇವಸ್ಥಾನದ ದೊಡ್ಡ ಕಳ್ಳತನ ತಪ್ಪಿದೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರ ಸಮೀಪದ ಈ ಘಟನೆ ನಡೆದಿದೆ.
ಸುಮಾರು 25 ಸಾವಿರ ಮೌಲ್ಯದ ಆಭರಣಗಳನ್ನು ಕದ್ದಿರುವ ಕಳ್ಳರಿಗೆ, ಗೌಪ್ಯವಾಗಿ ಅಳವಡಿಸಿದ್ದ ಸಿಸಿಟಿವಿ ಲಕ್ಷಾಂತರ ಮೌಲ್ಯದ ಕಳ್ಳತನಕ್ಕೆ ಅಡ್ಡಗಾಲಿಟ್ಟಿದೆ. ಕಳೆದ ರಾತ್ರಿ ಕಳ್ಳರು ದೇವಸ್ಥಾನ ಹೊಕ್ಕುವ ಸಂದರ್ಭ ಸಿಸಿಟಿವಿ ವಯರ್ ಕಟ್ ಮಾಡಿ, ಡಿವಿಆರ್ ತೆಗೆದಿದ್ದಾರೆ. ಸೈನ್ ಇನ್ ಸೆಕ್ಯೂರಿಟಿ ಸಂಸ್ಥೆಯವರು ಸೇಫ್ ಕುಂದಾಪುರ ಪ್ರಾಜೆಕ್ಟ್ ಸದಸ್ಯರ ಸಮಯಪ್ರಜ್ಞೆಯಿಂದ ಬಾರೀ ಕಳ್ಳತನ ತಪ್ಪಿದೆ. ದೇವಸ್ಥಾನದ ಮುಖ್ಯದ್ವಾರದ ಬಾಗಿಲು ಒಡೆದು ಒಳ ಪ್ರವೇಶಿಸಿದ ಕಳ್ಳರು ದೇವಸ್ಥಾನದ ಒಳಗಿನ ದೇವಿ ಮೂರ್ತಿಯ ಕೈಯಲ್ಲಿದ್ದ ಬೆಳ್ಳಿಯ ಖಡ್ಗ, ಕೊಡಲಿ ಕಳವುಗೈದಿದ್ದಾರೆ.
ಬಾಗಿಲಿಗೆ ಅಳವಡಿಸಿದ್ದ ಬೆಳ್ಳಿ ಲೇಪನವನ್ನು ಕಿತ್ತು ತೆಗೆಯಲು ಯತ್ನಿಸಿ ಹಾಳುಗೈದಿದ್ದಾರೆ. ರಾತ್ರಿ 1.27ರ ಹೊತ್ತಿಗೆ ಸಿಸಿ ಕ್ಯಾಮೆರಾ ಬಂದ್ ಆಗಿದೆ. ಇದನ್ನು ಗಮನಿಸಿದ ಸಿಸಿ ಕ್ಯಾಮೆರಾ ವೀಕ್ಷಕ ಪೊಲೀಸ್ ಠಾಣೆಗೆ ತಿಳಿಸಿದ್ದಾರೆ. ಠಾಣೆಯಿಂದ ಬೀಟ್ ಸಿಬ್ಬಂದಿ ತಕ್ಷಣ ದೇವಸ್ಥಾನದ ಬಳಿ ಬಂದಾಗ ಯಾವುದೋ ವಾಹನ ಬಂದದ್ದನ್ನು ಅರಿತ ಕಳ್ಳರು ಪರಾರಿಯಾಗಿದ್ದಾರೆ.
ದೇವಸ್ಥಾನದ 26 ಲಕ್ಷದ ಬೆಳ್ಳಿ, 5 ಲಕ್ಷದ ಮೌಲ್ಯದ ಸೊತ್ತುಗಳು ದೇಗುಲದಲ್ಲೇ ಉಳಿದಿದೆ. ಇದೇ ದೇವಸ್ಥಾನದಲ್ಲಿ ಈ ಹಿಂದೆ ಎರಡು ಬಾರಿ ಕಳ್ಳತನವಾಗಿತ್ತು. ಕುಂದಾಪುರ ಎ.ಎಸ್ಪಿ ಹರಿರಾಂ ಶಂಕರ್, ಸರ್ಕಲ್ ಇನ್‍ಸ್ಪೆಕ್ಟರ್ ಗೋಪಿಕೃಷ್ಣ, ಕುಂದಾಪುರ ಪಿಎಸ್‍ಐ ಹರೀಶ್ ಆರ್. ಹಾಗೂ ಸಿಬ್ಬಂದಿ ಭೇಟಿ ನೀಡಿದ್ದಾರೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಜಾಡು ಹಿಡಿದಿರುವ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.
ಉಡುಪಿ: ವಿದೇಶಗಳಲ್ಲಿ ಸಿಲುಕಿಕೊಂಡ ಭಾರತೀಯರನ್ನು ಕಳೆದ ಐದು ದಿನಗಳಿಂದ ಭಾರತಕ್ಕೆ ವಾಪಸ್ ಕರೆತರಲಾಗುತ್ತಿದೆ. ಯುನೈಟೆಡ್ ಅರಬ್ ಎಮಿರೇಟ್ಸಿಂದ ಉಡುಪಿಗೆ 52 ಪ್ರಯಾಣಿಕರು ವಾಪಸ್ಸಾಗಿದ್ದಾರೆ.
ಮಂಗಳವಾರ ರಾತ್ರಿ 176 ಪ್ರಯಾಣಿಕರು ಮಂಗಳೂರು ಏರ್ ಪೋರ್ಟಿಗೆ ಬಂದಿಳಿದಿದ್ದು , ಈ ಪೈಕಿ 52 ಜನರು ವಿಮಾನ ನಿಲ್ದಾಣದಲ್ಲಿನ ಎಲ್ಲ ಪ್ರಕ್ರಿಯೆಗಳನ್ನು ಪೂರೈಸಿ ಉಡುಪಿ ಜಿಲ್ಲೆಗೆ ಬಂದಿದ್ದಾರೆ. ಈ ಪೈಕಿ 27 ಮಂದಿ ಪುರುಷರು ಮತ್ತು 26 ಮಂದಿ ಮಹಿಳೆಯರಿದ್ದಾರೆ. 41 ಜನ ಹೋಟೆಲ್, ಲಾಡ್ಜಿಂಗ್ ಕ್ವಾರಂಟೈನ್ ಗೆ ಒಳಪಟ್ಟರೆ, 9 ಜನ ಸರ್ಕಾರಿ ಕ್ವಾರಂಟೈನ್ ಗೆ ಸೇರ್ಪಡೆಯಾಗಿದ್ದಾರೆ.
ಆಯಾಯ ತಾಲೂಕಲ್ಲಿ ನೋಂದಣಿ ಮಾಡಿ ತಮ್ಮ ಇಚ್ಛೆಯಂತೆ ಕ್ವಾರಂಟೈನ್ ಮಾಡಲಾಗುತ್ತದೆ. ಪೊಲೀಸ್ ಭದ್ರತೆ ಕೊಡಲಾಗಿದೆ. ಸಂಬಂಧಿಕರು ಭೇಟಿಯಾಗುವಂತಿಲ್ಲ ಎಂದು ಕಡ್ಡಾಯವಾಗಿ ತಾಕೀತು ಮಾಡಲಾಗಿದೆ. ಉಡುಪಿ ತಾಲೂಕಿನ 12, ಕುಂದಾಪುರ ತಾಲೂಕಿನ 14, ಬೈಂದೂರು ತಾಲೂಕಿನ 5, ಕಾಪು ತಾಲೂಕಿನ 16, ಕಾರ್ಕಳ ತಾಲೂಕಿನ ಮೂವರು ಮತ್ತು ಬ್ರಹ್ಮಾವರ ತಾಲೂಕಿನ ಮೂವರು ಸೇರಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಆರೋಗ್ಯ ಇಲಾಖೆಯ ತಪಾಸಣಾ ತಂಡದಿಂದ ಆರೋಗ್ಯ ತಪಾಸಣೆ ನಡೆಸಿದ ಬಳಿಕ ಪ್ರಯಾಣಿಕರ ಕೈಗೆ ಸೀಲ್ ಹಾಕಲಾಯಿತು. ಬಳಿಕ ತಡರಾತ್ರಿ 3 ಗಂಟೆ ಸುಮಾರಿಗೆ ಉಡುಪಿ ಜಿಲ್ಲೆಯ 52 ಮಂದಿಯನ್ನು ಬಸ್ಸುಗಳಲ್ಲಿ ನೇರವಾಗಿ ಉಡುಪಿಗೆ ಕರೆತರಲಾಯಿತು. ವಿಮಾನದಲ್ಲಿ ಆಗಮಿಸಿದ ಜಿಲ್ಲೆಯ ಎಲ್ಲ ಪ್ರಯಾಣಿಕರು ಉಡುಪಿ ನಗರದ ಬೋರ್ಡ್ ಹೈಸ್ಕೂಲ್ ಆವರಣದಲ್ಲಿರುವ ಸ್ವೀಕಾರ ಕೇಂದ್ರದಲ್ಲಿ ಜಮಾವಣೆಯಾದರು.
ಕುಂದಾಪುರ ಭೂ ದಾಖಲೆಗಳ ಸಹಾಯಕ ನಿರ್ದೇಶಕ ರವೀಂದ್ರ, ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಕಂದಾಯ, ಸರ್ವೇ ಇಲಾಖಾ ಸಿಬ್ಬಂದಿ ವಿದೇಶದಿಂದ ಬಂದರನ್ನು ಕ್ವಾರಂಟೈನ್ ಮಾಡಿದರು.
ಉಡುಪಿ: ಜಿಲ್ಲೆಯ ಕುಂದಾಪುರ ತಾಲೂಕಿನ ಮಿನಿ ವಿಧಾನಸೌಧದ ಒಳಗೆ ಪಾಕಿಸ್ತಾನದ ಪರ ಘೋಷಣೆ ಕೇಳಿ ಬಂದಿದೆ. ಬೆಳ್ಳಂಬೆಳಗ್ಗೆ ಮಿನಿ ವಿಧಾನಸೌಧ ಪ್ರವೇಶಿಸಿದ ವ್ಯಕ್ತಿ ನಿರಂತರವಾಗಿ ಪಾಕ್ ಪರ ಘೋಷಣೆಗಳನ್ನು ಕೂಗಿದ್ದಾನೆ. ಸ್ಥಳೀಯರು ಈತನ ಕೃತ್ಯಕ್ಕೆ ಅಡ್ಡಿ ವ್ಯಕ್ತಪಡಿಸಿದರೂ ಆತ ಮಾತು ಕೇಳದೆ ಪಾಕ್ ಪರ ಘೋಷಣೆ ಕೂಗಿದ್ದಾನೆ.
ದೇಶದ್ರೋಹಿ ಹೇಳಿಕೆಯನ್ನು ನೀಡಿದ ವ್ಯಕ್ತಿಯನ್ನು ಕುಂದಾಪುರ ಕೋಡಿ ನಿವಾಸಿ ರಾಘವೇಂದ್ರ ಗಾಣಿಗ ಎಂದು ಗುರುತಿಸಲಾಗಿದೆ. ಕೂಡಲೇ ಪೊಲೀಸ್ ಠಾಣೆಗೆ ಸ್ಥಳೀಯರು ಫೋನ್ ಮಾಡಿದ್ದಾರೆ. ಸ್ಥಳಕ್ಕಾಗಮಿಸಿದ ಕುಂದಾಪುರ ಎಸ್‍ಐ ಹರೀಶ್ ವ್ಯಕ್ತಿಯನ್ನು ವಶಕ್ಕೆ ಪಡಕೊಂಡಿದ್ದಾರೆ. ಪೊಲೀಸರು ದಸ್ತಗಿರಿ ಮಾಡುವಾಗಲೂ ವ್ಯಕ್ತಿ ಪಾಕ್ ಪರ ಘೋಷಣೆಗಳನ್ನು ಕೂಗಿದ್ದಾನೆ. ರಾಘವೇಂದ್ರ ಗಾಣಿಗ ಕುಂದಾಪುರದ ಖಾಸಗಿ ಶ್ರೀಮಾತಾ ಆಸ್ಪತ್ರೆಗೆ ತನ್ನ ತಾಯಿಯ ಜೊತೆ ಬಂದಿದ್ದ.
ಕಳೆದ ಹತ್ತು ವರ್ಷದಿಂದ ಮಾನಸಿಕ ತೊಂದರೆಯಿಂದ ಬಳಲುತ್ತಿರುವ ರಾಘವೇಂದ್ರ ನಿರಂತರ ಚಿಕಿತ್ಸೆ ಪಡೆಯುತ್ತಿದ್ದಾನೆ. ಕುಂದಾಪುರದ ಖಾಸಗಿ ಸಂಸ್ಥೆಯಲ್ಲಿ ಶಿಕ್ಷಕನಾಗಿದ್ದ ರಾಘವೇಂದ್ರ ಎಂಟು ವರ್ಷಗಳ ಹಿಂದೆ ಮಾನಸಿಕ ಸಮಸ್ಯೆಯಿಂದ ಕೆಲಸದಿಂದ ವಜಾಗೊಂಡಿದ್ದ. ಪೊಲೀಸರು ರಾಘವೇಂದ್ರನನ್ನು ದಸ್ತಗಿರಿ ಮಾಡುತ್ತಿದ್ದಂತೆ ಆಸ್ಪತ್ರೆಯಿಂದ ತಾಯಿ ಪೊಲೀಸ್ ಠಾಣೆಗೆ ಬಂದಿದ್ದಾರೆ. ತಾನು ತನ್ನ ಮಗನನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಬಂದಿದ್ದೆ. ಆತನಿಗೆ ಮಾನಸಿಕ ಸಮಸ್ಯೆ ಇದೆ. ಸಾಲಿನಲ್ಲಿ ನಿಂತಿದ್ದಾಗ ತಪ್ಪಿಸಿಕೊಂಡು ಓಡಿದ್ದಾನೆ ಎಂದು ಪೊಲೀಸರಿಗೆ ಹೇಳಿದ್ದಾರೆ.
ರಾಘವೇಂದ್ರನನ್ನು ವಿಚಾರಣೆ ನಡೆಸುತ್ತಿರುವ ಪೊಲೀಸರು ಆತನ ಮಾನಸಿಕ ಸ್ಥಿತಿಯ ಬಗ್ಗೆ ಅವಲೋಕನ ಮಾಡುತ್ತಿದ್ದಾರೆ. ಮಾನಸಿಕ ತಜ್ಞರನ್ನು ಪೊಲೀಸರು ಸಂಪರ್ಕ ಮಾಡಿದ್ದು ರಾಘವೇಂದ್ರನನ್ನು ಚಿಕಿತ್ಸೆಗೆ ಒಳಪಡಿಸುವ ಸಾಧ್ಯತೆ ಇದೆ. ಪೊಲೀಸ್ ವಶದಲ್ಲಿರುವ ರಾಘವೇಂದ್ರ ನಿರಂತರವಾಗಿ ಮನೆಯಲ್ಲಿ ಸುದ್ದಿವಾಹಿನಿಗಳನ್ನು ನೋಡುತ್ತಿದ್ದ ಎಂದು ತಾಯಿ ಪೊಲೀಸರ ಬಳಿ ಹೇಳಿಕೊಂಡಿದ್ದಾರೆ. ಸುದ್ದಿ ವಾಹಿನಿಗಳಲ್ಲಿ ಸಿಎಎ ಹೋರಾಟ, ಅಮೂಲ್ಯಾ ರಂಪಾಟ, ಆದ್ರ್ರಾ ಚೀರಾಟವನ್ನು ಕಂಡ ರಾಘವೇಂದ್ರ ಅದೇ ಮನೋಸ್ಥಿತಿಗೆ ಹೊರಳಿದ್ದ ಎನ್ನಲಾಗಿದೆ.
– ಗೆದ್ದ ಮೇಲೆ ಭೂಮಿ ತಾಯಿಗೆ ನಮಸ್ಕರಿಸಿ, ಸಹ ಸ್ಪರ್ಧಿಗೆ ಕಾಲು ಮುಟ್ಟಿ ನಮಸ್ಕಾರ
ಉಡುಪಿ: ಅತ್ಯಂತ ಅಪಾಯಕಾರಿ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಕರ್ನಾಟಕದ ಕುವರ ಕರಾವಳಿಯ ಯುವಕ ಅವಿನಾಶ್ ಗೆಲುವಿನ ಕಿಕ್ ಮಾಡಿದ್ದಾರೆ. ಗೆಲುವಿನ ಬಳಿಗೆ ಗರ್ವ ಪಡದೇ ಮೊದಲು ಭೂಮಿ ತಾಯಿಗೆ ನಮಸ್ಕರಿಸಿದ್ದಾರೆ. ತದನಂತರ ಸ್ಪರ್ಧೆಯಲ್ಲಿ ತನ್ನಿಂದ ಹೊಡೆತ ಎದುರಾಳಿ ಸ್ಪರ್ಧಿಯ ಕಾಲಿಗೂ ನಮಸ್ಕರಿಸುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಮಲೇಶಿಯಾದಲ್ಲಿ ನಡೆದ ಚಾಂಪಿಯನ್ ಶಿಪ್ ನಲ್ಲಿ ಕುಂದಾಪುರದ ಅವಿನಾಶ್ ಶೆಟ್ಟಿ ಭಾರತದ ವಿಜಯ ಪತಾಕೆ ಹಾರಿಸಿದ್ದಾರೆ. ಥೈಲ್ಯಾಂಡಿನ ಪುಕೆಟ್ ಎಂಬಲ್ಲಿ ನಡೆದ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಅವಿನಾಶ್ ಪಾಲ್ಗೊಂಡು 60 ಕೆಜಿ ವಿಭಾಗದಲ್ಲಿ ಅಖಾಡಕ್ಕಿಳಿದು ಗೆಲುವು ಸಾಧಿಸಿದ್ದಾರೆ. ಅವಿನಾಶ್ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಸ್ಪರ್ಧಿಸಿದ್ದಾರೆ ಎಂಬುವುದು ವಿಶೇಷ.
ಅನುಭವಿ ಬಾಕ್ಸರ್ ನ್ಯೂವ್ಲಿಕಿಟ್ ಅವರ ಜೊತೆ ಸೆಣೆಸಾಡಿದ ಅವಿನಾಶ್, ನ್ಯೂವ್ಲಿಕಿಟ್ ಅವರಿಗೆ ಎರಡು ಫ್ಲೈಯಿಂಗ್ ನೀ ಹೊಡೆತದ ಮೂಲಕ ಮೊದಲ ಸುತ್ತಿನಲ್ಲಿ ಸೋಲುಣಿಸಿದರು. ಮನೆಯವರ ತೀವ್ರ ವಿರೋಧದ ನಡುವೆಯೂ ಬಾಕ್ಸಿಂಗ್ ಅಭ್ಯಾಸ ಮಾಡಿದ್ದ ಅವಿನಾಶ್ ಶೆಟ್ಟಿ ಇದೀಗ ತನ್ನ ಸಾಧನೆ ಮೂಲಕ ಕುಟುಂಬಸ್ಥರು ಹೆಮ್ಮೆ ಪಡುವಂತೆ ಮಾಡಿದ್ದಾರೆ. ಹುಟ್ಟೂರಿಗೆ, ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ.
ಇಂಡಿಯನ್ ಬಾಕ್ಸಿಂಗ್ ಅಸೋಸಿಯೇಶನ್ ಸೇರಿ ಇನ್ನಷ್ಟು ಸಾಧನೆಗೈಯ್ಯಬೇಕು ಅನ್ನೋದು ಅವಿನಾಶ್ ಅವರ ಮಹತ್ವಾಕಾಂಕ್ಷೆ. ಕ್ರೀಡಾ ಇಲಾಖೆ ಸರಕಾರ ಪ್ರತಿಭೆಯನ್ನು ಪ್ರೋತ್ಸಾಹ ಮಾಡಬೇಕಿದೆ.
ಉಡುಪಿ: ಜಿಲ್ಲೆ ಕುಂದಾಪುರ ತಾಲೂಕಿನ ಮಣೂರು ಸರಕಾರಿ ಶಾಲೆಯ ನೂತನ ಕಟ್ಟಡ ಮತ್ತು ಸಭಾಂಗಣವನ್ನು ಉದ್ಘಾಟಿಸಲು ಶಿಕ್ಷಣ ಸಚಿವ ಸುರೇಶ್ ಕುಮಾರ್ ಬೆಂಗಳೂರಿಂದ ಬಂದಿದ್ದರು. ರಾಜಧಾನಿಯಿಂದ ಬಂದರೂ ಕಾರ್ಯಕ್ರಮ ಉದ್ಘಾಟನೆ ಮಾಡಿದ್ದು ಮಾತ್ರ ಸರಕಾರಿ ಶಾಲೆಯ ಮಕ್ಕಳು.
ಸಚಿವರು ಸರಕಾರಿ ಶಾಲೆಯ ಮಕ್ಕಳ ಕೈಯಲ್ಲೇ ಪ್ರಮುಖ ಕಾರ್ಯಕ್ರಮ, ಕೊಠಡಿಗಳು, ಸಭಾಂಗಣವನ್ನು ಉದ್ಘಾಟನೆ ಮಾಡಿಸಿದರು. ಮಕ್ಕಳಿಗಾಗಿರುವ ಶಾಲೆಯನ್ನು ಮಕ್ಕಳೇ ಉದ್ಘಾಟಿಸಿದ್ದಾರೆ ಎಂದು ಸುರೇಶ್ ಕುಮಾರ್ ಹೇಳಿದರು. ಸಚಿವರ ಕ್ರಮಕ್ಕೆ ಪೋಷಕರು, ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮುಂದಿನ ಶೈಕ್ಷಣಿಕ ವರ್ಷದಿಂದ ಇಲಾಖೆ ಮೂಲಕ ಶಾಲೆಗಳಿಗೆ ಸಂಬಂಧಿಸಿದಂತೆ ನಾಲ್ಕು ನಿರ್ಣಯ ತೆಗೆದುಕೊಂಡಿದ್ದೇವೆ. ವಾರಕ್ಕೊಂದು ದಿನ ಪಠ್ಯೇತರ ಚಟುವಟಿಕೆಗಳು ಕಡ್ಡಾಯ ಮಾಡುತ್ತೇವೆ. ಪಠ್ಯಪುಸ್ತಕ ಬಿಟ್ಟು ಏನಾದರೂ ಮಾಹಿತಿ, ಚಟುವಟಿಕೆ ಮಕ್ಕಳಿಗೆ ಶಿಕ್ಷಕರು, ಶಿಕ್ಷಕೇತರರಿಂದ ಸಿಗುವಂತಾಗಲಿದೆ. ಇದಕ್ಕೆ ಈಗಾಗಲೇ ರೂಪುರೇಷೆ ನಿರ್ಮಾಣ ಮಾಡಿದ್ದೇವೆ ಎಂದರು.
2020 ಶೈಕ್ಷಣಿಕ ವರ್ಷದಿಂದ ಸ್ಕೂಲ್ ಬ್ಯಾಗ್ ಹೊರೆ ಕಡಿಮೆಯಾಗಲಿದೆ. ಸರಕಾರಿ ಮತ್ತು ಖಾಸಗಿ ಶಾಲೆಗಳಿಗೂ ವಿಸ್ತರಣೆ ಮಾಡುತ್ತೇವೆ. ಮಕ್ಕಳ ಶಿಕ್ಷಣ ಎಷ್ಟು ಮುಖ್ಯವೋ ಅದಕ್ಕಿಂತ ಅವರ ಆರೋಗ್ಯವೂ ಮುಖ್ಯ. ಖಂಡಿತಾ ಮುಂದಿನ ವರ್ಷಕ್ಕೆ ಪುಸ್ತಕಗಳ ಸಂಖ್ಯೆಯಲ್ಲಿ ಇಳಿಮುಖವಾಗಲಿದೆ ಎಂದರು.
ಶಿಕ್ಷಕರಲ್ಲದ ವಿಷಯ ತಜ್ಞರು ಮಕ್ಕಳಿಗೆ ಪಾಠ ಮಾಡುವ ಅವಕಾಶ ಕಲ್ಪಿಸಲು ಆ್ಯಪ್ ಮಾಡಿರುವುದಾಗಿ ಸುರೇಶ್ ಕುಮಾರ್ ಹೇಳಿದರು. ರಜೆಯ ದಿನ ಹತ್ತಿರದ ಸರ್ಕಾರಿ ಶಾಲೆಗೆ ತೆರಳಿ ಅಲ್ಲಿ ಇಂಗ್ಲೀಷ್, ಹಿಂದಿ ಮತ್ತಿತರ ಯಾವುದಾದರೂ ಸಾಮಾನ್ಯ ಜ್ಞಾನದ ವಿಚಾರದಲ್ಲಿ ಪಾಠ ಮಾಡುವ ಅವಕಾಶ ಜನಸಾಮಾನ್ಯರಿಗೆ ಕಲ್ಪಿಸಲಾಗುವುದು. ಶಿಕ್ಷಕರು, ಪೋಷಕರು ಮತ್ತು ಮಕ್ಕಳ ಉಪಯೋಗಕ್ಕೆ ಮಾರ್ಚ್ ತಿಂಗಳಿನಲ್ಲಿ ಸಹಾಯವಾಣಿ ತೆರೆಯುತ್ತೇವೆ. ಅವರ ಸಮಸ್ಯೆ ಹಾಗೂ ಗೊಂದಲಗಳನ್ನು ವಿಚಾರಣೆ ಮಾಡೋದು ನಮ್ಮ ಉದ್ದೇಶ ಎಂದರು.
ರೆಬೆಲ್ ಸ್ಟಾರ್ ಅಂಬರೀಶ್ 14 ವರ್ಷಗಳ ನಂತರ ನಾಯಕ ನಟನಾಗಿ ಅಭಿನಯಿಸುತ್ತಿರುವ ಚಿತ್ರ ಅಂಬಿ ನಿಂಗೆ ವಯಸ್ಸಾಯ್ತೋ. ಅಂಬರೀಶ್ ಅವರ ವಯಸ್ಸಿಗೆ, ಮಾಗಿದ ಅಭಿನಯಕ್ಕೆ ಪಕ್ಕಾ ಹೇಳಿ ಮಾಡಿಸಿದಂಥಾ ಕಥೆಯಿರೋ ಚಿತ್ರವಿದು. ಇದೀಗ ಈ ಚಿತ್ರದ ಹಾಡುಗಳು ಎಲ್ಲೆಡೆ ಮೆಚ್ಚುಗೆ ಗಳಿಸಿಕೊಂಡಿವೆ. ಚಿತ್ರರಂಗದ ತಾರೆಯರೂ ಕೂಡಾ ಈ ಹಾಡುಗಳನ್ನು ಕೇಳಿ ತಲೆದೂಗಿದ್ದಾರೆ.
ನಟಿ ಮಾಲಾಶ್ರೀಯವರಂತೂ ಈ ಚಿತ್ರದ ಹಾಡುಗಳನ್ನು ಅಪಾರವಾಗಿ ಮೆಚ್ಚಿಕೊಂಡಿದ್ದಾರೆ. ಹಾಡುಗಳನ್ನು ಕೇಳಿದ ನಂತರ ಈ ಬಗ್ಗೆ ಟ್ವಿಟ್ಟರ್ ನಲ್ಲಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ನಾನು ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದ ಹಾಡುಗಳನ್ನು ಕೇಳಿದೆ. ಅಂಬರೀಶ್ ಅವರ ನಟನೆಯ ಬಗೆಗಂತೂ ಮಾತನಾಡಲು ಪದಗಳಿಲ್ಲ. ದೊಡ್ಡ ಯಶಸ್ಸು ಈ ಚಿತ್ರಕ್ಕೆ ಸಿಗಲಿ’ ಅಂತ ಮಾಲಾಶ್ರೀಯವರು ಹಾರೈಸಿದ್ದಾರೆ.
ಈ ಚಿತ್ರದ ಹಾಡುಗಳು ಈ ಪಾಟಿ ಮೆಚ್ಚುಗೆ ಗಳಿಸಿಕೊಳ್ಳಲು ಕಾರಣ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಸೃಷ್ಟಿಸಿರುವ ಮಾಂತ್ರಿಕ ಟ್ಯೂನುಗಳು. ಅರ್ಜುನ್ ಆರಂಭದಿಂದಲೂ ಈ ಚಿತ್ರದ ಬಗ್ಗೆ ವಿಶೇಷವಾದ ಆಸಕ್ತಿಯಿಂದಲೇ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರಂತೆ. ಯಾವ ಹೋಲಿಕೆಗೂ ಸಿಗದ ಭಿನ್ನವಾದ ಹಾಡುಗಳನ್ನು ಸೃಷ್ಟಿಸಬೇಕೆಂಬ ಹಂಬಲದಿಂದಲೇ ಎಲ್ಲ ಹಾಡುಗಳನ್ನೂ ರೂಪಿಸಿದ್ದಾರೆ. ಈ ಬಗ್ಗೆ ನಿರ್ದೇಶಕ ಗುರುದತ್ ಗಾಣಿಗ, ಅಂಬಿ ಮತ್ತು ಕಿಚ್ಚ ಸುದೀಪ್ ಕೂಡಾ ಸಂತಸಗೊಂಡಿದ್ದಾರೆ.
ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದ ಮೂಲಕ ಇಪ್ಪತ್ತಾರು ವರ್ಷದ ಗುರುದತ್ ಗಾಣಿಗ ನಿರ್ದೇಶಕರಾಗಿ ಹೊರ ಹೊಮ್ಮಿದ್ದಾರೆ. ಇಷ್ಟು ಚಿಕ್ಕ ವಯಸಿನಲ್ಲಿಯೇ ಈ ಹುಡುಗನ ಅದೃಷ್ಟ ಕಂಡು ಅನೇಕರು ಬೆರಗಾಗಿದ್ದಾರೆ. ಆದರೆ ಗುರುದತ್ ನಡೆದು ಬಂದ ಹಾದಿಯನ್ನು ಗಮನಿಸಿದರೆ ಖಂಡಿತಾ ಇದು ಅದೃಷ್ಟವಲ್ಲ, ಬದಲಾಗಿ 10 ವರ್ಷಗಳ ಕಠಿಣ ಪರಿಶ್ರಮದ ಪ್ರತಿಫಲ ಎಂಬ ವಿಚಾರ ಯಾರಿಗಾದರೂ ಮನದಟ್ಟಾಗುತ್ತದೆ!
ಕುಂದಾಪುರದ ನಾಗೂರಿನ ಗುರುದತ್ ಗೆ ತಾನು ಸಿನಿಮಾ ನಿರ್ದೇಶಕನಾಗಬೇಕೆಂಬ ಕನಸು ಹತ್ತಿಕೊಂಡಿದ್ದು ಹೈಸ್ಕೂಲು ದಿನಗಳಲ್ಲಿಯೇ. ಓದಿನಲ್ಲಿ ಹೇಳಿಕೊಳ್ಳುವಂಥಾದ್ದೇನೂ ಆಸಕ್ತಿ ಇಲ್ಲದಿದ್ದ ಗುರುದತ್ ಮನೆ ಮಂದಿಯ ಒತ್ತಾಸೆಯ ಮೇರೆಗೆ ಪಿಯುಸಿ ಸೇರಿಕೊಂಡಿದ್ದರು. ಆದರೆ ಪಿಯುಸಿ ಫಲಿತಾಂಶ ಬರುವ ಮುನ್ನವೇ ನಾನು ಸಿನಿಮಾಗೆ ಸೇರ್ತೀನಿ ಅಂತ ಮನೆಯಲ್ಲಿ ಘೋಷಿಸಿದವರೇ ಹೆತ್ತವರಿಗೆ ಇಷ್ಟವಿಲ್ಲದಿದ್ದರೂ ಬೆಂಗಳೂರಿಗೆ ಹೊರಟಿದ್ದರು. ಹಾಗೆ ಗುರುದತ್ ಗುರುತು ಪರಿಚಯವೇ ಇಲ್ಲದಿದ್ದ ಬೆಂಗಳೂರಿಗೆ ಬಂದಿಳಿಯುವಾದ ಅವರಿಗೆ ಕೇವಲ ಹದಿನಾರು ವರ್ಷ!
ಬೆಂಗಳೂರು ಎಂಬ ಮಾಯಾನಗರಿಯಲ್ಲಿ ಆ ದಿನಗಳಲ್ಲಿ ಒಂದು ನರಪಿಳ್ಳೆಯ ಪರಿಚಯವೂ ಗುರುದತ್ ಗಿರಲಿಲ್ಲ. ಈ ಊರಿನಲ್ಲಿ ಹತ್ತಿರ ಸಂಬಂಧಿಗಳೂ ಇರಲಿಲ್ಲ. ಗುರಿ ಚಿತ್ರರಂಗವಾದರೂ ಗಾಂಧಿನಗರ ಯಾವ ದಿಕ್ಕಿನಲ್ಲಿದೆ ಎಂಬುದೂ ಅವರಿಗೆ ಗೊತ್ತಿರಲಿಲ್ಲ. ಒಂದಷ್ಟು ದಿನ ಹೊಟ್ಟೆ ಹೊರೆಯಲು ಅದೂ ಇದೂ ಕೆಲಸ ಮಾಡಿಕೊಂಡಿದ್ದ ಅವರು ಕಡೆಗೂ ಮೇಕಪ್ ಸಹಾಯಕರಾಗಿ ಚಿತ್ರರಂಗಕ್ಕೆ ಅಡಿಯಿರಿಸಿದ್ದರು. ಅಲ್ಲಿಂದಲೇ ಸಂಪರ್ಕ ಸಾಧಿಸಿ ನಿರ್ದೇಶನ ವಿಭಾಗಕ್ಕೆ ತೂರಿಕೊಳ್ಳಬೇಕೆಂಬುದು ಆ ದಿನಗಳಲ್ಲಿ ಗುರುದತ್ ಗಿದ್ದ ಏಕಮೇವ ಕನಸು!
ಹೀಗೇ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದ ಗುರುದತ್ ಅದೊಂದು ದಿವ್ಯ ಘಳಿಗೆಯಲ್ಲಿ ಕಿಚ್ಚ ಸುದೀಪ್ ಅವರನ್ನು ಸಂಧಿಸಿದ್ದರು. ಬಳಿಕ ಅವರ ಬಳಿಯೇ ಕೆಲಸ ಗಿಟ್ಟಿಸಿಕೊಂಡಿದ್ದರು. ಒಂದಷ್ಟು ಚಿತ್ರಗಳಲ್ಲಿ ನಿರ್ದೇಶನ ವಿಭಾಗದಲ್ಲಿ ಸಹಾಯಕರಾಗಿದ್ದುಕೊಂಡು ಸುದೀಪ್ ಅವರ ಶಿಸ್ತು, ನಿಖರವಾದ ಕಸುಬುದಾರಿಕೆ ಕಲಿತುಕೊಂಡ ಗುರುದತ್ ಗುರಿಯ ನೇರಕ್ಕೆ ಬಂದು ನಿಂತಿದ್ದು, ಅವರ ಬದುಕಿನಲ್ಲಿಯೂ ಬದಲಾವಣೆಯ ಗಾಳಿ ಬೀಸಲಾರಂಭಿಸಿದ್ದು ಆವಾಗಿನಿಂದಲೇ.
ಆರಂಭದಲ್ಲಿ ಕಿಚ್ಚ ಸುದೀಪ್ ಅವರು ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರವನ್ನು ನಿರ್ದೇಶನ ಮಾಡಲು ಒಂದಷ್ಟು ಮಂದಿಗಾಗಿ ಅರಸಿದ್ದರಂತೆ. ಅದು ತನ್ನದಾಗುತ್ತದೆ ಎಂಬ ಕನಸಾಗಲೀ, ನಿರೀಕ್ಷೆಯಾಗಲಿ ಗುರುದತ್‍ಗಿರಲಿಲ್ಲ. ಆದರೆ ಅದೊಂದು ದಿನ ಇದ್ದಕ್ಕಿದ್ದಂತೆ ಗುರುದತ್ ರನ್ನು ಕರೆದ ಸುದೀಪ್ ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದ ಜವಾಬ್ದಾರಿಯನ್ನು ಹೊರಿಸಿದ್ದರು. ಹಾಗೆ ಮಹಾ ಜವಾಬ್ದಾರಿಯೊಂದನ್ನು ವಹಿಸಿಕೊಂಡ ಗುರುದತ್ ಗೀಗ ಅದನ್ನು ಸಮರ್ಥವಾಗಿ ನಿಭಾಯಿಸಿದ ತೃಪ್ತಿ ಇದೆಯಂತೆ.