Tag: Kundagol

  • ಬಿಜೆಪಿ ನಾಯಕರಿಂದ ಕುಂದಗೋಳ ಕಾಂಗ್ರೆಸ್ ಕಚೇರಿ ಎತ್ತಂಗಡಿ

    ಬಿಜೆಪಿ ನಾಯಕರಿಂದ ಕುಂದಗೋಳ ಕಾಂಗ್ರೆಸ್ ಕಚೇರಿ ಎತ್ತಂಗಡಿ

    – ಕಚೇರಿ ಇಲ್ಲದೇ ‘ಕೈ’ ನಾಯಕರು ಕಂಗಾಲು

    ಹುಬ್ಬಳ್ಳಿ: ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಕಾಂಗ್ರೆಸ್ ಹಾಗೂ ಬಿಜೆಪಿ ಬಿಗ್ ಫೈಟ್ ಏರ್ಪಟ್ಟಿದೆ. ಪ್ರಚಾರದ ಕಾವು ಏರುತ್ತಿರುವಾಗಲೇ ಕುಂದಗೋಳ ಪಟ್ಟಣದ ಹೊರವಲಯದಲ್ಲಿದ್ದ ಕಾಂಗ್ರೆಸ್ ಕಚೇರಿಯನ್ನು ಬಿಜೆಪಿ ನಾಯಕರು ಎತ್ತಂಗಡಿ ಮಾಡಿಸಿದ್ದಾರೆ.

    ಕುಂದಗೋಳದ ಮರಾಠಾ ಸಮುದಾಯ ಭವನದಲ್ಲಿ ಕಾಂಗ್ರೆಸ್ ಕಚೇರಿ ಮಾಡಲಾಗಿತ್ತು. ಈ ಸಮುದಾಯ ಭವನ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಅನುದಾನ ನೀಡಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಕಟ್ಟಡವನ್ನು ಕಾಂಗ್ರೆಸ್ ನಾಯಕರು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ಆರೋಪಿಸಿ, ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.

    ಬಿಜೆಪಿ ದೂರು ನೀಡಿದ್ದರಿಂದ ಚುನಾವಣಾ ಆಯೋಗವು ಕಾಂಗ್ರೆಸ್ ಕಚೇರಿಯನ್ನು ಜಪ್ತಿ ಮಾಡಿದೆ. ಇದರಿಂದಾಗಿ ಪಕ್ಷದ ಕಚೇರಿ ಇಲ್ಲದೇ ಕಾಂಗ್ರೆಸ್ ನಾಯಕರು ಕಂಗಾಲಾಗಿದ್ದಾರೆ. ಸದ್ಯ ಸ್ಥಳೀಯ ಮುಖಂಡರ ಮನೆಯನ್ನೇ ಕಾಂಗ್ರೆಸ್ ಕಚೇರಿ ಮಾಡಿಕೊಂಡಿದ್ದಾರೆ.

    ಕುಂದಗೋಳ ಹಾಗೂ ಚಿಂಚೋಳಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಮೇ 19ರಂದು ನಡೆಯಲಿದ್ದು, ಫಲಿತಾಂಶವು ಮೇ 23ರಂದು ಹೊರ ಬೀಳಲಿದೆ. ಎರಡೂ ಕ್ಷೇತ್ರಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಭರ್ಜರಿ ಮತ ಬೇಟೆ ನಡೆಸಿದ್ದಾರೆ.

  • ಉ.ಕ. ಕಾಂಗ್ರೆಸ್‍ನಲ್ಲಿ ಗಂಡಸರಿಲ್ಲ, ಅದಕ್ಕೆ ಡಿಕೆಶಿಯನ್ನ ಪ್ರಚಾರಕ್ಕೆ ಕರೆಸಿದ್ರು: ಯತ್ನಾಳ್

    ಉ.ಕ. ಕಾಂಗ್ರೆಸ್‍ನಲ್ಲಿ ಗಂಡಸರಿಲ್ಲ, ಅದಕ್ಕೆ ಡಿಕೆಶಿಯನ್ನ ಪ್ರಚಾರಕ್ಕೆ ಕರೆಸಿದ್ರು: ಯತ್ನಾಳ್

    – ದೇವೇಗೌಡರ ಕುಟುಂಬ ರಾಜಕಾರಣದಲ್ಲಿ ಮುಳುಗಿದೆ

    ಹುಬ್ಬಳ್ಳಿ: ಉತ್ತರ ಕರ್ನಾಟಕ ಕಾಂಗ್ರೆಸ್‍ನಲ್ಲಿ ಗಂಡಸರು ಇಲ್ಲ. ಹೀಗಾಗಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಕುಂದಗೋಳ ಕ್ಷೇತ್ರದಲ್ಲಿ ಪ್ರಚಾರಕ್ಕೆ ಕರೆ ತಂದಿದ್ದಾರೆ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಕುಂದಗೋಳ ತಾಲೂಕಿನ ಸಂಶಿ ಗ್ರಾಮದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಶಾಸಕರು, ಸಿಎಂ ಕುಮಾರಸ್ವಾಮಿಯವರು ಸೈನ್ಯಕ್ಕೆ ಸೇರುವ ಯುವಕರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಆದರೆ ಅವರ ಶಾಸಕರು ಸೀತಾರಾಮ ಕಲ್ಯಾಣ ಸಿನಿಮಾ ಟಿಕೆಟ್ ಹಂಚುವುದರಲ್ಲಿಯೇ ಕಾಲ ಕಳೆದರು ಎಂದು ಕುಟುಕಿದರು.

    ನಿಖಿಲ್ ಎಲ್ಲದೀಯಪ್ಪಾ ಅಂತ ಸಿಎಂ ಕುಮಾರಸ್ವಾಮಿಯವರು ಕೇಳುತ್ತಾರೆ. ಆಗ ನಿಖಿಲ್, ನಮ್ಮ ತಾತ ತೆಲೆ ಬೊಳಿಸಿದ ಜನರ ಮಧ್ಯದಲ್ಲಿಯೇ ಇದ್ದೀನಿ ಅಪ್ಪಾ ಅಂತ ಹೇಳುತ್ತಾನೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ, ಹೋ… ನೀನು ಈಗಾಗಲೇ ಜನರ ತಲೆ ಬೋಳಿಸಲು ಪ್ರಾರಂಭಿಸಿದಿಯಾ ಅಂತ ಪ್ರಶ್ನಿಸುತ್ತಾರೆ ಎಂದು ಶಾಸಕರು ವ್ಯಂಗ್ಯವಾಡಿದರು.

    ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರಿಗೆ ಈಗ 90 ವಯಸ್ಸು. ಆದರೂ ಚುನಾವಣೆಗೆ ನಿಲ್ಲುತ್ತಾರೆ. ಅಷ್ಟೇ ಅಲ್ಲದೆ ಇಬ್ಬರು ಮೊಮ್ಮಕ್ಕಳಿಗೂ ಟಿಕೆಟ್ ಕೊಡಿಸಿದ್ದಾರೆ. ಇತ್ತ ಇಬ್ಬರು ಮಕ್ಕಳು, ಒಬ್ಬ ಸೊಸೆ ವಿಧಾನಸಭಾ ಸದಸ್ಯರು. ಒಂದು ವೇಳೆ ದೇವೇಗೌಡರಿಗೆ 28 ಜನ ಮೊಮ್ಮಕ್ಕಳು ಇದ್ದಿದ್ದರೆ ಅವರನ್ನು ಲೋಕಸಭಾ ಚುನಾವಣೆಗೆ ನಿಲ್ಲಿಸುತ್ತಿದ್ದರು ಎಂದು ಲೇವಡಿ ಮಾಡಿದರು.

    ಕರ್ನಾಟಕದ ಭವಿಷ್ಯ ನಿರ್ಧರಿಸುವ ಜವಾಬ್ದಾರಿ ಕುಂದಗೋಳ ಹಾಗೂ ಚಿಂಚೋಳಿ ವಿಧಾನಸಭಾ ಕ್ಷೇತ್ರದ ಜನತೆಯ ಕೈಯಲ್ಲಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಈ ಎರಡೂ ಕ್ಷೇತ್ರಗಳನ್ನು ಮಾದರಿ ಕ್ಷೇತ್ರವಾಗಿ ಮಾಡಲು ಹೆಚ್ಚಿನ ಅನುದಾನ ನೀಡುವಂತೆ ಬಿ.ಎಸ್.ಯಡಿಯೂರಪ್ಪ ಅವರಿಗೆ ಒತ್ತಾಯಿಸುತ್ತೇನೆ ಎಂದು ಭರವಸೆ ನೀಡಿದರು.

  • ಡಿಕೆಶಿಗೆ ನಾನು ಚಾಲೆಂಜ್ ಮಾಡಿಲ್ಲ: ಸತೀಶ್ ಜಾರಕಿಹೊಳಿ

    ಡಿಕೆಶಿಗೆ ನಾನು ಚಾಲೆಂಜ್ ಮಾಡಿಲ್ಲ: ಸತೀಶ್ ಜಾರಕಿಹೊಳಿ

    – ಡಿ.ಕೆ.ಶಿವಕುಮಾರ್ ಕೈಕೆಳಗೆ ಕೆಲಸ ಮಾಡುತ್ತೇವೆ

    ಹುಬ್ಬಳ್ಳಿ: ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ನಾನು ಚಾಲೆಂಜ್ ಮಾಡಿಲ್ಲ. ಅವರು ಪ್ರಚಾರಕ್ಕೆ ಬರಬಾರದು ಅಂತ ಎಲ್ಲಿಯೂ ಹೇಳಿಕೆ ನೀಡಿಲ್ಲ ಎಂದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

    ಸಂಶಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಚಿವರು, ಬೆಂಗಳೂರಿನಲ್ಲಿ ಡಿ.ಕೆ. ಶಿವಕುಮಾರ್ ಅವರು ನನ್ನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು ಗಮನಕ್ಕೆ ಬಂದಿತ್ತು. ಅಲ್ಲಿಯೇ ಅದಕ್ಕೆ ಸ್ಪಷ್ಟನೆ ಕೂಡ ನೀಡಿದ್ದೆ. ಈ ಹಿಂದೆ ನಡೆದಿದ್ದನ್ನು ಮರೆತು ಕುಂದಗೋಳ ಉಪ ಚುನಾವಣಾ ಪ್ರಚಾರ ನಡೆಸುತ್ತಿದ್ದೇವೆ. ಈಗ ಅವರ ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ತಿಳಿಸಿದರು.

    ಡಿ.ಕೆ.ಶಿವಕುಮಾರ್ ಅವರ ಜೊತೆಗೆ ಜಂಟಿ ಪ್ರಚಾರ ಕಾರ್ಯಕ್ಕೆ ಹಿಂದೇಟು ಹಾಕುತ್ತಿದ್ದೇನೆ ಅಂತ ಯಾಕೆ ಪ್ರಶ್ನೆ ಕೇಳುತ್ತೀರಿ? ನೀವೇ ಈ ಬಗ್ಗೆ ಉತ್ತರ ನೀಡಬೇಕು. ಒಂದೇ ಪಕ್ಷದಲ್ಲಿ ಇದ್ದೇವೆ, ಒಟ್ಟಾಗಿಯೇ ಹೋಗುತ್ತೇವೆ ಎಂದು ಮಾಧ್ಯಮಗಳ ವಿರುದ್ಧ ಗುಡುಗಿದರು.

    ಕುಂದಗೋಳ ಉಪ ಚುನಾವಣೆ ಉಸ್ತುವಾರಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ಇಲ್ಲಿ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದ ನಾಯಕರು ಎನ್ನುವ ಪ್ರಶ್ನೆ ಬರುವುದಿಲ್ಲ. ಅನುಭವ ಹಾಗೂ ಸಾಮಥ್ರ್ಯ ಮುಖ್ಯವಾಗಿ ಬೇಕಾಗುತ್ತದೆ. ಡಿ.ಕೆ.ಶಿವಕುಮಾರ್ ಅವರು ಈಗಾಗಲೇ ಅನೇಕ ಕ್ಷೇತ್ರಗಳ ಉಸ್ತುವಾರಿ ವಹಿಸಿಕೊಂಡು ಅಭ್ಯರ್ಥಿಯನ್ನು ಗೆಲ್ಲಿಸಿದ್ದಾರೆ. ಹೀಗಾಗಿ ಪಕ್ಷದ ನಾಯಕರು ಅವರಿಗೆ ಕುಂದಗೋಳ ಕ್ಷೇತ್ರದ ಉಸ್ತುವಾರಿ ನೀಡಿದ್ದಾರೆ. ಡಿ.ಕೆ.ಶಿವಕುಮಾರ್ ಅವರ ಕೈಕೆಳಗೆ ನಾವು ಕೆಲಸ ಮಾಡುತ್ತೇವೆ ಎಂದರು.

  • ಕೈ ಬಿಡಲ್ಲ ಎಂದು ಕಣ್ಣೀರಿಟ್ಟಿದ್ದ ಡಿಕೆಶಿ ಕುಂದಗೋಳದಲ್ಲೇ ಠಿಕಾಣಿ

    ಕೈ ಬಿಡಲ್ಲ ಎಂದು ಕಣ್ಣೀರಿಟ್ಟಿದ್ದ ಡಿಕೆಶಿ ಕುಂದಗೋಳದಲ್ಲೇ ಠಿಕಾಣಿ

    ಧಾರವಾಡ (ಕುಂದಗೋಳ): ಮಾಜಿ ಸಚಿವ ದಿ. ಸಿ.ಎಸ್.ಶಿವಳ್ಳಿ ಕ್ಷೇತ್ರ ಕುಂದಗೋಳ ಅಖಾಡಕ್ಕೆ ಕೊಟ್ಟ ಮಾತಿನಂತೆ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಎಂಟ್ರಿಯಾಗಿದ್ದಾರೆ.

    ಇದೇ 19ರಂದು ನಡೆಯಲಿರುವ ಕುಂದಗೋಳ ಉಪಚುನಾವಣೆ ಉಸ್ತುವಾರಿಯಾಗಿ ಡಿ.ಕೆ.ಶಿವಕುಮಾರ್ ಅವರನ್ನು ಕಾಂಗ್ರೆಸ್ ನೇಮಕ ಮಾಡಿದೆ. ಈಗಾಗಲೇ ಕುಸುಮಾ ಶಿವಳ್ಳಿ ಉಮೇದುವಾರಿಕೆ ಸಲ್ಲಿಸಿದ್ದು, ಚುನಾವಣೆಯಲ್ಲಿ ಗೆಲ್ಲಲು ಕಾಂಗ್ರೆಸ್ ರಣತಂತ್ರ ಹೆಣೆದಿದೆ. ಮಾರ್ಚ್ 22ರಂದು ಶಿವಳ್ಳಿ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದ ಸಚಿವ ಡಿಕೆ ಶಿವಕುಮಾರ್ ಆಪ್ತ ಗೆಳೆಯ ಶಿವಳ್ಳಿಯವರನ್ನು ನೆನೆದು ಭಾವುಕರಾಗಿದ್ದರು. ಶಿವಳ್ಳಿ ಕುಟುಂಬದ ಜೊತೆ ಸದಾ ಇರ್ತೀನಿ, ಅವರನ್ನು ಕೈ ಬಿಡಲ್ಲ ಅಂತ ಕಣ್ಣೀರು ಹಾಕಿದ್ದರು.

    ಈಗ ಸಚಿವ ಡಿಕೆಶಿ ಉಸ್ತುವಾರಿಯಾಗಿರೋದ್ರಿಂದ ಕುಸುಮಾ ಶಿವಳ್ಳಿ ನಿಟ್ಟುಸಿರು ಬಿಟ್ಟಿದ್ದಾರೆ. ಕಾರಣ ಮಾಸ್ಟರ್ ಮೈಂಡ್ ಶಿವಕುಮಾರ್ ಎಂಟ್ರಿಯಿಂದ ಕಾಂಗ್ರೆಸ್‍ನಲ್ಲಿನ ಬಂಡಾಯ ಶಮನವಾಗುತ್ತೆ ಅನ್ನೋ ಹುಮ್ಮಸ್ಸು ಕುಸುಮಾ ಅವರಲ್ಲಿ ಕಾಣುತ್ತಿದೆ.

    ಇತ್ತ ಕುಂದಗೋಳದಲ್ಲಿ ಕಾಂಗ್ರೆಸ್‍ನಿಂದ ಟಿಕೆಟ್ ಬಂಡಾಯ ಶಮನಕ್ಕೆ ಭಾರೀ ಕಸರತ್ತು ನಡೆದಿದೆ. ನಾಮಪತ್ರ ಸಲ್ಲಿಕೆಗೆ ಇಂದು ಕಡೆಯ ದಿನವಾಗಿರೋದ್ರಿಂದ ಬುಧವಾರ ಇಡೀ ದಿನ ಬಂಡಾಯ ಶಮನ ಯತ್ನ ನಡೆಯಿತು. ಹುಬ್ಬಳ್ಳಿಯಲ್ಲಿ ಕೈ ಬಂಡಾಯ ಅಭ್ಯರ್ಥಿಗಳಾದ ಶಿವಾನಂದ್ ಬೆಂತೂರು, ಹಜರತ್ ಅಲಿ ಜೋಡಮನಿ ಸೇರಿ ಹಲವರ ಬಂಡಾಯ ಶಮನಕ್ಕೆ ಸಚಿವ ಜಮೀರ್ ಅಹ್ಮದ್ ಭಾರೀ ಸರ್ಕಸ್ ಮಾಡಿದರು.

    ಸಭೆಯ ಬಳಿಕ ಮಾತನಾಡಿದ ಬಂಡಾಯ ಅಭ್ಯರ್ಥಿ ಶಿವನಾಂದ್ ಬೆಂತೂರು ಕಣದಲ್ಲಿರಬೇಕೆಂಬುದು ನನ್ನ ಅಚಲ ನಿರ್ಧಾರ. ಆದ್ರೆ ಹಿತೈಷಿಗಳ ಜೊತೆ ಸಭೆ ನಡೆಸಿ, ಅವರು ಬೇಡ ಅಂದ್ರೆ ನಾಮಪತ್ರ ವಾಪಸ್ ಪಡೆಯುತ್ತೇನೆ ಎಂದರು. ಬಳಿಕ ಮಾತನಾಡಿದ ಮಾಜಿ ಸಚಿವ ವಿನಯ್ ಕುಲಕರ್ಣಿ ನಮ್ಮಲ್ಲಿ ಯಾವುದೇ ಬಂಡಾಯವಿಲ್ಲ, ಟಿಕೆಟ್ ಸಿಗದೇ ಇದ್ದಾಗ ಅಸಮಾಧಾನ ಸಹಜ. ಗುರುವಾರ ಬಂಡಾಯ ಅಭ್ಯರ್ಥಿ ನಾಮಪತ್ರ ವಾಪಸ್ ಪಡೆಯಲಿದ್ದಾರೆ ಎಂದು ತಿಳಿಸಿದರು.

  • ನಿಗಿ ನಿಗಿ ಕೆಂಡದ ಮೇಲೆ ಮಕ್ಕಳನ್ನು ಮಲಗಿಸ್ತಾರೆ 2-3 ನಿಮಿಷ ಬಿಟ್ಟು ಹೊರ ತೆಗೆಯುತ್ತಾರೆ!

    ನಿಗಿ ನಿಗಿ ಕೆಂಡದ ಮೇಲೆ ಮಕ್ಕಳನ್ನು ಮಲಗಿಸ್ತಾರೆ 2-3 ನಿಮಿಷ ಬಿಟ್ಟು ಹೊರ ತೆಗೆಯುತ್ತಾರೆ!

    ಧಾರವಾಡ: ಉಪವಾಸ, ಕಾಣಿಕೆ ಇತ್ಯಾದಿಗಳ ರೂಪದಲ್ಲಿ ಜನ ಹರಕೆಯನ್ನು ಮಾಡಿಕೊಂಡು ನೆರೆವೇರಿಸುತ್ತಾರೆ. ಆದರೆ ಚಿಕ್ಕ ಮಕ್ಕಳನ್ನು ಬೆಂಕಿಯ ಮೇಲೆ ಮಲಗಿಸಿ ಹರಕೆ ತೀರಿಸುವ ವಿಶೇಷ ಹರಕೆಯೊಂದು ಜಿಲ್ಲೆಯ ಕುಂದಗೋಳ ತಾಲೂಕಿನಲ್ಲಿ ನಡೆದುಕೊಂಡು ಬರುತ್ತಿದೆ.

    ಅಲ್ಲಾಪೂರ ಗ್ರಾಮದಲ್ಲಿ ಮೊಹರಂ ಹಬ್ಬದ ಸಂದರ್ಭದಲ್ಲಿ ವಿಶೇಷ ಆಚರಣೆಯಲ್ಲಿ ಎಳೆಯ ಮಕ್ಕಳನ್ನು ಬೆಂಕಿಯ ಮೇಲೆ ಬಾಳೆ ಎಲೆಯನ್ನು ಇಟ್ಟು ಮಲಗಿಸುತ್ತಾರೆ. ನಂತರ ಎರಡು ಮೂರು ನಿಮಿಷ ಆದ ಮೇಲೆ ಮಕ್ಕಳನ್ನು ಹೊರ ತೆಗೆಯುತ್ತಾರೆ. ಚಿಕ್ಕ ಮಕ್ಕಳಿಗೆ ಯಾವುದೇ ದುಷ್ಟ ಶಕ್ತಿ ಕಾಡದೇ ಇರಲು ಈ ವಿಶಿಷ್ಟ ಹರಕೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

    ಪ್ರತಿ ವರ್ಷವೂ ಇಲ್ಲಿ ನಡೆಯುವ ಈ ಆಚರಣೆಗೆ ದೂರದ ಬೇರೆ ಬೇರೆ ಗ್ರಾಮಗಳಿಂದ ಜನರು ಹರಕೆ ಹೊತ್ತು ಬರುತ್ತಾರೆ. ಹಬ್ಬಕ್ಕೆ ಬಂದು ನಿಗಿ ನಿಗಿ ಕೆಂಡದ ಮೇಲೆ ಮಕ್ಕಳನ್ನು ಮಲಗಿಸಿ ತಮ್ಮ ಹರಕೆಯನ್ನು ತೀರಿಸುತ್ತಾರೆ.

    ಕಳೆದ ಹಲವಾರು ವರ್ಷಗಳಿಂದ ಈ ಆಚರಣೆ ನಡೆದುಕೊಂಡು ಬಂದಿದ್ದು, ದೇವರ ಪವಾಡದಿಂದ ಇದುವರೆಗೂ ಯಾವುದೇ ಮಕ್ಕಳಿಗೂ ಅನಾಹುತ ಸಂಭವಿಸಿಲ್ಲ ಎಂದು ಭಕ್ತರು ಹೇಳಿದ್ದಾರೆ.

  • ಮುಂಗಾರು ಆರಂಭವಾದ್ರೂ ಬಾರದ ಮಳೆ- ಕೃಷಿಗೆ ಹರಿಸದೆ ಕುಡಿಯಲು ನೀರು ಕೊಟ್ಟ ಧಾರವಾಡದ ಬಿಸೇರೊಟ್ಟಿ ಸಹೋದರರು

    ಮುಂಗಾರು ಆರಂಭವಾದ್ರೂ ಬಾರದ ಮಳೆ- ಕೃಷಿಗೆ ಹರಿಸದೆ ಕುಡಿಯಲು ನೀರು ಕೊಟ್ಟ ಧಾರವಾಡದ ಬಿಸೇರೊಟ್ಟಿ ಸಹೋದರರು

    ಧಾರವಾಡ: ಮುಂಗಾರು ಮಳೆ ಈಗಾಗಲೇ ಆರಂಭವಾಗಿದೆ. ರಾಜ್ಯದ ಅಲ್ಲಲ್ಲಿ ವರ್ಷಧಾರೆಯಾಗ್ತಿದೆ. ಆದ್ರೆ ಧಾರವಾಡದ ಕುಂದಗೋಳ ತಾಲೂಕಿನಲ್ಲಿ ಕಳೆದ 6 ವರ್ಷಗಳಿಂದ ಬರ ಆವರಿಸಿದೆ. ಹಿರೇಗುಂಜಾಳ ಗ್ರಾಮದ ಇವತ್ತಿನ ಪಬ್ಲಿಕ್ ಹೀರೋ ಬಿಸೇರೊಟ್ಟಿ ಸಹೋದರರು ಇಂತಹ ಸ್ಥಿತಿಯಲ್ಲೂ ಗ್ರಾಮಕ್ಕೆ ಉಚಿತವಾಗಿ ಕುಡಿಯುವ ನೀರು ಕೊಡ್ತಿದ್ದಾರೆ.

    ಕಳೆದ ಆರು ವರ್ಷಗಳಿಂದ ಕುಂದುಗೋಳ ತಾಲೂಕಿನ ಹಿರೇಗುಂಜಾಳ ಗ್ರಾಮದಲ್ಲಿ ಬರ ಆವರಿಸಿದೆ. ಇದ್ರಿಂದ ನೀರಿನ ಮೂಲಗಳೆಲ್ಲಾ ಬರಿದಾಗಿವೆ. ಅಲ್ಲಲ್ಲಿ ಕೊಳವೆ ಬಾವಿಗಳಲ್ಲಿ ಸಿಗೋ ನೀರನ್ನ ಕೃಷಿಗೆ ಬಳಸ್ತಿದ್ದಾರೆ. ಆದ್ರೆ ಹಿರೇಗುಂಜಾಳ ಗ್ರಾಮದ ಪರಶುರಾಮ್ ಬಿಸೇರೊಟ್ಟಿ ತಮಗೆ ಸಿಕ್ಕಿರುವ ಕೊಳವೆ ಬಾವಿಯ ನೀರನ್ನ ಮೂರು ಗ್ರಾಮದ ಜನರಿಗೆ ಕೊಡ್ತಿದ್ದಾರೆ.

    ಪರಶುರಾಮ್ ಅವ್ರನ್ನ ನೋಡಿದ ಅಣ್ಣ ಯಲ್ಲಪ್ಪಾ ಸಹ ಬೋರವೆಲ್ ನೀರನ್ನು ಸಾರ್ವಜನಿಕರಿಗೆ ಕೊಟ್ಟಿದ್ದಾರೆ. ಇಬ್ಬರೂ ದಿನದ 24 ಗಂಟೆ ಕಾಲ ಜನರಿಗೆ ಕುಡಿಯುವ ನೀರು ಪೂರೈಸ್ತಿದ್ದಾರೆ. ಇಬ್ಬರಿಗೂ ತಲಾ 7 ಎಕರೆ ಜಮೀನು ಇದ್ದರೂ ಕೃಷಿ ಮಾಡದೆ ಕುಡಿಯುವ ನೀರು ಕೊಡ್ತಿದ್ದಾರೆ. ಇವರ ಬೋರ್‍ವೆಲ್ ಪಕ್ಕದಲ್ಲಿ ಸರ್ಕಾರ ಟ್ಯಾಂಕ್ ಕಟ್ಟಿಸಿದ್ದು, ಆ ಟ್ಯಾಂಕ್‍ಗೆ ಇವರು ನೀರು ತುಂಬುತ್ತಿದ್ದಾರೆ.

    ಬರಕ್ಕೆ ಬೆಚ್ಚಿದ ಗ್ರಾಮದ ಬಹುತೇಕ ಜನ ಗುಳೆ ಹೊರಟಿದ್ದಾರೆ. ಆದ್ರೆ ಇಂಥ ಬರದಲ್ಲೂ ನೀರು ಕೊಡ್ತಿರೋ ಬಿಸೇರೊಟ್ಟಿ ಸಹೋದರರನ್ನ ಗ್ರಾಮಸ್ಥರು ಭಗೀರಥರು ಅಂತ ಕರೀತಿದ್ದಾರೆ.