Tag: Kunal Shreshta

  • ತಾಯಿಯ ಸಂಕಲ್ಪ- ಒಂದು ಕಾಲಿಲ್ಲದಿದ್ದರೂ ಫುಟ್‍ಬಾಲ್ ಆಡುತ್ತಾನೆ ಪೋರ

    ತಾಯಿಯ ಸಂಕಲ್ಪ- ಒಂದು ಕಾಲಿಲ್ಲದಿದ್ದರೂ ಫುಟ್‍ಬಾಲ್ ಆಡುತ್ತಾನೆ ಪೋರ

    ಇಂಫಾಲ್: ಸಮರ್ಪಣಾ ಭಾವ, ದೃಢ ನಿರ್ಧಾರ ಹಾಗೂ ಕಠಿಣ ಪರಿಶ್ರಮವಿದ್ದರೆ ಏನು ಬೇಕಾದರೂ ಸಾಧಿಸಬಹುದು. ದೈಹಿಕ ಅಂಗವೈಕಲ್ಯ ಸಹ ಅಡ್ಡಿ ಬರುವುದಿಲ್ಲ ಎಂಬುದಕ್ಕೆ ಈ ಬಾಲಕ ಉದಾಹರಣೆಯಾಗಿದ್ದು, ಒಂದು ಕಾಲು ಇಲ್ಲದಿದ್ದರೂ, ಇತರ ಬಾಲಕರಷ್ಟೇ ಚೆನ್ನಾಗಿ ಫುಟ್‍ಬಾಲ್ ಆಡುತ್ತಾನೆ.

    ಮಣಿಪುರದ ಕುನಾಲ್ ಶ್ರೇಷ್ಠ ತನ್ನ ಒಂದು ಕಾಲನ್ನು ಕಳೆದುಕೊಂಡಿದ್ದಾನೆ. ಆದರೆ ದೈಹಿಕ ಅಂಗವೈಕಲ್ಯತೆ ಅವನ ನೆಚ್ಚಿನ ಆಟವಾಡಲು ಅಡ್ಡಿಯಾಗಿಲ್ಲ. ಹೀಗಾಗಿ ಇತರ ಮಕ್ಕಳಂತೆ ಅಷ್ಟೇ ಚೆನ್ನಾಗಿ ಫುಟ್‍ಬಾಲ್ ಆಡುತ್ತಾನೆ. ಊರುಗೋಲು ಹಿಡಿದುಕೊಂಡೇ ಸೊಗಸಾಗಿ ಫುಟ್‍ಬಾಲ್ ಆಡಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ದೈಹಿಕ ಚಟುವಟಿಕೆಗಳು ಮಾತ್ರವಲ್ಲ ಕುನಾಲ್ ನಿತ್ಯ ಒಂದು ದಿನವೂ ತಪ್ಪಿಸದೇ ಶಾಲೆಗೂ ಹೋಗುತ್ತಾನೆ. ಕೊರೊನಾ ವೈರಸ್ ಲಾಕ್‍ಡೌನ್ ಹಿನ್ನೆಲೆ ಶಾಲೆ ಇಲ್ಲದಿರುವುದರಿಂದ ತನ್ನ ತಾಯಿಗೆ ಪಾಪ್ಸಿಕಲ್ಸ್ ಹಾಗೂ ಪಾನಿಪೂರಿ ತಯಾರಿಸಲು ಸಹಾಯ ಮಾಡುತ್ತಾನೆ. ಅವರ ತಾಯಿ ಇವುಗಳನ್ನು ಮಾರಾಟ ಮಾಡುತ್ತಾರೆ. ಇಷ್ಟು ಮಾತ್ರವಲ್ಲ ಈ ಪೋರ ಸೈಕಲ್ ಸಹ ಓಡಿಸುತ್ತಾನೆ.

    ಈ ಕುರಿತು ತನ್ನ ಅನಿಸಿಕೆ ಹಂಚಿಕೊಂಡಿದ್ದು, ಫುಟ್‍ಬಾಲ್ ಆಡುವುದೆಂದರೆ ನನಗೆ ತುಂಬಾ ಇಷ್ಟ. ಆರಂಭದಲ್ಲಿ ಬ್ಯಾಲೆನ್ಸ್ ಮಾಡುವುದು ಕಷ್ಟವಾಗುತ್ತಿತ್ತು, ಆಗ ತುಂಬಾ ಹೆದರುತ್ತಿದ್ದೆ. ನಂತರ ಆತ್ಮವಿಶ್ವಾಸ ತಂದುಕೊಂಡೆ. ನನ್ನ ಸ್ನೇಹಿತರು ನನಗೆ ತುಂಬಾ ಬೆಂಬಲ ನೀಡಿದರು. ಶೀಘ್ರವೇ ಗೋಲ್ ಹೊಡೆಯುವ ನಂಬಿಕೆ ನನಗಿದೆ ಎಂದು ಕುನಾಲ್ ತಿಳಿಸಿದ್ದಾನೆ.

    ನಿನ್ನ ಸ್ನೇಹಿತರಿಗಿಂತ ಭಿನ್ನವಾಗಿರುವುದಕ್ಕೆ ನಾನು ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ತಾಯಿ ಪ್ರತಿಜ್ಞೆ ಮಾಡಿದ ಬಳಿಕ ಕುನಾಲ್ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದ್ದಾನೆ. ನನ್ನ ಮಗ ತನ್ನ ಗೌರವವನ್ನು ಎಂದಿಗೂ ಕಡಿಮೆ ಮಾಡಿಕೊಳ್ಳಬಾರದು, ಇದನ್ನು ನಾನು ಸಹಿಸುವುದಿಲ್ಲ ಎಂದು ತಾಯಿ ಹೇಳಿದ್ದಾರೆ.

    ನನ್ನ ಮಗ ಜನನವಾದಾಗಲೇ ಒಂದು ಕಾಲು ಇರಲಿಲ್ಲ. ಆದರೆ ಅವನ ಗೆಳೆಯರಿಗಿಂತ ಭಿನ್ನವಾಗಿರಲು ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ನಾನು ಪ್ರತಿಜ್ಞೆ ಮಾಡಿದ್ದೇನೆ. ಅವನು ಈ ವರೆಗೆ ಯಾವುದರಲ್ಲೂ ಕಡಿಮೆ ಇಲ್ಲ. ತನ್ನ ಗೌರವಕ್ಕೆ ಧಕ್ಕೆ ತಂದುಕೊಂಡಿಲ್ಲ. ಸ್ವತಃ ಅವನೇ ಸೈಕಲ್ ಓಡಿಸುವುದನ್ನು ಕಲಿತಿದಿದ್ದಾನೆ ಎಂದು ತಾಯಿ ವಿವರಿಸಿದ್ದಾರೆ.

    ನನ್ನ ಮಗನ ಜನನವು ಭಾವನಾತ್ಮಕ ರೋಲರ್ ಕೋಸ್ಟರ್ ರೈಡ್. ನಾನು ತಾಯಿಯಾಗಿದ್ದಕ್ಕೆ ಉತ್ಸುಕಳಾಗಿದ್ದೆ. ಆದರೆ ಮಗುವಿಗೆ ಕಾಲಿಲ್ಲ ಎಂದಾಗ ಒಂದು ಕ್ಷಣ ಗಾಬರಿಯಾದೆ. ವಿಶೇಷ ಜನರು ವಿಶೇಷ ಮಕ್ಕಳೊಂದಿಗೆ ಆಶೀರ್ವದಿಸಲ್ಪಡುತ್ತಾರೆ. ಆದರೆ ನಾನು ಅವನ ಗೆಳೆಯರಿಗಿಂತ ಭಿನ್ನವಾಗಿರಲು ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದೇನೆ ಎಂದು ತಾಯಿ ಭಾವುಕರಾಗಿದ್ದಾರೆ.

    ನೋಬಾಪ್ಸ್ ಗಳನ್ನು ಒದೆಯುವ ಮೂಲಕ 9 ವರ್ಷದ ಕುನಾಲ್ ಫುಟ್‍ಬಾಲ್ ಆಟದ ಮೇಲಿನ ಪ್ರೀತಿಯನ್ನು ಹೆಚ್ಚಿಸಿಕೊಂಡಿದ್ದಾನೆ. ನೋಬಾಪ್ಸ್ ನ್ನು ಚೀನಾದ ಗ್ರೇಪ್‍ಫ್ರೂಟ್ ಎಂದೂ ಕರೆಯುತ್ತಾರೆ. ಅಲ್ಲದೆ ಕುನಾಲ್ ತನ್ನ ಹತ್ತಿರದ ಕಾಂಗ್ಲಾಟೊಂಗ್ಬಿಯ ಫುಟ್ ಬಾಲ್ ಆಟಗಾರ, ಬೆಂಗಳೂರು ಫುಟ್‍ಬಾಲ್ ಕ್ಲಬ್‍ನ ಅಜಯ್ ಛೆತ್ರಿ ಅವರ ಫ್ಯಾನ್ ಆಗಿದ್ದಾನೆ.