ಸ್ಯಾಂಡಲ್‌ವುಡ್ (Sandalwood) ನಟ ನಿಖಿಲ್ ಕುಮಾರಸ್ವಾಮಿ (Nikhil Kumarswamy) ಅವರು ಸದ್ಯ ಜಾಲಿ ಮೂಡ್‌ಗೆ ಜಾರಿದ್ದಾರೆ. ಕೆಲದಿನಗಳಿಂದ ಫಾರಿನ್‌ನಲ್ಲಿ ನಿಖಿಲ್ ಫ್ಯಾಮಿಲಿ ಬೀಡು ಬಿಟ್ಟಿದ್ದಾರೆ. ಸದ್ಯ ಪತ್ನಿ ರೇವತಿ (Revathi) ಕೈ ಹಿಡಿದು ನಿಖಿಲ್ ಕುಮಾರಸ್ವಾಮಿ ಹೆಜ್ಜೆ ಹಾಕ್ತಿರೋದು ವೀಡಿಯೋವೊಂದನ್ನ ಜಾಗ್ವರ್ ಹೀರೋ ನಿಖಿಲ್ ಶೇರ್ ಮಾಡಿದ್ದಾರೆ.
ಮಾಜಿ ಸಿಎಂ ಕುಮಾರಸ್ವಾಮಿ ಕುಟುಂಬದ ಫ್ಯೂಚರ್ ನಿಖಿಲ್ ಕುಮಾರಸ್ವಾಮಿ ಅವರು ಸಿನಿಮಾ- ರಾಜಕೀಯ ಎರಡು ಕ್ಷೇತ್ರದಲ್ಲೂ ತಮ್ಮದೇ ಶೈಲಿಯಲ್ಲಿ ಗುರುತಿಸಿಕೊಂಡಿದ್ದಾರೆ. ಸದ್ಯ ಯುರೋಪ್‌ನಲ್ಲಿ ಹೊಸ ಹೊಸ ಜಾಗಗಳಿಗೆ ಭೇಟಿ ನೀಡುತ್ತಾ, ಚೆಂದದ ಫೋಟೋಗಳನ್ನ ಶೇರ್ ಮಾಡುತ್ತಾ ತಮ್ಮ ಬೆಂಬಲಿಗರಿಗೆ ಅಪ್‌ಡೇಟ್ ಕೊಡ್ತಿದ್ದಾರೆ. ಇದೀಗ ಹೊಸ ವೀಡಿಯೋ ಅಭಿಮಾನಿಗಳ ಗಮನ ಸೆಳೆಯುತ್ತಿದೆ.
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಅವರ ಇಡೀ ಫ್ಯಾಮಿಲಿ ವಿದೇಶಿ ಪ್ರವಾಸ ಕೈಗೊಂಡಿದೆ. ಕುಮಾರಸ್ವಾಮಿ ವಿದೇಶಿ ಪ್ರವಾಸ ಬೆನ್ನಲ್ಲೇ ರಾಜಕಾರಣದಲ್ಲಿ ಭಾರೀ ಸುದ್ದಿಯಾಗಿತ್ತು. ಕಾಂಗ್ರೆಸ್ ಸರ್ಕಾರವನ್ನು ಬೀಳಿಸಲು ಸಿಂಗಾಪುರದಿಂದ ಕೆಲವರು ಪ್ರಯತ್ನ ಮಾಡುತ್ತಿದ್ದಾರೆ ಎಂದು ಡಿಕೆ ಶಿವಕುಮಾರ್ ಆರೋಪಿಸಿದ್ದರು. ಈ ಹೇಳಿಕೆ ಭಾರೀ ಚರ್ಚೆಗೆ ಕಾರಣವಾದ ಬೆನ್ನಲ್ಲೇ, ಕುಮಾರಸ್ವಾಮಿ ಕುಟುಂಬದ ವಿದೇಶಿ ಪ್ರವಾಸದ ಫೋಟೋಗಳು ಗಮನ ಸೆಳೆಯುತ್ತಿದೆ.
ವಿದೇಶದಿಂದ ಬಂದ ಮೇಲೆ ಮತ್ತೆ ನಿಖಿಲ್ ಮತ್ತೆ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗುತ್ತಾರೆ. ‘ಯುದುವೀರ್’ (Yaduveer) ಸಿನಿಮಾ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳು ಅವರ ಕೈಯಲ್ಲಿದೆ.
ಬೆಂಗಳೂರು: ತಾಜ್ ವೆಸ್ಟೆಂಡ್‍ನಲ್ಲಿ ನಾನು ರಾಸಲೀಲೆ ಮಾಡಲು ಹೋಗುತ್ತಿರಲಿಲ್ಲ ಎಂದು ಸಚಿವ ಸಿ.ಪಿ ಯೋಗೇಶ್ವರ್ ವಿರುದ್ಧ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಕುಮಾರಸ್ವಾಮಿಯವರು 14 ತಿಂಗಳು ತಾಜ್ ವೆಸ್ಟೆಂಡ್ ಹೊಟೆಲ್‍ನಲ್ಲಿದ್ದರು ಎಂಬ ಯೋಗೇಶ್ವರ ಹೇಳಿಕೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಅವರು, ನಾನು ಸರ್ಕಾರಿ ಬಂಗಲೆ ಇರಲಿಲ್ಲ ಎನ್ನುವ ಕಾರಣಕ್ಕೆ ವಿಶ್ರಾಂತಿ ಪಡೆಯಲು ಆ ಹೊಟೆಲ್‍ಗೆ ಹೋಗುತ್ತಿದ್ದೆ. ಈಗಲೂ ನಾನು ತಾಜ್ ವೆಸ್ಟ್ ಹೊಟೆಲ್‍ಗೆ ಹೋಗುತ್ತಿರುತ್ತೇನೆ. ನನ್ನದು ತೆರೆದ ಪುಸ್ತಕ ಎಂದು ತಿರುಗೇಟು ನೀಡಿದರು.
ನನ್ನ ಪಿಎ ಈಗಲೂ ಆ ಹೊಟೆಲ್‍ನಲ್ಲಿಯೇ ಇರುತ್ತಾರೆ. ನಾನು ಒಬ್ಬನೆ ಅಲ್ಲ ನನ್ನ ಜೊತೆ ಸಾ.ರಾ ಮಹೇಶ್ ಅವರು ಕೂಡಾ ಇರುತ್ತಿದ್ದರು. ಇದನ್ನೇಲ್ಲಾ ಇವನ ಹತ್ತಿರ ನೋಡಿ ಕಲಿಯಬೇಕಿತ್ತಾ? ನಾವೆಲ್ಲಾ ಹೋಟೆಲ್‍ನಲ್ಲಿದ್ದರೆ ಇವನೇನು ಗುಡಿಸಲಲ್ಲಿ ಇರುತ್ತಿದ್ದನಾ? ಇವನ ಬಗ್ಗೆ ನನಗೆ ಗೊತ್ತಿಲ್ಲವಾ ಇಲ್ಲೆ ಯು.ಬಿ ಸಿಟಿ ಪಕ್ಕದಲ್ಲಿ ಇವನು ಇದ್ದನು. ನನ್ನದು ಕದ್ದು ಮುಚ್ಚಿ ಯಾವುದೂ ಇಲ್ಲ ಎಂದರು.
ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಚನ್ನಪಟ್ಟಣಕ್ಕೆ ಆಕಸ್ಮಿಕ ಅತಿಥಿಯಾಗಿ ಬರುತ್ತಿದ್ದರು ಎನ್ನುವ ಯೋಗೇಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಚನ್ನಪಟ್ಟಣದಲ್ಲಿ ನನ್ನದು ಮುಗಿದ ಅಧ್ಯಾಯ. ಅವನು ಖಾಸಗಿ ಬಸ್ ನಿಲ್ದಾಣಕ್ಕೆ 30ಕೋಟಿ ಪ್ರಾಜೆಕ್ಟ್ ಮಾಡಿ ಎಸ್ಟಿಮೇಟ್ ಮಾಡಿದ್ದನು. ಅವನ್ಯಾರೋ ಕಂಟ್ರಾಕ್ಟರ್ ಕೈಯಲ್ಲಿ ಗುಂಡಿ ಹೊಡೆಸಿದ್ದನು. ಅದಕ್ಕೆ ನಾನು ಹಣ ಕೊಡಿಸಬೇಕಾ. ಅಲ್ಲಿ ಹೋಗಿ ನೋಡಿ ಇನ್ನೂ ಅದಕ್ಕೆ ತಗಡು ಹೊಡೆಸಿ ಇಟ್ಟಿದ್ದಾನೆ ಎಂದು ಗುಡುಗಿದರು. ಇದನ್ನೂ ಓದಿ: ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾಗೆ ಕೊರೊನಾ
ಅಂಬೇಡ್ಕರ್ ಭವನದಲ್ಲಿ ಗುಂಡಿ ಆಗಿ, ನೀರು ನಿಂತಿದೆ. ಅದನ್ನು ನಾನು ಹೋಗಿ ಕ್ಲೀನ್ ಮಾಡಿಸಬೇಕಾ? ನಾನು ಕಣ್ಣೀರು ಹಾಕಿಕೊಂಡು ಹೋಗಿಲ್ಲ. ನಾನು ಸಿಎಂ ಆಗಿದ್ದು ಚನ್ನಪಟ್ಟಣಕ್ಕೆ ಮಾತ್ರ ಅಲ್ಲ, ಇಡೀ ರಾಜ್ಯಕ್ಕೆ. ಕರ್ನಾಟಕ ರಾಜ್ಯದ ಸಮಸ್ಯೆ ಬಗೆಹರಿಸಲು. ಚನ್ನಪಟ್ಟಣಕ್ಕೆ ಶಾಸಕನಾಗಿ ಏನು ಕೆಲಸ ಮಾಡಿಸಬೇಕೋ ಎಲ್ಲಾ ಮಾಡಿದ್ದೇನೆ. ಇವನು ಸರ್ಟಿಫಿಕೇಟ್ ಕೊಡೋದಲ್ಲ. ನನ್ನನು ಆರಿಸಿ ತಂದ ಜನರು ಇದರ ಬಗ್ಗೆ ಮಾತಾಡಲಿ. ಮೆಗಾಸಿಟಿ ಅಂತ ಪ್ರಾಜೆಕ್ಟ್ ಮಾಡಲು ಹೋಗಿ ಸಾವಿರಾರು ಜನರನ್ನ ಬೀದಿ ಪಾಲು ಮಾಡಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಅವನೊಬ್ಬ ನಯವಂಚಕ, ಪ್ರಬುದ್ಧ ರಾಜಕಾರಣಿ ಅಲ್ಲ: ಎಚ್‍ಡಿಕೆ ವಿರುದ್ಧ ಏಕವಚನದಲ್ಲೇ ಸಿಪಿವೈ ಕಿಡಿ
ಈ ಹಿಂದೆ ಸಿನಿಮಾ ತೆಗೆದು ಎಲ್ಲರನ್ನೂ ಹಾಳು ಮಾಡಿದ. ಕಂಡೋರ ದುಡ್ಡು ತೆಗೆದುಕೊಂಡು ಹಾಳು ಮಾಡಿದ. ಇವನು ನನ್ನ ವಿರುದ್ಧ ಆರೋಪ ಮಾಡ್ತಾನಾ? ಯಾವುದೇ ಚರ್ಚೆಗೆ ನಾನು ಸಿದ್ಧ. ಬರಲಿ ಚನ್ನಪಟ್ಟಣದಲ್ಲಿಯೇ ಚರ್ಚೆ ಮಾಡೋಣ. ನಾನು ದಲಿತರ ಜಮೀನು ಹೊಡೆದಿದ್ದೇನಂತೆ. ಇವನೇನು ಸಾಚಾ ಅಲ್ಲ ಮೆಗಾಸಿಟಿ ಮಾಡಿ ಲೂಟಿ ಹೊಡೆದು ಜನರು ಬೀದಿ ಪಾಲಾಗಿದ್ದಾರೆ. ಸೈನಿಕ ಅಂತ ಸಿನಿಮಾ ಮಾಡಲು ಹೋಗಿದ್ದ. ಇಂದಿಗೂ ಆ ಚಿತ್ರಕ್ಕೆ ಹಣ ಹಾಕಿದವರು ಬೀದಿಪಾಲಾಗಿದ್ದಾರೆ. ಚನ್ನಪಟ್ಟಣದ ನಮ್ಮ ಸಂಬಂಧ ಇವನು ಚಡ್ಡಿ ಹಾಕಿದ್ದನೋ ಇಲ್ಲವೋ, ಆಗಲೇ ದೇವೇಗೌಡರ ಕುಟುಂಬಕ್ಕೆ ಚನ್ನಪಟ್ಟಣದ ಸಂಬಂಧ ಇತ್ತು. ಮುಖಾಮುಖಿ ಚರ್ಚೆಗೆ ನಾನು ಸಿದ್ದ. ಬರಲಿ ಯಾವ ವಿಚಾರ ಚರ್ಚೆ ಮಾಡ್ತಾನೆ ನೋಡುತ್ತೇನೆ ಎಂದು ಸಿಡಿದರು.
ಬೆಂಗಳೂರು : 2023ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ನೀಟ್ ನಿಂದ ಕರ್ನಾಟಕ ಹೊರಬರಲು ವಿಧಾನಮಂಡಲದಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಹೇಳಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಕೇಂದ್ರ ಸರ್ಕಾರ ನೀಟ್ ಅನ್ನು ಸಂಪೂರ್ಣವಾಗಿ ರದ್ದು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ನೀಟ್ ಬಂದ ಮೇಲೆ ಬಡ, ಮಧ್ಯಮ ವರ್ಗದ ಮಕ್ಕಳಿಗೆ ಅನ್ಯಾಯ ಆಗಿದೆ. ಆದರೂ ಸರಕಾರ ವಿದ್ಯಾರ್ಥಿಗಳ ಆರ್ತನಾದ ಕೇಳುತ್ತಿಲ್ಲ ಎಂದರೆ ಸಚಿವರು ಮತ್ತು ಸರ್ಕಾರಕ್ಕೆ ಕಣ್ಣು, ಕಿವಿ ಇಲ್ಲ ಎಂದು ಭಾವಿಸಬೇಕಾಗುತ್ತದೆ ಎಂದು ಕಿಡಿಕಾರಿದರು.
ನೀಟ್ ವಿರುದ್ಧ ಮಾತನಾಡಿದವರು ಧನದಾಹಿಗಳು ಹಾಗೂ ದೇಶ ದ್ರೋಹಿಗಳು ಎಂದಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ ಹಾಗೂ ವೈದ್ಯ ಶಿಕ್ಷಣ ಪಡೆಯಲು ವಿದೇಶಕ್ಕೆ ಹೋದ ವಿದ್ಯಾರ್ಥಿಗಳೆಲ್ಲರೂ ನೀಟ್ ಅರ್ಹತಾ ಪರೀಕ್ಷೆಯಲ್ಲಿ ಫೇಲಾದವರು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿರುವುದು ಅಕ್ಷಮ್ಯ ಎಂದು ವಿರೋಧ ವ್ಯಕ್ತಪಡಿಸಿದರು. ಇದನ್ನೂ ಓದಿ: ಒಲಿಂಪಿಕ್ಸ್ ಮುಗಿಯುವವರೆಗೆ ಯುದ್ಧವನ್ನು ಮುಂದೆ ಹಾಕಿ ಎಂದಿದ್ದ ಚೀನಾ!
ನಾನು ಅಶ್ವಥ್ ನಾರಾಯಣ ಅವರಿಗೆ ಕೇಳಲು ಬಯಸುತ್ತೇನೆ. ಮಕ್ಕಳು ಇರಲಿ, ಈಗ ಪಿಯುಸಿ ಪಾಠ ಮಾಡುತ್ತಿರುವ ಉಪನ್ಯಾಸಕರಿಂದ ಈಗಿನ ನೀಟ್ ಪರೀಕ್ಷೆ ಬರೆಸಿ. ಅವರಲ್ಲಿ ಎಷ್ಟು ಜನ ಪಾಸಾಗುತ್ತಾರೋ ನೋಡೋಣ. ಇನ್ನು, ನೀಟ್ ಪ್ರಶ್ನೆ ಪತ್ರಿಕೆಯಲ್ಲಿ ವೈದ್ಯ ಶಿಕ್ಷಣಕ್ಕೆ ಪೂರಕವಾದ ಪ್ರಶ್ನೆಗಳೇ ಇರುವುದಿಲ್ಲ ಎಂದು ಅನೇಕರು ಹೇಳುತ್ತಿದ್ದಾರೆ. ಕೆಲಸಕ್ಕೆ ಬಾರದ ಬೇರೆ ಬೇರೆ ವಿಷಯದ ಪ್ರಶ್ನೆಗಳಿರುತ್ತವೆ. ಎಂಸಿಕ್ಯೂ ಪ್ರಶ್ನೆಗಳಲ್ಲಿ ನೆಗೆಟೀವ್ ಅಂಕ ಬೇರೆ ಇರುತ್ತದೆ. ಇಂಥ ಕೆಟ್ಟ ವ್ಯವಸ್ಥೆಯಲ್ಲಿ ನಮ್ಮ ಮಕ್ಕಳು ಸಿಲುಕಿದ್ದಾರೆ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ಲೋಕಸಭೆ ಸ್ಪೀಕರ್ ಅವರ ಕ್ಷೇತ್ರದಲ್ಲಿ ನೀಟ್ ಟ್ಯೂಷನ್ ಅಂಗಡಿಗಳು ನಾಯಿಕೊಡೆಗಳಂತೆ ಮೇಲೆದ್ದಿವೆ. ಅವುಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಸಿದ್ದಾರೆ. ಉತ್ತರ ಭಾರತದ ಟ್ಯೂಷನ್ ಮಾಫಿಯಾ ನೀಟ್ ಹಿಂದೆ ಇದೆ ಎನ್ನುವ ಅನುಮಾನವಿದೆ ಎಂದು ಮಾಜಿ ಮುಖ್ಯಮಂತ್ರಿಗಳು ತಿಳಿಸಿದರು. ಇದನ್ನೂ ಓದಿ: ರಷ್ಯಾ ಆಯ್ತು ಭಾರತದ ಮೇಲೆ ನಿರ್ಬಂಧ ಹೇರುತ್ತಾ ಅಮೆರಿಕ?
ನೀಟ್ ಕೋಚಿಂಗ್ ಗೆ 2 ಲಕ್ಷ ಏಳೆಂಟು ವಿದ್ಯಾರ್ಥಿಗಳು ನನ್ನ ಬಳಿಗೆ ಬಂದು, ನೀಟ್ ಕೋಚಿಂಗ್ ಗೆ ಸೇರಬೇಕು. ನಾವು ಬಡವರು, 2 ಲಕ್ಷ ರೂಪಾಯಿ ಫೀಸ್ ಕಟ್ಟಬೇಕು. ಸಹಾಯ ಮಾಡಿ ಎಂದು ಕೇಳಿದ್ದಾರೆ. ಅವರಿಗೆ ಸಚಿವ ಅಶ್ವಥ್ ನಾರಾಯಣ ಅವರನ್ನು ಭೇಟಿ ಮಾಡಲು ಆಗಿಲ್ಲ. ಬರೀ ಕೋಚಿಂಗ್ ತೆಗೆದುಕೊಳ್ಳಲಿಕ್ಕೇ 2 ಲಕ್ಷ ಬೇಕಾದರೆ, ಇನ್ನೂ ಇಡೀ ಮೆಡಿಕಲ್ ಕೋರ್ಸ್ ಮುಗಿಸಲಿಕ್ಕೆ ಎಷ್ಟು ಲಕ್ಷ ರೂಪಾಯಿ ಬೇಕು? ಬಡ ಮಕ್ಕಳು ಇಷ್ಟು ಖರ್ಚು ಮಾಡಲು ಸಾಧ್ಯವೇ? ಸತ್ಯ ಹೀಗಿರುವಾಗ ವಿದೇಶಕ್ಕೆ ಹೋದ ಮಕ್ಕಳ ಬಗ್ಗೆ ಲಘುವಾಗಿ ಮಾತನಾಡುವುದು, ನೀಟ್ ವ್ಯವಸ್ಥೆ ಪ್ರಶ್ನಿಸಿದವರನ್ನು ದ್ರೋಹಿಗಳು ಎನ್ನುವುದು ಸರಿಯಲ್ಲ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಎಷ್ಟು ವೈದ್ಯ ಕಾಲೇಜುಗಳಿವೆ, ಅವುಗಳನ್ನು ನಡೆಸುವವರ ಹಿನ್ನೆಲೆ ಏನು? ಸರ್ಕಾರಿ ಕಾಲೇಜುಗಳು ಎಷ್ಟಿವೆ? ಅವುಗಳಲ್ಲಿ ರಾಜ್ಯದ ಎಷ್ಟು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ? ಎನ್ನುವುದನ್ನು ಸರಕಾರ ಹೇಳಬೇಕು. ನಮ್ಮ ಜನರ ತೆರಿಗೆ ಹಣದಲ್ಲಿ ಕಟ್ಟಿದ ಕಾಲೇಜುಗಳಲ್ಲಿ ನೀಟ್ ಪಾಸಾದವರಿಗೆ ಸೀಟು ಕೊಡುತ್ತಾರೆ. ಪಿಯುಸಿಯಲ್ಲಿ 97% ಅಂಕ ಪಡೆದ ನವೀನ್ ಅಂಥವರಿಗೆ ಸೀಟು ಸಿಗಲ್ಲ. ಈ ಕಾರಣಕ್ಕಾಗಿಯೇ ತಮಿಳುನಾಡಿನ ಸ್ಟಾಲಿನ್ ಅವರ ಸರ್ಕಾರ ನೀಟ್ ವಿರುದ್ಧ ಕೈಗೊಂಡ ಕ್ರಮವನ್ನು ಅಭಿನಂದಿಸುವೆ. ಅಲ್ಲಿನ ವಿಧಾನಸಭೆಯಲ್ಲಿ ನೀಟ್ ವಿರುದ್ಧ ಅವಿರೋಧ ನಿರ್ಣಯ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ನಮ್ಮ ರಾಜ್ಯದ ಮಕ್ಕಳು ವೈದ್ಯ ಶಿಕ್ಷಣ ಪಡೆಯಲು ಯುಕ್ರೇನ್ , ರಷ್ಯಾ ಅಥವಾ ಫಿಲಿಪ್ಪೀನ್ಸ್ ಗೆ ಹೋಗಬೇಕು. ಏಕೆಂದರೆ ರಾಜ್ಯದಲ್ಲಿ ಮೆಡಿಕಲ್ ಮುಗಿಸಲು ಒಂದೂವರೆ ಕೋಟಿ ರೂಪಾಯಿ ಕಟ್ಟಬೇಕು. ನೀಟ್ ಮೂಲಕ ಅರ್ಹತೆ ಪಡೆದವರೂ ಖಾಸಗಿ ಕಾಲೇಜಿನಲ್ಲಿ ಪ್ರವೇಶ ಪಡೆಯಬೇಕಾದರೆ ಇಷ್ಟು ಹಣ ತೆರಬೇಕು. ವರ್ಷಕ್ಕೆ 38 ಲಕ್ಷ ರೂಪಾಯಿ ಕಟ್ಟಲೇಬೇಕು. ಬರೀ ಐದು ವರ್ಷದ ಶುಲ್ಕಕ್ಕೆ 1.50ಯಿಂದ 1.75 ಕೋಟಿ ರೂಪಾಯಿ ಬೇಕು. ಬಡ, ಮಾಧ್ಯಮ ವರ್ಗದ ಮಕ್ಕಳಿಗೆ ಇಷ್ಟು ಹಣ ಹೊಂದಿಸಲು ಸಾಧ್ಯವೇ? ಹಾಗಾದರೆ ಆ ಮಕ್ಕಳು ಮೆಡಿಕಲ್ ವ್ಯಾಸಂಗ ಮಾಡಲೇಬಾರದೇ ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದರು.
ಇಂಥ ಕೆಟ್ಟ ವ್ಯವಸ್ಥೆ ಬಗ್ಗೆ ಮಾತನಾಡುವುದು ದೇಶ ದ್ರೋಹವೇ? ಇದನ್ನು ಉನ್ನತ ಶಿಕ್ಷಣ ಸಚಿವರನ್ನು ಕೇಳಲು ಬಯಸುತ್ತೇನೆ. ಹಾಗೆಯೇ ಪ್ರಹ್ಲಾದ್ ಜೋಷಿ ಹೇಳ್ತಾರೆ, ನಮ್ಮ ದೇಹದಲ್ಲಿ ನೀಟ್ ಫೇಲ್ ಆದವರೆಲ್ಲ ಉಕ್ರೇನ್ ಗೆ ಮೆಡಿಕಲ್ ಮಾಡಲಿಕ್ಕೆ ಹೋಗಿದಾರೆ ಎಂದು. 97% ಅಂಕ ಪಡೆದ ಆ ವಿದ್ಯಾರ್ಥಿಗೆ ಅಷ್ಟು ಅಂಕ ಬಿಟ್ಟಿ ಬಂದಿದೆಯಾ? ಸಾಲ ಸೋಲ ಮಾಡಿ ಮಾಡಿ ಅಲ್ಲಿಗೆ ಕಳಿಸಿ ಇವತ್ತು ಮಗನನ್ನು ಕಳೆದುಕೊಂಡ ಆ ಕುಟುಂಬ ಇವತ್ತು ದುಃಖದಲ್ಲಿದೆ. ಇಂಥ ಹೇಳಿಕೆ ನೀಡುವ ಸಚಿವರಿಗೆ ಜವಾಬ್ದಾರಿ ಬೇಡವೇ? ಎಂದು ಮಾಜಿ ಮುಖ್ಯಮಂತ್ರಿಗಳು ಖಾರವಾಗಿ ಪ್ರತಿಕ್ರಿಯಿಸಿದರು.
– ಸದನದಲ್ಲಿ ಬ್ಯಾಗ್ ಪ್ರದರ್ಶಿಸಿ ವಾಗ್ದಾಳಿ – ರೋಹಿಣಿ ಸಿಂಧೂರಿ ವಿರುದ್ಧ ಪರೋಕ್ಷ ಕಿಡಿ
ಬೆಂಗಳೂರು: ಕೋವಿಡ್ ಕಾಲದಲ್ಲಿ ಸರ್ಕಾರ ಒಳ್ಳೆಯ ಕೆಲಸ ಮಾಡುತ್ತಿದೆ. ನಿಕಟ ಪೂರ್ವ ಮುಖ್ಯಮಂತ್ರಿಗಳೂ ಸಾಕಷ್ಟು ಸಹಕಾರ ಕೊಟ್ಟಿದ್ದಾರೆ. ಆದರೆ ಕೆಲವು ಅಧಿಕಾರಿಗಳು ಮಾತ್ರಾ ಭ್ರಷ್ಟರಾಗಿ ಬದುಕುತ್ತಿದ್ದಾರೆ. ಕೇವಲ ಒಂದು ಬ್ಯಾಗ್ ವಿಚಾರದಲ್ಲಿ ಆರೂವರೆ ಕೋಟಿ ರೂಪಾಯಿ ನುಂಗಿದ್ದಾರೆ. ಎಂದು ಜೇಬಿನಲ್ಲಿ ಬ್ಯಾಗ್ ಇಟ್ಟುಕೊಂಡು ಬಂದಿದ್ದ ಜೆಡಿಎಸ್ ಶಾಸಕ ಸಾ.ರಾ ಮಹೇಶ್, ಸದನದಲ್ಲಿ ಬ್ಯಾಗ್ ಪ್ರದರ್ಶನ ಮಾಡಿ ರೋಹಿಣಿ ಸಿಂಧೂರಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸಭಾ ಅಧಿವೇಶನದಲ್ಲಿ ಪಿಡಿ ಖಾತೆಗಳ ಬಗ್ಗೆ ಎಚ್.ಡಿ ಕುಮಾರಸ್ವಾಮಿ ಪ್ರಸ್ತಾಪ ಮಾಡುತ್ತಿದ್ದಂತೆ ಎದ್ದು ನಿಂತು ಸಾ.ರಾ ಮಹೇಶ್, ರೋಹಿಣಿ ಸಿಂಧೂರಿ ವಿರುದ್ಧ ಆರೋಪ ಮಾಡಲು ಪ್ರಾರಂಭಿಸಿದರು. ಕೆಲ ಅಧಿಕಾರಿಗಳು ಜನರ ತೆರಿಗೆ ಹಣದಲ್ಲಿ ಶೋಕಿ ಮಾಡಿಕೊಂಡು ಬದುಕುತ್ತಿದ್ದಾರೆ. ಬ್ಯಾಗ್ ಖರೀದಿಯಲ್ಲಿ 6.5 ಕೋಟಿ ರೂ. ಅಕ್ರಮ ನಡೆದಿದೆ. ಆ ಅಧಿಕಾರಿ ಮೈಸೂರಿನಲ್ಲಿ ಲೂಟಿ ಮಾಡಿದ್ದಾರೆ ಎಂದು ಹೆಸರು ಹೇಳದೇ ರೋಹಿಣಿ ಸಿಂಧೂರಿ ವಿರುದ್ಧ ಸಾ.ರಾ ಮಹೇಶ್ ಕಿಡಿ ಕಾರಿದ್ದಾರೆ.
ಕಲಾಪದಲ್ಲಿ ರೋಷಾವೇಶದಿಂದ ಮಾತನಾಡಿದ ಸಾ.ರಾ ಮಹೇಶ್, ಇಂಥ ಅಧಿಕಾರಿಗಳಿಂದ ನಮ್ಮ ರಕ್ಷಣೆಗೆ ಬನ್ನಿ. ಸರ್ಕಾರಕ್ಕೆ ಕ್ರಮ ತೆಗೆದುಕೊಳ್ಳುವ ತಾಕತ್ ಇದ್ಯಾ? ಐಎಎಸ್, ಐಪಿಎಸ್ ಮನೆಗಳ ಮೇಲೆ ಐಟಿ ರೇಡ್ ಆಗುತ್ತಾ? ಎಂಜಿನಿಯರ್, ಸಣ್ಣಪುಟ್ಟ ಅಧಿಕಾರಿಗಳ ಮೇಲೆ ಮಾತ್ರ ಐಟಿ ರೇಡ್ ಆಗುತ್ತದೆ ಎಂದು ಸದನದಲ್ಲಿ ಭಾವೋದ್ವೇಗದಿಂದ ಗದ್ಗದಿತರಾದರು. ಇದನ್ನೂ ಓದಿ: ಹಿರಿಯ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಸ್ವಯಂ ನಿವೃತ್ತಿಗೆ ಅರ್ಜಿ
ನೆರವಿಗೆ ಧಾವಿಸಿದ ಎಚ್‍ಡಿಕೆ
ಒಬ್ಬ ಸರ್ಕಾರಿ ಅಧಿಕಾರಿ ಶಾಸಕರ ಮೇಲೆ ಮಾಧ್ಯಮಗಳ ಎದುರು ಹೋಗಿದ್ದು ಯಾಕೆ? ಇವರಿಗೆ ಅಧಿಕಾರ ಯಾರು ಕೊಟ್ರು? ಅವರು ಐಎಎಸ್ ಇರಲಿ, ಬೇರೆ ಇರಲಿ ಎಂದು ಕುಮಾರಸ್ವಾಮಿ ಹೇಳಿದರು. ಈ ವೇಳೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಾತನಾಡಿ, ನಾನೂ ಸಹ ಸಿಎಸ್ ಜೊತೆ ಈ ಬಗ್ಗೆ ಮಾತನಾಡಿದ್ದೇನೆ ರೂಲ್ಸ್ ನಲ್ಲಿ ಹೀಗೆ ಅಧಿಕಾರಿಗಳು ಹೋಗಿ ಮಾತಾಡೋದು ಸರಿಯಲ್ಲ. ಸಿಎಸ್ ಸೂಚನೆ ಕೊಟ್ಟಿರಬೇಕು ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಕಬ್ಬಿನ ಗದ್ದೆಗೆ ಬೆಂಕಿ- ನೂರಾರು ಟನ್ ಕಬ್ಬು ಬೆಂಕಿಗಾಹುತಿ
ಈ ವಿಷಯದ ಬಗ್ಗೆ ಮಾತನಾಡಿದ ಆರ್.ಅಶೋಕ್, ಸಾ.ರಾ ಮಹೇಶ್ ಇದನ್ನು ನಮ್ಮ ಗಮನಕ್ಕೆ ತಂದಿದ್ದಾರೆ. ಸಿಎಸ್ ಜೊತೆ ನಾನೂ ಮಾತಾಡಿದ್ದೇನೆ. ಸರ್ಕಾರಿ ಅಧಿಕಾರಿಗಳು ಮಾಧ್ಯಮಗಳೆದುರು ಹೋಗಿ ಮಾತಾಡುವಂತಿಲ್ಲ. ಕೆಲವು ಅಧಿಕಾರಿಗಳು ಓವರ್ ಆ್ಯಕ್ಟಿಂಗ್ ಮಾಡುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಸಿಎಸ್‍ಗೆ ನಾವು ಸೂಚಿಸುತ್ತೇವೆ ಎಂದು ತಿಳಿಸಿದರು.
– ಬಿಜೆಪಿ ಎದುರಿಸಲು ಪ್ರಾದೇಶಿಕ ಪಕ್ಷಗಳ ಮೈತ್ರಿ – ಕಾಂಗ್ರೆಸ್ ದೇಶದಲ್ಲಿ ಅಪ್ರಸ್ತುತ
ಮೈಸೂರು: ಬಿಜೆಪಿ ವಿರುದ್ಧ ಒಂದಾಗಲು ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್ ಕರೆದ ಸಭೆಗೆ ನಾನು ಹೋಗುತ್ತಿದ್ದೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ದೇಶದಲ್ಲಿ ಕಾಂಗ್ರೆಸ್ ಅಪ್ರಸ್ತುತವಾಗಿದ್ದು, ಅವರೇ ವೇದಿಕೆಯನ್ನು ನಿರ್ಮಾಣ ಮಾಡಿಕೊಟ್ಟಿದ್ದಾರೆ. ಬಿಜೆಪಿಗೆ ಪರ್ಯಾಯವಾಗಲು ಪ್ರಾದೇಶಿಕ ಪಕ್ಷಗಳು ಒಂದಾಗಬೇಕು ಎಂಬ ನಿಟ್ಟಿನಲ್ಲಿ ಚಂದ್ರಶೇಖರ್ ರಾವ್ ಮುಂದೆ ಸಭೆ ನಡೆಸಲಿದ್ದಾರೆ. ನನ್ನ ಜೊತೆ ಕೆಸಿಆರ್ ಕರೆ ಮಾಡಿ ಮಾತನಾಡಿದ್ದು ನಾನು ಸಭೆಯಲ್ಲಿ ಭಾಗವಹಿಸುತ್ತೇನೆ ಎಂದು ಹೇಳಿದರು.
ಏನಿದು ಒಕ್ಕೂಟ?
ತೆಲಂಗಾಣದಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಬಿಜೆಪಿಯನ್ನು ಸೋಲಿಸಲು ಪ್ರಾದೇಶಿಕ ಪಕ್ಷಗಳನ್ನು ಸೇರಿಸಿ ಒಕ್ಕೂಟ ರಚಿಸಲು ಮುಂದಾಗಿದ್ದಾರೆ.
ಈಗಾಗಲೇ ಕೆಸಿಆರ್ ದೇಶದ ವಿವಿಧ ರಾಜ್ಯಗಳಲ್ಲಿ ಇರುವ ಪ್ರಾದೇಶಿಕ ಪಕ್ಷಗಳ ನಾಯಕರ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದು ಡಿಸೆಂಬರ್‌ನಲ್ಲಿ ತೆಲಂಗಾಣದಲ್ಲಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಎಲ್ಲ ನಾಯಕರು ಭಾಗವಹಿಸುವಂತೆ ಆಹ್ವಾನ ನೀಡಿದ್ದಾರೆ.
ಯಾರಿಗೆಲ್ಲ ಆಹ್ವಾನ?
ಎನ್‍ಸಿಪಿ ನಾಯಕ ಶರದ್ ಪವಾರ್, ತೃಣಮೂಲ ಕಾಂಗ್ರೆಸ್ ನಾಯಕಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ಬಿಎಸ್‍ಪಿ ನಾಯಕಿ ಮಾಯಾವತಿ, ಶಿರೋಮಣಿ ಅಕಾಲಿ ದಳದ ಪ್ರಕಾಶ್ ಸಿಂಗ್ ಬಾದಲ್, ಬಿಜೆಡಿಯ ನವೀನ್ ಪಟ್ನಾಯಕ್, ಡಿಎಂಕೆ ಸ್ಟಾಲೀನ್ ಅವರಿಗೆ ಆಹ್ವಾನ ನೀಡಲಾಗಿದೆ.ಈ ಪಕ್ಷಗಳ ನಾಯಕರು ಮಾತ್ರವಲ್ಲದೇ ಇನ್ನೂ ಅನೇಕ ರಾಜಕೀಯ ಪಕ್ಷಗಳು ಸಭೆಯಲ್ಲಿ ಭಾಗಿಯಾಗುವ ಸಾಧ್ಯತೆಯಿದೆ.
ಮೈತ್ರಿಕೂಟ ಯಾಕೆ?
ಬಿಹಾರದಲ್ಲಿ ಬಿಜೆಪಿ ಜೊತೆಗೂಡಿ ಜೆಡಿಯು ಮತ್ತೆ ಅಧಿಕಾರಕ್ಕೆ ಏರಿದ ಜೊತೆಗೆ ದೇಶದ 59 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ 41ರಲ್ಲಿ ಗೆಲುವು ಸಾಧಿಸಿದೆ. ಇಷ್ಟೇ ಅಲ್ಲದೇ ತೆಲಂಗಾಣ ಉಪ ಚುನಾವಣೆಯಲ್ಲೂ ಬಿಜೆಪಿ ಜಯಗಳಿಸಿದ ಬಳಿಕ ಮೈತ್ರಿಕೂಟ ರಚಿಸಲು ಕೆಸಿಆರ್ ಆಸಕ್ತಿ ವಹಿಸಿದ್ದಾರೆ.
ತೆಲಂಗಾಣದ ದುಬ್ಬಕ್ಕ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂ ರಘುನಂದನ್ ರಾವ್ ಟಿಆರ್‌ಎಸ್ ಅಭ್ಯರ್ಥಿ ವಿರುದ್ಧ 1,079 ಮತಗಳ ಅಂತರದಿಂದ ಜಯಗಳಿಸಿದ್ದರು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಟಿಆರ್‌ಎಸ್ ಮಧ್ಯೆ ಸ್ಪರ್ಧೆ ನಡೆಯಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಫಲಿತಾಂಶದ ದಿನ ಬಿಜೆಪಿ ಅಭ್ಯರ್ಥಿಗೆ ಕೊನೆಯಲ್ಲಿ ಮುನ್ನಡೆ ಸಿಕ್ಕಿದ ಪರಿಣಾಮ ಜಯಗಳಿಸಿದ್ದರು.
ಈ ಚುನಾವಣೆಯ ಬಳಿಕ ಹೈದರಾಬಾದ್ ಪಾಲಿಕೆ ಚುನಾವಣೆಯಲ್ಲೂ ಬಿಜೆಪಿ ಭರ್ಜರಿ ಸಾಧನೆ ಮಾಡಿದೆ.150 ವಾರ್ಡ್‍ಗಳ ಪೈಕಿ 49ರಲ್ಲಿ ಬಿಜೆಪಿ ಜಯ ಸಾಧಿಸಿದೆ. ಸಿಎಂ ಚಂದ್ರಶೇಖರ್ ರಾವ್ ಅವರ ಟಿಆರ್‌ಎಸ್ 55, ಅಸಾದುದ್ದೀನ್ ಒವೈಸಿಯ ಎಐಎಂಎಂ 44 ವಾರ್ಡ್‌ಗಳನ್ನು ಗೆದ್ದುಕೊಂಡರೆ ಕಾಂಗ್ರೆಸ್ 2 ಸ್ಥಾನಗಳನ್ನು ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಸಾಧನೆಯೊಂದಿಗೆ ದಕ್ಷಿಣ ಭಾರತದಲ್ಲಿ ಕರ್ನಾಟಕ ಬಳಿಕ ತೆಲಂಗಾಣದಲ್ಲಿ ಅಧಿಕಾರ ಹಿಡಿಯಲು ಮಾಡಿದ ಮೊದಲ ದೊಡ್ಡ ಪ್ರಯತ್ನ ಫಲ ನೀಡಿದೆ.
ದಿನೇ ದಿನೇ ನೆಲೆ ಇಲ್ಲದ ರಾಜ್ಯದಲ್ಲಿ ಬಿಜೆಪಿ ಸಂಘಟನೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೊರತಾದ ಪಕ್ಷಗಳ ಜೊತೆ ಮೈತ್ರಿ ಮಾಡಲು ಕೆಸಿಆರ್ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಪ್ರಾದೇಶಿಕ ಪಕ್ಷಗಳ ಜೊತೆ ಮಾತುಕತೆ ನಡೆಸಲು ಈ ತಿಂಗಳಿನಲ್ಲೇ ಸಭೆ ನಡೆಸಲಿದ್ದಾರೆ.
ಬೆಂಗಳೂರು: ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಅವರನ್ನು ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ಭೇಟಿ ಮಾಡಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕಿರಣ್, ಪ್ರಮುಖವಾಗಿ ಬೆಂಗಳೂರಿನ ಟ್ರಾಫಿಕ್ ನಿಯಂತ್ರಣ ಬಗ್ಗೆ, ಕಸ ನಿರ್ವಹಣೆ ಕುರಿತಾಗಿ ಮುಖ್ಯಮಂತ್ರಿ ಜೊತೆ ಚರ್ಚೆ ನಡೆಸಿದೆ ಅಂತ ಹೇಳಿದ್ರು.
ಈ ಕುರಿತು ಸಮಸ್ಯೆ ಬಗೆಹರಿಸಲು ಸಿಎಂ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. ಕೆಲವೇ ತಿಂಗಳಲ್ಲಿ ಇಂದಿನ ಚರ್ಚೆಯ ಪರಿಣಾಮ ಎದುರಿಸಲಿದ್ದೇವೆ. ಟ್ರಾಫಿಕ್ ನಿಯಂತ್ರಣಕ್ಕೆ ಬೃಹತ್ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ಮನವಿ ಮಾಡಿದ್ದೇವೆ ಅಂದ್ರು.
CM HD Kumaraswamy today directed the govt officers to complete development projects in Bengaluru city in a time-bound manner at a meeting with @kiranshaw, Chaiman, Biocon, the members of B-PAC and Senior govt officials today. pic.twitter.com/ssQ4XsgNnl
ಮೆಟ್ರೋ ಕಾಮಗಾರಿ ಉತ್ತರ ರೀತಿಯಲ್ಲಿ ಸಾಗಿದೆ. ವೈಟ್ ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿ ಹಾಗು ಹೆಬ್ಬಗೋಡಿಯಂತ್ರ ಸಂಚಾರಿ ದಟ್ಟಣೆಯ ಪ್ರದೇಶಗಳಿಗೆ ಮೆಟ್ರೋ ಅವಶ್ಯಕವಾಗಿದೆ. ಈ ಎಲ್ಲ ವಿಚಾರಗಳ ಬಗ್ಗೆ ಸಿಎಂ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಕೆಲವೇ ತಿಂಗಳಲ್ಲಿ ಇಂದಿನ ಚರ್ಚಾ ವಿಷಯಗಳ ಬಗ್ಗೆ ಪರಿಣಾಮ ಕಾಣುವ ವಿಶ್ವಾಸವಿದೆ ಅಂತ ಅವರು ತಿಳಿಸಿದ್ರು.
ಕಿರಣ್ ಮಜುಂದಾರ್ ಶಾ ಅವರು ಇತ್ತೀಚೆಗಷ್ಟೇ ಕನ್ನಡಪರ ಸಂಘಟನೆಗಳ ಕುರಿತು ಅವಹೇಳನಕಾರಿ ಟ್ವೀಟ್ ಮಾಡಿ ಕನ್ನಡ ಸಂಘಟನೆಗಳ ವಿರೋಧ ಎದುರಿಸಿದ್ದರು. ಈ ಹಿನ್ನೆಲೆಯಲ್ಲಿ ಶನಿವಾರ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿರುವುದು ಮಹತ್ವ ಪಡೆದಿದೆ.
Traffic problem, road infrastructure, waste management, conservation, lake development & Metro work were discussed among other issues. The CM assured to convene a joint meeting with DyCM @DrParameshwara to review the progress of development projects every month. pic.twitter.com/d94Iuur4EO
ಬೆಂಗಳೂರು: ಹದಿನೈದು ದಿನಗಳಲ್ಲಿ ರೈತರ ಸಾಲಮನ್ನಾ ಆದೇಶ ಹೊರಡಿಸುತ್ತೇನೆ ಎಂದಿದ್ದ ಸರ್ಕಾರ ಈಗ ಉಲ್ಟಾ ಹೊಡೆದಿದೆ. ಸಾಲಮನ್ನಾ ಮಾಡೋದಕ್ಕೆ 15 ದಿನಗಳ ಗಡುವು ನೀಡೋದಕ್ಕೆ ಸಾಧ್ಯವಿಲ್ಲ ಅಂತ ಡಿಸಿಎಂ ಪರಮೇಶ್ವರ್ ಕಡ್ಡಿ ತುಂಡು ಮಾಡಿದ ಹಾಗೇ ಹೇಳಿದ್ದಾರೆ. ಹೀಗಾಗಿ ರೈತರ ಸಾಲಮನ್ನಾ ಸದ್ಯಕ್ಕೆ ಆಗೋದು ಡೌಟ್ ಆಗಿದೆ.
ಅಧಿಕಾರ ಪಡೆದ 24 ಗಂಟೆಯಲ್ಲಿ ರೈತರ ಸಾಲಮನ್ನಾ ಮಾಡ್ತೀನಿ ಅಂತ ಭರವಸೆ ನೀಡಿದ್ದ ಸಿಎಂ ಕುಮಾರಸ್ವಾಮಿ, ಕಳೆದ ಮೇ 30ರಂದು ರೈತರ ಸಭೆ ನಡೆಸಿ ಷರತ್ತುಗಳನ್ನು ಹಾಕಿ ಬೆಳೆ ಸಾಲಮನ್ನಾ ಮಾಡೋದಾಗಿ ಮಾತು ಕೊಟ್ಟಿದ್ರು. ಅಲ್ಲದೇ 15 ದಿನಗಳ ಒಳಗೆ ಈ ಸಂಬಂಧ ಆದೇಶ ಹೊರಡಿಸೋದಾಗಿ ಕೂಡ ಸಿಎಂ ಹೇಳಿದ್ದರು.
ಗುರುವಾರ ನಡೆದ ಸಮನ್ವಯ ಸಮಿತಿ ಸಭೆಯ ಬಳಿಕ ಡಿಸಿಎಂ ಪರಮೇಶ್ವರ್ ಮಾತನಾಡಿ, 15 ದಿನಗಳಲ್ಲಿ ಸಾಲಮನ್ನಾ ಸಾಧ್ಯವಿಲ್ಲ ಅಂತ ಹೇಳಿದ್ದಾರೆ. ಹೀಗಾಗಿ ಸಾಲಮನ್ನಾ ಸಂಬಂಧ ಹೇಳಿಕೆ ಕೊಟ್ಟಿದ್ದ ಸಿಎಂ ಮಾತೇ ಈಗ ಉಲ್ಟಾ ಆಗಿದೆ. ಡಿಸಿಎಂ ಹೇಳಿಕೆಯಿಂದ ಅದ್ಯಾವಾಗ ಸಾಲಮನ್ನಾ ಆಗುತ್ತೋ ಅನ್ನೋ ಆತಂಕ ಶುರುವಾಗಿದೆ. ಒಂದು ಕಡೆ ಸಾಲಮನ್ನಾ ಗಡುವು ನಿಡೋಕೆ ಆಗೊಲ್ಲ ಅಂದಿರೋ ಡಿಸಿಎಂ ಏಕಾಏಕಿ ನಿರ್ಧಾರ ಸಾಧ್ಯವಿಲ್ಲ ಅಂತ ಹೇಳಿದ್ದಾರೆ.
ಸಮನ್ವಯ ಸಮಿತಿ ಸಭೆ ಬಳಿಕ ಮಾತನಾಡಿದ ಸಮಿತಿಯ ಅಧ್ಯಕ್ಷ ಮಾಜಿ ಸಿಎಂ ಸಿದ್ದರಾಮಯ್ಯ, ಕಠಿಣವಾದ ಯೋಜನೆಗಳನ್ನ ರೂಪಿಸಲು ಸಾಧ್ಯವಿಲ್ಲ. ಎರಡು ಪಕ್ಷದ ಪ್ರಣಾಳಿಕೆಯ ಮಿನಿಮಮ್ ಕಾರ್ಯಕ್ರಮ ಜಾರಿಗೆ ಮಾತ್ರ ಒತ್ತು ಕೊಡ್ತೀವಿ ಅಂತ ಹೇಳಿದ್ದಾರೆ. ಹೀಗಾಗಿ ಸಾಲಮನ್ನಾ ಮಾತುಕೊಟ್ಟ ಸಿಎಂ ಕುಮಾರಸ್ವಾಮಿ ಅವ್ರ ಈ ಕಾರ್ಯಕ್ರಮ ಜಾರಿಯಾಗುತ್ತಾ ಅನ್ನೋ ಅನುಮಾನ ಪ್ರಾರಂಭವಾಗಿದೆ.
ಬೆಂಗಳೂರು: ಜೆಡಿಎಸ್‍ನಲ್ಲಿ ಅಸಮಾಧಾನ ಶಮನ ಯತ್ನ ಮುಂದುವರೆದಿದ್ದು, ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಅಧಿಕಾರಿ ಎಚ್.ಡಿ ದೇವೇಗೌಡರನ್ನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭೇಟಿಯಾಗಿದ್ದಾರೆ.
ಜಿಟಿ ದೇವೇಗೌಡ ಅವರು ಸಹಕಾರ ಹಾಗೂ ಅಬಕಾರಿ ಎರಡರಲ್ಲಿ ಒಂದು ಖಾತೆಯನ್ನು ಬಯಸಿದ್ದು, ಈಗಾಗಲೇ ಕುಮಾರಸ್ವಾಮಿ ಜಿ.ಟಿ. ದೇವೇಗೌಡರ ಖಾತೆ ಬದಲಾವಣೆಗೆ ಈಗಾಗಲೇ ಅಸ್ತು ಎಂದಿದ್ದಾರೆ. ಬಂಡೆಪ್ಪ ಕಾಶಂಪುರ್ ಬಳಿ ಇರುವ ಸಹಕಾರ ಖಾತೆ ವಾಪಸ್ ಪಡೆದರೆ ಮತ್ತೆ ಅಸಮಾಧಾನ ಭುಗಿಲೇಳುವ ಸಾಧ್ಯತೆ ಇದೆ. ಆದ್ದರಿಂದ ಈ ಹಿನ್ನೆಲೆಯಲ್ಲಿ ಬಂಡೆಪ್ಪ ಅವರ ಮನವೊಲಿಸಿ ಮುಂದುವರೆಯಲು ಯತ್ನಿಸಿದ್ದಾರೆ.
ಈ ಖಾತೆ ಬದಲಾವಣೆ ಕುರಿತು ತಂದೆಯ ಜೊತೆ ಸಿಎಂ ಚರ್ಚೆ ಮಾಡಿದ್ದು, ಜಿಟಿ ದೇವೇಗೌಡ ಕೂಡ ಮಾಜಿ ಪ್ರಧಾನಿಗಳ ನಿವಾಸದಲ್ಲಿದ್ದಾರೆ. ಬಂಡೆಪ್ಪ ಕಾಶಂಪೂರ್ ಅವರ ಮನವೊಲಿಸುವ ಕಸರತ್ತು ನಡೆಯುತ್ತಿದ್ದು, ಕಾಶಂಪೂರ್ ಬಳಿ ಇರುವ ಸಹಕಾರ ಖಾತೆ ಜಿಟಿಡಿಗೆ ಕೊಡುವ ಸಾಧ್ಯತೆ ಇದೆ.
ಈ ಬಗ್ಗೆ ಬಂಡೆಪ್ಪ ಕಾಶಂಪೂರ್, ಖಾತೆ ಬದಲಾವಣೆ ವಿಚಾರವೇ ತನಗೆ ಗೊತ್ತಿಲ್ಲ. ವರಿಷ್ಠರು ಏನು ತೀರ್ಮಾನ ತಗೋತಾರೆ ಅನ್ನುವುದು ಗೊತ್ತಿಲ್ಲ. ನಾನು ಸಚಿವ ಸ್ಥಾನವನ್ನೇ ಕೇಳಿದವನಲ್ಲ. ಹೀಗಾಗಿ ಖಾತೆ ಯಾವುದಾದರೇನು, ಎಲ್ಲವೂ ವರಿಷ್ಠರಿಗೆ ಬಿಟ್ಟಿದ್ದು. ಆದರೆ ತಕ್ಷಣವೇ ಈ ರೀತಿ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇಲ್ಲ. ಸಹಕಾರ ಇಲಾಖೆಯ ಸಭೆ ಕರೆದಿದ್ದೇನೆ. ವರಿಷ್ಟರು ತನ್ನನ್ನು ಕರೆಯಬಹುದು. ಅಲ್ಲಿವರೆಗೆ ಕಾದು ನೋಡೋಣ ಎಂದು ಆಪ್ತರಲ್ಲಿ ಸಚಿವ ಬಂಡೆಪ್ಪ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
ಜಟಿ ದೇವೇಗೌಡ ಅವರಿಗೆ ಸರ್ಕಾರದಲ್ಲಿ ಉನ್ನತ ಶಿಕ್ಷಣ ಖಾತೆ ಸಿಕ್ಕಿತ್ತು. 8ನೇ ತರಗತಿ ಓದಿರುವ ಜಿಟಿಡಿಗೆ ಈ ಖಾತೆ ಸಿಕ್ಕಿದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ಷೇಪ ಕೇಳಿಬಂದಿತ್ತು. ಅಷ್ಟೇ ಅಲ್ಲದೇ ಜಿಟಿಡಿ ಬೆಂಬಲಿಗರು ಸಹ ವಿರೋಧ ವ್ಯಕ್ತಪಡಿಸಿ ಬೇರೆ ಖಾತೆ ನೀಡುವಂತೆ ಆಗ್ರಹಿಸಿದ್ದರು.
ಬೆಂಗಳೂರು: ನಾನು ಯಾವ ಖಾತೆಯನ್ನು ಕೇಳಿಲ್ಲ. ಯಾವ ಖಾತೆಯ ಮೇಲೂ ಆಸೆ ಪಟ್ಟಿಲ್ಲ ಅಂತ ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ಹೇಳಿದ್ದಾರೆ.
ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಭೇಟಿ ಬಳಿಕ ನಗರದಲ್ಲಿ ಸಚಿವರ ಪಟ್ಟಿ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಖಾತೆ ಹಂಚಿಕೆ ಬಗ್ಗೆ ಇನ್ನೂ ನಿರ್ಧಾರ ಆಗಿಲ್ಲ. ದೊಡ್ಡವರ ಆಶೀರ್ವಾದ ಪಡೆಯಲು ಬಂದಿದ್ದೇನೆ. ಖಾತೆ ಹಂಚಿಕೆ ಪಟ್ಟಿಯಲ್ಲಿ ನನ್ನ ಹೆಸರು ಇದೆ ಅಂತ ಹೇಳಿದ್ರು.
ಖಾತೆ ಹಂಚಿಕೆ ಬಗ್ಗೆ ಪರಮಾಧಿಕಾರ ಮುಖ್ಯಮಂತ್ರಿಗಳಿಗೆ ಇದೆ. ರಾಷ್ಟ್ರೀಯ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳು ಕೂತು ಅದನ್ನೆಲ್ಲಾ ತೀರ್ಮಾನ ಮಾಡುತ್ತಾರೆ. ಅದಕ್ಕೆ ಶಾಸಕರಾದ ನಾವೆಲ್ಲ ಒಟ್ಟಾಗಿ ಅವರಿಗೆ ಜವಾಬ್ದಾರಿ ಕೊಟ್ಟಿದ್ದೇವೆ. ಸಂಪುಟ ರಚನೆಯನ್ನು ಸಿಎಂ ಯಶಸ್ವಿಯಾಗಿ ನಿರ್ವಹಿಸುತ್ತಾರೆ. ಅವರು ಯಾವ ಖಾತೆ ಕೊಟ್ರೂ ಒಪ್ಪಿಕೊಳ್ಳುತ್ತೇನೆ ಅಂದ್ರು.
ದೇವೇಗೌಡರನ್ನು ಭೇಟಿ ಮಾಡಿ ಅವರ ಆಶೀರ್ವಾದ ಪಡೆದಿದ್ದೇನೆ ಹೊರತು ಖಾತೆ ಹಂಚಿಕೆ ಬಗ್ಗೆ ಮಾತುಕತೆ ನಡೆಸಿಲ್ಲ. ಖಾತೆ ಹಂಚಿಕೆ ಬಗ್ಗೆ ನಮಗೆ ಈವರೆಗೂ ಯಾವುದೇ ಮಾಹಿತಿ ಬಂದಿಲ್ಲ ಅಂದ್ರು.
ಕಾಂಗ್ರೆಸ್ ನಲ್ಲಿ ಅಸಮಾಧಾನ ಸ್ಫೋಟವಾಗಿದ್ದು, ಜೆಡಿಎಸ್ ನಲ್ಲಿ ಅಂತಹ ಯಾವುದೇ ಅಸಮಾಧಾನವಿಲ್ಲ. ಹೀಗಾಗಿ ಎಲ್ಲರೂ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ಹಾಗೂ ಕುಮಾರಣ್ಣ ಏನ್ ಹೇಳ್ತಾರೋ ಅದನ್ನು ಕೇಳಲು ರೆಡಿಯಾಗಿದ್ದೇವೆ ಅಂತ ಹೇಳಿದ್ರು.
ಬೆಂಗಳೂರು: ಟೈಮ್ ಪಾಸ್ ಮಾಡೋ ಹಲವು ನೌಕರರು ವಿಧಾನಸೌಧದಲ್ಲಿ ಇದ್ದಾರೆ. ಅವರನ್ನು ತೆಗೆದು ಹಾಕಿ ಕಷ್ಟ ಪಡುವವರಿಗೆ ಕೆಲಸ ನೀಡಿ ಅಂತ ಮುಖ್ಯಮಂತ್ರಿ ಕುಮಾರಸ್ವಾಮಿ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಅವರು ಇಂದು ಜೆಪಿ ನಗರದ ಮನೆ ಮುಂದೆ ಇರುವ ಪಾರ್ಕ್ ನಲ್ಲಿ ಸಸಿ ನೆಡುವ ಮೂಲಕ ಪರಿಸರ ದಿನಾಚರಣೆಯನ್ನು ಅಚರಿಸಿದರು. ಈ ಕಾರ್ಯಕ್ರಮದಲ್ಲಿ ಜಯನಗರ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿ ಕೂಡ ಭಾಗಿಯಾಗಿದ್ದರು.
ಬಳಿಕ ಮಾತನಾಡಿದ ಸಿಎಂ, ನಮ್ಮ ಸರ್ಕಾರ ಪರಿಸರಕ್ಕೆ ಹೆಚ್ಚು ಮಹತ್ವ ನೀಡುತ್ತೆ. ಇಂದು ನನ್ನ ಮನೆ ಮುಂದೆ ಇರೋ ಪಾರ್ಕ್‍ನಲ್ಲಿ ಗಿಡ ನೆಟ್ಟಿದ್ದೇನೆ. ಹಾಗೆಯೇ ರಾಜ್ಯದ ಪ್ರತಿಯೊಬ್ಬರು ಅವರ ಮನೆ ಮುಂದೆ ಗಿಡ ನೆಡುವುದರ ಮೂಲಕ ನಮ್ಮ ಸುತ್ತಮುತ್ತಲಿನ ಪರಿಸರ ಕಾಪಾಡಬೇಕು. ಅದು ನಮ್ಮೆಲ್ಲರ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹೇಳಿದ್ರು.
ಇದೇ ವೇಳೆ ಮನೆ ಮುಂದೆಯೇ ಜನತಾದರ್ಶನ ಮಾಡಿದ ಸಿಎಂ ಆಕ್ಸಿಡೆಂಟ್ ಚಿಕಿತ್ಸೆಗೆ ಹಣವಿಲ್ಲದೆ ಪರದಾಡುತ್ತಿದ್ದ ಕುಟುಂಬಕ್ಕೆ ಆಸ್ಪತ್ರೆ ವೆಚ್ಚ ಭರಿಸುವುದಾಗಿ ಭರವಸೆಯನ್ನ ನೀಡಿದ್ರು. ಡಿಪ್ಲೋಮಾ ಮಾಡಿದ್ರು ಕೆಲಸವಿಲ್ಲದೆ ಅಲೆದಾಡುತ್ತಿದ್ದ ಮಹಿಳೆಗೆ ವಿಧಾನಸೌಧದಲ್ಲಿ ಕೆಲಸ ನೀಡಿ. ಟೈಮ್ ಪಾಸ್ ಮಾಡೋ ಹಲವು ನೌಕರರು ಇದ್ದಾರೆ. ಅವರನ್ನು ತೆಗೆದು ಹಾಕಿ ಕಷ್ಟ ಪಡುವವರಿಗೆ ವಿಧಾನಸೌದದಲ್ಲಿ ಕೆಲಸ ನೀಡಿ ಅಂತ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.