Tag: Kulu

  • ನೋಡ ನೋಡುತ್ತಿದಂತೆ ಪ್ರವಾಹದಲ್ಲಿ ಕೊಚ್ಚಿಹೋಯ್ತು ವೋಲ್ವೋ ಬಸ್ – ವಿಡಿಯೋ ನೋಡಿ

    ನೋಡ ನೋಡುತ್ತಿದಂತೆ ಪ್ರವಾಹದಲ್ಲಿ ಕೊಚ್ಚಿಹೋಯ್ತು ವೋಲ್ವೋ ಬಸ್ – ವಿಡಿಯೋ ನೋಡಿ

    ನವದೆಹಲಿ: ಭಾರೀ ಮಳೆಯಿಂದ ಉಂಟಾದ ಪ್ರವಾಹದಲ್ಲಿ ಪ್ರವಾಸಿಗರ ವೋಲ್ವೋ ಬಸ್ ಒಂದು ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ಹಿಮಾಚಲ ಪ್ರದೇಶದ ಮನಾಲಿಯಲ್ಲಿ ನಡೆದಿದೆ.

    ಬಸ್ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗುತ್ತಿರುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದೃಷ್ಟವಶಾತ್ ಘಟನೆ ವೇಳೆ ಬಸ್ಸಿನಲ್ಲಿ ಯಾರು ಇರಲಿಲ್ಲ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಹಿಮಾಚಲ ಪ್ರದೇಶದ ಕುಲು ಜಿಲ್ಲೆಯ ಮನಾಲಿ ಪ್ರದೇಶ ಸೇರಿದಂತೆ ರಾಜ್ಯದ ಹಲವೆಡೆ ಕಳೆದ 24 ಗಂಟೆಗಳ ಅವಧಿಯಲ್ಲಿ 127.4 ಮಿ.ಮೀ ಮಳೆಯಾಗಿದೆ. ನೈರುತ್ಯ ಮಾನ್ಸೂನ್ ಅಧಿಕ ಪ್ರಮಾಣದಲ್ಲಿ ಸುರಿಯುತ್ತಿರುವುದರಿಂದ ಅಧಿಕ ಪ್ರಮಾಣದಲ್ಲಿ ಗುಡ್ಡ ಕುಸಿತ ನಡೆದಿದ್ದು, ಹಲವೆಡೆ ರಾಷ್ಟ್ರೀಯ ಹೆದ್ದಾರಿಗಳು ಬಂದ್ ಆಗಿದೆ.

    ಹಿಮಾಚಲ ಪ್ರದೇಶದ ನದಿಗಳ ಹರಿವಿನ ಪ್ರಮಾಣ ಹೆಚ್ಚಾಗಿದ್ದು, ಚಂಡೀಗಢ-ಮನಾಲಿ ನಡುವಿನ ರಾಷ್ಟ್ರೀಯ ಹೆದ್ದಾರಿ ಮೇಲೆ ಬಿಯಸ್ ನದಿ ನೀರು ಹರಿಯುತ್ತಿದೆ. ಪ್ರವಾಹದಿಂದಾಗಿ ಸುಮಾರು ಹಲವೆಡೆ ಸಂಪರ್ಕ ಕಡಿತಗೊಂಡಿದ್ದು, ರಾಷ್ಟ್ರೀಯ ಹೆದ್ದಾರಿ 3ರಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಮತ್ತೊಂದು ವಿಡಿಯೋದಲ್ಲಿ ಟ್ರಕ್ ಒಂದು ನೀರಿನಲ್ಲಿ ಕೊಚ್ಚಿಹೋಗಿದೆ. ಭಾರೀ ಮಳೆಗೆ ಹಿಮಾಚಲ ಪ್ರದೇಶದ ಶಿಮ್ಲಾ ಸೇರಿದಂತೆ ರಾಜ್ಯದ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಅಲ್ಲದೇ ಹಲವು ಪ್ರದೇಶಗಳಲ್ಲಿ ಪ್ರವಾಹ ನಡುವೆ ಸಿಲುಕಿದ್ದ 20ಕ್ಕೂ ಹೆಚ್ಚು ಮಂದಿಯನ್ನ ರಕ್ಷಣೆ ಮಾಡಲಾಗಿದೆ.

    ಉಳಿದಂತೆ ಕುಲು ಮನಾಲಿಯಲ್ಲಿ ತಮಿಳು ಚಿತ್ರನಟ ಕಾರ್ತಿ ಅವರ ದೇವ್ ಸಿನಿಮಾ ಚಿತ್ರೀಕರಣಕ್ಕಾಗಿ ತೆರಳಿದ್ದ ತಂಡ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದು, ಭಾರೀ ಮಳೆಯಿಂದ ಚಿತ್ರತಂಡಕ್ಕೆ ಸುಮಾರು 1.5 ಕೋಟಿ ರೂ. ನಷ್ಟ ಉಂಟಾಗಿದೆ. ಚಿತ್ರದ ಶೂಟಿಂಗ್‍ಗಾಗಿ ಚೆನ್ನೈನಿಂದ 140 ಮಂದಿಯ ಚಿತ್ರತಂಡ ಮನಾಲಿಗೆ ತೆರಳಿತ್ತು ಎಂದು ವರದಿಯಾಗಿದೆ.

    https://www.youtube.com/watch?v=q09ZnYhRgNo