Tag: kuldeep singh sengar

  • ಬಿಜೆಪಿ ಸರ್ಕಾರ ನನ್ನೊಂದಿಗೆ ಇದೆಯಾ? ಕುಲದೀಪ್ ಸೆನ್‍ಗರ್ ಜೊತೆ?: ಉನ್ನಾವೋ ಪ್ರಕರಣದ ಸಂತ್ರಸ್ತೆ

    ಬಿಜೆಪಿ ಸರ್ಕಾರ ನನ್ನೊಂದಿಗೆ ಇದೆಯಾ? ಕುಲದೀಪ್ ಸೆನ್‍ಗರ್ ಜೊತೆ?: ಉನ್ನಾವೋ ಪ್ರಕರಣದ ಸಂತ್ರಸ್ತೆ

    ಲಕ್ನೋ: ಬಿಜೆಪಿ ಸರ್ಕಾರ ನನ್ನೊಂದಿಗೆ ಇದೆಯಾ ಅಥವಾ ಅಪರಾಧಿ ಕುಲದೀಪ್ ಸೆನ್‍ಗರ್ ಜೊತೆಗಿದೆಯಾ ಎಂದು ಉನ್ನಾವೋ ಪ್ರಕರಣದ ಸಂತ್ರಸ್ತೆ ಪ್ರಶ್ನೆ ಮಾಡಿದ್ದಾರೆ.

    ಉನ್ನಾವೋ ಜಿಲ್ಲಾ ಪಂಚಾಯ್ತಿಯ ಅಧ್ಯಕ್ಷ ಚುನಾವಣೆಗೆ ಅರುಣ್ ಸಿಂಗ್ ಬಿಜೆಪಿ ಅಭ್ಯರ್ಥಿ. ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿ ಕುಲದೀಪ್ ಸೆನ್‍ಗರ್ ಆಪ್ತ. ಹೀಗಾಗಿ ಅರುಣ್ ಸಿಂಗ್‍ಗೆ ಟಿಕೆಟ್ ನೀಡಿರುವುದನ್ನ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ವಿರೋಧಿಸಿದ್ದಾರೆ. ಈ ಸಂಬಂಧ ವೀಡಿಯೋ ಮೂಲಕ ತಮ್ಮ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.

    ವೀಡಿಯೋ ಹೇಳಿಕೆ: ಮಾನ್ಯ ರಾಷ್ಟ್ರಪತಿಗಳೇ, ಪ್ರಧಾನಿಗಳು ಮತ್ತು ಸಿಎಂ ಯೋಗಿ ಆದಿತ್ಯನಾಥ್ ನೀವು ನನ್ನ ಪಶ್ನೆಗೆ ಉತ್ತರ ನೀಡಬೇಕು. ಒಂದು ವೇಳೆ ಅರುಣ್ ಸಿಂಗ್ ಚುನಾವಣೆಯಲ್ಲಿ ಗೆದ್ದರೆ, ನನ್ನ ಜೀವಕ್ಕಿರುವ ಅಪಾಯ ಹೆಚ್ಚಾಗಲಿದೆ. ಕೂಡಲೇ ಸರ್ಕಾರ ಮತ್ತು ಪಕ್ಷ ಅರುಣ್ ಸಿಂಗ್‍ಗೆ ನೀಡಿರುವ ಟಿಕೆಟ್ ಹಿಂಪಡೆದುಕೊಳ್ಳಬೇಕು. ಕಳಂಕರಹಿತರಿಗೆ ಟಿಕೆಟ್ ನೀಡಬೇಕು. ನನ್ನ ಚಿಕಪ್ಪ ಪೊಲೀಸ್ ಬಂಧನದಲ್ಲಿದ್ದು, ಪೆರೋಲ್ ಗೆ ಅರ್ಜಿ ಸಲ್ಲಿಸಿದ್ದಾರೆ. ಆದ್ರೆ ಕುಲ್‍ದೀಪ್ ಪ್ರಭಾವದಿಂದ ಪೆರೋಲ್ ಸಿಗುತ್ತಿಲ್ಲ ಎಂದು ಸಂತ್ರಸ್ತೆ ಆರೋಪ ಮಾಡಿದ್ದಾರೆ.

    ಸಂತ್ರಸ್ತೆ ಹೇಳಿಕೆ ಬಳಿಕ ಬಿಜೆಪಿ ನೀಡಿದ ಟಿಕೆಟ್ ಹಿಂಪಡೆದುಕೊಂಡಿದೆ. ಅರುಣ್ ಸಿಂಗ್ ನಮ್ಮ ಅಭ್ಯರ್ಥಿ ಅಲ್ಲ, ಶಕುನ್ ಸಿಂಗ್ ಅವರಿಗೆ ಟಿಕೆಟ್ ನೀಡಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರಾಜ್ ಕಿಶೋರ್ ರಾವತ್ ಹೇಳಿದ್ದಾರೆ. ಇದನ್ನೂ ಓದಿ: ಉನ್ನಾವೋ ಕೇಸ್ – ಅತ್ಯಾಚಾರಿ ಶಾಸಕ ಸೆಂಗಾರ್‌ಗೆ ಜೀವಾವಧಿ ಜೈಲು ಶಿಕ್ಷೆ

  • ಉನ್ನಾವೋ ಕೇಸ್ – ಶಾಸಕ ಕುಲದೀಪ್ ಸಿಂಗ್ ಅಪರಾಧಿ

    ಉನ್ನಾವೋ ಕೇಸ್ – ಶಾಸಕ ಕುಲದೀಪ್ ಸಿಂಗ್ ಅಪರಾಧಿ

    – ದೆಹಲಿ ಕೋರ್ಟ್ ತೀರ್ಪು
    – ಡಿ.19ಕ್ಕೆ ಶಿಕ್ಷೆ ಪ್ರಕಟ

    ನವದೆಹಲಿ: ಉಚ್ಚಾಟಿತ ಬಿಜೆಪಿ ಶಾಸಕ, ಕುಲದೀಪ್ ಸಿಂಗ್ ಸೆಂಗಾರ್ 2017ರಲ್ಲಿ ಉನ್ನಾವೋದ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಬೆದರಿಕೆ ಹಾಕಿದ್ದ ಆರೋಪ ಸಾಬೀತಾಗಿದೆ.

    ದೇಶವನ್ನೇ ಬೆಚ್ಚಿ ಬೀಳಿಸಿದ್ದ ಉನ್ನಾವೋ ಅತ್ಯಾಚಾರ ಹಾಗೂ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ತೀಸ್ ಹಜಾರಿ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಪ್ರಕರಣದ ಆರೋಪಿಯಾಗಿದ್ದ ಬಿಜೆಪಿಯ ಉಚ್ಛಾಟಿತ ಶಾಸಕ ಕುಲದೀಪ್ ಸೆಂಗಾರ್ ದೋಷಿ ಎಂದು ತಿಳಿಸಿದೆ. ಅಲ್ಲದೆ ಶಿಕ್ಷೆಯ ಪ್ರಮಾಣವನ್ನು ಡಿಸೆಂಬರ್ 19ರಂದು ಘೋಷಣೆ ಮಾಡಲಾಗುವುದು ಎಂದು ತಿಳಿಸಿದೆ.

    ಸುಧೀರ್ಘ ವಿಚಾರಣೆ ನಡೆಸಿದ ಕೋರ್ಟ್, ಸೆಕ್ಷನ್ 376 (5,6) ಹಾಗೂ ಪೋಕ್ಸೊ ಅಡಿ ದೋಷಿ ಎಂದು ಹೇಳಿದೆ. 2017ರಲ್ಲಿ ಉನ್ನಾವೋ ಮೂಲದ ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆದಿತ್ತು. ಅಲ್ಲದೆ ಸಂತ್ರಸ್ತೆ ಕೋರ್ಟ್ ಗೆ ತೆರಳುತ್ತಿದ್ದ ವೇಳೆ ಕೊಲೆ ಯತ್ನ ನಡೆಸಲಾಗಿತ್ತು. ಈ ಪ್ರಕರಣ ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಪ್ರಕರಣದ ಕುರಿತು ಸಿಬಿಐ ಹಾಗೂ ಆರೋಪಿಗಳ ಪರ ವಕೀಲರಿಂದ ವಾದ ಪ್ರತಿವಾದ ಆಲಿಸಿದ್ದ ಕೋರ್ಟ್ ತೀರ್ಪನ್ನು ಕಾಯ್ದಿರಿಸಿತ್ತು.

    ಇಂದು ತೀಸ್ ಹಜಾರಿ ಕೋರ್ಟ್ ಬಿಜೆಪಿಯ ಉಚ್ಛಾಟಿತ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಅಪರಾಧಿ ಎಂದು ತೀರ್ಪು ನೀಡಿದೆ. ಪ್ರಕರಣ ಮತ್ತೊರ್ವ ಆರೋಪಿ ಶಶಿ ಸಿಂಗ್ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ.

    ಬಿಜೆಪಿಯ ಉಚ್ಚಾಟಿತ ಶಾಸಕನಾಗಿದ್ದ ಕುಲದೀಪ್ ಸಿಂಗ್ ಸೆಂಗಾರ್ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಹಿನ್ನೆಲೆ ಸುಪ್ರೀಂಕೋರ್ಟ್ ಲಕ್ನೋ ನಿಂದ ದೆಹಲಿಯ ತೀಸ್ ಹಜಾರಿ ಕೋರ್ಟ್ ಗೆ ಪ್ರಕರಣವನ್ನು ವರ್ಗಾಯಿಸಿತ್ತು. ಆಗಸ್ಟ್ 5 ರಿಂದ ಪ್ರತಿನಿತ್ಯ ವಿಚಾರಣೆ ನಡೆಸಿದ್ದ ಕೋರ್ಟ್ ಇಂದು ತೀರ್ಪು ನೀಡಿದೆ. ಕುಲದೀಪ್ ಸಿಂಗ್ ಸೆಂಗಾರ್ ವಿರುದ್ಧ ಸೆಕ್ಷನ್ 120 (b), 363,366, 376 ಮತ್ತು ಪೋಕ್ಸೊ ಅಡಿ ಕೇಸ್ ದಾಖಲಿಸಲಾಗಿತ್ತು.

    ಕೋರ್ಟ್ ಅಪರಾಧಿ ಎಂದು ಘೋಷಿಸುತ್ತಿದ್ದಂತೆ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ಕುಲದೀಪ್ ಸಿಂಗ್ ಸೆಂಗಾರ್ 1990ರಲ್ಲಿ ಕಾಂಗ್ರೆಸ್‍ನಲ್ಲಿದ್ದರೆ, 2002ರಲ್ಲಿ ಬಹುಜನ ಸಮಾಜ ಪಕ್ಷ(ಬಿಎಸ್‍ಪಿ) ಸೇರಿ ಶಾಸಕನಾಗಿ ಆಯ್ಕೆಯಾಗಿದ್ದರು. ನಂತರ ಸಮಾಜವಾದಿ ಪಕ್ಷ ಸೇರಿ 2007, 2012 ರಲ್ಲಿ ಜಯಗಳಿಸಿದ್ದು ನಂತರ 2017ರಲ್ಲಿ ಬಿಜೆಪಿ ಸೇರ್ಪಡೆಯಾಗಿ ಜಯಗಳಿಸಿದ್ದರು.

    ಉನ್ನಾವೋ ಪ್ರಕರಣದ ತನಿಖೆ ನಡೆಸಿದ್ದ ಕೇಂದ್ರಿಯ ತನಿಖಾ ದಳ (ಸಿಬಿಐ) ದೆಹಲಿ ಜಿಲ್ಲಾ ನ್ಯಾಯಾಲಯಕ್ಕೆ ಚಾರ್ಜ್‍ಶೀಟ್ ಸಲ್ಲಿಸಿದ ವೇಳೆ ಕುಲದೀಪ್ ಸಿಂಗ್ ಸೆಂಗಾರ್ ಅವರು ಅತ್ಯಾಚಾರ ಮಾಡಿದ ಒಂದು ವಾರದ ನಂತರ ಅದೇ ಸಂತ್ರಸ್ತೆಯನ್ನು ಇನ್ನೂ ಮೂವರು ಉನ್ನಾವೋದಿಂದ ಅಪಹರಿಸಿ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎಂದು ಉಲ್ಲೇಖಿಸಿತ್ತು.

    ಸಂತ್ರಸ್ತೆಯನ್ನು ಅಪಹರಿಸಿ ಅತ್ಯಾಚಾರ ಮಾಡಿದ ಮೂವರನ್ನು ನರೇಶ್ ತಿವಾರಿ, ಬ್ರಿಜೇಶ್ ಯಾದವ್ ಸಿಂಗ್ ಮತ್ತು ಶುಭಮ್ ಸಿಂಗ್ ಎಂದು ಗುರುತಿಸಲಾಗಿತ್ತು. ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾದ ಶುಭಂ ಸಿಂಗ್ ಬಿಜೆಪಿ ಮಾಜಿ ಶಾಸಕ ಕುಲದೀಪ್ ಸಿಂಗ್ ಅವರ ಸಹವರ್ತಿ ಶಶಿ ಸಿಂಗ್ ಅವರ ಪುತ್ರನಾಗಿದ್ದು, ಕುಲದೀಪ್ ಯಾದವ್ ಅವರೇ ಇದನ್ನು ಮಾಡಿಸಿದ್ದಾರೆ ಎಂದು ಆರೋಪಿಸಲಾಗಿತ್ತು.

    ಅಪ್ರಾಪ್ತೆಯನ್ನು ಜೂನ್ 11, 2017 ರಂದು ಉನ್ನಾವೊದಿಂದ ಅಪಹರಿಸಿ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಈ ಪ್ರಕರಣದಲ್ಲಿ ಶಶಿ ಸಿಂಗ್ ಕೂಡ ಸಹ ಆರೋಪಿಯಾಗಿದ್ದ. ಶಶಿ ಸಿಂಗ್ ಆಮಿಷವೊಡ್ಡಿ ಕುಲದೀಪ್ ಸಿಂಗ್ ನಿವಾಸಕ್ಕೆ ಸಂತ್ರಸ್ತೆಯನ್ನು ಕರೆ ತಂದ ಬಳಿಕ ಜೂನ್ 4, 2017 ರಂದು ಸಂತ್ರಸ್ತೆಯನ್ನು ಕುಲದೀಪ್ ಸಿಂಗ್ ಅತ್ಯಾಚಾರ ಮಾಡಿದ್ದಾರೆ ಎಂದು ಉಲ್ಲೇಖಿಸಲಾಗಿತ್ತು. ರೇಪ್ ಕೇಸ್ ದೇಶಾದ್ಯಂತ ಸುದ್ದಿಯಾದ ಬಳಿಕ ಬಿಜೆಪಿ ಕುಲ್‍ದೀಪ್ ಸಿಂಗ್ ಸೆಂಗಾರ್ ಅವರನ್ನು ಪಕ್ಷದಿಂದ ಉಚ್ಛಾಟಿಸಿತ್ತು.

  • ಶ್ರೀರಾಮನಿಂದ್ಲೂ ರೇಪ್ ಪ್ರಕರಣಗಳನ್ನು ತಡೆಯಲು ಸಾಧ್ಯವಿಲ್ಲ- ಬಿಜೆಪಿ ಶಾಸಕ ಸುರೇಂದ್ರ ಸಿಂಗ್

    ಶ್ರೀರಾಮನಿಂದ್ಲೂ ರೇಪ್ ಪ್ರಕರಣಗಳನ್ನು ತಡೆಯಲು ಸಾಧ್ಯವಿಲ್ಲ- ಬಿಜೆಪಿ ಶಾಸಕ ಸುರೇಂದ್ರ ಸಿಂಗ್

    ಲಕ್ನೋ: ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿದ್ದು, ಮರ್ಯಾದಾ ಪುರುಷ ಶ್ರೀರಾಮನಿಂದಲೂ ಇದಕ್ಕೆ ಅಂತ್ಯ ಹಾಡಲು ಸಾಧ್ಯವಿಲ್ಲ ಅಂತ ಉತ್ತರಪ್ರದೇಶದ ಬೈರಿಯಾ ಜಿಲ್ಲೆಯ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಉತ್ತರ ಪ್ರದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಜಾಸ್ತಿಯಾಗುತ್ತಿವೆ ಎಂಬ ವಿಚಾರ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಸ್ವತಃ ಶ್ರೀರಾಮನೇ ಭೂಮಿಗೆ ಬಂದ್ರೂ ಅತ್ಯಾಚಾರದಂತಹ ಪ್ರಕರಣಗಳನ್ನು ತಡೆಯಲು ಸಾಧ್ಯವಿಲ್ಲ. ಈ ಮಾತನ್ನು ನಾನು ಸಂಪೂರ್ಣ ವಿಶ್ವಾಸದಿಂದ ಹೇಳುತ್ತಿದ್ದೇನೆ ಅಂದ್ರು.

    ಅತ್ಯಾಚಾರ ಎಂಬುದು ನೈಸರ್ಗಿಕ ಮಾಲಿನ್ಯವಾಗಿದೆ. ತಮ್ಮ ಕುಟುಂಬದವರಂತೆ ತಮ್ಮ ಸಹೋದರಿಯರಂತೆ ಇತರ ಕುಟುಂಬದ ಹೆಣ್ಣುಮಕ್ಕಳನ್ನು ಪರಿಗಣಿಸುವುದು ಜನರ ಜವಾಬ್ದಾರಿ. ಸಮಾಜದಲ್ಲಿ ಕೆಲವೊಂದು ಉತ್ತಮ ಮೌಲ್ಯಗಳನ್ನು ಹುಟ್ಟುಹಾಕುವ ಮೂಲಕ ಮಾತ್ರ ಇಂತಹ ಘಟನೆಗಳನ್ನು ನಿಯಂತ್ರಿಸಬಹುದೇ ಹೊರತು ಸಂವಿಧಾನದಿಂದ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

    ಸಿಂಗ್ ಅವರು ವಿವಾದಾತ್ಮಕ ಹೇಳಿಕೆ ನೀಡುವುದು ಇದೇ ಮೊದಲೇನಲ್ಲ. ಈ ಹಿಂದೆ `ಸರ್ಕಾರಿ ಅಧಿಕಾರಿಗಳಿಗಿಂತ ವೇಶ್ಯೆಯರೇ ಉತ್ತಮ’ ಎಂದು ಹೇಳಿಕೆ ನೀಡಿ ಸುದ್ದಿಯಾಗಿದ್ದರು.

    ಅತ್ಯಾಚಾರ ಪ್ರಕರಣಗಳಿಗೆ ಪೋಷಕರು ಮತ್ತು ಹದಿಹರೆಯದವರು ಸ್ಮಾಟ್ ಫೋನ್ ಗಳನ್ನು ಬಳಸುವುದೇ ಪ್ರಮುಖ ಕಾರಣ ಎಂದು ಆರೋಪಿಸಿದ್ದರು. ಇತ್ತೀಚೆಗೆ ಉನ್ನಾವೋ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿ ಸಿಟಾಪುರ ಜೈಲಿನಲ್ಲಿರುವ ಬಿಜೆಪಿ ಶಾಸಕ ಕುಲ್ದೀಪ್ ಸಿಂಗ್ ಸೆಂಗಾರ್, ಮೂರು ಮಕ್ಕಳ ತಾಯಿಯನ್ನು ಯಾರೂ ಅತ್ಯಾಚಾರ ಮಾಡಬಾರದು. ಅದು ಸಾಧ್ಯವಿಲ್ಲ ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು.

  • ಉನ್ನಾವೋ ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ಶಾಸಕ ಭಾಗಿ: ಸಿಬಿಐ

    ಉನ್ನಾವೋ ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ಶಾಸಕ ಭಾಗಿ: ಸಿಬಿಐ

    ದೆಹಲಿ: ಉನ್ನಾವೋದ 17 ವರ್ಷದ ಬಾಲಕಿ ಮೇಲೆ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಅತ್ಯಾಚಾರ ಎಸಗಿದ್ದಾನೆ ಎಂದು ಬಂಧನಕ್ಕೆ ಒಳಗಾದ ಸಹಾಯಕ ತಿಳಿಸಿದ್ದಾನೆ ಎಂದು ಸಿಬಿಐ ತಿಳಿಸಿದೆ.

    ಮುಂದೆ ಉದ್ಯೋಗ ನೀಡುತ್ತೇನೆ ಎಂದು ಆಶ್ವಾಸನೆ ನೀಡಿ ಕುಲದೀಪ್ ಸಿಂಗ್ ಸೆಂಗಾರ್ ಮತ್ತು ಸಂಗಡಿಗರು ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಸಿಬಿಐ ಮೂಲಗಳನ್ನು ಆಧಾರಿಸಿ ಮಾಧ್ಯಮಗಳು ಸುದ್ದಿ ಪ್ರಕಟಿಸಿವೆ.

    ಈ ಸಂಬಂಧ ಕುಲದೀಪ್ ಸಹಾಯಕನನ್ನು ಸಿಬಿಐ ವಶಕ್ಕೆ ಪಡೆದಿತ್ತು. ತೀವ್ರ ತನಿಖೆ ನಡೆಸಿದ ವೇಳೆ ಆರೋಪಿ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    2017ರ ಜೂ.4ರಂದು ಉತ್ತರಪ್ರದೇಶದ ಮಖಿ ಗ್ರಾಮದಲ್ಲಿನ ಮನೆಯೊಂದರಲ್ಲಿ ಕುಲದೀಪ್ ಬಾಲಕಿಯನ್ನು ಅತ್ಯಾಚಾರ ಮಾಡಿದ್ದಾನೆ. ಈ ವೇಳೆ ತಾನು ಬಾಗಿಲು ಕಾಯುತ್ತಿದ್ದೆ ಎಂದು ಒಪ್ಪಿಕೊಂಡಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ. ಈ ಸಂಬಂಧ ಶಾಸಕನ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಬಾಲಕಿಯನ್ನು ಮತ್ತೆ ಜೂ.11 ರಂದು ಶುಭಾಸಿಂಗ್ ಅವಧ್ ನಾರಾಯಣ ಹಾಗೂ ಬ್ರಿಜೇಶ್ ಯಾದವ್ ಅಪಹರಿಸಿದ್ದು, ಜೂ. 19ರ ವರೆಗೆ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿರುವ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿದೆ.

    ತನ್ನ ಮೇಲೆ ಅತ್ಯಾಚಾರವಾಗಿದೆ ಎಂದು ಬಾಲಕಿ ಜೂ.20 ರಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ, ಶಾಸಕ ಕುಲದೀಪ್ ಸಿಂಗ್ ವಿರುದ್ಧ ಎಫ್‍ಐಆರ್ ದಾಖಲು ಮಾಡಿಕೊಂಡಿರಲಿಲ್ಲ. ಅಲ್ಲದೇ, ಸ್ಥಳೀಯ ಪೊಲೀಸರು ನಡೆಸಿದ ತನಿಖೆಯ ಬಳಿಕ ಸಲ್ಲಿಸಿದ ಆರೋಪ ಪಟ್ಟಿಯಲ್ಲಿಯೂ ಕುಲದೀಪ್ ಹೆಸರಿರಲಿಲ್ಲ. ಈ ಪ್ರಕರಣ ದೇಶದೆಲ್ಲೆಡೆ ಚರ್ಚೆಗೆ ಗ್ರಾಸವಾದ ಸರ್ಕಾರ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿತ್ತು. ನಂತರ ಸಿಬಿಐ ಶಾಸಕನ ವಿರುದ್ಧ ಎಫ್‍ಐಆರ್ ದಾಖಲಿಸಿ ಬಂಧಿಸಿತ್ತು.

    ಕುಲದೀಪ್ ಪ್ರಭಾವಿ ವ್ಯಕ್ತಿಯಾಗಿದ್ದರಿಂದ, ಬಾಲಕಿ ವೈದ್ಯಕೀಯ ತಪಾಸಣೆ ನಡೆಸುವಲ್ಲಿ ಉದ್ದೇಶಪೂರ್ವಕವಾಗಿ ತಡ ಮಾಡಲಾಗಿದೆ. ಅಲ್ಲದೇ, ಯುವತಿ ಧರಿಸಿದ್ದ ಉಡುಗೆಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಲ್ಲ ಎಂದು ಸಿಬಿಐ ಅಧಿಕಾರಿಗಳು ಹೇಳಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮೂರು ಎಫ್‍ಐಆರ್ ದಾಖಲು ಮಾಡಿದೆ. ಕುಲದೀಪ್ ಹಾಗೂ ಆತನ ಸಹಚರನ ವಿರುದ್ಧ ಒಂದು ಎಫ್‍ಐಆರ್ ದಾಖಲಾಗಿದ್ದರೆ, ಸಂತ್ರಸ್ತೆಯ ಕುಟುಂಬ ಯೋಗಿ ಆದಿತ್ಯನಾಥ್ ನಿವಾಸದ ಮುಂದೆ ಪ್ರತಿಭಟನೆ ನಡೆಸುವ ವೇಳೆ ನಡೆದ ಗಲಾಟೆಯ ಸಂಬಂಧಿಸಿದಂತೆ ಸ್ಥಳೀಯರ ವಿರುದ್ಧ ಎರಡನೇ ಎಫ್‍ಐಆರ್ ದಾಖಲಾಗಿದೆ. ನ್ಯಾಯಾಂಗ ಬಂಧನದಲ್ಲಿದ್ದ ಸಂತ್ರಸ್ತೆಯ ತಂದೆ ಮೃತಪಟ್ಟ ಹಿನ್ನೆಲೆಯಲ್ಲಿ ಮೂರನೇ ಎಫ್‍ಐಆರ್ ದಾಖಲಾಗಿದೆ.

  • ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣ ಹೆಚ್ಚಾಗಲು ಪೋಷಕರೇ ಕಾರಣ: ಯುಪಿ ಬಿಜೆಪಿ ಶಾಸಕ

    ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣ ಹೆಚ್ಚಾಗಲು ಪೋಷಕರೇ ಕಾರಣ: ಯುಪಿ ಬಿಜೆಪಿ ಶಾಸಕ

    ಲಕ್ನೋ: ಮೊಬೈಲ್ ಬಳಕೆ ಮಾಡುವ ಮಹಿಳೆಯರ ಮೇಲೆ ಅತ್ಯಾಚಾರವಾಗಿರುವ ಹೆಚ್ಚು ಪ್ರಕರಣಗಳು ಕಂಡುಬಂದಿವೆ. ಅಲ್ಲದೇ, ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣ ಹೆಚ್ಚಾಗುವುದಕ್ಕೆ ಪೋಷಕರೇ ಕಾರಣ ಎಂದು ಉತ್ತರಪ್ರದೇಶದ ಬಾಲಿಯಾ ಕ್ಷೇತ್ರದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    15 ವರ್ಷದ ಒಳಗಿನ ಮಕ್ಕಳನ್ನು ಕಟ್ಟುನಿಟ್ಟಾಗಿ ಬೆಳೆಸಬೇಕು. ಅಲ್ಲದೇ, ಅವರಿಗೆ ಮುಕ್ತವಾಗಿ ಸಂಚರಿಸಲು ಹಾಗೂ ಸ್ಮಾರ್ಟ್ ಫೋನ್ ಬಳಕೆಗೆ ಅವಕಾಶ ನೀಡಬಾರದು ಎಂದಿದ್ದಾರೆ.

    ಈ ಹಿಂದೆ ಉನ್ನವೋ ಅತ್ಯಾಚಾರ ಸಂತ್ರಸ್ತೆ ಸುಳ್ಳು ಅತ್ಯಾಚಾರ ಕೇಸ್ ದಾಖಲಿಸಿದ್ದಾಳೆ ಎಂದು ಸುರೇಂದ್ರ ಸಿಂಗ್ ಹೇಳಿದ್ದರು.”ಈ ಹಿಂದೆ ಆಕೆ ಯುವಕನ ವಿರುದ್ಧ ಸುಳ್ಳು ಅತ್ಯಾಚಾರದ ಕೇಸ್ ದಾಖಲಿಸಿದ್ದಳು. ಈಕೆಯ ದೂರಿನ ಪರಿಣಾಮ ಆತ 6 ತಿಂಗಳು ಜೈಲು ಶಿಕ್ಷೆಯನ್ನು ಅನುಭವಿಸುವಂತಾಗಿತ್ತು” ಎಂದು ಹೇಳಿಕೆ ನೀಡಿದ್ದರು.

    ಕಳೆದ ಏಪ್ರಿಲ್‍ನಲ್ಲಿ ಉನ್ನಾವೋದ ಯುವತಿ ಮೇಲಿನ ಅತ್ಯಾಚಾರ ಆರೋಪದಡಿ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಅವರನ್ನು ಬಂಧಿಸಲಾಗಿದೆ. ಸೆಂಗರ್ ಮತ್ತು ಅತ್ಯಾಚಾರ ಸಂತ್ರಸ್ತೆಯನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕಿದೆ. ತನಿಖೆ ನಂತರ ಸತ್ಯ ಹೊರ ಬರಲಿದೆ. ಆರೋಪ ಸಾಬೀತಾದರೆ ಶಿಕ್ಷೆ ವಿಧಿಸಬೇಕು ಎಂದರು.

    ಸೆಂಗರ್ ಮತ್ತು ಆತನ ಸಹಚರರು ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾರೆ. ನಮಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ ಸಂತ್ರಸ್ತೆಯ ಕುಟುಂಬಸ್ಥರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಿವಾಸದ ಮುಂದೆ ಪ್ರತಿಭಟನೆ ನಡೆಸಿದ್ದರು. ಇದೇ ವೇಳೆ ಅವರು ಆತ್ಮಹತ್ಯಗೆ ಯತ್ನಿಸಿದ್ದರು. ಕೂಡಲೇ ಯುವತಿ ಹಾಗೂ ಕುಟುಂಬದವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪೊಲೀಸರು ವಶಕ್ಕೆ ಪಡೆದಿದ್ದ ಸಂತ್ರಸ್ತೆಯ ತಂದೆ ತೀವ್ರ ಗಾಯದಿಂದಾಗಿ ಠಾಣೆಯಲ್ಲಿಯೇ ಮೃತಪಟ್ಟಿದ್ದರು.

    ತನಿಖೆಯ ಬಗ್ಗೆ ಸಾರ್ವಜನಿಕ ವಲಯದಿಂದ ಭಾರೀ ಟೀಕೆ ಕೇಳಿ ಬಂದ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಏಪ್ರಿಲ್ 12 ರಂದು ಸಿಬಿಐಗೆ ವಹಿಸಿದೆ.

  • ಉನ್ನಾವೋ ರೇಪ್ ಪ್ರಕರಣ: ಸಿಬಿಐನಿಂದ ಬಿಜೆಪಿ ಶಾಸಕನ ವಿಚಾರಣೆ

    ಉನ್ನಾವೋ ರೇಪ್ ಪ್ರಕರಣ: ಸಿಬಿಐನಿಂದ ಬಿಜೆಪಿ ಶಾಸಕನ ವಿಚಾರಣೆ

    ಲಕ್ನೋ: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಅವರನ್ನು ಸಿಬಿಐ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.

    ಕಳೆದ ವರ್ಷ ಉತ್ತರಪ್ರದೇಶದ ಉನ್ನಾವೋದಲ್ಲಿ 17 ವರ್ಷದ ಯುವತಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರನ್ನು ವಶಕ್ಕೆ ಪಡೆದು ಈಗ ಸಿಬಿಐನ ಲಕ್ನೋ ಕಚೇರಿಯಲ್ಲಿ ವಿಚಾರಣೆ ನಡೆಯುತ್ತಿದೆ.

    ಇಂದು ನಸುಕಿನ ಜಾವ 4 ಗಂಟೆ ಸುಮಾರಿಗೆ ಲಕ್ನೋದ ಇಂದಿರಾ ನಗರದಲ್ಲಿರೋ ಮನೆಗೆ ಸಿಬಿಐ ಅಧಿಕಾರಿಗಳು ದಾಳಿ ಮಾಡಿ ಸೆಂಗಾರ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದರು. ಬಳಿಕ ಹಝರತ್ ಗಂಗ್ ನಲ್ಲಿರುವ ಸಿಬಿಐ ಕಚೇರಿಗೆ ಕರೆದೊಯ್ದಿದ್ದರು.

    ಕಳೆದ ವಾರವಷ್ಟೇ ಸಂತ್ರಸ್ತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮನೆ ಮುಂದೆ ತನಗೆ ನ್ಯಾಯ ದೊರಕಿಸಿ ಕೊಡುವಂತೆ ಆಗ್ರಹಿಸಿ ಧರಣಿ ನಡೆಸಿದ್ದರು. ಅಲ್ಲದೇ ಇದೇ ಸಂದರ್ಭದಲ್ಲಿ ಆತ್ಮಹತ್ಯೆಗೂ ಯತ್ನಿಸಿದ್ದರು. ಕೂಡಲೇ ಯುವತಿ ಹಾಗೂ ಆಕೆಯ ಕುಟುಂಬದವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಈ ನಡುವೆ ಸಂತ್ರಸ್ತೆಯ ತಂದೆ ಪೊಲೀಸ್ ಕಸ್ಟಡಿಯಲ್ಲಿ ತೀವ್ರ ಗಾಯಗಳಾಗಿ ಮೃತಪಟ್ಟಿದ್ದರು. ಈ ಪ್ರಕರಣ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು.

    ಧರಣಿ ವೇಳೆ ಆರೋಪಿ ಸೆಂಗಾರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅಲ್ಲದೇ ಪ್ರಕಣಕ್ಕೆ ಸಂಬಂಧಿಸಿದಂತೆ ಕೂಡಲೇ ಆತನಿಗೆ ಶಿಕ್ಷೆ ನಿಡಬೇಕು ಎಂದು ಸಂತ್ರಸ್ತೆ ಹೇಳಿದ್ದರು.

    ಇಡೀ ಪ್ರಕರಣದ ತನಿಖೆ ನಡೆಸುವಂತೆ ರಾಜ್ಯ ಪೊಲೀಸರು ಸಿಬಿಐ ಕೈಗೆ ಗುರುವಾರ ಹಸ್ತಾಂತರಿಸಿದ್ದರು. ಹೀಗಾಗಿ ಮಾಖಿ ಪೊಲೀಸ್ ಠಾಣೆಯ ಪೊಲೀಸರೊಂದಿಗೆ ಸಿಬಿಐ ತಂಡ ಕೂಡಲೇ ಉನ್ನಾವೋ ಗೆ ತೆರಳಿ ಸಂತ್ರಸ್ತೆ ಹಾಗೂ ಆಕೆಯ ಕುಟುಂಬಸ್ಥರ ಹೇಳಿಕೆಯನ್ನು ಪಡೆದುಕೊಂಡಿದ್ದರು. ಇದೇ ವೇಳೆ ಸಂತ್ರಸ್ತೆಯ ತಂದೆಗೆ ಚಿಕಿತ್ಸೆ ನೀಡಿದ ವೈದ್ಯರು ಕೂಡ ಅವರಿಗೆ ಸಾಥ್ ನೀಡಿದ್ದರು.