Tag: KulbhushanJadhav

  • ಜಾಗತಿಕ ನ್ಯಾಯಾಲಯದಲ್ಲಿ ಪಾಕಿಸ್ತಾನಕ್ಕೆ ಕಪಾಳ ಮೋಕ್ಷವಾದ ಕಥೆಯನ್ನು ಓದಿ

    ಜಾಗತಿಕ ನ್ಯಾಯಾಲಯದಲ್ಲಿ ಪಾಕಿಸ್ತಾನಕ್ಕೆ ಕಪಾಳ ಮೋಕ್ಷವಾದ ಕಥೆಯನ್ನು ಓದಿ

    ಹೇಗ್: ಪಾಕಿಸ್ತಾನಕ್ಕೆ ಭಾರೀ ಮುಖಭಂಗವಾಗಿದ್ದು, ನೆದರ್‍ಲ್ಯಾಂಡಿನ ಹೇಗ್ ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯ ಭಾರತದ ಮನವಿಯನ್ನು ಪುರಸ್ಕರಿಸಿ ಕುಲಭೂಷಣ್ ಜಾಧವ್‍ಗೆ ನೀಡಲಾಗಿದ್ದ ಗಲ್ಲು ಶಿಕ್ಷಗೆ ತಾತ್ಕಾಲಿಕ ತಡೆಯನ್ನು ನೀಡಿದೆ.

    ಭಾರತದ ಕಾಲಮಾನ ಮಧ್ಯಾಹ್ನ 3.30ಕ್ಕೆ ಮುಖ್ಯ ನ್ಯಾಯಾಧೀಶ ರೋನಿ ಅಬ್ರಾಹಂ ತೀರ್ಪು ಓದಲು ಆರಂಭಿಸಿ ಗಲ್ಲು ಶಿಕ್ಷೆಗೆ ತಡೆ ನೀಡಿದರು. ಹೀಗಾಗಿ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿರುವ ಪ್ರಮುಖ ಅಂಶವನ್ನು ನೀಡಲಾಗಿದೆ

    ಆರಂಭದಲ್ಲೇ ಹಿನ್ನಡೆ: ಪಾಕಿಸ್ತಾನ ತನ್ನ ವಾದದಲ್ಲಿ ಮಿಲಿಟರಿ ಕೋರ್ಟ್ ಈ ಶಿಕ್ಷೆಯನ್ನು ನೀಡಿದೆ. ಮಿಲಿಟರಿ ಕೋರ್ಟ್ ವಿಧಿಸಿರುವ ಶಿಕ್ಷೆ ಅಂತಾರಾಷ್ಟ್ರೀಯ ಕೋರ್ಟ್ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಹೇಳಿತ್ತು. ಈ ವಿಚಾರವನ್ನು ತೀರ್ಪು ಓದುವ ಆರಂಭದಲ್ಲೇ ಉಲ್ಲೇಖಿಸಿದ್ದ ನ್ಯಾಯಾಧೀಶರು, ವಿಯೆನ್ನಾ ಒಪ್ಪಂದಕ್ಕೆ ನೀವು ಸಹಿ ಹಾಕಿದ್ದೀರಿ. ಸಹಿ ಹಾಕಿದ ಕಾರಣ ನೀವು ಆ ಒಪ್ಪಂದದಂತೆ ನಡೆದುಕೊಳ್ಳಬೇಕು. ಅದನ್ನು ಬಿಟ್ಟು ಈ ಪ್ರಕರಣ ಈ ಕೋರ್ಟ್ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ವಿಯೆನ್ನಾ ಒಪ್ಪಂದದ 1ನೇ ವಿಧಿ ಪ್ರಕಾರ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಅಧಿಕಾರವಿದೆ. ಜಾಧವ್ ಬಂಧನದ ಬಗ್ಗೆ ಭಾರತಕ್ಕೆ ಮಾಹಿತಿ ನೀಡದಿರುವುದು, ರಾಜತಾಂತ್ರಿಕ ನೆರವಿಗೆ ಅವಕಾಶ ನೀಡದೇ ಇರುವುದು ವಿಯೆನ್ನಾ ಒಪ್ಪಂದ ವ್ಯಾಪ್ತಿಗೆ ಒಳಪಡುತ್ತದೆ. ಅಷ್ಟೇ ಅಲ್ಲೇ ಈ ಪ್ರಕರಣವನ್ನು ಇತ್ಯರ್ಥ ಪಡಿಸಲು ಈ ನ್ಯಾಯಾಲಯಕ್ಕೆ ಅಧಿಕಾರ ಇದೆ ಎಂದು ಹೇಳಿದರು.

    ಭಾರತ ಪ್ರಜೆ: ಭಾರತ ಮತ್ತು ಪಾಕಿಸ್ತಾನಗಳು ಎರಡೂ ಬಂಧನಕ್ಕೊಳಗಾಗಿರುವ ಕುಲಭೂಷಣ್ ಜಾಧವ್ ಭಾರತ ಪ್ರಜೆ ಎನ್ನುವುದನ್ನು ಹೇಳಿಕೊಂಡಿದ್ದು ಈ ವಿಚಾರವನ್ನು ಕೋರ್ಟ್ ಒಪ್ಪಿಕೊಂಡಿದೆ.

    ರಾಜತಾಂತ್ರಿಕ ನೆರವು: ವಿಯೆನ್ನಾ ಒಪ್ಪಂದದ ಪ್ರಕಾರ ಕುಲಭೂಷಣ್‍ಗೆ ರಾಜತಾಂತ್ರಿಕ ನೆರವು ನೀಡಲು ಅವಕಾಶ ಮಾಡಿಕೊಡಬೇಕಿತ್ತು. ಈ ಕುರಿತು 16 ಬಾರಿ ನಾವು ಮನವಿ ಮಾಡಿದ್ದರೂ ಪಾಕ್ ತಿರಸ್ಕರಿಸಿದೆ ಎಂದು ಭಾರತ ವಾದಿಸಿತ್ತು. ಈ ಅಂಶಕ್ಕೆ ಸಂಬಂಧಿಸಿದಂತೆ ಕೋರ್ಟ್, ಒಬ್ಬ ವ್ಯಕ್ತಿ ಒಂದು ದೇಶದಲ್ಲಿ ಬಂಧಿತನಾದರೆ ಆತನ ಅಹವಾಲುಗಳನ್ನು ಕೇಳಿಕೊಳ್ಳಲು ಆ ದೇಶಕ್ಕೆ ಅಧಿಕಾರ ಇದೆ ಎಂದು ಹೇಳುವ ವಿಯೆನ್ನಾ ಒಪ್ಪಂದಕ್ಕೆ ನೀವು ಸಹಿ ಹಾಕಿದ್ದೀರಿ. ಈ ಒಪ್ಪಂದವನ್ನು ಉಲ್ಲಂಘಿಸಿ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ನೀವು ವಿಯೆನ್ನಾ ಒಪ್ಪಂದಂತೆ ರಾಜತಾಂತ್ರಿಕ ಸಹಾಯವನ್ನು ನೀಡಲು ಅನುಮತಿ ನೀಡಬೇಕು ಎಂದು ಕೋರ್ಟ್ ಪಾಕಿಸ್ತಾನಕ್ಕೆ ಸೂಚಿಸಿತು.

    ರಕ್ಷಣೆಯ ಮಾಹಿತಿ ನೀಡಿ: ಪಾಕಿಸ್ತಾನ ಜಾಧವ್ ಅವರ ಸಾವನ್ನು ಬಯಸುತ್ತಿದೆ ಎನ್ನುವ ವಿಚಾರವನ್ನು ತಿಳಿದ ಭಾರತ ಜಾಧವ್ ರಕ್ಷಣೆಯ ವಿಚಾರವನ್ನು ಪ್ರಸ್ತಾಪ ಮಾಡಿತ್ತು. ಯಾಕೆಂದರೆ ಗಲ್ಲು ಶಿಕ್ಷೆ ಅಲ್ಲದೇ ಹೋದರೂ ಬೇರೆ ಯಾರೋ ಒಬ್ಬ ವ್ಯಕ್ತಿ, ಖೈದಿಯ ಮೂಲಕ ಜಾಧವ್ ಅವರನ್ನು ಪಾಕ್ ಹತ್ಯೆ ಮಾಡಿದರೆ ಏನು ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ, ವಿಚಾರಣೆ ಪೂರ್ಣಗೊಳ್ಳುವವರೆಗೂ ಜಾಧವ್ ಅವರ ಪ್ರಾಣಕ್ಕೆ ಅಪಾಯ ಇರುವ ಸಾಧ್ಯತೆಯಿದೆ. ಹೀಗಾಗಿ ಅವರನ್ನು ರಕ್ಷಿಸಬೇಕು ಎಂದು ಮನವಿ ಮಾಡಿತ್ತು. ಈ ಮನವಿಯನ್ನು ಪುರಸ್ಕರಿಸಿದ ಕೋರ್ಟ್ ಜಾಧವ್ ಅವರ ರಕ್ಷಣೆಗೆ ಸಂಬಂಧಿಸಿದಂತೆ ನೀವು ಏನು ಕ್ರಮವನ್ನು ತೆಗೆದುಕೊಂಡಿದ್ದೀರಿ ಎಂದು ಪಾಕಿಗೆ ಪ್ರಶ್ನಿಸಿ ಅದಕ್ಕೆ ಸಂಬಂಧಿಸಿ ವಿವರವನ್ನು ನೀಡಿ ಎಂದು ಸೂಚಿಸಿದೆ.

    ವಿವಾದಾತ್ಮಕವಾಗಿದೆ: ಜಾಧವ್ ಅವರು ಇರಾಕ್‍ನಲ್ಲಿ ಉದ್ಯಮ ನಡೆಸುತ್ತಿರುವ ಪಾಕಿಸ್ತಾನ ಕಿಡ್ನಾಪ್ ಮಾಡಿದೆ. ಅವರು ರಾ ಏಜೆಂಟ್ ಅಲ್ಲ ಎಂದು ಭಾರತ ಹೇಳುತ್ತಾ ಬಂದಿದ್ದರೂ ಪಾಕಿಸ್ತಾನ ತನ್ನ ಮೊಂಡು ವಾದವನ್ನು ಕೋರ್ಟ್ ನಲ್ಲೂ ಮುಂದುವರಿಸಿತ್ತು. ಈ ವಿಚಾರವನ್ನು ತೀರ್ಪಿನಲ್ಲಿ ಪ್ರಸ್ತಾಪಿಸಿದ ಕೋರ್ಟ್, ಜಾಧವ್ ಬಂಧನ ಎಲ್ಲಿ ಆಗಿದೆ ಎಂಬ ಬಗ್ಗೆಯೇ ವಿವಾದವಿದೆ ಎಂದು ಅಭಿಪ್ರಾಯಪಟ್ಟಿದೆ.

    ಗಲ್ಲು ಶಿಕ್ಷೆ ನೀಡುವಂತಿಲ್ಲ: ವಿಯೆನ್ನಾ ಒಪ್ಪಂದ ಉಲ್ಲಂಘನೆ, ಅಂತಾರಾಷ್ಟ್ರೀಯ ನ್ಯಾಯಾಲಯದ ವ್ಯಾಪ್ತಿಗೆ ಈ ಪ್ರಕರಣ ಬರುವುದಿಲ್ಲ ಎಂದು ನೀವು ವಾದ ಮಂಡಿಸಿರುವುದನ್ನು ನೋಡಿದಾಗ ಜಾಧವ್ ಅವರಿಗೆ ಗಲ್ಲು ಶಿಕ್ಷೆ ವಿಧಿಸಲು ಮುಂದಾಗಿದ್ದೀರಿ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಹೀಗಾಗಿ ಈ ಪ್ರಕರಣದ ವಿಚಾರಣೆ ಮುಗಿದು ಅಂತಿಮ ತೀರ್ಪು ಬರುವವರೆಗೂ ಜಾಧವ್ ಅವರಿಗೆ ಗಲ್ಲು ಶಿಕ್ಷೆ ವಿಧಿಸುವಂತಿಲ್ಲ ಎಂದು ಪಾಕಿಸ್ತಾನಕ್ಕೆ ಕೋರ್ಟ್ ಆದೇಶಿಸಿತು.

    ಭಾರತದ ವಾದ ಸಮ್ಮತವೇ? ವಿಯೆನ್ನಾ ಒಪ್ಪಂದ ವಿಧಿ 36ರ ಪ್ರಕಾರ ಅನ್ಯ ದೇಶದ ವ್ಯಕ್ತಿಯನ್ನು ಬಂಧಿಸಿದರೆ ಆ ಬಗ್ಗೆ ಯಾವುದೇ ವಿಳಂಬವಿಲ್ಲದೇ ಮಾಹಿತಿ ನೀಡಬೇಕು ಮತ್ತು ರಾಜತಾಂತ್ರಿಕ ನೆರವನ್ನು ಬಂಧಿತನ ಹಕ್ಕು ಎಂದು ಕೋರ್ಟ್ ಹೇಳಿತು.

    ತುರ್ತು ವಿಚಾರಣೆ ಅಗತ್ಯ ಯಾಕೆ? ಜಾಧವ್ ಮರಣ ದಂಡನೆ ಶಿಕ್ಷೆಗೆ ಒಳಪಟ್ಟಿದ್ದಾರೆ. ಹೀಗಾಗಿ ಯಾವಾಗ ಬೇಕಾದರೂ ಗಲ್ಲಿಗೇರಿಸಬಹುದು ಎಂಬ ಭಾರತದ ಆತಂಕದಿಂದಾಗಿ ಪ್ರಕರಣದ ತುರ್ತು ವಿಚಾರಣೆಗೆ ಅಗತ್ಯವಿದೆ. ಆಗಸ್ಟ್ 2017ರ ಬಳಿಕವಷ್ಟೇ ಗಲ್ಲಿಗೇರಿಸುವುದಾಗಿ ಪಾಕಿಸ್ತಾನ ಹೇಳಿದೆ. ಆದರೆ ಕೋರ್ಟ್ ಅಂತಿಮ ತೀರ್ಪು ನೀಡುವುದಕ್ಕೂ ಮೊದಲು ಗಲ್ಲಿಗೇರಿಸಲ್ಲ ಎಂಬ ಭರವಸೆಯನ್ನು ಪಾಕಿಸ್ತಾನ ಕೋರ್ಟ್‍ಗೆ ನೀಡಿಲ್ಲ. ಅಂದರೆ ಆಗಸ್ಟ್ ಬಳಿಕ ಪಾಕಿಸ್ತಾನ ಗಲ್ಲಿಗೇರಿಸುವ ಸಾಧ್ಯತೆ ಇದೆ. ಹೀಗಾಗಿ ಪ್ರಕರಣದ ತುರ್ತು ವಿಚಾರಣೆಯ ಅಗತ್ಯವಿದೆ ಎಂದು ಕೋರ್ಟ್ ತೀರ್ಮಾನಿಸಿದೆ.

    ಈ ತೀರ್ಪಿಗೆ ಸಂಬಂಧಿಸಿದಂತೆ ಎಚ್.ರಂಗನಾಥ್ ವಿಮರ್ಶೆಯ ವಿಡಿಯೋ,  ತೀರ್ಪಿನ ಸಂಪೂರ್ಣ ಪ್ರತಿ ಮತ್ತು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಟ್ವೀಟ್ ಗಳನ್ನು ನೀಡಲಾಗಿದೆ. 

    https://www.youtube.com/watch?v=EJ4z66WdyQo

  • ಪಾಕ್‍ಗೆ ಭಾರೀ ಮುಖಭಂಗ: ಕುಲಭೂಷಣ್ ಜಾಧವ್‍ಗೆ ತಾತ್ಕಾಲಿಕ ರಿಲೀಫ್

    ಪಾಕ್‍ಗೆ ಭಾರೀ ಮುಖಭಂಗ: ಕುಲಭೂಷಣ್ ಜಾಧವ್‍ಗೆ ತಾತ್ಕಾಲಿಕ ರಿಲೀಫ್

    ಹೇಗ್: ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಭಾರೀ ಮುಖಭಂಗವಾಗಿದೆ. ನೆದರ್‍ಲೆಂಡ್‍ನ ಹೇಗ್‍ನಲ್ಲಿರುವ ಅಂತಾರಾಷ್ಟ್ರೀಯ  ನ್ಯಾಯಾಲಯ ಕುಲಭೂಷಣ್ ಜಾಧವ್ ಗಲ್ಲು ಶಿಕ್ಷೆಗೆ ತಾತ್ಕಾಲಿಕ ತಡೆ ನೀಡಿದೆ.

    ಭಾರತದ ಕಾಲಮಾನ ಮಧ್ಯಾಹ್ನ 3.30ಕ್ಕೆ ಮುಖ್ಯ ನ್ಯಾಯಾಧೀಶ ರೋನಿ ಅಬ್ರಾಹಂ ಗಲ್ಲು ಶಿಕ್ಷೆಗೆ ತಾತ್ಕಾಲಿಕ ತಡೆ ನೀಡಿದ್ದು, ಕುಲಭೂಷಣ್ ಜಾಧವ್ ಅವರಿಗೆ ಭಾರತ ರಾಜತಾಂತ್ರಿಕ ನೆರವನ್ನು ನೀಡಬೇಕು ಎಂದು ಸೂಚಿಸಿದ್ದಾರೆ.

    ಭಾರತದ ಪರ ಹಿರಿಯ ವಕೀಲ ದೀಪಕ್ ಮಿತ್ತಲ್ ಹಾಗೂ ಮಾಜಿ ಸಾಲಿಸಿಟರ್ ಜನರಲ್ ಹರೀಶ್ ಸಾಳ್ವೆ ವಾದ ಮಂಡಿಸಿದ್ದರು.

    ಮೂಲಭೂತ ಹಕ್ಕಿಗಾಗಿ ನಾವು ಹೋರಾಡುತ್ತಿದ್ದೇವೆ. ಜಾಧವ್ ಅವರನ್ನು ಬಿಡುಗಡೆ ಮಾಡಬೇಕು ಅಂತ ಭಾರತ ವಾದ ಮಂಡಿಸಿದ್ದರೆ, ಆದರೆ ಪಾಕಿಸ್ತಾನ ಭಾರತದ ವಾದವನ್ನು ಒಪ್ಪದೇ ಮೊಂಡಾಟ ಮಾಡ್ತು. ಭಾರತ ಅಂತಾರಾಷ್ಟ್ರೀಯ ಕೋರ್ಟನ್ನ ರಾಜಕೀಯ ಥಿಯೇಟರ್ ಥರ ಬಳಸ್ತಿದೆ ಅಂತಾ ವಾದ ಮಂಡಿಸಿತ್ತು.

    ಭಾರತದ ವಾದ ಹೀಗಿತ್ತು
    – ಜಾಧವ್ ವಿಚಾರಣೆ ವೇಳೆ ಪಕ್ಷಪಾತ ನಡೆದಿದ್ದು, ಪಾಕಿಸ್ತಾನ ಜಾಧವ್‍ಗೆ ರಾಜತಾಂತ್ರಿಕ ನೆರವು ನೀಡಲು ನಿರಾಕರಿಸಿದೆ.
    – ಅಕ್ರಮವಾಗಿ ಜಾಧವ್ ಬಂಧಿಸಿ ವಿಯೆನ್ನಾ ಒಪ್ಪಂದ ಮುರಿದಿದೆ.
    – ಪಾಕಿಸ್ತಾನದಿಂದ ಸತ್ಯದ ಸಮಾಧಿ ಮಾಡೋ ಪ್ರಯತ್ನ ಮಾಡುತ್ತಿದೆ.
    – ಕೋರ್ಟ್ ವಿಚಾರಣೆಗೆ ಮುನ್ನವೇ ಜಾಧವ್ ಗಲ್ಲಿಗೇರಿಸಲು ಪಾಕ್ ಪ್ರಯತ್ನಿಸ್ತಿದೆ
    – ಮೂಲಭೂತ ಹಕ್ಕಿಗಾಗಿ ನಾವು ಹೋರಾಡ್ತಿದ್ದೇವೆ, ಜಾಧವ್ ಬಿಡುಗಡೆ ಮಾಡಿ

    ಪಾಕಿಸ್ತಾನದ ವಾದ ಹೀಗಿತ್ತು
    – ಜಾಧವ್ ನಮ್ಮ ಬಳಿ ತಪ್ಪೊಪ್ಪಿಕೊಂಡಿದ್ದಾರೆ
    – ಜಾಧವ್ ಗಲ್ಲಿಗೇರಿಸಲು ನಮಗೆ ಆತುರ ಇಲ್ಲ
    – ಭಾರತದ ಮಾಧ್ಯಮಗಳು ತಪ್ಪಾಗಿ ವರದಿ ಮಾಡಿವೆ
    – ಭಾರತ ನ್ಯಾಯಾಲಯವನ್ನು ರಾಜಕೀಯ ನ್ಯಾಯಾಲಯವನ್ನಾಗಿ ಬಳಕೆ ಮಾಡ್ತಿದೆ
    – ರಾಜತಾಂತ್ರಿಕ ನೆರವಿಗೆ ಜಾಧವ್ ಅರ್ಹನಲ್ಲ
    – ಪಾಸ್‍ಪೋರ್ಟ್‍ನಲ್ಲಿ ಜಾಧವ್ ಅಂತಾ ಹೆಸರಿಲ್ಲ, ಮುಸ್ಲಿಂ ವ್ಯಕ್ತಿಯ ಹೆಸರು ಇದೆ

    ಏನಿದು ಪ್ರಕರಣ?
    ಭಾರತದ ಪರ ಗೂಢಚರ್ಯೆ ನಡೆಸುತ್ತಿದ್ದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ, ಕುಲಭೂಷಣ್ ಜಾಧವ್ ಅವರಿಗೆ ಪಾಕಿಸ್ತಾನ ಕೋರ್ಟ್ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಫೀಲ್ಡ್ ಜನರಲ್ ಕೋರ್ಟ್ ಮಾರ್ಷಲ್ ಜಾಧವ್ ಅವರಿಗೆ ಗಲ್ಲು ಶಿಕ್ಷೆ ವಿಧಿಸಿದೆ ಎಂದು ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಷನ್ಸ್ (ಐಎಸ್‍ಪಿಆರ್) ತಿಳಿಸಿತ್ತು.

    ವಿಚಾರಣೆ ವೇಳೆ ರಾ ಪರ ನಾನು ಗೂಢಚರ್ಯೆ ನಡೆಸುತ್ತಿದ್ದ ವಿಚಾರವನ್ನು ಕುಲಭೂಷಣ ಜಾಧವ್ ತಪ್ಪೊಪ್ಪಿಕೊಂಡಿದ್ದರು ಎಂದು ಐಎಸ್‍ಪಿಆರ್ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿತ್ತು. ಕೂಲಭೂಷಣ್ ಯಾದವ್ ನೌಕಾ ಸೇನೆಯ ನಿವೃತ್ತ ಅಧಿಕಾರಿಯಾಗಿದ್ದರು. ಆದರೆ ಅವರು ರಾ ಪರವಾಗಿ ಗೂಢಚರ್ಯೆ ನಡೆಸುತ್ತಿರುವ ಆರೋಪವನ್ನು ಭಾರತ ಸರ್ಕಾರ ನಿರಾಕರಿಸಿತ್ತು. 2016ರ ಮಾರ್ಚ್ 3ರಂದು ಬಲೂಚಿಸ್ತಾನದ ಮಶೇಕಲ್ ಎಂಬಲ್ಲಿ ಕುಲಭೂಷಣ್ ಜಾಧವ್ ಅವರು ಅರೆಸ್ಟ್ ಅಗಿದ್ದರು.

    ವಿಯೆನ್ನಾ ಒಪ್ಪಂದದ ಪ್ರಕಾರ ಕುಲಭೂಷಣ್‍ಗೆ ಭಾರತ ರಾಜತಾಂತ್ರಿಕ ನೆರವು ನೀಡಲು ಅವಕಾಶ ಮಾಡಿಕೊಡಬೇಕಿತ್ತು. ಈ ಕುರಿತು 16 ಬಾರಿ ಭಾರತದ ಮಾಡಿದ್ದ ಮನವಿಯನ್ನು ಪಾಕಿಸ್ತಾನ ತಿರಸ್ಕರಿಸಿತ್ತು.ಆದರೆ ನಿವೃತ್ತ ನೌಕಾ ಸೇನಾಧಿಕಾರಿ ಕುಲಭೂಷಣ್‍ರನ್ನು ಇರಾನ್‍ನಿಂದ ಪಾಕಿಸ್ತಾನ ಕಿಡ್ನ್ಯಾಪ್ ಮಾಡಿತ್ತು ಎಂಬ ಅಂಶವನ್ನು ಕೋರ್ಟ್‍ನಲ್ಲಿ ಭಾರತ ಮಂಡಿಸಿತ್ತು.