Tag: Kukke Subramanya

  • ಕರಾವಳಿಯಲ್ಲಿ ನಾಳೆ ಮತ್ತೆ ಭಾರೀ ಮಳೆ: ಹವಾಮಾನ ಇಲಾಖೆ ಮುನ್ನೆಚ್ಚರಿಕೆ

    ಕರಾವಳಿಯಲ್ಲಿ ನಾಳೆ ಮತ್ತೆ ಭಾರೀ ಮಳೆ: ಹವಾಮಾನ ಇಲಾಖೆ ಮುನ್ನೆಚ್ಚರಿಕೆ

    ನವದೆಹಲಿ/ಮಂಗಳೂರು/ಬೆಂಗಳೂರು: ಕರಾವಳಿ ಕರ್ನಾಟಕ, ಕೇರಳ, ಒಡಿಶಾ, ಪಶ್ಚಿಮ ಬಂಗಾಳ ಹಾಗೂ ಈಶಾನ್ಯ ರಾಜ್ಯಗಳಲ್ಲಿ ನಾಳೆ (ಜೂ.12) ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಇಂದು ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ಕರ್ನಾಟಕದ ಕರಾವಳಿ, ಕೇರಳದ ಕೆಲವು ಪ್ರದೇಶಗಳು, ಛತ್ತೀಸ್‍ಗಢ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಂ ಹಾಗೂ ತ್ರಿಪುರಾದಲ್ಲಿ ಜೂನ್ 12ರಂದು ಭಾರೀ ಮಳೆಯಾಗಲಿದೆ ಎಂದು ಮುನ್ನೆಚ್ಚರಿಕೆ ನೀಡಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಗೋವಾ, ಕೇರಳ ಹಾಗೂ ಕರ್ನಾಟಕ ಕರಾವಳಿಯಲ್ಲಿ ಗಂಟೆಗೆ 55 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಸಮುದ್ರದ ರಭಸ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದ್ದು ಮೀನುಗಾರರು ಸಮುದ್ರಕ್ಕಿಳಿಯದಂತೆ ಎಚ್ಚರಿಸಿದೆ.

    ಇದೇ ವಿಚಾರದಲ್ಲಿ ಬೆಂಗಳೂರಿನಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ಇಲಾಖೆ ನಿರ್ದೇಶಕರಾದ ಶ್ರೀನಿವಾಸ್ ರೆಡ್ಡಿ, ಜೂನ್ 1 ರಿಂದ ರಾಜ್ಯದ ಹಲವು ಕಡೆ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಸೆಪ್ಟೆಂಬರ್ ವರೆಗೂ ಮಳೆ ಮುಂದುವರೆಯಲಿದೆ. ಕರಾವಳಿ ಮಲೆನಾಡು ಭಾಗಗಳಲ್ಲಿ ಹೆಚ್ಚಾಗಿ ಮಳೆಯಾಗುತ್ತಿದೆ, ಹೆಚ್ಚು ಮಳೆಯನ್ನು ನಿರೀಕ್ಷೆ ಮಾಡಲಾಗಿದೆ. ಪ್ರಮುಖವಾಗಿ ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಭಾಗದಲ್ಲಿ ಭಾರಿ ಮಳೆಯಾಗುವ ಸಂಭವವಿದೆ. ಇನ್ನೂ ಬೆಂಗಳೂರಿನಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

    ರಾಜ್ಯದಲ್ಲಿ ಈ ಬಾರಿ ಮುಂಗಾರು ಪೂರ್ವ ಮಳೆ ವಾಡಿಕೆಗಿಂತ ಹೆಚ್ಚಾಗಿದೆ. ರಾಜ್ಯದಲ್ಲಿ ಮುಂಗಾರು ಪೂರ್ವ 125 ಮಿ.ಮೀ. ಮಳೆಯಾಗಬೇಕಿತ್ತು. ಅದ್ರೆ ನಿರೀಕ್ಷೆಗಿಂತ ಈ ಬಾರಿ ಮಳೆಯ ಪ್ರಮಾಣ ಹೆಚ್ಚಾಗಿದ್ದು 193 ಮಿ.ಮೀ. ಮಳೆಯಾಗಿದೆ. ರಾಜ್ಯದ 24 ಜಿಲ್ಲೆಗಳಲ್ಲಿ ಅಧಿಕ ಮಳೆಯಾಗಿದೆ. ಇನ್ನುಳಿದಂತೆ 5 ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಬೀದರ್, ಯಾದಗಿರಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ರಾಜ್ಯದಲ್ಲಿ ರಾಯಚೂರು ಜಿಲ್ಲೆಯಲ್ಲಿ ಮಾತ್ರ ಮಳೆ ಕೊರತೆಯಾಗಿದೆ. ಜಿಲ್ಲೆಯಲ್ಲಿ 64 ಮಿ.ಮೀ. ಮಳೆಯಾಗಬೇಕಿತ್ತು. ಆದ್ರೆ ಕೇವಲ 38 ಮಿ.ಮೀ. ಮಳೆಯಾಗಿದೆ.

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಮಳೆರಾಯನ ಅಬ್ಬರ ಕಡಿಮೆಯಾಗಿತ್ತು. ಆದರೆ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆಯಾದ ಹಿನ್ನೆಲೆಯಲ್ಲಿ ಹರಿದು ಬಂದ ನೀರಿನಿಂದಾಗಿ ಉಪ್ಪಿನಂಗಡಿ – ಸುಬ್ರಹ್ಮಣ್ಯ ಸಂಪರ್ಕ ರಸ್ತೆಯ ಹೊಸ್ಮಠ ಸೇತುವೆ ಮುಳುಗಡೆಯಾಗಿದೆ. ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕುಮಾರಧಾರಾ ನದಿ ತುಂಬಿದ್ದು, ನೀರಿನ ಮಟ್ಟ ಹೆಚ್ಚಾಗಿದೆ. ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಕುಮಾರಧಾರಾ ಸ್ನಾನಘಟ್ಟ ಸಂಪೂರ್ಣ ಮುಳುಗಡೆಯಾಗಿದ್ದು ಭಕ್ತರಿಗೆ ನದಿಗಿಳಿಯದಂತೆ ಸೂಚನೆ ನೀಡಲಾಗಿದೆ. ಇದರಿಂದಾಗಿ ಕ್ಷೇತ್ರಕ್ಕೆ ಬಂದ ಭಕ್ತರು ಸ್ನಾನಘಟ್ಟಕ್ಕೆ ಹೋಗಲಾಗದೆ ಮೇಲ್ಭಾಗದ ನೆರೆ ನೀರಿನಲ್ಲೇ ಸ್ನಾನ ಮಾಡಬೇಕಾಗಿದೆ. ಸ್ನಾನಘಟ್ಟದ ಹೊರಗೆ ಬಂದಂತಹ ನೀರಿನಲ್ಲೇ ಭಕ್ತಾಧಿಗಳು ತೀರ್ಥಸ್ನಾನ ಮಾಡುತ್ತಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯ ಪ್ರಮುಖ ನದಿಗಳಾದ ನೇತ್ರಾವತಿ ಹಾಗೂ ಕುಮಾರಧಾರಾದಲ್ಲಿ ನೀರಿನ ಮಟ್ಟ ಹೆಚ್ಚಿದ್ದು ಈ ಮಳೆಗಾಲದಲ್ಲಿ ಮೊದಲ ಬಾರಿಗೆ ಮೈದುಂಬಿಕೊಂಡು ಹರಿಯುತ್ತಿದೆ.

    ಉತ್ತರ ಕನ್ನಡ: ಉತ್ತರ ಕನ್ನಡ ಜಿಲ್ಲೆಯಾದ್ಯಂತ ಕಳೆದ ಒಂದು ವಾರದಿಂದ ಇದ್ದ ವರುಣನ ಆರ್ಭಟ ಇಂದು ಸ್ವಲ್ಪಮಟ್ಟಿಗೆ ಕಮ್ಮಿಯಾಗಿದೆ. ಜಿಲ್ಲೆಯ ಕರಾವಳಿ ಭಾಗವಾದ ಕಾರವಾರ, ಕುಮಟಾ, ಹೊನ್ನಾವರ, ಭಟ್ಕಳದಲ್ಲಿ ಬಿಸಿಲು ಮಳೆ ಕಣ್ಣಾಮುಚ್ಚಾಲೆ ಆಡುತ್ತಿತ್ತು. ಇನ್ನು ಮಲೆನಾಡಿನ ಭಾಗವಾದ ಜೋಯಿಡಾ, ಹಳಿಯಾಳದಲ್ಲಿ ಮಳೆಯಾಗುತ್ತಿದ್ದರೆ ಶಿರಸಿ, ಸಿದ್ದಾಪುರ, ಮುಂಡಗೋಡು ಭಾಗದಲ್ಲಿ ವರುಣ ಸ್ವಲ್ಪ ಮಟ್ಟಿಗೆ ಬಿಡುವು ನೀಡಿದ್ದ. ಜಿಲ್ಲೆಯಾದ್ಯಂತ ಕಳೆದ 24 ಗಂಟೆಗಳಲ್ಲಿ 376.8 ಮಿಲಿಮೀಟರ್ ಮಳೆಯಾಗಿದೆ. ಇದರಲ್ಲಿ ಭಟ್ಕಳ- 24.2 ಮಿಮೀ, ಹೊನ್ನಾವರ-3.00 ಮಿಮೀ, ಕುಮಟಾ-0.6 ಮಿಮೀ, ಕಾರವಾರ- 1.4 ಮಿಮೀ, ಶಿರಸಿ- 52.0 ಮಿಮೀ, ಸಿದ್ದಾಪುರ – 75.2 ಮಿಮೀ, ಮುಂಡಗೋಡು – 10.2ಮಿಮೀ, ಹಳಿಯಾಳ- 82.4, ಅಂಕೋಲ – 12.4, ಜೋಯಿಡಾ-52.0, ಯಲ್ಲಾಪುರದಲ್ಲಿ 63.4 ಮಿಲಿಮೀಟರ್ ಮಳೆಯಾಗಿದೆ.

    ಹಾಸನ: ಹಾಸನ ಜಿಲ್ಲೆಯಲ್ಲೂ ಮಳೆ ಆರ್ಭಟಿಸುತ್ತಿದ್ದು ಒಂದೆಡೆ ಹಾನಿ ಜೊತೆಗೆ ಮತ್ತೊಂದೆಡೆ ಗುಡ್ಡ ಕುಸಿತದಿಂದಾಗಿ ಹಾಸನ-ಬೆಂಗಳೂರು ನಡುವಿನ ರೈಲು ಸಂಚಾರ ಸ್ಥಗಿತಗೊಂಡಿದೆ. ಇದರಿಂದಾಗಿ ಇಂದು ಮಧ್ಯಾಹ್ನ ಯಶವಂತಪುರದಿಂದ ಕಾರವಾರಕ್ಕೆ ಹೊರಟಿದ್ದ ರೈಲು ಹಾಸನದಲ್ಲೇ ನಿಂತಿದ್ದರಿಂದ ಸಾವಿರಾರು ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದರು. ಸಂಜೆ ವೇಳೆಗೆ ದುರಸ್ತಿ ಕಾರ್ಯ ಮುಗಿಯುವ ನಿರೀಕ್ಷೆ ಇದ್ದರೂ, ಮಳೆಯ ಆರ್ಭಟ ಹಾಗೂ ಬೆಳಕಿನ ಅಭಾವದಿಂದಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ನಾಳೆ ಬೆಳಗ್ಗೆ ದುರಸ್ತಿ ಕಾರ್ಯ ಮುಂದುವರೆಸೋದಾಗಿ ಅಧಿಕಾರಿಗಳು ಹೇಳಿದ್ದಾರೆ. ಮಳೆ ತೆರವು ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಇನ್ನೊಂದೆಡೆ ಜೋರು ಮಳೆಯಿಂದ ಹೇಮಾವತಿ ಒಳ ಹರಿವು ಗಣನೀಯವಾಗಿ ಏರಿಕೆಯಾಗಿರುವುದು ಅಪಾರ ಮಂದಿಯಲ್ಲಿ ಹರ್ಷ ತರಿಸಿದೆ.

    ಮಳೆಯಿಂದಾಗಿ ಸಕಲೇಶಪುರ ತಾಲೂಕು ಯಡಕುಮೇರಿ-ಕರಗರಹಳ್ಳಿ ನಡುವೆ ನಾಲ್ಕು ಕಡೆ ಗುಡ್ಡ ಕುಸಿದಿದೆ. ಇದರಿಂದಾಗಿ ಬೆಂಗಳೂರು-ಮಂಗಳೂರು ನಡುವಿನ ರೈಲ್ವೆ ಸಂಚಾರ ಸ್ಥಗಿತಗೊಂಡಿದೆ. ರೈಲು ಸಂಪರ್ಕ ಕಡಿತಗೊಂಡಿರುವುದರಿಂದ ಯಶವಂತಪುರದಿಂದ ಕಾರವಾರಕ್ಕೆ ಹೋಗುತ್ತಿದ್ದ ರೈಲು ಹಾಸನ ರೈಲ್ವೆ ನಿಲ್ದಾಣದಲ್ಲೇ ನಿಂತಿದ್ದರಿಂದ ಸಾವಿರಾರು ಪ್ರಯಾಣಿಕರು ಪರದಾಡಬೇಕಾಯಿತು. ಕೂಡಲೇ ಎಚ್ಚೆತ್ತ ರೈಲ್ವೆ ಅಧಿಕಾರಿಗಳು ಹಾಗೂ ಸಿಬ್ಬಂದಿ ರೈಲ್ವೆ ಟಿಕೆಟ್ ಹಣವನ್ನು ಮರುಪಾವತಿ ಮಾಡಿ, ಸಾರಿಗೆ ಬಸ್ ಮೂಲಕ ಪ್ರಯಾಣಿಕರನ್ನು ಕಳಿಸಿಕೊಟ್ಟರು.

    ಸಕಲೇಶಪುರ ತಾಲೂಕು ಹೆತ್ತೂರು ಹೋಬಳಿಯಲ್ಲಿ ಭಾಗಮಂಡಲಕ್ಕಿಂತಲೂ ಹೆಚ್ಚಿನ ಮಳೆಯಾಗುತ್ತಿದ್ದು, ಜಿಲ್ಲೆಯ ಜೀವನದಿ ಹೇಮಾವತಿಗೆ ಒಳ ಹರಿವಿನ ಪ್ರಮಾಣ ಹೆಚ್ಚಾಗಿದೆ. ಮಳೆಗೆ ಸಕಲೇಶಪುರ ತಾಲೂಕಿನ ಹತ್ತಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಹಾನುಬಾಳು ಸೇತುವೆ ಮುಳುಗಡೆಯಾಗಿದೆ. ಹೊಳೆನರಸೀಪುರ ಪಟ್ಟಣದಲ್ಲಿ ಮಳೆಯಿಂದಾಗಿ ರಸ್ತೆ ಗುಂಡಿ ಬಿದ್ದಿದ್ದರಿಂದ ಸಾರಿಗೆ ಬಸ್ ಚಾಲಕನ ನಿಯಂತ್ರಣ ತಪ್ಪಿ ಬಾಳೆ ಮಂಡಿಗೆ ನುಗ್ಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

    https://www.youtube.com/watch?v=73qrpkwYIOk

    https://www.youtube.com/watch?v=G5q_xq6uClc

  • ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅಮಿತ್ ಶಾ ವಾಸ್ತವ್ಯ- ಕೆಲವೇ ಹೊತ್ತಲ್ಲಿ ವಿಶೇಷ ಪೂಜೆ

    ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅಮಿತ್ ಶಾ ವಾಸ್ತವ್ಯ- ಕೆಲವೇ ಹೊತ್ತಲ್ಲಿ ವಿಶೇಷ ಪೂಜೆ

    ಮಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಾಸ್ತವ್ಯ ಹೂಡಿದ್ದಾರೆ. ಇದು ಬೆಳಗ್ಗೆ 8.15ಕ್ಕೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅಮಿತ್ ಶಾ ವಿಶೇಷ ಪೂಜೆ ಸಲ್ಲಿಸಿದ್ದಾರೆ.

    102 ಡಿಗ್ರಿ ಜ್ವರದಿಂದ ಬಳಲುತ್ತಿರುವ ಅಮಿತ್ ಶಾ ಆದಿಶೇಷ ವಸತಿಗೃಹಲ್ಲಿ ಆರೋಗ್ಯ ತಪಾಸಣೆ ಮಾಡಿಸಿದ್ದಾರೆ. ಇಂದಿನ ಕಾರ್ಯಕ್ರಮಗಳಲ್ಲಿ ಕುಳಿತು ಮಾತನಾಡುವಂತೆ ವೈದ್ಯರು ಸಲಹೆ ನೀಡಿದ್ದಾರೆ.

    ಬೆಳಗ್ಗೆ 8.15ಕ್ಕೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ  9.30ಕ್ಕೆ ಸುಬ್ರಹ್ಮಣ್ಯದ ನವಶಕ್ತಿ ಸಮಾವೇಶ ಮತ್ತು ಆಯ್ದ ಕಾರ್ಯಕರ್ತರ ಜೊತೆ ಸಮಾಲೋಚನೆಯಲ್ಲಿ ಅಮಿತ್ ಶಾ ಪಾಲ್ಗೊಳ್ಳಲಿದ್ದಾರೆ. 10 ಗಂಟೆಗೆ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಬಂಟ್ವಾಳದಲ್ಲಿ ನವಶಕ್ತಿ ಸಮಾವೇಶ ನಡೆಯಲಿದೆ.

    ಮಧ್ಯಾಹ್ನ 2.30ಕ್ಕೆ ಅಮಿತ್ ಶಾ ಸುರತ್ಕಲ್‍ನ ಕಾಟಿಪಳ್ಳದಲ್ಲಿ ದೀಪಕ್ ರಾವ್ ನಿವಾಸಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಸುರತ್ಕಲ್‍ನ ಖಾಸಗಿ ಹೊಟೇಲ್‍ನಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ನಂತರ ಸಂಜೆ ನಾಲ್ಕು ಗಂಟೆ ಹೊತ್ತಿಗೆ ಮಂಗಳೂರಿನಿಂದ ಅಮಿತ್ ಶಾ ನಿರ್ಗಮಿಸಲಿದ್ದಾರೆ. ಇದನ್ನೂ ಓದಿ: ಕರಾವಳಿಯಲ್ಲಿ ನಾಲ್ಕು ದಿನ ಅಮಿತ್ ಶಾ ಟೂರ್- ಬಿಜೆಪಿಯಲ್ಲಿ ಮಿಂಚಿನ ಸಂಚಲನ

  • ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನ ಪಡೆದ ಖ್ಯಾತ ಬಹುಭಾಷಾ ನಟ ಮೋಹನ್ ಲಾಲ್

    ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನ ಪಡೆದ ಖ್ಯಾತ ಬಹುಭಾಷಾ ನಟ ಮೋಹನ್ ಲಾಲ್

    ಮಂಗಳೂರು: ಖ್ಯಾತ ಬಹುಭಾಷಾ ನಟ ಮೋಹನ್ ಲಾಲ್ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ದೇವಾಲಯ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ದು, ದೇವರ ದರ್ಶನ ಪಡೆದಿದ್ದಾರೆ.

    ನಟ ಮೋಹನ್ ಲಾಲ್ ಇಂದು ಮುಂಜಾನೆ ದೇವರ ದರ್ಶನ ಪಡೆದು ಕುಕ್ಕೆ ಸುಬ್ರಹ್ಮಣ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮಲಯಾಳಂ ಕಾಯಂಕುಳಂ ಕೊಚ್ಚುನ್ನಿ ಚಿತ್ರದ ಚಿತ್ರೀಕರಣ ಪುತ್ತೂರು ತಾಲೂಕಿನ ಕಡಬದ ಬಲ್ಯ ಹಾಗೂ ಪದವು ನಲ್ಲಿ ನಡೆಯುತ್ತಿತ್ತು. ಕೊಚ್ಚುನ್ನಿ ಸಿನಿಮಾದಲ್ಲಿ ಮೋಹನ್ ಲಾಲ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ನಿವಿನ್ ಪೌಲ್, ಪ್ರಿಯಾ ಆನಂದ್ ಸೇರಿದಂತೆ ಇತರ ಸಹ ನಟರು ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

    ಇನ್ನೊಂದೆಡೆ ಬಹುಕೋಟಿ ವೆಚ್ಚದ ಮಮ್ಮುಟ್ಟಿ ನಟನೆಯ ಮಾಮಾಂಗಂ ಚಿತ್ರದ ಚಿತ್ರೀಕರಣ ಕೂಡಾ ಕಡಬದ ಕೊಯಿಲ ಫಾರ್ಮ್‍ನಲ್ಲಿ ನಡೆಯುತ್ತಿದೆ. ಎರಡೂ ಚಿತ್ರದ ನಟರಿಗೆ ಸುಬ್ರಹ್ಮಣ್ಯದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮೋಹನ್ ಲಾಲ್ ಸಹ ನಟರೊಂದಿಗೆ ಸುಬ್ರಹ್ಮಣ್ಯನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮೋಹನ್ ಲಾಲ್ ಅಭಿಮಾನಿಗಳು ನೆಚ್ಚಿನ ನಟನೊಂದಿಗೆ ಸೆಲ್ಫಿ ತೆಗೆದು ಸಂಭ್ರಮಿಸಿದ್ದಾರೆ.

  • ಸಾಲು ಸಾಲು ರಜೆ: ಕುಕ್ಕೆ ಸುಬ್ರಹ್ಮಣ್ಯಕ್ಕೆ ಹರಿದು ಬಂತು ಭಕ್ತ ಸಾಗರ

    ಸಾಲು ಸಾಲು ರಜೆ: ಕುಕ್ಕೆ ಸುಬ್ರಹ್ಮಣ್ಯಕ್ಕೆ ಹರಿದು ಬಂತು ಭಕ್ತ ಸಾಗರ

    ಮಂಗಳೂರು: ನಿರಂತರವಾಗಿ ಸರ್ಕಾರಿ ರಜೆ ಇರುವ ಹಿನ್ನೆಲೆಯಲ್ಲಿ ದಕ್ಷಿಣ ಭಾರತದ ಪ್ರಸಿದ್ಧ ನಾಗಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಜನ ಸಾಗರವೇ ಹರಿದು ಬಂದಿದೆ.

    ಕ್ರಿಸ್‍ಮಸ್ ಹಬ್ಬದ ಪ್ರಯುಕ್ತ ರಜೆ ಇರುವುದರಿಂದ ಶನಿವಾರದಿಂದಲೇ ಭಕ್ತರ ದಂಡು ಕ್ಷೇತ್ರದತ್ತ ಹರಿದು ಬರುತ್ತಿದ್ದು, ಲಕ್ಷಾಂತರ ಭಕ್ತರು ದೇಶದ ನಾನಾ ಕಡೆಗಳಿಂದ ಆಗಮಿಸುತ್ತಿದ್ದಾರೆ. ಸುಬ್ರಹ್ಮಣ್ಯನ ಆಲಯದ ತುಂಬಾ ಭಕ್ತರಿಂದ ತುಂಬಿ ಹೋಗಿದೆ. ಸೋಮವಾರ ಒಂದೇ ದಿನ ಒಂದು ಲಕ್ಷಕ್ಕಿಂತ ಹೆಚ್ಚು ಭಕ್ತರು ದೇವರ ದರ್ಶನ ಪಡೆದಿದ್ದಾರೆ.

    ದೇವಾಲಯದಲ್ಲಿ ಜನಸಂದಣಿ ಜಾಸ್ತಿಯಾಗಿರುವ ಹಿನ್ನೆಲೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಭಕ್ತರಿಗೆ ತೊಂದರೆಯಾಗದಂತೆ ಸಕಲ ಕ್ರಮ ಕೈಗೊಂಡಿದೆ. ಸುಬ್ರಹ್ಮಣ್ಯನ ಸೇವೆಗಳನ್ನು ಯಥಾಸ್ಥಿತಿಯಲ್ಲಿಯೇ ಮಾಡಲಾಗುತ್ತಿದೆ. ದೇವಾಲಯದ ಆದಾಯದಲ್ಲೂ ಗಣನೀಯ ಸೇವೆಗಳು ಏರಿಕೆಯಾಗುವ ಸಾಧ್ಯತೆಯಿದ್ದು, ಜನವರಿ ಆರಂಭದವರೆಗೂ ಜನಸಂದಣಿಯಿರುವ ಸಾಧ್ಯತೆಗಳಿವೆ.

  • ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅದ್ಧೂರಿಯಾಗಿ ನೆರವೇರಿದ ಪಂಚಮಿ ರಥೋತ್ಸವ

    ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅದ್ಧೂರಿಯಾಗಿ ನೆರವೇರಿದ ಪಂಚಮಿ ರಥೋತ್ಸವ

    ಮಂಗಳೂರು: ಇತಿಹಾಸ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಚಂಪಾ ಷಷ್ಠಿಯ ಉತ್ಸವದ ಹಿನ್ನೆಲೆಯಲ್ಲಿ ಅದ್ಧೂರಿಯಾಗಿ ಪಂಚಮಿ ರಥೋತ್ಸವ ನೆರವೇರಿದೆ.

    ಪಂಚಮಿಯ ಹಿನ್ನಲೆಯಲ್ಲಿ ಸುಬ್ರಹ್ಮಣ್ಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಕೆಯಾಗಿದೆ. ದೇವಳದೊಳಗೆ ವಿಶೇಷ ಬಲಿ ಸೇವೆ ನಡೆದಿದ್ದು, ತದನಂತರ ಪಂಚಮಿ ರಥೋತ್ಸವ ನಡೆದಿದೆ. ಮಧ್ಯರಾತ್ರಿ ರಥೋತ್ಸವ ನಡೆದಿದ್ದರೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು, ಆ ಪುಣ್ಯ ಕ್ಷಣವನ್ನು ಕಣ್ತುಂಬಿಕೊಂಡಿದ್ದಾರೆ.

    ವೈಭವೋಪೇತವಾಗಿ ಸುಬ್ರಹ್ಮಣ್ಯನ ಪಂಚಮಿ ರಥೋತ್ಸವ ನಡೆದಿದ್ದು, ಸುಬ್ರಹ್ಮಣ್ಯನ ಉತ್ಸವ ಮೂರ್ತಿಯನ್ನು ರಥದಲ್ಲಿ ಇಟ್ಟು ವಿವಿಧ ಫಲಪುಷ್ಪದಿಂದ ಅಲಂಕಾರ ಮಾಡಲಾಗಿತ್ತು. ರಥವನ್ನು ದೇವಳದ ರಥಬೀದಿಯಲ್ಲಿ ಎಳೆಯಲಾಯಿತು. ಷಷ್ಠಿಯ ಹಿನ್ನಲೆಯಲ್ಲಿ ಇಂದು ಬೆಳಗ್ಗೆ 8.37ರ ಧನು ಲಗ್ನದಲ್ಲಿ ಸುಬ್ರಹ್ಮಣ್ಯ ನ ಬ್ರಹ್ಮರಥೋತ್ಸವ ನಡೆಯಲಿದೆ.

    ಕಳೆದ ದಿನ ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ಪಂಚಮಿಯ ಹಿನ್ನಲೆಯಲ್ಲಿ ಎಡೆಮಡಸ್ನಾನ ನಡೆಯಿತು. ಸುಮಾರು 333 ಭಕ್ತರು ಎಡೆಮಡಸ್ನಾನ ಸೇವೆ ಸಲ್ಲಿಸಿದ್ದಾರೆ. ಮಧ್ಯಾಹ್ನ ಸುಬ್ರಹ್ಮಣ್ಯ ನಿಗೆ ವಿಶೇಷ ಪೂಜೆ ಬಳಿಕ ಆಗಮ ಪಂಡಿತರು ಮತ್ತು ದೇವಳದ ಆಡಳಿತ ಮಂಡಳಿಯವರ ಸಮ್ಮುಖದಲ್ಲಿ ದೇವಸ್ಥಾನದ ಪ್ರಾಂಗಣದಲ್ಲಿ ದೇವರ ನೈವೇದ್ಯವನ್ನು ಬಾಳೆ ಎಲೆಯ ಮೇಲೆ ಬಡಿಸಲಾಗಿತ್ತು. ದೇವರ ನೈವೇದ್ಯವನ್ನು ಗೋವಿಗೆ ತಿನ್ನಿಸಿ ಎಡೆಮಡೆಸ್ನಾನಕ್ಕೆ ಚಾಲನೆ ನೀಡಲಾಯಿತು.

    ಬೆಳಗ್ಗೆ 10 ಗಂಟೆಯಿಂದಲೇ ಕುಮಾರಧಾರೆಯಲ್ಲಿ ಮಿಂದು, ಎಡೆಮಡಸ್ನಾನ ಸೇವೆ ಸಲ್ಲಿಸಲು ಕಾದು ಕುಳಿತ್ತಿದ್ದ ಭಕ್ತರು ದೇವರ ನೈವೇದ್ಯದಲ್ಲಿ ಉರುಳು ಸೇವೆ ಸಲ್ಲಿಸಿದರು. ಇದರಿಂದ ಯಾವುದೇ ಗೊಂದಲವಾಗದಂತೆ ಕ್ಷೇತ್ರದ ಆಡಳಿತ ಮಂಡಳಿ ಮತ್ತು ಆಗಮ ಪಂಡಿತರು ಎಲ್ಲಾ ಸಿದ್ಧತೆಯನ್ನು ನಡೆಸಿದ್ದರು. ಯಾವುದೇ ಲಿಂಗಬೇಧ ಇಲ್ಲದೆ ಚರ್ಮರೋಗ ಪೀಡಿತರಿಂದ ಹಿಡಿದು ಮಕ್ಕಳ ತನಕ ಎಡೆಮಡಸ್ನಾನ ಹರಕೆಯನ್ನು ಭಕ್ತಿಯಿಂದ ಸಲ್ಲಿಸಿದರು.

     

  • ನಾಗರ ಪಂಚಮಿ ದಿನವೇ ಮನೆಗೆ ಬಂದ ನಾಗಪ್ಪ!

    ನಾಗರ ಪಂಚಮಿ ದಿನವೇ ಮನೆಗೆ ಬಂದ ನಾಗಪ್ಪ!

    ಧಾರವಾಡ: ನಾಗರ ಪಂಚಮಿ ದಿನ ಎಲ್ಲರೂ ಮಣ್ಣಿನ ಹುತ್ತಕ್ಕೆ ಹಾಲೆರೆಯುತ್ತಾರೆ. ಆದರೆ ನಿಜವಾಗಿಯೂ ಈ ಹಬ್ಬದ ದಿನವೇ ಮನೆಗೆ ನಾಗಪ್ಪ ಬಂದ್ರೆ ಹೇಗಾಗಬಾರದು ಹೇಳಿ.

    ಹೌದು. ನಾಗರ ಪಂಚಮಿ ದಿನವೇ ಧಾರವಾಡದ ಗರಗ ಗ್ರಾಮದ ಮಡಿವಾಳೆಪ್ಪ ಎಂಬವರ ಮನೆಗೆ ನಾಗಪ್ಪ ಬಂದಿದ್ದಾನೆ. ಇದನ್ನ ಕಂಡು ಮೊದಲು ಭಯ ಪಟ್ಟ ಈ ಕುಟುಂಬದವರು ನಂತರ ಇದು ದೈವ ಸ್ವರೂಪ ಅಂತಾ ಹೇಳಿ ನಾಗಪ್ಪನಿಗೆ ಪೂಜೆ ಕೂಡ ಮಾಡಿದ್ದಾರೆ. ಪಂಚಮಿಯ ದಿನವೇ ಮನೆಗೆ ಈ ನಾಗಪ್ಪ ಬಂದಿದ್ದರಿಂದ ಆ ಮನೆ ಮಹಿಳೆಯರು ಆರತಿ ಬೆಳಗಿ ನಂತರ ಸ್ನೇಕ್ ತಜ್ಞ ಎಲ್ಲಪ್ಪ ಅವರನ್ನು ಕರೆಸಿ ನಾಗರಹಾವನ್ನ ಕಾಡಿಗೆ ಬಿಡಿಸಿದ್ದಾರೆ.

    ಇದನ್ನ ನೋಡಲು ಗ್ರಾಮದ ಜನರು ಕೂಡಾ ಮುಗಿ ಬಿದ್ದಿದ್ರು. ಇನ್ನೂ ಕೆಲವರು ಈ ಎಲ್ಲಾ ದೃಶ್ಯವನ್ನ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ.

    ಹಾಗೆ ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಕೂಡ ನಾಗರ ಪಂಚಮಿ ಸಂಭ್ರಮ ಜೋರಾಗಿದೆ. ನಾಗಪ್ರತಿಷ್ಟಾ ಮಂಟಪದಲ್ಲಿ ನಾಗನ ವಿಗ್ರಹಕ್ಕೆ ಭಕ್ತರು ಹಾಲನ್ನು ಎರೆದರು. ಕ್ಷೇತ್ರಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರ ದಂಡು ಹರಿದುಬರುತ್ತಿದೆ.

  • ಮಲಿನವಾಗ್ತಿದೆ ಮಲೆನಾಡಿನ ಕುಮಾರಧಾರಾ- ಪ್ರತಿನಿತ್ಯ ನದಿ ಸೇರ್ತಿದೆ ವಿಷಯುಕ್ತ ತ್ಯಾಜ್ಯ

    ಮಲಿನವಾಗ್ತಿದೆ ಮಲೆನಾಡಿನ ಕುಮಾರಧಾರಾ- ಪ್ರತಿನಿತ್ಯ ನದಿ ಸೇರ್ತಿದೆ ವಿಷಯುಕ್ತ ತ್ಯಾಜ್ಯ

    ಮಂಗಳೂರು: ಶ್ರೀ ಕುಕ್ಕೆಸುಬ್ರಹ್ಮಣ್ಯ ಸಕಲ ಪಾಪ ಪರಿಹಾರ ಮಾಡೋ ಪವಿತ್ರ ಕ್ಷೇತ್ರವಾಗಿ ಪ್ರಸಿದ್ಧಿ ಪಡೆದಿದೆ. ದೇಶದ ನಾನಾ ಮೂಲೆಗಳಿಂದ ಲಕ್ಷಾಂತರ ಭಕ್ತರು ಈ ದೇವಸ್ಥಾನಕ್ಕೆ ಭೇಟಿ ನೀಡ್ತಾರೆ. ಇಂತಹ ಪವಿತ್ರ ಕ್ಷೇತ್ರ ಈಗ ಮಲಿನ ಕ್ಷೇತ್ರ ಅಂತಲೂ ಕುಖ್ಯಾತಿ ಪಡೆಯುತ್ತಿದೆ.

    ದಕ್ಷಿಣ ಕನ್ನಡ ಜಿಲ್ಲೆಯ ಪವಿತ್ರ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹರಿಯುವ ಕುಮಾರಧಾರಾ ನದಿ ಸಂಪೂರ್ಣ ಮಲಿನವಾಗಿದೆ. ಇಲ್ಲಿನ ವ್ಯಾಪಾರಸ್ಥರು, ಹೋಟೆಲ್‍ನವರು ತ್ಯಾಜ್ಯಗಳನ್ನು ನೇರವಾಗಿ ನದಿಗೆ ಹಾಕುತ್ತಿರೋದ್ರಿಂದ ನೀರು ಕಲುಷಿತಗೊಂಡಿದೆ. ಕೆಲವೆಡೆ ಚರಂಡಿ ನೀರೂ ಕೂಡ ನದಿಗೆ ಸೇರ್ತಿದೆ. ಕ್ಷೇತ್ರಕ್ಕೆ ಬರುವ ಭಕ್ತರು ಹರಕೆ ಮುಡಿ ನೀಡ್ತಾರೆ. ಹೆಚ್ಚಿನವರು ಸರ್ಪಸಂಸ್ಕಾರದಂತಹ ಸೇವೆಗಳನ್ನು ಮಾಡಿ ಕುಮಾರಧಾರಾ ನದಿಯಲ್ಲಿ ತೀರ್ಥ ಸ್ನಾನ ಮಾಡುವುದು ವಾಡಿಕೆ. ಆದ್ರೆ ಇಂತಹ ಕಲುಷಿತ ನೀರಲ್ಲಿ ಪಾಪ ಪರಿಹಾರ ಆಗೋ ಬದಲು ರೋಗ ರುಜಿನಗಳು ಅಂಟಿಕೊಳ್ಳುವ ಭೀತಿ ಎದುರಾಗಿದೆ.

    ಸುಬ್ರಹ್ಮಣ್ಯ ಕ್ಷೇತ್ರದ ಅಭಿವೃದ್ಧಿಗೆ ರಾಜ್ಯ ಸರ್ಕಾರ 180 ಕೋಟಿ ರೂಪಾಯಿ ವೆಚ್ಚದ ಪ್ಲಾನ್ ಮಂಜೂರು ಮಾಡಿತ್ತು. ಅದರಂತೆ ವಸತಿಗೃಹ, ಬಸ್ ನಿಲ್ದಾಣ, ರಸ್ತೆ ಮೇಲ್ದರ್ಜೆಗೇರಿದ್ದರೂ ಚರಂಡಿ ವ್ಯವಸ್ಥೆ ಸರಿಯಾಗಿಲ್ಲ. ಇದರ ಮಧ್ಯೆ ಭಕ್ತರು ಕೂಡ ಸ್ನಾನ ಮಾಡಿ ಬಟ್ಟೆಗಳನ್ನು ನದಿಯಲ್ಲೇ ಹಾಕುತ್ತಿದ್ದು, ಇದನ್ನು ಸ್ವಚ್ಛ ಮಾಡುವ ವ್ಯವಸ್ಥೆ ಇಲ್ಲ.

    ಕುಕ್ಕೆ ಸುಬ್ರಹ್ಮಣ್ಯ ರಾಜ್ಯ ಸರ್ಕಾರಕ್ಕೆ ಅತಿ ಹೆಚ್ಚು ಆದಾಯ ತರುತ್ತಿರುವ ದೇವಸ್ಥಾನ. ಆದ್ರೆ ಪರಿಒಸ್ಥಿತಿ ಇದೇ ರೀತಿ ಮುಂದುವರಿದರೆ ಕ್ಷೇತ್ರದ ಹೆಸರು ಹಾಳಾಗಬಹುದು. ಆದ್ದರಿಂದ ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಬೇಕಾಗಿದೆ.