Tag: Kukke Subramanya

  • ಕುಕ್ಕೆ ದೇವಸ್ಥಾನ, ಮಠದ ನಡುವೆ ಕಿತ್ತಾಟ – ಹಲ್ಲೆಗೊಳಗಾಗಿ ಆಸ್ಪತ್ರೆ ಸೇರಿದ ಅರ್ಚಕ

    ಕುಕ್ಕೆ ದೇವಸ್ಥಾನ, ಮಠದ ನಡುವೆ ಕಿತ್ತಾಟ – ಹಲ್ಲೆಗೊಳಗಾಗಿ ಆಸ್ಪತ್ರೆ ಸೇರಿದ ಅರ್ಚಕ

    ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯದಲ್ಲಿ ದೇವಸ್ಥಾನ ಹಾಗೂ ಮಠದ ನಡುವೆ ಕಿತ್ತಾಟ ನಡೆಯುತ್ತಿದ್ದು, ಈ ಸಂಬಂಧ ಮಠದ ಪರ ನಿಂತಿದ್ದ ಅರ್ಚಕರೊಬ್ಬರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ.

    ಅರ್ಚಕ ಕುಮಾರ್ ಬನ್ನಿಂತಾಯ(61) ಹಲ್ಲೆಗೊಳಗಾಗಿದ್ದಾರೆ. ಸರ್ಪ ಸಂಸ್ಕಾರ ಸೇವೆ ವಿಷಯಕ್ಕೆ ಮಠ ಮತ್ತು ದೇವಸ್ಥಾನದ ನಡುವೆ ಗಲಾಟೆ ನಡೆದಿತ್ತು. ಇದರಿಂದ ದೇವಸ್ಥಾನ ಹಾಗೂ ಮಠದ ಸಿಬ್ಬಂದಿ ನಡುವೆ ಕೂಡ ಭಿನ್ನಾಭಿಪ್ರಾಯ ಉಂಟಾಗಿತ್ತು. ಆದರೆ ಈ ಹಿನ್ನೆಲೆಯಲ್ಲಿ ದೇವಸ್ಥಾನದ ಅರ್ಚಕ ಮಠದ ಪರ ನಿಂತಿದ್ದರು. ಶನಿವಾರ ರಾತ್ರಿ ವೇಳೆ ದೇವಸ್ಥಾನದ ಹೊರಗೆ ಅರ್ಚಕ ನಿಂತಿದ್ದಾಗ ದುಷ್ಕರ್ಮಿಗಳು ಏಕಾಏಕಿ ಹಲ್ಲೆ ನಡೆಸಿದ್ದಾರೆ.

    ಹಲ್ಲೆಯಿಂದ ಗಾಯಗೊಂಡ ಅರ್ಚಕರನ್ನು ಸ್ಥಳದಲ್ಲಿದ್ದವರು ಪುತ್ತೂರು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ. ದೇವಸ್ಥಾನದ ವಿರುದ್ಧ ನಿಂತು ಮಠಕ್ಕೆ ಬೆಂಬಲ ನೀಡಿದ್ದಕ್ಕೆ ಈ ರೀತಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

    ಬೆಂಗಳೂರಿನ ನಿವಾಸಿ ಪಳನಿಸ್ವಾಮಿ ಅವರು ಸರ್ಪ ಸಂಸ್ಕಾರ ಪೂಜೆ ಮಾಡಿಸಲು 7 ಸಾವಿರ ರೂ. ನೀಡಿ ಮಠದಿಂದ ರಶೀದಿ ಪಡೆದಿದ್ದರು. ಆದರೆ ಈ ರಶೀದಿಯನ್ನು ಹಿಡಿದು ದೇವಸ್ಥಾನಕ್ಕೆ ಪೂಜೆ ಮಾಡಿಸಲು ಹೋದಾಗ ದೇಗುಲದ ಕಚೇರಿಯಲ್ಲಿ ಮಠಕ್ಕೂ ನಮಗೂ ಸಂಬಂಧ ಇಲ್ಲವೆಂದು ಹೇಳಿ ವಾಪಸ್ ಕಳುಹಿಸಿದ್ದಾರೆ. ಹೀಗಾಗಿ ಮಠದ ಸಿಬ್ಬಂದಿ ಬಳಿ ಈ ಬಗ್ಗೆ ಪ್ರಶ್ನಿಸಿದಾಗ ಹಣ ಹಿಂತಿರುಗಿಸಲು ನಿರಾಕರಿಸಿದ್ದಾರೆ. ಈ ಕಾರಣಕ್ಕೆ ಸುಬ್ರಹ್ಮಣ್ಯ ಠಾಣೆಗೆ ಪಳನಿಸ್ವಾಮಿ ದೂರು ನೀಡಿದ್ದರು. ಹೀಗಾಗಿ ದೇವಸ್ಥಾನ ಹಾಗೂ ಮಠದ ಸಿಬ್ಬಂದಿ ನಡುವೆ ಬಿರುಕು ಉಂಟಾಗಿತ್ತು.

  • ಯುವ ಬ್ರಿಗೇಡ್‍ನಿಂದ ಕುಮಾರ ಸಂಸ್ಕಾರ – ಬೆಚ್ಚಿ ಬೀಳುವ ಮಟ್ಟದಲ್ಲಿ ತ್ಯಾಜ್ಯದ ರಾಶಿ ಪತ್ತೆ

    ಯುವ ಬ್ರಿಗೇಡ್‍ನಿಂದ ಕುಮಾರ ಸಂಸ್ಕಾರ – ಬೆಚ್ಚಿ ಬೀಳುವ ಮಟ್ಟದಲ್ಲಿ ತ್ಯಾಜ್ಯದ ರಾಶಿ ಪತ್ತೆ

    ಮಂಗಳೂರು: ಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ಯುವ ಬ್ರಿಗೇಡ್ ಸಂಘಟನೆಯ ಸ್ವಯಂ ಸೇವಕರು ಕುಮಾರಧಾರ ನದಿಯ ದರ್ಪಣ ತೀರ್ಥದಲ್ಲಿ ಸ್ವಚ್ಫತಾ ಕಾರ್ಯ ನಡೆಸಿದ್ದು, ಈ ವೇಳೆ ಬೆಚ್ಚಿ ಬೀಳುವ ಮಟ್ಟದಲ್ಲಿ ತ್ಯಾಜ್ಯದ ರಾಶಿ ಪತ್ತೆಯಾಗಿದೆ.

    ಕುಮಾರಧಾರಾ ನದಿಯಲ್ಲಿ ಶೇಖರಗೊಂಡಿದ್ದ 20ಕ್ಕೂ ಹೆಚ್ಚು ಟ್ರಾಕ್ಟರ್ ಗಳಷ್ಟು ತ್ಯಾಜ್ಯವನ್ನು ನದಿಯಿಂದ ಹೊರ ತೆಗೆಯಲಾಗಿದೆ. ಸುಮಾರು 10 ಸಾವಿರ ಪ್ಲಾಸ್ಟಿಕ್ ಮತ್ತು ಗಾಜಿನ ಬಾಟಲಿಗಳನ್ನು ನದಿಯಿಂದ ಎತ್ತಲಾಗಿದ್ದು, ಇವುಗಳಲ್ಲಿ 3 ಸಾವಿರಕ್ಕೂ ಹೆಚ್ಚು ಮದ್ಯದ ಬಾಟಲಿಗಳು ಸಿಕ್ಕಿವೆ. ಸುಬ್ರಹ್ಮಣ್ಯ ಕ್ಷೇತ್ರ ಪರಿಸರದಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಇದ್ದರೂ ಯಾತ್ರಾರ್ಥಿಗಳು ಮೋಜಿಗಾಗಿ ಕ್ಷೇತ್ರಕ್ಕೆ ಬಂದು ಕುಡಿದು ಬಾಟಲಿಗಳನ್ನು ಎಸೆದಿರುವುದು ಸಾಬೀತಾಗಿದೆ.

    ಸುಬ್ರಹ್ಮಣ್ಯದಲ್ಲಿ 12 ಕೋಟಿ ವೆಚ್ಚದಲ್ಲಿ ಶುದ್ಧೀಕರಣ ಘಟಕ ತೆರೆದಿದ್ದರೂ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇದೀಗ ಯುವ ಬ್ರಿಗೇಡ್ ಸಂಘಟನೆಯ ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ಕಳೆದ ಎರಡು ದಿನಗಳಿಂದ ಸ್ವಚ್ಛತಾ ಕಾರ್ಯ ನಡೆಸಿದ್ದು ಯಾತ್ರಿಗಳು ಇವರ ಕೆಲಸಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

    ಸೂಲಿಬೆಲೆಯವರು ಫೇಸ್‍ಬುಕ್ ನಲ್ಲಿ ದೀರ್ಘವಾದ ಪೋಸ್ಟ್ ಪ್ರಕಟಿಸಿ ನಡೆಸಿದ ಸ್ವಚ್ಛತಾ ಕಾರ್ಯದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

    ಪೋಸ್ಟ್‌ನಲ್ಲಿ ಏನಿದೆ?
    ಎರಡು ದಿನಗಳಿಂದ ಕುಕ್ಕೆ ಸುಬ್ರಹ್ಮಣ್ಯದ ಬಳಿಯಿರುವ ಕುಮಾರಧಾರ ನದಿ ಸ್ವಚ್ಛತೆಯಲ್ಲಿ ಭಾಗಿಯಾಗಿ ಮನಸ್ಸು ವಿಹ್ವಲಗೊಂಡಿದೆ. ದೇವಸ್ಥಾನದ ಹಿಂಬದಿಯಲ್ಲಿ ದರ್ಪಣ ತೀರ್ಥವೆಂದು ಕರೆಯಲ್ಪಡುವ ಈ ನದಿ ಅಕ್ಷರಶಃ ಚರಂಡಿಯಾಗಿಬಿಟ್ಟಿದೆ. ಕಸ, ತ್ಯಾಜ್ಯವಲ್ಲದೇ ಮಲ ವಿಸರ್ಜನೆಗೂ ಇದೇ ಜಾಗವನ್ನು ಬಳಸುತ್ತಿರುವುದು ದುರದೃಷ್ಟಕರ. ನದಿ ಸ್ವಚ್ಛತೆಯಲ್ಲಿ ಇಷ್ಟು ಕೊಳಕು ರಾಡಿಯನ್ನು ಕಂಡು ಬೇಸರಗೊಳ್ಳುತ್ತಿರುವುದು ಬಹುಶಃ ಇದು ಮೊದಲನೇ ಬಾರಿ ಎನಿಸುತ್ತದೆ.

    ಸ್ನಾನಘಟ್ಟದ ಪರಿಸ್ಥಿತಿ ಭಿನ್ನವಲ್ಲ. ಸುಮಾರು 20ಕ್ಕೂ ಹೆಚ್ಚು ಟ್ರಾಕ್ಟರುಗಳಷ್ಟು ತ್ಯಾಜ್ಯವನ್ನು ನದಿಯಿಂದ ಹೊರಗೆಸೆದಿದ್ದೇವೆ. 2.5 ಕಿ.ಮೀ ಉದ್ದದ ರಸ್ತೆಯ ಇಕ್ಕೆಲಗಳನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವ ಪ್ರಯತ್ನ ಮಾಡಿದ್ದೇವೆ. ಕನಿಷ್ಠ 10,000 ಪ್ಲಾಸ್ಟಿಕ್ ಮತ್ತು ಗಾಜಿನ ಬಾಟಲಿಗಳನ್ನು ಸಂಗ್ರಹಿಸಿದ್ದೇವೆ. ಇವುಗಳಲ್ಲಿ 3,000ಕ್ಕೂ ಹೆಚ್ಚು ಹೆಂಡದ ಬಾಟಲಿಗಳೇ ಇವೆ.

    ಸ್ಥಳೀಯ ವರ್ತಕರಿಗೆ ಈ ಕುರಿತಂತೆ ಮಾಹಿತಿ ಕೊಟ್ಟು ಪರಿಸರ ಕಾಪಾಡಿಕೊಳ್ಳುವಂತೆ ಹೇಳಿದರೆ ಮುಕ್ಕಾಲು ಪಾಲು ಜನ ಅತ್ಯಂತ ಕೆಟ್ಟದಾಗಿಯೇ ನಡೆದುಕೊಂಡಿದ್ದಾರೆ. ಮುಜರಾಯಿ ಇಲಾಖೆಗೆ ದೇವಸ್ಥಾನ ಕೊಟ್ಟಿದ್ದೇ ತಪ್ಪಾಯ್ತೇನೋ ಎಂದೆನಿಸುವಷ್ಟು ಅಸಹನೆ ಇದು.

    12 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಶುದ್ಧೀಕರಣ ಘಟಕ ಕೆಲಸ ಮಾಡುತ್ತಿಲ್ಲ. ನೀವು ತೀರ್ಥವೆಂದು ಸ್ನಾನ ಮಾಡುವ ಕುಮಾರಧಾರ ಸ್ನಾನಘಟ್ಟದಲ್ಲಿಯೇ ಚರಂಡಿಯಾಗುವುದನ್ನು ಕಣ್ಣಾರೆ ನೋಡಬಹುದು. ಕುಕ್ಕೆ ಸುಬ್ರಹ್ಮಣ್ಯದ ಉಳಿವಿಗಾಗಿ ನಾವು ಈಗ ಮಹತ್ವದ ಪ್ರಯಾಣ ಮಾಡಬೇಕಾಗಿದೆ. ದಯಮಾಡಿ ಎಲ್ಲರೂ ಕೈಜೋಡಿಸಿ.

  • ಮಕ್ಕಳೊಡನೆ ನೀರಾಟವಾಡಿ ಸಂಭ್ರಮಿಸಿದ ಕುಕ್ಕೆಯ ಗಜರಾಜ- ವಿಡಿಯೋ ನೋಡಿ

    ಮಕ್ಕಳೊಡನೆ ನೀರಾಟವಾಡಿ ಸಂಭ್ರಮಿಸಿದ ಕುಕ್ಕೆಯ ಗಜರಾಜ- ವಿಡಿಯೋ ನೋಡಿ

    ಮಂಗಳೂರು: ವಾರ್ಷಿಕ ಚಂಪಾ ಷಷ್ಠಿ ಉತ್ಸವದ ಅಂಗವಾಗಿ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದ ನೀರಬಂಡಿ ಉತ್ಸವದಲ್ಲಿ ದೇಗುಲದ ಆನೆಯು ಮಕ್ಕಳೊಡನೆ ನೀರಾಟವಾಡಿ ಸಂಭ್ರಮಿಸಿತು.

    ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಾರ್ಷಿಕ ಚಂಪಾ ಷಷ್ಠಿ ಉತ್ಸವದ ಕೊನೆಯ ಆಚರಣೆಯ ಅಂಗವಾಗಿ ನೀರಬಂಡಿ ಉತ್ಸವ ಗುರುವಾರದಂದು ನಡೆಸಲಾಯಿತು. ನೀರಬಂಡಿ ಉತ್ಸವ ಅಂಗವಾಗಿ ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಗರ್ಭಗುಡಿಯ ಆವರಣದ ಅಂಗಳದಲ್ಲಿ ನೀರು ತುಂಬಿಸಿ, ದೇವರ ಪಲ್ಲಕ್ಕಿ ಉತ್ಸವ ನಡೆಸಲಾಯಿತು. ಈ ಉತ್ಸವದಲ್ಲಿ ದೇಗುಲದ ಆನೆ ಮಕ್ಕಳೊಡನೆ ನೀರಾಟವಾಡಿದ್ದು ಎಲ್ಲರ ಗಮನ ಸೆಳೆಯಿತು.

    ಗುರುವಾರ ರಾತ್ರಿ ಮಹಾಪೂಜೆಯ ಬಳಿಕ ಪಲ್ಲಕ್ಕಿ ಉತ್ಸವ ನೇರೆವೇರಿತು. ನಂತರ ನೀರಿನಲ್ಲಿ ನಡೆದ ಬಂಡಿ ರಥೋತ್ಸವ ಆಕರ್ಷಣೀಯವಾಗಿತ್ತು. ಅದರಲ್ಲೂ ದೇಗುಲದ ಆನೆ ಯಶಸ್ವಿ ಮಕ್ಕಳೊಂದಿಗೆ ನೀರಾಟವಾಡುತ್ತಾ ಸೊಂಡಿಲಿನಿಂದ ನೀರನ್ನು ಚಿಮ್ಮಿಸಿ ಸಂಭ್ರಮಿಸಿದೆ. ನೀರಾಟದಲ್ಲಿ ದೇಗುಲದ ಸಿಬ್ಬಂದಿ ಮತ್ತು ಮಕ್ಕಳು ಭಾಗವಹಿಸಿದ್ದು, ನೀರಬಂಡಿ ಉತ್ಸವವನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು.

    ಈ ವಿಶೇಷ ನೀರಬಂಡಿ ಉತ್ಸವದಿಂದ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಚಂಪಾ ಷಷ್ಠಿ ಉತ್ಸವ ಕೊನೆಯಾಗಿದ್ದು, ಇಂದಿನಿಂದ 15 ದಿನಗಳಿಂದ ಸ್ಥಗಿತಗೊಂಡಿದ್ದ ಸರ್ಪ ಸಂಸ್ಕಾರ ಸೇವೆಗಳು ಎಂದಿನಂತೆ ದೇಗುಲದಲ್ಲಿ ನಡೆಯಲಿದೆ.

    https://www.youtube.com/watch?v=I445kVV9My8

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕುಕ್ಕೆಯಲ್ಲಿ ದಾಂಧಲೆ: ಚೈತ್ರಾಗೆ ಜಡ್ಜ್ ತಪರಾಕಿ

    ಕುಕ್ಕೆಯಲ್ಲಿ ದಾಂಧಲೆ: ಚೈತ್ರಾಗೆ ಜಡ್ಜ್ ತಪರಾಕಿ

    ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯದಲ್ಲಿ ದಾಂಧಲೆಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನ್ಯಾಯಾಂಗ ಬಂಧನದಲ್ಲಿರುವ ಚೈತ್ರಾಳಿಗೆ ಜಾಮೀನು ನೀಡಲು ನ್ಯಾಯಾಧೀಶರು ನಿರಾಕರಿಸಿದ್ದಾರೆ.

    ಎರಡು ದಿನದ ಹಿಂದೆ ಚೈತ್ರಾ ಕುಂದಾಪುರ ಕೋರ್ಟ್ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ಚೈತ್ರಾ ಅನಾರೋಗ್ಯದ ಹಿನ್ನೆಲೆಯಲ್ಲಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದಳು. ಮಂಗಳೂರಿನ ಸಬ್ ಜೈಲಿನ ಸೂಪರಿಂಟೆಂಡೆಂಟ್ ಆಸ್ಪತ್ರೆಗೆ ದಾಖಲಾಗಿದ್ದಾಳೆ ಎಂದು ಕೋರ್ಟ್ ಗೆ ಹೇಳಿಕೆ ನೀಡಿದ್ದರು.

    ಇಂದಿನ ವಿಚಾರಣೆ ವೇಳೆ ಆದೇಶವಿದ್ದರೂ ನ್ಯಾಯಾಲಯಕ್ಕೆ ಹಾಜರಾಗದೇ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದಕ್ಕೆ ಜಡ್ಜ್ ಚೈತ್ರಳಿಗೆ ತಪರಾಕಿ ಹಾಕಿದ್ದಾರೆ. ನ್ಯಾಯಾಲಯಕ್ಕೆ ಅವಮಾನ ಮಾಡಿದ್ದಕ್ಕೆ ಜಡ್ಜ್ ಚೈತ್ರಾಳಿಗೆ ಜಾಮೀನು ನೀಡಲು ನಿರಾಕರಿಸಿದ್ದಾರೆ. ಹೀಗಾಗಿ ಚೈತ್ರಾ ನ್ಯಾಯಾಂಗ ಬಂಧನದ ಅವಧಿ ನವೆಂಬರ್ 19ರವರೆಗೆ ಮುಂದುವರಿಯಲಿದೆ.

    ಏನಿದು ಪ್ರಕರಣ?
    ಕಳೆದ ಎರಡು ತಿಂಗಳಿಂದ ವಿವಾದಕ್ಕೆ ಕಾರಣವಾಗಿದ್ದ ಸುಬ್ರಹ್ಮಣ್ಯ ಮಠ ಮತ್ತು ದೇವಸ್ಥಾನದ ಸಂಘರ್ಷ ನವರಾತ್ರಿಯ ಮಧ್ಯೆ ಮಠದ ಸ್ವಾಮೀಜಿ ಉಪವಾಸ ಕುಳಿತಿದ್ದು ದೊಡ್ಡ ರಾದ್ಧಾಂತಕ್ಕೆ ಎಡೆ ಮಾಡಿತ್ತು. ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಸಾಕಷ್ಟು ಚರ್ಚೆಗೂ ಕಾರಣವಾಗಿತ್ತು. ಹಾಗೆಯೇ ವಾಟ್ಸಾಪ್ ಗ್ರೂಪ್ ಒಂದರಲ್ಲಿ ಚೈತ್ರಾ ಕುಂದಾಪುರ ಮತ್ತು ಸುಬ್ರಹ್ಮಣ್ಯದ ಹುಡುಗರ ಮಧ್ಯೆ ಭಾರೀ ವಾಕ್ಸಮರ ನಡೆದಿತ್ತು.

    ಆ ಕಡೆಯಿಂದ ಕುಂದಾಪುರಕ್ಕೆ ಬಂದರೆ ನೋಡಿಕೊಳ್ತೀನಿ ಅಂದಿದ್ರೆ, ಈ ಕಡೆಯಿಂದ ಸುಬ್ರಹ್ಮಣ್ಯಕ್ಕೆ ಬಂದರೆ ನೋಡ್ತೀವಿ ಅಂತಾ ಸವಾಲು ಕೂಡ ಆಗಿತ್ತು. ಇತ್ತ ವಾಟ್ಸಪ್ ಸವಾಲು ಸ್ವೀಕರಿಸಿದ ಚೈತ್ರಾ ಕುಂದಾಪುರದ ತನ್ನ ಹುಡುಗರನ್ನು ಕಟ್ಟಿಕೊಂಡು ಸ್ವಾಮೀಜಿಯನ್ನು ಕಾಣುವ ನೆಪದಲ್ಲಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದಿದ್ದಳು.

    ಈ ವಿಚಾರ ತಿಳಿದು ಚೈತ್ರಾಳನ್ನು ಪ್ರಶ್ನೆ ಮಾಡಲು ಬಂದಿದ್ದ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರ ನಡುವೆ ಮಾತಿಗೆ ಮಾತು ಬೆಳೆದಿತ್ತು. ಬಳಿಕ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಅಂಗಳದಲ್ಲಿಯೇ ಬೀದಿ ಕಾಳಗ ನಡೆದಿತ್ತು. ಚೈತ್ರಾ ಮತ್ತು ಹುಡುಗರು ರಾಡ್ ಹಿಡ್ಕೊಂಡು ಹಿಂದೂ ಜಾಗರಣ ವೇದಿಕೆಯ ಸುಳ್ಯ ತಾಲೂಕು ಕಾರ್ಯದರ್ಶಿ ಗುರುಪ್ರಸಾದ್ ಪಂಜ ಎಂಬಾತನ ಮೇಲೆ ಹಲ್ಲೆ ನಡೆಸಿದ್ದು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

    ವಿಚಾರ ತಿಳಿದ ಸುಬ್ರಹ್ಮಣ್ಯ ಪೊಲೀಸರು ಸ್ಥಳಕ್ಕಾಗಮಿಸಿ, ಲಾಠಿಚಾರ್ಜ್ ನಡೆಸಿ ಎರಡು ಗುಂಪನ್ನು ಚದುರಿಸಿದ್ದರು. ಸಂಜೆ ಹೊತ್ತಿಗೆ ಚೈತ್ರಾ ನಡೆಸಿದ ದರ್ಪ ಮತ್ತು ರಾಡಿನಲ್ಲಿ ಹಲ್ಲೆ ನಡೆಸಿದ್ದು ಸ್ಥಳೀಯರ ಮೊಬೈಲಿನಲ್ಲಿ ಸೆರೆಯಾಗಿತ್ತು. ಈ ಪ್ರಕರಣ ಸಂಬಂಧ ಪೊಲೀಸರು ಚೈತ್ರಾಳನ್ನು ಬಂಧಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೊಡಗಿನ ಸಂತ್ರಸ್ತರಿಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ 2 ಕೋಟಿ ರೂ. ಪರಿಹಾರ

    ಕೊಡಗಿನ ಸಂತ್ರಸ್ತರಿಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ 2 ಕೋಟಿ ರೂ. ಪರಿಹಾರ

    ಮಂಗಳೂರು: ಕೊಡಗಿನ ಸಂತ್ರಸ್ತರಿಗೆ ರಾಜ್ಯದ ಸಂಘ, ಸಂಸ್ಥೆ, ದೇವಸ್ಥಾನ ಸಮಿತಿ, ನಾಯಕರು ಸೇರಿದಂತೆ ಜನಸಾಮಾನ್ಯರು ಧನ ಸಹಾಯಕ್ಕೆ ಮುಂದಾಗಿದ್ದಾರೆ. ಇಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಸಮಿತಿಯು 2 ಕೋಟಿ ರೂ. ನೆರವುವನ್ನು ನೀಡಿದೆ.

    ದೇವಸ್ಥಾನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ನೇತೃದಲ್ಲಿ ವ್ಯವಸ್ಥಾಪನಾ ಸಮಿತಿ ಸಭೆ ನಡೆಸಿ, ಈ ನಿರ್ಣಯ ಕೈಗೊಳ್ಳಲಾಗಿದ್ದು, ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಣವನ್ನು ನೀಡಲು ಸಮಿತಿಯ ಸದಸ್ಯರು ನಿರ್ಧರಿಸಿದ್ದಾರೆ.

    ದಾವಣಗೆರೆ: ಜಿಲ್ಲಾ ಸಹಕಾರ ಬ್ಯಾಂಕ್ ಒಕ್ಕೂಟ ಗೌರವಾಧ್ಯಕ್ಷ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ ಅವರು, ಬ್ಯಾಂಕ್‍ನಿಂದ ಕೇರಳ ಹಾಗೂ ಮಡಿಕೇರಿ ಸಂತ್ರಸ್ತರಿಗೆ ನೀಡಲು 1 ಕೋಟಿ ಪರಿಹಾರ ನೀಡಲು ನಿರ್ಧರಿಸಿದ್ದಾರೆ.

    ಒಟ್ಟು 1 ಕೋಟಿ ರೂ.ಗಳಲ್ಲಿ 50 ಲಕ್ಷ ರೂ. ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಾಗೂ 50 ಲಕ್ಷ ರೂ.ವನ್ನು ಪ್ರಧಾನಮಂತ್ರಿ ಪರಿಹಾರ ನಿಧಿಗೆ ನೀಡಲು ನಿರ್ಧರಿಸಿದ್ದಾರೆ. ಜೊತೆಗೆ ಶಾಮನೂರು ಶಿವಶಂಕರಪ್ಪ ಅವರು ಕೇರಳ ಹಾಗೂ ಕೊಡಗಿಗೆ ವೈಯಕ್ತಿಕ 25 ಲಕ್ಷ ರೂ. ನೀಡಲು ಮುಂದಾಗಿದ್ದಾರೆ.

    ಬೀದರ್: ನಗರದಲ್ಲಿಯೂ ಕೂಡಾ ಭಗತ್ ಸಿಂಗ್ ಯೂತ್ ಬ್ರೀಗೆಡ್ ಸಂಘಟನೆಯು ಶನಿವಾರದಿಂದ ಅಭಿಯಾನ ಪ್ರಾರಂಭ ಮಾಡಿದೆ. ಕಾರ್ಯಕರ್ತರು ರಸ್ತೆಗಳಿದು ಪರಿಹಾರ ನಿಧಿ, ಆಹಾರ ಸಾಮಗ್ರಿಗಳು, ಔಷಧಿ, ಸಂತ್ರಸ್ತರಿಗೆ ಬೇಕಾಗುವ ಬಟ್ಟೆ, ಆಹಾರ ಧಾನ್ಯಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ಸಂಗ್ರಹಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://youtu.be/QCNusRT6oCA

  • ಸಿಎಂ ಎಚ್.ಡಿ.ಕುಮಾರಸ್ವಾಮಿಗೆ ಜಲ ದಿಗ್ಭಂಧನ

    ಸಿಎಂ ಎಚ್.ಡಿ.ಕುಮಾರಸ್ವಾಮಿಗೆ ಜಲ ದಿಗ್ಭಂಧನ

    ಮಂಗಳೂರು: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಗೆ ಕುಕ್ಕೆ ಸುಬ್ರಹ್ಮಣ್ಯ ಸಂಪರ್ಕಿಸುವ ರಸ್ತೆಗಳು ಭಾರೀ ಮಳೆಯಿಂದಾಗಿ ನೀರಿನಿಂದ ಆವೃತವಾಗಿದ್ದು, ರಾಷ್ಟ್ರೀಯ ಹೆದ್ದಾರಿ ಉದ್ದನೆಯಲ್ಲಿ ರಸ್ತೆಗೆ ನೀರು ನುಗ್ಗಿದೆ.

    ಗುಂಡ್ಯಾ ಮೂಲಕ ಕುಕ್ಕೆ ಸುಬ್ರಹ್ಮಣ್ಯ ಸಂಪರ್ಕ ಕಡಿತವಾಗಿದೆ. ಉಪ್ಪಿನಂಗಡಿಯಿಂದ ಸುಬ್ರಹ್ಮಣ್ಯ ಸಂಪರ್ಕಿಸುವ ಹೊಸ್ಮಠ ಸೇತುವೆಯೂ ಕೂಡ ಬಂದ್ ಆಗಿದ್ದು, ಪುತ್ತೂರಿನ ಮಾರ್ಗವಾಗಿ ಬೆಳ್ಳಾರೆ ಮೂಲಕ ಸುತ್ತು ಬಳಸಿ ಸುಬ್ರಹ್ಮಣ್ಯಕ್ಕೆ ಬರಲಿರುವ ಸಿಎಂ ಕುಮಾರಸ್ವಾಮಿ ಗೆ ಕುಕ್ಕೆ ಯಲ್ಲಿ ದೋಷ ನಿವಾರಣಾ ಪೂಜೆಗೆ ವಿಘ್ನ ಸಂಭವಿಸಿದೆ.

    ಧರ್ಮಸ್ಥಳದಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೊರಟ ಸಿಎಂ ಕುಟುಂಬ ನಿನ್ನೆ ರಾತ್ರಿ ಧರ್ಮಸ್ಥಳ ದಲ್ಲಿ ಪೂಜೆ ಸಲ್ಲಿಸಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಸೇರಿದಂತೆ ಕುಟುಂಬ ಸಮೇತ ಅಲ್ಲೇ ತಂಗಿದ್ದರು. ಕುಮಾರಸ್ವಾಮಿ ಅವರು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕೆಟ್ಟ ದೃಷ್ಟಿ ಮತ್ತು ದೋಷ ನಿವಾರಣೆಗಾಗಿ ನಾಗಪೂಜೆ ಮಾಡಿಸುತ್ತಿದ್ದು, ಮಧ್ಯಾಹ್ನ ವರೆಗೆ ಸಿಎಂ ಕುಟುಂಬ ವಿಶೇಷ ಪೂಜೆಯಲ್ಲಿ ಭಾಗಿಯಾಗಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಸೋಮವಾರ ಧರ್ಮಸ್ಥಳ, ಸುಬ್ರಹ್ಮಣ್ಯ ದೇವಾಲಯಕ್ಕೆ ಸಿಎಂ ಭೇಟಿ

    ಸೋಮವಾರ ಧರ್ಮಸ್ಥಳ, ಸುಬ್ರಹ್ಮಣ್ಯ ದೇವಾಲಯಕ್ಕೆ ಸಿಎಂ ಭೇಟಿ

    ಮಂಗಳೂರು: ಸೋಮವಾರ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ.

    ಸೋಮವಾರ ಸಂಜೆ 4.30ಕ್ಕೆ ಧರ್ಮಸ್ಥಳಕ್ಕೆ ಆಗಮಿಸಲಿರುವ ಸಿಎಂ ಕ್ಷೇತ್ರದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಸುಬ್ರಹ್ಮಣ್ಯಕ್ಕೆ ತೆರಳಲಿದ್ದು ರಾತ್ರಿ ಅಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಮಂಗಳವಾರ ಬೆಳಗ್ಗೆ 7 ಗಂಟೆಗೆ ವಿಶೇಷ ಪೂಜೆಯಲ್ಲಿ ಸಿಎಂ ಭಾಗಿಯಾಗಲಿದ್ದಾರೆ. ಪೂಜೆ ಬಳಿಕ ಸಿಎಂ ಬೆಂಗಳೂರಿಗೆ ಹಿಂದಿರುಗಲಿದ್ದಾರೆ.

    ಈ ಹಿಂದೆ ಸಿದ್ದರಾಮಯ್ಯನವರು 2017ರ ಅಕ್ಟೋಬರ್ 22 ರಂದು ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಇದಾದ ಬಳಿಕ ಅಕ್ಟೋಬರ್ 29 ರಂದು ಪ್ರಧಾನಿ ನರೇಂದ್ರ ಮೋದಿ ಧರ್ಮಸ್ಥಳಕ್ಕೆ ಆಗಮಿಸಿದ್ದರು. ಬಳಿಕ ಉಜಿರೆಯಲ್ಲಿ ನಡೆದ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

  • ಉಡುಪಿಯಲ್ಲಿ ವರುಣನ ಆರ್ಭಟ ಶುರು!

    ಉಡುಪಿಯಲ್ಲಿ ವರುಣನ ಆರ್ಭಟ ಶುರು!

    ಉಡುಪಿ: ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗಿದ್ದು, ಕಳೆದ 15 ದಿನಗಳಿಂದ ವರುಣನ ಆರ್ಭಟ ಉಡುಪಿ ಜಿಲ್ಲೆಯಾದ್ಯಂತ ಕೊಂಚ ಕಡಿಮೆಯಾಗಿತ್ತು ಆದರೆ ಇಂದು ಬೆಳಗ್ಗೆಯಿಂದಲೇ ಭಾರೀ ಮಳೆಯಾಗುತ್ತಿದೆ.

    ನಗರದಾದ್ಯಂತ ಮುಂಜಾನೆ ಮಳೆಯಾಗಿದ್ದರಿಂದ ಸಂಚಾರಕ್ಕೆ ಸಮಸ್ಯೆಯಾಗಿದ್ದು, ಕಾರ್ಕಳ, ಕುಂದಾಪುರ, ಕಾಪುವಿನಲ್ಲಿ ವಿಪರೀತ ಮಳೆಯಾಗಿದೆ. ಬೈಂದೂರಿನ ಕೆಲವೆಡೆ ಮಳೆಯಾಗಿದ್ದು, ತಗ್ಗು ಪ್ರದೇಶದ ಗದ್ದೆಗಳಿಗೆ ನೀರು ಹರಿದಿದೆ.

    ಜಿಲ್ಲೆಯಾದ್ಯಂತ ಕಾರ್ಮೋಡ ಮುಸುಕಿದ ವಾತಾವರಣವಿದ್ದು, ಮುಂದಿನ ಎರಡು ದಿನ ಭಾರೀ ಮಳೆಯಾಗಬಹುದು. ಪಶ್ಚಿಮ ಘಟ್ಟದ ತಪ್ಪಲು ಪ್ರದೇಶಗಳಾದ ಹೆಬ್ರಿ, ಕೊಲ್ಲೂರು, ಮುಟ್ಲುಪಾಡಿಯಲ್ಲಿ ಅತೀ ಹೆಚ್ಚು ಮಳೆ ಸುರಿಯುತ್ತಿದೆ. ಸೋಮೇಶ್ವರ ಅಭಯಾರಣ್ಯ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದೆ. ಅರಬ್ಬೀ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳುವ ಮೀನುಗಾರರಿಗೆ ಜಿಲ್ಲಾಡಳಿತ ಮುಂಜಾಗೃತಾ ಕ್ರಮವಾಗಿ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ.

    ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕೂಡ ಮಳೆಯ ಅಬ್ಬರ ಮುಂದುವರಿದಿದ್ದು, ಕುಕ್ಕೆ ಸುಬ್ರಹ್ಮಣ್ಯ ಬಳಿಯ ಹೊಸಮಠ ಸೇತುವೆ 3ನೇ ದಿನವೂ ಮುಳುಗಡೆಯಾಗಿದೆ. ಉಪ್ಪಿನಂಗಡಿ-ಸುಬ್ರಹ್ಮಣ್ಯ ಸಂಪರ್ಕಿಸುವ ರಾಜ್ಯ ಹೆದ್ದಾರಿಯ ಹೊಸ್ಮಠ ಸೇತುವೆ, ಸುಬ್ರಹ್ಮಣ್ಯ ಕ್ಷೇತ್ರದ ಸ್ನಾನಘಟ್ಟವೂ ಮುಳುಗಡೆಯಾಗಿದೆ.

    ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಸುಳ್ಯದಲ್ಲಿ ಮಳೆ ಕಡಿಮೆಯಾಗಿದ್ದು, ಎರಡು ದಿನಗಳಿಂದ ನಿರಂತರವಾಗಿ ಮಳೆ ಸುರಿದಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ಭಕ್ತರಿಗೆ ಕುಕ್ಕೆ ಸುಬ್ರಹ್ಮಣ್ಯದಿಂದ ವಿಶೇಷ ಆಫರ್

    ಭಕ್ತರಿಗೆ ಕುಕ್ಕೆ ಸುಬ್ರಹ್ಮಣ್ಯದಿಂದ ವಿಶೇಷ ಆಫರ್

    ಮಂಗಳೂರು: ದಕ್ಷಿಣ ಭಾರತದ ಹೆಸರಾಂತ ನಾಗ ಕ್ಷೇತ್ರ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಜುಲೈ 5 ರಿಂದ ಸಂಜೆಯ ಕಾಲದಲ್ಲೂ ಆಶ್ಲೇಷ ಬಲಿ  ಸೇವೆ ಪೂಜೆ ನೆರವೇರಿಸಲು ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ.

    ಕ್ಷೇತ್ರದಲ್ಲಿ ಬೆಳಗ್ಗೆ ಮಾತ್ರ ಆಶ್ಲೇಷ ಬಲಿ ಸೇವೆ ನಡೆಸಲಾಗುತ್ತಿತ್ತು. ಪ್ರತಿದಿನ 500ಕ್ಕೂ ಮಿಕ್ಕಿದ ಸೇವೆಗಳು ಇಲ್ಲಿ ನಡೆಯುತ್ತಿದ್ದು, ರಜಾ ದಿನಗಳಲ್ಲಿ ಇದು 1,400 ದಾಟುತ್ತದೆ. ಭಕ್ತರು ಹೆಚ್ಚಿದ ಬೇಡಿಕೆಯ ಹಿನ್ನೆಲೆಯಲ್ಲಿ ಸಂಜೆ 5 ಗಂಟೆಗೆ ಆಶ್ಲೇಷ ಬಲಿ ಸೇವೆ ನಡೆಸಲು ನಿರ್ಧರಿಸಲಾಗಿದೆ.

    ಸಂಜೆ ಕ್ಷೇತ್ರದಲ್ಲಿ ದೀವಟಿಗೆ ಪೂಜೆ ಆಗುವುದಕ್ಕೆ ಮುಂಚಿತವಾಗಿ ಒಂದು ಪಾಳಿಯಲ್ಲಿ ಸೇವೆ ನೆರವೇರಿಸಲು ತೀರ್ಮಾನಿಸಲಾಗಿದೆ. ಪ್ರತಿ ತಿಂಗಳ ಶುದ್ಧ ಷಷ್ಠಿ, ಏಕಾದಶಿ, ಇತ್ಯಾದಿ ಉಪವಾಸ ದಿನಗಳು ಮತ್ತು ವಾರ್ಷಿಕ ಜಾತ್ರಾ ಸಮಯ ಹೊರತುಪಡಿಸಿ ಉಳಿದೆಲ್ಲಾ ದಿನಗಳಲ್ಲಿ ಸಾಯಂಕಾಲದ ಆಶ್ಲೇಷ ಬಲಿ ಸೇವೆಯು ನಡೆಯಲಿದೆ.

  • ಕರ್ನಾಟಕದಲ್ಲಿರುವ ಶ್ರೀಮಂತ ದೇಗುಲಗಳ ಪಟ್ಟಿ ರಿಲೀಸ್- ಕುಕ್ಕೆ ಸುಬ್ರಹ್ಮಣ್ಯ ನಂಬರ್ 1

    ಕರ್ನಾಟಕದಲ್ಲಿರುವ ಶ್ರೀಮಂತ ದೇಗುಲಗಳ ಪಟ್ಟಿ ರಿಲೀಸ್- ಕುಕ್ಕೆ ಸುಬ್ರಹ್ಮಣ್ಯ ನಂಬರ್ 1

    ಬೆಂಗಳೂರು: ರಾಜ್ಯದ ದೇವರುಗಳಲ್ಲಿ ಶ್ರೀಮಂತ ದೇವರ ಪಟ್ಟಿಯನ್ನು ಮುಜರಾಯಿ ಇಲಾಖೆ ರಿಲೀಸ್ ಮಾಡಿದೆ. ರಾಜ್ಯದಲ್ಲಿ ದಕ್ಷಿಣ ಕನ್ನಡದ ಕುಕ್ಕೆ ಸುಬ್ರಹ್ಮಣ್ಯ ನಂಬರ್ ಒನ್ ಶ್ರೀಮಂತ ದೇವರು ಅಂತಾ ಮುಜರಾಯಿ ಇಲಾಖೆ ಕ್ರೆಡಿಟ್ ಕೊಟ್ಟಿದೆ.

    ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಎರಡನೇ ಸ್ಥಾನದಲ್ಲಿದ್ದು, ಮೈಸೂರಿನ ಚಾಮುಂಡೇಶ್ವರಿ ದೇವಾಲಯ ತೃತೀಯ ಸ್ಥಾನದಲ್ಲಿದೆ. ದಾಖಲೆಯ ಮಟ್ಟದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಾಸ್ಥಾನದಲ್ಲಿ ಹುಂಡಿಯ ದುಡ್ಡು ಸಂಗ್ರಹವಾಗಿದೆ. ಇನ್ನು ಕಟೀಲು ದುರ್ಗಾಪರಮೇಶ್ವರಿ ನಾಲ್ಕನೆಯ ಸ್ಥಾನದಲ್ಲಿದ್ರೇ, ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಾಸ್ಥಾನ ಐದನೆಯ ಶ್ರೀಮಂತ ದೇವಸ್ಥಾನವಾಗಿದೆ.

    ಬೆಂಗಳೂರಿನ ಬನಶಂಕರಿ ದೇಗುಲ ಒಂಬತ್ತನೇಯ ಶ್ರೀಮಂತ ದೇವಸ್ಥಾನವಾಗಿದೆ. ಇನ್ನು ದೇಗುಲದದಲ್ಲಿ ಸಂಗ್ರಹವಾದ ಹುಂಡಿ ಹಣದಲ್ಲಿ ಶೇ.60ರಷ್ಟು ದೇಗುಲದ ಅಭಿವೃದ್ಧಿಗೆ ಬಳಸಲಾಗಿದೆ ಅಂತಾ ಮುಜರಾಯಿ ಲೆಕ್ಕ ಕೊಟ್ಟಿದೆ.

    1. ಕುಕ್ಕೆ ಸುಬ್ರಹ್ಮಣ್ಯ – 95,92,54,363 ರೂ.
    2. ಕೊಲ್ಲೂರು ಮೂಕಾಂಬಿಕೆ – 43,92,09,926 ರೂ.
    3. ಚಾಮುಂಡೇಶ್ವರಿ ದೇಗುಲ – 30,40,07,300 ರೂ.
    4. ದುರ್ಗಾಪರಮೇಶ್ವರಿ ದೇಗುಲ-23,91,59,886 ರೂ.
    5. ಶ್ರೀಕಂಠೇಶ್ವರ ನಂಜನಗೂಡು-19,98,16,618.65 ರೂ.
    6. ಬೆಂಗಳೂರು ಬನಶಂಕರಿ- 8,53,77,373 ರೂ.