Tag: Kukke Subramanya

  • ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆಶ್ಲೇಷ ಪೂಜೆಗಾಗಿ ರಾತ್ರಿ ಪೂರ್ತಿ ಸಾಲಲ್ಲಿ ನಿಂತ ಭಕ್ತರು

    ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆಶ್ಲೇಷ ಪೂಜೆಗಾಗಿ ರಾತ್ರಿ ಪೂರ್ತಿ ಸಾಲಲ್ಲಿ ನಿಂತ ಭಕ್ತರು

    ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಕೆಲ ದಿನಗಳಿಂದ ಹೆಚ್ಚಿನ ಭಕ್ತರು ಭೇಟಿ ನೀಡುತ್ತಿದ್ದು, ಆಶ್ಲೇಷ ಪೂಜೆಗಾಗಿ ರಾತ್ರಿ ಪೂರ್ತಿ ಸಾಲಲ್ಲಿ ನಿಂತಿದ್ದಾರೆ.

    ನಾಳೆ ಸೋಮವಾರ ಆಶ್ಲೇಷ ನಕ್ಷತ್ರ ವಿಶೇಷ ದಿನವಾಗಿರುವುದರಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಸೋಮವಾರದ ಸೇವೆ ನೆರವೇರಿಸಲು ಭಾನುವಾರ ರಾತ್ರಿಯೇ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಕುಕ್ಕೆಯಲ್ಲಿ ಸೇವೆಗಳಿಗೆ ರಶೀದಿಯನ್ನು ಬೆಳಿಗ್ಗೆ 6 ಗಂಟೆಗೆ ನೀಡಲು ಪ್ರಾರಂಭಿಸುತ್ತಾರೆ. ಆದರೆ ಇತ್ತ ಭಕ್ತರು ರಶೀದಿ ವಂಚಿತವಾಗುವ ಅಥವಾ ತಡವಾಗುವ ಆತಂಕದಿಂದ ಭಾನುವಾರ ರಾತ್ರಿಯೇ ಕ್ಷೇತ್ರದ ಕಚೇರಿ ಬಳಿ ಸರತಿ ಸಾಲಿನಲ್ಲಿ ನಿಂತಿದ್ದಾರೆ.

    ಆಶ್ಲೇಷ ನಕ್ಷತ್ರ ದಿನದಂದು ಹೆಚ್ಚಿನ ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡಿ ಆಶ್ಲೇಷ ಬಲಿ ಸೇವೆ ಮಾಡಿಸುತ್ತಾರೆ. ಕೋವಿಡ್ ಹಿನ್ನೆಲೆಯಲ್ಲಿ ಸೇವೆಗಳಿಗೆ ಮಿತಿ ಇರುವುದರಿಂದ ಭಕ್ತರು ರಾತ್ರಿಯೇ ಸರತಿ ಸಾಲಿನಲ್ಲಿ ನಿಂತಿದ್ದಾರೆ.

  • ಕೋವಿಡ್‌ನಿಂದ ದೇವಾಲಯದ ಆದಾಯಕ್ಕೆ ಭಾರೀ ಹೊಡೆತ- ಕಳೆದ ವರ್ಷ ಎಷ್ಟು? ಈ ವರ್ಷ ಎಷ್ಟು ಬಂದಿದೆ?

    ಕೋವಿಡ್‌ನಿಂದ ದೇವಾಲಯದ ಆದಾಯಕ್ಕೆ ಭಾರೀ ಹೊಡೆತ- ಕಳೆದ ವರ್ಷ ಎಷ್ಟು? ಈ ವರ್ಷ ಎಷ್ಟು ಬಂದಿದೆ?

    ಬೆಂಗಳೂರು: ಕೋವಿಡ್‌ 19 ನಿಂದಾಗಿ ದೇವಾಲಯಗಳ ಆದಾಯಕ್ಕೆ ಭಾರೀ ಹೊಡೆತ ಬಿದ್ದಿದೆ. ಕಳೆದ ವರ್ಷ 317 ಕೋಟಿ ರೂ. ಆದಾಯ ಗಳಿಸಿದ್ದರೆ ಈ ಬಾರಿ ಏಪ್ರಿಲ್‌ 1ರಿಂದ ಜುಲೈ 31ರವರೆಗೆ ಕೇವಲ 18 ಕೋಟಿ ರೂ. ಆದಾಯ ಬಂದಿದೆ.

    ಏಪ್ರಿಲ್‌ , ಮೇ ತಿಂಗಳಿನಲ್ಲಿ ಮಕ್ಕಳಿಗೆ ರಜೆ, ಜಾತ್ರೆಗಳು ನಡೆಯುವ ಕಾರಣ ದೇವಾಲಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಆದಾಯ ಬರುತ್ತಿತ್ತು. ಆದರೆ ಈ ಬಾರಿ ಕೊರೊನಾದಿಂದ ಜನ ಮನೆಯಲ್ಲೇ ಇದ್ದ ಪರಿಣಾಮ ಆದಾಯದಲ್ಲಿ ಭಾರೀ ಇಳಿಕೆಯಾಗಿದೆ.

    ಲಾಕ್‌ಡೌನ್‌ ಜಾರಿಯಾದ ಮಾರ್ಚ್‌ 24ರಿಂದ ಜೂನ್‌ 8 ರವರೆಗೆ ದೇವಾಲಯಗಳಿಗೆ ಭಕ್ತರ ಪ್ರವೇಶಕ್ಕೆ ಸಂಪೂರ್ಣ ನಿಷೇಧ ಹೇರಲಾಗಿತ್ತು. ಜೂನ್‌ 8ರಿಂದ ದೇವಸ್ಥಾನ ತೆರೆಯಲು ಷರತ್ತುಬದ್ಧ ಅನುಮತಿ ನೀಡಿದ್ದರೂ ಭಕ್ತರು ದೊಡ್ಡ ಪ್ರಮಾಣದಲ್ಲಿ ಬಾರದ ಕಾರಣ ಆದಾಯ ಇಳಿಕೆಯಾಗಿದೆ.

    ಯಾವ ದೇವಾಲಯದ ಆದಾಯ ಎಷ್ಟಿದೆ?
    ಆದಾಯ ಸಂಗ್ರಹದಲ್ಲಿ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ಮೊದಲ ನಾಲ್ಕು ತಿಂಗಳಲ್ಲಿ ಕೇವಲ 4.28 ಕೋಟಿ ರೂ. ಗಳಿಸಿದೆ. ಕಳೆದ ವರ್ಷ ಈ ಅವಧಿಯಲ್ಲಿ ಒಟ್ಟು 98.92 ಕೋಟಿ ರೂ. ಗಳಿಸಿತ್ತು.

    ಕೊಲ್ಲೂರು ಮೂಕಾಂಬಿಕಾ ದೇವಾಲಯ 4.51 ಕೋಟಿ ರೂ. (ಕಳೆದ ವರ್ಷ 45.65 ಕೋಟಿ ರೂ.), ಮೈಸೂರಿನ ಚಾಮುಂಡೇಶ್ವರಿ ದೇಗುಲ 7.4 ಕೋಟಿ ರೂ.(ಕಳೆದ ವರ್ಷ 35.23 ಕೋಟಿ ರೂ.) ಕಟೀಲು ದುರ್ಗಾಪರಮೇಶ್ವರಿ ದೇವಾಲಯ 1.05 ಕೋಟಿ ರೂ. (ಕಳೆದ ವರ್ಷ 25.42 ಕೋಟಿ ರೂ.) ನಂಜನಗೂಡಿನ ಶ್ರೀಕಂಠೇಶ್ವರ ದೇಗುಲ 1.25 ಕೋಟಿ ರು.(ಕಳೆದ ವರ್ಷ 20.80 ಕೋಟಿ ರೂ.) ಆದಾಯ ಗಳಿಸಿದೆ.

    ಬೆಳಗಾವಿಯ ಸವದತ್ತಿ ರೇಣುಕಾ ಎಲ್ಲಮ್ಮ ದೇವಾಲಯ 1.67 ಕೋಟಿ ರೂ. (ಕಳೆದ ವರ್ಷ 16.49 ಕೋಟಿ ರೂ.) ಮಂದಾರ್ತಿ ದುರ್ಗಾಪರಮೇಶ್ವರಿ ದೇವಾಲಯ 1.2 ಕೋಟಿ ರೂ. (ಕಳೆದ ವರ್ಷ 11.43 ಕೋಟಿ ರೂ.), ಬೆಂಗಳೂರಿನ ಬನಶಂಕರಿ ದೇಗುಲ 1.03 ಕೋಟಿ ರೂ. (ಕಳೆದ ವರ್ಷ 9.04 ಕೋಟಿ ರೂ.), ಯಡಿಯೂರು ಸಿದ್ದಲಿಂಗೇಶ್ವರ ದೇವಾಲಯ 46 ಲಕ್ಷ ರೂ. (ಕಳೆದ ವರ್ಷ 6.39 ಕೋಟಿ ರು.) ಆದಾಯ ಗಳಿಸಿದೆ.

    ದೊಡ್ಡಬಳ್ಳಾಪುರದ ಘಾಟಿ ಸುಬ್ರಹ್ಮಣ್ಯ ದೇವಾಲಯ 83.41 ಲಕ್ಷ ರೂ. (ಕಳೆದ ವರ್ಷ 8.20 ಕೋಟಿ ರೂ.) ಮಂಗಳೂರಿನಲ್ಲಿರುವ ಕದ್ರಿ ಮಂಜುನಾಥ ದೇವಾಲಯ 29.02 ಲಕ್ಷ ರೂ. (ಕಳೆದ ವರ್ಷ 5.78 ಕೋಟಿ ರೂ.), ದಕ್ಷಿಣ ಕನ್ನಡದ ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯ 29 ಲಕ್ಷ ರೂ. (ಕಳೆದ ವರ್ಷ 5.46 ಕೋಟಿ ರೂ.), ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ಪೊಳಲಿ ರಾಜರಾಜೇಶ್ವರಿ ದೇವಾಲಯ ಕೇವಲ 88 ಸಾವಿರ ರೂ. (ಕಳೆದ ವರ್ಷ 5.9 ಕೋಟಿ ರೂ.) ಗಳಿಸಿದೆ.

    ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನ ಸೌತಡ್ಕ ಮಹಾಗಣಪತಿ ದೇವಾಲಯ 21 ಲಕ್ಷ ರೂ.(ಕಳೆದ ವರ್ಷ 5.80 ಕೋಟಿ ರೂ.) ಹಾಗೂ ಉಡುಪಿಯ ಅಂಬಲಪಾಡಿಯ ಜನಾರ್ದನ ಮತ್ತು ಮಹಾಕಾಳಿ ದೇವಾಲಯ 65 ಲಕ್ಷ ರೂ. (ಕಳೆದ ವರ್ಷ 3.93 ಕೋಟಿ ರೂ.) ಆದಾಯ ಬಂದಿದೆ.

    ಹೂವಿನ ಹಡಗಲಿಯ ಮೈಲಾರಲಿಂಗೇಶ್ವರ ದೇವಾಲಯ ಕೇವಲ 59 ಸಾವಿರ ರೂ. (ಕಳೆದ ವರ್ಷ 2.51 ಕೋಟಿ ರೂ.), ಶ್ರೀರಂಗಪಟ್ಟಣದ ನಿಮಿಷಾಂಬಾ ದೇವಾಲಯ 89 ಸಾವಿರ ರೂ. (ಕಳೆದ ವರ್ಷ 3.27 ಕೋಟಿ ರೂ.), ಬಸವನಗುಡಿಯ ದೊಡ್ಡಗಣಪತಿ ಮತ್ತು ಮಲ್ಲಿಕಾರ್ಜುನಸ್ವಾಮಿ ದೇವಾಲಯ 25 ಲಕ್ಷ ರೂ.(ಕಳೆದ ವರ್ಷ 2.39 ಕೋಟಿ ರೂ.), ಮೇಲುಕೋಟೆಯ ಚೆಲುವನಾರಾಯಣಸ್ವಾಮಿ ದೇವಾಲಯ 2.71 ಲಕ್ಷ ರೂ. (ಕಳೆದ ವರ್ಷ 1.86 ಕೋಟಿ ರೂ.) ಹಾಗೂ ಬಳ್ಳಾರಿಯ ಕನಕ ದುರ್ಗಮ್ಮ ದೇವಾಲಯ 2.52 ಲಕ್ಷ ರೂ. (ಕಳೆದ ವರ್ಷ 2.5 ಕೋಟಿ ರೂ.) ಮಾತ್ರ ಆದಾಯ ಗಳಿಸಿದೆ.

  • ಕರಾವಳಿಯಲ್ಲಿ ಮುಂದುವರಿದ ಮಳೆಯ ಆರ್ಭಟ- ಕುಕ್ಕೆ ಸುಬ್ರಹ್ಮಣ್ಯದ ಸ್ನಾನ ಘಟ್ಟ ಮುಳುಗಡೆ

    ಕರಾವಳಿಯಲ್ಲಿ ಮುಂದುವರಿದ ಮಳೆಯ ಆರ್ಭಟ- ಕುಕ್ಕೆ ಸುಬ್ರಹ್ಮಣ್ಯದ ಸ್ನಾನ ಘಟ್ಟ ಮುಳುಗಡೆ

    ಮಂಗಳೂರು: ಪಶ್ಚಿಮ ಘಟ್ಟಗಳು ಸೇರಿದಂತೆ ಕರಾವಳಿ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಕುಕ್ಕೆ ಸುಬ್ರಮಣ್ಯದಲ್ಲಿರುವ ಕುಮಾರಧಾರ ನದಿ ತುಂಬಿ ಹರಿಯುತ್ತಿದೆ.

    ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಪರಿಸರದಲ್ಲೂ ರಾತ್ರಿಯಿಂದ ನಿರಂತರ ಮಳೆಯಾಗುತ್ತಿದ್ದು, ಕುಕ್ಕೆ ಸುಬ್ರಹ್ಮಣ್ಯ ಸ್ನಾನಘಟ್ಟ ಸಂಪೂರ್ಣ ಮುಳುಗಡೆಯಾಗಿದೆ. ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಕುಮಾರಧಾರ ನದಿಯ ಹೊಸಮಠ ಹಾಗೂ ನೇತ್ರಾವತಿ ನದಿಯಲ್ಲೂ ನೀರಿನ ಮಟ್ಟ ಏರಿಕೆಯಾಗಿ ಹರಿಯುತ್ತಿದೆ. ಇದೇ ರೀತಿ ಮಳೆ ಮುಂದುವರಿದರೆ ತಗ್ಗು ಪ್ರದೇಶದ ಹಲವಾರು ಸೇತುವೆಗಳು ಮುಳುಗಡೆಯಾಗಿ ರಸ್ತೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದೆ. ಇದನ್ನೂ ಓದಿ: ಕೊಡಗು ಜಿಲ್ಲೆಯಲ್ಲಿ ಮಳೆ ಅರ್ಭಟ- ಜನರಲ್ಲಿ ಭೂಕುಸಿತದ ಆತಂಕ

    ಈಗಾಗಲೇ ನದಿ ತೀರದ ಬಹುತೇಕ ಎಲ್ಲಾ ಕೃಷಿ ಭೂಮಿಗಳಿಗೂ ನೀರು ನುಗ್ಗಿ ಮುಳುಗುತ್ತಿವೆ. ಇನ್ನು ಬಂಟ್ವಾಳ ತಾಲೂಕಲ್ಲಿ ನೇತ್ರಾವತಿ ತುಂಬಿ ಹರಿಯುತ್ತಿದ್ದು, ಜಿಲ್ಲೆಯ ಹಲವೆಡೆ ಭಾರೀ ಮಳೆಯಾಗುತ್ತಿದೆ. ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇನ್ನೆರಡು ದಿನ ಮಳೆ ಮುಂದುವೆರೆಯುವ ಸಾಧ್ಯತೆ ಇದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಇದನ್ನೂ ಓದಿ: KRS ಡ್ಯಾಂಗೆ ಒಂದೇ ದಿನ 20,488 ಕ್ಯೂಸೆಕ್ ಒಳಹರಿವು

  • ನಾಗರಪಂಚಮಿ- ಕುಕ್ಕೆ ಸುಬ್ರಹ್ಮಣ್ಯದ ಗರ್ಭಗುಡಿಯಿಂದ ಹೊರ ಬಂದ ಸರ್ಪ

    ನಾಗರಪಂಚಮಿ- ಕುಕ್ಕೆ ಸುಬ್ರಹ್ಮಣ್ಯದ ಗರ್ಭಗುಡಿಯಿಂದ ಹೊರ ಬಂದ ಸರ್ಪ

    ಮಂಗಳೂರು: ಇತಿಹಾಸ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಗರಪಂಚಮಿಯ ವಿಶೇಷ ದಿನವಾದ ಇಂದು ಜೀವಂತ ನಾಗರಹಾವು ಪ್ರತ್ಯಕ್ಷವಾಗಿ ಅಚ್ಚರಿ ಮೂಡಿಸಿದೆ.

    ಭಕ್ತರಿಗೆ ಇಂದು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಪ್ರವೇಶ ನಿಷೇಧವಿದ್ದು ಕ್ಷೇತ್ರದ ಅರ್ಚಕರು ನಾಗರ ಪಂಚಮಿಯ ಹಿನ್ನಲೆಯಲ್ಲಿ ಮೂಲ ದೇವರಿಗೆ ಪಂಚಾಮೃತ ಅಭಿಷೇಕ ಮಾಡಿದ ಬಳಿಕ ನಾಗರಾಜ ಪ್ರತ್ಯಕ್ಷವಾಗಿದೆ. ಗರ್ಭಗುಡಿಯ ಹುತ್ತದಿಂದ ಹೊರಬಂದ ನಾಗರಹಾವು ಕ್ಷೇತ್ರದ ಒಳಾಂಗಣ ಹಾಗೂ ಹೊರಾಂಗಣ ಸುತ್ತಾಡಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿದೆ.

    ಕ್ಷೇತ್ರದ ಅರ್ಚಕರು ನಾಗರಾಜನಿಗೆ ಹಾಲೆರೆದಿದ್ದು, ಅದನ್ನು ಕುಡಿದ ಬಳಿಕ ಪಕ್ಕದ ಪೆÇದೆಯೊಳಗೆ ಹೋಗಿದೆ. ನಾಗರಪಂಚಮಿಯ ದಿನವೇ ಗರ್ಭಗುಡಿಯಿಂದ ನಾಗರಾಜ ಹೊರಬಂದಿದ್ದು ಎಲ್ಲರಲ್ಲಿ ಅಚ್ಚರಿ ಮೂಡಿಸಿದೆ.

    ಪ್ರತಿ ವರ್ಷ ನಾಗರಪಂಚಮಿಯ ದಿನದಂದು ಲಕ್ಷಾಂತರ ಮಂದಿ ಕುಕ್ಕೆಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದರು. ಆದರೆ ಈ ಬಾರಿ ಕೊರೊನಾ ವೈರಸ್ ನಿಂದಾಗಿ ಕೇವಲ ಬೆರಳೆಣಿಕೆಯ ಭಕ್ತರು ದೇವಸ್ಥಾನದ ಹೊರಗಿನಿಂದಲೇ ನಮಸ್ಕರಿಸಿ ತೆರಳಿದ್ದರು.

  • ಕುಕ್ಕೆಯ ಆನ್‍ಲೈನ್ ಸೇವೆಗಳ ನಿರ್ವಹಣೆ ಫ್ಯೂರ್ ಪ್ರೇಯರ್ ಸಂಸ್ಥೆಗಿಲ್ಲ: ಸಚಿವ ಕೋಟ

    ಕುಕ್ಕೆಯ ಆನ್‍ಲೈನ್ ಸೇವೆಗಳ ನಿರ್ವಹಣೆ ಫ್ಯೂರ್ ಪ್ರೇಯರ್ ಸಂಸ್ಥೆಗಿಲ್ಲ: ಸಚಿವ ಕೋಟ

    ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯದ ಆನ್‍ಲೈನ್ ಸೇವೆಗಳ ನಿರ್ವಹಣೆಯಿಂದ ಪ್ಯೂರ್ ಪ್ರೇಯರ್ ಸಂಸ್ಥೆಯನ್ನು ಮುಕ್ತಗೊಳಿಸಲಾಗಿದೆ ಎಂದು ರಾಜ್ಯ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

    ನಾನು ಮುಜರಾಯಿ ಸಚಿವನಾಗಿ ಆಯ್ಕೆಯಾಗುವ ಮೊದಲೇ ರಾಜ್ಯದ 54 ದೇವಸ್ಥಾನಗಳ ಸೇವೆಯನ್ನು ಆನ್ ಲೈನ್ ಮೂಲಕ ನಡೆಸಲು ಸರ್ಕಾರ ತೀರ್ಮಾನಿಸಿತ್ತು. ಇದಕ್ಕಾಗಿ ಸರ್ವೆಯನ್ನೂ ನಡೆಸಲಾಗಿದ್ದು, ಪ್ಯೂರ್ ಪ್ರೇಯರ್ ಸಂಸ್ಥೆಗೆ 15 ಜಿಲ್ಲೆಗಳ ದೇವಸ್ಥಾನಗಳನ್ನು ಬಿಟ್ಟುಕೊಡಲಾಗಿತ್ತು. ಉಳಿದ ಜಿಲ್ಲೆಗಳ ಸರ್ವೇ ಕಾರ್ಯವನ್ನು ಇನ್ನಷ್ಟೇ ಮಾಡಬೇಕಿದೆ. ಈ ನಡುವೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಸೇವೆಗಳ ವಿಚಾರದಲ್ಲಿ ಪ್ಯೂರ್ ಪ್ರೇಯರ್ ಸಂಸ್ಥೆ ಅವ್ಯವಹಾರ ನಡೆಸಿದೆ ಎನ್ನುವ ವಿಚಾರ ಸರಕಾರದ ಗಮನಕ್ಕೆ ಬಂದ ತಕ್ಷಣವೇ ಕುಕ್ಕೆ ಸುಬ್ರಹ್ಮಣ್ಯ ಸೇವೆಯನ್ನು ಸಂಸ್ಥೆಯಿಂದ ಕೈಬಿಡಲಾಗಿದೆ ಎಂದು ತಿಳಿಸಿದರು.

    ಪ್ಯೂರ್ ಪ್ರೇಯರ್ ಸಂಸ್ಥೆಯು ಎಲ್ಲಾ ದೇವಸ್ಥಾನಗಳ ಆನ್‍ಲೈನ್ ಸೇವೆಯನ್ನು ಉಚಿತವಾಗಿ ನಿರ್ವಹಿಸುತ್ತಿದ್ದ ಸರ್ಕಾರ ಯಾವುದೇ ವೆಚ್ಚವನ್ನು ಸಂಸ್ಥೆಗೆ ನೀಡುತ್ತಿಲ್ಲ. ಅಲ್ಲದೆ ಮುಜರಾಯಿ ಇಲಾಖೆ ತನ್ನದೇ ಹೊಸದಾದ ಸಾಫ್ಟ್‍ವೇರ್ ಅಭಿವೃದ್ಧಿಪಡಿಸುತ್ತಿದ್ದು, ಈ ಕಾರ್ಯ ಮುಂದಿನ ಎರಡು ತಿಂಗಳಲ್ಲಿ ಮುಗಿಯಲಿದೆ. ಆ ಬಳಿಕ ಇಲಾಖೆಯೇ ಎಲ್ಲಾ ದೇವಾಲಯಗಳ ಆನ್‍ಲೈನ್ ಸೇವೆಗಳನ್ನು ನಿರ್ವಹಿಸಲಿದೆ ಎಂದು ಸಚಿವರು ಹೇಳಿದರು.

  • ಕರಾವಳಿಯ ದೇವಸ್ಥಾನಗಳಲ್ಲಿ ಭಕ್ತರ ದಂಡು

    ಕರಾವಳಿಯ ದೇವಸ್ಥಾನಗಳಲ್ಲಿ ಭಕ್ತರ ದಂಡು

    ಮಂಗಳೂರು: ಲಾಕ್‍ಡೌನ್ ಬಳಿಕ ಇಂದಿನಿಂದ ಕರಾವಳಿಯ ದೇವಸ್ಥಾನಗಳಲ್ಲಿ ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಇಂದು ಮುಂಜಾನೆಯಿಂದಲೇ ಭಕ್ತರು ದೇವಸ್ಥಾನಗಳಿಗೆ ಆಗಮಿಸಿ ದೇವರ ದರ್ಶನ ಪಡೆದಿದ್ದಾರೆ. ಇಂದಿನಿಂದ ಸಾಮಾಜಿಕ ಅಂತರವನ್ನು ಪಾಲಿಸಿಕೊಂಡು ದೇವರ ದರ್ಶನಕ್ಕೆ ಪಡೆಯಲು ಅವಕಾಶ ನೀಡಿದೆ.

    ಕುಕ್ಕೆ ಸುಬ್ರಹ್ಮಣ್ಯ: ಪ್ರಸಿದ್ಧ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಕ್ತರಿಗೆ ಇಂದಿನಿಂದ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ನಾಗಾರಾಧನೆಗೆ ಪ್ರಸಿದ್ದಿ ಪಡೆದ ಕುಕ್ಕೆ ದೇಗುಲಕ್ಕೆ ಭಕ್ತರು ದರ್ಶನಕ್ಕೆ ಆಗಮಿಸುತ್ತಿದ್ದು, ಪ್ರವೇಶ ದ್ವಾರದಲ್ಲಿ ದೇಗುಲ ಸಿಬ್ಬಂದಿ ಭಕ್ತರನ್ನು ಸಾಮಾಜಿಕ ಅಂತರದ ಮೂಲಕ ಒಳ ಬಿಡುತ್ತಿದ್ದಾರೆ. ಪ್ರವೇಶಕ್ಕೂ ಮುನ್ನ ಥರ್ಮಲ್ ಸ್ಕ್ರೀನಿಂಗ್ ಮಾಡಿ, ಸ್ಯಾನಿಟೈಸರ್ ನೀಡಲಾಗುತ್ತಿದೆ. ವಿಶೇಷ ಸೇವೆಗಳಾದ ಸರ್ಪ ಸಂಸ್ಕಾರ, ಅಶ್ಲೇಷ ಪೂಜೆ ಮತ್ತು ಛತ್ರದ ವ್ಯವಸ್ಥೆ ಇಲ್ಲ. ಮುಖ್ಯ ದ್ವಾರದಲ್ಲಿ ಗುರುತಿಸಿದಂತೆ ಅಗಮಿಸಿ ಹಿಂದಿನಿಂದ ಹೊರ ತೆರಳಲು ಈಗಾಗಲೇ ಸಿದ್ಧತೆ ಮಾಡಲಾಗಿದೆ.

    ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಕ್ಷೇತ್ರ: ಲಾಕ್‍ಡೌನ್ ಬಳಿಕ ಸ್ಥಗಿತವಾಗಿದ್ದ ನಾಡಿನ ಪ್ರಸಿದ್ಧ ದೇಗುಲ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿ ಮತ್ತೆ ಭಕ್ತರಿಗಾಗಿ ತೆರದಿದೆ. ದೇವಸ್ಥಾನದ ಒಳ ಪ್ರವೇಶ ಮಾಡುವವರು ಮುಖಕ್ಕೆ ಮಾಸ್ಕ್ ಧರಿಸಿರಬೇಕು. ಥರ್ಮಲ್ ಸ್ಕ್ರೀನಿಂಗ್‍ಗೆ ಒಳಪಡಬೇಕು ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು. ಕೈಗೆ ಸ್ಯಾನಿಟೈಸರ್ ಹಾಕಿಸಿಕೊಳ್ಳಬೇಕು ಎಂಬ ಷರತುಗಳನ್ನು ಭಕ್ತರಿಗೆ ವಿಧಿಸಲಾಗಿದೆ. ಅದೇ ರೀತಿ ಅನ್ನಪೂರ್ಣ ಭೋಜನಾಲಯದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಅನ್ನ ಪ್ರಸಾದಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಭಕ್ತರು ಮುಡಿ ನೀಡಲು ಹಾಗೂ ನೇತ್ರಾವತಿ ನದಿಯಲ್ಲಿ ತೀರ್ಥಸ್ನಾನಕ್ಕೂ ಅವಕಾಶ ಕಲ್ಪಿಸಲಾಗಿದೆ.

    ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನ: ಮಂಗಳೂರಿನ ಪುರಾಣ ಪ್ರಸಿದ್ಧ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಲ್ಲಿ ರಾಜ್ಯ ಮುಜುರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಪೂಜೆ ಸಲ್ಲಿಸಿದರು. ಬಳಿಕ ಮಾತನಾಡಿದ ಮುಜರಾಯಿ ಸಚಿವರು, ಬಹಳಷ್ಟು ದಿನಗಳ ನಂತರ ಕೋವಿಡ್ ನಿಂದ ಮುಚ್ಚಿದ್ದ ರಾಜ್ಯದ ಮುಜರಾಯಿ ಕ್ಷೇತ್ರಗಳನ್ನ ಕೇಂದ್ರದ ಮಾರ್ಗ ದರ್ಶನದಂತೆ ಇಂದು ತೆರೆಯಲಾಗಿದೆ. ಹಿರಿಯರು ಮತ್ತು ಮಕ್ಕಳನ್ನ ಆರೋಗ್ಯದ ದೃಷ್ಡಿಯಿಂದ ನಿರ್ಬಂಧ ಮಾಡಲಾಗಿದೆ. ಸಾಮಾಜಿಕ ಅಂತರ, ಮಾಸ್ಕ್ ಧರಿಸುವ ಮೂಲಕ ದೇವರ ದರ್ಶನಕ್ಕೆ ಮಾತ್ರ ಅವಕಾಶವನ್ನು ನೀಡಲಾಗಿದೆ ಎಂಬುದಾಗಿ ತಿಳಿಸಿದರು.

  • ದೀಪ ಹಚ್ಚಿ ಕೊರೊನಾ ವಿರುದ್ಧ ಹೋರಾಟವನ್ನು ಅರ್ಥಪೂರ್ಣವಾಗಿಸಿ: ಕುಕ್ಕೆ ಸುಬ್ರಹ್ಮಣ್ಯ ಶ್ರೀ

    ದೀಪ ಹಚ್ಚಿ ಕೊರೊನಾ ವಿರುದ್ಧ ಹೋರಾಟವನ್ನು ಅರ್ಥಪೂರ್ಣವಾಗಿಸಿ: ಕುಕ್ಕೆ ಸುಬ್ರಹ್ಮಣ್ಯ ಶ್ರೀ

    ಮಂಗಳೂರು: ಇಂದು ರಾತ್ರಿ 9 ಗಂಟೆಗೆ 9 ನಿಮಿಷ ದೀಪ ಹಚ್ಚಿ ಕೊರೊನಾ ವಿರುದ್ಧ ಹೋರಾಟವನ್ನು ಅರ್ಥಪೂರ್ಣವಾಗಿಸಿ ಎಂದು ಕುಕ್ಕೆ ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ಸ್ವಾಮೀಜಿ ಭಕ್ತರಲ್ಲಿ ಮನವಿ ಮಾಡಿದ್ದಾರೆ.

    ದೀಪವೆಂಬುದು ರೋಗ ಪರಿಹಾರಕ ದಿವ್ಯ ವಸ್ತು, ಕತ್ತಲಿನಿಂದ ಬೆಳಕಿನೆಡೆಗೆ ಸಾಗಬೇಕೆಂಬ ತತ್ವ ದೀಪದಲ್ಲಿದೆ ಸ್ವಾಮೀಜಿ ತಿಳಿಸಿದರು. ಜಗತ್ತಿನಲ್ಲಿ ಕೊರೊನಾ ಕಾಯಿಲೆಯಿಂದ ಕತ್ತಲು ಆವರಿಸಿದೆ ಕತ್ತಲು ಓಡಿಸಲು ಇದು ಸಾಂಕೇತಿಕ ಆಚರಣೆ. ಅಗ್ನಿಯಿಂದ ಬೆಳಗುವ ಬೆಳಕು ದೇವತೆಗಳಿಗೆ ಪ್ರಿಯ. 9 ಕುಜನ ಸಂಖ್ಯೆ, ಕುಜ ಅಗ್ನಿತತ್ವದ ಅಧಿದೇವತೆ. ಕುಜನ ಪ್ರತಿನಿಧಿ ಅಗ್ನಿಯ ಮೂಲಕ ಕೊರೊನಾ ರಾಹುವನ್ನು ಓಡಿಸಬೇಕು. ಅದಕ್ಕಾಗಿ ಭಕ್ತರು ಇಂದು ದೀಪ ಹೊತ್ತಿಸಬೇಕು ಎಂದು ವಿದ್ಯಾಪ್ರಸನ್ನ ಸ್ವಾಮೀಜಿ ಭಕ್ತರಲ್ಲಿ ಹೇಳಿದರು.

    ಏಪ್ರಿಲ್ 3ರಂದು ವಿಡಿಯೋ ಸಂದೇಶ ಕಳುಹಿಸಿದ ಮೋದಿ ಅವರು, ಏಪ್ರಿಲ್ 5ಕ್ಕೆ ಎಲ್ಲರೂ ಒಟ್ಟಾಗೋಣ. ಏಪ್ರಿಲ್ 5ಕ್ಕೆ ಮಹಾ ಶಕ್ತಿಯ ಜಾಗೃತಿ ಆಗಬೇಕಿದೆ. ಹೀಗಾಗಿ ರಾತ್ರಿ 9 ಗಂಟೆಗೆ ದೀಪ, ಮೇಣದ ಬತ್ತಿ, ಟಾರ್ಚ್, ಮೊಬೈಲ್ ಟಾರ್ಚ್ ಬೆಳಗಿಸಬೇಕು. ಆ ಬೆಳಕಿನಲ್ಲಿ ನಮ್ಮ ಮನಸ್ಸಿನಲ್ಲಿ ಸಂಕಲ್ಪ ಮಾಡಿಕೊಳ್ಳಬೇಕು. ನಾವು ಎಲ್ಲರೂ ಒಗ್ಗಟ್ಟಾಗಿದ್ದೇವೆ ಎನ್ನುವ ಸಂಕಲ್ಪ ಮಾಡಬೇಕು. ಈ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಮೋದಿ ಕರೆಕೊಟ್ಟಿದ್ದರು.

  • ಕೊರೊನಾ ಭೀತಿ- ದಕ್ಷಿಣ ಕನ್ನಡದ ಎಲ್ಲ ಪುಣ್ಯ ಕ್ಷೇತ್ರಗಳ ಸೇವೆ ಬಂದ್

    ಕೊರೊನಾ ಭೀತಿ- ದಕ್ಷಿಣ ಕನ್ನಡದ ಎಲ್ಲ ಪುಣ್ಯ ಕ್ಷೇತ್ರಗಳ ಸೇವೆ ಬಂದ್

    ಮಂಗಳೂರು: ಕೊರೊನಾ ವೈರಸ್ ಭೀತಿ ಹಿನ್ನಲೆಯಲ್ಲಿ ಇಂದಿನಿಂದ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ದೇವಸ್ಥಾನಗಳ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

    ಜಿಲ್ಲಾಧಿಕಾರಿ ಕಚೇರಿಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ನೇತ್ರತ್ವದಲ್ಲಿ ನಡೆದ ಸಭೆಯ ನಂತರ ಅಪರ ಜಿಲ್ಲಾಧಿಕಾರಿ ಎಂ.ಜೆ.ರೂಪಾ ಈ ಮಾಹಿತಿ ನೀಡಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ಸೇರಿದಂತೆ ಎಲ್ಲ ದೇವಸ್ಥಾನಗಳಲ್ಲಿಯೂ ಭಕ್ತರಿಗೆ ಕೇವಲ ದರ್ಶನಕ್ಕೆ ಮಾತ್ರ ಅವಕಾಶವಿದ್ದು, ಸೇವೆಗಳಿಗೆ ತಡೆ ನೀಡಲಾಗಿದೆ ಎಂದು ತಿಳಿಸಿದರು.

    ದೇವಸ್ಥಾನಗಳ ಉತ್ಸವಗಳಲ್ಲಿ ಸಿಬ್ಬಂದಿ ಭಾಗವಹಿಸಲು ಮಾತ್ರ ಅವಕಾಶವಿರುತ್ತದೆ. ಜನದಟ್ಟಣೆಯನ್ನು ತಪ್ಪಿಸುವುದಕ್ಕೆ ಇಂದಿನಿಂದ ಎಲ್ಲ ಸೇವೆಗಳನ್ನು ರದ್ದುಪಡಿಸಲಾಗುವುದು. ಮೊನ್ನೆ ಕುಕ್ಕೆಸುಬ್ರಹ್ಮಣ್ಯ ದೇಗುಲದಲ್ಲಿ ಸರ್ಪಸಂಸ್ಕಾರ, ಆಶ್ಲೇಷ ಬಲಿ ಮತ್ತು ನಾಗಪ್ರತಿಷ್ಠೆಯಂತಹ ಸೇವೆಗಳಿಗೆ ಕುಟುಂಬ ಸದಸ್ಯರ ಬದಲು ತಲಾ ಇಬ್ಬರಿಗೆ ಮಾತ್ರ ಅವಕಾಶ ನೀಡಲಾಗುವುದು. ಉಳಿದಂತೆ ಎಲ್ಲ ಸೇವೆಗಳನ್ನು ರದ್ದುಗೊಳಿಸಿ ಆದೇಶಿಸಲಾಗಿದೆ ಎಂದು ಎಡಿಸಿ ರೂಪ ಸ್ಪಷ್ಟಪಡಿಸಿದರು.

  • ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಿಶೇಷ ಪೂಜೆಗೆ ಇಬ್ಬರೇ ಬನ್ನಿ- ಇತ್ತ ತಲಕಾವೇರಿಯಲ್ಲಿ ಭಕ್ತರ ಸಂಖ್ಯೆ ಇಳಿಕೆ

    ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಿಶೇಷ ಪೂಜೆಗೆ ಇಬ್ಬರೇ ಬನ್ನಿ- ಇತ್ತ ತಲಕಾವೇರಿಯಲ್ಲಿ ಭಕ್ತರ ಸಂಖ್ಯೆ ಇಳಿಕೆ

    ಮಂಗಳೂರು/ಮಡಿಕೇರಿ: ಕೊರೊನಾ ಭೀತಿ ಹಿನ್ನೆಲೆಯಲ್ಲಿ ದಕ್ಷಿಣ ಭಾರತದ ಪವಿತ್ರ ಪುಣ್ಯಕ್ಷೇತ್ರವಾಗಿರೋ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸರ್ಪ ಸಂಸ್ಕಾರ, ನಾಗ ಪ್ರತಿಷ್ಠೆ ಸೇರಿದಂತೆ ವಿವಿಧ ಪೂಜಾ ಕಾರ್ಯಗಳಲ್ಲಿ ತಲಾ ಇಬ್ಬರಂತೆ ಮಾತ್ರ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗುತ್ತಿದೆ.

    ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿಯೇ ದೇವಸ್ಥಾನದ ಆಡಳಿತ ಮಂಡಳಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುವ ಸರ್ಪ ಸಂಸ್ಕಾರ, ಆಶ್ಲೇಷಾ ಬಲಿ ಪೂಜೆ ಸೇರಿದಂತೆ ವಿವಿಧ ಪೂಜಾ ಕಾರ್ಯಗಳಲ್ಲಿ ಇಷ್ಟು ದಿನ ಕುಟುಂಬ ಸದಸ್ಯರು ಪಾಲ್ಗೊಳ್ಳುತ್ತಿದ್ದರು. ಆದರೆ ಕೊರೊನಾ ಭೀತಿ ಹಿನ್ನೆಲೆಯಲ್ಲಿ ತಲಾ ಇಬ್ಬರಂತೆ ಪೂಜೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗುತ್ತಿದೆ. ಕೊರೊನಾ ವೈರಸ್ ಭೀತಿಯಿಂದಾಗಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರ ಸಂಖ್ಯೆ ಕಡಿಮೆಯಾಗಿಲ್ಲ. ಆದರೆ ಹೊರ ರಾಜ್ಯದಿಂದ ಬರುವ ಭಕ್ತರ ಸಂಖ್ಯೆಯಲ್ಲಿ ಇಳಿಮುಖವಾಗಿದೆ.

    ತಲಕಾವೇರಿಯಲ್ಲಿ ಭಕ್ತರಿಲ್ಲ: ಕನ್ನಡ ನಾಡಿನ ಜೀವ ನದಿ ಕಾವೇರಿ ಉಗಮ ಸ್ಥಾನ ತಲಕಾವೇರಿಗೂ ತಟ್ಟಿದ ಕೊರೋನಾ ವೈರಸ್ ಎಫೆಕ್ಟ್ ತಾಗಿದೆ. ದೇವಾಲಯದಲ್ಲಿ ಭಕ್ತರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಬೆಳಗ್ಗೆಯಿಂದಲೂ ಧಾರ್ಮಿಕ ಕೇಂದ್ರವಾದ ತಲಕಾವೇರಿ ಭಾಗಮಂಡಲ ದೇವಾಲಯಗಳಲ್ಲಿ ಭಕ್ತರ ಸಂಖ್ಯೆ ವಿರಳವಾಗಿದೆ. ಅಷ್ಟೇ ಅಲ್ಲದೇ ತಲಕಾವೇರಿ ಯ ಬ್ರಹ್ಮಗಿರಿ ಬೆಟ್ಟಕ್ಕೂ ನಿಷೇಧ ಹೇರಲಾಗಿದೆ.

    ಭಕ್ತರ ಸಂಖ್ಯೆ ಇಳಿಮುಖದ ಹಿನ್ನೆಲೆಯಲ್ಲಿ ಕೆಲವು ಬೀದಿ ಬದಿಯ ವ್ಯಾಪಾರಸ್ಥರು ಸ್ವಯಂಪ್ರೇರಿತವಾಗಿ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿದ್ದಾರೆ. ಹೀಗಾಗಿ ತಲಕಾವೇರಿ ಭಾಗಮಂಡಲ ಜನರಿಲ್ಲದೇ ಬಿಕೋ ಎನ್ನುತ್ತಿದೆ. ಹಿಂದೆದೂ ಈ ರೀತಿಯಲ್ಲಿ ಜನ ಸಂಖ್ಯೆ ವಿರಳವಾಗಿರುವುದು ನೋಡಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.

  • ಕೋಟೇಶ್ವರದಿಂದ ಬಂದ 2.5 ಕೋಟಿ ವೆಚ್ಚದ ಬ್ರಹ್ಮರಥಕ್ಕೆ ಮಂಗ್ಳೂರಿನಲ್ಲಿ ಅದ್ಧೂರಿ ಸ್ವಾಗತ

    ಕೋಟೇಶ್ವರದಿಂದ ಬಂದ 2.5 ಕೋಟಿ ವೆಚ್ಚದ ಬ್ರಹ್ಮರಥಕ್ಕೆ ಮಂಗ್ಳೂರಿನಲ್ಲಿ ಅದ್ಧೂರಿ ಸ್ವಾಗತ

    ಮಂಗಳೂರು: ಉದ್ಯಮಿ ಮುತ್ತಪ್ಪ ರೈ ಮತ್ತು ಅಜಿತ್ ಶೆಟ್ಟಿ ಸೇರಿ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಅರ್ಪಣೆ ಮಾಡಲಿರುವ ಬ್ರಹ್ಮರಥಕ್ಕೆ ಮಂಗಳೂರಿನಲ್ಲಿ ಅದ್ಧೂರಿ ಸ್ವಾಗತ ನೀಡಲಾಯಿತು.

    ಮಂಗಳೂರಿನ ಕದ್ರಿ ದೇವಸ್ಥಾನ ಬಳಿ ಸೋಮವಾರ ರಾತ್ರಿ ತಂಗಿದ್ದ ಬ್ರಹ್ಮರಥಕ್ಕೆ ಇಂದು ಬೆಳಗ್ಗೆ ಸಾರ್ವಜನಿಕರು, ಪ್ರಮುಖರು ಸೇರಿ ಆರತಿ ಎತ್ತಿದರು. ಸುಮಾರು 2.5 ಕೋಟಿ ವೆಚ್ಚದಲ್ಲಿ ಕುಂದಾಪುರದ ಕೋಟೇಶ್ವರದಲ್ಲಿ ಅಪೂರ್ವ ರಥ ನಿರ್ಮಿಸಲಾಗಿದ್ದು, ದೇವಸ್ಥಾನಕ್ಕೆ ತಲುಪಿದ ಬಳಿಕ ಚಕ್ರ, ಇನ್ನಿತರ ಪರಿಕರಗಳ ಜೋಡಣೆ ಆಗಲಿದೆ. ಇದನ್ನೂ ಓದಿ: ಕೋಟೇಶ್ವರದಿಂದ ಕುಕ್ಕೆಗೆ ಹೊರಟ ಬ್ರಹ್ಮರಥ- ಉಡುಪಿಯಲ್ಲಿ ವಿಶೇಷ ಪೂಜೆ ಸಲ್ಲಿಕೆ

    ಶಾಸಕರಾದ ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಉದ್ಯಮಿ ರಾಕೇಶ್ ಮಲ್ಲಿ, ದಾನಿ ಅಜಿತ್ ಶೆಟ್ಟಿ ಸೇರಿದಂತೆ ವಿವಿಧ ಗಣ್ಯರು ಈ ವೇಳೆ ಉಪಸ್ಥಿತರಿದ್ದರು. ಚೆಂಡೆ ವಾದ್ಯಗಳ ಮೂಲಕ ರಥವನ್ನು ಸ್ವಾಗತಿಸಿ, ಬಳಿಕ ಉಪ್ಪಿನಂಗಡಿಯತ್ತ ಬೀಳ್ಕೊಡಲಾಯಿತು.

    ಇಂದು ಬಂಟ್ವಾಳ ಕಲ್ಲಡ್ಕ ಮೂಲಕ ಉಪ್ಪಿನಂಗಡಿಗೆ ತೆರಳಿ, ಅಲ್ಲಿಂದ ಬುಧವಾರ ಸಂಜೆ ಸುಮಾರಿಗೆ ಕುಕ್ಕೆ ಸುಬ್ರಹ್ಮಣ್ಯ ತಲುಪಲಿದೆ. ರಥದ ಜೊತೆ ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಸ್ವಯಂ ಸೇವಕರಾಗಿ ಸಾಥ್ ನೀಡಿದ್ದಾರೆ.