Tag: kukke Subrahmanya

  • ಪುಣ್ಯಕ್ಷೇತ್ರ ಕುಕ್ಕೆ, ಧರ್ಮಸ್ಥಳಕ್ಕೆ ತಟ್ಟದ ಕೊರೊನಾ ಎಫೆಕ್ಟ್

    ಪುಣ್ಯಕ್ಷೇತ್ರ ಕುಕ್ಕೆ, ಧರ್ಮಸ್ಥಳಕ್ಕೆ ತಟ್ಟದ ಕೊರೊನಾ ಎಫೆಕ್ಟ್

    ಮಂಗಳೂರು: ಕೊರೊನಾ ಎಫೆಕ್ಟ್ ರಾಜ್ಯದ ಪ್ರಮುಖ ದೇವಸ್ಥಾನಗಳಿಗೆ ತಟ್ಟಿಲ್ಲ. ಕುಕ್ಕೆ ಸುಬ್ರಹ್ಮಣ್ಯ ಮತ್ತು ಧರ್ಮಸ್ಥಳದಲ್ಲಿ ಎಂದಿನಂತೆ ಭಕ್ತರ ದಟ್ಟಣೆ ಕಂಡುಬಂದಿದೆ.

    ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರ ಸಂಖ್ಯೆ ಎಂದಿಗಿಂತ ಹೆಚ್ಚಿದ್ದು, ದೇವಸ್ಥಾನದ ರಥಬೀದಿ ಭಕ್ತರಿಂದ ತುಂಬಿ ಹೋಗಿದೆ. ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಉರಿ ಬಿಸಿಲಿನಲ್ಲಿಯೂ ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದಿದ್ದಾರೆ. ಕೊರೊನಾ ಹಿನ್ನೆಲೆ ರಜೆ ಸಿಕ್ಕ ಕಾರಣ ಭಕ್ತರು ತೀರ್ಥ ಕ್ಷೇತ್ರಗಳ ಪರ್ಯಟನೆ ಮಾಡುತ್ತಿದ್ದಾರೆ. ಇದನ್ನೂ ಓದಿ: ನಾವು ಇಟಲಿಗೆ ಹೋಗಿಲ್ಲ, ಪ್ಯಾರಿಸ್ ಪ್ರವಾಸ ರದ್ದು ಮಾಡಿದ್ದೇವೆ: ಚಂದನ್

    ಮಂಗಳೂರಿನಲ್ಲಿ ಶಾಲಾ, ಕಾಲೇಜುಗಳು ಪೂರ್ತಿಯಾಗಿ ಬಂದ್ ಆಗಿವೆ. ಮಾಲ್, ರೆಸ್ಟೋರೆಂಟ್ ಕೂಡ ಸರ್ಕಾರದ ಆದೇಶದಂತೆ ಬಂದ್ ಆಗಿವೆ. ಬೆಳಗ್ಗೆ ಜಿಲ್ಲಾಡಳಿತದ ಸೂಚನೆ ಬಂದಿಲ್ಲವೆಂದು ಮಾಲ್ ಓಪನ್ ಮಾಡಲು ತಯಾರಿ ನಡೆದಿತ್ತು. ಬಳಿಕ ಎಚ್ಚೆತ್ತ ಜಿಲ್ಲಾಧಿಕಾರಿ ನೋಟೀಸ್ ಜಾರಿ ಮಾಡಿ ಬಂದ್ ಮಾಡಿಸಿದರು. ಇದನ್ನೂ ಓದಿ: ಇಟಲಿ, ಡೆನ್ಮಾರ್ಕ್ ಬಳಿಕ ಕುವೈತ್ ಸಂಪೂರ್ಣ ಬಂದ್

    ಈ ನಡುವೆ ಸರ್ಕಾರ ಆದೇಶ ಇದ್ದರೂ ಬಂಟ್ವಾಳ ತಾಲೂಕಿನ ವಿಟ್ಲದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯೊಂದು ತೆರೆದಿದ್ದು ಕಂಡುಬಂತು. ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸಿದ್ದರಿಂದ ಶಾಲೆ ನಡೆಸಬೇಕಾಯಿತು ಅಂತ ಶಿಕ್ಷಕರು ಸಮಜಾಯಿಷಿ ನೀಡಿದರು. ಮಾಧ್ಯಮದವರು ಶಾಲೆಗೆ ಬಂದಿದ್ದನ್ನು ನೋಡಿ, ಮಕ್ಕಳನ್ನು ಮನೆಗೆ ಕಳಿಸಿದ ಘಟನೆ ನಡೆಯಿತು.

  • ರಾಜ್ಯದ ವಿವಿಧೆಡೆ ಭಾರೀ ಮಳೆ- ವರುಣನ ಅಬ್ಬರಕ್ಕೆ ಕುಕ್ಕೆ ಸುಬ್ರಹ್ಮಣ್ಯ ಜಲಾವೃತ

    ರಾಜ್ಯದ ವಿವಿಧೆಡೆ ಭಾರೀ ಮಳೆ- ವರುಣನ ಅಬ್ಬರಕ್ಕೆ ಕುಕ್ಕೆ ಸುಬ್ರಹ್ಮಣ್ಯ ಜಲಾವೃತ

    ಬೆಂಗಳೂರು: ಬೆಂಗಳೂರು, ಚಿಕ್ಕಬಳ್ಳಾಪುರ, ತುಮಕೂರು, ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ವಿವಿಧೆಡೆ ಭಾರೀ ಮಳೆಯಾಗಿದ್ದು, ಕೆಲವೆಡೆ ದೇವಸ್ಥಾನ, ರಸ್ತೆ, ಮನೆಗಳು ಜಲಾವೃತಗೊಂಡಿವೆ.

    ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಭಾರೀ ಮಳೆಯಾಗಿದ್ದು, ಹಳ್ಳ-ಕೊಳ್ಳ ತುಂಬಿ ಹರಿಯುತ್ತಿವೆ. ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದಲ್ಲಿಯೂ ವರುಣ ಅಬ್ಬರಿಸಿದ್ದಾನೆ. ಅರ್ಧ ಗಂಟೆ ಸುರಿದ ಮಳೆಗೆ ರಥಬೀದಿ, ಆದಿ ಸುಬ್ರಹ್ಮಣ್ಯ ಮುಳುಗಡೆಯಾಗಿವೆ. ಕುಮಾರಾಧಾರಾ ನದಿಯು ಮೈದುಂಬಿ ಹರಿಯುತ್ತಿದ್ದು, ನದಿ ಪಾತ್ರದ ಮನೆಗಳಿಗೆ ನೀರು ನುಗ್ಗಿದೆ. ಇದನ್ನೂ ಓದಿ: ನಾಲ್ಕು ದಿನಗಳ ಕಾಲ ಭಾರೀ ಮಳೆ ಸಾಧ್ಯತೆ- ಬೆಂಗ್ಳೂರಿಗೆ ಹಳದಿ ಅಲರ್ಟ್ ಘೋಷಣೆ

    ಚಿಕ್ಕಬಳ್ಳಾಪುರ ನಗರದಲ್ಲಿ ಒಂದು ಗಂಟೆ ವರುಣ ಅಬ್ಬರಿಸಿದ್ದು, ಚರಂಡಿಗಳು ತುಂಬಿ ಹರಿಯುತ್ತಿವೆ. ಪರಿಣಾಮ ರಸ್ತೆ ಮೇಲೆ ಹಾಗೂ ತಗ್ಗು ಪ್ರದೇಶದಲ್ಲಿ ನೀರು ನಿಂತಿದ್ದರಿಂದ ಸವಾರರು ಪರದಾಡುವಂತಾಗಿದೆ. ಅಷ್ಟೇ ಅಲ್ಲದೆ ತಗ್ಗುಪ್ರದೇಶದ ಮನೆಗಳಿಗೆ ಮಳೆಯ ನೀರು ನುಗ್ಗಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ.

    ತುಮಕೂರು ನಗರ ಹಾಗೂ ಜಿಲ್ಲೆಯ ವಿವಿಧೆಡೆ ಭರ್ಜರಿ ಮಳೆಯಾಗಿದೆ. ತುಮಕೂರು ನಗರದ ಎಸ್‍ಎಸ್ ಪುರಂನಲ್ಲಿರುವ ಶೆಟ್ಟಿಹಳ್ಳಿ ಅಂಡರ್ ಪಾಸ್ ಈಜು ಕೊಳದಂದಾಗಿದ್ದು, ಸವಾರರು ಹಾಗೂ ವಾಹನ ಚಾಲಕರು ಪರದಾಡುವಂತಾಗಿದೆ. ಅರ್ಧ ಗಂಟೆ ಸುರಿದ ಮಳೆಯಿಂದಾಗಿ ಸಂಚಾರ ಅಸ್ತವ್ಯಸ್ತವಾಗಿದೆ. ಜೊತೆಗೆ ಹಲವು ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.

    ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಭಾನುವಾರ ತಡರಾತ್ರಿ ಸುರಿದ ಮಳೆಯಿಂದ ನಗರದ ಎಪಿಎಂಸಿ ಕ್ವಾಟ್ರಸ್ ಬಳಿಯ ಸುಮಾರು 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿತ್ತು. ಪರಿಣಾಮ ಮನೆಯಲ್ಲಿದ್ದ ವಸ್ತುಗಳು ನೀರಿನಲ್ಲಿ ತೇಲುವಂತಾಗಿದೆ. ಸೋಮವಾರ ಮಧ್ಯಾಹ್ನದವರೆಗೂ ನಿವಾಸಿಗಳು ಮನೆಗೆ ನುಗ್ಗಿದ್ದ ನೀರನ್ನು ಹೊರಹಾಕಲು ಹರಸಾಹಸ ಪಡುತ್ತಿದ್ದರು.

    ಪ್ರತಿ ವರ್ಷವೂ ಇದೇ ರೀತಿ ಮಳೆಯ ನೀರು ಮನೆಗಳಿಗೆ ನುಗ್ಗುತ್ತಲೇ ಇದೆ. ಇದಕ್ಕೆ ಪರಿಹಾದ ಕಲ್ಪಿಸುವಂತೆ ನಗರಸಭೆ ಮನವಿ ಸಲ್ಲಿಸಲಾಗಿತ್ತು. ಆದರೆ ನಗರಸಭೆ ಅಧಿಕಾರಿಗಳು ಈ ಮನೆಗಳು ನಮ್ಮ ವ್ಯಾಪ್ತಿಗೆ ಬರಲ್ಲ, ಎಪಿಎಂಸಿ ವ್ಯಾಪ್ತಿಗೆ ಬರುತ್ತದೆ ಎನ್ನುತ್ತಾರೆ. ಇತ್ತ ಎಪಿಎಂಸಿ ಅಧಿಕಾರಿಗಳು ಅದು ನಗರಸಭೆಯ ವ್ಯಾಪ್ತಿ ಎಂದು ಜಾರಿಕೊಳ್ಳುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಪಶ್ಚಿಮ ಘಟ್ಟದಲ್ಲಿ ಮಳೆ- ಕುಕ್ಕೆಯಲ್ಲಿ ಮುಳುಗಿದ ಸ್ನಾನಘಟ್ಟ

    ಪಶ್ಚಿಮ ಘಟ್ಟದಲ್ಲಿ ಮಳೆ- ಕುಕ್ಕೆಯಲ್ಲಿ ಮುಳುಗಿದ ಸ್ನಾನಘಟ್ಟ

    – ಪ್ರವಾಹದ ನೀರಿನಲ್ಲೇ ಪುಣ್ಯಸ್ನಾನ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆ ಮುಂದುವರಿದಿದೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಕುಮಾರಧಾರಾ ನದಿ ಇದೀಗ ತುಂಬಿ ಹರಿಯಲಾರಂಭಿಸಿದೆ.

    ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದು, ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ಸ್ನಾನಘಟ್ಟ ಮುಳುಗಡೆಯಾಗಿದೆ. ಭಕ್ತಾದಿಗಳು ಪ್ರವಾಹದ ನೀರಲ್ಲೇ ಪುಣ್ಯಸ್ನಾನವನ್ನು ಮಾಡುತ್ತಿದ್ದಾರೆ. ನೇತ್ರಾವತಿ ನದಿಯಲ್ಲೂ ನೀರಿನ ಹರಿವು ಹೆಚ್ಚಾಗಿದೆ.

    ಬಂಟ್ವಾಳದಲ್ಲಿ ನೇತ್ರಾವತಿ 7.7 ಮೀಟರ್ ಎತ್ತರದಲ್ಲಿ ಹರಿಯುತ್ತಿದ್ದು ತಗ್ಗು ಪ್ರದೇಶಗಳಲ್ಲಿ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ. ಬಂಟ್ವಾಳದಲ್ಲಿ ನದಿಯ ಅಪಾಯದ ಮಟ್ಟ 9 ಮೀಟರ್ ಆಗಿದ್ದು, ಮಳೆ ಹೀಗೇ ಮುಂದುವರಿದಲ್ಲಿ ನದಿ ಅಪಾಯದ ಮಟ್ಟದಲ್ಲಿ ಹರಿಯುವ ಸಾಧ್ಯತೆ ಇದೆ.

    ಈ ಬಾರಿ ಇದೇ ಮೊದಲ ಬಾರಿ ನದಿಗಳು ತುಂಬಿದ್ದು ರಭಸವಾಗಿ ಹರಿಯುತ್ತಿವೆ. ಜೂನ್ ತಿಂಗಳು ಪೂರ್ತಿ ಮಳೆಯಾಗದೆ ಈ ಬಾರಿ ಮಳೆ ಕೊರತೆಯಾಗಿತ್ತು. ಇನ್ನೂ ಎರಡು ದಿನ ಮಳೆಯಾಗುವ ಬಗ್ಗೆ ಮುನ್ಸೂಚನೆ ನೀಡಲಾಗಿದೆ.