ಮಂಗಳೂರು: ಇತಿಹಾಸ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಸ್ನಾನಘಟ್ಟದಲ್ಲೇ ಕಳೆದೊಂದು ತಿಂಗಳಿಂದ ಅಕ್ರಮ ಮರಳು ದಂಧೆ ರಾಜಾರೋಷವಾಗಿ ನಡೆಯುತ್ತಿದ್ದರೂ ಸಂಬಂಧಪಟ್ಟ ಆಡಳಿತ, ಅಧಿಕಾರಿಗಳು ಕಣ್ಮುಚ್ಚಿ ಕುಳಿತ್ತಿದ್ದಾರೆ.
ನದಿಯಲ್ಲಿ ಹಿಟಾಚಿ, ಡ್ರೆಜ್ಜಿಂಗ್ ಮೆಷಿನ್ ಬಳಸಿ ಮರಳು ಮೇಲೆತ್ತುತ್ತಿದ್ದು ಕುಮಾರಧಾರ ಸೇತುವೆಗೆ ಮುಂದೊಂದು ದಿನ ಕಂಟಕ ತಪ್ಪಿದ್ದಲ್ಲ. ಕೊರೋನಾ ಹಿನ್ನೆಲೆಯಲ್ಲಿ ಏಪ್ರಿಲ್ ತಿಂಗಳ ಅಂತ್ಯದಿಂದ ದೇವಸ್ಥಾನಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದ್ದು, ಸ್ನಾನಘಟ್ಟದ ಹೂಳೆತ್ತುವ ಗುತ್ತಿಗೆ ಪಡೆದವರು ಮರಳು, ಶಿಲ್ಟ್ ಸಂಗ್ರಹಿಸಿ ಗಣಿ ಇಲಾಖೆಯ ಯಾರ್ಡ್ ಗಳಿಗೆ ಸಾಗಿಸುವ ಬದಲು ಅಕ್ರಮ ಮರಳು ಸಾಗಾಟ ಮಾಡುತ್ತಿದ್ದಾರೆ ಎಂದು ಕ್ಷೇತ್ರದ ಭಕ್ತರು ದೂರಿದ್ದಾರೆ. ದಿನವೊಂದಕ್ಕೆ 50-60 ಲೋಡ್ ಗಳಷ್ಟು ಮರಳು ಸಾಗಾಟವಾಗುತ್ತಿದ್ದು ಸಂಜೆ 6 ಗಂಟೆಯ ಬಳಿಕ ಅನುಮತಿ ಇಲ್ಲದಿದ್ದರೂ ರಾತ್ರಿಯಾದರೂ ಹಿಟಾಚಿಯಲ್ಲಿ ಮರಳು ಅಗೆಯಲಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಗಣಿ ಇಲಾಖೆ, ಅಧಿಕಾರಿಗಳಿಗೆ ತಿಳಿದಿದ್ದರೂ ಸುಮ್ಮನಿರುವುದೇಕೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಸುಬ್ರಮಣ್ಯ ದೇವಸ್ಥಾನದ ಸ್ನಾನಘಟ್ಟದಲ್ಲೇ ಪೊಲೀಸ್ ಔಟ್ ಪೋಸ್ಟ್ ಇದೆ. ಅವರ ಕಣ್ಣೆದುರಿಗೆ ಡ್ರೆಜ್ಜಿಂಗ್ ಬಳಸಿ ಅವ್ಯಾಹತವಾಗಿ ಮರಳುಗಾರಿಕೆ ನಡೆಯುತ್ತಿದ್ದರೂ ದಾಳಿ ನಡೆದಿಲ್ಲ. ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಮಂಗಳೂರಿನ ಗಣಿ ಇಲಾಖೆ ಅಧಿಕಾರಿಗಳು ಕಾಟಾಚಾರಕ್ಕೆ ದಾಳಿ ನಡೆಸಿದ್ದಾರೆ. ಆದರೆ ಈ ಬಗ್ಗೆ ಶುಕ್ರವಾರ ಸಂಜೆಯೇ ಮಾಹಿತಿ ಪಡೆದಿದ್ದ ದಂಧೆಕೋರರು ರಾತೋರಾತ್ರಿ ಸಂಗ್ರಹಿಸಿದ್ದ ಮರಳು, 2 ಡ್ರೆಜ್ಜಿಂಗ್ ಮೆಷಿನ್, ಹಿಟಾಚಿ ಎಲ್ಲವನ್ನು ಮಂಗಮಾಯ ಮಾಡಿದ್ದಾರೆ. ಅಧಿಕಾರಿಗಳು ಸ್ಥಳದಲ್ಲಿ ಉಳಿದಿದ್ದ ಸೊತ್ತುಗಳನ್ನು ಸೀಜ್ ಮಾಡಿ ತೆರಳಿದ್ದಾರೆ ಎನ್ನಲಾಗುತ್ತಿದೆ. ಇಲ್ಲಿನ ದಂಧೆ ಯಾವ ರೀತಿ ನಡೀತಾ ಇದೆ ಅಂದ್ರೆ ಖಾಸಗಿ ವ್ಯಕ್ತಿಗಳ ಜಾಗಗಳಲ್ಲಿ ಮರಳು ದಾಸ್ತಾನು ಇಡುವುದು ಮಾತ್ರವಲ್ಲದೆ ಸರ್ಕಾರಿ ಕಚೇರಿ, ಆಸ್ಪತ್ರೆ ಆವರಣದಲ್ಲೂ ಅಭಿವೃದ್ಧಿ ಕಾಮಗಾರಿ ಎಂದು ಹೇಳಿಕೊಂಡು 50-60 ಲೋಡ್ ಮರಳು ದಾಸ್ತಾನು ಇಟ್ಟಿರುವ ಮಾಹಿತಿಯಿದೆ. ಇದನ್ನೂ ಓದಿ: ಯಾರೂ ನಿರೀಕ್ಷೆ ಮಾಡದವರು ಸಿಎಂ ಆಗ್ತಾರೆ: ಯತ್ನಾಳ್

ಜಿಪಿಎಸ್, ಕ್ಯಾಮೆರಾ ಯಾವುದೂ ಇಲ್ಲ….!:
ನದಿಯ ಹೂಳೆತ್ತುವ ನೆಪದಲ್ಲಿ ಡ್ರೆಜ್ಜಿಂಗ್ ಮೆಷಿನ್ ಬಳಸಿ ಮರಳುಗಾರಿಕೆ ನಡೆಸಲಾಗುತ್ತಿದ್ದು, ಇದರಲ್ಲಿ ಗಣಿ ಇಲಾಖೆ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಮರಳು ಸಾಗಾಟದ ಲಾರಿಗಳಿಗೆ ಜಿಪಿಎಸ್, ಲೈಸೆನ್ಸ್, ನಂಬರ್ ಪ್ಲೇಟ್, ಸಿಸಿ ಕ್ಯಾಮೆರಾ ಯಾವುದೂ ಇಲ್ಲ. ಒಂದು ಲೋಡ್ ಮರಳು 15-18 ಸಾವಿರ ರೂ. ತನಕ ಹೊರಗಡೆ ಮಾರಾಟವಾಗುತ್ತಿದ್ದು ಗಣಿ ಇಲಾಖೆಯ ಅಧಿಕೃತ ಲೈಸೆನ್ಸ್ ಇದ್ದು ಸಾವಿರಾರು ರೂಪಾಯಿ ಖರ್ಚು ಮಾಡಿ, ಕ್ಯಾಮೆರಾ, ಜಿಪಿಎಸ್ ಹಾಕಿ ಡ್ರೆಜ್ಜಿಂಗ್ ಗೆ ಅನುಮತಿಯಿಲ್ಲದೆ ದೋಣಿಗಳಲ್ಲಿ ಮರಳು ಸಂಗ್ರಹ ಮಾಡುವ ವ್ಯಾಪಾರಿಗಳು ಇವರಿಂದಾಗಿ ಸಮಸ್ಯೆ ಎದುರಿಸುವಂತಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದರೂ ಅಕ್ರಮ ನಿಲ್ಲಿಸಲು ಹಿಂದೇಟು ಹಾಕುತ್ತಿರುವ ಆರೋಪವೂ ಇದೆ.

ಕುಕ್ಕೆಯನ್ನು ಸಂಪರ್ಕಿಸುವ ಸೇತುವೆಗೆ ಅಪಾಯ…!:
ಸ್ನಾನಘಟ್ಟದಲ್ಲಿ ಹೊಸ ಸೇತುವೆಯ ಅಡಿಯಲ್ಲಿ ಮರಳು ಸಂಗ್ರಹಕ್ಕೆ ಆಳವಾದ ಕುಳಿಗಳನ್ನು ನಿರ್ಮಾಣ ಮಾಡಲಾಗಿದೆ. ಇದರ ಅರಿವಿಲ್ಲದೆ ತೀರ್ಥಸ್ನಾನಕ್ಕೆ ನದಿಗಿಳಿಯುವ ಭಕ್ತರ ಪ್ರಾಣಕ್ಕೂ ಸಂಚಕಾರ ತಪ್ಪಿದ್ದಲ್ಲ. ಇದು ಹೀಗೆ ಮುಂದುವರಿದರೆ ಸೇತುವೆಗೂ ಅಪಾಯ ಕಟ್ಟಿಟ್ಟ ಬುತ್ತಿ. ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮುಲ್ಲಾರಪಟ್ನ ಸೇತುವೆ ಮರಳು ದಂಧೆಗೆ ಕುಸಿದಿದ್ದರೆ ಮರವೂರು ಸೇತುವೆ ಬಿರುಕು ಬಿಟ್ಟಿದೆ. ಮುಂದೊಂದು ದಿನ ಇವುಗಳ ಸಾಲಿಗೆ ಕುಮಾರಧಾರ ಸೇತುವೆಯೂ ಸೇರಿದರೆ ಅಚ್ಚರಿ ಪಡಬೇಕಿಲ್ಲ.








