Tag: Kukke Shri Subrahmanya Temple

  • ಕುಕ್ಕೆ, ಧರ್ಮಸ್ಥಳದಲ್ಲಿ ತೀರ್ಥ, ಪ್ರಸಾದ, ಅನ್ನ ಸಂತರ್ಪಣೆ ಆರಂಭ

    ಕುಕ್ಕೆ, ಧರ್ಮಸ್ಥಳದಲ್ಲಿ ತೀರ್ಥ, ಪ್ರಸಾದ, ಅನ್ನ ಸಂತರ್ಪಣೆ ಆರಂಭ

    – ದಕ್ಷಿಣ ಕನ್ನಡದ ಪ್ರಮುಖ ದೇವಸ್ಥಾನಗಳ ದರ್ಶನಕ್ಕೆ ಪರಿಷ್ಕೃತ ಆದೇಶ
    – ಯಾವುದೇ ಸೇವೆಗಳಿಗೆ ಅವಕಾಶವಿಲ್ಲ

    ಮಂಗಳೂರು: ಕೊರೊನಾ ಸೋಂಕು ನಿಯಂತ್ರಣದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ದೇವಸ್ಥಾನಗಳಿಗೆ ಸಂಬಂಧಿಸಿದಂತೆ ಈ ಹಿಂದೆ ವಿಧಿಸಲಾಗಿದ್ದ ಕೆಲವು ನಿರ್ಬಂಧ, ಮಾರ್ಗಸೂಚಿಗಳನ್ನು ಹಿಂಪಡೆದು ಜಿಲ್ಲಾಡಳಿತ ಹೊಸ ಆದೇಶ ಹೊರಡಿಸಿದೆ.

    ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಗಳು ಭಕ್ತಾದಿಗಳಿಗೆ ಬೆಳಗ್ಗೆ 7 ರಿಂದ ಸಂಜೆ 7 ಗಂಟೆಯವರೆಗೆ ಮಾತ್ರ ತೆರೆದಿರುತ್ತವೆ. ಈ ಸಂದರ್ಭದಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರ, ಅಗತ್ಯ ಕೋವಿಡ್ ನಿಯಂತ್ರಣ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಭಕ್ತಾದಿಗಳು ದೇವರ ದರ್ಶನ, ತೀರ್ಥ, ಪ್ರಸಾದ, ಅನ್ನಸಂತರ್ಪಣೆಯಲ್ಲಿ ಪಾಲ್ಗೊಳ್ಳಬಹುದು. ಮುಂದಿನ ಆದೇಶದವರೆಗೆ ಅವಕಾಶ ನೀಡಲಾಗಿದ್ದು, ಯಾವುದೇ ಸೇವೆಗಳಿಗೆ ಅವಕಾಶ ನೀಡಿಲ್ಲ. ಇದನ್ನೂ ಓದಿ: ಇನ್ನೂ ಮುಗಿದಿಲ್ಲ ಗೊಂದಲ: ‘ಲಾಟರಿ’ ಮೂಲಕ ಗಣೇಶೋತ್ಸವಕ್ಕೆ ಅನುಮತಿ

    ವಾರಾಂತ್ಯದಲ್ಲಿ (ಶನಿವಾರ ಮತ್ತು ಭಾನುವಾರ) ಭಕ್ತಾದಿಗಳ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ವಸತಿ ಗೃಹಗಳಲ್ಲಿ ತಂಗುವುದಾಗಲೀ ಅಥವಾ ದೇವರ ದರ್ಶನಕ್ಕೆ ಅವಕಾಶವಿಲ್ಲ. ಶನಿವಾರ ಮತ್ತು ಭಾನುವಾರಗಳಂದು ಎಲ್ಲ ರೀತಿಯ ಉತ್ಸವ, ಸೇವೆಗಳು, ತೀರ್ಥ, ಪ್ರಸಾದ, ಮುಡಿ ಸೇವೆ, ವಸತಿಗಳನ್ನು ನಿರ್ಬಂಧಿಸಿ ಅರ್ಚಕರುಗಳಿಂದ ಸಾಂಪ್ರದಾಯಿಕ ಪೂಜೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

    ಜಾತ್ರೆಗಳು, ದೇವಾಲಯದ ಉತ್ಸವಗಳು, ಮೆರವಣಿಗೆಗಳು ಇತ್ಯಾದಿಗಳನ್ನು ನಿಷೇಧಿಸಿದೆ. ಆದೇಶವನ್ನು ಉಲ್ಲಂಘಿಸಿದಲ್ಲಿ ಅಂತಹವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ-2005ರ ಕಲಂ 51 ರಿಂದ 60 ರನ್ವಯ, ಐಪಿಸಿ ಕಲಂ 188 ರಂತೆ ಮತ್ತು ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧಿನಿಯಮ 2020ರ ಕಲಂ 4, 5 ಮತ್ತು 10 ರಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಅವರು ಆದೇಶ ಹೊರಡಿಸಿದ್ದಾರೆ.

  • ಭಾರೀ ಮಳೆಯಿಂದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಬಳಿ ಕೆರೆಯಂತಾದ ರಸ್ತೆ

    ಭಾರೀ ಮಳೆಯಿಂದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಬಳಿ ಕೆರೆಯಂತಾದ ರಸ್ತೆ

    ಮಂಗಳೂರು: ಕಳೆದ ಕೆಲದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಕೆಲ ಭಾಗಗಳಲ್ಲಿ ಮಳೆಯಾಗುತ್ತಿದೆ. ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲೂ ಭಾರೀ ಮಳೆ ಸುರಿದಿದೆ.

    ಎಡೆಬಿಡದೆ ಸುರಿದ ಮಳೆಯಿಂದಾಗಿ ದೇವಸ್ಥಾನದ ಬಳಿಯ ರಸ್ತೆ ಪೂರ್ತಿ ನೀರು ನಿಂತು ಕೆರೆಯಂತಾಗಿತ್ತು. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಪ್ರವೇಶಿಸುವ ರಸ್ತೆಯ ಕಾಮಗಾರಿ ನಡೆಯುತ್ತಿದ್ದು, ನೀರು ಹರಿಯುವುದಕ್ಕೆ ಸಾಧ್ಯವಾಗದೇ ರಸ್ತೆ ಕೆರೆಯಂತಾಗಿತ್ತು.

    ರಸ್ತೆಯಲ್ಲಿ ಪಾರ್ಕ್ ಮಾಡಿದ್ದ ದ್ವಿಚಕ್ರ ವಾಹನ, ಕಾರು ಕೃತಕ ನೆರೆಗೆ ಭಾಗಶಃ ಮುಳುಗಿ ಹೋಗಿತ್ತು. ವಾಹನ ಸವಾರರು ತಮ್ಮ ವಾಹನಗಳನ್ನು ನೆರೆ ನೀರಿನಿಂದ ಹೊರತರುವುದಕ್ಕೆ ಹರಸಾಹಸ ಪಟ್ಟ ಘಟನೆಯು ನೆರಯಿತು.

    ಜಿಲ್ಲೆಯಲ್ಲಿ ನಿತ್ಯ ಸಂಜೆಯ ಹೊತ್ತು ಗುಡುಗು-ಸಿಡಿಲು ಸಹಿತ ಮಳೆಯಾಗುತ್ತಿದ್ದು, ಇಳೆಯನ್ನು ತಂಪಾಗಿಸುತ್ತಿದೆ.

  • ಕುಕ್ಕೆ ಸುಬ್ರಹ್ಮಣ್ಯಕ್ಕೆ ಅಜಯ್ ದೇವಗನ್ ಭೇಟಿ

    ಕುಕ್ಕೆ ಸುಬ್ರಹ್ಮಣ್ಯಕ್ಕೆ ಅಜಯ್ ದೇವಗನ್ ಭೇಟಿ

    ಮಂಗಳೂರು: ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಾಲಿವುಡ್ ನಟ ಅಜಯ್ ದೇವಗನ್ ಭೇಟಿ ನೀಡಿ ವಿಶೇಷ ಪೂಜೆ ನೆರವೇರಿಸಿದರು.

    ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿರುವ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಅಜಯ್ ದೇವಗನ್ ಭೇಟಿ ನೀಡಿ, ಆಶ್ಲೇಷ ಬಲಿ ಪೂಜೆ ಮಾಡಿಸಿದರು. ವಿಶೇಷ ಪೂಜೆ ನೆರವೇರಿಸಿದ ಬಳಿಕ ಸಂಪುಟ ನರಸಿಂಹಸ್ವಾಮಿ ಮಠದ ಸ್ವಾಮೀಜಿಯವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದರು. ಈ ವೇಳೆ ಅವರ ಸಹಚರರು ಹಾಗೂ ಭಕ್ತರು ಅವರಿಗೆ ಸಾಥ್ ನೀಡಿದರು.

    ಅಜಯ್ ದೇವಗನ್ ಆಗಾಗ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡುತ್ತಿರುತ್ತಾರೆ. ಇದು ಅವರ ಖಾಸಗಿ ಭೇಟಿಯಾಗಿದ್ದು, ಈ ಹಿಂದೆ ಅವರ ಸ್ನೇಹಿತರೊಬ್ಬರು ಸ್ಥಳದ ಮಹಾತ್ಮೆಯನ್ನು ವಿವರಿಸಿ, ದೇವಸ್ಥಾನಕ್ಕೆ ಭೇಟಿ ನೀಡುವಂತೆ ಸಲಹೆ ನೀಡಿದ್ದರು. ಹೀಗಾಗಿ ಅಜಯ್ ದೇವಗನ್ ಆಗಾಗ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸಿ ದರ್ಶನ ಪಡೆಯುತ್ತಾರೆ.

  • ಪುತ್ರನ ಗೆಲುವಿಗಾಗಿ ಕುಕ್ಕೆಗೆ ಮೊರೆ – ಎಚ್‍ಡಿಕೆಯಿಂದ ಸುಬ್ರಹ್ಮಣ್ಯನಿಗೆ ಬಂಗಾರದ ರಥ!

    ಪುತ್ರನ ಗೆಲುವಿಗಾಗಿ ಕುಕ್ಕೆಗೆ ಮೊರೆ – ಎಚ್‍ಡಿಕೆಯಿಂದ ಸುಬ್ರಹ್ಮಣ್ಯನಿಗೆ ಬಂಗಾರದ ರಥ!

    – ಕೊನೆಗೂ ಈಡೇರುತ್ತಾ ಧರಂ ಸಿಂಗ್ ಕಾಲದ ಹರಕೆ

    ಬೆಂಗಳೂರು: ಮಂಡ್ಯದಲ್ಲಿ ಪುತ್ರ ನಿಖಿಲ್ ಕುಮಾರಸ್ವಾಮಿ ಗೆಲುವಿಗಾಗಿ ಸಿಎಂ ಕುಮಾರಸ್ವಾಮಿ ಇದುವರೆಗೂ ಅಸಾಧ್ಯವಾಗಿಯೇ ಉಳಿದಿರುವ ಕಾಯಕವನ್ನ ಪೂರ್ಣಗೊಳಿಸುವ ಸಾಹಸಕ್ಕೆ ಕೈ ಹಾಕಿದ್ದಾರೆ. ಈ ಮೂಲಕ ಶಾಪ ವಿಮೋಚನೆಗಾಗಿ ಮುಂದಾಗಿದ್ದಾರೆ.

    ಹೌದು. ಕುಕ್ಕೆ ಸುಬ್ರಹ್ಮಣ್ಯನಿಗೆ ಬಂಗಾರದ ರಥ ಮಾಡಿಸುವ ಹರಕೆಯನ್ನ ಈಡೇರಿಸಲು ಎಚ್‍ಡಿಕೆ ಮುಂದಾಗಿದ್ದಾರೆ. 15 ವರ್ಷಗಳ ಹಿಂದೆ ಧರಂ ಸಿಂಗ್ ಅವರು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಸಿಎಂ ಆಗಿದ್ದಾಗ ಕುಕ್ಕೆಗೆ ಚಿನ್ನದ ರಥ ಕೊಡಿಸುವುದಾಗಿ ಭರವಸೆ ಕೊಟ್ಟಿದ್ದರು. ಆದರೆ ಅವತ್ತು ಸುಬ್ರಹ್ಮಣ್ಯನಿಗೆ ಕೊಟ್ಟಿದ್ದ ವಾಗ್ದಾನ ಇದುವರೆಗೂ ಪೂರ್ಣಗೊಂಡಿಲ್ಲ. ಯಡಿಯೂರಪ್ಪ ಜೊತೆ ಸೇರಿ ಮೈತ್ರಿ ಸರ್ಕಾರ ರಚಿಸಿ ಸಿಎಂ ಆದರೂ ಕುಮಾರಸ್ವಾಮಿಗೆ ಚಿನ್ನದ ರಥ ಮಾಡಿಸಲು ಆಗಿರಲಿಲ್ಲ. ಒಂದೂವರೆ ದಶಕದಷ್ಟು ಹಳೆಯದಾದ ಹರಕೆಯನ್ನು ಈಡೇರಿಸುವಂತೆ ಇತ್ತೀಚೆಗಷ್ಟೇ ಜ್ಯೋತಿಷಿ ದ್ವಾರಕನಾಥ್ ಸಿಎಂ ಕುಮಾರಸ್ವಾಮಿಗೆ ಹೇಳಿದ್ದರು.

    ಹರಕೆ ಈಡೇರಿಸಿಲ್ಲ ಅಂದರೆ ಸುಬ್ರಹ್ಮಣ್ಯನ ಶಾಪ ತಟ್ಟುತ್ತದೆ. ಸಿಎಂ ಸ್ಥಾನದಲ್ಲಿ ಇರುವವರು ಇದನ್ನು ನೆರವೇರಿಸಬೇಕು. ಇಲ್ಲದಿದ್ದರೆ ನೆಮ್ಮದಿಯಾಗಿ ಇರಲು ಸಾಧ್ಯವಿಲ್ಲ ಎಂದು ಎಚ್ಚರಿಸಿದ್ದರು. ಈ ಹಿನ್ನೆಲೆಯಲ್ಲಿ ದ್ವಾರಕನಾಥ್‍ರನ್ನು ಮನೆಗೆ ಕರೆಸಿಕೊಂಡು ಸಿಎಂ ಮಾತುಕತೆ ನಡೆಸಿದ್ದಾರೆ.

    ಸುಬ್ರಹ್ಮಣ್ಯನಿಗೆ ಇನ್ನೂರು ಕೋಟಿ ರೂಪಾಯಿ ಮೊತ್ತದ ಚಿನ್ನದ ರಥ ಮಾಡಿಸುವಂತೆ ಮುಜರಾಯಿ ಇಲಾಖೆಗೆ ಸೂಚಿಸಿದ್ದಾರೆ. ಒಂದೆಡೆ ಮಂಡ್ಯದಲ್ಲಿ ಪುತ್ರ ನಿಖಿಲ್ ಕುಮಾರಸ್ವಾಮಿ ಊರಲ್ಲಿರುವ ದೇವರಿಗೆಲ್ಲ ಪೂಜೆ ಮಾಡುತ್ತಿದ್ದರೆ, ಇತ್ತ ಕುಮಾರಸ್ವಾಮಿ ಅವರು ಕುಕ್ಕೆಗೆ ಬಂಗಾರದ ರಥ ಕೊಟ್ಟು ಶಾಪ ವಿಮೋಚನೆ ಮೂಲಕ ಮಗನ ಗೆಲುವಿಗಾಗಿ ಪ್ರಾರ್ಥಿಸುತ್ತಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ದ್ವಾರಕಾನಾಥ್, 2014ರಲ್ಲಿ ಧರಂ ಸಿಂಗ್ ಕಾಲದಲ್ಲಿ ಸುಬ್ರಹ್ಮಣ್ಯ ದೇವರಿಗೆ ಒಂದು ಬಂಗಾರದ ರಥ ಅರ್ಪಣೆ ಮಾಡಬೇಕೆಂದು ತೀರ್ಮಾನ ಮಾಡಿದ್ದರು. ಅಲ್ಲದೆ ಮುಖ್ಯಮಂತ್ರಿ ಆದ ಮೇಲೆ ಬಂಗಾರದ ರಥ ಮಾಡಿಕೊಡುತ್ತೇನೆ ಎಂದು ಧರಂ ಸಿಂಗ್ ಮಾತು ಕೊಟ್ಟಿದ್ದರು. ಮಾತು ಕೊಟ್ಟ ಬಳಿಕ ಅವರಿಗೆ ಅಧಿಕಾರಿಗಳು ಯಾರೂ ಕೂಡ ಸಹಕಾರ ಕೊಡಲಿಲ್ಲ. ಅಲ್ಲದೆ ಮುಂದಿನ ಸರ್ಕಾರ ಕೂಡ ಅದನ್ನು ಜಾರಿ ಮಾಡಿಲ್ಲ. ಸದ್ಯ ಈ ಬಗ್ಗೆ ಕುಮಾರಸ್ವಾಮಿ ನನ್ನ ಜೊತೆ ಈ ಬಗ್ಗೆ ಮಾತುಕತೆ ನಡೆಸಿ, ಚಾಲನೆ ಕೊಡುವುದಾಗಿ ಭರವಸೆ ನೀಡಿದ್ದಾರೆ ಎಂದು ಅವರು ಹೇಳಿದರು.