Tag: kudroli ganesh

  • ಮೆಗಾ ಮ್ಯಾಜಿಕ್ ಸ್ಟಾರ್ ಕುದ್ರೋಳಿ ಗಣೇಶ್‌ಗೆ ‘ಗೋಲ್ಡನ್ ಮ್ಯಾಜಿಷಿಯನ್’ ರಾಷ್ಟ್ರೀಯ ಜಾದೂ ಪ್ರಶಸ್ತಿ

    ಮೆಗಾ ಮ್ಯಾಜಿಕ್ ಸ್ಟಾರ್ ಕುದ್ರೋಳಿ ಗಣೇಶ್‌ಗೆ ‘ಗೋಲ್ಡನ್ ಮ್ಯಾಜಿಷಿಯನ್’ ರಾಷ್ಟ್ರೀಯ ಜಾದೂ ಪ್ರಶಸ್ತಿ

    ಮಂಗಳೂರು: ಆಂಧ್ರಪ್ರದೇಶದ ಇಂಡಿಯನ್ ಮ್ಯಾಜಿಕ್ ಅಸೋಶಿಯೇಶನ್ (ಐಎಂಎ) ಸಂಸ್ಥೆಯು ಕರ್ನಾಟಕದ ಜಾದೂ ಕಲಾವಿದ ಮೆಗಾ ಮ್ಯಾಜಿಕ್ ಸ್ಟಾರ್ ಕುದ್ರೋಳಿ ಗಣೇಶ್ ಅವರಿಗೆ ಪ್ರತಿಷ್ಟಿತ ‘ಗೋಲ್ಡನ್ ಮ್ಯಾಜಿಷಿಯನ್’ ರಾಷ್ಟ್ರೀಯ ಜಾದೂ ಪ್ರಶಸ್ತಿ ನೀಡಿ ಗೌರವಿಸಿದೆ. ಕುದ್ರೋಳಿ ಗಣೇಶ್ ಅವರು ಜಾದೂ ರಂಗದಲ್ಲಿ ಮಾಡಿರುವ ಸೃಜನಾತ್ಮಕ ಪ್ರಯೋಗಗಳನ್ನು ಗುರುತಿಸಿ ಜೀವಿತಾವಧಿಯ ಸಾಧನೆಗಾಗಿ ಈ ಪ್ರಶಸ್ತಿ ಸಂದಾಯವಾಗಿದೆ.

    ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ರಾಷ್ಟ್ರೀಯ ಜಾದೂ ದಿನಾಚರಣೆಯ ನೆನಪಿಗಾಗಿ ನಡೆದ ಅದ್ದೂರಿ ಸಮಾರಂಭದಲ್ಲಿ ವಿಶಾಖಪಟ್ಟಣದ ಲೋಕಸಭಾ ಸದಸ್ಯ ಭರತ್ ಮುತ್ತುಕುಮುಲಿ ಅವರು ಕುದ್ರೋಳಿ ಗಣೇಶ್‌ಗೆ ಪ್ರಶಸ್ತಿ ಪ್ರದಾನ ಮಾಡಿದರು. ಐಎಂಎ ಸಂಸ್ಥೆಯ ಅಧ್ಯಕ್ಷ ಖ್ಯಾತ ಜಾದೂಗಾರ ಬಿ.ಎಸ್.ರೆಡ್ಡಿ ಉಪಸ್ಥಿತರಿದ್ದರು.

    ಇಂಡಿಯನ್ ಮ್ಯಾಜಿಕ್ ಅಸೋಸಿಯೇಶನ್ ಸಂಸ್ಥೆಯು ತನ್ನ ದಶಮಾನೋತ್ಸದ ಅಂಗವಾಗಿ ಭಾರತದ ಅಗ್ರಗಣ್ಯ ಜಾದೂಗಾರ ಪಿ.ಸಿ.ಸೊರ್ಕಾರ್ ಜೂನಿಯರ್ ಸೇರಿದಂತೆ ದೇಶ-ವಿದೇಶದ ಹತ್ತು ಜಾದೂ ಸಾಧಕರಿಗೆ ಪ್ರಶಸ್ತಿಯನ್ನು ಕೊಡಮಾಡಿದೆ.

    ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕುದ್ರೋಳಿ ಗಣೇಶ್, ಬದಲಾಗುತ್ತಿರುವ ಅಭಿರುಚಿಗೆ ಹೊಂದುವಂತೆ ಪ್ರದರ್ಶನದಲ್ಲಿ ಹೊಸತನವನ್ನು ಜೋಡಿಸಿಕೊಳ್ಳೋಣ ಎಂದು ಭಾರತೀಯ ಜಾದೂಗಾರರಿಗೆ ಕರೆ ನೀಡಿದರು. ಜಾದೂ ಕಲೆಯ ಅಭಿವೃದ್ಧಿಗಾಗಿ ಜಾದೂ ಕಲೆಗೆ ಸಾಂಸ್ಥಿಕ ರೂಪ ದೊರೆಯಬೇಕಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಕುದ್ರೋಳಿ ಗಣೇಶ್, ತಾವು ಮುಂದಾಳತ್ವವನ್ನು ವಹಿಸಬೇಕು ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಹಿರಿಯ ಜಾದೂಗಾರ ಪಿ.ಸಿ.ಸೊರ್ಕಾರ್ ಅವರಿಗೆ ವಿನಂತಿಸಿದರು.

    ಕುದ್ರೋಳಿ ಗಣೇಶ್ ಅವರು ಮೂವತ್ತಕ್ಕೂ ಅಧಿಕ ವರ್ಷಗಳಿಂದ ಜಾದೂರಂಗದಲ್ಲಿದ್ದು, ದೇಶದಾದ್ಯಂತ ಹಾಗೂ ವಿದೇಶದ 15 ರಾಷ್ಟ್ರಗಳಲ್ಲಿ 2,300 ಕ್ಕೂ ಹೆಚ್ಚು ಜಾದೂ ಪ್ರದರ್ಶನ ನೀಡಿದ್ದಾರೆ. ವಿವಿಧ ಜಾದೂ ಸ್ಪರ್ಧೆಗಳಲ್ಲಿ ಭಾಗವಹಿಸಿ 11 ರಾಷ್ಟ್ರೀಯ ಜಾದೂ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಜಾದೂ, ಜಾನಪದ, ರಂಗಭೂಮಿ, ಸಂಗೀತಗಳ ಸಮ್ಮಿಳನದ ನವರಸಪೂರ್ಣ ಜಾದೂ ಶೈಲಿಯನ್ನು ಹುಟ್ಟುಹಾಕಿದ್ದಾರೆ. ತುಳುನಾಡು ಜಾದೂ, ತುಳುನಾಡು ತುಡರ್ ಚೆಂಡು, ಹರಿಕಥೆ ಜಾದೂ, ನವದುರ್ಗಾ ವಿಸ್ಮಯ, ಸ್ವಚ್ಛತೆಗಾಗಿ ಜಾದೂ, ಶಿಕ್ಷಣಕ್ಕಾಗಿ ಜಾದೂ, ಮೈಂಡ್ ಮ್ಯಾಜಿಕ್ ಮುಂತಾದ ನವನವೀನ ಜಾದೂ ಪ್ರಯೋಗಗಳ ಮೂಲಕ ಜಗತ್ತಿನಾದ್ಯಂತ ಜನಪ್ರಿಯರಾಗಿದ್ದಾರೆ.

  • ಸಾಂಸ್ಕೃತಿಕ ಪಟ್ಟಿಗೆ ಜಾದೂ ಕಲೆ ಸೇರ್ಪಡೆಯಾಗಲಿ: ಕುದ್ರೋಳಿ ಗಣೇಶ್ ಮನವಿ

    ಸಾಂಸ್ಕೃತಿಕ ಪಟ್ಟಿಗೆ ಜಾದೂ ಕಲೆ ಸೇರ್ಪಡೆಯಾಗಲಿ: ಕುದ್ರೋಳಿ ಗಣೇಶ್ ಮನವಿ

    ಮಂಗಳೂರು:‌ ಮನರಂಜನೆ ಜೊತೆಗೆ ವಿಸ್ಮಯ ಮೂಡಿಸುವ ಜಾದೂ ಕೂಡ ಸಾಂಸ್ಕೃತಿ ಕಲೆಯಾಗಿದೆ. ಕೇಂದ್ರದ ನಾಟಕ ಅಕಾಡೆಮಿ ಪಟ್ಟಿಯಲ್ಲಿ ಜಾದೂವಿಗೆ ಸ್ಥಾನ ನೀಡಿದ್ದು, ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪಟ್ಟಿಯಲ್ಲಿಯೂ ಜಾದೂ ಸೇರ್ಪಡೆಯಾಗಬೇಕು. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ವಹಿಸಬೇಕು ಎಂದು ಅಂತಾರಾಷ್ಟ್ರೀಯ ಜಾದೂಗಾರ ಕುದ್ರೋಳಿ ಗಣೇಶ್ (Kudroli Ganesh) ವಿನಂತಿಸಿದ್ದಾರೆ.

    ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳೂರು ಪ್ರೆಸ್‌ಕ್ಲಬ್ ಗೌರವ ಅತಿಥಿಯಾಗಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಂಗೀತ, ನೃತ್ಯ, ಯಕ್ಷಗಾನದಂತೆ (Yakshagana) ಜಾದೂ ಕೂಡ ಸಾಂಸ್ಕೃತಿಕ ಕಲೆಯಾಗಿದೆ. ನಶಿಸಿ ಹೋಗುತ್ತಿರುವ ಈ ಕಲೆಯನ್ನು ಸಂಕ್ಷಿಸುವ ನಿಟ್ಟಿನಲ್ಲಿ ನೀನಾಸಂ, ರಂಗಾಯಣ ಮಾದರಿಯ ತರಬೇತಿ ವ್ಯವಸ್ಥೆ ಕಲ್ಪಿಸಬೇಕಾಗಿದೆ ಎಂದರು.

    ಜಾದೂವನ್ನು ಇತರ ಕಲೆಗಳಂತೆ ತರಗತಿ ಕೊಠಡಿಯಲ್ಲಿ ವಿದ್ಯಾರ್ಥಿಗಳಿಗೆ ಒಟ್ಟಾಗಿ ಕಲಿಸಲು ಸಾಧ್ಯವಿಲ್ಲ. ಜಾದೂ ಕಲಿಯುವ ವಿದ್ಯಾರ್ಥಿಯಲ್ಲಿ ಮೆದುಳು ಮತ್ತು ಕೈಚಳಕದ ಜೊತೆಗೆ ಸಮರ್ಪಣಾ ಮನೋಭಾವ ಅಗತ್ಯ. ಜಾದೂ ಕಲೆ ಸಿದ್ಧಿಸಿಕೊಳ್ಳಬೇಕೆಂದರೆ ಕನಿಷ್ಠ ಆರೇಳು ವರ್ಷಗಳ ಅಭ್ಯಾಸದ ಅಗತ್ಯವಿದೆ. ಈ ನಿಟ್ಟಿನಲ್ಲಿ ತರಬೇತಿ ನೀಡುವ, ಕಾಲೇಜು ತೆರೆಯುವ ಆಶಯವೂ ಇದೆ. ವೃತ್ತಿಪರತೆಗಿಂತಲೂ ಹವ್ಯಾಸಿ ಕಲೆಯಾಗಿ ಉಳಿದಿರುವ ಜಾದೂವನ್ನು ನವರಸ ಪೂರ್ಣ ಭಾವದೊಂದಿಗೆ, ರಂಗಭೂಮಿಯ ಕಲೆಯಾಗಿ ಬೆಳೆಸಬೇಕಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು. ಇದನ್ನೂ ಓದಿ: ರಷ್ಯಾದ ಡೇಂಜರ್‌ ಸೇನೆಯಲ್ಲಿದ್ದಾರೆ ಕಲಬುರಗಿಯ ಮೂವರು – ನಮ್ಮನ್ನು ರಕ್ಷಿಸಿ ಎಂದ ಯುವಕರು

    1998ರಿಂದ ತುಳುನಾಡಿನ ದೈವರಾಧಾನೆಯನ್ನು ಬಿಂಬಿಸುವ ಜಾದೂವನ್ನು ಪ್ರಸ್ತುತ ಪಡಿಸಿದ ಪರಿಣಾಮ ನಮ್ಮ ವಿಸ್ಮಯ ತಂಡ ಇದು ವಿಶ್ವವಿಖ್ಯಾತಿಯಾಗಲು ಸಾಧ್ಯವಾಗಿದೆ. ನಮ್ಮ ಮಣ್ಣಿನ ಜನಪದ ಸ್ಪರ್ಶವನ್ನು ಜಾದೂವಿನ ತಂತ್ರಗಾರಿಕೆಯ ಜೊತೆ ಬೆಸೆದಾಗ ವೀಕ್ಷಕನ ಭಾವನೆಗಳನ್ನು ತಟ್ಟಲು ಸಾಧ್ಯವಾಗುತ್ತದೆ. ಜಾದೂ ಕೂಡ ಸಾಮಾಜಿಕ ಕಳಕಳಿಯೊಂದಿಗೆ ಬೆರೆತಾಗ ಹೃದಯವನ್ನು ತಲುಪಲು ಸಾಧ್ಯವಾಗುತ್ತದೆ ಎಂದು ಕುದ್ರೋಳಿ ಗಣೇಶ್ ಹೇಳಿದರು.

    ನಮ್ಮ ಟಿವಿಯ ವ್ಯವಸ್ಥಾಪಕ ನಿರ್ದೇಶಕ ಡಾ.ಶಿವಶರಣ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ. ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಕಾರ್ಯಕ್ರಮ ಸಂಯೋಜಕ ಆತ್ಮಭೂಷಣ ಭಟ್ ಉಪಸ್ಥಿತರಿದ್ದರು. ಪ್ರೆಸ್‌ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. ಆರ್.ಸಿ. ಭಟ್ ಕಾರ್ಯಕ್ರಮ ನಿರೂಪಿಸಿದರು.

    ಓದಿನ ಹವ್ಯಾಸ ಜಾದೂ ಕಲೆಗೆ ಪ್ರೇರಣೆ: 8ನೇ ತರಗತಿಯಿಂದಲೇ ಪುಸ್ತಕ ಓದುವ ಹುಚ್ಚು ಸಣ್ಣ ಪುಟ್ಟ ಮ್ಯಾಜಿಕ್‌ಗಳ ಬಗ್ಗೆ ಆಸಕ್ತಿ ಬೆಳೆಸಿತು. ದ್ವಿತೀಯ ಪಿಯುಸಿಯಲ್ಲಿ ಇರುವಾಗ ಓದಿದ ಮ್ಯಾಜಿಕ್ ಫೋರ್ ದಿ ಬಿಗಿನರ್ಸ್ ಎಂಬ ಪುಸ್ತಕ ಓದಿನ ಜಾದೂವಿನ ಆಸಕ್ತಿಯನ್ನು ಇಮ್ಮಡಿಸಿತು. ಬಳಿಕ ಹವ್ಯಾಸಿ ಜಾದೂಗಾರರಾಗಿದ್ದ ಪ್ರದೀಪ್ ಸೂರಿ ಅವರು ನನ್ನ ಗುರುವಾದರು. ಅವರು ಜಾದೂ ತಂತ್ರಗಾರಿಕೆಯನ್ನು ನನಗೆ ಹೇಳಿಕೊಟ್ಟಿದ್ದಲ್ಲದೆ, ಹಲವು ಪರಿಕರಗಳನ್ನೂ ನೀಡಿದರು. ಪದವಿ ಬಳಿಕ ಮುಂಗಾರು ಪತ್ರಿಕೆಯಲ್ಲಿ ಸುಮಾರು 3 ವರ್ಷಗಳ ಕಾಲ ಉಪಸಂಪಾದಕನಾಗಿದ್ದ ಸಂದರ್ಭ ಓದಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದರಿಂದ ಜಾದೂವಿನ ನನ್ನ ಆಸಕ್ತಿಯನ್ನು ಮತ್ತಷ್ಟು ಗಟ್ಟಿಗೊಳಿಸಲು ಸಾಧ್ಯವಾಯಿತು ಎಂದು ಅವರು ಕುದ್ರೋಳಿ ಗಣೇಶ್ ಹೇಳಿದರು.