Tag: KSRTC Strike

  • ಇಂದು 3,200ಕ್ಕೂ ಹೆಚ್ಚು ಬಸ್ಸುಗಳ ಸಂಚಾರ – ಸಾರಿಗೆ ಸಿಬ್ಬಂದಿಗೆ ಸವದಿ ಧನ್ಯವಾದ

    ಇಂದು 3,200ಕ್ಕೂ ಹೆಚ್ಚು ಬಸ್ಸುಗಳ ಸಂಚಾರ – ಸಾರಿಗೆ ಸಿಬ್ಬಂದಿಗೆ ಸವದಿ ಧನ್ಯವಾದ

    ಬೆಂಗಳೂರು: ಇಂದು ಕರ್ನಾಟಕದಲ್ಲಿ 3,200ಕ್ಕೂ ಹೆಚ್ಚು ಬಸ್ಸುಗಳು ರಸ್ತೆಗೆ ಇಳಿದಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ. ಈ ಸಂಬಂಧ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿ ಕರ್ತವ್ಯಕ್ಕೆ ಹಾಜರಾದ ಸಾರಿಗೆ ಸಿಬ್ಬಂದಿಗೆ ಧನ್ಯವಾದ ಹೇಳಿದ್ದಾರೆ.

    ಮಾಧ್ಯಮ ಹೇಳಿಕೆಯಲ್ಲಿ ಏನಿದೆ?
    ಹಲವಾರು ಅಡೆತಡೆಗಳನ್ನು ಎದುರಿಸಿಯೂ ನಮ್ಮ ನಿರೀಕ್ಷೆಯಂತೆ ಇಂದು ಮಧ್ಯಾಹ್ನದ ವೇಳೆಗೆ ನಮ್ಮ ಸಾರಿಗೆ ನಿಗಮಗಳ 3200ಕ್ಕೂ ಹೆಚ್ಚು ಬಸ್ಸುಗಳು ಸಂಚರಿಸಿ ಸಾರ್ವಜನಿಕರಿಗೆ ಅನುಕೂಲವಾಯಿತು. ನಮ್ಮ ಮನವಿಗೆ ಓಗುಟ್ಟು ಕರ್ತವ್ಯಕ್ಕೆ ಹಾಜರಾಗಿರುವ ನಮ್ಮ ಸಾರಿಗೆ ಸಿಬ್ಬಂದಿಗಳಿಗೆ ನಾನು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ.

    ಸಾರ್ವಜನಿಕ ಹಿತದೃಷ್ಟಿಯಿಂದ ಹಲವು ಕಡೆ ಕರ್ತವ್ಯಕ್ಕೆ ಹಾಜರಾಗುತ್ತಿದ್ದ ನಮ್ಮ ನೌಕರರನ್ನು ತಡೆಗಟ್ಟುವ ಪ್ರಯತ್ನಕ್ಕೆ ಮತ್ತು ಅವರ ಮೇಲೆ ಹಲ್ಲೆ ನಡೆಸುವುದಕ್ಕೆ ಕೆಲವರು ಮುಂದಾಗಿದ್ದು, ಅಂಥವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಕುರಿತು ಪೊಲೀಸ್ ಠಾಣೆಗಳಲ್ಲೂ ಪ್ರಕರಣ ದಾಖಲಾಗಿವೆ. ಮುಂದೆಯೂ ಇದೇ ರೀತಿ ಪ್ರಕರಣಗಳು ವರದಿಯಾದರೆ ಸಂಬಂಧಪಟ್ಟ ಪೊಲೀಸ್ ಠಾಣೆಗೆ ದೂರು ದಾಖಲಿಸಲು ಮತ್ತು ನಮ್ಮ ನಿಗಮಗಳ ಅಧಿಕಾರಿಗಳ ಗಮನಕ್ಕೆ ತರಲು ಕೋರುತ್ತೇನೆ ಹಾಗೂ ಕರ್ತವ್ಯಕ್ಕೆ ಹಾಜರಾದ ನಮ್ಮ ಸಿಬ್ಬಂದಿಗಳಿಗೆ ಜೀವಬೆದರಿಕೆ ಎದುರಾದಾಗಲೂ ಎದೆಗುಂದದೆ ಸಾರ್ವಜನಿಕರಿಗೆ ಸಾರಿಗೆ ಸೇವೆ ಕಲ್ಪಿಸುವಲ್ಲಿ ಬದ್ಧತೆ ತೋರಿದ ನೌಕರರ ಮತ್ತು ಅಧಿಕಾರಿಗಳ ಕರ್ತವ್ಯ ಪ್ರಜ್ಞೆಯನ್ನು ನಮ್ಮ ಸರ್ಕಾರ ಮುಕ್ತಕಂಠದಿಂದ ಪ್ರಶಂಸಿಸುತ್ತದೆ.

    ತೆರಿಗೆ ಪಾವತಿಗೆ ಅವಧಿ ವಿಸ್ತರಣೆ
    ಸಾರಿಗೆ ನೌಕರರ ಮುಷ್ಕರ ನಿರತರಾಗಿರುವುದರಿಂದ ಖಾಸಗಿ ವಾಹನ ಮಾಲೀಕರು ಸರಕಾರದ ಕೋರಿಕೆಗೆ ಸ್ಪಂದಿಸಿ ಜನಸಾಮಾನ್ಯರ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲು ಪ್ರಯಾಣಿಕ ವಾಹನಗಳ ತೆರಿಗೆ ಪಾವತಿ ಅವಧಿಯನ್ನು ವಿಸ್ತರಿಸಲಾಗಿದೆ. ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯಿದೆ 1957ರ ಕಲಂ4(1) ನಿಯಮಗಳನ್ನು ಸಡಿಲಗೊಳಿಸಿ ಕರ್ನಾಟಕ ರಾಜ್ಯದ ಎಲ್ಲಾ ನೋಂದಾಯಿತ ಸಾರಿಗೆ ಪ್ರಯಾಣಿಕ ವಾಹನಗಳಿಗೆ (ಹೊಸ ವಾಹನಗಳ ನೋಂದಣಿಯನ್ನು ಹೊರತುಪಡಿಸಿ) ಅನ್ವಯಿಸುವಂತೆ 2021ರ ಏಪ್ರಿಲ್ 15ರ ಒಳಗಾಗಿ ಪಾವತಿಸಬೇಕಾಗಿದ್ದ ಮೋಟಾರು ವಾಹನ ತೆರಿಗೆಯನ್ನು ದಂಡರಹಿತವಾಗಿ ಪಾವತಿಸಲು ಏಪ್ರಿಲ್ 30 ರವರೆಗೆ ಅವಧಿಯನ್ನು ವಿಸ್ತರಿಸಿ ಇಂದು ಆದೇಶಿಸಲಾಗಿದೆ. ಇದರ ಸೂಕ್ತ ಪ್ರಯೋಜನವನ್ನು ಪಡೆದುಕೊಂಡು ಸಾರ್ವಜನಿಕ ಸೇವೆಗೆ ಮತ್ತಷ್ಟು ಸ್ಪಂದಿಸಬೇಕೆಂದು ವಾಹನ ಮಾಲೀಕರಲ್ಲಿ ನಾನು ವಿನಂತಿಸುತ್ತೇನೆ.

    ಪ್ರಸ್ತುತ ಕೋವಿಡ್ 2ನೇ ಅಲೆಯ ಅಪಾಯದ ಸಂದರ್ಭ ಎದುರಾಗಿದೆ. ಅಷ್ಟೇಅಲ್ಲ ಯುಗಾದಿ ಪ್ರಯುಕ್ತ ನೌಕರ ವರ್ಗದವರು ಮತ್ತು ವಿದ್ಯಾರ್ಥಿಗಳು, ಮತ್ತಿತರರು ತಮ್ಮ ಊರುಗಳಿಗೆ ತೆರಳಬೇಕಾದ ಅನಿವಾರ್ಯತೆ ಇರುವ ಪ್ರಯುಕ್ತ ಅವರಿಗೆ ಅನುಕೂಲವಾಗಲು ನೌಕರರು ಕೂಡಲೇ ಕರ್ತವ್ಯಕ್ಕೆ ಮರಳಬೇಕು. ಚುನಾವಣಾ ನೀತಿ ಸಂಹಿತೆಯ ಅವಧಿ ಮುಕ್ತಾಯಗೊಂಡ ನಂತರ ನಮ್ಮ ನೌಕರ ಬಾಂಧವರ ವೇತನ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ನಾವು ಹಲವಾರು ಬಾರಿ ಮುಷ್ಕರ ನಿರತ ನೌಕರರಲ್ಲಿ ಈಗಾಗಲೇ ಮನವಿ ಮಾಡಿಕೊಂಡಿದ್ದೇವೆ. ಆದರೆ ಇದಕ್ಕೆ ಕೆಲವು ಹೊರಗಿನ ಪಟ್ಟಭದ್ರ ಹಿತಾಸಕ್ತಿಗಳು ಹುಳಿಹಿಂಡುತ್ತಾ ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸುತ್ತಿದ್ದಾರೆ. ಇದರಿಂದಾಗಿ ದಿನದಿಂದ ದಿನಕ್ಕೆ ಈ ಮುಷ್ಕರವು ಸಾರ್ವಜನಿಕರ ಸಹಾನುಭೂತಿಯನ್ನೂ ಕಳೆದುಕೊಳ್ಳುತ್ತಿದೆ.

    ಇದರಿಂದ ಹತಾಶೆಗೊಂಡಿರುವ ಕೆಲವರು ದಿನದಿಂದ ದಿನಕ್ಕೆ ವಾಮಮಾರ್ಗದ ಪ್ರತಿಭಟನೆಗೆ ಕುಮ್ಮಕ್ಕು ನೀಡುತ್ತಾ ಸಾರ್ವಜನಿಕರ ದೃಷ್ಟಿಯಲ್ಲಿ ನಗೆಪಾಟಲಿಗೆ ಈಡಾಗುತ್ತಿದ್ದಾರೆ. ಇದು ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ಖುಷಿಪಡುವ ಯತ್ನ ಎಂಬ ಕಟುಸತ್ಯವನ್ನು ಮುಷ್ಕರನಿರತ ಸಾರಿಗೆ ನೌಕರರು ಅರ್ಥ ಮಾಡಿಕೊಳ್ಳುವುದು ಅಗತ್ಯ. ಆದಷ್ಟೂ ಸಹನೆಯಿಂದ ಈ ಸಮಸ್ಯೆಯನ್ನು ಬಗೆಹರಿಸಲು ಅತ್ಯಂತ ವಿವೇಚನೆಯಿಂದ ಸರ್ಕಾರವು ಹೆಜ್ಜೆ ಇಡುತ್ತಿದೆ. ಆದರೆ ಇದನ್ನು ನಮ್ಮ ದೌರ್ಬಲ್ಯ ಎಂದು ಯಾರೂ ಪರಿಗಣಿಸಬಾರದು ಮತ್ತು ನಮ್ಮ ತಾಳ್ಮೆಯನ್ನು ಮತ್ತಷ್ಟು ಪರೀಕ್ಷಿಸಲು ಯಾರಾದರೂ ಮುಂದಾದರೆ ಅಂಥವರ ವಿರುದ್ಧ ಮುಂದಿನ ಕ್ರಮಗಳು ಮತ್ತಷ್ಟು ಗಂಭೀರವಾಗಿರುತ್ತದೆ ಎಂದು ಮತ್ತೊಮ್ಮೆ ಎಚ್ಚರಿಕೆ ನೀಡಲು ಬಯಸುತ್ತೇನೆ.

    ಇದು ಬೇವು ಬೆಲ್ಲದ ಹಬ್ಬವಾದ ಯುಗಾದಿಯ ಪುಣ್ಯ ಸಂದರ್ಭ. ಈ ಸಂದರ್ಭದಲ್ಲಿ ನಮ್ಮ ಸಾರಿಗೆ ನೌಕರರ ಬದುಕಿನಲ್ಲಿ ಬೇವಿಗಿಂತ ಬೆಲ್ಲದ ಸಿಹಿಯೇ ಹೆಚ್ಚು ಸಿಗುವಂತಾಗಲಿ ಎಂದು ಶುಭ ಹಾರೈಸುತ್ತೇನೆ. ಆದ್ದರಿಂದ ಅವರ ಬದುಕಿನಲ್ಲಿ ಬೆಲ್ಲದ ಸವಿ ಹೆಚ್ಚಾಗಲು ಸಾರಿಗೆ ನೌಕರರು ಕೂಡಲೇ ತಮ್ಮ ಕರ್ತವ್ಯಕ್ಕೆ ಹಾಜರಾಗಿ ಜನರ ಪ್ರೀತಿ ವಿಶ್ವಾಸಕ್ಕೆ ಭಾಜನರಾಗಬೇಕೆಂದು ನಾನು ಪುನರುಚ್ಛರಿಸುತ್ತೇನೆ.

  • ಸಾರಿಗೆ ನೌಕರರ ಮೂಲ ವೇತನ ಎಷ್ಟು? ಆರಂಭಿಕ ಸಂಬಳ ಎಷ್ಟು ಸಿಗುತ್ತೆ?

    ಸಾರಿಗೆ ನೌಕರರ ಮೂಲ ವೇತನ ಎಷ್ಟು? ಆರಂಭಿಕ ಸಂಬಳ ಎಷ್ಟು ಸಿಗುತ್ತೆ?

    ಬೆಂಗಳೂರು: ಸಾರಿಗೆ ನೌಕರರು 6ನೇ ವೇತನ ಆಯೋಗ ಶಿಫಾರಸ್ಸಿನ ಪ್ರಕಾರ ಸಂಬಳ ಜಾರಿ ಮಾಡುವಂತೆ ಪಟ್ಟು ಹಿಡಿದು ಮುಷ್ಕರ ಮಾಡುತ್ತಿದ್ದಾರೆ. ಈ ನಡುವೆ ನೌಕರರ ಸಂಬಳದ ಬಗ್ಗೆ ತಪ್ಪು ವರದಿಗಳು ಪ್ರಕಟವಾಗುತ್ತಿರುವ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಇಂದು ಯಾರಿಗೆ ಎಷ್ಟು ಆರಂಭಿಕ ವೇತನ ನೀಡಲಾಗುತ್ತದೆ ಎಂಬ ವಿವರವನ್ನು ಬಿಡುಗಡೆ ಮಾಡಿದೆ.

    ಚಾಲಕರು
    ಮೂಲ ವೇತನ – 12,400 ರೂ.
    ಮೂಲ ತುಟ್ಟಿಭತ್ಯೆ – 5,611 ರೂ.
    ಒಟ್ಟು ಮೂಲ ವೇತನ – 18,011 ರೂ.
    ತುಟ್ಟಿ ಭತ್ಯೆ – 2,026 ರೂ.
    ಮನೆ ಬಾಡಿಗೆ ಭತ್ಯೆ – 4,323 ರೂ.
    ಭವಿಷ್ಯ ನಿಧಿ – 2,404 ರೂ.
    ಇತರೆ ಭತ್ಯೆ, ಓಟಿ ಸೇರಿದಂತೆ 5,184 ರೂ.
    ಒಟ್ಟು – 31, 948 ರೂ.

    ನಿರ್ವಾಹಕರು:
    ಮೂಲ ವೇತನ – 11,640 ರೂ.
    ಮೂಲ ತುಟ್ಟಿಭತ್ಯೆ – 5,267 ರೂ.
    ಒಟ್ಟು ಮೂಲ ವೇತನ -16,907 ರೂ.
    ತುಟ್ಟಿ ಭತ್ಯೆ – 1,902 ರೂ.
    ಮನೆ ಬಾಡಿಗೆ ಭತ್ಯೆ – 4,058 ರೂ.
    ಭವಿಷ್ಯ ನಿಧಿ – 2,257 ರೂ.
    ಇತರೆ ಭತ್ಯೆ, ಓಟಿ ಸೇರಿದಂತೆ – 5,184 ರೂ.
    ಒಟ್ಟು – 30,308 ರೂ.

  • ಸಾರಿಗೆ ನೌಕರರ ಮುಷ್ಕರ ಅಂತ್ಯ – ಸಂಜೆಯಿಂದಲೇ ಸಂಚಾರ ಆರಂಭ

    ಸಾರಿಗೆ ನೌಕರರ ಮುಷ್ಕರ ಅಂತ್ಯ – ಸಂಜೆಯಿಂದಲೇ ಸಂಚಾರ ಆರಂಭ

    ಬೆಂಗಳೂರು: 4 ದಿನಗಳಿಂದ ನಡೆಯುತ್ತಿದ್ದ ಸಾರಿಗೆ ನೌಕರರ ಮುಷ್ಕರ ಅಂತ್ಯಗೊಂಡಿದ್ದು ಇಂದು ಸಂಜೆಯಿಂದಲೇ ಸರ್ಕಾರಿ ಬಸ್ಸುಗಳು ರಸ್ತೆಗೆ ಇಳಿಯಲಿವೆ.

    ಭಾನುವಾರ ಸರ್ಕಾರ 9 ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿತ್ತು. ಈ ಬೇಡಿಕೆಯನ್ನು ಒಪ್ಪಿರುವ ಬಗ್ಗೆ ಸರ್ಕಾರ ಅಧಿಕೃತವಾಗಿ ತಿಳಿಸಬೇಕು ಜೊತೆಗೆ ಸರ್ಕಾರಿ ನೌಕರರನ್ನಾಗಿ ಮಾಡಬೇಕೆಂಬ ಬೇಡಿಕೆಗೆ ಆಗ್ರಹಿಸಿ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಮುಂದುವರಿಸಿದ್ದರು.

    ಈ ನಡುವೆ ಮಧ್ಯಾಹ್ನ ಸಾರಿಗೆ ಸಚಿವ ಲಕ್ಷ್ಮಣ ಸವದಿಯವರು ಬೇಡಿಕೆ ಒಪ್ಪಿರುವ ಬಗ್ಗೆ ಪತ್ರ ಕಳುಹಿಸಿದ್ದರು. ಈ ಬೆನ್ನಲ್ಲೇ ನೌಕರರ ಸಂಘದ ಮುಖಂಡರು ಸಭೆ ನಡೆಸಿ ಮಷ್ಕರವನ್ನು ಕೈ ಬಿಡುವ ತೀರ್ಮಾನವನ್ನು ತೆಗೆದುಕೊಂಡರು.

    ಈ ವೇಳೆ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್‌ ಸರ್ಕಾರ ನೀಡಿದ ಭರವಸೆ ಈಡೇರಿಕೆಗಾಗಿ ಮೂರು ತಿಂಗಳು ಅವಕಾಶ ನೀಡುತ್ತೇವೆ. ಒಂದು ವೇಳೆ ಈ ಅವಧಿಯ ಒಳಗಡೆ ಬೇಡಿಕೆ ಈಡೇರದೇ ಇದ್ದರೆ ಮತ್ತೆ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

    ಜನವರಿ 1 ರಿಂದ 30ರವರೆಗೆ ಯಾವ ಯಾವ ಕೆಲಸ ಆಗಬೇಕೋ ಅದನ್ನು ಫಾಲೋ ಮಾಡುತ್ತೇವೆ. ನಿಮ್ಮವಿಶ್ವಾಸ ಕಳೆದುಕೊಳ್ಳುವುದಿಲ್ಲ. ದೊಡ್ಡ ಬೇಡಿಕೆ ಇದೆ ಎಂದು ಹೇಳಿ ಮುಷ್ಕರವನ್ನು ಹಿಂದಕ್ಕೆ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

  • ಸರ್ಕಾರಿ ನೌಕರರೆಂದು ಪರಿಗಣಿಸಲ್ಲ – ಸರ್ಕಾರದ ಮುಂದಿರುವ ಆಯ್ಕೆಗಳು ಏನು?

    ಸರ್ಕಾರಿ ನೌಕರರೆಂದು ಪರಿಗಣಿಸಲ್ಲ – ಸರ್ಕಾರದ ಮುಂದಿರುವ ಆಯ್ಕೆಗಳು ಏನು?

    – ಖಾಸಗಿ ಬಸ್‌, ವ್ಯಾನ್‌ಗಳನ್ನು ಓಡಿಸಲು ಚಿಂತನೆ
    – ತಾರಕಕ್ಕೆ ಏರಿದ ಸಂಘರ್ಷ
    – ಉಪವಾಸ ಸತ್ಯಗ್ರಹ ಆರಂಭಿಸಲು ಮುಂದಾದ ನೌಕರರು

    ಬೆಂಗಳೂರು: ರಾಜ್ಯದಲ್ಲಿ ಸಾರಿಗೆ ನೌಕರರು ಮುಷ್ಕರ ಶುರು ಮಾಡಿ ಮೂರು ದಿನ ಕಳೆದಿದೆ. ಆದರೆ ಸಮಸ್ಯೆ ಬಗೆಹರಿಯುವ ಯಾವುದೇ ಲಕ್ಷಣಗಳು ಕಾಣ್ತಿಲ್ಲ. ಬದಲಾಗಿ ಇನ್ನಷ್ಟು ಕಗ್ಗಂಟಾಗಿದ್ದು, ಸಂಘರ್ಷ ತಾರಕಕ್ಕೇರಿದೆ. ಬಸ್ ಬಂದ್‍ಗೆ ಜಗ್ಗದ ಸರ್ಕಾರ ಮುಷ್ಕರ ನಿರತ ಸಾರಿಗೆ ನೌಕರರಿಗೆ ಸೆಡ್ಡು ಹೊಡೆದಿದೆ.

    ಸೋಮವಾರದಿಂದ ಖಾಸಗಿ ಬಸ್‍ಗಳನ್ನು, ಜೀಪ್‌ ಸರ್ಕಾರಿ ದರದಲ್ಲಿ ಓಡಿಸಲು ತೀರ್ಮಾನಿಸಲಾಗಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಘೋಷಿಸಿದ್ದಾರೆ. ಸಾರ್ವಜನಿಕರಿಗೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಗ್ತಿದೆ. ಈಗಲೂ ಕಾಲ ಮಿಂಚಿಲ್ಲ. ಪ್ರತಿಭಟನೆ ಕೈಬಿಟ್ಟು, ಮಾತುಕತೆ ಬನ್ನಿ ನಾವು ಸಿದ್ಧ ಇದ್ದೇವೆ ಎಂದು ಮುಷ್ಕರ ನಿರತ ನೌಕರರಿಗೆ ಸವದಿ ಆಹ್ವಾನ ನೀಡಿದ್ದಾರೆ. ಆದರೆ ಕೋಡಿಹಳ್ಳಿ ಚಂದ್ರಶೇಖರ್‌ ಅವರನ್ನು ಮಾತುಕತೆಗೆ ಕರೆಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕೋಡಿಹಳ್ಳಿಗೂ ಸಾರಿಗೆ ಸಂಸ್ಥೆಗೂ ಏನು ಸಂಬಂಧ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಸಾರಿಗೆ ನೌಕರರನ್ನು ಸರ್ಕಾರಿ ನೌಕರನ್ನಾಗಿ ಸರ್ಕಾರ ಘೋಷಿಸುತ್ತಿಲ್ಲ ಯಾಕೆ? 

     

    ಈ ಬೆನ್ನಲ್ಲೇ ನಾಳೆಯಿಂದ ಪ್ರತಿಭಟನೆ ಜೊತೆಗೆ ಉಪವಾಸ ಸತ್ಯಾಗ್ರಹ ನಡೆಸೋದಾಗಿ ಕೋಡಿಹಳ್ಳಿ ಘೋಷಿಸಿದ್ದಾರೆ. ಅನಿರ್ದಿಷ್ಟಾವಧಿ ಬಂದ್ ಮುಂದುವರೆಯುತ್ತೆ ಎಂದು ಪ್ರಕಟಿಸಿದ್ದಾರೆ. ಸಭೆಗೆ ನಾನು ಬರಬಾರದು ಎಂಬ ಷರತ್ತು ಯಾಕೆ ? ನಾನೇನು ಉಗ್ರಗಾಮಿನಾ? ನನ್ನ ಕಂಡರೆ ಭಯ ಯಾಕೆ ಎಂದು ಸರ್ಕಾರವನ್ನು ಕೋಡಿಹಳ್ಳಿ ಪ್ರಶ್ನಿಸಿದ್ದಾರೆ.

    ಕೆಎಸ್‍ಆರ್‌ಟಿಸಿ ಕ್ರಿಯಾ ಸಮಿತಿ ಅಧ್ಯಕ್ಷ ಚನ್ನೇಗೌಡ ಮಾತನಾಡಿ, ಸರ್ಕಾರ ಅಸಹಕಾರ ತೋರುತ್ತಿದೆ ಎಂದು ಆಪಾದಿಸಿದ್ದಾರೆ. ಕೋಡಿಹಳ್ಳಿ ಮೂಲಕವೇ ನಮ್ಮ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಮಧ್ಯೆ ಖಾಸಗಿ ಬಸ್ ಒಕ್ಕೂಟ ಸರ್ಕಾರದ ಪರವಾಗಿ ನಿಲ್ಲದಿರಲು ತೀರ್ಮಾನಿಸಿದೆ. ನಾವು ಖಾಸಗಿ ಬಸ್ ಓಡಿಸಲ್ಲ ಎಂದಿರುವ ಖಾಸಗಿ ಬಸ್ ಒಕ್ಕೂಟದ ನಟರಾಜ್ ಮುಷ್ಕರನಿರತದ ಜೊತೆ ಯಾಕೆ ಮಾತಾಡುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.

    ಕೆಎಸ್‍ಬಿಓಎಫ್ ಉಪಾಧ್ಯಕ್ಷ ಬಾಲಕೃಷ್ಣ, ನಮ್ಮ ಬೇಡಿಕೆಗಳನ್ನು ಈಡೇರಿಸಿದರೆ ಮಾತ್ರ ಸರ್ಕಾರದ ಜೊತೆ ನಿಲ್ಲಲು ಸಿದ್ಧ ಎಂದು ಘೋಷಿಸಿದ್ದಾರೆ. ಖಾಸಗಿಯವರಿಗೆ ಮೂರು ತಿಂಗಳ ವೇತನ ನೀಡುವ ಆಫರ್ ನೀಡಲು ಸರ್ಕಾರ ಚಿಂತನೆ ನಡೆಸಿದೆ. ನಾಳೆ ಬೆಳಗ್ಗೆ ಸಂಘಗಳ ಮುಖಂಡರ ಜೊತೆ ಸಭೆ ನಡೆಸಲು ಸವದಿ ತೀರ್ಮಾನಿಸಿದ್ದಾರೆ.

    ಈ ಮಧ್ಯೆ ಗೃಹವ ಸಚಿವ ಬಸವರಾಜ ಬೊಮ್ಮಾಯಿ ಜೊತೆ ಸಿಎಂ ತುರ್ತು ಸಭೆ ನಡೆಸಿದರು. ನಂತರ ಮಾತನಾಡಿದ ಬೊಮ್ಮಾಯಿ ಅವರು, ಸರ್ಕಾರಿ ನೌಕರರೆಂದು ಪರಿಗಣಿಸಬೇಕೆಂಬ ಸಾರಿಗೆ ಸಿಬ್ಬಂದಿಯ ಬೇಡಿಕೆಯನ್ನು ಈ ಸಂದರ್ಭದಲ್ಲಿ ಈಡೇರಿಸುವುದು ಕಷ್ಟ ಎಂದು ಸ್ಪಷ್ಟಪಡಿಸಿದ್ದಾರೆ. ಮೊದಲು ಮುಷ್ಕರ ಕೈಬಿಟ್ಟು ಮಾತುಕತೆಗೆ ಬನ್ನಿ ಅಂತಾ ಕರೆ ನೀಡಿದ್ದಾರೆ. ಜೊತೆಗೆ ಎಸ್ಮಾ ಜಾರಿಯ ಪರಿಸ್ಥಿತಿ ಇನ್ನೂ ಬಂದಿಲ್ಲ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

    ಬಿಎಂಟಿಸಿ ಎಂಡಿ ಶಿಖಾ ಮಾತ್ರ, ಪ್ರತಿಭಟನೆ ಮುಂದುವರೆದರೆ ಎಸ್ಮಾ ಜಾರಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಎಸ್ಮಾ ಜಾರಿ ಮಾಡಿದವರು ಭಸ್ಮ ಆಗ್ತಾರೆ ಅಂತಾ ಸಾರಿಗೆ ನೌಕರರು ಎಚ್ಚರಿಕೆ ನೀಡಿದ್ದಾರೆ.

    ಸರ್ಕಾರದ ಮುಂದಿರುವ ಆಯ್ಕೆಗಳು ಏನು?
    ಆಯ್ಕೆ 01- ಸಂಧಾನ ಪ್ರಯತ್ನ ಮಾಡಿ ಒಂದು ದಿನ ಡೆಡ್‍ಲೈನ್
    ಆಯ್ಕೆ 02- ಸಂಧಾನ ಸಫಲ ಆಗದಿದ್ದರೆ ಕಾನೂನು ಕ್ರಮ
    ಆಯ್ಕೆ 03- ಮುಷ್ಕರ ನಿರತರ ಮೇಲೆ ದಂಡ ಪ್ರಯೋಗ
    ಆಯ್ಕೆ 04- ಹಂತ ಹಂತವಾಗಿ ಎಸ್ಮಾ ಜಾರಿ
    ಆಯ್ಕೆ 05- ಪರ್ಯಾಯ ಸಾರಿಗೆಯಾಗಿ ಖಾಸಗಿ ಬಸ್