Tag: Krupa Sagar

  • ಸಾರ್ವಜನಿಕರಲ್ಲಿ ವಿನಂತಿ: ಮೈನವಿರೇಳಿಸೋ ಟ್ರೈಲರ್ ಲಾಂಚ್ ಆಗಿದೆ!

    ಸಾರ್ವಜನಿಕರಲ್ಲಿ ವಿನಂತಿ: ಮೈನವಿರೇಳಿಸೋ ಟ್ರೈಲರ್ ಲಾಂಚ್ ಆಗಿದೆ!

    ಕೃಪಾ ಸಾಗರ್ ನಿರ್ದೇಶನದ ‘ಸಾರ್ವಜನಿಕರಲ್ಲಿ ವಿನಂತಿ’ ಚಿತ್ರ ಟೀಸರ್ ಮೂಲಕವೇ ಸಂಚಲನ ಸೃಷ್ಟಿಸಿತ್ತು. ಈ ಕಾರಣದಿಂದಲೇ ಎಲ್ಲ ವರ್ಗದ ಪ್ರೇಕ್ಷಕರೂ ಈ ಸಿನಿಮಾದ ಮೇಲೆ ಕುತೂಹಲದ ಕಣ್ಣಿಟ್ಟಿರುವ ಈ ಹೊತ್ತಿನಲ್ಲಿ, ಥೇಟರಿಗೆ ಆಗಮಿಸಲು ದಿನಗಳಷ್ಟೇ ಬಾಕಿ ಇರುವಾಗ ಟ್ರೈಲರ್ ಲಾಂಚ್ ಮಾಡಲಾಗಿದೆ.

    ಮದನ್ ರಾಜ್ ಮತ್ತು ಅಮೃತಾ ನಾಯಕ ನಾಯಕಿಯರಾಗಿ ನಟಿಸಿರೋ ಈ ಚಿತ್ರ ಕ್ರೈಂ ಥ್ರಿಲ್ಲರ್ ಜಾನರಿನ ಪ್ರಯೋಗಾತ್ಮಕ ಚಿತ್ರ ಎಂಬುದು ಈ ಹಿಂದೆಯೇ ಬಯಲಾಗಿತ್ತು. ಆದರೆ ಅದರ ನಿಜವಾದ ರೂಪುರೇಷೆ ಏನಿರಬಹುದೆಂಬುದರ ಅಂದಾಜು ಈ ಟ್ರೈಲರ್ ಮೂಲಕ ಅನಾವರಣಗೊಂಡಿದೆ. ಚಿತ್ರ ವಿಚಿತ್ರ ಅಪರಾಧ ಪ್ರಕರಣಗಳು, ವಿಕ್ಷಿಪ್ತ ಆಸಾಮಿಗಳು, ಒಂದು ಕೊಲೆ ಮತ್ತು ಪ್ರೀತಿ… ಇಷ್ಟನ್ನಿಟ್ಟುಕೊಂಡು ನಿರ್ದೇಶಕರು ಕಮಾಲ್ ಸೃಷ್ಟಿಸಲು ಹೊರಟಿರೋ ಸ್ಪಷ್ಟ ಸೂಚನೆಯನ್ನು ಈ ಟ್ರೈಲರ್ ರವಾನಿಸಿದೆ.

    ಸಾಮಾನ್ಯವಾಗಿ ತುರ್ತು ಪರಿಸ್ಥಿತಿಗಳ ಸಂದರ್ಭದಲ್ಲಿ ಪ್ರಕಟಣೆಗಳನ್ನು ಹೊರಡಿಸುವಾಗ ಪೊಲೀಸ್ ಇಲಾಖೆ ಹೆಚ್ಚಿನದಾಗಿ ಸಾರ್ವಜನಿಕರಲ್ಲಿ ವಿನಂತಿ ಎಂಬ ಸ್ಲೋಗನ್ ಬಳಸುತ್ತಾ ಬಂದಿದೆ. ಈ ಚಿತ್ರವನ್ನು ಪೊಲೀಸರಿಗೇ ಅರ್ಪಿಸಿ ಚಿತ್ರತಂಡ ಗಮನ ಸೆಳೆದಿತ್ತು. ಇದೀಗ ಹೊರ ಬಂದಿರೋ ಟ್ರೈಲರ್ ಒಟ್ಟಾರೆ ಚಿತ್ರದಲ್ಲಿ ಪೊಲೀಸರದ್ದೆಷ್ಟು ಮಹತ್ವದ ಪಾತ್ರವಿದೆ ಎಂಬುದರ ಸೂಚನೆಯನ್ನೂ ನೀಡಿದೆ.

    ಒಟ್ಟಾರೆಯಾಗಿ ಈ ಹಿಂದೆ ಬಿಡುಗಡೆಯಾದ ಟೀಸರ್ ಮೂಲಕ ಸಾರ್ವಜನಿಕರಲ್ಲಿ ವಿನಂತಿಯತ್ತ ಕುತೂಹಲ ಕಾವೇರಿತ್ತು. ಈಗ ಲಾಂಚ್ ಆಗಿರುವ ಟ್ರೈಲರ್ ಅದನ್ನು ಮತ್ತಷ್ಟು ಕಾವೇರುವಂತೆ ಮಾಡಿ ಬಿಟ್ಟಿದೆ. ಪ್ರಯೋಗಾತ್ಮಕವಾದ ಪಕ್ಕಾ ಕಮರ್ಶಿಯಲ್ ಜಾಡಿನ ಈ ಚಿತ್ರ ಇದೇ 21ನೇ ತಾರೀಕಿನಂದು ಬಿಡುಗಡೆಯಾಗುತ್ತಿದೆ.

  • ಸಾರ್ವಜನಿಕರಲ್ಲಿ ವಿನಂತಿ: ಸೆನ್ಸಾರ್ ಮುಗಿಸಿಕೊಂಡು ಥೇಟರಿಗೆ ಬರಲು ರೆಡಿ!

    ಸಾರ್ವಜನಿಕರಲ್ಲಿ ವಿನಂತಿ: ಸೆನ್ಸಾರ್ ಮುಗಿಸಿಕೊಂಡು ಥೇಟರಿಗೆ ಬರಲು ರೆಡಿ!

    ಬೆಂಗಳೂರು: ಟೀಸರ್ ಮೂಲಕವೇ ವ್ಯಾಪಕ ಚರ್ಚೆ, ಕುತೂಹಲ ಹುಟ್ಟು ಹಾಕಿರೋ ಚಿತ್ರ `ಸಾರ್ವಜನಿಕರಲ್ಲಿ ವಿನಂತಿ’. ಯಾವ ಸದ್ದುಗದ್ದಲವೂ ಇಲ್ಲದೇ ಚಿತ್ರೀಕರಣ ಮುಗಿಸಿಕೊಂಡು ಆ ನಂತರ ಕೆಲಸ ಕಾರ್ಯಗಳ ಮೂಲಕವೇ ಸೆನ್ಸೇಷನ್ ಕ್ರಿಯೇಟ್ ಮಾಡುತ್ತವಲ್ಲಾ? ಅಂಥಾ ಚಿತ್ರಗಳನ್ನು ಪ್ರೇಕ್ಷಕರು ಗಂಭೀರವಾಗಿ ಪರಿಗಣಿಸುತ್ತಾರೆ. ಈ ವೆರೈಟಿಯ ಚಿತ್ರಗಳಿಗೆ ಗೆಲುವು ಗ್ಯಾರೆಂಟಿ ಎಂಬಂಥಾ ನಂಬಿಕೆಯೂ ಇದೆ. ಇಂಥಾ ನಂಬಿಕೆ ಹುಟ್ಟು ಹಾಕಿರೋ ಸಾರ್ವಜನಿಕರಲ್ಲಿ ವಿನಂತಿ ಸೆನ್ಸಾರ್ ಮುಗಿಸಿಕೊಂಡು ಥೇಟರಿನತ್ತ ಮುಖ ಮಾಡಿದೆ.

    ಕೃಪಾ ಸಾಗರ್ ನಿರ್ದೇಶನದ ಈ ಚಿತ್ರಕ್ಕೆ ಸೆನ್ಸಾರ್ ಕಡೆಯಿಂದ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ಇದೇ ಖುಷಿಯಲ್ಲಿ ಚಿತ್ರತಂಡ ಬಿಡುಗಡೆಯ ದಿನಾಂಕವನ್ನೂ ಘೋಷಿಸಿದೆ. ಈ ನಿಟ್ಟಿನಲ್ಲಿ ಹೇಳೋದಾದರೆ ಇದೇ ತಿಂಗಳ 21ರಂದು ತೆರೆಗಾಣಲಿದೆ.

    ಈಗಾಗಲೇ ಒಂದಷ್ಟು ವರ್ಷಗಳಿಂದ ಯೋಗರಾಜ ಭಟ್ ಸೇರಿದಂತೆ ಅನೇಕ ನಿರ್ದೇಶಕರ ಗರಡಿಯಲ್ಲಿ ಪಳಗಿಕೊಂಡಿರುವವರು ಕೃಪಾ ಸಾಗರ್. ಈ ಅವಧಿಯ ತುಂಬಾ ಪ್ರೇಕ್ಷಕರ ನಾಡಿ ಮಿಡಿತವನ್ನು ಅರ್ಥ ಮಾಡಿಕೊಂಡಿರೋ ಅವರು ಸಾಮಾಜಿಕ ಕಾಳಜಿ ಇರೋ ಕಥಾ ಹಂದರವನ್ನು ಈ ಮೂಲಕ ಪಕ್ಕಾ ಕಮರ್ಶಿಯಲ್ ವೇನಲ್ಲಿ ಹೇಳಿದ್ದಾರಂತೆ.

    ಈ ಚಿತ್ರದಲ್ಲಿ ಮದನ್ ರಾಜ್ ಮತ್ತು ಅಮೃತಾ ನಾಯಕ ನಾಯಕಿಯರಾಗಿ ನಟಿಸಿದ್ದಾರೆ. ಮಂಡ್ಯ ರಮೇಶ್, ರಮೇಶ್ ಪಂಡಿತ್ ಮುಂತಾದವರ ಅದ್ಧೂರಿ ತಾರಾಗಣ ಈ ಚಿತ್ರಕ್ಕಿದೆ. ಈ ಸಮಾಜದಲ್ಲಿ ಮೇಲು ನೋಟಕ್ಕೆ ಗೊತ್ತಾಗುವಂಥಾ ಅದೆಷ್ಟೋ ಬಗೆಯ ಅಪರಾಧ ಪ್ರಕರಣಗಳಿವೆ. ಆದರೆ ನಮ್ಮೆಲ್ಲರ ಬೆನ್ನ ಹಿಂದೆ ನಡೆಯೋ ನಿಗೂಢ ಕ್ರೈಮುಗಳದ್ದೊಂದು ಜಗತ್ತಿದೆ. ಅಂಥಾ ವಿರಳ ಸನ್ನಿವೇಶಗಳನ್ನು ಸೇರಿಸಿಕೊಂಡು ಸಾರ್ವಜನಿಕರೆಲ್ಲ ಗಮನಹರಿಸಲೇ ಬೇಕಾದ ಕಥೆಯನ್ನು ಥ್ರಿಲ್ಲರ್ ಶೈಲಿಯಲ್ಲಿ ಹೇಳಲಾಗಿದೆಯಂತೆ.