Tag: krpuram

  • ಕೆಆರ್‌ಪುರಂ-ವೈಟ್‍ಫೀಲ್ಡ್ ನಡುವಿನ ಮೆಟ್ರೋ ಸಂಚಾರಕ್ಕೆ ಶೀಘ್ರದಲ್ಲೇ ಗ್ರೀನ್ ಸಿಗ್ನಲ್

    ಕೆಆರ್‌ಪುರಂ-ವೈಟ್‍ಫೀಲ್ಡ್ ನಡುವಿನ ಮೆಟ್ರೋ ಸಂಚಾರಕ್ಕೆ ಶೀಘ್ರದಲ್ಲೇ ಗ್ರೀನ್ ಸಿಗ್ನಲ್

    ಬೆಂಗಳೂರು: ಪ್ರಯಾಣಿಕರ ಬಹುದಿನದ ಕನಸಾಗಿದ್ದ ಕೆಆರ್‌ಪುರಂ (KRPuram) ಮತ್ತು ವೈಟ್‍ಫೀಲ್ಡ್ ನಡುವಿನ ಮೆಟ್ರೋ (Metro) ಸಂಚಾರಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂದಿನಿಂದ ಕೊನೆಯ ಹಂತದ ಪ್ರಾಯೋಗಿಕ ಹಂತದ ಸಂಚಾರ ನಡೆಯಲಿದೆ.

     12.75 ಕಿ.ಮೀ ಉದ್ದದ ಕೆಆರ್‌ಪುರಂ ಹಾಗೂ ವೈಟ್‍ಫೀಲ್ಡ್ (Whitefield) ಮಾರ್ಗದ ಬಿಎಂಆರ್‌ಸಿಎಲ್ (BMRCL) ಬಹುತೇಕ ಕಾರ್ಯಗಳು ಮುಕ್ತಾಯಗೊಂಡಿವೆ. ಮುಂದಿನ ಒಂದು ತಿಂಗಳೊಳಗಾಗಿ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆಯಿದೆ. ಇದರಿಂದ ಈ ಭಾಗದ ಪ್ರಯಾಣಿಕರ ಬಹುದಿನದ ಕನಸು ಈಡೇರಲಿದೆ.

    ಇಂದಿನಿಂದ ಪ್ರಾಯೋಗಿಕವಾಗಿ 90 ಕಿ.ಮೀ ವೇಗದಲ್ಲಿ ಐದು ಮೆಟ್ರೋ ರೈಲುಗಳು ಸಂಚಾರ ಮಾಡಲಿವೆ. ಈ ಪ್ರಾಯೋಗಿಕ ಸಂಚಾರದಲ್ಲಿ ರೈಲ್ವೇ ಸೇಫ್ಟಿ ಕಮಿಷನರ್ (Safety Comissioner) ಕೂಡ ಹಾಜರಿದ್ದು, ತಪಾಸಣೆ ನಡೆಸಲಿದ್ದಾರೆ. ಮೂರು ದಿನಗಳ ಕಾಲ ನಡೆಯಲಿರುವ ಪ್ರಾಯೋಗಿಕ ಸಂಚಾರದ ಪ್ರತಿಯೊಂದು ಅಂಶವನ್ನು ಸೇಫ್ಟಿ ಕಮಿಷನರ್ ತಪಾಸಣೆ ನಡೆಸಿ, ವಾರದ ಬಳಿಕ 300 ಪುಟಗಳ ವರದಿಯನ್ನು ಸಲ್ಲಿಸಲಿದ್ದಾರೆ. ಯಾವುದೇ ಲೋಪವಿಲ್ಲ ಎಂದು ವರದಿಯಲ್ಲಿ ಉಲ್ಲೇಖವಾದರೆ ಮಾರ್ಚ್ 15ರ ಒಳಗಾಗಿ ರೈಲು ಸಂಚಾರಕ್ಕೆ ಗ್ರೀನ್ ಸಿಗ್ನಲ್ ಸಿಗಲಿದೆ. ಇದನ್ನೂ ಓದಿ: ಅನಿತಾ ಕುಮಾರಸ್ವಾಮಿ ಆತ್ಮಾವಲೋಕನ ಮಾಡಿಕೊಳ್ಳಲಿ: ಅಶ್ವಥ್ ನಾರಾಯಣ್

    ನೂತನ ಮಾರ್ಗದ ಸಂಚಾರ ಆರಂಭಗೊಳ್ಳುವ ಜೊತೆಗೆ ಮೆಟ್ರೋ ರೈಲುಗಳು ಕೊರತೆ ಎದುರಾಗಿದೆ. ಬಿಎಂಆರ್‌ಸಿಎಲ್‌ನಲ್ಲಿ ಸದ್ಯ 50 ಟ್ರೈನ್‍ಗಳಿದ್ದು, 45 ಕಿ.ಮೀ ಸಂಚರಿಸುತ್ತಿವೆ. ಆದರೆ ನೂತನ ಮಾರ್ಗದ ಆರಂಭದಿಂದ 70 ಕಿ.ಮೀ ವರೆಗೆ ಮೆಟ್ರೋ ಮಾರ್ಗ ವಿಸ್ತರಣೆಗೊಳ್ಳಲಿದೆ. ಇದರಿಂದಾಗಿ ರೈಲುಗಳ ಕೊರತೆಯಾಗುವ ಸಾಧ್ಯತೆಯಿದೆ.

    5.5 ನಿಮಿಷಕ್ಕೆ ಒಂದು ಟ್ರೈನ್ ನೇರಳೆ ಮಾರ್ಗದಲ್ಲಿ ಹಾಗೂ ಹಸಿರು ಮಾರ್ಗದಲ್ಲಿ 5 ನಿಮಿಷಕ್ಕೆ ಒಂದು ಟ್ರೈನ್ ಓಡುತ್ತಿದೆ. ಹೀಗಾಗಿ ಟ್ರೈನ್‍ಗಳ ಸಮಯದಲ್ಲಿ ತಡವಾಗುವ ಸಾಧ್ಯತೆಯಿದೆ. ಚೀನಾದ ಸಿಆರ್‌ಆರ್‌ಸಿ ಕಂಪನಿ 216 ಕೋಚ್‍ಗಳನ್ನು ನೀಡುವುದು ಬಾಕಿಯಿದ್ದು ಟ್ರೈನ್‍ಗಳ ಕೊರತೆ ಎದುರಾಗಲಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಹಣವಿಲ್ಲದೇ ಸ್ಥಳೀಯ ಚುನಾವಣೆಯನ್ನು ಮುಂದೂಡಿದ ಶ್ರೀಲಂಕಾ

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಒಂದು ಲಕ್ಷ ದಿನಸಿ ಕಿಟ್ ವಿತರಿಸಿದ ಸಚಿವ ಬೈರತಿ ಬಸವರಾಜ

    ಒಂದು ಲಕ್ಷ ದಿನಸಿ ಕಿಟ್ ವಿತರಿಸಿದ ಸಚಿವ ಬೈರತಿ ಬಸವರಾಜ

    ಬೆಂಗಳೂರು: ಕೊರೊನಾ ಸೊಂಕು ನಿಯಂತ್ರಣ ಸಾಧಿಸಲು ರಾಜ್ಯ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಂಡಿರುವ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕೆ.ಆರ್‌.ಪುರ ವಿಧಾನ ಸಭಾ ಕ್ಷೇತ್ರದ ಬಡವರು, ಶ್ರಮಿಕ ವರ್ಗದವರು, ಕೂಲಿ ಕಾರ್ಮಿಕರಿಗೆ ಶಾಸಕರು ಹಾಗೂ ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ ಅವರು ಕ್ಷೇತ್ರದ ವ್ಯಾಪ್ತಿಯಲ್ಲಿ ಒಂದು ಲಕ್ಷ ಕುಟುಂಬಗಳಿಗೆ ಆಹಾರ ಪದಾರ್ಥಗಳ ದಿನಸಿ ಕಿಟ್ ವಿತರಿಸಿದರು.

    ಕೆ.ಆರ್.ಪುರ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕೊತ್ತನೂರಿನ ನಂಜುಂಡೇಶ್ವರ ಕಲ್ಯಾಣ ಮಂಟಪದಲ್ಲಿ ದಿನಸಿ ವಿತರಿಸಿ ಮಾತನಾಡಿದ ಬಸವರಾಜ ಅವರು ಇನ್ನೂ ಅಗತ್ಯ ಬಿದ್ದಲ್ಲಿ ಮತ್ತೆ ಬಡಜನರಿಗೆ ಕಿಟ್‌ ನೀಡುವುದಾಗಿ ಭರವಸೆ ನೀಡಿದರು. ಕ್ಷೇತ್ರದ ಎಲ್ಲರಿಗೂ ಕೊರೊನಾ ನಿಯಂತ್ರಣ ಲಸಿಕೆಯನ್ನು ನೀಡಲು ಕ್ರಮ ಕೈಗೊಳ್ಳಲಾಗಿದ್ದು, ಅದನ್ನು ಹಂತ ಹಂತವಾಗಿ ನೀಡಲಾಗುತ್ತದೆ ಎಂದರು.

    ಕೃಷ್ಣರಾಜಪುರ ಸಾರ್ವಜನಿಕ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವ ಗುರಿ ಹೊಂದಿದೆ. 200 ಹಾಸಿಗೆಗಳ ಆಸ್ಪತ್ರೆಗೆ ಉನ್ನತೀಕರಿಸಲು 13 ಕೋಟಿ ರೂಪಾಯಿಗಳು ವೆಚ್ಚವಾಗಲಿದೆ. ಐಟಿಐ ಆಸ್ಪತ್ರೆಯಲ್ಲಿ ಕೋವಿಡ್ ಆರೈಕೆ ಕೇಂದ್ರ ತೆರೆಯಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಕೇಂದ್ರ ಸರ್ಕಾರ ಅದಕ್ಕೆ ಒಪ್ಪಿಗೆ ನೀಡಿದೆ ಎಂದು ಹೇಳಿದರು.

    ಡಿವಿಎಸ್‌ ಭಾಗಿ: ಈ ವರ್ಷದ ಡಿಸೆಂಬರ್ ಅಂತ್ಯದ ವೇಳೆಗೆ ದೇಶದ 130 ಕೋಟಿ ಜನರಿಗೂ ಕೋವಿಡ್ ನಿಯಂತ್ರಣ ಲಸಿಕೆಯನ್ನು ನೀಡಲಾಗುವುದು ಎಂದು ಕೇಂದ್ರ ‌ ರಸಾಯನಿಕ ಮತ್ತು ರಸಗೊಬ್ಬರ ಸಚಿವರಾದ ಡಿ.ವಿ ಸದಾನಂದ ಗೌಡರು ಹೇಳಿದರು. ಜೂನ್ ಅಂತ್ಯದ ವೇಳೆಗೆ ರಾಜ್ಯಕ್ಕೆ ಕೇಂದ್ರದಿಂದ 50 ಲಕ್ಷ ಲಸಿಕೆ ನೀಡಲಾಗುತ್ತದೆ, ರಾಜ್ಯ ಸರ್ಕಾರ ಕೂಡ 15 ಲಕ್ಷ ಲಸಿಕೆಯನ್ನು ಖರೀದಿಸಲು ಮುಂದಾಗಿದೆ. ಈ ತಿಂಗಳಲ್ಲಿ ಒಟ್ಟು 65 ಲಕ್ಷ ದಷ್ಟು ಲಸಿಕೆ ರಾಜ್ಯಕ್ಕೆ ಲಭ್ಯವಾಗಲಿದೆ ಎಂದರು.

    ಕೊರೊನಾ ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿರುವ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಜನರಿಗೆ ಒಂದು ಲಕ್ಷ ಆಹಾರ ಪದಾರ್ಥಗಳನ್ನು ಬೈರತಿ ಬಸವರಾಜ ಅವರು ವಿತರಣೆ ಮಾಡುತ್ತಿರುವುದು ನಿಜವಾಗಿಯೂ ಒಂದು ಪುಣ್ಯದ ಕೆಲಸ ಎಂದರು.

    ಕ್ಷೇತ್ರದ ಜನ ಮತ ಹಾಕುವ ಮೂಲಕ ಅವರಿಗೆ ಆಶೀರ್ವಾದ ಮಾಡಿದ್ದೀರಿ. ಅವರು ನಿಮಗೆ ಇಂತಹ ಸಂದರ್ಭದಲ್ಲಿ ಸಹಾಯಕ್ಕೆ ಬಂದಿದ್ದಾರೆ. ಸದಾ ಜನರ ನಡುವೆ ಇರುವ ಬಸವರಾಜ ಅಂತಹವರು ಸಮಾಜಕ್ಕೆ ಅವಶ್ಯಕತೆ ಇದೆ. ಅವರಿಗೆ ತಮ್ಮ ಬೆಂಬಲ ಸದಾ ಇರಲಿ ಎಂದು ಅಶಿಸುತ್ತೇನೆ ಎಂದರು.

    ಕೆ.ಆರ್‌.ಪುರ ವಿಧಾನಸಭಾ ಕ್ಷೇತ್ರ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಒಂದು ವಿಧಾನಸಭಾ ಕ್ಷೇತ್ರವಾಗಿದೆ. ಇದನ್ನು ಸಚಿವರಾದ ಬಸವರಾಜ ಅವರು ಮಾದರಿ ಕ್ಷೇತ್ರವನ್ನಾಗಿ ಮಾಡಿದ್ದಾರೆ. ಈ ಭಾಗದ ಲೋಕಸಭಾ ಸದಸ್ಯನಾಗಿ ಮತ್ತು ಕೇಂದ್ರ ಸಚಿವನಾಗಿ ನನ್ನ ಬೆಂಬಲ, ಸಹಕಾರ ಈ ಕ್ಷೇತ್ರಕ್ಕೆ ಯಾವಾಗಲೂ ಇರುತ್ತದೆ ಎಂದು ಹೇಳಿದರು.

    ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕೊರೊನಾ ನಿಯಂತ್ರಣ ಕುರಿತು ಸಭೆ ಕರೆದಾಗಲೆಲ್ಲ ‌ನಾನು ಕೆ.ಆರ್.ಪುರ ‌ಕ್ಷೇತ್ರದ ಬಗ್ಗೆ ಮತ್ತು ಬೈರತಿ ಬಸವರಾಜ ಅವರು ಕೈಗೊಂಡಿರುವ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿ ನೀಡುತ್ತೇನೆ. ಹೀಗಾಗಿ ಬಸವರಾಜ ಅವರ ಕಾರ್ಯವೈಖರಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೂ ತಿಳಿದಿದೆ ಎಂದರು.

  • ಗ್ಯಾಸ್ ಸಿಲಿಂಡರ್‌ನಿಂದ ತಲೆಗೆ ಜಜ್ಜಿ ಪ್ರೇಯಸಿಯ ಕಗ್ಗೊಲೆ

    ಗ್ಯಾಸ್ ಸಿಲಿಂಡರ್‌ನಿಂದ ತಲೆಗೆ ಜಜ್ಜಿ ಪ್ರೇಯಸಿಯ ಕಗ್ಗೊಲೆ

    ಬೆಂಗಳೂರು: ಲಿವ್-ಇನ್-ರಿಲೇಶನ್ ಶಿಪ್ ನಲ್ಲಿದ್ದ ವ್ಯಕ್ತಿಯೊಬ್ಬ ತನ್ನ ಪ್ರೇಯಸಿಯನ್ನು ಗ್ಯಾಸ್ ಸಿಲಿಂಡರ್ ನಲ್ಲಿ ಹೊಡೆದು ಕೊಲೆ ಮಾಡಿರುವ ಘಟನೆ ಕೆ.ಆರ್ ಪುರಂ ನಲ್ಲಿ ಶನಿವಾರ ನಡೆದಿದೆ.

    26 ವರ್ಷದ ಶಶಿಕಲಾಳನ್ನು 30 ವರ್ಷದ ವೆಂಕಟ್ ಗಿರಿಯಪ್ಪ ಕೊಲೆ ಮಾಡಿದ್ದಾನೆ. ವೆಂಕಟ್ ಗಿರಿಯಪ್ಪ ಟೊಮೆಟೋ ಮಾರಾಟಗಾರನಾಗಿದ್ದು, ಕೋಲಾರ ಜಿಲ್ಲೆಯ ಮುಳಬಾಗಿಲು ನಿವಾಸಿ ಶಶಿಕಲಾ ಜೊತೆ ಲಿವ್-ಇನ್ ರಿಲೇಶನ್ ಶಿಪ್‍ನಲ್ಲಿದ್ದನು. ಈ ಜೋಡಿ ಜೊತೆ ಮಹಿಳೆಯ ಮೂರು ವರ್ಷದ ಮಗಳು ಕೂಡ ವಾಸಿಸುತ್ತಿದ್ದಳು.

    ಈ ಮೂವರೂ ಕೆ.ಆರ್ ಪುರಂನ ಬಾಡಿಗೆ ಮನೆಯೊಂದರಲ್ಲಿ ಕಳೆದ 8 ತಿಂಗಳಿನಿಂದ ವಾಸಿಸುತ್ತಿದ್ದರು. ಲಿವಿಂಗ್ ರಿಲೇಶನ್ ಶಿಪ್ ನಲ್ಲಿದ್ದ ಈ ಜೋಡಿ ತಾವು ಸತಿ-ಪತಿಗಳಂತೆ ಪೋಸ್ ಕೊಡುತ್ತಿದ್ದರು.

    ಈ ಮಧ್ಯೆ ವೆಂಕಟ್ ಗಿರಿಯಪ್ಪನಿಗೆ ಶಶಿಕಲಾ ಮೇಲೆ ಅನುಮಾನ ಮೂಡಿದೆ. ಶಶಿಕಲಾ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಕಳೆದ ಬುಧವಾರ ಆಕೆಯ ಮೇಲೆ ಹಲ್ಲೆ ಕೂಡ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸ್ಥಳೀಯರ ಎದುರೇ ಮಹಿಳೆಯ ಕಗ್ಗೊಲೆ:
    ವೆಂಕಟ್ ಹಾಗೂ ಶಶಿಕಲಾ ಜಗಳವಾಡುತ್ತಿದ್ದ ಸಂದರ್ಭದಲ್ಲಿ ನೆರೆಹೊರೆಯವರು ಸ್ಥಳಕ್ಕೆ ದೌಡಾಯಿಸಿ ಇಬ್ಬರ ಜಗಳವನ್ನು ಬಿಡಿಸಲು ಪ್ರಯತ್ನಿಸಿದ್ದಾರೆ. ಇಬ್ಬರ ಜಗಳವನ್ನು ಸ್ಥಳೀಯರು ಹೇಗೋ ಬಿಡಿಸಿ ಸಮಾಧಾನಪಡಿಸಿ ತೆರಳಿದರು. ಆ ಬಳಿಕ ಮತ್ತೆ ಶನಿವಾರ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಶಶಿಕಲಾ ಮೇಲೆ ವೆಂಕಟ್ ಹಲ್ಲೆ ಮಾಡಿದ್ದಾನೆ. ಈ ವೇಳೆಯೂ ಅಕ್ಕ-ಪಕ್ಕದ ಮನೆಯವರು ಬಂದು ಶಶಿಕಲಾ ಅವರನ್ನು ರಕ್ಷಿಸಲು ಮುಂದಾಗಿದ್ದಾರೆ. ಆದರೆ ವೆಂಕಟ್ ಮನೆಯೊಳಗಿಂದ ಬಾಗಿಲು ಹಾಕಿಕೊಂಡಿದ್ದಾನೆ. ಪರಿಣಾಮ ಸ್ಥಳೀಯರಿಗೆ ಏನೂ ಮಾಡಲು ಸಾಧ್ಯವಾಗಿಲ್ಲ.

    ಹೀಗಾಗಿ ಅವರ ಕಿಟಕಿ ಮೂಲಕ ಮನೆಯ ಹೊರಗಿನಿಂದ ಶಶಿಕಲಾಳನ್ನು ಕೊಲೆಗೈಯಬೇಡ ಎಂದು ಪರಿಪರಿಯಾಗಿ ಬೇಡಿಕೊಂಡಿದ್ದಾರೆ. ಆದರೆ ಇದನ್ನು ಗಣನೆಗೆ ತೆಗೆದುಕೊಳ್ಳದ ವೆಂಕಟ್, ಶಶಿಕಲಾ ಕತ್ತು ಹಿಸುಕಲು ಪ್ರಯತ್ನಿಸಿದ್ದಾನೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಪೊಲೀಸ್ ಅಧಿಕಾರಿಗೆ ವಿವರಿಸಿದ್ದಾರೆ.

    ನೆರೆಹೊರೆಯವರ ಮಾತನ್ನು ಲೆಕ್ಕಿಸದ ವೆಂಕಟ್ ನೇರವಾಗಿ ಅಡುಗೆ ಮನೆಗೆ ತೆರಳಿದ್ದಾನೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಶಶಿಕಲಾ, ಮನೆ ಬಾಗಿಲು ತೆಗೆದು ಓಡಿ ಹೋಗಲು ಪ್ರಯತ್ನಿಸಿದ್ದಾಳೆ. ಆದರೆ ಶಶಿಕಲಾ ಬಾಗಿಲು ಹತ್ತಿರ ಬರುತ್ತಿದ್ದಂತೆಯೇ ಗ್ಯಾಸ್ ಸಿಲಿಂಡರ್ ನೊಂದಿಗೆ ಬಂದ ವೆಂಕಟ್, ಆಕೆಯ ತಲೆಗೆ ಹೊಡೆದಿದ್ದಾನೆ. ಪರಿಣಾಮ ಶಶಿಕಲಾ ಕುಸಿದುಬಿದ್ದಿದ್ದಾಳೆ. ಹೀಗೆ ಬಿದ್ದವಳ ಮೇಲೂ ಸಿಲಿಂಡರ್ ನಿಂದ ತಲೆಗೆ ಜಜ್ಜಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.

    ಶಶಿಕಲಾ ಪ್ರಜ್ಞೆ ತಪ್ಪಿ ಬಿದ್ದಿದ್ದನ್ನು ಕಂಡ ಸ್ಥಳೀಯರು, ಬಾಗಿಲು ತೆರೆಯಿರಿ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತೇವೆ ಎಂದು ವೆಂಕಟ್ ಬಳಿ ಮನವಿ ಮಾಡಿಕೊಂಡಿದ್ದಾರೆ. ಆದರೆ ವೆಂಕಟ್ ಮಾತ್ರ ಪೊಲೀಸರು ಬರುವವರೆಗೆ ಯಾವುದೇ ಕಾರಣಕ್ಕೂ ಬಾಗಿಲು ತೆರೆಯಲ್ಲ ಎಂದು ಪಟ್ಟು ಹಿಡಿದಿದ್ದಾನೆ. ನಂತರ 3 ಗಂಟೆ ಸುಮಾರಿಗೆ ಕ ಆರ್ ಪುರಂ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಆರೋಪಿ ವೆಂಕಟ್ ನನ್ನು ಬಂಧಿಸಿದ್ದಾರೆ.

    ಘಟನೆ ನಡೆದಾಗ ಶಶಿಕಲಾ ಮಗಳು ನಿದ್ದೆ ಮಾಡಿದ್ದಳು. ವಿಚಾರಣೆಯ ವೇಳೆ ವೆಕಂಟ್, ನಾನು ಶಶಿಕಲಾ ಮದುವೆ ಆಗಿಲ್ಲ ಎಂದು ಹೇಳಿದ್ದಾನೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಕೊಲೆಗೆ ಬಳಸಿದ ಸಿಲಿಂಡರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಶಶಿಕಲಾ ಮೃತದೇಹವನ್ನು ಆಕೆಯ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ ಎಂದು ಮತ್ತೊಬ್ಬ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.