Tag: krishnamutt

  • ದೇಶದ ಒಳಿತಿಗೆ ಕೃಷ್ಣಮಠದಲ್ಲಿ ಧನ್ವಂತರಿ ಯಾಗ- 8 ಋತ್ವಿಜರು ಮಾತ್ರ ಭಾಗಿ

    ದೇಶದ ಒಳಿತಿಗೆ ಕೃಷ್ಣಮಠದಲ್ಲಿ ಧನ್ವಂತರಿ ಯಾಗ- 8 ಋತ್ವಿಜರು ಮಾತ್ರ ಭಾಗಿ

    ಉಡುಪಿ: ಮಹಾಮಾರಿ ಕೊರೊನಾ ವಿರುದ್ಧ ಉಡುಪಿ ಕೃಷ್ಣಮಠದಲ್ಲಿ ಧನ್ವಂತರಿ ಮಹಾಯಾಗ ನಡೆಯುತ್ತಿದೆ. ಪರ್ಯಾಯ ಅದಮಾರು ಮಠ ನೇತೃತ್ವದಲ್ಲಿ ಯಾಗ ಆರಂಭವಾಗಿದ್ದು, ಕೇವಲ ಏಳು ಮಂದಿ ಋತ್ವಿಜರು ಮಾತ್ರ ಮಹಾ ಯಾಗದಲ್ಲಿ ಪಾಲ್ಗೊಂಡರು.

    ಕರೊನಾದ ಭೀತಿ ಆರಂಭವಾದ ಸಂದರ್ಭದಲ್ಲಿ ಶ್ರೀಕೃಷ್ಣ ಮಠ ಧನ್ವಂತರಿ ಮಹಾಯಾಗ ಕೈಗೊಳ್ಳುವ ಚಿಂತನೆ ನಡೆಸಿತ್ತು. ಐದು ಸಾವಿರ ಜನ ಪಾಲ್ಗೊಳ್ಳುವ ನಿರೀಕ್ಷೆ ಮಠಕ್ಕಿತ್ತು. ಆದರೆ ದೇಶ ಲಾಕ್‍ಡೌನ್ ಆಗಿರುವುದರಿಂದ ಭಕ್ತರು ಸೇರಬಾರದು ಎಂದು ಜಿಲ್ಲಾಡಳಿತ ಕೃಷ್ಣ ಮಠಕ್ಕೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಭಕ್ತರು ಮನೆಯಲ್ಲೇ ಇರಬೇಕೆಂದು ಮಠ ಪ್ರಕಟಣೆ ಹೊರಡಿಸಿತು.

    ಶುಕ್ರವಾರ ಪ್ರಾತಃ ಕಾಲದಲ್ಲಿ ಆರಂಭವಾದ ಧನ್ವಂತರಿ ಮಹಾಯಾಗದಲ್ಲಿ ಋತ್ವಿಜರು ಮಾತ್ರ ಪಾಲ್ಗೊಂಡಿದ್ದಾರೆ. ಒಬ್ಬ ಭಕ್ತರೂ ಯಾಗದಲ್ಲಿ ಪಾಲ್ಗೊಂಡಿಲ್ಲ. ಮಠದ ಸಿಬ್ಬಂದಿ ಕೂಡ ಯಾಗದ ಚೌಕಟ್ಟಿನ ಒಳಗೆ ಪ್ರವೇಶ ಮಾಡಿಲ್ಲ.

    ಇಡೀ ವಿಶ್ವಕ್ಕೆ ಮಹಾಮಾರಿ ವೈರಸ್ ಆವರಿಸಿದೆ ಕೃಷ್ಣಮಠ ಮತ್ತು ಆದಮಾರು ಮಠಾಧೀಶರು ಧನ್ವಂತರಿ ಮಹಾಯಾಗ ಮಾಡುವ ಸಂಕಲ್ಪವನ್ನು ಮಾಡಿದ್ದಾರೆ. ಧನ್ವಂತರಿ ಎಂದರೆ ಸಂಸಾರಕ್ಕೆ ಓದಿದಂತಹ ದುಃಖವನ್ನು ಪರಿಹರಿಸುವ ದೇವರು ಎಂಬ ಅರ್ಥ ಇದೆ. ಇದೀಗ ಭಾರತ ಎಂಬ ಕುಟುಂಬಕ್ಕೆ ಮಹಾಮಾರಿ ವೈರಸ್ ಆವರಿಸಿದೆ. ಕರಣದ ವಿರುದ್ಧ ಭಾರತ ಏನು ಮಾಡುತ್ತಿದೆ ಎಂದು ಇಡೀ ವಿಶ್ವ ಕಾತುರದಿಂದ ಕಾಯುತ್ತಿದೆ. ಹಾಗಾಗಿ ಭಾರತದಲ್ಲಿ ಕೈಗೊಂಡ ನಿರ್ಧಾರಗಳಿಂದ ವೈರಸ್‍ನ ಪ್ರಭಾವ ಕಡಿಮೆ ಆಗಲಿ ಎಂದು ಪ್ರಾರ್ಥಿಸಲಾಯಿತು.

    ದೇಶದ ಜನತೆಗೆ ಮತ್ತು ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯರಿಗಾಗಿ ಪೂರ್ಣಾಹುತಿ ಸಂದರ್ಭ ಪ್ರಾರ್ಥನೆ ನಡೆದಿದೆ. ಅದಮಾರು ಮಠಾಧೀಶರಾದ ವಿಶ್ವಪ್ರಿಯ ತೀರ್ಥ ಶ್ರೀಪಾದರು ಪರ್ಯಾಯ ಸ್ವಾಮೀಜಿ ಈಶಪ್ರಿಯ ತೀರ್ಥ ಸ್ವಾಮೀಜಿ ಸೋದೆ ಮಠಾಧೀಶರು ಕಾಣಿಯೂರು ಶ್ರೀಗಳು ಧನ್ವಂತರಿ ಮಹಾ ಯಾಗದಲ್ಲಿ ಪಾಲ್ಗೊಂಡರು. ಕೃಷ್ಣಮಠದ ವ್ಯವಸ್ಥಾಪಕ ಗೋವಿಂದರಾಜ್ ಶ್ರೀಕೃಷ್ಣ ಸೇವಾ ಸಮಿತಿಯ ಪ್ರದೀಪ್, ರಾಮಚಂದ್ರ ರಾವ್ ಮತ್ತಿತರರು ಉಪಸ್ಥಿತರಿದ್ದರು.

  • ಮನೆಯಲ್ಲಿ ಕೃಷ್ಣ ಪೂಜೆ ಮಾಡಿದ್ದರು- ಶ್ರೀಗಳನ್ನು ನೆನೆದು ರಾಮ್‍ದಾಸ್ ಕಣ್ಣೀರು

    ಮನೆಯಲ್ಲಿ ಕೃಷ್ಣ ಪೂಜೆ ಮಾಡಿದ್ದರು- ಶ್ರೀಗಳನ್ನು ನೆನೆದು ರಾಮ್‍ದಾಸ್ ಕಣ್ಣೀರು

    ಉಡುಪಿ: ನಮ್ಮ ಮನೆಯಲ್ಲಿ ಕೃಷ್ಣ ಪೂಜೆಯನ್ನು ಮಾಡಿದ್ದರು ಎಂದು ಹೇಳಿ ಪೇಜಾವರ ಶ್ರೀಗಳನ್ನು ನೆನಪಿಸಿಕೊಂಡು ಮಾಜಿ ಸಚಿವ ರಾಮ್ ದಾಸ್ ಕಣ್ಣೀರು ಹಾಕಿದರು.

    ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಮೈಸೂರಿಗೆ ಭೇಟಿ ಕೊಟ್ಟಾಗ ಕಾರಾಗೃಹಕ್ಕೆ ಭೇಟಿ ಕೊಟ್ಟು ಅಲ್ಲಿ ಯೋಗ ಕೇಂದ್ರ ಹಾಗೂ ಡಿಜಿಟಲ್ ಲೈಬ್ರರಿಯನ್ನು ತೆರೆದಿದ್ದರು. ಕೈದಿಗಳ ಮನಸು ಪರಿವರ್ತನೆಗೆ ಸಾಕಷ್ಟು ಶ್ರಮ ಪಟ್ಟಿದ್ದರು ಎಂದು ಹೇಳುತ್ತಾ ಶ್ರೀಗಳ ಜೊತೆಗಿನ ಕ್ಷಣಗಳನ್ನು ಮೆಲುಕು ಹಾಕಿದರು.

    ಅವರು ಈ ಒಂದು ಯುಗದಲ್ಲಿ ಪ್ರವರ್ತಕರಾಗಿ ಎಲ್ಲ ರೀತಿಯ ಜ್ಞಾನವನ್ನು ಹೊಂದಿ ಸಮಾಜದ ಮಧ್ಯದಲ್ಲಿ ಯಾವುದೇ ಬೇಧ-ಭಾವವಿಲ್ಲದೆ ಕಟ್ಟಕಡೆಯ ವ್ಯಕ್ತಿಯಾಗಿದ್ದಾರೆ ಎಂದು ಅವರು ತಿಳಿಸಿದರು. ಇದನ್ನೂ ಓದಿ: ಅಷ್ಟ ಮಠದ ಹಿರಿಯ ಯತಿ, ನಾಡಿನ ಹಿರಿಯ ವಿದ್ವಾಂಸ ಪೇಜಾವರ ಶ್ರೀ ಕೃಷ್ಣೈಕ್ಯ

    ಶ್ರೀಗಳ ಕೊನೆಯಾಸೆಯಂತೆ ಇಂದು ಬೆಳಗ್ಗೆ ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಯಿಂದ ವೆಂಟಿಲೇಟರ್ ಸಹಿತ ಅಂಬುಲೆನ್ಸ್ ನಲ್ಲಿ ಪೇಜಾವರ ಮಠಕ್ಕೆ ಶಿಫ್ಟ್ ಮಾಡಲಾಯಿತು. ಸದ್ಯ ಮಠದ ಆಚರಣದಲ್ಲಿರುವ ಅಧೋಕ್ಷಜ ಮಠದಲ್ಲಿ ಶ್ರೀಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಶ್ರೀಗಳು ಮಠಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರು ಅವರ ದರ್ಶನಕ್ಕೆ ಆಗಮಿಸುತ್ತಿದ್ದಾರೆ. ಹೀಗಾಗಿ ಮಠಕ್ಕೆ ಬರಬೇಡಿ, ಅಜ್ಜರ ಕಾಡು ಮೈದಾನಕ್ಕೆ ಬನ್ನಿ ಎಂದು ಕಿರಿಯ ಶ್ರೀಗಳು ಭಕ್ತರಲ್ಲಿ ಈಗಾಗಲೇ ಮನವಿ ಮಾಡಿಕೊಂಡಿದ್ದಾರೆ.

    ಇತ್ತ ಅಜ್ಜರ ಕಾಡು ಮೈದಾನದಲ್ಲಿ ಜಿಲ್ಲಾಡಳಿತದ ವತಿಯಿಂದ ಎಲ್ಲಾ ಸಿದ್ಧತೆಗಳು ನಡೆಯುತ್ತಿದೆ. ಈ ಮಧ್ಯೆ ಶ್ರೀಗಳು ಕೃಷ್ಣೈಕ್ಯರಾಗಿದ್ದು, ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

  • ಪೇಜಾವರ ಶ್ರೀಗಳನ್ನು ನೋಡಲು ಅವಕಾಶ ಕೊಡಿ- ಭಕ್ತರು ಕಣ್ಣೀರು

    ಪೇಜಾವರ ಶ್ರೀಗಳನ್ನು ನೋಡಲು ಅವಕಾಶ ಕೊಡಿ- ಭಕ್ತರು ಕಣ್ಣೀರು

    ಉಡುಪಿ: ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಗಳ ಆರೋಗ್ಯ ಕ್ಷಣಕ್ಷಣಕ್ಕೂ ಕ್ಷೀಣಿಸುತ್ತಿದ್ದು, ಸದ್ಯ ಅವರನ್ನು ಆಸ್ಪತ್ರೆಯಿಂದ ಮಠಕ್ಕೆ ಶಿಫ್ಟ್ ಮಾಡಲಾಗಿದೆ. ಇತ್ತ ಭಕ್ತರು ಮಠದಲ್ಲಿ ಕಣ್ಣೀರು ಹಾಕುತ್ತಿದ್ದಾರೆ.

    ಪೇಜಾವರ ಶ್ರೀಗಳ ಕೊನೆಯ ಆಸೆಯಂತೆ ಅವರನ್ನು ಆಸ್ಪತ್ರೆಯಿಂದ ಅಂಬುಲೆನ್ಸ್ ಮೂಲಕ ಪೇಜಾವರ ಮಠದ ಆವರಣದಲ್ಲಿರುವ ಅಧೋಕ್ಷಜ ಮಠಕ್ಕೆ ಸ್ಥಳಾಂತರಿಸಲಾಗಿದೆ. ವೆಂಟಿಲೇಟರ್ ಸಹಿತ ಆಸ್ಪತ್ರೆಯಿಂದ ಶ್ರೀಗಳನ್ನು ಕರೆದುಕೊಂಡು ಬಂದಿದ್ದು, ಸದ್ಯ ಮಠದೊಳಗೆ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಯಿಂದ 6 ವೈದ್ಯರ ತಂಡ ಆಗಮಿಸಿದೆ.

    ಶ್ರೀಗಳ ಆರೋಗ್ಯ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಮಠಕ್ಕೆ ಸಾವಿರಾರು ಭಕ್ತರು ದೌಡಾಯಿಸಿದ್ದು, ಪೂಜೆ ನಡೆಯುತ್ತಿದೆ. ಇನ್ನೊಂದೆಡೆ ಪೇಜಾವರ ಶ್ರೀಗಳನ್ನು ನೋಡಲು ಅವಕಾಶ ಕೊಡಿ ಎಂದು ಭಕ್ತರು ಹಾಗೂ ಪೂರ್ವಾಶ್ರಮದ ಸಂಬಂಧಿಗಳು ಕಣ್ಣೀರು ಹಾಕುತ್ತಿದ್ದಾರೆ.

    ಇಂದು ಬೆಳಗ್ಗೆಯಿಂದ ಭಕ್ತರಿಗೆ ಮಠಕ್ಕೆ ಪ್ರವೇಶವನ್ನು ನಿರ್ಬಂಧ ಮಾಡಲಾಗಿದೆ. ಜೊತೆಗೆ ಪೇಜಾವರ ಮಠದ ಸುತ್ತಲೂ ಬಿಗಿ ಬಂದೋಬಸ್ತ್ ಮಾಡಲಾಗಿದೆ. ನಗರದಾದ್ಯಂತ 700 ಪೊಲೀಸ್ ಭದ್ರತೆ ನಿಯೋಜಿಸಲಾಗಿದ್ದು, ಮಠದ ಸುತ್ತ ವಾಹನ ಸಂಚಾರ ನಿರ್ಬಂಧ ಮಾಡಲಾಗಿದೆ. ಪೇಜಾವರ ಮಠದೊಳಗೆ ಭಕ್ತರ್ಯಾರು ಬರಬಾರದು, ಪೇಜಾವರ ಶ್ರೀ ಚಿಕಿತ್ಸೆಗೆ ತೊಂದರೆ ಮಾಡಬಾರದು ಎಂದು ಪೇಜಾವರ ಮಠದ ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಭಕ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಪೇಜಾವರ ಶ್ರೀ ಆರೋಗ್ಯ ಗಂಭೀರ ಹಿನ್ನೆಲೆಯಲ್ಲಿ ಶ್ರೀಕೃಷ್ಣನಿಗೆ ಎಂದಿಗಿಂತ ಶೀಘ್ರವಾಗಿ ಪೂಜೆಯನ್ನು ಪಲಿಮಾರು ಸ್ವಾಮೀಜಿ ನೆರವೇರಿಸುತ್ತಿದ್ದಾರೆ. ಪೇಜಾವರ ಶ್ರೀಗಳ ಚೇತರಿಕೆಗಾಗಿ ವಿಶೇಷ ಪೂಜೆ, ಪಾರಾಯಣ ಮಾಡಲಾಗುತ್ತಿದೆ. ಇತ್ತ ಪೇಜಾವರ ಶ್ರೀಗಳನ್ನು ಮಠಕ್ಕೆ ಕರೆತರುವ ವಿಚಾರ ಗೊತ್ತಾಗುತ್ತಿದ್ದಂತೆ, ದೂರದೂರಿನಿಂದ ಕೃಷ್ಣಮಠಕ್ಕೆ ಭಕ್ತರು ಆಗಮಿಸುತ್ತಿದ್ದಾರೆ. ಜೊತೆಗೆ ಕೃಷ್ಣನ ಸನ್ನಿಧಾನದಲ್ಲಿ ಭಕ್ತರಿಂದ ಪ್ರಾರ್ಥನೆ ಮಾಡಲಾಗುತ್ತಿದೆ.

  • ಕರಾವಳಿಯ 3ನೇ ಚಿನ್ನದ ದೇಗುಲ ಶ್ರೀಕೃಷ್ಣಮಠ

    ಕರಾವಳಿಯ 3ನೇ ಚಿನ್ನದ ದೇಗುಲ ಶ್ರೀಕೃಷ್ಣಮಠ

    ಉಡುಪಿ: ಇಲ್ಲಿನ ಶ್ರೀಕೃಷ್ಣ ಮಠದ ಗರ್ಭಗುಡಿಯನ್ನು ಚಿನ್ನದ ಗೋಪುರ ಮಾಡುವ ಮೂಲಕ ಕರಾವಳಿಯ ಮೂರನೇ ಚಿನ್ನದ ದೇಗುಲ ಎಂಬ ಕೀರ್ತಿಗೆ ಪಾತ್ರವಾಗಿದೆ.

    40 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಚಿನ್ನದ ಗೋಪುರದಲ್ಲಿ ಅಷ್ಟಮಠಾಧೀಶರ ಸಮ್ಮುಖದಲ್ಲಿ ಶಿಖರ ಪ್ರತಿಷ್ಠೆ ಮಾಡಿ ಅಭಿಷೇಕ ಮಾಡಲಾಯಿತು. ಪರ್ಯಾಯ ಪಲಿಮಾರು ಶ್ರೀಗಳು ತಮ್ಮ ಪರ್ಯಾಯ ಮಹೋತ್ಸವದ ಕೀರ್ತಿ ಶಾಶ್ವತಗೊಳಿಸಲು ಈ ಮಹತ್ವದ ಯೋಜನೆ ಪೂರೈಸಿದ್ದಾರೆ. ಈ ಮೂಲಕ ಪಲಿಮಾರು ಶ್ರೀಗಳ ಆ ಮಹತ್ವಾಕಾಂಕ್ಷಿ ಯೋಜನೆ ಈಡೇರಿದೆ. ಶ್ರೀ ಕೃಷ್ಣನಿಗೆ ಚಿನ್ನದ ಗೋಪುರ ಸಮರ್ಪಣೆಯಾಗಿದೆ.

    ಕಳೆದ 10 ದಿನಗಳಿಂದ ಸುವರ್ಣ ಗೋಪುರ ಸಮರ್ಪಣೆ ಅಂಗವಾಗಿ ಧಾರ್ಮಿಕ ವಿಧಿವಿಧಾನಗಳು ನಡೆಯುತ್ತಾ ಬಂದಿದ್ದವು. ಚಿನ್ನದ ಶಿಖರ ಪ್ರತಿಷ್ಠೆ ಮಾಡಲಾಯಿತು. ಒಂದು ಸಾವಿರ ಬೆಳ್ಳಿ ಕಲಶಗಳಿಂದ ಗಂಗಾಧಿತೀರ್ಥದ ಅಭಿಷೇಕ ಸಲ್ಲಿಸಲಾಯಿತು. ಪುತ್ತಿಗೆ ಶ್ರೀಗಳು ಹೊರತು ಪಡಿಸಿದಂತೆ ಪೇಜಾವರ ಶ್ರೀಗಳ ಸಹಿತ ಅಷ್ಠಮಠಾಧೀಶರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

    ಚಿನ್ನದ ಕಲಶದಿಂದ ಶಿಖರಕ್ಕೆ ಅಭಿಷೇಕ ಮಾಡಿದರು. ಪಲಿಮಾರು ಶ್ರೀಗಳು ಕೃಷ್ಣನ ಗೋಪುರ ಸುವರ್ಣಮಯವಾಗಿ ಇರಬೇಕೆಂದು ಈ ಯೋಜನೆ ಮಾಡಿದರು. 2500 ಚದರಡಿ ಸುವರ್ಣ ಗೋಪುರಕ್ಕೆ 200 ಕೆ.ಜಿ ತಾಮ್ರ, 800 ಕೆ.ಜಿ ಬೆಳ್ಳಿ, 100 ಕೆ.ಜಿ ಚಿನ್ನವನ್ನು ಬಳಕೆ ಮಾಡಲಾಗಿದೆ. ಸುಮಾರು 40 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದೆ. ಶ್ರೀ ಕೃಷ್ಣನಿಗೆ ಸುವರ್ಣ ತೊಟ್ಟಿಲು, ವಜ್ರ ಕಿರೀಟ, ಸುವರ್ಣ ರಥ ಸಮರ್ಪಿಸಿದರು. ಈಗಿನ ಪರ್ಯಾಯ ಪಲಿಮಾರು ಶ್ರೀಗಳು ತಮ್ಮ ಮೊದಲ ಪರ್ಯಾಯದಲ್ಲಿ ವಜ್ರ ಕವಚ ಅರ್ಪಿಸಿದ್ದರು.

  • ಉಡುಪಿಯಲ್ಲೊಂದು ದುಬಾರಿ ಚಿನ್ನದ ಮನೆ ನಿರ್ಮಾಣ

    ಉಡುಪಿಯಲ್ಲೊಂದು ದುಬಾರಿ ಚಿನ್ನದ ಮನೆ ನಿರ್ಮಾಣ

    -100 ಕೆಜಿ ಬಂಗಾರದಲ್ಲಿ, 40 ಕೋಟಿ ರೂ.ಯಲ್ಲಿ ಕೃಷ್ಣ ಗರ್ಭಗುಡಿ ನಿರ್ಮಾಣ

    ಉಡುಪಿ: ದೇವಾಲಯಗಳ ನಗರಿ ಉಡುಪಿಯಲ್ಲೊಂದು ದುಬಾರಿ ಮನೆ ಸಿದ್ಧಗೊಳ್ಳುತ್ತಿದೆ. ಈ ಮನೆಯ ಮಹಡಿ ಚಿನ್ನದಿಂದಲೇ ಎರಡು ಅಂತಸ್ತು ನಿರ್ಮಾಣ ಆಗುತ್ತಿದೆ. 100 ಕೆಜಿ ಬಂಗಾರವನ್ನು ಛಾವಣಿ ನಿರ್ಮಾಣಕ್ಕೆ ಉಪಯೋಗಿಸಲಾಗುತ್ತಿದೆ. ಇನ್ನೆರಡು ತಿಂಗಳಲ್ಲಿ ಮನೆ ಸಿದ್ಧಗೊಳ್ಳಲಿದೆ.

    ಉಡುಪಿ ಕೃಷ್ಣಮಠದ ಕಡೆಗೋಲು ಕೃಷ್ಣ ಇಷ್ಟು ವರ್ಷ ತಾಮ್ರದ ಗರ್ಭಗುಡಿಯೊಳಗೆ ನಿಂತು ಬರುವ ಭಕ್ತರಿಗೆ ದರ್ಶನ ಕೊಡುತ್ತಿದ್ದ. ಆದರೆ ಈಗ 40 ಕೋಟಿ ವೆಚ್ಚದಲ್ಲಿ ಕೃಷ್ಣಮಠದ ಗರ್ಭಗುಡಿಯ ಕೆಲಸವನ್ನು ಈಗಿನ ಪರ್ಯಾಯ ಪಲಿಮಾರು ಮಠಾಧೀಶ ವಿದ್ಯಾಧೀಶ ತೀರ್ಥ ಸ್ವಾಮೀಜಿ ಮಾಡಿಸುತ್ತಿದ್ದಾರೆ. 20 ಗ್ರಾಂ ಚಿನ್ನದ ತಗಡಿನ 5,000 ಹಲಗೆ, 100 ಕೆಜಿ ಬಂಗಾರ ಹಾಗೂ 40 ಕೋಟಿ ರುಪಾಯಿಯಲ್ಲಿ ಚಿನ್ನದ ಮನೆ ನಿರ್ಮಾಣವಾಗುತ್ತಿದೆ.

    ಈಗಾಗಲೇ ತಾಮ್ರ, ಬೆಳ್ಳಿ ಚಿನ್ನದ ಹಾಳೆಯನ್ನು ತಯಾರು ಮಾಡುವ ಕೆಲಸ ಶುರುವಾಗಿದೆ. ಗರ್ಭಗುಡಿಯ ಕಲಶ ಸಂಕೋಚ ವಿಧಿವಿಧಾನ ನೆರವೇರಿತು. ಹೋರಿಯ ಕತ್ತಿಗೆ ಹಗ್ಗ ಹಾಕಿ, ಮತ್ತೊಂದು ತುದಿಯನ್ನು ಕಲಶಕ್ಕೆ ಕಟ್ಟಿ ಎಳೆಯುವ ಪ್ರಕ್ರಿಯೆ ನಡೆಯಿತು. ಎರಡೂವರೆ ತಿಂಗಳಲ್ಲಿ ಗರ್ಭಗುಡಿ ನಿರ್ಮಾಣ ಪೂರ್ಣಗೊಳ್ಳಲಿದ್ದು, ಮಠಕ್ಕೆ ಬರುವ ಭಕ್ತರಿಗೆ ದೇವರ ದರ್ಶನಕ್ಕೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಶ್ರೀ ವಿದ್ಯಾಧೀಶ ಸ್ವಾಮೀಜಿ ಪಲಿಮಾರು ಹೇಳಿದ್ದಾರೆ.

    ಗರ್ಭಗುಡಿಯ ಜೀರ್ಣೋದ್ಧಾರ ಹಿನ್ನೆಲೆಯಲ್ಲಿ ಗಣಹೋಮ, ಪ್ರಾಯಶ್ಚಿತ್ತ ಹೋಮ, ವಾಸ್ತು ಪೂಜೆ, ಕೃಷ್ಣ ಗಾಯತ್ರಿ ಮಂತ್ರ ಪಠಣ, ಮೃತ್ಯುಂಜಯ ಹೋಮ ಊರಿನ ದೋಷ ಪರಿಹಾರಕ್ಕೆ ಮುಷ್ಟಿ ಕಾಣಿಕೆ ಸೇವೆ ನೆರವೇರಿದೆ. ಮರದ ಮೇಲೆ ತಾಮ್ರದ ಹಾಳೆಯಲ್ಲಿ ಮಂತ್ರಗಳನ್ನು ಬರೆಯಲಾಗುತ್ತದೆ. ಅದರ ಮೇಲೆ ಬೆಳ್ಳಿಯ ತಗಡು ಮುಚ್ಚಿ, ಮೇಲ್ಬಾಗಕ್ಕೆ ಚಿನ್ನದ ಹೊದಿಕೆ ಹಾಸಲಾಗುತ್ತದೆ. ಸಂಕೋಚ ವಿಧಿಯಲ್ಲಿ ಕೃಷ್ಣಾಪುರ, ಕಾಣಿಯೂರು, ಅದಮಾರು ಸ್ವಾಮೀಜಿಗಳು ಪಾಲ್ಗೊಂಡಿದ್ದರು. 800 ವರ್ಷದ ಹಳೆಯ ತಾಮ್ರದ ತಗಡನ್ನು ಪ್ರಸಾದ ರೂಪದಲ್ಲಿ ಭಕ್ತರಿಗೆ ನೀಡಲಾಗುತ್ತದೆ ಎಂದು ಕೃಷ್ಣಭಕ್ತ ವೆಂಕಟೇಶ್ ಆಚಾರ್ಯ ತಿಳಿಸಿದ್ದಾರೆ.

    ಗರ್ಭಗುಡಿಗೆ ಚಿನ್ನದ ಅಂತಸ್ತು ಹೊದಿಸಿದರೆ ಆ ಭಾಗದಲ್ಲಿ ಹೆಚ್ಚು ಶಕ್ತಿ ಕ್ರೋಡೀಕರಣವಾಗುತ್ತದೆ ಎಂಬ ನಂಬಿಕೆಯಿದೆ. ಈಗಾಗಲೇ 50 ಕೆಜಿಗೂ ಹೆಚ್ಚು ಚಿನ್ನದ ಸಂಗ್ರಹ ಭಕ್ತರಿಂದ ಆಗಿದೆ. ಪ್ರತಿನಿತ್ಯ ಮಠಕ್ಕೆ ಬರುವ ಭಕ್ತರಿಂದ ದೇಣಿಗೆ ರೂಪದಲ್ಲಿ ಚಿನ್ನ, ಹಣ ಸಂಗ್ರಹವಾಗುತ್ತಿದೆ. ಮೇ ಮೊದಲ ವಾರದಲ್ಲಿ ಬಂಗಾರದ ಮೇಲ್ಛಾವಣಿ ಕಾರ್ಯ ಪೂರ್ಣಗೊಳ್ಳಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಪಾಕಶಾಲೆ ಸೂರೆಗೈದ ಭಕ್ತರು- ಉಡುಪಿ ಕೃಷ್ಣಮಠದಲ್ಲಿ ವಿಭಿನ್ನ ಆಚರಣೆ

    ಪಾಕಶಾಲೆ ಸೂರೆಗೈದ ಭಕ್ತರು- ಉಡುಪಿ ಕೃಷ್ಣಮಠದಲ್ಲಿ ವಿಭಿನ್ನ ಆಚರಣೆ

    ಉಡುಪಿ: ಇಲ್ಲಿನ ಶ್ರೀಕೃಷ್ಣನ ಪೂಜಾಧಿಕಾರ ಪೇಜಾವರ ಮಠದಿಂದ ಪಲಿಮಾರು ಮಠಕ್ಕೆ ಹಸ್ತಾಂತರವಾಗಲಿದೆ. ಈ ಹಿನ್ನೆಲೆಯಲ್ಲಿ ಹಲವಾರು ಧಾರ್ಮಿಕ ವಿಧಿವಿಧಾನಗಳು ನಡೆಯುತ್ತಿದೆ. ಈ ಪೈಕಿ ಸೂರೆ ಬಿಡುವುದು ಕೂಡಾ ಒಂದು.

    ಇಂದು ಮಧ್ಯಾಹ್ನ ಮಠದಲ್ಲಿ ಅನ್ನದಾನ ಇತ್ತು. ಎಲ್ಲರ ಊಟದ ನಂತರ ಮಠದ ಪಾಕಶಾಲೆಯಲ್ಲಿ ಸೂರೆ ಬಿಡುವ ಆಚರಣೆ ನಡೆಯಿತು. ಸೂರೆ ಬಿಡುವ ಆಚರಣೆಗೋಸ್ಕರ ಬಹಳಷ್ಟು ಅನ್ನ, ಸಾರು, ಸಾಂಬಾರು, ಪಾಯಸ, ಸ್ವೀಟ್ ಉಳಿಸಲಾಗುತ್ತದೆ. ಮಠದಿಂದ ಭಕ್ತರೆಲ್ಲರಿಗೆ ಸೂರೆ ಮಾಡಲು ಆದೇಶವಾಗುತ್ತದೆ.

    ಸೂರೆಯನ್ನು ನೋಡುವುದೇ ಒಂದು ಕುತೂಹಲ. ಪಾಕಶಾಲೆಯಲ್ಲಿ ಬರುವ ಎಲ್ಲರೂ ಬೇಕು ಬೇಕಾದಷ್ಟು ಅನ್ನ, ಸಾರು, ಪಾಯಸ ಮನೆಗೆ ಕೊಂಡೊಯ್ದರು. ಸ್ವೀಟ್ ಗಳನ್ನು ಬಾಚಿ ಬಾಚಿ ಕೊಂಡೊಯ್ದರು. ಅನ್ನದ ರಾಶಿ- ಸಾರಿನ ಗುಡಾಣವನ್ನು ಸೂರೆಗೈದರು. ಪ್ರತೀ ಪರ್ಯಾಯ ಮುಗಿಯುವ ಹೊತ್ತಿಗೆ ಈ ಸೂರೆ ಕಾರ್ಯಕ್ರಮ ನಡೆಯುತ್ತದೆ.

    ಅನ್ನಬ್ರಹ್ಮನ ಸೇವೆಗೆ ಮುಡಿಪಾಗುವ ಮಹೂರ್ತಗಳು:
    ತಿರಪತಿಯ ಶ್ರೀನಿವಾಸನನ್ನು ಕಾಂಚನಬ್ರಹ್ಮ ಎಂದೂ, ಪಂಡಾರಪುರದ ಪಾಂಡುರಂಗನನ್ನು ನಾದಬ್ರಹ್ಮನೆಂದೂ, ಉಡುಪಿಯ ಕೃಷ್ಣನನ್ನು ಅನ್ನಬ್ರಹ್ಮನೆಂದೂ ಕರೆಯುತ್ತಾರೆ.

    ಭಕ್ತಿಯ ದಾಹದಿಂದ ಉಡುಪಿಗೆ ಬಂದವರು ಬರಿಯ ಹೊಟ್ಟೆಯಲ್ಲಿ ಹಿಂತಿರುಗಬಾರದು ಎಂದು ಶತಮಾನಗಳ ಹಿಂದಿನಿಂದ ಕೃಷ್ಣಮಠದಲ್ಲಿ ಅನ್ನದಾನ ನಡೆಯುತ್ತಿದೆ. ಇದೇ ಕಾರಣಕ್ಕೆ ಕೃಷ್ಣ ಅನ್ನಬ್ರಹ್ಮನೆನಸಿಕೊಂಡಿದ್ದಾನೆ. ಇಲ್ಲಿ ಪ್ರತಿನಿತ್ಯವೂ 10 ಸಾವಿರಕ್ಕೆ ಕಮ್ಮಿ ಇಲ್ಲದಂತೆ ಭಕ್ತರು ಕೃಷ್ಣನ ಪ್ರಸಾದದ ರೂಪದಲ್ಲಿ ಊಟ ಮಾಡುತ್ತಾರೆ. ಹಬ್ಬ ಹರಿದಿನಗಳಂದಂತೂ 25 ಸಾವಿರಕ್ಕೂ ಮಿಕ್ಕಿ ಜನರು ಊಟ ಮಾಡಿದ ದಾಖಲೆ ಇಲ್ಲಿದೆ.

     

    ಇಷ್ಟು ಜನರಿಗೆ ಊಟ ಹಾಕುವುದು ಅಷ್ಟು ಸುಲಭದ ಮಾತಲ್ಲ, ಪ್ರತಿ 2 ವರ್ಷಕ್ಕೊಮ್ಮೆ ಕೃಷ್ಣಮಠದ ಆಡಳಿತ (ಪರ್ಯಾಯ) ಬದಲಾಗುವುದರಿಂದ ಅನ್ನದಾನಕ್ಕೆ ಸಂಪನ್ಮೂಲ ಕ್ರೋಢಿಕರಣ ದೊಡ್ಡ ಸವಾಲು. ಅದಕ್ಕಾಗಿ ಪರ್ಯಾಯ ಪೂಜಾಧಿಕಾರವನ್ನು ಪಡೆಯುವ ಮಠವು 4 ಮುಹೂರ್ತಗಳ ರೂಪದಲ್ಲಿ ಸಿದ್ಧತೆಗಳನ್ನು ನಡೆಸುತ್ತದೆ. ಹಿಂದೆ ಮಠಗಳು ಆರ್ಥಿಕವಾಗಿ ಕಷ್ಟದಲ್ಲಿದ್ದಾಗ ಅನ್ನದಾನಕ್ಕೆ ಬೇಕಾಗಿದ್ದ ಅಕ್ಕಿ, ಕಟ್ಟಿಗೆ, ಭತ್ತಗಳನ್ನು ವಿದ್ಯುಕ್ತವಾಗಿ ಸಂಗ್ರಹಿಸುವುದಕ್ಕಾಗಿ ನಡೆಯುತ್ತಿದ್ದ ಈ ಮುಹೂರ್ತಗಳು ಇಂದ ಮಠಗಳು ಸ್ವಾವಲಂಭಿಯಾಗಿರುವಾಗ ಸಾಂಕೇತಿಕವಾಗಿ ನಡೆಯುತ್ತಿವೆ.

    ಪ್ರಥಮತಃ ಬಾಳೆ-ತುಳಸಿ ಮುಹೂರ್ತ:
    ಪರ್ಯಾಯ ಪೂಜಾ ಕಾಲದಲ್ಲಿ ಹಾಗೂ ಅನ್ನ ಸಂತರ್ಪಣೆಗೆ ಬಾಳೆ ಎಲೆ, ಬಾಳೆಹಣ್ಣು, ದಿಂಡು – ನಾರು, ತುಳಸಿ ಸಮೃದ್ಧವಾಗಿ ದೊರೆಯಲಿ ಎಂದು ಚಂದ್ರಮೌಳಿಶ್ವರ, ಅನಂತೇಶ್ವರ ಶ್ರೀಕೃಷ್ಣ ಹಾಗೂ ಮಧ್ವಚಾರ್ಯರ ಎದುರಲ್ಲಿ ಪ್ರಾರ್ಥಿಸಿ ಒಂದು ಶುಭ ದಿನದಂದು ಬಾಳೆತೋಟವನ್ನು ಬೆಳೆಸುವ ಮುಹೂರ್ತ ಇದು.

    ದ್ವಿತೀಯ ಅಕ್ಕಿ ಮುಹೂರ್ತ:
    ಎರಡು ವರ್ಷಗಳ ಪರ್ಯಾಯಾವಧಿಯಲ್ಲಿ ಲಕ್ಷೋಪಲಕ್ಷ ಭಕ್ತರಿಗೆ ಅನ್ನ ಸಂತರ್ಪಣೆಗೆ ಬೇಕಾಗುವ ಅಕ್ಕಿಯನ್ನು ಭಕ್ತರಿಂದ ಸಂಗ್ರಹಿಸುವ ಮುಹೂರ್ತ ಇದು. ಅಂದು ದೇವರಲ್ಲಿ ಚಿನ್ನದ ಪಲ್ಲಕ್ಕಿ ಯಲ್ಲಿ ಅಕ್ಕಿಯ ಮುಡಿಯನ್ನು ಇಟ್ಟು ಮೆರವಣಿಗೆ ಮಾಡಿ ಮುಹೂರ್ತ ನಡೆಸಲಾಗುತ್ತದೆ.

    ತೃತೀಯ ಕಟ್ಟಿಗೆ ಮುಹೂರ್ತ:
    ಪರ್ಯಾಯಕ್ಕೆ ಆರು ತಿಂಗಳು ಬಾಕಿ ಇರುವಾಗ ಅನ್ನ ಸಂತರ್ಪಣೆಗೆ ಅವಶ್ಯಕವಾದ ಕಟ್ಟಿಗೆಯನ್ನು ಭೋಜನಶಾಲಾ ಹಿಂಭಾಗದಲ್ಲಿ ರಥದ ಆಕೃತಿಯಲ್ಲಿ ಸಂಗ್ರಹಿಸುವ ಶುಭಾವಸರವೇ ಕಟ್ಟಿಗೆ ಮುಹೂರ್ತ.

    ಚರ್ತುರ್ಥ ಭತ್ತ ಮುಹೂರ್ತ:
    ಇದು ಕೊನೆಯ ಮುಹೂರ್ತ ಇದಾಗಿದೆ. ಅವಿರತ ಅನ್ನಯಜ್ಞಗಾಗಿ ಶ್ರೀಕೃಷ್ಣನ ಪ್ರಾರ್ಥನೆಯೊಂದಿಗೆ ಬಡಗುಮಾಳಿಗೆಯಲ್ಲಿ ಭತ್ತವನ್ನು ಚೀಲದ ಸಂಗ್ರಹವೇ ಭತ್ತ ಮುಹೂರ್ತ. ಪ್ರತಿದಿನ ರಾತ್ರಿ ದೇವರಿಗೆ ವಾಲಗಪೂಜೆಗೆ, ಯತಿಗಳ ಮಾಲಿಕಾ ಮಂಗಳಾರತಿಗೆ ಬೇಕಾಗುವ ಅರಳ ತಯಾರಿಸುವ ಭತ್ತ ಸಂಗ್ರಹವೇ ಇದರ ಉದ್ದೇಶವಾಗಿದೆ.

  • ಕೃಷ್ಣಜನ್ಮಾಷ್ಟಮಿ: ಬೆಂಗ್ಳೂರಿನ ಇಸ್ಕಾನ್‍ನಲ್ಲಿ ವಿಶೇಷ ಪೂಜೆ, ಕೃಷ್ಣನೂರು ಉಡುಪಿಯಲ್ಲಿ ಜನ್ಮಾಷ್ಟಮಿ ಇಲ್ಲ ಯಾಕೆ?

    ಕೃಷ್ಣಜನ್ಮಾಷ್ಟಮಿ: ಬೆಂಗ್ಳೂರಿನ ಇಸ್ಕಾನ್‍ನಲ್ಲಿ ವಿಶೇಷ ಪೂಜೆ, ಕೃಷ್ಣನೂರು ಉಡುಪಿಯಲ್ಲಿ ಜನ್ಮಾಷ್ಟಮಿ ಇಲ್ಲ ಯಾಕೆ?

    ಬೆಂಗಳೂರು: ಇಂದು ಶ್ರೀಕೃಷ್ಣ ಜನ್ಮಾಷ್ಠಮಿ. 5 ಸಾವಿರ ವರ್ಷಗಳ ಹಿಂದೆ ಲೋಕ ಕಲ್ಯಾಣಕ್ಕಾಗಿ ಶ್ರೀಕೃಷ್ಣ ನಾನಾ ಅವತಾರಗಳನ್ನು ತಾಳಿದ್ದನಂತೆ. ಭೂಮಿಗೆ ಬಂದು ಭಕ್ತರನ್ನ ಹರಿಸಿ ಹೋಗಿದ್ನಂತೆ. ಇದೇ ನಂಬಿಕೆ ಮೇಲೆ ಇವತ್ತಿಗೂ ಶ್ರೀಕೃಷ್ಣನ ಜನ್ಮಾಷ್ಠಮಿಯನ್ನ ಮನೆ ಮನೆಯಲ್ಲೂ ಆಚರಿಸಲಾಗ್ತಿದೆ.

    ಇಂದು ಜನ್ಮಾಷ್ಠಮಿ ಆಗಿರೋದ್ರಿಂದ ಶ್ರೀಕೃಷ್ಣ ಮತ್ತೆ ಭೂಮಿಗೆ ಬರ್ತಾನೆ ಅನ್ನೋ ನಂಬಿಕೆಯಿದೆ. ಮನೆ ಮನೆಯಲ್ಲೂ ಪುಟ್ಟ ಪುಟ್ಟ ಮಕ್ಕಳಿಗೆ ಶ್ರೀಕೃಷ್ಣನ ವೇಷ ಹಾಕಿಸಿ ಪೂಜೆ ಸಲ್ಲಿಸುವ ವಾಡಿಕೆಯಿದೆ.

    ಬೆಂಗಳೂರಿನ ಇಸ್ಕಾನ್ ದೇವಸ್ಥಾನದಲ್ಲೂ ಈಗಾಗಲೇ ನಾನಾ ಬಗೆಯ ಕಾರ್ಯಕ್ರಮಗಳು, ಪೂಜೆಗಳು ಜೋರಾಗಿ ನಡೆಯುತ್ತಿದೆ. ಇಸ್ಕಾನ್‍ನಲ್ಲಿ ಭಕ್ತರಿಗೆ ನೀಡಲು 2 ಲಕ್ಷ ಲಾಡುಗಳು ತಯಾರಾಗಿವೆ. ಸಾವಿರಾರು ಭಕ್ತರು ಬರೋದ್ರಿಂದ ರಾಜಾಜಿನಗರ ಸುತ್ತಾಮುತ್ತಾ ಸಂಚಾರ ವ್ಯತ್ಯಯವಾಗಲಿದ್ದು ಪೊಲೀಸರು ಬದಲಿ ಮಾರ್ಗ ಅನುಸರಿಸಲು ಸೂಚಿಸಿದ್ದಾರೆ.

    ಆದ್ರೆ ಕೃಷ್ಣನೂರು ಉಡುಪಿಯಲ್ಲಿ ಮಾತ್ರ ಶ್ರೀಕೃಷ್ಣ ಜನ್ಮಾಷ್ಟಮಿಯನ್ನ ಇಂದು ಆಚರಿಸಲಾಗುತ್ತಿಲ್ಲ. ಬದಲಾಗಿ ಸೆಪ್ಟೆಂಬರ್ 14ಕ್ಕೆ ಅಷ್ಟಮಿಯನ್ನು ಅಚರಿಸಲಾಗುತ್ತದೆ. ಆಗಸ್ಟ್ ತಿಂಗಳಲ್ಲಿ ಕರಾವಳಿಯಲ್ಲಿ ಆಷಾಢ ಇರೋದ್ರಿಂದ ಇಲ್ಲಿ ಅಷ್ಟಮಿ ಇರೋದಿಲ್ಲ. ಹೀಗಾಗಿ ಇಂದು ಅಷ್ಟಮಿಯ ಆಚರಣೆ ಕೃಷ್ಣನೂರು ಉಡುಪಿಯಲ್ಲಿ ಇಲ್ಲ. ಶ್ರೀಕೃಷ್ಣನಿಗೆ ಜನ್ಮ ಇಲ್ಲ. ಅವನು ಅವತಾರವೆತ್ತಿದ್ದು ಎಂಬುವುದು ಭಾಗವತದಲ್ಲಿ ಉಲ್ಲೇಖವಿದೆ. ಇಂದು ಹಬ್ಬ ಆಚರಿಸುವವರು ಕೃಷ್ಣ ಜಯಂತಿಯನ್ನು ಆಚರಿಸುತ್ತಿದ್ದಾರೆ ಎಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ.

    ಕೃಷ್ಣ ಜನ್ಮಾಷ್ಟಮಿ ಆಗಬೇಕಾದ್ರೆ ಸಿಂಹ ಮಾಸದ-ರೋಹಿಣಿ ನಕ್ಷತ್ರ ಅಷ್ಟಮಿ ತಿಥಿಯಂದು ಚಂದ್ರೋದಯವಾಗುವ ಕಾಲ ಬರಬೇಕು. ಹೀಗಾಗಿ ಈ ಘಳಿಗೆ ಮುಂದಿನ ತಿಂಗಳು ಇರುವುದರಿಂದ ಕೃಷ್ಣನೂರು ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಗುತ್ತದೆ.

  • ಚಂದ್ರಗ್ರಹಣ: ಉಡುಪಿಯಲ್ಲಿ ಶ್ರೀಕೃಷ್ಣನಿಗೆ ವಿಶೇಷ ಅಲಂಕಾರ

    ಚಂದ್ರಗ್ರಹಣ: ಉಡುಪಿಯಲ್ಲಿ ಶ್ರೀಕೃಷ್ಣನಿಗೆ ವಿಶೇಷ ಅಲಂಕಾರ

    ಉಡುಪಿ: ಜಿಲ್ಲೆಯಲ್ಲೂ ಸೋಮವಾರ ರಾತ್ರಿ ಖಗ್ರಾಸ ಚಂದ್ರಗ್ರಹಣ ದರ್ಶನವಾಯಿತು. ಆಗಸದಲ್ಲಿ ನಡೆದ ಈ ಕೌತುಕವನ್ನು ಕೃಷ್ಣನೂರಿನ ಮಂದಿ ಕಣ್ತುಂಬಿಕೊಂಡರು. ಕೊಲ್ಲೂರಲ್ಲಿ ರಾತ್ರಿ 1 ಗಂಟೆಯವರೆಗೂ ಮೂಕಾಂಬಿಕೆಗೆ ವಿಶೇಷ ಪೂಜೆ ನಡೆಯಿತು.

    ಉಡುಪಿ ಶ್ರೀಕೃಷ್ಣನಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ತುಳಸೀಧಾಮ ಭೂಷಿತ ಶ್ರೀಕೃಷ್ಣನಾಗಿ ಶ್ರೀಕೃಷ್ಣ ಕಂಗೊಳಿಸುತ್ತಿದ್ದನು. ತುಳಸೀದಳ ಮತ್ತು ತುಳಸಿ ಹಾರಗಳಿಂದ ಶ್ರೀಕೃಷ್ಣನಿಗೆ ಈ ಅಲಂಕಾರ ಮಾಡಲಾಗಿತ್ತು. ಕಡೆಗೋಲು ಶ್ರೀಕೃಷ್ಣನಿಗೆ ಪ್ರತಿದಿನ ಒಂದೊಂದು ಅಲಂಕಾರ ಮಾಡಲಾಗಿತ್ತು. ಚಂದ್ರಗ್ರಹಣ ಹಿನ್ನೆಲೆಯಲ್ಲಿ ತುಳಸಿ ದಳಗಳಿಂದ ಪರ್ಯಾಯ ಸ್ವಾಮೀಜಿಯವರು ಅಲಂಕಾರ ಮಾಡಿದ್ದರು.

    ಗ್ರಹಣದ ದೋಷ ದೇವರಿಗೆ- ದೇವರನ್ನು ಕಣ್ತುಂಬಿಕೊಂಡು ಆರಾಧಿಸುವ ಭಕ್ತರಿಗೆ ತಟ್ಟದಿರಲಿ ಅಂತ ತುಳಸಿದಳಗಳಿಂದ ಅಲಂಕಾರ ಮಾಡಲಾಗಿತ್ತು. ಗ್ರಹಣ ಹಿನ್ನೆಲೆಯಲ್ಲಿ ಕೃಷ್ಣಮಠದಲ್ಲಿ ಸೋಮವಾರ ರಾತ್ರಿ ಊಟವನ್ನು ಭಕ್ತರಿಗೆ ವಿತರಣೆ ಮಾಡುವುದನ್ನು ಸ್ಥಗಿತಗೊಳಿಸಲಾಗಿತ್ತು.

    ವರ್ಷದ ಮೊದಲ ಚಂದ್ರಗ್ರಹಣಕ್ಕೆ ವಿಶ್ವವೇ ಸಾಕ್ಷಿಯಾಗಿದೆ. ಸುಮಾರು 2 ಗಂಟೆಗಳವರೆಗೆ ಚಂದ್ರಗ್ರಹಣನಿಗೆ ಕೇತುಗ್ರಸ್ತ ಚಂದ್ರಗ್ರಹಣವಾಗಿತ್ತು. ರಾತ್ರಿ 10.52ಕ್ಕೆ ಆರಂಭವಾದ ಗ್ರಹಣ ರಾತ್ರಿ 12.48ಕ್ಕೆ ಕೊನೆಯಾಯಿತು. ನಿನ್ನೆ ಹುಣ್ಣಿಮೆಯಾಗಿತ್ತು. ಹೀಗಾಗಿ ಸೂರ್ಯ-ಚಂದ್ರನ ನಡುವೆ ಭೂಮಿ ಬಂದ ಕಾರಣ ಕೆಲ ಹೊತ್ತು ಚಂದಿರ ತನ್ನ ಪ್ರಭೆಯನ್ನೇ ಕಳೆದುಕೊಂಡು ಕತ್ತಲಲ್ಲಿ ಮರೆಯಾಗಿದ್ದನು.

    ಭಾರತೀಯ ಸಂಪ್ರದಾಯದಲ್ಲಿ ಚಂದ್ರಗ್ರಹಣಕ್ಕೆ ಸಾಕಷ್ಟು ಮಹತ್ವವವಿದೆ. ಧಾರ್ಮಿಕ ದೃಷ್ಟಿಕೋನದಲ್ಲಿ ನೋಡೋದಾದ್ರೆ, ಹೇವಿಳಂಬಿ ಸಂವತ್ಸರದ ಶ್ರಾವಣ ಮಾಸದ ಹುಣ್ಣಿಮೆ ದಿನವಾದ ನಿನ್ನೆ ಶ್ರವಣ ನಕ್ಷತ್ರ, ಮಕರ ರಾಶಿಯಲ್ಲಿ ಕೇತುಗ್ರಸ್ತ ಚಂದ್ರ ಗ್ರಹಣ ಸಂಭವಿಸಿದೆ. ಈ ಹೊತ್ತಲ್ಲಿ ಉಪವಾಸ ಆಚರಣೆ ಮಾಡಲಾಯಿತು. ಹಲವಾರು ಕಡೆಗಳಲ್ಲಿ ದೇವರ ದರ್ಶನ ಇರಲಿಲ್ಲ. ಇತ್ತ ವೈಜ್ಞಾನಿಕ ಲೋಕಕ್ಕೂ ಇದು ಕೌತುಕ ಕ್ಷಣವಾಗಿತ್ತು.

    ಬಾನಿನಲ್ಲಿ ನಡೆದ ಈ ಕೌತುಕ ಉಡುಪಿಯ ಫೋಟೋಗ್ರಾಫರ್ ಪ್ರಸನ್ನ ಕೊಡವೂರು ಅವರ ಕ್ಯಾಮರಾದಲ್ಲಿ ಸೆರೆಯಾಗಿದ್ದು ಹೀಗೆ:

     

  • ಉಡುಪಿ ಸ್ವಾಮೀಜಿ ಇಫ್ತಾರ್ ಕೂಟ ಏರ್ಪಡಿಸಿದ್ದನ್ನು ಬೆಂಬಲಿಸ್ತೀವಿ: ಪರಮೇಶ್ವರ್

    ಉಡುಪಿ ಸ್ವಾಮೀಜಿ ಇಫ್ತಾರ್ ಕೂಟ ಏರ್ಪಡಿಸಿದ್ದನ್ನು ಬೆಂಬಲಿಸ್ತೀವಿ: ಪರಮೇಶ್ವರ್

    ಉಡುಪಿ: ಸಮಾಜದಲ್ಲಿ ಸಾಮರಸ್ಯ ಇರಬೇಕು ಎಂದು ಸ್ವಾಮೀಜಿ ಇಫ್ತಾರ್ ಕೂಟ ಏರ್ಪಡಿಸಿದ್ದನ್ನು ನಾವು ಬೆಂಬಲಿಸುತ್ತೇವೆ. ಅವರ ತೀರ್ಮಾನವನ್ನು ಸ್ವಾಗತಿಸುತ್ತೇವೆ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಪರಮೇಶ್ವರ್ ಹೇಳಿದ್ದಾರೆ.

    ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸ್ವಾಮೀಜಿ ಭೇಟಿಯಲ್ಲಿ ಯಾವುದೇ ರಾಜಕೀಯ ಇಲ್ಲ ಅಂದ್ರು. ಮುಂದಿನ ಚುನಾವಣೆಯ ಟಿಕೆಟ್ ಹಂಚಿಕೆ ವಿಚಾರದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿ, ನಾವು ಎಲ್ಲಾ ಸಚಿವರನ್ನು ಗಮನಿಸಿ ವರದಿಯನ್ನು ತರಿಸಿಕೊಳ್ತೇವೆ. ಬಳಿಕ ಸರ್ವೇಗಳನ್ನು ನಡೆಸುತ್ತೇವೆ. ಅದರ ಆಧಾರದ ಮೇಲೆ ವಸ್ತುಸ್ಥಿತಿ ತಿಳ್ಕೊಂಡು ಮುಂದಿನ ತೀರ್ಮಾನ ಮಾಡ್ತೇವೆ ಅಂತಾ ಹೇಳಿದ್ರು.

    ಕಲ್ಲಡ್ಕ ಗಲಭೆ ಬಗ್ಗೆ ಮಾತನಾಡಿದ ಅವರು, ಇಂತಹ ಘಟನೆ ಆಗಬಾರದು. ಕರಾವಳಿಯಲ್ಲಿ ಇತ್ತೀಚೆಗೆ ಇದು ಹೆಚ್ಚಾಗುತ್ತಿದೆ. ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು ಇದಕ್ಕೆ ಪ್ರಚೋದನೆ ಮಾಡುತ್ತಿದ್ದಾರೆ ಅಂದ್ರು.

    ಇದೇ ಸಂದರ್ಭದಲ್ಲಿ ಯುಡಿಯೂರಪ್ಪ ದಲಿತರ ಮನೆಗೆ ಭೇಟಿ ವಿಚಾರ ಕುರಿತು ಮಾತನಾಡಿ, ನಾಟಕೀಯ ರಾಜಕಾರಣಕ್ಕಾಗಿ ಇದನ್ನು ಮಾಡುತ್ತಿದ್ದಾರೆ. ಜನರನ್ನು ತಪ್ಪು ದಾರಿಗೆ ಒಯ್ಯುವ ಪ್ರಯತ್ನ ಮಾಡುತ್ತಿದ್ದಾರೆ. ಅವರ ಸರ್ಕಾರ ಇರೋವಾಗ ದಲಿತರ ಸಮಸ್ಯೆಗೆ ಸ್ಪಂದಿಸಿಲ್ಲ. ಇದು ಕೇವಲ ರಾಜಕಾರಣ ಅಂತಾ ಇಡೀ ಜಗತ್ತಿಗೆ ಗೊತ್ತಾಗ್ತಾ ಇದೆ ಎಂದು ಪರಮೇಶ್ವರ್ ಹೇಳಿದರು.