Tag: Krishna Talkies

  • ಕುತೂಹಲ ಹುಟ್ಟಿಸೋ ತಿರುವುಗಳು, ರೋಚಕ ಸಂಗತಿಗಳು: ಪ್ರೇಕ್ಷಕರಿಗೆ ಥ್ರಿಲ್ ನೀಡಿದ ‘ಕೃಷ್ಣ ಟಾಕೀಸ್’

    ಕುತೂಹಲ ಹುಟ್ಟಿಸೋ ತಿರುವುಗಳು, ರೋಚಕ ಸಂಗತಿಗಳು: ಪ್ರೇಕ್ಷಕರಿಗೆ ಥ್ರಿಲ್ ನೀಡಿದ ‘ಕೃಷ್ಣ ಟಾಕೀಸ್’

    ರೇಟಿಂಗ್: 3.5/5

    ಚಿತ್ರ: ಕೃಷ್ಣ ಟಾಕೀಸ್
    ನಿರ್ದೇಶನ: ವಿಜಯಾನಂದ್
    ನಿರ್ಮಾಪಕ: ಗೋವಿಂದರಾಜು. ಎ.ಹೆಚ್ ಆಲೂರು
    ಸಂಗೀತ ನಿರ್ದೇಶನ: ವಿ. ಶ್ರೀಧರ್ ಸಂಭ್ರಮ್
    ಛಾಯಾಗ್ರಹಣ: ಅಭಿಷೇಕ್ ಜಿ ಕಾಸರಗೋಡು
    ತಾರಾಬಳಗ: ಅಜಯ್ ರಾವ್, ಅಪೂರ್ವ, ಸಿಂಧು ಲೋಕನಾಥ್, ಮಂಡ್ಯ ರಮೇಶ್, ನಿರಂತ್, ಚಿಕ್ಕಣ್ಣ, ಪ್ರಕಾಶ್ ತುಮಿನಾಡು, ಇತರರು

    ಜಯ್ ರಾವ್ ನಟನೆಯ ವಿಜಯಾನಂದ್ ನಿರ್ದೇಶನದ ಕೃಷ್ಣ ಟಾಕೀಸ್ ಸಿನಿಮಾ ಇಂದು ರಾಜ್ಯಾದ್ಯಂತ ತೆರೆಕಂಡಿದ್ದು, ಪ್ರೇಕ್ಷಕ ಪ್ರಭುಗಳ ಮೆಚ್ಚುಗೆಗೆ ಸಿನಿಮಾ ಪಾತ್ರವಾಗಿದೆ. ನೈಜ ಘಟನೆಯಿಂದ ಸ್ಪೂರ್ತಿ ಪಡೆದು ನಿರ್ದೇಶಕರು ಈ ಸಿನಿಮಾ ಮಾಡಿದ್ದು, ಲಖನೌದ ಚಿತ್ರಮಂದಿರದಲ್ಲಿ ನಡೆದ ಘಟನೆ ಈ ಸಿನಿಮಾದ ಕಥಾವಸ್ತು. ಅಜಯ್ ರಾವ್ ಅವರದ್ದು ಚಿತ್ರದಲ್ಲಿ ಪತ್ರಕರ್ತನ ಪಾತ್ರ. ಈ ಹಿಂದಿನ ಕೃಷ್ಣ ಸೀರೀಸ್ ನಾಲ್ಕು ಸಿನಿಮಾಗಳಲ್ಲಿ ಲವರ್ ಬಾಯ್ ಇಮೇಜಾದ್ರೆ ಇಲ್ಲಿ ಸೀರಿಯಸ್ ರೋಲ್. ಮೊದಲ ಬಾರಿ ಹಾರಾರ್ ಥ್ರಿಲ್ಲರ್ ಜಾನರ್ ನಲ್ಲಿ ನಟಿಸಿರುವ ಅಜಯ್ ರಾವ್, ಪತ್ರಕರ್ತನ ಪಾತ್ರದಲ್ಲಿ ಸಾಮಾನ್ಯ ಹುಡುಗನಾಗಿ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ.

    ‘ಕೃಷ್ಣ ಟಾಕೀಸ್’ ಎಂಬ ಚಿತ್ರಮಂದಿರದ ಮೇಲೆ ಹೆಣೆಯಲಾದ ಕಥೆಯೇ ‘ಕೃಷ್ಣ ಟಾಕೀಸ್’. ಕೃಷ್ಣ ಟಾಕೀಸ್ ಚಿತ್ರಮಂದಿರದಲ್ಲಿ ಸಿನಿಮಾ ನೋಡಿದ ಮೇಲೆ ಒಬ್ಬರಲ್ಲ ಒಬ್ಬರು ನಾಪತ್ತೆಯಾಗುತ್ತಿರುತ್ತಾರೆ. ಒಮ್ಮೆ ನಾಯಕನ ಸ್ನೇಹಿತ ಸೂರಿ ಕೃಷ್ಣ ಟಾಕೀಸ್ ನಲ್ಲಿ ಸಿನಿಮಾ ನೋಡಲು ಹೋದ ಮೇಲೆ ಎಲ್ಲೂ ಕಾಣಸಿಗೋದಿಲ್ಲ. ತನ್ನ ಸ್ನೇಹಿತನ ಸಾವಿಗೆ ಕಾರಣ ಹುಡುಕಲು ಹೊರಟ ನಾಯಕನಿಗೆ ಹಲವು ಮಜಲುಗಳು ಸಿಗುತ್ತವೆ. ಕೃಷ್ಣ ಟಾಕೀಸ್ ನಲ್ಲಿ ಸಿನಿಮಾ ನೋಡಿದ ಮೇಲೆ ಕಾಣೆಯಾಗಲು ನಿಜವಾದ ಕಾರಣ ಏನು ಎಂಬುದನ್ನು ನಾಯಕ ಹೇಗೆ ಕಂಡು ಹಿಡಿಯುತ್ತಾನೆ ಎನ್ನುವುದರ ಸುತ್ತ ಸಿನಿಮಾ ಹೆಣೆಯಲಾಗಿದೆ. ಇದನ್ನು ರೋಚಕವಾಗಿ, ಹಾರಾರ್ ಥ್ರಿಲ್ಲರ್ ಸಬ್ಜೆಕ್ಟ್ ನೊಂದಿಗೆ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ವಿಜಯಾನಂದ್. ಹಾರಾರ್ ಥ್ರಿಲ್ಲರ್ ಚಿತ್ರವಾಗಿರೋದ್ರಿಂದ ಕ್ಷಣ ಕ್ಷಣಕ್ಕೂ ಟ್ವಿಸ್ಟ್ ಅಂಡ್ ಟರ್ನ್ ಗಳು ಸಿನಿಮಾದಲ್ಲಿದೆ. ಚಿತ್ರಕಥೆಯನ್ನು ಇಂಟ್ರಸ್ಟಿಂಗ್ ಆಗಿ ಹೆಣೆದಿರೋ ನಿರ್ದೇಶಕರು, ಪ್ರೇಕ್ಷಕರನ್ನು ಸೆಳೆಯೋದ್ರಲ್ಲಿ ಯಶಸ್ವಿಯಾಗಿದ್ದಾರೆ.

    ಎಲ್ಲ ಕಮರ್ಶಿಯಲ್ ಸಿನಿಮಾಗಳಂತೆ ಇಲ್ಲೂ ಲವ್, ಆಕ್ಷನ್, ಫ್ಯಾಮಿಲಿ ಸೆಂಟಿಮೆಂಟ್ ಬೆರೆತಿದ್ದು, ಪ್ರೇಕ್ಷಕರಿಗೆ ಮನರಂಜನೆ ನೀಡಿದೆ. ಈ ಹಿಂದಿನ ಕೃಷ್ಣ ಸೀರೀಸ್ ಸಿನಿಮಾಗಳಂತೆ ಸಂಗೀತ ನಿರ್ದೇಶಕ ಶ್ರೀಧರ್ ವಿ.ಸಂಭ್ರಮ್ ಹಾಗೂ ಅಜಯ್ ರಾವ್ ಹಿಟ್ ಕಾಂಬೋ ಈ ಸಿನಿಮಾದಲ್ಲೂ ಕಮಾಲ್ ಮಾಡಿದೆ. ಅಭೀಷೇಕ್ ಜಿ ಕಾಸರಗೋಡು ಛಾಯಾಗ್ರಹಣ ಕೂಡ ಮೆಚ್ಚುವಂತದ್ದು. ಪತ್ರಕರ್ತನಾಗಿ ಅಜಯ್ ರಾವ್ ಅಭಿನಯ ನೈಜವಾಗಿ ಮೂಡಿ ಬಂದಿದ್ದು, ನಾಯಕಿಯ ಪಾತ್ರದಲ್ಲಿ ಅಪೂರ್ವ ನಟನೆ ಗಮನ ಸೆಳೆಯುತ್ತದೆ. ವಿಶೇಷ ಪಾತ್ರದಲ್ಲಿ ಸಿಂಧು ಲೋಕನಾಥ್ ಅಭಿನಯ ಚಿತ್ರಕ್ಕೆ ತಿರುವು ನೀಡುವುದರ ಜೊತೆ ಥ್ರಿಲ್ ನೀಡುತ್ತದೆ. ಉಳಿದಂತೆ ಎಲ್ಲಾ ಕಲಾವಿದರು ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ.

  • ‘ಕೃಷ್ಣ ಟಾಕೀಸ್’ನಲ್ಲೂ ಮುಂದುವರಿದ ಅಜಯ್ ರಾವ್- ಶ್ರೀಧರ್ ವಿ ಸಂಭ್ರಮ್ ಜುಗಲ್ಬಂದಿ..!

    ‘ಕೃಷ್ಣ ಟಾಕೀಸ್’ನಲ್ಲೂ ಮುಂದುವರಿದ ಅಜಯ್ ರಾವ್- ಶ್ರೀಧರ್ ವಿ ಸಂಭ್ರಮ್ ಜುಗಲ್ಬಂದಿ..!

    ಜಯ್ ರಾವ್ ನಟನೆಯ ವಿಜಯಾನಂದ್ ನಿರ್ದೇಶನದ ‘ಕೃಷ್ಣ ಟಾಕೀಸ್’ ಈ ಸಿನಿ ಶುಕ್ರವಾರ ತೆರೆಗೆ ಬರುತ್ತಿದೆ. ಹಾರಾರ್ ಥ್ರಿಲ್ಲರ್ ಸಬ್ಜೆಕ್ಟ್ ಒಳಗೊಂಡ ಈ ಸಿನಿಮಾ ಅಜಯ್ ರಾವ್ ಅವರಿಗೂ ತುಂಬಾ ಸ್ಪೆಷಲ್. ಮೊದಲ ಬಾರಿ ಹಾರಾರ್, ಥ್ರಿಲ್ಲರ್ ಸಬ್ಜೆಕ್ಟ್ ಸಿನಿಮಾದಲ್ಲಿ ನಟಿಸುತ್ತಿರುವ ಅಜಯ್ ರಾವ್ ಸಿನಿಮಾಗೆ ಪ್ರೇಕ್ಷಕರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬ ಕುತೂಹಲದಲ್ಲಿದ್ದಾರೆ. ಟ್ರೇಲರ್ ಹಾಗೂ ಹಾಡುಗಳಿಗೆ ಸಿನಿರಸಿಕರಿಂದ ಸಿಕ್ಕಿರುವ ರೆಸ್ಪಾನ್ಸ್ ಕಂಡು ಚಿತ್ರತಂಡ ಥ್ರಿಲ್ ಆಗಿದ್ದು ಸಿನಿಮಾ ಮೇಲೂ ಇದೇ ರೀತಿಯ ಪ್ರೀತಿ ಸಿಗುವ ಭರವಸೆಯಲ್ಲಿದೆ ಕೃಷ್ಣ ಟಾಕೀಸ್ ಚಿತ್ರತಂಡ.

    ‘ಕೃಷ್ಣ ಟಾಕೀಸ್’ ಸಿನಿಮಾದ ಪ್ರತಿ ಹಾಡುಗಳು ಹಿಟ್ ಆಗಿವೆ. ಕೇಳುಗ ಪ್ರಿಯರು ಹಾಡುಗಳಿಗೆ ಮನಸೋತಿದ್ದಾರೆ. ಈ ಹಿಟ್ ಹಾಡುಗಳ ಹಿಂದೆ ಇರುವ ಸಂಗೀತ ಸಂಯೋಜನೆ ಖ್ಯಾತ ಸಂಗೀತ ನಿರ್ದೇಶಕ ಶ್ರೀಧರ್ ವಿ ಸಂಭ್ರಮ್ ಅವರದ್ದು. ಹಲವಾರು ಹಿಟ್ ಹಾಡುಗಳನ್ನು ನೀಡಿರುವ ಶ್ರೀಧರ್ ವಿ ಸಂಭ್ರಮ್ ‘ಕೃಷ್ಣ ಟಾಕೀಸ್’ ಸಿನಿಮಾದಲ್ಲಿಯೂ ಒಂದಕ್ಕಿಂತ ಒಂದು ವೆರೈಟಿ ಹಾಡುಗಳನ್ನು ನೀಡಿದ್ದಾರೆ. ‘ಕೃಷ್ಣ ಟಾಕೀಸ್’ ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡುವ ಮೂಲಕ ಅಜಯ್ ರಾವ್ ಹಾಗೂ ಶ್ರೀಧರ್ ವಿ ಸಂಭ್ರಮ್ ಜುಗಲ್ಬಂದಿ ಕೃಷ್ಣ ಸೀರೀಸ್ ಐದು ಸಿನಿಮಾಗಳಲ್ಲೂ ಮುಂದುವರಿದಂತಾಗಿದೆ. ಈ ಬಗ್ಗೆ ಮಾತನಾಡಿರುವ ಶ್ರೀಧರ್ ವಿ ಸಂಭ್ರಮ್, ‘ಅಜಯ್ ರಾವ್ ಅವರ ಕೃಷ್ಣ ಸೀರೀಸ್ ನಲ್ಲಿ ನಾನು ನಾಲ್ಕು ಸಿನಿಮಾಗಳಿಗೆ ಸಂಗೀತ ನೀಡಿದ್ದೇನೆ. ನಾಲ್ಕು ಸಿನಿಮಾ ಹಾಡುಗಳು ಹಿಟ್ ಆಗಿವೆ. ಇದೀಗ ಕೃಷ್ಣ ಸೀರೀಸ್ ಐದನೇ ಸಿನಿಮಾಕ್ಕೂ ಸಂಗೀತ ನೀಡಿದ್ದು ಈ ಸಿನಿಮಾ ಹಾಡುಗಳು ಕೂಡ ಹಿಟ್ ಲಿಸ್ಟ್ ಸೇರಿದ್ದು ಸಂತಸ ತಂದಿದೆ. ಅಜಯ್ ರಾವ್ ಹಾಗೂ ನನ್ನ ಜುಗಲ್ಬಂದಿ ಐದನೇ ಬಾರಿಯೂ ಮುಂದುವರೆದಿದ್ದು, ಒಂದೊಳ್ಳೆ ಅನುಭವವನ್ನು ‘ಕೃಷ್ಣ ಟಾಕೀಸ್’ ಸಿನಿಮಾ ನೀಡಿದೆ’ ಎಂದಿದ್ದಾರೆ.

    ಏಪ್ರಿಲ್ 16ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿರುವ ‘ಕೃಷ್ಣ ಟಾಕೀಸ್’ ಸಿನಿಮಾ ಸೆನ್ಸಾರ್ ಅಂಗಳದಲ್ಲಿ ಯು/ಎ ಸರ್ಟಿಫೀಕೇಟ್ ಪಡೆದುಕೊಂಡಿದೆ. ನೈಜ ಘಟನೆಯಿಂದ ಸ್ಪೂರ್ತಿ ಪಡೆದು ನಿರ್ದೇಶಕ ವಿಜಯಾನಂದ್ ಸಿನಿಮಾ ಕಥೆ ಹೆಣೆದಿದ್ದಾರೆ. ಸಸ್ಪೆನ್ಸ್, ಥ್ರಿಲ್ಲರ್ ಹಾರಾರ್ ಎಲಿಮೆಂಟ್ ಇರುವ ಕೃಷ್ಣ ಟಾಕೀಸ್ ನಲ್ಲಿ ಪತ್ರಕರ್ತನಾಗಿ ಅಜಯ್ ರಾವ್ ಬಣ್ಣ ಹಚ್ಚಿದ್ದಾರೆ. ಗೋಕುಲ್ ಎಂಟರ್ ಟೈನ್ಮೆಂಟ್ ಬ್ಯಾನರ್‍ನಲ್ಲಿ ಗೋವಿಂದರಾಜು ಎ.ಹೆಚ್ ಆಲೂರು ಸಿನಿಮಾ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಅಪೂರ್ವ ನಾಯಕಿಯಾಗಿ ನಟಿಸಿದ್ದು, ನಟಿ ಸಿಂಧೂ ಲೋಕನಾಥ್ ವಿಶೇಷ ಪಾತ್ರದಲ್ಲಿ ಸಿನಿಮಾದಲ್ಲಿ ಕಾಣಸಿಗಲಿದ್ದಾರೆ. ಚಿಕ್ಕಣ್ಣ, ಶೋಭರಾಜ್, ಪ್ರಮೋದ್ ಶೆಟ್ಟಿ, ಮಂಡ್ಯ ರಮೇಶ್, ನಿರಂತ್, ಪ್ರಕಾಶ್ ತುಮಿನಾಡು ಚಿತ್ರದ ತಾರಾಗಣದಲ್ಲಿದ್ದಾರೆ. ಚಿತ್ರ್ಕಕೆ ಅಭಿಷೇಕ್ ಜಿ.ಕಾಸರಗೋಡು ಛಾಯಾಗ್ರಹಣವಿದೆ.

  • ಕಿಚ್ಚ ಸುದೀಪ್ ಕಂಠಸಿರಿಯಲ್ಲಿ ‘ಕೃಷ್ಣ ಟಾಕೀಸ್’ ಹಾಡು

    ಕಿಚ್ಚ ಸುದೀಪ್ ಕಂಠಸಿರಿಯಲ್ಲಿ ‘ಕೃಷ್ಣ ಟಾಕೀಸ್’ ಹಾಡು

    ಬೆಂಗಳೂರು: ಗೋಕುಲ ಎಂಟರ್ ಟೈನರ್ ಲಾಂಛನದಲ್ಲಿ ಗೋವಿಂದರಾಜು ಎ.ಹೆಚ್ ಅವರು ನಿರ್ಮಿಸುತ್ತಿರುವ ಹಾಗೂ ಅಜಯ್ ರಾವ್ ನಾಯಕರಾಗಿ ನಟಿಸುತ್ತಿರುವ ‘ಕೃಷ್ಣ ಟಾಕೀಸ್` ಚಿತ್ರಕ್ಕಾಗಿ ಅಭಿಷೇಕ್ ಹಾಗೂ ಪ್ರಮೋದ್ ಮರವಂತೆ ಅವರು ಬರೆದಿರುವ ‘ನೈಟಿ ಮಾತ್ರ ಹಾಕೋಬೇಡ ಮೇನಕ, ನಮಗೆ ನೈಂಟಿ ಹೊಡದಂಗೆ ಆಗ್ತದೆ ಜೀವಕ್ಕ` ಎಂಬ ಹಾಡಿನ ಟ್ರ್ಯಾಕ್ ಕೇಳಿರುವ ಕಿಚ್ಚ ಸುದೀಪ್ ಈ ಹಾಡನ್ನು ತಾವೇ ಹಾಡುವುದಾಗಿ ಒಪ್ಪಿಗೆ ಸೂಚಿಸಿದ್ದಾರೆ. ಸದ್ಯದಲ್ಲೇ ಈ ಹಾಡನ್ನು ಹಾಡಲಿದ್ದಾರೆ.

    ವಿಜಯಾನಂದ್ ಈ ಚಿತ್ರದ ನಿರ್ದೇಶಕರು. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ನಿರ್ದೇಶಕರೇ ಬರೆದಿದ್ದಾರೆ. 20 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಚಿತ್ರಗಳಿಗೆ ಸಂಭಾಷಣೆ ಬರೆದು, ಗೀತರಚನೆ ಮಾಡಿರುವ ಆನಂದ ಪ್ರಿಯ ಈ ಚಿತ್ರದ ಮೂಲಕ ತಮ್ಮ ಹೆಸರನ್ನು ವಿಜಯಾನಂದ್ ಎಂದು ಬದಲಾವಣೆ ಮಾಡಿಕೊಂಡಿದ್ದಾರೆ.


    ಶ್ರೀಧರ್ ವಿ ಸಂಭ್ರಮ್ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಅಭಿಷೇಕ್ ಜಿ ಕಾಸರಗೋಡು ಅವರ ಛಾಯಾಗ್ರಹಣವಿದೆ. ಶ್ರೀಕಾಂತ್ ಸಂಕಲನ, ಮದನ್ – ಹರಿಣಿ, ಭೂಷಣ್ ನೃತ್ಯ ನಿರ್ದೇಶನ, ವಿಕ್ರಂ ಸಾಹಸ ನಿರ್ದೇಶನ ಹಾಗೂ ಮೋಹನ್ ಬಿ ಕೆರೆ ಅವರ ಕಲಾ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಅಜಯ್ ರಾವ್, ಅಪೂರ್ವ, ಚಿಕ್ಕಣ್ಣ, ಸಿಂಧೂ ಲೋಕನಾಥ್, ಪ್ರಮೋದ್ ಶೆಟ್ಟಿ, ಪ್ರಕಾಶ್ ತೂಮಿನಾಡು, ಶೋಭ್‍ರಾಜ್, ಮಂಡ್ಯ ರಮೇಶ್, ನಿರಂತ್, ಯಶ್ ಶೆಟ್ಟಿ, ಉಮೇಶ್, ಶ್ರೀನಿವಾಸ ಪ್ರಭು, ಶಾಂಭವಿ, ಲಕ್ಷ್ಮೀಗೌಡ, ಯಮುನ, ಧರ್ಮೇಂದ್ರ ಅರಸ್ ಮುಂತಾದವರಿದ್ದಾರೆ. ಲಾಸ್ಯ ನಾಗರಾಜ್ ಅತಿಥಿಪಾತ್ರದಲ್ಲಿ ಅಭಿನಯಿಸಿದ್ದಾರೆ.