Tag: krishna matt

  • ಪೇಜಾವರ ಶ್ರೀಗಳು ಡಿ.23ರ ನಂತ್ರ ವಿದೇಶಕ್ಕೆ ಹೋಗ್ಬೇಡಿ ಅಂದಿದ್ರು: ಪುತ್ತಿಗೆ ಶ್ರೀಗಳು

    ಪೇಜಾವರ ಶ್ರೀಗಳು ಡಿ.23ರ ನಂತ್ರ ವಿದೇಶಕ್ಕೆ ಹೋಗ್ಬೇಡಿ ಅಂದಿದ್ರು: ಪುತ್ತಿಗೆ ಶ್ರೀಗಳು

    ಉಡುಪಿ: ಪೇಜಾವರ ಶ್ರೀ ಮಂತ್ರಾಲಯದಲ್ಲಿ ನನಗೆ ಸಿಕ್ಕಿದ್ದರು. ಆಗ ಸದ್ಯಕ್ಕೆ 23ರ ನಂತರ ವಿದೇಶಕ್ಕೆ ಹೋಗಬೇಡಿ ಎಂದಿದ್ದರು. ಯಾಕೆ ಎಂದು ಕೇಳಿದ್ದಕ್ಕೆ, ನಸು ನಕ್ಕಿದ್ದರು ಎಂದು ಪುತ್ತಿಗೆ ಮಠದ ಸುಗಣೇಂದ್ರ ತೀರ್ಥ ಸ್ವಾಮೀಜಿ ಶ್ರೀಗಳ ಕುರಿತು ಹೇಳಿದ್ದಾರೆ.

    ಉಡುಪಿ ಅಷ್ಟಮಠಗಳಲ್ಲಿ ಪುತ್ತಿಗೆ ಮಠ ಕೂಡ ಒಂದು. ಪುತ್ತಿಗೆ ಮಠದ ಸುಗಣೇಂದ್ರ ತೀರ್ಥ ಸ್ವಾಮೀಜಿಗಳು ಪಬ್ಲಿಕ್ ಟಿವಿ ಜೊತೆ ಮಾತನಾಡಿ ಪೇಜಾವರ ಶ್ರೀಗಳ ಬಗ್ಗೆ ಹೇಳಿದರು. ಪೇಜಾವರ ಶ್ರೀ ಮಂತ್ರಾಲಯದಲ್ಲಿ ನನಗೆ ಸಿಕ್ಕಿದ್ದರು. ಆಗ ಸದ್ಯಕ್ಕೆ 23ರ ನಂತರ ವಿದೇಶಕ್ಕೆ ಹೋಗಬೇಡಿ ಎಂದಿದ್ದರು. ಯಾಕೆ ಎಂದು ಕೇಳಿದಕ್ಕೆ, ನಸು ನಕ್ಕಿದ್ದರು. ಹೀಗೆ ಆಗುತ್ತದೆ ಎಂದು ಶ್ರೀಗಳಿಗೆ ಮೊದಲೇ ಮುನ್ಸೂಚನೆ ಇತ್ತಾ ಎಂದು ತಿಳಿದಿಲ್ಲ. ಶ್ರೀಗಳು ಹೇಳಿದ್ದಕ್ಕೆ ನಾನು ವಿದೇಶಕ್ಕೆ ಹೋಗಿಲ್ಲ ಎಂದರು. ಇದನ್ನೂ ಓದಿ: ಅಷ್ಟ ಮಠದ ಹಿರಿಯ ಯತಿ, ನಾಡಿನ ಹಿರಿಯ ವಿದ್ವಾಂಸ ಪೇಜಾವರ ಶ್ರೀ ಕೃಷ್ಣೈಕ್ಯ

    ಮಂತ್ರಾಲಯದಲ್ಲಿ ಸಿಕ್ಕಾಗ ಶ್ರೀಗಳು 23ರ ನಂತರ ಎಲ್ಲಿಗೂ ಹೋಗೋದಿಲ್ಲ ಅಲ್ವಾ? ಸದ್ಯ ಎಲ್ಲೂ ವಿದೇಶಕ್ಕೆ ಹೋಗಲ್ಲ ಅಲ್ವಾ ಎಂದು ಎರಡೆರಡು ಬಾರಿ ಕೇಳಿದ್ದರು. ಅವರು ಎಂದಿಗೂ ಈ ರೀತಿ ನನ್ನ ಬಳಿ ಹೇಳಿರಲಿಲ್ಲ. ಆಗ ನನಗೆ ಅಚ್ಚರಿಯಾಗಿತ್ತು. ಆದರೆ ಈಗ ಹೀಗೆ ಆಗುತ್ತೆ ಎಂದು ಅವರಿಗೆ ಮೊದಲೇ ಸೂಚನೆ ಇತ್ತು ಎಂದು ನನಗೆ ಅನಿಸುತ್ತಿದೆ. ಬಹುಶಃ ಅವರ ಕೊನೆ ಕ್ಷಣಗಳಲ್ಲಿ ಅಷ್ಟಮಠದ ಸ್ವಾಮೀಜಿಗಳು ಇಲ್ಲಿಯೇ ಇರಬೇಕು ಎಂದು ಅವರ ಆಸೆ ಆಗಿತ್ತು ಅನಿಸುತ್ತೆ ಎಂದು ಬೆಳಗ್ಗೆ ಪೇಜಾವರ ಶ್ರೀಗಳನ್ನು ನೋಡಲು ಬಂದಾಗ ಅವರ ಮಾತನ್ನು ಪುತ್ತಿಗೆ ಶ್ರೀಗಳು ಹಂಚಿಕೊಂಡಿದ್ದರು.

    ಆದರೆ ಅಷ್ಟ ಮಠದ ಹಿರಿಯ ಯತಿ, ನಾಡಿನ ಹಿರಿಯ ವಿದ್ವಾಂಸ, ಅಸ್ಪೃಶ್ಯತೆ ವಿರುದ್ಧ ಹೋರಾಡಿದ್ದ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ(88) ವಿಧಿವಶರಾಗಿದ್ದಾರೆ. ಶ್ರೀಗಳ ಕೊನೆಯ ಆಸೆಯಂತೆ ಅವರನ್ನು ಇಂದು ವೆಂಟಿಲೇಟರ್ ಸಹಿತ ಅಂಬುಲೆನ್ಸ್ ಮೂಲಕ ಪೇಜಾವರ ಮಠದ ಆವರಣದಲ್ಲಿರುವ ಅಧೋಕ್ಷಜ ಮಠಕ್ಕೆ ಆಸ್ಪತ್ರೆಯಿಂದ ಶಿಫ್ಟ್ ಮಾಡಲಾಗಿತ್ತು. ಅಲ್ಲಿ ಅವರಿಗೆ 6 ಮಂದಿ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿತ್ತು. ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೇ ಮಠದಲ್ಲಿಯೇ ಶ್ರೀಗಳು ಕೃಷ್ಣೈಕ್ಯರಾದರು.

    ರಕ್ತದೊತ್ತಡ, ಮಧುಮೇಹ, ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಶ್ರೀಗಳು ಕಳೆದ ಶುಕ್ರವಾರ ಬೆಳಗ್ಗಿನ ಜಾವ 5 ಗಂಟೆಗೆ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ 9 ದಿನಗಳಿಂದ ಐಸಿಯುನಲ್ಲೇ ಚಿಕಿತ್ಸೆ ನೀಡಲಾಗುತಿತ್ತು. ವಿಶ್ವೇಶತೀರ್ಥ ಸ್ವಾಮೀಜಿಯ ಆರೋಗ್ಯ ಗುರುವಾರದಿಂದಂದ ಹೆಚ್ಚೇನೂ ಸುಧಾರಣೆಯಾಗಿರಲಿಲ್ಲ. ಆರೋಗ್ಯ ಸ್ಥಿತಿ ಗಂಭೀರ ಸ್ಥಿತಿಯಲ್ಲಿದೆ ಎಂದು ಕೆಎಂಸಿ ವೈದ್ಯರು ತಿಳಿಸಿದ್ದರು.

  • ಪೇಜಾವರ ಶ್ರೀಗಳ ಪೂಜಾ ಸಾಮಾಗ್ರಿಗಳು ಬೆಂಗ್ಳೂರಿಗೆ ಶಿಫ್ಟ್

    ಪೇಜಾವರ ಶ್ರೀಗಳ ಪೂಜಾ ಸಾಮಾಗ್ರಿಗಳು ಬೆಂಗ್ಳೂರಿಗೆ ಶಿಫ್ಟ್

    ಉಡುಪಿ: ಪೇಜಾವರ ಮಠದ ಆವರಣದಲ್ಲಿರುವ ಅಧೋಕ್ಷಜ ಮಠದಲ್ಲಿ ಸದ್ಯ ವಿಶ್ವೇಶತೀರ್ಥ ಸ್ವಾಮೀಜಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಪೂಜಾ ಸಾಮಾಗ್ರಿಗಳನ್ನು ಬೆಂಗಳೂರಿಗೆ ಶಿಫ್ಟ್ ಮಾಡಲಾಗುತ್ತಿದೆ.

    ಪೇಜಾವರ ಶ್ರೀಗಳ ಪೂಜಾ ಸಾಮಾಗ್ರಿ, ಅವರ ಪೀಠ, ಶ್ರೀ ಕೃಷ್ಣನ ಪೂಜೆಗೆ ಉಪಯೋಗಿಸುತ್ತಿದ್ದ ಪೂಜಾ ಪರಿಕರವನ್ನು ಸಿಬ್ಬಂದಿ ವಾಹನದೊಳಗೆ ತುಂಬಿಸಿದ್ದಾರೆ. ಕೆಲವೇ ಕ್ಷಣಗಳಲ್ಲಿ ಬೆಂಗಳೂರಿನ ವಿದ್ಯಾಪೀಠಕ್ಕೆ ಈ ಸಾಮಾಗ್ರಿಗಳು ಶಿಫ್ಟ್ ಆಗಲಿವೆ. ಕಿರಿಯ ಸ್ವಾಮೀಜಿಗಳು ಕೂಡ ಸಂಜೆ ವಿದ್ಯಾ ಪೀಠಕ್ಕೆ ತೆರಳಲಿದ್ದಾರೆ ಎಂದು ಮಠದ ಸಿಬ್ಬಂದಿ ತಿಳಿಸಿದ್ದಾರೆ.

    ಈಗಾಗಲೇ ಶ್ರೀಗಳ ಸುಮಾರು 30 ಮಂದಿ ಶಿಷ್ಯರು ಶಿಫ್ಟ್ ಆಗಿದ್ದಾರೆ. 6 ಟಿಟಿಯಲ್ಲಿ ಪೂಜಾ ಸಾಮಾಗ್ರಿ ಹಾಗೂ ಶಿಷ್ಯವೃಂದದವರು ತೆರಳಿದ್ದಾರೆ. ಕಿರಿಯ ಶ್ರೀಗಳ ಪೂಜಾ ಸಾಮಾಗ್ರಿಗಳನ್ನು ಕೂಡ ಶಿಫ್ಟ್ ಮಾಡಲಾಗಿದೆ. ಸಂಜೆಯ ವೇಳೆಯ ಪೂಜೆ ವಿದ್ಯಾಪೀಠದಲ್ಲಿ ನಡೆಯುವ ಹಿನ್ನೆಲೆಯಲ್ಲಿ ಪೂಜಾ ಸಾಮಾಗ್ರಿಗಳನ್ನು ಶಿಫ್ಟ್ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

  • ಕೃಷ್ಣಮಠದ ‘ಸುಭದ್ರೆ’ ರಾತ್ರೋ ರಾತ್ರಿ ಹೊನ್ನಾಳಿ ಮಠಕ್ಕೆ ಸ್ಥಳಾಂತರ

    ಕೃಷ್ಣಮಠದ ‘ಸುಭದ್ರೆ’ ರಾತ್ರೋ ರಾತ್ರಿ ಹೊನ್ನಾಳಿ ಮಠಕ್ಕೆ ಸ್ಥಳಾಂತರ

    -ಆನೆ ರವಾನೆ ಹಿಂದಿದೆ ಹಲವು ಅನುಮಾನ

    ಉಡುಪಿ: ಶ್ರೀಕೃಷ್ಣ ಮಠದ ಆನೆ ಸುಭದ್ರೆಯನ್ನು ಹೊನ್ನಾಳಿ ಮಠಕ್ಕೆ ಶಿಫ್ಟ್ ಮಾಡಲಾಗಿದೆ. ಕಳೆದ ಎರಡು ದಶಕಗಳಿಂದ ಉಡುಪಿ ಕೃಷ್ಣ ಮಠದಲ್ಲಿ ಸೇವೆ ಸಲ್ಲಿಸುತ್ತಿದ್ದ ಆನೆ ಸುಭದ್ರೆಯನ್ನು ಇದೀಗ ಸ್ಥಳಾಂತರ ಮಾಡಲಾಗಿದೆ.

    ಹೊನ್ನಾಳಿಯ ಮಠವೊಂದಕ್ಕೆ ಸೋಮವಾರ ಮುಂಜಾನೆ 4 ಗಂಟೆಯ ವೇಳೆಗೆ ಕೊಂಡೊಯ್ಯಲಾಗಿದೆ. ಮಠದ ಹೊರವಲಯದಲ್ಲಿರುವ ಕನಕ ಶಾಪಿಂಗ್ ಮಾಲ್ ನ ನಿರ್ಮಾಣ ಹಂತದ ಕಟ್ಟಡದ ಮೂಲಕ ಆನೆಯನ್ನು ಲಾರಿಗೆ ಹತ್ತಿಸುವ ಪ್ರಯತ್ನ ನಡೆಯಿತು. ನಾಲ್ವರು ಮಾವುತರ ಪ್ರಯತ್ನದ ಹೊರತಾಗಿಯೂ ಆನೆ ಲಾರಿ ಹತ್ತಲು ಒಪ್ಪಲೇ ಇಲ್ಲ. ಲಾರಿಯ ಚಕ್ರಗಳು ಹೂತುಹೋಗಿ ಸಮಸ್ಯೆ ಉಂಟಾಯ್ತು. ಕೊನೆಗೂ ಹರಸಾಹಸಪಟ್ಟು, ಬೇರೆ ಲಾರಿಗೆ ಕಟ್ಟಿ ಎಳೆಯಲಾಯ್ತು. ಬೆಳಗಿನ ಜಾವ ನಾಲ್ಕು ಗಂಟೆಗೆ ಲಾರಿ ಹತ್ತಿಸಿ ಆನೆಯನ್ನು ರವಾನಿಸಲಾಗಿದ್ದು, ಆನೆ ಸಾಗಾಟದ ವೇಳೆ ಸೂಕ್ತ ವೈದ್ಯರಾಗಲೀ, ಅರಣ್ಯ ಇಲಾಖೆಯವರಾಗಲೀ ಸ್ಥಳದಲ್ಲಿ ಇರಲಿಲ್ಲ.

    ಆನೆಯನ್ನು ಮಠಕ್ಕೆ ದಾನ ನೀಡಿದ ಮುಂಬೈನ ಉದ್ಯಮಿ ಕುಟುಂಬಕ್ಕೆ ಈ ಆನೆಯನ್ನು ಮಠದಿಂದ ಸಾಗಿಸುವುದಕ್ಕೆ ಮನಸ್ಸಿಲ್ಲ. ರಾತೋರಾತ್ರಿ ಗೌಪ್ಯವಾಗಿ ಆನೆಯನ್ನು ಹೊನ್ನಾಳಿಗೆ ಸಾಗಿಸಿರುವುದು ಅನುಮಾನಕ್ಕೆ ಎಡೆಮಾಡುತ್ತಿದೆ. ಆನೆಯ ಅನಾರೋಗ್ಯದ ಕಾರಣಕ್ಕೆ ಸ್ಥಳಾಂತರ ಮಾಡುವುದು ಅನಿವಾರ್ಯ. ಹೊನ್ನಾಳಿ ಮಠದಲ್ಲಿರುವ ಗಂಡಾನೆಯ ಮೂಲಕ ಸುಭದ್ರೆಯ ಸಂತಾನೋತ್ಪತ್ತಿಗೆ ಅವಕಾಶ ಮಾಡಲಾಗುತ್ತಿದೆ ಎಂದು ಮಠ ಮಾಹಿತಿ ನೀಡಿದೆ.

    ಮಾವುತ ಮಹಮ್ಮದ್ ನ ಪ್ರಕಾರ ಆನೆ ಆರೋಗ್ಯವಾಗಿದೆ ಮತ್ತು ಬೆದೆಯ ಕಾಲ ಇದಲ್ಲ. ಮದ ಬಂದ ಗಂಡಾನೆಯ ಮದ ಇಳಿಸುವ ಸಂದರ್ಭ ಕ್ರಾಸಿಂಗ್ ಮಾಡಿಸಬೇಕು ಎಂದು ಹೇಳಿದ್ದಾರೆ. ಆನೆಯನ್ನು ಪರ್ಮನೆಂಟಾಗಿ ಹೊನ್ನಾಳಿಯಲ್ಲೇ ಇರಿಸಿಕೊಳ್ಳಲಾಗುತ್ತದೆ ಎಂಬ ಮಾಹಿತಿಯಿದೆ. ಅನಾರೋಗ್ಯದಿಂದ ಇರುವ ಆನೆಯನ್ನು ಮಠದಲ್ಲಿ ಉಳಿಸಿಕೊಂಡರೆ ಕಾನೂನು ಸಂಕಟ ಎದುರಿಸಬೇಕಾಗಿದಿತು ಎಂದು ಕೃಷ್ಣಮಠ ಹೊನ್ನಾಳಿಗೆ ದಾಟಿಸಿದೆ ಎಂದೂ ಹೇಳಲಾಗಿದೆ. ಉಡುಪಿ ಕೃಷ್ಣಮಠದ ಪರ್ಯಾಯ ಪಲಿಮಾರು ಮಠ ಇದಕ್ಕೆ ಸ್ಪಷ್ಟನೆ ಕೊಡಬೇಕಿದೆ.

  • ಹೊಸ ಇತಿಹಾಸಕ್ಕೆ ಸಾಕ್ಷಿಯಾಗಿದೆ ಉಡುಪಿ ಕೃಷ್ಣಮಠ- ಅನ್ನಬ್ರಹ್ಮ ಛತ್ರದಲ್ಲಿ ನಮಾಜ್

    ಹೊಸ ಇತಿಹಾಸಕ್ಕೆ ಸಾಕ್ಷಿಯಾಗಿದೆ ಉಡುಪಿ ಕೃಷ್ಣಮಠ- ಅನ್ನಬ್ರಹ್ಮ ಛತ್ರದಲ್ಲಿ ನಮಾಜ್

    – ಮುಸ್ಲಿಮರಿಗೆ ಇಫ್ತಾರ್ ಕೂಟ

    ಉಡುಪಿ: ಇಲ್ಲಿನ ಶ್ರೀಕೃಷ್ಣ ಮಠ ಹೊಸ ಇತಿಹಾಸ ಸೃಷ್ಟಿ ಮಾಡಿದೆ. ಸದಾ ಶ್ರೀಕೃಷ್ಣನ ಪೂಜೆ-ಭಜನೆ ನಡೆಯುವ ಉಡುಪಿ ಮಠದಲ್ಲಿ ಶನಿವಾರ ರಂಜಾನ್ ಹಬ್ಬದ ಕಾರ್ಯಕ್ರಮ ನಡೆಯಿತು. ಒಂದು ತಿಂಗಳು ಉಪವಾಸ ಮಾಡಿದ್ದ ಮುಸ್ಲಿಮರು ಶ್ರೀಕೃಷ್ಣ ಮಠದಲ್ಲಿ ಪೇಜಾವರ ಶ್ರೀಗಳಿಂದ ಕರ್ಜೂರ ಪಡೆದು ತಿಂಗಳ ಉಪವಾಸಕ್ಕೆ ತೆರೆ ಎಳೆದರು.

    ಉಡುಪಿ ಶ್ರೀಕೃಷ್ಣ ಮಠದಲ್ಲಿ 800 ವರ್ಷಗಳಿಂದ ನಿರಂತರ ಕೃಷ್ಣನ ಪೂಜೆ-ಭಜನೆ ಆರಾಧನೆ ನಡೆಯುತ್ತಾನೆ ಬಂದಿದೆ. ಆದ್ರೆ ಇಂದು ಕೃಷ್ಣನ ಪೂಜೆಯ ಜೊತೆ ಅಲ್ಲಾಹ್‍ನ ಆರಾಧನೆಯೂ ನಡೆಯಿತು. ರಂಜಾನ್ ತಿಂಗಳ ಉಪವಾಸ ಮುಗಿಸಿದ ಮುಸ್ಲಿಮರು ಕೃಷ್ಣಮಠದ ಅನ್ನಬ್ರಹ್ಮ ಛತ್ರದಲ್ಲಿ ಕೊನೆಯ ನಮಾಜ್ ಮಾಡಿ ಉಪವಾಸ ಅಂತ್ಯ ಮಾಡಿದರು. ಕೃಷ್ಣ ಮಠದ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ ಮುಸ್ಲಿಮರಿಗಾಗಿ ಇಫ್ತಾರ್ ಕೂಟವನ್ನು ಪೇಜಾವರಶ್ರೀ ಆಯೋಜನೆ ಮಾಡಿದ್ದರು.

    ಈ ಸಂದರ್ಭ ಮಾಧ್ಯಮಗಳ ಜೊತೆ ಮಾತನಾಡಿದ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಹಿಂದೂ- ಮುಸಲ್ಮಾನರು ಸೌಹಾರ್ದವಾಗಿ ಬಾಳಬೇಕು, ಬದುಕಬೇಕು. ಆದ್ರೆ ಇತ್ತೀಚೆಗೆ ಹಿಂಸೆಯ ಮಾರ್ಗದಲ್ಲಿ ಸಮಾಜ ನಡೆಯುತ್ತಿದೆ. ಹೀಗಾಗಿ ಸೌಹಾರ್ದದ ಕಾರ್ಯಕ್ರಮವನ್ನು ಮಠದಲ್ಲಿ ಇಟ್ಟುಕೊಳ್ಳಲಾಗಿದೆ. ಮಂಗಳೂರು- ಕಾಸರಗೋಡು- ಭಟ್ಕಳದಲ್ಲಿ ನಡೆದ ಇಸ್ಲಾಂ ಸಮ್ಮೇಳನಗಳಲ್ಲಿ ಕರೆಸಿ ನನ್ನನ್ನು ಆತ್ಮೀಯತೆಯಿಂದ ನೋಡಿಕೊಂಡಿದ್ದಾರೆ. ಪರ್ಯಾಯ ಸಂದರ್ಭ ಹೊರೆಕಾಣಿಕೆ ನೀಡಿದ್ದರು. ಕೃಷ್ಣ ಮಠಕ್ಕೆ ಮುತ್ತಿಗೆ ಹಾಕಲು ಬರುತ್ತೇವೆ ಎಂದಾಗ ಅದಕ್ಕೆ ವಿರುದ್ಧ ನಿಂತವರಲ್ಲಿ ಮುಸ್ಲಿಮರೂ ಇದ್ದರು. ಹಿಂದೂಗಳಿಗೆ ಹಿಂಸೆಯಾದಾಗ ಮುಸ್ಲಿಮರು- ಮುಸ್ಲಿಮರಿಗೆ ಸಮಸ್ಯೆಯಾದಾಗ ಹಿಂದೂಗಳು ಸಹಾಯಕ್ಕೆ ಮುಂದಾಗಬೇಕು ಎಂದು ಕರೆ ನಿಡಿದರು. ಭಾರತ ಶಾಂತಿಯ- ಸೌಹಾರ್ದತೆಯ ತಾಣವಾಗಬೇಕು. ಕರಾವಳಿಯಲ್ಲಿ ಶಾಂತಿ ಬೆಳೆಯುವ-ಬೆಳೆಸುವ ಅಗತ್ಯವಿದೆ. ನಮಃ- ನಮಾಜ್ ಒಂದೇ ಎಂದು ಶ್ರೀಗಳು ಹೇಳಿದರು.

    ಪೇಜಾವರ ಮಠಾಧೀಶ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಉಪವಾಸವಿದ್ದ ಮುಸ್ಲಿಮರಿಗೆ ಕರ್ಜೂರ ನೀಡಿ ಉಪವಾಸ ಬಿಡಿಸಿದರು. ನಂತರ ಸ್ವತಃ ಸ್ವಾಮೀಜಿ ಫಲಾಹಾರವನ್ನ ಬಡಿಸಿದರು. ಅನ್ನಬ್ರಹ್ಮ ಛತ್ರದಲ್ಲಿ ಹಣ್ನು ಹಂಪಲು-ಸಮೋಸ ನೀಡಿ ಉಪವಾಸ ಬಿಡುವ ಕ್ರಮ ನಡೆಯಿತು. ಇದಾಗಿ ಎಲ್ಲಾ ಮುಸ್ಲಿಮರಿಗೆ ಛತ್ರದಲ್ಲೇ ಸಾಮೂಹಿಕ ನಮಾಜ್ ಮಾಡುವ ವ್ಯವಸ್ಥೆ ಮಾಡಲಾಗಿತ್ತು. ಛತ್ರದಲ್ಲೇ ಸಾಮೂಹಿಕ ನಮಾಜ್ ಮಾಡಿದ ಮುಸ್ಲಿಂ ಧರ್ಮೀಯರಿಗೆ ಆದೇಶ ಬಂದಿತ್ತು. ಕಾರವಾರ ಜಿಲ್ಲೆಯ ಭಟ್ಕಳದಲ್ಲಿ ಚಂದ್ರ ಕಾಣಿಸಿಕೊಂಡ ಕಾರಣ ನಾಳೆಯೇ ಈದುಲ್ ಫಿತ್ರ್ ಎಂದು ಖಾಜಿಯವರು ಘೋಷಿಸಿದ್ದಾರೆ. ಈ ಎರಡು ಸಂತಸಗಳು ಒಟ್ಟೊಟ್ಟಿಗೆ ಆದವು.

    ಮುಸ್ಲಿಂ ಸಮುದಾಯದ ಮುಖಂಡ ರಹೀಂ ಉಚ್ಚಿಲ ಮಾತನಾಡಿ, ಪೇಜಾವರಶ್ರೀ ಇಡೀ ವಿಶ್ವಕ್ಕೆ ಸ್ವಾಮೀಜಿ, ಇದು ಉಡುಪಿ ಕೃಷ್ಣಮಠದಿಂದ ವಿಶ್ವಕ್ಕೆ ಸಂದೇಶ ರವಾನೆಯಾಗಿದೆ. ಇಂದಿನ ದಿನಗಳಲ್ಲಿ ಕರಾವಳಿ ಭಾಗದಲ್ಲಿ ಇಫ್ತಾರ್‍ಗಳಿಗೆ ರಾಜಕೀಯ ಬಣ್ಣ ಬರುತ್ತಿದೆ. ಆದ್ರೆ ಮಠದಲ್ಲಿ ನಡೆದ ಇಫ್ತಾರ್ ವಿಭಿನ್ನ. ಮಾನವ ಜನಾಂಗ ಬೆಸೆಯುವ ಕೆಲಸ ಉಡುಪಿ ಮಠದಲ್ಲಿ ಆಗಿದೆ. ಸ್ವಾಮೀಜಿ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ. ದೇಶ ಮೂಲೆ ಮೂಲೆಗೆ ಇಂತಹ ಶಾಂತಿ ಸಂದೇಶ ತಲುಪಬೇಕು. ರಂಜಾನ್ ತಿಂಗಳ ಉಪವಾಸದ ಕೊನೆಯ ಉಪವಾಸವನ್ನು ಮಠದಲ್ಲಿ ಬಿಟ್ಟಿದ್ದೇವೆ ಎಂಬೂದು ದೈವೇಚ್ಛೆ. ಸಮಸ್ತ ಮುಸಲ್ಮಾನ ಸಮುದಾಯದಿಂದ ಪೇಜಾವರ ಮಠಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.

    ದಲಿತ ಕೇರಿಗೆ ಭೇಟಿ ಕೊಡುವುದನ್ನು ಆರಂಭಿಸಿದ ಪೇಜಾವರಶ್ರೀಗೆ ತಮ್ಮದೇ ಸಮಾಜದಲ್ಲಿ ವಿರೋಧ ವ್ಯಕ್ತವಾಗಿತ್ತು. ಆದ್ರೆ ಹಿರಿಯ ಗುರುಗಳು ಅಂತ ಯಾರೂ ಬಹಿರಂಗವಾಗಿ ಈ ಬಗ್ಗೆ ಚಕಾರ ಎತ್ತಲ್ಲ. ಇದೀಗ ಪೇಜಾವರಶ್ರೀಗಳು ಕೃಷ್ಣಮಠದಲ್ಲೇ ಇಫ್ತಾರ್ ಕೂಟ ಏರ್ಪಡಿಸಿದ್ದಾರೆ. ಈ ಬಗ್ಗೆ ಹಿಂದೂ-ಮುಸ್ಲಿಂ ಸಮುದಾಯದಲ್ಲಿ ಏನೆಲ್ಲಾ ಅಭಿಪ್ರಾಯ ಬರುತ್ತೋ,..!? ಪ್ರಗತಿಪರರು ಈ ಬಗ್ಗೆ ಏನೆಂದು ಟೀಕಿಸುತ್ತಾರೋ ಎಂಬ ಕುತೂಹಲವಿದೆ.