Tag: Krishna math

  • ಸಿದ್ದರಾಮಯ್ಯ ನಿಮಗೆ ಒಳ್ಳೆಯದಾಗಲಿ, ರಾಜಕೀಯವಾಗಿ ಹಾಳಾಗಿ ಹೋಗಿ – ಈಶ್ವರಪ್ಪ

    ಸಿದ್ದರಾಮಯ್ಯ ನಿಮಗೆ ಒಳ್ಳೆಯದಾಗಲಿ, ರಾಜಕೀಯವಾಗಿ ಹಾಳಾಗಿ ಹೋಗಿ – ಈಶ್ವರಪ್ಪ

    ಉಡುಪಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ (Siddaramaiah) ಒಳ್ಳೆಯದಾಗಲಿ, ರಾಜಕೀಯವಾಗಿ ಸಿದ್ದರಾಮಯ್ಯ ಹಾಳಾಗಿ ಹೋಗಲಿ ಎಂದು ಬಿಜೆಪಿ (BJP) ನಾಯಕ ಈಶ್ವರಪ್ಪ (K.S.Eshwarappa) ದೇವರಲ್ಲಿ ಬೇಡಿಕೊಂಡಿದ್ದಾರೆ.

    ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ (Vijaya Sankalpa Yatra) ಉಡುಪಿಗೆ ಬಂದಿದ್ದು ಕಾರ್ಕಳ ಮತ್ತು ಉಡುಪಿ (Udupi) ವಿಧಾನಸಭಾ ಕ್ಷೇತ್ರದಲ್ಲಿ ರ‍್ಯಾಲಿ ಮತ್ತು ಸಭೆಗಳನ್ನು ನಡೆಸಿದೆ. ಈ ಸಂಬಂಧ ಮಣಿಪಾಲದಲ್ಲಿ (Manipal) ಪತ್ರಿಕಾಗೋಷ್ಠಿ ನಡೆಸಿದ ಈಶ್ವರಪ್ಪ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಡುಪಿ ಕೃಷ್ಣ ಮಠಕ್ಕೆ (Krishna Math) ಬಾರದಿರುವ ಬಗ್ಗೆ ಗಮನ ಸೆಳೆದರು. ಇದನ್ನೂ ಓದಿ: ಸಿ.ಟಿ ರವಿಗೆ 20 ವರ್ಷ ಸಾಕಾಗಿಲ್ವಾ, ಏನು ಮಾಡಿದ್ದಾರೆ?- ಮತದಾರರಿಂದ ಕ್ಲಾಸ್ 

    ಮುಖ್ಯಮಂತ್ರಿ ಆಗಿದ್ದ ಸಂದರ್ಭ ಸಿದ್ದರಾಮಯ್ಯನವರು ಬಹಳ ಸಲ ಉಡುಪಿಗೆ ಬಂದರು. ಆದರೆ ಒಮ್ಮೆಯೂ ಕೃಷ್ಣ ಮಠಕ್ಕೆ ಭೇಟಿ ನೀಡಲಿಲ್ಲ. ಭಕ್ತ ಕನಕದಾಸರ ಪುತ್ಥಳಿ ಕೃಷ್ಣ ಮಠದಲ್ಲಿದೆ. ಕನಕನಿಗೂ ಕೃಷ್ಣನಿಗೂ ವಿಶೇಷವಾದ ಸಂಬಂಧವಿದೆ. ಕೃಷ್ಣನ ಸ್ಪೂರ್ತಿ ಕನಕನಿಗೆ ಸಿಕ್ಕಿತು. ಇಂತಹ ಕ್ಷೇತ್ರಕ್ಕೆ ಸಿದ್ದರಾಮಯ್ಯ ಯಾಕೆ ಭೇಟಿ ನೀಡಲಿಲ್ಲ? ಮುಖ್ಯಮಂತ್ರಿ ಆಗಿದ್ದಾಗ ಸಿದ್ದರಾಮಯ್ಯ ಕೃಷ್ಣ ಮಠಕ್ಕೆ ಬರಲಿಲ್ಲ. ಕೃಷ್ಣನ ಶಾಪದಿಂದಲೇ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿರಿ. ಇನ್ನಾದರೂ ಕೃಷ್ಣಮಠಕ್ಕೆ ಬನ್ನಿ, ನಿಮಗೆ ಒಳ್ಳೆಯದಾಗುತ್ತದೆ ಎಂದು ಹಾರೈಸಿದರು. ಇದನ್ನೂ ಓದಿ: ಬಿಜೆಪಿ ವಕ್ರದೃಷ್ಟಿ – ಮೋದಿ ರೋಡ್‌ಶೋಗೆ ಕುಮಾರಸ್ವಾಮಿ ಒಕ್ಕಲಿಗ ಕಾರ್ಡ್ ಪ್ಲೇ

    ಸಿದ್ದರಾಮಯ್ಯನವರ ಮೇಲೆ ಪ್ರೀತಿಯಿಂದ, ಅವರಿಗೆ ಒಳ್ಳೆಯದಾಗಲಿ ಎಂಬ ಉದ್ದೇಶದಿಂದ ಈ ಮಾತು ಹೇಳುತ್ತಿದ್ದೇನೆ. ರಾಜಕೀಯ (Politics) ಉದ್ದೇಶದಿಂದ ಈ ರೀತಿ ಹೇಳಲಿಲ್ಲ. ಪ್ರೀತಿ ಇಲ್ಲದೇ ಇದ್ದರೆ ರಾಜಕೀಯ ಮಾಡಲು ಸಾಧ್ಯವಿಲ್ಲ. ದೇಶದ್ರೋಹ ಹಾಗೂ ಧರ್ಮ ದ್ರೋಹಿಗಳನ್ನು ದ್ವೇಷಿಸಬೇಕು. ಸಿದ್ದರಾಮಯ್ಯನವರು ಎಲ್ಲಾ ಕಡೆ ದೇವಸ್ಥಾನಕ್ಕೆ ಹೋಗುತ್ತಾರೆ ಆದರೆ ಕೃಷ್ಣ ಮಠಕ್ಕೆ ಬರುವುದಿಲ್ಲ ಎಂದರು. ಇದನ್ನೂ ಓದಿ: ಮಂಡ್ಯ ಜನರ ಎದುರು ಮತ್ತೆ ಸಿಎಂ ಆಗುವ ಮಹಾದಾಸೆ ವ್ಯಕ್ತಪಡಿಸಿದ ಡಿಕೆಶಿ 

    ಸಿದ್ದರಾಮಯ್ಯನವರು ಮಠಗಳಿಗೆ ಹಣವನ್ನು ಕೊಡುತ್ತಾರೆ, ಮುಖ್ಯಮಂತ್ರಿ ಆಗಿದ್ದಾಗ ನನಗೂ ಹಣ ಕೊಟ್ಟಿದ್ದಾರೆ. ನನ್ನ ಕ್ಷೇತ್ರದಲ್ಲಿರುವ ದೇವಸ್ಥಾನ ಹಾಗೂ ಮಠಗಳಿಗೂ ಸಿದ್ದರಾಮಯ್ಯ ಕೊಡುಗೆಗಳನ್ನು ಕೊಟ್ಟಿದ್ದರು. ನಾನು ಮಂತ್ರಿಯಾಗಿದ್ದಾಗ ಅವರ ಬೇಡಿಕೆಗಳಿಗೂ ಸ್ಪಂದಿಸಿದ್ದೇನೆ. ನಮ್ಮಿಬ್ಬರ ನಡುವೆ ಸ್ನೇಹವಿದೆ. ನಾವಿಬ್ಬರೂ ಚೆನ್ನಾಗಿದ್ದೇವೆ. ಪಕ್ಷದ ವಿಚಾರ ಬಂದಾಗ, ಮೋದಿಯನ್ನು (Narendra Modi) ಟೀಕೆ ಮಾಡಿದಾಗ ನಾನು ಯಾವ ಭಾಷೆ ಬಳಸಿದ್ದೇನೆ ಎಂದು ನಿಮಗೆ ಗೊತ್ತು. ಮೋದಿಯನ್ನು ನರಹಂತಕ ಎಂದು ಕರೆದರೆ ಸುಮ್ಮನೆ ಬಿಡುತ್ತೇವಾ ಎಂದು ಹಾರೈಕೆಯ ಜೊತೆ ಸಿದ್ದರಾಮಯ್ಯನವರ ಕಿವಿ ಹಿಂಡಿದರು. ಇದನ್ನೂ ಓದಿ: ಮಂಡ್ಯ ಬಿಜೆಪಿಗೆ ಸುಮಲತಾ ಬೂಸ್ಟರ್- ಹಾಡಿಹೊಗಳಿದ ಬಿ.ಎಲ್ ಸಂತೋಷ್

  • ಯಾವುದೋ ಊರಿಗೆ ಹೋಗುವ ಬದಲು ಇಲ್ಲೇ ಉದ್ಯೋಗ ಮಾಡಿ: ಈಶಪ್ರೀಯ ತೀರ್ಥ ಸ್ವಾಮೀಜಿ

    ಯಾವುದೋ ಊರಿಗೆ ಹೋಗುವ ಬದಲು ಇಲ್ಲೇ ಉದ್ಯೋಗ ಮಾಡಿ: ಈಶಪ್ರೀಯ ತೀರ್ಥ ಸ್ವಾಮೀಜಿ

    ಉಡುಪಿ: ಯಾವುದೋ ಊರು, ಯಾವುದೋ ನಾಡಿಗೆ ಹೋಗುವ ಬದಲು ಇಲ್ಲೇ ಇದ್ದು ಉದ್ಯೋಗ ಮಾಡಿಕೊಂಡು ಇರಬೇಕು ಎಂದು ಉಡುಪಿ ಪರ್ಯಾಯ ಮಠಾಧೀಶ ಈಶಪ್ರೀಯ ತೀರ್ಥ ಸ್ವಾಮೀಜಿ ಹೇಳಿದರು.

    ಎರಡು ವರ್ಷದ ಪರ್ಯಾಯ ಪೂಜಾಧಿಕಾರ ಬಿಟ್ಟುಕೊಡಲು ಒಂದು ವಾರ ಬಾಕಿಯಿದ್ದು, ಈ ಕುರಿತು ಕೃಷ್ಣ ಮಠದಲ್ಲಿ ಸುದ್ದಿಗೋಷ್ಠಿ ನಡೆಯಿತು. ಈ ವೇಳೆ ಸ್ವಾಮೀಜಿ ಮಾತನಾಡಿದ್ದು, ನಮ್ಮ ಊರಿನ ಸಂಸ್ಕೃತಿ ಉಳಿಯಲು ನಾವೇ ಉದ್ಯೋಗ ಸೃಷ್ಟಿ ಮಾಡಬೇಕು. ಯಾವುದೋ ಊರು, ಯಾವುದೋ ನಾಡಿಗೆ ಹೋಗುವ ಬದಲು ಇಲ್ಲೇ ಇದ್ದು ಉದ್ಯೋಗ ಮಾಡಿಕೊಂಡು ಇರಬೇಕು. ಕುಟುಂಬ ಬಳಗದ ಜೊತೆ ಯುವ ಜನಾಂಗ ಇರಬೇಕಾದ ಅನಿವಾರ್ಯತೆ ಇದೆ ಎಂದರು. ಇದನ್ನೂ ಓದಿ: 180 ಮಿಲಿಯನ್ ವರ್ಷದ ಹಳೆಯ ‘ಸೀ ಡ್ರ್ಯಾಗನ್’ ಅತೀ ದೊಡ್ಡ ಪಳೆಯುಳಿಕೆ ಪತ್ತೆ

    ಕೋವಿಡ್-19 ಎರಡು ವರ್ಷ ಸಾಕಷ್ಟು ಪಾಠ ಕಲಿಸಿದೆ. ಕೊರೊನಾ ಹೇಳಿಕೊಟ್ಟ ಸ್ವಾವಲಂಬಿ ಪಾಠ ನಿರಂತರ ಜೀವನದಲ್ಲಿ ಪಾಲಿಸೋಣ. ನಮ್ಮ ಊರು, ನಮ್ಮ ಜನರ ಕಾಳಜಿ ವಹಿಸೋಣ ಎಂದು ಸಂದೇಶ ನೀಡಿದರು.

    ಕೃಷ್ಣ ಮಠದ ಆವರಣ ಬದಲಾವಣೆ ಮಾಡಿದ್ದೇವೆ. ಶುಚಿತ್ವ ಪ್ಲ್ಯಾಸ್ಟಿಕ್ ಬಳಕೆ ಕಡಿಮೆ ಮಾಡುವ ಬಗ್ಗೆ ಅರಿವು ಮೂಡಿಸಿದ್ದೇವೆ. ಆ ನಿಟ್ಟಿನಲ್ಲಿ ಎರಡು ವರ್ಷ ಪ್ರಯತ್ನ ಮಾಡಿದ್ದೇವೆ. ಜನರಲ್ಲಿ ಸಾಕಷ್ಟು ಬದಲಾವಣೆ ನೋಡಿದ್ದೇವೆ. ತಮ್ಮ ಜೀವನದಲ್ಲಿ ಅನುಷ್ಠಾನ ಮಾಡಿಕೊಂಡಿದ್ದೇವೆ ಎಂದರು.

    ಮನುಷ್ಯ ಜೀವನದಲ್ಲಿ ಯಾತ್ರೆ ಮಾಡುವ ಸಂಸ್ಕೃತಿ ಬೆಳೆಸಬೇಕು. ಹೊರಗಿನದ್ದು, ನೋಡಿ ಉತ್ತಮವಾದದನ್ನು ತೆಗೆದುಕೊಂಡು ನಮ್ಮತನ ಉಳಿಸುವ ಅಗತ್ಯ ಇದೆ. ಅದಮಾರು ಮಠದ ಎರಡು ವರ್ಷದ ಪರ್ಯಾಯ ಸಂದರ್ಭದಲ್ಲಿ ಮಾಧ್ಯಮ ಚೆನ್ನಾಗಿ ಕೆಲಸ ಮಾಡಿದೆ. ಮಠದ ಅಭಿಪ್ರಾಯ ಜನಕ್ಕೆ ಮುಟ್ಟಿದ್ದಕ್ಕೆ ಧನ್ಯವಾದಗಳನ್ನು ತಿಳಿಸಿದರು. ಇದನ್ನೂ ಓದಿ: ಶುಭಾನನ್ನು ನೋಡಲು ಹಳ್ಳಿಗೆ ಹೋದ ನೀತು

    ಎರಡು ವರುಷಗಳ ಹಿಂದೆ ಪರ್ಯಾಯ ಪೀಠ ಏರುವ ಸಂದರ್ಭದಲ್ಲಿ ಯಾವುದೇ ಸಂಕಲ್ಪ ಮಾಡಿರಲಿಲ್ಲ. ಕಾಲ ಕಾಲಕ್ಕೆ ಆಗಬೇಕಾದ ಕೆಲಸ ಮಾಡಿದ್ದೇವೆ. ಎಲ್ಲವೂ ಕೃಷ್ಣನ ಪಾದಕ್ಕೆ ಸಲ್ಲಿಕೆಯಾಗಿದೆ ಎಂದರು.

  • ಉಡುಪಿಯಲ್ಲಿ ಶೋಭಾ ಕರಂದ್ಲಾಜೆ ಜನಾಶೀರ್ವಾದ ಯಾತ್ರೆ- ಕೃಷ್ಣ ಮಠಕ್ಕೆ ಭೇಟಿ

    ಉಡುಪಿಯಲ್ಲಿ ಶೋಭಾ ಕರಂದ್ಲಾಜೆ ಜನಾಶೀರ್ವಾದ ಯಾತ್ರೆ- ಕೃಷ್ಣ ಮಠಕ್ಕೆ ಭೇಟಿ

    ಉಡುಪಿ: ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ನೇತೃತ್ವದ ಜನಾಶೀರ್ವಾದ ಯಾತ್ರೆ ನಗರಕ್ಕೆ ತಲುಪಿದ್ದು, ಇಂದು ಉಡುಪಿಯಲ್ಲಿ 11 ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಬೆಳಗ್ಗೆ 8 ಗಂಟೆಯಿಂದ ಜನಾಶೀರ್ವಾದ ಕಾರ್ಯಕ್ರಮ ಆರಂಭವಾಗಿದೆ.

    ಇಂದು ಬೆಳಗ್ಗೆ ಸಚಿವೆ ಶೋಭಾ ಕರಂದ್ಲಾಜೆ ಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಕೈಗೊಂಡರು. ಕಿಂಡಿಯ ಮೂಲಕ ಕಡಗೋಲು ಕೃಷ್ಣನ ದರ್ಶನ ಮಾಡಿದ ಸಚಿವೆ, ರಥಬೀದಿಯಲ್ಲಿರುವ ಅಷ್ಟ ಮಠಗಳಿಗೆ ಭೇಟಿ ನೀಡಿದರು. ಅನಂತೇಶ್ವರ, ಚಂದ್ರಮೌಳೇಶ್ವರ ದೇವರಿಗೆ ಪ್ರಾರ್ಥನೆ ಸಲ್ಲಿಸಿದ ಬಳಿಕ ಪರ್ಯಾಯ ಅದಮಾರು ಮಠಾಧೀಶರೊಂದಿಗೆ ಸಮಾಲೋಚನೆ ನಡೆಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ಸಿಎಂ ಅಲ್ಲ, ಕೈಗೆ ಸಿಗದ ದ್ರಾಕ್ಷಿ ಹುಳಿ ಅಂತಿದ್ದಾರೆ: ಶೋಭಾ ಕರಂದ್ಲಾಜೆ

    ಈ ಸಂದರ್ಭ ಪರ್ಯಾಯ ಶ್ರೀಗಳು ನೂತನ ಸಚಿವರಿಗೆ ಅದಮಾರು ಸ್ವಾಮೀಜಿ ಗೌರವ ಸಮರ್ಪಣೆ ಮಾಡಿದರು. ಅದಮಾರು ಹಿರಿಯ ಸ್ವಾಮೀಜಿ ವಿಶ್ವಪ್ರಿಯತೀರ್ಥ ಶ್ರೀಪಾದರನ್ನು ಅದಮಾರು ಮಠದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು.

    ಈ ವೇಳೆ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಕೃಷಿಕಾರ್ಯ ಕೃಷ್ಣನಿಗೆ ಪ್ರಿಯವಾದ ಕೆಲಸ. ಕೃಷಿ ಖಾತೆ ನನಗೆ ಸಿಕ್ಕಿದೆ, ಇದು ನನ್ನ ಸೌಭಾಗ್ಯ. ಪ್ರಧಾನಿ ನರೇಂದ್ರ ಮೋದಿ ಮಹತ್ವದ ಜವಾಬ್ದಾರಿ ವಹಿಸಿದ್ದಾರೆ. ರೈತರಿಗೆ ಬಹಳ ಸಹಾಯ ಮಾಡಲು ಅವಕಾಶವಾಗಿದೆ ಎಂದು ಹೇಳಿದರು.

    ರೈತರ ಆದಾಯ ದ್ವಿಗುಣ ಮಾಡಬೇಕು ಎಂಬುದು ಪ್ರಧಾನಿಗಳ ಸಂಕಲ್ಪ. ಪರ್ಯಾಯ ಮಠವು ಕೃಷಿಗೆ ಆದ್ಯತೆ ಕೊಟ್ಟಿದೆ. ಹಲವಾರು ರೈತಪರವಾದ ಕೆಲಸಗಳಿಗೆ ಕೃಷಿ ಪ್ರಧಾನ ಕೆಲಸಗಳಿಗೆ ಮಠ ಬೆಂಬಲ ನೀಡುತ್ತಿದೆ. ಮೋದಿ ಅವರ ಕೈ ಬಲಪಡಿಸಲು ದೇವರ ಆಶೀರ್ವಾದ ಬೇಕು. ಸ್ವಾಮೀಜಿಗಳ ಆಶೀರ್ವಾದ ಬೇಕು ಎಂದು ಹೇಳಿದರು.

  • ಉಡುಪಿ ಕೃಷ್ಣಮಠದ ಮಹಾದ್ವಾರಕ್ಕೆ ಕನ್ನಡ ಫಲಕ

    ಉಡುಪಿ ಕೃಷ್ಣಮಠದ ಮಹಾದ್ವಾರಕ್ಕೆ ಕನ್ನಡ ಫಲಕ

    ಉಡುಪಿ: ಶ್ರೀಕೃಷ್ಣ ಮಠದಲ್ಲಿ ಇದ್ದ ಕನ್ನಡ ಬೋರ್ಡ್ ಬದಲಿಗೆ ತುಳು ಹಾಗೂ ಸಂಸ್ಕೃತ ಬೋರ್ಡ್ ಅಳವಡಿಸಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಉಡುಪಿ ಕೃಷ್ಣಮಠದ ಮಹಾದ್ವಾರಕ್ಕೆ ಕನ್ನಡದ ನಾಮಫಲಕವನ್ನು ಅಳವಡಿಸಲಾಗಿದೆ.

    ಉಡುಪಿ ಕೃಷ್ಣ ಮಠದ ಪೂಜಾ ಅಧಿಕಾರ ಪರ್ಯಾಯ ಅದಮಾರು ಮಠದ ಕೈಯಲ್ಲಿದೆ ಕರೊನಾ ಲಾಕ್‍ಡೌನ್ ಸಂದರ್ಭದಲ್ಲಿ ಸಂಪೂರ್ಣವಾಗಿ ಮಠವನ್ನು ಪುನಶ್ಚೇತನ ಗೊಳಿಸಲಾಗಿದೆ. ಈ ಸಂದರ್ಭದಲ್ಲಿ ಹಳೆಯ ಬೋರ್ಡ್ ತೆಗೆದು, ಹೊಸ ಬೋರ್ಡ್ ಅಳವಡಿಸಲಾಗಿತ್ತು. ಆದರೆ ಹೊಸ ಬೋರ್ಡ್ ನಲ್ಲಿ ಕನ್ನಡ ಮಾಯವಾಗಿ ತುಳು ಮತ್ತು ಸಂಸ್ಕೃತ ಪ್ರತ್ಯಕ್ಷವಾಗಿತ್ತು. ಇದು ಕೃಷ್ಣ ಮಠದ ಭಕ್ತರು ಮತ್ತು ಕನ್ನಡ ಸಾಹಿತ್ಯ ಪರಿಷತ್ತಿಗೆ ನೋವುಂಟು ಮಾಡಿತ್ತು.

    ಇದೀಗ ಕೃಷ್ಣಮಠದ ಮಹಾದ್ವಾರಕ್ಕೆ ಕನ್ನಡದ ನಾಮಫಲಕ ಅಳವಡಿಕೆ ಆಗಿದೆ. ಕೃಷ್ಣ ಮಠ ಮತ್ತು ಅದಮಾರು ಮಠದ ಸಿಬ್ಬಂದಿ ಹೊಸ ನಾಮಫಲಕವನ್ನು ಹಾಕಿದ್ದಾರೆ. ‘ವಿಶ್ವಗುರು ಶ್ರೀ ಮನ್ಮಧ್ವಾಚಾರ್ಯ ಮೂಲ ಸಂಸ್ಥಾನ ಶ್ರೀ ಕೃಷ್ಣ ಮಠ ಉಡುಪಿ’ ಎಂದು ಬರೆದಿರುವ ಬೋರ್ಡನ್ನು ಅಳವಡಿಸಲಾಗಿದೆ.

    ಲಕ್ಷದೀಪೋತ್ಸವ ಸಂದರ್ಭ ಕನ್ನಡದ ಬೋರ್ಡ್ ಸಿದ್ಧವಾಗಿರಲಿಲ್ಲ. ಮೊದಲು ರೆಡಿಯಾಗಿದ್ದ ಸಂಸ್ಕೃತ ಮತ್ತು ತುಳುವಿನ ಬೋರ್ಡನ್ನು ಅಳವಡಿಸಿದ್ದೆವು. ಬೋರ್ಡ್ ರಚನೆ ಕಾರ್ಯ ಈಗ ಸಂಪೂರ್ಣವಾಗಿದೆ. ಇದೀಗ ಕನ್ನಡದಲ್ಲಿ ಬರೆದಿರುವ ಬೋರ್ಡ್ ರೆಡಿಯಾಗಿದ್ದು, ಅದನ್ನು ಅಳವಡಿಸುವ ಪ್ರಕ್ರಿಯೆ ನಡೆಸಿದ್ದೇವೆ. ಯಾರಿಗೂ ನೋವು ಮಾಡುವ, ಕನ್ನಡಕ್ಕೆ ಅಗೌರವ ತೋರುವ ಉದ್ದೇಶ ನಮ್ಮದಲ್ಲ ಎಂದು ಮಠದ ವ್ಯವಸ್ಥಾಪಕ ಗೋವಿಂದರಾಜ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

  • ಉಡುಪಿಯಲ್ಲಿ ಪೇಜಾವರ ಶ್ರೀಗಳ ಸ್ಮಾರಕಕ್ಕೆ ಸಾರ್ವಜನಿಕರ ಒತ್ತಾಯ

    ಉಡುಪಿಯಲ್ಲಿ ಪೇಜಾವರ ಶ್ರೀಗಳ ಸ್ಮಾರಕಕ್ಕೆ ಸಾರ್ವಜನಿಕರ ಒತ್ತಾಯ

    ಉಡುಪಿ: ರಾಷ್ಟ್ರಸಂತ ಪೇಜಾವರ ಶ್ರೀಗಳು ಕೃಷ್ಣೈಕ್ಯರಾಗಿ ಎಂಟು ದಿನಗಳು ಕಳೆದಿದೆ. ಉಡುಪಿಯಲ್ಲಿ ಶ್ರೀಗಳ ನುಡಿನಮನ, ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯುತ್ತಿದೆ.

    ವಿಶ್ವೇಶತೀರ್ಥರೇ ಕಟ್ಟಿಸಿದ ಮಠದ ರಾಜಾಂಗಣದಲ್ಲಿ ಶ್ರೀಗಳಿಗೆ ಉಡುಪಿಯ ಜನತೆ, ಜನಪ್ರತಿನಿಧಿಗಳು, ಗಣ್ಯರ ಕಡೆಯಿಂದ ನುಡಿನಮನ ನಡೆದಿದೆ. ನುಡಿನಮನ ಕಾರ್ಯಕ್ರಮದಲ್ಲಿ ಉಡುಪಿಯಲ್ಲಿ ಪೇಜಾವರ ಶ್ರೀಗಳ ಸ್ಮಾರಕಕ್ಕೆ ಸಾರ್ವಜನಿಕರಿಂದ ಒತ್ತಾಯ ಕೇಳಿಬಂದಿದೆ.

    ಸಾರ್ವಜನಿಕರ ಒತ್ತಾಯಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಶ್ರೀಗಳನ್ನು ಮಹಾತ್ಮನಿಗೆ ಹೋಲಿಸಿದರು. ಪೇಜಾವರ ಶ್ರೀಗಳ ಜೀವನವೇ ಒಂದು ಪಾಠ. ಅವರ ಪ್ರವಚನ ಅನುಸರಿಸುವ ಅಗತ್ಯವಿಲ್ಲ. ಅವರ ಜೀವನ ಪದ್ಧತಿ ಮತ್ತು ಬದ್ಧತೆ ಅನುಕರಣೆ ಮಾಡಿದರೆ ಸಾಕು ಎಂದರು.

    ಪೇಜಾವರ ಶ್ರೀಗಳು ಜನಮಾನಸದಲ್ಲಿ ಉಳಿಯಬೇಕು. ಅಷ್ಟ ಮಠದ ಶ್ರೀಗಳು ಈ ಬಗ್ಗೆ ಚರ್ಚೆ ಮಾಡುತ್ತೇವೆ. ಸ್ಮಾರಕ ನಿರ್ಮಾಣ, ಅದರ ರೂಪುರೇಷೆ ಬಗ್ಗೆ ಚರ್ಚೆ ಮಾಡುತ್ತೇವೆ. ಪೇಜಾವರ ಶ್ರೀಗಳನ್ನು ಪಡೆದ ಉಡುಪಿ ಧನ್ಯ. ಅವರನ್ನು ಕಳೆದುಕೊಂಡು ಎಲ್ಲಾ ಕ್ಷೇತ್ರಗಳಿಗೆ ಅನಾಥ ಪ್ರಜ್ಞೆ ಕಾಡುತ್ತಿದೆ ಎಂದು ಪರ್ಯಾಯ ಪಲಿಮಾರು ವಿದ್ಯಾಧೀಶ ಸ್ವಾಮೀಜಿ ನುಡಿನಮನ ಅರ್ಪಿಸಿದರು.

    ಸಾವಿರಾರು ಜನ ವಿಶ್ವೇಶತೀರ್ಥ ಸ್ವಾಮೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಪೇಜಾವರ ಶ್ರೀಗಳ ಸ್ಮಾರಕ ಕೃಷ್ಣ ಮಠದಲ್ಲಿ ಸ್ಥಾಪನೆಯಾಗಬೇಕೋ, ಉಡುಪಿಯ ನಗರ ಪ್ರದೇಶದಲ್ಲಿ ಸ್ಥಾಪನೆ ಮಾಡಬೇಕೋ ಎಂಬ ಚರ್ಚೆ ಶುರುವಾಗಿದೆ. ಸ್ಮಾರಕ ನಿರ್ಮಾಣ ಮಾಡಬೇಕಾ ಅಥವಾ ಬೃಂದಾವನ ನಿರ್ಮಾಣ ಆಗಬೇಕಾ ಎಂಬ ಬಗ್ಗೆ ಕೂಡಾ ಚರ್ಚೆಗಳು ನಡೆಯುತ್ತಿವೆ.

  • ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಪಾರ್ಥಿವ ಶರೀರ – ವಿದ್ಯಾಪೀಠದಲ್ಲಿ ಪಾಸ್ ಇದ್ದವರಿಗೆ ಮಾತ್ರ ಅನುಮತಿ

    ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಪಾರ್ಥಿವ ಶರೀರ – ವಿದ್ಯಾಪೀಠದಲ್ಲಿ ಪಾಸ್ ಇದ್ದವರಿಗೆ ಮಾತ್ರ ಅನುಮತಿ

    ಬೆಂಗಳೂರು: ಇಂದು ಬೆಳಗ್ಗೆ ಕೃಷ್ಣೈಕ್ಯರಾದ ಪೇಜಾವರ ವಿಶ್ವೇಶ ತೀರ್ಥ ಶ್ರೀಗಳ ಪಾರ್ಥಿವ ಶರೀರವನ್ನು ಬಸವನಗುಡಿಯ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಸಾರ್ವಜನಿಕ ದರ್ಶಕ್ಕೆ ಇಡಲಾಗಿದೆ.

    ಆದಿ ಉಡುಪಿಯಿಂದ ಪಾರ್ಥಿವ ಶರೀರವನ್ನು ಹೊತ್ತುಕೊಂಡು ಬಂದ ವಾಯು ಸೇನಾ ಪಡೆಯ ಹೆಲಿಕಾಪ್ಟರ್ ಮಧ್ಯಾಹ್ನ 3:35ಕ್ಕೆ ಎಚ್‍ಎಎಲ್ ತಲುಪಿತು. ಇಲ್ಲಿಂದ ಅಲಕೃಂತಗೊಂಡ ತೆರೆದ ವಾಹನದಲ್ಲಿ ಮೃತ ಶರೀರವನ್ನು ಬಸವನಗುಡಿಯ ನ್ಯಾಷನಲ್ ಕಾಲೇಜಿನ ಮೈದಾನಕ್ಕೆ ತರಲಾಯಿತು.

    ಸಂಜೆ 5:30ರ ವರೆಗೆ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು ಬಳಿಕ ಮೆರವಣಿಗೆಯೊಂದಿಗೆ ವಿದ್ಯಾಪೀಠಕ್ಕೆ ತರಲಾಗುತ್ತದೆ. ರಾಘವೇಂದ್ರ, ಕೃಷ್ಣ, ಮದ್ವಚಾರ್ಯರ ಮೂರ್ತಿಗೆ ಪೂಜೆ ಮಾಡಿದ ಬಳಿಕ ಅಂತ್ಯ ಕ್ರಿಯೆ ನಡೆಯಲಿದೆ.

    ಪೇಜಾವರ ಶ್ರೀಗಳ ಪೂಜಾ ಸಾಮಾಗ್ರಿ, ಅವರ ಪೀಠ, ಶ್ರೀ ಕೃಷ್ಣನ ಪೂಜೆಗೆ ಉಪಯೋಗಿಸುತ್ತಿದ್ದ ಪೂಜಾ ಪರಿಕರ ಉಡುಪಿಯಿಂದ ಈಗಾಗಲೇ ಬೆಂಗಳೂರಿಗೆ ಬಂದಿದೆ.

    ವಿದ್ಯಾಪೀಠದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಈಗ ಯಾರನ್ನೂ ಒಳಗಡೆ ಬಿಡುತ್ತಿಲ್ಲ. ಗೇಟ್ ಬಳಿಯೇ ಪೊಲೀಸರು ತಡೆಯುತ್ತಿದ್ದು ಪಾಸ್ ಹೊಂದಿರುವ ಭಕ್ತರನ್ನು ಮಾತ್ರ ಒಳಗಡೆ ಬಿಡುತ್ತಿದ್ದಾರೆ.

  • ಶಿರೂರು ಪಟ್ಟದ ದೇವರು ಸೋದೆ ಮಠಕ್ಕೆ ಹಸ್ತಾಂತರ

    ಶಿರೂರು ಪಟ್ಟದ ದೇವರು ಸೋದೆ ಮಠಕ್ಕೆ ಹಸ್ತಾಂತರ

    ಉಡುಪಿ: ಪಟ್ಟದ ದೇವರಾದ ವಿಠ್ಠಲ ದೇವರ ವಿಗ್ರಹವನ್ನು ಇಂದು ಕೃಷ್ಣಮಠದಿಂದ ಶಿರೂರು ಮಠದ ದ್ವಂದ್ವ ಮಠವಾಗಿರುವ ಸೋದೆ ಮಠಕ್ಕೆ ಹಸ್ತಾಂತರ ಮಾಡಿದ್ದಾರೆ.

    ಉಡುಪಿಯ ಅಷ್ಟ ಮಠಗಳಲ್ಲೊಂದಾದ ಶಿರೂರು ಮಠಾಧೀಶ ಲಕ್ಷ್ಮೀವರ ತೀರ್ಥ ಶ್ರೀಪಾದರು ವೃಂದಾವನಸ್ಥರಾದ ಮೇಲೆ ಪಟ್ಟದ ದೇವರು ದ್ವಂದ್ವ ಮಠಕ್ಕೆ ಹಸ್ತಾಂತರ ಆಗಬೇಕು. ಈ ಹಿನ್ನೆಲೆಯಲ್ಲಿ ಅನ್ನವಿಠಲ ದೇವರನ್ನು ದ್ವಂದ್ವ ಮಠವಾದ ಸೋದೆ ವಿಶ್ವವಲ್ಲಭ ತೀರ್ಥ ಶ್ರೀಪಾದರ ಪಾಲಾಗಿದೆ.

    ನಾಲ್ಕು ತಿಂಗಳಿಂದ ಕೃಷ್ಣಮಠದಲ್ಲೇ ಪೂಜಿಸಲ್ಪಡುತ್ತಿದ್ದ ಶಿರೂರು ಮಠದ ಅನ್ನ ವಿಠಲ ದೇವರನ್ನು ಕೃಷ್ಣಮಠದಿಂದ ವಿಶ್ವವಲ್ಲಭ ತೀರ್ಥ ಶ್ರೀಗಳು ಪಡೆದು ಉತ್ತರ ಕನ್ನಡ ಜಿಲ್ಲೆಯ ಸೋದೆ ಮಠಕ್ಕೆ ಕೊಂಡೊಯ್ದು ಪೂಜೆ ಸಲ್ಲಿಸುತ್ತಿದ್ದಾರೆ.

    ಪರ್ಯಾಯ ಪಲಿಮಾರು ವಿದ್ಯಾಧೀಶ ಶ್ರೀಗಳು ಪಟ್ಟದ ದೇವರನ್ನು ಹಸ್ತಾಂತರ ಮಾಡಿದ್ದಾರೆ. ಶೀರೂರು ಮಠಕ್ಕೆ ನೂತನ ಉತ್ತರಾಧಿಕಾರಿ ನೇಮಕದ ತನಕ ಸೋದೆ ಶ್ರೀಗಳಿಂದ ಪಟ್ಟದ ದೇವರಿಗೆ ಪೂಜೆ ನಡೆಯಲಿದೆ. ಶಿರೂರು ಸಾವಿಗೂ ಮುನ್ನ ಪಟ್ಟದ ದೇವರ ಹಸ್ತಾಂತರ ವಿಚಾರಕ್ಕೆ ಭಾರೀ ವಿವಾದ ಏರ್ಪಟ್ಟಿತ್ತು. ಅನ್ನ ವಿಠಲ ದೇವರ ವಿಗ್ರಹಕ್ಕಾಗಿ ಪಟ್ಟು ಹಿಡಿದಿದ್ದ ಶಿರೂರು ಶ್ರೀಗಳು ಕೋರ್ಟ್ ಮೆಟ್ಟಿಲು ಸಹ ಏರಿದ್ದರು. ಆದರೆ ವಿವಾದದಲ್ಲಿರುವಾಗಲೇ ಶಿರೂರು ಶ್ರೀ ಸಾವನ್ನಪ್ಪಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews