Tag: Krishna Janmashtami

  • ಕೃಷ್ಣಾಷ್ಟಮಿ ಮೆರವಣಿಗೆ ವೇಳೆ ರಥಕ್ಕೆ ವಿದ್ಯುತ್‌ ತಂತಿ ತಗುಲಿ ಅವಘಡ – ಐವರು ಸಾವು

    ಕೃಷ್ಣಾಷ್ಟಮಿ ಮೆರವಣಿಗೆ ವೇಳೆ ರಥಕ್ಕೆ ವಿದ್ಯುತ್‌ ತಂತಿ ತಗುಲಿ ಅವಘಡ – ಐವರು ಸಾವು

    ಹೈದರಾಬಾದ್: ಕೃಷ್ಣ ಜನ್ಮಾಷ್ಟಮಿ (Krishna Janmashtami) ಆಚರಣೆಯ ಭಾಗವಾಗಿ ನಡೆದ ಮೆರವಣಿಗೆ ವೇಳೆ ರಥಕ್ಕೆ (Chariot) ವಿದ್ಯುತ್‌ ತಂತಿ ತಗುಲಿ ಕನಿಷ್ಠ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.

    ಮೃತರನ್ನು ಕೃಷ್ಣಯಾದವ್ (21), ಸುರೇಶ್ ಯಾದವ್ (34), ಶ್ರೀಕಾಂತ್ ರೆಡ್ಡಿ (35), ರುದ್ರ ವಿಕಾಸ್ (39), ಮತ್ತು ರಾಜೇಂದ್ರ ರೆಡ್ಡಿ (45) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಟ್ರಾಫಿಕ್‌ ಸಮಸ್ಯೆಗೆ ಕೊನೆಗೂ ಮುಕ್ತಿ – 700 ಮೀಟರ್ ಉದ್ದದ ಹೆಬ್ಬಾಳ ಮೇಲ್ಸೇತುವೆ ಇಂದು ಉದ್ಘಾಟನೆ

    ರಾಮಂತಪುರದ ಗೋಕುಲನಗರದಲ್ಲಿ ತಡರಾತ್ರಿ 12 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: Rain Alert | ರಾಜ್ಯದಲ್ಲಿ ಮುಂದಿನ 5 ದಿನ ಭಾರಿ ಮಳೆ – ಮಲೆನಾಡು ಭಾಗದಲ್ಲಿ ರೆಡ್‌ ಅಲರ್ಟ್‌

    ಮೂಲಗಳ ಪ್ರಕಾರ, ವಿದ್ಯುತ್‌ ಅವಘಡದಿಂದ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರ ಶವಗಳನ್ನ ಮರಣೋತ್ತರ ಪರೀಕ್ಷೆಗಾಗಿ ಗಾಂಧಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಇದನ್ನೂ ಓದಿ: ರಷ್ಯಾ ಮಾರಾಟ ಮಾಡಿದ್ದ ಅಲಾಸ್ಕಾ ಈಗ ಅಮೆರಿಕಾದ ಚಿನ್ನದ ಮೊಟ್ಟೆ!

  • ಮಂತ್ರಾಲಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ – ಪಿಂಡ್ಲಿ ಉತ್ಸವದಲ್ಲಿ ಶ್ರೀಗಳು ಭಾಗಿ

    ಮಂತ್ರಾಲಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ – ಪಿಂಡ್ಲಿ ಉತ್ಸವದಲ್ಲಿ ಶ್ರೀಗಳು ಭಾಗಿ

    ರಾಯಚೂರು: ಮಂತ್ರಾಲಯ (Mantralya) ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನ (Krishna Janmashtami) ಸಂಭ್ರಮ ಸಡಗರದಿಂದ ಆಚರಿಸಲಾಗಿದೆ. ಕೃಷ್ಣನ ಪೂಜೆಗೂ ಮುನ್ನ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ಶ್ರೀಗಳ (Subudhendra Teertha Swamiji) ನೇತೃತ್ವದಲ್ಲಿ ಪಿಂಡ್ಲಿ ಉತ್ಸವ ಅದ್ಧೂರಿಯಾಗಿ ನೆರವೇರಿತು. ಮಠದ ಹೊರಗೆ ರಾಜ ಬೀದಿಯಲ್ಲಿ ಪಿಂಡ್ಲಿ ಉತ್ಸವ ಆಯೋಜಿಸಲಾಗಿತ್ತು.

    ಸ್ವತಃ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಶ್ರೀಗಳು ಪಿಂಡ್ಲಿ ಉತ್ಸವದಲ್ಲಿ ಪಾಲ್ಗೊಂಡು ಮೊಸರು, ಹಾಲು, ಬೆಣ್ಣೆ ತುಂಬಿದ ಮಡಿಕೆಯನ್ನ ಒಡೆದರು. ಉತ್ಸವದಲ್ಲಿ ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠದ ವಿದ್ಯಾರ್ಥಿಗಳು ಹಾಗೂ ಮಠದ ಸಿಬ್ಬಂದಿ, ಭಕ್ತರು ಭಾಗವಹಿಸಿದ್ದರು. ವಿದ್ಯಾರ್ಥಿಗಳು ನಿರಂತರ ಎರಚುವ ಓಕಳಿ ಮಧ್ಯೆಯೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಗಡಿಗಿ ಒಡೆಯುವ ಸ್ಪರ್ಧೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಬಳಿಕ ಮಠದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ವಿಶೇಷ ಪೂಜಾ ಕೈಂಕರ್ಯಗಳನ್ನ ನೆರವೇರಿಸಲಾಯಿತು. ಇದನ್ನೂ ಓದಿ: ವರದಕ್ಷಿಣೆ ಕಿರುಕುಳದ ಆರೋಪ – ಮಗುವಿನ ಎದುರೇ ತಾಯಿ ನೇಣಿಗೆ ಶರಣು

    ಇನ್ನೂ ರಾಯಚೂರು ಜಿಲ್ಲೆಯ ಎಲ್ಲೆಡೆ ಕೃಷ್ಣ ಜನ್ಮಾಷ್ಠಮಿ ಸಂಭ್ರಮ ಮನೆ ಮಾಡಿತ್ತು. ನಗರದ ಗೀತಾ ಮಂದಿರ, ಶ್ರೀಕೃಷ್ಣ ದೇವಸ್ಥಾನದಲ್ಲಿ ವಿಶೇಷ ಪೂಜೆಗಳನ್ನ ನೆರವೇರಿಸಲಾಯಿತು. ಪುಟ್ಟಮಕ್ಕಳು ಕೃಷ್ಣ ರಾಧ ವೇಷಧರಿಸಿ ಸಂಭ್ರಮಿಸಿದರು. ಇದನ್ನೂ ಓದಿ: ಬಂಧನ ಬಳಿಕ ದರ್ಶನ್, ಪವಿತ್ರಾ ಗೌಡ ಮೊದಲ ಫೋಟೋ ವೈರಲ್

  • ಹಿಂದೂ – ಮುಸ್ಲಿಂ ಭಾವೈಕ್ಯತೆ | ಉರ್ದು ಶಾಲೆಯಲ್ಲಿ ಕೃಷ್ಣ – ರಾಧೆಯರ ವೇಷದಲ್ಲಿ ಮಿಂಚಿದ ಮಕ್ಕಳು

    ಹಿಂದೂ – ಮುಸ್ಲಿಂ ಭಾವೈಕ್ಯತೆ | ಉರ್ದು ಶಾಲೆಯಲ್ಲಿ ಕೃಷ್ಣ – ರಾಧೆಯರ ವೇಷದಲ್ಲಿ ಮಿಂಚಿದ ಮಕ್ಕಳು

    ಬಳ್ಳಾರಿ: ಹಿಂದೂ, ಮುಸ್ಲಿಂ (Hindu Muslim) ಪರಸ್ಪರ ಭಾವೈಕ್ಯತೆಯಿಂದ ರಾಷ್ಟ್ರೀಯ ಏಕತೆಯನ್ನು ಸಾರಲು ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ ಗ್ರಾಮದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ ಅದ್ದೂರಿ ಶ್ರೀಕೃಷ್ಣ ಜನ್ಮಾಷ್ಟಮಿ (Shri Krishna Janmashtami) ಆಚರಣೆ ಮಾಡಿದ್ದಾರೆ.

    ಕೋಮು ಸೌಹಾರ್ದತೆಯಿಂದ ಇಂತಹ ಕಾರ್ಯಕ್ರಮಗಳನ್ನು ಶಾಲೆಗಳಲ್ಲಿ ಹಮ್ಮಿಕೊಂಡು ರಾಷ್ಟ್ರೀಯ ಏಕತೆ ಮೂಡಿಸುವ ಜೊತೆಗೆ ಪರಸ್ಪರ ಭಾವೈಕ್ಯತೆಯಿಂದ ದೇಶದ ಪ್ರಗತಿಯ ಸಾಧಿಸುವ ದೃಷ್ಟಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಲಾಗಿದೆ. ಮುಸ್ಲಿಮ್‌ (Muslim) ಕುಟುಂಬದ ಮಕ್ಕಳು ಕೃಷ್ಣ ರಾಧೆಯರ (Krishna and Radha) ವೇಷ ತೊಟ್ಟು ಸಂಭ್ರಮಿಸುವ ಮೂಲಕ ಭಾವೈಕ್ಯತೆ ಸಾರಿದರು.

    ಶಿಕ್ಷಕ ರವಿಕುಮಾರ ಸಕ್ರಹಳ್ಳಿ ಮಾತನಾಡಿ ರಾಷ್ಟ್ರೀಯ ಏಕತೆ, ಕೋಮು ಸೌಹಾರ್ದತೆ, ಭಾವೈಕ್ಯತೆಯನ್ನು ಮೂಡಿಸಲು ಪಾಲಕರ ಸಹಕಾರದಿಂದ ಉರ್ದು ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಸಂಭ್ರಮ ಸಡಗರದಿಂದ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. 160 ಮಕ್ಕಳು ಓದುವ ಈ ಶಾಲೆಯಲ್ಲಿ ಗಣೇಶ ಹಬ್ಬ ರಕ್ಷಾ ಬಂಧನ ಶ್ರೀ ಕೃಷ್ಣ ಜನ್ಮಾಷ್ಟಮಿ, ಹಲವಾರು ಸಾಧಕರ ಜಯಂತಿಗಳು ಮುಂತಾದ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಸಡಗರದಿಂದ ಆಚರಿಸುತ್ತೇವೆ ಎಂದರು.  ಇದನ್ನೂ ಓದಿ: ಎಸ್‌ಐಟಿ ಮಧ್ಯಂತರ ವರದಿ ಬಿಡುಗಡೆ ಮಾಡ್ಬೇಕು, ಇಲ್ಲದಿದ್ರೆ ಸದನದಲ್ಲಿ ಹೋರಾಟ: ಆರ್.ಅಶೋಕ್

    ಮುಸ್ಲಿಂ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿರುವ ಉರ್ದು ಶಾಲೆಯಲ್ಲಿ ನೂರಕ್ಕೂ ಅಧಿಕ ಮಕ್ಕಳು ಕೃಷ್ಣ ಮತ್ತು ರಾಧೆಯರ ವೇಷಭೂಷಣ ಧರಿಸಿ ಭಾವೈಕ್ಯತೆ ಸಾಧಿಸಲು ಮುಂದಾಗಿದ್ದು ವಿಶೇಷವಾಗಿತ್ತು.

  • ಇಸ್ಕಾನ್ ದೇವಾಲಯಕ್ಕೆ ಶೋಭಾ ಕರಂದ್ಲಾಜೆ ಭೇಟಿ – ಕೃಷ್ಣನ ತೊಟ್ಟಿಲು ತೂಗಿ ಭಕ್ತಿ ಸಮರ್ಪಣೆ

    ಇಸ್ಕಾನ್ ದೇವಾಲಯಕ್ಕೆ ಶೋಭಾ ಕರಂದ್ಲಾಜೆ ಭೇಟಿ – ಕೃಷ್ಣನ ತೊಟ್ಟಿಲು ತೂಗಿ ಭಕ್ತಿ ಸಮರ್ಪಣೆ

    ಬೆಂಗಳೂರು: ನಾಡಿನೆಲ್ಲೆಡೆ ಇಂದು ಕೃಷ್ಣ ಜನ್ಮಾಷ್ಟಮಿಯ (Krishna Janmashtami) ಸಂಭ್ರಮ ಮನೆ ಮಾಡಿದೆ. ಶ್ರಾವಣ ಮಾಸದ ಅಷ್ಟಮಿಯ ಶುಭ ದಿನದಂದು ದೇವಕಿ ನಂದನನಿಗೆ ಎಲ್ಲೆಡೆ ವಿಶೇಷ ಪೂಜೆ ಸಲ್ಲಿಕೆಯಾಗುತ್ತಿದೆ. ಅದೇ ರೀತಿ ಬೆಂಗಳೂರಿನ ಇಸ್ಕಾನ್ ದೇವಾಲಯದಲ್ಲೂ (ISKCON Temple) ಜನ್ಮಾಷ್ಟಮಿ ವಿಜೃಂಭಣೆಯಿಂದ ನಡೆಯುತ್ತಿದೆ. ಈ ಸಂಧರ್ಭ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಇಸ್ಕಾನ್ ದೇವಾಲಯಕ್ಕೆ ಭೇಟಿ ನೀಡಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮದಲ್ಲಿ ಪಾಲ್ಗೊಂಡರು.

    ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಭಕ್ತರು ಶ್ರೀ ಕೃಷ್ಣನ ಸರಣೆ ಮಾಡುತ್ತಿದ್ದಾರೆ. ಇಸ್ಕಾನ್‌ನಲ್ಲಿ ಮುಂಜಾನೆ 4:3ರಿಂದ ರಾಧಾ-ಕೃಷ್ಣರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಮುಂಜಾನೆ 4:30ಕ್ಕೆ ಕೃಷ್ಣನಿಗೆ ಮಂಗಳಾರತಿಮತ್ತು ತುಳಸಿ ಆರತಿ ಮಾಡಲಾಯಿತು. ಬಳಿಕ 7:30ಕ್ಕೆ ವಿಶೇಷ ಅಭಿಷೇಕ ನೆರವೇರಿಸಲಾಯಿತು. ಜನ್ಮಾಷ್ಟಮಿ ಹಿನ್ನೆಲೆ ಇಂದು ಕೃಷ್ಣನಿಗೆ 4 ವಿಶೇಷ ಅಭಿಷೇಕ ನೆರವೇರಿಸಲಾಗುತ್ತದೆ. ಇಂದು ಬೆಳಗ್ಗೆ 7.30 ರಿಂದ ಮಧ್ಯರಾತ್ರಿ 12 ಗಂಟೆಯವರೆಗೆ ದರ್ಶನಕ್ಕೆ ಅವಕಾಶವಿದೆ. ಇದನ್ನೂ ಓದಿ: ದರ್ಶನ್‌ಗೆ ಜೈಲಿನಲ್ಲಿ ರಾಜಾತಿಥ್ಯ – 7 ಮಂದಿ ಅಮಾನತು

    ಇನ್ನು ಇಸ್ಕಾನ್‌ನಲ್ಲಿ ದೇವರ ದರ್ಶನ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶೋಭಾ ಕರಂದ್ಲಾಜೆ, ದುಷ್ಟರನ್ನು ಸಂಹಾರ ಮಾಡಿ ಶಿಷ್ಟರನ್ನು ರಕ್ಷಿಸುವುದು ಕೃಷ್ಣನ ಕೆಲಸ. ದುಷ್ಟರನ್ನು ಸಂಹಾರ ಮಾಡಿ, ಶಿಷ್ಟರನ್ನು ರಕ್ಷಿಸೋ ಕೆಲಸ ಕೃಷ್ಣ ಮಾಡ್ತಾನೆ ಅನ್ನೋ ವಿಶ್ವಾಸವಿದೆ. ಭಾರತವನ್ನು ಇನ್ನಷ್ಟು ಶಕ್ತಿಶಾಲಿಯಾಗಿ ಮಾಡಲಿ ಎಂದರು. ಇದನ್ನೂ ಓದಿ: ಕೃಷ್ಣಾ ನದಿ ತೀರದಲ್ಲಿ ಮತ್ತೆ ಪ್ರವಾಹ ಭೀತಿ – ಬಸವಸಾಗರ ಜಲಾಶಯದಿಂದ ಭಾರಿ ಪ್ರಮಾಣದ ನೀರು ಬಿಡುಗಡೆ

  • ದೇವಭೂಮಿ ʻದ್ವಾರಕೆʼಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ…

    ದೇವಭೂಮಿ ʻದ್ವಾರಕೆʼಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ…

    ದೇಶಾದ್ಯಂತ ಇಂದು ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ ಮನೆ ಮಾಡಿದೆ. ಈ ಸಂದರ್ಭದಲ್ಲಿ ಕೃಷ್ಣನ ಮಹಿಮೆಯ ಸ್ಥಳ ಬಗ್ಗೆ ತಿಳಿಯುವುದು ಅತ್ಯವಶ್ಯಕವೂ ಆಗಿದೆ. ʻದ್ವಾರಕೆʼ ಎಂದೊಡನೆ ನೆನಪಾಗೋದು ಮಹಾಭಾರತ. ದೇವಭೂಮಿ ಎಂದೇ ಕರೆಸಿಕೊಳ್ಳುವ ದ್ವಾರಕೆ ಈಗಲೂ ಶ್ರೀಕೃಷ್ಣನ ಧಾಮವಾಗಿ ಸುಪ್ರಸಿದ್ಧವಾಗಿದೆ. ಪ್ರತಿವರ್ಷ ಲಕ್ಷಾಂತರ ಭಕ್ತರು ಈ ದೇವಭೂಮಿಗೆ ಭೇಟಿ ನೀಡಿ ಶ್ರೀಕೃಷ್ಣನ ಕೃಪೆಗೆ ಪಾತ್ರರಾಗುತ್ತಾರೆ. ಈ ದಿನ ಕೃಷ್ಣಜನ್ಮಾಷ್ಟಮಿಯಲ್ಲಿ ಇಲ್ಲಿ ವೈಭವೋಪೇತವಾಗಿ ಆಚರಿಸಲಾಗುತ್ತಿದ್ದು, ದೇಶ ವಿದೇಶಗಳಿಂದ ಸಹಸ್ರಾರು ಭಕ್ತರು ಕೃಷ್ಣನ ದರ್ಶನಕ್ಕೆ ದಾಂಗುಡಿ ಇಡುತ್ತಿದ್ದಾರೆ. ʻದ್ವಾರಕಾʼ (Dwarka) ಎಂದರೆ ಸ್ವರ್ಗದ ದ್ವಾರ ಎಂದು ಅರ್ಥ. ಮಹಾಭಾರತದ ಪ್ರಕಾರ ಈ ಜಾಗದ ಪೂರ್ವನಾಮ ಕುಶಸ್ಥಲಿ. ಹಿಂದೂ ಸಂಪ್ರದಾಯದ ಪವಿತ್ರ ಸಪ್ತಪುರಿಗಳಲ್ಲಿ ಒಂದಾಗಿರುವ ಕಾರಣ ಇದು ಮೋಕ್ಷಪುರಿ.

    ಶ್ರೀ ಶಂಕರಾಚಾರ್ಯರು ಸ್ಥಾಪಿಸಿದ್ದ ನಾಲ್ಕು ಪೀಠಗಳಲ್ಲಿ ಪಾಶ್ಚಿಮಾತ್ಯ ಶಾರದಾ ಪೀಠ ಇರುವುದು ಇಲ್ಲಿಯೇ. ಹಿಂದೂ ಧರ್ಮೀಯರಿಗೆ ಮಾತ್ರವೇ ಅಲ್ಲ, ಜೈನ ಮತ್ತು ಬೌದ್ಧ ಧರ್ಮಗಳಲ್ಲೂ ಪವಿತ್ರವಾಗಿರುವ ಕ್ಷೇತ್ರ ಈ ದ್ವಾರಕೆ. ಎಲ್ಲಕ್ಕಿಂತ ಹೆಚ್ಚಾಗಿ ದ್ವಾರಕೆ ಶ್ರೀಕೃಷ್ಣನ ರಾಜಧಾನಿಯಾಗಿತ್ತು. ಇದು ಸಾಕ್ಷಾತ್ ಭಗವಂತನ ಕರ್ಮಭೂಮಿ! ಯದುವಂಶದ ಕೊನೆಯ ನೆಲೆ ಇದು. ಶ್ರೀಕೃಷ್ಣನ ಅವತಾರ ಸಮಾಪ್ತಿಯ ಬಳಿಕ ಈ ಪಟ್ಟಣವನ್ನು ಸಮುದ್ರ ನುಂಗಿತ್ತು ಎಂದು ಪುರಾಣಗಳಲ್ಲಿ ಉಲ್ಲೇಖವಾಗಿದೆ.

    ಪುರಾಣಗಳ ದ್ವಾರಕೆ ಇಂದು ಗುಜರಾತ್ ರಾಜ್ಯದ ನೈಋತ್ಯ ಭಾಗದಲ್ಲಿರುವ ಒಂದು ಪಟ್ಟಣ. ಈ ಪ್ರದೇಶಕ್ಕೆ ದೇವಭೂಮಿ ದ್ವಾರಕಾ ಜಿಲ್ಲೆ ಎಂದು ಹೆಸರಿದೆ. ಇಲ್ಲಿರುವ ಶ್ರೀಕೃಷ್ಣನ ಪವಿತ್ರ ಕ್ಷೇತ್ರಗಳಲ್ಲಿ ದ್ವಾರಕಾಧೀಶ ಮಂದಿರ ಅತ್ಯಂತ ಮಹತ್ವದ್ದಾಗಿದೆ. ಹಾಗಿದ್ದರೇ ಆ ದ್ವಾರಕಾಧೀಶ ಮಂದಿರದ ಬಗ್ಗೆ ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ..

    ದ್ವಾರಕಾಧೀಶ ಮಂದಿರ
    ದ್ವಾರಕೆಯ ಆರಾಧ್ಯದೈವವಾದ ಶ್ರೀಕೃಷ್ಣನ ದೇವಾಲಯಕ್ಕೆ ದ್ವಾರಕಾಧೀಶ ಮಂದಿರ ಎಂದು ಹೆಸರು. ಈ ದೇವಾಲಯ ಇರುವುದು ಗೋಮತೀ ನದಿಯ ಸಂಗಮಕ್ಷೇತ್ರದಲ್ಲಿ, ದೇಶ-ವಿದೇಶಗಳಿಂದ ಭಕ್ತರನ್ನು ಆಕರ್ಷಿಸುತ್ತಿರುವ ಪ್ರಾಚೀನ ದೇವಾಲಯ ಇದು. ದ್ವಾರಕಾಧೀಶ ಮಂದಿರದ ಗೋಪುರವನ್ನು 16ನೇ ಶತಮಾನದಲ್ಲಿ ರಾಜಾ ಜಗತ್ ಸಿಂಗ್ ರಾಠೋಡ್ ಕಟ್ಟಿಸಿದ್ದ ಕಾರಣ ಇದಕ್ಕೆ ಜಗನ್ಮಂದಿರ ಮತ್ತು ನಿಜ ಮಂದಿರ ಎಂಬ ಹೆಸರುಗಳೂ ಇವೆ.

    ಸ್ಥಳಪುರಾಣದ ಪ್ರಕಾರ ಈ ಜಾಗದಲ್ಲಿ 2,500 ವರ್ಷಗಳ ಪುರಾತನ ದೇವಾಲಯ ಇತ್ತು. ಹರಿಗೃಹ (ಶ್ರೀಕೃಷ್ಣನ ಅರಮನೆ) ಇದ್ದ ಜಾಗದಲ್ಲಿ ಅವನ ಮರಿ ಮೊಮ್ಮಗ ವಜ್ರನಾಭ ಮೂಲ ದೇವಾಲಯವನ್ನು ನಿರ್ಮಿಸಿದ. ಆರಂಭದಲ್ಲಿ ದೇವಾಲಯ ಛತ್ರಿಯ ಆಕಾರದಲ್ಲಿತ್ತು. ವರ್ಷಾಂತರಗಳಲ್ಲಿ ಇದು ಅನೇಕಾನೇಕ ಬದಲಾವಣೆಗಳನ್ನು ಕಂಡಿದೆ. ಪಶ್ಚಿಮಾಭಿಮುಖವಾಗಿ ನಿರ್ಮಾಣವಾಗಿರುವ ದ್ವಾರಕಾಧೀಶ ದೇವಾಲಯ ಒಂದು ಸುಂದರ ಭವನ. ಸಮುದ್ರ ಮಟ್ಟದಿಂದ 70 ಅಡಿ ಎತ್ತರದಲ್ಲಿರುವ ಸುಮಾರು 6,000 ಚದರಡಿ ವಿಸ್ತೀರ್ಣದ ದ್ವಾರಕಾಧೀಶ ಮಂದಿರದ ಗರ್ಭಗೃಹಕ್ಕೆ ನಿಜಮಂದಿರ ಅಥವಾ ಹರಿಗೃಹ ಎಂದು ಹೆಸರಿದೆ. ಇದರೊಳಗೆ ಅಂತರಾಳ ಎಂಬ ಗುಪ್ತ ಕೊಠಡಿ ಇದೆ. ಮಂದಿರದ ನಡುವೆ ವಿಶಾಲ ಸಭಾಂಗಣ ಇದೆ.

    16ನೇ ಶತಮಾನದಲ್ಲಿ ನಿರ್ಮಾಣವಾದ ದೇವಾಲಯದ ಎರಡು ಗೋಪುರಗಳ ಮೇಲೆ ಸುಂದರ ಶಿಲ್ಪಗಳ ಅಲಂಕಾರವಿದೆ. ಇವುಗಳಲ್ಲಿ 52 ಮೀಟರ್ (170 ಅಡಿ) ಎತ್ತರದ 7 ಮಾಳಿಗೆಗಳ ಹಿರಿಯ ಗೋಪುರಕ್ಕೆ ʻಲಡ್ವಾ ಶಿಖ‌ರ್’ ಎಂದು ಹೆಸರು. 157 ಅಡಿ ಎತ್ತರದ, 5 ಮಾಳಿಗೆಗಳ ಕಿರಿಯ ಗೋಪುರಕ್ಕೆ ʻನಿಜಶಿಖ‌ರ್’ ಎಂದು ಹೆಸರು.

    ಏಳು ಮಾಳಿಗೆಗಳ ಗೋಪುರವನ್ನು 72 ಕಗ್ಗಲ್ಲಿನ ಅಲಂಕೃತ ಸ್ತಂಭಗಳು ಆಧರಿಸಿ ಹಿಡಿದಿವೆ. ಐದು ಮಾಳಿಗೆಗಳ ನಿಜಶಿಖರದ ಆಧಾರವಾಗಿ 60 ಸ್ತಂಭಗಳಿವೆ. ಈ ಗೋಪುರದ ಕೆಳಗೆ ದ್ವಾರಕಾಧೀಶನ ಗರ್ಭಗುಡಿ ಇದೆ. ಭಕ್ತರು 56 ಮೆಟ್ಟಲುಗಳನ್ನು ಹತ್ತಿ ದೇವಾಲಯ ತಲುಪುತ್ತಾರೆ. ಯಾದವ ರಾಜ್ಯದ 52 ಆಡಳಿತ ವಿಭಾಗಗಳು ಮತ್ತು ಕೃಷ್ಣ, ಬಲರಾಮ, ಪ್ರದ್ಯುಮ್ನ ಹಾಗೂ ಅನಿರುದ್ಧರನ್ನು ಈ ಮೆಟ್ಟಲುಗಳು ಸೂಚಿಸುತ್ತವೆ.

    ದೇವಾಲಯಕ್ಕೆ ಎರಡು ಮುಖ್ಯದ್ವಾರಗಳಿವೆ. ಮಾರುಕಟ್ಟೆಯತ್ತ ತೆರೆದುಕೊಳ್ಳುವ ಉತ್ತರಾಭಿಮುಖವಾದ ಪ್ರವೇಶದ್ವಾರಕ್ಕೆ ʻಮೋಕ್ಷದ್ವಾರ’ ಎಂದು ಹೆಸರು, ದಕ್ಷಿಣಾಭಿಮುಖವಾದ ಪ್ರವೇಶದ್ವಾರಕ್ಕೆ ʻಸ್ವರ್ಗದ್ವಾರ’ ಎಂದು ಹೆಸರು. ಇದು ಗೋಮತೀ ನದಿಯತ್ತ ತೆರೆದುಕೊಳ್ಳುತ್ತದೆ. ಭಕ್ತರು ಗೋಮತೀ ನದಿಯಲ್ಲಿ ಮುಳುಗೆದ್ದು ಶ್ರೀಕೃಷ್ಣನ ದರ್ಶನಕ್ಕೆ ಹೋಗಬೇಕು ಎಂಬ ನಿಯಮ ಇದೆ.

    ಗರ್ಭಗುಡಿಯಲ್ಲಿರುವ ದ್ವಾರಕಾಧೀಶನ ವಿಗ್ರಹ ವಿಷ್ಣುವಿನಂತೆ ಚತುರ್ಭುಜದ್ದಾಗಿದ್ದು, ಶಂಖ, ಚಕ್ರ, ಗದೆ, ಪದ್ಮಗಳನ್ನು ಹಿಡಿದ ತ್ರಿವಿಕ್ರಮ ರೂಪದಲ್ಲಿದೆ. ಪ್ರತಿದಿನ ದ್ವಾರಕಾಧೀಶ ಮೂರ್ತಿಯನ್ನು ವೈಭವೋಪೇತವಾಗಿ ಅಲಂಕರಿಸಲಾಗುತ್ತದೆ. ಶ್ರೀಕೃಷ್ಣ ದ್ವಾರಕೆಯ ರಾಜಕುಮಾರನಾಗಿದ್ದ. ಅವನನ್ನು ಅದೇ ರೀತಿ ಪೂಜಿಸಲಾಗುತ್ತದೆ. ಗರ್ಭಗುಡಿಯ ಹೊರಗೆ ಎಡಭಾಗದ ವೇದಿಕೆಯಲ್ಲಿ ಬಲರಾಮನ ಮೂರ್ತಿ ಇದೆ. ಬಲಭಾಗದಲ್ಲಿ ಪ್ರದ್ಯುಮ್ನ ಮತ್ತು ಅನಿರುದ್ಧ (ಕೃಷ್ಣನ ಮಗ ಮತ್ತು ಮೊಮ್ಮಗ)ರ ವಿಗ್ರಹಗಳಿವೆ.

    ಸಭಾಂಗಣದ ಸುತ್ತ ರಾಧಿಕಾ, ಜಾಂಬವತಿ, ಸತ್ಯಭಾಮೆ, ಲಕ್ಷ್ಮೀದೇವಿ, ಬಲರಾಮ, ಪ್ರದ್ಯುಮ್ನ, ಅನಿರುದ್ಧ ಮಾಧವ ರಾವ್‌ ಜೀ (ಶ್ರೀಕೃಷ್ಣ), ರುಕ್ಕಿಣಿ, ಜುಗಲ್ ಸ್ವರೂಪ್ (ಶ್ರೀಕೃಷ್ಣನ ಇನ್ನೊಂದು ಹೆಸರು), ಶಿವ, ಲಕ್ಷ್ಮೀನಾರಾಯಣ ಮತ್ತು ಸೀತಾದೇವಿಯ ವಿಗ್ರಹಗಳಿರುವ ಪುಟ್ಟ ಗುಡಿಗಳಿವೆ. ದಂತಕಥೆಗಳ ಪ್ರಕಾರ ಶ್ರೀಕೃಷ್ಣನ ಪರಮಭಕ್ತಿ ಮೀರಾಬಾಯಿ ಕೃಷ್ಣನ ಮೂರ್ತಿಯೊಡನೆ ಲೀನವಾಗಿದ್ದು ಇದೇ ದಿವ್ಯ ಮಂದಿರದಲ್ಲಿ ಏಳು ಮಾಳಿಗೆಗಳ ಲಡ್ಡಾ ಶಿಖರ್ ಗೋಪುರದ ಮೇಲಿನ ಧ್ವಜಸ್ತಂಭದಲ್ಲಿ ಸೂರ್ಯ ಮತ್ತು ಚಂದ್ರರ ಚಿತ್ರಗಳಿರುವ ಶ್ರೀಹರಿಧ್ವಜ ಹಾರುತ್ತದೆ. ತ್ರಿಕೋನಾಕೃತಿಯಲ್ಲಿರುವ 50 ಅಡಿ ಅಗಲದ ಧ್ವಜ ಇದು. ಈ ಧ್ವಜವನ್ನು ದಿನಕ್ಕೆ ನಾಲ್ಕು ಬಾರಿ ಬದಲಾಯಿಸಲಾಗುತ್ತದೆ.

    ಮುಖ್ಯ ದ್ವಾರಕಾಧೀಶ ದೇವಾಲಯ ತೆರೆದುಕೊಳ್ಳುವುದು ಬೆಳಗ್ಗೆ 6.30ಕ್ಕೆ. ಬೆಳಗ್ಗಿನ ಮಂಗಳಾರತಿಯ ಬಳಿಕ ಮಧ್ಯಾಹ್ನ 1 ಗಂಟೆಯ ತನಕ ದೇವಾಲಯ ತೆರೆದಿರುತ್ತದೆ. ಮಧ್ಯಾಹ್ನ 1 ಗಂಟೆಗೆ ಬಾಗಿಲು ಹಾಕಿದರೆ ಮತ್ತೆ ತೆರೆಯುವುದು ಸಂಜೆ 5 ಗಂಟೆಗೆ. 5ರಿಂದ ರಾತ್ರಿ 9.30ರ ತನಕ ದೇವಾಲಯ ತೆರೆದಿರುತ್ತದೆ. ದ್ವಾರಕೆಗೆ ಚಳಿಗಾಲ ಮತ್ತು ಬೇಸಗೆಯಲ್ಲಿ ಭೇಟಿ ನೀಡಬಹುದು. ಸಮುದ್ರ ಸಾಮೀಪ್ಯದ ಕಾರಣ ಇಲ್ಲಿ ಸಮಶೀತೋಷ್ಣ ವಾತಾವರಣ ಇರುತ್ತದೆ.

  • ಕೃಷ್ಣ ಜನ್ಮಾಷ್ಟಮಿ: ಬಾಲಕೃಷ್ಣ, ಲೋಲ, ಮುರಳಿ ಕೊಳಲ ಲೀಲ- ಎಲ್ಲೆಲ್ಲೂ ಭಗವಾನ್ ಶ್ರೀಕೃಷ್ಣ ಜಪ

    ಕೃಷ್ಣ ಜನ್ಮಾಷ್ಟಮಿ: ಬಾಲಕೃಷ್ಣ, ಲೋಲ, ಮುರಳಿ ಕೊಳಲ ಲೀಲ- ಎಲ್ಲೆಲ್ಲೂ ಭಗವಾನ್ ಶ್ರೀಕೃಷ್ಣ ಜಪ

    ಲ್ಲೆಲ್ಲೂ ಕೃಷ್ಣ ಜನ್ಮಾಷ್ಟಮಿ (Krishna Janmashtami) ಸಂಭ್ರಮ. ಹರೇ ರಾಮ.. ಹರೇ ಕೃಷ್ಣ.. ಕೃಷ್ಣ ಕೃಷ್ಣ.. ಹರೇ ಹರೇ.. ಎಂದು ಭಜಿಸಿ ಪರಮಾತ್ಮನ ನಾಮ ಸ್ಮರಣೆ ಮಾಡುವ ದಿನ. ಬಾಲ್ಯದಲ್ಲಿ ತುಂಟ, ಪ್ರಾಯ ಪ್ರಣಯದಲ್ಲಿ ರಾಧಾ ಲೋಲ, ವಯಸ್ಸಿನಲ್ಲಿ ಆಪದ್ಭಾಂದವ, ಯುಗ ಯುಗದ ಅವತಾರ ಪುರುಷ. ಶ್ರೀಕೃಷ್ಣನ ಸ್ಮರಣೆಯೆಂದರೆ, ಅದು ಕೊಳಲ ನಿನಾದದಲ್ಲಿನ ತಲ್ಲೀನತೆ.

    ಭಾರತದಲ್ಲಿ ಶ್ರೀಕೃಷ್ಣನ ಜನ್ಮಾಷ್ಟಮಿ ಹಬ್ಬ ತನ್ನದೇ ಆದ ವಿಶೇಷತೆಗಳನ್ನು ಹೊಂದಿದೆ. ಮನೆ ಮನೆಗಳಲ್ಲಿ ಮಕ್ಕಳು ರಾಧಾ-ಕೃಷ್ಣರಾಗುತ್ತಾರೆ. ಮಕ್ಕಳಿಗೆ ರಾಧಾ-ಕೃಷ್ಣನ ವೇಷಭೂಷಣ ತೊಡಿಸಿ ಪೋಷಕರು ಸಂಭ್ರಮಿಸುತ್ತಾರೆ. ಹುಡುಗರು ಎತ್ತರಕ್ಕೆ ಬೆಣ್ಣೆ ಇರುವ ಮಡಿಕೆ ಕಟ್ಟಿ ಒಡೆಯುತ್ತಾರೆ. ಬಾಲಕೃಷ್ಣ ಬೆಣ್ಣೆ ಕದ್ದು ತಿನ್ನುವ ಸಂದರ್ಭವನ್ನು ಸ್ಮರಿಸುತ್ತಾರೆ. ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿ ಭಕ್ತಿ-ಭಾವ ಮೆರೆಯುತ್ತಾರೆ.

    ಶ್ರೀಕೃಷ್ಣ ವೈಷ್ಣವ ಧರ್ಮದ ಪ್ರತೀಕ. ಭಗವಾನ್ ಕೃಷ್ಣನ ಜನ್ಮಸ್ಥಳ ಮಥುರಾದಲ್ಲಿ ಜನ್ಮಾಷ್ಟಮಿ ಆಚರಣೆ ವಿಶೇಷವಾಗಿರುತ್ತದೆ. ‘ದಹಿ ಹಂಡಿ’ ಒಡೆಯುವುದು ಹಬ್ಬದ ಪ್ರಮುಖ ಆಕರ್ಷಣೆ. ತಮಿಳುನಾಡಿನಲ್ಲಿ ಜನ್ಮಾಷ್ಟಮಿಯನ್ನು ಜನ ಸಾಮಾನ್ಯವಾಗಿ ಗೀತೆಗಳನ್ನು ಪಠಿಸುವ ಮೂಲಕ ಮತ್ತು ಮನೆಯಲ್ಲಿ ರೇಖಾಚಿತ್ರಗಳನ್ನು ಬಿಡಿಸುವ ಮೂಲಕ ಆಚರಿಸುತ್ತಾರೆ. ವಿಶಿಷ್ಟ ಆಚರಣೆಗಳು ಸಮೃದ್ಧಿಯನ್ನು ತರುತ್ತವೆ ಎಂದು ನಂಬಲಾಗಿದೆ.

    ಇಸ್ಕಾನ್ (Iskcon) ವೈಷ್ಣವ ಧರ್ಮವನ್ನು ಜನಪ್ರಿಯಗೊಳಿಸಿದ ಮಥುರಾದಲ್ಲಿ ಜನ್ಮಾಷ್ಟಮಿ ಆಚರಣೆ ವಿಜೃಂಭಣೆಯಿಂದ ನಡೆಯುತ್ತದೆ. ಪ್ರಪಂಚದಾದ್ಯಂತದ ಪ್ರವಾಸಿಗರು ಇಲ್ಲಿ ಭಾಗವಹಿಸುತ್ತಾರೆ. ಸಾಮೂಹಿಕ ಪೂಜೆಗಾಗಿ ಸಮುದಾಯಗಳು ಒಟ್ಟಾಗಿ ಸೇರುತ್ತವೆ. ಆಚರಣೆಗಳಿಗೆ ಅವಿಭಾಜ್ಯವಾದ ರಾಸ್ ಲೀಲಾ ಅಥವಾ ಕೃಷ್ಣ ಲೀಲಾ ಪ್ರದರ್ಶನಗಳು ಶ್ರೀಕೃಷ್ಣನ ದೈವಿಕ ಕಾಲಕ್ಷೇಪಗಳನ್ನು ಸ್ಪಷ್ಟವಾಗಿ ಚಿತ್ರಿಸುತ್ತವೆ. ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಶ್ರೀಮಂತಿಕೆ ಸಮ್ಮಿಲನವಾಗುತ್ತದೆ. ಈ ವರ್ಷ ಹಿಂದೂ ಸಂಪ್ರದಾಯದ ಪ್ರಕಾರ ಭಗವಾನ್ ಕೃಷ್ಣನ 5,251 ಜನ್ಮ ವಾರ್ಷಿಕೋತ್ಸವ ಆಚರಿಸಲಾಗುತ್ತಿದೆ. ಇದನ್ನೂ ಓದಿ: ಕೃಷ್ಣ ಜನ್ಮಾಷ್ಟಮಿ ಸ್ಪೆಷಲ್ ಗರಿಗರಿ ಉದ್ದಿನಬೇಳೆ ಚಕ್ಕುಲಿ

    ಬೃಂದಾವನ, ಮಥುರಾ:
    ಜನ್ಮಾಷ್ಟಮಿಯ ಸಮಯದಲ್ಲಿ ಮಥುರಾದ (Mathura) ಬೀದಿಗಳು ರೋಮಾಂಚಕ ಶೋಭಾ ಯಾತ್ರೆಯ ಮೆರವಣಿಗೆಗಳೊಂದಿಗೆ ಜೀವಂತವಾಗುತ್ತವೆ. ಅಲಂಕೃತ ರಥಗಳು, ಸಾಂಪ್ರದಾಯಿಕ ಸಂಗೀತ ಮತ್ತು ಅಪಾರ ಉತ್ಸಾಹದಿಂದ ಆಚರಿಸುವ ಉತ್ಸಾಹಿ ಭಕ್ತಸಾಗರವೇ ಇಲ್ಲಿ ನೆರೆದಿರುತ್ತದೆ. ಗೋವರ್ಧನ ಬೆಟ್ಟಕ್ಕೂ ಶ್ರೀಕೃಷ್ಣನಿಗೂ ಅವಿನಾಭಾವ ಸಂಬಂಧ. ಬೆಟ್ಟದಲ್ಲಿ ಭಕ್ತರು ಪ್ರದಕ್ಷಿಣೆ ಹಾಕುತ್ತಾರೆ. ಶ್ರೀಕೃಷ್ಣನನ್ನು ಪಾರ್ಥಿಸುತ್ತಾರೆ. ವೃಂದಾವನದಲ್ಲಿರುವ ಬಂಕೆ ಬಿಹಾರಿ ದೇವಾಲಯವು ಜನ್ಮಾಷ್ಟಮಿಯಂದು ಅತ್ಯಂತ ಪೂಜ್ಯ ಸ್ಥಳಗಳಲ್ಲಿ ಒಂದಾಗಿದೆ. ಸಾವಿರಾರು ಭಕ್ತರನ್ನು ಸೆಳೆಯುವ ದೇವಾಲಯ ಹಬ್ಬದ ಕೇಂದ್ರಬಿಂದುವಾಗಿದೆ.

    ವೃಂದಾವನದಲ್ಲಿರುವ ಪ್ರಶಾಂತ ಪರಿಸರದ ತಾಣ ರಾಧಾ ರಾಮನ್ ದೇವಾಲಯದಲ್ಲೂ ಜನ್ಮಾಷ್ಟಮಿಯನ್ನು ವಿಜೃಂಭಣೆಯಿAದ ಆಚರಿಸಲಾಗುತ್ತದೆ. ಶ್ರೀಕೃಷ್ಣನು ರಾಧೆಯೊಂದಿಗೆ ರಾಸಲೀಲೆ ಆಡಿದನೆಂದು ನಂಬಲಾದ ‘ಸೇವಾ ಕುಂಜ್’ ಕೃಷ್ಣ ಜನ್ಮಾಷ್ಟಮಿಯಂದು ಭೇಟಿ ನೀಡುವ ಮತ್ತೊಂದು ಆಧ್ಯಾತ್ಮಿಕ ಮಹತ್ವದ ತಾಣ. ದೀಪಗಳು ಮತ್ತು ಹೂವುಗಳಿಂದ ಅಲಂಕರಿಸಲ್ಪಟ್ಟ ಈ ಶಾಂತಿಯುತ ತಾಣವು ಆಳವಾದ ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಭಕ್ತರಿಗೆ ಪ್ರಶಾಂತವಾದ ಏಕಾಂತವನ್ನು ನೀಡುತ್ತದೆ.

    ಮಹಾರಾಷ್ಟ್ರ:
    ಜನ್ಮಾಷ್ಟಮಿಯನ್ನು ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ದಹಿ ಹಂಡಿ (Dahi Handi) ಒಡೆಯುವ ಸಂಪ್ರದಾಯ ಇಲ್ಲಿ ಜನಪ್ರಿಯ. ಗೋವಿಂದಾಸ್ ತಂಡಗಳು ಮಾನವ ಪಿರಮಿಡ್‌ಗಳನ್ನು ರಚಿಸಿ, ಎತ್ತರದ ಭಾಗದಲ್ಲಿರುವ ಮೊಸರು ತುಂಬಿದ ಮಡಿಕೆ ಹೊಡೆಯುತ್ತಾರೆ. ಆ ಮೂಲಕ ಬೆಣ್ಣೆ ಕದ್ದ ಬಾಲಕೃಷ್ಣನನ್ನು ಸ್ಮರಿಸುತ್ತಾರೆ. ಮುಂಬೈ ಮತ್ತು ಪುಣೆಯಂತಹ ನಗರಗಳು ಈ ರೋಮಾಂಚಕ ಆಚರಣೆಗಳೊಂದಿಗೆ ಗಮನ ಸೆಳೆಯುತ್ತವೆ. ದೊಡ್ಡ ಜನಸಮೂಹವನ್ನು ಹಬ್ಬದಂದು ನಗರಗಳು ಸೆಳೆಯುತ್ತವೆ.

    ಮುಂಬೈನ ಇಸ್ಕಾನ್ ದೇವಾಲಯ ಮತ್ತು ಪಂಢರಪುರದ ವಿಠ್ಠಲ್ ರುಕ್ಮಿಣಿ ದೇವಾಲಯಗಳಲ್ಲಿ ವಿಶೇಷ ಪ್ರಾರ್ಥನೆ, ಭಜನೆ ಮತ್ತು ಕೀರ್ತನೆಗಳನ್ನು ಆಯೋಜಿಸಲಾಗುತ್ತದೆ. ಆರಾಧನೆಗಾಗಿ ಭಕ್ತರನ್ನು ಆಕರ್ಷಿಸುತ್ತವೆ. ಮನೆಗಳಲ್ಲಿ ಶ್ರೀಕೃಷ್ಣನಿಗೆ ಅರ್ಪಿಸಲು ಪೇಡಾಸ್ ಮತ್ತು ಶ್ರೀಖಂಡದಂತಹ ಸಿಹಿತಿಂಡಿಗಳನ್ನು ತಯಾರಿಸುತ್ತಾರೆ. ಇದು ಹಬ್ಬದ ಉತ್ಸಾಹವನ್ನು ಹೆಚ್ಚಿಸುತ್ತದೆ. ಮಹಾರಾಷ್ಟ್ರದಲ್ಲಿ ಜನ್ಮಾಷ್ಟಮಿಯು ಆಳವಾದ ಭಕ್ತಿ ಮತ್ತು ರೋಮಾಂಚಕ ಸಂದರ್ಭದ ಸಮ್ಮಿಶ್ರಣವಾಗಿದೆ.

    ಉಡುಪಿ:
    ಉಡುಪಿಯಲ್ಲಿ ಜನ್ಮಾಷ್ಟಮಿಯನ್ನು ವಿಶೇಷವಾಗಿ ಉಡುಪಿ ಶ್ರೀಕೃಷ್ಣ ಮಠದಲ್ಲಿ ಅಪಾರ ಭಕ್ತಿ ಮತ್ತು ವೈಭವದಿಂದ ಆಚರಿಸಲಾಗುತ್ತದೆ. ಕರ್ನಾಟಕದ (Karnataka) ಪ್ರಮುಖ ಯಾತ್ರಾಸ್ಥಳವಾದ ಈ ದೇವಾಲಯವು ಉತ್ಸವಗಳ ಕೇಂದ್ರಬಿಂದುವಾಗಿದೆ. ಸಾವಿರಾರು ಭಕ್ತರನ್ನು ಆಕರ್ಷಿಸುತ್ತದೆ. ಭಕ್ತಿ ಗಾಯನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತವೆ. ದೇವಾಲಯವನ್ನು ಸುಂದರವಾಗಿ ಅಲಂಕರಿಸಲಾಗುತ್ತದೆ. ಭಗವಾನ್ ಕೃಷ್ಣನ ವಿಗ್ರಹವು ಸೊಗಸಾದ ವಸ್ತ್ರಗಳು ಮತ್ತು ಆಭರಣಗಳಿಂದ ಅಲಂಕೃತಗೊಂಡು ಭಕ್ತರಲ್ಲಿ ಪರವಶ ಭಾವವನ್ನು ಮೂಡಿಸುತ್ತದೆ. ಉಡುಪಿಯಲ್ಲಿ ಜನ್ಮಾಷ್ಟಮಿಯ ವೈಶಿಷ್ಟ್ಯವೆಂದರೆ ಮುದ್ದು ಕೃಷ್ಣ ಸ್ಪರ್ಧೆ. ಅಲ್ಲಿ ಮಕ್ಕಳು ಚಿಕ್ಕ ಕೃಷ್ಣನ ವೇಷಭೂಷಣ ತೊಡುತ್ತಾರೆ. ಭಕ್ತರು ಉಪವಾಸ, ಪ್ರಾರ್ಥನೆ ಮಾಡುತ್ತಾರೆ. ಪ್ರಸಾದ ವಿತರಣೆಯಲ್ಲಿ ಭಾಗವಹಿಸುತ್ತಾರೆ.

    ದ್ವಾರಕ:
    ದ್ವಾರಕಾದಲ್ಲಿ ಜನ್ಮಾಷ್ಟಮಿಯು ಐತಿಹಾಸಿಕ ಮತ್ತು ಆಧ್ಯಾತ್ಮಿಕ ಪ್ರಾಮುಖ್ಯತೆಯ ಆಚರಣೆಯಾಗಿದೆ. ಉತ್ಸವಗಳು ಪೂಜ್ಯ ದ್ವಾರಕಾದೀಶ್ ದೇವಾಲಯದ ಸುತ್ತ ಸುತ್ತುತ್ತವೆ. ಮಧ್ಯರಾತ್ರಿಯ ಮಂಗಳ ಆರತಿಯು ಶ್ರೀಕೃಷ್ಣನ ದೈವಿಕ ಜನ್ಮವನ್ನು ಸೂಚಿಸುತ್ತದೆ. ಗರ್ಬಾ ಮತ್ತು ದಾಂಡಿಯಾ ರಾಸ್‌ನಂತಹ ಸಾಂಪ್ರದಾಯಿಕ ನೃತ್ಯಗಳು ರೋಮಾಂಚಕವಾಗಿರುತ್ತವೆ. ಸಂಭ್ರಮಾಚರಣೆಯ ವಾತಾವರಣವನ್ನು ಮತ್ತಷ್ಟು ಶ್ರೀಮಂತಗೊಳಿಸುತ್ತದೆ. ಕೃಷ್ಣನ ಮೂರ್ತಿಗೆ ಸ್ನಾನ ಮಾಡಿಸಿ, ಅಲಂಕರಿಸಿ ನಂತರ ಭವ್ಯ ಮೆರವಣಿಗೆಗಳು ಸೇರಿದಂತೆ ವಿಶಿಷ್ಟ ಆಚರಣೆಗಳನ್ನು ಮಾಡಲಾಗುತ್ತದೆ. ವಿಶೇಷ ಪ್ರಸಾದ ವಿತರಣೆ ಇರುತ್ತದೆ.

    ಮಣಿಪುರ:
    ಮಣಿಪುರದಲ್ಲಿ ಜನ್ಮಾಷ್ಟಮಿಯು ಶ್ರೀಮಂತ ವೈಷ್ಣವ ಸಂಪ್ರದಾಯಗಳನ್ನು ಪ್ರತಿಬಿಂಬಿಸುತ್ತದೆ. ಗೋವಿಂದಜೀ ಸೇರಿದಂತೆ ಅನೇಕ ದೇವಾಲಯಗಳು ವಿಶೇಷ ಪ್ರಾರ್ಥನೆ, ಭಕ್ತಿಗೀತೆಗಳನ್ನು ಆಯೋಜಿಸಲಾಗುತ್ತದೆ. ಭಗವದ್ಗೀತೆ ಪಠಣವೂ ಇರುತ್ತದೆ. ಕೃಷ್ಣ ಮತ್ತು ರಾಧೆಯ ದೈವಿಕ ಪ್ರೀತಿಯನ್ನು ಚಿತ್ರಿಸುವ ಶಾಸ್ತ್ರೀಯ ಮಣಿಪುರಿ ನೃತ್ಯ ನಾಟಕವಾದ ಸಾಂಪ್ರದಾಯಿಕ ರಾಸ್ ಲೀಲಾ ಪ್ರದರ್ಶನಗಳಿಂದ ಉತ್ಸವವು ಹೈಲೈಟ್ ಆಗಿದೆ. ಭಕ್ತರು ಉಪವಾಸ ಮತ್ತು ಪ್ರಾರ್ಥನೆಯಲ್ಲಿ ತೊಡಗುತ್ತಾರೆ. ಆಚರಣೆಗಳು ಮಧ್ಯರಾತ್ರಿಯಲ್ಲಿ ಮುಕ್ತಾಯಗೊಳ್ಳುತ್ತವೆ.

    ದಕ್ಷಿಣ ಭಾರತ:
    ದಕ್ಷಿಣ ಭಾರತದ ವಿವಿಧ ಭಾಗಗಳಲ್ಲಿ ಆಚರಣೆಗಳು ವಿಭಿನ್ನವಾಗಿವೆ. ಜನರು ಉಪವಾಸ ಆಚರಿಸುತ್ತಾರೆ. ಕೋಲಂಗಳನ್ನು ಎಳೆಯುತ್ತಾರೆ. ಭಗವದ್ಗೀತೆ ಪಠಿಸುತ್ತಾರೆ. ಆಂಧ್ರಪ್ರದೇಶದಲ್ಲಿ ಸಂಬಂಧಿಕರು ಮತ್ತು ಸ್ನೇಹಿತರನ್ನು ಭೇಟಿ ಮಾಡಲು ಮಕ್ಕಳು ಕೃಷ್ಣನಂತೆ ವೇಷಧರಿಸಿ ಗಮನ ಸೆಳೆಯುತ್ತಾರೆ. ವೆರ್ಕಡಲೈ ಉರುಂಡೈಯಂತಹ ಸಿಹಿ ತಿನಿಸುಗಳನ್ನು ತಯಾರಿಸಲಾಗುತ್ತದೆ.

    ಪಶ್ಚಿಮ ಬಂಗಾಳ, ಒಡಿಶಾ:
    ಜನ್ಮಾಷ್ಟಮಿಯಂದು ಕೋಲ್ಕತ್ತಾದಲ್ಲಿ ಭವ್ಯವಾದ ಮೆರವಣಿಗೆ ಇರುತ್ತದೆ. ಇದು ಕೃಷ್ಣನ ಜೀವನದ ದೃಶ್ಯಗಳನ್ನು ಚಿತ್ರಿಸುವ ವಿಸ್ತಾರವಾಗಿ ಅಲಂಕರಿಸಿದ ಫ್ಲೋಟ್‌ಗಳು ಮತ್ತು ರೋಮಾಂಚಕ ಸಂಗೀತವನ್ನು ಒಳಗೊಂಡಿರುತ್ತದೆ. ಈ ನಗರವು ಸಂದೇಶ ಮತ್ತು ರಸಗುಲ್ಲಾದಂತಹ ವಿಶೇಷ ಸಿಹಿತಿಂಡಿಗಳಿಗೆ ಹೆಸರುವಾಸಿಯಾಗಿದೆ. ಇದನ್ನು ಶ್ರೀಕೃಷ್ಣನಿಗೆ ಅರ್ಪಿಸಲಾಗುತ್ತದೆ. ಬಳಿಕ ಭಕ್ತರಿಗೆ ಪ್ರಸಾದವಾಗಿ ವಿತರಿಸಲಾಗುತ್ತದೆ. ಕಾಳಿಘಾಟ್ ದೇವಾಲಯವನ್ನು ಅಲಂಕರಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಭಜನೆಗಳು ಮತ್ತು ಕೀರ್ತನೆಗಳು ಸೇರಿದಂತೆ ಭಕ್ತಿ ಸಂಗೀತ ಮತ್ತು ನೃತ್ಯ ಪ್ರದರ್ಶನಗಳಿರುತ್ತವೆ.

    ಒಡಿಶಾದಲ್ಲಿ ಜನ್ಮಾಷ್ಟಮಿ ಆಚರಣೆಗಳು ಪುರಿಯ ಜಗನ್ನಾಥ ದೇವಾಲಯದ ಸುತ್ತಲೂ ಕೇಂದ್ರೀಕೃತವಾಗಿವೆ. ದೇವರಿಗೆ ಮಾಡುವ ‘ಅಭಿಷೇಕಂ’ ಇಲ್ಲಿ ವಿಶಿಷ್ಟ. ಸಾಂಪ್ರದಾಯಿಕ ಒಡಿಸ್ಸಿ ನೃತ್ಯ ಮತ್ತು ಒಡಿಯಾ ಪಾಕಪದ್ಧತಿ ಹಬ್ಬದ ಪ್ರಮುಖ ಆಕರ್ಷಣೆ. ಭಕ್ತಿಗೀತೆ ಮತ್ತು ನೃತ್ಯದೊಂದಿಗೆ ಬೀದಿಗಳಲ್ಲಿ ಶ್ರೀಕೃಷ್ಣನ ಚಿತ್ರಗಳನ್ನು ಹೊತ್ತುಕೊಂಡು ಮೆರವಣಿಗೆ ಮಾಡಲಾಗುತ್ತದೆ.

  • ಕೃಷ್ಣ ಜನ್ಮಾಷ್ಟಮಿ ಸ್ಪೆಷಲ್ ಗರಿಗರಿ ಉದ್ದಿನಬೇಳೆ ಚಕ್ಕುಲಿ

    ಕೃಷ್ಣ ಜನ್ಮಾಷ್ಟಮಿ ಸ್ಪೆಷಲ್ ಗರಿಗರಿ ಉದ್ದಿನಬೇಳೆ ಚಕ್ಕುಲಿ

    ಲ್ಲೆಡೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ ಮನೆ ಮಾಡಿದೆ. ಈಗಾಗಲೇ ಹಬ್ಬಕ್ಕೆ ತಯಾರಿ ಶುರುವಾಗಿದೆ. ಕೃಷ್ಣ ಜನ್ಮಾಷ್ಟಮಿ ಎಂದಾಕ್ಷಣ ನೆನಪಾಗುವುದು ಶ್ರೀ ಕೃಷ್ಣ, ಯಶೋದೆಯರ ವೇಷಧಾರಿಗಳು, ಮೊಸರು ಕುಡಿಕೆ, ಕೃಷ್ಣ ದೇವಾಲಯಗಳಲ್ಲಿ ವಿಶೇಷ ಪೂಜೆ ಹಾಗೂ ಸಡಗರ. ಇದರೊಂದಿಗೆ ಶ್ರೀ ಕೃಷ್ಣ ಹುಟ್ಟಿದ ದಿನವಾದ ಅಷ್ಟಮಿಯಂದು ವಿಶೇಷ ಖಾದ್ಯಗಳನ್ನು ತಯಾರಿಸುವುದು ವಾಡಿಕೆ. ಶ್ರೀಕೃಷ್ಣನಿಗೆ ಚಕ್ಕುಲಿ ಎಂದರೆ ಬಹಳ ಅಚ್ಚುಮೆಚ್ಚು. ಇವತ್ತಿನ ನಮ್ಮ ರೆಸಿಪಿಯಲ್ಲಿ ಕೃಷ್ಣನಿಗೆ ಪ್ರಿಯವಾದ ತಿಂಡಿಗಳಲ್ಲಿ ಒಂದಾದ ಉದ್ದಿನಬೇಳೆ ಚಕ್ಕುಲಿ ಯಾವ ರೀತಿ ತಯಾರಿಸುವುದು ಎಂಬುದನ್ನು ತಿಳಿಸಿಕೊಡುತ್ತೇವೆ. ಹಾಗಿದ್ರೆ ಇದನ್ನು ಹೇಗೆ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ.

    ಬೇಕಾಗುವ ಸಾಮಗ್ರಿಗಳು:
    ಉದ್ದಿನಬೇಳೆ – 1ಕಪ್
    ಜೀರಿಗೆ – 2 ಚಮಚ
    ಎಳ್ಳು – 2 ಚಮಚ
    ಹುರಿಗಡಲೆ – ಅರ್ಧ ಕಪ್
    ಅಕ್ಕಿಹಿಟ್ಟು – 3 ಕಪ್
    ಅರಶಿಣ ಹುಡಿ- ಅರ್ಧ ಚಮಚ
    ಉಪ್ಪು – ರುಚಿಗೆ ತಕ್ಕಷ್ಟು
    ಬೆಣ್ಣೆ – 2 ಚಮಚ
    ಎಣ್ಣೆ – ಕರಿಯಲು ಬೇಕಾಗುವಷ್ಟು

    ಮಾಡುವ ವಿಧಾನ:
    * ಮೊದಲಿಗೆ ಒಂದು ಬಾಣಲೆಗೆ ಉದ್ದಿನಬೇಳೆ ಹಾಕಿಕೊಂಡು ಕಂದ ಬಣ್ಣ ಬರುವವರೆಗೆ ಹುರಿದುಕೊಳ್ಳಿ. ಬಳಿಕ ಅದಕ್ಕೆ ಸ್ವಲ್ಪ ಜೀರಿಗೆ, ಹುರಿಗಡಲೆ ಹಾಗೂ ಎಳ್ಳು ಹಾಕಿಕೊಂಡು ಹುರಿದುಕೊಳ್ಳಿ.
    * ಬಳಿಕ ಹುರಿದಿಟ್ಟುಕೊಂಡ ಉದ್ದಿನ ಬೇಳೆ ಹಾಗೂ ಹುರಿಗಡಲೆಯನ್ನು ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ಪುಡಿ ಮಾಡಿಕೊಂಡು ಜರಡಿ ಹಿಡಿಯಬೇಕು.
    * ನಂತರ ಒಂದು ಪಾತ್ರೆಯಲ್ಲಿ ಅಕ್ಕಿಹಿಟ್ಟು, ಅರಶಿಣ, ಹುರಿದ ಎಳ್ಳು, ಜೀರಿಗೆ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿಕೊಂಡು ಅದಕ್ಕೆ ಉದ್ದಿನ ಬೇಳೆ ಪುಡಿಯನ್ನೂ ಹಾಕಿಕೊಳ್ಳಿ. ಬಳಿಕ ಸ್ವಲ್ಪ ಸ್ವಲ್ಪವೇ ಬಿಸಿನೀರು ಸೇರಿಸಿಕೊಳ್ಳುತ್ತಾ ಹಿಟ್ಟನ್ನು ಕಲಸಿಕೊಳ್ಳಿ. ಹಿಟ್ಟು ಮೃದುವಾಗಿರಲಿ.
    * ಈಗ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿಗೆ ಇಡಿ. ಎಣ್ಣೆ ಕಾದ ಬಳಿಕ ಚಕ್ಕುಲಿ ಒರಳಿಗೆ ಹಿಟ್ಟನ್ನು ಹಾಕಿಕೊಂಡು ಎಣ್ಣೆಯೊಳಗೆ ಬಿಡಿ. ಬಳಿಕ ಎರಡೂ ಬದಿ ಕೆಂಪಗಾಗುವವರೆಗೆ ಕಾಯಿಸಿ.
    * ಈಗ ಗರಿಗರಿಯಾದ ಉದ್ದಿನಬೇಳೆ ಚಕ್ಕುಲಿ ರೆಡಿ. ಇದನ್ನು ಕೃಷ್ಣನಿಗೆ ಸಮರ್ಪಿಸಿ ಬಳಿಕ ಮನೆಮಂದಿಯೆಲ್ಲಾ ಜೊತೆಗೆ ಕೂತು ಸವಿಯಿರಿ.

  • ರಾಧೆಯಾದ ಮಿಲ್ಕಿಬ್ಯೂಟಿ ತಮನ್ನಾ

    ರಾಧೆಯಾದ ಮಿಲ್ಕಿಬ್ಯೂಟಿ ತಮನ್ನಾ

    ಶ್ರೀಕೃಷ್ಣ ಜನ್ಮಾಷ್ಟಮಿ ಬಂದ್ರೆ ಸಾಕು ಸಾಮಾನ್ಯವಾಗಿ ಮಕ್ಕಳಿಗೆ ರಾಧಾ ಕೃಷ್ಣರ ವೇಶ ಹಾಕಿ ತಂದೆತಾಯಿ ಖುಷಿ ಪಡ್ತಾರೆ. ಆದರಿಲ್ಲಿ ಜನ್ಮಾಷ್ಟಮಿ ವಿಶೇಷವಾಗಿ ಖ್ಯಾತ ನಟಿ ತಮನ್ನಾ ಭಾಟಿಯಾ ರಾಧೆಯ ಲುಕ್‌ನಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. ರಾಧೆಯ ಲುಕ್‌ನಲ್ಲಿ ಅತ್ಯಂತ ಸುಂದರವಾಗಿ ಕಾಣಿಸ್ಕೊಂಡಿದ್ದಾರೆ ಈ ಗ್ಲಾಮರಸ್ ನಟಿ. ಇನ್ನು ಕೃಷ್ಣನ ವೇಶಧಾರಿಯೂ ರಾಧೆಯ ಜೊತೆಯಲ್ಲಿ ನಿಂತಿರೋದ್ರಿಂದ ಫೋಟೋಶೂಟ್ ಅಂದ ಹೆಚ್ಚಾಗಿದೆ. ಫೋಟೋಶೂಟ್ ವಿಶೇಷ ಏನೆಂದರೆ, ಬೃಂದಾನವನದಲ್ಲಿ ರಾಧಾ ಕೃಷ್ಣರ ಪ್ರೀತಿಯ ಪರಾಕಾಷ್ಟೆ ನೋಡಬಹುದು. ಗೋಪಿಕಾಸ್ತ್ರಿಯರ ಅಂದಚೆಂದವಂತೂ ಕಣ್ಣಿಗೆ ಹಬ್ಬ.

    ಅಂದಹಾಗೆ ತಮನ್ನಾ ಹೀಗೆ ಫೋಟೋಶೂಟ್ ಮಾಡಿಸಿದ್ದು ವಿಶೇಷವಾದ್ರೂ ಇನ್ನೊಂದು ವಿಶೇಷ ಸಂಗತಿ ಹಂಚಿಕೊಂಡಿದ್ದಾರೆ ಮಿಲ್ಕೀಬ್ಯೂಟಿ. ಈ ಫೋಟೋಶೂಟ್ ಹಾಗೂ ಅದರ ಜಾಗೃತಿ ಬಗ್ಗೆ ಬರವಣಿಗೆಯ ಮೂಲಕ ಮಾಹಿತಿ ಕೊಟ್ಟ ರೀತಿ ಗಮನಾರ್ಹವಾಗಿದೆ. ಯಾಕಂದ್ರೆ ತಮನ್ನಾ ಹೇಳ್ತಾರೆ `ತಮ್ಮ 18 ವರ್ಷಗಳ ವೃತ್ತಿಯಲ್ಲಿ ಇದುವೇ ತಮಗೆ ಅತ್ಯಂತ ಖುಷಿ ಕೊಟ್ಟ ಅಭಿಯಾನ’ ಎಂದು. ಹಾಗಾದ್ರೆ ಅಂಥದ್ದೇನು ವಿಶೇಷ ಅಡಗಿದೆ ಈ ಫೋಟೋಶೂಟ್‌ನಲ್ಲಿ ಅನ್ನೋದಾದ್ರೆ ರಾಧೆಯ ಪಾತ್ರಧಾರಿಯಾಗಿ ಕಾಣಿಸ್ಕೊಂಡಿದ್ದೇ ವಿಶೇಷ ಅನ್ನೋದಕ್ಕೆ ಪದಗಳಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ ಈ ನಟಿ.

    ರಾಧೆಯನ್ನು ಸಾಕಾರಗೊಳಿಸುವಾಗ ತಮನ್ನಾ ಅಂತೀದ್ರಿಯ ಸಂಪರ್ಕವನ್ನು ಅನುಭವಿಸಿದಂತೆ ಭಾಸವಾದರಂತೆ. ಇದರ ಹಿಂದೆ ಒಂದು ದೈವಿಕ ಶಕ್ತಿ ಇದ್ದಂತೆ ಕಂಡುಕೊಂಡರಂತೆ, ಹೀಗಾಗಿ ಈ ಅಭಿಯಾನದ ದೃಶ್ಯದಲ್ಲಿ ದೈವತ್ವವು ಸ್ಪಷ್ಟವಾಗಿದೆ ಎನ್ನುತ್ತಾರೆ ತಮನ್ನಾ.

    ತಮನ್ನಾ ಇದುವರೆಗೂ ಯಾವುದೇ ದೇವತೆಯ ಪಾತ್ರದಲ್ಲಿ ಅಭಿನಯಿಸಿಲ್ಲ. ಇದೀಗ ರಾಧೆಯ ಪಾತ್ರವಾಗಿ ಜೀವಿಸಿ ಅತೀಂದ್ರಿಯ ಶಕ್ತಿಯ ಪ್ರಭಾವಕ್ಕೆ ಒಳಗಾದವರಂತೆ ಬರೆದುಕೊಂಡಿದ್ದಾರೆ. ಫೋಟೋಗಳಲ್ಲೂ ತಮನ್ನಾರ ಸ್ನಿಗ್ಧ ಸೌಂದರ್ಯ ಕಾಣುತ್ತೆ. ಶಕ್ತಿ ಸ್ವರೂಪಿಣಿ ಅತಿಸೌಂದರ್ಯವತಿ ರಾಧೆಯ ಅಂದ ಚೆಂದವನ್ನ ಪ್ರತಿರೂಪಿಸುವ ಪ್ರಯತ್ನ ಮಾಡಿದ್ದಾರೆ ತಮನ್ನಾ. ಹೀಗಾಗಿ ತಮ್ಮ 18 ವರ್ಷದ ಕರಿಯರ್‌ನಲ್ಲಿ ಇದುವೇ ಉತ್ತಮ ಚಿತ್ರೀಕರಣ ಎಂದಿದ್ದಾರೆ ತಮನ್ನಾ.

     

    ಅಂದಹಾಗೆ ತಮನ್ನಾಗೆ ಅವರನ್ನ ಗ್ಲಾಮರ್ ಅವತಾರದಲ್ಲಿ ತೋರಿಸುವ ಪಾತ್ರಗಳೇ ಹೆಚ್ಚಾಗಿ ಬರ್ತವೆ. ಆದರೀಗ ಇಂಥಹ ಗ್ಲಾಮರ್ ಗೊಂಬೆಗೆ ರಾಧಾಮಾತೆಯ ವೇಶ ಹಾಕಿಸಲಾಗಿದ್ದು ಆಕೆಯ ಫ್ಯಾನ್ಸ್ ಕೂಡ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಕೃಷ್ಣ ಜನ್ಮಾಷ್ಠಮಿ ಸಂಭ್ರಮ- ಅವಳಿ ಮಕ್ಕಳ ಮುದ್ದಾದ ಫೋಟೋ ಹಂಚಿಕೊಂಡ ಅಮೂಲ್ಯ

    ಕೃಷ್ಣ ಜನ್ಮಾಷ್ಠಮಿ ಸಂಭ್ರಮ- ಅವಳಿ ಮಕ್ಕಳ ಮುದ್ದಾದ ಫೋಟೋ ಹಂಚಿಕೊಂಡ ಅಮೂಲ್ಯ

    ಸ್ಯಾಂಡಲ್‌ವುಡ್ (Sandalwood) ನಟಿ ಅಮೂಲ್ಯ (Amulya) ಮನೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಅವಳಿ ಮಕ್ಕಳಿಗೆ ಕೃಷ್ಣನ ಅವತಾರ ತೊಡಿಸಿ ಮಸ್ತ್ ಆಗಿ ನಟಿ ಫೋಟೋಶೂಟ್ ಮಾಡಿಸಿದ್ದಾರೆ. ಮಕ್ಕಳ ಮುದ್ದಾದ ಫೋಟೋಗಳನ್ನ ನಟಿ ಸೋಶಿಯಲ್‌ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

    ಅವಳಿ ಮಕ್ಕಳಿಗೆ (Twins) ಬಿಳಿ ಪಂಚೆ ತೊಡಿಸಿ ಕೃಷ್ಣನ ಗೆಟಪ್‌ನಲ್ಲಿ ರೆಡಿ ಮಾಡಿದ್ದರೆ, ನೀಲಿ ಬಣ್ಣದ ಸೀರೆಯುಟ್ಟು ಸಿಂಪಲ್ ಆಭರಣ ಧರಿಸಿ ನಟಿ ಕಂಗೊಳಿದ್ದಾರೆ. ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಇದನ್ನೂ ಓದಿ:ಬೆಂಗಳೂರಿನಲ್ಲಿ ಸಿಗೋಣ ಎಂದ ನಟಿ- ಆರೋಗ್ಯದ ಬಗ್ಗೆ ಖುದ್ದು ರಮ್ಯಾ ಸ್ಪಷ್ಟನೆ

    ಬಾಲನಟಿಯಾಗಿ ಗುರುತಿಸಿಕೊಂಡಿದ್ದ ನಟಿ, ಬಳಿಕ ‘ಚೆಲುವಿನ ಚಿತ್ತಾರ’ದ (Cheluvina Chittara) ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಪರಿಚಿತರಾದರು. ಈಗ ವೈವಾಹಿಕ ಬದುಕಿನಲ್ಲಿ ಬ್ಯುಸಿಯಾಗಿದ್ದಾರೆ. ಅವಳಿ ಮಕ್ಕಳ ಆರೈಕೆಯಲ್ಲಿ ನಟಿ ತೊಡಗಿಸಿಕೊಂಡಿದ್ದಾರೆ.

    ಅಮೂಲ್ಯ ಅವರು ಮಕ್ಕಳಿಗೆ ಅಥರ್ವ್ ಹಾಗೂ ಆಧವ್ ಎಂದು ಹೆಸರು ಇಟ್ಟಿದ್ದಾರೆ. ಇವರ ಕ್ಯೂಟ್ ಫೋಟೋಗಳನ್ನು ಅಮೂಲ್ಯ ಆಗಾಗ ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ಈಗ ಇವರ ಕೃಷ್ಣನ ಗೆಟಪ್ ಸಾಕಷ್ಟು ಗಮನ ಸೆಳೆದಿದೆ. ಇದನ್ನೂ ಓದಿ:ಬೆಂಗಳೂರಿನಲ್ಲಿ ಸಿಗೋಣ ಎಂದ ನಟಿ- ಆರೋಗ್ಯದ ಬಗ್ಗೆ ಖುದ್ದು ರಮ್ಯಾ ಸ್ಪಷ್ಟನೆ

    ನೆಚ್ಚಿನ ನಟಿ ಅಮೂಲ್ಯ ಮತ್ತೆ ಬಣ್ಣದ ಲೋಕಕ್ಕೆ ಕಮ್‌ಬ್ಯಾಕ್ ಆಗಬೇಕು ಎಂದು ಅಪಾರ ಅಭಿಮಾನಿಗಳ ಆಸೆ. ಅದರಂತೆ ನಟಿ ಕೂಡ, ಒಳ್ಳೆಯ ಕಥೆ ಸಿಕ್ಕರೆ ಖಂಡಿತಾ ನಟಿಸುತ್ತೇನೆ ಎಂದು ಸಿನಿಮಾಗೆ ಕಮ್‌ಬ್ಯಾಕ್ ಆಗುವ ಬಗ್ಗೆ ಮಾತನಾಡಿದ್ದರು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೃಷ್ಣನಿಗಾಗಿ ಸಿಹಿ ಕರ್ಜಿಕಾಯಿ ಮಾಡುವ ವಿಧಾನ

    ಕೃಷ್ಣನಿಗಾಗಿ ಸಿಹಿ ಕರ್ಜಿಕಾಯಿ ಮಾಡುವ ವಿಧಾನ

    ಇಂದು ಕೃಷ್ಣ ಜನ್ಮಾಷ್ಟಮಿ. ಕೃಷ್ಣನ ಆರಾಧಕರು ದೇವಾಲಯಕ್ಕೆ ಹೋಗಿ ಪೂಜೆ ಮಾಡುತ್ತಾರೆ. ಕೆಲವರು ಮನೆಯಲ್ಲಿಯೇ ಕೃಷ್ಣನ ವಿಗ್ರಹಕ್ಕೆ ಪೂಜೆ ಮಾಡುತ್ತಾರೆ. ಆದರೆ ಪೂಜೆ ಮಾಡುವ ಮುನ್ನ ಕೃಷ್ಣನಿಗಾಗಿ ಸಿಹಿ ಪ್ರಸಾದ ಮಾಡಿ ನೈವೆದ್ಯವನ್ನು ಇಡಬೇಕು. ಪ್ರತಿ ಹಬ್ಬಕ್ಕೂ ಕೇಸರಿ ಬಾತ್, ಪಾಯಸ ಅದೇ ಸಿಹಿ ತಿಂಡಿ ಮಾಡಿ ಬೇಸರವಾಗಿದ್ದರೆ ಈ ಬಾರಿ ಕೃಷ್ಣನಿಗಾಗಿ ಬೇಗ ಹಾಗೂ ಸುಲಭವಾಗಿ ಸಿಹಿ ಕರ್ಜಿಕಾಯಿ ಮಾಡುವ ವಿಧಾನ ನಾವಿಂದು ಹೇಳಿಕೊಡುತ್ತಿದ್ದೇವೆ.

    ಬೇಕಾಗುವ ಪದಾರ್ಥಗಳು:
    ಮೈದಾ ಹಿಟ್ಟು – ಅರ್ಧ ಕೆಜಿ
    ಉಪ್ಪು – ಚಿಟಿಕೆ
    ಎಣ್ಣೆ – ಕರಿಯಲು
    ಕೊಬ್ಬರಿ – ಅರ್ಧ ಕೆಜಿ
    ಸಕ್ಕರೆ – ಕಾಲು ಕೆಜಿ
    ಏಲಕ್ಕಿ ಪುಡಿ – ಸ್ವಲ್ಪ ಇದನ್ನೂ ಓದಿ: ಕರಿ ಎಳ್ಳಿನ ಡಂಪ್ಲಿಂಗ್ – ಇದು ಚೈನೀಸ್ ಸ್ವೀಟ್

    ಮಾಡುವ ವಿಧಾನ:
    * ಮೈದಾ ಹಿಟ್ಟನ್ನು ಜರಡಿ ಅದಕ್ಕೆ ಚಿಟಿಕೆ ಉಪ್ಪು ಹಾಕಿ ನೀರು ಹಾಕಿಕೊಂಡು ಚಪಾತಿ ಹಿಟ್ಟಿನ ಹದಕ್ಕೆ ಕಲಸಿಡಿ.
    * ಕೊಬ್ಬರಿಯನ್ನು ತುರಿದು ಅದಕ್ಕೆ ಪುಡಿ ಮಾಡಿದ ಸಕ್ಕರೆ, ಏಲಕ್ಕಿ ಪುಡಿಯನ್ನು ಬೆರೆಸಿಡಿ.
    * ಇತ್ತ ಚೆನ್ನಾಗಿ ನಾದಿದ ಮೈದಾ ಹಿಟ್ಟನ್ನು ಸಣ್ಣ ಉಂಡೆಯನ್ನಾಗಿ ಮಾಡಿ ಪೂರಿಯಂತೆ ಲಟ್ಟಿಸಿ.
    * ಹೀಗೆ ಲಟ್ಟಿಸಿದ ಹಿಟ್ಟಿನ ಮಧ್ಯ ಭಾಗದಲ್ಲಿ ಕೊಬ್ಬರಿ ಮಿಶ್ರಿತ ಊರ್ಣವನ್ನು ತುಂಬಿ ಮಧ್ಯಕ್ಕೆ ಮಡಚಿ ಸೀಲ್ ಮಾಡಿ. (ಮಾರ್ಕೆಟ್‌ನಲ್ಲಿ ಸಿಗುವ ಕರ್ಜಿಕಾಯಿ ಮೌಲ್ಡ್ ಬಳಸಬಹುದು)
    * ಈ ರೀತಿ ಎಲ್ಲವನ್ನೂ ಮಾಡಿಟ್ಟುಕೊಂಡ ನಂತರ ಕಾದ ಎಣ್ಣೆಗೆ ಹಾಕಿ ಗೋಲ್ಡನ್ ಬ್ರೌನ್ ಬಣ್ಣಕ್ಕೆ ಬರುವವರೆಗೂ ಕರಿಯಿರಿ.
    * ಕರಿದ ಬಳಿಕ ಎಣ್ಣೆಯಿಂದ ತೆಗೆದು ಒಂದು ಪಾತ್ರೆಗೆ ಹಾಕಿ. ಗರಿ ಗರಿಯಾದ ಕರ್ಜಿಕಾಯಿಯನ್ನು ಹಲವು ದಿನಗಳ ಕಾಲ ಸ್ಟೋರ್ ಮಾಡಿ ತಿನ್ನಬಹುದು. ಇದನ್ನೂ ಓದಿ: ರಕ್ಷಾಬಂಧನ ಸ್ಪೆಷಲ್ – ಒಡಹುಟ್ಟಿದವರಿಗೆ ನಿಮ್ಮ ಕೈಯಾರೆ ಮಾಡಿ ಕೊಡಿ ಚಾಕ್ಲೇಟ್ ಬರ್ಫಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]