Tag: KR Ramesh Kumar

  • ಇನ್ಮುಂದೆ ಎಚ್ಚರಿಕೆಯಿಂದ ಮಾತಾಡ್ತೀನಿ- ಕ್ಷಮೆಯಾಚಿಸಿದ ರಮೇಶ್ ಕುಮಾರ್

    ಇನ್ಮುಂದೆ ಎಚ್ಚರಿಕೆಯಿಂದ ಮಾತಾಡ್ತೀನಿ- ಕ್ಷಮೆಯಾಚಿಸಿದ ರಮೇಶ್ ಕುಮಾರ್

    ಬೆಂಗಳೂರು: ಸದನದಲ್ಲಿ ನೀಡಿರುವ ಹೇಳಿಕೆ ವಿರುದ್ಧ ಖಂಡನೆ ವ್ಯಕ್ತವಾಗುತ್ತಿದ್ದಂತೆಯೇ ಮಾಜಿ ಸ್ಪೀಕರ್ ರಮೇಶ್ ಕುಮಾರ್ ರಾಜ್ಯದ ಜನರ ಕ್ಷಮೆಯಾಚಿಸಿದ್ದಾರೆ.

    ಈ ಸಂಬಂಧ ಟ್ವೀಟ್ ಮಾಡಿರುವ ಮಾಜಿ ಸ್ಪೀಕರ್, ‘ಅತ್ಯಾಚಾರ’ ಸಂಬಂಧ ಅಧಿವೇಶನದಲ್ಲಿ ನೀಡಿರುವ ನನ್ನ ಹೇಳಿಕೆ ಕುರಿತು ಎಲ್ಲರಿಗೂ ನನ್ನ ಪ್ರಾಮಾಣಿಕ ಕ್ಷಮೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ. ಅತ್ಯಂತ ಹೇಯವಾದ ಅಪರಾಧವನ್ನು ಅಲಕ್ಷಿಸುವುದು ನನ್ನ ಉದ್ದೇವಾಗಿರಲಿಲ್ಲ. ಮಾತಿನ ಭರದಲ್ಲಿ ಆ ಮಾತು ಬಂದಿದೆ. ಇನ್ಮುಂದೆ ಮಾತನಾಡುವಾಗ ಎಚ್ಚರಿಕೆ ವಹಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

    ಗುರುವಾರ ವಿಧಾನಸಭೆಯಲ್ಲಿ ಮಾತನಾಡುತ್ತಾ ಅತ್ಯಾಚಾರದಿಂದ ತಪ್ಪಿಸಿಕೊಳ್ಳಲು ಆಗದಿದ್ರೆ ಮಲಗಿ ಆನಂದಿಸಿ ಎಂದು ರಮೇಶ್ ಕುಮಾರ್ ಹೇಳಿಕೆ ನೀಡಿದ್ದರು. ರಮೇಶ್ ಕುಮಾರ್ ಈ ರೀತಿ ಹೇಳುತ್ತಿದ್ದಂತೆಯೇ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಹಲವು ಮಂದಿ ಸದಸ್ಯರು ಇದನ್ನು ತಮಾಷೆಯಾಗಿ ತೆಗೆದುಕೊಂಡರು. ಇದನ್ನೂ ಓದಿ: ತುಂಬಾ ಜನರು ನನ್ನನ್ನ ಜೈಲಿಗೆ ಕಳುಹಿಸಲು ಸಿದ್ಧರಿದ್ದಾರೆ: ರಮೇಶ್ ಕುಮಾರ್

    ಇತ್ತ ರಮೇಶ್ ಅವರ ಈ ಹೇಳಿಕೆಗೆ ಭಾರೀ ಖಂಡನೆ ವ್ಯಕ್ತವಾಗಿತ್ತು. ಅಲ್ಲದೆ ಬಿಜೆಪಿ ಶಾಸಕಿಯರೆಲ್ಲರೂ ಈ ಹೇಳಿಕೆ ವಿರುದ್ಧ ಕಪ್ಪು ಬಟ್ಟೆ ಪ್ರದರ್ಶನ ಮಾಡಿ ಪ್ರತಿಭಟನೆ ನಡೆಸುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.

  • ಮಾನ ಮಾರ್ಯಾದೆ ಇಲ್ಲದವರ ಬಗ್ಗೆ ನಾನು ಮಾತನಾಡುವುದಿಲ್ಲ: ರಮೇಶ್ ಕುಮಾರ್

    ಮಾನ ಮಾರ್ಯಾದೆ ಇಲ್ಲದವರ ಬಗ್ಗೆ ನಾನು ಮಾತನಾಡುವುದಿಲ್ಲ: ರಮೇಶ್ ಕುಮಾರ್

    ಚಿಕ್ಕಬಳ್ಳಾಪುರ: ಪೆಟ್ರೋಲ್-ಡೀಸೆಲ್ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ, ಇಂದು ಕಾಂಗ್ರೆಸ್ ಪಕ್ಷದ ವತಿಯಿಂದ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಸಚಿವ ಸುಧಾಕರ್ ಸ್ವಗ್ರಾಮದಲ್ಲಿ ಕಾಂಗ್ರೆಸ್ ನಾಯಕರು ಪಾದಯಾತ್ರೆ ನಡೆಸಿ ಶಕ್ತಿ ನಡೆಸುವುದರ ಮೂಲಕ ಸಚಿವ ಸುಧಾಕರ್ ವಿರುದ್ದ ಪರೋಕ್ಷ ವಾಗ್ದಾಳಿ ನಡೆಸಿದರು.

    ಪೇರೇಸಂದ್ರ ಗ್ರಾಮದಲ್ಲಿ ಸಾವಿರಾರು ಮಂದಿಯೊಂದಿಗೆ ಮೆರವಣಿಗೆ ನಡೆಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಸಚಿವ ಸುಧಾಕರ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. ಕೆಪಿಸಿಸಿ ಸದಸ್ಯ ವಿನಯ್ ಶ್ಯಾಂ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ಕಾರ್ಯಕ್ರಮದಲ್ಲಿಮ ರಮೇಶ್ ಕುಮಾರ್, ಕೃಷ್ಣಬೈರೇಗೌಡ, ಶಿವಶಂಕರರೆಡ್ಡಿ, ವಿ.ಮುನಿಯಪ್ಪ, ಸುಬ್ಬಾರೆಡ್ಡಿ ಭಾಗವಹಿಸಿದ್ದರು. ಇದನ್ನೂ ಓದಿ:  ಸಿದ್ದರಾಮಯ್ಯನ ಕಾಲಿಗೆ ಹಗ್ಗ ಕಟ್ಟಿ ಎಳೆದುಕೊಂಡು ಹೋಗ್ತಿದ್ರು: ಸದಾನಂದಗೌಡ ತಿರುಗೇಟು

    ನಾನು ವೈಯುಕ್ತಿಕವಾಗಿ ಯಾರ ಬಗ್ಗೆಯೂ ಮಾತನಾಡಲ್ಲ, ಅಂತಲೇ ಭಾಷಣ ಆರಂಭಿಸಿದರು. ಈ ಸರ್ಕಾರ ದಪ್ಪ ಎಮ್ಮೆ ಚರ್ಮದ ಸರ್ಕಾರ ಇದ್ದಂತೆ. ಕೊರೊನಾ ಬಂದಾಗ ಬೆಡ್ ಸಿಗಲಿಲ್ವೇ? ಆಕ್ಸಿಜನ್ ಸಿಗಲಿಲ್ವೇ? ಸರಿಯಾಗಿ ಔಷಧಿ ಕೊಡಲಿಲ್ವೇ? ನಾವು ರಾಜಕಾರಣಿಗಳು ಯಾರೂ ಸಾಯಲಿಲ್ಲ. ಸತ್ತ ಕುಟುಂಬಗಳಲ್ಲಿ ಇನ್ನೂ ನೋವು ಮಾಸಿಲ್ಲ ಎಂದರು.

    ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೆ 31 ಜನ ಸತ್ತರೆ. ಮೂರೇ ಜನ ಸತ್ತರು ಅಂತೀರಾ? ನಾವು ನಮ್ಮ ಮನೆಯಲ್ಲಿ ಸಾಕಿದ ನಾಯಿ ಕುರಿ ಸತ್ತರೆ ನೋವಾಗುತ್ತದೆ. ಆ ದಿನ ಊಟ ಮಾಡಲ್ಲ. ಆದರೆ ನಮಗೆ ವೋಟು ಹಾಕಿದ ಜನ 31 ಮಂದಿ ಸತ್ತರೆನಿಮಗೆ ಭಾರತರತ್ನ ಬಿರುದು ಕೊಡಬೇಕಾ? ನಮ್ಮ ಗೂಟದ ಕಾರುಗಳು, ಪೆÇಲೀಸ್ ಸೆಕ್ಯೂರಿಟಿ ಎಲ್ಲವೂ ಕ್ಷಣಿಕ, ನಮ್ಮ ಅಹಂ ಹಮ್ಮು ಬಿಮ್ಮು ಮೂರು ಕಾಸಿಗೆ ಕೆಲಸಕ್ಕೆ ಬರಲ್ಲ. ಬಿಜೆಪಿ ಹುಟ್ಟಿದ್ದು ಸ್ವಾತಂತ್ರ್ಯ ಬಂದ ನಂತರ. ಸ್ವಾತಂತ್ರ್ಯ ಬಂದ ಮೇಲೆ ಹುಟ್ಟಿದ ನೀವು ಕಾಂಗ್ರೆಸ್ ಏನು ಮಾಡಿಲ್ಲ ಅಂತೀರಾ? ಇಂದಿರಾ ಗಾಂಧಿ ಈ ದೇಶಕ್ಕಾಗಿ ಪ್ರಾಣ ಬಿಟ್ಟರು. ಆದರೆ ಈಗ ಬಿಜೆಪಿಯವರು ದೇಶ ಉದ್ದಾರ ಮಾಡೋಕೆ ಬಂದಿದ್ದಾರಂತೆ, ಜನ ಒಂದು ಸಲ ಯಾಮಾರಬಹುದು, ಯಾವಾಗಲೂ ಯಾಮಾರಿಸೋಕೆ ಆಗಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ:  ರೌಡಿಗಳಿಗೆ ಕಾನೂನಿನ ಭಯವಿಲ್ಲದೆ ಅಟ್ಟಹಾಸ ತೋರಿಸುತ್ತಿದ್ದಾರೆ: ಯು.ಟಿ.ಖಾದರ್

    ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಳುಗಲ್ಲ. ನಾನು ಮಾನಮರ್ಯಾದೆ ಇಲ್ಲದವರ ಬಗ್ಗೆ ಮಾತನಾಡಲ್ಲ. ಅದು ನನ್ನ ಸ್ವಭಾವ ಅಂತಲೇ ಸಚಿವ ಸುಧಾಕರ್‍ಗೆ ಪರೋಕ್ಷವಾಗಿ ಟಾಂಗ್ ನೀಡಿದರು. ವಸ್ತುಗಳನ್ನ ಹರಾಜು ಮಾಡಿದಂತೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾಯಿತ ಸ್ಥಾನಗಳನ್ನ ಹರಾಜು ಮಾಡಬೇಡಿ, ಇದು ದೇಶದ ಮಹಾನ್ ನಾಯಕರಿಗೆ ಅವಮಾನ ಮಾಡಿದಂತೆ. ನಿಮ್ಮ ಕಾಲಿಗೆ ಬಿದ್ದು ನಮಸ್ಕಾರ ಮಾಡುತ್ತೇನೆ, ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಕೊಡಿ ಎಂದು ಮನವಿ ಮಾಡಿಕೊಂಡರು.

  • ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ್ರೆ ಕೆಲವರಿಗೆ ಗೌರವ ಕಡಿಮೆ: ರಮೇಶ್ ಕುಮಾರ್

    ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ್ರೆ ಕೆಲವರಿಗೆ ಗೌರವ ಕಡಿಮೆ: ರಮೇಶ್ ಕುಮಾರ್

    ಕೋಲಾರ: ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೆ ಕೆಲವರಿಗೆ ಗೌರವ ಕಡಿಮೆ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು, ಅಲ್ಲೆ ಸತ್ತರೂ ಒಳ್ಳೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ವಿ ಅಂತಾರೆ ಎಂದು ಶಾಸಕ ರಮೇಶ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.

    ಇಂದು ಎಸ್‍ಎನ್‍ಆರ್ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರು ಹಾಗೂ ಆಸ್ಪತ್ರೆಯ ಸಿಬ್ಬಂದಿಯೊಂದಿಗೆ 2 ಗಂಟೆಗೂ ಹೆಚ್ಚು ಕಾಲ ಸಭೆ ನಡೆಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಿ ಆಸ್ಪತ್ರೆ ವೈದ್ಯರು ಕಾಪಿ ಹೊಡೆದು ಪರೀಕ್ಷೆ ಬರೆದು ಬಂದು ಚಿಕಿತ್ಸೆ ಕೊಡುತ್ತಿಲ್ಲ. ಅವರೆಲ್ಲಾ ಮೆಡೆಲ್ ತೆಗೆದುಕೊಂಡ ಉತ್ತಮ ವೈದ್ಯರು. ನಮ್ಮ ಜನರಲ್ಲಿ ಸರ್ಕಾರಿ ಆಸ್ಪತ್ರೆಗಳೆಂದರೆ ತಾತ್ಸಾರ ಮನೋಭಾವನೆ ಮೂಡಿದೆ ಇದನ್ನು ಮೊದಲು ಹೋಗಲಾಡಿಸಬೇಕಿದೆ ಎಂದರು.

    ಸರ್ಕಾರಿ ಆಸ್ಪತ್ರೆಗಳ ಕುರಿತು ಜನರಿಗೆ ಮಾನಸಿಕವಾಗಿ ಬಂದಿರುವ ಕಾಯಿಲೆಯನ್ನು ವಾಸಿ ಮಾಡಲು ಸಾಧ್ಯವಿಲ್ಲ. ಜನ ಜಾಗೃತರಾಗದಿದ್ದಲ್ಲಿ ನಾವೇನು ಮಾಡಲು ಸಾಧ್ಯವಿಲ್ಲ. ನಾನೇನು ಅರೋಗ್ಯ ಸಚಿವನಾ, ಎಲ್ಲವನ್ನೂ ಸರಿ ಮಾಡಕ್ಕಾಗುತ್ತಾ? ಎಲ್ಲಾ ಸರಿ ಮಾಡಲು ಸಾಧ್ಯವಿಲ್ಲ ಎಂದು ಸರ್ಕಾರಿ ಆಸ್ಪತ್ರೆಗಳು ಎಂದರೆ ಮೂಗು ಮುರಿಯುವ ಜನರ ವಿರುದ್ಧ ಬೇಸರ ವ್ಯಕ್ತಪಡಿಸಿದರು.

    ಫೋನ್ ಟ್ಯಾಪಿಂಗ್ ಕುರಿತು ಪ್ರತಿಕ್ರಿಯಿಸಲ್ಲ:
    ಸಭಾದ್ಯಕ್ಷ ಸ್ಥಾನ ದೊಡ್ಡದು, ನಾವು ಸಣ್ಣವರು, ಅಂತಹ ಸ್ಥಾನಕ್ಕೆ ಹೋಗಿ ಕುಳಿತುಕೊಂಡು ಬಂದ ಮೇಲೆ ಸಾರ್ವಜನಿಕ ಜೀವನದಲ್ಲಿ ಜವಾಬ್ದಾರಿಯುತವಾಗಿ ಮಾತನಾಡಬೇಕು. ಜನ ನನ್ನನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ಗೌರವಯುತವಾಗಿ ನಡೆದುಕೊಳ್ಳಬೇಕು, ಜನರು ನಮ್ಮ ಮೇಲೆ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ನಾವು ಅದಕ್ಕೆ ಅನುಗುಣವಾಗಿ ನಡೆದುಕೊಳ್ಳಬೇಕು. ಹೀಗಾಗಿ ಫೋನ್ ಕದ್ದಾಲಿಕೆ ಕುರಿತು ಪ್ರತಿಕ್ರಿಯಿಸಲ್ಲ ಎಂದು ರಮೇಶ್ ಕುಮಾರ್ ಸ್ಪಷ್ಟಪಡಿಸಿದರು.

  • ಎತ್ತಿನ ಹೊಳೆಗೂ ದಕ್ಷಿಣ ಕನ್ನಡದ ನೀರಿನ ಸಮಸ್ಯೆಗೂ ಯಾವುದೇ ಸಂಬಂಧವಿಲ್ಲ – ರಮೇಶ್ ಕುಮಾರ್

    ಎತ್ತಿನ ಹೊಳೆಗೂ ದಕ್ಷಿಣ ಕನ್ನಡದ ನೀರಿನ ಸಮಸ್ಯೆಗೂ ಯಾವುದೇ ಸಂಬಂಧವಿಲ್ಲ – ರಮೇಶ್ ಕುಮಾರ್

    ಕೋಲಾರ: ಎತ್ತಿನ ಹೊಳೆ ನೀರಿನ ಯೋಜನೆಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ನೀರಿ ಸಮಸ್ಯೆಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಸ್ಪೀಕರ್ ಕೆ.ಆರ್ ರಮೇಶ್ ಕುಮಾರ್ ಅವರು ಹೇಳಿದ್ದಾರೆ.

    ಇಂದು ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎತ್ತಿನ ಹೊಳೆ ಯೋಜನೆಗೂ ಮಂಗಳೂರು ಹಾಗೂ ಧರ್ಮಸ್ಥಳದಲ್ಲಿ ಇರುವ ನೀರಿನ ಸಮಸ್ಯೆಗೂ ಯಾವುದೇ ರೀತಿಯ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.

    ಎತ್ತಿನ ಹೊಳೆ ಯೋಜನೆ ವೇಗವಾಗಿ ಸಾಗುತ್ತಿದ್ದು, ಜೂ.12 ರಂದು ಬಯಲುಸೀಮೆಯ ಎಲ್ಲಾ ಶಾಸಕರು ಕಾಮಗಾರಿಯನ್ನು ಪರಿಶೀಲನೆ ಮಾಡಲಿದ್ದಾರೆ. ಮಂಗಳೂರಲ್ಲಿ ನೀರಿನ ಸಮಸ್ಯೆಗೂ ಎತ್ತಿನ ಹೊಳೆಗೂ ಸಂಬಂಧವಿಲ್ಲ ಕೆಲವರು ಬೇಕಾಗಿ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ವಿರೋಧ ಮಾಡುವರು ನಮ್ಮ ವಿರೋಧಿಗಳಲ್ಲ. ಅವರೆಲ್ಲ ನಮ್ಮ ಅಣ್ಣ ತಮ್ಮಂದಿರು ಅವರಿಗೆ ನಮ್ಮ ಸಮಸ್ಯೆ ಕುರಿತು ಮನವರಿಕೆ ಮಾಡಲಾಗುವುದೆಂದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಆಕಾಶದಿಂದ ಬೀಳುವ ನೀರು ಪಶ್ಚಿಮಘಟ್ಟಗಳ ಮೂಲಕ ಅರಬ್ಬಿ ಸಮುದ್ರಕ್ಕೆ ಸೇರುತಿತ್ತು. 65 ವರ್ಷಗಳ ಇತಿಹಾಸದ ಅಂಕಿ ಅಂಶಗಳ ಪ್ರಕಾರ ಸಕಲೇಶಪುರದ ಕೆಂಪುಹೊಳೆ, ವಾಟೆ ಹೊಳೆ, ಹೊಸ ಹೊಳೆ ಸೇರಿದಂತೆ 7 ಹೊಳೆಗಳಿದ್ದು, ಇಲ್ಲಿ ಸುಮಾರು 400 ರಿಂದ 450 ಟಿಎಂಸಿ ನೀರು ಹರಿದು ಪ್ರತಿ ವರ್ಷ ಅರಬ್ಬಿ ಸಮುದ್ರ ಸೇರುತ್ತಿದೆ. ಇಲ್ಲಿ ಸಣ್ಣದಾದ ಗೋಡೆಯನ್ನು ನಿರ್ಮಿಸಿ 24 ಟಿಎಂಸಿ ನೀರನ್ನು ಬಯಲುಸೀಮೆ ಪ್ರದೇಶಗಳಿಗೆ ಹರಿಸುವುದೇ ಎತ್ತಿನಹೊಳೆ ಯೋಜನೆ ಉದ್ದೇಶ ಎಂದರು.

    ಈ ವಿಚಾರದ ಬಗ್ಗೆ ತಿಪಟೂರು ಮತ್ತು ಚಿಕ್ಕನಾಯಕನಹಳ್ಳಿ ಶಾಸಕರುಗಳಿಗೆ ಚಿಕ್ಕ ಆಕ್ಷೇಪವಿತ್ತು. ಅದನ್ನು ದೂರವಾಣಿ ಮೂಲಕ ಮಾತನಾಡಿ ಸಮಸ್ಯೆಯನ್ನು ಬಗೆಹರಿಸಿದ್ದೇವೆ ಎಂದು ಸ್ಪಷ್ಟನೆ ನೀಡಿದರು.

  • ಸಿಎಂ ಆಗಿರೋವಾಗ ನೀವಿರೋದು ನನ್ನ ಜೀವನದ ಅವಿಸ್ಮರಣೀಯ ಕ್ಷಣ: ಸ್ಪೀಕರ್ ಗೆ ಎಚ್‍ಡಿಕೆ ಅಭಿನಂದನೆ

    ಸಿಎಂ ಆಗಿರೋವಾಗ ನೀವಿರೋದು ನನ್ನ ಜೀವನದ ಅವಿಸ್ಮರಣೀಯ ಕ್ಷಣ: ಸ್ಪೀಕರ್ ಗೆ ಎಚ್‍ಡಿಕೆ ಅಭಿನಂದನೆ

    ಬೆಂಗಳೂರು: ನೂತನ ಸ್ಪೀಕರ್ ಆಗಿ ಆಯ್ಕೆಯಾದ ಕೆ.ಆರ್.ರಮೇಶ್‍ಕುಮಾರ್ ಅವರಿಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅಭಿನಂದನೆ ಸಲ್ಲಿಸಿದ್ದಾರೆ.

    ಅವಿರೋಧವಾಗಿ ಆಯ್ಕೆಯಾದ ಬಳಿಕ ಸದನದಲ್ಲಿ ಮಾತನಾಡಿದ ಅವರು, ಐದು ವರ್ಷಗಳ ನಡೆಸುವ ನಮ್ಮ ಸರ್ಕಾರಕ್ಕೆ ಸೂಕ್ತ ಮಾರ್ಗವನ್ನು ತೋರಿಸಬೇಕು. ನಿಮ್ಮ ಅನುಭವ ಎಲ್ಲರಿಗೂ ಮಾದರಿಯಾಗಿರಬೇಕು. ಇಂದು ನೀವು ನಮ್ಮೊಂದಿಗೆ ನೀವಿರುವುದು ನಮ್ಮೆಲ್ಲರ ಸೌಭಾಗ್ಯ. ವಿರೋಧ ಪಕ್ಷದ ನಾಯಕರು ಸಹ ನಿಮ್ಮನ್ನು ಸರ್ವಾನುಮತದಿಂದ ಆಯ್ಕೆ ಮಾಡಿದಕ್ಕೆ ನಾನು ಧನ್ಯವಾದ ತಿಳಿಸುತ್ತೇನೆ ಎಂದರು.

    1994ರಲ್ಲಿ ನೀವು ಸ್ಪೀಕರ್ ಆಗಿದ್ದಾಗ ನನ್ನ ಸ್ಥಾನದಲ್ಲಿ ನಮ್ಮ ತಂದೆಯವರಾದ ದೇವೇಗೌಡರು ಇದ್ದರು. ಇಂದು ಕಾಕತಾಳೀಯವಾಗಿ ಆ ಸ್ಥಾನದಲ್ಲಿ ನಾನಿದ್ದೇನೆ. ಹಾಗಾಗಿ ಇದು ನನ್ನ ಜೀವನದ ಅವಿಸ್ಮರಣೀಯ ಕ್ಷಣ ಅಂತಾ ಬಣ್ಣಿಸಿದ್ರು.

    ಇದೇ ವೇಳೆ ಮೈಸೂರು ರಾಜರ ಆಳ್ವಿಕೆಯನ್ನು ಮೆಲಕು ಹಾಕಿಕೊಂಡ ಎಚ್‍ಡಿಕೆ ದೇಶದಲ್ಲಿಯೇ ಮೈಸೂರು ಆಳ್ವಿಕೆಗೆ ಹೆಸರು ವಾಸಿಯಾಗಿದೆ. ಸದನದ ಘನತೆ ಗೌರವವನ್ನು ಎತ್ತಿ ಹಿಡಿಯುವುದು ನಮ್ಮ ಕರ್ತವ್ಯ ಅಂತಾ ಹೇಳಿದ್ರು.

    ವಿರೋಧ ಪಕ್ಷದ ನಾಯಕರಾದ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ನೀವು ಸ್ಪೀಕರ್ ಆಗಿ ಆಯ್ಕೆಯಾಗಿರುವುದು ನಮ್ಮಲ್ಲಿ ಸಂಭ್ರಮ ಮನೆ ಮಾಡಿದೆ. ಸ್ಪೀಕರ್ ಸ್ಥಾನ ಅತಿ ದೊಡ್ಡ ಸ್ಥಾನ ಆಗಿರುವದರಿಂದ ನಮ್ಮ ಅಭ್ಯರ್ಥಿ ನಾಮಪತ್ರವನ್ನು ಹಿಂದಕ್ಕೆ ಪಡೆದಿದ್ದಾರೆ. 1994 ರಿಂದ 99ರಲ್ಲಿಯೂ ನೀವು ಸ್ಪೀಕರ್ ಆಗಿ ಕೆಲಸ ಮಾಡಿರುವುದನ್ನು ನಾವು ನೋಡಿದ್ದೇವೆ. ನಿಮಗೆ ಪಕ್ಷದ ಎಲ್ಲರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಅಂತಾ ತಿಳಿಸಿದ್ರು.

  • ಸಭೆಯಲ್ಲಿ ಸಿಎಂ ಸಿದ್ದರಾಮಯ್ಯನವರನ್ನು ಹಾಡಿ ಹೊಗಳಿದ ರಮೇಶ್ ಕುಮಾರ್

    ಸಭೆಯಲ್ಲಿ ಸಿಎಂ ಸಿದ್ದರಾಮಯ್ಯನವರನ್ನು ಹಾಡಿ ಹೊಗಳಿದ ರಮೇಶ್ ಕುಮಾರ್

    ಕೋಲಾರ: ಇಷ್ಟು ವರ್ಷದವರೆಗೂ ಯಾವ ಮುಖ್ಯಮಂತ್ರಿಗಳು ರೈತರ ಸಾಲವನ್ನು ಮನ್ನಾ ಮಾಡಿರಲಿಲ್ಲ. ಜಿಲ್ಲೆಗೆ ನಿರ್ಧಿಷ್ಟ ನೀರಾವರಿ ಯೋಜನೆಯನ್ನೂ ಮಾಡುವ ಗಂಡಸ್ತನವನ್ನು ಹೊಂದಿರಲಿಲ್ಲ. ಆದರೆ ನಮ್ಮ ಸಿಎಂ ರೈತರ ಸಾಲಮನ್ನಾ ಹಾಗೂ ಜಿಲ್ಲೆಗೆ ನಿರ್ಧಿಷ್ಟ ನೀರಾವರಿ ಯೋಜನೆ ಮಾಡಿದ್ದಾರೆ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಸಿದ್ದರಾಮಯ್ಯ ಅವರನ್ನು ಹಾಡಿ ಹೊಗಳಿದ್ದಾರೆ.

    ಸೋಮವಾರ ನಗರದ ಪ್ರವಾಸಿ ಮಂದಿರದಲ್ಲಿ ಮನವೊಲಿಕೆ ಹಾಗೂ ಹೋರಾಟಗಾರರ ಸಭೆಯಲ್ಲಿ ರಮೇಶ್ ಕುಮಾರ್ ಮಾತನಾಡಿ ಸರ್ಕಾರದ ಸಾಧನೆಯನ್ನು ವಿವರಿಸಿದರು.

    20 ರಂದು ಕೋಲಾರ ಜಿಲ್ಲೆಗೆ ಸಿಎಂ ಸಿದ್ದರಾಮಯ್ಯ ಆಗಮನದ ಹಿನ್ನಲೆ ನಗರದ ಪ್ರವಾಸಿ ಮಂದಿರದಲ್ಲಿ ರಮೇಶ್ ಕುಮಾರ್ ನೇತೃತ್ವದಲ್ಲಿ ಹೋರಾಟಗಾರರ ಮನವೊಲಿಸುವ ಸಭೆ ಯಶಸ್ವಿಯಾಯಿತು. ಅಲ್ಲದೆ ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಯಾವುದೇ ಅಡೆತಡೆಗಳನ್ನು ಮಾಡದಂತೆ ಮನವಿ ಮಾಡಿದರು. ಇನ್ನೂ 11 ಜನ ನೀರಾವರಿ ಹೋರಾಟಗಾರರ ಮೇಲಿನ ಪ್ರಕರಣಗಳನ್ನ ಹಿಂಪಡೆಯುವ ಕುರಿತು ಸರ್ಕಾರದ ಗಮನ ಸೆಳೆಯುವ ಭರವಸೆಯನ್ನು ನೀಡಿದರು.

     ಕೆಜೆ ಜಾರ್ಜ್ ಗಣಪತಿ ಪ್ರಕರಣದಲ್ಲಿ  ಜಾರ್ಜ್ ರಾಜೀನಾಮೆ ನೀಡಬೇಕೆಂಬ ಬಿಜೆಪಿ ನಾಯಕರ ಆಗ್ರಹಕ್ಕೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಗಣಪತಿ ವಿಸರ್ಜನೆಯಾಗಿದೆ ಎಂದು ಹೇಳಿ ವ್ಯಂಗ್ಯವಾಡಿದರು. ಅಲ್ಲದೆ ಆರೋಪ ಸಾಭೀತಾದ ತಕ್ಷಣ ರಾಜೀನಾಮೆ ನೀಡುವಂತೆ ಯಾವ ಸುಪ್ರಿಂಕೋರ್ಟ್ ಆದೇಶ ಮಾಡಿಲ್ಲ. ಜೊತೆಗೆ ರಾಜೀನಾಮೆಗೆ ಆಗ್ರಹಿಸುವವರು ಸುಪ್ರಿಂಕೋರ್ಟ್ ಆದೇಶವನ್ನು ಮೊದಲು ಸರಿಯಾಗಿ ಓದಲಿ ಎಂದು ಹೇಳುವ ಮೂಲಕ ಬಿಜೆಪಿ ನಾಯಕರಿಗೆ ಟಾಂಗ್ ನೀಡಿದರು.

    ವೈಚಾರಿಕ ಅಭಿಪ್ರಾಯ ಭೇದ ವಿಕಾರ ರೂಪಕ್ಕೆ ತಾಳದೆ ಗೌರವಯುತವಾಗಿ ನಡೆದುಕೊಳ್ಳಬೇಕು ಹೀಗೆ ನಡೆದುಕೊಂಡರೆ ಮಾತ್ರ ನಾಯಕರಾಗಿ ದೇಶದ ಜನತೆಗೆ ಮಾದರಿಯಾಗಿರಲು ಸಾಧ್ಯವೆಂದು ರಮೇಶ್ ಕುಮಾರ್ ಹೇಳಿದರು.