Tag: KR Pate

  • ದಾಯಾದಿ ಕಲಹ – ವ್ಯಕ್ತಿಗೆ ಬೆಂಕಿ, ಆಸ್ಪತ್ರೆಯಲ್ಲಿ ಸಾವು

    ದಾಯಾದಿ ಕಲಹ – ವ್ಯಕ್ತಿಗೆ ಬೆಂಕಿ, ಆಸ್ಪತ್ರೆಯಲ್ಲಿ ಸಾವು

    ಮಂಡ್ಯ: ದಾಯಾದಿ ಕಲಹದಿಂದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಪರಿಣಾಮ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಕೆಆರ್‍ಪೇಟೆ ತಾಲೂಕಿನ ಮೂಡನಹಳ್ಳಿ ಗ್ರಾಮದಲ್ಲಿ ಜರುಗಿದೆ.

    ಮೂಡನಹಳ್ಳಿ ಗ್ರಾಮದ ರಘು(29) ಸಾವಿಗೀಡಾದ ದುರ್ದೈವಿ. ಒಂದೂವರೆ ತಿಂಗಳ ಹಿಂದೆಯಷ್ಟೇ ರಘು ಮದುವೆಯಾಗಿದ್ದು, ಇದೇ ಸೆ.25 ರ ರಾತ್ರಿ ಈ ಘಟನೆ ಜರುಗಿದೆ. ಅಂದು ಸುಟ್ಟಗಾಯಗಳಿಂದ ಬಳಲುತ್ತಿದ್ದ ರಘು ಅವರನ್ನು ಮೈಸೂರಿನ ಕೆಆರ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದೀಗ ಚಿಕಿತ್ಸೆ ಫಲಿಸದೆ ರಘು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ:  ಆರ್ಥಿಕ ಸಂಕಷ್ಟದಿಂದ ಮನನೊಂದು KSRTC ನೌಕರ ವಿಷ ಸೇವಿಸಿ ಆತ್ಮಹತ್ಯೆ

    ರಘು ತನ್ನದೇ ಸ್ವಂತ ಕಾರು ಹೊಂದಿದ್ದು, ಬೆಂಗಳೂರಿನಲ್ಲಿ ಚಾಲಕನಾಗಿ ಕೆಲಸ ಮಾಡ್ತಿದ್ದರು. ಲಾಕ್‍ಡೌನ್ ಹಿನ್ನೆಲೆ ಕಳೆದ ಕೆಲ ತಿಂಗಳಿನಿಂದ ಮೂಡನಹಳ್ಳಿಯಲ್ಲೇ ಇದ್ದರು. ಸೆ.25 ರ ರಾತ್ರಿ ಕಾರನ್ನು ಸ್ವಚ್ಛಗೊಳಿಸಿ ಮಾರನೆ ದಿನ ಬೆಂಗಳೂರು ಹೋಗಲು ಸಿದ್ಧತೆ ಆರಂಭಿಸಿದ್ದರು. ಕಾರಿನ ಒಳಗೆ ಕುಳಿತು ಗ್ಲಾಸ್ ಮೇಲೆತ್ತುವ ವೇಳೆ ರಘುಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ.

    ಈ ಕೃತ್ಯ ಮಾಡಿದ್ದು, ರಘು ದಾಯಾದಿ ಶಿವು ಎಂದು ಹೇಳಲಾಗುತ್ತಿದೆ. ಘಟನೆ ನಂತರ ಶಿವು ಇದೀಗ ತಲೆ ಮರೆಸಿಕೊಂಡಿದ್ದಾನೆ. ಇದನ್ನೂ ಓದಿ:  ಅಸ್ಸಾಂನಿಂದ ಬರುತ್ತಿದ್ದಾರೆ ನೂರಾರು ಕೂಲಿ ಕಾರ್ಮಿಕರು – ಸ್ಥಳೀಯರ ಆತಂಕ

    ಈ ಪ್ರಕರಣ ಕೆ.ಆರ್.ಪೇಟೆ ಗ್ರಾಮಾಂತರ ಠಾಣೆಯ ವ್ಯಾಪ್ತಿಯಲ್ಲಿ ಜರುಗಿದೆ.

  • ಅಭಿವೃದ್ಧಿಯೇ ನನ್ನ ಗುರಿ, ತಾಲೂಕಿನ ಕನಸನ್ನು ನನಸು ಮಾಡ್ತೀನಿ: ನಾರಾಯಣ ಗೌಡ

    ಅಭಿವೃದ್ಧಿಯೇ ನನ್ನ ಗುರಿ, ತಾಲೂಕಿನ ಕನಸನ್ನು ನನಸು ಮಾಡ್ತೀನಿ: ನಾರಾಯಣ ಗೌಡ

    ಮಂಡ್ಯ: ಅಭಿವೃದ್ಧಿಯೇ ನನ್ನ ಗುರಿಯಾಗಿದ್ದು, ತಾಲೂಕಿನ ಜನರ ಕನಸನ್ನು ನನಸು ಮಾಡುವತ್ತ  ಕೆಲಸಗಳನ್ನು ಆರಂಭಿಸುತ್ತೇನೆ ಎಂದು ಕೆ.ಆರ್.ಪೇಟೆಯಲ್ಲಿ ಗೆಲುವು ದಾಖಲಿಸಿರುವ ಬಿಜೆಪಿ ನಾರಾಯಣಗೌಡ ಹೇಳಿದ್ದಾರೆ.

    ಕ್ಷೇತ್ರದ ಅಭಿವೃದ್ಧಿಗಾಗಿ ನಾನು ಸ್ಪಲ್ಪ ಕೆಲಸ ಮಾಡಿದ್ದೇನೆ. ಸಿಎಂ ಬಿ.ಎಸ್.ಯಡಿಯೂರಪ್ಪ ಸಹ ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡುತ್ತಿದ್ದಾರೆ. ಸಿಎಂ ಮತ್ತು ನನ್ನ ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿ ಕ್ಷೇತ್ರದ ಜನತೆ ಮತ ನೀಡಿದ್ದಾರೆ. ಆದ್ದರಿಂದ ಗೆಲುವು ಲಭಿಸಿದೆ ಎಂದು ನಾರಾಯಣಗೌಡ ಮಾಧ್ಯಮಗಳ ಜೊತೆ ಸಂತೋಷ ಹಂಚಿಕೊಂಡರು.

    ಇದೇ ವೇಳೆ ಚುನಾವಣೆಯಲ್ಲಿ ತಮ್ಮ ಪರವಾಗಿ ಪ್ರಚಾರ ಮಾಡಿದ ಸಿಎಂ ಬಿ.ಎಸ್.ಯಡಿಯೂರಪ್ಪ, ಡಿಸಿಎಂ ಅಶ್ವಥ್ ನಾರಾಯಣ, ಬಿಜೆಪಿ ಶಾಸಕ ಪ್ರೀತಂಗೌಡ ಮತ್ತು ಸಿಎಂ ಪುತ್ರ ವಿಜಯೇಂದ್ರ ಸೇರಿದಂತೆ ಪಕ್ಷದ ಪ್ರತಿ ಕಾರ್ಯಕರ್ತರಿಗೂ ನಾರಾಯಣ ಗೌಡರು ಧನ್ಯವಾದ ಸಲ್ಲಿಸಿದರು.

    ಕೆ.ಆರ್.ಪೇಟೆ ಅಖಾಡದಲ್ಲಿ ಬಿಜೆಪಿಗೆ ಜೆಡಿಎಸ್ ಭಾರೀ ಪೈಪೋಟಿ ನೀಡಿತ್ತು. ಎರಡು ಪಕ್ಷದ ಅಭ್ಯರ್ಥಿಗಳ ಮಧ್ಯೆ ಒಂದು ರೀತಿಯ ಹಾವು-ಏಣಿ ಆಟವೇ ನಡೆದಿತ್ತು. ಅಂತಿಮವಾಗಿ ಜೆಡಿಎಸ್ ನ ದೇವರಾಜು ಅವರನ್ನು ಸೋಲಿಸಿ ಗೆಲುವಿನ ಗುರಿಯನ್ನು ನಾರಾಯಣಗೌಡರು ತಲುಪಿದರು. ಇತ್ತ ಕೆ.ಆರ್.ಪೇಟೆಯಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚಾರಣೆ ಮಾಡುತ್ತಿದ್ದಾರೆ.

  • ಕೆ.ಆರ್.ಪೇಟೆಯಲ್ಲಿ ಪ್ರಚಾರ ಮಾಡ್ತಾರಾ ಯಶ್, ದರ್ಶನ್?

    ಕೆ.ಆರ್.ಪೇಟೆಯಲ್ಲಿ ಪ್ರಚಾರ ಮಾಡ್ತಾರಾ ಯಶ್, ದರ್ಶನ್?

    ಮಂಡ್ಯ: ಸ್ವಾಭಿಮಾನದ ಮಂತ್ರ ಜಪಿಸಿ ಮಂಡ್ಯ ಜನರ ಮನ ಗೆದ್ದಿದ್ದ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಕಾಂಗ್ರೆಸ್-ಬಿಜೆಪಿ ಪ್ರಚಾರಕ್ಕೆ ಬರುವಂತೆ ಆಹ್ವಾನಿಸಿವೆ. ಆದರೆ ಸುಮಲತಾ ಯಾರ ಪ್ರಚಾರಕ್ಕೆ ತೆರಳದೇ ತಟಸ್ಥ ನಿಲುವು ತೋರಿದ್ದಾರೆ. ನೀವು ಬರದಿದ್ದರೂ ಪರವಾಗಿಲ್ಲ, ನಟರಾದ ಯಶ್ ಮತ್ತು ದರ್ಶನ್ ಅವರನ್ನು ಪ್ರಚಾರಕ್ಕೆ ಕಳಿಸುವಂತೆ ಪಕ್ಷಗಳು ದುಂಬಾಲು ಬಿದ್ದಿವೆ ಎನ್ನಲಾಗಿದೆ.

    ಕೆ.ಆರ್. ಪೇಟೆ ವಿಧಾನಸಭೆಯ ಉಪ ಚುನಾವಣೆಯ ಅಖಾಡ ದಿನದಿಂದ ದಿನಕ್ಕೆ ರಂಗು ಪಡೆದುಕೊಳ್ಳುತ್ತಿದೆ. ಇದರ ಜೊತೆ ಜೊತೆಗೆ ಹೊಸ ಹೊಸ ತಿರುವು ಸಹ ಪಡೆದುಕೊಳ್ಳುತ್ತಿದೆ. ಬಿಜೆಪಿಯವರು ಸಿಎಂ ಬಿಎಸ್ ಯಡಿಯೂರಪ್ಪ ತವರು ಕ್ಷೇತ್ರ ಕೆಆರ್ ಪೇಟೆಯಲ್ಲಿ ಹೇಗಾದ್ರೂ ಮಾಡಿ ಕಮಲ ಅರಳಿಸಲು ಇನ್ನಿಲ್ಲದ ಕಸರತ್ತುಗಳನ್ನು ಮಾಡುತ್ತಿದ್ದಾರೆ. ಇತ್ತ ಜೆಡಿಎಸ್ ಕ್ಷೇತ್ರವನ್ನು ಉಳಿಸಿಕೊಳ್ಳಲು ದಳಪತಿಗಳು ಸಮಾವೇಶಗಳನ್ನು ಮಾಡುತ್ತಿದ್ದಾರೆ. ಎರಡೂ ಪಕ್ಷಗಳಿಗೆ ಟಕ್ಕರ್ ಕೊಡಲು ಕಾಂಗ್ರೆಸ್ ಕೂಡ ಸಿದ್ಧಗೊಂಡಿದೆ.

    ಇಷ್ಟು ದಿನ ಕಾಂಗ್ರೆಸ್ ಮತ್ತು ಬಿಜೆಪಿಯವರು ಸುಮಲತಾರಿಂದ ತಮ್ಮ ಪರ ಪ್ರಚಾರ ಮಾಡಿಸಬೇಕು. ಈ ಮೂಲಕ ಒಂದಷ್ಟು ವೋಟುಗಳನ್ನ ಸೆಳೆಯಬೇಕು ಎಂದು ಪ್ರಯತ್ನ ಪಟ್ಟಿದ್ದರು ಇದೀಗ ಬಿಜೆಪಿ ಜೋಡೆತ್ತುಗಳಿಗೆ ಗಾಳ ಹಾಕಲು ಯತ್ನಿಸುತ್ತಿದೆ ಎಂದು ತಿಳಿದು ಬಂದಿದೆ.

  • ತಾಕತ್ ಇದ್ದರೆ ಕೆ.ಆರ್.ಪೇಟೆಯಲ್ಲಿನ ಜೋಡೆತ್ತುಗಳನ್ನು ನಿಲ್ಲಿಸಿ- ಕಟೀಲ್

    ತಾಕತ್ ಇದ್ದರೆ ಕೆ.ಆರ್.ಪೇಟೆಯಲ್ಲಿನ ಜೋಡೆತ್ತುಗಳನ್ನು ನಿಲ್ಲಿಸಿ- ಕಟೀಲ್

    ಮಂಡ್ಯ: ಕೆ.ಆರ್.ಪೇಟೆಯಲ್ಲಿ ವಿಜಯೇಂದ್ರ ಮತ್ತು ನಾರಾಯಣಗೌಡರು ಜೋಡೆತ್ತುಗಳು. ತಾಕತ್ ಇದ್ದವರು ಈ ಜೋಡೆತ್ತುಗಳನ್ನು ನಿಲ್ಲಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಚಾಲೆಂಜ್ ಮಾಡಿದ್ದಾರೆ.

    ಕೆ.ಆರ್.ಪೇಟೆಯ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪನವರಿಗೆ ಜನ್ಮ ಕೊಟ್ಟ ಪುಣ್ಯ ಭೂಮಿ ಕೆ.ಆರ್.ಪೇಟೆ. ಇಲ್ಲಿಂದಲೇ ಚುನಾವಣೆ ಪ್ರಚಾರ ಪ್ರಾರಂಭಿಸುತ್ತಿದ್ದೇನೆ. ಅಭಿವೃದ್ಧಿಗಾಗಿ ರಾಜೀನಾಮೆ ಕೊಟ್ಟ ನಾಯಕನ ಊರು ಇದು. ಸ್ವಾಭಿಮಾನಕ್ಕಾಗಿ ನಾರಾಯಣಗೌಡರು ರಾಜೀನಾಮೆ ಕೊಟ್ಟಿದ್ದಾರೆ. ಇದು ಅಧಿಕಾರದ ಸ್ವಾಭಿಮಾನವಲ್ಲ, ಅಭಿವೃದ್ಧಿಯ ಸ್ವಾಭಿಮಾನ ಎಂದರು.

    ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಮುಂದುವರಿಯಲು ನೀವು ನಾರಾಯಣಗೌಡ ಅವರನ್ನು ಗೆಲ್ಲಿಸಬೇಕು. ನಾವು ಗೂಂಡಾ ರಾಜಕೀಯ, ಜಾತಿ ರಾಜಕೀಯ ಎಲ್ಲವನ್ನೂ ನಿಲ್ಲಿಸುತ್ತೇವೆ. ಮೊದಲ ಬಾರಿಗೆ ರಾವಣನ ಪಾರ್ಟಿಯಿಂದ ರಾಮನ ಪಾರ್ಟಿಗೆ ಬಂದಿದ್ದು ವಿಭಿಷಣ. ರಾಕ್ಷಸರ ಜೊತೆ ಇದ್ದರೆ ಮೋಕ್ಷ ಸಿಗುವುದಿಲ್ಲ ಎಂದು ರಾಮನ ಕಡೆ ಬಂದರು. ಈಗ ಕಲಿಯುಗದ ವಿಭಿಷಣ ನಾರಾಯಣಗೌಡರು . ಹಾಗಿದ್ದರೆ ಈಗ ರಾಮ ಯಡಿಯೂರಪ್ಪನವರಾಗಿದ್ದಾರೆ ಎಂದು ಬಿಎಸ್‍ವೈ ಅವರನ್ನು ಹಾಡಿ ಹೊಗಳಿದರು.

    ಈಗ ಕೆ.ಆರ್.ಪೇಟೆ ರಾಮ ರಾಜ್ಯವಾಗುತ್ತದೆ. ನಿಮಗೆ ರಾಮ ರಾಜ್ಯ ಬೇಕಾ ಅಥವಾ ರಾವಣ ರಾಜ್ಯ ಬೇಕಾ? ರಾಮ ರಾಜ್ಯವಾಗಬೇಕು ಎಂದರೆ ನಾರಾಯಣಗೌಡರು ಗೆಲ್ಲಬೇಕು ಎಂದರು.

    ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ರಚನೆ ಕುರಿತು ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಬರಬೇಕೆಂದು ಜನರ ನಿರೀಕ್ಷೆ ಆಗಿತ್ತು. ಕರ್ನಾಟದಂತೆ ಅಲ್ಲೂ ಸಹ ವಿಭಿನ್ನ ನಡೆಯ ಎರಡು ಪಕ್ಷಗಳು ಅಪವಿತ್ರ ಮೈತ್ರಿ ಮಾಡಿಕೊಂಡಿದ್ದವು. ಆದರೆ ಈಗ ಜನಾದೇಶಕ್ಕೆ ಬೆಲೆ ಬಂದಿದೆ ನಾವು ಸರ್ಕಾರದ ವಿಶ್ವಾಸ ಮತ ಯಾಚನೆ ಮಾಡುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದರು.

    ರಾತ್ರೋ ರಾತ್ರಿ ರಾಷ್ಟ್ರಪತಿ ಆಡಳಿತ ವಾಪಸ್ ಪಡೆದ ಕುರಿತು ಪ್ರತಿಕ್ರಿಯಿಸಿದ ಅವರು, ರಾಷ್ಟ್ರದ ಹಿತಕ್ಕಾಗಿ ರಾಷ್ಟ್ರಪತಿ ಭವನ, ಕೋರ್ಟ್ ಗಳು ಕೆಲವು ವೇಳೆ ಕೆಲಸ ಮಾಡಬೇಕಾಗುತ್ತದೆ. ಹಿಂದೆ ತುರ್ತುಸ್ಥಿತಿ ಸಂದರ್ಭವನ್ನು ನೆನಪು ಮಾಡಿಕೊಳ್ಳಿ. ಆಗ ರಾಷ್ಟ್ರಪತಿ ಭವನದ ದುರುಪಯೋಗವಾಗಿರಲಿಲ್ಲವೇ ಎಂದು ಪ್ರಶ್ನಿಸಿದರು.

  • ಎಕ್ಕಡದಲ್ಲಿ ಹೊಡೆದ್ರು, ದೇವರಾಜು ಅದನ್ನ ಅನುಭವಿಸಲೇ ಬೇಕು: ನಾರಾಯಣಗೌಡ ಆಕ್ರೋಶ

    ಎಕ್ಕಡದಲ್ಲಿ ಹೊಡೆದ್ರು, ದೇವರಾಜು ಅದನ್ನ ಅನುಭವಿಸಲೇ ಬೇಕು: ನಾರಾಯಣಗೌಡ ಆಕ್ರೋಶ

    ಮಂಡ್ಯ: ನಾಮಪತ್ರ ಸಲ್ಲಿಸಲು ಬರೋವಾಗ ನನಗೆ ಜೆಡಿಎಸ್ ನವರು ಎಕ್ಕಡದಲ್ಲಿ ಹೊಡೆದರು. ಜೆಡಿಎಸ್ ಅಭ್ಯರ್ಥಿ ದೇವರಾಜು ಮುಂದಿನ ದಿನಗಳಲ್ಲಿ ಪರಿಣಾಮ ಎದುರಿಸುತ್ತಾರೆ ಎಂದು ಬಿಜೆಪಿ ಅಭ್ಯರ್ಥಿ, ಅನರ್ಹ ಶಾಸಕ ನಾರಾಯಣಗೌಡ ಗುಡುಗಿದ್ದಾರೆ.

    ಇಂದು ಬಿಜೆಪಿ ಅಭ್ಯರ್ಥಿಯಾಗಿರುವ ನಾರಾಯಣಗೌಡರು ಚುನಾವಣಾ ನಾಮಪತ್ರ ಸಲ್ಲಿಸಲು ತಾಲೂಕು ಕಚೇರಿಗೆ ಆಗಮಿಸುತ್ತಿದ್ದರು. ಇತ್ತ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್, ಜೆಡಿಎಸ್ ಅಭ್ಯರ್ಥಿ ಬಿ.ಎಲ್.ದೇವರಾಜು ಸಹ ಇಂದೇ ನಾಮಪತ್ರ ಸಲ್ಲಿಕೆಗೆ ತಾಲೂಕು ಕಚೇರಿಗೆ ಆಗಮಿಸಿದ್ದರು. ಮೂರು ಪಕ್ಷಗಳ ಬೆಂಬಲಿಗರು ಒಂದೆಡೆ ಸೇರಿದ್ದರಿಂದ ಘೋಷಣೆಗಳು ಜೋರಾಗಿದ್ದವು. ಈ ವೇಳೆ ಕೆಲ ಕಿಡಿಗೇಡಿಗಳು ನಾರಾಯಣಗೌಡರ ಮೇಲೆ ಚಪ್ಪಲಿ ಎಸೆದಿದ್ದಾರೆ. ಇದನ್ನೂ ಓದಿ: ಜೆಡಿಎಸ್ ಕೋಟೆ ಛಿದ್ರ ಮಾಡಲು ನಾರಾಯಣಗೌಡ ಮಾಸ್ಟರ್ ಪ್ಲಾನ್!

    ಈ ಕುರಿತು ಪ್ರತಿಕ್ರಿಯಿಸಿರುವ ನಾರಾಯಣಗೌಡ, ಜೆಡಿಎಸ್ ಅಭ್ಯರ್ಥಿ ಬಿ.ಎಲ್.ದೇವರಾಜು ಅವರ ಸೋದರ ತಮ್ಮ ಬೆಂಬಲಿಗರೊಂದಿಗೆ ಹಲ್ಲೆ ನಡೆಸಿದ್ದಾರೆ. ನನಗೆ ಎಕ್ಕಡದಲ್ಲಿ ಹೊಡೆಸಿ, ಜೊತೆಯಲ್ಲಿದ್ದ ಸಚಿವ ಮಾಧುಸ್ವಾಮಿ ಅವರನ್ನು ನೂಕಾಡಿದ್ದಾರೆ. ಚಪ್ಪಲಿಯಲ್ಲಿ ಹೊಡಿಸುವ ಅಧಿಕಾರ ಯಾರಿಗಿದೆ ಎಂದು ಪ್ರಶ್ನೆ ಮಾಡಿ ಮುಂದಿನ ದಿನಗಳಲ್ಲಿ ಎಲ್ಲರು ಪರಿಣಾಮ ಎದುರಿಸಲಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು. ಇದನ್ನೂ ಓದಿ: ಹ್ಯಾಟ್ರಿಕ್ ಗೆಲುವಿಗಾಗಿ ದೇವಿ ಮುಂದೆ ಬಿ ಫಾರಂ ಇಟ್ಟು ಪೂಜೆ ಸಲ್ಲಿಸಿದ ನಾರಾಯಣಗೌಡ

    ನಾಮಪತ್ರ ಸಲ್ಲಿಸಿ ಹೊರ ಬಂದ ಕೂಡಲೇ ಜೆಡಿಎಸ್ ಕಾರ್ಯಕರ್ತರ ಗುಂಪು ‘ಬಾಂಬೆ ಕಳ್ಳ’ ಎಂದು ಕೂಗಲು ಆರಂಭಿಸಿದರು. ಕಾರ್ಯಕರ್ತರ ಗಲಾಟೆ ಹೆಚ್ಚಾಗುತ್ತಿದ್ದಂತೆ ಪೊಲೀಸರು ತಮ್ಮ ವಾಹನದಲ್ಲಿಯೇ ನಾರಾಯಣಗೌಡರನ್ನು ಸುರಕ್ಷಿತವಾಗಿ ಕರೆದುಕೊಂಡು ಹೋದರು. ಇದನ್ನೂ ಓದಿ: ರಾಜೀನಾಮೆ ಕೊಡೋಕೆ ಹೇಳಿದ್ದೇ ಬಿಎಸ್‌ವೈ- ಸ್ಫೋಟಕ ರಹಸ್ಯ ಬಿಚ್ಚಿಟ್ಟ ನಾರಾಯಣಗೌಡ

    ಬಿಜೆಪಿ ಕಾರ್ ಮುಂದೆ ಕಾಂಗ್ರೆಸ್ ಪಟಾಕಿ: ನಾಮಪತ್ರ ಸಲ್ಲಿಕೆ ವೇಳೆ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರು ಮುಖಾಮುಖಿ ಆಗುತ್ತಿದ್ದಂತೆ ಪಕ್ಷದ ಪರವಾಗಿ ಘೋಷಣೆಯ ಧ್ವನಿ ಹೆಚ್ಚಾಯ್ತು. ಇತ್ತ ಬಿಜೆಪಿ ಮೆರವಣಿಗೆ ಸಾಗುತ್ತಿದ್ದ ವಾಹನಗಳ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಹೊಡೆದಿದ್ದರಿಂದ ಗಲಾಟೆಯ ಹಂತಕ್ಕೆ ತಲುಪಿತ್ತು. ಕೂಡಲೇ ಎಚ್ಚೆತ್ತ ಪೊಲೀಸರು ಗುಂಪುಗಳನ್ನು ಚದುರಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿ ನಾಮಪತ್ರ ಸಲ್ಲಿಕೆಗೆ ಅವಕಾಶ ಕಲ್ಪಿಸಿದರು. ಇದನ್ನೂ ಓದಿ:   ಬಿಜೆಪಿಯಲ್ಲಿ ಆಗುತ್ತಿರುವ ಕೆಲಸ ಹೆಚ್‍ಡಿಕೆ ಸರ್ಕಾರದಲ್ಲಿ ಆಗಿದ್ದರೆ, ನಾನು ಅಲ್ಲೆ ಇರುತ್ತಿದ್ದೆ: ನಾರಾಯಣಗೌಡ

    ಬಿಜೆಪಿ ಅಭ್ಯರ್ಥಿಯಾಗಿರುವ ನಾರಾಯಣ ಗೌಡರಿಗೆ ಸಚಿವ ಮಾಧುಸ್ವಾಮಿ, ಸಿಎಂ ಪುತ್ರ ವಿಜಯೇಂದ್ರ, ಶಾಸಕ ಪ್ರೀತಂಗೌಡ ಸೇರಿದಂತೆ ಹಲವು ನಾಯಕರು ಸಾಥ್ ನೀಡಿದ್ದರು. ಇತ್ತ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್ ಅವರಿಗೆ ಕೇಂದ್ರದ ಮಾಜಿ ಸಚಿವ ಕೆ.ರೆಹಮಾನ್ ಖಾನ್, ಮಾಜಿ ಸಚಿವರಾದ ಚಲುವರಾಯಸ್ವಾಮಿ, ನರೇಂದ್ರ ಸ್ವಾಮಿ, ಪತ್ನಿ ರಮಾಮಣಿ ಸಾಥ್ ನೀಡಿದರು. ಜೆಡಿಎಸ್ ಅಭ್ಯರ್ಥಿ ದೇವರಾಜುಗೆ ಮಾಜಿ ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ, ಜಿಪಂ ಸದಸ್ಯ ಮಂಜುನಾಥ್ ಸಾಥ್ ನೀಡಿದರು. ಇದನ್ನೂ ಓದಿ: ಅನರ್ಹ ಶಾಸಕ ನಾರಾಯಣಗೌಡರನ್ನ ಹಾಡಿ ಹೊಗಳಿದ ಬಿಎಸ್‍ವೈ

  • ಕಳೆದ ಬಾರಿ ಗೆದ್ದ ರಹಸ್ಯ ಬಿಚ್ಚಿಟ್ಟ ನಾರಾಯಣ ಗೌಡ – ಯಾರಿಗೆ ಎಷ್ಟು ವೋಟ್ ಬಿದ್ದಿತ್ತು?

    ಕಳೆದ ಬಾರಿ ಗೆದ್ದ ರಹಸ್ಯ ಬಿಚ್ಚಿಟ್ಟ ನಾರಾಯಣ ಗೌಡ – ಯಾರಿಗೆ ಎಷ್ಟು ವೋಟ್ ಬಿದ್ದಿತ್ತು?

    ಮಂಡ್ಯ: 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸಹಕಾರದಿಂದ ನಾನು ಜಯಗಳಿಸಿದ್ದೆ ಎಂದು ಜೆಡಿಎಸ್ ಅನರ್ಹ ಶಾಸಕ ನಾರಾಯಣ ಗೌಡ ಹೇಳಿದ್ದಾರೆ.

    ಉಪಚುನಾವಣೆ ಪ್ರಚಾರದ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಹೊಂದಾಣಿಕೆಯಾಗಿತ್ತು. ನಮ್ಮ ಕ್ಷೇತ್ರಕ್ಕೆ ಯಡಿಯೂರಪ್ಪ ಬಂದು ಪ್ರಚಾರವನ್ನೇ ಮಾಡಿರಲಿಲ್ಲ. ಆದರೂ ನಾನು ಗೆಲ್ಲುವುದಕ್ಕೆ ಬಿಜೆಪಿಯವರ ಸಹಕಾರವೂ ಕಾರಣ ಎಂದು ತಿಳಿಸಿದರು. ಇದನ್ನೂ ಓದಿ: ಹ್ಯಾಟ್ರಿಕ್ ಗೆಲುವಿಗಾಗಿ ದೇವಿ ಮುಂದೆ ಬಿ ಫಾರಂ ಇಟ್ಟು ಪೂಜೆ ಸಲ್ಲಿಸಿದ ನಾರಾಯಣಗೌಡ

    ಬಿಜೆಪಿ ಮತ್ತು ನಮ್ಮ ನಡುವೆ ನೇರವಾಗಿ ಹೊಂದಾಣಿಕೆ ಆಗಿರಲಿಲ್ಲ. ಆದರೆ ಪರೋಕ್ಷವಾಗಿ ಆಗಿತ್ತು. ಹಲವು ಕ್ಷೇತ್ರದಲ್ಲಿ ಬಿಜೆಪಿ ಸರಿಯಾಗಿ ಪ್ರಚಾರವೇ ಮಾಡಿರಲಿಲ್ಲ. ನನಗಂತೂ ತುಂಬಾ ಜನ ಬಿಜೆಪಿ ಮುಖಂಡರು ಆಶೀರ್ವಾದ ಮಾಡಿದ್ದರು. ನಾನು ಬಿಜೆಪಿ ಅಭ್ಯರ್ಥಿ ಮನೆಗೆ ಹೋಗಿ ಅವರ ತಂದೆ ಆಶೀರ್ವಾದ ಪಡೆದಿದ್ದೆ ಎಂದು ಅವರು ಈ ವೇಳೆ ವಿವರಿಸಿದರು.

    2018 ಚುನಾವಣೆಯಲ್ಲಿ ನಾರಾಯಣ ಗೌಡ 16,935 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಕೆಬಿ ಚಂದ್ರಶೇಖರ್ ವಿರುದ್ಧ ಜಯಗಳಿಸಿದ್ದರು. ನಾರಾಯಣ ಗೌಡ 87,562 ಮತಗಳನ್ನು ಪಡೆದರೆ ಕೆಬಿ ಚಂದ್ರಶೇಖರ್ 70,627 ಮತಗಳನ್ನು ಪಡೆದಿದ್ದರು. ಬಿಜೆಪಿಯಿಂದ ಸ್ಪರ್ಧಿಸಿದ್ದ ಬಿಸಿ ಮಂಜು 9,819 ಮತಗಳನ್ನು ಪಡೆದಿದ್ದರು.

  • ಹ್ಯಾಟ್ರಿಕ್ ಗೆಲುವಿಗಾಗಿ ದೇವಿ ಮುಂದೆ ಬಿ ಫಾರಂ ಇಟ್ಟು ಪೂಜೆ ಸಲ್ಲಿಸಿದ ನಾರಾಯಣಗೌಡ

    ಹ್ಯಾಟ್ರಿಕ್ ಗೆಲುವಿಗಾಗಿ ದೇವಿ ಮುಂದೆ ಬಿ ಫಾರಂ ಇಟ್ಟು ಪೂಜೆ ಸಲ್ಲಿಸಿದ ನಾರಾಯಣಗೌಡ

    – 2018ರಲ್ಲಿ ಕೇವಲ 9,819 ಮತ ಗಳಿಸಿದ್ದ ಬಿಜೆಪಿ ಅಭ್ಯರ್ಥಿ

    ಮಂಡ್ಯ: ಹ್ಯಾಟ್ರಿಕ್ ಗೆಲುವು ತಂದುಕೊಡುವಂತೆ ಅನರ್ಹ ಶಾಸಕ ನಾರಾಯಣಗೌಡ ದಢೀಘಟ್ಟದ ಚಿಕ್ಕಮ್ಮ ದೇವಿಗೆ ಪೂಜೆ ಸಲ್ಲಿಸಿದ್ದಾರೆ.

    ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಸ್ಪರ್ಧಿಸುತ್ತಿರುವ ನಾರಾಯಣಗೌಡ ಅವರು ಪತ್ನಿ ದೇವಿಕಾ ಜೊತೆ ದೇವಸ್ಥಾನಕ್ಕೆ ಆಗಮಿಸಿದರು. ಬಳಿಕ ಮನೆ ದೇವರ ಮುಂದೆ ಬಿ ಫಾರಂ ಇಟ್ಟು ಪೂಜೆ ಮಾಡಿಸಿದ್ದಾರೆ. ನಾರಾಯಣಗೌಡರು  ಪ್ರತಿ ಚುನಾವಣೆಗೂ ಮುನ್ನ ದಢೀಘಟ್ಟದ ಚಿಕ್ಕಮ್ಮ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸುತ್ತಾರೆ. ಈ ಬಾರಿಯೂ ದೇವಿಗೆ ಪೂಜೆ ಸಲ್ಲಿಸಿ, ಉಪ ಚುನಾವಣೆ ಅಖಾಡಕ್ಕೆ ಧುಮುಕಿದ್ದಾರೆ.

    ನಾರಾಯಣಗೌಡ ಅವರು 2008ರಲ್ಲಿ ಬಿಎಸ್‍ಪಿಯಿಂದ ಸ್ಪರ್ಧಿಸಿ ಕೇವಲ 10,218 ಮತಗಳನ್ನು ಪಡೆದು ಸೋತಿದ್ದರು. ಬಳಿಕ ಜೆಡಿಎಸ್ ಸೇರಿದ ನಾರಾಯಣಗೌಡ ಅವರು, 2014ರ ಚುನಾವಣೆಯಲ್ಲಿ 56,784 ಮತಗಳನ್ನು ಪಡೆದು ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದರು.

    2018ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‍ನಿಂದ ಚುನಾವಣಾ ಕಣಕ್ಕೆ ಇಳಿದಿದ್ದ ನಾರಾಯಣಗೌಡ ಅವರು 88,016 ಮತಗಳನ್ನು ಕೆ.ಬಿ.ಚಂದ್ರಶೇಖರ್ ವಿರುದ್ಧ ಜಯ ಗಳಿಸಿದ್ದರು. ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಸಿ.ಮಂಜು ಕೇವಲ 9,819 ಮತಗಳನ್ನು ಪಡೆಯಲು ಶಕ್ತರಾಗಿದ್ದರು. ಉಪ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಹ್ಯಾಟ್ರಿಕ್ ಜಯವನ್ನು ಸಾಧಿಸಲು ನಾರಾಯಣಗೌಡ ಭಾರೀ ಸಿದ್ಧತೆ ನಡೆಸಿದ್ದಾರೆ.

  • ಕೆ.ಆರ್ ಪೇಟೆ ತಾಲೂಕಿನಾದ್ಯಂತ ನಾರಾಯಣಗೌಡ ಬೆಂಬಲಿಗರಿಂದ ಪೂಜೆ

    ಕೆ.ಆರ್ ಪೇಟೆ ತಾಲೂಕಿನಾದ್ಯಂತ ನಾರಾಯಣಗೌಡ ಬೆಂಬಲಿಗರಿಂದ ಪೂಜೆ

    ಮಂಡ್ಯ: ಇಂದು ಸುಪ್ರೀಂ ಕೋರ್ಟಿನಲ್ಲಿ ಅನರ್ಹ ಶಾಸಕರ ತೀರ್ಪು ಪ್ರಕಟ ಹಿನ್ನೆಲೆಯಲ್ಲಿ ಜೆಡಿಎಸ್‍ನ ಅನರ್ಹ ಶಾಸಕ ನಾರಾಯಣಗೌಡ ಪರವಾದ ತೀರ್ಪಿಗಾಗಿ ಬೆಂಬಲಿಗರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ದೇವರಿಗೆ ಅಭಿಷೇಕ, ಹೂವಿನ ಅಲಂಕಾರ ಮಾಡಿ ಪಾರ್ಥಿಸಿದ್ದಾರೆ.

    ಕೆ.ಆರ್ ಪೇಟೆ ತಾಲೂಕಿನಾದ್ಯಂತ ಇರುವ ದೇವಾಲಯಗಳಲ್ಲಿ ನಾರಾಯಣಗೌಡ ಬೆಂಬಲಿಗರು, ಅಭಿಮಾನಿಗಳು ಪೂಜೆ ಸಲ್ಲಿಸುತ್ತಿದ್ದಾರೆ. ತಾಲೂಕಿನ ಪ್ರತಿ ಹೋಬಳಿಗಳಲ್ಲಿರುವ ಪ್ರಮುಖ ದೇವಾಲಯಗಳಲ್ಲಿ ವಿಶೇಷ ಪೂಜೆ ಮಾಡಿಸುತ್ತಿದ್ದಾರೆ. ದೇವರಿಗೆ ಅಭಿಷೇಕ, ಹೂವಿನ ಅಲಂಕಾರ ಮಾಡಿಸಿ ನಾರಾಯಣಗೌಡರ ಪರ ಸುಪ್ರೀಂ ಕೋರ್ಟ್ ತೀರ್ಪು ಬರುವಂತೆ ಪ್ರಾರ್ಥಿಸುತ್ತಿದ್ದಾರೆ. ಇದನ್ನೂ ಓದಿ:ದೋಸ್ತಿ ಸರ್ಕಾರ ಪತನಕ್ಕೆ ಕಾರಣರಾಗಿ ಅನರ್ಹರಾಗಿರೋ ಶಾಸಕರು ಸುಪ್ರೀಂನಲ್ಲಿ ಮಂಡಿಸಿದ್ದ ವಾದಗಳೇನು?

    ಅಷ್ಟೇ ಅಲ್ಲದೆ ಅನರ್ಹ ಶಾಸಕರ ಪರ ತೀರ್ಪು ಬಂದರೆ ಸಂಭ್ರಮಾಚರಣೆಗೆ ಸಿದ್ಧತೆಯನ್ನೂ ಮಾಡಿಕೊಳ್ಳಲಾಗಿದೆ. ಪಟಾಕಿ ಸಿಡಿಸಿ, ಸಿಹಿ ಹಂಚಲು ಬೆಂಬಲಿಗರು ತಯಾರಿ ಮಾಡಿಕೊಂಡಿದ್ದಾರೆ. ಒಂದು ವೇಳೆ ಸುಪ್ರೀಂ ಕೋರ್ಟಿನಿಂದ ಸಕಾರಾತ್ಮಕ ತೀರ್ಪು ಬಂದರೆ ನಾರಾಯಣಗೌಡ ಅವರು ಇಂದಿನಿಂದಲೇ ಉಪಚುನಾವಣೆಯ ರಣಾಂಗಣಕ್ಕೆ ಧುಮುಕಲಿದ್ದಾರೆ. ರಾಜೀನಾಮೆ ಬಳಿಕ ಕ್ಷೇತ್ರಾದ್ಯಂತ ಸಂಚರಿಸಿರುವ ನಾರಾಯಣಗೌಡ, ಮಗಳ ಮದುವೆ ಊಟ ನೆಪದಲ್ಲಿ ಪ್ರತಿ ಹೋಬಳಿಯ ಜನಕ್ಕೂ ಬಾಡೂಟ ಹಾಕಿಸಿದ್ದರು. ರಾಜೀನಾಮೆ ನೀಡಿದ್ದು ಕ್ಷೇತ್ರದ ಅಭಿವೃದ್ಧಿಗಾಗಿ, ಮತ್ತೊಮ್ಮೆ ಅವಕಾಶ ನೀಡಿ ಎಂದು ಒಂದು ಸುತ್ತಿನ ಪ್ರಚಾರ ಕೂಡ ಮಾಡಿದ್ದರು. ಇದನ್ನೂ ಓದಿ:ಸುಪ್ರೀಂಕೋರ್ಟಿನಿಂದ ಇಂದು ಜಡ್ಜ್‌ಮೆಂಟ್ – ಅಗ್ನಿ ಪರೀಕ್ಷೆಯಲ್ಲಿ ಪಾಸ್ ಆಗ್ತಾರಾ ರೆಬೆಲ್ಸ್?

    ಇಂದು ಬೆಳಗ್ಗೆ 10.30ಕ್ಕೆ ಸುಪ್ರೀಂ ಕೋರ್ಟಿನಿಂದ ತೀರ್ಪು ಹೊರಬೀಳಲಿದ್ದು, ಈ ಹಿನ್ನೆಲೆಯಲ್ಲಿ ಅನರ್ಹ ಶಾಸಕರಾದ ರಮೇಶ್ ಜಾರಕಿಹೋಳಿ, ಮುನಿರತ್ನ, ಎಸ್.ಟಿ ಸೋಮಶೇಖರ್, ಬಿಸಿ ಪಾಟೀಲ್, ಬೈರತಿ ಬಸವರಾಜ್, ಹೆಚ್. ವಿಶ್ವ ನಾಥ್, ರೋಷನ್ ಬೇಗ್, ಆರ್ ಶಂಕರ್ ಸೇರಿ ಇನ್ನು ಹಲವರು ದೆಹಲಿ ತಲುಪಿದ್ದು ಇಂದಿನ ತೀರ್ಪು ಬಗ್ಗೆ ವಕೀಲರ ಜೊತೆ ಚರ್ಚೆ ಮಾಡುತ್ತಿದ್ದಾರೆ. ಇದನ್ನೂ ಓದಿ:ಅನರ್ಹರ ತೀರ್ಪು: ಮಧ್ಯಾಹ್ನ 3 ಗಂಟೆವರೆಗೆ ಸಿಎಂ ಎಲ್ಲಾ ಪ್ರೋಗ್ರಾಂ ಕ್ಯಾನ್ಸಲ್

    ಒಟ್ಟಿನಲ್ಲಿ ತಿಂಗಳುಗಳ ಕಾನೂನು ಹೋರಾಟಕ್ಕೆ ಅಂತಿಮ ದಿನ ಬಂದಿದ್ದು ಇನ್ನೇನು ಕೆಲವೇ ಗಂಟೆಗಳಲ್ಲಿ ಅನರ್ಹ ಶಾಸಕರ ಭವಿಷ್ಯ ನಿರ್ಧಾರ ಆಗಲಿದೆ.

  • ಅನರ್ಹ ಶಾಸಕ ನಾರಾಯಣಗೌಡರನ್ನ ಹಾಡಿ ಹೊಗಳಿದ ಬಿಎಸ್‍ವೈ

    ಅನರ್ಹ ಶಾಸಕ ನಾರಾಯಣಗೌಡರನ್ನ ಹಾಡಿ ಹೊಗಳಿದ ಬಿಎಸ್‍ವೈ

    – ನಾರಾಯಣಗೌಡ ಸಜ್ಜನ, ಪ್ರಾಮಾಣಿಕ ವ್ಯಕ್ತಿ

    ಮಂಡ್ಯ: ಕೆ.ಆರ್.ಪೇಟೆಯಲ್ಲಿ ಅನರ್ಹ ಶಾಸಕ ಕೆ.ಸಿ.ನಾರಾಯಣಗೌಡ ಅವರನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಡಿ ಹೊಗಳಿದ್ದಾರೆ.

    ಕೆ.ಆರ್.ಪೇಟೆಯ ಕೆಪಿಎಸ್ ಶಾಲೆಯ ಆವರಣದಲ್ಲಿ ಜಿಲ್ಲಾಡಳಿತದ ವತಿಯಿಂದ ಬೃಹತ್ ಉಚಿತ ಆರೋಗ್ಯ ಮೇಳ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ, ಡಿಸಿಎಂ ಅಶ್ವಥ್ ನಾರಾಯಣ, ಸಚಿವ ಆರ್.ಅಶೋಕ್, ಸಂಸದೆ ಸುಮಲತಾ, ಅನರ್ಹ ಶಾಸಕ ನಾರಾಯಣಗೌಡ ಸೇರಿದಂತೆ ಅನೇಕ ಜನಪ್ರತಿನಿಧಿಗಳು ಭಾಗವಹಿಸಿದ್ದರು. ಸಿಎಂ ಯಡಿಯೂರಪ್ಪ ಅವರು ತಮ್ಮ ಭಾಷಣದಲ್ಲಿ ನಾರಾಯಣಗೌಡ ಅವರ ಪರ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ. ಇದನ್ನೂ ಓದಿ: ರಾಜೀನಾಮೆ ಕೊಡೋಕೆ ಹೇಳಿದ್ದೇ ಬಿಎಸ್‌ವೈ- ಸ್ಫೋಟಕ ರಹಸ್ಯ ಬಿಚ್ಚಿಟ್ಟ ನಾರಾಯಣಗೌಡ

    ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ, ನಾನು ಯಾವುದೇ ಕಾರಣಕ್ಕೂ ಈ ಕಾರ್ಯಕ್ರಮ ಬರುವ ಹಾಗೆ ಇರಲಿಲ್ಲ. ಆದರೆ ಕೆ.ಸಿ.ನಾರಾಯಣಗೌಡ ಅವರಿಗೆ ಭರವಸೆ ನೀಡಿದ್ದರಿಂದ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಅನೇಕ ಶಾಸಕರನ್ನು, ಮುಖಂಡರನ್ನು ನೋಡಿದ್ದೇನೆ. ಆದರೆ ನಾರಾಯಣಗೌಡ ಅವರಂತಹ ಸಜ್ಜನ, ಪ್ರಾಮಾಣಿಕ ವ್ಯಕ್ತಿ ರಾಜಕೀಯ ಕ್ಷೇತ್ರದಲ್ಲಿ ಸಿಗುವುದು ಅಪರೂಪ. ಇಂತಹ ವ್ಯಕ್ತಿಯನ್ನು ನಿಮ್ಮ ಪ್ರತಿನಿಧಿಯಾಗಿ ಆಯ್ಕೆ ಮಾಡಿದ್ರಿ. ಆದರೆ ಬೇರೆ ಕಾರಣಗಳಿಗೆ ವ್ಯತ್ಯಾಸಗಳಾಗಿರಬಹುದು. ಮುಂಬರುವ ದಿನಗಳಲ್ಲೂ ಇವರಿಗೆ ನೀವು ಆಶೀರ್ವಾದ ಮಾಡಬೇಕು ಎಂದು ಮತದಾರರಿಗೆ ಮನವಿ ಮಾಡಿಕೊಂಡರು.

    ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ನಾರಾಯಣಗೌಡ ಕಂಕಣ ತೊಟ್ಟಿದ್ದಾರೆ. ಕೆಆರ್ ಪೇಟೆ ಅಭಿವೃದ್ಧಿಗೆ ಹಲವು ವಿಷಯಗಳನ್ನು ಪ್ರಸ್ತಾಪ ಮಾಡಿದ್ದಾರೆ. ಈ ಬಗ್ಗೆ ಮಂತ್ರಿ ಮಂಡಲದಲ್ಲಿ ಚರ್ಚೆ ಮಾಡುತ್ತೇನೆ. ಏನು ಮಾಡಲು ಸಾಧ್ಯವೋ ಎಲ್ಲವನ್ನೂ ನಾನು ಮಾಡಲು ಸಿದ್ಧ ಎಂದು ಭರವಸೆ ನೀಡಿದರು.

    ಬಳಿಕ ಅನರ್ಹ ಶಾಸಕ ನಾರಾಯಣಗೌಡ ಮಾತನಾಡಿ, ಚಿಕ್ಕಬಳ್ಳಾಪುರಕ್ಕೆ ಮೆಡಿಕಲ್ ಕಾಲೇಜು ಆಯಿತು, ಈಗ ಕೆಆರ್ ಪೇಟೆಗೆ ಆಗಬೇಕು. ನಿಮ್ಮ ತಂದೆ ಹೆಸರಿನಲ್ಲಿ ವೈದ್ಯಕೀಯ ಕಾಲೇಜು ಮಂಜೂರು ಮಾಡಿಕೊಡಬೇಕು ಎಂದು ಸಿಎಂಗೆ ಮನವಿ ಸಲ್ಲಿಸಿದರು. ಇದೇ ವೇಳೆ ಸಿಎಂ ಯಡಿಯೂರಪ್ಪ ಅವರಿಗೆ ಬೆಳ್ಳಿ ಖಡ್ಗ ನೀಡಿ ಅಭಿನಂದಿಸಿದರು.

  • ಮುಸ್ಲಿಂ ಯುವಕರ ಬಿಡುಗಡೆ ಖಂಡಿಸಿ ನಾಳೆ ಕೆಆರ್ ಪೇಟೆ ಬಂದ್

    ಮುಸ್ಲಿಂ ಯುವಕರ ಬಿಡುಗಡೆ ಖಂಡಿಸಿ ನಾಳೆ ಕೆಆರ್ ಪೇಟೆ ಬಂದ್

    ಮಂಡ್ಯ: ಮುಸ್ಲಿಂ ಯುವಕರನ್ನು ಬಂಧನ ಮಾಡಿ, ಜಾಮೀನಿನ ಮೇಲೆ ಬಿಡುಗಡೆಗೊಳಿಸಿರುವುದನ್ನು ಖಂಡಿಸಿ ನಾಳೆ ಹಿಂದೂಪರ ಮತ್ತು ಕನ್ನಡ ಪರ ಸಂಘಟನೆಗಳು ಕೆಆರ್ ಪೇಟೆ ಬಂದ್‍ಗೆ ಕರೆ ನೀಡಿವೆ.

    ಅಕ್ಟೋಬರ್ 27 ರಂದು ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಆಲಂಬಾಡಿಕಾವಲು ಬಳಿ ಮುಸ್ಲಿಂ ಯುವಕರು ಅನುಮಾನಾಸ್ಪದವಾಗಿ ಪೇರೆಡ್ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿ 16 ಮುಸ್ಲಿಂ ಯುವಕರನ್ನು ಬಂಧಿಸಿದ್ದರು.

    ನಂತರ ಅವರು ಪಿಎಸ್‍ಎಫ್ ಸಂಘಟನೆಯ ಕಾರ್ಯಕರ್ತರು ಎಂದು ತಿಳಿದು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಇದೀಗ ಇದನ್ನು ಖಂಡಿಸಿ ನಾಳೆ ಕೆಆರ್ ಪೇಟೆ ಬಂದ್‍ಗೆ ಸಂಘಟನೆಗಳು ಕರೆ ನೀಡಿವೆ. ಕೆಆರ್ ಪೇಟೆ ಭಾಗದಲ್ಲಿ ದೇಶ ವಿರೋಧಿ ಚಟುವಟಿಗಳು ನಡೆಯುತ್ತಿವೆ. ಆದರೆ ಪೊಲೀಸರು ಕಣ್ಮುಚ್ಚಿ ಕುಳಿತಿದ್ದು, ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಮೂರು ದಿನಗಳ ಹಿಂದೆ ಬಂಧನ ಮಾಡಿ ಬಿಡುಗಡೆ ಮಾಡಿರುವ ಯುವಕರು ಸಹ ದೇಶ ವಿರೋಧಿ ಚಟುವಟಿಕೆಗಳನ್ನು ನಡೆಸಿದ್ದರು ಎಂದು ಆರೋಪಿಸಿದ್ದಾರೆ.

    ಪೊಲೀಸರು ಯಾರದ್ದೋ ಒತ್ತಡಕ್ಕೆ ಮಣಿದು ಯುವಕರ ಮೇಲೆ ಸಣ್ಣಪುಟ್ಟ ಪ್ರಕರಣಗಳನ್ನು ದಾಖಲಿಸಿ, ನಂತರ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ. ಬಿಡುಗಡೆ ಮಾಡಿರುವ ಯುವಕರನ್ನು ಮತ್ತೆ ಬಂಧಿಸಿ, ಕೆಆರ್ ಪೇಟೆ ಭಾಗದಲ್ಲಿ ನಡೆಯುತ್ತಿರುವ ದೇಶ ವಿರೋಧಿ ಚಟುವಟಿಕೆಗಳಿಗೆ ಬ್ರೇಕ್ ಹಾಕಬೇಕು ಎಂದು ಹಿಂದೂ ಪರ ಮತ್ತು ಕನ್ನಡ ಪರ ಸಂಘಟನೆಗಳು ಬಂದ್‍ಗೆ ಕರೆ ನೀಡಿವೆ.

    ಕೆಆರ್ ಪೇಟೆಯನ್ನು ಬಂದ್ ಮಾಡಿ ಬೃಹತ್ ಪ್ರತಿಭಟನೆ ಮಾಡಲು ಈಗಾಗಲೇ ಸಂಘಟನೆಗಳು ನಿರ್ಧರಿಸಿವೆ. ಈ ಪ್ರತಿಭಟನೆಯಲ್ಲಿ ಹಲವು ಮಠಗಳ ಮಠಾಧೀಶರುಗಳು ಪಾಲ್ಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ಜರುಗದಂತೆ ಪೊಲೀಸರು ಬಿಗಿ ಪೊಲೀಸ್ ಭದ್ರತೆಯನ್ನು ಏರ್ಪಡಿಸಿದ್ದಾರೆ.