Tag: KPTCL employee

  • ಸ್ಟೇಷನ್ ಏನ್ ನಿಮ್ಮಪ್ಪಂದ – ಕೆಪಿಟಿಸಿಎಲ್ ನೌಕರನ ಮೇಲೆ ಜೆಡಿಎಸ್ ಮುಖಂಡನ ದರ್ಪ

    ಸ್ಟೇಷನ್ ಏನ್ ನಿಮ್ಮಪ್ಪಂದ – ಕೆಪಿಟಿಸಿಎಲ್ ನೌಕರನ ಮೇಲೆ ಜೆಡಿಎಸ್ ಮುಖಂಡನ ದರ್ಪ

    ಹಾಸನ: ವಿದ್ಯುತ್ ಕಡಿತಕ್ಕೆ ಸಂಬಧಿಸಿದಂತೆ ಸರಿಯಾದ ಮಾಹಿತಿ ನೀಡಲಿಲ್ಲವೆಂದು ಕೆಪಿಟಿಸಿಎಲ್ ಪವರ್ ಸ್ಟೇಷನ್ ಆಪರೇಟರ್‍ಗೆ ಜೆಡಿಎಸ್ ಮುಖಂಡರೊಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ ಘಟನೆ ಹಾಸನ ಜಿಲ್ಲೆ, ಬೇಲೂರು ತಾಲೂಕಿನ ಗಂಗೂರು ಗ್ರಾಮದಲ್ಲಿ ನಡೆದಿದೆ.

    ಗಂಗೂರು ಗ್ರಾಮದಲ್ಲಿರುವ ಕೆಪಿಟಿಸಿಎಲ್ ಸಬ್ ಸ್ಟೇಷನ್‍ನಲ್ಲಿ ಹೇಮಂತ್ ಕುಮಾರ್ ಎಂಬುವವರು ಆಪರೇಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿದ್ಯುತ್ ವಿತರಣೆ ಬಗ್ಗೆ ವಿಚಾರಿಸಲು ಗಂಗೂರು ಕೆಪಿಟಿಸಿಎಲ್ ಪವರ್ ಸ್ಟೇಷನ್‍ಗೆ ಜೆಡಿಎಸ್ ಮುಖಂಡ ರಾಮಚಂದ್ರ ಎಂಬುವವರು ಕರೆ ಮಾಡಿದ್ದಾರೆ. ಈ ವೇಳೆ ತನ್ನ ಕರೆಗೆ ಸರಿಯಾಗಿ ಉತ್ತರಿಸಿಲ್ಲ ಎಂದು ಪವರ್ ಸ್ಟೇಷನ್‍ಗೆ ಬಂದಿದ್ದ ಜೆಡಿಎಸ್ ಮುಖಂಡ ಆಕ್ರೋಶ ಹೊರಹಾಕಿದ್ದಾರೆ.

    ಇದಕ್ಕೆ ಪ್ರತಿಯಾಗಿ ಪವರ್ ಸ್ಟೇಷನ್‍ಗೆ ಯಾಕೆ ಬಂದಿದ್ದೀರಿ ಎಂದು ಆಪರೇಟರ್ ಹೇಮಂತ್‍ಕುಮಾರ್ ಪ್ರಶ್ನೆ ಮಾಡಿದ್ದಾರೆ. ಇದರಿಂದ ಕೆರಳಿದ ರಾಮಚಂದ್ರ ಇದೇನು ನಿಮ್ಮ ಅಪ್ಪನದ್ದ, ಇಲ್ಲಿ ಇರಬೇಕು ಅಂತಿದ್ದೀಯೋ ಏನು ಎಂದು ಅಶ್ಲೀಲ ಪದಗಳಿಂದ ನಿಂದಿಸಿದ್ದಾರೆ. ಈ ವೇಳೆ ಪರಸ್ಪರ ತಳ್ಳಾಟ ನೂಕಾಟ ಕೂಡ ನಡೆದಿದೆ. ಗಲಾಟೆ ಜೋರಾಗುತ್ತಿದ್ದಂತೆ ಆಪರೇಟರ್ ಹೇಮಂತ್‍ಕುಮಾರ್ ಕಚೇರಿಯೊಳಗೆ ಹೋಗಿದ್ದಾರೆ.

    ಕಚೇರಿ ಒಳಗೂ ಬಂದ ರಾಮಚಂದ್ರ, ಸ್ಟೇಷನ್ ಒಳಗೆ ಹೋಗಿದ್ದೀಯ, ಹೊರಗೆ ಬಾ. ನೀನು ಹೇಗೆ ಮನೆಗೆ ಹೋಗುತ್ತೀಯಾ ನೋಡುತ್ತೇನೆ ಎಂದು ಮತ್ತೆ ಅಶ್ಲೀಲ ಪದಗಳಿಂದ ಬೆದರಿಕೆ ಹಾಕಿದ್ದಾರೆ. ಅಶ್ಲೀಲ ಪದಗಳಿಂದ ನಿಂದಿಸುತ್ತಿರುವ ವಿಡಿಯೋ ಮೊಬೈಲ್‍ನಲ್ಲಿ ಸೆರೆಯಾಗಿದ್ದು, ವಿಡಿಯೋ ಸ್ಥಳೀಯ ಮಟ್ಟದಲ್ಲಿ ವೈರಲ್ ಆಗಿದೆ.