Tag: KPSC Examination

  • 5 ಲಕ್ಷ ಕೊಟ್ರೆ ಸರ್ಕಾರಿ ಹುದ್ದೆ – ಒಂದೇ ಕೊಠಡಿಯಲ್ಲಿ ಪರೀಕ್ಷೆ, ಬ್ಲೂಟೂತ್‍ನಲ್ಲಿ ಉತ್ತರ ರವಾನೆ

    5 ಲಕ್ಷ ಕೊಟ್ರೆ ಸರ್ಕಾರಿ ಹುದ್ದೆ – ಒಂದೇ ಕೊಠಡಿಯಲ್ಲಿ ಪರೀಕ್ಷೆ, ಬ್ಲೂಟೂತ್‍ನಲ್ಲಿ ಉತ್ತರ ರವಾನೆ

    – 2018ರ ಕೆಪಿಎಸ್‍ಸಿ ಪರೀಕ್ಷೆಯಲ್ಲಿ ಭಾರೀ ಗೋಲ್ಮಾಲ್

    ಕಲಬುರಗಿ: ಕೆಪಿಎಸ್‍ಸಿ ಪರೀಕ್ಷೆಯಲ್ಲಿ ಪಾಸ್ ಆಗಿ ಸರ್ಕಾರಿ ನೌಕರಿ ಗಿಟ್ಟಿಸಬೇಕು ಅಂದರೆ 5 ಲಕ್ಷ ಕೊಟ್ಟರೆ ಸಾಕು ನಿಮಗೆ ಸರ್ಕಾರಿ ನೌಕರಿ ಸಿಗುತ್ತದೆ. ಇಂತಹದೊಂದು ಜಾಲ ಕಲಬುರಗಿಯಲ್ಲಿದ್ದು, ನೂರಾರು ಜನರಿಂದ ಹಣ ಪಡೆದು ನೌಕರಿ ಕೊಡಿಸಿದ್ದಾರೆ. ದುರಂತ ಅಂದರೆ ಈ ಗ್ಯಾಂಗನ್ನು ಪೊಲೀಸರು ಬಂಧಿಸಿ ನಂತರ ತನಿಖೆಯನ್ನೇ ಸಂಪೂರ್ಣ ಹಳ್ಳ ಹಿಡಿಸಿದ್ದಾರೆ.

    ಕಲಬುರಗಿ ಜಿಲ್ಲೆ ಅಫಜಲಪುರ್ ತಾಲೂಕಿನ ಮಾತೋಳಿ ಗ್ರಾಮದ ನಿವಾಸಿ ಮೊಹಮ್ಮದ್ ನದಾಫ್ ಈ ಖತರ್ನಾಕ್ ಗ್ಯಾಂಗಿನ ಮಾಸ್ಟರ್ ಮೈಂಡ್. ಈತನಿಗೆ 5 ಲಕ್ಷ ಕೊಟ್ಟರೆ ಸಾಕು ಸರ್ಕಾರಿ ಕೆಲಸ ಪಕ್ಕಾ. ಈತ ಕೆಪಿಎಸ್‍ಸಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳಿಂದ ಹಣ ಪಡೆದು, ಅವರಿಗೆ ನಕಲು ಮಾಡಲು ಸಹಕರಿಸಿ ನೂರಾರು ಜನರಿಗೆ ಸರ್ಕಾರಿ ನೌಕರಿ ಕೊಡಿಸಿದ್ದಾನೆ. ಈತನ ಕರಾಮತ್ತು ಏನಂದರೆ ಹಣ ಪಡೆಯೋದು ಮಾತ್ರವಲ್ಲದೆ, ಹಣ ಪಡೆದವರನ್ನು ಒಂದೇ ಕೊಠಡಿಯಲ್ಲಿ ಕೂರಿಸಿ ಪರೀಕ್ಷೆ ಬರೆಸಿ ಪಾಸ್ ಆಗುವಂತೆ ಮಾಡುತ್ತಾನೆ.

    2018ರಲ್ಲಿ ನಡೆದ ಕೆಪಿಎಸ್‍ಸಿಯ ಎಫ್‍ಡಿಎ, ಎಸ್‍ಡಿಎ ಪರೀಕ್ಷೆಯಲ್ಲಿ ಅಫಜಲಪುರ್ ತಾಲೂಕಿನ ಒಟ್ಟು 28 ಜನ ಅಭ್ಯರ್ಥಿಗಳನ್ನು ಒಂದೇ ಕೋಣೆಯಲ್ಲಿ ಪರೀಕ್ಷೆ ಬರುವಂತೆ ನದಾಫ್ ನೋಡಿಕೊಂಡಿದ್ದ. ಹೀಗೆ ಪರೀಕ್ಷೆ ಬರೆದ ಎಲ್ಲರಿಗೂ ಸಹ ಬ್ಲೂಟೂತ್ ಮುಖಾಂತರ ಉತ್ತರಗಳನ್ನು ರವಾನಿಸಿದ್ದನು. ಆ ವೇಳೆ ಪರೀಕ್ಷೆ ಬರೆದಿದ್ದ ಎಲ್ಲರೂ ಪಾಸ್ ಆಗಿದ್ದರು. ಈ ಕಾರಣಕ್ಕೆ ಪರೀಕ್ಷೆಯಲ್ಲಿ ಅರ್ಹರನ್ನು ಬಿಟ್ಟು ಅನರ್ಹರು ಸರ್ಕಾರಿ ನೌಕರಿ ಪಡೆದಿದ್ದು, ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣವಾಗಿದೆ.

    ನದಾಫ್ ಹಾಗೂ ಆತನ ಸ್ನೇಹಿತರ ಈ ಜಾಲದ ಬಗ್ಗೆ ಕಲಬುರಗಿ ಪೊಲೀಸರಿಗೆ ಮಾಹಿತಿ ಬಂದು ಬಂಧಿಸಲು ಮುಂದಾದರು. ಈ ವೇಳೆ ಭೀಮರಾಯ ಹಾಗೂ ಚಂದ್ರಕಾಂತ್ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಪ್ರತಿ ಅಭ್ಯರ್ಥಿಗಳಿಂದ 5 ಲಕ್ಷ ಹಣ ಪಡೆದಿರೋದು ಬಹಿರಂಗವಾಗಿದೆ. ಇಷ್ಟಾದರು ಸಹ ಅಕ್ರಮವೆಸಗಿದ್ದ ಅಭ್ಯರ್ಥಿಗಳ ವಿರುದ್ಧ ಪೊಲೀಸರು ಇಲ್ಲಿಯವರೆಗೆ ಕ್ರಮ ಜರುಗಿಸಿಲ್ಲ. ಪ್ರಕರಣದ ಇನ್ನೋರ್ವ ಪ್ರಮುಖ ಆರೋಪಿಯಾದ ದಾವಣಗೆರೆ ಮೂಲದ ಸಾರಿಗೆ ಇಲಾಖೆ ನೌಕರ ವಸಂತ್ ಚೌವ್ಹಾಣ್‍ನನ್ನು ರೆಡ್‍ಹ್ಯಾಂಡಾಗಿ ಪೊಲೀಸರು ಬಂಧಿಸಿ ಬಿಡುಗಡೆ ಸಹ ಮಾಡಿದ್ದಾರೆ.

    ಈ ಬಗ್ಗೆ ರಾಜ್ಯ ಸರ್ಕಾರ ಉನ್ನತ ತನಿಖೆ ನಡೆಸುವಂತೆ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರು ಮಾಜಿ ಗೃಹ ಸಚಿವ ಎಂ.ಬಿ ಪಾಟೀಲ್‍ಗೆ ದೂರು ನೀಡಿದ್ದರು. ಆಗ ಎಚ್ಚೆತ್ತ ಪೊಲೀಸರು, ವಸಂತ್ ಚೌವ್ಹಾಣ್‍ನ ಹೆಸರನ್ನು ಚಾಜ್‍ಶೀಟ್‍ನಲ್ಲಿ ಸೇರಿಸಿ ಕೈತೊಳೆದುಕೊಂಡಿದ್ದಾರೆ. ಹೀಗಾಗಿ ಇದೀಗ ಮರು ತನಿಖೆ ನಡೆಸಲು ದೂರುದಾರರು ರಾಜ್ಯ ಸರ್ಕಾರಕ್ಕೆ ಆಗ್ರಹಿಸುತ್ತಿದ್ದಾರೆ.

    ಅಕ್ರಮ ಬಯಲಿಗೆ ತಂದು ನೊಂದ ಅಭ್ಯರ್ಥಿಗಳಿಗೇ ನ್ಯಾಯ ನೀಡಬೇಕಾದ ಪೊಲೀಸರು ಕ್ರಮ ಜರುಗಿಸದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಹಳ್ಳಹಿಡಿದಿರುವ ಈ ಕೆಪಿಎಸ್‍ಸಿ ಗೋಲ್ಮಾಲ್‍ನ ತನಿಖೆಯನ್ನು ಉನ್ನತ ಅಧಿಕಾರಿಗಳ ನೇತೃತ್ವದಲ್ಲಿ ಮರು ತನಿಖೆ ನಡೆಸಬೇಕಾಗಿದೆ.