Tag: KPCC President

  • ಮಾಧ್ಯಮಗಳ ಮೂಲಕ ಬೆಳಗಾವಿ ಕಿತ್ತಾಟಕ್ಕೆ ಹೇಳಿಕೆ ನೀಡುವುದು ಸರಿಯಲ್ಲ: ದಿನೇಶ್ ಗುಂಡೂರಾವ್

    ಮಾಧ್ಯಮಗಳ ಮೂಲಕ ಬೆಳಗಾವಿ ಕಿತ್ತಾಟಕ್ಕೆ ಹೇಳಿಕೆ ನೀಡುವುದು ಸರಿಯಲ್ಲ: ದಿನೇಶ್ ಗುಂಡೂರಾವ್

    ನವದೆಹಲಿ: ಜಾರಕಿಹೊಳಿ ಸಹೋದರರು ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ಕಿತ್ತಾಟವನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ಬಗ್ಗೆ ಮಾಧ್ಯಮಗಳ ಮೂಲಕ ಹೇಳಿಕೆ ನೀಡುತ್ತಿರುವುದು ಸರಿಯಲ್ಲವೆಂದು ಕೆಪಿಸಿಸಿ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

    ಬೆಳಗಾವಿ ಕೈ ನಾಯಕರ ಕಿತ್ತಾಟದ ವಿಚಾರ ಕುರಿತು ದೆಹಲಿಯಲ್ಲಿ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಖುದ್ದು ರಾಜ್ಯ ಉಸ್ತುವಾರಿ ವೇಣುಗೋಪಾಲ್ ರವರ ಬಳಿಯು ಚರ್ಚೆ ನಡೆಸಿದ್ದೇನೆ. ಬೆಂಗಳೂರಿಗೆ ತೆರಳಿದ ಬಳಿಕ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಶಾಸಕರೇ ಆಗಲಿ, ಸಚಿವರೇ ಆಗಲಿ ಯಾರೂ ಸಹ ಪಕ್ಷದ ಶಿಸ್ತನ್ನು ಮೀರಬಾರದು, ಹಾಗೆಯೇ ಪಕ್ಷದ ನಾಯಕರ ವಿರುದ್ಧ ಯಾವ ಹೇಳಿಕೆಗಳನ್ನು ನೀಡಬಾರದು. ಪಕ್ಷದ ಚೌಕಟ್ಟನ್ನು ಮೀರಿ ವರ್ತಿಸುವುದು ಸರಿಯಲ್ಲ. ಮಾಧ್ಯಮಗಳ ಮೂಲಕ ಹೇಳಿಕೆ ನೀಡುತ್ತಿರುವುದು ಸರಿಯಲ್ಲವೆಂದು ಪರೋಕ್ಷವಾಗಿ ಜಾರಕಿಹೊಳಿ ಬ್ರದರ್ಸ್ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಗೆ  ಎಚ್ಚರಿಕೆ ರವಾನಿಸಿದ್ದಾರೆ. ಇದನ್ನೂ ಓದಿ: ಯಾವುದೇ ಕಾರಣಕ್ಕೂ ಕ್ಷಮಿಸಲ್ಲ-ರಮೇಶ್ ಜಾರಕಿಹೊಳಿ ವಿರುದ್ಧ ಡಿಕೆಶಿ ಕೆಂಡಾಮಂಡಲ!

    ಶೀಘ್ರವೇ ಬೆಳಗಾವಿ ಕೈ ನಾಯಕರ ಗೊಂದಲವನ್ನು ಇತ್ಯರ್ಥ ಮಾಡುತ್ತೇವೆ. ಇದರಿಂದಾಗಿ ಪಿಎಲ್‍ಡಿ ಬ್ಯಾಂಕ್ ಚುನಾವಣಾ ಮೇಲೆ ಯಾವುದೇ ಪರಿಣಾಮ ಬೀರಲ್ಲ. ನ್ಯಾಯಾಲಯದ ನಿರ್ದೇಶನದ ಮೇರೆಗೆ ಚುನಾವಣೆ ನಡೆಯುತ್ತಿದೆ. ಪಿಎಲ್‍ಡಿ ಬ್ಯಾಂಕ್ ಚುನಾವಣೆ ಹಾಗೂ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ. ಅದು ಕೇವಲ ಬೆಳಗಾವಿಗೆ ಮಾತ್ರ ಸೀಮಿತ. ಆದರೂ ನಾಯಕರುಗಳು ಸಾರ್ವಜನಿಕವಾಗಿ ಹೇಳಿಕೆ ನೀಡಿರುವುದು ಸರಿಯಲ್ಲ. ಎಲ್ಲರ ಜೊತೆ ಮಾತನಾಡಿ ಗೊಂದಲ ಬಗೆಹರಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಲಕ್ಷ್ಮೀ ಹೆಬ್ಬಾಳ್ಕರ್ ನ ಹದ್ದು ಬಸ್ತುನಲ್ಲಿ ಇಡದಿದ್ದರೇ, ಉಗ್ರ ಕ್ರಮ ಕೈಗೊಳ್ತೀವಿ: ರಮೇಶ್ ಜಾರಕಿಹೊಳಿ

    ಕಾಂಗ್ರೆಸ್ಸಿನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆಯವರನ್ನು ದೆಹಲಿ ನಿವಾಸದಲ್ಲಿ ದಿನೇಶ್ ಗುಂಡೂರಾವ್ ಭೇಟಿ ಮಾಡಿದ್ದಾರೆ. ಭೇಟಿ ವೇಳೆ ಜಾರಕಿಹೊಳಿ ಬ್ರದರ್ಸ್ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ಜಟಾಪಟಿ ವಿಚಾರದ ಬಗ್ಗೆ ಸುದೀರ್ಘವಾಗಿ ಮಾತುಕತೆ ನಡೆಸಿದ್ದಾರೆ. ಖರ್ಗೆಯವರು ಶೀಘ್ರವೇ ಸಮಸ್ಯೆಯನ್ನು ಬಗೆಹರಿಸಿ ಹಾಗೂ ಅವರ ಬಹಿರಂಗ ಹೇಳಿಕೆಗಳಿಗೆ ಕಡಿವಾಣ ಹಾಕಿ ಎಂದು ಗುಂಡೂರಾವ್ ಅವರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಲೋಕಸಭೆ ಚುನಾವಣೆಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಪಕ್ಷದಲ್ಲಿ ವಿರೋಧವಿಲ್ಲ: ದಿನೇಶ್ ಗುಂಡೂರಾವ್

    ಲೋಕಸಭೆ ಚುನಾವಣೆಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಪಕ್ಷದಲ್ಲಿ ವಿರೋಧವಿಲ್ಲ: ದಿನೇಶ್ ಗುಂಡೂರಾವ್

    ಬೆಂಗಳೂರು: ಲೋಕಸಭೆ ಚುನಾವಣೆಯ ಎದುರಿಸುವಲ್ಲಿ ಕಾಂಗ್ರೆಸ್-ಬಿಜೆಪಿ ಮೈತ್ರಿಗೆ ನಮ್ಮ ಪಕ್ಷದಲ್ಲಿ ಯಾರೂ ವಿರೋಧ ವ್ಯಕ್ತಪಡಿಸಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೈತ್ರಿ ವಿಚಾರವಾಗಿ ಪಕ್ಷದ ಮಟ್ಟದಲ್ಲಿ ಇನ್ನೂ ಚರ್ಚೆಯಾಗಿಲ್ಲ. ಹೈಕಮಾಂಡ್ ನಿರ್ಧಾರವೇ ಅಂತಿಮ ಎನ್ನುವ ವಿಚಾರವನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಕೂಡಾ ತಿಳಿಸಿದ್ದಾರೆ. ಶನಿವಾರ ನಡೆಯಲಿರುವ ಸಭೆಯಲ್ಲಿ ಪಕ್ಷಕ್ಕೆ ಸಂಬಂಧಿಸಿದ ವಿಚಾರಗಳು, ಮುಂದಿನ ಹಂತದ ನಿರ್ಧಾರಗಳು, ಲೋಕಸಭೆ ಚುನಾವಣೆಗೆ ಸಿದ್ಧತೆ ಕುರಿತು ಚರ್ಚೆ ನಡೆಸುತ್ತೇವೆ ಎಂದರು.

    ನಾನು ಅಧ್ಯಕ್ಷನಾದ ಮೇಲೆ ಇದೇ ಮೊದಲ ಬಾರಿಗೆ ಕೆ.ಸಿ.ವೇಣುಗೋಪಾಲ್ ನೇತೃತ್ವದಲ್ಲಿ ಕೆಪಿಸಿಸಿ ಪದಾಧಿಕಾರಿಗಳ ಪ್ರಥಮ ಸಭೆ ನಡೆಯುತ್ತಿದೆ. ಪಕ್ಷದ ಬೆಳವಣಿಗೆಯ ಕುರಿತಾಗಿ ಚರ್ಚೆ ನಡೆಸಲಿದ್ದೇವೆ ಎಂದು ತಿಳಿಸಿದರು.

  • ಈಶ್ವರ್ ಖಂಡ್ರೆಗೆ ನಿಂಬೆಹಣ್ಣು ಕೊಟ್ರು ಐಜಿ ಸನದಿ

    ಈಶ್ವರ್ ಖಂಡ್ರೆಗೆ ನಿಂಬೆಹಣ್ಣು ಕೊಟ್ರು ಐಜಿ ಸನದಿ

    ಹುಬ್ಬಳ್ಳಿ: ಎರಡು ನಿಂಬೆಹಣ್ಣು ನೀಡಿ, ವಿಶೇಷ ರೀತಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಿಗೆ ಈಶ್ವರ್ ಖಂಡ್ರೆ ಅವರನ್ನು ಮಾಜಿ ಸಂಸದ ಐಜಿ ಸನದಿ ಸ್ವಾಗತಿಸಿದ್ದಾರೆ.

    ಸನದಿ ನೀಡಿದ ನಿಂಬೆ ಹಣ್ಣನ್ನು ನಗುನಗುತ್ತಲೇ ಸ್ವೀಕರಿಸಿ, ಇದು ಶುಭದ ಸಂಕೇತ ಎಂದರು. ಬಳಿಕ ಮಾಧ್ಯಮಗೋಷ್ಠಿ ಮುಗಿಯುವವರೆಗೂ ಎರಡು ನಿಂಬೆಹಣ್ಣು ಕೈಯಲ್ಲಿ ಹಿಡಿದುಕೊಂಡೇ ಖಂಡ್ರೆ ಕುಳಿತಿದ್ದರು. ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಇದೇ ಮೊದಲ ಬಾರಿಗೆ ಹುಬ್ಬಳ್ಳಿಗೆ ಆಗಮಿಸಿದ್ದರು.

    ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಅನೇಕ ಅಭಿವೃದ್ಧಿ ಕಾರ್ಯ ಮಾಡಿತ್ತು. ಆದರೆ 2018ರ ಚುನಾವಣೆಯಲ್ಲಿ ಬಹುಮತ ಪಡೆಯುವಲ್ಲಿ ನಾವು ವಿಫಲರಾಗಿದ್ದೇವೆ. ಕಾಂಗ್ರೆಸ್ ಅಭಿವೃದ್ಧಿ ಕಾರ್ಯಗಳನ್ನು ಸರಿಯಾಗಿ ಮನೆ ಮನೆಗೆ ತಲುಪಿಸಲು ಆಗಲಿಲ್ಲ. ಹೀಗಾಗಿ ನಾವು ಸೋಲಬೇಕಾಯಿತು. ಪಕ್ಷವನ್ನು ಬೇರು ಮಟ್ಟದಿಂದ ಭದ್ರಗೊಳಿಸಲು ಪ್ರವಾಸ ಕೈಗೊಂಡಿರುವೆ ಎಂದು ಹೇಳಿದರು.

    ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಸುಳ್ಳು ಭರವಸೆ ನೀಡಿ, ಮೊಸ ಮಾಡಿದ್ದಾರೆ. ಅವರಿಗೆ 2019ರ ಲೋಕಸಭಾ ಚುನಾವಣೆಯಲ್ಲಿ ಪಾಠ ಕಲಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಕೇಂದ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಮೆರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಾವು ಶೇಕಡ 100 ರಷ್ಟು ಕೆಲಸ ಮಾಡಿ ಶೇಕಡಾ 5ರಷ್ಟು ಮಾತ್ರ ಹೇಳಿಕೊಳ್ಳುತ್ತೇವೆ. ಆದರೆ ಬಿಜೆಪಿಯವರ ಬಾಯಿ ಬೊಂಬೈ ಆಗಿದೆ. ಸುಳ್ಳನ್ನು ಸತ್ಯ ಎನ್ನುವ ರೀತಿಯಲ್ಲಿ ಬಿಂಬಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

  • ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದೆಹಲಿಯಲ್ಲಿ ಮುನಿಯಪ್ಪ ಲಾಬಿ!

    ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದೆಹಲಿಯಲ್ಲಿ ಮುನಿಯಪ್ಪ ಲಾಬಿ!

    ನವದೆಹಲಿ: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಸಂಸದ ಮುನಿಯಪ್ಪ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ ಹಾಗೂ ಅಶೋಕ್ ಗೆಹ್ಲೋಟ್ ಭೇಟಿಯಾಗಿ ಕೆಪಿಸಿಸಿ ಅಧ್ಯಕ್ಷ ಹುದ್ದೆ ನೀಡುವಂತೆ ಮನವಿ ಮಾಡಿದ್ದಾರೆ.

    ಲೋಕಸಭೆ ಚುನಾವಣೆ ದೃಷ್ಟಿಯಿಂದ ಸಂಸದರಿಗೆ ಕೆಪಿಸಿಸಿ ಸ್ಥಾನ ನೀಡಬೇಕು. ದಲಿತ ಸಮುದಾಯದಿಂದ ನನಗೆ ಅವಕಾಶ ನೀಡಿದರೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಲಾಭವಾಗಲಿದೆ. ಅಲ್ಲದೆ ವಿಧಾನಸಭೆ ಚುನಾವಣೆಯಲ್ಲೂ ದಲಿತ ಎಡ ಪಗಂಡದಿಂದ ಹೆಚ್ಚು ಸ್ಥಾನ ಕೊಡಿಸಿದ್ದೇನೆ. ಹಾಗಾಗಿ ನನ್ನನ್ನು ಕೆಪಿಸಿಸಿ ಹುದ್ದೆಗೆ ಪರಿಗಣಿಸಿ ಹೈಕಮಾಂಡ್ ತಮ್ಮ ಹೆಸರನ್ನು ಶಿಫಾರಸು ಮಾಡುವಂತೆ ಮುನಿಯಪ್ಪ ಉಭಯ ನಾಯಕರಿಗೆ ಮನವರಿಕೆ ಮಾಡಿದ್ದಾರೆ.

    ಪಕ್ಷದ ನಾಯಕರ ಭೇಟಿ ಬಳಿಕ ಮಾತನಾಡಿದ ಅವರು, ನಾನು ಪ್ರಬಲ ಆಕಾಂಕ್ಷಿ ಆಗಿದ್ದು, ಹೈಕಮಾಂಡ್ ನಿರ್ಣಯ ಅಂತಿಮ. ಕೆಪಿಸಿಸಿಗೆ ಯಾರನ್ನೇ ಆಯ್ಕೆ ಮಾಡಿದರೂ ಸ್ವಾಗತಿಸುತ್ತೇನೆ ಎಂದು ಹೇಳಿದ್ದಾರೆ.

    ಈ ಹಿಂದೆ ಬಹಿರಂಗ ಹೇಳಿಕೆ ನೀಡಿದ್ದ ಸಂಸದರು, ಅವಕಾಶ ಕೊಟ್ಟರೆ ಲೋಕಸಭೆಗೆ ಸ್ಪರ್ಧೆ ಮಾಡದೇ ಕೆಪಿಸಿಸಿ ಅಧ್ಯಕ್ಷ ನಾಗಿ ಕೆಲಸ ಮಾಡುತ್ತೇನೆ. ಕೆಪಿಸಿಸಿ ವಿಚಾರದಲ್ಲಿ ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧ. ಕಳೆದ ಸಂಸದರ ಸಭೆಯಲ್ಲಿ ಕೆಲವರು ಅಧ್ಯಕ್ಷ ಸ್ಥಾನಕ್ಕೆ ನನ್ನ ಹೆಸರು ಸೂಚಿಸಿದ್ದರು. ನನಗೆ ಅವಕಾಶ ನೀಡಿದರೆ ಸಮರ್ಥವಾಗಿ ಕೆಲಸ ಮಾಡುತ್ತೇನೆ. ಈ ಹಿಂದೆ ಸೋನಿಯಾ ಗಾಂಧಿ ಎರಡು ಬಾರಿ ನನ್ನ ಹೆಸರು ಸೂಚಿಸಿದ್ದರೂ ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಕಾಂಗ್ರೆಸ್ ನಲ್ಲಿ ಎಲ್ಲರಿಗೂ ಅವಕಾಶ ನೀಡುತ್ತಾರೆ. ನನ್ನ ಹೊರತು ಪಡಿಸಿ ಯಾರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಟ್ಟರೂ ವಿರೋಧ ಇಲ್ಲ. ಬಿ.ಕೆ ಹರಿಪ್ರಸಾದ್, ಮಾಜಿ ಸಿಎಂ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಅವರಿಗೆ ಅವಕಾಶ ಕೊಟ್ಟರೂ ಅಭ್ಯಂತರ ಇಲ್ಲ ಎಂದು ತಿಳಿಸಿದ್ದರು.

  • ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಎಚ್.ಕೆ.ಪಾಟೀಲ್ ಪರ ಬ್ಯಾಟ್ ಬೀಸಿದ ಮಲ್ಲಿಕಾರ್ಜುನ ಖರ್ಗೆ

    ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಎಚ್.ಕೆ.ಪಾಟೀಲ್ ಪರ ಬ್ಯಾಟ್ ಬೀಸಿದ ಮಲ್ಲಿಕಾರ್ಜುನ ಖರ್ಗೆ

    ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಮಾಜಿ ಸಚಿವ ಎಚ್.ಕೆ.ಪಾಟೀಲ್ ಪರ ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಬ್ಯಾಟ್ ಬೀಸಿದ್ದಾರೆ.

    ಉತ್ತರ ಕರ್ನಾಟಕದ ಕಾಂಗ್ರೆಸ್ ನಾಯಕರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಬೇಕು ಎನ್ನುವ ಹೈಕಮಾಂಡ್ ನಿರ್ಧಾರ ಗೊತ್ತಾಗುತ್ತಿದ್ದಂತೆ ಮಲ್ಲಿಕಾರ್ಜುನ ಖರ್ಗೆ ಅವರು, ಅಧ್ಯಕ್ಷ ಸ್ಥಾನವನ್ನು ಎಚ್.ಕೆ.ಪಾಟೀಲ್ ಅವರಿಗೆ ನೀಡಬೇಕು ಎಂದು ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಮಾಜಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡದಂತೆ ಹಿರಿಯ ನಾಯಕರು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಎಚ್.ಕೆ.ಪಾಟೀಲ್ ಅವರು ಸೂಕ್ತ ವ್ಯಕ್ತಿ, ಅವರನ್ನೇ ಅಧ್ಯಕ್ಷರನ್ನಾಗಿ ಮಾಡುವುದು ಉತ್ತಮ ಎಂದು ಹೈಕಮಾಂಡ್ ಮಟ್ಟದಲ್ಲಿ ಮಲ್ಲಿಕಾರ್ಜುನ ಖರ್ಗೆ ಲಾಬಿ ನಡೆಸಿದ್ದಾರೆ.

    ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರೊಂದಿಗೆ ಮಾತುಕತೆ ನಡೆಸಿರುವ ಅವರು, ಮುನಿಸಿಕೊಂಡಿರುವ ಲಿಂಗಾಯತರು ಕಾಂಗ್ರೆಸ್ ಪರವೇ ನಿಲ್ಲುತ್ತಾರೆ. ಬೇರೆ ಎಲ್ಲಿಯೂ ಹೋಗಲ್ಲ. ಎಲ್ಲ ಅರ್ಹತೆ ಹೊಂದಿರುವ ಎಚ್.ಕೆ.ಪಾಟೀಲ್ ಅವರು ಅಧ್ಯಕ್ಷರಾದರೆ ಪಕ್ಷಕ್ಕೆ ಒಳಿತಾಗುತ್ತದೆ ಎಂದು ಪಟ್ಟು ಹಿಡಿದಿದ್ದಾರೆ.

    ಮುಂದಿನ ರಾಜಕೀಯ ಪರಿಸ್ಥಿತಿಯ ಮೇಲೆ ನಿಯಂತ್ರಣ ಹೇರಲು ಮಲ್ಲಿಕಾರ್ಜುನ ಖರ್ಗೆ ಅವರು ಎಚ್.ಕೆ.ಪಾಟೀಲ್ ಅವರನ್ನು ಬೆಂಬಲಿಸುತ್ತಿದ್ದಾರೆ. ಇವರಿಬ್ಬರ ಮಧ್ಯೆ ಆತ್ಮೀಯ ಸಂಬಂಧವಿದ್ದು, ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಸ್ಥಾನ ಸಿಗುವ ಅವಕಾಶವಿದ್ದರೆ ಎಚ್.ಕೆ.ಪಾಟೀಲರ ಮೂಲಕ ಪಡೆಯಬಹುದು ಎನ್ನುವ ಸೂತ್ರವನ್ನು ಮಲ್ಲಿಕಾರ್ಜುನ್ ಖರ್ಗೆ ಅವರು ಸಿದ್ಧ ಪಡೆಸುತ್ತಿದ್ದಾರೆ ಎಂದು ಪಕ್ಷದ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

  • ಪರಮೇಶ್ವರ್‍ಗೇ ‘ಕೈ’ ಪಟ್ಟ – ಗೃಹ ಸಚಿವ ಸ್ಥಾನ ತ್ಯಜಿಸಲು ಹೈಕಮಾಂಡ್ ಸೂಚನೆ

    ಪರಮೇಶ್ವರ್‍ಗೇ ‘ಕೈ’ ಪಟ್ಟ – ಗೃಹ ಸಚಿವ ಸ್ಥಾನ ತ್ಯಜಿಸಲು ಹೈಕಮಾಂಡ್ ಸೂಚನೆ

    ನವದೆಹಲಿ: ಕೆಪಿಸಿಸಿ ಅಧ್ಯಕ್ಷರಾಗಿ ಜಿ.ಪರಮೇಶ್ವರ್ ಅವರನ್ನೇ ಮುಂದುವರೆಸಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ. ಆದರೆ ಕೈ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸಲು ಹೈಕಮಾಂಡ್ ಸಚಿವ ಸ್ಥಾನ ತ್ಯಜಿಸಬೇಕು ಎಂಬ ಸೂತ್ರವನ್ನು ಮುಂದಿಟ್ಟಿದೆ ಎಂದು ವಿಶ್ವಸನೀಯ ಮೂಲಗಳಿಂದ ಮಾಹಿತಿ ಸಿಕ್ಕಿದೆ.

    ಪರಮೇಶ್ವರ್ ಮುಂದುವರಿಕೆಗೆ ಹೈಕಮಾಂಡ್ ನಿರ್ಧಾರ ಮಾಡಿದ್ದು, ಪರಮೇಶ್ವರ್ ಅವರನ್ನ ಬದಲಾಯಿಸಿದರೆ ದಲಿತರು ಮುನಿಸಿಕೊಳ್ಳುವ ಸಾಧ್ಯತೆ ಇದೆ. ಅಲ್ಲದೆ ಮುಂದೆ ಚುನಾವಣಾ ವರ್ಷ ಇದೆ. ಹೀಗಾಗಿ ಈಗ ಪರಮೇಶ್ವರ್ ಅವರನ್ನು ಬದಲಾಯಿಸಿದರೆ ದಲಿತ ಸಮುದಾಯದವರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ಇದರಿಂದ ಮುಂದಿನ ಚುನಾವಣೆ ವೇಳೆ ಪಕ್ಷದ ವೋಟ್ ಬ್ಯಾಂಕ್‍ಗೆ ತೊಂದರೆ ಎದುರಾಗಲಿದೆ. ಜೊತೆಗೆ ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ಪರಮೇಶ್ವರ್ ಮುಂದುವರೆಸುವಂತೆ ಸಲಹೆ ನೀಡಿದ್ದರು ಎನ್ನಲಾಗಿದೆ.

    ಇಂಧನ ಸಚಿವ ಡಿ.ಕೆ.ಶಿವಕುಮಾರ್ ನೇಮಕಕ್ಕೆ ಒಮ್ಮತ ಮೂಡಲಿಲ್ಲ. ಡಿಕೆಶಿಗೆ ಹಲವು ಹಿರಿಯ ಮುಖಂಡರಿಂದ ವಿರೋಧ ವ್ಯಕ್ತವಾಯಿತು. ಹೀಗಾಗಿ ಪರಮೇಶ್ವರ್ ಮುಂದುವರಿಕೆ ಹೈಕಮಾಂಡ್ ಸೂತ್ರ ಸಿದ್ಧಪಡಿಸಿದೆ.

    ಸಚಿವ ಸ್ಥಾನ ತೊರೆಯಲು ಪರಮೇಶ್ವರ್‍ಗೆ ಹೈಕಮಾಂಡ್ ಸೂಚನೆ ನೀಡಿದ್ದು, ಗೃಹ ಖಾತೆ ಮತ್ತೆ ಕೆಜೆ ಜಾರ್ಜ್ ಹೆಗಲಿಗೇರುವ ಸಾಧ್ಯತೆ ನಿಚ್ಚಳವಾಗಿದೆ. ಸಿದ್ದರಾಮಯ್ಯನವರ ಅಭ್ಯರ್ಥಿ ಎಸ್.ಆರ್ ಪಾಟೀಲ್ ಅವರನ್ನು ಪರಿಷತ್ ಸಭಾಪತಿ ಹುದ್ದೆಗೆ ತರಲು ಚಿಂತನೆ ನಡೆದಿದೆ. ಸಚಿವ ಸೀತಾರಾಮ್‍ಗೆ ಪರಿಷತ್ ಸಭಾನಾಯಕನ ಹೊಣೆ, ಮೇಲ್ವರ್ಗದ ನಾಯಕರಿಗೆ ಪ್ರಚಾರ ಸಮಿತಿ ಮತ್ತು ಅಭ್ಯರ್ಥಿ ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನ ನೀಡಲು ಇಂದು ರಾಹುಲ್ ಗಾಂಧಿ ಜೊತೆ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ ಎನ್ನಲಾಗಿದೆ.

    ಇದೇ ವೇಳೆ ಸಭೆ ಬಳಿಕ ದೆಹಲಿಯಲ್ಲಿ ಮಾತನಾಡಿದ ಸಚಿವ ಡಿಕೆ ಶಿವಕುಮಾರ್, ಯಾರೇ ಅಧ್ಯಕ್ಷರಾದ್ರೂ ಅವರ ಜೊತೆ ಕೆಲಸ ಮಾಡಲು ಸಿದ್ಧ. ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತ ಎಂದು ಹೇಳಿದ್ದಾರೆ.

    ಮೂವರ ನಡುವೆ ಇತ್ತು ಪೈಪೋಟಿ: ದಲಿತ ಸಮುದಾಯದ ಬೆಂಬಲದೊಂದಿಗೆ ಮತ್ತೊಂದು ಅವಧಿಗೆ ಅಧ್ಯಕ್ಷರಾಗಲು ಪರಮೇಶ್ವರ್ ಕಸರತ್ತು ಮಾಡ್ತಿದ್ರೆ, ಒಕ್ಕಲಿಗರ ಜೊತೆ ಉಪಚುನಾವಣೆಗಳಲ್ಲಿ ಕೆಲಸ ಮಾಡಿ ಜಯದ ಹುಮ್ಮಸ್ಸಿನಲ್ಲಿರೋ ಇಂಧನ ಸಚಿವ ಡಿಕೆ ಶಿವಕುಮಾರ್ ತಮ್ಮ ಪ್ರಭಾವ ಬೀರಿ ಮತ್ತೊಂದು ಕಡೆ ಲಾಬಿ ಮಾಡಿದ್ದರು. ಇನ್ನೊಂದು ಕಡೆ ಸಿಎಂ ಸಿದ್ದರಾಮಯ್ಯ ಲಿಂಗಾಯತ ಸಮುದಾಯದ ಆಪ್ತ ಸಚಿವ ಎಂ.ಬಿ. ಪಾಟೀಲ್ ಪರ ಬ್ಯಾಟಿಂಗ್ ಮಾಡಲು ಮುಂದಾಗಿದ್ದರು.

    ಸಚಿವ ಡಿ.ಕೆ.ಶಿವಕುಮಾರ್ ಅವರು ಭಾನುವಾರ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆಯವರನ್ನು ಭೇಟಿಯಾಗಿದ್ದರು. ಆಶ್ಚರ್ಯ ಎಂಬಂತೆ ರವಿವಾರ ಸಿಎಂ ದೆಹಲಿಗೆ ತೆರಳುವ ವೇಳೆ ಅಧ್ಯಕ್ಷ ಆಕಾಂಕ್ಷಿಗಳಾದ ಡಿಕೆ ಶಿವಕುಮಾರ್ ಮತ್ತು ಎಂಬಿ ಪಾಟೀಲ್ ಕೂಡ ಜೊತೆಯಲ್ಲೇ ಪ್ರಯಾಣ ಬೆಳೆಸಿದ್ದರು.