ರಾಮನಗರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಸಹೋದರರು ಹೆಮ್ಮಾರಿ ಕೊರೊನಾ ವೈರಸ್ ತಡೆಗೆ 2 ಲಕ್ಷ ಮಾಸ್ಕ್, 17 ಸಾವಿರ ಲೀಟರ್ ಸ್ಯಾನಿಟೈಜರ್ ವಿತರಣೆ ಮಾಡಿದ್ದಾರೆ.
ಡಿಕೆಎಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಜನರಿಗೆ ಉಚಿತವಾಗಿ ವಿತರಿಸಲು ರಾಮನಗರ ಜಿಲ್ಲಾಧಿಕಾರಿ ಅರ್ಚನಾ ಅವರಿಗೆ ಕಿಟ್ ನೀಡಲಾಗಿದೆ. ಡಿ.ಕೆ.ಸಹೋದರರು 200 ಎಂಎಲ್ ಹಾಗೂ 500 ಎಂಎಲ್ ಬಾಟಲ್‍ಗಳುಳ್ಳ ಒಟ್ಟು 17 ಸಾವಿರ ಲೀಟರ್ ಹ್ಯಾಂಡ್ ಸ್ಯಾನಿಟೈಜರ್ ಹಾಗೂ 2 ಲಕ್ಷ ಮಾಸ್ಕ್‌ಗಳನ್ನು ಹಸ್ತಾಂತರಿಸಿದ್ದಾರೆ. ಇದನ್ನೂ ಓದಿ: ನಿತ್ಯವೂ 10 ಸಾವಿರ ಜನರಿಗೆ ‘ದಾದಾ’ನಿಂದ ಅನ್ನದಾನ
ಈ ವೇಳೆ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳು ಜಿಲ್ಲಾಡಳಿತದ ಮೂಲಕ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿಯ ಮೂಲಕ ನಗರದ ಪ್ರತಿ ಮನೆಗಳಿಗೆ ಹಾಗೂ ಗ್ರಾಮಗಳಲ್ಲಿ ಕೆಲವು ಕಡೆಗಳಲ್ಲಿ ಸ್ಯಾನಿಟೈಜರ್ ಸ್ಥಳ ನಿರ್ಮಿಸಿ ಸಾರ್ವಜನಿಕರಿಗೆ ಹಾಕುವುದನ್ನು ಮಾಡಲಿ ಎಂದು ತಿಳಿಸಿದರು.
ರಾಮನಗರ: ರಾಜ್ಯ ಸರ್ಕಾರ ಕೊರೊನಾ ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ಒಂದು ವಾರ ಕರ್ನಾಟಕ ಸ್ಥಬ್ದಗೊಳಿಸಿರುವುದು ಸುಮ್ಮನೆ ಪ್ರಚಾರಕ್ಕೋಸ್ಕರ ಹೀಗೆ ಮಾಡುವುದು ಸರಿಯಲ್ಲ. ಇಲ್ಲಿಯ ತನಕ ಆಸ್ಪತ್ರೆಯ ವಿಚಾರದಲ್ಲಿ ಮೆಡಿಕಲ್ ಕಾಲೇಜುಗಳ ಚೇರ್‍ಮನ್‍ಗಳ ಸಭೆ ನಡೆಸಿಲ್ಲ. ಏನ್ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದಾರೆ. ಬೇಸಿಕ್ ಕಾಮನ್‌ಸೆನ್ಸ್‌ನಲ್ಲಿ ನಮ್ಮ ರಾಜ್ಯ ಸರ್ಕಾರ ಎಡವಿದೆ ಎಂದು ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿಕೆ ಶಿವಕುಮಾರ್ ಕನಕಪುರದಲ್ಲಿ ತಿಳಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಸ್ವಕ್ಷೇತ್ರ ಕನಕಪುರಕ್ಕೆ ಇಂದು ಭೇಟಿ ನೀಡಿದರು. ಮೊದಲಿಗೆ ಮನೆ ದೇವತೆ ಕೆಂಕೇರಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ತಮ್ಮ ನಿವಾಸಕ್ಕೆ ತೆರಳಿ ಸ್ವಾಗತ ಹಾಗೂ ಶುಭಾಶಯ ಕೋರಲು ಬಂದಿದ್ದ ಕಾರ್ಯಕರ್ತರು, ಮುಖಂಡರನ್ನು ಭೇಟಿ ಮಾಡಿದರು.
ಇದೇ ವೇಳೆ ಮಾತನಾಡಿದ ಅವರು ಕೊರೊನಾ ವೈರಸ್ ತಡೆಗಟ್ಟುವ ವಿಚಾರದಲ್ಲಿ ರಾಜ್ಯ ಸರ್ಕಾರ ಮೊದಲು ಮೆಡಿಕಲ್ ಕಾಲೇಜುಗಳ ಚೇರ್‍ಮನ್‍ಗಳ, ಆಸ್ಪತ್ರೆ ಹೆಡ್‍ಗಳನ್ನು ಕರೆದು ಏನ್ ಕೆಲಸ ಮಾಡಬೇಕೋ ಅದನ್ನು ಮಾಡಬೇಕು. ಹೊರಗಡೆಯಿಂದ ಬರುವವರನ್ನು ಹೇಗೆ ನಿಲ್ಲಿಸಬೇಕು. ಅವರನ್ನ ಹೇಗೆ ಚೆಕಫ್ ಮಾಡಬೇಕೋ ಅದನ್ನ ಮಾಡಿ. ಅದನ್ನ ಏನೂ ಮಾಡದೇ ಸುಮ್ಮನೇ ಹಳ್ಳಿಯಲ್ಲಿ ವಾಸ್ತವ್ಯ ಹೂಡುವುದರಿಂದ ಏನು ಪ್ರಯೋಜನವಿಲ್ಲ ಎಂದು ರಾಜ್ಯ ಸರ್ಕಾರ ಹಾಗೂ ಆರೋಗ್ಯ ಸಚಿವ ಶ್ರೀರಾಮುಲು ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ಆರೋಗ್ಯ ವಿಚಾರದಲ್ಲಿ ಮುಂಜಾಗ್ರತಾ ಕ್ರಮ ಏನೇನು ಬೇಕು ತೆಗೆದುಕೊಳ್ಳಲಿ ಅದಕ್ಕೆ ನಮ್ಮದು ಸಂಪೂರ್ಣ ಸಹಕಾರವಿದೆ. ಆದರೆ ರಾಜ್ಯ, ಕೇಂದ್ರ ಸರ್ಕಾರಗಳು ಜನರಲ್ಲಿ ಆತಂಕ, ಭಯ ಹುಟ್ಟಿಸುವ ಕೆಲಸ ಮಾಡುತ್ತಿವೆ ಇದು ಸರಿಯಲ್ಲ. ದಿನಕ್ಕೆ ನೂರು ಜನರಿಗೆ ಫೋನ್ ಮಾಡಿದರು ಒಂದೊಂದು ನಿಮಿಷ ಕೆಮ್ಮುವುದೇ ಕೇಳುತ್ತೆ. ಕೆಮ್ಮುವುದು ಕೇಳಿ ನಿಮಗೂ ಕೆಮ್ಮು ಜ್ವರ ಬಂದುಬಿಡುತ್ತದೆ. ನನಗೂ ಕೆಮ್ಮು ಜ್ವರ ಬರುತ್ತಿದೆ ಎಂದರು.
ಆರೋಗ್ಯ ಸಚಿವ ಹಾಗೂ ವೈದ್ಯಕೀಯ ಸಚಿವರ ನಡುವೆ ಹೊಂದಾಣಿಕೆಯಿಲ್ಲ ಎಂಬ ವಿಚಾರವಾಗಿ ಮಾತನಾಡಿದ ಅವರು, ಯಾವ ಆರೋಗ್ಯ ಸಚಿವರೋ, ವೈದ್ಯಕೀಯ ಸಚಿವರೋ ನಾನ್ಯಾಕೆ ಅವರ ಸುದ್ದಿಗೆ ಹೋಗಲಿ. ಸರ್ಕಾರಗಳು ಕೊರೊನಾ ವಿಚಾರವಾಗಿ ಪ್ರತ್ಯೇಕ ಬಜೆಟ್ ಇಡಲಿ ನಷ್ಟವಾಗಿರುವ ಜನರ ಬದುಕಿಗೆ ನೆರವಾಗುವಂತಹ ಕೆಲಸ ಮಾಡಲಿ ಎಂದು ಹೇಳಿದರು.
ಕೊರೊನಾ ಎಫೆಕ್ಟ್ ನಿಂದ ನಮ್ಮಲ್ಲಿ ಕೋಳಿ 20 ರೂಪಾಯಿ ಆದರೂ ಕೇಳುವವರೇ ಇಲ್ಲದಂತಾಗಿದೆ. ಅಲ್ಲದೇ ತರಕಾರಿ 5 ರೂಪಾಯಿಗೆ ಕೊಡುವವರಿಲ್ಲದಂತಾಗಿದೆ. ಸರ್ಕಾರ ಈ ಬಗ್ಗೆ ಪ್ರತ್ಯೇಕ ಬಜೆಟ್ ಮಂಡಿಸಲಿ. ನಷ್ಟವಾಗಿರುವವರ ನೆರವಿಗೆ ಸರ್ಕಾರ ಮುಂದಾಗಬೇಕಿದೆ. ಒಂದು ವಾರ, 15 ದಿನ ಬಂದ್ ಮಾಡಿದ್ದೀರಲ್ಲ. ಬ್ಯಾಂಕ್‍ಗಳಲ್ಲಿ ರೈತರಿಗೆ, ಜನರಿಗೆ ಬಡ್ಡಿ ಕೊಟ್ಟವರೇ, ಅದನ್ನು ಬಂದ್ ಮಾಡಲಿ. ಬಡ್ಡಿ ಮಾತ್ರ ಹಗಲು ರಾತ್ರಿ ಓಡುತ್ತಾನೆ ಇರುತ್ತೆ, ಸಾಲ ತೆಗೆದುಕೊಂಡವರ ಪರಿಸ್ಥಿತಿ ಏನಾಗಬೇಕು. ವ್ಯವಹಾರ ಮಾಡಿದವರ ಬದುಕು ಏನಾಗಬೇಕು. ಅವರ ಬದುಕಿಗೆ ನಾವು ನೆರವಾಗಬೇಕು ಎಂದರು.
ಹಳೇ ಮೈಸೂರು ಭಾಗದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಜೊತೆಗಿನ ಸ್ನೇಹದ ಜೊತೆಗೆ ಪಕ್ಷ ಸಂಘಟನೆ ಯಾವ ರೀತಿ ಮಾಡುತ್ತೀರಾ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನನಗೆ ದೊಡ್ಡ ಜವಾಬ್ದಾರಿ ಕೊಟ್ಟಿದ್ದಾರೆ. ಕಾರ್ಯಕರ್ತರನ್ನು ಉಳಿಸಬೇಕಿದೆ ಪಕ್ಷದ ಸಿದ್ಧಾಂತಗಳು ವಿಭಿನ್ನವಾಗಿರುತ್ತೆ. ಅವರವರ ಪಕ್ಷದ ಸಿದ್ಧಾಂತ ಅವರವರು ಪಾಲಿಸುತ್ತಾರೆ. ನಾವು ನಮ್ಮ ಪಕ್ಷದ ಸಿದ್ಧಾಂತ ಪಾಲಿಸುತ್ತಾರೆ. ಅಷ್ಟೇ ಅಲ್ಲದೆ ಈಗ ವಿರೋಧ ಪಕ್ಷದಲ್ಲಿದ್ದೇವೆ. ಮಾಜಿ ಸಿಎಂ ಸಿದ್ದರಾಮಯ್ಯ ನಮ್ಮ ನಾಯಕರಿದ್ದಾರೆ. ನಮಗೆ ಇದು ಒಂದು ಹುದ್ದೆ ಅಲ್ಲ ಒಂದು ಜವಾಬ್ದಾರಿ ಎಂದು ತಿಳಿಸಿದರು.
ರಾಮನಗರ: ನೂತನ ಕೆಪಿಸಿಸಿ ಅಧ್ಯಕ್ಷ ಕನಕಪುರ ಬಂಡೆ, ಮಾಜಿ ಸಚಿವ ಡಿಕೆ ಶಿವಕುಮಾರ್ ಭಾನುವಾರ ತಮ್ಮ ಸ್ವಕ್ಷೇತ್ರ ಕನಕಪುರಕ್ಕೆ ಆಗಮಿಸಲಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಸ್ವಕ್ಷೇತ್ರ ಕನಕಪುರದ ಭಾನುವಾರದ ಕಾರ್ಯಕ್ರಮವನ್ನು ರದ್ದು ಮಾಡಿದ್ದರು. ಭಾನುವಾರ ಕನಕಪುರಕ್ಕೆ ಡಿಕೆಶಿ ಬರುತ್ತಿಲ್ಲ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಡಿಕೆಶಿಯವರನ್ನು ನೋಡಿ ವಿಶ್ ಮಾಡಲು ಬೆಂಗಳೂರಿನ ನಿವಾಸಕ್ಕೆ ರಾಮನಗರ ಜಿಲ್ಲೆಯ ಕೈ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳ ಸಂಖ್ಯೆ ಹೆಚ್ಚಳವಾಗಿತ್ತು.
ಅಲ್ಲದೆ ನಾಳೆ ಕೂಡ ಅಭಿಮಾನಿಗಳ ದಂಡೇ ಬೆಂಗಳೂರಿನ ಸದಾಶಿವನಗರದ ಮನೆಯತ್ತ ಮುಖ ಮಾಡಬಹುದಾದ ಹಿನ್ನೆಲೆಯಲ್ಲಿ ಡಿಕೆಶಿ ಭಾನುವಾರ ಕನಕಪುರಕ್ಕೆ ಆಗಮಿಸುತ್ತಿದ್ದಾರೆ. ಹಿಂದೆಯೇ ಕನಕಪುರಕ್ಕೆ ನಾನೇ ಬರುತ್ತೇನೆ. ನೀವು ಯಾರು ಬೆಂಗಳೂರಿಗೆ ಬರಬೇಡಿ ಎಂದು ತಿಳಿಸಿದ್ದ ಡಿಕೆಶಿಯವರು ಇದೀಗ ಅಭಿಮಾನಿಗಳ ಸಂಖ್ಯೆ ಹಿನ್ನೆಲೆಯಲ್ಲಿ ಕನಕಪುರಕ್ಕೆ ಭೇಟಿ ನೀಡುತ್ತಿದ್ದಾರೆ.
ಭಾನುವಾರ ಬೆಳಗ್ಗೆ 11 ಗಂಟೆಗೆ ಆಗಮಿಸಲಿರುವ ಕೆಪಿಸಿಸಿ ಅಧ್ಯಕ್ಷ ಡಿಕೆಶಿ 4 ಗಂಟೆವರೆಗೂ ಕನಕಪುರ ನಿವಾಸದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ತಮ್ಮ ನೆಚ್ಚಿನ ನಾಯಕ ಬರುವಿಕೆಯ ವೇಳೆ ಅದ್ಧೂರಿ ಸ್ವಾಗತ ಕೋರಲು ಕೈ ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳು ಸಿದ್ಧರಾಗಿದ್ದಾರೆ.
ನವದೆಹಲಿ: ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ ಶಿವಕುಮಾರ್ ನೇಮಕ ಮಾಡಿರುವ ಎಐಸಿಸಿ ನಡೆ ಸರಿಯಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಎಸ್.ಆರ್ ಹೀರೆಮಠ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಳಂಕ ರಹಿತ ವ್ಯಕ್ತಿಗಳಿಗೆ ಉನ್ನತ ಹುದ್ದೆಗಳನ್ನು ನೀಡುವಂತೆ ಅವರು ಒತ್ತಾಯಿಸಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರ ನೇಮಕ ವಿಚಾರದಲ್ಲಿ ಎಐಸಿಸಿ ತಪ್ಪು ನಿರ್ಧಾರ ತೆಗೆದುಕೊಂಡಿದೆ. ಡಿ.ಕೆ ಶಿವಕುಮಾರ್ ಅವರನ್ನು ಅಧ್ಯಕ್ಷರಾಗಿ ನೇಮಕ ಮಾಡಬಾರದಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಡಿಕೆಶಿ ವಿರುದ್ಧ ಬೆನ್ನಿಗಾನಳ್ಳಿ ಕೇಸ್ ಸೇರಿ ಕೋಟ್ಯಂತರ ರೂ.ಗಳ ಅಕ್ರಮ ಹಗರಣಗಳ ಆರೋಪ ಇದೆ. ಈಗಾಗಲೇ ಒಮ್ಮೆ ಜೈಲಿಗೆ ಹೋಗಿ ಬಂದಿದ್ದಾರೆ ಎಂದರು.
ಡಿಕೆಶಿ ವಿರುದ್ಧದ ಹಲವು ಕೇಸುಗಳು ಕೋರ್ಟ್ ನಲ್ಲಿ ವಿಚಾರಣೆ ಹಂತದಲ್ಲಿದೆ. ಮುಂದೇ ಏನು ಬೇಕಾದರೂ ಆಗಬಹುದಾದ ಸಾಧ್ಯತೆಗಳಿದೆ. ಈ ನಡುವೆ ಅವರಿಗೆ ಕೆಪಿಸಿಸಿ ಅಧ್ಯಕ್ಷರನ್ನ ಮಾಡಿರುವುದು ಸರಿಯಲ್ಲ. ಕಳಂಕಿತರಿಗೆ ಅವಕಾಶ ನೀಡದೆ ಎಐಸಿಸಿ ಹೊಸ ರಾಜಕಾರಣಕ್ಕೆ ನಾಂದಿ ಹಾಡಬೇಕು. ಕೂಡಲೇ ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಡಿಕೆಶಿ ವಜಾ ಮಾಡುವಂತೆ ಹೀರೆಮಠ್ ಆಗ್ರಹಿಸಿದರು.
ಬೆಂಗಳೂರು: ಕೆಪಿಸಿಸಿ ನೂತನ ಸಾರಥಿ ಆಯ್ಕೆಯನ್ನು ಅಧಿಕೃತವಾಗಿ ಪ್ರಕಟಿಸಿದಾಗ ಡಿ.ಕೆ.ಶಿವಕುಮಾರ್ ವಿಧಾನಸೌಧದಲ್ಲೇ ಇದ್ದರು. ಕೆಪಿಸಿಸಿ ಅಧ್ಯಕ್ಷರ ನೇಮಕ ಮಧ್ಯಾಹ್ನ ಗಂಟೆಗೆ ಅಧಿಕೃವಾಗಿ ಪ್ರಕಟವಾಗುತ್ತೆ ಎಂದು ಡಿಕೆಶಿಗೆ ಒಂದು ಗಂಟೆ ಮೊದಲೇ ಗೊತ್ತಿತ್ತಂತೆ.
ಮೊದಲೇ ವಿಚಾರ ತಿಳಿದ ಹಿನ್ನೆಲೆಯಲ್ಲಿ ಡಿಕೆಶಿ ಎಲ್ಲಿಯೂ ಹೋಗದೇ ವಿಧಾನಸಭೆಯ ವಿರೋಧ ಪಕ್ಷದ ಮೊಗಸಾಲೆಯಲ್ಲೇ ಕುಳಿತಿದ್ದರು. ಮೊಗಸಾಲೆಯಲ್ಲಿ ಡಿಕೆಶಿ ಇರುವಾಗಲೇ ಕೆಪಿಸಿಸಿ ಸಾರಥಿ ಪ್ರಕಟವಾಗಿ ಸಂಭ್ರಮ ಮನೆ ಮಾಡಿತು. ಅಧಿಕೃತ ಆದೇಶದ ಕಾಪಿ ತಲುಪಿದ ಕೂಡಲೇ ಡಿಕೆಶಿ ಭಾವುಕರಾದರು. ಅಲ್ಲಿಯೇ ಇದ್ದ ಶಾಸಕರೆಲ್ಲರೂ ಡಿಕೆಶಿಗೆ ಶುಭಾಶಯ ಕೋರಿದರು.
ಆ ವೇಳೆ ವಿಧಾನಸಭೆ ಮೊಗಸಾಲೆಯ ತಮ್ಮ ಕೊಠಡಿಯಿಂದ ಸಿದ್ದರಾಮಯ್ಯ ಹೊರ ಬರುತ್ತಿರುವಾಗ ಡಿಕೆಶಿ ತೆರಳಿದರು. ಆಗ ಡಿಕೆಶಿಯ ಬೆನ್ನುತಟ್ಟಿ ಸಿದ್ದರಾಮಯ್ಯ ವಿಶ್ ಮಾಡಿದರು. ನಿಮಗೆ ವಿಶ್ ಮಾಡಲು ಬಂದಿದ್ದು ಎಂದು ಸಿದ್ದರಾಮಯ್ಯಗೆ ಡಿಕೆಶಿ ಗುಲಾಬಿ ಹೂ ಕೊಟ್ಟರು. ಅಯ್ಯೋ ನನಗ್ಯಾಕಯ್ಯ ವಿಶ್, ನಿನ್ನದು ಹೊಸದು ಅಲ್ಲವಾ ಎಂದು ಸಿದ್ದರಾಮಯ್ಯ ನಗುತ್ತಲೇ ಜೊತೆಯಲ್ಲಿ ಕರೆದುಕೊಂಡು ಹೋಗಿ ಮೊಗಸಾಲೆಯಲ್ಲಿ ಕುಳಿತಿದ್ದು ವಿಶೇಷವಾಗಿತ್ತು.
ಈ ನಡುವೆ ಸ್ಪೀಕರ್ ರಮೇಶ್ ಕುಮಾರ್, ಶಾಮನೂರು ಶಿವಶಂಕರಪ್ಪ ಅವರ ಕಾಲಿಗೆ ನಮಸ್ಕರಿಸಿ ಡಿಕೆಶಿ ಆಶೀರ್ವಾದ ಪಡೆದರು. ಡಿಕೆಶಿ ಸುತ್ತುವರಿದ ಕಾಂಗ್ರೆಸ್ ಶಾಸಕರು ವಿಶ್ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಇದರ ಜೊತೆ ಸಿದ್ದರಾಮಯ್ಯ ಪಕ್ಕದಲ್ಲೇ ಹೆಚ್ಚು ಹೊತ್ತು ಡಿಕೆಶಿ ಕುಳಿತು ಮಾತನಾಡುತ್ತಿದ್ದು ಎಲ್ಲರ ಗಮನ ಸೆಳೆಯಿತು. ಒಟ್ಟಾರೆ ಕೆಪಿಸಿಸಿ ನೂತನ ಸಾರಥಿಯಾದ ಸಂಭ್ರವನ್ನು ಡಿಕೆಶಿ ವಿಧಾನಸಭೆ ಮೊಗಸಾಲೆಯಲ್ಲಿ ಆಚರಿಸಿದ್ದು ವಿಶೇಷವಾಗಿತ್ತು.
ಬೆಂಗಳೂರು: ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರು, ಕೆಪಿಸಿಸಿ ಅಧ್ಯಕ್ಷರಾಗಿದ್ದು ಬಿಜೆಪಿ ಪಕ್ಷಕ್ಕೆ ಬಹಳ ಸುಲಭವಾಯಿತು ಎಂದು ಆರೋಗ್ಯ ಸಚಿವ ಶ್ರೀರಾಮುಲು ಅವರು ಹೇಳಿದ್ದಾರೆ.
ವಿಧಾನಸೌಧದಲ್ಲಿ ಕೊರೊನಾ ವೈರಸ್ ಬಗ್ಗೆ ಶ್ರೀರಾಮುಲು ಮಾಹಿತಿ ನೀಡಲು ಸುದ್ದಿಗೋಷ್ಠಿ ಕರೆದಿದ್ದರು. ಈ ವೇಳೆ ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾದ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ಆರಂಭದಲ್ಲಿ ಶುಭಕೋರಿ ಶಿವಕುಮಾರ್ ಅವರು ಅಧ್ಯಕ್ಷರಾಗಿದ್ದು, ಬಿಜೆಪಿ ಬಹಳ ಸುಲಭವಾಯಿತು. ಆದು ಹೇಗೆ ಎಂಬುದನ್ನು ನಾನು ಮುಂದೆ ಹೇಳುತ್ತೇನೆ ಎಂದು ತಿಳಿಸಿದರು.
ಶಿವಕುಮಾರ್ ಅವರು ಪಕ್ಷದ ಸಿದ್ಧಾಂತಗಳೇ ಬೇರೆ ನಮ್ಮ ಪಕ್ಷದ ಸಿದ್ಧಾಂತಗಳೇ ಬೇರೆ. ನನ್ನ ವೈಯಕ್ತಿಕವಾಗಿ ಅವರು ಪ್ರಾದೇಶಿಕ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗಿದಕ್ಕೆ ಶುಭಾಶಯ ಕೋರುತ್ತೇನೆ. ಡಿಕೆಶಿ ಅವರು ಅವರದ್ದೇ ಅದ ಹೋರಾಟ ಮಾಡಿಕೊಂಡು ಇಲ್ಲಿಯವರೆಗೆ ಮುಟ್ಟಿದ್ದಾರೆ. ನಾವು ಕೂಡ ಹೋರಾಟ ಮಾಡಿಕೊಂಡು ಇಲ್ಲಿಯ ತನಕ ಬಂದಿದ್ದೇವೆ. ಈ ರಾಜಕೀಯ ಚದುರಂಗದಲ್ಲಿ ಯಾರು ಯಶಸ್ವಿಯಾಗುತ್ತಾರೋ ಅವರು ನಾಯಕರು ಆಗುತ್ತಾರೆ. ಹಾಗೆಯೇ ಡಿಕೆಶಿ ಅವರಿಗೆ ಪಕ್ಷ ಗುರುತಿಸಿ ಅಧ್ಯಕ್ಷ ಸ್ಥಾನ ನೀಡಿದೆ ಎಂದರು.
ನಮ್ಮ ಪಕ್ಷದಲ್ಲಿ ಬಹಳ ಶಕ್ತಿವಂತ ನಾಯಕರು ಇದ್ದೇವೆ. ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷ ಮುಳುಗಿ ಹೋಗುತ್ತಿದೆ. ಇವತ್ತು ದೇಶದಲ್ಲಿ ಆಗುತ್ತಿರುವ ಬೆಳವಣಿಗೆಯನ್ನು ನೀವು ನೋಡುತ್ತಿದ್ದೀರಿ. ನರೇಂದ್ರ ಮೋದಿ ಅವರ ಸಾರಥ್ಯದಲ್ಲಿ ನಮ್ಮ ಪಕ್ಷ ಬಹಳ ಬಲಿಷ್ಠವಾಗಿ ಬೆಳೆಯುತ್ತದೆ. ಮುಳುಗುತ್ತಿರುವ ಕಾಂಗ್ರೆಸ್ ಪಾರ್ಟಿಗೆ ಯಾರೇ ಅಧ್ಯಕ್ಷರಾದರು ಅದು ಬಿಜೆಪಿಗೆ ಲಾಭವಾಗುತ್ತದೆ ಎಂದು ಹೇಳಿದರು.
ಬೆಂಗಳೂರು: ಕೊನೆಗೂ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಪಟ್ಟವನ್ನು ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸಾಲು ಸಾಲು ಅಡೆತಡೆಗಳ ನಡುವೆಯೂ ಡಿ.ಕೆ.ಶಿವಕುಮಾರ್ ಕೆಪಿಸಿಸಿಯ ಚುಕ್ಕಾಣಿ ಹಿಡಿದಿದ್ದಾರೆ. ಸಾಕಷ್ಟು ಅಡೆತಡೆಗಳಿದ್ದರೂ ಡಿ.ಕೆ.ಶಿವಕುಮಾರ್ ಕೆಲವು ಪ್ರಮುಖ ಅಂಶಗಳಿಂದಲೇ ಅಧ್ಯಕ್ಷ ಸ್ಥಾನಕ್ಕೇರಿರುವುದು ಎಂಬ ಲೆಕ್ಕಾಚಾರಗಳು ಕಾಂಗ್ರೆಸ್ ಪಡಸಾಲೆಯಲ್ಲಿ ಆರಂಭಗೊಂಡಿವೆ.
ನೇಮಕಕ್ಕೆ ಕಾರಣವಾದ ಅಂಶಗಳು: ಡಿ.ಕೆ.ಶಿವಕುಮಾರ್ ಮೊದಲಿನಿಂದಲೂ ಟ್ರಬಲ್ ಶೂಟರ್ ಇಮೇಜ್ ಹೊಂದಿದ್ದಾರೆ. ಪಕ್ಷವನ್ನು ಸೋಲಿನ ಕಷ್ಟಗಳಿಂದ ಪಾರು ಮಾಡುವ ಶಕ್ತಿ ಡಿ.ಕೆ.ಶಿವಕುಮಾರ್ ಅವರಲ್ಲಿದೆ ಎಂಬುವುದು ಹೈಕಮಾಂಡ್ ನಂಬಿಕೆ.
ಗುಜರಾತ್ ರಾಜ್ಯಸಭಾ ಚುನಾವಣೆಯ ಸಂದರ್ಭದಲ್ಲಿ ಸೋನಿಯಾ ಆಪ್ತ ಅಹಮದ್ ಪಟೇಲ್ ಅವರನ್ನು ಜಯಗಳಿಸಲು ಶಾಸಕರನ್ನು ರೆಸಾರ್ಟಿನಲ್ಲಿ ಇಟ್ಟ ಜವಾಬ್ದಾರಿಯಿಂದಲೇ ಡಿ.ಕೆ.ಶಿವಕುಮಾರ್ ಐಟಿ, ಇಡಿಯ ಸಂಕಷ್ಟಕ್ಕೆ ಒಳಗಾಗಬೇಕಾಯ್ತು. ಹಾಗಾಗಿ ಋಣ ಸಂದಾಯಕ್ಕಾಗಿ ಡಿ.ಕೆ. ಶಿವಕುಮಾರ್ ನೇಮಕವಾಗಿರುವ ಸಾಧ್ಯತೆಗಳಿವೆ.
ಈ ಹಿಂದೆ ಪಕ್ಷ ಸಂಕಷ್ಟಕ್ಕೆ ಸಿಲುಕಿದಾಗಲೆಲ್ಲಾ ಪಕ್ಷದ ನೆರವಿಗೆ ಡಿಕೆ ಶಿವಕುಮಾರ್ ನಿಂತಿದ್ದು ಸಹ ಹೈ ಕಮಾಂಡ್ ಮೆಚ್ಚುಗೆಗೆ ಪಾತ್ರವಾಗಿತ್ತು. ಕರ್ನಾಟಕ ಶಾಸಕರು ರಾಜೀನಾಮೆ ನೀಡಿ ಮುಂಬೈಗೆ ತೆರಳಿದ್ದಾಗಲೂ ಡಿಕೆಶೀ ಹೋಟೆಲ್ ಮುಂದೆ ಪ್ರತಿಭಟಿಸಿದ್ದು ಹೈಕಮಾಂಡ್ ಮೆಚ್ಚುಗೆಗೆ ಪಾತ್ರವಾಗಿತ್ತು.
ನಾಯಕತ್ವದ ಕೊರತೆ ಎದುರಿಸುತ್ತಿರುವ ಕರ್ನಾಟಕ ಕಾಂಗ್ರೆಸ್ ನಲ್ಲಿ ಸದ್ಯಕ್ಕೆ ಡಿಕೆ ಶಿವಕುಮಾರ್ ಅನಿವಾರ್ಯ ಅನ್ನೋ ಕಾರ್ಯಕರ್ತರ ಹಾಗೂ ಹಿರಿಯ ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಈ ಎಲ್ಲ ಅಂಶಗಳಿಂದಲೇ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಪಟ್ಟ ದೊರಕಿದೆ ಎಂಬ ಮಾತುಗಳು ಕೇಳಿ ಬಂದಿವೆ.
ಮುಂದಿವೆ ಸವಾಲುಗಳು: ಕೆಪಿಸಿಸಿ ಸ್ಥಾನಗಳಿಗಾಗಿ ರಾಜ್ಯ ಕಾಂಗ್ರೆಸ್‍ನಲ್ಲಿ ಮೂಲ ಮತ್ತು ವಲಸಿಗ ಎಂಬ ಎರಡು ಬಣಗಳು ಕಾಣಿಸಿಕೊಂಡಿದ್ದವು. ಈಗ ಅಧ್ಯಕ್ಷರಾಗಿ ನೇಮಕಗೊಂಡಿರುವ ಡಿ.ಕೆ.ಶಿವಕುಮಾರ್ ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗಬೇಕಿದೆ. ಇದರ ಜೊತೆಗೆ ತಮ್ಮ ವಿರುದ್ಧ ಇರುವ ಕಾನೂನು ತೊಡುಕಗಳನ್ನು ನಿವಾರಿಸಿಕೊಳ್ಳಬೇಕಿದೆ. ಈಗಿನಿಂದಲೇ ಪಕ್ಷವನ್ನು ಭದ್ರವಾಗಿ ಸಂಘಟಿಸಿ ಮುಂಬರುವ ಬಿಬಿಎಂಪಿ, ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಅಭ್ಯರ್ಥಿಗಳನ್ನು ಗೆಲ್ಲುವಂತೆ ಮಾಡಬೇಕು.
ಪಕ್ಷದಲ್ಲಿಯ ರಾಜಕಾರಣವನ್ನು ಬದಿಗಿಟ್ಟು, ಬಿಜೆಪಿ ವಿರುದ್ಧ ಹೋರಾಟ ಮಾಡಬೇಕಾದದ್ದು ಕಾಂಗ್ರೆಸ್‍ಗೆ ಅನಿವಾರ್ಯವಾಗಿದೆ. ಕೆಪಿಸಿಸಿ ಪದಾಧಿಕಾರಿಗಳ ನೇಮಕ, ಜಾತಿ, ಪ್ರಾಂತ್ಯ, ಹಿರಿತನದ ಆಧಾರದ ಮೇಲೆ ಪದಾಧಿಕಾರಿಗಳ ಹಂಚಿಕೆ ಮಾಡಬೇಕು. ಜೊತೆಗೆ ಸಿದ್ದರಾಮಯ್ಯ, ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ, ಮುನಿಯಪ್ಪ ಬಣದ ಬೆಂಬಲಿಗರಿಗೆ ಸ್ಥಾನಮಾನ ನೀಡಿ ವಿಶ್ವಾಸಕ್ಕೆ ತಗೆದುಕೊಳ್ಳಬೇಕು.
ಜೆಡಿಎಸ್ ಪ್ರಾಬಲ್ಯವಿರುವ ಹಳೆ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಮುಂದಾಗಬೇಕು. ಕಳೆದ ಎರಡು ವರ್ಷಗಳಲ್ಲಿದ್ದ ಜೆಡಿಎಸ್ ಜೊತೆಗಿನ ಸಾಫ್ಟ್ ಕಾರ್ನರ್ ನ್ನು ಡಿ.ಕೆ.ಶಿವಕುಮಾರ್ ಎದುರಿಸಬೇಕು. ಸಮುದಾಯದ ಮತ ಗಳಿಕೆ ಆಗಬೇಕಾದ್ರೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ರಾಜಕೀಯವಾಗಿ ಎದುರು ಹಾಕಿಕೊಳ್ಳಲೇಬೇಕು.
ಕೆಪಿಸಿಸಿ ಹೊಸ ಸಾರಥಿಯಾಗಿರುವ ಡಿ.ಕೆ.ಶಿವಕುಮಾರ್ ಮುಂದಿನ ಹಾದಿ ಸುಲಭದಾಗಿಲ್ಲ. ಡಿಕೆಶಿ ಜೊತೆಯಲ್ಲಿಯೇ ಮೂವರ ಕಾರ್ಯಾಧ್ಯಕ್ಷರ ನೇಮಕವಾಗಿದೆ. ಈ ಮೂವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಹೋದಲ್ಲಿ ಡಿ.ಕೆ.ಶಿವಕುಮಾರ್ ದಾರಿ ಕಷ್ಟವಾಗಲಿದೆ. ಜೊತೆಗೆ ವಿಪಕ್ಷ ನಾಯಕ, ಸಿಎಲ್ ಪಿ ನಾಯಕ ಸಿದ್ದರಾಮಯ್ಯನವರ ಬೆಂಬಲವೂ ಡಿ.ಕೆ.ಶಿವಕುಮಾರ್ ಅವರಿಗೆ ಅನಿವಾರ್ಯತೆ ಇದೆ.
ಬೆಂಗಳೂರು: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷರಾಗಿ ಹೈಕಮಾಂಡ್ ಆಯ್ಕೆ ಮಾಡಿದೆ. ಕಾಂಗ್ರೆಸ್ ಹೈಕಮಾಂಡ್‍ನಿಂದ ಅಧಿಕೃತ ಘೋಷಣೆ ಹೊರ ಬಂದಿದ್ದು, ಇಷ್ಟು ದಿನಗಳ ತೆರೆಮರೆಯ ಆಟಗಳಿಗೆ ತೆರೆ ಬಿದ್ದಿದೆ.
ಮಾಜಿ ಸಿಎಂ ಸಿದ್ದರಾಮಯ್ಯನವರೇ ಶಾಸಕಾಂಗ ಸಭೆಯ ನಾಯಕ ಮತ್ತು ವಿರೋಧ ಪಕ್ಷದ ನಾಯಕನ ಸ್ಥಾನಗಳಲ್ಲಿ ಮುಂದುವರಿಯಲಿದ್ದಾರೆ. ಉಪಚುನಾವಣೆಯ ಸೋಲಿನ ನೈತಿಕ ಹೊಣೆ ಹೊತ್ತು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿದ್ದರು. ರಾಜೀನಾಮೆ ಬಳಿಕ ತೆರವಾದ ಸ್ಥಾನಗಳಿಗಾಗಿ ಕಾಂಗ್ರೆಸ್ ನಲ್ಲಿಯೇ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು.
ಮಾಜಿ ಸಚಿವರಾದ ಹೆಚ್.ಕೆ.ಪಾಟೀಲ್, ಮಾಜಿ ಡಿಸಿಎಂ ಜಿ.ಪರಮೇಶ್ವರ್ ಸೇರಿದಂತೆ ಹಲವು ನಾಯಕರು ವಿಪಕ್ಷ ನಾಯಕನ ಸ್ಥಾಣದ ಮೇಲೆ ಕಣ್ಣಿಟ್ಟಿದ್ರು. ಇತ್ತ ಮಾಜಿ ಸಚಿವ ಎಂ.ಬಿ.ಪಾಟೀಲ್ ಮತ್ತು ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪರ ಹೆಸರು ಕೆಪಿಸಿಸಿ ಅಧ್ಯಕ್ಷರ ರೇಸ್ ನಲ್ಲಿ ಬಲವಾಗಿ ಕೇಳಿ ಬಂದಿದ್ದವು.
ಕಾರ್ಯಕಾರಿ ಅಧ್ಯಕ್ಷರನ್ನಾಗಿ ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ಸಲೀಂ ಅಹಮದ್ ಅವರನ್ನು ನೇಮಕ ಮಾಡಲಾಗಿದೆ.
INC COMMUNIQUE
Important Notification regarding appointment of PCC President and Working Presidents for Karnataka Pradesh Congress Committee. pic.twitter.com/txkxdUWtwJ
ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಅಲ್ಪ ಮತಕ್ಕೆ ಕುಸಿದ ಬೆನ್ನಲ್ಲೇ ಹೈಕಮಾಂಡ್ ಮಹತ್ವದ ನಿರ್ಧಾರ ಪ್ರಕಟಿಸಿದೆ. ಮಧ್ಯಪ್ರದೇಶ ಕಾಂಗ್ರೆಸ್ ಶಾಸಕರು ಬೆಂಗಳೂರಿಗೆ ಬಂದ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಅವರನ್ನು ಹೈಕಮಾಂಡ್ ಸಂಪರ್ಕಿಸಿ ಮನ ಒಲಿಸುವಂತೆ ಕೇಳಿಕೊಂಡಿತ್ತು. ಆದರೆ ಡಿಕೆ ಶಿವಕುಮಾರ್ ನನ್ನಿಂದ ಸಾಧ್ಯವಿಲ್ಲ ಎಂದು ನೇರವಾಗಿ ಹೇಳಿದ್ದರು ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿತ್ತು.
ನವದೆಹಲಿ: ವಿರೋಧ ಪಕ್ಷ ನಾಯಕ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ, ಕೆಪಿಸಿಸಿ ಅಧ್ಯಕ್ಷರ ನೇಮಕ ವಿಳಂಬವಾದ ಹಿನ್ನೆಲೆ ಹೈಕಮಾಂಡ್ ಮೇಲೆ ಒತ್ತಡ ಹೇರಲು ರಾಜ್ಯ ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. ದೆಹಲಿಯಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಲು ನಿರ್ಧರಿಸಿರುವ ನಾಯಕರು ಶೀಘ್ರ ನೇಮಕಕ್ಕೆ ಒತ್ತಾಯಿಸಲಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕ ಹಾಗೂ ವಿರೋಧ ಪಕ್ಷದ ಸ್ಥಾನ ಆಕಾಂಕ್ಷಿ ಹೆಚ್.ಕೆ ಪಾಟೀಲ್ ಅವರು ಎಐಸಿಸಿ ಅಧ್ಯಕ್ಷೆ ಸೋನಿಯ ಗಾಂಧಿ ಭೇಟಿಗೆ ಪ್ರಯತ್ನಿಸುತ್ತಿದ್ದಾರೆ. ದೆಹಲಿಯಲ್ಲಿ ಇರುವ ಹೆಚ್.ಕೆ ಪಾಟೀಲ್ ಸೋನಿಯಾ ಗಾಂಧಿ ಸೇರಿ ಹಲವು ವರಿಷ್ಠ ನಾಯಕರ ಭೇಟಿಗೆ ಸಮಯ ಕೇಳಿದ್ದಾರೆ.
ಬೈ ಎಲೆಕ್ಷನ್ ಬಳಿಕ ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ, ಸಿದ್ದರಾಮಯ್ಯ ವಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ ಹೈಕಮಾಂಡ್ ಇನ್ನೂ ಅಂಗಿಕರಿಸಿಲ್ಲ. ರಾಜ್ಯಕ್ಕೆ ಸಮಿತಿಯೊಂದು ಬಂದು ಹೊಸ ನಾಯಕರ ಆಯ್ಕೆಗೆ ಅಭಿಪ್ರಾಯ ಕೂಡ ಸಂಗ್ರಹಿಸಿದೆ. ಆದರೆ ಹೈಕಮಾಂಡ್ ಇದುವರೆಗೂ ಯಾವುದೇ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ. ಇದರಿಂದ ಪಕ್ಷಕ್ಕೆ ಹಾನಿಯಾಗಲಿದೆ ಎಂದು ಪಾಟೀಲ್ ಹೈಕಮಾಂಡ್ ಮನವರಿಕೆ ಮಾಡಲು ಇಚ್ಛಿಸಿದ್ದಾರೆ.
ಸಿಎಎ ಸೇರಿ ಹಲವು ಜ್ವಲಂತ ವಿಚಾರಗಳಿವೆ. ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ಕಾಂಗ್ರೆಸ್‍ನಲ್ಲಿ ನಾಯಕತ್ವದ ಪ್ರಶ್ನೆ ಹುಟ್ಟಿಕೊಳ್ಳುವುದು ಸರಿಯಲ್ಲ. ಹೈಕಮಾಂಡ್ ಶೀಘ್ರವಾಗಿ ನೇಮಕ ಮಾಡಲು ಹೆಚ್.ಕೆ ಪಾಟೀಲ್ ಒತ್ತಾಯಿಸಲಿದ್ದಾರೆ.
ಈ ಬಗ್ಗೆ ದೆಹಲಿಯಲ್ಲಿ ಮಾತನಾಡಿರುವ ಅವರು, ಇಂದು ಹೈಕಮಾಂಡ್ ನಾಯಕರನ್ನು ಭೇಟಿಯಾಗುವೆ. ಕೆಪಿಸಿಸಿ-ವಿಪಕ್ಷ, ಸಿಎಲ್‍ಪಿ ನಾಯಕನ ಸ್ಥಾನದ ತಡವಾಗಿದೆ. ವಿಳಂಬದಿಂದ ಪಕ್ಷಕ್ಕೆ ಹಾನಿಯುಂಟಾಗುತ್ತಿದೆ. ಪಕ್ಷದ ಹಿತದೃಷ್ಟಿಯಿಂದ ಬೇಗ ನಿರ್ಣಯ ಆಗಬೇಕು ಎಂದು ಮನವಿ ಮಾಡಿಕೊಳ್ಳಲಿದ್ದೇನೆ. ಈ ಬಗ್ಗೆ ಕೆ.ಸಿ. ವೇಣುಗೋಪಾಲ್ ಜೊತೆಗೆ ಚರ್ಚಿಸಲಿದ್ದೇನೆ ಎಂದರು.
ಬೀದರ್: ಶ್ರಮ ಜೀವಿ ವಸತಿ ಶಾಲೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ ವಿದ್ಯಾರ್ಥಿನಿ ಸುಪ್ರಿಯಾ ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆಗ್ರಹಿಸಿದ್ದಾರೆ.
ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ನರಸಿಂಹಪೂರ್ ತಾಂಡದಲ್ಲಿರುವ ಮೃತ ಸುಪ್ರಿಯಾ ಪೋಷಕರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದ ಈಶ್ವರ ಖಂಡ್ರೆ, ಈ ಪ್ರಕರಣವನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸುವ ಮೂಲಕ ಮೃತ ಸುಪ್ರಿಯಾ ಕುಟುಂಬಸ್ಥರಿಗೆ ನ್ಯಾಯ ಒದಗಿಸಿಕೊಡುವುದಾಗಿ ಭರವಸೆ ನೀಡಿದರು.
ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ವಸತಿ ಶಾಲೆಯ ಕೊಠಡಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಇದೊಂದು ಅಸಾಮಾನ್ಯ ಸಾವಾಗಿದ್ದು, ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿಯದೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥ ಶಾಲೆಯ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಇದೇ ವೇಳೆಯಲ್ಲಿ ಮೃತ ಸುಪ್ರಿಯಾ ತಂದೆ ಸಂಜೀವ ಕುಮಾರ್ ಅವರಿಗೆ 50 ಸಾವಿರ ರೂಪಾಯಿ ಸಹಾಯಧನ ನೀಡುವ ಮೂಲಕ ಬಡ ಕುಟುಂಬಕ್ಕೆ ಆರ್ಥಿಕವಾಗಿ ಧೈರ್ಯ ತುಂಬಿದರು.