Tag: Kozikode

  • ರೆಡಿಯಾಗಿ ಮದ್ವೆ ಮಂಟಪಕ್ಕೆ ಬರ್ತಿದ್ದ ವರನ ಮೇಲೆ ವಧುವಿನ ಕಡೆಯವ್ರಿಂದ ದಾಳಿ!

    ರೆಡಿಯಾಗಿ ಮದ್ವೆ ಮಂಟಪಕ್ಕೆ ಬರ್ತಿದ್ದ ವರನ ಮೇಲೆ ವಧುವಿನ ಕಡೆಯವ್ರಿಂದ ದಾಳಿ!

    – ಮಾರ್ಗಮಧ್ಯೆಯೇ ಕಾರಿನ ಗಾಜು ಪುಡಿಗೈದ್ರು
    – ಮಾರಣಾಂತಿಕ ಹಲ್ಲೆಯಿಂದ ವರ ಪಾರು

    ತಿರುವನಂಪುರ: ಮದುವೆ ಮಂಟಪಕ್ಕೆ ಬರುತ್ತಿದ್ದ ವರನ ಮೇಲೆ ವಧುವಿನ ಸಂಬಂಧಿಕರೇ ಹಲ್ಲೆ ಮಾಡಿರುವ ಘಟನೆ ಕೋಯಿಕ್ಕೋಡ್ ನಲ್ಲಿ ನಡೆದಿದೆ.

    ಈ ಘಟನೆ ಗುರುವಾರ ಸಂಜೆ ಕೀಜರಿಯೂರ್ ನ ಕಣ್ಣೋತ್ ನಲ್ಲಿ ನಡೆದಿದೆ. ನಾಡೆರಿ ಮಂಜಾಲಾದ್ ಮೂಲದ ಕುಞಮೊಹಮ್ಮದ್ ಪುತ್ರ ಮೊಹಮ್ಮದ್ ಸಾಲಿಹ್ (29) ಮೇಲೆ ಈ ಹಲ್ಲೆ ನಡೆದಿದೆ.

    ಕೀಝರಿಯೂರಿನ ನಿವಾಸಿ ಯುವತಿಯ ಜೊತೆ ಮೊಹಮ್ಮದ್ ಸಾಲಿಹ್ ಎರಡು ತಿಂಗಳ ಹಿಂದೆಯೇ ರಿಜಿಸ್ಟರ್ ಮದುವೆಯಾಗಿದ್ದನು. ಆ ಬಳಿಕ ಸಂಪ್ರದಾಯದಂತೆ ಮದುವೆ ಸಮಾರಂಭ ನಡೆಸಲು ಸಾಲಿಹ್ ಕುಟುಂಬ ನಿರ್ಧರಿಸಿತ್ತು. ಈ ಹಿನ್ನೆಲೆಯಲ್ಲಿ ಅದ್ಧೂರಿ ಮದುವೆಗಾಗಿ ಮಂಟಪ ಕೂಡ ಸಜ್ಜಾಗಿತ್ತು.

    ಇತ್ತ ಸಂಪ್ರದಾಯದಂತೆ ವರ ತನ್ನ ಗೆಳೆಯರ ಜೊತೆ ಕಾರಿನಲ್ಲಿ ಮಂಟಪಕ್ಕೆ ತೆರಳುತ್ತಿದ್ದನು. ಈ ವಿಚಾರ ತಿಳಿದ ವಧುವಿನ ಕುಟುಂಬಸ್ಥರು ಮಾರ್ಗಮಧ್ಯೆಯೇ ವರನನ್ನು ತಡೆದಿದ್ದಾರೆ. ವರ ಹಾಗೂ ಆತನ ಗೆಳೆಯರ ಮೇಲೂ ಹಲ್ಲೆ ಮಾಡಿದ್ದಾರೆ.

    ಮಚ್ಚಿನಿಂದ ಕಾರಿನ ಗಾಜಿನ ಕಿಟಕಿಯನ್ನು ಪುಡಿಗೈದಿದ್ದಾರೆ. ಅಲ್ಲದೆ ಸಾಲಿಹ್ ಮೇಲೆ ಮಾರಣಾಂತಿಕ ದಾಳಿ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಕಾರನ್ನು ವೇಗವಾಗಿ ಚಲಾಯಿಸಲಾಗಿದ್ದು, ಭಾರೀ ಅನಾಹುತದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಸಾಲಿಹ್ ಗೆಳೆಯರಿಬ್ಬರಿಗೆ ಗಂಭೀರ ಗಾಯಗಳಾಗಿವೆ. ಕೂಡಲೇ ಅವರನ್ನು ಸ್ಥಳೀಯ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

    ಇದಕ್ಕೂ ಮೊದಲು ಕೂಡ ಸಾಲಿಹ್ ಮೇಲೆ ವಧುವಿನ ಕಡೆಯವರು ಹಲ್ಲೆ ಮಾಡಿದ್ದರು. ತೀವ್ರ ವಿರೋಧದ ಮಧ್ಯೆಯೂ ಯುವತಿ ತಾನು ಆತನನ್ನೇ ಮದುವೆಯಾಗುವುದು ಎಂದು ಹೇಳಿ ಸಾಲಿಹ್ ಮನೆಗೆ ಓಡಿಹೋಗಿದ್ದಳು. ಈ ವಿಚಾರ ತಿಳಿದಿದ್ದ ಆಕೆಯ ಕುಟುಂಬಸ್ಥರು ನೇರವಾಗಿ ಸಾಲಿಹ್ ಮನೆಗೆ ದಾಳಿ ಮಾಡಿ ಯುವತಿಯನ್ನು ಅಲ್ಲಿಂದ ಅಪಹರಿಸಿದ್ದರು. ಆದರೆ ಯುವತಿ ಮತ್ತೆ ಸಾಲಿಹ್ ಬಳಿಯೇ ಹೋಗಿದ್ದಳು. ಹೀಗಾಗಿ ಆತನ ಕುಟುಂಬ ಸಂಪ್ರದಾಯದಂತೆ ಮಗನಿಗೆ ಯುವತಿಯನ್ನು ಮದುವೆ ಮಾಡಲು ನಿರ್ಧರಿಸಿತ್ತು.

    ಇತ್ತ ಸಂಪ್ರದಾಯದಂತೆ ಮದುವೆ ಮಾಡುತ್ತಿದ್ದಾರೆ ಎಂಬ ವಿಚಾರ ಯುವತಿಯ ಮನೆಯವರಿಗೆ ತಿಳಿಯಿತು. ಇದು ಯುವತಿಯ ಅಂಕಲ್ ಗೆ ಇಷ್ಟವಿರಲಿಲ್ಲ. ಹೀಗಾಗಿ ಮದುವೆಯನ್ನು ತಪ್ಪಿಸಲೇಬೇಕೆಂಬ ಹಠದಲ್ಲಿ ಸಾಲಿಹ್ ಮೇಲೆ ಹಲ್ಲೆ ನಡೆಸಿದ್ದಾರೆ.

    ಘಟನೆ ಸಂಬಂಧ ಕೊಯಿಲಾಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ, ಆರು ಮಂದಿಯಿಂದ ಈ ದಾಳಿ ನಡೆದಿದ್ದು, ಇಬ್ಬರನ್ನು ಬಂಧಿಸಲಾಗಿದೆ. ಉಳಿದವರು ತಲೆಮರೆಸಿಕೊಂಡಿದ್ದಾರೆ ಎಂದು ಇನ್ಸ್ ಪೆಕ್ಟರ್ ಕೆಸಿ ಸುಭಾಷ್ ಬಾಬು ತಿಳಿಸಿದ್ದಾರೆ.

  • 4 ವರ್ಷದ ಪ್ರೀತಿ, ಒಂದೂವರೆ ತಿಂಗಳು ವರನ ಮನೆಯಲ್ಲೇ ಕ್ವಾರಂಟೈನ್, ಬಳಿಕ ಮದುವೆ!

    4 ವರ್ಷದ ಪ್ರೀತಿ, ಒಂದೂವರೆ ತಿಂಗಳು ವರನ ಮನೆಯಲ್ಲೇ ಕ್ವಾರಂಟೈನ್, ಬಳಿಕ ಮದುವೆ!

    ಕೋಝಿಕ್ಕೋಡ್: ಮದುವೆ ಮಾಡಿಕೊಳ್ಳಲು ವರನ ಊರಿಗೆ ಬಂದ ವಧು ಹಾಗೂ ಆಕೆಯ ಸಂಬಂಧಿಕರು ವರನ ಮನೆಯಲ್ಲೇ ಒಂದೂವರೆ ತಿಂಗಳ ಕಾಲ ಕ್ವಾರಂಟೈನ್‍ಗೆ ಒಳಗಾಗಿ, ಕೊನೆಗೂ ಮದುವೆಯಾಗಿದ್ದಾರೆ. ಈ ವಿಚಿತ್ರ ಸನ್ನಿವೇಶಕ್ಕೆ ಕೇರಳ ಸಾಕ್ಷಿಯಾಗಿದೆ. ಕಳೆದ ಶುಕ್ರವಾರ ಈ ಮದುವೆ ಕೇರಳ ಸರ್ಕಾರದ ಕೋವಿಡ್-19 ನಿಯಮಾವಳಿಗಳ ಪ್ರಕಾರವೇ ನೆರವೇರಿದೆ.

    ಕುಂಡುಪರಂಬ್ ಉಜ್ವಲ್ ಕೃಷ್ಣ ನಿವಾಸದ ರಾಜನ್ ಪುತ್ತನ್‍ಪುರ – ಅನಿತಾ ರಾಜನ್ ಎಂಬವರ ಪುತ್ರ ಉಜ್ವಲ್ ರಾಜ್ ಹಾಗೂ ಮುಂಬೈ ನಿವಾಸಿ ಹೇತಲ್ ಮೋದಿ ವಿವಾಹ ಶುಕ್ರವಾರ ಸರಳವಾಗಿ ನಡೆಯಿತು.

    ಲವ್, ಕ್ವಾರಂಟೈನ್, ಮದುವೆ!: ಇವರಿಬ್ಬರೂ 4 ವರ್ಷದಿಂದ ಪ್ರೀತಿಸುತ್ತಿದ್ದರು. ಆಸ್ಟ್ರೇಲಿಯಾದ ಖಾಸಗಿ ಕಂಪೆನಿಯೊಂದರಲ್ಲಿ ಉಜ್ವಲ್ ಕೆಲಸ ಮಾಡುತ್ತಿದ್ದರೆ, ವಧು ಮುಂಬೈನ ಖಾಸಗಿ ಕಂಪೆನಿಯಲ್ಲಿ ಐಟಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾಳೆ. 2015-16ರಲ್ಲಿ ಲಂಡನ್‍ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಇವರಿಬ್ಬರಿಗೂ ಲವ್ ಆಗಿದೆ.

    ಈ ಹಿಂದೆಯೇ ನಿಗದಿಯಾಗಿರುವಂತೆ ಏಪ್ರಿಲ್ 5ರಂದು ಹಿಲ್ ಟಾಪ್ ಆಡಿಟೋರಿಯಂನಲ್ಲಿ ವಿವಾಹ ನಡೆಯಬೇಕಿತ್ತು. ಜೊತೆಗೆ 1 ಸಾವಿರಕ್ಕೂ ಹೆಚ್ಚು ಜನರಿಗೆ ಆಹ್ವಾನವೂ ಹೋಗಿತ್ತು. ಮದುವೆಗೆ ಇನ್ನೇನು ಒಂದು ವಾರ ಬಾಕಿ ಇರುವಾಗ ಆಸ್ಟ್ರೇಲಿಯಾದಿಂದ ಕೇರಳಕ್ಕೆ ಬರಲು ಉಜ್ವಲ್ ಪ್ಲ್ಯಾನ್ ಮಾಡಿದ್ದರು. ಹೀಗಿದ್ದಾಗಲೇ ಕೇರಳದಲ್ಲಿ ಕೊರೋನಾ ಸೋಂಕು ವ್ಯಾಪಿಸಲು ಆರಂಭವಾಗಿತ್ತು. ಹೀಗಾಗಿ ಊರಿಗೆ ಬಂದರೆ ಕ್ವಾರಂಟೈನ್‍ನಲ್ಲಿರಲೇಬೇಕು ಎನ್ನುವುದನ್ನು ಮನಗಂಡು ಮಾರ್ಚ್ 17ಕ್ಕೇ ಉಜ್ವಲ್ ಕೇರಳದಲ್ಲಿರೋ ತಮ್ಮ ಮನೆ ಸೇರಿದ್ರು. ನಿಯಮಗಳ ಪ್ರಕಾರ ಈ ಮಾಹಿತಿಯನ್ನು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ತಿಳಿಸಿ ಹೋಮ್ ಕ್ವಾರಂಟೈನ್ ಶುರುವಾಯ್ತು.

    ವಧುವಿಗೆ ವರನ ಮನೆಯಲ್ಲೇ ಕ್ವಾರಂಟೈನ್!: ಇದೇ ವೇಳೆ ಮುಂಬೈಯಿಂದ ಬರುವ ವಧು ಕೂಡಾ 14 ದಿನ ಕ್ವಾರಂಟೈನ್‍ಗೆ ಒಳಗಾಗಲೇಬೇಕು ಬೇಕು ಎಂದು ಅಧಿಕಾರಿಗಳು ಹೇಳಿದ್ರು. ಹೀಗಾಗಿ ಮದುವೆಗೆ ಹಿಂದಿನ ದಿನ ಕ್ವಾರಂಟೈನ್ ಮುಗಿಯೋ ರೀತಿಯಲ್ಲಿ ಹೇತಲ್ ಮೋದಿ ಹಾಗೂ ತಾಯಿ ಚೇತನಾ ತಮ್ಮ ಪ್ರಯಾಣ ಬದಲಾಯಿಸಿದರು. ಅದರಂತೆ ಮಾರ್ಚ್ 23ರಂದು ಹೇತಲ್ ಮೋದಿ ಹಾಗೂ ಆಕೆಯ ತಾಯಿ ಚೇತನಾ ಮೋದಿ ಕೋಝಿಕ್ಕೋಡ್‍ಗೆ ತಲುಪಿದರು. ಇವರು ಕೂಡಾ ಉಜ್ವಲ್ ಮನೆಯಲ್ಲಿಯೇ ಕ್ವಾರಂಟೈನ್ ವಾಸಕ್ಕೊಳಗಾದರು. ಆದರೆ ಮಾರ್ಚ್ 24ರಂದು ದೇಶಾದ್ಯಂತ ಕೇಂದ್ರದ ಮೋದಿ ನೇತೃತ್ವದ ಸರ್ಕಾರದಿಂದ ಲಾಕ್‍ಡೌನ್ ಘೋಷಣೆಯಾಯಿತು.

    ಕ್ವಾರಂಟೈನ್‍ನಲ್ಲಿದ್ದ ಎಲ್ಲಾ ದಿನಗಳಲ್ಲೂ ಕೇರಳದ ಅಧಿಕಾರಿಗಳು ಫೋನ್ ಮಾಡಿ ಇವರ ಯೋಗ ಕ್ಷೇಮ ವಿಚಾರಿಸುತ್ತಿದ್ದರು. ಈ ನಡುವೆಯೇ ವಿದೇಶದಿಂದ ಬಂದವರು 14 ದಿನಗಳ ಬದಲು 28 ದಿನಗಳ ಕಡ್ಡಾಯ ಕ್ವಾರಂಟೈನ್‍ನಲ್ಲಿರಬೇಕು ಎಂದು ಸರ್ಕಾರ ಆದೇಶ ಹೊರಡಿಸಿತು. ಅದರಂತೆ 28 ದಿನಗಳ ಕ್ವಾರಂಟೈನ್ ಕೂಡಾ ಮುಗಿಯಿತು. ಈ ವೇಳೆಗಾಗಲೇ ಲಾಕ್‍ಡೌನ್ ಸಡಿಲಿಕೆ ಶುರುವಾಗಿತ್ತು. ಇನ್ನು ಮದುವೆ ವಿಳಂಬ ಮಾಡೋದು ಬೇಡ ಎಂದು ಕೇವಲ 15 ಜನರ ಸಮ್ಮುಖದಲ್ಲಿ ಉಜ್ವಲ್ – ಹೇತಲ್ ಮೋದಿ ಮದ್ವೆಯಾದರು.

    ಲಾಕ್‍ಡೌನ್ ಕಾಲದಲ್ಲಿ ಕೇರಳದ ಆಹಾರ ವಧು ಹಾಗೂ ಆಕೆಯ ಅಮ್ಮನಿಗೆ ಇಷ್ಟದ ಖಾದ್ಯಗಳಾಗಿ ಬದಲಾಯಿತು. ಹಲಸಿನ ಕಾಯಿ ಹಾಗೂ ಹಲಸಿನ ಹಣ್ಣಿನಿಂದ ಮಾಡಿದ ತಿಂಡಿಗಳು, ಮರಗೆಣಸಿನ ತಿನಿಸುಗಳು ಇವರಿಗೆ ಪ್ರಿಯವಾದವು.

    ಮದುವೆಗೂ ಮುಂಚೆ ಉತ್ತರಭಾರತ ಶೈಲಿಯಲ್ಲಿ ಅರಿಶಿಣ, ಮದರಂಗಿ ಶಾಸ್ತ್ರವೂ ನಡೆಯಿತು. ಇದರಲ್ಲಿ ಕೇವಲ 6 ಮಂದಿ ಮಾತ್ರ ಭಾಗವಹಿಸಿದ್ದರು. ಮದುವೆಗೆ ಬರಲು ಸಾಧ್ಯವಾಗದವರಿಗೆ ಝೂಮ್ ಲಿಂಕ್ ಐಡಿ ಹಾಗೂ ಪಾಸ್ ವರ್ಡ್ ನೀಡಿ ಅವರಿದ್ದಲ್ಲೇ ಮದುವೆ ನೋಡುವ ವ್ಯವಸ್ಥೆಯನ್ನೂ ಉಜ್ವಲ್ ಮಾಡಿದ್ದರು.