Tag: Kovid19

  • ಜನವರಿಯಿಂದ ಮಕ್ಕಳಿಗೂ ಸಿಗಲಿದೆ ಲಸಿಕೆ?

    ಜನವರಿಯಿಂದ ಮಕ್ಕಳಿಗೂ ಸಿಗಲಿದೆ ಲಸಿಕೆ?

    ನವದೆಹಲಿ: ಮಕ್ಕಳಿಗೆ ಮುಂದಿನ ಜನವರಿಯಿಂದ ಲಸಿಕೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಮಾಡಿದೆ.

    ರಾಷ್ಟ್ರೀಯ ತಾಂತ್ರಿಕ ಸಲಹೆ ಸಮಿತಿ ಭಾರತದಾದ್ಯಂತ ಮಕ್ಕಳಿಗೆ ಕೋವಿಡ್-19 ಲಸಿಕೆಯನ್ನು ನೀಡಲು ಸಭೆಯನ್ನು ನಡೆಸುತ್ತಿದೆ. ಈ ಸಭೆಯ ಪ್ರಕಾರ  2022ರ ಜನವರಿಯಲ್ಲಿ ಲಸಿಕೆಯನ್ನು ಮಕ್ಕಳಿಗೆ ಡಬಹುದು. ಮಾರ್ಚ್ ಒಳಗಡೆ ದೇಶದ ಎಲ್ಲ ಮಕ್ಕಳಿಗೆ ಲಸಿಕೆ ನೀಡಬೇಕೆಂಬ ಗುರಿಯನ್ನು ಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಲಿಂಗ ತಾರತಮ್ಯವಿಲ್ಲದೇ ಒಂದೇ ರೀತಿ ಸಮವಸ್ತ್ರ ನೀಡಿದ ಕೇರಳ ಶಾಲೆ

    ಭಾರತ್ ಬಯೋಟೆಕ್‍ನ ಕೋವಾಕ್ಸಿನ್ ಲಸಿಕೆಯನ್ನು 2-18 ವರ್ಷ ವಯಸ್ಸಿನ ಮಕ್ಕಳಿಗೆ ಅನುಮೋದಿಸಿದ ನಂತರವೇ ಸರ್ಕಾರವು ಮಕ್ಕಳಿಗೆ ಕೋವಿಡ್ ಲಸಿಕೆಯನ್ನು ಪ್ರಾರಂಭಿಸುವ ಸಾಧ್ಯತೆಯಿದೆ. ಕೋವಾಕ್ಸಿನ್ ಲಸಿಕೆಯನ್ನು ಈಗಾಗಲೇ 2-18 ವರ್ಷ ವಯಸ್ಸಿನ ಮಕ್ಕಳಿಗೆ ಬಳಸಲು ಶಿಫಾರಸ್ಸು ಮಾಡಲಾಗಿದೆ. ಆದರೆ ಭಾರತೀಯ ಔಷಧ ನಿಯಂತ್ರಣ ಸಂಸ್ಥೆ(ಡಿಸಿಜಿಐ) ಮಕ್ಕಳಿಗೆ ಲಸಿಕೆ ನೀಡುವ ಸಂಬಂಧ ಇನ್ನೂ ಅನುಮತಿ ನೀಡಿಲ್ಲ.

    ಅಮೆರಿಕದಲ್ಲಿ ಎಲ್ಲ ವಯಸ್ಕರು ಈಗ ಕೋವಿಡ್-19 ಲಸಿಕೆಯ ಬೂಸ್ಟರ್‌ ಡೋಸ್‍ಗಳನ್ನು ಪಡೆದುಕೊಂಡಿದ್ದಾರೆ. ಇದೇ ರೀತಿ ಇತರ ರಾಷ್ಟ್ರಗಳು ಸಹ ಅನುಸರಿಸುತ್ತಿವೆ. ಭಾರತದಲ್ಲಿ ಕೋವಿಡ್-19 ಲಸಿಕೆಗಳ ಬೂಸ್ಟರ್ ಶಾಟ್‍ಗಳನ್ನು ಮೊದಲು ಹಿರಿಯರು ಮತ್ತು ರೋಗಗಳಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ನೀಡಲು ಚಿಂತನೆ ನಡೆದಿದೆ. ಇದನ್ನೂ ಓದಿ:  ಬೇರೆಯವರ ವ್ಯಾಕ್ಸಿನೇಷನ್ ಮಾಹಿತಿಯನ್ನೂ CoWIN ವೆಬ್‍ಸೈಟ್‍ನಲ್ಲಿ ಚೆಕ್ ಮಾಡಿ

  • ಭಾರತದ ಸಂಕಷ್ಟದ ಸಮಯದಲ್ಲಿ ಸಹಾಯಹಸ್ತ ಚಾಚಲು ದೃಢ ಸಂಕಲ್ಪ ಮಾಡಿದ್ದೇವೆ: ಕಮಲಾ ಹ್ಯಾರಿಸ್

    ಭಾರತದ ಸಂಕಷ್ಟದ ಸಮಯದಲ್ಲಿ ಸಹಾಯಹಸ್ತ ಚಾಚಲು ದೃಢ ಸಂಕಲ್ಪ ಮಾಡಿದ್ದೇವೆ: ಕಮಲಾ ಹ್ಯಾರಿಸ್

    ನವದೆಹಲಿ: ಭಾರತದ ಸಂಕಷ್ಟದ ಸಮಯದಲ್ಲಿ ಸಹಾಯಹಸ್ತ ಚಾಚಲು ದೃಢ ಸಂಕಲ್ಪ ಮಾಡಿದ್ದೇವೆ ಎಂದು ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹೇಳಿದ್ದಾರೆ. ಸಂಕಷ್ಟದ ಸಮಯದಲ್ಲಿ ಭಾರತದೊಂದಿಗೆ ನಾವಿದ್ದೇವೆ ಎಂದು ಸುದೀರ್ಘವಾದ ಪತ್ರವನ್ನ ಕಮಲಾ ಹ್ಯಾರಿಸ್ ಬರೆದಿದ್ದಾರೆ.

    ಹಲವು ವರ್ಷಗಳಿಂದ, ಇಂಡಿಯಾಸ್ಪೊರಾ ಮತ್ತು ಅಮೆರಿಕನ್ ಇಂಡಿಯಾ ಫೌಂಡೇಶನ್‍ನಂತಹ ಡಯಾಸ್ಪೋರಾ (ಭಾರತೀಯ ಸಮುದಾಯ) ಗುಂಪುಗಳು ಅಮೆರಿಕ ಮತ್ತು ಭಾರತದ ನಡುವೆ ಸೇತುವೆಗಳಾಗಿವೆ. ಅಲ್ಲದೆ, ಕಳೆದ ವರ್ಷ ನೀವು ಕೋವಿಡ್-19 ಪರಿಹಾರ ಕಾರ್ಯಗಳಿಗೆ ಮಹತ್ವದ ಕೊಡುಗೆಗಳನ್ನು ನೀಡಿದ್ದೀರಿ. ನಿಮ್ಮೆಲ್ಲಾ ಕೆಲಸಕ್ಕೆ ಧನ್ಯವಾದಗಳು.

    ನಿಮ್ಮಲ್ಲಿ ಅನೇಕರಿಗೆ ತಿಳಿದಿರುವಂತೆ, ನನ್ನ ಕುಟುಂಬದ ಹಿಂದಿನ ತಲೆಮಾರುಗಳು ಭಾರತದಿಂದ ಬಂದಿವೆ. ನನ್ನ ತಾಯಿ ಭಾರತದಲ್ಲಿ ಹುಟ್ಟಿ ಬೆಳೆದವರು. ಇಂದಿಗೂ ನನ್ನ ಕುಟುಂಬದ ಅನೇಕ ಸದಸ್ಯರು ಭಾರತದಲ್ಲಿ ವಾಸಿಸುತ್ತಿದ್ದಾರೆ. ಭಾರತದ ಕ್ಷೇಮವು ಅಮೆರಿಕಕ್ಕೆ ಅತ್ಯಂತ ಮುಖ್ಯವಾದ ವಿಷಯ.

    ಭಾರತದಲ್ಲಿ ಕೋವಿಡ್-19 ಸೋಂಕುಗಳು ಮತ್ತು ಸಾವುಗಳ ಸಂಖ್ಯೆಯ ಹೆಚ್ಚಳವು ಅತ್ಯಂತ ದಾರುಣವಾದದ್ದು. ನಿಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ನನ್ನ ಮನದಾಳದ ಸಂತಾಪಗಳು. ಭಾರತದ ಪರಿಸ್ಥಿತಿಯ ಭೀಕರ ಸ್ವರೂಪ ಸ್ಪಷ್ಟವಾದ ತಕ್ಷಣ ನಮ್ಮ ಆಡಳಿತವು ಕ್ಷಿಪ್ರ ಕ್ರಮಗಳನ್ನು ತೆಗೆದುಕೊಂಡಿದೆ.

    ಏಪ್ರಿಲ್ 26, ಸೋಮವಾರ ನಮ್ಮ ಅಧ್ಯಕ್ಷರಾದ ಜೋ ಬೈಡೆನ್ ಅವರು ಪ್ರಧಾನಿಯವರೊಂದಿಗೆ ಮಾತನಾಡಿ ಬೆಂಬಲ ವ್ಯಕ್ತಪಡಿಸಿದರು. ಏಪ್ರಿಲ್ 30 ಶುಕ್ರವಾರದ ಹೊತ್ತಿಗೆ, ಅಮೆರಿಕದ ಸೇನೆ ಸದಸ್ಯರು ಮತ್ತು ನಾಗರಿಕರು ಆಗಲೇ ಪರಿಹಾರದ ಸಾಮಗ್ರಿಗಳ ವಿತರಣೆ ಕಾರ್ಯದಲ್ಲಿ ನಿರತರಾಗಿದ್ದರು.

    ಈಗಾಗಲೇ ನಾವು ಮರುಪೂರಣ ಮಾಡಬಹುದಾದ ಆಮ್ಲಜನಕ ಸಿಲಿಂಡರ್‍ಗಳನ್ನು ಭಾರತಕ್ಕೆ ತಲುಪಿಸಿದ್ದೇವೆ. ಅಂತೆಯೇ ಆಮ್ಲಜನಕ ಸಾಂದ್ರಕಗಳನ್ನು ಕೂಡ ಕಳುಹಿಸಿಕೊಟ್ಟಿದ್ದೇವೆ, ಇನ್ನೂ ಹೆಚ್ಚಿನ ಸಹಾಯ ಬರಲಿದೆ. ಇದರ ಜೊತೆಗೆ ಎನ್95 ಮುಖಗವಸುಗಳನ್ನು ಕೂಡ ರವಾನೆ ಮಾಡಿದ್ದೇವೆ, ಇನ್ನಷ್ಟು ರವಾನೆಗೆ ಸಿದ್ಧವಾಗಿವೆ. ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ನಾವು ರೆಮ್‍ಡೆಸಿವಿರ್ ಗಳನ್ನು ತಲುಪಿಸಿದ್ದೇವೆ.

    ಏತನ್ಮಧ್ಯೆ, ಕೋವಿಡ್-19 ಲಸಿಕೆಗಳ ಪೇಟೆಂಟ್‍ಗಳನ್ನು ತೆಗೆದುಹಾಕಲು ನಮ್ಮ ಸಂಪೂರ್ಣ ಬೆಂಬಲವನ್ನು ಘೋಷಿಸಿದ್ದೇವೆ. ಇದರಿಂದ ಭಾರತ ಮತ್ತು ಇತರ ರಾಷ್ಟ್ರಗಳು ತಮ್ಮ ಜನರಿಗೆ ಹೆಚ್ಚು ವೇಗವಾಗಿ ಮತ್ತು ದಕ್ಷವಾಗಿ ಲಸಿಕೆ ನೀಡಲು ಸಹಾಯಕವಾಗುತ್ತದೆ. ಭಾರತ ಮತ್ತು ಅಮೆರಿಕ ವಿಶ್ವದಲ್ಲೇ ಅತಿ ಹೆಚ್ಚು ಕೋವಿಡ್-19 ಪ್ರಕರಣಗಳನ್ನು ಹೊಂದಿವೆ.

    ಈ ಸಾಂಕ್ರಾಮಿಕ ರೋಗದ ಆರಂಭದಲ್ಲಿ, ನಮ್ಮ ಆಸ್ಪತ್ರೆಗಳು ತುಂಬಿತುಳುಕುತ್ತಿದ್ದಾಗ ಭಾರತ ನಮ್ಮ ನೆರವಿಗೆ ಬಂದಿತ್ತು. ಇಂದು ಭಾರತದ ಸಂಕಷ್ಟದ ಸಮಯದಲ್ಲಿ ಸಹಾಯಹಸ್ತ ಚಾಚಲು ನಾವು ದೃಢ ಸಂಕಲ್ಪ ಮಾಡಿದ್ದೇವೆ.

    ನಾವು ಇದನ್ನು ಭಾರತದ ಸ್ನೇಹಿತರಾಗಿ, ಕ್ವಾಡ್‍ನ ಸದಸ್ಯರಾಗಿ ಮತ್ತು ಜಾಗತಿಕ ಸಮುದಾಯದ ಭಾಗವಾಗಿ ಮಾಡುತ್ತಿದ್ದೇವೆ. ನಾವು ರಾಷ್ಟ್ರಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸಿದರೆ ಈ ಕಷ್ಟದ ಸಮಯವನ್ನು ದಾಟುವುದು ನಿಶ್ಚಿತ.

  • ಏಪ್ರಿಲ್ 11 ರಿಂದ 14ರವರೆಗೆ ದೇಶದಲ್ಲಿ ಲಸಿಕೆ ಉತ್ಸವ: ಪ್ರಧಾನಿ ಮೋದಿ ಕರೆ

    ಏಪ್ರಿಲ್ 11 ರಿಂದ 14ರವರೆಗೆ ದೇಶದಲ್ಲಿ ಲಸಿಕೆ ಉತ್ಸವ: ಪ್ರಧಾನಿ ಮೋದಿ ಕರೆ

    – ಸ್ಯಾಂಪಲ್ ಸಂಗ್ರಹ ವೇಳೆಯಲ್ಲಿನ ಎಡವಟ್ಟಿಗೆ ಬೇಸರ
    – ಲಸಿಕೆಯ ವ್ಯರ್ಥವನ್ನ ತಡೆಯೋಣ

    ನವದೆಹಲಿ: ಏಪ್ರಿಲ್ 11 ರಿಂದ ಏಪ್ರಿಲ್ 14ರವರೆಗೆ ದೇಶದಾದ್ಯಂತ ಕೊರೊನಾ ಲಸಿಕೆ ಉತ್ಸವ ಆಚರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

    ರಾಜ್ಯದ ಮುಖ್ಯಮಂತ್ರಿಗಳ ಜೊತೆಗಿನ ಸಭೆ ಬಳಿಕ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಕೋವಿಡ್ ವೇಸ್ಟೇಜ್ ಸಹ ನಿಯಂತ್ರಿಸಬೇಕಿದೆ. ಇದರ ಜೊತೆ ಕೊರೊನಾ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಬೇಕಿದೆ. ಏಪ್ರಿಲ್ 11ರಂದು ಜ್ಯೋತಿಬಾಪುಲೆ ಅವರ ಜನ್ಮದಿನ. ಈ ದಿನದ ವಿಶೇಷವಾಗಿ ಏಪ್ರಿಲ್ 11 ರಿಂದ 14 ರವರೆಗೆ ಲಸಿಕೆ ಉತ್ಸವ ನಡೆಯಬೇಕು. ಈ ಸಮಯದಲ್ಲಿ ಅಗತ್ಯವಿರುವ ಜನರಿಗೆ ಲಸಿಕೆ ನೀಡುವ ಅಭಿಯಾನ ನಡೆಯಬೇಕಿದೆ. ಲಸಿಕೆ ನೀಡುವ ಕಾರ್ಯ ಚುರುಕುಗೊಳ್ಳಲಿದೆ. ಕಳೆದ ವರ್ಷವೂ ಒಂದು ಹಂತದವರೆಗೆ ಏರಿಕೆ ಕಂಡು ಇಳಿದಿದೆ. ಸದ್ಯ ಏರಿಕೆ ಪ್ರಮಾಣ ಇಳಿಕೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಟಫ್ ರೂಲ್ಸ್ ಅನಿವಾರ್ಯ: ಇನ್ಮುಂದೆ ನೈಟ್ ಕರ್ಫ್ಯೂ  ಪದದ ಬಳಕೆ ಬೇಡ. ಅದರಲ್ಲಿ ಬದಲಾಗಿ ಕೊರೊನಾ ಕರ್ಫ್ಯೂ  ಎಂದು ಹೇಳೋಣ. ಇದರಿಂದ ಕೊರೊನಾ ಜಾಗೃತಿ ಮೂಡುತ್ತದೆ. ಇಂದು ನಮ್ಮ ಬಳಿ ಕಳೆದ ವರ್ಷದ ಅನುಭವ ಇದೆ. ಹಾಗಾಗಿ ಕೊರೊನಾ ನಿಯಂತ್ರಣ ತರಲು ಸಾಧ್ಯವಿಲ್ಲ. ಮೈಕ್ರೋ ಕಂಟೈನ್‍ಮೆಂಟ್‍ಗಳಲ್ಲಿ ಟಫ್ ರೂಲ್ಸ್ ಅನಿವಾರ್ಯತೆ ಇದೆ.

    ಟೆಸ್ಟಿಂಗ್, ಟ್ರೇಸ್, ಟ್ರ್ಯಾಕಿಂಗ್: ಮೊದಲ ಅಲೆಯಲ್ಲಿ ಸಣ್ಣ ಪ್ರಮಾಣದ ಲಕ್ಷಣಗಳು ಕಾಣಿಸಿಕೊಂಡರೂ ವೈದ್ಯರ ಬಳಿ ಬರುತ್ತಿದ್ದರು. ಆದ್ರೆ ಈಗ ನಿರ್ಲಕ್ಷ್ಯ ಮಾಡಲಾಗುತ್ತಿದೆ. ಇದರ ಪರಿಣಾಮ ಕುಟುಂಬದ ಎಲ್ಲರಿಗೂ ಸೋಂಕು ತಗಲುಗ್ತಿದೆ. ಲಸಿಕೆ ಬಗ್ಗೆ ಮಾತನಾಡೋದಕ್ಕಿಂತ ಕೊರೊನಾ ಟೆಸ್ಟ್ ಹೆಚ್ಚಳ ಮಾಡುವ ಗುರಿ ಎಲ್ಲ ರಾಜ್ಯಗಳ ಮುಂದಿದೆ. ಕೊರೊನಾ ಪರೀಕ್ಷೆಯನ್ನ ಹಗುರುವಾಗಿ ಕಾಣಬೇಡಿ. ಟೆಸ್ಟಿಂಗ್, ಟ್ರೇಸ್, ಟ್ರ್ಯಾಕಿಂಗ್ ಕೊರೊನಾ ನಿಯಂತ್ರಣಕ್ಕೆ ನಮ್ಮ ಬಳಿಯಲ್ಲಿರುವ ಅಸ್ತ್ರ.

    ಕೊರೊನಾ ಪರೀಕ್ಷೆ ಹೆಚ್ಚಳವಾದ್ರೆ ಸಹಜವಾಗಿ ಏರಿಕೆ ಆಗುತ್ತೆ. ಸಂಖ್ಯೆ ಹೆಚ್ಚಳವಾದ್ರೆ ಮುಂದೆ ಏನು ಮಾಡಬೇಕು ಅನ್ನೋದು ನಮಗೆ ಗೊತ್ತಾಗಲಿದೆ. ಆ ರಾಜ್ಯ ಹೆಚ್ಚು, ಕಡಿಮೆ ಅನ್ನೋದರ ಬಗ್ಗೆ ಮಾತಾಡೋದು ಬೇಡ. ಮುಂದಿನ ನಾಲ್ಕು ವಾರ ದೇಶಕ್ಕೆ ಕಠಿಣವಾಗಿದೆ.

    ಕ್ರಮಬದ್ಧ ಕೊರೊನಾ ಪರೀಕ್ಷೆ: ಇನ್ನೂ ನಿಯಮಬದ್ಧವಾಗಿ ಟೆಸ್ಟಿಂಗ್ ನಡೆಯುತ್ತಿಲ್ಲ ಅನ್ನೋದು ಗಮನಕ್ಕೆ ಬಂದಿದೆ. ಕೊರೊನಾ ಟೆಸ್ಟ್ ಮಾಡೋವಾಗ ಸೂಜಿ ಗಂಟಲಿನ ಆಳದವರೆಗೂ ಹೋಗಬೇಕು. ಅಂದಾಗ ಮಾತ್ರ ನಿಖರ ಫಲಿತಾಂಶ ಬರಲಿದೆ. ಕಂಟೈನ್‍ಮೆಂಟ್ ಝೋನ್ ಗೆ ಒಳಪಡುವ ಎಲ್ಲರನ್ನು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸಬೇಕು. ಅಂದಾಗ ಮಾತ್ರ ಕೊರೊನಾ ನಿಯಂತ್ರಣಕ್ಕೆ ಬರಲಿದೆ.

    ಪ್ರತಿ ವರದಿಯ ವಿಶ್ಲೇಷಣೆ ಅಗತ್ಯ: ಕೊರೊನಾ ಸೋಂಕಿತನಿಂದ ಸಾವನ್ನಪ್ಪಿದ ರೋಗಿಯ ಇಂಚಿಂಚೂ ಮಾಹಿತಿ ಕಲೆ ಹಾಕಬೇಕು. ಮೃತ ಸೋಂಕಿತನ ಹೆಲ್ತ್ ಹಿಸ್ಟರಿ ಪತ್ತೆ ಮಾಡಿದ್ರೆ ಮುಂದಾಗುವ ಸಾವುಗಳಿಗೆ ಬ್ರೇಕ್ ಆಗಬಹುದು. ಪ್ರತಿ ಸೋಂಕಿತನ ವರದಿಯ ವಿಶ್ಲೇಷಣೆ ಅಗತ್ಯ. ಕೋವಿಡ್ ಸೋಂಕಿನ ಖಚಿತ ಪ್ರಮಾಣ ಶೇ.5ಕ್ಕಿಂತ ಕಡಿಮೆ ತರಬೇಕು. ಕೊರೊನಾ ಲಸಿಕೆ ವೇಗವನ್ನ ಹೆಚ್ಚಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಲಸಿಕೆ ಪಡೆದ ನಂತ್ರವೂ ಮಾಸ್ಕ್ ಕಡ್ಡಾಯ.

    ಕಳೆದ ವರ್ಷ ಲಸಿಕೆ ಇಲ್ಲದಿದ್ದರೂ ಕೊರೊನಾ ಗೆದ್ದಿದ್ದೇವೆ. ಈ ವರ್ಷ ಲಸಿಕೆಗಾಗಿ ದಾರಿ ನೋಡದೇ ಟೆಸ್ಟಿಂಗ್ ಹೆಚ್ಚಳವಾಗಬೇಕಿದೆ. ಕೊರೊನಾ ಲಸಿಕೆ ಹಂತವಾಗಿ ನಡೆಯಲಿದ್ದು, ಎಲ್ಲರಿಗೂ ಲಭ್ಯವಾಗಲಿದೆ. ಕೊರೊನಾ ವಿಷಯದಲ್ಲಿಯೂ ಕೆಲವರು ರಾಜಕೀಯ ಹೇಳಿಕೆ ನೀಡುತ್ತಿದ್ದಾರೆ. ಆದ್ರೆ ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ. ಔಷಧಿ ಪಡೆದು ಮಳೆಯಲ್ಲಿ ತಿರುಗಾಡಿದ್ರೆ ಜ್ವರ ಬಂದೇ ಬರುತ್ತೆ. ಮಳೆ ಬಂದಾಗ ಛತ್ರಿ ಇಟ್ಟುಕೊಳ್ಳಬೇಕು. ಹಾಗೆಯೇ ಲಸಿಕೆ ಪಡೆದ ನಂತ್ರವೂ ನಿಯಮಗಳ ಪಾಲಿಸೋದು ಅನಿವಾರ್ಯ ಎಂದು ಹೇಳಿದರು.

  • ಜನರ ಮಧ್ಯೆಯೇ ಕೊರೊನಾದಿಂದ ಮೃತಪಟ್ಟ ವೃದ್ಧೆಯ ಶವ ಸಾಗಾಟ!

    ಜನರ ಮಧ್ಯೆಯೇ ಕೊರೊನಾದಿಂದ ಮೃತಪಟ್ಟ ವೃದ್ಧೆಯ ಶವ ಸಾಗಾಟ!

    – ಮುಂಜಾಗ್ರತಾ ಕ್ರಮ ಕೈಗೊಳ್ಳದ ಸಿಬ್ಬಂದಿ, ಬಿಬಿಎಂಪಿ

    ಬೆಂಗಳೂರು: ಮಹಾಮಾರಿ ಕೊರೊನಾದಿಂದ ಪ್ರತಿದಿನ ಒಂದೊಂದು ಅಮಾನವೀಯ ಘಟನೆ ಬೆಳಕಿಗೆ ಬರುತ್ತಿವೆ. ಇದೀಗ ಕೊರೊನಾ ಸೋಂಕಿತ ವೃದ್ಧೆಯ ಶವವನ್ನು ಪ್ಲಾಸ್ಟಿಕ್ ‌ ಕವರ್‌ನಲ್ಲಿ ಸುತ್ತಿ ಜನರ ಮಧ್ಯೆಯೇ ಸಾಗಾಟ ಮಾಡಿರುವ ಅಮಾನವೀಯ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ರಾಮಕೃಷ್ಣ ಪಾಳ್ಯ ಲೇಔಟ್‍ನ ಮಾಲಗಾಳ ಮುಖ್ಯರಸ್ತೆಯಲ್ಲಿ ಈ ಘಟನೆ ನಡೆದಿದೆ. 60 ವರ್ಷದ ವೃದ್ಧೆ ಕೊರೊನಾ ಸೋಂಕು ಬಂದಿದ್ದು, ಆರೋಗ್ಯದಲ್ಲಿ ಏರುಪೇರು ಕಂಡುಬಂದಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಎನ್ನುವಷ್ಟರಲ್ಲಿ ವೃದ್ಧೆ ಮನೆಯಲ್ಲಿಯೇ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಆಸ್ಪತ್ರೆಯಲ್ಲಿ ಬೆಡ್ ಸಿಗದೇ ಮನೆಯಲ್ಲೇ ನರಳಿ ನರಳಿ ಪ್ರಾಣಬಿಟ್ಟ ಸೋಂಕಿತ!

    ಈ ಹಿನ್ನೆಲೆಯಲ್ಲಿ ಮೃತ ಸೋಂಕಿತ ವೃದ್ಧೆಯ ಶವವನ್ನು ಆರೋಗ್ಯ ಇಲಾಖೆಯ ಸಿಬ್ಬಂದಿ ಬೇರೆಡೆಗೆ ಸಾಗಿಸಿದ್ದಾರೆ. ಆದರೆ ಆರೋಗ್ಯ ಸಿಬ್ಬಂದಿ ವೃದ್ಧೆಯ ಶವವನ್ನು ಪ್ಲಾಸ್ಟಿಕ್ ‌ ಕವರ್‌ನಲ್ಲಿ ಸುತ್ತಿಕೊಂಡು ತೆಗೆದುಕೊಂಡು ಹೋಗಿದ್ದಾರೆ.

    ಕೊರೊನಾದಿಂದ ಮೃತಪಟ್ಟವರ ಶವವನ್ನು ಬೇರೆಡೆಗೆ ಸಾಗಿಸುವಾಗ ಆ ರಸ್ತೆಯನ್ನು ಬಂದ್ ಮಾಡಬೇಕಿತ್ತು. ಯಾಕೆಂದರೆ ಜನರು ಓಡಾಟ ಮಾಡುತ್ತಿದ್ದರೆ ಅವರಿಗೆ ಸೋಂಕು ತಗಲುವ ಸಾಧ್ಯತೆ ಇರುತ್ತದೆ. ಆದರೆ ಸಿಬ್ಬಂದಿಯಾಗಲಿ, ಬಿಬಿಎಂಪಿಯಾಗಲಿ ಯಾವುದೇ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿಲ್ಲ. ಜನರ ಮಧ್ಯೆಯೇ ಸ್ಟ್ರಕ್ಚರ್ ನಲ್ಲಿ ಅಮಾನವೀಯವಾಗಿ ತೆಗೆದುಕೊಂಡು ಹೋಗಿದ್ದಾರೆ. ಇದನ್ನೂ ಸ್ಥಳೀಯರೊಬ್ಬರು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ.

    ಆರೋಗ್ಯ ಸಿಬ್ಬಂದಿ ಸೋಂಕಿತೆ ವೃದ್ಧೆ ಶವವನ್ನು ಎಲ್ಲಿಗೆ ತೆಗೆದುಕೊಂಡು ಹೋದರು, ಎಲ್ಲಿ ಅಂತ್ಯಸಂಸ್ಕಾರ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಆದರೆ ಬಿಬಿಎಂಪಿ ಕಣ್ಣು ಮುಚ್ಚಿ ಕುಳಿತಿದಿಯಾ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

  • ಮಹಾನಗರಗಳತ್ತ ಮತ್ತೆ ಮುಖ ಮಾಡಿದ ರಾಯಚೂರು ಕೂಲಿ ಕಾರ್ಮಿಕರು

    ಮಹಾನಗರಗಳತ್ತ ಮತ್ತೆ ಮುಖ ಮಾಡಿದ ರಾಯಚೂರು ಕೂಲಿ ಕಾರ್ಮಿಕರು

    ರಾಯಚೂರು: ಕಠಿಣ ಲಾಕ್‍ಡೌನ್ ಸಮಯದಲ್ಲಿ ಗುಳೆ ಹೋದ ಜನ ಮಹಾನಗರಗಳಿಂದ ತಮ್ಮ ಊರುಗಳಿಗೆ ಬರಲು ಇನ್ನಿಲ್ಲದಂತೆ ಪರದಾಡಿದರು. ಆದ್ರೆ ಕೊರೊನಾ ಅಟ್ಟಹಾಸ ಇನ್ನೂ ಕಡಿಮೆಯೇ ಆಗಿಲ್ಲ ಆಗಲೇ ರಾಯಚೂರಿನಿಂದ ಕೂಲಿಕಾರರು ಮತ್ತೆ ಬೆಂಗಳೂರಿಗೆ ಗುಳೆ ಹೊರಟಿದ್ದಾರೆ. ಜಿಲ್ಲೆಯಿಂದ ಪ್ರತಿನಿಂದ 10ಕ್ಕೂ ಹೆಚ್ಚು ಬಸ್ ಗಳಲ್ಲಿ 300ಕ್ಕೂ ಹೆಚ್ಚು ಜನ ಗುಳೆ ಹೋಗುತ್ತಿದ್ದಾರೆ.

    ಬೆಂಗಳೂರಿನಲ್ಲಿ ಕಟ್ಟಡ ನಿರ್ಮಾಣ ಕೆಲಸಗಳು ಆರಂಭವಾಗಿದ್ದು, ಪುನಃ ಕೆಲಸಕ್ಕೆ ಬರಲು ಗುತ್ತಿಗೆದಾರರು, ಮೇಸ್ತ್ರಿಗಳು ಕರೆಯುತ್ತಿದ್ದಾರೆ. ಸರ್ಕಾರದ ಉದ್ಯೋಗ ಖಾತ್ರಿಯಲ್ಲಿ ಭರವಸೆ ಕಳೆದುಕೊಂಡ ಜನ ಪುನಃ ಗುಳೆ ಹೋಗುತ್ತಿದ್ದಾರೆ. ಈಗಾಗಲೇ ರಾಯಚೂರಿನ ದೇವದುರ್ಗ, ಲಿಂಗಸುಗೂರು ,ಮಾನ್ವಿ ರಾಯಚೂರು ತಾಲೂಕುಗಳಿಂದ ಸಾವಿರಾರು ಜನ ಬೆಂಗಳೂರಿಗೆ ವಾಪಸ್ ಹೋಗಿದ್ದಾರೆ.

    ಬೆಂಗಳೂರಿನಲ್ಲಿ ಪ್ರತಿದಿನ 600 ರೂಪಾಯಿಂದ 800 ರೂಪಾಯಿವರೆಗೆ ಕೂಲಿ ಸಿಗುತ್ತಿರುವುದರಿಂದ ಗ್ರಾಮೀಣ ಭಾಗದಲ್ಲಿ ಉಳಿಯಲು ಜನ ಬಯಸುತ್ತಿಲ್ಲ. ಜಿಲ್ಲೆಯಲ್ಲಿ 400 ರೂಪಾಯಿವರೆಗೆ ಕೂಲಿ ಸಿಗುತ್ತದೆ. ಉದ್ಯೋಗ ಖಾತ್ರಿಯಲ್ಲಿ 250 ರೂ .ಸಿಗುತ್ತೆ ,ಅದೂ ಕೆಲಸ ಮಾಡಿ ಹದಿನೈದು ದಿನಗಳಾದ ಮೇಲೆ. ಹೀಗಾಗಿ ಜನ ಇಲ್ಲೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ, ಅಲ್ಲೂ ಸೋಂಕಿತರಿದ್ದಾರೆ. ಎಲ್ಲಿದ್ದರೂ ಒಂದೇ ಅಂತ ದುಡಿಯಲು ಗಂಟು ಮೂಟೆ ಸಹಿತ ಬೆಂಗಳೂರಿಗೆ ನಿತ್ಯ ನೂರಾರು ಜನ ಪ್ರಯಾಣ ಬೆಳೆಸಿದ್ದಾರೆ.

  • ಹಾವೇರಿಗೆ ಬಂದಿದ್ದ ವಿಜಯಪುರದ ಕೊರೊನಾ ಸೋಂಕಿತರು

    ಹಾವೇರಿಗೆ ಬಂದಿದ್ದ ವಿಜಯಪುರದ ಕೊರೊನಾ ಸೋಂಕಿತರು

    – 21 ಜನಕ್ಕೆ ಹೋಮ್ ಕ್ವಾರಂಟೈನ್

    ಹಾವೇರಿ: ವಿಜಯಪುರ ಜಿಲ್ಲೆಯ ಕೊರೊನಾ ಸೋಂಕಿತರಿಬ್ಬರು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಆಡೂರಿಗೆ ಬಂದು ಹೋಗಿದ್ದಾರೆ ಎಂಬ ವಿಷಯ ಬಹಿರಂಗವಾಗಿದ್ದು, ಗ್ರಾಮದ 21 ಜನರನ್ನು ತಪಾಸಣೆಗೆ ಒಳಪಡಿಸಲಾಗಿದ್ದು, ಹೋಮ್ ಕ್ವಾರಂಟೈನ್‍ನಲ್ಲಿಡಲಾಗಿದೆ.

    ವಿಜಯಪುರ ಜಿಲ್ಲೆಯ ರೋಗಿ ನಂಬರ್ 306 ಮತ್ತು 308 ಟ್ರಾವೆಲ್ ಹಿಸ್ಟರಿ ಪರಿಶೀಲಿಸಲಾಗಿದ್ದು, ಈ ವೇಳೆ ಆಡೂರಿಗೆ ಭೇಟಿ ನೀಡಿರುವುದು ಬಹಿರಂಗವಾಗಿದೆ. ಏಪ್ರಿಲ್ 5 ರಂದು ಆಡೂರಿನ ತಮ್ಮ ಸಂಬಂಧಿಕರ ಮನೆಗೆ ಬಂದು ಊಟ ಮಾಡಿ ಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸೋಂಕಿತರ ಟ್ರಾವೆಲ್ ಹಿಸ್ಟರಿ ಆಧಾರದ ಮೇಲೆ 21 ಜನರನ್ನು ಜಿಲ್ಲಾಸ್ಪತ್ರೆಗೆ ಕರೆತಂದು ತಪಾಸಣೆಗೆ ಒಳಪಡಿಸಲಾಗಿದೆ.

    ಈ 21 ಜನರಲ್ಲಿ ಯಾರಲ್ಲೂ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿಲ್ಲ. ಆದರೆ ಮುಂಜಾಗ್ರತಾ ಕ್ರಮವಾಗಿ ಇವರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಅಲ್ಲದೆ ಇವರ ರಕ್ತ ಮತ್ತು ಗಂಟಲಿನ ದ್ರವದ ಮಾದರಿಯನ್ನು ಪರೀಕ್ಷಿಸಲು ಲ್ಯಾಬ್‍ಗೆ ಕಳುಹಿಸಿದೆ. ಪರೀಕ್ಷೆ ನಂತರ 21 ಜನರನ್ನು ಆರೋಗ್ಯ ಇಲಾಖೆ ಕ್ವಾರಂಟೈನ್ ಮಾಡಿದೆ. ಲ್ಯಾಬ್ ವರದಿ ಸೋಮವಾರ ಸಂಜೆ ಅಥವಾ ಮಂಗಳವಾರ ಆರೋಗ್ಯ ಇಲಾಖೆಯ ಕೈ ಸೇರಲಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜೇಂದ್ರ ದೊಡ್ಡಮನಿ ಮಾಹಿತಿ ನೀಡಿದ್ದಾರೆ.

  • ಭಾರತದಿಂದ ಹಿಂದಿರುಗಿದ ಸೌತ್ ಆಫ್ರಿಕಾ ಆಟಗಾರರಿಗೆ 14 ದಿನ ಸೆಲ್ಫ್-ಐಸೋಲೇಟ್

    ಭಾರತದಿಂದ ಹಿಂದಿರುಗಿದ ಸೌತ್ ಆಫ್ರಿಕಾ ಆಟಗಾರರಿಗೆ 14 ದಿನ ಸೆಲ್ಫ್-ಐಸೋಲೇಟ್

    ಕೇಪ್ ಟೌನ್: ಭಾರತದ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯ ಪಂದ್ಯಗಳು ಕೋವಿಡ್-19 ಭೀತಿಯಿಂದಾಗಿ ರದ್ದಾದ ಬಳಿಕ ದಕ್ಷಿಣ ಆಫ್ರಿಕಾ ಕ್ರಿಕೆಟ್ ಆಟಗಾರರು ತವರಿಗೆ ಹಿಂದಿರುಗಿದ್ದಾರೆ. ಈ ವೇಳೆ ಆಟಗಾರರಿಗೆ 14 ದಿನಗಳ ಕಾಲ ಸೆಲ್ಫ್-ಐಸೋಲೇಶನ್ (ಸ್ವಯಂ ಏಕಾಂತವಾಸಿಯಾಗುವುದು) ಆಗುವಂತೆ ಸೂಚನೆ ನೀಡಲಾಗಿದೆ.

    ವಿಶ್ವದಲ್ಲಿ ಕೋವಿಡ್-19 (ಕೊರೊನಾ) ಹರಡುವಿಕೆ ಹೆಚ್ಚಾಗುತ್ತಿರುವ ಈ ಹಿನ್ನೆಲೆಯಲ್ಲಿ ಆಟಗಾರರನ್ನು ಸೆಲ್ಫ್ ಐಸೋಲೇಶನ್‍ನಲ್ಲಿ ಇರುವಂತೆ ಸೂಚನೆ ನೀಡಲಾಗಿದೆ. 10 ದಿನಗಳ ಕಾಲ ಭಾರತದಲ್ಲಿದ್ದ ದಕ್ಷಿಣ ಆಫ್ರಿಕಾ ಆಟಗಾರರು ಕೊರೊನಾ ಸೋಂಕಿನ ಕಾರಣ ಹೆಚ್ಚಿನ ಮುನ್ನೆಚ್ಚರಿಕೆಯನ್ನು ವಹಿಸಿದ್ದರು. ಆದರೂ ಸೋಂಕಿನ ಹರಡುವಿಕೆ ಕುರಿತು ಎಚ್ಚರಿಕೆ ಕೈಗೊಳ್ಳುವ ನಿಟ್ಟಿನಲ್ಲಿ ಈ ಕ್ರಮಕೈಗೊಳ್ಳಲಾಗಿದೆ.

    ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯ ಮಳೆಯ ಕಾರಣ ಒಂದು ಎಸೆತ ಕೂಡ ಕಾಣದೆ ರದ್ದಾಗಿತ್ತು. ವಿಶ್ವದಾದ್ಯಂತ ಕೊರೋನಾ ವೈರಸ್ ಹರಡುವಿಕೆ ತೀವ್ರಗೊಂಡ ಹಿನ್ನೆಲೆಯಲ್ಲಿ ಉಳಿದ ಪಂದ್ಯಗಳು ರದ್ದುಗೊಳಿಸಲಾಗಿತ್ತು. ಪರಿಣಾಮ 10 ದಿನಗಳ ಕಾಲ ಭಾರತದಲ್ಲಿದ್ದ ಆಟಗಾರರು ದೆಹಲಿ, ಧರ್ಮಶಾಲಾ, ಲಕ್ನೋ ಹಾಗೂ ಕೋಲ್ಕತ್ತಾ ಸೇರಿದಂತೆ ದುಬೈಗಳಲ್ಲಿ ಸಂಚಾರಿಸಿದ್ದರು.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ದಕ್ಷಿಣ ಆಫ್ರಿಕಾ ತಂಡದ ಆಟಗಾರರೊಂದಿಗೆ ಇದ್ದ ವೈದ್ಯಕೀಯ ಅಧಿಕಾರಿ ಡಾ.ಶ್ವಾಯಿಬ್ ಮಂಜ್ರೋ ಅವರು, ಬೇರೆ ಬೇರೆ ಸ್ಥಳದಲ್ಲಿ ನಮ್ಮ ಪಂದ್ಯಗಳು ನಿಗಧಿಯಾಗಿದ್ದ ಕಾರಣ ಹೆಚ್ಚಿನ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಆಟಗಾರರು ಕೂಡ ಈ ಬಗ್ಗೆ ಜಾಗೃತಿ ಹೊಂದಿದ್ದರು. ಆದರೆ ಅವರು ತವರಿನಲ್ಲಿದ್ದ ತಮ್ಮ ಕುಟುಂಬ ಸದಸ್ಯರ ಕುರಿತು ಹೆಚ್ಚಿನ ಯೋಚನೆ ಹೊಂದಿದ್ದರು ಎಂದು ತಿಳಿಸಿದ್ದಾರೆ.

    ಭಾರತದಲ್ಲಿರೋ ವೇಳೆಯೇ ಆಟಗಾರರನ್ನು ಪ್ರತ್ಯೇಕವಾಗಿ ಇಟ್ಟು, ಪ್ರತ್ಯೇಕ ವಿಮಾನ ಹಾಗೂ ರೈಲ್ವೆ ಬೋಗಿಗಳಲ್ಲಿ ಪ್ರಯಾಣಿಸಿದ್ದರು. ಆದರೂ ನಾವು ತಜ್ಞರ ಸಲಹೆ ಮೇರೆಗೆ ಈ ಕ್ರಮ ಕೈಗೊಳ್ಳುತ್ತಿದ್ದೇವೆ. ಆಟಗಾರರಿಗೂ ಕೊರೊನಾ ಬಗ್ಗೆ ಸಂಪೂರ್ಣ ಜಾಗೃತಿ ಮೂಡಿಸಿದ್ದೇವೆ. ಇದರ ನಡವೆಯೂ 14 ದಿನಗಳ ಕಾಲ ಸಾರ್ವಜನಿಕರ ಸಂಪರ್ಕದಿಂದ ದೂರ ಉಳಿದು ಸೆಲ್ಫ್ ಐಸೋಲೇಶನ್‍ನಲ್ಲಿರುವಂತೆ ಸೂಚಿಸಿರುವಾಗಿ ಹೇಳಿದರು. ಇತ್ತ ಭಾರತ-ದಕ್ಷಿಣ ಆಫ್ರಿಕಾ ಸರಣಿ ಮಾತ್ರವಲ್ಲದೇ ಇಂಗ್ಲೆಂಡ್ ಸರಣಿಯೂ ರದ್ದಾಗಿದೆ. ಐಪಿಎಲ್ ಹಾಗೂ ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಗಳನ್ನು ಮುಂದೂಡಲಾಗಿದೆ.