Tag: Kotilingeshwara

  • ಕೋಟಿಲಿಂಗೇಶ್ವರ ಕ್ಷೇತ್ರದ ಧರ್ಮಾಧಿಕಾರಿ ವಿಧಿವಶ

    ಕೋಟಿಲಿಂಗೇಶ್ವರ ಕ್ಷೇತ್ರದ ಧರ್ಮಾಧಿಕಾರಿ ವಿಧಿವಶ

    ಕೋಲಾರ: ವಿಶ್ವ ವಿಖ್ಯಾತಿ ಪಡೆದ ಜಿಲ್ಲೆಯ ಕೋಟಿಶಿವಲಿಂಗ ಕ್ಷೇತ್ರದ ಧರ್ಮಾಧಿಕಾರಿ ಶ್ರೀ ಸಾಂಭ ಶಿವಮೂರ್ತಿ(74) ಸ್ವಾಮೀಜಿ ಶುಕ್ರವಾರ ಸಂಜೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ದೈವಾಧೀನರಾಗಿದ್ದಾರೆ.

    ಕಳೆದ ಕೆಲ ದಿನಗಳಿಂದ ನಿಶ್ಯಕ್ತಿಯಿಂದ ಬಳಲುತ್ತಿದ್ದ ಶ್ರೀಗಳಿಗೆ ಗುರುವಾರ ಹೃದಯಾಘಾತ ಸಂಭವಿಸಿತ್ತು. ಕೂಡಲೇ ಅವರನ್ನು ಬೆಂಗಳೂರಿನ ಮಹಾವೀರ್ ಜೈನ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಶುಕ್ರವಾರ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಕೋಲಾರ ಕೆಜಿಎಫ್ ತಾಲೂಕಿನ ಬೇತಮಂಗಲ ಹೋಬಳಿಯ ಕಮ್ಮಸಂದ್ರದಲ್ಲಿ ಇಂದು ಲಕ್ಷಾಂತರ ಭಕ್ತರ ಅಂತಿಮ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ. ಹೀಗಾಗಿ ರಾಜ್ಯ ಅಲ್ಲದೇ ಹೊರ ರಾಜ್ಯಗಳಿಂದಲೂ ಅಪಾರ ಭಕ್ತರು ಆಗಮಿಸಿ ಅಂತಿಮ ದರ್ಶನ ಪಡೆಯುತ್ತಿದ್ದಾರೆ.

    ಬೆಮೆಲ್ ಉದ್ಯೋಗ ತೊರೆದು 1979 ರಲ್ಲಿ ಆಧ್ಯಾತ್ಮದತ್ತ ಮುಖ ಮಾಡಿದ್ದ ಶ್ರೀಗಳು ಕೋಲಾರದಲ್ಲಿ ಕೋಟಿ ಶಿವಲಿಂಗಗಳ ಸ್ಥಾಪನೆಗೆ ಮುಂದಾಗಿ, ವಿಶ್ವದಲ್ಲೇ ಎತ್ತರದ 108 ಅಡಿ ಲಿಂಗ ಸ್ಥಾಪನೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಅಂದಿನಿಂದ ಗೋಪಲಾಪ್ಪನವರ ಸಾಂಭಶಿವ ಮೂರ್ತಿಗಳಾಗಿ ಪ್ರಪಂಚ ಪ್ರಸಿದ್ಧಿ ಪಡೆದು ಪ್ರತಿನಿತ್ಯ ಸಾವಿರಾರು ಭಕ್ತರು, ಪ್ರವಾಸಿಗರ ಆಕರ್ಷಣೀಯ ಆಧ್ಯಾತ್ಮ ಕ್ಷೇತ್ರವನ್ನಾಗಿ ಮಾಡಿದ್ದರು.

    ಸಾಮೀಜಿಯವರು 1947 ಆಗಸ್ಟ್ 23 ರಂದು ಜನಿಸಿದ್ದು, ಪತ್ನಿ ರುಕ್ಮಿಣಿ, ಮಗ ಶಿವ ಪ್ರಸಾದ್, ಮಗಳು ಅನುರಾಧರನ್ನ ಅಗಲಿದ್ದಾರೆ. ಕೋಟಿಶಿವಲಿಂಗ ಕ್ಷೇತ್ರದ ಮುಕ್ತಿ ಮಂದಿರದಲ್ಲಿ ಸಂಜೆ 5 ಗಂಟೆ ಸುಮಾರಿಗೆ ಅಂತ್ಯಸಂಸ್ಕಾರ ನಡೆಸಲು ಕುಟುಂಬ ವರ್ಗ ನಿರ್ಧರಿಸಿದ್ದು, ಬಲಿಜ ಸಂಪ್ರದಾಯದಂತೆ ವಿಧಿ ವಿಧಾನಗಳನ್ನು ಮಗ ಶಿವಪ್ರಸಾದ್ ನೆರವೇರಿಸಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಮಹಾಶಿವರಾತ್ರಿಗೆ ಕೋಟಿಲಿಂಗೇಶ್ವರ ಸನ್ನಿಧಿಯಲ್ಲಿ ವಿಶೇಷ ಪೂಜಾ ಅಲಂಕಾರ

    ಮಹಾಶಿವರಾತ್ರಿಗೆ ಕೋಟಿಲಿಂಗೇಶ್ವರ ಸನ್ನಿಧಿಯಲ್ಲಿ ವಿಶೇಷ ಪೂಜಾ ಅಲಂಕಾರ

    ಕೋಲಾರ: ಇಂದು ಮಹಾಶಿವರಾತ್ರಿ. ರಾಜ್ಯದೆಲ್ಲೆಡೆ ಶಿವನ ನಾಮ ಜಪ, ವ್ರತಾಚರಣೆಯಲ್ಲಿ ಜನರು ತೊಡಗಿದ್ದಾರೆ. ಶಿವರಾತ್ರಿ ಪ್ರಯುಕ್ತ ಕೋಲಾರದ ಬಂಗಾರಪೇಟೆ ತಾಲೂಕು ಕಮ್ಮಸಂದ್ರ ಕೋಟಿಲಿಂಗೇಶ್ವರ ಸನ್ನಿಧಿಯಲ್ಲಿ ವಿಶೇಷ ಪೂಜಾ ಅಲಂಕಾರಗಳನ್ನ ಮಾಡಲಾಗಿದೆ.

    ಶಿವನ ನಾಮ ಸ್ಮರಿಸಿ ಕೋಟಿ ಶಿವಲಿಂಗ ದರ್ಶನ ಪಡೆದ್ರೆ ಒಳ್ಳೆಯದಾಗುತ್ತೆ ಅನ್ನೋ ನಂಬಿಕೆ ಭಕ್ತರಲ್ಲಿದೆ. ಹೀಗಾಗಿ ಇಂದು ನೆರೆಯ ಆಂಧ್ರ, ತಮಿಳುನಾಡು ಸೇರಿದಂತೆ ಇನ್ನಿತರ ರಾಜ್ಯಗಳಿಂದ ಭಕ್ತರು ಆಗಮಿಸಿ, ಪುಣ್ಯ ಕ್ಷೇತ್ರದಲ್ಲಿ ಶಿವರಾತ್ರಿ ಆಚರಿಸುತ್ತಾರೆ. ರಾತ್ರಿಯಿಂದ ವ್ರತಾಚರಣೆ ಮಾಡಿ, ನಂತರ ಇಲ್ಲಿ ಬಂದು ದೇವರಿಗೆ ಪೂಜೆ ಸಲ್ಲಿಸಿದ ನಂತರವೇ ಹಬ್ಬ ಆಚರಣೆ ಮಾಡೋದು ಇಲ್ಲಿನ ವಿಶೇಷ.

    ಮತ್ತೊಂದು ವಿಶೇಷತೆ ಅಂದ್ರೆ 108 ಅಡಿ ಶಿವಲಿಂಗ ಹಾಗೂ ಬೃಹದಾಕಾರದ ಬಸವ ಮೂರ್ತಿ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದ್ದು, ಸಾವಿರಾರು ಜನ ಕೋಟಿಲಿಂಗಗಳ ದರ್ಶನ ಪಡೆದು ಪುನೀತರಾಗುತ್ತಾರೆ.

  • ಶಿವನ ಸನ್ನಿಧಿಯಲ್ಲಿ ಲಕ್ಷಾಂತರ ಜನರ ಹೊಸವರ್ಷದ ಸಂಭ್ರಮಾಚರಣೆ

    ಶಿವನ ಸನ್ನಿಧಿಯಲ್ಲಿ ಲಕ್ಷಾಂತರ ಜನರ ಹೊಸವರ್ಷದ ಸಂಭ್ರಮಾಚರಣೆ

    ಕೋಲಾರ: 2018 ರ ಹೊಸ ವರ್ಷವನ್ನು ಸಾವಿರಾರು ಜನ ಭಕ್ತರು ಶಿವನ ಸನ್ನಿಧಿ ಕೋಟಿ ಶಿವಲಿಂಗ ಕ್ಷೇತ್ರದಲ್ಲಿ ಆಚರಣೆ ಮಾಡಿದ್ದಾರೆ.

    ಬೆಳಗ್ಗಿನಿಂದಲೇ ಜನರು ವಿವಿಧ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸುವ ಮೂಲಕ ಹೊಸ ವರ್ಷದ ಸಂಭ್ರಮಾಚರಣೆ ಮಾಡಿದ್ದಾರೆ. ಕೋಲಾರದ ಬಂಗಾರಪೇಟೆ ತಾಲೂಕಿನ ಕಮ್ಮಸಂದ್ರದ ಶ್ರೀ ಕೋಟಿ ಶಿವಲಿಂಗ ಕ್ಷೇತ್ರಕ್ಕೆ ಸಾವಿರಾರು ಜನ ಭಕ್ತರು ಹಾಗೂ ಪ್ರವಾಸಿಗರು ಆಗಮಿಸಿ ಹೊಸ ವರ್ಷವನ್ನ ಬರಮಾಡಿಕೊಂಡಿದ್ದಾರೆ.

    ವಿಶ್ವದಲ್ಲಿ ಕೋಟಿ ಶಿವಲಿಂಗಗಳನ್ನು ಏಕ ಕಾಲದಲ್ಲಿ ಕಣ್ತುಂಬಿಕೊಳ್ಳಬಹುದಾದ ಸ್ಥಳ ಕೋಟಿಶಿವಲಿಂಗ ಕ್ಷೇತ್ರ. ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕು ಕಮ್ಮಸಂದ್ರದ ಕೋಟಿಲಿಂಗೇಶ್ವರ ಕ್ಷೇತ್ರ ಎಂದು ಪ್ರಸಿದ್ಧಿಯಾಗಿದೆ. ಇಂದು ಹೊಸ ವರ್ಷದ ಅಂಗವಾಗಿ ಕೋಟಿಲಿಂಗೇಶ್ವರದಲ್ಲಿ ವಿಶೇಷವಾಗಿ ಲಕ್ಷಾಂತರ ಜನರು ಮುಂಜಾನೆಯಿಂದಲೇ ಕ್ಷೇತ್ರಕ್ಕೆ ಬಂದು ದೇವರ ದರ್ಶನ ಪಡೆದರು.

    ಕೋಟಿ ಶಿವಲಿಂಗಗಳ ದರ್ಶನ ಪಡೆದು, ಶಿವನ ನೆನೆಯುತ್ತಾ ಹೊಸ ವರ್ಷ ಹರುಷ ತರಲಿ ಎಂದು ಬೇಡಿಕೊಂಡರು. ವಿಶೇಷ ಆಕರ್ಷಣೆ ಎಂಬಂತೆ 108 ಅಡಿಯ ಶಿವಲಿಂಗದ ದರ್ಶನ ಪಡೆದ ಭಕ್ತರು ಶಿವಲಿಂಗದ ಮುಂದೆ ನಿಂತು ಫೋಟೋಗಳನ್ನ ತೆಗೆಸಿಕೊಳ್ಳುತ್ತಿದ್ದರು. ಹೊಸ ವರ್ಷದ ಪ್ರಯುಕ್ತ ವಿಶೇಷವಾಗಿ ಶ್ರೀ ವೆಂಕಟೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವವನ್ನ ಹಮ್ಮಿಕೊಳ್ಳಲಾಗಿತ್ತು.

    ಸಾಕಷ್ಟು ವಿಶೇಷ ದಿನಗಳಲ್ಲಿ ಈ ಕ್ಷೇತ್ರಕ್ಕೆ ಬೆಂಗಳೂರು, ಕರ್ನಾಟಕ, ಆಂಧ್ರ, ತಮಿಳುನಾಡು, ಕೇರಳದಿಂದಲೂ ಸಾವಿರಾರು ಭಕ್ತರು ಸಾಗರೋಪಾದಿಯಲ್ಲಿ ಹರಿದು ಬರುತ್ತಾರೆ. ಏಕ ಕಾಲದಲ್ಲಿ ಶಿವಲಿಂಗಗಳ ದರ್ಶನ ಮಾಡುವ ಜನರಿಗಂತೂ ಭೂ ಕೈಲಾಸವೇ ಧರೆಗಿಳಿದ ಅನುಭವ ಆಗುತ್ತದೆ. ಜೊತೆಗೆ ಹೊಸ ವರ್ಷದಂದು ಇಂಥದ್ದೊಂದು ಪುಣ್ಯಕ್ಷೇತ್ರದಲ್ಲಿ ಹೊಸ ವರ್ಷವನ್ನು ಆರಂಭ ಮಾಡಿದ ತೃಪ್ತಿ ಭಕ್ತರಿಗೆ ಇರುತ್ತೆ. ಇನ್ನು ದೇವಸ್ಥಾನದ ವತಿಯಿಂದ ಕೋಟಿ ಶಿವಲಿಂಗಗಳಿಗೂ ಅದ್ಧೂರಿ ಹೂವಿನ ಅಲಂಕಾರ ಮಾಡಲಾಗಿತ್ತು. ಈ ವಿಶೇಷ ದಿನದಂದು ಸಾವಿರಾರು ಜನರು ಬಂದು ಕೋಟಿ ಶಿವಲಿಂಗಗಳ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ ಎಂದು ಶ್ರೀ ಸಾಂಬಶಿವಮೂರ್ತಿ ಸ್ವಾಮಿಗಳು ಹೇಳಿದರು.