Tag: Kotekaru

  • Kotekar Bank Robbery | ಬ್ಯಾಂಕ್‌ನಲ್ಲಿ ಚಿನ್ನ ದೋಚಲು ನಮಾಜ್ ಟೈಂ ಸೂಚಿಸಿದ್ದೇ ಆ ಸ್ಥಳೀಯ ವ್ಯಕ್ತಿ – ರಹಸ್ಯ ಸ್ಫೋಟ

    Kotekar Bank Robbery | ಬ್ಯಾಂಕ್‌ನಲ್ಲಿ ಚಿನ್ನ ದೋಚಲು ನಮಾಜ್ ಟೈಂ ಸೂಚಿಸಿದ್ದೇ ಆ ಸ್ಥಳೀಯ ವ್ಯಕ್ತಿ – ರಹಸ್ಯ ಸ್ಫೋಟ

    – 2 ತಿಂಗಳ ಹಿಂದೆಯೇ ಸ್ಕೆಚ್‌ ಹಾಕಿದ್ನಾ ನಟೋರಿಯಸ್‌?

    ಮಂಗಳೂರು: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಮಂಗಳೂರು ಕೋಟೆಕಾರ್ ಸಹಕಾರಿ ಬ್ಯಾಂಕ್‌ ದರೋಡೆ (Kotekaru Bank Robbery Case) ಪ್ರಕರಣದ ಮೂವರು ಆರೋಪಿಗಳನ್ನು ಬಂಧಿಸಿ ಒಂದು ದಿನ ಕಳೆದಿದೆ. ಆದ್ರೆ ವಿಚಾರಣೆ ನಡೆಸುತ್ತಿರುವ ಪೊಲೀಸರಿಗೆ ಸ್ಫೋಟಕ ಮಾಹಿತಿಗಳು ಲಭ್ಯವಾಗುತ್ತಿವೆ.

    ಬ್ಯಾಂಕ್‌ ದರೋಡೆಗೆ ಸ್ಥಳೀಯರದ್ದೇ ಸಹಕಾರ ಇದೆ ಅನ್ನೋ ಮಾಹಿತಿ ಬೆಳಕಿಗೆ ಬಂದಿದೆ. ಬ್ಯಾಂಕ್‌ನಲ್ಲಿ 18 ಕೋಟಿ ರೂಪಾಯಿ ಮೌಲ್ಯದಷ್ಟು ಚಿನ್ನಾಭರಣ ಇರುವ ಬಗ್ಗೆ ಸ್ಥಳೀಯ ವ್ಯಕ್ತಿಯೇ ಈ ನಟೋರಿಯಸ್‌ ಗ್ಯಾಂಗ್‌ಗೆ ಖಚಿತ ಮಾಹಿತಿ ನೀಡಿದ್ದಾನೆ. ಬ್ಯಾಂಕ್‌ನ ಸುತ್ತಮುತ್ತ ಮುಸ್ಲಿಮರೇ ಹೆಚ್ಚಾಗಿರೋದು ದರೋಡೆಗೆ ತೊಡಕಾಗಿತ್ತು. ಅದಕ್ಕಾಗಿಯೇ ಆತ ಶುಕ್ರವಾರ ಮಧ್ಯಾಹ್ನ ನಮಾಜ್‌ ಟೈಂ ಸೂಚಿಸಿದ್ದಾನೆ ಎಂದು ಹೇಳಲಾಗಿದೆ.

    ಬ್ಯಾಂಕ್‌ನಲ್ಲಿ ಮೂವರು ಮಹಿಳಾ ಸಿಬ್ಬಂದಿ ಇರೋ ಬಗ್ಗೆಯೂ ಆ ಸ್ಥಳೀಯನೇ ಮಾಹಿತಿ ನೀಡಿದ್ದಾನೆ. ಅಷ್ಟೇ ಅಲ್ಲದೇ ಬ್ಯಾಂಕ್‌ ದರೋಡೆಗೆ ಸಹಕಾರ ನೀಡುವ ಜೊತೆಗೆ ಪರಾರಿಯಾಗಲು ಸ್ಥಳೀಯರೇ ರೂಟ್‌ಮ್ಯಾಪ್‌ ಹಾಕಿಕೊಟ್ಟಿದ್ದಾರೆ ಅನ್ನೋದು ಮೇಲ್ನೋಟಕ್ಕೆ ಕಂಡುಬಂದಿರುವುದಾಗಿ ಪೊಲೀಸ್‌ ಉನ್ನತ ಮೂಲಗಳು ತಿಳಿಸಿವೆ.

    ಸದ್ಯ ತನಿಖೆ ಚುರುಕುಗೊಳಿಸಿರುವ ಪೊಲೀಸರು ಸ್ಥಳೀಯ ಆಗಂತುಕರ ಬಂಧನಕ್ಕೆ ಬಲೆ ಬೀಸಿದ್ದಾರೆ. ಒಂದೆರಡು ದಿನಗಳಲ್ಲೇ ಪ್ರಕರಣದಲ್ಲಿ ಭಾಗಿಯಾಗಿರುವ ಸ್ಥಳೀಯರನ್ನ ಬಂಧಿಸಲು ಪೊಲೀಸರು ಪಕ್ಕಾ ಪ್ಲ್ಯಾನ್‌ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಕದ್ದ ಚಿನ್ನದೊಂದಿಗೆ 700 ಕಿಮೀ ಕಾರಿನಲ್ಲೇ ಪ್ರಯಾಣ:
    ಚಿನ್ನಕದ್ದ ದರೋಡೆಕೋರರು 700 ಕಿಮೀ ಕಾರಿನಲ್ಲೇ ಪ್ರಯಾಣಿಸಿದ್ದರು. ತಮಿಳುನಾಡಿನ ತಿರುನಲ್ವೇಲಿಗೆ ಫಿಯೇಟ್ ಕಾರಿನಲ್ಲಿ ಪ್ರಯಾಣ ಮಾಡಿದ್ದರು. ತಮಿಳುನಾಡು ತಲುಪಿದ ಬಳಿಕ ಅಜ್ಞಾತ ಸ್ಥಳದಲ್ಲಿ ಕಾರು ಬಿಟ್ಟು ಚಿನ್ನದ ಜೊತೆ ಎಸ್ಕೇಪ್ ಆಗಿದ್ದರು. ಜಾಡು ಹಿಡಿದು ಹೊರಟ ಮಂಗಳೂರು ಪೊಲೀಸರಿಗೆ ತಮಿಳುನಾಡಿನಲ್ಲಿ ಕಾರು ಸಿಕ್ಕಿತು. ಬಳಿಕ ಕಾರಿನ ಚಾರ್ಸಿ ನಂಬರ್ ಆಧರಿಸಿ ನೈಜ ಮಾಲೀಕನನ್ನ ಪತ್ತೆ ಮಾಡಿದ್ದಾರೆ. ಆ ಬಳಿಕ ಇಡೀ ತಮಿಳುನಾಡು ಜಾಲಾಡಿದ ಮಂಗಳೂರು ಪೊಲೀಸರು ಮೂವರು ದರೋಡೆಕೋರರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಕಾರು ಚಲಾಯಿಸಿದ್ದು ಯಾರು?
    ಚಿನ್ನ ಕದ್ದೊಯ್ಯುವ ವೇಳೆ ಕಾರು ಚಲಾಯಿಸಿದ್ದ ಆರೋಪಿ ಮುರುಗಂಡಿ ದೇವರ್ ಮುಂಬೈ ಹಾಗೂ ತಮಿಳುನಾಡು ಮೂಲದ ನಟೋರಿಯಸ್ ಗ್ಯಾಂಗ್‌ನವನಾಗಿದ್ದ. ತಿರುನಲ್ವೇಲಿ ತನಕ ಕಾರು ಚಲಾಯಿಸಿದ್ದ. ಅಲ್ಲದೇ ಮುರುಗಂಡಿ 2 ತಿಂಗಳ ಹಿಂದೆಯೇ ಮಂಗಳೂರಿಗೆ ಬಂದಿದ್ದ. ಕೋಟೆಕಾರು ಬ್ಯಾಂಕ್ ಪರಿಸರದಲ್ಲಿ ಸುತ್ತಾಡಿ ಮಾಹಿತಿ ಕಲೆ ಹಾಕಿದ್ದ. ನಿಖರವಾದ ಸ್ಕೆಚ್ ತಯಾರಿಸಿ ಮತ್ತೆ ತಮಿಳುನಾಡು ತೆರಳಿದ್ದ. ಆ ಬಳಿಕ ದರೋಡೆಗೆ ಪಕ್ಕಾ ಪ್ಲ್ಯಾನ್‌ ಮಾಡಿಕೊಂಡು ತಂಡದ ಜೊತೆ ಬಂದಿದ್ದಾನೆ. ರಾಜೇಂದ್ರನ್, ಕಣ್ಣನ್ ಮಣಿ ಹಾಗೂ ಇತರೆ 6 ಜನರ ಜೊತೆಗೆ ರಾಜ್ಯಕ್ಕೆ ಬಂದಿದ್ದಾನೆ. ಆದ್ರೆ ದರೋಡೆ ಮಾಡುವಾಗ ಐವರನ್ನು ಮಾತ್ರ ಜೊತೆಗೆ ಸೇರಿಸಿಕೊಂಡಿದ್ದಾನೆ. ಓರ್ವ ಮಾತ್ರ ಬೇರೆ ಜಾಗರದಲ್ಲಿ ನಿಂತು ದರೋಡೆಗೆ ಸಹಾಯ ಮಾಡಿದ್ದಾನೆ ಅನ್ನೋ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.

  • ಮಂಗಳೂರು ಬ್ಯಾಂಕ್‌ ದರೋಡೆ ಕೇಸ್‌ – ಮುಂಬೈ ಗ್ಯಾಂಗ್‌ಗೆ ಸೇರಿದ ಮೂವರು ಆರೋಪಿಗಳು ಅರೆಸ್ಟ್‌

    ಮಂಗಳೂರು ಬ್ಯಾಂಕ್‌ ದರೋಡೆ ಕೇಸ್‌ – ಮುಂಬೈ ಗ್ಯಾಂಗ್‌ಗೆ ಸೇರಿದ ಮೂವರು ಆರೋಪಿಗಳು ಅರೆಸ್ಟ್‌

    ಮಂಗಳೂರು: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಮಂಗಳೂರು ಕೋಟೆಕಾರ್ ಸಹಕಾರಿ ಬ್ಯಾಂಕ್‌ ದರೋಡೆ (Kotekaru Bank Robbery Case) ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

    ಮುಂಬೈ ಗ್ಯಾಂಗ್‌ಗೆ (Mumbai Gang) ಸೇರಿದ್ದ ದರೋಡೆಕೋರರನ್ನು ತಮಿಳುನಾಡಿನ (TamilNadu) ಮಧುರೈ ಬಳಿ ಬಂಧಿಸಲಾಗಿದೆ. ಮುರುಗಂಡಿ ದೇವರ್, ಪ್ರಕಾಶ್ ಅಲಿಯಾಸ್‌ ಜೋಶ್ವಾ, ಮನಿವೆನನ್ ಬಂಧಿತ ದರೋಡೆಕೋರಾಗಿದ್ದು, ಬಂಧಿತರಿಂದ ಫಿಯಟ್ ಕಾರು ಹಾಗೂ 2 ಗೋಣಿ ಚೀಲವನ್ನ ವಶಕ್ಕೆ ಪಡೆಯಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ (Mangaluru Police Commissioner) ಅನೂಪ್‌ಕುಮಾರ್ ಹೇಳಿದ್ದಾರೆ.

    ಮುರುಗಂಡಿ ಪ್ರಕರಣದ ಕಿಂಕ್‌ಪಿನ್‌:
    ರಾಜ್ಯದ ಗುಪ್ತಚರ ಇಲಾಖೆಯ ಸಹಾಯದಿಂದ ಡಾಯಿತರ ಚಲನವಲನಗಳ ಮಾಹಿತಿ ಲಭ್ಯವಾಯಿತು. ಮೂವರು ಆರೋಪಿಗಳು ತಮಿಳುನಾಡು ಮೂಲದವರಾದರೂ ಮುಂಬೈ ಮೂಲದ ಗ್ಯಾಂಗ್‌ಗೆ ಸೇರಿಕೊಂಡಿದ್ದರು. ದರೋಡೆ ಬಳಿಕ ಕೇರಳದ ಮೂಲಕ ಎಸ್ಕೇಪ್‌ ಆಗಿದ್ದರು. ಆದ್ರೆ ನಾವು ಮುಂಬೈಗೆ ತನಿಖಾ ತಂಡ ಕಳುಹಿಸಿ ಮಾಹಿತಿ ಕಲೆಹಾಕಿದ್ದೆವು. 2 ತಂಡ ತಮಿಳುನಾಡಿನಲ್ಲಿ ಶೋಧ ನಡೆಸಿತ್ತು. ಸದ್ಯ ಪ್ರಕರಣದಲ್ಲಿ ಮುರುಗಂಡಿ ದೇವರ್ ತಿರುವೇಲಿ ಪಾತ್ರ ಪ್ರಮುಖವಾಗಿದೆ ಎಂದು ತಿಳಿದುಬಂದಿದೆ ಎಂದು ಪೊಲೀಸ್‌ ಆಯುಕ್ತರು ತಿಳಿಸಿದ್ದಾರೆ.

    ಏನಿದು ಕೇಸ್‌?
    ಇದೇ ಜನವರಿ 17ರಂದು ಮಂಗಳೂರಿನ ಹೊರವಲಯದ ತಲಪಾಡಿ ಬಳಿಯ ಕೆ.ಸಿ ರೋಡ್‌ನಲ್ಲಿರುವ ಕೋಟೆಕಾರ್ ವ್ಯವಸಾಯ ಸಹಕಾರಿ ಬ್ಯಾಂಕ್ ನಲ್ಲಿ ಹಾಡ ಹಗಲೇ ದರೋಡೆ ನಡೆಸಿತ್ತು. ಸಿಎಂ ಸಿದ್ದರಾಮಯ್ಯನವರು ಮಂಗಳೂರು ಪ್ರವಾಸದಲ್ಲಿ ಇರುವಾಗಲೇ ಈ ದರೋಡೆ ನಡೆದಿದ್ದು ಕಳವಳಕಾರಿಯಾಗಿತ್ತು.

    ಮಟ ಮಟ ಮಧ್ಯಾಹ್ನ 1 ಗಂಟೆ ಸುಮಾರಿಗೆ ಬ್ಯಾಂಕ್‌ಗೆ ಕೇವಲ ಮಾಸ್ಕ್ ಹಾಗೂ ಟೋಪಿ ಹಾಕಿಕೊಂಡು ಮಾಮೂಲಿ ಜನರಂತೆ ನುಗ್ಗಿದ ಐವರು ಡಕಾಯಿತರು ಸುಮಾರು 11 ಕೋಟಿ ಮೌಲ್ಯದ ಚಿನ್ನಾಭರಣ, ಲಕ್ಷಾಂತರ ರೂಪಾಯಿ ನಗದು ದೋಚಿಕೊಂಡು ಪರಾರಿಯಾದ್ದರು. ದಷ್ಟಪುಷ್ಟವಾಗಿದ್ದ ಐವರು ಡಕಾಯಿತರು ಕಾರೊಂದರಲ್ಲಿ ಬಂದಿಳಿದು ಬ್ಯಾಂಕ್‌ಗೆ ನುಗ್ಗಿದ್ದರು. ಬ್ಯಾಂಕ್ ನಲ್ಲಿದ್ದ ಮೂವರು ಮಹಿಳಾ ಸಿಬ್ಬಂದಿಗೆ, ಚಿನ್ನಾಭರಣ ಪರಿವೀಕ್ಷಕ, ಸಿಸಿಟಿವಿ ಕ್ಯಾಮೆರಾ ರಿಪೇರಿ ಮಾಡಲು ಬಂದಿದ್ದ ಟೆಕ್ನಿಶಿಯನ್ ಸೇರಿ ಐದು ಜನರಿಗೂ ಪಿಸ್ತೂಲ್, ಚಾಕು ಮಚ್ಚು ತೋರಿಸಿ ದರೋಡೆ ಮಾಡಿದ್ದರು. ಬ್ಯಾಂಕ್ ನೊಳಗೆ ಸುಮಾರು 15 ಕೋಟಿ ಮೌಲ್ಯದ ಚಿನ್ನಾಭರಣಗಳಿದ್ದು ಡಕಾಯಿತರು ಸುಮಾರು 11 ಕೋಟಿ ರೂ. ಮೌಲ್ಯದ ಚಿನ್ನಾಭರಣವನ್ನು ಕದ್ದೊಯ್ದಿದ್ದರು.

    ಕಾರು ಹತ್ತಿ ಪರಾರಿಯಾಗಿದ್ದ ದರೋಡೆಕೋರರು ಕೇರಳ ಗಡಿ ತಲಪಾಡಿಯತ್ತ ತೆರಳಿದ್ದರು. ಕಾರಿಗೆ ಬೆಂಗಳೂರು ಪಾರ್ಕಿಂಗ್‌ ನಂಬರ್ KM4 AQ-9923 ಫೇಕ್ ನಂಬರ್ ಪ್ಲೇಟ್ ಹಾಕಿ, ತಲಪಾಡಿ ಟೋಲ್ ಗೇಟ್ ನಲ್ಲಿ ಫಾಸ್ಟ್ ಟ್ಯಾಗ್ ವರ್ಕ್‌ ಆಗದೇ 150 ರೂ. ಹಣ ನೀಡಿ ರಶೀದಿ ಪಡೆದು ಪರಾರಿಯಾಗಿದ್ದರು. ಈ ಟೋಲ್ ಗೇಟ್‌ನ ಸಿ.ಸಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಪೊಲೀಸರ ಎರಡು ತಂಡ ಕಾಸರಗೋಡು, ಕೇರಳದತ್ತ ತೆರಳಿತ್ತು. ಅಲ್ಲದೇ ತಮಿಳುನಾಡು ಮುಂಬೈನಲ್ಲೂ ಪೊಲೀಸ್‌ ತಂಡ ತನಿಖೆ ಚುರುಕುಗೊಳಿಸಿದ್ದವು.

  • ಬ್ಯಾಂಕ್‌ನ ಬಹುಪಾಲು ಚಿನ್ನ, 11 ಲಕ್ಷ ನಗದು ದೋಚಿದ್ದಾರೆ – ಬ್ಯಾಂಕ್ ಅಧ್ಯಕ್ಷ ಕೃಷ್ಣ ಶೆಟ್ಟಿ

    ಬ್ಯಾಂಕ್‌ನ ಬಹುಪಾಲು ಚಿನ್ನ, 11 ಲಕ್ಷ ನಗದು ದೋಚಿದ್ದಾರೆ – ಬ್ಯಾಂಕ್ ಅಧ್ಯಕ್ಷ ಕೃಷ್ಣ ಶೆಟ್ಟಿ

    – ಗ್ರಾಹಕರು ಆತಂಕಪಡಬೇಕಿಲ್ಲ, 19 ಕೋಟಿ ಇನ್ಶೂರೆನ್ಸ್ ಇದೆ ಎಂದು ಅಭಯ
    – ಬ್ಯಾಂಕ್ ಸೈರನ್ ಸರಿ ಇದೆ, ರಾತ್ರಿ ಮಾತ್ರ ಕೆಲಸ ಮಾಡುತ್ತೆ

    ಮಂಗಳೂರು: ದರೋಡೆಕೋರರು 11 ಲಕ್ಷ ಹಣ, ಬ್ಯಾಂಕ್‌ನ ಬಹುಪಾಲು ಚಿನ್ನ ದೋಚಿದ್ದಾರೆ, ಆದ್ರೆ ಗ್ರಾಹಕರು ಆತಂಕ ಪಡಬೇಕಿಲ್ಲ 19 ಕೋಟಿ ರೂ. ವಿಮೆ ಇದೆ ಎಂದು ಕೋಟೆಕಾರ್ ಸಹಕಾರಿ ಬ್ಯಾಂಕ್ ಅಧ್ಯಕ್ಷ (Kotekaru Bank President) ಕೃಷ್ಣ ಶೆಟ್ಟಿ ಅಭಯ ನೀಡಿದ್ದಾರೆ.

    ಕೋಟೆಕಾರ್ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣ ಕುರಿತು ಮಾಧ್ಯಮಗಳೊಂದಿಗೆ ಅವರು ಮಾತನಾಡಿದ್ದಾರೆ. ಗ್ರಾಹಕರು ಆತಂಕ ಪಡಬೇಕಿಲ್ಲ 19 ಕೋಟಿ ರೂ. ವಿಮೆ ಇದೆ. ಗ್ರಾಹಕರ ಹಣ, ಚಿನ್ನಕ್ಕೆ ಏನೂ ಆಗೋದಿಲ್ಲ.. ಇನ್ಶೂರೆನ್ಸ್ ಕ್ಲೈಮ್ ಆಗುತ್ತೆ. ಇನ್ಶೂರೆನ್ಸ್‌ನವರು ಎಲ್ಲಾ ಸರಿ ಮಾಡೋಣ ಅಂತ ಹೇಳಿ ಹೋಗಿದ್ದಾರೆಂದು ತಿಳಿಸಿದ್ದಾರೆ.

    ಗ್ರಾಹಕರಿಗೆ ಅವರ ಹಣ ಸಿಗಲಿದೆ. ದರೋಡೆಕೋರರು 11 ಲಕ್ಷ ಹಣ ಕದ್ದೋಯ್ದಿದ್ದಾರೆ. ಬಹುಪಾಲು ಎಲ್ಲಾ ಚಿನ್ನವನ್ನೂ ದೋಚಿದ್ದಾರೆ. ಬ್ಯಾಂಕ್‌ನಲ್ಲಿ ಸಿಸಿ ಕ್ಯಾಮರಾ ವ್ಯವಸ್ಥೆ ಇದೆ. ಒಂದು ಕ್ಯಾಮೆರಾ ಸರಿಯಾಗಿ ಕೆಲಸ ಮಾಡ್ತಾಯಿರಲಿಲ್ಲ. ಅದನ್ನ ಸರಿಪಡಿಸಲು ಎಲ್ಲಾ ಕ್ಯಾಮೆರಾ ಆಫ್ ಮಾಡಿದ್ದೆವು. ಬ್ಯಾಂಕ್ ಸೈರನ್ ಸರಿ ಇದೆ. ಆದರೆ ರಾತ್ರಿ ಮಾತ್ರ ಕೆಲಸ ಮಾಡುತ್ತೆ. ಹಗಲು ಹೊತ್ತಿನಲ್ಲಿ ಸೈರನ್ ಆಫ್ ಮಾಡಿರ್ತೀವಿ ಎಂದಿದ್ದಾರೆ.

    ರಾತ್ರಿ ಹೊತ್ತು ಸೆಕ್ಯೂರಿಟಿ ಗಾರ್ಡ್ ಇರ್ತಾರೆ ಹಗಲು ಹೊತ್ತಿನಲ್ಲಿ ಯಾರೂ ಇರೋದಿಲ್ಲ. ಇನ್ನೂ ಮುಂದೆಯಾದರೂ ದಿನದ 24 ಗಂಟೆ ಸೆಕ್ಯೂರಿಟಿ ನಿಯೋಜಿಸಲು ಚಿಂತಿಸಿದ್ದೇವೆ. ಯಾರೂ ಭಯ ಪಡುವ ಅವಶ್ಯಕತೆಯಿಲ್ಲ, ಪೊಲೀಸರು ಕಳ್ಳರನ್ನ ಸೆರೆ ಹಿಡಿಯುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

  • 6 ಕೋಟಿ ಮೌಲ್ಯದ ಚಿನ್ನಾಭರಣ ಅಲ್ಲೇ ಬಿಟ್ಟು ಪರಾರಿ – ದೇವರನಾಡು ಕೇರಳದತ್ತ ತೆರಳಿರೋ ದರೋಡೆಕೋರರು

    6 ಕೋಟಿ ಮೌಲ್ಯದ ಚಿನ್ನಾಭರಣ ಅಲ್ಲೇ ಬಿಟ್ಟು ಪರಾರಿ – ದೇವರನಾಡು ಕೇರಳದತ್ತ ತೆರಳಿರೋ ದರೋಡೆಕೋರರು

    – ಹೇಗಿತ್ತು ದರೋಡೆಕೋರರ ಪ್ಲ್ಯಾನ್‌?

    ಮಂಗಳೂರು: ಇಲ್ಲಿನ ಕೆ.ಸಿ.ರೋಡ್ ನಲ್ಲಿರೋ ಕೋಟೆಕಾರ್ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. 10 ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣವನ್ನು ದರೋಡೆ ಮಾಡಿರೋ ಡಕಾಯಿತರು 6 ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣವನ್ನು ಬಿಟ್ಟು ಕೇರಳ ಗಡಿ ಮೂಲಕ ಪರಾರಿಯಾಗಿದ್ದಾರೆ. ಎಷ್ಟು ಚಿನ್ನಾಭರಣ ಕಳವಾಗಿದೆ ಅನ್ನೋದು ಇನ್ನೂ ಸರಿಯಾಗಿ ಲೆಕ್ಕ ಸಿಕ್ಕಿಲ್ಲ. ಇದಕ್ಕೆಲ್ಲ ಉತ್ತರ ಸಿಗಲು ಪೊಲೀಸರು ಎರಡು ತಂಡಗಳಾಗಿ ದರೋಡೆಕೋರರ ಪತ್ತೆ ಕಾರ್ಯ ಆರಂಭಿಸಿದ್ದಾರೆ.

    ಮಂಗಳೂರಿನ ಹೊರವಲಯದ ತಲಪಾಡಿ ಬಳಿಯ ಕೆ.ಸಿ ರೋಡ್‌ನಲ್ಲಿರುವ ಕೋಟೆಕಾರ್ ವ್ಯವಸಾಯ ಸಹಕಾರಿ ಬ್ಯಾಂಕ್ ನಲ್ಲಿ ನಿನ್ನೆ ಹಾಡು ಹಗಲಲ್ಲೇ ನಡೆದ ದರೋಡೆ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಸಿಎಂ ಸಿದ್ದರಾಮಯ್ಯನವರು ಮಂಗಳೂರು ಪ್ರವಾಸದಲ್ಲಿ ಇರುವಾಗಲೇ ಈ ದರೋಡೆ ನಡೆದಿದ್ದು ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಇದನ್ನೂ ಓದಿ: Mangaluru Bank Robbery| ಸಿಸಿ ಕ್ಯಾಮೆರಾ ರಿಪೇರಿಗೆ ನೀಡಿದ ದಿನವೇ ಬ್ಯಾಂಕ್ ಲೂಟಿ

    ಹಾಡುಹಗಲಲ್ಲೇ ಮಟ ಮಟ ಮಧ್ಯಾಹ್ನದ 1 ಗಂಟೆಗೆ ಬ್ಯಾಂಕ್‌ಗೆ ಕೇವಲ ಮಾಸ್ಕ್ ಹಾಗೂ ಟೋಪಿ ಹಾಕಿಕೊಂಡು ಮಾಮೂಲಿ ಜನರಂತೆ ನುಗ್ಗಿದ ಐವರು ಡಕಾಯಿತರು ಎತ್ತಿಕೊಂಡು ಬರಲು ಸಾಧ್ಯವಾಗದಷ್ಟು ಭಾರದ ಗೋಣಿ ಚೀಲಪೂರ್ತಿ ಚಿನ್ನಾಭರಣ ಎತ್ತಿಕೊಂಡು ಪರಾರಿಯಾಗಿದ್ದರು. ದಷ್ಟಪುಷ್ಟವಾಗಿದ್ದ ಐವರು ಡಕಾಯಿತರು ಕಾರೊಂದರಲ್ಲಿ ಬಂದಿಳಿದು ಬ್ಯಾಂಕ್ ಗೆ ನುಗ್ಗಿದ್ದರು. ಬ್ಯಾಂಕ್ ನಲ್ಲಿದ್ದ ಮೂವರು ಮಹಿಳಾ ಸಿಬ್ಬಂದಿಗೆ, ಚಿನ್ನಾಭರಣ ಪರಿವೀಕ್ಷಕ, ಸಿಸಿಟಿವಿ ಕ್ಯಾಮೆರಾ ರಿಪೇರಿ ಮಾಡಲು ಬಂದಿದ್ದ ಟೆಕ್ನಿಶಿಯನ್ ಸೇರಿ ಐದು ಜನರಿಗೂ ಪಿಸ್ತೂಲ್, ಚಾಕು ಮಚ್ಚು ತೋರಿಸಿ ಹಿಂದಿ ಭಾಷೆಯಲ್ಲಿ ನಿಮಗೇನು ಮಾಡಲ್ಲ ಚಿನ್ನಾಭರಣ ದರೋಡೆ ಮಾಡಲು ಬಿಡುವಂತೆ ಹೆದರಿಸಿ ತಮ್ಮ ಕೈಗೆ ಸಿಕ್ಕ ಚಿನ್ನಾಭರಣವನ್ನು, 7 ಲಕ್ಷ ನಗದನ್ನ ದೋಚಿ ಪರಾರಿಯಾಗಿದ್ದಾರೆ. ಡಕಾಯಿತರ ಕೈಯಿಂದ ಜೀವಂತವಾಗಿ ಪಾರಾದ ಮಹಿಳಾ ಸಿಬ್ಬಂದಿ ಆತಂಕದಿಂದ ಹೊರ ಬಂದಿಲ್ಲ.

    ಬ್ಯಾಂಕ್ ನೊಳಗೆ ಸುಮಾರು 15 ಕೋಟಿ ಮೌಲ್ಯದ ಚಿನ್ನಾಭರಣಗಳಿದ್ದು ಡಕಾಯಿತರು ಸುಮಾರು 8 ರಿಂದ 10 ಕೋಟಿಯಷ್ಟು ಮೌಲ್ಯದ ಚಿನ್ನಾಭರಣವನ್ನು ಕದ್ದೊಯ್ದಿದ್ದಾರೆ. ಎಷ್ಟು ಕಳವಾಗಿದೆ ಅನ್ನೋ ಸರಿಯಾದ ಮಾಹಿತಿ ಇನ್ನೂ ಸಿಕ್ಕಿಲ್ಲ. ಸುಮಾರು 6 ಕೋಟಿಯಷ್ಟು ಮೌಲ್ಯದ ಚಿನ್ನಾಭರಣ ಎತ್ತಿಕೊಂಡು ಹೋಗಲು ಸಾಧ್ಯವಾಗದಯೋ ಅಥವಾ ಸಮಯ ಸಿಗಲಿಲ್ಲ ಅನ್ನೋ ಕಾರಣಕ್ಕೋ ಅಲ್ಲೇ ಬಿಟ್ಟು ಹೋಗಿದ್ದಾರೆ. ಬ್ಯಾಂಕ್ ಒಳಗಿಂದ ಹೊರ ಬಂದ ಐವರಲ್ಲಿ ಓರ್ವ ಕಾರು ರೆಡಿ ಮಾಡಿದ್ದು, ಬಳಿಕ ಇಬ್ಬರು ಚಿನ್ನಾಭರಣದ ಮೂಟೆಯನ್ನು ಹಿಡಿದುಕೊಂಡು ಕಾರಿನತ್ತ ಬಂದಿದ್ದು ಬಳಿಕ ಮತ್ತಿಬ್ಬರು ಓಡಿ ಬಂದು ಕಾರು ಹತ್ತಿ ಪರಾರಿಯಾಗಿದ್ದಾರೆ. ಈ ವೇಳೆ ಸಿಬ್ಬಂದಿ ಕಿರುಚಾಡಿದ್ದು ಎದುರು ಮನೆಯಲ್ಲಿದ್ದ ಉಷಾ ಎನ್ನುವ ವೃದ್ಧೆ ಡಕಾಯಿತರ ಕರಾಮತ್ತನ್ನು ಕಣ್ಣಾರೆ ನೋಡಿದ್ದಾರೆ. ತನ್ನ ಮಗನಿಗೆ ಕರೆ ಮಾಡಿ ಪೊಲೀಸರಿಗೆ ತಿಳಿಸಲು ಮಾಹಿತಿ ನೀಡಿದ್ದರು. ದರೋಡೆಕೋರರ ಕೃತ್ಯದ ಬಗ್ಗೆ ವೃದ್ಧೆ ಆತಂಕದಲ್ಲೇ ʻಪಬ್ಲಿಕ್ ಟಿವಿʼಗೆ ಪ್ರತಿಕ್ರಿಯಿಸಿದ್ದಾರೆ.

    ಕಾರು ಹತ್ತಿ ಪರಾರಿಯಾದ ದರೋಡೆಕೋರರು ಘಟನಾ ಸ್ಥಳದ ಪಕ್ಕದಲ್ಲೇ ಇದ್ದ ಕೇರಳ ಗಡಿ ತಲಪಾಡಿಯತ್ತ ತೆರಳಿದ್ದಾರೆ. ಕಾರಿಗೆ ಬೆಂಗಳೂರು ಪಾರ್ಕಿಂಗ್‌ ನಂಬರ್ KM4 AQ-9923 ಫೇಕ್ ನಂಬರ್ ಪ್ಲೇಟ್ ಹಾಕಿದ್ದು, ತಲಪಾಡಿ ಟೋಲ್ ಗೇಟ್ ನಲ್ಲಿ ಫಾಸ್ಟ್ ಟ್ಯಾಗ್ ವರ್ಕ್‌ ರ‍್ಕಾಗದೆ 150 ರೂ. ಹಣ ನೀಡಿ ರಶೀದಿ ಪಡೆದು ಪರಾರಿಯಾಗಿದ್ದಾರೆ. ಈ ಟೋಲ್ ಗೇಟ್ ನ ಸಿ.ಸಿ ಕ್ಯಾಮರಾ ದೃಶ್ಯಾವಳಿ ಆಧರಿಸಿ ಪೊಲೀಸರ ಎರಡು ತಂಡ ಕಾಸರಗೋಡು, ಕೇರಳದತ್ತ ತೆರಳಿದೆ. ಒಟ್ಟಿನಲ್ಲಿ ಆದಷ್ಟು ಬೇಗ ದರೋಡೆಕೋರರ ಬಂಧನವಾಗಲಿ ಎಂದು ಬ್ಯಾಂಕ್‌ನ ಗ್ರಾಹಕರು ಸೇರಿದಂತೆ ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ. ಇದನ್ನೂ ಓದಿ: ಸಿಎಂ ಮಂಗ್ಳೂರಿನಲ್ಲಿ‌ ಇರುವಾಗಲೇ ಬ್ಯಾಂಕ್‌ ಲೂಟಿ – ಬಂದೂಕು ತೋರಿಸಿ ದರೋಡೆ

  • Mangaluru Bank Robbery| ಸಿಸಿ ಕ್ಯಾಮೆರಾ ರಿಪೇರಿಗೆ ನೀಡಿದ ದಿನವೇ ಬ್ಯಾಂಕ್ ಲೂಟಿ

    Mangaluru Bank Robbery| ಸಿಸಿ ಕ್ಯಾಮೆರಾ ರಿಪೇರಿಗೆ ನೀಡಿದ ದಿನವೇ ಬ್ಯಾಂಕ್ ಲೂಟಿ

    – ಬ್ಯಾಂಕ್ ಸಿಬ್ಬಂದಿ ಮೇಲೆ ಸ್ಥಳೀಯರ ಅನುಮಾನ

    ಮಂಗಳೂರು: ಕೋಟೆಕಾರು (Kotekaru) ಬ್ಯಾಂಕ್ ಕೆ.ಸಿ ರೋಡ್ ಶಾಖೆಯಿಂದ ಭಾರೀ ದರೋಡೆ (Bank Theft) ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಸಿಸಿ ಕ್ಯಾಮೆರಾ (CC Camera) ರಿಪೇರಿಗೆ ನೀಡಿದ ದಿನವೇ ಬ್ಯಾಂಕ್ ಲೂಟಿ ಮಾಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

    ಹಾಡಹಗಲೇ ಐದು ಮಂದಿ ಆಗಂತುಕರು ಫಿಯೆಟ್ ಕಾರಿನಲ್ಲಿ ಬಂದು ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘ ಕೆ.ಸಿ.ರೋಡ್ ಶಾಖೆಯಿಂದ 5 ಲಕ್ಷ ನಗದು ಸೇರಿ 12 ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣ ದರೋಡೆ ಮಾಡಿ ನಾಲ್ಕೈದು ಚೀಲದಲ್ಲಿ ಹಣ ತುಂಬಿಸಿಕೊಂಡು ಪರಾರಿಯಾಗಿದ್ದಾರೆ. ಗನ್, ತಲ್ವಾರ್, ಚಾಕು ತೋರಿಸಿ ದರೋಡೆ ಮಾಡಲಾಗಿದೆ. ದರೋಡೆಕೋರರ ಪತ್ತೆಗೆ ಎರಡು ತಂಡಗಳ ರಚನೆ ಮಾಡಲಾಗಿದೆ. ಬ್ಯಾಂಕ್‌ನ ಸಿಸಿ ಕ್ಯಾಮೆರಾ ಕೂಡಾ ಇಂದೇ ರಿಪೇರಿಗೆ ನೀಡಲಾಗಿತ್ತು. ಈ ಹಿನ್ನೆಲೆ ಬ್ಯಾಂಕ್ ಸಿಬ್ಬಂದಿಯ ಮೇಲೆಯೇ ಸ್ಥಳೀಯರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ದತ್ತಪೀಠದ ಪೂಜಾ ಪದ್ಧತಿ – ಸುಪ್ರಿಂ ಸೂಚನೆಯಂತೆ ಕ್ಯಾಬಿನೆಟ್ ಸಬ್ ಕಮಿಟಿ ಸಭೆ

     

    ಇನ್ನು ಪ್ರಕರಣದ ಕುರಿತು ಪ್ರತ್ಯಕ್ಷದರ್ಶಿ ಎದುರು ಮನೆಯ ಉಷಾ ಮಾತನಾಡಿ, ಐದು ಮಂದಿ ಬ್ಯಾಂಕ್‌ನಿಂದ ಬರುತ್ತಿರುವುದನ್ನು ನಾನು ನೋಡಿದೆ. ಇವರನ್ನು ಕಂಡು ನನಗೆ ಭಯವಾಯಿತು. ಮೊದಲು ನಾಲ್ಕು ಮಂದಿ ಒಂದು ಗೋಣಿಯಲ್ಲಿ ಹಣ ಎಳೆದುಕೊಂಡು ಬರುತ್ತಿದ್ದರು. ಕೊನೆಗೆ ಒಬ್ಬ ಓಡಿಕೊಂಡು ಬಂದಿದ್ದಾನೆ. ಐದು ಮಂದಿ ಕೂಡ ಮಾಸ್ಕ್ ಹಾಗೂ ಟೋಪಿ ಧರಿಸಿದ್ದರು. ಶುಕ್ರವಾರ ಹಿನ್ನೆಲೆ ರಸ್ತೆಯಲ್ಲಿ ಯಾರೂ ಇರಲಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಗಾಂಜಾ ನಶೆಯಲ್ಲಿದ್ದ ಗುಂಪಿನಿಂದ ದಂಪತಿ ಮೇಲೆ ಹಲ್ಲೆ

    ಮಂಗಳೂರಿನಲ್ಲಿ ಸಿಎಂ ಕಾರ್ಯಕ್ರಮ ಹಿನ್ನಲೆ ಮಂಗಳೂರು ನಗರದಲ್ಲಿ ಪೊಲೀಸರು ಹೆಚ್ಚಿನ ಭದ್ರತೆ ನೀಡಿದ್ದರು. ಬ್ಯಾಂಕ್ ಇರುವ ಜಾಗದಲ್ಲಿ ಮುಸ್ಲಿಂ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣ ಶುಕ್ರವಾರ ನಮಾಜ್‌ಗಾಗಿ ಮಸೀದಿಗೆ ತೆರಳಿದ್ದರು. ಈ ಜಾಗದಲ್ಲಿ ಯಾರು ಇಲ್ಲ ಎಂಬುದನ್ನು ಖಚಿತ ಪಡಿಸಿಸಿಕೊಂಡೇ ಈ ಕೃತ್ಯವನ್ನು ಎಸಗಲಾಗಿದೆ.  ಇದನ್ನೂ ಓದಿ: ಮಂಡ್ಯದಲ್ಲಿ ಸಮಗ್ರ ಕೃಷಿ ವಿಶ್ವವಿದ್ಯಾಲಯಕ್ಕೆ ಸಚಿವ ಸಂಪುಟ ಅನಮೋದನೆ -ಸಾಕಾರಗೊಂಡ ದಶಕಗಳ ಕನಸು