Tag: kota srinivasa poojary

  • ಬಿಎಸ್‍ವೈ ಸರ್ಕಾರದಿಂದ `ಬಡವರ ಕಲ್ಯಾಣ’ – ಸರ್ಕಾರಿ ಮದ್ವೆಗೆ ಷರತ್ತುಗಳು ಅನ್ವಯ

    ಬಿಎಸ್‍ವೈ ಸರ್ಕಾರದಿಂದ `ಬಡವರ ಕಲ್ಯಾಣ’ – ಸರ್ಕಾರಿ ಮದ್ವೆಗೆ ಷರತ್ತುಗಳು ಅನ್ವಯ

    – ಸರ್ಕಾರದಿಂದಲೇ ಉಚಿತ ಸಾಮೂಹಿಕ ಮದುವೆ
    – ಪ್ರತಿ ವರ್ಷ 10 ಸಾವಿರ ಜೋಡಿಗೆ ವಿವಾಹ
    – ಎ ದರ್ಜೆಯ 100 ದೇವಾಲಯದಲ್ಲಿ ಕಾರ್ಯಕ್ರಮ

    ಬೆಂಗಳೂರು: ಯಡಿಯೂರಪ್ಪ ಸರ್ಕಾರದಿಂದ ಜೋಡಿಗಳಿಗೆ ಮದುವೆ ಭಾಗ್ಯವನ್ನು ಕಲ್ಪಿಸಿದೆ. ಮುಜರಾಯಿ ಇಲಾಖೆಯ ಎ ದರ್ಜೆ 100 ದೇವಾಲಯಗಳಲ್ಲಿ ಸಾಮೂಹಿಕ ವಿವಾಹ ನಡೆಸುವುದಾಗಿ ಸರ್ಕಾರ ಪ್ರಕಟಿಸಿದೆ.

    ಒಂದೊಂದು ದೇವಾಲಯದಲ್ಲಿ 100 ಜೋಡಿಗೆ ಮದುವೆ ಮಾಡಿಸುವ ಗುರಿಯನ್ನು ಹಾಕಲಾಗಿದ್ದು, ಪ್ರತಿ ವರ್ಷ 10 ಸಾವಿರ ಜೋಡಿಗೆ ವಿವಾಹ ನಡೆಸಲು ಚಿಂತನೆ ನಡೆದಿದೆ. ಜಾತಿಭೇದವಿಲ್ಲದೇ ಎಲ್ಲಾ ವರ್ಗದ ಬಡವರಿಗಾಗಿ ಯೋಜನೆ ರೂಪಿಸಲಾಗಿದ್ದು ಹಿಂದೂ ಸಂಪ್ರದಾಯದಂತೆ ವಿವಾಹ ನಡೆಯಲಿದೆ.

    ಪ್ರತಿ ಜೋಡಿಗೆ ವಿವಾಹಕ್ಕೆ 55 ಸಾವಿರ ಖರ್ಚಿನ ಅಂದಾಜು ಮಾಡಲಾಗಿದ್ದು ಯೋಜನೆಗೆ ಪ್ರತಿ ವರ್ಷ 25-30 ಕೋಟಿ ವೆಚ್ಚ ಮಾಡಲಾಗುತ್ತದೆ. ವಧು-ವರರಿಗೆ ಸರ್ಕಾರದಿಂದಲೇ ವಸ್ತ್ರ, ಮಾಂಗಲ್ಯ ನೀಡಲಾಗುತ್ತದೆ.

    ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಈ ಸಂಬಂಧ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಸರ್ಕಾರಿ ಮದುವೆಯ ವಿವರ ನೀಡಿದ್ದಾರೆ. ಮುಂದಿನ ವರ್ಷದಿಂದ ಸರ್ಕಾರದಿಂದಲೇ ಸಾಮೂಹಿಕ ಮದುವೆ ಮಾಡುತ್ತೇವೆ. ಎ ದರ್ಜೆಯ 90-100 ದೇವಾಲಯಗಳಲ್ಲಿ ಸಾಮೂಹಿಕ ಮದುವೆ ನಡೆಯಲಿದ್ದು, ಮೊದಲ ಸಾಮೂಹಿಕ ಮದುವೆ ಏಪ್ರಿಲ್ 26 ಮತ್ತು ಮೇ 24 ರಂದು ನಡೆಯಲಿದೆ ಎಂದು ತಿಳಿಸಿದರು.

    ಷರತ್ತುಗಳು ಏನು?
    30 ದಿನಗಳ ಮೊದಲು ನೋಂದಣಿ ಮಾಡಿಕೊಳ್ಳಬೇಕು ಮತ್ತು ವಧು-ವರರ ಪೋಷಕರು ಮದುವೆಯಲ್ಲಿ ಭಾಗವಹಿಸಬೇಕು. ಪೋಷಕರು ವಧು-ವರರ ದಾಖಲೆಯನ್ನು ನೀಡಬೇಕಾಗುತ್ತದೆ. ಪರೋಕ್ಷವಾಗಿ ಪ್ರೀತಿಸಿ ಮದುವೆ ಆಗುವ ಮಂದಿಗೆ ಅವಕಾಶವಿಲ್ಲ. ಎರಡನೇ ಮದುವೆಗೆ ಅವಕಾಶ ಇಲ್ಲ. ಕಡ್ಡಾಯವಾಗಿ ವರನಿಗೆ 21, ವಧುವಿಗೆ 18 ವರ್ಷ ಆಗಿರಲೇಬೇಕು. ಸ್ಥಳದಲ್ಲೇ ನೋಂದಣಿ ಪ್ರಕ್ರಿಯೆ ನಡೆಯುತ್ತದೆ.

    ಶಿಶು ಕಲ್ಯಾಣ ಇಲಾಖೆಯಿಂದ ಪ್ರೊತ್ಸಾಹ ಧನ ನೀಡಲಾಗುತ್ತದೆ. 40 ಸಾವಿರ ವೆಚ್ಚದಲ್ಲಿ 8 ಗ್ರಾಂ ಚಿನ್ನದ ತಾಳಿ ವರನಿಗೆ ವಸ್ತ್ರಕ್ಕಾಗಿ 5 ಸಾವಿರ ರೂ., ವಧುವಿಗೆ ಸೀರೆಗಾಗಿ 10 ಸಾವಿರ ರೂ. ನೀಡಲಾಗುತ್ತದೆ. ಹಣವನ್ನು ಮದುವೆಯ ನಂತರ ಬ್ಯಾಂಕ್ ಖಾತೆ ಜಮೆ ಮಾಡಲಾಗುತ್ತದೆ.

    ವರ್ಷಕ್ಕೆ ಒಂದು ಸಾವಿರ ಸಾಮೂಹಿಕ ವಿವಾಹ ಮಾಡುವ ಯೋಚನೆಯನ್ನು ಸರ್ಕಾರ ರೂಪಿಸಿದ್ದು ತಂದೆ ತಾಯಿ ಒಪ್ಪಿದರೆ ಅಂತರ್ಜಾತಿ ವಿವಾಹಕ್ಕೆ ಅನುಮತಿ ನೀಡಲಾಗುತ್ತದೆ. ವಿವಾಹಕ್ಕೆ ಸೂಕ್ತ ದಾಖಲೆಗಳು ಸಲ್ಲಿಕೆ ಕಡ್ಡಾಯವಾಗಿದ್ದು ಕೊಲ್ಲೂರು ಮೂಕಾಂಬಿಕೆ, ಬನಶಂಕರಿ ದೇವಾಲಯ, ಮೈಸೂರಿನ ಚಾಮುಂಡಿ, ಕುಕ್ಕೆ ಸುಬ್ರಮಣ್ಯ ಸೇರಿದಂತೆ ಎ ವಲಯದ ದೇವಾಲಯಗಳನ್ನು ಸಾಮೂಹಿಕ ವಿವಾಹಕ್ಕೆ ಆಯ್ಕೆ ಮಾಡಲಾಗಿದೆ ಎಂದು ಶ್ರೀನಿವಾಸ್ ಪ್ರಸಾದ್ ತಿಳಿಸಿದರು.

  • ಡಿಕೆಶಿಗೆ ಜಾಮೀನು- ಉಪಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರಲ್ಲ: ಪೂಜಾರಿ

    ಡಿಕೆಶಿಗೆ ಜಾಮೀನು- ಉಪಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರಲ್ಲ: ಪೂಜಾರಿ

    ಉಡುಪಿ: ಮಾಜಿ ಸಚಿವ ಡಿಕೆ ಶಿವಕುಮಾರ್ ಅವರಿಗೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಮೀನು ಲಭಿಸಿದ್ದು, ಆದರೆ ಅವರಿಗೆ ಜಾಮೀನು ಲಭಿಸುವುದರಿಂದ ಉಪಚುನಾವಣಾ ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದು ಮುಜುರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

    ಉಡುಪಿಯಲ್ಲಿ ಮಾತನಾಡಿದ ಅವರು, ನೂರು ವರ್ಷಕ್ಕೂ ಮೀರಿದ ಇತಿಹಾಸವಿರುವ ಕಾಂಗ್ರೆಸ್ ಪಕ್ಷ ತನ್ನ ವಿಚಾರಧಾರೆಯನ್ನು ಮೀರಿ ವರ್ತಿಸುತ್ತಿದೆ. ಬಿಜೆಪಿ ಪಕ್ಷವು ಗಾಂಧಿ ಪಥದಲ್ಲಿದ್ದು, ಕಾಂಗ್ರೆಸ್ ಜವಾಬ್ದಾರಿ ರಹಿತ ನಡೆವಳಿಕೆ ತೋರಿಸುತ್ತಿದೆ ಎಂದರು.

    ಕಾಂಗ್ರೆಸ್ ಪಕ್ಷದ ಡಿಕೆ ಶಿವಕುಮಾರ್ ಬಿಡುಗಡೆಯಾದ ವಿಚಾರಕ್ಕೆ ನಡೆದ ವಿಜಯೋತ್ಸವಕ್ಕೆ ಟೀಕೆ ಮಾಡಿದ ಅವರು, ಕಾಂಗ್ರೆಸ್ ಪಕ್ಷ ಗಾಂಧಿಯನ್ನು ಮರೆತ್ತಿದ್ದು, ಪಕ್ಷ ಸದ್ಯ ತನ್ನ ಕೊನೆ ಅವಸ್ಥೆಯನ್ನು ತಲುಪಿದೆ. ಡಿಕೆಶಿ ಅವರ ಪ್ರಕರಣ ಇಡಿ ಸಂಬಂಧಿಸಿದ್ದು, ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕಾರ್ಯವನ್ನು ಕಾಂಗ್ರೆಸ್ ಮಾಡುತ್ತಿದೆ. ಆದರೆ ಯಾವುದೇ ಕಾರಣಕ್ಕೂ ಡಿಕೆಶಿ ಪ್ರಕರಣ ಸೇರಿದಂತೆ ಅವರಿಗೆ ಜಾಮೀನು ಲಭಿಸಿರುವುದು ಉಪಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲ. ಬಿಜೆಪಿ ಚುನಾವಣೆಯಲ್ಲಿ ಖಂಡಿತ ಗೆಲುವು ಪಡೆಯಲಿದೆ ಎಂದರು.

    ನೆರೆ ಪರಿಹಾರದಿಂದ ರಾಜ್ಯ ಸರ್ಕಾರ ಸ್ವಲ್ಪವೂ ಹಿಂದೆ ಸರಿದಿಲ್ಲ. ಉಪ ಚುನಾವಣೆ ರಾಜಕೀಯ ವಿಚಾರ. ನೆರೆ ಪರಿಹಾರ ಕಾರ್ಯಕ್ಕೆ ಉಪ ಚುನಾವಣೆಯಿಂದ ಅಡ್ಡಿಯಾಗಲ್ಲ. 20 ಕ್ಕೂ ಹೆಚ್ಚು ಜಿಲ್ಲೆಯಲ್ಲಿ ಪ್ರವಾಹ ಮೊದಲೇ ಬಂದಿತ್ತು. ಈಗ ಮತ್ತೆ ಮೂರು ದಿನಗಳಿಂದ ಮಳೆಯಾಗುತ್ತಿದೆ. ಅನುದಾನ ಬಿಡುಗಡೆ ಮಾಡಲು ಸರ್ಕಾರ ಬದ್ಧವಾಗಿದೆ. ಉಸ್ತುವಾರಿ ಮಂತ್ರಿಗಳು, ಶಾಸಕರು ಸ್ವತ: ಸಿಎಂ ಕಾರ್ಯೋನ್ಮುಖರಾಗಿದ್ದಾರೆ ಪ್ರವಾಹ ಸಂತ್ರಸ್ಥರಿಗೆ ಭಯ ಬೇಡ ಎಂದಿದ್ದಾರೆ. ಎರಡೂ ರಾಜ್ಯದಲ್ಲಿ ಬಿಜೆಪಿ ಸರಕಾರ ಮಾಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ಒಂದು ರಾಷ್ಟ್ರ ಒಂದು ಸಂವಿಧಾನ ಅಭಿಯಾನ – ಕಣವಿಯನ್ನು ಭೇಟಿ ಮಾಡಿದ ಕೋಟಾ

    ಒಂದು ರಾಷ್ಟ್ರ ಒಂದು ಸಂವಿಧಾನ ಅಭಿಯಾನ – ಕಣವಿಯನ್ನು ಭೇಟಿ ಮಾಡಿದ ಕೋಟಾ

    – ಸಿದ್ದರಾಮಯ್ಯ ಟೀಕೆ ಮಾಡುವುದು ಸಹಜ

    ಧಾರವಾಡ: ಒಂದು ರಾಷ್ಟ್ರ ಒಂದು ಸಂವಿಧಾನ ಅಭಿಯಾನ ಹಿನ್ನೆಲೆ ಮೀನುಗಾರಿಕೆ, ಬಂದರು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹಿರಿಯ ಕವಿ ನಾಡೋಜ ಚನ್ನವೀರ ಕಣವಿ ಅವರ ನಿವಾಸಕ್ಕೆ ಭೇಟಿ ನೀಡಿ ಮಾತನಾಡಿದ್ದಾರೆ.

    ಸಾಹಿತಿಗಳ ಭೇಟಿಯಾಗಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಶ್ಮೀರದಲ್ಲಿ 370 ಕಾಯಿದೆ ರದ್ದು ಮಾಡಿದ ಹಿನ್ನೆಲೆ ನಾವೆಲ್ಲ ರಾಜ್ಯದಲ್ಲಿ ಪ್ರವಾಸ ಮಾಡುತ್ತಿದ್ದೇವೆ. ಕಾಯ್ದೆ ರದ್ಧತಿ ಹಾಗೂ ಒಂದು ರಾಷ್ಟ್ರ ಒಂದು ಧ್ವಜದ ಬಗ್ಗೆ ಜನರಿಗೆ ತಿಳಿವಳಿಕೆ ನೀಡಲಿದ್ದೇವೆ ಎಂದು ತಿಳಿಸಿದರು.

    ಈ ವೇಳೆ ಹಿಂದಿ ವಿಚಾರದಲ್ಲಿ ಅಮಿತ್ ಶಾ ಅವರ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಆ ವಿಚಾರದ ಬಗ್ಗೆ ಅಮಿತ್ ಶಾ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ. ಒಂದು ಭಾಷೆಯಾಗಿ ಹಿಂದೆ ಕಲಿಯಬೇಕು ಎಂದಿದ್ದಾರೆ ಹೀಗಾಗಿ ಆ ಬಗ್ಗೆ ಗೊಂದಲ ಬೇಡ. ನಮ್ಮ ನಿಲುವಿನಲ್ಲಿ ಕನ್ನಡಕ್ಕೆ ಪ್ರಥಮ ಆದ್ಯತೆ ಇರಲಿದೆ ಎಂದು ಸ್ಪಷ್ಟಪಡಿಸಿದರು.

    ಉಡುಪಿ ಉಸ್ತುವಾರಿ ಕೈ ತಪ್ಪಿದೆ ಎನ್ನುವ ವಿಚಾರದ ಬಗ್ಗೆ ಮಾತನಾಡಿದ ಕೋಟಾ, ಶಾಸಕರೆಲ್ಲ ಹೋಗಿ ಸಿಎಂ ಭೇಟಿ ಮಾಡಿದ್ದಾರೆ. ಸ್ವಾಭಾವಿಕವಾಗಿ ತಮ್ಮ ಕ್ಷೇತ್ರದ ಬಗ್ಗೆ ಮಾತನಾಡಲು ಭೇಟಿ ಮಾಡುವುದು ರೂಢಿ. ಉಸ್ತುವಾರಿ ವಿಚಾರದ ಬಗ್ಗೆ ಏನು ಮಾಡಿದ್ದಾರೆ ಎಂದು ನನಗೆ ಗೊತ್ತಿಲ್ಲ. ಇವತ್ತು ಹೋದ ನಂತರ ಎಲ್ಲವನ್ನು ನೋಡಿ ಸರಿ ಮಾಡುತ್ತೇವೆ. ದೊಡ್ಡ ಜಿಲ್ಲೆಯಾಗಿರುವ ಹಿನ್ನೆಲೆ ನನಗೆ ಒಂದೇ ಜಿಲ್ಲೆ ಕೊಟ್ಟಿರಬಹುದು. ಆ ಜಿಲ್ಲೆಯ ಶಾಸಕನಾದ ಕಾರಣ ದಕ್ಷಿಣ ಕನ್ನಡ ಕೊಟ್ಟಿದ್ದಾರೆ. ಕಾರ್ಯಕರ್ತನಾಗಿ ನನ್ನ ಕೆಲಸ ನಾನು ಮಾಡುವೆ ಎಂದು ಹೇಳಿದರು.

    ಸದ್ಯ 17 ಜನರ ಸಂಪುಟ ಆಗಿದೆ ಮುಂದೆ ವಿಸ್ತರಣೆಯಾದಾಗ ಮತ್ತೆ ಕೆಲವರಿಗೆ ಆದ್ಯತೆ ಕೊಡುತ್ತಾರೆ. ಸಿದ್ದರಾಮಯ್ಯ ಆಡಳಿತ ಪಕ್ಷದ ಲೋಪದೋಷ ನೋಡಿ ಟೀಕೆ ಮಾಡುವುದು ಸಹಜ. ಅವರೇನು ಹೊಗಳುತ್ತಾರೆ ಎಂದು ನಾವು ಭಾವಿಸಿಲ್ಲ. ಅವರ ಟೀಕೆಗಳಿಗೆ ತಕ್ಕ ಉತ್ತರ ಕೊಡುವ ನಿಟ್ಟಿನಲ್ಲಿ ನಾವು ಕೆಲಸ ಮಾಡಿ ತೋರಿಸುತ್ತೇವೆ. ಡಿಕೆಶಿ ಇಡಿ ವಿಚಾರ ಬಿಜೆಪಿಗೆ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ತಿಳಿಸಿದರು.

  • ಯೂತ್‍ಗೆ ಏನಾದ್ರು ಮಾಡಿ ಅಪ್ಪಾ- ಸಚಿವ ಕೋಟ ಮಕ್ಕಳಿಂದ ಫಸ್ಟ್ ಬೇಡಿಕೆ

    ಯೂತ್‍ಗೆ ಏನಾದ್ರು ಮಾಡಿ ಅಪ್ಪಾ- ಸಚಿವ ಕೋಟ ಮಕ್ಕಳಿಂದ ಫಸ್ಟ್ ಬೇಡಿಕೆ

    ಉಡುಪಿ: ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿಗೆ ಮಿನಿಸ್ಟರ್ ಪಟ್ಟ ಒಲಿದಿದ್ದು, ಇಂದು ಬೆಳಗ್ಗೆ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದರ ಬೆನ್ನಲ್ಲೆ ಮಿನಿಸ್ಟರ್ ಕೋಟ ಅವರ ಮಕ್ಕಳು ಅಪ್ಪನಲ್ಲಿ ಮೊದಲ ದಿನವೇ ತಮ್ಮ ಮೊದಲ ಬೇಡಿಕೆ ಒಟ್ಟಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿ ಪತ್ನಿ ಶಾಂತ, ರಾತ್ರಿ 11.30ಕ್ಕೆ ಸಿಎಂ ಯಡಿಯೂರಪ್ಪ ಅವರು ಫೋನ್ ಮಾಡಿದ್ದರು. ಆಗ ನಮಗೆ ವಿಷಯ ಗೊತ್ತಾಗಿದೆ. ಕಳೆದ ಬಾರಿ ಮಾಡಿದಷ್ಟೇ ಕೆಲಸ ಈ ಬಾರಿಯೂ ಮಾಡಬೇಕು. ಕಷ್ಟದಲ್ಲಿರುವ ಜನರ ಸಮಸ್ಯೆ ಬಗೆಹರಿಸಿ, ಜನರ ಬೇಡಿಕೆ ಈಡೇರಿಸಲಿ ಎಂದು ಹಾರೈಸಿದರು.

    ಮಕ್ಕಳಾದ ಶ್ರುತಿ ಮತ್ತು ಸ್ವಾತಿ ಖುಷಿ ವ್ಯಕ್ತಪಡಿಸಿದ್ದು, ಅಪ್ಪ ಯೂತ್‍ಗೆ ಏನಾದ್ರು ಮಾಡಬೇಕು. ಯುವಕರ ಶಿಕ್ಷಣಕ್ಕೆ ಸಹಾಯ ಆಗುವ ಕೆಲಸ ಮಾಡಲಿ. ಎಜುಕೇಶನ್‍ಗೆ ಸಂಬಂಧಪಟ್ಟ ಹಲವು ಕೆಲಸ ಮಾಡಲಿ ಎಂದು ಅಪ್ಪನಲ್ಲಿ ಬೇಡಿಕೆ ಇಟ್ಟಿದ್ದಾರೆ.

  • ಸರ್ದಾರ್ ವಲ್ಲಭಾಬಾಯಿ ಪಟೇಲರಂತೆ ಅಮಿತ್ ಶಾ ಕೂಡ ಉಕ್ಕಿನ ಮನುಷ್ಯ: ಕೋಟ

    ಸರ್ದಾರ್ ವಲ್ಲಭಾಬಾಯಿ ಪಟೇಲರಂತೆ ಅಮಿತ್ ಶಾ ಕೂಡ ಉಕ್ಕಿನ ಮನುಷ್ಯ: ಕೋಟ

    ಉಡುಪಿ: ಜಮ್ಮು-ಕಾಶ್ಮೀರ ವಿಚಾರದಲ್ಲಿ ಕೇಂದ್ರ ಸರ್ಕಾರದ ಈ ಐತಿಹಾಸಿಕ ನಿರ್ಧಾರವನ್ನು ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಸ್ವಾಗತಿಸಿದರು.

    ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಐತಿಹಾಸಿಕ ನಿರ್ಧಾರವನ್ನು ಲೋಕಸಭೆಯಲ್ಲಿ ಮಂಡಿಸಿದ ಅಮಿತ್ ಶಾ ಅವರು ಸರ್ದಾರ್ ವಲ್ಲಭಾಬಾಯಿ ಪಟೇಲರಂತೆ ಉಕ್ಕಿನ ಮನುಷ್ಯರಾಗಿದ್ದಾರೆ. ಭಾರತದ ಜನ ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡಿದ್ದು ಇಂದು ಸಾರ್ಥಕವಾಯಿತು ಎಂದು ಹೇಳಿದರು.

    ಕಾಶ್ಮೀರಕ್ಕೆ ನೀಡಿದ್ದ 370 ನೇ ವಿಧಿಯ ಮೂಲಕ ಕಾಶ್ಮೀರದ ಭೂಮಿಯನ್ನು ಬೇರೆ ಯಾವ ಭಾರತದ ಪ್ರಜೆಯೂ ಕೊಂಡುಕೊಳ್ಳಲು ಆಗುವುದಿಲ್ಲ. ಇದರ ಜೊತೆಗೆ ಭಾರತದ ಸಂವಿಧಾನದ ಯಾವುದೇ ಕಾನೂನುಗಳು ಕಾಶ್ಮೀರಕ್ಕೆ ಅನ್ವಯವಾಗುತ್ತಿರಲಿಲ್ಲ. ಈ ಎಲ್ಲಾ ವಿಚಾರದಿಂದ ಭಾರತದಿಂದ ಕಾಶ್ಮೀರ ಬೇರ್ಪಟ್ಟು ಹೋಗುತ್ತದೆ ಎನ್ನು ಆತಂಕ ಎಲ್ಲರಲ್ಲೂ ಎದುರಾಗಿತ್ತು.

    ಆದರೆ ಮೋದಿ ಮತ್ತು ಅಮಿತ್ ಶಾ ಇಂದು ಆ ವಿಧಿಯನ್ನು ತೆಗೆದು ಹಾಕುವ ಮೂಲಕ ಆತಂಕವನ್ನು ದೂರ ಮಾಡಿದ್ದಾರೆ. ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಪ್ರತಿಯೊಬ್ಬ ರಾಷ್ಟ್ರಭಕ್ತನೂ ಪಕ್ಷ ಬೇಧ ಮರೆತು ಬೆಂಬಲಿಸಬೇಕು. ನಾನು ಭಾರತೀಯ ಎಂದು ಹೇಳಿಕೊಳ್ಳಲು ಇಂದು ಹೆಮ್ಮೆಯಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದರು.

  • ರೇವಣ್ಣ ನಿಂಬೆಹಣ್ಣು ಹಿಡಿದು ದೇವ್ರ ದರ್ಶನ ಮಾಡಿದ್ರೆ ಸರ್ಕಾರ ಉಳಿಯಲ್ಲ – ಕೋಟ

    ರೇವಣ್ಣ ನಿಂಬೆಹಣ್ಣು ಹಿಡಿದು ದೇವ್ರ ದರ್ಶನ ಮಾಡಿದ್ರೆ ಸರ್ಕಾರ ಉಳಿಯಲ್ಲ – ಕೋಟ

    – ಸಿಎಂ ನಾಳೆ ವಿದಾಯ ಭಾಷಣ ಮಾಡಲಿ

    ಉಡುಪಿ: ಸರ್ಕಾರದಲ್ಲಿದ್ದು ಎಲ್ಲಾ ತಪ್ಪುಗಳನ್ನು ಮಾಡಿದ್ದು ಸಚಿವ ಹೆಚ್.ಡಿ.ರೇವಣ್ಣ. ಇದೀಗ ಸರ್ಕಾರವನ್ನು ದೇವರು ರಕ್ಷಿಸಬೇಕು ಅಂದರೆ ಆಗಲ್ಲ ಎಂದು ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

    ರೇವಣ್ಣ ಅವರ ಟೆಂಪಲ್ ರನ್ ಅನ್ನು ಟೀಕಿಸಿದ ಕೋಟ, ಸರ್ಕಾರದಲ್ಲಿ ದೂರುಗಳೆಲ್ಲಾ ಇರುವುದೇ ರೇವಣ್ಣ ಅವರ ಮೇಲೆ. ಶಾಸಕರ ಅತೃಪ್ತಿಗೆ, ಸರ್ಕಾರ ಬಿದ್ದು ಹೋಗುವುದಕ್ಕೆ ರೇವಣ್ಣ ಕಾರಣ. ಈಗ ಎಡ, ಬಲಗೈಯಲ್ಲಿ ನಾಲ್ಕು, ನಾಲ್ಕೂ ನಿಂಬೆಹಣ್ಣು ಹಿಡಿದುಕೊಂಡು ದೇವರ ದರ್ಶನ ಮಾಡಿದರೆ ದೇವರು ಕೂಡಾ ಅವರ ರಕ್ಷಣೆಗೆ ಬರುವುದಿಲ್ಲ ಎಂದು ವ್ಯಂಗ್ಯವಾಡಿದರು.

    ಅತೃಪ್ತ ಶಾಸಕರು ಸರ್ಕಾರದ ಒಟ್ಟು ನೀತಿಯನ್ನು ವಿರೋಧಿಸಿದ್ದಾರೆ. ಇದೇ ಸರ್ಕಾರ ಮುಂದುವರಿದರೆ ಜನರ ವಿಶ್ವಾಸ ಕಳೆದುಕೊಳ್ಳಬೇಕಾಗುತ್ತದೆ ಎಂದು ಅದಕ್ಕೂ ಮೊದಲು ಸರ್ಕಾರದ ವಿಶ್ವಾಸ ಕಳೆದುಕೊಂಡಿದ್ದೇವೆ ಎಂಬುದನ್ನು ಪ್ರಚಾರ ಮಾಡಿದ್ದಾರೆ ಎಂದರು. ಇನ್ನು ಸರ್ಕಾರ ಬಹುಮತ ಕಳೆದು ಯಡಿಯೂರಪ್ಪನವರು ಮುಖ್ಯಮಂತ್ರಿ ಆಗುವ ಎಲ್ಲಾ ಲಕ್ಷಣ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಸರ್ಕಾರ ಬಹುಮತ ಕಳೆದುಕೊಂಡಿದೆ. ಇದು ಸರ್ಕಾರ ನಡೆಸುವವರಿಗೂ ಅರ್ಥವಾಗಿದೆ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದ್ದರೆ ಮುಖ್ಯಮಂತ್ರಿ ನಾಳೆ ರಾಜೀನಾಮೆ ಕೊಡಲಿ. ವ್ಯವಸ್ಥೆಯ ದೃಷ್ಟಿಯಿಂದ ನಾಳೆ ಸಿಎಂ ವಿದಾಯ ಭಾಷಣ ಮಾಡುವುದೇ ಒಳ್ಳೆಯದು. ರಮೇಶ್ ಕುಮಾರ್ ಆದರ್ಶ ರಾಜಕಾರಣ, ರಾಜಧರ್ಮವನ್ನು ನಮಗೆಲ್ಲಾ ಹೇಳಿಕೊಟ್ಟವರು. ನಾಳೆ ಎಲ್ಲವನ್ನೂ ಮುಗಿಸುತ್ತೇನೆ ಎಂದು ಅವರೇ ಭರವಸೆ ನೀಡಿದ್ದಾರೆ. ಸ್ಪೀಕರ್ ರಾಜಧರ್ಮವನ್ನು ಪಾಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.

  • ರಾಷ್ಟ್ರಪತಿ ಆಡಳಿತ ಬಂದ್ರೆ ಸರ್ಕಾರದ ಮೊಂಡುತನವೇ ಕಾರಣ – ಕೋಟ

    ರಾಷ್ಟ್ರಪತಿ ಆಡಳಿತ ಬಂದ್ರೆ ಸರ್ಕಾರದ ಮೊಂಡುತನವೇ ಕಾರಣ – ಕೋಟ

    ಬೆಂಗಳೂರು: ರಾಜ್ಯದಲ್ಲಿ ರಾಷ್ಟ್ರಪತಿ ಅವರ ಆಡಳಿತ ಬಂದರೆ ಅದಕ್ಕೆ ಈ ಜಂಟಿ ಪಕ್ಷಗಳೇ ಕಾರಣ ಆಗುತ್ತವೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದ್ದಾರೆ.

    ಇಂದು ಬೆಳಗ್ಗೆ ಮಾಜಿ ಸಿಎಂ ಯಡಿಯೂರಪ್ಪ ಅವರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರು ಕೇಂದ್ರಕ್ಕೆ ವರದಿ ಕೊಟ್ಟಿದ್ದಾರೆ. ಮೈತ್ರಿ ಪಕ್ಷಗಳು ಸುಪ್ರೀಂಕೋರ್ಟ್ ಗೆ ಹೋದರೂ ಪ್ರಯೋಜನ ಇಲ್ಲ ಎಂದು ಹೇಳಿದರು.

    ಈ ಹಿಂದೆ ರಾಜ್ಯಪಾಲರು ಯಡಿಯೂರಪ್ಪನವರಿಗೆ ಬಹುಮತ ಸಾಬೀತು ಮಾಡಲು ಸಮಯ ಕೊಟ್ಟಿದ್ದರು. ಅಂದು ಬಿಎಸ್‍ವೈ ರಾಜ್ಯಪಾಲರು ನಿಗದಿ ಮಾಡಿದ್ದ ಸಮಯದಲ್ಲೇ ನಿಯಮವನ್ನು ಪಾಲಿಸಿದ್ದರು. ಆದರೆ ಈ ಸರ್ಕಾರ ರಾಜ್ಯಪಾಲರ ಸಂದೇಶಗಳನ್ನು ಗೌರವಿಸಿಲ್ಲ. ಈ ಸರ್ಕಾರಕ್ಕೆ ಬಹುಮತ ಇಲ್ಲ ಅನ್ನೋದು ಸ್ಪಷ್ಟವಾಗಿದೆ ಎಂದು ಕಿಡಿಕಾರಿದರು.

    ಸೋಮವಾರ ಈ ಸರ್ಕಾರ ಬಹುಮತ ಕಳೆದುಕೊಳ್ಳುತ್ತದೆ. ಮತ್ತೊಮ್ಮೆ ಚುನಾವಣೆಗೆ ಹೋಗಲು ಯಾರಿಗೂ ಇಷ್ಟ ಇಲ್ಲ. ರಾಜ್ಯದ ರಾಜಕೀಯ ಬಿಕ್ಕಟ್ಟು ನೋಡಿ ರಾಷ್ಟ್ರಪತಿಯವರೇ ಮಧ್ಯ ಪ್ರವೇಶ ಮಾಡಬಹುದು. ರಾಷ್ಟ್ರಪತಿ ಆಡಳಿತ ಬಂದರೆ ಅದು ಈ ಸರ್ಕಾರದ ಮೊಂಡುತನದಿಂದಲೇ ಬರಬಹುದು ಎಂದು ಹೇಳಿದರು.

  • ಬಹುಮತ ಕಳೆದುಕೊಂಡ ಸರ್ಕಾರದ ಮಂತ್ರಿಯಿಂದ ಅಕ್ರಮವಾಗಿದೆ – ಕೋಟ ಶ್ರೀನಿವಾಸ ಪೂಜಾರಿ

    ಬಹುಮತ ಕಳೆದುಕೊಂಡ ಸರ್ಕಾರದ ಮಂತ್ರಿಯಿಂದ ಅಕ್ರಮವಾಗಿದೆ – ಕೋಟ ಶ್ರೀನಿವಾಸ ಪೂಜಾರಿ

    ಉಡುಪಿ: ಬಹುಮತ ಕಳೆದುಕೊಂಡ ಸರ್ಕಾರದ ಮಂತ್ರಿಯಿಂದ ಅಕ್ರಮವಾಗಿದೆ. ಯಾವುದೇ ನೆಪಗಳನ್ನು ಹೇಳದೆ ಸಿಎಂ ತಕ್ಷಣ ರಾಜೀನಾಮೆ ನೀಡಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ವ್ಯಾಪ್ತಿಯನ್ನು ಸ್ಪೀಕರ್ ಪ್ರಶ್ನೆ ಮಾಡಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ವಿಶ್ವಾಸಮತ ಸಾಬೀತು ಮಾಡುವ ಸಂದರ್ಭದಲ್ಲಿ ವಿಪಕ್ಷವಾಗಿ ಅವರು ನಡುರಾತ್ರಿ ಕೋರ್ಟ್ ಮೆಟ್ಟಿಲೇರಿದರು. ಅಂದು 48 ಗಂಟೆಯಲ್ಲಿ ಸಾಬೀತು ಮಾಡುವ ನಿರ್ದೇಶನ ಪಡೆದಿದರು. ಅಂದು ನೀವು ಸುಪ್ರೀಂ ಆದೇಶ ಪಾಲನೆ ಮಾಡಿಲ್ವಾ? ಈಗ ಏಕೆ ಸುಪ್ರೀಂ ಮದ್ಯ ಪ್ರವೇಶಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತೀರಾ ಎಂದು ಪ್ರಶ್ನಿಸಿದರು.

    ಸರ್ಕಾರ ಶಾಸಕರ ಮೇಲೆ ಎಸಿಬಿ ಪ್ರಯೋಗ ಮಾಡಿ ಒತ್ತಡ ಹಾಕಲು ಪ್ರಯತ್ನ ಮಾಡುತ್ತಿದೆ. ಎಸಿಬಿ ಮುಖ್ಯಸ್ಥನಾಗಿ ನಿಂಬಾಳ್ಕರ್ ಇದ್ದಾರೆ, ಅವರನ್ನು ಬಳಸಿ ರಾಜೀನಾಮೆ ಕೊಟ್ಟ ಶಾಸಕರನ್ನು ಬಗ್ಗುಬಡಿಯಲು ಎಸಿಬಿ ಬಳಸುವ ಆತಂಕ ಇದೆ. ರಾಜ್ಯದಲ್ಲಿ ಉಂಡು ಹೋದ ಕೊಂಡೂ ಹೋದ ಸರ್ಕಾರ ಇದೆ. ರೇವಣ್ಣ ಹಸ್ತಕ್ಷೇಪ ಮಾಡಿ ಸಾವಿರಾರು ಕೋಟಿ ದಂಧೆ ಮಾಡಿದ್ದಾರೆ. ಸ್ವತಃ ಶಾಸಕ ಮುನಿರತ್ನ ಅವರೇ ಆರೋಪಿಸುತ್ತಿದ್ದಾರೆ.

    ಲೋಕೋಪಯೋಗಿ ಮಂತ್ರಿ 800 ಎಂಜಿನಿಯರ್‍ ಗಳ ವರ್ಗಾವಣೆ ಮಾಡಿದ್ದಾರೆ. ಬಹುಮತ ಕಳೆದುಕೊಂಡ ಸರ್ಕಾರದ ಮಂತ್ರಿಯಿಂದ ಅಕ್ರಮವಾಗಿದೆ. ರೇವಣ್ಣ ನೂರಾರು ಕೋಟಿ ಕಮಿಷನ್ ಹೊಡೆದ ಸಂಶಯ ಇದೆ. ಪೊಲೀಸ್ ಇಲಾಖೆಯ ವರ್ಗಾವಣೆ ತಡೆಹಿಡಿಯಲಾಗಿದೆ. ಎಂಜಿನಿಯರ್‍ ಗಳ ವರ್ಗಾವಣೆಯನ್ನೂ ತಕ್ಷಣ ತಡೆಹಿಡಿಬೇಕು. ಈ ಬಗ್ಗೆ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್‍ ಗೆ ಕೋಟ ಒತ್ತಾಯ ಮಾಡಿದ್ದಾರೆ. ಡಿಕೆಶಿ ಎಷ್ಟೇ ಒತ್ತಡ ತಂದರೂ ಎಂಟಿಬಿ ಬದಲಾಗಲ್ಲ ಅನ್ನೋ ವಿಶ್ವಾಸ ಇದೆ ಎಂದು ಶ್ರೀನಿವಾಸ್ ಪೂಜಾರಿ ಹೇಳಿದರು.

    ಸಾ.ರಾ ಮಹೇಶ್ ಮತ್ತು ಈಶ್ವರಪ್ಪ ಭೇಟಿ ಕೇವಲ ಆಕಸ್ಮಿಕ. ನಾವು ರಾತ್ರಿ ಕಂಡ ಬಾವಿಗೆ ಹಗಲು ಹೋಗಿ ಬೀಳ್ತೀವಾ. ಸಿದ್ದರಾಮಯ್ಯಗೆ ವಿರೋಧ ಪಕ್ಷ ನಾಯಕನಾಗೋದೇ ಉತ್ತಮ ಅಂತನಿಸಿದೆ. ಕಾಂಗ್ರೆಸ್ ಉಳಿಯಲು ಜೆಡಿಎಸ್‍ಗೆ ನೀಡಿದ ಬೆಂಬಲ ವಾಪಸ್ ಪಡೆಯಲೇಬೇಕು. ಬುಧವಾರ ವಿಶ್ವಾಸಮತ ಸಾಬೀತು ಮಾಡೋದು ಅಸಾಧ್ಯ. ರಾಜ್ಯ ಸರ್ಕಾರ ಬೀಳುವುದು ಖಚಿತ ಎಂದು ಭವಿಷ್ಯ ನುಡಿದರು.

  • ಜಿಂದಾಲ್ ಹೋರಾಟಗಾರರಿಗೆ ನೋಟಿಸ್ – ಕೋಟಾ ಶ್ರೀನಿವಾಸ ಪೂಜಾರಿ ಖಂಡನೆ

    ಜಿಂದಾಲ್ ಹೋರಾಟಗಾರರಿಗೆ ನೋಟಿಸ್ – ಕೋಟಾ ಶ್ರೀನಿವಾಸ ಪೂಜಾರಿ ಖಂಡನೆ

    ದಾವಣಗೆರೆ: ಜಿಂದಾಲ್ ಹೋರಾಟಗಾರರಿಗೆ ನೋಟಿಸ್ ನೀಡಿದ ವಿಚಾರವನ್ನು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ್ ಖಂಡಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ ಇದೇ ವಿಚಾರಕ್ಕೆ ಪಾದಯಾತ್ರೆ ಮಾಡಿದ್ದರು. ಅದಿರು ಕೊಳ್ಳೆ ಹೊಡೆಯುವುದನ್ನು ನಿಲ್ಲಿಸುತ್ತೇನೆ ಅಂದಿದ್ದರು. ಆದರೆ ಈಗ ಮೈತ್ರಿ ಸರ್ಕಾರ ಪುಡಿಗಾಸಿಗೆ ಭೂಮಿ ನೀಡಿದೆ. ಅದು ನಾಲ್ಕೈದು ಸಾವಿರ ಕೋಟಿ ಬೆಲೆ ಬಾಳುವ ಭೂಮಿಯಾಗಿದೆ. ಅದನ್ನ ನೂರಾರು ಕೋಟಿ ರೂ.ಗೆ ನೀಡಿದ್ದಾರೆ. ಆದರೂ ಸಿದ್ದರಾಮಯ್ಯ ಮೌನವಾಗಿದ್ದಾರೆ. ಇದಕ್ಕೆ ಸಿದ್ದರಾಮಯ್ಯ ಆಶೀರ್ವಾದ ಇದ್ದಂತಿದೆ. ಈ ಬಗ್ಗೆ ಕೂಡಲೇ ಸಿದ್ದರಾಮಯ್ಯ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

    ಸರ್ಕಾರ ಉಪಸಮಿತಿ ರಚಿಸಿ ನಾಟಕ ಮಾಡುತ್ತಿದೆ. ಜಿಂದಾಲ್ ಹೋರಾಟದಿಂದ ಬಿಜೆಪಿ ಹಿಂದೆ ಸರಿಯಲ್ಲ. ಇದನ್ನ ಅಧಿವೇಶನದಲ್ಲಿ ದೊಡ್ಡ ವಿಷಯವಾಗಿ ಚರ್ಚಿಸುತ್ತೇವೆ. ಒಂದಿಂಚು ಭೂಮಿಯನ್ನ ಜಿಂದಾಲ್ ಗೆ ನೀಡಲು ಬಿಡುವುದಿಲ್ಲ. ಇದರಲ್ಲಿ ಭಾರೀ ಪ್ರಮಾಣದ ಅಕ್ರಮ ಹಣದ ವ್ಯವಹಾರ ನಡೆದಿರುವ ಶಂಕೆ ಇದೆ. ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಪೂಜಾರಿ ಒತ್ತಾಯಿಸಿದ್ದಾರೆ.

    ಬಿಜೆಪಿ ಈಸ್ಟ್ ಇಂಡಿಯಾ ಕಂಪನಿ ಇದ್ದಂತೆ ಎಂದು ಮಾಜಿ ಎಂ ಸಿದ್ದರಾಮಯ್ಯ ಹೇಳಿಕೆಗೆ ಕಿಡಿಕಾರಿದ ಕೋಟಾ, ಸಿಎಂ ಗ್ರಾಮ ವಾಸ್ತವ್ಯದಿಂದ ಅಹಿಂದ ಕಾಣೆಯಾಗಿದೆ. ಅದನ್ನ ಸಿದ್ದರಾಮಯ್ಯ ಹುಡುಕುತ್ತಿದ್ದಾರೆ. ಸಿದ್ದರಾಮಯ್ಯಗೆ ತಮ್ಮ ತಪ್ಪಿನ ಅರಿವಾಗಿದೆ. ಹೀಗಾಗಿ ಈಸ್ಟ್ ಇಂಡಿಯಾ ಕಂಪನಿ ಅಂದಿದ್ದಾರೆ. ಈ ಬಗ್ಗೆ ಯೋಚನೆ ಮಾಡಿ. ನಿಮ್ಮ ತಪ್ಪು ನಿಮಗೆ ಅರಿವಾಗಲಿದೆ ಎಂದು ಹೇಳಿದ್ದಾರೆ.

    ಹೋರಾಟ ಮಾಡಿದವರಿಗೆ ನೋಟಿಸ್:
    ಜಿಂದಾಲ್ ಗೆ ಭೂಮಿ ಪರಭಾರೆ ವಿಚಾರಕ್ಕೆ ಸಂಬಂಧಿಸಿದಂತೆ ಜಿಂದಾಲ್ ವಿರುದ್ಧ ಹೋರಾಟ ಮಾಡಿದವರಿಗೆ ಕಾನೂನು ಸುವ್ಯವಸ್ಥೆ ಭಂಗ ಆರೋಪದಲ್ಲಿ ನೋಟಿಸ್ ನೀಡಲಾಗಿದೆ. ಜೂನ್ 15ರಂದು ವಾಟಾಳ್ ನಾಗರಾಜ್ ಜೊತೆ ಸೇರಿ, ಜಿಂದಾಲ್ ಮುಂದೆ ಪ್ರತಿಭಟನೆ ಮಾಡಲಾಗಿತ್ತು. ಹೀಗಾಗಿ ಸೆಕ್ಷನ್ 107 ಶಾಂತಿಭಂಗ ಆರೋಪದಡಿ ಸಂಡೂರು ತಹಶೀಲ್ದಾರರು 10 ಮಂದಿಗೆ ನೋಟಿಸ್ ನೀಡಿದ್ದಾರೆ.

    ತೋರಣಗಲ್ ಪೊಲೀಸರ ಶಿಫಾರಸು ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದ್ದು, ಯರಿಸ್ವಾಮಿ, ಯುಸೂಫ್, ವೆಂಕಟೇಶ, ಬಿ.ಸ್ವಾಮಿ. ಮಲ್ಲಿಕಾರ್ಜುನ, ಶಿವಕುಮಾರ್, ವೀರೇಶ್ ರಾಜ, ರವಿಕುಮಾರ್, ಬಿ.ಆರ್. ಕೃಷ್ಣ, ಸಂಡೂರು ಬಳ್ಳಾರಿ ಹೊಸಪೇಟೆ ಭಾಗದ ಹೋರಾಟಗಾರಿಗೆ ನೋಟಿಸ್ ನೀಡಲಾಗಿದೆ. 3 ಲಕ್ಷದ ಬಾಂಡ್ ನೀಡಬೇಕು, ಸಮಾವೇಶ ರಸ್ತೆ ತಡೆ ಮಾಡಲ್ಲವೆಂದು ಮುಚ್ಚಳಿಕೆ ಬರೆದು ಕೊಡಬೇಕು. ಒಂದು ವರ್ಷಕ್ಕೆ ಅನ್ವಯವಾಗುವಂತೆ ಮುಚ್ಚಳಿಕೆ ಕೊಡಬೇಕು ಎಂದು ನೋಟಿಸ್‍ನಲ್ಲಿ ತಿಳಿಸಲಾಗಿದೆ.

  • ಅಕ್ರಮಗಳ ವರದಿ ಮಾಡುವುದು ಮಾಧ್ಯಮಗಳ ಜವಾಬ್ದಾರಿ – ಕೋಟ ಶ್ರೀನಿವಾಸ ಪೂಜಾರಿ

    ಅಕ್ರಮಗಳ ವರದಿ ಮಾಡುವುದು ಮಾಧ್ಯಮಗಳ ಜವಾಬ್ದಾರಿ – ಕೋಟ ಶ್ರೀನಿವಾಸ ಪೂಜಾರಿ

    ಉಡುಪಿ: ಅಕ್ರಮಗಳ ವರದಿ ಮಾಡುವುದು ಮಾಧ್ಯಮಗಳ ಜವಾಬ್ದಾರಿ. ಸರ್ಕಾರ ವಾಮಮಾರ್ಗದಲ್ಲಿ ಮಾಧ್ಯಮಗಳ ಬಾಯಿ ಬಂದ್ ಮಾಡಲು ಯತ್ನಿಸುವುದು ಬೇಡ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಬಳ್ಳಾರಿ ಕೃಷ್ಣದೇವರಾಯ ವಿಶ್ವ ವಿದ್ಯಾಲಯ ಅಕ್ರಮದ ಬಗ್ಗೆ ಪಬ್ಲಿಕ್ ಟಿವಿ ಸುದ್ದಿ ಮಾಡಿದ್ದಕ್ಕೆ ವರದಿಗಾರನನ್ನು ಬಂಧನ ಮಾಡಿದ್ದನ್ನು ಖಂಡಿಸಿದರು. ಮಾಧ್ಯಮಗಳಿಗೆ ಅವರದ್ದೇ ಆದ ಜವಾಬ್ದಾರಿ ಇದೆ. ಸರ್ಕಾರದ ಲೋಪದೋಷ ಹೇಳುವುದು ಮೀಡಿಯಾಗಳ ಜವಾಬ್ದಾರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಮಾಧ್ಯಮಗಳ ಧನಿ ಧಮನ ಮಾಡಿದರೆ ಬಿಜೆಪಿ ಸುಮ್ಮನಿರಲ್ಲ. ಈ ಬಗ್ಗೆ ಉನ್ನತ ಶಿಕ್ಷಣ ಸಚಿವರ ಜೊತೆ ಮಾತನಾಡಲು ಪ್ರಯತ್ನಿಸಿದೆ. ಜಿ.ಟಿ ದೇವೇಗೌಡ ಸಚಿವ ಸಂಪುಟ ಸಭೆಯಲ್ಲಿ ಇದ್ದಾರೆ. ವರದಿಗಾರನನ್ನು ಬಂಧಿಸುವ ಬದಲು ಅಕ್ರಮ ಸರಿಪಡಿಸುವ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳಲಿ ಎಂದು ತಿಳಿಸಿದರು. ಇದನ್ನು ಓದಿ :ಬಳ್ಳಾರಿ ವಿವಿ ನೇಮಕಾತಿಯಲ್ಲಿ ಅಕ್ರಮದ ವಾಸನೆ – ವರದಿ ಮಾಡಿದ್ದಕ್ಕೆ ಪಬ್ಲಿಕ್ ಟಿವಿ ಮೇಲೆ ಕೇಸ್

    ಸರ್ಕಾರ ಸತ್ಯಾಸತ್ಯತೆ ಅರಿತು ವಿಶ್ವ ವಿದ್ಯಾಲಯದ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕಿತ್ತು. ಬದಲಾಗಿ ವರದಿಗಾರರ ಬಂಧನ ಖಂಡನೀಯವಾದುದು ಎಂದು ಕೋಟ ಶ್ರೀನಿವಾಸ ಪೂಜಾರಿ ಖಂಡನೆ ವ್ಯಕ್ತಪಡಿಸಿದರು.