Tag: kota srinivasa poojary

  • ನವೆಂಬರ್ ಅಂತ್ಯಕ್ಕೆ ತಿರುಗಾಟಕ್ಕೆ ಸಿದ್ಧತೆ ಮಾಡಿ- ಯಕ್ಷಗಾನ ಮೇಳಗಳಿಗೆ ಕೋಟ ಸೂಚನೆ

    ನವೆಂಬರ್ ಅಂತ್ಯಕ್ಕೆ ತಿರುಗಾಟಕ್ಕೆ ಸಿದ್ಧತೆ ಮಾಡಿ- ಯಕ್ಷಗಾನ ಮೇಳಗಳಿಗೆ ಕೋಟ ಸೂಚನೆ

    ಮಂಗಳೂರು: ಯಕ್ಷಗಾನ ಮೇಳಗಳು ಕೋವಿಡ್ 19 ನಿಯಮಗಳನ್ನು ಅಳವಡಿಸಿಕೊಂಡು ನವೆಂಬರ್ ಅಂತ್ಯಕ್ಕೆ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಟೀಲು, ಬಪ್ಪನಾಡು, ಸಸಿಹಿತ್ಲು ಸೇರಿದಂತೆ 20ಕ್ಕೂ ಹೆಚ್ಚು ವೃತ್ತಿಪರ ತೆಂಕುತಿಟ್ಟಿನ ಯಕ್ಷಗಾನ ಮೇಳಗಳಿದ್ದು, ಸರಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಕಲಾವಿದರು ಮತ್ತು ಪೂರಕ ಕೆಲಸಗಾರರಿದ್ದಾರೆ. ಕೊರೊನಾದಿಂದಾಗಿ ಯಕ್ಷಗಾನಗಳು ನಡೆಯದೆ ಕಲಾವಿದರು ಸಂಕಷ್ಟದಿಂದ ಇದ್ದಾರೆ. ಹೀಗಾಗಿ ಯಕ್ಷಗಾನ ಮೇಳಗಳು ಕೋವಿಡ್ 19 ನಿಯಮಗಳನ್ನು ಅಳವಡಿಸಿಕೊಂಡು ನವೆಂಬರ್ ಅಂತ್ಯಕ್ಕೆ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ಅಧಿಕಾರಿಗಳು, ಕಲಾವಿದರು ಹಾಗೂ ಮೇಳಗಳ ವ್ಯವಸ್ಥಾಪಕರಿಗೆ ಸೂಚನೆ ನೀಡಿದರು.

    ಕಲಾವಿದರ ಪರವಾಗಿ ಖ್ಯಾತ ಭಾಗವತ ಪಟ್ಲ ಸತೀಶ್ ಶೆಟ್ಟಿ, ಸರಪಾಡಿ ಅಶೋಕ್ ಶೆಟ್ಟಿ, ಉಜಿರೆ ಅಶೋಕ್ ಭಟ್, ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಾಸ್ಯಕಲಾವಿದ ಸೀತಾರಾಮ್ ಕುಮಾರ್ ಮಾತನಾಡುತ್ತಾ, ವೃತ್ತಿಪರ ಯಕ್ಷಗಾನ ಮೇಳಗಳು ನಿಂತಲ್ಲಿ ಕಲಾವಿದರ ಬದುಕು ದುಸ್ತರವಾಗುವುದು. ಈಗಾಗಲೇ ಕೋವಿಡ್ 19 ನಿಂದಾಗಿ ನೊಂದ ಕಲಾವಿದರ ಕುಟುಂಬದ ನೆರವಿಗೆ ಸರ್ಕಾರ ಸಹಾಯಹಸ್ತ ಚಾಚಬೇಕು ಎಂದು ಮನವಿ ಮಾಡಿದರು.

    ಕಟೀಲು ದೇವಳದ ಆಡಳಿತ ಮೊಕ್ತೇಸರ ಶ್ರೀ ಹರಿ ಅಸ್ರಣ್ಣ ಮಾತನಾಡಿ, ಕಟೀಲಿನ ಆರು ಮೇಳಗಳು ನಿಗದಿತ ಸಮಯದಲ್ಲಿ ಪ್ರದರ್ಶನಕ್ಕೆ ಹೊರಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು. ಬಪ್ಪನಾಡು, ಸಸಿಹಿತ್ಲು ಮೇಳಗಳ ಸಹಿತ ಅನೇಕರು ಕೊರೊನಾ ಸಂದರ್ಭದಲ್ಲಿ ಕಲಾವಿದರು ಮತ್ತು ವೃತ್ತಿಪರ ಮೇಳಗಳ ಸಮಸ್ಯೆಗಳನ್ನು ವಿವರಿಸಿದರು.

    ಈಗಿರುವ ಮೇಳಗಳಲ್ಲಿ ಯಾವುದಾದರೂ ನಿಲುಗಡೆಯಾದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿಯ ಸಂಪನ್ಮೂಲವಿರುವ ದೇವಳದ ಮೂಲಕ ಹೆಚ್ಚುವರಿ ಮೇಳಗಳನ್ನು ರಚಿಸಲು ಇಲಾಖೆ ಪರಿಶೀಲಿಸಿ ಬೇಕೆಂಬ ಮನವಿ ಸಭೆಯಲ್ಲಿ ಮೂಡಿಬಂತು.

    ಸರ್ಕಾರದ ಪರವಾಗಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ಇಂತಹ ಪರಿಸ್ಥಿತಿಯಲ್ಲಿ ಯಕ್ಷಗಾನ ಮೇಳಗಳ ಕೊನೆಯ ಕಲಾವಿದನಿಗೂ ತೊಂದರೆ ಆಗದಂತೆ ಸರ್ಕಾರ ಕಲಾವಿದರ ಬೆಂಬಲಕ್ಕೆ ನಿಲ್ಲಲಿದೆ ಎಂದರು. ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಮತ್ತು ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರು ಉಪಸ್ಥಿತರಿದ್ದರು.

  • ಡ್ರಗ್ ಮಾಫಿಯಾ, ಆ ವುಡ್ ಈ ವುಡ್ ಯಾವುದನ್ನೂ ಬಿಡಲ್ಲ: ಕೋಟ

    ಡ್ರಗ್ ಮಾಫಿಯಾ, ಆ ವುಡ್ ಈ ವುಡ್ ಯಾವುದನ್ನೂ ಬಿಡಲ್ಲ: ಕೋಟ

    ಉಡುಪಿ: ಇಲ್ಲಿ ಆ ವುಡ್ ಈ ವುಡ್ ಎಂಬ ಪ್ರಶ್ನೆ ಬರುವುದಿಲ್ಲ. ಡ್ರಗ್ ಮಾಫಿಯಾ ವಿಚಾರದಲ್ಲಿ ಗೃಹ ಸಚಿವರು ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದು, ಇಡೀ ಮಂತ್ರಿಮಂಡಲ ಬೆಂಬಲಿಸುತ್ತದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

    ಉಡುಪಿಯಲ್ಲಿ ಮಾತನಾಡಿದ ಕೋಟ, ಡ್ರಗ್ಸ್ ವಿಚಾರದಲ್ಲಿ ವ್ಯಕ್ತಿಗಳು ಗೌಣ. ವಿಚಾರ ಅಷ್ಟೇ ಮುಖ್ಯ. ಸಣ್ಣವರು ದೊಡ್ಡವರು ಎಂಬ ಪ್ರಶ್ನೆ ಬರುವುದಿಲ್ಲ. ರಾಜ್ಯ ಬಿಜೆಪಿ ಸರ್ಕಾರ ವಿಷಯಗಳ ಮೇಲೆ ಹೋಗುತ್ತದೆ ವ್ಯಕ್ತಿಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದರು.

    ಮಾದಕ ದ್ರವ್ಯದ ಸೇವನೆ ಮತ್ತು ಮಾರಾಟ ವಿಚಾರ ರಾಜ್ಯದ ಪ್ರಮುಖ ಚರ್ಚೆಯ ವಿಷಯವಾಗಿದೆ. ಗೃಹ ಸಚಿವ ಬೊಮ್ಮಾಯಿ ಕಟುವಾದ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ರಾಜ್ಯದ ಎಲ್ಲ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಲಾಗಿದೆ. ಯಾವುದೇ ಕಠಿಣ ಪರಿಸ್ಥಿತಿ ಎದುರಾದರೂ ಪರವಾಗಿಲ್ಲ. ಮಾದಕ ದ್ರವ್ಯದ ಜಾಡನ್ನು ಮಟ್ಟ ಹಾಕುತ್ತೇವೆ. ಮಾದಕ ದ್ರವ್ಯದ ಜಾಲವನ್ನು ಮಟ್ಟ ಹಾಕುತ್ತೇವೆ ಎಂದು ಹೇಳಿದರು.

  • ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಭೇಟಿ ಮಾಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ

    ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಭೇಟಿ ಮಾಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ

    – ವಿವಿಧ ಮೀನುಗಾರಿಕಾ ಕಾಮಗಾರಿಗೆ ಅನುಮೋದನೆಗೆ ಮನವಿ

    ಮಂಗಳೂರು: ಕರ್ನಾಟಕ ರಾಜ್ಯದ ವಿವಿಧ ಮೀನುಗಾರಿಕೆ ಹಾಗೂ ಬಂದರು ಯೋಜನೆಗಳ ಕುರಿತು ರಾಜ್ಯ ಮೀನುಗಾರಿಕೆ ಮತ್ತು ಬಂದರು ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ಕೇಂದ್ರ ಕೃಷಿ ಸಚಿವರಾದ ನರೇಂದ್ರ ಸಿಂಗ್ ತೋಮರ್ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ಚರ್ಚೆ ನಡೆಸಿದರು.

    ಮಂಗಳೂರಿನ ಬೈಕಂಪಾಡಿ, ಉಡುಪಿ ಜಿಲ್ಲೆಯ ಗಂಗೊಳ್ಳಿ ಹಾಗೂ ಕಾರವಾರದ ಮಾವಾಳಿಯಲ್ಲಿ ಸಂಯೋಜಿತ ಸೀ ಫುಡ್ ಪಾರ್ಕ್ ಯೋಜನೆಗಳು. ರಾಜ್ಯ ಕರಾವಳಿಯ 8 ಮೀನುಗಾರಿಕಾ ಹಾರ್ಬರ್ ಗಳ ಆಧುನೀಕರಣ ಹಾಗೂ 16 ಕಡೆಗಳಲ್ಲಿ ಮೀನುಗಾರಿಕಾ ಇಳಿದುದಾಣಗಳ ಉನ್ನತೀಕರಣ ಸೇರಿದಂತೆ, ವಿವಿಧ ಯೋಜನೆಗಳಿಗೆ ಅನುಮೋದನೆ ನೀಡಿ, ಅನುದಾನ ಮಂಜೂರು ಮಾಡುವಂತೆ ಸೋಮರ್ ಅವರಿಗೆ ಸಚಿವರು ಮನವಿ ಮಾಡಿದರು.

    ಯೋಜನಾ ವರದಿಗಳನ್ನು ಪರಿಶೀಲಿಸಿದ ಸಚಿವರು, ಧನಾತ್ಮಕವಾಗಿ ಸ್ಪಂಧಿಸಿದ್ದು, ಯೋಜನೆಗಳನ್ನು ಶೀಘ್ರವಾಗಿ ಅನುಷ್ಠಾನ ಮಾಡುವಂತೆ ಹೇಳಿದ್ದಾರೆ. ಅಲ್ಲದೇ ಪ್ರಧಾನ ಮಂತ್ರಿಯವರ ಆತ್ಮ ನಿರ್ಭರ ಭಾರತ ಯೋಜನೆಯನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಆರ್ ಕೆವಿವೈ ಮುಖಾಂತರ ಯೋಜನೆಗಳಿಗೆ ಅನುಮೋದನೆ ನೀಡಿ, ಅನುದಾನ ಮಂಜೂರು ಮಾಡುವ ಭರವಸೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಕರ್ನಾಟಕ ಮೀನುಗಾರಿಕೆ ಇಲಾಖೆಯ ನಿರ್ದೇಶಕರಾದ ರಾಮಾಚಾರಿಯವರು ಉಪಸ್ಥಿತರಿದ್ದರು.

  • ಅಯೋಧ್ಯೆ ನಗರದಲ್ಲಿ 5 ಎಕರೆ ಜಮೀನು ಕೇಳಿದ್ದೇವೆ: ಸಚಿವ ಕೋಟ

    ಅಯೋಧ್ಯೆ ನಗರದಲ್ಲಿ 5 ಎಕರೆ ಜಮೀನು ಕೇಳಿದ್ದೇವೆ: ಸಚಿವ ಕೋಟ

    – ಶ್ರೀನಿವಾಸ್ ಕುಟುಂಬದಿಂದ ಅಮೃತೇಶ್ವರಿ ದೇವಿಗೆ ಪೂಜೆ

    ಉಡುಪಿ: ರಾಜ್ಯ ಮುಜರಾಯಿ, ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಮೃತೇಶ್ವರಿ ದೇವಸ್ಥಾನಕ್ಕೆ ಭೇಟಿ ಕೊಟ್ಟು ವಿಶೇಷ ಪೂಜೆ ಸಲ್ಲಿಸಿದರು. ಕೋವಿಡ್ ಟೆಸ್ಟ್ ಮಾಡಿಸಿದ್ದ ಸಚಿವ ಕೋಟ ಅವರ ವೈದ್ಯಕೀಯ ವರದಿ ಬರುವತನಕ ಮನೆಯಲ್ಲೇ ಕ್ವಾರಂಟೈನ್ ಆಗಿದ್ದು, ರಿಪೋರ್ಟ್ ನೆಗೆಟಿವ್ ಎಂದು ಗೊತ್ತಾದ ಕೂಡಲೇ ಅಮೃತೇಶ್ವರಿ ದೇವಸ್ಥಾನಕ್ಕೆ ತೆರಳಿದ್ದಾರೆ.

    ಅಯೋಧ್ಯೆಯಲ್ಲಿ ರಾಮ ಮಂದಿರ ಶಿಲಾನ್ಯಾಸ ನೆರವೇರಿದ ಹಿನ್ನೆಲೆಯಲ್ಲಿ ದೇವಿಗೆ ವಿಶೇಷ ಪ್ರಾರ್ಥನೆ ಮತ್ತು ಪೂಜೆಯನ್ನು ಸಲ್ಲಿಕೆ ಮಾಡಿದರು. ದಂಪತಿ ಸಮೇತರಾಗಿ ದೇವಸ್ಥಾನಕ್ಕೆ ಆಗಮಿಸಿದ ಸಚಿವರು, ಶ್ರೀರಾಮಮಂದಿರ ನಿರ್ಮಾಣ ಕಾರ್ಯ ನಿರ್ವಿಘ್ನವಾಗಿ ನಡೆಯಲಿ. ಭವ್ಯವಾದ ರಾಮಮಂದಿರದಲ್ಲಿ ಬಾಲರಾಮ ವಿರಾಜಮಾನನಾಗಿ ಭಕ್ತಕೋಟಿಗೆ ದರ್ಶನ ಕೊಡಲಿ ಎಂದು ದೇವರ ಮುಂದೆ ಪ್ರಾರ್ಥಿಸಿದರು.

    ಈ ಸಂದರ್ಭ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ರಾಮಮಂದಿರಕ್ಕೆ ಅಡಿಗಲ್ಲು ಮತ್ತು ಭೂಮಿಪೂಜೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ನೆರವೇರಿಸಿದ್ದಾರೆ. ರಾಜ್ಯದಲ್ಲಿ ಎಲ್ಲಾ ಖಾಸಗಿ ಮತ್ತು ಸರ್ಕಾರಿ ದೇವಸ್ಥಾನಗಳಲ್ಲಿ ಏಕಕಾಲದಲ್ಲಿ ಪೂಜೆ ನೆರವೇರಿದೆ. ಸಕಲ ಸಮಸ್ಯೆಗಳು ದೂರಾಗಿ ಶೀಘ್ರ ರಾಮಮಂದಿರ ನಿರ್ಮಾಣ ಆಗಲಿದೆ ಎಂದು ವಿಶ್ವಾಸ ವ್ಯಕ್ತಗೊಳಿಸಿದರು.

    ಆಯೋಧ್ಯಾ ನಗರದಲ್ಲಿ ಕರ್ನಾಟಕ ಭವನ ನಿರ್ಮಾಣ ಮಾಡುವ ಪ್ರಸ್ತಾವನೆ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದೇನೆ. ಕರ್ನಾಟಕದ ಯಾತ್ರಾರ್ಥಿಗಳು ರಾಮಮಂದಿರಕ್ಕೆ ತೆರಳುವ ಸಂದರ್ಭ ಈ ಭವನ ಉಪಯೋಗಕ್ಕೆ ಬರಬೇಕಿದೆ. ಅಯೋಧ್ಯೆ ನಗರದಲ್ಲಿ 5 ಎಕರೆ ಜಮೀನನ್ನು ಕರ್ನಾಟಕಕ್ಕೆ ಕೊಡಬೇಕು ಅಂತ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಲ್ಲಿ ಭಿನ್ನಹ ಮಾಡಿಕೊಳ್ಳುತ್ತಿದ್ದೇನೆ ಎಂದು ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು.

  • ನನಗೆ ಕೊರೊನಾ ನೆಗೆಟಿವ್, ನಾಳೆಯಿಂದ ಕರ್ತವ್ಯಕ್ಕೆ ಹಾಜರ್: ಕೋಟ ಶ್ರೀನಿವಾಸ ಪೂಜಾರಿ

    ನನಗೆ ಕೊರೊನಾ ನೆಗೆಟಿವ್, ನಾಳೆಯಿಂದ ಕರ್ತವ್ಯಕ್ಕೆ ಹಾಜರ್: ಕೋಟ ಶ್ರೀನಿವಾಸ ಪೂಜಾರಿ

    ಉಡುಪಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಂಪರ್ಕಕ್ಕೆ ಬಂದಿದ್ದ ಧಾರ್ಮಿಕ ದತ್ತಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಕೋವಿಡ್ 19 ಪರೀಕ್ಷಾ ವರದಿ ನೆಗೆಟಿವ್ ಬಂದಿದೆ.

    ಸಿಎಂ ಯಡಿಯೂರಪ್ಪ ಅವರಿಗೆ ಆಗಸ್ಟ್ 2 ರಂದು ಕೋವಿಡ್ ಪಾಸಿಟಿವ್ ಬಂದಿತ್ತು. ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಜುಲೈ 30ರಂದು ಮುಖ್ಯಮಂತ್ರಿ ಅವರೊಂದಿಗೆ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸುಮಾರು ಒಂದು ಗಂಟೆ ಜೊತೆಗಿದ್ದರು. ಈ ಕಾರಣದಿಂದ ಸಚಿವರು ಸೋಮವಾರ ಮತ್ತು ಮಂಗಳವಾರ ಎರಡು ದಿನಗಳ ಕಾಲ ಸ್ವಯಂ ಗೃಹ ದಿಗ್ಭಂದನಕ್ಕೊಳಗಾಗಿದ್ದರು.

    ಕೋವಿಡ್ ಪರೀಕ್ಷೆಯನ್ನು ಕೂಡ ನಡೆಸಿದ್ದು, ಇಂದು ಪರೀಕ್ಷಾ ವರದಿ ನೆಗೆಟಿವ್ ಎಂದು ಬಂದಿದೆ. ಈ ಬಗ್ಗೆ ಸ್ವತಃ ಸಚಿವ ಜೋಟ ಶ್ರೀನಿವಾಸ ಪೂಜಾರಿ ಅವರು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.

    “ಮುಖ್ಯಮಂತ್ರಿಗಳ ಸಂಪರ್ಕಕ್ಕೆ ಬಂದಿದ್ದೆ ಎನ್ನುವ ಕಾರಣಕ್ಕೆ ಇಂದಿನ ತನಕ ಹೋಂ ಕ್ವಾರಂಟೈನ್‍ನಲ್ಲಿದ್ದೆ. ಇದೀಗ ಕೋವಿಡ್ ವರದಿ ನೆಗೆಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಮತ್ತೆ ಕರ್ತವ್ಯಕ್ಕೆ ಹಾಜರಾಗುತ್ತಿದ್ದೇನೆ. ತಮ್ಮೆಲ್ಲರ ಸಹಕಾರವಿರಲಿ” ಎಂದು ಸಚಿವರು ಬರೆದುಕೊಂಡಿದ್ದಾರೆ.

  • ನಿಸರ್ಗ ಚಂಡಮಾರುತ- ಕಡಲ ತೀರಕ್ಕೆ ಮೀನುಗಾರಿಕಾ ಸಚಿವ ಭೇಟಿ

    ನಿಸರ್ಗ ಚಂಡಮಾರುತ- ಕಡಲ ತೀರಕ್ಕೆ ಮೀನುಗಾರಿಕಾ ಸಚಿವ ಭೇಟಿ

    ಮಂಗಳೂರು: ಉಳ್ಳಾಲದ ಸೋಮೇಶ್ವರ ಉಚ್ಚಿಲ, ಬಟ್ಟಪ್ಪಾಡಿ, ಉಳ್ಳಾಲ ಮೊಗವೀರ ಪಟ್ನ, ಕೈಕೋ, ಹಿಲರಿಯ ನಗರ ಪ್ರದೇಶಗಳಲ್ಲಿ ಕಡಲಿನ ಅಬ್ಬರ ಜಾಸ್ತಿಯಾಗಿರುವ ಹಿನ್ನೆಲೆಯಲ್ಲಿ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಕಡಲಿನ ಅಬ್ಬರ, ತೀವ್ರತೆ ಜಾಸ್ತಿಯಾಗಿರುವ ಹಿನ್ನೆಲೆಯಲ್ಲಿ, ಸರ್ಕಾರದಿಂದ ಯಾವ ಯಾವ ಕಾರ್ಯ ರೂಪಿಸಬೇಕು ಎಂಬುದರ ಕುರಿತು ಜಿಲ್ಲಾಧಿಕಾರಿ ಮತ್ತು ಬಂದರು ಇಲಾಖೆ ಎ.ಡಿ.ಬಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ತಡೆಗೋಡೆ ಹೇಗೆ ನಿರ್ಮಿಸುವುದು ಮತ್ತು ತುರ್ತಾಗಿ ಯಾವ ಕಾರ್ಯ ಮಾಡಬೇಕು ಎಂಬುದರ ಬಗ್ಗೆ ನಿರ್ಧರಿಸಲಾಗುವುದು ಎಂದು ತಿಳಿಸಿದರು.

    ಸ್ವಾಭಾವಿಕವಾಗಿ ಕಡಲ್ಕೊರೆತದಿಂದಾಗಿ ಮೀನುಗಾರರಿಗೆ, ಮೀನುಗಾರಿಕಾ ವೃತ್ತಿಯಲ್ಲಿ ತೊಡಗಿರುವ ಅನೇಕ ಕುಟುಂಬಗಳಿಗೆ ತೊಂದರೆ ಆದ ಹಿನ್ನೆಲೆಯಲ್ಲಿ ತುರ್ತಾಗಿ ತಡೆಗೋಡೆ ಮಾಡಬೇಕಾದ ಅಗತ್ಯವಿದೆ. ರೂ. 230 ಕೋಟಿ ಅನುದಾನದಲ್ಲಿ ಕಾಮಗಾರಿಯು ಪ್ರಗತಿಯಲ್ಲಿದೆ ತಿಳಿಸಿದರು.

    ಈಗಾಗಲೇ ಮುಂಜಾಗ್ರತಾ ಕ್ರಮವಾಗಿ 25 ಮಂದಿ ಸಿಬ್ಬಂದಿಯ ಓಆಖಈ ಟೀಂ ಮಂಗಳೂರಿಗೆ ಭೇಟಿ ನೀಡಿದ್ದು ಅನಾಹುತ ಎದುರಿಸಲು ಜಿಲ್ಲಾಡಳಿತಕ್ಕೆ ಸಹಾಯ ಮಾಡಲಿದೆ.

  • ರಾಜ್ಯಕ್ಕೆ 50 ಕೋಟಿ ಮೀನು ಮರಿಗಳ ಅವಶ್ಯಕತೆ ಇದೆ: ಕೋಟ ಶ್ರೀನಿವಾಸ ಪೂಜಾರಿ

    ರಾಜ್ಯಕ್ಕೆ 50 ಕೋಟಿ ಮೀನು ಮರಿಗಳ ಅವಶ್ಯಕತೆ ಇದೆ: ಕೋಟ ಶ್ರೀನಿವಾಸ ಪೂಜಾರಿ

    ಉಡುಪಿ: ರಾಜ್ಯದಲ್ಲಿ ಮೀನುಗಾರಿಕೆ ಒಂದು ಪ್ರಮುಖ ಉದ್ಯಮವಾಗಿ ಬೆಳೆಯಲು ಒಳನಾಡು ಜಲ ಸಂಪನ್ಮೂಲಗಳನ್ನು ಬಳಸಿಕೊಂಡು ಮೀನುಗಾರಿಕೆ ಮತ್ತು ಜಲಕೃಷಿಯ ಅಭಿವೃದ್ಧಿಯ ಕುರಿತು ನೀಲನಕ್ಷೆ ತಯಾರಿಸಲು ಮಾನ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ವಿಕಾಸಸೌಧದಲ್ಲಿ ಪರಿಣಿತರ ಸಭೆ ನಡೆಸಿದರು.

    ಮೀನುಗಾರರ ಕಲ್ಯಾಣಕ್ಕಾಗಿ 1957 ರಲ್ಲಿ ಸ್ಥಾಪನೆಯಾದ ಮೀನುಗಾರಿಕೆ ಇಲಾಖೆ 1993ರಲ್ಲಿ ತಂದ ಪೂರಕ ಕಾಯ್ದೆ, 2003ರಲ್ಲಿ ತಂದಿರುವ ತಿದ್ದುಪಡಿಗಳು ಸಂಬಂಧಿಸಿದಂತೆ ಸೂಕ್ತ ನಿಯಮಗಳು ರೂಪಿಸಲಾಗದಿರುವ ಕುರಿತು ಸುದೀರ್ಘ ಚರ್ಚೆ ನಡೆಸಿದ ಸಭೆ, ಹಲವು ವಿಚಾರಗಳನ್ನು ವಿಮರ್ಶಿಸಿ, ಇನ್ನೆರಡು ತಿಂಗಳಲ್ಲಿ ನಿಯಮಗಳನ್ನು ರೂಪಿಸಿ ಸಚಿವ ಸಂಪುಟಕ್ಕೆ ಮಂಡಿಸುವಂತೆ ಸಚಿವ ಕೋಟ ಆದೇಶ ನೀಡಿದರು.

    ದೇಶದಲ್ಲಿ ಒಳನಾಡು ಮೀನುಗಾರಿಕೆಯಲ್ಲಿ ಕರ್ನಾಟಕ 9ನೇ ಸ್ಥಾನದಲ್ಲಿದ್ದು, ಮೀನು ಉತ್ಪಾದನೆ ಹೆಚ್ಚಿಸುವುದು, ಸುಧಾರಿತ, ತಾಂತ್ರಿಕ ವಿಧಾನಗಳನ್ನು ವಿಸ್ತರಿಸುವುದೂ ಸೇರಿದಂತೆ ಹಲವು ಆಯಾಮಗಳಲ್ಲಿ ಮೀನುಗಾರಿಕೆ ಅಭಿವೃದ್ಧಿ ನೀಲನಕ್ಷೆ ತಯಾರಿ ಮಾಡಲು ಸಭೆ ನಿರ್ಣಯಿಸಿತು.

    ಮರಿಗಳ ಉತ್ಪಾದನೆ, ಕೊಳಗಳ ನಿರ್ಮಾಣವೂ ಸೇರಿದಂತೆ ಈಗಿರುವ 26 ಸಾವಿರ ಕೆರೆಗಳ ಪೈಕಿ ಮೀನುಗಾರಿಕೆಗೆ ಸಿದ್ಧವಾದ ಕೆರೆಗಳ ಕುರಿತು ಅಧ್ಯಯನ ವರದಿಯೊಂದನ್ನು ನೀಡುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.

    ಒಳನಾಡು ಮೀನುಗಾರಿಕೆಯಲ್ಲಿ ಹೊಸ ತಳಿಗಳ ಸಂಶೋಧನೆ, 2.5 ಲಕ್ಷ ಹೆಕ್ಟೇರ್ ಸವಳು – ಜವಳು ಪ್ರದೇಶದಲ್ಲಿ ಮೀನುಗಾರಿಕೆಗೆ ಅವಕಾಶ ಕಲ್ಪಿಸುವುದು, ಮೀನುಗಾರರ ತರಬೇತಿ ಕೇಂದ್ರಗಳಿಗೆ ಕಾಯಕಲ್ಪ ಒದಗಿಸುವುದೂ ಸೇರಿದಂತೆ ಪ್ರವಾಸೋದ್ಯಮ ಹಾಗೂ ಕ್ರೀಡಾ ಮೀನುಗಾರಿಕೆಯನ್ನು ಅಳವಡಿಸಿಕೊಳ್ಳುವುದರ ಕುರಿತು ಸುದೀರ್ಘ ಚರ್ಚೆ ನಡೆದು ಬೆಂಗಳೂರು ಸೇರಿದಂತೆ ರಾಜ್ಯದ ಆಯ್ದ ಭಾಗಗಳಲ್ಲಿ ಮೀನುಗಾರಿಕೆ ಕ್ರೀಡೆಯನ್ನು ಉತ್ತೇಜಿಸುವ ದೃಷ್ಟಿಯಿಂದ ಗಾಳ ಹಾಕಿ ಮೀನು ಹಿಡಿಯುವ ಪದ್ಧತಿಯನ್ನು ಜನಪ್ರಿಯಗೊಳಿಸಲು ಸಭೆ ಸಹಮತ ನೀಡಿತು.

    ಶ್ರೀಅಂಬಿಗರ ಚೌಡಯ್ಯ ನಿಗಮದ ವತಿಯಿಂದ ಮೀನುಗಾರಿಕೆ ತರಬೇತಿ ಹಾಗೂ ಮೀನು ಸಾಕಣಿಕೆಯ ಬಗ್ಗೆ ಹಲವಾರು ನಿರ್ಣಯವನ್ನು ಸಭೆ ಕೈಗೊಂಡಿತು. ಕೋಟ ಶ್ರೀನಿವಾಸ ಪೂಜಾರಿ ಅವರು ಈಗಿರುವ ಸ್ಥಿತಿಯಲ್ಲಿ 50 ಕೋಟಿ ಮೀನು ಮರಿಗಳ ಅವಶ್ಯಕತೆಯಿದ್ದು, ಶೇಕಡಾ 50 ರಷ್ಟು ಮಾತ್ರ ಮೀನು ಮರಿಗಳ ಪೂರೈಕೆ ಆಗುತ್ತಿದ್ದು, ಹೆಚ್ಚುವರಿ ಉತ್ಪಾದನೆಗೆ ಅಗತ್ಯ ಯೋಜನೆ ರೂಪಿಸಬೇಕಾಗಿ ಸೂಚಿಸಿದರು.

    ಸಭೆಯಲ್ಲಿ ಮೀನುಗಾರಿಕೆ ಇಲಾಖೆಯ ಬಹುತೇಕ ಹಿರಿಯ ನಿವೃತ್ತ ಅಧಿಕಾರಿಗಳು, ವಿಧಾನ ಪರಿಷತ್ ಸದಸ್ಯರಾದ ರವಿಕುಮಾರ್, ಮೀನುಗಾರಿಕೆ ಇಲಾಖೆಯ ಕಾರ್ಯದರ್ಶಿಗಳಾದ ಕ್ಯಾಪ್ಟನ್ ಮಣಿವಣ್ಣನ್, ನಿರ್ದೇಶಕರಾದ ಶ್ರೀ ಪ್ರಭುಲಿಂಗ ಕಾವಳಿಕಟ್ಟಿ, ಮೀನುಗಾರಿಕೆ ಕಾಲೇಜು ಡೀನ್ ಶ್ರೀ ಸೇಂಥಿಲ್ ವೇಲ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

  • ರಾಜ್ಯದ 34,000 ಅರ್ಚಕರಿಗೆ ದಿನಸಿ ಕಿಟ್: ಕೋಟ ಶ್ರೀನಿವಾಸ ಪೂಜಾರಿ

    ರಾಜ್ಯದ 34,000 ಅರ್ಚಕರಿಗೆ ದಿನಸಿ ಕಿಟ್: ಕೋಟ ಶ್ರೀನಿವಾಸ ಪೂಜಾರಿ

    ಉಡುಪಿ: ಕೊರೊನಾ ಲಾಕ್‍ಡೌನ್ ಬಿಸಿ ಎಲ್ಲಾ ಕ್ಷೇತ್ರಕ್ಕೆ ತಟ್ಟಿದೆ. ಅದರಲ್ಲೂ ತಟ್ಟೆ ಕಾಣಿಕೆ ನಂಬಿರುವ ಹಳ್ಳಿಯ ದೇವಸ್ಥಾನದ ಅರ್ಚಕರ ಸ್ಥಿತಿ ಕೇಳೋದೇ ಬೇಡ. ರಾಜ್ಯದ ಮುಜರಾಯಿ ಇಲಾಖೆ ಇದೀಗ ರಾಜ್ಯದ ದೇವಸ್ಥಾನಗಳ ಅರ್ಚಕರು ಸಂಕಷ್ಟಕ್ಕೆ ಪರಿಹಾರ ಕೊಡಲು ಮುಂದಾಗಿದೆ.

    ರಾಜ್ಯದ 34,000 ಅರ್ಚಕರಿಗೆ ದಿನಸಿ ಕಿಟ್ ವಿತರಿಸಲು ನಿರ್ಧಾರಿಸಲಾಗಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು, ಅರ್ಚಕರಿಗೆ ದಿನಸಿ ಕಿಟ್ ವಿತರಣಾ ಜವಾಬ್ದಾರಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ಉಡುಪಿ ಜಿಲ್ಲೆಯ ಸಾವಿರ ಅರ್ಚಕರಿಗೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಿಂದ ದಿನಸಿ ಕಿಟ್ ವಿತರಿಸಲಾಗುವುದು ಎಂದರು.

    ಅರ್ಚಕರಿಗೆ ಪ್ರೋತ್ಸಾಹಧನ ನೀಡುವ ಬಗ್ಗೆ ಸಿಎಂ ಜೊತೆ ಚರ್ಚಿಸಿದ್ದೇನೆ. ಹಣಕಾಸಿನ ವ್ಯವಸ್ಥೆ ಮಾಡಲು ಸಿಎಂ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ನಡುವೆ ರಾಜ್ಯದ 210 ಎ ದರ್ಜೆ ದೇವಸ್ಥಾನಗಳಲ್ಲಿ ಏಳು ಲಕ್ಷ ಜನರಿಗೆ ನಿತ್ಯ ಊಟ ವಿತರಿಸಲಾಗುತ್ತಿದೆ. ದಕ್ಷಿಣ ಕನ್ನಡದ ಕದ್ರಿ ದೇವಸ್ಥಾನದಲ್ಲಿ 12 ಸಾವಿರ ಊಟದ ವ್ಯವಸ್ಥೆ ಪ್ರತಿದಿನ ನಡೆಯುತ್ತಿದೆ. ಕೊರೊನಾ ನಿಯಂತ್ರಿಸಲು ಎಲ್ಲರೂ ಒಟ್ಟಾಗಿ ಒಂದಾಗಿ ಕೆಲಸ ಮಾಡಬೇಕು ಎಂದರು.

    ದೇವಸ್ಥಾನಗಳು ಆಯಾ ವ್ಯಾಪ್ತಿಯ ಬಡ ಜನರ ಆತ್ಮಸ್ಥೈರ್ಯವನ್ನು ಹೆಚ್ಚಿಸಬೇಕು ಎಂದರು. ಕೊರೊನಾ ಲಾಕ್‍ಡೌನ್‍ನಿಂದ ಸ್ಥಗಿತಗೊಂಡಿರುವ ನಿತ್ಯ ಪೂಜೆ ಬಗ್ಗೆ ಮುಂದಿನ ದಿನಗಳಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಚಿವ ಕೋಟ ಹೇಳಿದರು.

  • ಅಭಿವೃದ್ಧಿ ಹಾಗೂ ಅಪಪ್ರಚಾರದ ನಡುವಿನ ಚುನಾವಣೆಯಲ್ಲಿ ನಾವು ಗೆದ್ದಿದ್ದೇವೆ – ಕೋಟ

    ಅಭಿವೃದ್ಧಿ ಹಾಗೂ ಅಪಪ್ರಚಾರದ ನಡುವಿನ ಚುನಾವಣೆಯಲ್ಲಿ ನಾವು ಗೆದ್ದಿದ್ದೇವೆ – ಕೋಟ

    – ಜೆಡಿಎಸ್‍ನ ಕಣ್ಣೀರಿಗೆ ಉತ್ತರ ಕೊಟ್ಟಿದ್ದೇವೆ

    ಉಡುಪಿ: ಉಪಚುನಾವಣೆ ಗೆಲುವು ನಮಗೆ ಹರ್ಷ ತಂದಿದೆ. ಇದು ಅಭಿವೃದ್ಧಿ ಮತ್ತು ಅಪಪ್ರಚಾರದ ನಡುವಿನ ಚುನಾವಣೆ ಆಗಿತ್ತು. ಸಿಎಂ ಯಡಿಯೂರಪ್ಪನವರ ಅವಿರತ ಹೋರಾಟದಿಂದ 12 ಕಡೆ ಬಿಜೆಪಿ ಗೆದ್ದಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

    ಉಡುಪಿಯಲ್ಲಿ ಮಾತನಾಡಿದ ಅವರು, ಅಸ್ಥಿರ ವ್ಯವಸ್ಥೆ ಹೋಗಿ ಸ್ಥಿರ ಸರ್ಕಾರ ಬಂದಿದೆ. ಮೂರೂವರೆ ವರ್ಷ ಪರಿಣಾಮಕಾರಿ ಆಡಳಿತ ಕೊಡುತ್ತೇವೆ ಎಂದರು. ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡಗೆ ಗೆಲುವಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಜನರ ತೀರ್ಮಾನವನ್ನು ಗೌರವದಿಂದ ಸ್ವೀಕರಿಸಿದ್ದೇವೆ. ಮುಂದೆ ಏನು ಅನ್ನೋದನ್ನು ಪಕ್ಷ ತೀರ್ಮಾನ ಮಾಡುತ್ತದೆ. ಬಿಜೆಪಿಗೆ ಬೆಂಬಲಿಸುವುದಾಗಿ ಹೇಳಿದ್ದ ಶರತ್ ಬಚ್ಚೇಗೌಡ ಬಗ್ಗೆ ಸಿಎಂ, ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ತೀರ್ಮಾನಿಸುತ್ತಾರೆ ಎಂದು ಹೇಳಿದರು.

    ಇದೇ ವೇಳೆ ಜೆಡಿಎಸ್ ಶೂನ್ಯ ಸಂಪಾದನೆ ಮಾಡಿದೆ ಎಂದ ಕೋಟ, ಕಣ್ಣೀರು ಹಾಕಿದರೆ ಕೇಕೆ ಹಾಕಿದರೆ ಗೆಲುವು ಸಿಗಲ್ಲ. ಯಡಿಯೂರಪ್ಪ ಈ ವಯಸ್ಸಿನಲ್ಲಿ ಓಡಾಟ ಮಾಡಿದ ಫಲ ಇದು. ಬಿಜೆಪಿ ಮತ್ತು ಬಿಎಸ್‍ವೈ ಅವರನ್ನು ಟೀಕಿಸುವವರು ಇನ್ನಾದರು ನಮ್ಮ ಶಕ್ತಿಯನ್ನು ಅರ್ಥ ಮಾಡಿಕೊಳ್ಳಬೇಕು ಎಂದರು. ಯಡಿಯೂರಪ್ಪ ಪುತ್ರ ವಿಜಯೇಂದ್ರ, ಡಿಸಿಎಂ ಅಶ್ವಥನಾರಾಯಣ ಸೇರಿದಂತೆ ಪಕ್ಷದ ಕಾರ್ಯಕರ್ತರು ಓಡಾಟ ಮಾಡಿ ಕೆ.ಆರ್ ಪೇಟೆಯಲ್ಲಿ ಪಕ್ಷದ ಗೆಲುವಿಗೆ ಕಾರಣವಾಗಿದ್ದಾರೆ ಎಂದರು.

    ಬಿಜೆಪಿ ಮಂತ್ರಿಮಂಡಲದ ವಿಸ್ತರಣೆಯಾಗುತ್ತದೆ. ಸಾಕಷ್ಟು ಸಚಿವ ಸ್ಥಾನಗಳು ಖಾಲಿಯಿವೆ. ಮುಖ್ಯಮಂತ್ರಿಗಳ ಬಳಿ ಹಲವು ಖಾತೆಗಳಿವೆ. ಗೆದ್ದು ಬಂದವರಿಗೆ ಅವಕಾಶ ಕೊಡಲು ಸಿಎಂ ಖಾತೆ ಉಳಿಸಿಕೊಂಡಿದ್ದಾರೆ. ಸೂಕ್ಷ್ಮವಾಗಿ, ಪಕ್ಷವನ್ನು ಗಮನದಲ್ಲಿಟ್ಟುಕೊಂಡು ಖಾತೆ ಹಂಚಿಕೆ ಮಾಡುತ್ತಾರೆ. ಕೇಂದ್ರದ ಮುಖಂಡರ ಜೊತೆ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತಾರೆ. ಇಡೀ ಪಕ್ಷವನ್ನು ಒಟ್ಟಾಗಿ ಒಂದಾಗಿ ತೆಗೆದುಕೊಂಡು ಹೋಗುವ ಸಚಿವರ ತಂಡ ರಚನೆಯಾಗುತ್ತದೆ. ರಾಜ್ಯಾಧ್ಯಕ್ಷರು, ಸಿಎಂ, ಹೈಕಮಾಂಡ್ ತೀರ್ಮಾನಕ್ಕೆ ಇಡೀ ರಾಜ್ಯ ಬದ್ಧವಾಗಿರಬೇಕು ಎಂದು ಪಕ್ಷದೊಳಗೆ ತೀರ್ಮಾನವಾಗಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

  • ಅಕ್ಷರಸಂತ ಹರೇಕಳ ಹಾಜಬ್ಬರ ಶಾಲೆಗೆ ಬಂತು 10 ಲಕ್ಷ

    ಅಕ್ಷರಸಂತ ಹರೇಕಳ ಹಾಜಬ್ಬರ ಶಾಲೆಗೆ ಬಂತು 10 ಲಕ್ಷ

    – ಕಿತ್ತಳೆ ಮಾರಿ ಶಾಲೆ ಕಟ್ಟಿದ ಅಕ್ಷರ ಸಂತನನ್ನು ಡಿಢೀರ್ ಭೇಟಿಯಾದ ಸಚಿವರು

    ಮಂಗಳೂರು: ಕೊಣಾಜೆ ಸಮೀಪದ ಹರೇಕಳ ನ್ಯೂಪಡ್ಪುವಿನ ಸರ್ಕಾರಿ ಪ್ರೌಢಶಾಲೆಗೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಏಕಾಏಕಿ ತನ್ನ ಸ್ವಂತ ಆಸಕ್ತಿಯಿಂದ ಭೇಟಿ ನೀಡಿದರು.

    ಇದ್ರಲ್ಲಿ ಏನು ವಿಶೇಷ ಅಂದುಕೊಳ್ಳಬಹುದು. ಈ ಶಾಲೆ ಹಾಗೂ ಶಾಲೆಯ ಸಂಸ್ಥಾಪಕರೇ ವಿಶೇಷ. ಅಕ್ಷರ ಸಂತ ಹರೇಕಳ ಹಾಜಬ್ಬ ಎಂದರೆ ಶಿಕ್ಷಣ ಕ್ಷೇತ್ರಕ್ಕೆ ಒಂದು ದೊಡ್ಡ ಆಸ್ತಿ. ಕಾರಣ ತನಗಿಲ್ಲದ ಶಿಕ್ಷಣ ತನ್ನ ಊರಿನ ಮಕ್ಕಳಿಗೆ ಸಿಗಬೇಕು ಎನ್ನುವ ಮಹದ್ದಾಸೆಯಿಂದ ಕಿತ್ತಳೆ ಮಾರುತ್ತಿದ್ದ ಹರೇಕಳ ಹಾಜಬ್ಬ, ಕಿತ್ತಳೆ ಮಾರಿ ಜೀವನ ಸಾಗಿಸಿ ಉಳಿದ ಹಣದಿಂದಲೇ ಅಂಗನವಾಡಿ ಆರಂಭಿಸಿ ಇದೀಗ ಕಾಲೇಜು ಕಟ್ಟಡ ತೆರೆಯುವ ತಯಾರಿಯಲ್ಲಿದ್ದಾರೆ.

    ಇಂತಹ ಮಹಾನ್ ವ್ಯಕ್ತಿಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಆ ಕುಗ್ರಾಮಕ್ಕೆ ತೆರಳಿ ಭೇಟಿ ಮಾಡಿ, ಬೆನ್ನು ತಟ್ಟಿ ಅಭಿನಂದಿಸಿ, ಅವರ ಕೆಲಸಕ್ಕೆ ಸೈ ಎಂದಿರುವ ಶ್ರೀನಿವಾಸ ಪೂಜಾರಿ ಇದೀಗ ಎಲ್ಲರ ಪ್ರಶಂಸೆಗೆ ಕಾರಣರಾಗಿದ್ದಾರೆ.

    ಶಾಲೆಗೆ ಭೇಟಿ ನೀಡಿದ ಸಚಿವರು, ಶಾಲೆಯ ಆಟದ ಮೈದಾನ ನಿರ್ಮಾಣಕ್ಕೆ ಹತ್ತು ಲಕ್ಷ ರೂಪಾಯಿ ಸರ್ಕಾರದಿಂದ ತಕ್ಷಣ ಬಿಡುಗಡೆ ಮಾಡಿಸಿದ್ದಾರೆ. ಹರೇಕಳದ ಹಾಜಬ್ಬರು ಈ ಭಾಗದಲ್ಲಿ ಶಿಕ್ಷಣಕ್ಕಾಗಿ ಕ್ರಾಂತಿ ಮಾಡುವುದರೊಂದಿಗೆ ಶಾಲೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ನ್ಯೂಪಡ್ಪು ಸರ್ಕಾರಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ರೂಪಿಸಿ, ಅದನ್ನು ಸರ್ಕಾರಕ್ಕೆ ನೀಡಿರೋದು ಅಷ್ಟ ಸಲೀಸಾದ ಕೆಲಸವಲ್ಲ ಎಂದಿದ್ದಾರೆ ಸಚಿವ ಶ್ರೀನಿವಾಸ ಪೂಜಾರಿ.

    ಹಾಜಬ್ಬ ಅವರ ಬೇಡಿಕೆಯಂತೆ ಶಾಲೆಯ ಕ್ರೀಡಾ ಮೈದಾನ ಸೇರಿದಂತೆ ಅಭಿವೃದ್ದಿ ಚಟುವಟಿಕೆಗಳಿಗಳಿಗೆ 10 ಲಕ್ಷ ರೂಪಾಯಿ ಮಂಜೂರುಗೊಳಿಸಲಾಗಿದ್ದು, ಪ್ರಥಮ ಹಂತದಲ್ಲಿ 5 ಲಕ್ಷ ರೂಪಾಯಿ ಬಿಡುಗಡೆ ಮಾಡಲಾಗಿದೆ. ಹಾಜಬ್ಬರ ಶಾಲೆಯ ವಿದ್ಯಾರ್ಥಿಗಳಿಗೆ ಮತ್ತು ಸ್ಥಳೀಯ ನಾಗರಿಕರಿಗೆ ಅನುಕೂಲವಾಗುವಂತೆ ಸರ್ಕಾರಿ ಬಸ್ ನೀಡಬೇಕೆಂಬ ಬೇಡಿಕೆಗೆ ಸಚಿವ ಪೂಜಾರಿ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ. ಮಾತ್ರವಲ್ಲದೆ, ಶಾಲೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಅಭಿವೃದ್ಧಿ ಮಾಡುವ ಭರವಸೆಯನ್ನು ಕೂಡ ಸಚಿವರು ನೀಡಿದ್ದಾರೆ. ಬೇಸಿಗೆ ರಜೆ ಮುಗಿಯುವ ಮುನ್ನ ರಸ್ತೆ ನಿರ್ಮಾಣವಾಗುವ ನಿರೀಕ್ಷೆ ಇದೆ.

    ಸರ್ಕಾರಿ ಶಾಲೆಗಳಲ್ಲಿ ಮೆರಿಟ್ ಆಧಾರದಲ್ಲಿ ಆಯ್ಕೆಯಾದ ಶಿಕ್ಷಕರು ಇರುತ್ತಾರೆ. ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹವನ್ನು ಸರಕಾರ ನೀಡುತ್ತಿದೆ. ಆದ್ದರಿಂದ ಸರ್ಕಾರಿ ಶಾಲೆಯ ಬಗ್ಗೆ ನಿರ್ಲಕ್ಷ ಮಾಡದೆ ಸ್ಥಳೀಯರು ತಮ್ಮ ನೆರೆ ಹೊರೆಯ ಶಾಲೆಗಳ ಸಮಗ್ರ ಅಭಿವೃದ್ಧಿ ಕೈ ಜೋಡಿಸಬೇಕು ಎಂದು ಸಚಿವರು ಹೇಳಿದ್ದಾರೆ.

    ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಶಾಲೆಯ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇವೆ. ಸಚಿವ ಶ್ರೀನಿವಾಸ ಪೂಜಾರಿ ಅವರು ಶಾಲೆಗೆ ಭೇಟಿ ನೀಡಿ ಶಾಲೆಯ ಆಟದ ಮೈದಾನ ಅಭಿವೃದ್ಧಿಗೆ ಅನುದಾನ ಮಂಜೂರುಗೊಳಿಸಿದ್ದಾರೆ. ಅವರಿಗೆ ಶಾಲೆಯ ವತಿಯಿಂದ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದಿದ್ದಾರೆ ಹರೇಕಳ ಹಾಜಬ್ಬ.

    2004 ರಲ್ಲಿ ಕನ್ನಡ ಪತ್ರಿಕೆಯೊಂದು ಹಾಜಬ್ಬರನ್ನು `ವರ್ಷದ ವ್ಯಕ್ತಿ’ ಎಂದು ಪ್ರಶಸ್ತಿ ನೀಡಿ ಗುರುತಿಸುವ ಮೂಲಕ ಹಾಜಬ್ಬ ಬೆಳಕಿಗೆ ಬಂದಿದ್ದರು. ಬಳಿಕ ದೆಹಲಿಯ ಸಿಎನ್‍ಎನ್-ಐಬಿಎನ್ ‘ರಿಯಲ್ ಹೀರೋ’ ಪ್ರಶಸ್ತಿ ನೀಡಿ ಗೌರವಿಸಿತ್ತು.

    ಮಂಗಳೂರು ವಿಶ್ವವಿದ್ಯಾನಿಲಯ ಇರುವ ಕೊಣಾಜೆ ಸಮೀಪದ ಹರೇಕಳದಲ್ಲಿ ಗ್ರಾಮೀಣ ಮಕ್ಕಳಲ್ಲಿ ಶಾಲೆಯ ಸೌಲಭ್ಯ ಇರಲಿಲ್ಲ. ಮಂಗಳೂರಿನ ಕೇಂದ್ರ ಪ್ರದೇಶ ಸ್ಟೇಟ್ ಬ್ಯಾಂಕ್ ಸರ್ಕಲಿನಲ್ಲಿ ಕಿತ್ತಳೆ ಹಣ್ಣು ಮಾರಾಟ ಮಾಡುವ ಕಾಯಕ ಮಾಡುತ್ತಿದ್ದ ಹಾಜಬ್ಬ ತಾವೇ ಶಾಲೆಯೊಂದನ್ನು ತನ್ನೂರಿನಲ್ಲಿ ನಿರ್ಮಿಸಿದ್ದರು.

    ಕಿತ್ತಳೆ ಮಾರಾಟ ಮಾಡುತ್ತಿದ್ದಾಗ ವಿದೇಶಿ ಮಹಿಳೆಯ ಆಂಗ್ಲ ಭಾಷೆಯ ಪ್ರಶ್ನೆಗೆ ಉತ್ತರ ನೀಡಲಾಗದ ಹಾಜಬ್ಬರಿಗೆ ಶಿಕ್ಷಣದ ಮಹತ್ವ ಅರಿವಾಗಿತ್ತು. ಈ ಹಿನ್ನೆಲೆಯಲ್ಲಿಯೇ ತನ್ನೂರಿನ ಮಕ್ಕಳಿಗೆ ಶಾಲೆ ತೆರೆಯಲು ಕಚೇರಿಯಿಂದ ಕಚೇರಿಗೆ ಅಲೆದು ಶಾಲೆ ನಿರ್ಮಾಣ ಮಾಡಿದ್ದರು. ಇವರ ಸಾಧನೆಯ ವಿಚಾರ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದರೂ ಹೆಚ್ಚಿನ ಪ್ರಚಾರ ಪಡೆದುಕೊಂಡಿರಲಿಲ್ಲ. ಇದೀಗ ಅವರು ತನ್ನೂರಿನಲ್ಲಿ ಕಾಲೇಜು ಆರಂಭಿಸುವ ಆಶಯ ಹೊಂದಿದ್ದಾರೆ.