ಉಡುಪಿ: ಕರಾವಳಿಯ ಬಹು ಚರ್ಚಿತ ಮುಸ್ಲಿಂ ಬಿಲ್ಲವ ಸಮಾವೇಶ ಅನಿರ್ದಿಷ್ಟಾವಧಿಗೆ ಮುಂದಕ್ಕೆ ಹೋಗಿದೆ. ಉಡುಪಿಯಲ್ಲಿ ಇಂದು ನಡೆಯಬೇಕಿದ್ದ ಮುಸ್ಲಿಂ ಬಿಲ್ಲವ ಸಮಾವೇಶಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು.
ಸಾಮಾಜಿಕ ಜಾಲತಾಣದಿಂದ ವಿರೋಧ ವ್ಯಕ್ತವಾಗುತ್ತಿದ್ದಂತೆ ಬಿಲ್ಲವ ಸಮುದಾಯದ ಪ್ರಮುಖರಿಂದ ಸಮಾವೇಶದ ವಿರುದ್ಧ ಜನಾಭಿಪ್ರಾಯ ವ್ಯಕ್ತವಾಗಿತ್ತು. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಕಾರ್ಯಕ್ರಮ ರದ್ದಾಗಿದೆ. ಹಿಂದೂ ಧರ್ಮದ ಒಂದು ಜಾತಿಯನ್ನು ಟಾರ್ಗೆಟ್ ಮಾಡಿಕೊಂಡು ಸಮಾವೇಶ ಆಯೋಜಿಸಿದ್ದಾರೆಂಬೂದು ಚರ್ಚೆಗೆ, ವಿವಾದಕ್ಕೆ ಕಾರಣ.
ಬಿಲ್ಲವರು ಬಿಜೆಪಿಯ ಪ್ರಬಲ ವೋಟ್ ಬ್ಯಾಂಕ್ ಎಂಬುವುದರಲ್ಲಿ ಎರಡು ಮಾತಿಲ್ಲ. ಸಮಾವೇಶ ರದ್ದು ಮಾಡಿಸುವ ಹಿಂದೆ ಬಿಜೆಪಿ ಕೆಲಸ ಮಾಡಿರೋದ್ರಲ್ಲಿ ಸಂಶಯವಿಲ್ಲ ಎನ್ನಲಾಗುತ್ತಿದೆ. ಮುಸ್ಲಿಂ ಬಿಲ್ಲವ ಸಮಾವೇಶಕ್ಕೆ ವಿರೋಧ ವ್ಯಕ್ತವಾಗುತ್ತಿದ್ದಂತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕಾರ್ಯಕ್ರಮದಿಂದ ಹಿಂದೆ ಸರಿದಿದ್ದರು. ಆಮಂತ್ರಣದಲ್ಲಿ ಇದ್ದ ಮುಖ್ಯ ಅತಿಥಿಗಳೂ ಹಿಂದೆ ಸರಿದಿದ್ದಾರೆ. ಪತ್ರಿಕಾಗೋಷ್ಠಿ ನಡೆಸಿದ ಬಿಲ್ಲವ ಮುಖಂಡರ ಒತ್ತಡದಿಂದ ಸಮಿತಿ ಇಂದು ನಡೆಯಬೇಕಿದ್ದ ಕಾರ್ಯಕ್ರಮವನ್ನು ಮುಂದೂಡಿದೆ.
ಕಾರ್ಯಕ್ರಮ ರೂಪುರೇಷೆ ಮಾಡಿದ್ದ ಮಾಜಿ ಸಚಿವ ವಿನಯಕುಮಾರ್ ಸೊರಕೆ ಕೋಟ ಶ್ರೀನಿವಾಸ ಪೂಜಾರಿ ಕಡೆ ಬೊಟ್ಟುಮಾಡಿ, ಅವರಿಂದ ಸಹಕಾರ ಸಿಗದ ಕಾರಣ ಕಾರ್ಯಕ್ರಮ ರದ್ದಾಗಿರೋದಾಗಿ ಹೇಳಿದ್ದಾರೆ.
ಮಂಗಳೂರು: ವಿಪಕ್ಷಗಳ ಪ್ರೇರಣೆಯಿಂದ ಎಡಪಂಥೀಯ ಕಾರ್ಮಿಕ ಸಂಘಟನೆಗಳು ಕರೆ ಕೊಟ್ಟಿರುವ ಭಾರತ್ ಬಂದ್ ಸಂಪೂರ್ಣವಾಗಿ ವಿಫಲವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯಪಟ್ಟಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಸಚಿವರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಭಾರತ್ ಬಂದ್ ಕರೆಗೆ ಬೆಂಬಲ ನೀಡದೆ ಬಂದ್ ಅನ್ನು ವಿಫಲಗೊಳಿಸಿದ್ದಾರೆ. ದೇಶದೆಲ್ಲೆಡೆ ಬಂದ್‍ಗೆ ಕರೆ ಕೊಟ್ಟವರು ನಿರಾಶರಾಗಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳೂರಿಗೆ ಬಂದರೆ ಪ್ರತಿಭಟನೆ ನಡೆಸುತ್ತೇವೆ ಎಂಬ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜ ಹೇಳಿಕೆಗೆ ತಿರುಗೇಟು ನೀಡಿದರು. ಹರಿಯುವ ಹೊಳೆ ನೀರಿಗೆ ದೊಣ್ಣೆ ನಾಯಕನ ಅಪ್ಪಣೆ ಬೇಕೇ? ಕೇಂದ್ರದ ಗೃಹ ಸಚಿವರು ಮಂಗಳೂರಿಗೆ ಬಂದರೆ ಸಂಭ್ರಮ ಪಡಬೇಕು. ಪೌರತ್ವ ತಿದ್ದುಪಡೆ ಕಾಯ್ದೆ ಬಗ್ಗೆ ಜನರಿಗೆ ಮನವರಿಕೆ ಮಾಡಲು ಅಮಿತ್ ಶಾ ಬರುತ್ತಿದ್ದಾರೆ. ಅವರು ಮನೆ ಬಾಗಿಲಿಗೆ ಬರುವಾಗ ಎಲ್ಲರೂ ಸ್ವಾಗತಿಸುತ್ತಾರೆ ಎಂದುಕೊಂಡಿದ್ದೆ. ಹೀಗಾಗಿ ಐವಾನ್ ಡಿಸೋಜ ಅಷ್ಟು ಸಣ್ಣತನ ಪ್ರದರ್ಶಿಸದೆ ಸ್ವಾಗತಿಸಲಿ ಎಂದು ಸಲಹೆ ನೀಡಿದರು.
ಬಂದ್‍ಗೆ ನೀರಸ ಪ್ರತಿಕ್ರಿಯೆ:
ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ದೇಶಾದ್ಯಂತ ಮುಷ್ಕರಕ್ಕೆ ಎಡಪಂಥೀಯ ಸಂಘಟನೆಗಳು ಕರೆ ನೀಡಿದ್ದರೂ ರಾಜ್ಯದ ಕರಾವಳಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಬಸ್ ಸೇರಿದಂತೆ ಎಲ್ಲಾ ವಾಹನಗಳು ಮುಂಜಾನೆಯಿಂದಲೇ ಸಂಚಾರ ಆರಂಭಿಸಿದ್ದು, ಯಾವುದೇ ವಾಹನಗಳು ಬಂದ್‍ಗೆ ಬೆಂಬಲ ನೀಡಿಲ್ಲ. ಜೊತೆಗೆ ಶಾಲಾ, ಕಾಲೇಜುಗಳು, ಸರ್ಕಾರಿ ಖಾಸಗಿ ಕಚೇರಿಗಳು, ತರಕಾರಿ ಹಾಗೂ ಮೀನು ಮಾರುಕಟ್ಟೆ ಎಂದಿನಂತೆ ದಿನಚರಿ ನಡೆಸಿತ್ತು. ಆದರೆ ಕೇರಳದಲ್ಲಿ ಬಂದ್ ಸಂಪೂರ್ಣವಾಗಿ ಯಶಸ್ವಿಯಾಗಿರುವುದರಿಂದ ಮಂಗಳೂರಿನಿಂದ ಕಾಸರಗೋಡಿಗೆ ತೆರಳಬೇಕಿದ್ದ ಎಲ್ಲಾ ಕೆಎಸ್‍ಆರ್ ಟಿಸಿ ಬಸ್‍ಗಳ ಸಂಚಾವನ್ನು ಸ್ಥಗಿತಗೊಳಿಸಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲಾದ್ಯಂತ ಬಂದ್‍ಗೆ ಬೆಂಬಲ ಸಿಗದಿದ್ದು ಬಂದ್ ಸಂಪೂರ್ಣ ವಿಫಲವಾಗಿದೆ.
ಧಾರವಾಡ: ಪೌರತ್ವ ಕಾಯ್ದೆ ವಿರೋಧಿಸಿ ಮಾಜಿ ಸಚಿವ ಯು.ಟಿ ಖಾದರ್ ಹೇಳಿಕೆ ವಿಚಾರವಾಗಿ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿರುಗೇಟು ನೀಡಿದ್ದು, ನೀವು ಹಾಕುವ ಬೆಂಕಿಗೆ ನೀರು ಹಾಕಿ ನಂದಿಸುವ ಸಾಮರ್ಥ್ಯ ನಮಗಿದೆ ಎಂದು ತಿರುಗೇಟು ನೀಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಷ್ಟ್ರೀಯತೆ ಗಮನ ಇಟ್ಟುಕೊಂಡು ಪ್ರಜಾಪ್ರಭುತ್ವದ ದೇಗುಲವಾದ ಸಂಸತ್‍ನಲ್ಲಿ ಪೌರತ್ವ ಕಾಯ್ದೆ ತಿದ್ದುಪಡಿಯಾಗಿ ರೂಪಗೊಂಡಿದೆ. ಬಹುಮತದಿಂದ ತಿದ್ದುಪಡಿ ಮಸೂದೆ ಕಾಯ್ದೆಯಾಗಿ ಜಾರಿಗೆ ಬಂದಿದೆ. ಈ ತಿದ್ದುಪಡಿ ಕಾಯ್ದೆಯನ್ನು ಇಡೀ ರಾಷ್ಟ್ರವೇ ಸ್ವಾಗತಿಸಿದೆ. ಆದರೆ ಅಧಿಕಾರ ಕಳೆದುಕೊಂಡ ಕೆಲವರು ರಾಜಕೀಯ ಪ್ರೇರಿತ ಚರ್ಚೆಗಳನ್ನು ಮುಂದಿಟ್ಟಿದ್ದಾರೆ. ಜನರಿಗೆ ತಪ್ಪು ಸಂದೇಶ ರವಾನಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಬೆಂಕಿ ಬೀಳುತ್ತೆ ಅಂತಾ ಯು.ಟಿ ಖಾದರ್ ಹೇಳಿದ್ದಾರೆ. ಆದರೆ ವರುಣ ದೇವನ ಕೃಪೆಯಿಂದ ಕರ್ನಾಟಕದಲ್ಲಿ ಸಮೃದ್ಧವಾದ ಜಲವಿದೆ. ನದಿಗಳೆಲ್ಲಾ ಭರ್ತಿಯಾಗಿವೆ. ನೀವು ಹಾಕುವ ಬೆಂಕಿಗೆ ನೀರು ಹಾಕುವ ಸಾಮರ್ಥ್ಯ ನಮಗಿದೆ ಎಂದು ಸಚಿವರು ಕೈ ನಾಯಕನಿಗೆ ಟಾಂಗ್ ಕೊಟ್ಟರು.
ಇದೇ ವೇಳೆ ಹಿಂದಿನ ಸರ್ಕಾರ ಮಠಗಳಿಗೆ ನೀಡಿದ ಅನುದಾನ ದೇವಸ್ಥಾನಗಳಿಗೆ ವರ್ಗಾಯಿಸುವ ವಿಚಾರವಾಗಿ ಮಾತನಾಡಿ, 60 ಕೋಟಿ ಹಣವನ್ನು ಮಠಗಳಿಗೆ ನೀಡುವ ಪ್ರಸ್ತಾಪ ಇದೆ. ಯಾವುದೇ ಮಠಗಳನ್ನು ನಿರ್ಲಕ್ಷ್ಯ ಮಾಡುವುದಿಲ್ಲ. ಯಾವುದೇ ಸರ್ಕಾರ ಹಣ ನೀಡಿದ್ದರೂ ಅದನ್ನು ನಾವು ನ್ಯಾಯಸಮ್ಮತವಾಗಿ ತಲುಪಿಸುತ್ತೇವೆ ಎಂದು ಹೇಳಿದರು. ಮಠಗಳಿಗೆ ನೀಡುವ ಹಣವನ್ನು ಯಾವ ದೇವಸ್ಥಾನಕ್ಕೂ ನೀಡುತ್ತಿಲ್ಲ. ಹಣಕಾಸಿನ ಹೊಂದಾಣಿಕೆ ವಿಷಯದಲ್ಲಿ ಮಾತ್ರ ಸ್ವಲ್ಪ ತಡವಾಗಿದೆ. ಪರಿಶೀಲನೆ ಮಾಡಿ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದರು.
ಬೆಂಗಳೂರು: ದೇವಸ್ಥಾನಗಳಿಗೆ ಹೈಟೆಕ್ ಸ್ಪರ್ಶ ನೀಡಲು ಮುಂದಾಗಿವ ಬಿಜೆಪಿ ಸರ್ಕಾರವು, ಇ-ಹುಂಡಿ ವ್ಯವಸ್ಥೆ ಜಾರಿಗೆ ತರಲು ನಿರ್ಧಾರ ಕೈಗೊಂಡಿದೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು, 15 ದಿನಗಳಲ್ಲಿ ರಾಜ್ಯ ಧಾರ್ಮಿಕ ಪರಿಷತ್ ರಚನೆ ಆಗಲಿದೆ. ಜೊತೆಗೆ ರಾಜ್ಯದ 30 ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಉಸ್ತುವಾರಿಯಲ್ಲಿ ಜಿಲ್ಲಾ ಧಾರ್ಮಿಕ ಪರಿಷತ್ ರಚನೆ ಮಾಡುತ್ತೇವೆ. ಈ ಬೆನ್ನಲ್ಲೇ ಇ-ಹುಂಡಿ ಪ್ರಕ್ರಿಯೆ ಜಾರಿಗೆ ತರುತ್ತಿದ್ದೇವೆ. ಪ್ರಾರಂಭದಲ್ಲಿ 10-15 ದೇವಸ್ಥಾನಗಳಲ್ಲಿ ಇ-ಹುಂಡಿ ಪ್ರಕ್ರಿಯೆ ಜಾರಿ ಬಲಿದೆ ಎಂದು ತಿಳಿಸಿದರು.
ಜಿಲ್ಲಾ ಪರಿಷತ್ ರಚನೆ ಆದ ಬಳಿಕ ಬಿ ಮತ್ತು ಸಿ ವಲಯದ ದೇವಾಲಯಗಳಿಗೆ ಆಡಳಿತ ಮಂಡಳಿಗಳ ನೇಮಕ ಮಾಡಲಾಗುತ್ತದೆ. ರಾಜ್ಯದಲ್ಲಿ ಇರು ಮುಜರಾಯಿ ದೇವಾಲಯಗಳ ಜಾಗ ಸರ್ವೆ ಮಾಡಲು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಸರ್ವೆ ತಂಡ ರಚನೆ ಮಾಡಲಾಗುವುದು. ಸರ್ವೆ ವೇಳೆ ದೇವಸ್ಥಾನದ ಜಾಗ ಅತಿಕ್ರಮ ಮಾಡಿದ್ದರೆ ವಶಪಡಿಸಿಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.
ಇಷ್ಟು ದಿನ ಲೋಕೋಪಯೋಗಿ ಇಲಾಖೆ ನೇತೃತ್ವದಲ್ಲಿ ನಡೆಯುತ್ತಿದ್ದ ಇಂಜಿನಿಯರಿಂಗ್ ವಿಭಾಗದ ಬದಲಾಗಿ ಇಲಾಖೆಯಿಂದಲೇ ಇಂಜಿನಿಯರಿಂಗ್ ವಿಭಾಗ ಪ್ರಾರಂಭ ಮಾಡಲಾಗುತ್ತೆ. ಇಲಾಖೆಯ ವ್ಯಾಪ್ತಿಗೆ ಬರುವ ಅನುವಂಶಿಕ ದೇವಸ್ಥಾನಗಳಿಗೆ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ನೇಮಕ ಮಾಡುವುದಕ್ಕೆ ನಿರ್ಧರಿಸಲಾಗಿದೆ. ಎ ವರ್ಗದ 62 ದೇವಾಲಯಗಳಿಗೆ ಆಡಳಿತ ಮಂಡಳಿ ರಚನೆ ಮಾಡುವ ಆದೇಶ ಹೊರಡಿಸಲಾಗಿದೆ. ಇದಲ್ಲದೆ ಇಲಾಖೆಯಲ್ಲಿ ಅಗತ್ಯವಾಗಿ ಖಾಲಿ ಇರುವ ಒಂದು ಸಾವಿರ ಹುದ್ದೆಗಳ ನೇಮಕ ಶೀಘ್ರವೇ ಭರ್ತಿ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.
ಏನಿದು ಇ-ಹುಂಡಿ?
ಭಕ್ತರು ನೀಡುವ ಕಾಣಿಕೆಯನ್ನು ನೇರವಾಗಿ ಇ-ಹುಂಡಿಗೆ ಹಾಕುವುದು. ಇದರಿಂದಾಗಿ ಕಾಣಿಕೆ ನೀಡುವುದಕ್ಕೆ ಯಾವುದೇ ವ್ಯಕ್ತಿಗಳ ಅವಶ್ಯಕತೆ ಇರುವುದಿಲ್ಲ. ಎಷ್ಟು ಹಣ ಹಾಕಲಾಗಿದೆ, ಹೆಸರು ಸಮೇತ ನಿಮಗೆ ಮಾಹಿತಿ ತಕ್ಷಣಕ್ಕೆ ಲಭ್ಯವಾಗುತ್ತದೆ. ಕಾಣಿಕೆ ಮೊತ್ತದ ವಿವರ ಸ್ಲಿಪ್‍ನಲ್ಲಿ ತಕ್ಷಣವೇ ಲಭ್ಯವಾಗಲಿದೆ. ಯಾವುದೇ ವ್ಯಕ್ತಿ ಕೈಗೆ ಕಾಣಿಕೆ ಕೊಡುವ ಅವಶ್ಯಕತೆ ಇರುವುದಿಲ್ಲ. ಅಷ್ಟೇ ಅಲ್ಲದೆ ಸ್ಲಿಪ್ ಬರೆಸುವ ಗೋಜು ಇರುವುದಿಲ್ಲ. ಭಕ್ತರು ಇ-ಹುಂಡಿಯಲ್ಲಿ ಹಾಕಿದ ಹಣ ನೇರವಾಗಿ ದೇವಸ್ಥಾನ ಬ್ಯಾಂಕ್ ಅಕೌಂಟ್‍ಗೆ ಜಮೆ ಆಗುತ್ತೆ. ಈ ಸೇವೆಗಳನ್ನು ನಿಂತಲ್ಲೆ ಬುಕ್ ಮಾಡಿಸಬಹುದು. ಇ-ಹುಂಡಿಯಲ್ಲಿ ಹಣ ಕಟ್ಟಿ ವಿಶೇಷ ಸೇವೆಗಳನ್ನು ದೇವಸ್ಥಾನಗಳಲ್ಲಿ ಮಾಡಿಸಬಹುದು.
ಇದೇ ವೇಳೆ ನೆರೆ ಪರಿಹಾರದ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಈಗಾಗಲೇ ಕೇಂದ್ರ ತಂಡ ಪರಿಶೀಲನೆ ಮಾಡಿಕೊಂಡು ಹೋಗಿದೆ. ಆದಷ್ಟು ಬೇಗ ಕೇಂದ್ರ ಹೆಚ್ಚು ಅನುದಾನ ನೀಡುವ ನಿರೀಕ್ಷೆ ರಾಜ್ಯ ಸರ್ಕಾರಕ್ಕೆ ಇದೆ. ಆದಷ್ಟು ಬೇಗ ಕೇಂದ್ರದಿಂದ ಅನುದಾನ ಬರುತ್ತದೆ. ಗರಿಷ್ಠ ಪ್ರಮಾಣದಲ್ಲಿ ಅನುದಾನ ರಾಜ್ಯಕ್ಕೆ ಬರಲಿದೆ. ಕೇಂದ್ರ ಸರ್ಕಾರದ ಮೇಲೆ ನಮಗೆ ನಂಬಿಕೆ ಇದೆ ಎಂದು ತಿಳಿಸಿದರು.
ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಪರ ಬುಧವಾರ ನಡೆದ ಹೋರಾಟದ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಜಾರಿ ನಿರ್ದೇಶನಾಲಯ (ಇಡಿ) ತೆಗೆದುಕೊಂಡ ನಿರ್ಧಾರ ಸರಿ ಇದೆ. ನಮ್ಮ ಬಿಜೆಪಿ ನಾಯಕರು ಯಾರು ಪ್ರತಿಭಟನೆ ಹೋಗಿಲ್ಲ. ಯಾರಾದರು ಹೋಗಿದ್ದರೆ ಅದಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ. ನನ್ನ ಗಮನಕ್ಕೆ ಬಂದಿರುವಂತೆ ನಮ್ಮ ಪಕ್ಷದ ಯಾವ ನಾಯಕರು ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಇಲ್ಲ. ಡಿ.ಕೆ.ಶಿವಕುಮಾರ್ ಅವರ ಬಂಧನದಲ್ಲಿ ಕೇಂದ್ರ ಸರ್ಕಾರ ಯಾವುದೇ ಹಸ್ತಕ್ಷೇಪ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.
ಉಡುಪಿ: ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉಡುಪಿಯ ಜೀವನದಿ ಸ್ವರ್ಣೆಗೆ ಬಾಗಿನ ಅರ್ಪಿಸಿದ್ದಾರೆ. ಶೀಂಬ್ರಾ ಸಿದ್ಧಿ ವಿನಾಯಕ ದೇವಸ್ಥಾನದ ತಪ್ಪಲಲ್ಲಿರುವ ಸ್ನಾನ ಘಟ್ಟಕ್ಕೆ ಕೋಟ ದಂಪತಿ ಸಮೇತ ಆಗಮಿಸಿ ಸ್ವರ್ಣೆಗೆ ಬಾಗಿನ ಅರ್ಪಿಸಿದರು.
ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅವರು, ತೀರ್ಥ, ಹಾಲು, ಬಾಗಿನವನ್ನು ಅರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಾಗಿನ ಅರ್ಪಿಸುವ ಪುಣ್ಯ ಕಾರ್ಯದಲ್ಲಿ ಭಾಗಿಯಾಗಿದ್ದೇನೆ. ಶೀಂಬ್ರಾ ದೇವಸ್ಥಾನ, ಸ್ನಾನಘಟ್ಟವನ್ನು ಮುಜರಾಯಿ ಇಲಾಖೆಯಿಂದ ಅಭಿವೃದ್ಧಿ ಮಾಡಲಾಗುವುದು. ಡಾ. ವಿಎಸ್ ಆಚಾರ್ಯ ಕಾಲದಿಂದ ಈ ಕ್ಷೇತ್ರ ಪ್ರಸಿದ್ಧಿಯಲ್ಲಿದೆ ಎಂದರು.
ಮುಜರಾಯಿ ದೇವಸ್ಥಾನದ ಹಣ ದುರ್ಬಳಕೆ ಬಗೆಗಿನ ಪ್ರಶ್ನೆಗೆ ಉತ್ತರಿಸಿದ ಅವರು, ಇಲಾಖೆಯ ಹಣ ದುರ್ಬಳಕೆ ಆಗಲು ಬಿಡಲ್ಲ. ಇದು ಮುಜುರಾಯಿ ಇಲಾಖೆಯ ನಿರ್ಣಯ. ಈ ಬಗ್ಗೆ ಈಗಾಗಲೇ ಎರಡು ಬಾರಿ ಅಧಿಕಾರಿಗಳ ಸಭೆ ನಡೆಸಿದ್ದೇನೆ. 27 ಸಾವಿರ ದೇವಸ್ಥಾನಗಳಿಗೆ ಇಲಾಖೆಯಿಂದ ತಸ್ತೀಕು (ಸಂಬಳ) ನೀಡಲಾಗುತ್ತಿದೆ. ವರ್ಷಕ್ಕೆ 48 ಸಾವಿರ ತಸ್ತೀಕು ಕೊಡುತ್ತೇವೆ. ತಸ್ತೀಕಿನಲ್ಲಿ ತಾರತಮ್ಯ ಇದೆ ಎಂಬ ಆರೋಪ ಇದೆ. ಈ ಗವರ್ನೆನ್ಸ್ ಮೂಲಕ ಖಾತೆಗೆ ಹಣ ಜಮಾ ಮಾಡಲು ಯೋಜನೆ ಹಾಕಿದ್ದೇವೆ ಎಂದರು. ಈ ಬಗ್ಗೆ ಸೂಕ್ತ ಆದೇಶ ಹೊರಡಿಸಿದ್ದೇನೆ, ವಾರದೊಳಗೆ ಈ ಕುರಿತ ಪ್ರಕ್ರಿಯೆ ಪೂರ್ಣವಾಗಲಿದೆ ಎಂದು ಕೋಟ ಹೇಳಿದರು.
ಉಡುಪಿ: ಕ್ಯಾಬಿನೆಟ್ ದರ್ಜೆ ಸಚಿವ ಕೋಟ ಶ್ರೀನಿವಾಸ ಪೂಜಾರಿಗೆ ಮೀನುಗಾರಿಕೆ, ಬಂದರು, ಮುಜರಾಯಿ ಇಲಾಖೆ ಜವಾಬ್ದಾರಿ ಹೊರಿಸಲಾಗಿದೆ. ಕೋಟ ಶ್ರೀನಿವಾಸ ಅವರು ಮೀನುಗಾರಿಕಾ ಮಂತ್ರಿಯಾಗುತ್ತಿದ್ದಂತೆಯೇ ಫ್ರೆಶ್ ಮೀನು ಅವರ ಮನೆ ಬಾಗಿಲಿಗೆ ಬಂದಿದೆ.
ಒಟ್ಟು 17 ಸಚಿವರಿಗೆ ಖಾತೆ ಸಿಕ್ಕಿದೆ. ಕೋಟ ಶ್ರೀನಿವಾಸ ಪೂಜಾರಿಗೆ ಮೀನುಗಾರಿಕಾ ಖಾತೆ ಸಿಗುತ್ತಿದ್ದಂತೆ ಮೀನೇ ಸಚಿವರನ್ನು ಹುಡುಕುತ್ತಾ ಮನೆ ಬಾಗಿಲಿಗೆ ಬಂದಂತಿದೆ. ಮೊಗವೀರ ಮಹಿಳೆ ಗುಲಾಬಿ `ಶಾಂತಕ್ಕಾ ಫ್ರೆಶ್ ಮೀನ್ ಇತ್ತ್ ಕಾಣಿ ಎಂದು’ ಬುಟ್ಟಿಯನ್ನು ಅಂಗಳದಲ್ಲಿಟ್ಟು ತೆಂಗಿನ ಮರದ ಕಟ್ಟೆಯಲ್ಲಿ ಕುಳಿತು ಕರೆದಿದ್ದಾರೆ.
ಕೋಟ ಶ್ರೀನಿವಾಸ ಪೂಜಾರಿ ಮನೆಗೆ ಮೊಗವೀರ ಮಹಿಳೆ ಮೀನು ಮಾರುತ್ತಾ ಬಂದಿದ್ದಾರೆ. ಕೋಟದಲ್ಲಿರುವ ಸಚಿವರ ಮನೆಗೆ ಬಂದ ಗುಲಾಬಿ, ಫ್ರೆಶ್ ಮೀನುಗಳಿದ್ದ ಬುಟ್ಟಿ ಹೊತ್ತು ತಂದಿದ್ದಾರೆ. ಸಮುದ್ರದಿಂದ ಆಗಷ್ಟೇ ಹಿಡಿದ ಕಾಣೆ, ಬಂಗುಡೆ, ಪಾಂಪ್ಲೆಟ್ ಮೀನನ್ನು ತಂದಿದ್ದಾರೆ. ಶ್ರೀನಿವಾಸ ಪೂಜಾರಿ ಇದ್ದಾಗ ಬಂದ್ರೆ ನನ್ನನ್ನು ವಾಪಾಸ್ ಕಳುಹಿಸಿಕೊಡುವುದೇ ಇಲ್ಲ. ಫ್ರಿಡ್ಜ್ ನಲ್ಲಿ ಫುಲ್ ಮೀನಿದ್ರೂ ಮತ್ತೆ ಫ್ರೆಶ್ ಮೀನು ತೆಗೆದುಕೊಳ್ಳುತ್ತಾರೆ. ಎಷ್ಟೇ ದುಬಾರಿಯಾದ್ರೂ ಕೋಟ ಮೀನು ಖರೀದಿ ಮಾಡಿಯೇ ಮಾಡುತ್ತಾರೆ ಎಂದು ಗುಲಾಬಿ ಪಬ್ಲಿಕ್ ಟಿವಿಗೆ ಹೇಳಿದ್ದಾರೆ.
ಇಷ್ಟಕ್ಕೂ ಕೋಟ ಶ್ರೀನಿವಾಸ ಪೂಜಾರಿ ಸಚಿವರಾಗಿದ್ದು, ಮೀನುಗಾರಿಕೆ ಬಂದರು ಇಲಾಖೆಯ ಜವಾಬ್ದಾರಿ ಸಿಕ್ಕಿದ್ದು ಮೀನುಗಾರ ಮಹಿಳೆ ಗುಲಾಬಿಗೆ ಗೊತ್ತೇ ಇಲ್ಲ. ಹಿಂದೆಯೂ ಒಮ್ಮೆ ಕೋಟ ಸಚಿವರಾಗಿದ್ದರು. ಆಗಲೂ ಮೀನು ಮಾರುತ್ತಾ ಬಂದಿದ್ದೇನೆ. ಮುಂದೆಯೂ ಬರುತ್ತೇನೆ ಎಂದು ಹೇಳಿ ಗುಲಾಬಿ ಬುಟ್ಟಿ ಹೊತ್ತು, ಬಂಗುಡೆ, ಮಾಂಜಿ, ಕಾಣಿ ಎಂದು ಹೇಳುತ್ತಾ ಹೊರಟರು.
ಉಡುಪಿ: ವಿಶ್ವಾಸ ಮತದಲ್ಲಿ ಸೋತು ಮೈತ್ರಿ ಸರಕಾರ ಅಧಿಕಾರ ಕಳೆದುಕೊಂಡಿದ್ದು, ಹಸಿರು ಶಾಲು ಹೊದ್ದು ಬಿಎಸ್ ಯಡಿಯೂರಪ್ಪ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ನಡುವೆ ಕರಾವಳಿ ಜಿಲ್ಲೆ ಉಡುಪಿಯಲ್ಲಿ ಕ್ಲೀನ್ ಸ್ವೀಪ್ ಮಾಡಿರುವ ಬಿಜೆಪಿ ನಾಯಕರಲ್ಲಿ ಯಾರು ಮಂತ್ರಿಯಾಗಬಹುದು, ಯಾರಿಗೆ ನಿಗಮ ಮಂಡಳಿ ಸಿಗಬಹುದು ಎಂಬ ಕೂಡಿ ಕಳೆಯುವ ಲೆಕ್ಕಾಚಾರ ಆರಂಭವಾಗಿದೆ.
ಮೈತ್ರಿ ಸರ್ಕಾರದ 13 ತಿಂಗಳಿಗೆ ವಿಶ್ವಾಸ ಕಳೆದ ಬೆನ್ನಲ್ಲೇ ಬಿಜೆಪಿ ನಾಯಕರು ಸರ್ಕಾರ ರಚನೆ ಮಾಡುವ ಓಡಾಟದಲ್ಲಿದ್ದಾರೆ. ಜಿಲ್ಲೆಯಲ್ಲಿ ಐದಕ್ಕೈದು ಬಿಜೆಪಿ ಶಾಸಕರೇ ಇರುವುದರಿಂದ, ಅದರಲ್ಲೂ ಎಲ್ಲ ನಾಯಕರು ಹಿರಿಯರೇ ಆಗಿರುವುದರಿಂದ ರಾಜ್ಯ ನಾಯಕರಿಗೆ ತಲೆ ಬಿಸಿ ಶುರುವಾಗಿದೆ.
ಹಿಂದುಳಿದ ವರ್ಗದ ಪ್ರಬಲ ನಾಯಕ ಪೂಜಾರಿ:
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಉಡುಪಿಯಿಂದ ಕೋಟ ಶ್ರೀನಿವಾಸ ಪೂಜಾರಿ ಸಚಿವರಾಗಬಹುದು ಎಂಬ ಮಾತು ಜಿಲ್ಲೆಯ ರಾಜಕೀಯ ವಲಯದಿಂದ ಕೇಳಿ ಬರುತ್ತಿದೆ. ಕೋಟ ಅವರು ಪರಿಷತ್ ವಿಪಕ್ಷ ನಾಯಕರೂ ಆಗಿದ್ದು, ಮೂರು ಬಾರಿ ಎಂಎಲ್‍ಸಿ, ಒಂದು ಬಾರಿ ಮುಜರಾಯಿ ಇಲಾಖೆ ಸಚಿವರಾದವರು. ಗ್ರಾಮ ಪಂಚಾಯತ್, ತಾಲೂಕು, ಜಿಲ್ಲಾಪಂಚಾಯತ್ ಸದಸ್ಯರು, ಹಿರಿತನದ ಆಧಾರದ ಮೇಲೆ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಸಚಿವ ಸ್ಥಾನ ಸಿಗಬಹುದು ಎಂಬ ಲೆಕ್ಕಾಚಾರ ಇದೆ.
ಹಿಂದೂ ಫೈರ್ ಬ್ರ್ಯಾಂಡ್ ವಿ.ಸುನೀಲ್ ಕುಮಾರ್:
ಮೂರು ಸಾರಿ ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಗೆದ್ದ ಯುವ ನಾಯಕರಾಗಿದ್ದು, ಸದ್ಯ ವಿಪಕ್ಷದ ಮುಖ್ಯ ಸಚೇತಕರಾಗಿದ್ದಾರೆ. ವಿಶ್ವಾಸಮತ ಯಾಚನೆ ಸಂದರ್ಭದ ಜವಾಬ್ದಾರಿಯಿಂದ ಹೈಕಮಾಂಡ್ ನಾಯಕರನ್ನು ಸೆಳೆದಿದ್ದಾರಂತೆ. ಹಿಂದೂ ಫೈರ್ ಬ್ರ್ಯಾಂಡ್ ಅಂತ ಸುನೀಲ್ ಗುರುತಿಸಿಕೊಂಡಿದ್ದು, ಕರಾವಳಿಯ ಪ್ರಬಲ ಬಿಲ್ಲವ ಜಾತಿ ಬಲ ಕೂಡ ಇರೋದರಿಂದ ಸಂಪುಟಕ್ಕೆ ಹೊಸಮುಖವನ್ನು ತರ್ತಾರೆ ಎಂಬ ಲೆಕ್ಕಾಚಾರವೂ ಇದೆ.
ಕುಂದಾಪುರದ ವಾಜಪೇಯಿ ಹಾಲಾಡಿ ಶ್ರೀನಿವಾಸ್ ಶೆಟ್ಟಿ:
ನಾಲ್ಕು ಬಾರಿ ಬಿಜೆಪಿಯಿಂದ, ಒಂದು ಬಾರಿ ಪಕ್ಷೇತರರಾಗಿ ಆಯ್ಕೆಯಾಗುವ ಮೂಲಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರು ಐದು ಬಾರಿ ಶಾಸಕರಾಗಿದ್ದಾರೆ. ಪಕ್ಷೇತರರಾದಾಗಲೂ ಬಿಜೆಪಿಗೆ ಬೆಂಬಲಿಸಿದ್ದ ಹಾಲಾಡಿಯವರಿಗೆ ಕಳೆದ ಬಾರಿ ಸಚಿವ ಸ್ಥಾನ ಕೈತಪ್ಪಿತ್ತು. ನೂತನ ಸಚಿವರ ಪಟ್ಟಿಯಲ್ಲಿ ಶ್ರೀನಿವಾಸ್ ಶೆಟ್ಟಿ ಎಂದು ಹೆಸರಿತ್ತು. ಆದರೆ ಪ್ರಮಾಣ ವಚನದ ದಿನ ಕೋಟ ಶ್ರೀನಿವಾಸ ಪೂಜಾರಿಗೆ ಮಂತ್ರಿ ಪಟ್ಟವಾಗಿತ್ತು. ಈ ಬಾರಿ ಹಾಲಾಡಿ ಅವರಾಗಿಯೇ ಮಂತ್ರಿಗಿರಿ ಕೇಳುವವರಲ್ಲ. ಆದರೂ ಹಿರಿತನಕ್ಕೆ ಮನ್ನಣೆ ನೀಡಿ ಹಾಲಾಡಿಗೆ ನಿಗಮ ಮಂಡಳಿ ಕೊಡುವ ಸಾಧ್ಯತೆಯಿದೆ.
ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿಯಲ್ಲಿ ಸಚಿವ ಸ್ಥಾನ ಸಿಗಬಹುದಾದ ಐದು ಜನ ನಾಯಕರಿದ್ದಾರೆ. ಆದರೆ ನಮಗೆ ಸಚಿವ ಸ್ಥಾನ ಕೊಡಲೇಬೇಕೆಂದು ಒತ್ತಡ ಹೇರುವ ಗೋಜಿಗೆ ಹೋಗುವ ನಾಯಕರಿಲ್ಲ. ಎರಡು ಸ್ಥಾನ ನಮ್ಮ ಜಿಲ್ಲೆಗೆ ಸಿಕ್ಕರೆ ಈ ಜಿಲ್ಲೆಯ ಜನರ ಋಣ ತೀರಿಸಿದಂತಾಗುತ್ತದೆ. ಕರಾವಳಿ ಜಿಲ್ಲೆಗಳ ಅಭಿವೃದ್ಧಿಗೆ ಇದು ಪೂರಕವಾಗುತ್ತದೆ ಎಂದು ಹೇಳಿದರು.
ಮೂರು ಬಾರಿ ಗೆದ್ದ ರಘುಪತಿ ಭಟ್ ಅವರು ಜಾತಿಯಲ್ಲಿ ಬ್ರಾಹ್ಮಣ. ಕಾಪು ಶಾಸಕ ಲಾಲಾಜಿ ಮೆಂಡನ್ ಮೊಗವೀರ ಸಮುದಾಯ ಪ್ರತಿನಿಧಿಸುತ್ತಾರೆ. ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಜಾತಿಯಲ್ಲಿ ಬಂಟ(ಶೆಟ್ಟಿ). ಇದಕ್ಕಿಂತ ಹೆಚ್ಚಾಗಿ ಬಿಎಸ್‍ವೈ ಅವರ ಬಲಗೈ ಬಂಟ. ಕೊಲ್ಲೂರು ದೇವಸ್ಥಾನದ ಧರ್ಮದರ್ಶಿ ಆಗಿದ್ದ ಶೆಟ್ಟಿ, ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸಿದವರಾಗಿದ್ದಾರೆ. ಈ ಮೂವರು ಸಚಿವ ಸ್ಥಾನದ ಬೇಡಿಕೆ ಇಡುವವರಲ್ಲ. ಆದರೆ ವೈರಾಗ್ಯ ಬಂದವರೇನೂ ಅಲ್ಲ. ಈ ಬಾರಿ ಉಡುಪಿಯ ಮಟ್ಟಿಗೆ ಸಚಿವ ಸ್ಥಾನ ಕೊಡುವುದು ಪ್ರಮುಖರಿಗೆ ಹೇಳಿದಷ್ಟು ಸುಲಭ ಅಲ್ಲ ಎಂದು ಹೇಳಲಾಗುತ್ತಿದೆ.
ಉಡುಪಿ: ಸಿಎಂ ಕುಮಾರಸ್ವಾಮಿ ಮಾಡಲು ಹೊರಟಿರುವ ಗ್ರಾಮ ವಾಸ್ತವ್ಯ ಅರ್ಥರಹಿತವಾದದ್ದು. ಮೊದಲು ಯೋಜನೆ ರೂಪಿಸಿ, ಆಮೇಲೆ ಗ್ರಾಮ ವಾಸ್ತವ್ಯ ಮಾಡಿ ಎಂದು ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಟೀಕೆ ಮಾಡಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಜನ ಜಾನುವಾರುಗಳು ಗುಳೆ ಎದ್ದು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಹೀಗಾಗಿ ರಾಜ್ಯದಲ್ಲಿ ಅಭಿವೃದ್ಧಿ ಯೋಜನೆ ರೂಪಿಸದೆ ಗ್ರಾಮ ವಾಸ್ತವ್ಯದಿಂದ ಉಪಯೋಗವಿಲ್ಲ. ಕುಮಾರಸ್ವಾಮಿ ಅವರ ಹಳೆಯ ಗ್ರಾಮ ವಾಸ್ತವ್ಯದ ಫಲಿತಾಂಶವೇನು? ರಾಜ್ಯದ ಜನತೆಯ ಪ್ರಶ್ನೆಗೆ ಉತ್ತರಿಸಿ ಗ್ರಾಮ ವಾಸ್ತವ್ಯ ಮಾಡಿ ಎಂದರು.
ಈ ನಡುವೆ ವಿಧಾನ ಸೌಧಕ್ಕೆ ಯಾವ ಮಂತ್ರಿಗಳು ಬರುತ್ತಿಲ್ಲ. ಜಿಲ್ಲಾ ಉಸ್ತುವಾರಿ ಮಂತ್ರಿಗಳು ಜಿಲ್ಲೆಯ ಸಮಸ್ಯೆಯ ಬಗ್ಗೆ ಅರಿಯುವ ಪ್ರಯತ್ನ ಮಾಡುತ್ತಿಲ್ಲ. ಕೇಂದ್ರ ಸರ್ಕಾರ ಕೊಟ್ಟ ಹಣವನ್ನು ರಾಜ್ಯ ಪೂರ್ಣ ಖರ್ಚು ಮಾಡಿಲ್ಲ ಎಂದು ಆರೋಪಿಸಿದರು.
ಮೂರು ದಿನ ಪ್ರತಿಭಟನೆ:
ಜಿಂದಾಲ್ ಕಂಪನಿಗೆ ಸರ್ಕಾರ ಅಕ್ರಮವಾಗಿ ಜಮೀನು ಕೊಡಲು ಮುಂದಾಗಿರುವ ಸರ್ಕಾರದ ನಡೆಯನ್ನು ಬಿಜೆಪಿ ಖಂಡಿಸುತ್ತದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪ್ರತಿಭಟನೆಗೆ ಕರೆ ಕೊಟ್ಟಿದ್ದಾರೆ. 13 ರಿಂದ 15 ರವರೆಗೆ ಬೆಂಗಳೂರಲ್ಲಿ ನಿರಂತರ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದರು.
3667 ಎಕ್ರೆ ಭೂಮಿಯನ್ನು ಶುದ್ಧ ಕ್ರಯಪತ್ರ ಮಾಡಲು ಸಮ್ಮಿಶ್ರ ಸರ್ಕಾರ ಹೊರಟಿದೆ. ಸರ್ಕಾರ ಎಕರೆಗೆ 1.20 ಲಕ್ಷ ರೂ. ಕೊಡಲು ಮುಂದಾಗಿದೆ. ಆದರೆ ಆ ಜಮೀನು ಎಕರೆಗೆ ಎರಡು ಕೋಟಿ ರೂ. ಬೆಲೆ ಬಾಳುತ್ತದೆ. ಇದಕ್ಕೆ ಹೊರತಾಗಿ ಜಿಂದಾಲ್ ಸಂಸ್ಥೆಯಿಂದ ಸರ್ಕಾರಕ್ಕೆ 1,500 ಕೋಟಿ ರೂ. ಬಾಕಿಯಿದೆ ಎಂದು ಆರೋಪಿಸಿದರು.
ಯೋಜನೆ ವಿರೋಧಿಸಿ ಕಾಂಗ್ರೆಸ್ ಹಿರಿಯ ನಾಯಕ ಎಚ್.ಕೆ.ಪಾಟೀಲ್ ಅವರೇ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಇಷ್ಟಾದರೂ ಸರ್ಕಾರ ನಿಲುವು ಬದಲಿಸಿಲ್ಲ. ರಾಜ್ಯ ಸರ್ಕಾರದ ಹಲವು ಲೋಪದೋಷದ ವಿರುದ್ಧ ಬೆಂಗಳೂರಲ್ಲಿ ಈ ಪ್ರತಿಭಟನೆ ನಡೆಯುತ್ತದೆ ಎಂದು ಹೇಳಿದರು.
ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರು ಮರು ಆಯ್ಕೆ ಆದ್ರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸಚಿವ ರೇವಣ್ಣ ಹೇಳಿದ್ದರು. ಆದರೆ ಇನ್ನೂ ರಾಜಕೀಯದಲ್ಲಿ ಮುಂದುವರಿದಿದ್ದಾರೆ. ಬಹುಷ: ರೇವಣ್ಣಗೆ ಅವರ ಪ್ರೀತಿಯ ಲಿಂಬೆಹಣ್ಣು ರಾಜಕಾರಣ ಬಿಡಬೇಡ ಅಂದಿರಬೇಕು ಎಂದು ಕೋಟ ಶ್ರೀನಿವಾಸ ಪೂಜಾರಿ ವ್ಯಂಗ್ಯವಾಡಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು, ರೇವಣ್ಣ ಆಡಿದ ಮಾತು ಎಷ್ಟು ಸಾರಿ ಉಳಿಸ್ಕೊಂಡಿದಾರೋ ಗೊತ್ತಿಲ್ಲ ಎಂದು ಟೀಕಿಸಿದ್ದಾರೆ. ರಾಜ್ಯ ಸರ್ಕಾರ ಆಡಳಿತ ಮತ್ತು ಜನಾಭಿಪ್ರಾಯ ಎರಡಲ್ಲೂ ನಿರ್ಜೀವವಾಗಿದೆ. ಸತ್ತುಹೋದ ಸರ್ಕಾರಕ್ಕೆ ಆಮ್ಲಜನಕ ತುಂಬುವ ಕೆಲಸ ಆಗ್ತಿದೆ. ಅನುಭವಿ ಮಂತ್ರಿಗಳನ್ನು ಕೈಬಿಟ್ಟು ಹೊಸಬರ ಸೇರ್ಪಡೆಗೆ ತಯಾರಿ ನಡಿತಿದೆ. ಸಿಎಂ ಕುಮಾರಸ್ವಾಮಿ ಸರ್ಕಾರ ನಡೆಸುವ ಸ್ಥಿತಿಯಲ್ಲೇ ಇಲ್ಲ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಜನಾದೇಶ ಬಂದಾಗಿದೆ. ಮೊದಲು ಖುರ್ಚಿಯಿಂದ ಕೆಳಗಿಳಿರಿ ಎಂದರು.
ಯು.ಟಿ. ಖಾದರ್ ಮತ್ತು ಜಯಮಾಲ ಸಚಿವ ಸಂಪುದಿಂದ ಕೈ ಬಿಡಲು ಮುಂದಾಗಿದ್ದಾರೆ. ಈ ಹಿಂದೆ ಕುಮಾರಸ್ವಾಮಿ ಕರಾವಳಿ ಜನರಿಗೆ ಬುದ್ದಿ ಇಲ್ಲ ಅಂದಿದ್ದರು. ಹಾಗಾಗಿ ಕರಾವಳಿಯ ಇಬ್ಬರು ಸಚಿವರನ್ನು ಕೈ ಬಿಡಲು ಹೊರಟಿರಬೇಕು. ಕರಾವಳಿ ಜನರಿಗೆ ಬುದ್ದಿ ಇಲ್ಲ ಹಾಗಾಗಿ ಜೆಡಿಎಸ್ ಗೆ ವೋಟ್ ಹಾಕಿಲ್ಲ ಅಂತೀರಿ. ಈಗ ಇಡೀ ರಾಜ್ಯದಲ್ಲೇ ಜೆಡಿಎಸ್‍ಗೆ ವೋಟ್ ಹಾಕಿಲ್ಲ. ಹಾಗಾದರೆ ರಾಜ್ಯದ ಜನತೆಗೆ ಬುದ್ದಿ ಇಲ್ಲ ಅಂತೀರಾ ಎಂದು ಪ್ರಶ್ನಿಸಿದರು.
ಉಡುಪಿ: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರಾಗಿದ್ದ ದಿನೇಶ್ ಅಮೀನ್ ಮಟ್ಟು ವಿರುದ್ಧ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಕಿಡಿಕಾರಿದ್ದಾರೆ. ಕೃಷ್ಣಮಠ, ಪೇಜಾವರ ಶ್ರೀಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂದು ಟೀಕಿಸಿದ್ದಾರೆ.
ಮಂಗಳೂರಲ್ಲಿ ಮಾತನಾಡಿದ್ದ ಅಮಿನ್ ಮಟ್ಟು ಅವರು, ಕೃಷ್ಣಮಠ ಕೋಮುವಾದದ ಕೇಂದ್ರ. ಪೇಜಾವರ ಸ್ವಾಮೀಜಿ ಅದರ ಮುಖಂಡ ಎಂದು ಹೇಳಿದ್ದರು. ಈ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಕೋಟ ಶ್ರೀನಿವಾಸ ಪೂಜಾರಿ, ಮಟ್ಟು ಹೇಳಿಕೆ ಅತ್ಯಂತ ನೋವಿನ ಸಂಗತಿ. ಪೇಜಾವರ ಸ್ವಾಮೀಜಿ ವಯೋವೃದ್ಧರು, ಜ್ಞಾನ ವಂತರು. ಪೇಜಾವರ ಶ್ರೀಗಳು ಇಫ್ತಾರ್ ಕೂಟ ಮಾಡಿದ್ದರು. ಆಗ ನಿಮ್ಮಂತೆ ಯೋಚಿಸುವವರು ಸ್ವಾಗತಿಸಿರಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರ ಆಗಬೇಕು ಅಂದರೆ ಪೇಜಾವರ ಶ್ರೀ ಕೋಮುವಾದಿ ಹೇಗಾಗ್ತಾರೆ? ಮಠ ಕೋಮುವಾದಿಗಳ ಕೇಂದ್ರ ಎಂದು ಹೇಗೆ ಹೇಳುತ್ತೀರಿ? ಕೃಷ್ಣಮಠ ಹಿಂದೂ ಧರ್ಮದ ಸರ್ವಶ್ರೇಷ್ಟ ದೇವಾಲಯ. ಪೇಜಾವರ ಶ್ರೀ ಬಗ್ಗೆ ಲಘುವಾಗಿ ಮಾತನಾಡುವುದು ಖಂಡನೀಯ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.