Tag: kota srinivas poojary

  • ದೇಗುಲದಲ್ಲಿ ಕುಂಕುಮ ಗಂಧ ಸಿಗುತ್ತೆ, ತೀರ್ಥ ಕೇಳುವಂತಿಲ್ಲ: ಸಚಿವ ಕೋಟ

    ದೇಗುಲದಲ್ಲಿ ಕುಂಕುಮ ಗಂಧ ಸಿಗುತ್ತೆ, ತೀರ್ಥ ಕೇಳುವಂತಿಲ್ಲ: ಸಚಿವ ಕೋಟ

    ಉಡುಪಿ: ಜೂನ್ ಎಂಟರಿಂದ ಮುಜರಾಯಿ ದೇವಸ್ಥಾನಗಳು ತೆರೆದುಕೊಳ್ಳುತ್ತವೆ. ದೇವಸ್ಥಾನದಲ್ಲಿ ಕುಂಕುಮ, ಗಂಧ ಕೊಡ್ತೇವೆ ಆದ್ರೆ ತೀರ್ಥ ಕೊಡುವುದಿಲ್ಲ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

    ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದ ಎಲ್ಲ ಧಾರ್ಮಿಕ ದತ್ತಿ ಮತ್ತು ಮುಜರಾಯಿ ಇಲಾಖೆಯ ಅಧೀನ ದೇವಸ್ಥಾನಗಳು ನಾಳೆಯಿಂದ ತೆರೆಯುವುದಿಲ್ಲ. ಈ ಹಿಂದೆ ಜೂನ್ 1ರಿಂದ ಎಲ್ಲ ದೇವಸ್ಥಾನಗಳನ್ನು ತೆರೆಯಲಿವೆ ಎಂದು ಹೇಳಲಾಗಿತ್ತು. ಅದಕ್ಕೆ ಕೇಂದ್ರ ಸರ್ಕಾರದಿಂದ ಸಹಮತ ನಿರೀಕ್ಷೆ ಮಾಡಲಾಗಿತ್ತು. ಕೇಂದ್ರ ಸರ್ಕಾರ ಜೂನ್ 8ರಿಂದ ತೆರೆಯಲು ಅನುಮತಿಸಿದೆ. ನಾವು ಕೇಂದ್ರದ ಆದೇಶವನ್ನು ಪಾಲಿಸುತ್ತೇವೆ ಎಂದರು.

    ಧಾರ್ಮಿಕ ದತ್ತಿ ಮತ್ತು ಮುಜರಾಯಿ ಇಲಾಖೆಯ ಎಲ್ಲ ದೇವಸ್ಥಾನ, ಶ್ರದ್ಧಾಕೇಂದ್ರಗಳು ಜೂನ್ 8ರಂದು ಅಧಿಕೃತವಾಗಿ ತೆರೆಯಲಿವೆ. ಇಲಾಖೆಯಡಿ ಬಾರದ ದೇವಾಲಯಗಳನ್ನು ತೆರೆಯುವುದು ಅವರವರ ವಿವೇಚನೆಗೆ ಬಿಟ್ಟದ್ದು ಎಂದ ಸಚಿವರು, ಧಾರ್ಮಿಕ ಕೇಂದ್ರಗಳಲ್ಲಿ ಜಾತ್ರೆ, ಸಮಾರಂಭ, ಉತ್ಸವ ಮುಂತಾದ ಜನ ಸೇರಿಸುವ ಕಾರ್ಯಕ್ರಮಗಳಿಗೆ ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

    ಭಕ್ತರಿಗೆ ಗರ್ಭಗುಡಿ ಪ್ರವೇಶ ಇಲ್ಲ: ಈ ನಡುವೆ ಕೆಲ ಷರತ್ತುಗಳ ಬಗ್ಗೆ ವಿವರಣೆ ನೀಡಿದ ಅವರು, ದೇವಸ್ಥಾನಗಳ ಅರ್ಚಕರಿಗೆ ಮಾತ್ರ ಗರ್ಭಗುಡಿ ಪ್ರವೇಶಕ್ಕೆ ಅನುಮತಿ ನೀಡಿದ್ದೇವೆ. ಭಕ್ತರು ದೇವರನ್ನು ಮುಟ್ಟಿ ಪೂಜೆ ಮಾಡಲು ಅವಕಾಶವಿಲ್ಲ. ದೇವಸ್ಥಾನಗಳಲ್ಲಿ ಶ್ರೀಗಂಧ ಅಥವಾ ಕುಂಕುಮ ನೀಡುವುಕ್ಕೆ ಮಾತ್ರ ಸೀಮಿತ ಮಾಡಿದ್ದು, ತೀರ್ಥ ಪ್ರಸಾದ ನೀಡುವ ಬಗ್ಗೆ ಇನ್ನೂ ತೀರ್ಮಾನ ಕೈಗೊಂಡಿಲ್ಲ ಎಂದು ತಿಳಿಸಿದರು.

    ಮುಖ್ಯಮಂತ್ರಿಗಳು, ಅಧಿಕಾರಿಗಳು, ತಜ್ಞರ ಜೊತೆ ಚರ್ಚೆ ಮಾಡುತ್ತೇವೆ. ದೇವಸ್ಥಾನಗಳಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ವಿಸ್ತೃತವಾದ ಮಾರ್ಗ ಸೂಚಿಯನ್ನು ಅಧಿಕೃತವಾಗಿ ಪ್ರಕಟಿಸುತ್ತೇವೆ. ಭಕ್ತರು ಕೊರೊನಾ ಹಿನ್ನೆಲೆಯಲ್ಲಿ ಒಂದಿಷ್ಟು ಕ್ರಮಗಳನ್ನು ಪಾಲಿಸಬೇಕು. ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ಸ್ವಚ್ಛತೆ ಕಾಪಾಡುವುದನ್ನು ಅನುಸರಿಸಬೇಕು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

  • ಆನ್‍ಲೈನ್ ಪೂಜೆ ಮತ್ತಷ್ಟು ದೇಗುಲಗಳಿಗೆ ವಿಸ್ತರಣೆ: ಸಚಿವ ಕೋಟ

    ಆನ್‍ಲೈನ್ ಪೂಜೆ ಮತ್ತಷ್ಟು ದೇಗುಲಗಳಿಗೆ ವಿಸ್ತರಣೆ: ಸಚಿವ ಕೋಟ

    ಉಡುಪಿ: ಮುಜರಾಯಿ ಇಲಾಖೆ ದೇವಸ್ಥಾನಗಳಲ್ಲಿ ಆನ್‍ಲೈನ್ ಪೂಜಾ ಸೇವೆ ಬಗ್ಗೆ ಕೆಲವರ ಆಕ್ಷೇಪ ಇದೆ. ಆನ್‍ಲೈನ್ ಸೇವೆ ಹೊಸ ಯೋಜನೆಯಲ್ಲ. ಈ ಹಿಂದಿನಯೂ ಇತ್ತು. ಈಗ ಮತ್ತಷ್ಟು ದೇವಸ್ಥಾನಗಳನ್ನು ಆನ್‍ಲೈನ್ ಸೇವೆಯ ವ್ಯಾಪ್ತಿಗೆ ಇಲಾಖೆ ತರುತ್ತೇವೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

    ನಗರದಲ್ಲಿ ಮಾತನಾಡಿದ ಸಚಿವರು, ಕೊಲ್ಲೂರು ದೇವಸ್ಥಾನದಲ್ಲಿ ಕಳೆದ ವರ್ಷ ಮೂರು ಸಾವಿರ ಆನ್‍ನೈನ್ ಸೇವೆಗಳು ಬಂದಿವೆ. ಮೈಸೂರು ಚಾಮುಂಡೇಶ್ವರಿಯಲ್ಲಿ ಹೋದ ವರ್ಷ 49.50 ಲಕ್ಷ ರೂ. ಜಮಾ ಆಗಿದೆ. ಲಾಕ್‍ಡೌನ್‍ನಿಂದ ಭಕ್ತರಿಗೆ ದೇವಸ್ಥಾನಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಸೇವೆ ಕೊಡಬೇಕೆಂಬ ಹರಕೆ ಹೊತ್ತ ಭಕ್ತರಿಗೆ ಆನ್‍ಲೈನ್ ಸೇವೆಯಿಂದ ಅನುಕೂಲವಾಗಲಿದೆ ಎಂದರು.

    ಭಕ್ತರಿಗೆ ನೆಮ್ಮದಿ ಸಿಗಲಿ ಎಂಬ ಕಾರಣಕ್ಕೆ ಆನ್‍ಲೈನ್ ಆರಂಭಿಸಿದ್ದೇವೆ. ಲಾಕ್ ಡೌನ್ ವರೆಗಾದರೂ ಆನ್ಲೈನ್ ಸೇವೆ ಅಗತ್ಯವಿದೆ. ಭಕ್ತರ ಕೋರಿಕೆ ಹಿನ್ನೆಲೆಯಲ್ಲಿ ಈ ಸೇವೆ ಆರಂಭವಾಗಿದೆ ಹೊರತು ನಾವಲ್ಲ ಮಾಡಿದ್ದು ಎಂದರು.

    ದೇವಸ್ಥಾನಗಳಿಗೆ ಬಾಗಿಲು ಹಾಕಿದೆ ಪೂಜೆ ಆಗುತ್ತಿಲ್ಲ ಎಂದು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ. ಎಲ್ಲಾ ದೇವಸ್ಥಾನಗಳನ್ನು ಸಾಂಪ್ರದಾಯಿಕ ಪೂಜೆ ನಡೆಯುತ್ತಲೇ ಇದೆ. ತ್ರಿಕಾಲ, ಕಾಲಮಿತಿಯ ಪೂಜೆಗಳು ನಿಂತಿಲ್ಲ. ದೇವಸ್ಥಾನದಲ್ಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಅನಿವಾರ್ಯತೆ ಇದೆ. ಹಾಗಾಗಿ ಲಾಕ್‍ಡೌನ್ ಮುಗಿದ ನಂತರವೇ ದೇವಸ್ಥಾನ ತೆರೆಯಲಾಗುತ್ತದೆ ಎಂದು ಹೇಳಿದರು.

  • ಮೇ 26ರಿಂದ ದೇವಾಲಯಗಳಲ್ಲಿ ಆನ್‍ಲೈನ್ ಸೇವೆ ಪ್ರಾರಂಭ

    ಮೇ 26ರಿಂದ ದೇವಾಲಯಗಳಲ್ಲಿ ಆನ್‍ಲೈನ್ ಸೇವೆ ಪ್ರಾರಂಭ

    – ಪೂಜೆಗಳನ್ನು ನೇರ ಪ್ರಸಾರ ಮಾಡಲು ಚಿಂತನೆ

    ಬೆಂಗಳೂರು: ಇಷ್ಟು ದಿನ ಕೊರೊನಾ ವೈರಸ್ ಭೀತಿಗೆ ಬಂದ್ ಆಗಿದ್ದ ದೇವಲಯಗಳಲ್ಲಿ ಈಗ ಭಕ್ತರಿಗೆ ಆನ್‍ಲೈನ್ ಮೂಲಕ ಹಣ ಪಾವತಿಸಿ ಪೂಜೆ ಮಾಡಿಸಲು ಅವಕಾಶ ನೀಡಲಾಗುತ್ತಿದೆ. ಮೇ 26, 27ರಿಂದ ದೇವಾಲಯಗಳಲ್ಲಿ ಆನ್‍ಲೈನ್ ಸೇವೆ ಪ್ರಾರಂಭ ಆಗಲಿದೆ ಎಂದು ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಆನ್‍ಲೈನ್‍ನಲ್ಲಿ ಭಕ್ತರು ದೇವಸ್ಥಾನಗಳಿಗೆ ಹಣ ಪಾವತಿ ಮಾಡಿ ಪೂಜೆ ಮಾಡಿಸಲು ಅವಕಾಶ ನೀಡಲಾಗುತ್ತದೆ. 15ರಿಂದ 20 ಸೇವೆಗಳಿಗೆ ಅವಕಾಶ ಕೊಡಲಾಗುತ್ತದೆ. ಆನ್‍ಲೈನ್‍ನಲ್ಲಿ ಭಕ್ತರು ಹಣ ಪಾವತಿ ಮಾಡಬೇಕು, ಅವರ ಹೆಸರಿನಲ್ಲಿ ಪೂಜೆ ಮಾಡಿ ಪ್ರಸಾದ ಭಕ್ತರ ಮನೆಗೇ ಕಳುಹಿಸ್ತೀವಿ. ಯಾರನ್ನು ದೇವಾಲಯದ ಒಳಗೆ ಬಿಡೋದಿಲ್ಲ. ಹಣ ಪಾವತಿಸಿದ ಭಕ್ತರು ಅಥವಾ ಅವರು ಹೇಳುವ ಮಂದಿಯ ಹೆಸರಿನಲ್ಲಿ ಪೂಜೆ ಮಾಡಿ ಪ್ರಸಾದ ಕೊಡಲಾಗುತ್ತದೆ ಎಂದು ಮಾಹಿತಿ ನೀಡಿದರು.

    ಪ್ರಥಮ ಬಾರಿಗೆ 50 ದೇವಾಲಯದಲ್ಲಿ ಆನ್‍ಲೈನ್ ಸೇವೆಗೆ ಅವಕಾಶ ನೀಡಲಾಗುತ್ತಿದೆ. ಕುಕ್ಕೆ ಸುಬ್ರಹ್ಮಣ್ಯ, ಕಟೀಲು ದುರ್ಗಾ ಪರಮೇಶ್ವರಿ, ಮೈಸೂರು ಚಾಮುಂಡೇಶ್ವರಿ, ಬನಶಂಕರಿ ದೇವಾಲಯ, ನಂಜನಗೂಡು ನಂಜುಂಡೇಶ್ವರ ದೇವಲಯ ಸೇರಿ ಒಟ್ಟು 50 ದೇವಾಲಯಗಳಲ್ಲಿ ಆನ್‍ಲೈನ್ ಸೇವೆ ಪ್ರಾರಂಭವಾಗುತ್ತದೆ. ಸಿಎಂ ಒಪ್ಪಿಗೆ ಕೊಟ್ಟ ಕೂಡಲೇ ಆನ್‍ಲೈನ್ ಸೇವೆ ಪ್ರಾರಂಭ ಮಾಡ್ತೀವಿ ಎಂದು ಸಚಿವರು ತಿಳಿಸಿದರು.

    ಇಲಾಖೆ ವತಿಯಿಂದ ಸಾಮೂಹಿಕ ಮದುವೆ:
    ಸಾಮೂಹಿಕ ವಿವಾಹ ಕಾರ್ಯಕ್ರಮ ವಿಚಾರವಾಗಿ ಪ್ರತಿಕ್ರಿಯಿಸಿ, ಈ ಕಾರ್ಯಕ್ರಮಗಳು ನಡೆಯುತ್ತೆ. ಮೇ 31ರ ಬಳಿಕ ಲಾಕ್‍ಡೌನ್ ಮುಗಿದ ನಂತರ ಈ ಬಗ್ಗೆ ತೀರ್ಮಾನ ಮಾಡ್ತೀವಿ. ಕಡಿಮೆ ಜನಸಂಖ್ಯೆ, ಕಡಿಮೆ ಜೋಡಿಗಳನ್ನ ಇಟ್ಟುಕೊಂಡು ಮದುವೆ ಮಾಡುವ ಚಿಂತನೆ ಇದೆ. ಈ ನಿಟ್ಟಿನಲ್ಲಿ ಅಧಿಕಾರಿಗಳಿಗೆ ವರದಿ ಸಿದ್ಧಪಡಿಸಲು ಸೂಚನೆ ನೀಡಲಾಗಿದೆ. ಸಾಮೂಹಿಕ ಮದುವೆ ಇಲಾಖೆ ಮಾಡೇ ಮಾಡುತ್ತೆ. ಲಾಕ್‍ಡೌನ್ ಮುಗಿದ ನಂತರ ಈ ಬಗ್ಗೆ ಅಂತಿಮ ನಿರ್ಧಾರ ಎಂದು ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದರು.

    ಆರ್ಥಿಕ ನೆರವು:
    ಅರ್ಚಕರಿಗೆ ಆರ್ಥಿಕ ಸಮಸ್ಯೆಯಿದೆ. ಮೂರು ತಿಂಗಳು ಮುಂಗಡವಾಗಿ ತಸ್ತಿಕ್ ಹಣ ಬಿಡುಗಡೆಗೆ ಸಿಎಂಗೆ ಮನವಿ ಮಾಡಿದ್ದೇವೆ. ಸಿಎಂ ಸೂಚನೆ ಮೇರೆಗೆ 33.65 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ. ಆರ್ಥಿಕ ಇಲಾಖೆ ಹಣವನ್ನ ಬಿಡುಗಡೆ ಮಾಡಿದೆ. 26,700 ದೇಗುಲಗಳ ಅರ್ಚಕರಿಗೆ 3 ತಿಂಗಳ ಮುಂಗಡ ತಸ್ತಿಕ್ ಹಣ ಬಿಡುಗಡೆ ಮಾಡಲಾಗಿದೆ. ಇತ್ತ ವರ್ಶಾಸನದ ದೇವಾಲಯಗಳಿಗೂ ಹಣ ಬಿಡುಗಡೆ ಮಾಡಲಾಗಿದೆ. 5.32 ಕೋಟಿ ರೂ. ಹಣ ಬಿಡುಗಡೆಗೆ ಸರ್ಕಾರ ಕ್ರಮ ತೆಗೆದುಕೊಂಡಿದೆ. ಒಟ್ಟು ಸುಮಾರು 39 ಕೋಟಿ ರೂ. ಹಣವನ್ನು ಮುಜರಾಯಿ ಇಲಾಖೆಗೆ ಸರ್ಕಾರ ಬಿಡುಗಡೆ ಮಾಡಿದೆ ಎಂದು ಮಾಹಿತಿ ಕೊಟ್ಟರು.

    ದೇವಾಲಯದ ಪೂಜೆಗಳನ್ನು ನೇರ ಪ್ರಸಾರ ಮಾಡಲು ನಿರ್ಧಾರ:
    ಪ್ರಮುಖ ದೇವಾಲಯಗಳ ಪೂಜೆಗಳನ್ನು ನೇರ ಪ್ರಸಾರ ಮಾಡುವ ನಿಟ್ಟಿನಲ್ಲಿ ಇಲಾಖೆ ಚಿಂತನೆ ನಡೆಸಿದೆ. ಆಯ್ದ ದೇವಾಲಯಗಳ ಪೂಜೆ-ಪುನಸ್ಕಾರಗಳನ್ನ ನೇರ ಪ್ರಸಾರ ಮಾಡಲಾಗುತ್ತೆ. ಈ ನಿಟ್ಟಿನಲ್ಲಿ ಸಿದ್ಧತೆ ಪ್ರಾರಂಭವಾಗಿದೆ. ಯುಟ್ಯೂಬ್, ವೆಬ್ ಪೋರ್ಟಲ್, ಫೇಸ್‍ಬುಕ್‍ನಲ್ಲಿ ಪೂಜೆ ನೇರ ಪ್ರಸಾರ ಮಾಡುವ ಕಲ್ಪನೆ ಇದೆ. ಆದಷ್ಟು ಬೇಗ ಈ ಬಗ್ಗೆ ನಿರ್ಧಾರ ಮಾಡ್ತೀವಿ. ಶೀಘ್ರವೇ ದೇವಾಲಯಗಳ ಪೂಜೆ ನೇರ ಪ್ರಸಾರವಾಗುತ್ತೆ ಎಂದು ಶ್ರೀನಿವಾಸ್ ಪೂಜಾರಿ ತಿಳಿಸಿದರು.

  • ಏಪ್ರಿಲ್ 15ರಿಂದ 14,000 ನಾಡದೋಣಿಗಳಿಂದ ಮೀನುಗಾರಿಕೆ ಆರಂಭ

    ಏಪ್ರಿಲ್ 15ರಿಂದ 14,000 ನಾಡದೋಣಿಗಳಿಂದ ಮೀನುಗಾರಿಕೆ ಆರಂಭ

    -ನಿಯಮ ಕಾಪಾಡಿ, ಸರ್ಕಾರಕ್ಕೆ ಸಹಕಾರ ನೀಡಿ: ಸಚಿವ ಕೋಟ ಮನವಿ

    ಉಡುಪಿ: ಕೊರೊನಾ ಲಾಕ್‍ಡೌನ್ ನಡುವೆಯೂ ಮೀನುಗಾರಿಕೆಗೆ ವಿನಾಯಿತಿ ಕೊಡಲಾಗಿದೆ. ರಾಜ್ಯಾದ್ಯಂತ ಹದಿನಾಲ್ಕು ಸಾವಿರ ನಾಡ ದೋಣಿಗಳು ಏಪ್ರಿಲ್ 15ರಿಂದ ಕಸುಬು ಆರಂಭಿಸಲಿದೆ. ಆದ್ರೆ ಸಮುದ್ರದ ಮೀನು ಬೆಂಗಳೂರು ಸೇರಿದಂತೆ ಹೊರ ಜಿಲ್ಲೆಗೆ ಪೂರೈಕೆ ಆಗಲ್ಲ.

    ಮೀನು ಅಗತ್ಯ ಆಹಾರ. ಸರ್ಕಾರ ಮೀನುಗಾರಿಕೆಗೆ ಕೊಟ್ಟ ವಿನಾಯಿತಿಯನ್ನು ಯಾರೂ ಕೂಡ ದುರುಪಯೋಗಪಡಿಸಿಕೊಳ್ಳಬಾರದು. ಸರ್ಕಾರದ ಮಾರ್ಗಸೂಚಿಯನ್ನು ಕಟ್ಟುನಿಟ್ಟಿನಲ್ಲಿ ಅನುಸರಿಸಬೇಕು ಎಂದು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಎಚ್ಚರಿಕೆ ನೀಡಿದರು.

    ರಾಜ್ಯಾದ್ಯಂತ ಸುಮಾರು ಹದಿನಾಲ್ಕು ಸಾವಿರ ನಾಡದೋಣಿಗಳು ಸಮುದ್ರಕ್ಕೆ ನದಿಗೆ ಮತ್ತು ಕೆರೆಗಳಿಗೆ ಇಳಿಯಲಿವೆ. ನಾಡದೋಣಿ ಮೀನುಗಾರರು ಮತ್ತು ದಡದಲ್ಲಿ ಬಲೆ ಬೀಸಿ ಹಿಡಿದ ಮೀನುಗಳು ಯಾವುದೇ ಕಾರಣಕ್ಕೂ ಬಂದರಿಗೆ ತರಕೂಡದು. ಬಂದರಿಗೆ ಮೀನು ಬಾರದೆ ಅದು ಮಾರುಕಟ್ಟೆಯಲ್ಲಿ ಮತ್ತು ಗ್ರಾಹಕರ ಮನೆ ಮನೆಗೆ ವಿಲೇವಾರಿ ಆಗಬೇಕು. ಈ ಬಗ್ಗೆ ಜಿಲ್ಲಾಡಳಿತ  ಮೀನುಗಾರಿಕಾ ಇಲಾಖೆ ಮತ್ತು ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ.

    ಮೀನನ್ನು ಗ್ರಾಹಕರಿಗೆ ಮಾರಾಟ ಮಾಡುವಾಗಲೂ ಸಾಮಾಜಿಕ ಅಂತರ ಮತ್ತು ಶುಚಿತ್ವವನ್ನು ಕಾಪಾಡಬೇಕು ಎಂದು ಕೋಟ ಶ್ರೀನಿವಾಸ ಪೂಜಾರಿ ಮನವಿ ಮಾಡಿದರು. ಮೀನು ಮೂರು ಜಿಲ್ಲೆಯಲ್ಲಿ ಯಾವುದೇ ಬಂದರಿಗೆ ಬರಲ್ಲ, ಮನೆ ಮನೆಗೆ ಸಪ್ಲೈ ಆಗುತ್ತೆ ಎಂದಿದ್ದಾರೆ. ಒಳನಾಡಿನ ಮೀನುಗಾರರಿಗೂ ಮುಕ್ತ ಅವಕಾಶವಿದೆ.

    ಆದ್ರೆ ಸದ್ಯ ಕರಾವಳಿ ಮೀನು ಬೆಂಗಳೂರಿಗೆ ರವಾನೆಯಾಗಲ್ಲ. ಜಿಲ್ಲೆಯ ಒಳಗಿನ ಗ್ರಾಹಕರ ಬೇಡಿಕೆಯನ್ನು ನಾವು ಮೊದಲು ಪೂರೈಕೆ ಮಾಡುತ್ತೇವೆ. ತರಕಾರಿ ದಿನಸಿ ವಸ್ತುಗಳು ಮಾತ್ರ ಜಿಲ್ಲೆಯ ಗಡಿಯನ್ನು ದಾಟಿ ಹೊರ ಜಿಲ್ಲೆಗೆ ಮತ್ತು ಬೆಂಗಳೂರಿಗೆ ಹೋಗಲಿದೆ. ಈ ವಸ್ತುಗಳ ಜೊತೆ ಅರಬ್ಬಿ ಸಮುದ್ರದಲ್ಲಿ ಹಿಡಿದ ಮೀನು ಜಿಲ್ಲಾ ಗಡಿ ದಾಟಿ ಹೊರಗೆ ಹೋಗುವುದಿಲ್ಲ. ಸಾಧಾರಣ ಒಂದು ವಾರದಲ್ಲಿ ನಮಗೆ ಪೂರ್ಣ ಚಿತ್ರಣ ದೊರೆಯಲಿದೆ. ಆ ನಂತರ ಜಿಲ್ಲಾಡಳಿತದ ಜೊತೆ ಮಾತನಾಡಿ ಮಾರ್ಗಸೂಚಿ ಸಿದ್ಧ ಮಾಡುತ್ತೇವೆ ಎಂದು ಹೇಳಿದರು.

    ನಾಡದೋಣಿ ಮೀನುಗಾರರು ಮೀನುಗಾರಿಕೆ ಮಾಡುವಾಗ ಬಹಳ ಎಚ್ಚರಿಕೆಯನ್ನು ವಹಿಸಬೇಕು. ಐದು ಜನಕ್ಕಿಂತ ಹೆಚ್ಚು ಜನ ಸಮುದ್ರಕ್ಕೆ ಹೋಗಬಾರದು. ತಮ್ಮ ಜೀವಕ್ಕೆ ಯಾವುದೇ ಅಪಾಯವನ್ನ ತಂದುಕೊಳ್ಳಬಾರದು ಎಂದು ಮೀನುಗಾರಿಕಾ ಸಚಿವರು ಸಲಹೆ ನೀಡಿದರು.

  • ಬಗೆಹರಿಯದ ಎನ್‍ಹೆಚ್‍ಎಂ ಗೊಂದಲ- ಇದು ಚರ್ಚೆಯ ಸಮಯವಲ್ಲ ಎಂದ ಸಚಿವ ಕೋಟ

    ಬಗೆಹರಿಯದ ಎನ್‍ಹೆಚ್‍ಎಂ ಗೊಂದಲ- ಇದು ಚರ್ಚೆಯ ಸಮಯವಲ್ಲ ಎಂದ ಸಚಿವ ಕೋಟ

    ಉಡುಪಿ: ಆರೋಗ್ಯ ಇಲಾಖೆಯ ಎನ್‍ಎಚ್‍ಎಂ ಕಾಂಟ್ರ್ಯಾಕ್ಟ್ ಸಿಬ್ಬಂದಿಯ ರಿನಿವಲ್ ಮಾಡುವ ಉದ್ದೇಶದಿಂದ ಏಪ್ರಿಲ್ 1ಕ್ಕೆ 24,000 ವೈದ್ಯಕೀಯ ಸಿಬ್ಬಂದಿಗೆ ರಜೆ ಕೊಡಲಾಗುತ್ತಿದೆ. ಕೊರೊನಾ ಹಾವಳಿ ಇರುವ ಸಂದರ್ಭದಲ್ಲಿ ಕಾನೂನು ಪಾಲನೆ ಎಷ್ಟು ಸರಿ ಎಂಬುದು ಚರ್ಚೆಯಾಗುತ್ತಿದೆ.

    ಈ ನಡುವೆ ಇದು ನಿಯಮ ಕಾಯ್ದೆ ನೋಡುವ ಕಾಲ ಅಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳು ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಹಾಗೂ ಆರೋಗ್ಯ ಸಚಿವ ಶ್ರೀರಾಮುಲು ಅವರೊಂದಿಗೆ ಚರ್ಚೆ ನಡೆಸುವುದಾಗಿ ಮೀನುಗಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

    ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ರಾಜ್ಯಾದ್ಯಂತ ಕೊರೊನಾ ಎಮರ್ಜೆನ್ಸಿ ಇದೆ. ಒಂದು ದಿನ ರಜೆ ಕೊಡದಿದ್ದರೆ ಬೇರೆ ದಾರಿ ಇಲ್ಲ. ಎಪ್ರಿಲ್ 1ಕ್ಕೆ ಕೆಲಸಕ್ಕೆ ಬರುತ್ತೇವೆ ಸಂಬಳ ಕೊಡಿ ಎಂದು ಸಿಬ್ಬಂದಿ ಕೇಳಿದ್ದಾರೆ. ರಜೆ ಮತ್ತು ಸಂಬಳ ಕೊಡುವ ವಿಚಾರದಲ್ಲಿ ತಾಂತ್ರಿಕ ಸಮಸ್ಯೆ ಇದೆ. ಕೊರೊನಾ ಬಾಧಿಸಿರುವ ಸಂದರ್ಭ ಕಾನೂನು ಕಾಯಿದೆ ನಿಯಮ ನೋಡಿಕೊಂಡು ಇರಲು ಸಾಧ್ಯವಿಲ್ಲ. ಇದು ವಾದ ಮಾಡುವ ಸಮಯವಲ್ಲ. ರಾಜ್ಯಕ್ಕೆ ಸಮಸ್ಯೆಯಾಗದ ರೀತಿಯಲ್ಲಿ ಗೊಂದಲವನ್ನು ನಿವಾರಿಸಲಾಗುವುದು ಎಂದು ತಿಳಿಸಿದರು.

  • ವೀರರಾಣಿ ಅಬ್ಬಕ್ಕ ಉತ್ಸವ ಸಮಾರೋಪ- ಪ್ರೇಕ್ಷಕರನ್ನು ರಂಜಿಸಿದ ಕಲಾವಿದರು

    ವೀರರಾಣಿ ಅಬ್ಬಕ್ಕ ಉತ್ಸವ ಸಮಾರೋಪ- ಪ್ರೇಕ್ಷಕರನ್ನು ರಂಜಿಸಿದ ಕಲಾವಿದರು

    – ಅಬ್ಬಕ್ಕ ಭವನಕ್ಕೆ ಶೀಘ್ರ ಚಾಲನೆ: ಸಚಿವ ಕೋಟ
    – ಅಬ್ಬಕ್ಕ ಉತ್ಸವ ರಾಜ್ಯದಾದ್ಯಂತ ನಡೆಯಲಿ: ಉಷಾ ಪಿ. ರೈ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಆಶ್ರಯದಲ್ಲಿ ಅಸೈಗೋಳಿಯ ಕೇಂದ್ರ ಮೈದಾನದಲ್ಲಿ ಎರಡು ದಿನ ನಡೆದ ಉಳ್ಳಾಲದ ವೀರರಾಣಿ ಅಬ್ಬಕ್ಕ ಉತ್ಸವದ ಸಮಾರೋಪ ಸಮಾರಂಭ ಇಂದು ನಡೆಯಿತು. ಈ ವೇಳೆ ವಿವಿಧ ಕಲಾವಿದರು ಪ್ರೇಕ್ಷಕರನ್ನು ರಂಜಿಸಿದರು.

    ಕಾರ್ಯಕ್ರಮದಲ್ಲಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು, ಅಬ್ಬಕ್ಕ ಭವನ ಕಾಮಗಾರಿ ಎಂಟು ಕೋಟಿ ರೂಪಾಯಿ ವೆಚ್ಚದಲ್ಲಿ ಶೀಘ್ರ ಆರಂಭಗೊಳ್ಳಲಿದೆ. ರಾಣಿ ಅಬ್ಬಕ್ಕ ತಾಯ್ನಾಡಿಗಾಗಿ ಮಾತ್ರವಲ್ಲದೆ ತನ್ನ ಬದುಕನ್ನೇ ತ್ಯಾಗ ಮಾಡಿದರು. ಇಂದು ರಾಷ್ಟ್ರ ಪ್ರೇಮಿಗಳಿಗೆ ಯಾರದ್ದಾದರೂ ಹೆಸರು ನೆನಪು ಬರುವುದಾದರೆ ಮೊದಲ ಹೆಸರು ಅಬ್ಬಕ್ಕಳದ್ದಾಗಿರಬೇಕು. ಅಬ್ಬಕ್ಕ ಉತ್ಸವ ಯಶಸ್ವಿಯಾಗಿ ನಡೆದಿದ್ದು ಜಿಲ್ಲಾಡಳಿತಕ್ಕೆ ಗೌರವ ತಂದಿದೆ ಎಂದು ತಿಳಿಸಿದರು.

    ಅಬ್ಬಕ್ಕ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಾಹಿತಿ, ಕಾದಂಬರಿಗಾರ್ತಿ ಉಷಾ ಪಿ.ರೈ, ಕುಟುಂಬ ಮತ್ತು ನಾಡಿನ ಜನರನ್ನು ಉಳಿಸಲು ಅಬ್ಬಕ್ಕ ಮಾಡಿದ ಹೋರಾಟ ಆಕೆಯ ಶೌರ್ಯಕ್ಕೆ ಸಾಕ್ಷಿ, ಆಕೆಯ ಸೈನ್ಯದಲ್ಲಿ ಎಲ್ಲಾ ಧರ್ಮದವರು ಇದ್ದರು. ಇದರಲ್ಲಿ ಪ್ರಮುಖವಾಗಿ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಕೊನೆಗಾಲದಲ್ಲಿ ಅಬ್ಬಕ್ಕ ಮಸೀದಿಯಲ್ಲಿ ರಕ್ಷಣೆ ಪಡೆದಿದ್ದಳು ಎಂದು ಅಭಿಪ್ರಾಯಪಟ್ಟರು.

    ಚರಿತ್ರೆಗಾರರು ಅಬ್ಬಕ್ಕಳನ್ನು ಹಿಂದಿನ ಕಾಲದಲ್ಲಿ ಮರೆತ ಕಾರಣ ನಾವು ಶಾಲೆಯಲ್ಲಿ ಓದುತ್ತಿದ್ದಾಗ ಅಬ್ಬಕ್ಕಳ ಚರಿತ್ರೆ ಪುಸ್ತಕಗಳನ್ನು ಓದಲು ಸಾಧ್ಯವಾಗಲಿಲ್ಲ. ಆದರೆ ಹೊರ ಜಿಲ್ಲೆಯ ಚರಿತ್ರೆಗಾರರು ಹೆಚ್ಚಾಗಿ ನೆನಪಿಸಿಕೊಂಡಿದ್ದರು ಮಹತ್ವದ ವಿಷಯವಾಗಿದೆ. ನಾವು ಎಲ್ಲೇ ಇದ್ದರೂ ನಾವು ಜನಿಸಿದ ಬೆಳೆದ ಊರನ್ನು ಮರೆಯಬಾರದು. ಅಬ್ಬಕ್ಕ ಉತ್ಸವ ಕೇವಲ ದಕ್ಷಿಣ ಕನ್ನಡ ಜಿಲ್ಲೆಗೆ ಸೀಮಿತವಾಗದೆ ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ನಡೆಯಲಿ ಎಂದು ಹಾರೈಸಿದರು.

    ಹಿಂದಿನ ಕಾಲದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರ ನಡುವೆ ಘರ್ಷಣೆ ನಡೆದ ನೆನಪಿಲ್ಲ. ಈಗಿನ ಮಕ್ಕಳು ನಡೆದುಕೊಳ್ಳುವ ರೀತಿ ಭಯ ಹುಟ್ಟಿಸುತ್ತದೆ. ಜಾತಿ, ಮತಗಳ ಕಾರಣಕ್ಕೆ ಬೆಂಕಿ ಹೊತ್ತಿ ಉರಿದಾಗ ಬೇಸರವಾಗುತ್ತದೆ. ಹಿಂದೆಲ್ಲಾ ಇಲ್ಲದ ಎಡ, ಬಲ ಎನ್ನುವ ಪದ ಇಂದು ಹುಟ್ಟಿಕೊಂಡಿರುವುದರಿಂದ ಮಾತನಾಡಲು ಹಿಂಜರಿಕೆಯಾಗುತ್ತದೆ. ಆಳುವವರು ಯಾರೇ ಆದರೂ ದೇಶ ನಮ್ಮದು ಎಂದು ಭಾವಿಸಿದಾಗ ಯಾವುದೇ ಅಹಿತಕರ ಘಟನೆಗಳು ನಡೆಯದು. ಹೆತ್ತವರು ಮಕ್ಕಳಿಗೆ ಕೊಡುವ ದೊಡ್ಡ ಆಸ್ತಿ ವಿದ್ಯೆಯಾಗಿದೆ ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ಸಾಹಿತಿ, ಕಾಂದಬರಿಗಾರ್ತಿ ಉಷಾ ಪಿ.ರೈ ಹಾಗೂ ಅಂತರರಾಷ್ಟ್ರೀಯ ಕ್ರೀಡಾಪಟು ಶ್ರೀಮಾ ಪ್ರಿಯದರ್ಶಿನಿ ಅವರಿಗೆ ಅಬ್ಬಕ್ಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‍ಸಾರ್, ಸಹಾಯಕ ಆಯುಕ್ತ ಮದನ್ ಮೋಹನ್, ಜಿಲ್ಲಾಧಿಕಾರಿ ಸಿಂಧು ಬಿ.ರೂಪೇಶ್, ಅಪರ ಜಿಲ್ಲಾಧಿಕಾರಿ ಎಂ.ಜೆ.ರೂಪಾ ಮೊದಲಾದವರು ಉಪಸ್ಥಿತರಿದ್ದರು.

  • ‘ಸಪ್ತಪದಿ’ ಸಾಮೂಹಿಕ ವಿವಾಹಕ್ಕೆ ಪೂರ್ವ ಸಿದ್ಧತೆ- ‘ಎ’ ದರ್ಜೆಯ ದೇವಸ್ಥಾನಗಳಿಗೆ ಸಚಿವರ ಭೇಟಿ

    ‘ಸಪ್ತಪದಿ’ ಸಾಮೂಹಿಕ ವಿವಾಹಕ್ಕೆ ಪೂರ್ವ ಸಿದ್ಧತೆ- ‘ಎ’ ದರ್ಜೆಯ ದೇವಸ್ಥಾನಗಳಿಗೆ ಸಚಿವರ ಭೇಟಿ

    ಬೆಂಗಳೂರು: ರಾಜ್ಯ ಸರ್ಕಾರ ‘ಸಪ್ತಪದಿ’ ಸಾಮೂಹಿಕ ವಿವಾಹ ಯೋಜನೆ ಈ ವರ್ಷದಿಂದ ಅನುಷ್ಠಾನವಾಗಲಿದ್ದು, ಕಾರ್ಯಕ್ರಮದ ಪೂರ್ವ ಸಿದ್ಧತೆ ಬಗ್ಗೆ ಚರ್ಚೆ ನಡೆಸಲು ರಾಜ್ಯದ ‘ಎ’ ದರ್ಜೆಯ ದೇವಸ್ಥಾನಗಳಿಗೆ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಭೇಟಿ ನೀಡುತ್ತಿದ್ದಾರೆ.

    ಸರ್ಕಾರದಿಂದ ಆಯ್ಕೆ ಮಾಡಿರುವ 100 ದೇವಾಲಯಗಳಲ್ಲಿ ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ವಿವಾಹ ಕಾರ್ಯಕ್ರಮ ನಡೆಯಲಿದೆ. ಈಗಾಗೀ ಸಚಿವರು ‘ಎ’ ದರ್ಜೆಯ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಇಂದು ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನ, ನಿನ್ನೆ ಚಿಕ್ಕಬಳ್ಳಾಪುರದ ಸುಬ್ರಮಣ್ಯ ದೇವಸ್ಥಾನ, ಮಂಗಳೂರಿನ ಮಂಗಳಾ ದೇವಿ ದೇವಸ್ಥಾನ ಮತ್ತು ಘಾಟಿ ಸುಬ್ರಮಣ್ಯ ದೇವಸ್ಥಾನಗಳಿಗೆ ಸೇರಿದಂತೆ ‘ಎ’ ದರ್ಜೆಯ ದೇವಸ್ಥಾನಗಳಿಗೆ ಭೇಟಿ ನೀಡಿ ಸಕಲ ಸಿದ್ಧತೆ ಮಾಡಿಕೊಳ್ಳಲು ಸಚಿವರು ಸಲಹೆ ನೀಡಿದ್ದಾರೆ.

    ಮುಜರಾಯಿ ಇಲಾಖೆಯಿಂದ ನಡೆಯುವ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳುವ ವಧುವಿಗೆ 8 ಗ್ರಾಂ ಚಿನ್ನದ ಮಾಂಗಲ್ಯ ಸೇರಿ, ವಧೂವರರಿಗೆ ವಿವಾಹಕ್ಕೆ ಅಗತ್ಯವಿರುವ ವಸ್ತುಗಳ ಖರೀದಿಗೆ 55,000 ರೂ.ಗಳನ್ನು ಸಂಬಂಧಿಸಿದ ದೇವಾಲಯದಿಂದಲೇ ಭರಿಸಲಾಗುತ್ತದೆ. ವರನಿಗೆ ಪಂಚೆ-ಶರ್ಟ್ ಹಾಗೂ ಶಲ್ಯ ನೀಡಲಾಗುತ್ತದೆ. ವಧುವಿಗೆ ಧಾರೆ ಸೀರೆ, ಚಿನ್ನದ ತಾಳಿ ಮತ್ತು ಎರಡು ಚಿನ್ನದ ಗುಂಡು  ನೀಡಲಾಗುತ್ತದೆ.

    ಏಪ್ರಿಲ್ 24ರಂದು ಮೊದಲ ಹಂತದಲ್ಲಿ ಹಾಗೂ ಮೇ 24ರಂದು ಎರಡನೇ ಹಂತದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸಲಾಗುತ್ತದೆ. ಈಗಾಗಲೇ ಮುಜರಾಯಿ ಸಚಿವರು ಮತ್ತು ಇಲಾಖೆ ಅಧಿಕಾರಿಗಳು ಸಾಮೂಹಿಕ ವಿವಾಹ ಕುರಿತು ದೇವಸ್ಥಾನಗಳಿಗೆ ಭೇಟಿ ಚರ್ಚೆ ನಡೆಸುತ್ತಿದ್ದಾರೆ.

  • ಮೀನುಗಾರರಿಗೆ ತೊಂದರೆ ಆಗಲು ಬಿಡಲ್ಲ: ಕೋಟ ಭರವಸೆ

    ಮೀನುಗಾರರಿಗೆ ತೊಂದರೆ ಆಗಲು ಬಿಡಲ್ಲ: ಕೋಟ ಭರವಸೆ

    ಬೆಂಗಳೂರು: ಯಾವುದೇ ಕಾರಣಕ್ಕೂ ಮೀನುಗಾರರಿಗೆ ತೊಂದರೆಯಾಗದಂತೆ ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳುತ್ತದೆ ಎಂದು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದ್ದಾರೆ.

    ಸಾಗರಮಾಲಾ ಯೋಜನೆ ವಿರೋಧಿಸಿ ಕಾರವಾರದಲ್ಲಿ ನಡೆಯುತ್ತಿರುವ ಬಂದ್‍ಗೆ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ. ಈ ಸಂಬಂಧ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇದೊಂದು ಕಾಂಗ್ರೆಸ್ ಪ್ರಾಯೋಜಿತ ಪ್ರತಿಭಟನೆ ಅಂತ ಕಿಡಿಕಾರಿದರು.

    ಸಾಗರಮಾಲಾ ಯೋಜನೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ನಡೆಯುತ್ತಿದೆ. 2017ರಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಈ ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದರು. ಅಂದು ಶಾಸಕರಾಗಿದ್ದ ಸತೀಶ್ ಶೈಲ್ ಕೂಡ ಶಂಕು ಸ್ಥಾಪನೆ ಮಾಡಿದ್ದರು. ಅಂದು ವಿರೋಧ ಮಾಡದ ಕಾಂಗ್ರೆಸ್ ಮುಖಂಡರು ಇಂದು ವಿರೋಧ ಮಾಡುತ್ತಿರುವುದು ಯಾಕೆ ಅಂತ ಪೂಜಾರಿ ಪ್ರಶ್ನೆ ಮಾಡಿದರು.

    ಇದು ಬಿಜೆಪಿ ವಿರೋಧದ ಪ್ರತಿಭಟನೆ, ಸುಮ್ಮನೆ ರಾಜಕೀಯಕ್ಕಾಗಿ ಕಾಂಗ್ರೆಸ್ಸಿನವರು ಬಂದ್ ಮಾಡಿಸುತ್ತಿದ್ದಾರೆ ಅಂತ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ರು. ಅಲ್ಲದೆ ಸಾಂಪ್ರದಾಯಿಕ ಮತ್ತು ಯಾಂತ್ರಿಕ ಮೀನುಗಾರಿಕೆಗೆ ತೊಂದರೆಯಾಗದಂತೆ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಸಾಗರಮಾಲಾ ಯೋಜನೆಗೆ ಮೀನುಗಾರರ ವಿರೋಧ – ಜನಪ್ರತಿನಿಧಿಗಳ ಭಾವಚಿತ್ರಕ್ಕೆ ಸಗಣಿ, ಚಪ್ಪಲಿ

    ರವೀಂದ್ರನಾಥ್ ಟ್ಯಾಗೂರ್ ಕಡಲತೀರಕ್ಕೆ ತೊಂದರೆಯಾಗದಂತೆ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ. ಮೀನುಗಾರರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗಬಾರದು ಅಂತ ಮನವಿ ಮಾಡಿದರು. ಅಗತ್ಯ ಬಿದ್ದರೆ ಮೀನುಗಾರರು ಮತ್ತು ಜನ ಪ್ರತಿನಿಧಿಗಳ ಗೊಂದಲ ನಿವಾರಣೆಗೆ ವಿಧಾನಸೌಧದಲ್ಲಿಯೇ ಸಭೆ ಮಾಡುತ್ತೇನೆ ಎಂದು ಸಚಿವರು ತಿಳಿಸಿದರು.

    ಸ್ಥಳೀಯ ಶಾಸಕಿ ರೂಪಾಲಿ ನಾಯಕ್ ಮಾತನಾಡಿ, ಮಾಜಿ ಶಾಸಕ ಸತೀಶ್ ಸೈಲ್, ಮಾಜಿ ಸಚಿವ ಆನಂದ್ ಆಸ್ನೋಟೀಕರ್, ಮತ್ತು ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವಿರೋಧ ಮಾಡುತ್ತಿರುವವರಿಗೆ ಸಾಗರಮಾಲಾ ಯೋಜನೆ ಬಗ್ಗೆಯೇ ಗೊತ್ತಿಲ್ಲ. ಆದರೂ ವಿರೋಧ ಮಾಡುತ್ತಿದ್ದಾರೆ. ಜನರು ಯಾರ ಹೇಳಿಕೆ, ಮಾತಿಗಳಿಗೂ ಬೆಲೆ ಕೊಡಬಾರದು ಅಂತ ಮನವಿ ಮಾಡಿದರು. ಅಂದು ಕಾಂಗ್ರೆಸ್ ನಾಯಕರು ಯಾರೂ ಇದಕ್ಕೆ ವಿರೋಧ ಮಾಡಿರಲಿಲ್ಲ. ಇಂದು ಕಾಂಗ್ರೆಸ್ ನಾಯಕರು, ಮಾಜಿ ಸಚಿವರು ವಿರೋಧ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ರು.

    ನಾನು ಬೆಳಗ್ಗೆಯಿಂದ ಸಂಜೆವರೆಗೆ ಕ್ಷೇತ್ರದಲ್ಲಿ ಕೆಲಸ ಮಾಡ್ತೀನಿ. ಕ್ಷೇತ್ರದ ಅಭಿವೃದ್ಧಿ ನಾನು ಸದಾ ಕೆಲಸ ಮಾಡ್ತಿದ್ದೇನೆ.ಹೀಗಿದ್ರು ನನ್ನ ಭಾವಚಿತ್ರಕ್ಕೆ ಚಪ್ಪಲಿ,ಸಗಣಿ ಹಾಕ್ತಾರೆ.ಇದು ಯಾವ ನ್ಯಾಯ ಅಂತ ಅಸಮಾಧಾನ ಹೊರ ಹಾಕಿದ್ರು. ಬಿಜೆಪಿಗೆ ಕೆಟ್ಟ ಹೆಸರು ತರಲು ಹೀಗೆ ಮಾಡ್ತಿದ್ದಾರೆ. ಹಣ ತಂದು ಪ್ರತಿಭಟನೆಗೆ ಜನರನ್ನ ಕರೆದುಕೊಂಡು ಬರ್ತಿದ್ದಾರೆ ಅಂತ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ರು. ಮೀನುಗಾರಿಗೆ ತೊಂದರೆಯಾಗದಂತೆ ನಾವು ನೋಡಿಕೊಳ್ತೀವಿ. ರವೀಂದ್ರನಾಥ್ ಟ್ಯಾಗೂರ್ ಬೀಚ್ ಯಾವುದೇ ತೊಂದರೆ ಆಗದಂತೆ ಕ್ರಮವಹಿಸುತ್ತೇವೆ ಅಂತ ಮೀನುಗಾರರಿಗೆ ಭರವಸೆ ಕೊಟ್ರು.

  • ವೈನ್ ಸ್ಟೋರ್, ಬಾರ್‌ಗಳಿಗೆ ಇಟ್ಟಿರುವ ದೇವರ ಹೆಸರುಗಳನ್ನು ಕೈಬಿಡಿ: ಸಚಿವ ಕೋಟಾ ಮನವಿ

    ವೈನ್ ಸ್ಟೋರ್, ಬಾರ್‌ಗಳಿಗೆ ಇಟ್ಟಿರುವ ದೇವರ ಹೆಸರುಗಳನ್ನು ಕೈಬಿಡಿ: ಸಚಿವ ಕೋಟಾ ಮನವಿ

    ಶಿವಮೊಗ್ಗ: ವೈನ್ ಸ್ಟೋರ್ ಹಾಗೂ ಬಾರ್ ಅಂಡ್ ರೆಸ್ಟೋರೆಂಟ್‍ಗಳಿಗೆ ಇಟ್ಟಿರುವ ದೇವರ ಹೆಸರುಗಳನ್ನು ಬದಲಾಯಿಸಿ ಎಂದು ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಮನವಿ ಮಾಡಿಕೊಂಡಿದ್ದಾರೆ.

    ನಗರದ ಊರಗಡೂರಿನ ಗುಡ್ಡೇಮರಡಿ ದೇವಾಲಯದಲ್ಲಿ ತಾಲೂಕು ದೇವಾಲಯ ಸಮಿತಿಯ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವರು, ವೈನ್ ಸ್ಟೋರ್ ಹಾಗೂ ಬಾರ್ ಅಂಡ್ ರೆಸ್ಟೋರೆಂಟ್‍ಗಳಿಗೆ ಇಟ್ಟಿರುವ ದೇವರುಗಳ ಹೆಸರುಗಳನ್ನು ಬದಲಾಯಿಸಲು ಸರ್ಕಾರ ಕಾನೂನನ್ನು ರೂಪಿಸಿಲ್ಲ. ಹೀಗಾಗಿ ವೈನ್ ಸ್ಟೋರ್ ಹಾಗೂ ಬಾರ್‌ಗಳ ಮಾಲೀಕರು ಹೆಸರು ಬದಲಾಯಿಸಲು ಸ್ವಇಚ್ಛೆ ತೋರಬೇಕು. ಇದು ಕೆಲವರ ನಂಬಿಕೆ, ಭಾವನೆಗಳಿಗೆ ಸಂಬಂಧಪಟ್ಟ ವಿಚಾರವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ವೈನ್ ಸ್ಟೋರ್ ಹಾಗೂ ಬಾರ್ ಅಂಡ್ ರೆಸ್ಟೋರೆಂಟ್‍ಗಳಿಗೆ ಇಟ್ಟಿರುವ ದೇವರ ಹೆಸರುಗಳ ಬದಲಾವಣೆ ಬಗ್ಗೆ ಈ ಹಿಂದೆಯೇ ಪ್ರಸ್ತಾಪಿಸಿದ್ದೆ. ಹೆಸರುಗಳನ್ನು ಬದಲಾಯಿಸುವ ಬಗ್ಗೆ ಯೋಚಿಸಬಾರದು ಎಂದೇನಿಲ್ಲ. ಸಚಿವನಾಗಿ ಕೇವಲ ಮನವಿ ಮಾಡಿದ್ದೇನೆ ಅಷ್ಟೇ ಎಂದು ಹೇಳಿದರು.

    ರಾಜ್ಯದಲ್ಲಿ 36 ಸಾವಿರಕ್ಕೂ ಹೆಚ್ಚು ದೇವಾಲಯಗಳಿವೆ. ಅದರಲ್ಲಿ 100ಕ್ಕೂ ಹೆಚ್ಚು ದೇವಾಲಯಗಳು ಎ ಗ್ರೇಡ್‍ನಲ್ಲಿವೆ. ಆರ್ಥಿಕ ಸ್ಥಿತಿಗತಿ ಆಧರಿಸಿ ಎ, ಬಿ, ಸಿ ಎಂದು ವರ್ಗೀಕರಣ ಮಾಡಲಾಗಿದೆ. ಆರ್ಥಿಕವಾಗಿ ಹಿಂದುಳಿದ ದೇವಾಲಯಗಳ ಅಭಿವೃದ್ಧಿಗೆ ಹಣ ಕೇಳಿಕೊಂಡು ಜನ ಬರುತ್ತಾರೆ. ಲಭ್ಯವಿರುವ ಹಣ ಬಳಸಿಕೊಂಡು ದೇವಾಲಯಗಳ ಅಭಿವೃದ್ಧಿಗೆ ಯೋಚಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

  • ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕಲ್ಲು ಹೊಡೆಯುವವರು ಮುಗ್ದರೇ: ಎಚ್‍ಡಿಗೆ ಕೋಟಾ ಪ್ರಶ್ನೆ

    ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕಲ್ಲು ಹೊಡೆಯುವವರು ಮುಗ್ದರೇ: ಎಚ್‍ಡಿಗೆ ಕೋಟಾ ಪ್ರಶ್ನೆ

    ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪೂರ್ಣ ವಿಡಿಯೋ ಯಾಕೆ ಬಿಡುಗಡೆ ಮಾಡಲಿಲ್ಲ ಎಂಬುದೇ ನನ್ನ ಆತಂಕ ಎಂದು ಮೀನುಗಾರಿಕೆ ಮತ್ತು ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.

    ನಗರದ ಹೊರವಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕುಮಾರಸ್ವಾಮಿ ಅವರ ಹಿರಿತನದ ಬಗ್ಗೆ ನನಗೆ ಗೌರವವಿದೆ. ಆದರೆ ಗಲಭೆ ಆರಂಭವಾದಾಗ ಯಾವ ಯಾವ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಸಮರ್ಪಕವಾದ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ ಎಂದು ತಿರುಗೇಟು ನೀಡಿದ್ದಾರೆ.

    ಮುಗ್ದರು, ಅಮಾಯಾಕರು ಎನ್ನುವ ನಿಮ್ಮ ಶಬ್ದದಲ್ಲಿ ಕಲ್ಲು ಹೊಡೆಯುವವರು, ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಹೊಡೆಯುವವರು ಬರುತ್ತಾರಾ? ಈ ಬಗ್ಗೆ ನನಗೆ ಜಿಜ್ಞಾಸೆ ಇದೆ. ಶಸ್ತ್ರಾಗಾರದ ಬೀಗ ಹೊಡೆದು, ಪೊಲೀಸರ ಮೇಲೆ ಕಲ್ಲು ತೂರುವವವರು ಅಮಾಯಕರೇ ಎಂದು ಸಚಿವರು ಪ್ರಶ್ನಿಸಿದರು.

    ಮಂಗಳೂರು ಗಲಭೆ ಪ್ರಕರಣದಲ್ಲಿ ಸರ್ಕಾರ ಪಾರದರ್ಶಕವಾಗಿದೆ. ನಿಷ್ಪಕ್ಷಪಾತವಾದ ತನಿಖೆ ನಡೆಯುತ್ತಿದೆ. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಸರ್ಕಾರ ಹಾಗೂ ವಿಪಕ್ಷ ಎರಡಕ್ಕೂ ಇದೆ ಎಂದು ತಿಳಿಸಿದರು.

    ಏನೇ ದೂರುಗಳಿದ್ದರೂ ಸರ್ಕಾರಕ್ಕೆ ಅದನ್ನು ಕೊಟ್ಟರೆ ತನಿಖಾಧಿಕಾರಿಗಳು ತನಿಖೆ ನಡೆಸುತ್ತಾರೆ. ತನಿಖೆ ಸಹ ಆರಂಭವಾಗಿದೆ. ನಿಗದಿತ ಸಮಯದಲ್ಲಿ ವರದಿ ನೀಡುತ್ತಾರೆ. ಕುಮಾರಸ್ವಾಮಿ ಅವರೇ ಸಿಎಂ ಆಗಿದ್ದಾಗ ನಾನು ವಿಪಕ್ಷ ನಾಯಕನಾಗಿ ಕೆಲಸ ಮಾಡಿದ್ದೇನೆ. ಸಮಾಜದ ಶಾಂತಿ-ಸುವ್ಯವಸ್ಥೆ ಕಾಪಾಡುವುದು ಆಡಳಿತ ಹಾಗೂ ವಿಪಕ್ಷದ ಜವಾಬ್ದಾರಿಯಾಗಿದ್ದು, ಒಬ್ಬ ಮಾಜಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದವರು ಹೀಗೆ ಹೇಳುವುದು ಸರಿಯಲ್ಲ ಎಂದು ತಿರುಗೇಟು ನೀಡಿದರು.

    ದಕ್ಷಿಣ ಕನ್ನಡ ಜಿಲ್ಲೆ ಉಸ್ತುವಾರಿ ನಾನೇ ಆಗಿದ್ದು, ಅವರ ಗೊಂದಲ ಬಗೆಹರಿಸಲು ನ್ಯಾಯಾಂಗ ತನಿಖೆ ಮಾಡಲಾಗುತ್ತಿದೆ. ಯಾರೇ ತಪ್ಪು ಮಾಡಿದ್ದರೂ ಅವರ ವಿರುದ್ಧ ಸರ್ಕಾರ ಕ್ರಮಕೈಗೊಳ್ಳಲಿದೆ ಎಂದರು.

    ಸಂಪುಟದಲ್ಲಿ ಯಾರ್ಯಾರಿಗೆ ಸ್ಥಾನಮಾನ ನೀಡಬೇಕು ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಪ್ರಜಾಪ್ರಭುತ್ವದಲ್ಲಿ ಶಾಸಕರಾದವರು ಮಂತ್ರಿ ಮಾಡಿ ಅಂತಾರೆ. ಮಂತ್ರಿ ಆದವರೂ ಉಪ ಮುಖ್ಯಮಂತ್ರಿ ಆಗಬೇಕು ಅಂತಾರೆ. ಇದು ಸಹಜವಾಗಿದ್ದು, ಸಚಿವ ಸಂಪುಟ ವಿಸ್ತರಣೆಯಾಗಲೀ ಅಥವಾ ಪುನರ್ ರಚನೆಯಾಗಲೀ ಈ ಎಲ್ಲದರ ಬಗ್ಗೆ ಕೇಂದ್ರದ ನಾಯಕರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ನೋಡಿಕೊಳ್ಳುತ್ತಾರೆ. ನಾವು ಕೇವಲ ಅವರ ಆದೇಶವನ್ನು ಪಾಲಿಸುತ್ತೇವೆ. ಜೊತೆಗೆ ಡಿಸಿಎಂ ವಿಚಾರದಲ್ಲಿಯೂ ನಮ್ಮಲ್ಲಿ ಯಾವುದೇ ಮನಸ್ಥಾಪವಿಲ್ಲ. ಆದರೆ ಎಲ್ಲರಿಗೂ ಆಸೆ ಇದ್ದೆ ಇರುತ್ತದೆ. ಪಕ್ಷದ ವರಿಷ್ಠರ ಆದೇಶವನ್ನು ಪಾಲಿಸುತ್ತೇವೆ ಎಂದು ಸ್ಪಷ್ಟನೆ ನೀಡಿದರು.