Tag: kota srinivas poojary

  • ಪತ್ರಕರ್ತರ ಗ್ರಾಮ ವಾಸ್ತವ್ಯ ನನ್ನ ಕಣ್ಣು ತೆರೆಸಿದೆ, ಎಲ್ಲಾ ಜಿಲ್ಲೆಗಳಲ್ಲಿ ನಡೆಯಲಿ- ಈಶ್ವರಪ್ಪ

    ಪತ್ರಕರ್ತರ ಗ್ರಾಮ ವಾಸ್ತವ್ಯ ನನ್ನ ಕಣ್ಣು ತೆರೆಸಿದೆ, ಎಲ್ಲಾ ಜಿಲ್ಲೆಗಳಲ್ಲಿ ನಡೆಯಲಿ- ಈಶ್ವರಪ್ಪ

    ಮಂಗಳೂರು:ಕುಟುಂಬದ ರೀತಿಯಲ್ಲಿ ಗ್ರಾಮಸ್ಥರನ್ನು ಸೇರಿಸಿ ಅಭಿವೃದ್ಧಿಗೆ ಪೂರಕವಾದ ಈ ಗ್ರಾಮ ವಾಸ್ತವ್ಯ ರಾಜ್ಯಕ್ಕೆ ಮಾದರಿಯಾಗಿದೆ. ಈ ಗ್ರಾಮ ವಾಸ್ತವ್ಯ ಎಲ್ಲಾ ಜಿಲ್ಲೆಗಳಲ್ಲಿ ನಡೆಯುವಂತಾಗಲಿ ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

    ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಕಡಬ ತಾಲೂಕು ಪತ್ರಕರ್ತರ ಸಂಘದ ಆಶ್ರಯದಲ್ಲಿ ಕಡಬ ತಾಲೂಕಿನ ಕೊಂಬಾರಿನಲ್ಲಿ ಭಾನುವಾರ ನಡೆದ ಪತ್ರಕರ್ತರ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ತೆಂಗಿನ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.

    ಈ ಕಾರ್ಯಕ್ರಮ ನನ್ನ ಕಣ್ಣು ತೆರೆಸಿದೆ. ಇದರಿಂದ ಗ್ರಾಮಗಳ ಸಮಸ್ಯೆಗಳು ಬಗೆ ಹರಿಯಲಿದೆ. ಇಲಾಖೆಗಳು ಚುರುಕು ಪಡೆಯುತ್ತವೆ ಎಂದು ಅವರು ಹೇಳಿದರು. ಸಚಿವ ಅಂಗಾರರನ್ನು ಮುಕ್ತ ಕಂಠದಿಂದ ಹೊಗಳಿದ ಈಶ್ವರಪ್ಪ ಅಂಗಾರ ಅವರೊಬ್ಬ ನಿಷ್ಠಾವಂತ ಕಾರ್ಯಕರ್ತ ಮಾತ್ರವಲ್ಲದೆ ರಾಜ್ಯದ ಮಾದರಿ ರಾಜಕಾರಣಿ ಎಂದರು.

    ಪತ್ರಕರ್ತರ ಗ್ರಾಮ ವಾಸ್ತವ್ಯ ನಡೆದ ಹಿಂದುಳಿದ ಪ್ರದೇಶವಾದ ಕೊಂಬಾರು ಗ್ರಾಮದ ಜನರ ಬಹು ಬೇಡಿಕೆಯಾದ ನಾಲ್ಕು ರಸ್ತೆಗಳನ್ನು ಅಭಿವೃದ್ಧಿ ಮಾಡಲು ಬದ್ಧರಾಗಿದ್ದೇವೆ ಎಂದು ಅವರು ಹೇಳಿದ್ದಾರೆ.

    ತೆಂಗಿನ ಗಿಡಕ್ಕೆ ನೀರೆರೆಯುವ ಮೂಲಕ ಗ್ರಾಮ ವಾಸ್ತವ್ಯ ವನ್ನು ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಮಡಪ್ಪಾಡಿಯಲ್ಲಿ ನಡೆದ ಗ್ರಾಮ ವಾಸ್ತವ್ಯ ದ ಕೈಪಿಡಿಯನ್ನು ಸಚಿವ ಈಶ್ವರಪ್ಪ ಬಿಡುಗಡೆಗೊಳಿಸಿದರು.

    ಬಂದರು, ಮೀನುಗಾರಿಕಾ ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಮಾತನಾಡಿ, ಸುಳ್ಯ ವಿಧಾನಸಭೆ ಕ್ಷೇತ್ರ ಬಹಳಷ್ಟು ಗ್ರಾಮೀಣ ಭಾಗವನ್ನು ಹೊಂದಿದೆ. ಗ್ರಾಮೀಣ ಭಾಗದಲ್ಲಿ ರಸ್ತೆ ಮತ್ತು ಸೇತುವೆಗಳ ನಿರ್ಮಾಣ ಪ್ರಮುಖ ಬೇಡಿಕೆಯಾಗಿದೆ. ಅನುದಾನದ ಲಭ್ಯತೆ ನೋಡಿಕೊಂಡು ಹಂತ ಹಂತವಾಗಿ ಅಭಿವೃದ್ಧಿ ಕಾರ್ಯ ನಡೆಸಲಾಗುವುದು ಎಂದು ಹೇಳಿದರು.

    ಗ್ರಾಮೀಣ ಭಾಗದ ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ಸ್ಥಳೀಯ ಅನುದಾನಗಳು ಸಾಕಾಗುವುದಿಲ್ಲ. ಅದಕ್ಕಾಗಿ ಗ್ರಾಮೀಣ ರಸ್ತೆಗಳನ್ನು ಲೋಕೋಪಯೋಗಿ ರಸ್ತೆಗಳನ್ನಾಗಿ ಮೇಲ್ದರ್ಜೆಗೆ ಏರಿಸಿ ಹೆಚ್ಚು ಅನುದಾನ ತರಿಸಿ ಸರ್ವಋತು ರಸ್ತೆಗಳನ್ನಾಗಿ ಮಾಡಲು ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು. ಪತ್ರಕರ್ತರ ಗ್ರಾಮ ವಾಸ್ತವ್ಯ ಪರಿಕಲ್ಪನೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜಾಗೃತಿ ಮೂಡಿಸುವ ಕಾಯ್ರಕ್ರಮ ಆಗಲಿದೆ. ಇಂತಹಾ ಕಾರ್ಯಕ್ರಮ ಹೆಚ್ಚು ಹೆಚ್ಚಾಗಿ ನಡೆಯಲಿ ಎಂದು ಶುಭ ಹಾರೈಸಿದರು.

    ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಕಡಬ ತಾ.ಪಂ. ಅಧ್ಯಕ್ಷೆ ರಾಜೇಶ್ವರಿ ಕನ್ಯಾಮಂಗಲ, ಉಪಾಧ್ಯಕ್ಷೆ ಜಯಂತಿ ಆರ್ ಗೌಡ, ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್, ಪುತ್ತೂರು ಸಹಾಯಕ ಆಯುಕ್ತ ಡಾ. ಯತೀಶ್ ಉಳ್ಳಾಲ್, ಕಡಬ ತಹಶಿಲ್ದಾರ್ ಅನಂತ ಶಂಕರ್, ಮಹಾರಾಷ್ಟ್ರ ಕನ್ನಡಿಗ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಆರ್. ರವಿಕುಮಾರ್, ಜಗನ್ನಾಥ ಶೆಟ್ಟಿ ಬಾಳ ಮೊದಲಾದವರು ಉಪಸ್ಥಿತರಿದ್ದರು.

    ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿದರು. ಪತ್ರಕರ್ತ ಲೋಕೇಶ್ ಪೆರ್ಲಂಪಾಡಿ ಕಾರ್ಯಕ್ರಮ ನಿರೂಪಿಸಿದರು.

  • ಸಚಿವರ ಅವಹೇಳನ – ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

    ಸಚಿವರ ಅವಹೇಳನ – ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

    ಉಡುಪಿ: ಸಚಿವ ಕೋಟ ಶ್ರೀನಿವಾಸ ಪೂಜಾರಿ ವಿರುದ್ಧ ಫೇಸ್‍ಬುಕ್ ನಲ್ಲಿ ಅವಾಚ್ಯ ಪದಗಳನ್ನು ಬಳಸಿ ನಿಂದನಾತ್ಮಕ ಪೋಸ್ಟ್ ಮಾಡಿದ್ದ ಯುವಕನ ವಿರುದ್ಧ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

    ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಪೆರ್ಡೂರಿನ ಅನಿಲ್ ಕುಮಾರ್ ಶೆಟ್ಟಿ ಎಂಬಾತನೇ ಸಚಿವರ ವಿರುದ್ಧ ನಿಂದನಾತ್ಮಕ ಪೋಸ್ಟ್ ಮಾಡಿದವ. ಬಿಲ್ಲವ ಈಡಿಗ ಉಪಪಂಗಡಗಳ ಮಹಿಳೆಯರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ 50 ಕೋಟಿ ರೂಗಳನ್ನು ಬಜೆಟ್ ನಲ್ಲಿ ಮೀಸಲಿಡುವಂತೆ ಕೋರಿ ಸಚಿವ ಶ್ರೀನಿವಾಸ್ ಪೂಜಾರಿ ಅವರು ಇತ್ತೀಚೆಗೆ ಮುಖ್ಯಮಂತ್ರಿ ಯಡಿಯೂರಪ್ಪವರಿಗೆ ಮನವಿ ಸಲ್ಲಿಸಿದ್ದರು. ಈ ಮನವಿ ಕೊಡುವ ಫೋಟೋ ಬಳಸಿಕೊಂಡು ಅನಿಲ್ ಕುಮಾರ್ ಶೆಟ್ಟಿ ಅವಾಚ್ಯ ಶಬ್ದಗಳನ್ನು ಬಳಸಿ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾನೆ.

    ಬಿಲ್ಲವ ಸಮುದಾಯ ಮಂದಿ, ಕೋಟ ಬೆಂಬಲಿಗರು ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನು ಗಮನಿಸಿದ ಆರೋಪಿ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾನೆ. ಅದು ತನ್ನ ಫೇಸ್ ಬುಕ್ ಅಕೌಂಟ್ ನ್ನು ಯಾರೋ ಹ್ಯಾಕ್ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾನೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಈಗಾಗಲೇ ನೀರು ಕುಡಿದಿದ್ದೀನಿ, ಹಲವರು ನೀರು ಕುಡಿಸಿದ್ದಾರೆ – ಕೋಟಾ ಹೀಗಂದಿದ್ಯಾಕೆ?

    ಈಗಾಗಲೇ ನೀರು ಕುಡಿದಿದ್ದೀನಿ, ಹಲವರು ನೀರು ಕುಡಿಸಿದ್ದಾರೆ – ಕೋಟಾ ಹೀಗಂದಿದ್ಯಾಕೆ?

    ಶಿವಮೊಗ್ಗ: ನಾನು ಈಗಾಗಲೇ ನೀರು ಕುಡಿದಿದ್ದೀನಿ, ಹಲವರು ನನಗೆ ನೀರು ಕುಡಿಸಿದ್ದಾರೆ ಎಂದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.

    ನಗರದಲ್ಲಿ ನಡೆದ ಜನಸೇವಕ ಸಮಾವೇಶದಲ್ಲಿ ಕೋಟಾ ಭಾಷಣ ಮಾಡುತ್ತಿದ್ದರು. ಮಾತನಾಡುವ ವೇಳೆ ಸಚಿವರು ಕೆಮ್ಮುತ್ತಿದ್ದರು. ಈ ವೇಳೆ ಶಿವಮೊಗ್ಗ ಗ್ರಾಮಾಂತರ ಶಾಸಕ ಅಶೋಕ್ ನಾಯ್ಕ್ ಅವರು ಸಚಿವರಿಗೆ ಕುಡಿಯಲು ನೀರು ಕೊಡಲು ಹೋದರು. ನಾನು ಈಗಾಗಲೇ ನೀರು ಕುಡಿದಿದ್ದೀನಿ, ಹಲವರು ನೀರು ಕುಡಿಸಿದ್ದಾರೆ ಎಂದು ಸಚಿವರು ಟಾಂಗ್ ನೀಡಿದರು.

    ಈ ಮಧ್ಯೆ ಎದ್ದು ನಿಂತ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಪೂಜಾರಿ ಅವರಿಗೆ ಮುಜರಾಯಿ ಮಾತ್ರ ಇಲ್ಲ ಮೀನುಗಾರಿಕೆನೂ ಇದೆ ಎಂದರು. ಆಗ ಪೂಜಾರಿ ಅಷ್ಟೇ ಅಲ್ಲ ಬಿಡಿ ಅಂದ್ರು. ಅಷ್ಟೇ ಅಲ್ಲ ಇನ್ನು ಇದೆ. ಹೇಳೋಣ ನಿಮ್ಮ ಕಥೆನಾ ಅಂತ ಸಿ.ಟಿ. ರವಿ ಮುಂದುವರಿಸಿದರು.

    ಆಗ ಪೂಜಾರಿ, ಅಯ್ಯೋ ಬೇಡಪ್ಪಾ ಕಾಂಪ್ರಮೈಸ್ ಮಾಡಿಕೊಳ್ಳೋಣ ಎಂದು ಹೇಳಿ ಕೋಟಾ ಭಾಷಣ ಮುಂದುವರಿಸಿದ ಪ್ರಸಂಗ ನಡೆಯಿತು.

  • ಎಲ್ಲ ಮುಜರಾಯಿ ದೇವಾಲಯಗಳಲ್ಲಿ ತಿಂಗಳಿಗೊಮ್ಮೆ ಹುಂಡಿ ಎಣಿಕೆ – ಕೋಟಾ ಆದೇಶ

    ಎಲ್ಲ ಮುಜರಾಯಿ ದೇವಾಲಯಗಳಲ್ಲಿ ತಿಂಗಳಿಗೊಮ್ಮೆ ಹುಂಡಿ ಎಣಿಕೆ – ಕೋಟಾ ಆದೇಶ

    – ಕೊಲೆಯಾದ ಅರ್ಚಕ ಕುಟುಂಬಕ್ಕೆ 5 ಲಕ್ಷ ಚೆಕ್ ವಿತರಣೆ

    ಮಂಡ್ಯ: ಶುಕ್ರವಾರ ಮಂಡ್ಯದ ಅರ್ಕೇಶ್ವರ ದೇವಸ್ಥಾನಕ್ಕೆ ನುಗ್ಗಿ ಮೂವರು ಅರ್ಚಕರನ್ನು ಬರ್ಬರವಾಗಿ ಹತ್ಯೆ ಮಾಡಿ ಹುಂಡಿ ಹಣ ಕಳವು ಮಾಡಿದ ಹಿನ್ನೆಲೆ ಇಂದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ದೇವಸ್ಥಾನಕ್ಕೆ ಭೇಟಿ ನೀಡಿದರು.

    ಸಚಿವ ನಾರಾಯಣಗೌಡ ಹಾಗೂ ಮುಜರಾಯಿ ಆಯುಕ್ತೆ ರೋಹಿಣಿ ಸಿಂಧೂರಿ ಅವರೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿದ ಕೋಟಾ ಶ್ರೀನಿವಾಸ್ ಪೂಜಾರಿ, ದೇವಸ್ಥಾನವನ್ನು ಮೊದಲು ವೀಕ್ಷಣೆ ಮಾಡಿದರು. ನಂತರ ನಿನ್ನೆ ನಡೆದ ಘಟನೆಯ ಕುರಿತು ಮಂಡ್ಯ ಎಸ್‍ಪಿ ಪರಶುರಾಮ್ ಅವರ ಬಳಿ ಮಾಹಿತಿ ಕಲೆ ಹಾಕಿ, ಹಂತಕರನ್ನು ಶ್ರೀಘ್ರದಲ್ಲಿ ಪತ್ತೆ ಹಚ್ಚುವಂತೆ ಸೂಚನೆ ನೀಡಿದರು. ಬಳಿಕ ಕೊಲೆಯಾದ ಮೂವರು ಅರ್ಚಕರ ಕುಟುಂಬಕ್ಕೆ ಸಾಂತ್ವನ ಹೇಳಿ, ತಲಾ ಐದು ಲಕ್ಷ ರೂಪಾಯಿ ಚೆಕ್ ವಿತರಣೆ ಮಾಡಿದ್ದರು.

    ನಂತರ ಮಾತನಾಡಿ ಅವರು, ನಿನ್ನೆ ಮಂಡ್ಯದಲ್ಲಿ ನಡೆದ ಘಟನೆ ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತದ್ದು ಆಗಿದೆ. ಇಲ್ಲಿ ಮುಜರಾಯಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಇದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಲು ಮುಜರಾಯಿ ಇಲಾಖೆಯ ಆಯುಕ್ತರಿಗೆ ತಿಳಿಸಿದ್ದೇನೆ. ಇನ್ನೂ ಮುಂದೆ ರಾಜ್ಯದ ಎಲ್ಲಾ ಮುಜರಾಯಿ ದೇವಸ್ಥಾನಗಳಲ್ಲಿ ಪ್ರತಿ ತಿಂಗಳು ಹುಂಡಿ ತೆಗೆಯಬೇಕು ಎಂದು ಆದೇಶಿಸಿದರು.

  • ಅನ್ನದಾಸೋಹ, ಸಮಾರಂಭ ಬಿಟ್ಟು ದೇವಸ್ಥಾನದಲ್ಲಿ ಎಲ್ಲಾ ಸೇವೆ ಆರಂಭ

    ಅನ್ನದಾಸೋಹ, ಸಮಾರಂಭ ಬಿಟ್ಟು ದೇವಸ್ಥಾನದಲ್ಲಿ ಎಲ್ಲಾ ಸೇವೆ ಆರಂಭ

    ಉಡುಪಿ: ಸೆಪ್ಟೆಂಬರ್ ಒಂದರಿಂದ ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲಿ ಸೇವೆ ಆರಂಭ ಆಗಲಿದೆ. ಅನ್ನ ದಾಸೋಹ ಮತ್ತು ಸಮಾರಂಭಗಳಿಗೆ ಅವಕಾಶವಿಲ್ಲ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ದೇಗುಲದಲ್ಲಿ ಎಲ್ಲಾ ಸೇವೆ ಆರಂಭಿಸಲು ಅನುಮತಿ ಕೋರಿ ಆರೋಗ್ಯ ಇಲಾಖೆಯನ್ನು ಸಂಪರ್ಕಿಸಿದ್ದೇವೆ. ಸೆಪ್ಟೆಂಬರ್ 1ರಿಂದ ಸೇವೆ ಆರಂಭ ಮಾಡಬೇಕು ಎಂಬುದು ನಮ್ಮ ಗುರಿ. ರಾಜ್ಯ ಮುಖ್ಯ ಕಾರ್ಯದರ್ಶಿ ಜೊತೆ ಮಾತನಾಡಿದ್ದೇವೆ. ಒಳಾಂಗಣದ ಎಲ್ಲಾ ಸೇವೆ ಆರಂಭ ಮಾಡಿ ಎಂದು ಮನವಿ ಮಾಡಿದ್ದೇವೆ. ಸರ್ಕಾರದಿಂದ ಅಧಿಕೃತ ಮಾಹಿತಿ ಮತ್ತು ಅನುಮತಿ ಬರಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಸಾಮಾಜಿಕ ಅಂತರ ಕಾಪಾಡುವ ಸೇವೆಗೆ ಮುಕ್ತ ಅವಕಾಶ ಇದೆ. ಕೊಲ್ಲೂರಿನ ಚಿನ್ನದ ರಥ ಸೇವೆ, ಬೆಳ್ಳಿರಥ ಸೇವೆ ಹೇಗೆ ಎಂಬ ಬಗ್ಗೆ ಚಿಂತನೆ ನಡೆಸುತ್ತೇವೆ. ಕೋವಿಡ್-19 ಗೈಡ್ ಲೈನ್ ಮೇಲೆ ಎಲ್ಲಾ ಸೇವೆ ಆರಂಭವಾಗುತ್ತದೆ ಎಂದು ಹೇಳಿದರು.

    ನೂರಾರು, ಸಾವಿರಾರು ಜನ ಸೇರಿ ಕೊಡುವ ಸೇವೆ ಸದ್ಯಕ್ಕೆ ಸಾಧ್ಯವಿಲ್ಲ. ಅಂತಹ ಸೇವೆಯನ್ನು ಹತ್ತು-ಹದಿನೈದು ಜನರು ಮಾಡಲು ಸಾಧ್ಯವೇ ಎಂಬ ಚಿಂತನೆ ನಡೆಸುತ್ತೇವೆ. ಕೋವಿಡ್ ನಿಯಮದ ಮಿತಿಯ ಒಳಗೆ ಎಲ್ಲಾ ಸೇವೆಗಳು ಇರುತ್ತದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

  • ಅಭಿಪ್ರಾಯ ಭೇದವಿದ್ದರೆ ಮುಕ್ತವಾಗಿ ಚರ್ಚೆಗೆ ಅವಕಾಶ ಇದೆ: ಕೋಟ

    ಅಭಿಪ್ರಾಯ ಭೇದವಿದ್ದರೆ ಮುಕ್ತವಾಗಿ ಚರ್ಚೆಗೆ ಅವಕಾಶ ಇದೆ: ಕೋಟ

    – ಪುಂಡಾಟಕ್ಕೆ ಕಠಿಣ ಶಿಕ್ಷೆಯಾಗಲಿ

    ಉಡುಪಿ: ಬೆಂಗಳೂರಿನ ಪುಲಿಕೇಶಿ ನಗರದಲ್ಲಿ ಹಿಂಸಾಚಾರವನ್ನು ಮುಜರಾಯಿ, ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಖಂಡಿಸಿದ್ದಾರೆ.

    ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತಮಾಡಿದ ಅವರು, ಪೊಲೀಸರ ಮೇಲೆ ಹಲ್ಲೆ ಮಾಡಿದ್ದು ಅಕ್ಷರಕ್ಷರ ಅಪರಾಧ. ಸಾರ್ವಜನಿಕ ಆಸ್ತಿ ನಷ್ಟಕ್ಕೆ ಕಠಿಣ ಶಿಕ್ಷೆ ಆಗಬೇಕಿದೆ. ಪೊಲೀಸ್ ಠಾಣೆಯ ಪೀಠೋಪಕರಣ ಧ್ವಂಸ ಮಾಡಿದ್ದು ಶಿಕ್ಷಾರ್ಹ ಅಪರಾಧ ಎಂದರು.

    ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನಿರ್ದಾಕ್ಷಿಣ್ಯ ಕ್ರಮಕ್ಕೆ ಆದೇಶಿಸಿದ್ದಾರೆ. ಸಿಎಂ ಅವರ ಆದೇಶವನ್ನು ಸ್ವಾಗತ ಮಾಡುತ್ತೇನೆ ಎಂದು ಕೋಟ ಹೇಳಿದರು.

    ಅಭಿಪ್ರಾಯ ಭೇದ ಇದ್ದರೆ ಮುಕ್ತವಾಗಿ ಚರ್ಚೆಗೆ ಅವಕಾಶ ಇದೆ. ಪುಂಡಾಟಿಕೆ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು. ಇಂತಹ ಪುಂಡಾಟಿಕೆ ರಾಜ್ಯದಲ್ಲಿ ನಡೆಯಬಾರದು. ಸಿಎಂ ಗೃಹ ಸಚಿವರ ಕ್ರಮವನ್ನು ನಾವು ಸ್ವಾಗತ ಮಾಡುತ್ತೇವೆ ಎಂದು ಪೂಜಾರಿ ಹೇಳಿದರು.

  • ಆರೋಪಿಗಳನ್ನು ರಕ್ಷಣೆ ಮಾಡಲು ಇದು ಖಾದರ್ ಕಾಲವಲ್ಲ: ಶಾಸಕರಿಗೆ ಕೋಟ ಟಾಂಗ್

    ಆರೋಪಿಗಳನ್ನು ರಕ್ಷಣೆ ಮಾಡಲು ಇದು ಖಾದರ್ ಕಾಲವಲ್ಲ: ಶಾಸಕರಿಗೆ ಕೋಟ ಟಾಂಗ್

    ಬೆಂಗಳೂರು/ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರನ್ನು ವರ್ಗಾವಣೆ ಮಾಡಿದ ವಿಚಾರ ಸಂಬಂಧ ಶಾಸಕ ಯು.ಟಿ ಖಾದರ್ ಹೇಳಿಕೆಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಟಾಂಗ್ ನೀಡಿದ್ದಾರೆ.

    ಈ ಬಗ್ಗೆ ಟ್ವೀಟ್ ಮೂಲಕ ಶಾಸಕರಿಗೆ ತಿರುಗೇಟು ನೀಡಿರುವ ಕೋಟ, ಆಡಳಿತಾತ್ಮಕ ದೃಷ್ಟಿಯಿಂದ ಸರಕಾರ ಮಾಡಿದ ವರ್ಗಾವಣೆಯನ್ನು ಖಾದರ್ ರಾಜಕೀಯಗೊಳಿಸಿದ್ದು ದುರದೃಷ್ಟ. ಯಾವುದೇ ಆರೋಪಿಗಳನ್ನು ರಕ್ಷಣೆ ಮಾಡಲು ಇದು ಖಾದರ್ ಕಾಲವಲ್ಲ ಎಂದು ಬರೆದುಕೊಂಡಿದ್ದಾರೆ.

    ಇನ್ನೊಂದು ಟ್ವೀಟ್ ಮಾಡಿ, ಕೊರೊನಾ ನಿಯಂತ್ರಣಕ್ಕೆ ಪ್ರತಿಪಕ್ಷಗಳ ಸಹಕಾರ ಜಿಲ್ಲಾಡಳಿತ ಕೋರಿದೆ. ದುರಾದೃಷ್ಟಕ್ಕೆ, ಶವಸಂಸ್ಕಾರದ ಹೆಸರಿನಲ್ಲಿ ನಿಯಮಗಳನ್ನು ಉಲ್ಲಂಘಿಸಿ ಪ್ರಚಾರ ಪಡೆಯುತ್ತಿರುವುದು ವಿಪಕ್ಷದ ಜನಪ್ರತಿನಿಧಿಗಳಿಗೆ ಶೋಭೆಯಲ್ಲ ಎಂದು ಖಾದರ್ ಗೆ ಟ್ಯಾಗ್ ಮಾಡಿ ಕಿಡಿಕಾರಿದ್ದಾರೆ.

    ಖಾದರ್ ಏನು ಹೇಳಿದ್ದರು?
    ಕಾನೂನು ಕೈಗೆತ್ತಿಕೊಂಡರೆ, ನೈತಿಕ ಪೊಲೀಸ್ ಗಿರಿ ಮಾಡಿದ್ರೆ ಕ್ರಮ ಕೈಗೊಳ್ಳತ್ತೇನೆ ಎಂದಿದ್ದಕ್ಕೆ ದುಷ್ಕರ್ಮಿಗಳು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ರವರಿಗೆ ಕೊಲೆ ಬೆದರಿಕೆ ಹಾಕಿದರು. ಸರ್ಕಾರ ಕೊಲೆ ಬೆದರಿಕೆ ಹಾಕಿದವರಿಗೆ ಶಿಕ್ಷೆ ನೀಡುವ ಬದಲು ಜಿಲ್ಲಾಧಿಕಾರಿಗಳಿಗೆ ಶಿಕ್ಷೆ ನೀಡಿದೆ ಎಂದು ಖಾದರ್ ಟ್ವೀಟ್ ಮಾಡಿದ್ದರು.

    ಇಂಥಹ ಸಂದಿಗ್ಧ ಪರಿಸ್ಥಿತಿಯಲ್ಲಿ ಅಧಿಕಾರಿಗಳಿಗೆ ಧೈರ್ಯ ತುಂಬುವ ಬದಲು ಬಿಜೆಪಿ ಮುಖಂಡರುರಾಜಕೀಯ ಮೇಲಾಟ ಮಾಡುತ್ತಿದ್ದಾರೆ. ಮಾರಕ ಕೊರೋನಾ ಜನರನ್ನು ಉಸಿರುಗಟ್ಟಿಸುತ್ತಿದ್ದರೆ,ಬಿಜೆಪಿ ಜನಪ್ರತಿನಿಧಿಗಳು ಅಧಿಕಾರಿಗಳ ಉಸಿರುಗಟ್ಟಿಸುತ್ತಿದ್ದಾರೆ. ಉತ್ತರಿಸು ಸರ್ಕಾರ #ನ್ಯಾಯ ಎಲ್ಲಿದೆ? ಇದೇ ವೇಳೆ ತಮ್ಮ ಆಕ್ರೋಶ ಹೊರಹಾಕಿದ್ದರು.

    ಡಿಸಿ ವರ್ಗಾವಣೆ ಯಾಕೆ?
    ಜಾನುವಾರುಗಳನ್ನು ಸಾಗಾಟ ಮಾಡುವ ವಾಹನ ಹಾಗೂ ಜನರ ಮೇಲೆ ಹಲ್ಲೆ ನಡೆಸಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳುವಂತೆ ಇತ್ತೀಚೆಗೆ ನಡೆದ ಅಧಿಕಾರಿಗಳ ಸಭೆಯೊಂದರಲ್ಲಿ ಜಿಲ್ಲಾಧಿಕಾರಿ ಆದೇಶಿಸಿದ್ದರು. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ರಾಮ್ ಸೇನಾ ಅಭಿಮಾನಿ ಬಳಗ ಅನ್ನೋ ವಾಟ್ಸಾಪ್ ಗ್ರೂಪ್ ಒಂದರಲ್ಲಿ ಕಿಡಿಗೇಡಿಯೋರ್ವ ”ಮೊದಲು ಇವಳನ್ನು ಕಡಿದು ಕೊಲ್ಲಬೇಕು”(ಫಸ್ಟ್ ಮೊಲೆನ್ ಕರ್ತ್ ಕೆರೋಡು)ಎಂದು ತುಳುಭಾಷೆಯಲ್ಲಿ ಮೆಸೇಜ್ ಹಾಕಿದ್ದನು. ಈ ಮೆಸೇಜ್ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಭಾರೀ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಜಿಲ್ಲಾಧಿಕಾರಿಯನ್ನು ವರ್ಗಾಯಿಸಲಾಗಿದೆ.

  • ಗುರುವಾರದಿಂದ ಒಂದು ವಾರ ದಕ್ಷಿಣ ಕನ್ನಡ ಜಿಲ್ಲೆ ಲಾಕ್‍ಡೌನ್

    ಗುರುವಾರದಿಂದ ಒಂದು ವಾರ ದಕ್ಷಿಣ ಕನ್ನಡ ಜಿಲ್ಲೆ ಲಾಕ್‍ಡೌನ್

    ಮಂಗಳೂರು: ದಿನೇ ದಿನೇ ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಒಂದು ವಾರ ಲಾಕ್‍ಡೌನ್ ಘೋಷಣೆ ಮಾಡಲಾಗಿದೆ.

    ಗುರುವಾರದಿಂದ ಒಂದು ವಾರಗಳ ಕಾಲ ಲಾಕ್‍ಡೌನ್ ಘೋಷಣೆ ಮಾಡಿ ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಆದೇಶ ಹೊರಡಿಸಿದ್ದಾರೆ. ಬುಧವಾರದ ತನಕ ಅಗತ್ಯ ವಸ್ತುಗಳ ಖರೀದಿಗೆ ಜನರಿಗೆ ಅವಕಾಶ ಮಾಡಿಕೊಡಲಾಗಿದೆ. ನಂತರ ಬುಧವಾರ ರಾತ್ರಿ 8 ಗಂಟೆಯಿಂದಲೇ ಲಾಕ್‍ಡೌನ್ ಆರಂಭವಾಗಲಿದೆ.

    ಇಂದು ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ 11 ಜಿಲ್ಲೆಗಳ ಡಿಸಿಗಳು, ಸಿಇಒಗಳು ಮತ್ತು ಎಸ್‍ಪಿಗಳ ಜೊತೆ ಸಭೆ ಮಾಡುತ್ತಿದ್ದಾರೆ. ಈ ಸಭೆಯ ನಂತರ ಯಾವ ಜಿಲ್ಲೆಯಲ್ಲಿ ಲಾಕ್‍ಡೌನ್ ಜಾರಿ ಮಾಡಬೇಕು ಎಂಬುದನ್ನು ಅಧಿಕೃತವಾಗಿ ಘೋಷಣೆ ಮಾಡಲಾಗುತ್ತದೆ. ಆದರೆ ಸಿಎಂ ಘೋಷಣೆ ಮಾಡುವ ಮೊದಲೇ ಶ್ರೀನಿವಾಸ ಪೂಜಾರಿ ಒಂದು ವಾರಗಳ ಕಾಲ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್‍ಡೌನ್ ಘೋಷಣೆ ಮಾಡಿದ್ದಾರೆ.

    ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಒಂದು ವಾರಗಳ ಕಾಲ ಲಾಕ್‍ಡೌನ್ ಮಾಡುವುದಕ್ಕೆ ಅವಕಾಶ ಕೊಡಿ ಎಂದು ಮುಖ್ಯಮಂತ್ರಿಗಳಿಗೆ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಮನವಿ ಮಾಡಿದ್ದರು. ಮುಖ್ಯಮಂತ್ರಿಗಳ ಜೊತೆಗಿನ ವಿಡಿಯೋ ಕಾನ್ಫರೆನ್ಸ್‌ನಲ್ಲಿ ನಳಿನ್ ಮನವಿ ಮಾಡಿದ್ದರು. ಆಗ ಜಿಲ್ಲಾಡಳಿತವೇ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಯಡಿಯೂರಪ್ಪ ಸೂಚಿಸಿದ್ದರು. ಅದರಂತೆಯೇ ಒಂದು ವಾರಗಳ ಕಾಲ ಲಾಕ್‍ಡೌನ್ ಘೋಷಣೆ ಮಾಡಲಾಗಿದೆ.

    ವಿಡಿಯೋ ಕಾನ್ಫರೆನ್ಸ್‌ನಲ್ಲಿ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್, ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ್ ಪೂಜಾರಿ, ಜಿ.ಪಂ ಸಿ.ಇ.ಓ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸೇರಿದಂತೆ ಅಧಿಕಾರಿಗಳು ಭಾಗಿಯಾಗಿದ್ದರು.

  • ಯೋಚಿಸಿ ಮಾತನಾಡುವಂತೆ ಸಿದ್ದುಗೆ ಕೋಟ ಶ್ರೀನಿವಾಸ್ ವಾರ್ನ್

    ಯೋಚಿಸಿ ಮಾತನಾಡುವಂತೆ ಸಿದ್ದುಗೆ ಕೋಟ ಶ್ರೀನಿವಾಸ್ ವಾರ್ನ್

    ವಿಜಯಪುರ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಯೋಚಿಸಿ ಮಾತನಾಡುವಂತೆ ಮುಜರಾಯಿ ಸಚಿವ ಕೋಟ ಶ್ರೀನಿವಾಸ್ ವಾರ್ನ್ ಮಾಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಭಾರತ-ಚೀನಾ ಗಡಿಯಲ್ಲಿ ಬೆಳವಣಿಗೆ ಬಗ್ಗೆ ಪ್ರಧಾನಿ ಮೌನವನ್ನ ದೇಶದ್ರೋಹಕ್ಕೆ ಹೋಲಿಸಿ ಮಾತನಾಡಿದ್ದಕ್ಕೆ ಮಾಜಿ ಸಿಎಂಗೆ ಕೋಟ ತಿರುಗೇಟು ನೀಡಿದರು. ಈಗ ದೇಶದಲ್ಲಿ ತಾಕತ್ತಿನ ನರೇಂದ್ರ ಮೋದಿ ಪ್ರಧಾನಿಯಾಗಿದ್ದಾರೆ. ಸೈನಿಕರ ಬೆನ್ನಿಗೆ ನಿಂತು ಗುಂಡು ಹಾರಿಸಿ ಎಂದು ಹೇಳುವ ಪ್ರಧಾನಿ ಇದ್ದಾರೆ ಎಂದು ಹೇಳಿದ್ದಾರೆ.

    ಈ ಹಿಂದೆ ಯುದ್ಧ ನಡೆದಾಗ ಆಗಿನ ಪ್ರಧಾನಿ ವಿದೇಶ ಪ್ರವಾಸದಲ್ಲಿದ್ದರು. ಈಗ ತಾಕತ್ತಿನ ವ್ಯಕ್ತಿ ಪ್ರಧಾನಿ ಇದ್ದಾರೆ ಇದನ್ನ ಸಿದ್ದರಾಮಯ್ಯ ಯೋಚಿಸಬೇಕು ಎಂದು ವಾಗ್ದಾಳಿ ನಡೆಸಿದರು.

    ಇದೇ ವೇಳೆ ದೇವಸ್ಥಾನಗಳಲ್ಲಿ ಭಕ್ತರಿಗೆ ಪುಷ್ಪಾರ್ಚನೆ ಮಾಡಲು ಅವಕಾಶ ನೀಡಬೇಕು ಅಂತಾ ಆಲೋಚನೆ ಇದೆ. ಅಲ್ಲದೆ ನಾಲ್ಕು ದಿನಗಳಲ್ಲಿ ಈ ಬಗ್ಗೆ ಸಿಎಂ ಜೊತೆ ಚರ್ಚಿಸಿ ನಿರ್ಧಾರ ತಗೆದುಕೊಳ್ಳುವುದಾಗಿ ಸ್ಪಷ್ಟಪಡಿಸಿದರು. ಈಗ ಶುಚಿತ್ವ ಮತ್ತು ಸಾಮಾಜಿಕ ಅಂತರ ಕಾಯ್ದುಕೊಂಡು ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮುಂದಿನ ನಾಲ್ಕು ದಿನಗಳಲ್ಲಿ ಲಾಕಡೌನ್ ಸಡಿಲವಾದರೆ ಭಕ್ತರಿಗೆ ಕರ್ಪೂರಾರ್ಚನೆ, ಪುಷ್ಪಾರ್ಚನೆಗೆ ಅವಕಾಶ ನೀಡುವ ಕುರಿತು ನಿರ್ಧಾರ ತಗೆದುಕೊಳ್ಳುತ್ತೇವೆ ಎಂದರು.

  • ಮುಜರಾಯಿ ಇಲಾಖೆಯ ಸಪ್ತಪದಿ ವಿವಾಹಕ್ಕೂ ಶೀಘ್ರದಲ್ಲೇ ದಿನ ನಿಗದಿ- ಸಚಿವ ಕೋಟಾ

    ಮುಜರಾಯಿ ಇಲಾಖೆಯ ಸಪ್ತಪದಿ ವಿವಾಹಕ್ಕೂ ಶೀಘ್ರದಲ್ಲೇ ದಿನ ನಿಗದಿ- ಸಚಿವ ಕೋಟಾ

    ಮಂಗಳೂರು: ಕೊರೊನಾ ಲಾಕ್‍ಡೌನ್‍ನಿಂದಾಗಿ ಮುಜರಾಯಿ ಇಲಾಖೆಯ ಒಟ್ಟು ಆದಾಯದಲ್ಲಿ ಶೇ.30 ರಿಂದ 35ರಷ್ಟು ಕಡಿಮೆ ಆಗಿದೆ ಎಂದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.

    ನಗರದಲ್ಲಿ ಮಾತನಾಡಿದ ಸಚಿವರು, ಮುಜರಾಯಿ ಇಲಾಖೆಯ ಅಧೀನದಲ್ಲಿರುವ ದೇವಾಲಯಗಳಿಂದ ಪ್ರತಿವರ್ಷ ಅಂದಾಜು 600 ಕೋಟಿ ರೂ. ಆದಾಯ ಬರುತಿತ್ತು. ಆದ್ರೆ ಲಾಕ್‍ಡೌನ್‍ನಿಂದ ಒಟ್ಟು ಆದಾಯದ ಪ್ರಮಾಣವು ಕಡಿಮೆಯಾಗಿದೆ ಎಂದು ತಿಳಿಸಿದರು.

    ಲಾಕ್‍ಡೌನ್‍ನಿಂದಾಗಿ ಮುಜರಾಯಿ ಇಲಾಖೆಯಿಂದ ನಡೆಯಬೇಕಿದ್ದ ಸಪ್ತಪದಿ ವಿವಾಹವೂ ಮುಂದೂಡಲಾಗಿದ್ದು, ಮುಂದಿನ ದಿನಗಳಲ್ಲಿ ಕಾರ್ಯಯೋಜನೆ ಅನುಷ್ಠಾನ ಮಾಡುತ್ತೇವೆ. ಈ ಬಗ್ಗೆ ಅಧಿಕಾರಿಗಳ ಸಭೆ ನಡೆಸಿದ್ದೇವೆ. ಸಪ್ತಪದಿಯನ್ನು ನಿಶ್ಚಯವಾಗಿ ನಮ್ಮ ಇಲಾಖೆ ಮಾಡುತ್ತೆ. ಯಾವ ರೀತಿ ಮಾಡಬೇಕು ಎಂದು ನಮ್ಮ ತಂಡ ಚಿಂತನೆ ನಡೆಸಿದೆ ಎಂದು ತಿಳಿಸಿದರು.