Tag: Koratagere

  • ಒಂದೇ ಪಕ್ಷದ ನಾಯಕರ ಮಧ್ಯೆ ಅಪನಂಬಿಕೆ- ಸಿಎಂ, ಪರಂ ಮಾತು ಕೇಳಿ ವೇಣುಗೋಪಾಲ್ ಶಾಕ್!

    ಒಂದೇ ಪಕ್ಷದ ನಾಯಕರ ಮಧ್ಯೆ ಅಪನಂಬಿಕೆ- ಸಿಎಂ, ಪರಂ ಮಾತು ಕೇಳಿ ವೇಣುಗೋಪಾಲ್ ಶಾಕ್!

    ಬೆಂಗಳೂರು: ಸಿಎಂ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರಾ ಅಥವಾ ವರುಣಾ ಕ್ಷೇತ್ರದಿಂದ ಸ್ಪರ್ಧಿಸುತ್ತಾರಾ ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ. ಇನ್ನೊಂದೆಡೆ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಕೊರಟಗೆರೆಯಲ್ಲಿ ಸ್ಪರ್ಧಿಸುತ್ತಾರ ಇಲ್ಲಾ ಬೆಂಗಳೂರಿಗೆ ವಲಸೆ ಬರ್ತಾರಾ ಎಂಬ ಚರ್ಚೆಯೂ ನಡೆಯುತ್ತಿದೆ. ಆದರೆ ಸಿಎಂ ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ಪರಸ್ಪರ ಒಬ್ಬರನೊಬ್ಬರು ನಂಬುವ ಸ್ಥಿತಿಯಲ್ಲಿಲ್ಲ.

    ಒಬರನ್ನು ಇನ್ನೊಬ್ಬರು ಸೋಲಿಸಬಹುದು ಎಂಬ ಆತಂಕ ಇಬ್ಬರಲ್ಲೂ ಮನೆ ಮಾಡಿದೆ. ಅಲ್ಲದೆ ಹೊರಗಿನ ಶತ್ರುಗಳ ಭಯವು ಅವರನ್ನು ಕಾಡುತ್ತಿದೆ. ಅದಕ್ಕಾಗಿ ಇಬ್ಬರು ಸಹಾ ಕ್ಷೇತ್ರದ ಗುಟ್ಟು ಬಿಟ್ಟು ಕೊಡುತ್ತಿಲ್ಲ. ಎರಡು ದಿನದ ಹಿಂದೆ ರಾಜ್ಯಕ್ಕೆ ಬಂದು ಮೂರು ದಿನಗಳ ಸರಣಿ ಸಭೆ ನಡೆಸಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಲ್, ಪರಮೇಶ್ವರ್ ಹಾಗೂ ಸಿಎಂ ಸ್ಪರ್ಧೆ ಮಾಡುವ ಕ್ಷೇತ್ರದ ಬಗ್ಗೆ ಚರ್ಚೆ ನಡೆಸಿದ್ದಾರೆ. ಇಬ್ಬರ ನಡೆ ನೋಡಿ ಸ್ವತಃ ವೇಣುಗೋಪಾಲ್ ದಂಗಾಗಿ ಹೋಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?:
    ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಬಳಿ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ತಾವು ವರುಣಾ ಕ್ಷೇತ್ರದಿಂದಲೇ ಸ್ಪರ್ಧಿಸುವುದಾಗಿ ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ ವಿರೋಧಿಗಳ ದಿಕ್ಕು ತಪ್ಪಿಸಲು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಹೇಳುತ್ತಿದ್ದೇನೆ ಎಂದು ಸ್ಪಷ್ಟ ಪಡಿಸಿದ್ದಾರೆ. ತಮ್ಮ ತವರು ಜಿಲ್ಲೆಯಲ್ಲಿ ಮಾಜಿ ಸಚಿವರುಗಳಾದ ಶ್ರೀನಿವಾಸ್ ಪ್ರಸಾದ್ ಹಾಗೂ ಹೆಚ್.ವಿಶ್ವನಾಥ್ ತಮ್ಮನ್ನು ಸೋಲಿಸಲು ಮಾಡುತ್ತಿರುವ ಪ್ರಯತ್ನಗಳ ಬಗ್ಗೆಯೂ ಹೇಳಿದ್ದಾರೆ. ಅಲ್ಲದೆ ಪಕ್ಷದ ಒಳಗಿನ ಆಂತರಿಕ ಸಮಸ್ಯೆ ಬಗ್ಗೆಯು ಮಾತನಾಡಿದ್ದಾರೆ. ದಲಿತ ನಾಯಕರುಗಳ ಜೊತೆ ಪರಮೇಶ್ವರ್ ಕೈ ಜೋಡಿಸಿ ತಮ್ಮ ಸೋಲಿಗೆ ಪ್ರಯತ್ನಿಸಬಹುದು ಎಂಬ ಕಾರಣಕ್ಕೆ ತಮಗಿರುವ ಆತಂಕವನ್ನು ತಿಳಿಸಿದ್ದು, ಆದ್ದರಿಂದ ಕೊನೆ ಕ್ಷಣದವರೆಗೆ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧಿಸುವುದಾಗಿ ಬಿಂಬಿಸಿ ಅಂತಿಮವಾಗಿ ವರುಣಾ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಬಗ್ಗೆ ವೇಣುಗೋಪಾಲ್ ಬಳಿ ಸ್ಪಷ್ಟವಾಗಿ ಹೇಳಿದ್ದಾರೆ.

    ಏನಂದ್ರು ಜಿ.ಪರಮೇಶ್ವರ್….?
    ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಗೆ  ತಮ್ಮ ಸ್ವಕ್ಷೇತ್ರ ಕೊರಟಗೆರೆ ಬಗ್ಗೆ ಇದ್ದ ಆತಂಕ ಇನ್ನು ದೂರವಾಗಿಲ್ಲ. ಕಳೆದ ಬಾರಿ ಸಿಎಂ ಸಿದ್ದರಾಮಯ್ಯ ಕ್ಷೇತ್ರದಲ್ಲಿನ ತಮ್ಮ ಸಮುದಾಯದ ನಾಯಕರಿಗೆ ಸೂಚನೆ ನೀಡಿ ಪರಮೇಶ್ವರ್ ಅವರನ್ನ ಸೋಲಿಸಿದ್ರು ಎಂದು ಹೇಳಲಾಗಿದೆ. ಆ ಮೂಲಕ ಸಿಎಂ ರೇಸ್ ಗೆ ಪರಮೇಶ್ವರ್ ಬರದಂತೆ ಮಾಡಿದ್ದರು. ಇದೇ ಆತಂಕವನ್ನ ಪರಮೇಶ್ವರ್ ವೇಣುಗೋಪಾಲ್ ಬಳಿ ತೋಡಿಕೊಂಡಿದ್ದು, ಬೆಂಗಳೂರಿನ ಪುಲಿಕೇಶಿ ನಗರ ಅಥವ ಮಹದೇವಪುರದಿಂದ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಆದರೆ ಮೊದಲೇ ಘೋಷಿಸುವುದು ಬೇಡ ಎಂದು ಕೊರಟಗೆರೆಯಿಂದಲೇ ಸ್ಪರ್ಧೆಸುವುದಾಗಿ ಹೇಳಿಕೊಂಡು ತಿರುಗುತ್ತಿದ್ದಾರೆ.

    ಸಿಎಂ ಹಾಗೂ ಪರಮೇಶ್ವರ್ ಇಬ್ಬರು ಸ್ವತಃ ಒಬ್ಬರನೊಬ್ಬರು ನಂಬುವ ಸ್ಥಿತಿಯಲ್ಲಿಲ್ಲ. ಪರಸ್ಪರ ಒಬ್ಬರ ಮೇಲೊಬ್ಬರು ಅಪನಂಬಿಕೆ ಇಟ್ಟುಕೊಂಡಿರುವ ಉಭಯ ನಾಯಕರುಗಳು ತಮ್ಮ ಅಭಿಪ್ರಾಯವನ್ನು ಹೈಕಮಾಂಡ್ ಬಳಿ ಹೇಳಿಕೊಂಡಿದ್ದಾರೆ. ಆ ಮೂಲಕ ತಾವು ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇವೆ ಎಂಬುದರ ಬಗ್ಗೆಯು ಸ್ಪಷ್ಟಪಡಿಸಿದ್ದಾರೆ ಎಂದು ತಿಳಿದುಬಂದಿದೆ.

  • ವಿಡಿಯೋ: ರಾಸುಗಳಿಗೆ ನಿತ್ಯ ಮೇವನ್ನು ಹೊಂದಿಸಲು ಮೇವಿನ ಲಾರಿಗಳ ಹಿಂದೆ ಓಡ್ತಿದ್ದಾರೆ ರೈತರು!

    ವಿಡಿಯೋ: ರಾಸುಗಳಿಗೆ ನಿತ್ಯ ಮೇವನ್ನು ಹೊಂದಿಸಲು ಮೇವಿನ ಲಾರಿಗಳ ಹಿಂದೆ ಓಡ್ತಿದ್ದಾರೆ ರೈತರು!

    ತುಮಕೂರು: ಇತ್ತೀಚಿನ ವರ್ಷಗಳಲ್ಲಿ ಬರದ ಛಾಯೆ ಯಾವ ರೀತಿಯಲ್ಲಿದೆ ಅಂದರೆ ರೈತರು ತಾವು ಸಾಕಿರುವ ರಾಸುಗಳಿಗೆ ಮೇವು ಸಿಗುತ್ತಿಲ್ಲ. ಇನ್ನು ಕೆಲ ಕಡೆ ಮಳೆ ಮರೀಚಿಕೆಯಾಗಿದ್ದು, ಬೆಳೆ ಇಲ್ಲದೇ ರೈತಾಪಿ ವರ್ಗ ಹಣೆಯ ಮೇಲೆ ಕೈಹೊತ್ತು ಕುಳಿತಿದ್ದಾರೆ. ರೈತ ಎಷ್ಟು ಬಳಲಿದ್ದಾನೆ ಎನ್ನುವುದಕ್ಕೆ ಜಿಲ್ಲೆಯ ಹೊಲತಾಳು ಗ್ರಾಮದ ಬರದ ಸುದ್ದಿ ಓದಿದ್ರೆ ನಿಮಗೆ ತಿಳಿಯುತ್ತದೆ.

    ಬರದಿಂದಾಗಿ ಹಸುಗಳಿಗೆ ಮೇವು ಸಿಗದ ಹಿನ್ನೆಲೆಯಲ್ಲಿ ಕೊರಟಗೆರೆ ತಾಲೂಕಿನ ಹೊಲತಾಳು ಗ್ರಾಮದ ರೈತರು ಮೇವು ತುಂಬಿದ ಲಾರಿಗಳ ಹಿಂದೆ ಓಡಿ ಅವುಗಳಿಂದ ಬಿದ್ದ ಅಲ್ಪ ಸ್ವಲ್ಪ ಮೇವನ್ನು ಸಂಗ್ರಹಿಸುತ್ತಿದ್ದಾರೆ.

    ನಿತ್ಯ ರಾಜ್ಯ ಹೆದ್ದಾರಿ ಮುಖಾಂತರ ಕೊರಟಗೆರೆ ಮಾರ್ಗವಾಗಿ ಮಧುಗಿರಿ ಶಿರಾ ಪಾವಗಡ ತಲುಪುವ ಮೇವಿನ ಲಾರಿಗಳಿಗಾಗಿ ಕಾದು ಕುಳಿತುಕೊಳ್ಳುವ ರೈತರು ಲಾರಿ ಬಂದ ತಕ್ಷಣ ಅದರ ಹಿಂದೆಯೇ ಓಡುತ್ತಾರೆ.

    ಕೆಲವೊಮ್ಮೆ ಲಾರಿಯಿಂದ ಮೇವನ್ನು ಕೀಳುವ ಪ್ರಯತ್ನ ಮಾಡುತ್ತಾರೆ. ಸಾಧ್ಯವಾಗದಿದ್ದರೆ ಮರದ ಮೇಲೆ ಹತ್ತಿ ಕುಳಿತು ಲಾರಿಗಳು ಮರದ ಅಡಿ ಚಲಿಸುವಾಗ ದೊಣ್ಣೆಯಿಂದ ಮೇವನ್ನು ಬೀಳಿಸಿಕೊಂಡು ತೆಗೆದುಕೊಂಡು ಹೋಗುತ್ತಿದ್ದಾರೆ. ಜನ ಮೇವನ್ನು ಸಂಗ್ರಹಿಸುತ್ತಿರುವ ನೋವಿನ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    https://youtu.be/KBEXrJn4494