Tag: Konkan Railway

  • ಕೊಂಕಣ ರೈಲ್ವೆ ಭಾರತೀಯ ರೈಲ್ವೆಯಲ್ಲಿ ವಿಲೀನ ಮಾಡಿ: ಕೋಟ ಶ್ರೀನಿವಾಸ ಪೂಜಾರಿ ಆಗ್ರಹ

    ಕೊಂಕಣ ರೈಲ್ವೆ ಭಾರತೀಯ ರೈಲ್ವೆಯಲ್ಲಿ ವಿಲೀನ ಮಾಡಿ: ಕೋಟ ಶ್ರೀನಿವಾಸ ಪೂಜಾರಿ ಆಗ್ರಹ

    ಬೆಂಗಳೂರು: ಕೊಂಕಣ ರೈಲ್ವೆಯನ್ನು (Konkan Railway) ಭಾರತೀಯ ರೈಲ್ವೆಯಲ್ಲಿ (Indian Railways) ವಿಲೀನಗೊಳಿಸುವ ಸಂಬಂಧ ಕ್ರಮ ಕೈಗೊಳ್ಳುವಂತೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿಯವರ (Kota Srinivas Poojary) ನೇತೃತ್ವದ ಶಾಸಕರ ತಂಡ ಸಚಿವರಿಗೆ ಮನವಿ ಸಲ್ಲಿಸಿದೆ.

    ರಾಜ್ಯ ಮೂಲಭೂತ ಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಅವರು ಈ ಕುರಿತು ಕ್ರಮ ಕೈಗೊಳ್ಳಲು ಸಂಬಂಧಿತರಿಗೆ ಸೂಚಿಸಿದ್ದಾಗಿ ಪ್ರಕಟಣೆ ತಿಳಿಸಿದೆ. ಜಾರ್ಜ್ ಫರ್ನಾಂಡಿಸ್ ಅವರು ಕೇಂದ್ರ ರೈಲ್ವೆ ಸಚಿವರಾಗಿದ್ದಾಗ ಅನುಷ್ಠಾನಕ್ಕೆ ತಂದ ಮಹತ್ವದ ಕೊಂಕಣ ರೈಲ್ವೆ ಯೋಜನೆಗೆ ಇಂದಿಗೆ ಸುಮಾರು 30 ವರ್ಷಗಳು ತುಂಬುತ್ತಿದೆ. ಏಕ ಹಳಿಯ ಪ್ರಯಾಣ ಸೌಲಭ್ಯ ಇರುವುದರಿಂದ ಹೆಚ್ಚುವರಿ ರೈಲ್ವೆ ಓಡಾಡಲು ಕಷ್ಟವಾಗುತ್ತದೆ ಮತ್ತು ಕೊಂಕಣ ರೈಲ್ವೆಯಲ್ಲಿ ಅನುದಾನದ ಕೊರತೆ ಇರುವುದರಿಂದ ನೂತನ ರೈಲ್ವೆ ನಿಲ್ದಾಣಗಳೂ ಸೇರಿದಂತೆ, ಮೂಲಭೂತ ಸೌಕರ್ಯ ವ್ಯವಸ್ಥೆಗೆ ಆರ್ಥಿಕ ಕೊರತೆ ಉಂಟಾಗುತ್ತಿದೆ. ಆದ್ದರಿಂದ ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯಲ್ಲಿ ವಿಲೀನ ಮಾಡುವುದರ ಮೂಲಕ ಭಾರತ ಸರ್ಕಾರದ ಅನುದಾನದ ಪಡೆದು ಕರಾವಳಿ ಪ್ರದೇಶದಲ್ಲೂ ಕೂಡ ಮಹತ್ವದ ರೈಲ್ವೆ ಯೋಜನೆ ಅನುಷ್ಠಾನ ಮಾಡಲು ಅವಕಾಶ ಮಾಡಿಕೊಡಬೇಕೆಂದು ನಿಯೋಗವು ತಿಳಿಸಿದೆ. ಇದನ್ನೂ ಓದಿ: ಬೆಂಗಳೂರು| ನೇಣು ಬಿಗಿದುಕೊಂಡು ಪೊಲೀಸ್ ಹೆಡ್‌ಕಾನ್ಸ್ಟೇಬಲ್ ಆತ್ಮಹತ್ಯೆ

    ಈ ಸಂಬಂಧ ಸಚಿವರ ಜೊತೆ ನಿಯೋಗವು ಸುದೀರ್ಘವಾಗಿ ಚರ್ಚಿಸಿತು. ಭಾರತೀಯ ರೈಲ್ವೆಯಲ್ಲಿ ವಿಲೀನಗೊಂಡರೆ, ಮುಂದಿನ ದಿನಗಳಲ್ಲಿ ಸಿಂಗಲ್ ಲೈನನ್ನು ಹೊರತುಪಡಿಸಿ, ಡಬ್ಲಿಂಗ್ ಮಾಡುವುದು ಸೇರಿದಂತೆ ಅನೇಕ ಅಭಿವೃದ್ಧಿ ಯೋಜನೆ ಅನುಷ್ಠಾನನವಾಗುವ ಲಭ್ಯ ಅವಕಾಶವನ್ನು ಸಚಿವರಿಗೆ ನಿಯೋಗ ಮನವರಿಕೆ ಮಾಡಿತು. ಸುದೀರ್ಘ ಚರ್ಚೆಯ ನಂತರ ಎಂ.ಬಿ ಪಾಟೀಲ್ ಸಹಮತ ವ್ಯಕ್ತಪಡಿಸಿದರು. ಅಲ್ಲದೇ, ತಕ್ಷಣವೇ ಇಲಾಖಾ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಮಂಜುಳಾ ರವರಿಗೆ ದೂರವಾಣಿ ಮೂಲಕ ಸೂಚನೆ ನೀಡಿ ತಕ್ಷಣ ಕಡತ ಸಿದ್ದಪಡಿಸಿ, ಮುಂದೆ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದು, ಭಾರತೀಯ ರೈಲ್ವೆಯಲ್ಲಿ ವಿಲೀನವಾಗುವ ಬಗ್ಗೆ ಸಂಸದರು ಮತ್ತು ಶಾಸಕರ ನಿಯೋಗಕ್ಕೆ ಭರವಸೆ ನೀಡಿದರು. ಇದನ್ನೂ ಓದಿ: CET: ಕನ್ನಡ ಭಾಷೆ ಪರೀಕ್ಷೆ ಏಪ್ರಿಲ್ 15ಕ್ಕೆ ಹಿಂದೂಡಿಕೆ – ಕೆಇಎ

    ಸಂಸದ ಕೋಟರೊಂದಿಗೆ ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮತ್ತು ಉಡುಪಿಯ ಶಾಸಕ ಯಶ್‌ಪಾಲ್ ಸುವರ್ಣ ಭಾಗವಹಿಸಿದ್ದರು. ಇದನ್ನೂ ಓದಿ: ಮಹದೇಶ್ವರ ಬೆಟ್ಟದ ಅಂತರಗಂಗೆಯಲ್ಲಿ ಸೋಪು, ಶಾಂಪೂ ಬಳಕೆಗೆ ನಿಷೇಧ

  • ಡೀಸೆಲ್ ಇಂಜಿನ್‍ಗೆ ಬ್ರೇಕ್- 100 ಕೋಟಿ ಉಳಿಸಲಿದೆ ಕೊಂಕಣ ರೈಲ್ವೆ ಇಲಾಖೆ

    – ಕರಾವಳಿ ಭಾಗದ ವಿದ್ಯುದೀಕರಣ ಪೂರ್ಣ

    ಕಾರವಾರ: ಕಳೆದ ಮೂರು ವರ್ಷಗಳಿಂದ 1,100 ಕೋಟಿ ವೆಚ್ಚದಲ್ಲಿ ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ಕರಾವಳಿ ಭಾಗದ ಕೊಂಕಣ ರೈಲು ಮಾರ್ಗದ ವಿದ್ಯುದೀಕರಣ ಕಾರ್ಯ ಭರದಿಂದ ಸಾಗಿತ್ತು. ಇದೀಗ ರಾಜ್ಯದಲ್ಲಿ ಕಾಮಗಾರಿ ಪೂರ್ಣಗೊಂದ್ದು, ತೋಕೂರಿನಿಂದ ಕಾರವಾರದವರೆಗೆ ಮೊದಲ ಬಾರಿ ನಡೆಸಿದ ವಿದ್ಯುತ್ ಚಾಲಿತ ಲೋಕೊದ (ಎಂಜಿನ್) ಪರೀಕ್ಷಾರ್ಥ ಸಂಚಾರ ಯಶಸ್ವಿಯಾಗಿದೆ.

    ಈ ಹಿಂದೆ ದಕ್ಷಿಣ ಕನ್ನಡದ ತೋಕೂರಿನಿಂದ ಉಡುಪಿ ಜಿಲ್ಲೆಯ ಬಿಜೂರುವರೆಗೆ ಸುಮಾರು 105 ಕಿಲೋಮೀಟರ್ ಮಾರ್ಗದ ವಿದ್ಯುದೀಕರಣ ಕಾಮಗಾರಿ ಈಗಾಗಲೇ ಪೂರ್ಣಗೊಂಡಿತ್ತು. ಇದೀಗ ಉತ್ತರ ಕನ್ನಡದಲ್ಲೂ ವಿದ್ಯುದೀಕರಣ ಸಂಪೂರ್ಣವಾಗಿದ್ದು, ಕೊಂಕಣ ರೈಲ್ವೆಯು ಲೋಕೋದ ಪರೀಕ್ಷಾರ್ಥ ಸಂಚಾರ ಯಶಸ್ವಿಯಾಗಿದೆ.

    ಪರೀಕ್ಷಾರ್ಥ ಸಂಚಾರದಲ್ಲಿ ಗರಿಷ್ಠ 110 ಕಿಲೋಮೀಟರ್ ವೇಗದಲ್ಲೂ ಯಾವುದೇ ತಾಂತ್ರಿಕ ಸಮಸ್ಯೆಯಿಲ್ಲದೇ ಸಂಚರಿಸಿದ್ದು, ಯಾವುದೇ ಲೋಪದೋಷಗಳು ಕಂಡುಬಂದಿರದ ಕಾರಣ ಶೀಘ್ರದಲ್ಲಿ ಮಂಗಳೂರಿನಿಂದ ಕಾರವಾರದ ವರೆಗೆ ವಿದ್ಯುದೀಕರಣಗೊಂಡ ರೈಲುಗಳು ಸಂಚರಿಸುವ ಮೂಲಕ ಡೀಸೆಲ್ ಇಂಜಿನ್‍ಗೆ ಶಾಶ್ವತ ಮುಕ್ತಿ ದೊರೆಯಲಿದೆ. ಮಹಾರಾಷ್ಟ್ರದ ರಾಯಘಡ ಜಿಲ್ಲೆಯ ರೋಹಾದಿಂದ ರತ್ನಗಿರಿವರೆಗಿನ ಮಾರ್ಗದಲ್ಲಿ ಮಾರ್ಚ್ 7ರಂದು ಯಶಸ್ವಿ ಪರೀಕ್ಷಾರ್ಥ ಸಂಚಾರ ಮಾಡಲಾಗಿತ್ತು. ಇತ್ತ ಗೋವಾದ ಮಡಗಾಂವ್‍ನಿಂದ ಮಹಾರಾಷ್ಟ್ರದ ಕರ್ಮಾಲಿವರೆಗಿನ ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡಿದೆ.

    ಇನ್ನು ಕಾರವಾರದಿಂದ ಗೋವಾ ಮಡಗಾಂವ್ ವರೆಗೆ ಜೂನ್ ತಿಂಗಳಲ್ಲಿ ವಿದ್ಯುದೀಕರಣ ಪೂರ್ಣ ಗೊಳ್ಳಲಿದೆ. ಇದರಿಂದ ಅತೀ ಹೆಚ್ಚು ಬಳಕೆಯಾಗುತಿದ್ದ ಡೀಸೆಲ್ ಇಂಧನದ ಖರ್ಚು ಉಳಿಯಲಿದ್ದು, ಇಲಾಖೆಗೆ ವರ್ಷಕ್ಕೆ 100 ಕೋಟಿ ರೂ. ಉಳಿತಾಯವಾಗಲಿದೆ ಎಂದು ಕ್ಷೇತ್ರಿಯ ರೈಲ್ವೆ ಪ್ರಬಂಧಕ ಬಾಳಾಸಾಹೇಬ್ ಬಿ.ನಿಕಮ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ಕೊಂಕಣ ರೈಲ್ವೆ ಮಾರ್ಗವು ಒಟ್ಟು 756 ಕಿಲೋಮೀಟರ್ ಉದ್ದವಿದ್ದು, ಮಹಾರಾಷ್ಟ್ರದ ರೋಹಾದಿಂದ ಮಂಗಳೂರು ಸಮೀಪದ ತೋಕೂರಿನವರೆಗೆ ಚಾಚಿಕೊಂಡಿದೆ.

    ಸಬ್ ಸ್ಟೇಷನ್‍ಗಳ ಸ್ಥಾಪನೆ ಪೂರ್ಣ
    ರೈಲ್ವೆ ಮಾರ್ಗಕ್ಕೆ ಬೇಕಾಗುವ ವಿದ್ಯುತ್ ಪೂರೈಕೆಗೆ ಸಬ್ ಸ್ಟೇಷನ್‍ಗಳ ಸ್ಥಾಪನೆ ಪೂರ್ಣಗೊಂಡಿದ್ದು, ಸಣ್ಣಪುಟ್ಟ ಕೆಲಸಗಳಷ್ಟೇ ಬಾಕಿ ಇವೆ. ಕಾರವಾರ, ಮುರಡೇಶ್ವರ, ಸೇನಾಪುರ, ಬಾರ್ಕೂರು, ಮೂಲ್ಕಿಯಲ್ಲಿ ಸಬ್ ಸ್ಟೇಷನ್ ನಿರ್ಮಾಣವಾಗಿವೆ. ಇದೇ ರೀತಿ ಕೊಂಕಣ ರೈಲ್ವೆಯ ಮಾರ್ಗದುದ್ದಕ್ಕೂ ಸ್ಥಾಪನೆ ಮಾಡಲಾಗುತ್ತಿದೆ. ಈ ವರ್ಷ ಡಿಸೆಂಬರ್ ಒಳಗೆ ವಿದ್ಯುತ್ ಚಾಲಿತ ರೈಲುಗಳ ಸಂಚಾರ ಈ ಮಾರ್ಗದಲ್ಲಿ ಆರಂಭವಾಗುವ ನಿರೀಕ್ಷೆಯಿದೆ.

    ಕರಾವಳಿಗರಿಗೆ ಹೆಚ್ಚಿನ ಲಾಭ
    ವಿದ್ಯುದೀಕರಣ ಗೊಂಡ ರೈಲು ಸಂಚರಿಸುವುದರಿಂದ ಇಂಧನ ವೆಚ್ಚ ಅತೀ ಕಡಿಮೆಯಾಗಲಿದೆ. ಇದರಿಂದ ಹೆಚ್ಚು ರೈಲುಗಳನ್ನು ಓಡಿಸಲು ಸಹಾಯವಾಗಲಿದೆ. ಕರ್ನಾಟಕದ ಕರಾವಳಿ ಭಾಗದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಭಾಗವು ಉದ್ಯೋಗ, ಶಿಕ್ಷಣ, ವ್ಯಾಪಾರ, ಆರೋಗ್ಯ ಸಂಬಂಧ ಮಹಾರಾಷ್ಟ್ರ ಹಾಗೂ ಗೋವಾ ವನ್ನು ಅವಲಂಭಿಸಿದೆ. ಉದ್ಯೋಗಕ್ಕಾಗಿ ಪ್ರತಿ ದಿನ ಸಾವಿರಾರು ಜನ ಕಾರವಾರದಿಂದ ಗೋವಾಕ್ಕೆ ಸಂಚಾರ ಮಾಡುತ್ತಾರೆ. ಹೀಗಾಗಿ ಹೆಚ್ಚು ಉಪಯೋಗವಾಗಲಿದ್ದು, ಮಾತ್ರವಲ್ಲದೆ ಮಹಾರಾಷ್ಟ್ರದಲ್ಲಿ ಸಂಚರಿಸುವ ಹೈ ಸ್ಪೀಡ್ ರೈಲಿನಂತೆ ಈ ಭಾಗದಲ್ಲೂ ಮುಂದಿನ ದಿನದಲ್ಲಿ ಹೈ ಸ್ಪೀಡ್ ರೈಲು ಸಂಚರಿಸಲು ಸಹಾಯವಾಗಲಿದೆ.

  • 2022ರ ಆಗಸ್ಟ್ ವೇಳೆಗೆ ಜಮ್ಮುವಿನಲ್ಲಿ ಪೂರ್ಣಗೊಳ್ಳಲಿದೆ ವಿಶ್ವದ ಎತ್ತರದ ರೈಲ್ವೆ ಸೇತುವೆ

    2022ರ ಆಗಸ್ಟ್ ವೇಳೆಗೆ ಜಮ್ಮುವಿನಲ್ಲಿ ಪೂರ್ಣಗೊಳ್ಳಲಿದೆ ವಿಶ್ವದ ಎತ್ತರದ ರೈಲ್ವೆ ಸೇತುವೆ

    – ಐಫೆಲ್ ಟವರ್‌ಗಿಂತ ಎತ್ತರದ ಬ್ರಿಡ್ಜ್

    ನವದೆಹಲಿ: ಜಮ್ಮು ಕಾಶ್ಮೀರದ ಚೇನಾಬ್ ನದಿಗೆ ಅಡ್ಡಲಾಗಿ ಕಟ್ಟಲಾಗುತ್ತಿರುವ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ 2022ರ ಆಗಸ್ಟ್ ವೇಳೆಗೆ ಪೂರ್ಣಗೊಳ್ಳಲಿದೆ ಎಂಬ ಮಾಹಿತಿ ಲಭಿಸಿದೆ.

    ಐಫೆಲ್ ಟವರ್ ಗಿಂತ ಎತ್ತರವಾಗಿ ನಿರ್ಮಾಣವಾಗುತ್ತಿರುವ ಸೇತುವೆ ನಿರ್ಮಾಣ ಕಾರ್ಯ ಪೂರ್ಣಗೊಂಡರೇ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ ಎಂಬ ಹೆಗ್ಗಳಿಕೆಯನ್ನು ಪಡೆಯಲಿದೆ.

    ಜಮ್ಮು ಕಾಶ್ಮೀರದ ರಿಯಾಸಿ ಜಿಲ್ಲೆಯ ಕೌರಿ ಗ್ರಾಮದ ಕತ್ರಾ-ಬನಿಹಾಲ್ ರೈಲ್ವೆ ಮಾರ್ಗದಲ್ಲಿ ಸೇತುವೆ ನಿರ್ಮಾಣವಾಗುತ್ತಿದೆ. ಈ ಸೇತುವೆ ಚೇನಾಬ್ ನದಿ ಮಟ್ಟದಿಂದ 359 ಮೀಟರ್ ಎತ್ತರದಲ್ಲಿ ನಿರ್ಮಾಣವಾಗುತ್ತಿದ್ದು, 1.3 ಕಿ.ಮೀ ಉದ್ದವಿದೆ. ಈ ಸೇತುವೆ ಜಮ್ಮುವಿನ ಕತ್ರಾದಲ್ಲಿರುವ ಬಕ್ಕಲ್ ಹಾಗೂ ಶ್ರೀನಗರದ ಕೌರಿ ನಡುವೆ ಸಂಪರ್ಕ ಕಲ್ಪಿಸಲಿದ್ದು, ಪ್ರಯಾಣದ 5-6 ಗಂಟೆ ಸಮಯವನ್ನು ಕಡಿಮೆ ಮಾಡಲಿದೆ.

    ಈ ಕುರಿತು ಮಾತನಾಡಿರುವ ಡೆಪ್ಯುಟಿ ಚೀಫ್ ಮುಖ್ಯ ಎಂಜಿನಿಯರ್, 2022ರ ವೇಳೆಗೆ ಸೇತುವೆ ನಿರ್ಮಾಣ ಕಾರ್ಯ ಪೂರ್ಣಗೊಳಿಸಲು ಸಮಯ ನಿಗದಿ ಮಾಡಲಾಗಿದೆ. ಸೇತುವೆ ನಿರ್ಮಾಣದ ಕಾರ್ಯ ಹಲವು ಸವಾಲುಗಳಿಂದ ಕೂಡಿದೆ. ಆದರೆ ಸೇತುವೆ ನಿರ್ಮಾಣ ಕಾರ್ಯ ವೈಷ್ಣೋ ದೇವಿ ಪುಣ್ಯ ಕ್ಷೇತ್ರಕ್ಕೆ ಪ್ರಸಿದ್ಧಿಯಾಗಿರುವ ಜಿಯಾಸಿ ರಿಯಾಸಿ ಜಿಲ್ಲೆಯ ಪ್ರವಾಸೋಧ್ಯಮದಲ್ಲಿ ಭಾರೀ ಬದಲಾವಣೆಗೆ ಕಾರಣವಾಗಲಿದೆ. ಸೇತುವೆ ಮೇಲೆ ಹೆಲಿಪ್ಯಾಡ್ ನಿರ್ಮಾಣವಾಗುವ ಕಾರಣ ಜನರು ತಮ್ಮ ಚಾಫರ್ ಮೂಲಕ ಇಲ್ಲಿಗೆ ಆಗಮಿಸಬಹುದು ಎಂದಿದ್ದಾರೆ.

    ಕೊಂಕಣ ರೈಲ್ವೆ ಈ ಯೋಜನೆಯ ನಿರ್ಮಾಣದ ಜವಾಬ್ದಾರಿಯನ್ನು ಹೊಂದಿದ್ದು, 2004ರಲ್ಲಿ ಸೇತುವೆ ನಿರ್ಮಾಣದ ಕಾರ್ಯ ಆರಂಭವಾಗಿತ್ತು. ಉಧಮಾಪುರ-ಶ್ರೀನಗರ-ಬಾರಾಮುಲ್ಲಾ ರೈಲ್ವೆ ಸಂಪರ್ಕದ ಯೋಜನೆಯ ಒಂದು ಭಾಗವಾಗಿದೆ. ಈ ಮಾರ್ಗದಲ್ಲಿ ಉಧಮಾಪುರ-ಕಾತ್ರ (25 ಕಿಮೀ) ಸೆಕ್ಷನ್, ಬನಿಹಾಳ್-ಕ್ವಾಜಿಗುಂಡ್ (18 ಕಿಮೀ) ಸೆಕ್ಷನ್ ಹಾಗೂ ಕ್ವಾಜಿಗುಂಡ್-ಬಾರಾಮುಲ್ಲಾ (118 ಕಿಮೀ) ವಿಭಾಗವನ್ನು ಈಗಾಗಲೇ ನಿರ್ಮಿಸಲಾಗಿದೆ.

    ಸೇತುವೆ ನಿರ್ಮಾಣಕ್ಕಾಗಿ 24,000 ಟನ್‍ಗಳಷ್ಟು ಸ್ಟೀಲ್ ಬಳಸಲಾಗ್ತಿದೆ. ಗುಮ್ಮಟದ ಆಕಾರದಲ್ಲಿ ಕಮಾನು ನಿರ್ಮಿಸಿ ಅದರ ಮೇಲೆ ಬ್ರಿಡ್ಜ್ ನಿರ್ಮಾಣವಾಗಲಿದೆ. ವಿಶೇಷವಾದ ಸ್ಫೋಟ ನಿರೋಧಕ ಸ್ಟೀಲ್‍ನಿಂದ ಈ ಸೇತುವೆ ನಿರ್ಮಾಣವಾಗ್ತಿದ್ದು, ಉಗ್ರರ ದಾಳಿಯನ್ನೂ ತಡೆದುಕೊಳ್ಳಲಿದೆ. ಅತ್ಯಂತ ಕಡಿಮೆ ಉಷ್ಣಾಂಶ ಹಾಗೂ 266 ಕಿಮೀ ವೇಗವಾಗಿ ಬೀಸುವ ಗಾಳಿಯನ್ನೂ ತಡೆದುಕೊಳ್ಳಲಿದೆ. 120 ವರ್ಷಗಳ ಕಾಲಮಿತಿಯನ್ನು ಸೇತುವೆ ಹೊಂದಿದೆ.

    ಈ ಸೇತುವೆ ನಿರ್ಮಾಣ ಪೂರ್ಣವಾದ ನಂತರ ಚೀನಾದ 275 ಮೀ ಉದ್ದದ ಶೂಬೇ ರೈಲ್ವೆ ಸೇತುವೆಯ ದಾಖಲೆಯನ್ನ ಮುರಿಯಲಿದೆ. ಫ್ರಾನ್ಸ್ ನ ಪ್ಯಾರಿಸ್ ನಲ್ಲಿರುವ ಐಫೆಲ್ ಟವರ್ 324 ಮೀ(1062.99 ಅಡಿ) ಎತ್ತರವಿದ್ದು ಈ ಬ್ರಿಡ್ಜ್ ಅದಕ್ಕಿಂತ 35 ಮೀ ಎತ್ತರವಿರಲಿದೆ. ಅಂದ್ರೆ ಈ ಸೇತುವೆ ಚೇನಾಬ್ ನದಿಯಿಂದ 359 ಮೀ(1177.82 ಅಡಿ) ಎತ್ತರವಿರಲಿದೆ.

    ಬ್ರಿಡ್ಜ್ ಮತ್ತು ರೈಲ್ವೆ ಪ್ರಯಾಣಿಕರ ರಕ್ಷಣೆಗಾಗಿ ಏರಿಯಲ್ ರಿಂಗ್, ಆನ್‍ಲೈನ್ ನಿರ್ವಹಣೆ ಹಾಗೂ ಎಚ್ಚರಿಕೆಯ ವ್ಯವಸ್ಥೆಗಳು ಇರಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ಕೊಂಕಣ ರೈಲ್ವೆ ಮಾರ್ಗದಲ್ಲಿ ಸುರಂಗ ಕುಸಿತ- ಸಂಚಾರ ಬಂದ್

    ಕೊಂಕಣ ರೈಲ್ವೆ ಮಾರ್ಗದಲ್ಲಿ ಸುರಂಗ ಕುಸಿತ- ಸಂಚಾರ ಬಂದ್

    ಕಾರವಾರ: ಮುಂಡ್ರೆ -ಪೆರ್ಣೆ ಮಾರ್ಗದಲ್ಲಿ ರೈಲ್ವೆ ಸುರಂಗ ಗೋಡೆ ಕುಸಿತ ಹಿನ್ನೆಲೆಯಲ್ಲಿ ಕೊಂಕಣ ರೈಲ್ವೆ ಮಾರ್ಗ ಸಂಚಾರ ಬಂದ್ ಮಾಡಲಾಗಿದೆ.

    ಇಂದಿನಿಂದ ಮುಂದಿನ ಆದೇಶ ಬರುವವರೆಗೂ ಎರ್ನಾಕುಲಮ್ -ಹಜರತ್ ನಿಜಾಮುದ್ದೀನ್ ಸೂಪರ್ ಪಾಸ್ಟ್ ಟ್ರೈನ್ (ಮಡಗಾಂ, ಮೀರಜ್, ಪುಣೆ, ಪನ್ನವೇಲ್ ಮಾರ್ಗ) ತಿರುವಂತಪುರಂ ಲೋಕಮಾನ್ಯ ತಿಲಕ್ ಟ್ರೈನ್ (ಮಡಗಾಂ, ಲೋಂಡ, ನೀರಜ್, ಪುಣೆ, ಪನ್ನವೇಲ್ ಮಾರ್ಗ), ನ್ಯೂ ಡೆಲ್ಲಿ ತಿರುವನಂತಪುರಂ ಸೆಂಟ್ರಲ್ ರಾಜಧಾನಿ ಎಕ್ಸ್ ಪ್ರೆಸ್(ಪನ್ನವೇಲ್, ಪುಣೆ, ಮೀರಜ್ ,ಲೋಂಡ, ಮಡಗಾಂ ಮಾರ್ಗ), ಲೋಕಮಾನ್ಯ ತಿಲಕ್ ತಿರುವಂತಪುರಂ ಟ್ರೈನ್ (ಪನ್ನವೇಲ್, ಪುಣೆ, ಮೀರಜ್, ಲೋಂಡ, ಮಡಗಾಂ ಮಾರ್ಗ) ರೈಲುಗಳ ಸಂಚಾರವನ್ನು ಇಂದಿನಿಂದ ಮುಂದಿನ ಆದೇಶದವರೆಗೂ ಬಂದ್ ಮಾಡಲಾಗಿದೆ.

    ಇನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ದೊಡ್ಡ ಪ್ರಮಾಣದಲ್ಲಿ ಮಳೆಯಾಗಿದೆ. ಹವಾಮಾನ ಇಲಾಖೆ ಮಾಹಿತಿಯಂತೆ 9ನೇ ತಾರೀಕಿನಿಂದ ಮತ್ತೆ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಕೋಸ್ಟಲ್ ಗಾರ್ಡ್, ಕೋಸ್ಟಲ್ ಪೊಲೀಸ್ ಕೂಡಾ ಸನ್ನದ್ಧರಾಗಿದ್ದು ಜಿಲ್ಲೆಯಾದ್ಯಂತ ಕಟ್ಟೆಚ್ಚರ ಕೈಗೊಳ್ಳಲಾಗಿದೆ.

  • ಎಂಜಿನ್ ದೋಷದಿಂದ ಕೆಟ್ಟು ನಿಂತ ರೈಲು-2 ಗಂಟೆ ಕೊಂಕಣ ರೈಲು ಸಂಚಾರ ಸ್ಥಗಿತ

    ಎಂಜಿನ್ ದೋಷದಿಂದ ಕೆಟ್ಟು ನಿಂತ ರೈಲು-2 ಗಂಟೆ ಕೊಂಕಣ ರೈಲು ಸಂಚಾರ ಸ್ಥಗಿತ

    ಕಾರವಾರ: ರೈಲ್ವೇ ಎಂಜಿನ್ ನಲ್ಲಿ ಉಂಟಾದ ದೋಷದಿಂದಾಗಿ ಕಾರವಾರ ತಾಲೂಕಿನ ಅಸ್ನೋಟಿ ಗ್ರಾಮದ ಸಮೀಪ ಮಾರ್ಗ ಮಧ್ಯದಲ್ಲೇ ಕೊಂಕಣ ರೈಲು ಕಟ್ಟು ನಿಂತ ಪರಿಣಾಮ ಸುಮಾರು ಎರಡು ಗಂಟೆಗಳ ಕಾಲ ಸಂಚಾರ ಸ್ಥಗಿತಗೊಂಡಿತ್ತು.

    ಇಂದು ಬೆಳಗ್ಗೆ 6 ಗಂಟೆಗೆ ಕಾರವಾರ ನಿಲ್ದಾಣದಿಂದ ಪೆರ್ಣಕ್ಕೆ ಪ್ಯಾಸೆಂಜರ್ ರೈಲು ತನ್ನ ಪ್ರಯಾಣವನ್ನು ಆರಂಭಿಸಿತ್ತು. ಮಾರ್ಗ ಮಧ್ಯೆ ಅಸ್ನೋಟಿ ಎಂಬಲ್ಲಿ ಎಂಜಿನ್ ನಲ್ಲಿ ತಾಂತ್ರಿಕ ದೋಷದಿಂದಾಗಿ ರೈಲು ತನ್ನ ಪ್ರಯಾಣವನ್ನು ನಿಲ್ಲಿಸಿತು.

    ಈ ರೈಲು ಪ್ರತಿದಿನ ಕಾರವಾರದಿಂದ ಗೋವಾ ರಾಜ್ಯದ ಪೆರ್ಣಕ್ಕೆ ಸಂಚರಿಸುತ್ತದೆ. ಮೂರು ಬೋಗಿಗಳನ್ನು ಹೊಂದಿರುವ ಈ ರೈಲಿನಲ್ಲಿ ಪ್ರತಿದಿನ ಸುಮಾರು 600 ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಾರೆ. ಈ ಹಿಂದೆಯೂ ಇದೇ ರೀತಿಯಲ್ಲಿ ಎಂಜಿನ್ ಸಮಸ್ಯೆಯಿಂದಾಗಿ ಪ್ರಯಾಣಿಕರು ತೊಂದರೆ ಅನುಭವಿಸಿದ್ದರು. ಈ ಸಂಬಂಧ ಪ್ರಯಾಣಿಕರು ರೈಲ್ವೆ ಇಲಾಖೆಗೆ ದೂರು ನೀಡಿದ್ರೂ ಇಲಾಖೆ ಮಾತ್ರ ಯಾವುದೇ ಕ್ರಮ ಜರುಗಿಸಿರಲಿಲ್ಲ.

    ಇದರಿಂದ ಕೋಪಗೊಂಡ ಜನರು ಕೆಟ್ಟು ನಿಂತಿದ್ದ ರೈಲಿನ ಮುಂದೆ ಪ್ರಯಾಣಿಕರು ಪ್ರತಿಭಟನೆ ನಡೆಸಿದ್ದು ಬದಲಿ ವ್ಯವಸ್ಥೆ ಮಾಡಿದ್ದ ರೈಲನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು.