ಚೆನ್ನೈ: ದಕ್ಷಿಣ ಭಾರತದ ಸುಂದರ ನಟಿ ನಯನ ತಾರಾಗೆ ದೇಶಾದ್ಯಂತ ಅಭಿಮಾನಿಗಳಿದ್ದು, ಅಸಂಖ್ಯಾತ ಅಭಿಮಾನಿಗಳಿಗೆ ನಯನತಾರಾ ನೆಚ್ಚಿನ ತಾರೆಯಾಗಿದ್ದಾರೆ. ಆದ್ರೆ ಈ ಸೌತ್ ಇಂಡಿಯಾ ಬೆಡಗಿಗೆ ಇಷ್ಟವಾದ ನಟ ಯಾರು ಅನ್ನೋ ರಹಸ್ಯವನ್ನು ಸ್ವತಃ ನಯನತಾರಾ ಹೊರಹಾಕಿದ್ದಾರೆ.
ತಮಿಳುನಾಡಿನಲ್ಲಿ ಇತ್ತೀಚಿಗೆ ನಡೆದ ವಿಕಾದನ್ ಅವಾರ್ಡ್ ಕಾರ್ಯಕ್ರಮದಲ್ಲಿ ನಯನತಾರಾ ಪಾಲ್ಗೊಂಡಿದ್ದರು. ತಮಿಳಿನ ಆರಮ್ ಚಿತ್ರದ ಅಭಿನಯಕ್ಕೆ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ನಯನತಾರಾ ಮುಡಿಗೇರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ನಿಮ್ಮ ನೆಚ್ಚಿನ ನಟ ಯಾರು ಎಂದು ಪ್ರಶ್ನೆ ಕೇಳಿದಾಗ ಅವರು ತಾಲಾ ಅಜಿತ್ ನನ್ನ ನೆಚ್ಚಿನ ನಟ ಎಂದು ಹೇಳಿದ್ರು.
ನಯನತಾರಾ ಮಾತಿಗೆ ಇಳೆಯ ದಳಪತಿ ವಿಜಯ್, ವಿಜಯ್ ಸೇತುಪತಿ ಸೇರಿದಂತೆ ಹಲವು ಸ್ಟಾರ್ ನಟರು ಶಿಳ್ಳೆ ಚಪ್ಪಾಳೆ ಹೊಡೆದರು. ನಂತರ ಮರ್ಸಲ್ ವಿಜಯ್ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆಗೆ ಉತ್ತರಿಸಿದ ನಯನತಾರಾ, ವಿಜಯ್ ಶಾಂತ ಸ್ವಭಾವದ ವ್ಯಕ್ತಿಯಾಗಿದ್ದಾರೆ. ಅವರು ಯಾವಾಗಲು ಕಾಮ್ ಆಗಿರ್ತಾರೆ ಎಂದು ಹೇಳಿದ್ರು. ನಯನತಾರಾ ಅಜಿತ್ ಜೊತೆ ಏಕಾನ್, ಬಿಲ್ಲಾ, ಆರಂಭಂ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ನಯನತಾರಾ ಮತ್ತು ಅಜಿತ್ ಇಬ್ಬರು ತೆರೆಯ ಮೇಲೆ ಉತ್ತಮ ಜೋಡಿ ಎಂದು ಪ್ರೇಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಅರಮ್ ಸಿನಿಮಾದ ಮೊದಲು ನಯನತಾರಾ ವಿಕಾದನ್ ಅವಾರ್ಡ್ಸ್ ನಾನುಮ್ ರೌಡಿ ಥಾನ್ ಸಿನಿಮಾಗೆ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದರು.
ಹೈದರಾಬಾದ್: ಕಾಲಿವುಡ್ ಸೂಪರ್ ಸ್ಟಾರ್ ಸೂರ್ಯ ತಮ್ಮ ‘ಗ್ಯಾಂಗ್’ ಚಿತ್ರದ ಪ್ರಮೋಷನ್ ವೇಳೆ ಅಭಿಮಾನಿಗಳಿಂದ ತಪ್ಪಿಸಿಕೊಳ್ಳಲು ಥಿಯೇಟರ್ ಗೇಟ್ ಹಾರಿದ್ದಾರೆ.
ಕಳೆದ ವಾರ ಬಿಡುಗಡೆಯಾಗಿರುವ ಸೂರ್ಯ ಅವರ `ಗ್ಯಾಂಗ್’ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದ್ದು. ತಮಿಳು, ತೆಲುಗು ಎರಡು ಭಾಷೆಯಲ್ಲಿ ಬಿಡುಗಡೆಯಾಗಿ ಉತ್ತಮ ಗಳಿಕೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಪ್ರಮೋಷನ್‍ಗೆ ಮಂಗಳವಾರ ಆಂಧ್ರಪ್ರದೇಶದ ರಾಜಮಂಡ್ರಿ ಜಿಲ್ಲೆಗೆ ಸೂರ್ಯ ತೆರಳಿದ್ದರು. ಈ ವೇಳೆ ಅಭಿಮಾನಿಗಳೊಂದಿಗೆ ಗ್ಯಾಂಗ್ ಚಿತ್ರದ ಬಗ್ಗೆ ಮಾತನಾಡಿ ಧನ್ಯವಾದ ತಿಳಿಸಿದ್ರು.
ಆದರೆ ತಮ್ಮ ನೆಚ್ಚಿನ ನಟ ಬಂದ ಸುದ್ದಿ ತಿಳಿದ ಜನರು ಅವರನ್ನು ನೋಡಲು ಚಿತ್ರ ಮಂದಿರದ ಬಳಿ ಜಮಾಯಿಸಿದ್ದರು. ಹೀಗಾಗಿ ಸಕ್ಸಸ್ ಮೀಟ್ ಮುಗಿಸಿ ಸೂರ್ಯ ಥಿಯೇಟರ್‍ನಿಂದ ತೆರಳಲು ಆಗದೇ ಕಷ್ಟ ಪಟ್ಟಿದ್ದಾರೆ. ಅಭಿಮಾನಿಗಳಿಂದ ಪಾರಾಗಲು ಯತ್ನಿಸಿದ ಸೂರ್ಯ, ಬಂದ್ ಆಗಿದ್ದ ಗೇಟ್ ಹಾರಿ, ತಮ್ಮ ಕಾರಿನ ಬಳಿ ಬಂದು ಅಲ್ಲಿಂದ ಹೋಗಿದ್ದಾರೆ. ನಟ ಸೂರ್ಯ ಚಿತ್ರ ಮಂದಿರದ ಗೇಟ್ ಹಾರುತ್ತಿರುವ ದೃಶ್ಯಗಳನ್ನು ಸ್ಥಳದಲ್ಲಿದ್ದ ಅಭಿಮಾನಿಗಳು ಮೊಬೈಲ್‍ನಲ್ಲಿ ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಗ್ಯಾಂಗ್ ಚಿತ್ರದಲ್ಲಿ ಸೂರ್ಯ ಅವರ ಜೊತೆ ಕೀರ್ತಿ ಸುರೇಶ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಬಾಹುಬಲಿ ಖ್ಯಾತಿಯ ರಮ್ಯಾಕೃಷ್ಣ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಪಾಟ್ನಾ: ಪೊಲೀಸರು ತುಂಬಾ ಬುದ್ಧಿವಂತಿಕೆಯಿಂದ ದಕ್ಷಿಣ ಭಾರತದ ಪ್ರಸಿದ್ಧ ನಟಿ ನಯನತಾರಾ ಫೋಟೋ ಬಳಸಿ ನಟೋರಿಯಸ್ ಗ್ಯಾಂಗ್‍ಸ್ಟಾರ್ ಒಬ್ಬನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿ ಮಹಮ್ಮದ್ ಹಸ್‍ನೈನ್ ನಯನತಾರಾ ಫೋಟೋ ನೋಡಿ ಬಲೆಗೆ ಬಿದ್ದ ಕಳ್ಳ. ಹಿರಿಯ ಪೊಲೀಸ್ ಅಧಿಕಾರಿ ಮಧುಬಾಲಾ ದೇವಿ ನಯನತಾರಾ ಅವರಂತೆ ಫೋಸ್ ಕೊಟ್ಟು ಗ್ಯಾಂಗ್‍ಸ್ಟರ್ ನನ್ನು ಚಾಣಾಕ್ಷತೆಯಿಂದ ಬಂಧಿಸಿದ್ದಾರೆ.
ಬಿಹಾರದ ದರ್ಬಾಂಗ್ ಜಿಲ್ಲೆಯ ಬಿಜೆಪಿ ನಾಯಕ ಸಂಜಯ್ ಕುಮಾರ್ ಮಹಾಟೋ ಮೊಬೈಲ್ ಅನ್ನು ಮೊಹಮ್ಮದ್ ಹಸ್‍ನೈನ್ ಕದ್ದು ಪರಾರಿಯಾಗಿದ್ದ. ಈ ಬಗ್ಗೆ ಬಿಜೆಪಿ ನಾಯಕ ದೂರು ದಾಖಲಿಸಿದ್ದರು. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಆರಂಭಿಸಿದ್ದರು. ಹಿರಿಯ ಪೊಲೀಸ್ ಅಧಿಕಾರಿ ಮಧುಬಾಲಾ ದೇವಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಮೊಬೈಲ್‍ನ ಡೇಟಾ ರೆಕಾರ್ಡ್ ಮಾಡಿ ಟ್ರೇಸ್ ಮಾಡಿದಾಗ ಆತ ಇನ್ನೂ ಫೋನ್ ಬಳಸುತ್ತಿರುವ ಸಂಗತಿ ತಿಳಿಯಿತು.
ಪ್ರೀತಿಸಿ ಬಂಧಿಸಿದ್ರು: ಪೊಲೀಸರು ಆತನನ್ನು ಬಂಧಿಸಲು ಹೋದಾಗ ಹಲವು ಬಾರಿ ಆತ ತಪ್ಪಿಸಿಕೊಂಡ ಹೋಗಿದ್ದ. ಆದ್ದರಿಂದ ಮಧುಬಾಲಾ ಆರೋಪಿ ಬಂಧನಕ್ಕೆ ಹೊಸ ಪ್ಲ್ಯಾನ್ ಮಾಡಿದ್ದರು. ಅಂತೆಯೇ ಅವರು ಯುವತಿಯಂತೆ ಆತನನ್ನು ಪ್ರೀತಿಸುವ ನಾಟಕವಾಡಿದರು. ಆದರೆ ಕಳ್ಳ ಮೊದಲು ನಂಬಿರಲಿಲ್ಲ. ಬಳಿಕ ಫೋಟೋ ಕಳಿಸುವಂತೆ ಹೇಳಿದ್ದಾನೆ. ಅದಕ್ಕೆ ಮಧುಬಾಲಾ ಅವರು ಬುದ್ಧಿವಂತಿಕೆಯಿಂದ ನಯನತಾರಾ ಫೋಟೋವನ್ನು ಕಳುಹಿಸಿದ್ದಾರೆ.
ಮೊಹಮ್ಮದ್ ನಟಿಯ ಫೋಟೋ ನೋಡಿ ಮರುಳಾಗಿ ಭೇಟಿ ಮಾಡಲು ಒಪ್ಪಿಕೊಂಡು ಸ್ಥಳವನ್ನು ತಾನೇ ಹೇಳಿದ್ದಾನೆ. ಈತ ಹೇಳಿದ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಸಾಮಾನ್ಯ ವ್ಯಕ್ತಿಗಳಂತೆ ಆತ ಬರುವುದಕ್ಕೂ ಮೊದಲೇ ಹೋಗಿದ್ದರು. ಮಧುಬಾಲಾ ಅವರು ಮುಖಕ್ಕೆ ಮುಸುಕು ಹಾಕಿಕೊಂಡು ಆತನ ಬಳಿಗೆ ಹೋಗಿದ್ದಾರೆ. ಕೂಡಲೇ ಬಂದಿರುವ ಯುವತಿ ನನ್ನ ಸ್ನೇಹಿತೆ ಎಂದು ಮಾತನಾಡಿಸಲು ಹೋದಾಗ ಅಲ್ಲೇ ಇದ್ದ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಮೊಬೈಲ್ ತಮ್ಮ ವಶಕ್ಕೆ ಪಡೆದು ಬಿಜೆಪಿ ನಾಯಕರಿಗೆ ಒಪ್ಪಿಸಿದ್ದಾರೆ. ಬುದ್ಧಿವಂತಿಕೆಯಿಂದ ಕಳ್ಳನನ್ನು ಬಂಧಿಸಿದ್ದಕ್ಕೆ ಮಧುಬಾಲಾ ದೇವಿಗೆ ಬಿಹಾರ ಪೊಲೀಸ್ ಇಲಾಖೆ ಬಹುಮಾನವನ್ನು ನೀಡಿ ಗೌರವಿಸಿದೆ.
ಚೆನ್ನೈ: ದಕ್ಷಿಣ ಭಾರತದ ಚಿತ್ರರಂಗದ 80ರ ದಶಕದ ಕಲಾವಿದರು ಒಟ್ಟಿಗೆ ಸೇರಿ ಗೆಟ್-ಟು-ಗೆದರ್ ಆಚರಿಸಿದ್ದಾರೆ. ಎರಡು ದಿನಗಳ ಕಾಲ ಚೆನ್ನೈನ ರೆಸಾರ್ಟ್ ಒಂದರಲ್ಲಿ ಆಯೋಜನೆಗೊಂಡಿದ್ದ ಪಾರ್ಟಿಯಲ್ಲಿ 30ಕ್ಕೂ ಹೆಚ್ಚಿನ ಕಲಾವಿದರು ಕುಣಿದು ಸಂಭ್ರಮಿಸಿದ್ದಾರೆ.
2009ರಲ್ಲಿ ನಟಿ ಸುಹಾಸಿನಿ ಈ ವಿಭಿನ್ನವಾದ ಕಾನ್ಸೆಪ್ಟ್ ಶುರು ಮಾಡಿದ್ದರು. ಇದು ಪ್ರತಿ ವರ್ಷ ನಡೆಯುತ್ತಿದ್ದು, ಎಲ್ಲಾ ತಾರೆಯರು ಗೆಟ್-ಟು-ಗೆದರ್ ಅಲ್ಲಿ ತಪ್ಪದೇ ಭಾಗವಹಿಸುತ್ತಾರೆ. ನವೆಂಬರ್ 17ರಂದು 8ನೇ ವರ್ಷದ ಗೆಟ್-ಟು-ಗೆದರ್ ನಡೆದಿದ್ದು, ಕಲಾವಿದರು ಸನ್ ಗ್ಲಾಸ್, ಹವಯಿಯಾನ್ ಶರ್ಟ್‍ಗಳನ್ನು ಧರಿಸಿ ಬಂದಿದ್ದರು.
ಪಾರ್ಟಿಯ ಜಾಗವನ್ನು ನೇರಳೆ ಆರ್ಕಿಡ್ ಗಳು, ಬಲೂನ್, ಮುಖವಾಡಗಳು, ಕಾನ್ಫೆಟ್ಟಿ, ಕಲೆ ಮತ್ತು ಕಲಾಕೃತಿಗಳು ಎಲ್ಲಾ ನೀಲಿ ಬಣ್ಣಗಳಿಂದ ತಯಾರಿಸಲಾಗಿತ್ತು. ಕಲಾವಿದರು ಎರಡೂ ದಿನಗಳ ಕಾಲ ಜೊತೆಯಾಗಿದ್ದು ಸಂಭ್ರಮಿಸಿದ್ದಾರೆ.
ಹಿರಿಯ ನಟರಾದ ಚಿರಂಜೀವಿ, ವೆಂಕಟೇಶ್, ಶರತ್ ಕುಮಾರ್, ಜಾಕಿ ಶ್ರಾಫ್, ನರೇಶ್, ಭಾನು ಚುನ್ದರ್, ಸುರೇಶ್, ಭಾಗ್ಯರಾಜ್ ಜೊತೆ ನಟಿಯರಾದ ರಮ್ಯಕೃಷ್ಣ, ಸುಮಲತಾ, ರಾಧಿಕಾ, ರೇವತಿ, ನದೀಯಾ, ಸುಹಾಸಿನಿ, ಜಯಸುಧಾ, ಖುಷ್ಬೂ ಸೇರಿ ಮತ್ತಷ್ಟು ನಟಿಯರು ಕಾಣಿಸಿಕೊಂಡಿದ್ದಾರೆ.
ರಾಜಕುಮಾರ್ ಸೆತುಪತಿ ಜೊತೆ ಸೇರಿ ಸುಹಾಸಿನಿ, ಪೂರ್ಣಿಮಾ ಭಾಗ್ಯರಾಜ್ ಹಾಗೂ ಖುಷ್ಬೂ ಈ ಕಾರ್ಯಕ್ರಮದಲ್ಲಿ ನಿರೂಪಕರಾಗಿದ್ದರು. ಅದ್ಧೂರಿಯಾಗಿ ನಡೆದ ಪಾರ್ಟಿಯಲ್ಲಿ ಎಲ್ಲಾ ತಾರೆಯರೂ ನೀಲಿ ಬಣ್ಣದ ಉಡಪುಗಳನ್ನು ಧರಿಸಿ ಹಾಡಿ, ಕುಣಿದು ಕುಪ್ಪಳಿಸಿದ್ದಾರೆ. ಈ ವೇಳೆ ಪುರಷರ ಫ್ಯಾಶನ್ ಶೋ ಕೂಡ ನಡೆದಿದ್ದು, ನಟ ಚಿರಂಜೀವಿ ಗೆದ್ದಿದ್ದಾರೆ. ಅನಿವಾರ್ಯ ಕಾರಣಗಳಿಂದಾಗಿ ಈ ಕಾರ್ಯಕ್ರಮದಲ್ಲಿ ರಜನೀಕಾಂತ್, ಅಂಬರೀಶ್, ರಮೇಶ್ ಅರವಿಂದ್, ಪ್ರಭು, ಮೋಹನ್ ಲಾಲ್ ಭಾಗವಹಿಸರಲಿಲ್ಲ.
ಪಾರ್ಟಿಗೆ ಷರತ್ತು ಏನಿತ್ತು? ಇದು 80ರ ದಶಕದ ಕಲಾವಿದರಿಗೆ ಇರುವ ವಿಶೇಷ ಕಾರ್ಯಕ್ರಮವಾಗಿರುವ ಕಾರಣ, ಬೇರೆ ಯಾರನ್ನು ಬರಲು ಬಿಡುವುದಿಲ್ಲ. ಚಿತ್ರರಂಗದವರು ಆಗಿದ್ದರೆ ಮಾತ್ರ ನಟ ಅಥವಾ ಅವರ ಪತ್ನಿಯರನ್ನು ಬರಲು ಅವಕಾಶವಿದೆ. ಕಲಾವಿದರ ಮನೆಯರನ್ನು ಕರೆತರಲು ಅವಕಾಶವಿಲ್ಲ. ದಕ್ಷಿಣ ಭಾರತದ ಕಲಾವಿದರು ಮಾತ್ರ ಈ ರೀತಿಯ ಪಾರ್ಟಿ ಆಯೋಜಿಸುತ್ತಿದ್ದು, ನಾವೆಲ್ಲ ವಾಟ್ಸಪ್ ನಲ್ಲಿ ಗ್ರೂಪ್ ಮಾಡಿಕೊಂಡು ಪರಸ್ಪರ ಸಂಪರ್ಕದಲ್ಲಿರುತ್ತೇವೆ ಎಂದು ನಟಿ ಸುಹಾಸಿನಿ ತಿಳಿಸಿದ್ದಾರೆ.
ಮುಂಬೈ: ತಮಿಳು ನಟ ಆರ್ಯ ಮದುವೆಯಾಗಲೂ ಹುಡುಗಿ ಬೇಕು ಎಂದು ಹೇಳಿ ಅದನ್ನು ವಿಡಿಯೋ ಮಾಡಿ ತಮ್ಮ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ ಆ ವಿಡಿಯೋ ಈಗ ವೈರಲ್ ಆಗಿದೆ.
`ರಾಜ ರಾಣಿ’ ಸಿನಿಮಾದ ಖ್ಯಾತಿಯ ನಟರಾಗಿದ್ದು, ತೆಲುಗು, ತಮಿಳು ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಸದ್ಯಕ್ಕೆ ರಂಗಿತರಂಗದ ನಿರ್ಮಾಪಕ ಅನೂಪ್ ಭಂಡಾರಿಯವರು ನಿರ್ದೇಶನ ಮಾಡುತ್ತಿರುವ `ರಾಜರಥ’ ಚಿತ್ರದಲ್ಲಿ ಇವರು ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ.
ಆರ್ಯ ಜಿಮ್‍ನಲ್ಲಿ ಸ್ನೇಹಿತರ ಜೊತೆಗೆ ತಮ್ಮ ಮದುವೆ ಬಗ್ಗೆ ಮಾತನಾಡುತ್ತಿದ್ದಾಗ ಅದನ್ನು ವಿಡಿಯೋ ಮಾಡಿ ಫೇಸ್‍ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಬಳಿಕ ಆ ವೀಡಿಯೋ ವೈರಲ್ ಆಗಿತ್ತು. ಇದೀಗ ಸ್ವತಃ ಅವರೇ ಇದರ ಬಗ್ಗೆ ಮಾತನಾಡಿದ್ದಾರೆ.
`ನನ್ನ ಮದುವೆಗೆ ಸಂಬಂಧಿಸಿದಂತೆ ಒಂದು ವಿಡಿಯೋ ಲೀಕ್ ಆಗಿದೆ. ಅದನ್ನು ನನ್ನ ಸ್ನೇಹಿತರು ಅಪ್ಲೋಡ್ ಮಾಡಿದ್ದಾರೆ. ಆದರೆ ಅದರಲ್ಲಿರುವ ಮಾತು ಸತ್ಯ ನಾನು ಮದುವೆಯಾಗಲೂ ಹುಡುಗಿ ಹುಡುಕುತ್ತಿದ್ದೇನೆ. ನನಗೆ ಯಾವುದೇ ಡಿಮ್ಯಾಂಡ್, ಕಂಡೀಷನ್ ಇಲ್ಲ, ನಿಮಗೆ ನಾನು ಇಷ್ಟವಾದರೆ ಕರೆ ಮಾಡಿ’ ಎಂದು ನಂಬರ್ ಹೇಳಿ ಮಾತನಾಡಿದ್ದಾರೆ.
ಇದೊಂದು ತಮಾಷೆಯ ವಿಚಾರವಲ್ಲ, ಇದು ನನ್ನ ಜೀವನದ ಪ್ರಶ್ನೆ, ನಿಮಗೆ ಇಷ್ಟವಾದರೆ ಕರೆ ಮಾಡಿ ಕಾಯುತ್ತಿರುತ್ತೇನೆ ಎಂದು ಹೇಳಿದ್ದಾರೆ.
ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ 25ಕ್ಕೂ ಹೆಚ್ಚು ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ರಾಕ್‍ಲೈನ್ ವೆಂಕಟೇಶ್ ಈಗ ಭಾರತೀಯ ಚಿತ್ರರಂಗದ ಹೆಸರಂತ ನಿರ್ಮಾಪಕರಾಗಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್, ರವಿತೇಜ, ಬಾಲಿವುಡ್ ಬಾಕ್ಸಾಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಚಿತ್ರಗಳಿಗೆ ಬಂಡವಾಳ ಹೂಡಿದ ಹೆಗ್ಗಳಿಕೆ ರಾಕ್‍ಲೈನ್ ವೆಂಕಟೇಶ್‍ಗೆ ಸಲ್ಲುತ್ತದೆ. ಬಾಲಿವುಡ್, ಟಾಲಿವುಡ್ ಹಾಗೂ ಕಾಲಿವುಡ್‍ನಲ್ಲಿ ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ರಾಕ್‍ಲೈನ್ ಈಗ ಮಲೆಯಳಂ ನಟ ಮೋಹನ್ ಲಾಲ್ ನಟನೆಯ `ವಿಲನ್’ ನಿರ್ಮಾಪಕರಾಗಿದ್ದು ಚಿತ್ರ ಇದೇ 28ಕ್ಕೆ ಬಿಡುಗಡೆಯಾಗಲಿದೆ.
ಒಬ್ಬ ಸಾಮಾನ್ಯ ಸಹ ಕಲಾವಿದನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಾಕ್‍ಲೈನ್ ವೆಂಕಟೇಶ್ ಅವರು ಇಂದು ಆಕಾಶದೇತ್ತರಕ್ಕೆ ಬೆಳೆದು ನಿಂತಿದ್ದಾರೆ. ತಮಗೇ ಯಾವುದೇ ಬೌಂಡರಿ ಲೈನ್ ಹಾಕಿಕೊಳ್ಳದೆ ಟಾಲಿವುಡ್, ಕಾಲಿವುಡ್ ಹಾಗೂ ದೂರದ ಬಾಲಿವುಡ್ ತನಕ ತಮ್ಮ ಛಾಪನ್ನು ಈಗಾಗಲೇ ಮೂಡಿಸಿದ್ದಾರೆ. ಇನ್ನೂ ಭಾರತೀಯ ಚಿತ್ರರಂಗದಲ್ಲೇ ಸ್ಟೋರಿ ಬೆಸ್ಟ್ ಸಿನಿಮಾಗಳಿಗೆ ಹೆಸರು ವಾಸಿಯಾಗಿರುವ ಮಾಲಿವುಡ್ ಚಿತ್ರರಂಗಕ್ಕೆ ರಾಕ್‍ಲೈನ್ ವೆಂಕಟೇಶ್ ವಿಲನ್ ಮೂಲಕ ಪ್ರವೇಶವನ್ನು ಪಡೆಯುತ್ತಿದ್ದಾರೆ.
ಕಳೆದ ವರ್ಷ `ಪುಲಿ ಮುರುಗನ್’ ಚಿತ್ರದ ಮೂಲಕ ಬಾಕ್ಸಾಫೀಸ್‍ನಲ್ಲಿ ಸೆಂಚುರಿ ಬಾರಿಸಿದ ಮೋಹನ್ ಲಾಲ್‍ಗೆ ಈ ಬಾರಿ ಕ್ರೈಂ ಥ್ರಿಲ್ಲರ್ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದು, ಈ ಚಿತ್ರದಲ್ಲಿ ಕೇವಲ ಮೋಹನ್ ಲಾಲ್ ಮಾತ್ರವಲ್ಲ ಕಾಲಿವುಡ್‍ನ ಪ್ರಮುಖ ನಟರಾದ ವಿಶಾಲ್, ನಟಿ ಮಂಜು ವಾರಿಯರ್, ಹನ್ಸಿಕಾ ಮೊಟ್ವಾನಿ, ರಾಶಿ ಖನ್ನಾ ರಂಥ ಫೇಮಸ್ ಸ್ಟಾರ್‍ಗಳು ಬಣ್ಣ ಹಚ್ಚಿದ್ದಾರೆ.
ಮಾಲಿವುಡ್‍ನ ಖ್ಯಾತ ನಿರ್ದೇಶಕ ಬಿ.ಉನ್ನಿಕೃಷ್ಣನ್ ಸಾರಥ್ಯದಲ್ಲಿ ವಿಲನ್ ಮೂಡಿಬಂದಿದ್ದು, ಕೆಲ ದಿನಗಳ ಹಿಂದೆ ಬಿಡುಗಡೆಯಾದ ಟ್ರೇಲರ್ ಸೋಷಿಯಲ್ ಮಿಡಿಯದಲ್ಲಿ ಸಖತ್ ಸದ್ದು ಮಾಡಿತ್ತು.
ರಾಕ್‍ಲೈನ್ ವೆಂಕಟೇಶ್‍ರವರ ಬಗ್ಗೆ ಮತ್ತೊಂದು ಇಂಟ್ರಸ್ಟಿಂಗ್ ವಿಷಯ ನಿಮಗೇ ಹೇಳಲೇ ಬೇಕು. ಏಕೆಂದರೆ ಇದು ಕನ್ನಡ ಚಿತ್ರರಸಿಕರಿಗೆ ಹೆಮ್ಮೆಯಾಗುವ ಸಮಾಚಾರ. ನಿರ್ಮಾಣದ ಜೊತೆಗೆ ಕೆಲ ಸಿನಿಮಾಗಳಲ್ಲಿ ಡಿಫರೆಂಟ್ ಪಾತ್ರಗಳನ್ನ ಮಾಡುತ್ತಿರುವ ವೆಂಕಟೇಶ್ ಮತ್ತೊಂದು ಸಾಧನೆಯ ಮೈಲುಗಲ್ಲು ಹತ್ತಲೂ ಸಜ್ಜಾಗಿದ್ದಾರೆ. ಮೂಲಗಳ ಪ್ರಕಾರ ರಾಕ್‍ಲೈನ್ ಚೀನಾ ಭಾಷೆಯಲ್ಲೊಂದು ಅದ್ದೂರಿ ಸಿನಿಮಾ ಮಾಡಲು ಸಜ್ಜಾಗುತ್ತಿದ್ದಾರಂತೆ. ಚೀನಾದಲ್ಲಿಯೇ ಒಬ್ಬ ಹೊಸ ಪ್ರತಿಭೆಯೊಬ್ಬನನ್ನು ತಯಾರಿ ಮಾಡುತ್ತಿದ್ದಾರಂತೆ. ಚೀನಾ ಭಾಷೆಯ ಜೊತೆಗೆ ಜಗತ್ತಿನ ಬೇರೆ ಬೇರೆ ಭಾಷೆಯಲ್ಲಿ ಈ ಸಿನಿಮಾ ರಿಲೀಸ್ ಮಾಡುವ ಮಹತ್ತರ ಯೋಜನೆಯಲ್ಲಿ ರಾಕ್‍ಲೈನ್ ಇದ್ದಾರೆ ಎನ್ನಲಾಗುತ್ತಿದೆ.
ಈಗಾಗಲೇ `ವಿಲನ್’ ಚಿತ್ರದ ಬಗ್ಗೆ ಬಹಳಷ್ಟು ನಿರೀಕ್ಷೆಗಳು ಮೂಡಿಸಿರುವ ಸಂದರ್ಭದಲ್ಲಿ ಹೊಸ ಸುದ್ದಿ ಎಲ್ಲರನ್ನು ಹೆಮ್ಮೆ ಪಡುವಂತೆ ಮಾಡಿದೆ. `ವಿಲನ್’ ಸಿನಿಮಾದ ಪೋಸ್ಟರ್ ಹಾಗೂ ಟ್ರೇಲರ್‍ನ ನೋಡಿದ ಸೂಪರ್ ಸ್ಟಾರ್ ರಜನಿಕಾಂತ್, ಈ ಸಿನಿಮಾವನ್ನು ನಾನು ಖಂಡಿತ ಮೋಡುತ್ತೇನೆ ಎಂದು ತಿಳಿಸಿದ್ದಾರೆ.
ಬೆಂಗಳೂರು: ಶರತ್ ಬಾಬು ಎಂದರೆ ಯಾರೆಂದೇ ನನಗೆ ಗೊತ್ತಿಲ್ಲ. ನಾನು ಅವರು ಮದುವೆಯಾಗುತ್ತಿದ್ದೇವೆ ಎಂಬ ವದಂತಿ ಮಾಧ್ಯಮಗಳಿಗೆ ಹೇಗೆ ಸಿಕ್ಕಿತು ಎಂದೇ ನನಗೆ ಗೊತ್ತಾಗುತ್ತಿಲ್ಲ ಎಂದು ನಟಿ ನಮಿತಾ ಹೇಳಿದ್ದಾರೆ. ನಾನು ನನ್ನ ದುಪ್ಪಟ್ಟು ವಯಸ್ಸಿನ ವ್ಯಕ್ತಿಯನ್ನು ಮದುವೆಯಾಗುತ್ತಿದ್ದೇನೆ ಎಂದ ಸುದ್ದಿ ಶುದ್ಧ ಸುಳ್ಳು. ಇದು ಈ ಸುಳ್ಳು ಸುದ್ದಿಯ ಬಗ್ಗೆ ನನ್ನ ಸ್ಪಷ್ಟನೆ ಅಂತಾ ನಮಿತಾ ಹೇಳಿದ್ದಾರೆ.
ನಮಿತಾ ಹಾಗೂ ಹಿರಿಯ ನಟ ಶರತ್ ಬಾಬು ಮದುವೆಯಾಗುತ್ತಿದ್ದಾರೆ. ಅವರಿಬ್ಬರೂ ಈಗಾಗಲೇ ಡೇಟಿಂಗ್ ನಲ್ಲಿದ್ದು ಲಿವಿಂಗ್ ಟುಗೆದರ್ ನಲ್ಲಿದ್ದಾರೆ ಎಂಬ ವದಂತಿ ಹರಡಿತ್ತು. ಈ ವಿಚಾರವನ್ನು ಶರತ್ ಬಾಬು ಅವರು ಈಗಾಗಲೇ ಅಲ್ಲಗಳೆದಿದ್ದಾರೆ. 16 ರಿಂದ 60ರ ವಯಸ್ಸಿನ ತನಕದ ಅಭಿಮಾನಿಗಳನ್ನು ಹೊಂದಿರುವ ನಮಿತಾ ಹುಟ್ಟಿದ್ದು ಗುಜರಾತ್ ನಲ್ಲಿ. ಆದರೆ ಖ್ಯಾತಿಗೆ ಬಂದಿದ್ದು ಮಾತ್ರ ಸೌಥ್ ಸಿನಿ ಅಂಗಳದಲ್ಲಿ. 15 ವರ್ಷಕ್ಕೇ ಮಾಡೆಲ್ ಆದ ನಮಿತಾ 2002ರಲ್ಲಿ ಟಾಲಿವುಡ್ ನ `ಸೊಂತಂ’ ಎಂಬ ಸಿನಿಮಾದ ಮೂಲಕ ಬಣ್ಣದ ಬದುಕಿಗೆ ಎಂಟ್ರಿ ಕೊಟ್ಟಿದ್ದರು. ಹೀಗೆ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ ದಕ್ಷಿಣ ಭಾರತ ಟಾಪ್ ನಟರ ಜೊತೆ ಹೆಜ್ಜೆ ಹಾಕಿದ್ದಾರೆ. 35ರ ಹರೆಯದ ನಮಿತಾ 66ರ ವರ್ಷದ ಶರತ್ ಬಾಬುರನ್ನು ಮದುವೆಯಾಗ್ತಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿತ್ತು. ಶರತ್ ಬಾಬು ಅವರಿಗೆ ಈಗಾಗಲೇ ಎರಡು ಮದುವೆಯಾಗಿದೆ.
ಇತ್ತೀಚೆಗೆ ನಮಿತಾ ಮಲೆಯಾಳಂ ಸೂಪರ್ ಹಿಟ್ `ಪುಲಿಮುರುಗನ್’ ಚಿತ್ರದಲ್ಲಿ ಬಿಟ್ರೇ ಬೇರೆ ಯಾವ ಚಿತ್ರದಲ್ಲಿಯೂ ಕಾಣಿಸಿಕೊಂಡಿಲ್ಲ. ಒಂದು ಲೆಕ್ಕದಲ್ಲಿ ನಮಿತಾ ಸಖತ್ ಫ್ರೀಯಾಗಿದ್ದಾರೆ. ತನ್ನ ಬೇಡಿಕೆ ಕಡಿಮೆಯಾಗುತ್ತಿರುವ ಕಾರಣ ನಮಿತಾ ತಾಳಿಗೆ ಕತ್ತು ಕೊಡಲು ಸಿದ್ಧವಾಗ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಬೆಂಗಳೂರು: ಸ್ಯಾಂಡಲ್‍ವುಡ್, ಟಾಲಿವುಡ್, ಮಾಲಿವುಡ್ ಸಿನಿಮಾಗಳಲ್ಲಿ ಹೆಸರು ಮಾಡಿರುವ ಹಾಟ್ ಆ್ಯಂಡ್ ಸೆಕ್ಸಿ ನಟಿ ನಮಿತಾ ಮುಖೇಶ್ ವೆಂಕವಾಲ್ ಈಗ ಮದುವೆ ಆಗಲಿದ್ದಾರೆ ಎಂಬ ಸುದ್ದಿಯೊಂದು ಸೌಥ್ ಸಿನಿ ಅಂಗಳದಲ್ಲಿ ಹರಿದಾಡುತ್ತಿದೆ.
16 ರಿಂದ 60ರ ವಯಸ್ಸಿನ ತನಕದ ಅಭಿಮಾನಿಗಳನ್ನು ಹೊಂದಿರುವ ನಮಿತಾ ಹುಟ್ಟಿದ್ದು ಗುಜರಾತ್ ನಲ್ಲಿ. ಆದರೆ ಸೌಥ್ ಸಿನಿ ಅಂಗಳದಲ್ಲಿ ಹೆಸರು ಮಾಡಿದ್ದಾರೆ. 15 ವರ್ಷಕ್ಕೆ ಮಾಡೆಲ್ ಆದ ನಮಿತಾ 2002ರಲ್ಲಿ ಟಾಲಿವುಡ್ ನ `ಸ್ವತಂ’ ಅನ್ನೊ ಸಿನಿಮಾದ ಮೂಲಕ ಬಣ್ಣದ ಬದುಕಿಗೆ ಎಂಟ್ರಿಕೊಟ್ಟಿದ್ದರು. ಹೀಗೆ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ ದಕ್ಷಿಣ ಭಾರತ ಟಾಪ್ ನಟರ ಜೊತೆ ಹೆಜ್ಜೆ ಹಾಕಿದ್ದಾರೆ.
ಯಾರನ್ನ ಮದ್ವೆ ಆಗ್ತಾರೆ?: ಆಗಾಗ ನಮಿತಾರ ಹೆಸರು ಕೆಲ ನಟರ ಹೆಸರಿನ ಜೊತೆ ಥಳುಕು ಹಾಕಿಕೊಳ್ಳುತ್ತಿತ್ತು. ಆದರೆ ಅದು ಮದುವೆ ತನಕ ಬರುತ್ತಿರಲಿಲ್ಲ. ಫಸ್ಟ್ ಟೈಮ್ ನಮಿತಾ ಮದುವೆಯ ವಿಚಾರದ ಬಗ್ಗೆ ಬಿಸಿ ಬಿಸಿ ಚರ್ಚೆಗಳಾಗುತ್ತಿವೆ. ಅದು ಬಹುಭಾಷಾ ನಟ, ಹಿರಿಯ ಕಲಾವಿದ ಶರತ್ ಬಾಬು ಅವರನ್ನು ನಮಿತಾ ಮದುವೆ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.
35ರ ಹರೆಯದ ನಮಿತಾ 66ರ ವರ್ಷದ ಶರತ್ ಬಾಬುರವನ್ನ ಮದುವೆಯಾಗ್ತಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ. ಶರತ್ ಬಾಬುರವರಿಗೆ ಈಗಾಗಲೇ ಎರಡು ಮದುವೆಯಾಗಿದೆ. ಶರತ್ ಬಾಬು ತಮ್ಮ ಎರಡನೇ ಮದುವೆಯಾಗುವಾಗ ನಾನು ಇನ್ನೂ 35 ವರ್ಷದ ಯುವಕನಂತೆಯೇ ಇದ್ದು ನನ್ನಲ್ಲಿನ್ನೂ ಅದಮ್ಯ ಉತ್ಸಾಹವಿದೆ ಅಂತಾ ಹೇಳಿದ್ದರು. ಈಗ ನಮಿತಾರ ಜೊಗೆ ಮೂರನೇ ವೆಡ್ಡಿಂಗ್ ಕಾರ್ಡ್ ಪ್ರಿಂಟ್ ಮಾಡುತ್ತಿದ್ದಾರೆ ಎಂಬ ಗುಮಾನಿಗಳು ಹಬ್ಬಿವೆ.
ಈ ಬಗ್ಗೆ ನಮಿತಾ ಹಾಗೂ ಶರತ್ ಬಾಬುರವರ ಕಡೆಯಿಂದ ಸ್ಪಷ್ಟತೆ ಬಂದಿಲ್ಲ. ಸದ್ಯಕ್ಕೆ ನಮಿತಾ ಮಲೆಯಾಳಂ ಸೂಪರ್ ಹಿಟ್ ಸಿನಿಮಾ `ಪುಲಿಮುರುಗನ್’ ಚಿತ್ರದಲ್ಲಿ ಬಿಟ್ರೇ ಬೇರೆ ಯಾವ ಚಿತ್ರದಲ್ಲಿಯೂ ಕಾಣಿಸಿಕೊಂಡಿಲ್ಲ. ಒಂದು ಲೆಕ್ಕದಲ್ಲಿ ನಮಿತಾ ಸಖತ್ ಫ್ರೀಯಾಗಿದ್ದಾರೆ. ತನ್ನ ಬೇಡಿಕೆ ಕಡಿಮೆಯಾಗುತ್ತಿರುವ ಕಾರಣ ನಮಿತಾ ತಾಳಿಗೆ ಕತ್ತು ಕೊಡಲು ಸಿದ್ದವಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ರೈಟ್ ಟೈಮ್‍ನಲ್ಲೇ ಇಂಥದೊಂದು ಬಿಗ್ ಗಾಸಿಪ್ ಅಕ್ಕ-ಪಕ್ಕದ ಟಾಲಿವುಡ್ ಮತ್ತು ಕಾಲಿವುಡ್ ನಿಂದ ಸ್ಯಾಂಡಲ್‍ವುಡ್ ತನಕ ಹಬ್ಬಿದೆ.
ಬೆಂಗಳೂರು: ಬ್ಯೂಟಿಫುಲ್ ಮನಸ್ಸುಗಳು ಚಿತ್ರದ ಯಶಸ್ಸಿನ ನಂತರ ಸತೀಶ್ ಕೆಲವು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಸಾಲುಸಾಲಾಗಿ ಅವರ ಚಿತ್ರ ಸೆಟ್ಟರಲಿದೆ. ಇದರ ನಡುವೆ ನೀನಾಸಂ ಸತೀಶ್ ಕಾಲಿವುಡ್‍ಗೆ ಎಂಟ್ರಿ ಕೊಡಲಿದ್ದಾರೆ.
ಸತೀಶ್ ನಟಿಸುತ್ತಿರುವ ಆಕ್ಷನ್ ಚಿತ್ರ ‘ಟೈಗರ್ ಗಲ್ಲಿ’ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಅಯೋಗ್ಯ ಮತ್ತು ಗೋದ್ರ ಚಿತ್ರಗಳು ಸೆಟ್ಟೀರಿವೆ. ಇದರ ಮಧ್ಯೆ ನೀನಾಸಂ ಸತೀಶ್ ಕಾಲಿವುಡ್‍ಗೆ ಎಂಟ್ರಿ ಕೊಡುವ ವಿಷಯವನ್ನು ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ 2018ರಲ್ಲಿ ಬಾಲಿವುಡ್‍ಗೂ ಎಂಟ್ರಿ ಕೊಡಲಿದ್ದಾರೆ.
ಸತೀಶ್ ಕಾಲಿವುಡ್‍ನಲ್ಲಿ ನಟಿಸುವುದು ಕನ್ಫರ್ಮ್ ಆಗಿದೆ. ಆದರೆ ಚಿತ್ರದ ನಿರ್ದೇಶಕರು ಯಾರು ಮತ್ತು ಯಾವ ಕಲಾವಿದರು ಚಿತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ ಎಂಬುದನ್ನು ಗುಟ್ಟಾಗಿಯೇ ಇಟ್ಟಿದ್ದಾರೆ. ಅಕ್ಟೋಬರ್ ಮೂರನೇ ವಾರದಲ್ಲಿ ಸತೀಶ್ ಅವರ ತಮಿಳು ಚಿತ್ರದ ಫಸ್ಟ್ ಲುಕ್ ಹೊರ ಬೀಳಲಿದ್ದು, ನವೆಂಬರ್ ಮೊದಲ ವಾರದಲ್ಲಿ ಶೂಟಿಂಗ್ ಶುರುವಾಗಲಿದೆ.
ತಮಿಳು ಚಿತ್ರದ ಟೈಟಲ್ ಇನ್ನೂ ಅಂತಿಮಗೊಂಡಿಲ್ಲ. ಸೋಮವಾರ ಚೆನ್ನೈಗೆ ಹೋಗುತ್ತಿದ್ದೇನೆ. ಶೀಘ್ರದಲ್ಲೇ ಎಲ್ಲವೂ ಫೈನಲ್ ಆಗಲಿದೆ ಹಾಗೂ ಈ ಚಿತ್ರವು ದೊಡ್ಡ ಬ್ಯಾನರ್‍ವೊಂದರಲ್ಲಿ ಸಿದ್ಧವಾಗಲಿದೆ. ಸದ್ಯ ಈ ಬಗ್ಗೆ ಹೆಚ್ಚೇನೂ ಮಾಹಿತಿ ನೀಡುವಂತಿಲ್ಲ ಎಂದು ನೀನಾಸಂ ಹೇಳಿದ್ದಾರೆ.
ಈ ಚಿತ್ರ ಕನ್ನಡ ಹಾಗೂ ತಮಿಳು ಭಾಷೆಗಳಲ್ಲಿ ಏಕಕಾಲಕ್ಕೆ ಈ ಚಿತ್ರ ಮೂಡಿ ಬರುವುದಿಲ್ಲ. ತಮಿಳಿನಲ್ಲಷ್ಟೇ ಸಿದ್ಧವಾಗಲಿದ್ದು ಸತೀಶ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನೂ ಉಳಿದ ಪಾತ್ರಗಳ ಆಯ್ಕೆ ನಡೆಯುತಿದೆ. ಸತೀಶ್ ತಮ್ಮ ಫಸ್ಟ್ ಲುಕ್‍ಗಾಗಿ ಇನ್ನಷ್ಟು ಗಡ್ಡ ಬೆಳೆಸಬೇಕಿದೆ. ನಂತರ ಅದ್ಧೂರಿ ಕಾರ್ಯಕ್ರಮದ ಮೂಲಕವೇ ಫಸ್ಟ್ ಲುಕ್ ಲಾಂಚ್ ಮಾಡುವ ಪ್ಲಾನ್ ಚಿತ್ರತಂಡ ಮಾಡುತ್ತಿದೆ.
ಬೆಂಗಳೂರು: `ನೀವು ಏನೇ ಹೇಳ್ರಿ.. ಹಾಲಿವುಡ್ ರೇಂಜ್‍ಗೆ ನಮ್ ಇಂಡಿಯನ್ ಸಿನಿಮಾ ಕಾಂಪಿಟ್ ಮಾಡೋಕೆ ಸಾಧ್ಯಾನೇ ಇಲ್ಲ….’ ಹೀಗಂತ ಹೇಳುವ ಕಾಲ ಕೆಲವು ವರ್ಷಗಳ ಹಿಂದೆ ಇತ್ತು. ಆದರೆ ಕಳೆದ ಒಂದು ದಶಕದಿಂದ ದಕ್ಷಿಣ ಭಾರತದಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾಗಳನ್ನು ನೋಡುತ್ತಿದ್ದರೆ ಹಾಲಿವುಡ್‍ಗೆ ಹಾಲಿವುಡ್ಡೇ ಬೆಚ್ಚಿ ಬಿದ್ದಿದೆ. ಅದಕ್ಕೆ 2.0 ಸಿನಿಮಾ ಮೇಕಿಂಗ್ ಸಾಕ್ಷಿ. ಶಂಕರ್ ನಿರ್ದೇಶನದ 2.0 ಹೇಗಿದೆ ಅಂತ ನೋಡಿದ್ರೆ ನೀವು ಕುಂತಲ್ಲೇ ಕಳೆದು ಹೋಗ್ತೀರಿ.
ಹೌದು. ಯಪ್ಪಾ ಯಪ್ಪಾ ಯಪ್ಪಾ….ಇದೇನ್ರಿ ಇದು. ಇವರೆಲ್ಲಾ ಸೇರಿಕೊಂಡು ಸಿನಿಮಾ ಮಾಡ್ತಾ ಇದ್ದಾರಾ ಇಲ್ಲ ಹೊಸ ಜಗತ್ತನ್ನೇ ಸೃಷ್ಟಿ ಮಾಡುತ್ತಿದ್ದಾರಾ? ಅದೆಷ್ಟು ಜನ, ಅದೆಷ್ಟು ಕ್ಯಾಮೆರಾಗಳು, ಅದೇನು ಪ್ರತಿ ಶಾಟ್‍ಗೂ ತಯಾರಿ, ಮೇಕಪ್ ಮಾಡಿಕೊಳ್ಳುವ ಸ್ಟೈಲು, ರಜನಿ ಅಂಡ್ ಅಕ್ಷಯ್ ಮುಖಕ್ಕೆ ಮಾಸ್ಟ್ ಪ್ಯಾಚ್ ಹಾಕುವ ರೀತಿ. ಸಾವಿರಾರು ಜನರು ಓಡಾಟ..ಉಫ್…ನಿಜಕ್ಕೂ ಶಂಕರ್ ಭಾರತೀಯ ಚಿತ್ರರಂಗದ ಅದ್ಭುತ ನಿರ್ದೇಶಕ ಎನ್ನುವುದಲ್ಲಿ ನೋ ಡೌಟ್. ಅದಕ್ಕೆ ಅವರು ಬಿಟ್ಟಿರುವ ರೊಬೊ ಚಿತ್ರದ ಎರಡನೇ ಭಾಗ 2.0 ಸಿನಿಮಾದ ಮೇಕಿಂಗ್ ಕಣ್ಣ ಮುಂದಿನ ಸಾಕ್ಷಿ.
ರೊಬೊ…ಸುಮಾರು ಎಂಟು ವರ್ಷಗಳ ಹಿಂದೆ ತೆರೆ ಕಂಡಿತ್ತು. ರಜನಿ ಮತ್ತು ಐಶ್ವರ್ಯ ರೈ ನಟಿಸಿದ್ದ ಅದು ಕೋಟಿ ಕೋಟಿ ಹಣವನ್ನು ಲೂಟಿ ಮಾಡಿತ್ತು. ಅದಕ್ಕೂ ನೂರಾರು ಕೋಟಿಯನ್ನು ಸುರಿದಿದ್ದರು. ಸುಮಾರು ಎರಡು ವರ್ಷಗಳ ಚಿತ್ರೀಕರಣದ ನಂತರ ತೆರೆ ಕಂಡಿದ್ದ ಅದು ರಜನಿ ವೃತ್ತಿ ಬದುಕಿಗೆ ಹೊಸ ಇಮೇಜ್ ನೀಡಿದ್ದು ಸುಳ್ಳಲ್ಲ. ಹಾಗೆಯೇ ಭಾರತೀಯ ಚಿತ್ರರಂಗದಲ್ಲೂ ಹಾಲಿವುಡ್ ಲೆವೆಲ್‍ನ ಸಿನಿಮಾ ಮಾಡುವ ಪ್ರತಿಭಾವಂತ ನಿರ್ದೇಶಕರು, ತಂತ್ರಜ್ಞರು ಇದ್ದಾರೆಂದು ಎದೆ ತಟ್ಟಿಕೊಂಡು ಹೇಳಿತ್ತು.
ರೊಬೊ ಚಿತ್ರಕ್ಕೆ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ, ಅದಕ್ಕೆ ಏನೇನು ಬೇಕೊ ಎಲ್ಲವನ್ನೂ ಕೊಟ್ಟಿದ್ದರು. ಹೀಗಾಗಿ ಜನರೂ ಅದಕ್ಕೆ ತಕ್ಕಂತೆ ಕೈ ಹಿಡಿದರು. ಅದಾದ ಮೇಲೆ ಶಂಕರ್ ಒಂದು ರಿಮೇಕ್ ಸಿನಿಮಾ ಮಾಡಿದರು. ವಿಕ್ರಮ್ ಆಭಿನಯದ ಐ ಸಿನಿಮಾ ಕೂಡ ಬಂತು. ಅದರೆ ಅದೇಕೊ ಏನೊ ಜನರು ಅದನ್ನು ಮೆಚ್ಚಲಿಲ್ಲ. ಕೊನೆಗೆ ರೊಬೊ ಸಿನಿಮಾದ ಎರಡನೇ ಭಾಗವನ್ನು ಮಾಡಲು ನಿರ್ಧರಿಸಿದರು. ರಜನಿ ಕೂಡ ಗ್ರೀನ್ ಸಿಗ್ನಲ್ ಕೊಟ್ಟರು. ಕಳೆದ ಮೂರು ವರ್ಷಗಳ ಹಿಂದೆ ಆರಂಭವಾದ ಇದು ಈಗಲೂ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿದೆ. ಆ ಸಿನಿಮಾದ ಮೇಕಿಂಗ್ ಝಲಕ್ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟರು ನೋಡಿ, ಬಿಡುಗಡೆಯಾಗಿದ್ದೇ ತಡ ಯೂಟ್ಯೂಬ್‍ನಲ್ಲಿ ದೇಶದಲ್ಲೇ ನಂಬರ್ ಟ್ರೆಂಡಿಂಗ್ ಆಗಿದ್ದು, ಒಂದೇ ದಿನದಲ್ಲಿ 36 ಲಕ್ಷಕ್ಕೂ ಅಧಿಕ ವ್ಯೂ ಕಂಡಿದೆ.
ಮೈಲುದ್ದದ ರೋಡುಗಳು, ಸುತ್ತ ಮುತ್ತ ಮನೆಗಳು, ಸೆಟ್ ರೆಡಿ ಮಾಡುತ್ತಿರುವ ಕಾರ್ಮಿಕರು, ಸಾವಿರಾರು ಜನರು ಮೈದಾನದಿಂದ ಓಡಿ ಹೋಗುತ್ತಿರುವುದು, ಮಲಗಿಕೊಂಡ ರಜನಿ ಒಂದು ಸೈಡ್ ಲುಕ್ ಕೊಡುವ ಸ್ಟೈಲು, ಕಾರುಗಳು ಆಕಾಶಕ್ಕೆ ಹಾರಿ ಬೆಂಕಿ ಹತ್ತಿ ಉರಿಯುವುದು, ರೊಬೊ ಡ್ರೆಸ್‍ನಲ್ಲಿ ರಜನಿ ಶಾಟ್‍ಗೆ ರೆಡಿ ಆಗುತ್ತಿರುವುದು, ರಜನಿ ಮತ್ತು ಅಕ್ಷಯ್ ಮುಖಕ್ಕೆ ವ್ಯಾಕ್ಸ್ ಹಾಕಿ, ಅದು ಒಣಗಿದ ನಂತರ ಅದೇ ರೂಪದ ನಕಲಿ ಮುಖವಾಡ ಮಾಡುವ ದೃಶ್ಯ, ಹುಲಿಯಂಥ ಹುಬ್ಬು, ಕೋರೆ ಹಲ್ಲು, ಇಷ್ಟಗಲ ಕೆಂಪು ಕೆಂಪು ಕಣ್ಣಿನ ಅಕ್ಷಯ್…ಓಹೊಹೊಹೊ…ಇದನ್ನು ನೋಡುತ್ತಿದ್ದರೆ ಒಬ್ಬ ನಿರ್ದೇಶಕನ ಶ್ರಮ ಏನೆಂದು ಗೊತ್ತಾಗುತ್ತದೆ.
ಸಿನಿಮಾ ಎಲ್ಲರನ್ನೂ ಒಳಗೆ ಬಿಟ್ಟುಕೊಳ್ಳುವುದಿಲ್ಲ ಎನ್ನುವ ಮಾತಿದೆ. ಅದು ನೂರಕ್ಕೆ ನೂರು ನಿಜ. ಫುಟ್‍ಪಾತ್‍ನಲ್ಲಿ ಇದ್ದವನು ಒಂದೇ ರಾತ್ರಿಯಲ್ಲಿ ಸೂಪರ್ ಸ್ಟಾರ್ ಆಗುತ್ತಾನೆ, ಕೋಟಿ ಕೋಟಿ ಗಳಿಸಿದ ನಿರ್ಮಾಪಕ ಕಣ್ಣು ಮುಚ್ಚಿ ತೆರೆವಷ್ಟರಲ್ಲಿ ಬೀದಿಗೆ ಬಂದಿರುತ್ತಾನೆ. ಕನ್ನಡ ಚಿತ್ರರಂಗದಲ್ಲಿ ಮಾತ್ರ ಅಲ್ಲ, ಎಲ್ಲಾ ಚಿತ್ರರಂಗದಲ್ಲಿ ಇಂಥ ಸಾವಿರಾರು ಘಟನೆಗಳು ನಡೆದಿವೆ. ಮುಂದೆಯೂ ನಡೆಯುತ್ತವೆ. ಕೆಲವರು ದುಡ್ಡು, ಹೆಸರು ಮಾಡಲು ಬರುತ್ತಾರೆ, ಇನ್ನು ಕೆಲವರು ಶೋಕಿಗಾಗಿ ಬಾಗಿಲು ತಟ್ಟುತ್ತಾರೆ, ಆದರೆ ಅದೊಂದು ವರ್ಗ ಇದೆ. ಅವರು ಸಿನಿಮಾ ಅನ್ನೋದನ್ನು ತಲೆ ಮೇಲೆ ಹೊತ್ತುಕೊಂಡು ಮೆರವಣಿಗೆ ಮಾಡುತ್ತಾರೆ. ಆ ಸಾಲಿನಲ್ಲಿ ಶಂಕರ್ ಹೆಸರನ್ನು ಅನಿವಾರ್ಯವಾಗಿ ಸೇರಿಸಲೇಬೇಕು.
ಕೆಲವು ತಿಂಗಳ ಹಿಂದೆ ಇದೇ 2.0 ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಲಾಗಿತ್ತು. ಮುಂಬೈನಲ್ಲಿ ನಡೆದ ಆ ಕಾರ್ಯಕ್ರಮದಲ್ಲಿ ಹಲವರು ಗಣ್ಯರು ಹಾಜರಿದ್ದರು. ಆ ಎರಡು ಮೂರು ಪೋಸ್ಟರ್‍ಗಳಿಂದಲೇ ಶಂಕರ್ ಸಿನಿಮಾದ ಬಗ್ಗೆ ಸಿಕ್ಕಾ ಪಟ್ಟೆ ಕುತೂಹಲ ಮೂಡಿಸಿದ್ದರು. ಅದಕ್ಕೆ ಸಾವಿರ ಪಟ್ಟು ಸೇರಿಸಿ ಈ ಮೇಕಿಂಗ್ ಬಿಟ್ಟಿದ್ದಾರೆ ನೋಡಿ. ಕೇವಲ ಒಂದು ದಿನದಲ್ಲಿ 25 ಲಕ್ಷ ಜನರು ನೋಡಿ ಕೇಕೆ ಹಾಕಿದ್ದಾರೆ. ತಲೈವಾ ಲುಕ್ಕಿಗೆ, ಅಕ್ಷಯ್ ವಿಲನ್ ಕಿಕ್‍ಗೆ ಫಿದಾ ಆಗಿದ್ದಾರೆ. 67ರ ಹರೆಯದಲ್ಲೂ ರಜನಿ 25ರಹುಡುಗನಂತೆ ಶ್ರದ್ಧೆಯಿಂದ ಅಭಿನಯಿಸಿದ್ದನ್ನು ನೋಡಿ ಶರಣು ಶರಣೆಂದಿದ್ದಾರೆ.
ಅಂದ ಹಾಗೆ ಇದರ ಇನ್ನೊಂದು ಸ್ಪೆಸಾಲಿಟಿಯನ್ನು ನಾವು ಹೇಳಲೇಬೇಕು. ಅದು ಮೇಕ್ ಇನ್ ಇಂಡಿಯಾ ಅಭಿಯಾನ ಕಮ್ ಅಭಿಮಾನ. ಆಗಿನ್ನೂ ಈ ಸಿನಿಮಾ ಅರಂಭವಾಗಿರಲಿಲ್ಲ. ಪ್ರಿ ಪ್ರೊಡಕ್ಷನ್ ಕೆಲಸ ನಡೆಯುತ್ತಿತ್ತು. ಮೋದಿ ಪ್ರಧಾನಿಯಾಗಿದ್ದರು. ಅದೊಮ್ಮೆ ರಜನಿ ಮತ್ತು ಮೋದಿ ಭೇಟಿ ನಡೆದಿತ್ತು. ಆಗ ಮೋದಿ ಕೊಟ್ಟ ಸಲಹೆ ಏನು ಗೊತ್ತೆ? ನಿಮ್ಮ ಸಿನಿಮಾದ ಎಲ್ಲಾ ವಿಭಾಗದ ಕೆಲಸವನ್ನು ಮತ್ತು ಕೆಲಸಗಾರರನ್ನು ಇಲ್ಲಿವರನ್ನೇ ಬಳಸಿದರೆ, ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ ಇನ್ನಷ್ಟು ತೂಕ ಬರುತ್ತದೆ ಎಂದಿದ್ದರು. ಅದನ್ನು ಸೀರಿಯಸ್ ಆಗಿ ತೆಗೆದುಕೊಂಡ ರಜನಿ ಅದೇ ರೀತಿ 2.0 ಸಿನಿಮಾ ಮುಗಿಸಿದ್ದಾರೆ.
ಕೆಲವು ತಿಂಗಳ ಹಿಂದೆ ಬಂದ ರಜನಿಯ ಕಬಾಲಿ ಎಂಟು ನೂರು ಕೋಟಿಯನ್ನು ಗಳಿಸಿದ್ದು ನಿಜ. ಆದರೆ ಅಭಿಮಾನಿಗಳು ಅಷ್ಟೇನೂ ಖುಷಿ ಪಡಲಿಲ್ಲ. ಸದ್ಯಕ್ಕೆ ಕಾಳ ಕರಿಕಾಳನ್ ಸಿನಿಮಾದಲ್ಲಿ ಬಿಜಿಯಾಗಿದ್ದಾರೆ. ಆ ಸಿನಿಮಾ ರಿಲೀಸ್ ಆದ ಮೇಲೆ 2.0 ಸಿನಿಮಾ ನೋಡುವ ಭಾಗ್ಯ ನಿಮಗೆ ಸಿಗುತ್ತದೆ. ಅದು ಈ ವರ್ಷವಂತೂ ಖಂಡಿತ ಅಲ್ಲ. ಅದೇನಿದ್ದರೂ ಮುಂದಿನ ವರ್ಷ. ರಜನಿ-ಶಂಕರ್-ಅಕ್ಷಯ್-ಆಕಿ ಜಾಕ್ಸನ್…ಇವರೊಂದಿಗೆ ರಕ್ತ ಸುರಿಸಿ ಕೆಲಸ ಮಾಡಿದ ತಂತ್ರಜ್ಞರು. ವಾರೇ ವ್ಹಾ…ಒಂದು ಸಿನಿಮಾ ರಿಲೀಸ್‍ಗೂ ಮುಂಚೆಯೇ ಸೂಪರ್ ಹಿಟ್ ಆಗುವುದೆಂದರೆ ಇದೇನಾ?