Tag: Kollywood

  • ಸಾಮಿ ಸ್ಕ್ವೇರ್ ನಿಂದ ತ್ರಿಶಾ ಔಟ್ – ಚಿಯಾನ್ ವಿಕ್ರಂಗೆ ಸಿಕ್ಕಿದ್ದು ಐಶ್ವರ್ಯ!

    ಸಾಮಿ ಸ್ಕ್ವೇರ್ ನಿಂದ ತ್ರಿಶಾ ಔಟ್ – ಚಿಯಾನ್ ವಿಕ್ರಂಗೆ ಸಿಕ್ಕಿದ್ದು ಐಶ್ವರ್ಯ!

    ಬೆಂಗಳೂರು: ‘ಸಾಮಿ ಸ್ಕ್ವೇರ್’ ಯಾವುದೋ ಹಾಲಿವುಡ್, ಬಾಲಿವುಡ್ ಸಿನಿಮಾ ಎಂದು ಕನ್ಫ್ಯೂಸ್ ಆಗಬೇಡಿ! 2003ರಲ್ಲಿ ಸಂಚಲನ ಸೃಷ್ಟಿಸಿದ್ದ ವಿಕ್ರಮ್ ನಾಯಕನಾಗಿದ್ದ ‘ಸಾಮಿ’ ಚಿತ್ರದ ಭಾಗ 2 ಈ ಚಿತ್ರ. ಕೆಟ್ಟಾ ಕೊಳಕಾಗಿ ಬೈಯುವ ಖಡಕ್ ಪೊಲೀಸ್ ಅಧಿಕಾರಿ ಆಗಿದ್ದ ವಿಕ್ರಮ್ ‘ಸಾಮಿ ಸ್ಕ್ವೇರ್’ನಲ್ಲೂ ಅದನ್ನೇ ಮುಂದುವರೆಸಿದ್ದಾರೆ. ಹಿಟ್ ಜೋಡಿ ಆಗಿ ನಾಯಕ ವಿಕ್ರಂ ಹಾಗೂ ನಿರ್ದೇಶಕ ಹರಿ ಅವರೇ ಇರಲಿದ್ದು, ‘ಆಫೀಸರ್ ಆರು ಸಾಮಿ’ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

    ಆ್ಯಕ್ಷನ್ ಚಿತ್ರದಲ್ಲಿ ವಿಕ್ರಂ ಎದುರು ರಾಷ್ಟ್ರ ಪ್ರಶಸ್ತಿ ವಿಜೇತ ನಟ ಬಾಬಿ ಸಿಂಹ ನಟಿಸಿದ್ದು, ಭಾಗ 2ರಲ್ಲಿ ಮೊದಲ ನಾಯಕ ತ್ರಿಶಾ ಔಟ್ ಆಗಿದ್ದಾರೆ. ಅವರ ಸ್ಥಾನದಲ್ಲಿ ‘ಸಾಮಿ ಸ್ಕ್ವೇರ್’ಗೆ ನಟಿ ಐಶ್ವರ್ಯ ರಾಜೇಶ್ ಆಯ್ಕೆಯಾಗಿದ್ದು, ಚಿತ್ರ ಆಗಸ್ಟ್ 31 ಅಥವಾ ಸೆಪ್ಟೆಂಬರ್ 13ಕ್ಕೆ ರಿಲೀಸ್ ಆಗಲಿದೆ ಎನ್ನಲಾಗಿದೆ.

    ಟೀಸರ್ ಬಿಡುಗಡೆಯಾದ ತಿಂಗಳಲ್ಲೇ 11 ಮಿಲಿಯನ್ ವ್ಯೂಗಳನ್ನು ಯುಟ್ಯೂಬ್‍ನಲ್ಲಿ ಪಡೆದಿರುವ ಚಿತ್ರ ಕುತೂಹಲ ಹುಟ್ಟಿಸಿರುವುದಂತೂ ಸುಳ್ಳಲ್ಲ. ತೆಲುಗಿನ ಖ್ಯಾತ ರಾಕ್ ಸ್ಟಾರ್ ಗಾಯಕ ದೇವಿಶ್ರೀ ಪ್ರಸಾದ್ (ಡಿಎಸ್‍ಪಿ) ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದು ಪ್ಲಸ್ ಪಾಯಿಂಟ್ ಆಗುವುದು ಖಂಡಿತ. ಚಿತ್ರದ ಇನ್ನೋರ್ವ ನಾಯಕಿಯಾಗಿ ಕೀರ್ತಿ ಸುರೇಶ್ ಆಯ್ಕೆ ಆಗಿದ್ದು, ಐಶ್ವರ್ಯ ರಾಜೇಶ್‍ಗೆ ಸ್ಪರ್ಧೆ ಹೆಚ್ಚಿಸಿದೆ. ತನ್ನ ಪಾತ್ರದ ಬಗ್ಗೆ ಥ್ರಿಲ್ ಆಗಿರುವ ಐಶ್ವರ್ಯ ತಾನು ಪ್ರಸ್ತುತ ಪ್ರಯೋಗಾತ್ಮಕ ಪಾತ್ರಗಳಿಗೆ ಒಡ್ಡಿಕೊಂಡಿದ್ದೇನೆಂದು ಹೇಳಿಕೊಂಡಿದ್ದಾರೆ. ತೆರೆಗೆ ಬರಲಿರುವ ‘ಕಾನಾ’ ಚಿತ್ರದಲ್ಲಿ ತಾಪ್ಸಿ ಪನ್ನು ಜೊತೆ ತೆರೆ ಹಂಚಿಕೊಂಡಿರುವ ಐಶ್ವರ್ಯ ಮಹಿಳಾ ಕ್ರಿಕೆಟರ್ ಆಗಿ ನಟಿಸಿದ್ದಾರೆ. ‘ಚೆಕ್ಕಾ ಚಿವಂತವನಂ’ನಲ್ಲಿ ಕ್ಲಾಸ್ ಪಾತ್ರ ಮಾಡಿರುವ ಐಶ್ವರ್ಯ ‘ಧ್ರುವ ನಕ್ಷತ್ರಂ’ನಲ್ಲಿ ಜರ್ನಲಿಸ್ಟ್ ಆಗಿದ್ದಾರೆ.

    ‘ಸಾಮಿ’ ಮಾಡಿದ್ದ ಗಲ್ಲಾ ಪೆಟ್ಟಿಗೆ ರೆಕಾರ್ಡ್‍ಗಳನ್ನು ‘ಸಾಮಿ ಸ್ಕ್ವೇರ್’ ಚಿಂದಿ ಉಡಾಯಿಸಿ ಹೊಸ ದಾಖಲೆಗಳನ್ನು ಬರೆಯಲಿದೆ ಎಂಬುದು ತಮಿಳು ಚಿತ್ರ ಪಂಡಿತರ ಹಾಗೂ ಸಿನಿ ರಸಿಕರ ಅಂಬೋಣ!

  • ಗೆಸ್ಟ್ ಹೌಸ್‍ಗೆ ಒಬ್ಳೇ ಬಾ ಅಂತಾ ಕರೀತಿದ್ರು: ನಟಿ ಆಮನಿ

    ಗೆಸ್ಟ್ ಹೌಸ್‍ಗೆ ಒಬ್ಳೇ ಬಾ ಅಂತಾ ಕರೀತಿದ್ರು: ನಟಿ ಆಮನಿ

    ಹೈದರಾಬಾದ್: ವೃತ್ತಿ ಜೀವನದ ಆರಂಭದಲ್ಲಿ ನನಗೂ ಸಹ ಕಾಸ್ಟಿಂಗ್ ಕೌಚ್ ಅನುಭವವಾಗಿದೆ ಎಂದು ಕನ್ನಡದ ‘ಅಪ್ಪಾಜಿ’ ಚಿತ್ರದಲ್ಲಿ ಅಭಿನಯಿಸಿದ್ದ ನಟಿ ಆಮನಿ ಹೇಳಿದ್ದಾರೆ.

    ಟಾಲಿವುಡ್ ಹಾಗೂ ಕಾಲಿವುಡ್ ನಲ್ಲಿ ಹೆಚ್ಚು ಗುರುತಿಸಿಕೊಂಡಿರುವ ನಟಿ ಆಮನಿ, ಇತ್ತೀಚೆಗೆ ಖಾಸಗಿ ಕಾರ್ಯಕ್ರಮದ ಸಂದರ್ಶನದಲ್ಲಿ ಕಾಸ್ಟಿಂಗ್ ಕೌಚ್ ಕುರಿತ ತಮ್ಮ ಅನುಭವದ ಬಗ್ಗೆ ಮಾತನಾಡಿದ್ದಾರೆ. ಮೊದಲು ಫೋಟೋ ನೋಡಿ ಸಿನಿಮಾ ಚಾನ್ಸ್ ನೀಡುತ್ತಿದ್ದರು. ಆದರೆ ಬಳಿಕ ಫೋನ್ ಮಾಡಿ ಗೆಸ್ಟ್ ಹೌಸ್ ಗೆ ಬನ್ನಿ ಎಂದು ಕರೆಯುತ್ತಿದ್ದರು ಎಂದು ಹೇಳಿದ್ದಾರೆ.

    ಮೊದಲು ಅವರು ಕರೆಯುತ್ತಿದ್ದ ಉದ್ದೇಶ ತಿಳಿಯುತ್ತಿರಲಿಲ್ಲ, ಆದರೆ ಅವರು ಅಮ್ಮನ ಜೊತೆ ಬರಬೇಡ ಎಂದು ಸೂಚನೆ ನೀಡಿ ಒಬ್ಬಳನ್ನೇ ಕರೆಯುತ್ತಿದ್ದ ವೇಳೆ ಅವರ ಉದ್ದೇಶ ನನಗೆ ಅರ್ಥವಾಗುತ್ತಿತ್ತು. ಇಂತಹ ಘಟನೆಗಳು ಸಾಮಾನ್ಯವಾಗಿ ಹೊಸ ಸಂಸ್ಥೆಗಳಲ್ಲಿ ಮಾತ್ರ ನಡೆಯುತ್ತದೆ. ತಮಿಳು ಚಿತ್ರ ರಂಗದಲ್ಲೂ ಇಂತಹ ಘಟನೆಗಳು ನಡೆದಿದೆ. ದೊಡ್ಡ ದೊಡ್ಡ ಬ್ಯಾನರ್ ಹೊಂದಿರುವ ಸಂಸ್ಥೆಗಳಲ್ಲಿ ಇಂತಹ ಅನುಭವ ಎದುರಿಸಿಲ್ಲ, ಸಣ್ಣ ಸಂಸ್ಥೆಗಳಲ್ಲಿ ಮಾತ್ರ ಇಂತಹವುಗಳು ನಡೆಯುತ್ತದೆ ಎಂದು ತಿಳಿಸಿದ್ದಾರೆ.

    ವೃತ್ತಿ ಜೀವನದ ಆರಂಭದಲ್ಲಿ ಹೀರೋಯಿನ್ ಆಗಿ ಹಲವು ಸಿನಿಮಾಗಳಲ್ಲಿ ನಟಿಸಿದ್ದ ನಟಿ ಆಮನಿ ಅವರು, ಮದುವೆಯ ಬಳಿಕ ಕೆಲ ಕಾಲ ಬಣ್ಣದ ಬದುಕಿಗೆ ಬ್ರೇಕ್ ನೀಡಿದ್ದರು. ಆದರೆ ಕೆಲ ಸಮಯದ ಬಳಿಕ ಮತ್ತೆ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದರು. ಸದ್ಯ ಪೋಷಕ ಪಾತ್ರದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಟಾಲಿವುಡ್ ನಲ್ಲಿ ಇತ್ತೀಚೆಗೆ ಕಾಸ್ಟಿಂಗ್ ಕೌಚ್ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದ್ದು, ನಟಿ ಶ್ರೀ ರೆಡ್ಡಿ ಪ್ರತಿಭಟನೆಯ ಬಳಿಕ ಹಲವು ನಟಿಯರು ತಮ್ಮ ಜೀವನದಲ್ಲಿ ನಡೆದ ಘಟನೆಗಳ ಬಗ್ಗೆ ತುಟಿ ಬಿಚ್ಚಿದ್ದರು.

  • ಕಾಲಿವುಡ್ ನಟ ಆರ್ಯ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ!

    ಕಾಲಿವುಡ್ ನಟ ಆರ್ಯ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ!

    ಚೆನ್ನೈ: ಕಾಲಿವುಡ್ ಸೂಪರ್ ಸ್ಟಾರ್ ಆರ್ಯ ವಿರುದ್ಧ ತಿರುನೆಲ್ವೆಲಿಯಲ್ಲಿರುವ ಅಂಬಸಮುದ್ರಂ ಕೋರ್ಟ್ ಅರೆಸ್ಟ್ ವಾರೆಂಟ್ ಜಾರಿಗೊಳಿಸಿದೆ.

    ಆರ್ಯ 2011ರಲ್ಲಿ ನಟಿಸಿದ ‘ಅವನ್ ಇವನ್’ ಚಿತ್ರ ಸಾಕಷ್ಟು ವಿವಾದಗಳನ್ನು ಹುಟ್ಟು ಹಾಕಿತ್ತು. ಅವನ್ ಇವನ್ ಚಿತ್ರದಲ್ಲಿ ನಟ ಆರ್ಯ ಹಾಗೂ ನಟ ವಿಶಾಲ್ ಮುಖ್ಯಪಾತ್ರದಲ್ಲಿ ನಟಿಸಿದ್ದರು.

    ಬಾಲ ಈ ಚಿತ್ರವನ್ನು ನಿರ್ದೇಶಿಸಿದ್ದು, ಈ ಚಿತ್ರದಲ್ಲಿ ಸಿಂಗಮತ್ತಿ ಜಮೀನ್ ಅವರ ಬಗ್ಗೆ ತಪ್ಪಾಗಿ ತೋರಿಸಲಾಗಿದೆ ಎಂದು ಸಾರ್ವಜನಿಕ ನ್ಯಾಯಾಲಯದಲ್ಲಿ ಆರ್ಯ ಹಾಗೂ ನಿರ್ದೇಶಕ ಬಾಲ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿತ್ತು.

    ಈ ಮೊಕದ್ದಮೆಗೆ ಸಂಬಂಧಿಸಿದಂತೆ ತಿರುನೆಲ್ವೆಲಿಯ ಅಂಬಸಮುದ್ರಂ ಕೋರ್ಟ್ ವಿಚಾರಣೆ ಹಾಜರಾಗುವಂತೆ ಆರ್ಯ ಮತ್ತು ಬಾಲಾ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ಸಮನ್ಸ್ ಜಾರಿ ಮಾಡಿದ್ದರೂ ಇವರಿಬ್ಬರು ವಿಚಾರಣೆಗೆ ಗೈರಾಗಿದ್ದರು.

    ಸಾಕಷ್ಟು ಬಾರಿ ವಿಚಾರಣೆ ಗೈರು ಹಾಜರಿ ಹಾಕಿದ್ದಕ್ಕೆ ಕೋರ್ಟ್ ಇವರಿಬ್ಬರ ವಿರುದ್ಧ ಅರೆಸ್ಟ್ ವಾರಂಟ್ ಜಾರಿ ಮಾಡಿದೆ. ಜುಲೈ 13 ರಂದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿ ವಿಚಾರಣೆ ನಡೆಯಲಿದೆ.

  • ನಾನು ಕೂಡ ಕಾಳಾ ಸಿನಿಮಾ ನೋಡ್ತೇನೆ, ನಮಗೂ ಟಿಕೆಟ್ ಕೊಡಿ : ವಾಟಾಳ್ ನಾಗರಾಜ್

    ನಾನು ಕೂಡ ಕಾಳಾ ಸಿನಿಮಾ ನೋಡ್ತೇನೆ, ನಮಗೂ ಟಿಕೆಟ್ ಕೊಡಿ : ವಾಟಾಳ್ ನಾಗರಾಜ್

    ಬೆಂಗಳೂರು: ಸೋಮವಾರ ನಟ ರಜಿನಿಕಾಂತ್ ಅಭಿನಯದ ಕಾಳಾ ಸಿನಿಮಾವನ್ನು ನೋಡುವುದಾಗಿ ಕನ್ನಡ ಪರ ಸಂಘನಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದ್ದಾರೆ.

    ರಜಿನಿಕಾಂತ್ ಕಾಳಾ ಚಿತ್ರದ ವಿರುದ್ಧ ಕನ್ನಡ ಒಕ್ಕೂಟದಿಂದ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಸಿನಿಮಾದಲ್ಲಿ ಏನಿದೆ ಎಂಬುವುದನ್ನು ನೋಡಬೇಕು. ನಮಗೂ ಟಿಕೆಟ್ ಕೊಡಬೇಕು. ನಾಳೆ ನಮ್ಮ ಕಾರ್ಯಕರ್ತರು ಸಿನಿಮಾ ವೀಕ್ಷಣೆ ಮಾಡಲು ಬರುತ್ತವೆ. ನಮಗೂ ಟಿಕೆಟ್ ನೀಡಿ ಚಿತ್ರಮಂದಿರ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು. ಅಲ್ಲದೇ ಸಿನಿಮಾ ಪ್ರದರ್ಶನ ವಿರುದ್ಧ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

    ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಗರದ ಕೆಂಪೇಗೌಡ ರಸ್ತೆಯಲ್ಲಿರುವ ಭೂಮಿಕಾ ಚಿತ್ರ ಮಂದಿರದ ಎದುರು ಪ್ರತಿಭಟನೆ ನಡೆಸಲಾಯಿತು. ನೂರಾರು ಕನ್ನಡ ಪರ ಹೋರಾಟಗಾರರು ಕಪ್ಪು ಪಟ್ಟಿ ಹಿಡಿದು ರಜಿನಿಕಾಂತ್ ವಿರುದ್ಧ ದಿಕ್ಕಾರ ಕೂಗುವ ಮೂಲಕ ಆಕ್ರೋಶ ಹೊರ ಹಾಕಿದರು.

    ಹೊಸ ಪಕ್ಷ ಕಟ್ಟುವ ಮೂಲಕ ರಾಜಕೀಯ ಜೀವನ ಆರಂಭಿಸಿರುವ ರಜಿನಿಕಾಂತ್‍ಗೆ ಕರ್ನಾಟಕಕ್ಕೆ ಪ್ರವೇಶವಿಲ್ಲ, ಅವರ ಸಿನಿಮಾ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ. ಆದರೆ ಸಿನಿಮಾ ಪ್ರದರ್ಶನಕ್ಕೆ ಪೊಲೀಸರು ರಕ್ಷಣೆ ನೀಡಿದ್ದಾರೆ. ಇದು ಕರ್ನಾಟಕಕ್ಕೆ ಘೋರ ಅನ್ಯಾಯ. ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಸಹ ಇದಕ್ಕೆ ಅವಕಾಶ ನೀಡಿದ್ದಾರೆ. ಇದೇ ರೀತಿ ರಕ್ಷಣೆ ಮುಂದುವರೆದರೆ ಬೆಂಗಳೂರು ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿದರು.

    ಈ ಕುರಿತು ಗೃಹ ಸಚಿವರವನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತೆವೆ. ಸಿನಿಮಾ ಮಂದಿರಗಳಿಗೆ ಪ್ರತಿನಿತ್ಯ ರಕ್ಷಣೆ ನೀಡುವುದರಿಂದ ಪೊಲೀಸರಿಗೆ ಎಷ್ಟು ಖರ್ಚು ಮಾಡಲಾಗಿದೆ. ಈ ನಡೆ ಕರ್ನಾಟಕದಲ್ಲೇ ತಮಿಳು ಸಿನಿಮಾಗಳಿಗೆ ಬೆಂಬಲ ನೀಡಿದಂತಾಗುತ್ತದೆ. ಈ ರೀತಿ ಇತಿಹಾಸದಲ್ಲಿ ನಡೆದಿಲ್ಲ. ಇದುವರೆಗೂ ಕೋಟಿ ಕೋಟಿ ಹಣ ಖರ್ಚಾಗುತ್ತಿದ್ದು, ಸಿನಿಮಾಗೆ ರಕ್ಷಣೆ ನೀಡುತ್ತಿರುವುದರಿಂದ ಆಗಿರುವ ಖರ್ಚನ್ನು ರಜಿನಿಕಾಂತ್ ಅವರಿಂದಲೇ ಪಡೆಯಬೇಕು ಎಂದು ಆಗ್ರಹಿಸಿದರು.

  • ರಾಯಚೂರು, ಬಳ್ಳಾರಿಯಲ್ಲಿ ‘ಕಾಳಾ’ನಿಗೆ ಬಿಡುಗಡೆ ಭಾಗ್ಯ!

    ರಾಯಚೂರು, ಬಳ್ಳಾರಿಯಲ್ಲಿ ‘ಕಾಳಾ’ನಿಗೆ ಬಿಡುಗಡೆ ಭಾಗ್ಯ!

    ರಾಯಚೂರು/ಬಳ್ಳಾರಿ: ಬಳ್ಳಾರಿಯಲ್ಲಿ ಕಾಳಾ ಚಿತ್ರ ಬಿಡುಗಡೆಯಾಗಿದ್ದು, ಕರ್ನಾಟಕ ಜನಶಕ್ತಿ ಸಂಘದಿಂದ ಪ್ರತಿಭಟನೆ ನಡೆಸಿದಾರೆ. ರಾಧಿಕಾ ಚಿತ್ರಮಂದರಕ್ಕೆ ನುಗ್ಗಿ ಚಿತ್ರ ಪ್ರದರ್ಶನ ಮಾಡದಂತೆ ಪ್ರತಿಭಟನೆ ನಡೆಸುತ್ತಿದ್ದಾರೆ.

    ಈ ಪ್ರತಿಭಟನೆ ಮಧ್ಯೆಯೇ ಥಿಯೇಟರ್ ಮಾಲೀಕರು ಚಿತ್ರ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಬೆಳಗ್ಗೆ 10:30ರಿಂದ ಚಿತ್ರದ ಮೊದಲ ಶೋ ಆರಂಭವಾಗಿದೆ. ಇನ್ನೂ ಕಾಳಾ ಚಿತ್ರಕ್ಕೆ ಅಡ್ಡಿಪಡಿಸಿದ ಕರ್ನಾಟಕ ಜನಶಕ್ತಿ ಸಂಘದ 20 ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ರಾಯಚೂರಿನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಕಾಳಾ’ ಸಿನಿಮಾ ಪ್ರದರ್ಶನ ರದ್ದಾಗಿದೆ. ಪದ್ಮನಾಭ ಚಿತ್ರಮಂದಿರದಲ್ಲಿ ಬೆಳಿಗ್ಗೆ 11ಕ್ಕೆ ಕಾಳಾ ಸಿನಿಮಾ ಪ್ರದರ್ಶನವಾಗಬೇಕಿತ್ತು. ಆದರೆ ಚಿತ್ರವಿತರಕರ ಸಂಘದ ಸೂಚನೆ ಮೇರೆಗೆ ಪ್ರದರ್ಶನ ರದ್ದುಗೊಳಿಸಲಾಗಿದೆ.

    ಚಿತ್ರ ಪ್ರದರ್ಶನದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು. ಅಲ್ಲದೇ ಅಹಿತಕರ ಘಟನೆ ನಡೆಯದಂತೆ ಮುನ್ನೇಚ್ಚರಿಕೆ ವಹಿಸಲಾಗಿತ್ತು. ಸುಮಾರು 50 ಜನ ಪ್ರೇಕ್ಷಕರು ಮಾತ್ರ ಚಿತ್ರಮಂದಿರಕ್ಕೆ ಬಂದಿದ್ದರು. ಆದರೆ ಈಗ ಚಿತ್ರಮಂದಿರದ ಮಾಲೀಕರು ಟಿಕೆಟ್ ಮರಳಿ ಪಡೆದು ಹಣ ವಾಪಸ್ ಕೊಡುತ್ತಿದ್ದಾರೆ.

  • ಚಾಮರಾಜನಗರ, ದಾವಣಗೆರೆ ಜಿಲ್ಲೆಯಾದ್ಯಂತ ‘ಕಾಳಾ’ ರದ್ದು!

    ಚಾಮರಾಜನಗರ, ದಾವಣಗೆರೆ ಜಿಲ್ಲೆಯಾದ್ಯಂತ ‘ಕಾಳಾ’ ರದ್ದು!

    ಚಾಮರಾಜನಗರ/ದಾವಣಗೆರೆ: ತಮಿಳುನಾಡಿಗೆ ಹೊಂದಿಕೊಂಡಂತೆ ಇರುವ ಗಡಿನಾಡು ಚಾಮರಾಜನಗರ ಜಿಲ್ಲೆಯಾದ್ಯಂತ ರಜಿನಿಕಾಂತ್ ಅಭಿನಯದ ಕಾಳಾ ಚಿತ್ರ ಬಿಡುಗಡೆಯಾಗಿಲ್ಲ.

    ಜಿಲ್ಲೆಯ ಕೊಳ್ಳೇಗಾಲ, ಗುಂಡ್ಲುಪೇಟೆ, ಚಾಮರಾಜನಗರ ಸೇರಿದಂತೆ ತಾಲೂಕಿನ ಯಾವುದೇ ಚಿತ್ರ ಮಂದಿರಗಳಲ್ಲಿ ಕಾಳಾ ಚಿತ್ರ ಬಿಡುಗಡೆಯಾಗಿಲ್ಲ. ಅಷ್ಟೇ ಅಲ್ಲದೇ ಜಿಲ್ಲೆಯ ಯಾವುದೇ ಚಿತ್ರಮಂದಿರಗಳಲ್ಲಿ ಬೇರೆ ತಮಿಳು ಚಿತ್ರಗಳು ಸಹ ಪ್ರದರ್ಶನಗೊಳ್ಳುತ್ತಿಲ್ಲ.

    ಹೀಗಾಗಿ ಜಿಲ್ಲೆಯ ಎಲ್ಲಾ ಚಿತ್ರ ಮಂದಿರಗಳಲ್ಲಿ ಕನ್ನಡ ಮತ್ತು ತೆಲಗು ಚಿತ್ರಗಳೇ ಪ್ರದರ್ಶನಗೊಳ್ಳುತ್ತಿವೆ. ಚಾಮರಾಜನಗರ ಜಿಲ್ಲಾ ಕೇಂದ್ರದ ಸಿಂಹ ಮೂವೀ ಪ್ಯಾರಡೇಸ್, ಬಸವೇಶ್ವರ, ಭ್ರಮರಾಂಭ ಗುರುರಾಘವೇಂದ್ರ ಮತ್ತು ಸಿದ್ದಾರ್ಥ ಚಿತ್ರ ಮಂದಿಗಳಲ್ಲಿ ಕನ್ನಡ ಚಿತ್ರಗಳೇ ಪ್ರದರ್ಶನಗೊಳ್ಳುತ್ತಿವೆ.

    ದಾವಣಗೆರೆಯಲ್ಲೂ ಕೂಡ ರಜನಿಕಾಂತ್ ಅಭಿನಯದ ಕಾಳಾ ಚಿತ್ರ ಬಿಡುಗಡೆಗೆ ಬ್ರೇಕ್ ಬಿದ್ದಿದೆ. ಥಿಯೇಟರ್ ಮಾಲೀಕರು ಕನ್ನಡಪರ ಸಂಘಟನೆಗಳ ಮನವಿ ಸ್ಪಂದಿಸಿದ್ದಾರೆ. ದಾವಣಗೆರೆಯ 2 ಚಿತ್ರಮಂದಿರಗಲ್ಲಿ ಕಾಳಾ ಚಿತ್ರ ಬಿಡುಗಡೆಗೆ ಕಾಲ ನಿಗದಿಯಾಗಿತ್ತು.

    ಕಳೆದ ಒಂದು ವಾರದಿಂದ ಕರುನಾಡ ಸೇವಕರು ಮತ್ತು ಇತರೆ ಕನ್ನಡ ಪರ ಸಂಘಟನೆಗಳು ಥಿಯೇಟರ್ ಮಾಲೀಕರಿಗೆ ಮನವಿ ಮಾಡಿತ್ತು. ಒಂದು ವೇಳೆ ಬಿಡುಗಡೆ ಮಾಡಿದರೆ ಪರಿಣಾಮ ಎದುರಿಸಬೇಕಾಗತ್ತೆ ಎನ್ನುವ ಎಚ್ಚರಿಕೆ ನೀಡಿದ್ದರು. ಹಾಗಾಗಿ ಥಿಯೇಟರ್ ಮಾಲೀಕರು ಚಿತ್ರ ಬಿಡುಗಡೆ ಹಿಂದೇಟು ಹಾಕುತ್ತಿದ್ದಾರೆ.

    ಬೆಂಗಳೂರಿನಲ್ಲಿರುವ ಕಾವೇರಿ, ನಟರಾಜ, ಸಂಪಿಗೆ, ಪೂರ್ಣಿಮಾ ಚಿತ್ರಮಂದಿರದಲ್ಲಿ ರಾತ್ರಿ ಪ್ರದರ್ಶನಕ್ಕೆ ಬ್ರೇಕ್ ಹಾಕಲಾಗಿದೆ. ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ರಾತ್ರಿಯಿಡೀ ಚಿತ್ರಮಂದಿರಗಳ ಮುಂದೆ ಕಾವಲು ನಿಂತು ಸಿನಿಮಾ ರಿಲೀಸ್‍ಗೆ ಬ್ರೇಕ್ ಹಾಕಿದ್ದಾರೆ. ಇಂದು ನಗರದಲ್ಲಿ ಬೆಳಗ್ಗೆ 5 ಗಂಟೆಗೆ ಆರಂಭವಾಗಬೇಕಿದ್ದ ಫಸ್ಟ್ ಶೋ ರದ್ದಾಗಿದೆ.

  • ನಾನು ಯಾವುದೇ ತಪ್ಪು ಮಾಡಿಲ್ಲ: ಕನ್ನಡದಲ್ಲಿ ರಜಿನಿ ಮನವಿ

    ನಾನು ಯಾವುದೇ ತಪ್ಪು ಮಾಡಿಲ್ಲ: ಕನ್ನಡದಲ್ಲಿ ರಜಿನಿ ಮನವಿ

    ಬೆಂಗಳೂರು: ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ ತಮಿಳಿನ ಕಾಳಾ ಸಿನಿಮಾಗೆ ಕರ್ನಾಟಕದಲ್ಲಿ ಭಾರೀ ವಿರೋಧವ್ಯಕ್ತವಾಗಿದೆ. ವಿಶ್ವದಾದ್ಯಂತ ಸಿನಿಮಾ ರಿಲೀಸ್ ಆದ್ರೂ ಕರ್ನಾಟಕದಲ್ಲಿ ಮಾತ್ರ ಬಿಡುಗಡೆ ಆಗಿಲ್ಲ. ಈ ಸಂಬಂಧ ರಜಿನಿಕಾಂತ್ ಕನ್ನಡಿಗರಲ್ಲಿ ಸಿನಿಮಾ ನೋಡುವವರಿಗೆ ತೊಂದರೆ ಮಾಡಬೇಡಿ ಅಂತಾ ಕನ್ನಡದಲ್ಲಿಯೇ ಮನವಿ ಮಾಡಿಕೊಂಡಿದ್ದಾರೆ.

    ಕರ್ನಾಟಕದಲ್ಲಿ `ಕಾಳಾ’ ಚಲನಚಿತ್ರವು ಸುಗಮವಾಗಿ ಬಿಡುಗಡೆಯಾಗಲು ಕನ್ನಡಿಗರು ಸಹಕರಿಸಬೇಕು. ನಾನು ಯಾವುದೇ ತಪ್ಪು ಮಾಡಿಲ್ಲ. ಸಿನಿಮಾ ನೋಡಬಯಸುವವರಿಗೆ ಯಾವುದೇ ತೊಂದರೆ ಮಾಡಬೇಡಿ. ಎಲ್ಲರೂ ಸಹಕಾರ ನೀಡಬೇಕು. ಕಾವೇರಿ ನಿರ್ವಹಣಾ ಮಂಡಳಿ ರಚನೆಯು ಸುಪ್ರೀಂ ಕೋರ್ಟ್ ನಿರ್ಧಾರ ಆಗಿದೆ. ಈ ಕುರಿತು ನಾನು ಪ್ರಸ್ತಾಪಿಸಿದ್ದರಲ್ಲಿ ತಪ್ಪೇನಿಲ್ಲ ಅಂತಾ ಹೇಳಿದ್ದಾರೆ.

    ಕರ್ನಾಟಕ ಹೊರತು ಪಡಿಸಿ ಮಧ್ಯರಾತ್ರಿಯಿಂದಲೇ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಚನ್ನೈನಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿ, ತಮ್ಮ ನೆಚ್ಚಿನ ನಟನ ಫೋಟೋ ಕಟೌಟ್‍ಗೆ ಹಾಲಿನ ಅಭಿಷೇಕ ಮಾಡುವ ಸಂಭ್ರಮಿಸುತ್ತಿದ್ದಾರೆ.

  • ಕರ್ನಾಟಕ ಬಿಟ್ಟು ವಿಶ್ವದಾದ್ಯಂತ ಕಾಳಾ ತೆರೆಗೆ – ಬೆಂಗಳೂರಲ್ಲಿ ಮಧ್ಯರಾತ್ರಿ ಪ್ರದರ್ಶನಕ್ಕೆ ಕನ್ನಡಿಗರ ತಡೆ

    ಕರ್ನಾಟಕ ಬಿಟ್ಟು ವಿಶ್ವದಾದ್ಯಂತ ಕಾಳಾ ತೆರೆಗೆ – ಬೆಂಗಳೂರಲ್ಲಿ ಮಧ್ಯರಾತ್ರಿ ಪ್ರದರ್ಶನಕ್ಕೆ ಕನ್ನಡಿಗರ ತಡೆ

    ಬೆಂಗಳೂರು: ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ ಕಾಳಾ ಕರಿಕಾಳನ್ ಸಿನಿಮಾ ರಿಲೀಸ್ ಗೆ ಬಿಡುಗಡೆಗೆ ರಾಜ್ಯದಲ್ಲಿ ಬ್ರೇಕ್ ಬಿದ್ದಿದೆ. ಆದ್ರೆ ವಿಶ್ವದಾದ್ಯಂತ ಕಾಳಾ ಸಿನಿಮಾ ರಿಲೀಸ್ ಆಗಿದ್ದು, ಚಿತ್ರಮಂದಿರಗಳ ಮುಂದೆ ಅಭಿಮಾನಿಗಳು ಪಟಾಕಿ ಹೊಡೆದು ಸಂಭ್ರಮಿಸುತ್ತಿದ್ದಾರೆ.

    ಬೆಂಗಳೂರಿನ ಕಾವೇರಿ, ನಟರಾಜ, ಸಂಪಿಗೆ, ಪೂರ್ಣಿಮಾ ಚಿತ್ರಮಂದಿರದಲ್ಲಿ ರಾತ್ರಿ ಪ್ರದರ್ಶನಕ್ಕೆ ಬ್ರೇಕ್ ಹಾಕಲಾಗಿದೆ. ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ರಾತ್ರಿಯಿಡೀ ಚಿತ್ರಮಂದಿರಗಳ ಮುಂದೆ ಕಾವಲು ನಿಂತು ಸಿನಿಮಾ ರಿಲೀಸ್‍ಗೆ ಬ್ರೇಕ್ ಹಾಕಿದ್ದಾರೆ. ಇಂದು ನಗರದಲ್ಲಿ ಬೆಳಗ್ಗೆ 5 ಗಂಟೆಗೆ ಆರಂಭವಾಗಬೇಕಿದ್ದ ಫಸ್ಟ್ ಶೋ ರದ್ದಾಗಿದೆ.

    ರಾತ್ರಿ ನಗರದ ಲಾಲ್‍ಭಾಗ್ ರಸ್ತೆಯ ಊರ್ವಶಿ ಚಿತ್ರಮಂದಿರದ ಎದುರು ಕನ್ನಡಪರ ಸಂಘಟನೆಯ ಸದಸ್ಯರು ಪ್ರತಿಭಟನೆ ನಡೆಸಿದ್ರು.. ಚಿತ್ರ ಪ್ರದರ್ಶನ ರದ್ದುಗೊಳಿಸಬೇಕು. ಕಾವೇರಿ ನಮ್ಮದು. ನಮಗೆ ತಮಿಳು ಚಿತ್ರಗಳ ಅವಶ್ಯಕತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ರು. ಈ ಮಧ್ಯೆ ಕಾಳಾ ಬೆಳಗಿನ ಪ್ರದರ್ಶನದ ಟಿಕೆಟ್ ನೀಡಲಾಗ್ತಿದೆ ಎಂಬ ಮಾಹಿತಿ ಹರಿದಾಡ್ತಿದ್ದ ಹಿನ್ನೆಲೆ ಚಿತ್ರದ ಕೆಲ ಅಭಿಮಾನಿಗಳು ಊರ್ವಶಿ ಚಿತ್ರಮಂದಿರದ ಎದುರು ಜಮಾಯಿಸಿದ್ರು.

    ಇದೇ ವೇಳೆ ಪ್ರತಿಭಟನಾಕಾರರು ಹಾಗೂ ಅಭಿಮಾನಿಗಳ ನಡುವೆ ಮಾತಿನ ಚಕ-ಮಕಿ ಸಹ ನಡೆಯಿತು. ಯಾವುದೇ ಕಾರಣಕ್ಕೂ ಕಾಳಾ ಚಿತ್ರವನ್ನ ಬೆಂಗಳೂರಿನಲ್ಲಿ ಬಿಡುಗಡೆ ಮಾಡಲು ಬಿಡುವುದಿಲ್ಲ. ಒಂದು ವೇಳೆ ಚಿತ್ರ ಮಂದಿರದ ಮಾಲೀಕರು ಕಾಳಾ ಚಿತ್ರ ಪ್ರದರ್ಶಿಸುವ ಧೈರ್ಯ ತೆಗೆದುಕೊಂಡರೆ ಉಗ್ರ ಪ್ರತಿಭಟನೆ ಎದುರಿಸಬೇಕಾಗುತ್ತೆ ಅಂತ ಎಚ್ಚರಿಕೆ ನೀಡಿದ್ರು. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸ್ರು ಎಲ್ಲರನ್ನೂ ಚದುರಿಸಿ ಪರಿಸ್ಥಿತಿ ತಿಳಿಗೊಳಿಸಿ ಚಿತ್ರಮಂದಿರದ ಗೇಟ್ ಮುಚ್ಚಿಸಿದ್ರು.

  • ಕಾವೇರಿಗಾಗಿ ಕಾವೇರಿದ್ದ ಕಾಲಾನಿಗೀಗ ಖಾಕಿ ಕಣ್ಗಾವಲು- ಕೋರ್ಟ್ ಕಲಾಪದಲ್ಲಿ ಇಂದು ಏನಾಯ್ತು?

    ಕಾವೇರಿಗಾಗಿ ಕಾವೇರಿದ್ದ ಕಾಲಾನಿಗೀಗ ಖಾಕಿ ಕಣ್ಗಾವಲು- ಕೋರ್ಟ್ ಕಲಾಪದಲ್ಲಿ ಇಂದು ಏನಾಯ್ತು?

    ಬೆಂಗಳೂರು: ರಾಜ್ಯದಲ್ಲಿ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ `ಕಾಲಾ’ ಚಿತ್ರ ಪ್ರದರ್ಶನಕ್ಕೆ ಹೈಕೋರ್ಟ್ ಅನುಮತಿ ನೀಡಿದೆ. ಚಿತ್ರ ಪ್ರದಶನಕ್ಕೆ ಪೊಲೀಸ್ ಭದ್ರತೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಏಕಸದಸ್ಯ ಪೀಠ ಸೂಚಿಸಿದೆ.

    ಕರ್ನಾಟಕದಲ್ಲಿ ‘ಕಾಲಾ’ ಸಿನಿಮಾ ಬಿಡುಗಡೆ ವಿಚಾರವಾಗಿ ರಜನಿ ಅಳಿಯ ಧನುಷ್ ಹೈಕೋರ್ಟ್ ನಲ್ಲಿ ಜೂ.4 ರಂದು ಅರ್ಜಿ ಸಲ್ಲಿಸಿದ್ದರು. ಇಂದು ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್‍ನ ಏಕ ಸದಸ್ಯ ಪೀಠ ಸಿನಿಮಾದ ಬಿಡುಗಡೆ ಮಧ್ಯಂತರ ಆದೇಶ ನೀಡಿದೆ. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ ಪೊಲೀಸ್ ಭದ್ರತೆಯೊಂದಿಗೆ ಚಿತ್ರ ಬಿಡುಗಡೆ ಅವಕಾಶ ನೀಡಿದ್ದು, ಚಲನಚಿತ್ರ ಎಲ್ಲೆಲ್ಲಿ ಬಿಡುಗಡೆಯಾಗುತ್ತೆ ಎನ್ನುವ ವರದಿಯನ್ನು ಚಿತ್ರತಂಡ ಕೂಡಲೇ ಸರ್ಕಾರಕ್ಕೆ ನೀಡಬೇಕು ಎಂದು ಸೂಚನೆ ನೀಡಿದೆ.

    ವಾದ-ಪ್ರತಿವಾದ ಹೇಗಿತ್ತು?
    ಕರ್ನಾಟಕದಲ್ಲಿ ಕಾಲಾ ಚಿತ್ರ ಬಿಡುಗಡೆಗೆ ಅವಕಾಶ ನೀಡುತ್ತಿಲ್ಲ. ಬೆದರಿಕೆಯಿದ್ದು, ಚಿತ್ರ ಬಿಡುಗಡೆಗೆ ಸರಿಯಾದ ಭದ್ರತೆಯನ್ನು ನೀಡಬೇಕು ಎಂದು ಚಿತ್ರ ತಂಡದ ಪರ ವಕೀಲರು ಮನವಿ ಮಾಡಿಕೊಂಡರು.

    ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಕೊಲೆ ಬೆದರಿಕೆ ಇದೆ ಅಂತಾ ಹೇಳುತ್ತಿರುವಿರಿ, ಎಲ್ಲಿ ಬೆದರಿಕೆ ಇದೆ? ಯಾವುದಾದರೂ ಪ್ರದೇಶ ಬಗ್ಗೆ ತಿಳಿಸಿ. ಗಾಂಧಿನಗರದಲ್ಲಿ ಬೆದರಿಕೆ ಇದೆ ಎನ್ನುತ್ತಿರಾ ಅಥವಾ ನಿಮ್ಮ ಭಯ ಊಹೆ ಮೇಲೆ ನಿಂತಿದೆಯೇ? ಚಿತ್ರ ಬಿಡುಗಡೆಗೆ ಭಯ ಇದ್ದರೆ ಪೊಲೀಸ್ ರಕ್ಷಣೆ ಪಡೆದುಕೊಳ್ಳಬಹುದು. ನೀವು ಯಾರೊಬ್ಬರ ಮೇಲೂ ನೇರವಾಗಿ ಆರೋಪ ಮಾಡುತ್ತಿಲ್ಲ. ಆದರೆ ಬೆದರಿಕೆ ಇದೆ ಅಂತ ಆರೋಪ ವ್ಯಕ್ತ ಪಡಿಸುತ್ತಿರುವಿರಿ. ನಿಮಗೆ ಭಯ ಇರುವುದು ಸ್ಪಷ್ಟವಾಗಿದ್ದರೆ ಅದು ಯಾರಿಂದ ಇರುವುದೆಂದು ತಿಳಿಸಿ ಎಂದು ಪ್ರಶ್ನಿಸಿದರು.

    ಈ ಪ್ರಶ್ನೆಗಳಿಗೆ ಉತ್ತರಿಸಿದ ವಕೀಲರು, ಸಾಕಷ್ಟು ಕಡೆಗಳಲ್ಲಿ ಪ್ರತಿಭಟನೆ ನಡೆಯುತ್ತಿವೆ. ಬಿಡುಗಡೆಯ ಸಂದರ್ಭದಲ್ಲಿ ಏನಾಗುತ್ತದೆ ಎನ್ನುವ ಭಯ ಕಾಡುತ್ತಿದೆ ಎಂದು ಹೇಳಿದರು. ಅವರ ಭಯವನ್ನು ಅರಿತ ನ್ಯಾಯಾಧೀರು, ಚಿತ್ರ ಬಿಡುಗಡೆಯಾದರೆ ಸರ್ಕಾರ ಭದ್ರತೆಯನ್ನು ನೀಡಲು ಯಾವುದೇ ತೊಂದರೆಗಳಿಲ್ಲವಲ್ಲ ಎಂದು ಎಎಜಿ ಶಿವಣ್ಣ ಅವರನ್ನು ಪ್ರಶ್ನಿಸಿದರು.

    ಚಿತ್ರ ಬಿಡುಗಡೆಗೆ ತೊಂದರೆಯಿಲ್ಲ. ಆದರೆ ಚಿತ್ರತಂಡವು ಎಲ್ಲಲ್ಲಿ ಚಿತ್ರ ಬಿಡುಗಡೆಯಾಗುತ್ತದೆ ಎನ್ನುವ ಬಗ್ಗೆ ನಮಗೆ ಇದುವರೆಗೂ ಮಾಹಿತಿ ನೀಡಿಲ್ಲವೆಂದು ಉತ್ತರಿಸಿದರು. ಹಾಗಾದರೆ ಚಿತ್ರತಂಡ ಸೂಕ್ತ ಮಾಹಿತಿ ಒದಗಿಸಿದರೆ ಬಿಡುಗಡೆಗೆ ನಿಮ್ಮ ಕಡೆಯಿಂದ ತೊಂದರೆ ಇಲ್ಲವಲ್ಲಾ ಎಂದು ಈ ವೇಳೆ ಜಡ್ಜ್ ಮರುಪ್ರಶ್ನೆ ಹಾಕಿದರು. ಸದ್ಯಕ್ಕೆ ಯಾವುದೇ ತೊಂದರೆಯಿಲ್ಲ ಎಂದು ಎಎಜಿ ಉತ್ತರಿಸಿದರು.

    ಚಿತ್ರ ಬಿಡುಗಡೆಗೆ ನಾವು ಯಾವುದೇ ನಿರ್ಬಂಧ ಹೇರಲು ಬರುವುದಿಲ್ಲ. ಅದರೆ ಈ ಕುರಿತು ಕನ್ನಡ ಪರ ಸಂಘಟನೆಗಳು ಹೇಳಿಕೆ ನೀಡಿವೆ. ಸಂಘಟನೆಗಳು ಫಿಲಂ ಚೇಂಬರ್ ಅಧೀನದಲ್ಲಿವೆ, ಹೀಗಾಗಿ ಪ್ರತಿಭಟನೆ ನಡೆಯುತ್ತಿದೆ ಎಂದು ಫಿಲಂ ಚೇಂಬರ್ ಪರ ವಕೀಲರು ತಮ್ಮ ವಾದವನ್ನು ಮುಂದಿಟ್ಟರು.

    ಚೇಂಬರ್ ಪರ ವಕೀಲರ ವಾದಕ್ಕೆ, ಪ್ರತಿಭಟನೆ ಮಾಡುವುದು ಅವರ ಹಕ್ಕು. ಪ್ರತಿಭಟನೆ ಮಾಡಬೇಡಿ ಎಂದು ನಾವು ಹೇಳುವುದಕ್ಕೆ ಸಾಧ್ಯವಿಲ್ಲ. ಪ್ರತಿಭಟನಾಕಾರರು ತಮ್ಮ ಹಕ್ಕನ್ನು ಚಲಾವಣೆ ಮಾಡುತ್ತಿದ್ದಾರೆ ಎಂದು ಜಡ್ಜ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

    ಈ ವೇಳೆ ಕರ್ನಾಟಕದಲ್ಲಿ ಹಿಂದಿ ಮತ್ತು ತೆಲುಗು ಚಿತ್ರಗಳಿಗೆ ಈ ತೊಂದರೆ ಆಗುವುದಿಲ್ಲ. ಆದರೆ ತಮಿಳು ಚಿತ್ರಕ್ಕೆ ಮಾತ್ರ ಇಂತಹ ಸಮಸ್ಯೆ ಎದುರಾಗುತ್ತದೆ ಎಂದು ಕಾಲಾ ಪರ ವಕೀಲರು ವಾದಿಸಿದರು. ಜನಾಭಿಪ್ರಾಯ, ಜನರ ಇಚ್ಛೆಯನ್ನು ಬದಲಿಸುವಂತೆ ಹೇಳುವುದಕ್ಕೆ ಆಗುವುದಿಲ್ಲ. ಅವರಿಗೆ ಏನು ಬೇಕು ಅದನ್ನು ಸ್ವೀಕರಿಸ್ತಾರೆ ಅಷ್ಟೇ ಎಂದು ಜಡ್ಜ್ ಉತ್ತರಿಸಿದರು.

    ದಯಮಾಡಿ ಚಿತ್ರ ಬಿಡುಗಡೆಗೆ ಅವಕಾಶ ಮಾಡಿಕೊಡಿ, ನಿರ್ಮಾಪಕರು ಸಾಕಷ್ಟು ಹಣ ಖರ್ಚು ಮಾಡಿದ್ದಾರೆ ಎಂದು ಕಾಳಾ ಪರ ವಕೀಲರು ನ್ಯಾಯಾಧೀಶರಿಯಲ್ಲಿ ಮನವಿ ಮಾಡಿಕೊಂಡರು. ಈ ಮನವಿಗೆ ಸ್ಪಂದಿಸಿದ ನ್ಯಾಯಾಧೀಶರು, ಕರ್ನಾಟಕದಲ್ಲಿ ಜನರ ಶಾಂತಿಗೆ ಭಂಗ ಆಗದಂತೆ ಪೊಲೀಸ್ ಕಣ್ಗಾವಲಿನಲ್ಲಿ ಚಲನಚಿತ್ರ ಬಿಡುಗಡೆ ಮಾಡಲು ಅವಕಾಶ ಮಾಡಿಕೊಡಿ. ಯಾವುದೇ ತೊಂದರೆ ಆಗಬಾರದು. ಅಲ್ಲದೇ ಸರ್ಕಾರ ಯಾವ ಮಾಹಿತಿ ಕೇಳುತ್ತದೋ ಅದನ್ನು ನೀಡಿ ಎಂದು ಚಿತ್ರತಂಡಕ್ಕೆ ಆದೇಶ ನೀಡಿದರು.

    ಹೈಕೋರ್ಟ್‍ನಲ್ಲಿ ಚಿತ್ರ ಬಿಡುಗಡೆ ಏನಾಗುತ್ತದೆ ಎಂದು ಕಾತುರದಲ್ಲಿ ಕಾಯುತ್ತಿದ್ದ ರಜನಿಕಾಂತ್ ಅಭಿಮಾನಿಗಳು ಆದೇಶದ ಬರುತ್ತಿದ್ದಂತೆ ಪಟಾಕಿ ಹೊಡೆದು ಸಂಭ್ರಮಿಸಿದರು.

  • ರಾಜ್ಯದಲ್ಲಿ ‘ಕಾಲಾ’ ಚಿತ್ರ ಬಿಡುಗಡೆ ಮಾಡದಂತೆ ಮುಖ್ಯಮಂತ್ರಿಗೆ ಮನವಿ

    ರಾಜ್ಯದಲ್ಲಿ ‘ಕಾಲಾ’ ಚಿತ್ರ ಬಿಡುಗಡೆ ಮಾಡದಂತೆ ಮುಖ್ಯಮಂತ್ರಿಗೆ ಮನವಿ

    ಬೆಂಗಳೂರು: ಕರ್ನಾಟಕದಲ್ಲಿ ತಮಿಳು ಚಿತ್ರ ‘ಕಾಲಾ’ ಬಿಡುಗಡೆ ಮಾಡದಂತೆ ಕರುನಾಡ ಸೇವಕರ ಸಂಘ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರಿಗೆ ಮನವಿ ಮಾಡಿಕೊಂಡಿದೆ.

    ರಜನಿಕಾಂತ್ ಕನ್ನಡಿಗರಿಗೆ ಮೋಸ ಮಾಡಿದ್ದಾರೆ. ಅವರು ಕನ್ನಡಿಗರ ಭಾವನೆಗಳನ್ನು ಕೆರಳಿಸುವ ಕೆಲಸ ಮಾಡಿದ್ದಾರೆ. ನಮ್ಮ ನಾಡಲ್ಲಿ ನೀರಿಲ್ಲ ಎಂದರೂ ತಮಿಳುನಾಡಿಗೆ ನೀರು ಬಿಡುವಂತೆ ರಜಿನಿಕಾಂತ್ ಆಗ್ರಹಿಸಿದ್ದಾರೆ. ಕಾವೇರಿ ನಿರ್ವಹಣಾ ಮಂಡಳಿ ರಚನೆಯಾದರೆ ಕರ್ನಾಟಕ್ಕೆ ಅನ್ಯಾಯವಾಗಲಿದೆ. ಆದರೆ ಇದು ಅರಿವಿದ್ದರು ಕೂಡ ನಿರ್ವಹಣಾ ಸಮಿತಿಯ ರಚನೆ ಮಾಡುವಂತೆ ಆಗ್ರಹಿಸಿದ್ದಾರೆ ಎಂದು ಸಂಘ ತಮ್ಮ ಆಕ್ರೋಶ ವ್ಯಕ್ತಪಡಿಸಿದೆ.

    ಕನ್ನಡಿಗರ ನಿಲುವನ್ನು ವಿರೋಧಿಸಿದ್ದರಿಂದ ರಜನಿಕಾಂತ್ ಅವರ ಕಾಲಾ ಚಿತ್ರ ಬಿಡುಗಡೆ ಮಾಡಬಾರದು. ರಾಜ್ಯಾದ್ಯಂತ ಚಿತ್ರವನ್ನು ಬಿಡುಗಡೆ ಮಾಡಬಾರದು ಎಂದು ಈ ಬಗ್ಗೆ ಕರ್ನಾಟಕ ಚಲನಚಿತ್ರ ಮಂಡಳಿಗೂ ಕರುನಾಡ ಸೇವಕರ ಸಂಘ ಮನವಿ ಮಾಡಿದೆ.